Thursday, July 23, 2009

ವಿಶೇಷತ್ರಯ ಮತ್ತು ಗ್ರಹಣ

ಮೈಕಲ್ ಜಾಕ್ಸನ್ ಸಂಗೀತವನ್ನು ನಾನು ಹೆಚ್ಚಾಗಿ ಕೇಳೇ ಇಲ್ಲ. ನಾನು ಎರಡನೆಯ ತರಗತಿಯಲ್ಲಿದ್ದಾಗ ಜಯಮ್ಮ ಮಿಸ್ ಮಗಳು ನಮ್ಮ ಸ್ಕೂಲ್ ಡೇ‍ ಸಲುವಾಗಿ ಜಾಕ್ಸನನ ಒಂದು ಹಾಡಿಗೆ ನೃತ್ಯ ಹೇಳಿಕೊಟ್ಟಿದ್ದರು, ಅಷ್ಟು ನೆನಪಿದೆಯಷ್ಟೆ, ಆ ಹಾಡೂ ಸಹ ಯಾವುದೆಂದು ಗೊತ್ತಿಲ್ಲ. ಆತ ಸತ್ತಾಗ ಮಾಧ್ಯಮದಲ್ಲಿ - ವಿಶೇಷವಾಗಿ ಟಿ.ವಿ.ಯಲ್ಲಿ - ಎಲ್ಲಿ ನೋಡಿದರಲ್ಲಿ ಕಾಣಿಸಿಕೊಂಡ ಜಾಕ್ಸನನು what a great figure he "was"! ಎಂಬ ಭಾವನೆಯನ್ನುಂಟು ಮಾಡಿದ.ವಿದುಷಿ ಗಂಗೂಬಾಯಿ ಹಾನಗಲ್ಲರ ಸಂಗೀತವನ್ನೂ ನಾನು ಹೆಚ್ಚಾಗಿ ಕೇಳಿಲ್ಲ. ಮೊನ್ನೆ ಅವರ ನಿಧನದ ದಿನವೇ ಚಂದನದಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನೋಡಿದೆನಷ್ಟೆ. ಹಿಂದೂಸ್ಥಾನಿ ಸಂಗೀತ ಅಷ್ಟಾಗಿ ತಲೆಯೊಳಗೆ ಹೋಗುವುದಿಲ್ಲ. ಕೆ.ಎಲ್.ಸೈಗಲ್ಲನು ತನ್ನ ಚಲನಚಿತ್ರಗಳಲ್ಲಿ ಹಾಡಿರುವ ಹಾಡುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ನನಗೆ ಹಿಂದೂಸ್ಥಾನಿ ಸಂಗೀತವನ್ನು ಜೀರ್ಣಿಸಿಕೊಳ್ಳಲು.

ಪಂ.ಭೀಮಸೇನ ಜೋಷಿಯವರ ಹಿಂದೂಸ್ಥಾನಿ ಶೈಲಿಯ ದೇವರನಾಮಗಳು ಇಷ್ಟವಾಗುತ್ತೇ ಹೊರೆತು, ಅವರು ಸಂಪೂರ್ಣ ಶಾಸ್ತ್ರೀಯ ಸಂಗೀತ ಕಚೇರಿ ಮಾಡಿದರೆಂದರೆ ಕಿವಿಯೊಳಗಿಂದ ಮಿದುಳಿನವರೆಗೂ ಹೋಗುವುದೇ ಇಲ್ಲ. ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ, ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಮಾತ್ರ ಯಾವುದೋ ಗಂಧರ್ವ ಲೋಕಕ್ಕೆ ಕರೆದೊಯ್ಯುವುದಂತೂ ಸತ್ಯ. ಹಿಂದೂಸ್ಥಾನಿ ಹಾಡುಗಾರಿಕೆಯು ಯಾಕೆ ಈ ಪ್ರಭಾವವನ್ನು ನನ್ನ ಮೇಲೆ ಇನ್ನೂ ಬೀರಿಲ್ಲವೋ ಇನ್ನೂ ಗೊತ್ತಿಲ್ಲ.

ಆದರೂ ಮೊನ್ನೆ ಚಂದನದಲ್ಲಿ ಪ್ರಸಾರವಾದಾಗ ಗಂಗೂಬಾಯಿ ಹಾನಗಲ್ಲರು ನಮ್ಮವರೇ ಎಂಬ ಕಾರಣದಿಂದಲೋ, ಹೆಮ್ಮೆ ಪಟ್ಟುಕೊಳ್ಳುತ್ತ ಕಾರ್ಯಕ್ರಮವನ್ನು ನೋಡಿದೆ. ಸಂಗೀತವು ನಿರೀಕ್ಷಣೆಯನ್ನು ಮೀರಿಯೇ ಇಷ್ಟವಾಯಿತು. What a great singer she "IS"! ಎನ್ನಿಸಿತು!ಇದೇ ವಾರದಲ್ಲಿ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಕೂಡ ನಿಧನ ಹೊಂದಿದ ಸುದ್ದಿಯನ್ನು ಕೇಳಿ ಬೇಸರವಾಯಿತು. ಪಟ್ಟಮ್ಮಾಳ್ ಸಂಗೀತವನ್ನು ಸಾಕಷ್ಟು ಕೇಳಿದ್ದೇನೆ. ಕೇಳಿ ಸವಿದಿದ್ದೇನೆ. ಸವಿದು ನಲಿದಿದ್ದೇನೆ. ವಯಸ್ಸಾದ ನಂತರದ ಗಂಗೂಬಾಯಿ ಹಾನಗಲ್ಲರಂತೆಯೇ ಪಟ್ಟಮ್ಮಾಳ್ ಅವರ ಧ್ವನಿಯೂ ಸಹ ಸ್ವಲ್ಪ ಗಡುಸಾಗಿಯೇ ಇತ್ತು. ಗಂಡಸು ಧ್ವನಿಯಂತೆಯೇ ಎಂದರೂ ತಪ್ಪಾಗುವುದಿಲ್ಲ.ಅವರ ಸೋದರ ಡಿ.ಕೆ.ಜಯರಾಮನ್ ಅವರದು ಇದರ ತದ್ವಿರುದ್ಧ. ಮೃದುವಾದ ಕಂಠ. ಇವರಿಬ್ಬರೂ ಕಚೇರಿಯನ್ನು ಯುಗಳವಾಗಿ ಮಾಡುತ್ತಿದ್ದರಂತೆ! ಪತ್ರಿಕೆಗಳಲ್ಲಿ ಪಟ್ಟಮ್ಮಾಳ್ ಅವರ ಭೈರವಿ ರಾಗದ ಪ್ರಚಾರದ ಬಗ್ಗೆ ಏನೇ ಓದಿದರೂ ನನಗೆ ಅವರ ಖರಹರಪ್ರಿಯವೇ ಪ್ರಿಯವಾದದ್ದು. "ಚಕ್ಕನಿ ರಾಜ...." ಎಂದು ಪಟ್ಟಮ್ಮಾಳ್ ಹಾಡುವಾಗ ವಿದ್ವಾನ್ ಶ್ರೀ ಶೆಮ್ಮಂಗುಡಿಯವರಷ್ಟೇ ಗತ್ತು ಕೇಳಿಬರುವುದಂತೂ ದಿಟ. What a great musician she was, she is, and she will be! ಎಂದು ಎನ್ನಿಸುತ್ತಲೇ ಇರುತ್ತೆ. ಈಗಲೂ ಚಕ್ಕನಿ ರಾಜವನ್ನೇ ಕೇಳುತ್ತಿದ್ದೇನೆ.ಈ ಮೂರೂ ಸಾವಿಗೆ ಮೊನ್ನೆ ಕನ್ನಡ ಚಾನೆಲ್ಲೊಂದರಲ್ಲಿ ಗಡ್ಡದ ಜ್ಯೋತಿಷಿಯೊಬ್ಬರು ಗ್ರಹಣದ ಕಾರಣ ಕೊಟ್ಟು ತಾವು ಎಷ್ಟು ಅವೈಜ್ಞಾನಿಕರೆಂದು ಹೇಳಿಕೊಂಡರು.

ಮೂರೂ ಮಹನೀಯರು ಕೇಳುಗ ರಸಿಕರಿಗೆ, ಕಲಿಯುವವರಿಗೆ, ಸಾಧಿಸುವವರಿಗೆ, ಬದುಕುವವರಿಗೆ ಸಾಕಷ್ಟು ಕೊಟ್ಟು ಹೋಗಿದ್ದಾರೆ. ಇವರ ಹೆಸರುಗಳು ಚಿರವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಸಾಧಕರು ಹೆಚ್ಚು ಹೆಚ್ಚು ಹುಟ್ಟಿ ಬರಲಿ.

-ಅ
23.07.2009
10PM

Saturday, July 18, 2009

ಸತ್ಯಾಗ್ರಹ ಮುಗಿಯಿತು

"ಈ ಮನೆಯಲ್ಲೇನೋ ಋಣವಿದೆ" ಎಂದು ನನಗೆ ಬಲವಾಗಿ ಅನ್ನಿಸಲು ಅಂದು ಏನು ಕಾರಣವೂ ನನಗೆ ತೋಚಿರಲಿಲ್ಲ. ಮೊನ್ನೆ ಮೊನ್ನೆ ಕೀಚು ಮತ್ತು ಕಟೀನಾ ಇಬ್ಬರನ್ನೂ ಅವರ ಮನೆಗೆ ಕರೆದುಕೊಂಡು ಹೋಗುವವರೆಗೂ, ಏನು ಋಣವಿರಬಹುದು ಎಂಬುದು ನನ್ನ ಊಹೆಯನ್ನೂ ಮೀರಿತ್ತು. ನನಗೆ ಅಂದು ಯಾಕೆ ಹಾಗೆನ್ನಿಸಿತು ಎಂದು ಇಂದಿಗೂ ಗೊತ್ತಿಲ್ಲ. ಮದುವೆಗೆ ಎರಡು ತಿಂಗಳು ಮುಂಚೆ ಮಾವನವರು ತಮ್ಮ ಸಂಬಂಧಿಕರ ಮನೆಗಳಿಗೆಲ್ಲ ನನ್ನನ್ನು ಕರೆದುಕೊಂಡು ಹೋಗಿ, "ನನ್ನ ಅಳಿಯ!" ಎಂದು ನನ್ನನ್ನು ಪರಿಚಯಿಸುವಾಗ ಎಲ್ಲರನ್ನೂ ಬಿಟ್ಟು ಇವರ ಮನೆಯಲ್ಲೇ ಹಾಗೆ ಏಕೆನ್ನಿಸಿತೋ ಇಂದಿಗೂ ಗೊತ್ತಿಲ್ಲ.

ವಿಶಾಲವಾದ ಹಳ್ಳಿ. ಹಳ್ಳಿಗೆ ಎರಡೇ ಮನೆ. ಸುಮಾರು ಐವತ್ತು ಎಕರೆ ಜಮೀನು. ಜಮೀನಿಗೆ ಅಂಟಿಕೊಂಡಂತೆಯೇ ಸ್ವಚ್ಛಂದವಾಗಿ ನಿರಂತರವಾಗಿ ಹರಿಯುವ ಚೆಲುವಾದ ಹೇಮಾವತಿ! ಇನ್ನೊಂದು ದಡದಲ್ಲಿ ದಟ್ಟವಲ್ಲದಿದ್ದರೂ ಸುಮಾರಾದ ಕಾಡು. ಹೊಳೆನರಸಿಪುರದ ಬಳಿ ಏನೆಲ್ಲ ಇದೆ!! ನನಗೆ ಜಾಗವು ಇಷ್ಟವಾಗದೆ ಇರಲು ಸಾಧ್ಯವೆ? ಇಷ್ಟ ಪಡುವುದಕ್ಕೂ ಅಲ್ಲಿರುವ ಋಣದ ಬಗ್ಗೆ ಚಿಂತಿಸುವುದಕ್ಕೂ ವ್ಯತ್ಯಾಸವಿದೆ.

ನಮ್ಮ ಮನೆಯಲ್ಲೇ ಜನಿಸಿದ ಕೀಚು ವನವಾಸಕ್ಕೆಂದು ಹೋದ ಪಾಂಡವರಂತೆ ಪದ್ಮನಾಭನಗರಕ್ಕೆ ಹೋಯಿತು. ಕೀಚುವಿನ ಆಪ್ತ ಕಡ್ಲಿ ಕಾರಣಾಂತರದಿಂದ ತುಂಬ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿತು. ಕೀಚುವಿಗೆ ಕಟೀನಾ ಎಂಬ ಸಂಗಾತಿ ಸಿಕ್ಕಿತು. ವಿರಾಟರಾಜನಂಥವರು ಅಲ್ಲಿ ಇದ್ದರೂ, ಸಕಲ ವೈಭೋಗಗಳು ದೊರಕುವಂತಿದ್ದರೂ ವನವಾಸದಲ್ಲಿ ಕಷ್ಟ ತಪ್ಪಿದ್ದಲ್ಲವಲ್ಲವೇ? ಹೀಗೆ ಅನೇಕ ತೊಂದರೆಗಳೊಂದಿಗೆ ಕೀಚು ಮತ್ತು ಕಟೀನಾ ಇಬ್ಬರ ಒಂದು ವರ್ಷದ ವನವಾಸ ಮುಗಿದ ನಂತರ ನಮ್ಮ ಮನೆಯಲ್ಲಿ ಒಂದು ವಾರ ಅಜ್ಞಾತವಾಸವನ್ನು ಅನುಭವಿಸಿತು. ಆರು ವರ್ಷಗಳ ಕಾಲ ನಮ್ಮ ರಸ್ತೆಯಲ್ಲಿ ಯಾರಿದ್ದಾರೆಂಬುದು ನನಗೆ ಗೊತ್ತಿರಲಿಲ್ಲ, ನಾನು ಎಂಬುವವನು ನಮ್ಮ ರಸ್ತೆಯಲ್ಲಿದ್ದೇನೆಂಬುದು ನಮ್ಮ ರಸ್ತೆಯ ಜನಕ್ಕೆ ಗೊತ್ತಿರಲಿಲ್ಲ. ಕೀಚು-ಕಟೀನಾ ದೆಸೆಯಿಂದ ನಮ್ಮ ರಸ್ತೆಯವರಿಗೆಲ್ಲರಿಗೂ ನಾನು, ನನ್ನ ಹೆಂಡತಿ, ನಮ್ಮಮ್ಮ ಗೊತ್ತಾದೆವು. ನಮ್ಮನ್ನು ಶಪಿಸದವರೇ ಇಲ್ಲವೆನಿಸುತ್ತೆ. ನಮ್ಮ ಮನೆಯ ಸ್ವೀಟಿ ಕೂಡ! ಅದೇನು ಸದ್ದು! ಅದೇನು ಧ್ವನಿ!! ಅದೇನು ಕಂಠ!!!

ಸ್ವೀಟಿಯಂತೂ ಒಂದು ವಾರದ ಕಾಲ ಗಾಂಧೀಜಿಯಂತೆ ಉಪವಾಸ ಸತ್ಯಾಗ್ರಹವನ್ನು ಕೈಗೊಂಡುಬಿಟ್ಟಿತು. ಶನಿವಾರ ಯಾವಾಗ ಬರುತ್ತೋ ಎಂದು ಹಪಹಪಿಸುತ್ತಿತ್ತು. ಅಂತೂ ಶನಿವಾರ, ತನ್ನ ಉಪವಾಸ ಸತ್ಯಾಗ್ರಹಕ್ಕೆ ಹಾಲನ್ನ ತಿನ್ನುವುದರ ಮೂಲಕ ಮಂಗಳ ಹಾಡಿತು.

ಕ್ವಾಲಿಸ್ಸಿನ ಹಿಂಬದಿಯಲ್ಲಿ ರಾಜ ರಾಣಿಯರಂತೆ ಐದು ಗಂಟೆಗಳ ಕಾಲ ಪ್ರಯಾಣ ಮಾಡಿದವು. ಮೊದಲರ್ಧ ಗಂಟೆ ಸ್ವಲ್ಪ ಕಷ್ಟವಾದರೂ ನಂತರ ಹೊಂದಿಕೊಂಡವು. ಮಧ್ಯೆ ಹಿರಿಸಾವೆಯಲ್ಲಿ ಚಹ ಕುಡಿಯಲು ಕಾರನ್ನು ನಿಲ್ಲಿಸಿದಾಗ ಕಾರೊಳಗಿನಿಂದಲೇ ಹೊರಗಿರುವ ತಮ್ಮ ಶತ್ರುಗಳನ್ನು ಗದರಿಸುತ್ತಿದ್ದವು. ಆ ಶತ್ರುಗಳೇನು ಸಾಮಾನ್ಯವಲ್ಲ, "ನಮ್ಮೂರಿಗೆ ಬಂದು ನಮ್ಮನ್ನೇ ಗದರಿಸುತ್ತಿದ್ದೀರ?" ಎಂದು ಅವಾಚ್ಯಗಳನ್ನು ಕೀಚು-ಕಟೀನಾ ಮೇಲೆ ಎಸೆದವು. ಹೇಗೋ ವಾಸು ಮಾವನ ಮನೆ ತಲುಪಿದೆವು.

ನಮ್ಮ ಮನೆಯಲ್ಲಿದ್ದ ಸ್ವೀಟಿಯಂತೆ ಅವರ ಮನೆಯಲ್ಲಿರುವ ಜರ್ಸಿಯು ಏನು ತಿಳಿದುಕೊಳ್ಳುತ್ತೋ ಏನೋ ಎಂಬ ಭೀತಿಯು ನನ್ನಲ್ಲಿತ್ತಾದರೂ ಸ್ವಜಾತಿ ವ್ಯಾಮೋಹವು ಅದಕ್ಕೆಡೆ ಮಾಡಿಕೊಡಲಾರದೆಂದು ತಿಳಿದಿದ್ದೆ. ಅದಲ್ಲದೆ ನಮ್ಮ ಜೊತೆಗೆ ಹಲವಾರು ಕೀಚು ಕಟೀನಾ ಜರ್ಸಿ ಸ್ವೀಟಿಗಳನ್ನು ಕಂಡರಿತ ಪ್ರಸಾದಿ ಇದ್ದ. ಅವುಗಳ ಸೈಕಾಲಜಿಯನ್ನು ಕಾಲಕಾಲಕ್ಕೆ ವಿವರಿಸುತ್ತಿದ್ದ. ರೇಖಾ ಮತ್ತು ನಾನು ಪ್ರಸಾದಿ ಹೇಳುತ್ತಿದ್ದುದನ್ನೆಲ್ಲ ಬಹಳ ಉತ್ಸುಕದಿಂದ ಕೇಳುತ್ತಿದ್ದೆವು. ಅವನ ಪ್ರಕಾರ ಜರ್ಸಿಯು ಕೀಚು ಮತ್ತು ಕಟೀನಾ ಇಬ್ಬರನ್ನೂ ತಿದ್ದಿ ಸತ್ಪ್ರಜೆಗಳನ್ನಾಗಿಸುತ್ತೆ! ಇನ್ನೂ ಕಾಯಬೇಕು. ಇವೆರಡೋ ರೌಡಿಗಳು!!

ಜರ್ಸಿಯೊಡನೆ ಸ್ನೇಹ ಮಾಡಿಕೊಳ್ಳಬೇಕೋ, ವೈರತ್ವ ಕಟ್ಟಿಕೊಳ್ಳಬೇಕೋ ಇನ್ನೂ ಗೊತ್ತಾಗಿರಲಿಲ್ಲ. ಹಾಗಾಗಿ ಇನ್ನೂ ಒಟ್ಟಿಗೆ ಬಿಟ್ಟಿರಲಿಲ್ಲ. ಬಹುಶಃ ಇಷ್ಟು ಹೊತ್ತಿಗೆ ಜರ್ಸಿಯೊಡನೆ ಸ್ನೇಹ ಸೌಹಾರ್ದತೆಯಿಂದ ಇರುತ್ತೆನಿಸುತ್ತೆ. ಕಾರಿನಿಂದ ಇಳಿದ ಮರುಕ್ಷಣವೇ ಶಾಲೆಯಿಂದ ಹೊರಗೆ ಬಂದ ಪ್ರೈಮರಿ ಸ್ಕೂಲ್ ಹುಡುಗರಂತೆ, ಪಂಜರದಿಂದ ಹೊರಬಂದ ಗಿಳಿಯಂತೆ, ಸಿಕ್ಕ ಸಿಕ್ಕ ಕಡೆ ಎರಡೂ ಓಡಿದವು. ನಾಲೆಯಲ್ಲಿ ಇಳಿದವು. ಹುಲ್ಲಿನ ಮೇಲೆ ಹೊರಳಾಡಿದವು. ದನಗಳ ಹತ್ತಿರ ಹೋಗಿ ಅವನ್ನು ಕೆಣಕಿ ಅವುಗಳು ಹಾಯಲು ಬಂದಾಗ ಹೆದರಿ ಓಡಿ ಕಾಲ್ಕಿತ್ತವು. ಮತ್ತೆ ಕಟ್ಟಿದ್ದ ಜರ್ಸಿಯ ಬಳಿ ಹೋಗಿ ಪರಿಚಯ ಮಾಡಿಕೊಂಡವು. ನನ್ನ ಮೈಮೇಲೆ, ರೇಖಾಳ ಮೈಮೇಲೆ, ಪ್ರಸಾದಿಯ ಮೈ ಮೇಲೆಲ್ಲ ಎಗರಿದವು. ಮುಖದಲ್ಲಿ ಅದೆಷ್ಟು ಖುಷಿಯ ಭಾವನೆ!!! ಆದರೆ ಬಾಗಿಲಲ್ಲಿ ಕಟ್ಟಿ ಹಾಕಿದ ಕ್ಷಣದಿಂದ ಮತ್ತೆ ಅದೇ ಚಿಂತೆ! "ಎಲ್ಲೋ ಕಟ್ಟುಬಿಟ್ಟಿದ್ದಾರೆ ನಮ್ಮನ್ನು. ಯಾವುದೋ ಊರಿಗೆ ಕರೆದುಕೊಂಡು ಬಂದಿದ್ದಾರೆ!! ಏನಾದರಾಗಲಿ, ಇವರು ಇದ್ದಾರಲ್ಲ ಇಲ್ಲೇ" ಎಂಬ ಸಮಾಧಾನವೂ ಇತ್ತು.

ಮಾರನೆಯ ದಿನ ಮತ್ತೆ ಸರಪಳಿ ಬಿಚ್ಚಿದಾಗ ಹಿಗ್ಗೋ ಹಿಗ್ಗು. ಸ್ವರ್ಗವೆಂದರೆ ಇದೇ ಸರಿ! ಆದರೆ ಈ ಬಾರಿ ಹಿಂದಿನ ದಿನದಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಓಡಿ ದಣಿಯಲಿಲ್ಲ. ಸ್ವಲ್ಪ ಸಭ್ಯರಾಗಿದ್ದರು. ಹಳ್ಳಿಯ ವಾತಾವರಣ ಒಂದು ರಾತ್ರಿಗೆ ಏನೆಲ್ಲ ಬದಲಾವಣೆ ತಂದಿತ್ತು!! ವಾಕಿಂಗ್ ಮಾಡಿಕೊಂಡು ನಾನು, ರೇಖಾ, ಪ್ರಸಾದಿ ಮತ್ತು ವಾಸು ಮಾವನ ಮಗ ಪ್ರಜ್ವಲ್ ಹೇಮಾವತಿಯ ತಟಕ್ಕೆ ಬಂದೆವು. ಹೊಳೆಯನ್ನು ಕಂಡಾಕ್ಷಣವೇ ಕಟೀನಾಗೆ ಎಂಥದೋ ಭಯ. ಕೀಚುವಿಗೆ ಬೆರಗು! ಬೆಕ್ಕಸ ಬೆರಗು!! "ಇದೇನು ಇಷ್ಟೊಂದು ನೀರು!!!!!!!!!" ಎಂಬಂತೆ ಸುತ್ತಲೂ ನೋಡಿದ. ಬಳಿಕ ನನ್ನ ಮುಖ ನೋಡಿದ. ನೀರಿನೊಳಕ್ಕೆ ಮುಖವನ್ನದ್ದಿದ. ಮತ್ತೆ ನನ್ನ ನೋಡಿದ. ಸುತ್ತಲೂ ನೋಡಿದ! ಅವನ ಆನಂದವನ್ನು ಪದಗಳು ವರ್ಣಿಸುವ ಶಕ್ತಿಯನ್ನು ಹೊಂದಿಲ್ಲ. ಅವನ ಆನಂದವನ್ನು ನೋಡಿದ ನನ್ನ ಸಂತಸವನ್ನೂ ಸಹ!! ಮನೆಯಲ್ಲಿ ತನ್ನ ಊಟದ ಪಾತ್ರೆಗೆ ಕುಡಿಯಲು ನೀರನ್ನು ಹಾಕುತ್ತಿದ್ದಾಗ ಕಾಲಲ್ಲಿ ಚೆನ್ನಾಗಿ ಕೊಡವಿ ನೀರನ್ನೆಲ್ಲ ಚೆಲ್ಲುತ್ತ ಬೈಸಿಕೊಳ್ಳುತ್ತಿದ್ದ. ಈಗ ಹೊಳೆಯ ನೀರಿಗೆ ತನ್ನನ್ನು ಕರೆದುಕೊಂಡು ಬಂದಿದ್ದಾರೆ. ಸಂತೋಷ ಆಗದೇ ಇರುತ್ತಾ?

ಕಟೀನಾ ಮಾತ್ರ ನೀರನ್ನು ಶತ್ರುವೆಂದು ತಿಳಿದಿತ್ತು.

ನಾನು ನೀರೊಳಕ್ಕಿಳಿದಾಗ ಕೀಚುವಿಗೆ ಮತ್ತೂ ಖುಷಿಯಾಗಿ ಧುಮುಕಿದ. ಮನಸ್ಸಿಗೆ ತೃಪ್ತಿಯಾಗುವಷ್ಟು ಈಜಿದ. ಕಟೀನಾಳನ್ನೂ ಕರೆದ. ಅವಳು ಸುತರಾಂ ಒಪ್ಪಲಿಲ್ಲ. ನಾನು ಕರೆದೆ, ಬರಲಿಲ್ಲ. ಪ್ರಜ್ವಲ್ ಅಂತೂ ದನಗಳನ್ನು ಸೆಳೆಯುವಂತೆ ಕುತ್ತಿಗೆ ಹಿಡಿದು ಸೆಳೆದ. ಇಲ್ಲ, ಬರಲೇ ಇಲ್ಲ. ಇತ್ತ ಕೀಚು ಈಜುತ್ತ ಈಜುತ್ತ ಬಂಡೆಯ ಮೇಲೆ ಕುಳಿತಿದ್ದ ನನ್ನ ಬದಿಗೆ ಬಂದು ಒದ್ದೆ ಮೈಯನ್ನು ನನ್ನ ಬಟ್ಟೆಗೆ ಒರೆಸಿ ಹೋಗುತ್ತಿದ್ದ. "ಕಟೀನಾನೂ ಕಲಿತುಕೊಳ್ಳುತ್ತೆ, ಸ್ವಲ್ಪ ದಿನ" ಎಂದು ಪ್ರಸಾದಿ ಭರವಸೆಯಿತ್ತ. ಕಾರಿನಲ್ಲಿ ಜೊಲ್ಲು ಸುರಿಸುತ್ತೆಂಬ ಕಾರಣಕ್ಕೆ ರೇಖಾ ಕೀಚುವಿಗೆ "ನನ್ ಹತ್ರ ಬರಬೇಡ ಹೋಗು!" ಎಂದು ಗದರಿದ್ದಳು. ಹೊಳೆಯಲ್ಲಿ "ಫೋಟೋ ತೆಗೆಸಿಕೊಳ್ಳೋಣ ಬಾರೋ" ಎಂದು ಎಷ್ಟು ಕರೆದರೂ ಅವಳ ಹತ್ತಿರ ಬರಲೇ ಇಲ್ಲ ಕೀಚು. ಕೊನೆಗೆ ನಾನೇ ಹೋದೆ, ಫೋಟೊ ತೆಗೆಸಿಕೊಳ್ಳಲು!

ಕೀಚು ಮತ್ತು ಕಟೀನಾರ ಪಾಲಿಗೆ ಇದು ಅತ್ಯಂತ ರಮಣೀಯವಾದ, ಮನೋಹರವಾದ ’ಪ್ರವಾಸ’. ಹೌದು, ಅವು ತಾವು ಪ್ರವಾಸಕ್ಕೆ ಬಂದಿದ್ದೇವೆಂದೇ ನಂಬಿದ್ದವು. ಸಂಜೆ ಹೊರಡುವಾಗ ಅವು ಮಾಡಿದ ಗಲಾಟೆ ಅಷ್ಟಿಷ್ಟಲ್ಲ!!

ಕಟೀನಾ ಮನಸ್ಸಿನಲ್ಲೇ ಕೊರಗುವವಳು. ಗುಂಡಗೆ ಸುತ್ತುಕೊಂಡು ನೋವಿನ ಕಣ್ಣಲ್ಲಿ ಓರೆನೋಟದೊಂದಿಗೆ ನಾವು ಕಾರನ್ನೇರುವುದನ್ನು ನೋಡುತ್ತಿತ್ತು. ಕೀಚು "ನಮ್ಮನ್ನೂ ಕರೆದುಕೊಂಡು ಹೋಗಿ, ಪ್ಲೀಸ್...." ಎಂದು ಅಂಗಲಾಚುತ್ತಿತ್ತು. ನನ್ನ ಕಂಠ ಗದ್ಗದಿತವಾಗಿತ್ತು. ಅಳು ಬರುವುದರೊಳಗೆ ಕಾರೊಳಕ್ಕೆ ಕುಳಿತುಕೊಂಡುಬಿಟ್ಟೆ! ಕೀಚುವನ್ನು ನೋಡಿದಂತೆಯೇ ದುಃಖವು ಇಮ್ಮಡಿಸತೊಡಗಿತು. ರೇಖಾಳಿಗೂ ಹಾಗೆನ್ನಿಸಿತು. ಕೇವಲ ಒಂದು ವಾರ ಅಜ್ಞಾತವಾಸಕ್ಕೆಂದು ನಮ್ಮೊಡನಿದ್ದ ನಮಗೇ ಹೀಗಾಗಿರಬೇಕಾದರೆ ಇನ್ನು ಅಕ್ಕರೆಯಿಂದ ಪಾಲಿಸಿ, ಪೋಷಿಸಿ, ಮುದ್ದಿಸಿ, ಮೋಹಿಸಿ ಬೆಳೆಸಿದ ಆ ತಾಯಿಗೆ ಹೇಗಾಗಿರಬೇಡ!! ಇದನ್ನು ಬರೆಯುವಾಗಲೂ ನನಗೆ ಕಷ್ಟವಾಯಿತು. ವಿಜಯಾಳ ಗುಡ್‍ಬೈ ಲೇಖನವನ್ನು ನನಗೆ ಓದಲೂ ಸಹ ಆಗಲಿಲ್ಲ. ನನ್ನನ್ನು ಈ ಮೋಹಪಾಶಕ್ಕೆ ಸಿಲುಕಿಸಿದ ವಿಧಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂಥ ಅನುಭವವು ನಮಗೆ ಬೇಕು! ನಾವು ಮನುಷ್ಯರು!!

ಏನು ಋಣವಿತ್ತೋ ಗೊತ್ತಿಲ್ಲ. ಅಂತೂ ವಾಸು ಮಾವನ ಮನೆ ಸೇರಿದವು ಕೀಚು ಮತ್ತು ಕಟೀನಾ. ವಾಸು ಮಾವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಾನು ಚಿರಋಣಿ. ಕತ್ತಲಿನಿಂದ ಬೆಳಕಿನೆಡೆಗೆ ಸಾಗಿವೆ!

ಇತ್ತ ಹನುಮಂತನಗರವು ನಿಶಬ್ದವಾಗಿದೆ. ಮೌನವಾಗಿದೆ. ಮನೆಯೆಲ್ಲ ಭಣ ಭಣ.

ಸ್ವೀಟಿಯ ಉಪವಾಸ ಸತ್ಯಾಗ್ರಹ ಮುಗಿದಿದೆ. ಆಳ್ವಿಕೆ ಮುಂದುವರೆದಿದೆ.

Keechu Kateena


-ಅ
15.07.2009
9PM

Monday, July 13, 2009

ಗಮಕ ಸುಧಾ ಧಾರೆ

"ಏನ್ ಬಂದುದೌ ತಂಗೆ?....."

ಹೈಸ್ಕೂಲಿನಲ್ಲಿ ನಮ್ಮ ಕನ್ನಡ ಮೇಡಮ್ಮು ಮಾಡಿದ ಪಾಠವನ್ನು ಹೇಗೆ ತಾನೆ ಮರೆಯಲಿ? ಹಳೆಗನ್ನಡ ಸಾಹಿತ್ಯವನ್ನೂ ಸಹ ಯಾವುದೇ ’ತರ್ಜುಮೆ’ಗಳಿಲ್ಲದೆ (ಕನ್ನಡವನ್ನು ಕನ್ನಡಕ್ಕೇ ತರ್ಜುಮೆ ಮಾಡುವುದೆಂದರೆ ಹಾಸ್ಯವಷ್ಟೆ?) ಓದಬಹುದು, ಓದಿ ಆನಂದಿಸಬಹುದೆಂದು ನಾನು ಕಲಿತದ್ದು, ನಮ್ಮ ಆಚಾರ್ಯ ಪಾಠಶಾಲೆಯ ಎಸ್.ಎ.ಪಿ ಮೇಡಮ್ಮು ಮಾಡಿದ ಶ್ರೀ ರಾಮಾಯಣ ದರ್ಶನಂ ಪಾಠದ ದೆಸೆಯಿಂದಲೇ. ವೈಯಕ್ತಿಕವಾಗಿ ಈಗಲೂ ನನಗೆ ಹಳೆಗನ್ನಡ ಸಾಹಿತ್ಯ ಕೊಡುವ ಆನಂದವನ್ನು ಹೊಸಗನ್ನಡ ಕಾವ್ಯವು ಕೊಡುತ್ತಿಲ್ಲ.

"ಗಮಕಕ್ಕೆ ಕುಮಾರವ್ಯಾಸ ಭಾರತವನ್ನು ಮಾಡೋಣವೇ, ಮಂಕುತಿಮ್ಮನ ಕಗ್ಗವನ್ನು ಮಾಡೋಣವೇ, ಅಥವಾ ಶ್ರೀ ರಾಮಾಯಣ ದರ್ಶನಂ ಮಾಡೋಣವೇ?" ಎಂದು ಲಕ್ಷ್ಮೀ ಆಯ್ಕೆಗಳನ್ನು ತೆರೆದಿಟ್ಟಾಗ ನಾನು ಯಾವ ಹಿಂದೇಟೂ ಇಲ್ಲದೆ ನನ್ನ ಮತವನ್ನು ಶ್ರೀ ರಾಮಾಯಣ ದರ್ಶನಂ‍-ಗೆ ನೀಡಿಬಿಟ್ಟೆ. ಮಿಕ್ಕೆಲ್ಲವು ಚೆನ್ನಾಗಿಲ್ಲವೆಂದಲ್ಲ, ಹಾಗೆ ಚೆನ್ನಾಗಿಲ್ಲ ಎಂದು ಹೇಳುವ ಎಂಟೆದೆಯು ತಾನೆ ಯಾರಿಗಿದೆ? ಆದರೆ ಶ್ರೀ ರಾಮಾಯಣ ದರ್ಶನಂ ಬಗ್ಗೆ ಏನೋ ವಿಶೇಷ ಒಲವು - ನನಗೆ!! ವೈಯಕ್ತಿಕ ವಿಷಯ ಬದಿಗಿಟ್ಟರೆ, ನಮ್ಮ ಪ್ರಣತಿ ತಂಡವೂ ಸಹ ಶ್ರೀ ರಾಮಾಯಣ ದರ್ಶನಂ-ಗೆ ಮತ ನೀಡಿ, ಅಂತೂ ಆಯೋಜಿಸಲು ಸರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ.

ಈ ಶನಿವಾರವೇ ನಮ್ಮ ಬಸವನಗುಡಿಯ ಐ.ಐ.ಡಬಲ್ಯೂ.ಸಿ.ಯಲ್ಲಿ ಪ್ರಣತಿಯ ನಾಲ್ಕನೆಯ ಕಾರ್ಯಕ್ರಮದ ಅಂಗವಾಗಿ ಗಮಕ ಸುಧಾಧಾರೆಯನ್ನು ನಮ್ಮೆಲರಿಗಾಗಿ ಹರಿಸಲಿದ್ದಾರೆ ಶ್ರೀಮತಿ ಶೋಭಾಶಶಿಧರ್ ಮತ್ತು ಶ್ರೀಮತಿ ಬಿ.ಜಿ.ಕುಸುಮಾ ಅವರು. ಎಲ್ಲರೂ ಐ.ಐ.ಡಬಲ್ಯೂ.ಸಿ.ಯಲ್ಲಿ ಭೇಟಿಯಾಗೋಣ. ಶಬರಿಗೆ ರಾಮನು ಹೇಗೆ ಅತಿಥಿಯಾದನೆಂದು ಕೇಳೋಣ!

ಎಲ್ಲರಿಗೂ ಒಳಿತಾಗಲಿ.-ಅ
13.07.2009
8.30PM

Monday, July 6, 2009

ಚಲಿಸದ ಕಾಲ

ನಂಬಿಕೆಯೊಂದನೆ
ಕಣ್ಣೊಳಗಿರಿಸಿ
ಚುಂಬಿಸಿ ಬಿಂಬಿಸಿ
ಬಾಷ್ಪವನೊರೆಸಿ,
ನಗುವಳೆ ಅರಸಿ?

ಚಲಿಸದ ಕಾಲದಿ
ಫಲಿಸದ ಬಯಕೆ
ನಲಿವ ಭ್ರಮೆಯಲಿ
ತಿಳಿಯದ ಬೆರಕೆ,
ಕಲಿಯುವ ಹರಕೆ.

ಎಲ್ಲಿಹುದೆಮ್ಮಯ
ಬದುಕಿನ ಗುರಿಯು?
ಒಬ್ಬರನೊಬ್ಬರು
ಮರೆಯುವ ಪರಿಯು,
ಭೀತಿಯ ಝರಿಯು.

ಅರಿಯದೆ ಸಿಲುಕಿರೆ
ವಿಧಿಯ ಹೊನಲಿಗೆ
ಹರಿಯುವ ಕಡೆಯೊಳೆ
ಹಾದಿ ಕವಲಿಗೆ,
ಎಡೆಯು ಕನಲಿಗೆ.

-ಅ
06.07.2009
10PM