Monday, July 13, 2009

ಗಮಕ ಸುಧಾ ಧಾರೆ

"ಏನ್ ಬಂದುದೌ ತಂಗೆ?....."

ಹೈಸ್ಕೂಲಿನಲ್ಲಿ ನಮ್ಮ ಕನ್ನಡ ಮೇಡಮ್ಮು ಮಾಡಿದ ಪಾಠವನ್ನು ಹೇಗೆ ತಾನೆ ಮರೆಯಲಿ? ಹಳೆಗನ್ನಡ ಸಾಹಿತ್ಯವನ್ನೂ ಸಹ ಯಾವುದೇ ’ತರ್ಜುಮೆ’ಗಳಿಲ್ಲದೆ (ಕನ್ನಡವನ್ನು ಕನ್ನಡಕ್ಕೇ ತರ್ಜುಮೆ ಮಾಡುವುದೆಂದರೆ ಹಾಸ್ಯವಷ್ಟೆ?) ಓದಬಹುದು, ಓದಿ ಆನಂದಿಸಬಹುದೆಂದು ನಾನು ಕಲಿತದ್ದು, ನಮ್ಮ ಆಚಾರ್ಯ ಪಾಠಶಾಲೆಯ ಎಸ್.ಎ.ಪಿ ಮೇಡಮ್ಮು ಮಾಡಿದ ಶ್ರೀ ರಾಮಾಯಣ ದರ್ಶನಂ ಪಾಠದ ದೆಸೆಯಿಂದಲೇ. ವೈಯಕ್ತಿಕವಾಗಿ ಈಗಲೂ ನನಗೆ ಹಳೆಗನ್ನಡ ಸಾಹಿತ್ಯ ಕೊಡುವ ಆನಂದವನ್ನು ಹೊಸಗನ್ನಡ ಕಾವ್ಯವು ಕೊಡುತ್ತಿಲ್ಲ.

"ಗಮಕಕ್ಕೆ ಕುಮಾರವ್ಯಾಸ ಭಾರತವನ್ನು ಮಾಡೋಣವೇ, ಮಂಕುತಿಮ್ಮನ ಕಗ್ಗವನ್ನು ಮಾಡೋಣವೇ, ಅಥವಾ ಶ್ರೀ ರಾಮಾಯಣ ದರ್ಶನಂ ಮಾಡೋಣವೇ?" ಎಂದು ಲಕ್ಷ್ಮೀ ಆಯ್ಕೆಗಳನ್ನು ತೆರೆದಿಟ್ಟಾಗ ನಾನು ಯಾವ ಹಿಂದೇಟೂ ಇಲ್ಲದೆ ನನ್ನ ಮತವನ್ನು ಶ್ರೀ ರಾಮಾಯಣ ದರ್ಶನಂ‍-ಗೆ ನೀಡಿಬಿಟ್ಟೆ. ಮಿಕ್ಕೆಲ್ಲವು ಚೆನ್ನಾಗಿಲ್ಲವೆಂದಲ್ಲ, ಹಾಗೆ ಚೆನ್ನಾಗಿಲ್ಲ ಎಂದು ಹೇಳುವ ಎಂಟೆದೆಯು ತಾನೆ ಯಾರಿಗಿದೆ? ಆದರೆ ಶ್ರೀ ರಾಮಾಯಣ ದರ್ಶನಂ ಬಗ್ಗೆ ಏನೋ ವಿಶೇಷ ಒಲವು - ನನಗೆ!! ವೈಯಕ್ತಿಕ ವಿಷಯ ಬದಿಗಿಟ್ಟರೆ, ನಮ್ಮ ಪ್ರಣತಿ ತಂಡವೂ ಸಹ ಶ್ರೀ ರಾಮಾಯಣ ದರ್ಶನಂ-ಗೆ ಮತ ನೀಡಿ, ಅಂತೂ ಆಯೋಜಿಸಲು ಸರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ.

ಈ ಶನಿವಾರವೇ ನಮ್ಮ ಬಸವನಗುಡಿಯ ಐ.ಐ.ಡಬಲ್ಯೂ.ಸಿ.ಯಲ್ಲಿ ಪ್ರಣತಿಯ ನಾಲ್ಕನೆಯ ಕಾರ್ಯಕ್ರಮದ ಅಂಗವಾಗಿ ಗಮಕ ಸುಧಾಧಾರೆಯನ್ನು ನಮ್ಮೆಲರಿಗಾಗಿ ಹರಿಸಲಿದ್ದಾರೆ ಶ್ರೀಮತಿ ಶೋಭಾಶಶಿಧರ್ ಮತ್ತು ಶ್ರೀಮತಿ ಬಿ.ಜಿ.ಕುಸುಮಾ ಅವರು. ಎಲ್ಲರೂ ಐ.ಐ.ಡಬಲ್ಯೂ.ಸಿ.ಯಲ್ಲಿ ಭೇಟಿಯಾಗೋಣ. ಶಬರಿಗೆ ರಾಮನು ಹೇಗೆ ಅತಿಥಿಯಾದನೆಂದು ಕೇಳೋಣ!

ಎಲ್ಲರಿಗೂ ಒಳಿತಾಗಲಿ.-ಅ
13.07.2009
8.30PM

1 comment:

  1. "ಎಲ್ಲರೂ ಐ.ಐ.ಡಬಲ್ಯೂ.ಸಿ.ಯಲ್ಲಿ ಭೇಟಿಯಾಗೋಣ."
    ನಾಲ್ಕೇ ನಾಲ್ಕು ದಿನ ಮೊದಲೇ ಹೇಳಿದ್ರೂ ಸಾಧ್ಯವಿತ್ತು ಅನ್ಸತ್ತೆ. ಇನ್ನು ಟಿಕೆಟ್ ಬುಕ್ ಮಾಡಿ ಹೊರಟು ಬರೋಷ್ಟ್ರಲ್ಲಿ ಕಾರ್ಯಕ್ರಮ ಮುಗ್ದಿರತ್ತೆ.
    ಸೋ... ಇಲ್ಲಿಂದಲೇ ಶುಭಾಶಯ. ಎಲ್ಲವೂ ಇನ್ನಷ್ಟು ಒಳಿತಾಗಲಿ.

    ReplyDelete