Tuesday, August 18, 2009

ಮಂಗಳಗೌರೀ ವ್ರತ ಪೌರೋಹಿತ್ಯಅಥಾ ಶ್ರೀ ಮಂಗಳಗೌರೀ ವ್ರತ ಪೂಜಾವಿಧಿಃ ಸಂಪೂರ್ಣಂ!

ಎಂದು ನಾನು ಓದಿದಾಗ ಎಷ್ಟೊಂದು ತೃಪ್ತಿ, ಸಂತೋಷ - ಬೆಳಿಗ್ಗೆ. ಆಮೇಲೆ ಗೊತ್ತಾಯಿತು ಈ ವ್ರತವನ್ನು ಐದು ವರ್ಷಗಳು ಮಾಡಬೇಕೆಂದು.

ಗಂಡಸಿಗೆ ಯಾಕೆ ಗೌರಿ ದುಕ್ಕ? ಯಾಕೆಂದರೆ ಈ ಗಂಡಸು ಪುರೋಹಿತ. ಪೂಜೆ ಮಾಡಿಸಿದ್ದಕ್ಕೆ ವಾಯನದಾನವೇನೋ ಸಿಕ್ಕಿತು. ಆದರೆ ಬೆಳಿಗ್ಗೆ ನಾಲ್ಕುವರೆಗೆ ಏಳುವುದೇ ಚಿಂತೆ! ಅಷ್ಟೆಲ್ಲ ಒಳ್ಳೆಯ ಅಭ್ಯಾಸವೆಲ್ಲಿಂದ ಬರಬೇಕು! ವಿದ್ಯಾರ್ಥಿ ದಿನದಲ್ಲೇ ಬೆಳಿಗ್ಗೆ ಬೇಗ ಏಳುವ ಕರ್ಮ ಕಳೆದುಕೊಂಡಾಗಿದ್ದ ನನ್ನ ಜಡ ದೇಹವು ಈಗ ಎದ್ದೇಳು ಎಂದರೆ ಗೊಣಗಾಡದೇ ಇರುತ್ತದೆಯೇ? ಅದೂ ಪೂಜೆಗೆ!

ಶಾಲೆಯಲ್ಲಿ ಪಾಠ ಮಾಡುವವನು ಮನೆಯಲ್ಲಿ ಪುರೋಹಿತನೂ ಆಗುತ್ತಾನೆ ನನ್ನ ಪ್ರಸಂಗದಲ್ಲಿ. ಆದಕಾರಣ ಶಾಲೆಯಲ್ಲಿ ರಜೆಯನ್ನೂ ಕೊಡುತ್ತಾರೆ ಹೆಡ್ಮೇಡಮ್ಮು! "ಗೌರೀ ಪೂಜೆ ’ಅವರು’ ಮಾಡ್ಕೋತಾರೆ, ನಿಮಗ್ಯಾಕೆ ರಜಾ?" ಎಂದು ಮೊದಲಿಗೆ ಕೇಳಿದರೂ ನಂತರ "ಮೊದಲ ಮಂಗಳಗೌರೀ ಪೂಜೆ, ಚೆನ್ನಾಗಿ ಪೂಜೆ ಮಾಡ್ಸಿ" ಎಂದು ರಜೆ ದಯಪಾಲಿಸಿದ ಪ್ರಾಂಶುಪಾಲರಿಗೆ ಮೊದಲ ವಂದನೆಗಳು.

ನನಗೆ ಈ ವ್ರತಗಳಲ್ಲೆಲ್ಲ ನಂಬಿಕೆಯಿಲ್ಲ. ಮುಖ್ಯ ಕಾರಣವೇನೆಂದರೆ ವ್ರತಗಳೆಲ್ಲವೂ ಕಾಮ್ಯವೆಂದು. ಈ ವ್ರತ ಮಾಡುತ್ತೇನೆ, ನನಗೆ ಇಂಥಿಂಥದ್ದು ಆಗಲಿ ಎಂಬ ಭಾವನೆಯನ್ನು ಇಟ್ಟುಕೊಂಡು ಮಾಡುವಂಥದ್ದು. ದೇವರನ್ನು "ನನಗೆ ಅದು ಕೊಡು, ಇದು ಕೊಡು" ಎಂದು ಕೇಳಿಕೊಳ್ಳುವುದು ನನ್ನ ಪ್ರಕಾರ ವ್ಯರ್ಥ. ಜೊತೆಗೆ "ನಾನು ಇಂಥಿಂಥ ಪೂಜೆ ಮಾಡುತ್ತೇನೆ, ನೀನು ಸಂತುಷ್ಟನಾಗಿ ನನಗೆ ಬೇಕಾದ್ದನ್ನು ಕೊಡು" ಎಂದು ಕೇಳುವುದು ನ್ಯಾಯವೇ ಅಲ್ಲ. ನನಗೆ ಏನೇನು ಅರ್ಹತೆಯಿದೆಯೋ ಅವೆಲ್ಲವನ್ನೂ ದೇವರು ಕರುಣಿಸದೇ ಇರುತ್ತಾನೆಯೇ? ಆದರೂ ನಮ್ಮ ಮನೆಯಲ್ಲಿ ಸಾಕ್ಷಾತ್ ಆತ್ರೇಯಸನ ಕಾಲದಿಂದಲೂ ವ್ರತಗಳು ನಡೆದುಕೊಂಡು ಬಂದಿರುವಂತೆ ತೋರುತ್ತೆ. ಆ ಪರಂಪರೆಯು ಮುಂದುವರೆಸುವ ಸೌಭಾಗ್ಯ ನನ್ನದು, ಅಮ್ಮನದು ಮತ್ತು ನನ್ನ ಮಡದಿಯದು. ಅಮ್ಮ ಮತ್ತು ರೇಖಾರದು ನಂಬಿಕೆಯ ಉದ್ದಿಶ್ಯವಾದರೆ ನನ್ನ ಉದ್ದಿಶ್ಯವು "ಶುಭ ಕಾರ್ಯೇಷು ಸಂತೋಷಮ್". ಹಾಗಾಗಿ ನಾನು ಪುರೋಹಿತನ ಸ್ಥಾನಕ್ಕೆ ನೇಮಕನಾದೆ! ನನ್ನನ್ನು ನಾನೇ ನೇಮಿಸಿಕೊಂಡೆ. ಬೇರೆ ಪುರೋಹಿತರಿಗೆ ಹೇಳಿದರೆ ಅವರು ಹಣ ಸುಲಿಯುವ ವೃತ್ತಿ ಧರ್ಮವನ್ನು ಬಿಡುವುದಿಲ್ಲವಲ್ಲ ಎಂದು.ವ್ರತದ ಕ್ಯಾಸೆಟ್ ಹಾಕಿಬಿಟ್ಟರೆ ಕೆಲಸ ಸಲೀಸು. ಆದರೆ ಮನಸ್ಸೇಕೋ ಒಪ್ಪುವುದಿಲ್ಲ. ನನ್ನಂಥ ನಾಸ್ತಿಕನಿಗೂ ಸಹ ಹೀಗೆ ಯಾಕೆ ಅನ್ನಿಸಿತೊ ಗೊತ್ತಿಲ್ಲ. ಆಗಲೇ ಹೇಳಿದ ಹಾಗೆ ಶುಭಕಾರ್ಯೇಷು ಸಿಗುವ ಸಂತೋಷವು ಕ್ಯಾಸೆಟ್ ಪೂಜೆಗಿಂತಲೂ ನಾವೇ ಮಾಡುವ ಪೂಜೆಯಿಂದ ಸಿಗುತ್ತೆಂಬ ನಂಬಿಕೆ ನನಗೆ. ತಪ್ಪೋ ನೆಪ್ಪೋ, ಲೋಪವೋ ದೋಷವೋ ನಾವು - ನಾವೇ ಮಾಡಿದರೇನೇ ನೆಮ್ಮದಿ. ನಾನು ಪುರೋಹಿತನಾದರೆ ಅದರಲ್ಲಿ ಬರೀ ಲೋಪದೋಷಗಳೇ ಎಂದು ಪ್ರತ್ಯೇಕವಾಗಿ ಹೇಳಬೇಕೆ? ಶ್ರೀಕಾಂತ, ಶ್ರೀನಿವಾಸನ ಮಾರ್ಗದರ್ಶನದಲ್ಲಿ ಕಲಿತ ಕೆಲವೇ ಕೆಲವು ಸಂಸ್ಕೃತ ಪದಗಳು ಅರ್ಥವಾಗಿಬಿಟ್ಟು ಅಲ್ಲಲ್ಲಿ ನಿಲ್ಲಿಸುವಂತಾಗುತ್ತೆ. ಏನು ಓದುತ್ತಿದ್ದೀನೋ ಅದನ್ನು ಅರ್ಥ ಮಾಡಿಕೊಂಡು ಮುಂದಕ್ಕೆ ಹೋಗೋಣ ಎನ್ನಿಸುತ್ತೆ. ಆದರೂ ಅಲ್ಲಲ್ಲಿ ಪಾಪ ಮಂಗಳಗೌರೀಗೆ ನಮ್ಮವರು ಮೋಸ ಮಾಡುವುದು ಗೋಚರಿಸುತ್ತೆ. ಅಕ್ಷತಾನ್ ಕಿರೀಟಹಾರ ಕೇಯೂರ ಕಂಕಣಾದಿ ವಿಭೂಷಣೈಃ ಅಲಂಕಾರೋಮಿತ್ವಾಂ ಭಕ್ತ್ಯಾ - ಸರ್ವಾಲಂಕಾರಕಾರಿಣಿ - ||ಆಭರಣಾನಿ|| ಎಂದು ಹೇಳಿಯೂ ಅಕ್ಷತೆಯಲ್ಲಿಯೇ ಮುಗಿಸಿಬಿಡುತ್ತಾರೆ! ಸಂಸ್ಕೃತದಲ್ಲಿ ನೂರಾರು ಹೂವುಗಳ ಹೆಸರುಗಳನ್ನು ಹೇಳಿ ಇರುವ ಎರಡು ಹೂವಿನಲ್ಲೇ ಸವರಿಸಿಬಿಡುತ್ತಾರೆ. ದೇವರು ಕರುಣಾಮಯಿಯಷ್ಟೆ? ಕೊನೆಯಲ್ಲಿ ಇದ್ದೇ ಇದೆಯಲ್ಲ - ಅಚ್ಯುತಾನಂತ-ಗೋವಿಂದ ಜಪ - ಮಾಡಿಬಿಟ್ಟರೆ ಮುಗಿಯಿತು, ಏನೂ ಲೋಪ ಬಾರದು.ಅನೇಕ ಸಲ "ಯಾಕಾದರೂ ಈ ಪೂಜೆಯ ಮಂತ್ರಗಳು ಸಂಸ್ಕೃತದಲ್ಲಿ ಇದೆಯೋ, ಕರ್ಮ" ಎಂದೆನಿಸದೆ ಇಲ್ಲ. ಕೆಲವು ಕಡೆ ದೊಡ್ಡ ದೊಡ್ಡ ಪದಗಳ ಅರ್ಥವಾಗುವುದಿರಲಿ, ಓದುವುದಕ್ಕೂ ಬರುವುದಿಲ್ಲ. ತೊದಲಿ ತೊದಲಿ, ಮಧ್ಯೇ ಮಧ್ಯೇ "ಥೂ! ಥೂ!!" ಎಂದು ನನ್ನನ್ನು ನಾನೇ ಬೈದುಕೊಂಡು, "ಪೂಜೆ ಮಾಡುವಾಗ ಇದೇನು ಥೂ ಅಂತೀಯಾ, ಘನ ಗಾಂಭೀರ್ಯ ಇಲ್ಲ, ಥೂ!!" ಎಂದು ಹೆಂಡತಿ, ಅಮ್ಮನಿಂದ ಬಯ್ಯಿಸಿಕೊಂಡು, ತಪ್ಪೋ ನೆಪ್ಪೋ ನನಗೆ ಸರಿಯೆನ್ನಿಸಿದ ಹಾಗೆ ಪದಗಳನ್ನು ಬಿಡಿಸಿಕೊಂಡು ಓದುವುದೊಂದೇ ನನಗೆ ಉಳಿದಿದ್ದ ಮಾರ್ಗ. ಮೊದಲ ವಾರದಂದು ನಮ್ಮ ಮನೆಯಲ್ಲಿದ್ದ "ವ್ರತರತ್ನಮಾಲಾ" ಓದಿಕೊಂಡೇ ಪೂಜೆ ಮಾಡಿದ್ದು ಬಹಳ ಪ್ರಯಾಸ ಪಡುವಂತಾಗಿತ್ತು. ಯಾಕೆಂದರೆ ಆ ಪುಸ್ತಕವು ಸ್ವತಃ ವ್ಯಾಸರೇ ಬಿಡುಗಡೆ ಮಾಡಿದ್ದು ಎನ್ನುವಷ್ಟು ಹಳೆಯದು. ಪುಟಗಳು ಹರಿಯುವುದಿಲ್ಲ, ಮುರಿಯುತ್ತೆ! ಒಂದು ವಾಕ್ಯ ಓದುವಷ್ಟರಲ್ಲಿ ಎಂಟನೇ ಪುಟ ನೋಡಿ ಎನ್ನುತ್ತಾರೆ. ಎಂಟನೇ ಪುಟದಲ್ಲಿ ಮತ್ತೆ ಹತ್ತನೇ ಪುಟಕ್ಕೆ ಕೊಂಡಿ. ನನ್ನ ತಾತನ ಕಾಲದ್ದು ಆ ಪುಸ್ತಕ. ಅದೆಷ್ಟು ಪೂಜೆ, ವ್ರತಗಳಲ್ಲಿ ಭಾಗಿಯಾಗಿದೆಯೋ! ಆದರೂ ಈ ಪುಸ್ತಕದಲ್ಲಿ ಬರೀ hyperlink ರೀತಿ ಈ ಪುಟದಿಂದ ಆ ಪುಟಕ್ಕೆ, ಅಲ್ಲಿಂದ ಇಲ್ಲಿಗೆ ಕೊಂಡಿಗಳಿರುವುದು ನನಗೆ ಕೊಂಚವೂ ಸರಿ ಬರಲಿಲ್ಲ. ಅದೂ ಅಲ್ಲದೆ, ’ಮುರುಕಲು’ ಪುಟಗಳು ಬೇರೆ! ಆ ಪುಸ್ತಕವು antique piece ರೀತಿ ಇದ್ದು, ಅದಕ್ಕೆ ನಿವೃತ್ತಿಯನ್ನು ಕೊಡುವುದು ಒಳಿತೆಂದು ನಿರ್ಧರಿಸಿ ಅಮ್ಮ ಹೊಸ "ವ್ರತರತ್ನ"ವನ್ನು ತಂದರು. ಜೊತೆಗೆ ಮಂಗಳಗೌರೀ ವ್ರತದ್ದೇ ಪುಟ್ಟ ಪುಸ್ತಕವನ್ನೂ ತಂದರು. ನನಗೆ ಉಸುರು ಬಿಡುವಷ್ಟು ನಿರಾಳವಾಯಿತು.

ಹಬ್ಬಗಳಲ್ಲೆಲ್ಲಾ ನನಗೆ ಬಹಳ ಇಷ್ಟವಾಗುವುದು ವ್ರತಕಥೆಯನ್ನು ಓದುವ ಸಮಯದಲ್ಲಿ. ಮಂಗಳಗೌರೀ ವ್ರತಕಥೆಯನ್ನು ಇಲ್ಲಿ ಹೇಳುವುದಿಲ್ಲ. ಆದರೂ ಪೂಜೆ ಮಾಡಿ ದಣಿದಿರುತ್ತೀರಿ, ಒಂದು ಮನರಂಜನಾ ಕಥೆಯನ್ನು ಕೇಳಿ ಎನ್ನುವಂತಿರುತ್ತೆ ವ್ರತಕಥೆಗಳು. ನನಗೆ ಚಂದಮಾಮ, ಬಾಲಮಿತ್ರವನ್ನೆಲ್ಲ ನೆನಪು ಮಾಡಿಕೊಡುತ್ತೆ. ಮಂಗಳಗೌರೀ ವ್ರತದಲ್ಲಿ ಗೊತ್ತಿರುವ ಕಥೆಯನ್ನೇ ಪ್ರತೀ ವಾರವೂ ಓದಬೇಕೆಂಬುದು ಸ್ವಲ್ಪ ಬೋರು ಹೊಡೆಸುವ ವಿಚಾರ. ವಾರವಾರಕ್ಕೂ ಬೇರೆ ಬೇರೆ ಕಥೆಗಳಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ ಎನ್ನಿಸುತ್ತೆ.ನಂತರದ ವಾರಗಳ ಪೂಜೆಗಳು ಸಾಂಗವಾಗಿ ನಡೆದವು. ಒಂದು ವಾರದಲ್ಲಿ ಅಜ್ಜಿ ಅತಿಥಿಯಾಗಿದ್ದರು. ಅವರ ಹಾಡು ಪೂಜೆಗೆ ಮತ್ತಷ್ಟು ಬೆರಗು ನೀಡಿತ್ತು. ನೂರನ್ನೂ ದಾಟಿದ ಹಿರಿಯರೊಬ್ಬರು ಮನೆಯ ಶುಭಕಾರ್ಯದಲ್ಲಿ ಪಾಲ್ಗೊಳ್ಳುವುದೇ ಸಂತಸದ ಸಂಗತಿಯಲ್ಲವೆ? ಇನ್ನೊಂದು ವಾರದಲ್ಲಿ ಅತ್ತೆ ಮಾವಂದಿರಿಬ್ಬರೂ ನಮ್ಮ ಜೊತೆಗೂಡಿದ್ದರು. ಅಮ್ಮನಂತೂ ಪ್ರತಿವಾರವೂ ಸಂತೋಷದಿಂದಲೇ, "ನನ್ನ ಮಗ ಅಂತೂ ಪಂಚೆ ಉಟ್ಟುಕೊಂಡು ’ದೇವರ’ ಮುಂದೆ ಕುಳಿತುಕೊಳ್ಳುತ್ತಿದ್ದಾನೆ" ಎಂದು ಪೂಜೆಗೆ ಬೇಕಾದ ಸರ್ವ ಸಿದ್ಧತೆಯನ್ನು ಮಾಡುತ್ತಿದ್ದರು. ಇನ್ನು ನನ್ನ ಮಡದಿಯೋ ಕೋಳೂರ ಕೊಡಗೂಸು! ಶಾರದಾ ಅತ್ತೆಯೂ ಒಮ್ಮೆ ಗೌರವಾಧ್ಯಕ್ಷತೆಯನ್ನು ವಹಿಸಿದ್ದರು, ಹಿರಿಯರ ಆಶೀರ್ವಾದ! ವಿಜಯಾ ಇರದೆ ಹಬ್ಬಕ್ಕೆ ಕಳೆಯೆಲ್ಲಿಯದು? ಹಬ್ಬವನ್ನು ರಂಗಾಗಿಸಿದಳು! ನಾಲ್ಕು ವಾರಗಳ ಮಂಗಳಗೌರೀ ವ್ರತದ ನಡುವೆ ಬಂದಿದ್ದ ನಾಗರ ಪಂಚಮಿ ಮತ್ತು ಭೀಮೇಶ್ವರ ಅಮಾವಾಸ್ಯೆಗೂ ನಾನೇ ಪುರೋಹಿತನೆಂಬುದು ನನ್ನ ಪೌರೋಹಿತ್ಯ ರೆಸ್ಯೂಮೆಗೆ ಅನುಭವದ ಕಾಲಮ್ಮನ್ನು ಭರ‍್ತಿ ಮಾಡುತ್ತೆ. ಈ ಎರಡು ಹಬ್ಬಗಳನ್ನು ಮತ್ತಷ್ಟು ಬೆರಗುಗೊಳಿಸಿದವರು ಪಾಲ್ಗೊಂಡಿದ್ದ ಪ್ರಸಾದಿ, ಶ್ರೀನಿಧಿ ಮತ್ತು ಪವನ. ಇನ್ನು ಉಳಿದಿರುವವನು ನಾನೊಬ್ಬನೇ! ಎಲ್ಲರದೂ ಒಂದು ದಾರಿಯೆಂದರೆ ಅಡ್ಡಕಸುಬಿದೇ ಒಂದು ದಾರಿಯಂತೆ!! ದಾರಿ ಯಾವುದಾದರೇನು?


ತಿಳಿಯದೆ "ದೀಪಂ" ಎಂದು ಹೇಳುವಾಗ ನೀರಾಜನವನ್ನು ಮಾಡಿಸಿರುವುದು, "ನೀರಾಜನಂ" ಎನ್ನುವಾಗ ನೈವೇದ್ಯವನ್ನು ಮಾಡಿಸಿರುವುದು, ’ವಾತಾಜವೈರ್ಬಲವರ‍್ಬಿರ‍್ಮನೋಜವೈರಾಯಾಹಿಶೀಘ್ರಂ’ ಎಂಬ ಪದವನ್ನು ಓದಲು ಶತಾಯಗತಾಯ ಬರದೇ ಇರುವುದು - ಎಲ್ಲವೂ ನಡೆಯಿತು. ಆದರೇನು? ’ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ’ ಎಂದು ಮಂಗಳಗೌರೀ ಪೂಜೆಯ ಸಮಯದಲ್ಲೂ ಜನಾರ್ದನನ ಕ್ಷಮಾಪಣೆಯನ್ನು ಕೇಳಿದ್ದೂ ಆಯಿತು. ಯಾರೋ ಮೂರನೇ ಪುರೋಹಿತರು ದುಡ್ಡು ಕಾಸು ಎಲೆ ಅಡಿಕೆ ಹಣ್ಣು ಪಂಚೆಗಳನ್ನು ದೋಚುವುದನ್ನು ಕೂಡ ತಪ್ಪಿಸಿ, ನಾನೇ ಅಷ್ಟನ್ನೂ ದೋಚಿಕೊಂಡೆ - ನಮ್ಮ ಮನೆಯಲ್ಲೇ! ಇನ್ನು ಮುಂದಿನ ವರ್ಷದ ಹೊತ್ತಿಗೆ ಆ ದೊಡ್ಡ ಪದವನ್ನು ಉಚ್ಚರಿಸುವ ಬಗೆಯನ್ನು ಕಂಡುಕೊಳ್ಳಬೇಕು - beg, borrow or steal ತಂತ್ರದಿಂದ.

ಈ ವಾರ ಮತ್ತೆ ಗೌರೀ ಪೂಜೆ. ಬೇರೆ version of Gowri. ಈ ಸಲ ಮಂಗಳಗೌರೀಯಲ್ಲ, ಸ್ವರ್ಣಗೌರೀ!

-ಅ
18.08.2009
9.45PM

15 comments:

 1. ಅಂತೂ ಹೆಂಡತಿಗೋಸ್ಕರ ಚೇಂಜ್ ಆಗ್ಬಿಟ್ಟೆ. ನಿನ್ನ ಮದುವೆಗೆ ಮುಂಚೆ ಯಾವುದೇ ಹಬ್ಬ ಬಂದರೂ ಟ್ರೆಕಿಂಗ್ ಗೆ ಹೋಗ್ಬಿಡ್ತಿದ್ದೆ. ಈಗ ಬಾಯಿ ಮುಚ್ಚಿಕೊಂಡು ಎಲ್ಲಾ ಹಬ್ಬಗಳನ್ನು ಆಚರಿಸುತ್ತಿದ್ದೀಯಾ ಇಷ್ಟ ಇರಲಿ, ಬಿಡಲಿ. ಬೈಕೊಂಡೇ ಮಾಡಸ್ತಿದೀಯಾ ಅನ್ನು ಪೂಜೇನಾ?????????????

  ReplyDelete
 2. ee vicharakke sambhandisida hange, mukhatha charche madona:) kelavondu samasyegaLive!

  ReplyDelete
 3. ha ha ha ha!! cute:))))) aadre paapa purohitra hotte mele kallu puttings!

  ReplyDelete
 4. madhydalli upakarma noo ittu :-).

  ReplyDelete
 5. satyanarayana vrata maDsoduu kaltbiDu. upyogakke aagutte. :)
  haage, ninna hesaranna 'Arun L. Purohit' anta badlaayiskonDbiDu :)

  ReplyDelete
 6. ನೀವು ನನ್ನ ಅನುಭವವನ್ನೇ ಬರೆದಿದ್ದೀರ :)

  ReplyDelete
 7. [ಅನಾನಿಮಸ್] ಹ್ಯಾಗೆ ನೋಡಿ, ಗೊತ್ತಾಗೋಗುತ್ತೆ ನಂಗೆ!!! ;-) ;-)

  [ಗಂಡಭೇರುಂಡ] ಹಡಗು ಮುಳುಗಿಸಿದ ಸತ್ಯನಾರಾಯಣನ ಕಥೆಯು ಅಷ್ಟೇನೂ ಮೋಹಕವಾಗಿಲ್ಲ ಅನ್ನಿಸುತ್ತೆ.

  [ವಿಜಯಾ] ಹೌದು. ನಾನು ದಾರ ಬದಲಾಯಿಸಿಕೊಂಡೆ ಎಂಬ ನೆಮ್ಮದಿ ಕೆಲವರಿಗೆ.

  [ಶ್ರೀ] ಹೌದು, ಸೆಲ್ಫ್ ಪೌರೋಹಿತಿಂಗ್ ಎನ್ನಬಹುದು!

  [ಶ್ರೀನಿಧಿ] ಸಮಸ್ಯೆ ಯಾರಿಗೆ ತಾನೆ ಇಲ್ಲ. ಮನುಷ್ಯನಿಗಲ್ಲದೆ ಇನ್ನೇನು ಮರಕ್ಕೆ ಬರುತ್ತೆಯೇ ಸಮಸ್ಯೆ?

  [ಸತ್ಯಪ್ರಕಾಶ್] ಹೆ ಹೆ, ಇಲ್ಲಪ್ಪ. ಬೈಕೊಳಲ್ಲ. ಖುಷಿ ಖುಷಿಯಾಗಿ ಮಾಡ್ಸ್ತೀನಿ.

  ReplyDelete
 8. ಯಾಕೊ ಪಂಚೆಯನ್ನೇ ಶಲ್ಯದ (ಉತ್ತರೀಯ) ರೀತಿ ಹಾಕೋಂಡಿರೋಹಾಗಿದೆ? ಆದರೂ ಚೆನ್ನಾಗ್ ಕಾಣಿಸ್ತೀರ್ರೀ.

  << ಯಾಕಾದರೂ ಈ ಪೂಜೆಯ ಮಂತ್ರಗಳು ಸಂಸ್ಕೃತದಲ್ಲಿ ಇದೆಯೋ, ಕರ್ಮ >>
  ಅತ್ಲಾಗ್ ಕಲ್ತ್ಬಿಡೋದಪ್ಪ ಸಂಸ್ಕೃತಾನ.

  [ಕಮೆಂಟ್ನಲ್ಲೊಂದ್ಕಮೆಂಟು] ಯಜ್ಞೋಪವೀತವನ್ನ ದಾರ ಮಾಡ್ಬಿಟ್ರಲ್ರೀ.

  ReplyDelete
 9. gurugaLe...eega sakshaat "guru" kaLe ide nodi...;-) ;-)

  swarna gowri vrata maaDsakke ready aagi. aamEle, uccharisakke kashta patta aa pada na samskrutadalli bariri, naanu sandhi biDsakke try maaDtini. illandre iddaare nodi shridwayaru..

  ReplyDelete
 10. ನಂಬಿಕೆ ಇರಲಿ ಬಿಡಲಿ, ದೇವರ ಪೂಜೆ ಮಾಡಿದರೆ ಒಳ್ಳೆ ಫಲ ಸಿಗತ್ತೆ ಅಂತ ಹೇಳ್ತಾರೆ, ನಿಮಗೆ ಖಂಡಿತವಾಗಿಯೂ ಒಳ್ಳೇದಾಗತ್ತೆ.

  ReplyDelete
 11. [ಸುನಾಥ್] ನಿಮ್ಮ ಹಾರೈಕೆಗೆ ವಂದನೆಗಳು ಸುನಾಥ್ ಅವರೇ.

  [ಲಕುಮಿ] ಒಳ್ಳೇ ಕಳೆ. ಬೆಳೆಯ ಮಧ್ಯೆ ಬೇಡವಾದ ಗಿಡ ಬೆಳೆದುಕೊಂಡುಬಿಟ್ಟರೆ ಅದನ್ನು ಕೂಡ ’ಕಳೆ’ ಅನ್ನುತ್ತಾರೆ. ಪಾರ್ಥೇನಿಯಮ್ ಕೂಡ ಒಂದು ಕಳೆ ಗಿಡ.

  [ರಾಜೀವ] ಅಯ್ಯೋ, ಇಲ್ಲಾ ಇವ್ರೇ, ಅದು ಶಲ್ಯವೇ. ಪಂಚೆಯಲ್ಲ. ಎಂದು ನಂಬಿದ್ದೇನೆ!
  >> ಮತ್ತು, ನನ್ನ ಮೈಮೇಲಿದ್ದರೆ ಅದು ದಾರವೇ ಹೊರೆತು ಯಜ್ಞೋಪವೀತವಾಗುವುದಿಲ್ಲ ಬಿಡಿ. :-)

  ReplyDelete
 12. anthu inthu neenu heegella devra mundhe koothu mantra heLo hangaagbitte....goodh :-)

  oodhtha oodtha...ee lekhana beechi baravaNige thara ittu...(idakke kaaraNa ee weekella beechiya 'nanna bhayagraphy' odidra pariNaama kooda irbodu)

  ReplyDelete
 13. ಹಾಗಾದರೆ ವಾಲ್ಮೀಕಿ ರಾಮಾಯಣ ಓದ್ಬಿಟ್ಟು ಆಮೇಲೆ ಓ ಲೇಖನ ಓದು.

  ReplyDelete
 14. hehehe...
  nimmanna book maaDbeku purohitree.... nominal charges applied appaa vrata maaDskoDakke.... ;-) eshTe aadru neevu PP -- Parichayad Purohitruuu! ;-)

  ReplyDelete
 15. Sir.... Thumbha Chennagi Bardiddira.....

  ReplyDelete