Thursday, September 24, 2009

ಕಾಗೆ V/S ಕೋಗಿಲೆ

ಕವಿಗಳು ಯಾಕೊ ಕೋಗಿಲೆಯ ಪಕ್ಷಪಾತಿಗಳು.

ಕದ್ದು ಮೊಟ್ಟೆ ಇಡುತ್ತಂತೆ ಕಾಗೆ ಗೂಡಲ್ಲಿ. ಪಾಪ ಮುಗ್ಧ ಕಾಗೆ, ಸಾಕಿ ಸಲಹುತ್ತೆ ಕೋಗಿಲೆಯನ್ನು. ಬೆಳೆದ ಮೇಲೆ ಕೃತಜ್ಞತೆಯೂ ಇಲ್ಲದಂತೆ ಸಾಕುತಾಯಿ ಹೇಳಿಕೊಟ್ಟ ’ಕಾ, ಕಾ’ ಭಾಷೆಯನ್ನು ಬಿಟ್ಟು ದುರಹಂಕಾರದಿಂದ ’ಕುಹೂ ಕುಹೂ’ ಎನ್ನುವ ಕೋಗಿಲೆಯೇನು ಮಹಾ! ಇಂಥಾ ಕೃತಘ್ನತೆಯನ್ನು ತೋರುವುದಕ್ಕೆ ಕಾಗೆಯಂತೆ ವೇಷ ಬೇರೆ ಮರೆಸಿಕೊಳ್ಳುತ್ತೆ ಈ ಗೋಮುಖ ವ್ಯಾಘ್ರ ಅಥವಾ ಕಾಕಮುಖ ಪಿಕ !!

ಇಷ್ಟಕ್ಕೂ ಕವಿಗಳಿಗೆ ಕೋಗಿಲೆಯ ಬಗ್ಗೆ ಯಾಕೆ ಇಷ್ಟೊಂದು ಒಲವು?

’ಮಳೆಗಾಲದೊಳು ನೀ ಹಾಡುವುದಿಲ್ಲವೆ?’
ಕೇಳಿತು ಪಿಕವನು ಬಕವು.
’ಕಪ್ಪೆಗಳೊಟಗುಟುವೆಡೆಯಲಿ ಮೌನವೇ
ಲೇಸೆಂದಿತು’ ಪಿಕವು.

ಚುಟುಕಬ್ರಹ್ಮರು ಹೀಗೆ ಹೇಳಿದ್ದಾರೆ.

ಬೇಸಿಗೆಯಲ್ಲಿ ಮಾತ್ರ ಕೂಗುವ ಕೋಗಿಲೆಗಳು ಶೆಖೆ ತಾಳಲಾರದೆ ಇರುವ ಕವಿಗಳ ಕಿವಿಗಳಿಗೆ ಬಹುಶಃ ಅಪರೂಪವೆಂದೆನಿಸಿರಬೇಕು. ಬೇರೆ ಕಾಲಗಳಲ್ಲಿ ಕವನ ಬರೆಯಲು ಬೇರೆ ಬೇರೆ ವಿಷಯಗಳಿರುತ್ತವಲ್ಲಾ. ಮಳೆಹನಿ, ಎಳೆ ಬಿಸಿಲು, ಅರಳಿದ ಹೂವು, ಮೋಡ, ಪ್ರಣಯ ಪ್ರಸಂಗಗಳು, ಇತ್ಯಾದಿಗಳಾವುವೂ ಬೇಸಗೆಯಲ್ಲಿ ಸಿಗುವುದಿಲ್ಲವಲ್ಲ! ಬೇಸಗೆಯ ಸರಸವನ್ನು ಯಾರೂ ಬರೆದಿರುವುದು ಕಾಣೆ. ಚಳಿಯ ಬಗ್ಗೆ ಕೋಟಿ ಕೋಟಿ ಇದೆ.

ಇನ್ನೊಂದು ಕಾರಣ, ಅದು ಮರೆಯಲ್ಲಿ ಕೂಗುವುದರಿಂದಿರಬೇಕು. ಸಾಮಾನ್ಯವಾಗಿ ಕವಿಗಳು ನೋಡುವುದು ಹೃದಯದ ಕಣ್ಣಿಂದಲೇ ಹೊರೆತು ಬೈನಾಕ್ಯುಲರ್‌ಗಳಿಂದಲ್ಲ. ಅದಕ್ಕೇ ಯಾರೂ ಬಾರ್ಬೆಟ್ ಬಗ್ಗೆಯಾಗಲೀ, ಕಾಪರ್ ಸ್ಮಿತ್ ಬಗ್ಗೆಯಾಗಲೀ, ವೀವರ್ ಬರ್ಡ್ ಬಗ್ಗೆಯಾಗಲೀ ಕವನ ಬರೆದಿಲ್ಲ. ಅದೇ ನವಿಲಿನ ಬಗ್ಗೆ, ಕೋಗಿಲೆಯ ಬಗ್ಗೆ ಲೆಕ್ಕವಿಲ್ಲದಷ್ಟು ಕವನಗಳು! ಪಾಪ ಮಿಕ್ಕ ಪಕ್ಷಿಗಳು! ಮರೆಯಲ್ಲಿ ಕೂಗುವ ಕೋಗಿಲೆಯಲ್ಲಿ? ರಾಜಾರೋಷವಾಗಿ ಹಾಡುವ ಕಾಗೆಯೆಲ್ಲಿ?

ಹಾಗೆ ನೋಡಿದರೆ (ಕೇಳಿದರೆ) ಕೋಗಿಲೆಯೇನು ಅಂಥಾ ಗ್ರೇಟ್ ಸಿಂಗರ್ ಅಲ್ಲ ಅನ್ನಿಸುತ್ತೆ ನನಗಂತೂ. ಕವಿಗಳು ಕೋಗಿಲೆಯ ಧ್ವನಿಯನ್ನು ಸುಮ್ಮಸುಮ್ಮನೆ ಅಟ್ಟಕ್ಕೆ ಏರಿಸಿದ್ದಾರೆ. ಒಂಥರಾ hype ಮಾಡಿಸಿಕೊಂಡು ಮೇಲೆ ಬಂದಿರುವ ಚಿತ್ರನಟರ ಹಾಗೆ! ಪಂಚಮ ಸ್ವರದಲ್ಲಿ ಹಾಡುತ್ತಂತೆ ಕೋಗಿಲೆ. ಕಾಗೆಗಿಂಥ ಏನು ಮಹಾ ಇದು? ನಮ್ಮ ಕಾಗೆಯು ಸ-ಪ-ಸ ಮೂರೂ ಹಾಡುತ್ತೆ! ಇದಕ್ಕೆ ಪಂಚಮವೂ ಗೊತ್ತು, ಷಡ್ಜವೂ ಗೊತ್ತು. ಮಂದ್ರವೂ ಗೊತ್ತು, ತಾರವೂ ಗೊತ್ತು. ಅಲ್ಲದೆ ಹದಿನೆಂಟು ಬೇರೆ ಬೇರೆ ಪಕ್ಷಿಗಳ ಹಾಗೆ ಮಿಮಿಕ್ರಿ ಮಾಡುತ್ತೆ. ಕೋಗಿಲೆಗೆ ಕೋಗಿಲೆಯ ಧ್ವನಿ ಮಾತ್ರ.

ಆದ್ದರಿಂದ ಕವಿಗಳು ಇನ್ನು ಮುಂದಾದರೂ ದೊಡ್ಡ ಮನಸ್ಸು ಮಾಡತಕ್ಕದ್ದು.

-ಅ
25.09.2009
9PM

8 comments:

 1. ಗುರುಗಳೇ,

  ನೀವು ಕವಿಗಳು ಇನ್ನು ಮುಂದಾದರೂ ದೊಡ್ಡಮನಸ್ಸು ಮಾಡತಕ್ಕದ್ದು ಅಂತ ಬರೆದಿದ್ದೀರ. ನಾನು ಕವಯಿತ್ರಿ ಆದ್ದರಿಂದ ಮನಸ್ಸು ಮಾಡೋದಕ್ಕೆ ಆಗೊಲ್ಲ. ಮನಸ್ಸೇ ಮಾಡಕ್ಕೆ ಆಗಲ್ಲ ಆದ್ದರಿಂದ ದೊಡ್ಡದು ಚಿಕ್ಕದು ಅನ್ನೋ ಪ್ರಶ್ನೆ ಬರೊಲ್ಲ :) :) :)

  ReplyDelete
 2. ಕೋಗಿಲೆ ಏನಿದ್ದರೂ ಹಳೆಯ ಕವಿಗಳ favourite. ನವ್ಯ ಕವಿ ನಿಸಾರ ಅಹಮದರು ಈಗಾಗಲೇ ಕಾಗೆಗೆ ಪಟ್ಟ ಕಟ್ಟಿಬಿಟ್ಟಿದ್ದಾರೆ. ತಮ್ಮ ಕವನವೊಂದರಲ್ಲಿ, "ಕಾಗೆ ಕೂಗದ ಮುನ್ನ ಏನಿತ್ತಣ್ಣ ಜಗದಿ?" ಎಂದು challenge ಒಗೆದಿದ್ದಾರೆ.
  ಇದೀಗ ಕಾಗೆಗಳ ಕಾಲ!

  ReplyDelete
 3. ಅಮರಕೋಶದಲ್ಲಿ ಹೇಳಿಲ್ಲವೆ?

  ಪುಷ್ಪಸಾಧಾರಣೇ ಕಾಲೇ ಪಿಕ: ಕೂಜತಿ ಪಂಚಮಂ |

  ಅಂದರೆ ಹೂ ಬಿಡದ ಕಾಲದಲ್ಲಿ ಕೋಗಿಲೆ ಬೇರೆ ಸ್ವರದಲ್ಲಿ ನುಡಿಯುವುದೋ? ಸಾಧಾರಣವಾಗಿ ಹೂಬಿಡುವ ಕಾಲವಾದರೂ, ಹೂಗಳಿಲ್ಲದಿದ್ದರೆ, ಬೇರೆ ಸ್ವರದಲ್ಲಿ ನುಡಿಯುವುದೋ? ಇದಕ್ಕೆ ಅಮರಸಿಂಹನಾಗಲಿ, ಭರತ ನೇ ಮೊದಲಾದ ಸಂಗೀತಶಾಸ್ತ್ರಕಾರರೇ ಆಗಲಿ ಉತ್ತರ ಕೊಟ್ಟಿರುವ ಹಾಗೆ ಕಾಣೆ!

  ReplyDelete
 4. [ಹಂಸಾನಂದಿ] ವಾಸ್ತವದಲ್ಲಿ ಅದು ನುಡಿಯುತ್ತಲೇ ಇರುತ್ತೆ, ಪಾಪ ಕವಿಗಳು ಎಲ್ಲ ಸಮಯದಲ್ಲಿ ಅದನ್ನು ಕೇಳಿಸಿಕೊಳ್ಳುವುದಿಲ್ಲ. ನಾನು ಮಧ್ಯ ರಾತ್ರಿ ಕೂಗಿರುವ ಕೋಗಿಲೆಯ ಧ್ವನಿಯನ್ನೂ ಕೇಳಿದ್ದೇನೆ! ಯಾವುದೋ ಕೋಗಿಲೆಯ ದಯ್ಯ ಇರಬೇಕು.

  [ವಿಜಯಾ] ಇದರಿಂದ ನೀನೂ ಕಲಿಯಬೇಕು.

  [ಸುನಾಥ್] ಒಳ್ಳೇ ಚಾಲೆಂಜು!! ಹೀಗಿರ್ಬೇಕು!!

  [ಲಕುಮಿ] ಸಿಗರೇಟು ಸೇದಬಾರದು ಅಂದ್ರೆ "ಬೀಡಿ ಸೇದ್ಬೋದಾ?" ಅಂತ ಕೇಳಿದ ಹಾಗಾಯ್ತು!

  ReplyDelete
 5. arun,

  oLLe maahiti koTTiddeera.
  innu swalpa bEkittu. kaage haaDodu sa pa saa aadare kOgileyadu yaava swaragaLu?

  nanage bEre kavigaLa bagge gottilla aadare TVS avaru kaage bagge ondu kavana bardiddare.

  ReplyDelete
 6. [ಅಂತರ್ವಾಣಿ] ಕಾಗೆಯು ಎಲ್ಲ ಸ್ವರದಲ್ಲೂ ಹಾಡುತ್ತೆ ಎಂದು ಉತ್ಪ್ರೆಕ್ಷೆ ಮಾಡಿದೆನಷ್ಟೆ. ಕೋಗಿಲೆಯು "ಪಂಚಮ"ದಲ್ಲಿ ಹಾಡುತ್ತೆ. ಅರ್ಥಾತ್ "ಪ" ಮಾತ್ರ! ಹಾಗಾಗಿ ಕಾಗೆಯೇ ಗ್ರೇಟು ಅಂತ! :-P

  ಯಾವ ಕವಿತೆ ಕಾಗೆಯದು?

  ReplyDelete