Thursday, October 15, 2009

ಮನ್ನಣೆಯ ದಾಹ - ಕಗ್ಗವೊಂದನ್ನು ಓದಿದಾಗ..

ಪ್ರಕೃತಿಯ ನಿಯಮದಂತೆ ಪ್ರತಿಯೊಂದು ಜೀವಿಯ ಬದುಕಿನ ಪ್ರಥಮ ಉದ್ದೇಶ ಹೊಟ್ಟೆಯನ್ನು ಭರಿಸಿಕೊಳ್ಳುವುದಾಗಿರುತ್ತೆ. ಮನುಷ್ಯನ ವಿನಾ ಬೇರೆ ಪ್ರಾಣಿಗಳೆಲ್ಲಕ್ಕೂ ಹೊಟ್ಟೆಯೇ ಪ್ರಥಮ ಹಾಗೂ ಅತ್ಯಂತ ಮುಖ್ಯ. ಅದು ಬಿಟ್ಟರೆ ಸಂತತಿಯನ್ನು ಬೆಳೆಸುವುದು. ನಮ್ಮ ಬದುಕು ಇವುಗಳಿಗಿಂತ ಒಂದು ಹೆಜ್ಜೆ ಮುಂದೆ.

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ"

ನಾಯಿಗಳು ಕೊಂಚ ಭಿನ್ನ. ಇತ್ತ ಮನುಷ್ಯನ ಹಾಗೂ ಅಲ್ಲ, ಅತ್ತ ಬೇರೆ ಪ್ರಾಣಿಗಳ ಹಾಗೂ ಅಲ್ಲ. ಸಹವಾಸದಿಂದ ಸಂನ್ಯಾಸಿ ಕೆಟ್ಟನೆಂಬಂತೆ ನಾಯಿಯೂ ಸಹ ಮನುಷ್ಯನ ಸಹವಾಸ ಮಾಡಿ ಪಕ್ಕಾ ಪರಾವಲಂಬಿಯಾಗಿಬಿಟ್ಟಿದೆ. ತನ್ನ ಊಟವನ್ನು ತಾನು ಬೇಟೆಯಾಡಿ ಸಂಪಾದಿಸಿದ ಕಾಲವೊಂದಿತ್ತೆಂಬುದನ್ನು ಅಕ್ಷರಶಃ ಮರೆತಿದೆ. ಮನುಷ್ಯನು ಊಟ ಕೊಟ್ಟರೆ ಹೊಟ್ಟೆ ತುಂಬಿತು, ಇಲ್ಲವೆಂದರೆ ಖಾಲಿ ಹೊಟ್ಟೆ. ಬೀದಿ ನಾಯಿಗಳೋ ನಾವು ತಿಂದೆಸೆದ ಹಳಸಿದ ಊಟವನ್ನೋ, ಎಂಜಲೆಲೆಯನ್ನೋ, ಸೆಗಣಿಯನ್ನೋ ತನ್ನ ನೆರೆ ನಾಯಿಗಳೊಡನೆ ಜಗಳವಾಡಿಕೊಂಡು ತಿನ್ನುವ ಪರಿಸ್ಥಿತಿಯನ್ನು ತಲುಪಿಬಿಟ್ಟಿದೆ. ಯಾರೋ ಕವಿಗಳು ನಾಯಿಗಳನ್ನು ನೀಯತ್ತಿಗೆ ಹೋಲಿಸಿ ತಾವು ದಾರಿ ತಪ್ಪಿದ್ದಲ್ಲದೆ ನಮ್ಮನ್ನೂ ದಾರಿ ತಪ್ಪಿಸಿದ್ದಾರೆ. ಕೋಗಿಲೆಯ ಕಥೆಯಂತೆ! ;-)

ಪ್ರತಿ ದಿನವೂ ಎರಡು ಹೊತ್ತು ನಮ್ಮ ಮನೆಯ ಬಾಗಿಲನ್ನು ತೆರೆದರೆ ಸಾಕೆಂದು ಗೇಟಿನ ಮುಂದೆಯೇ ಕಾದು ಕುಳಿತಿದ್ದ ’ಬಿಳಿಯ’ ಎಂಬ ನಾಯಿಯು, ನಾನು ಹಾಕುತ್ತಿದ್ದ ರುಚಿ ರುಚಿ ಕವಳವನ್ನು ಚಪ್ಪರಿಸಿ ತನ್ನ ಬಾಲವು ಎಲ್ಲಿ ಬಿದ್ದು ಹೋಗುತ್ತೋ ಎಂಬಂತೆ ಅಲ್ಲಾಡಿಸುತ್ತಿತ್ತು. ನಾನೆಂದರೆ ಅದಕ್ಕೆ ಎಲ್ಲಿಲ್ಲದ ಪ್ರೀತಿ, ಯಾಕೆಂದರೆ ದಿನಕ್ಕೆ ಎರಡು ಹೊತ್ತು ನಾನು ಊಟ ಹಾಕುತ್ತೀನಿ - ಎಂದು ಭ್ರಮಿಸಿದ್ದೆ. ಆ ಮನೆಯನ್ನು ಖಾಲಿ ಮಾಡಿ ಒಂದು ವರ್ಷದ ನಂತರ ಅದೇ ರಸ್ತೆಗೆ ಹೋದ ದಿನವೊಂದು ನನಗೆ ಗಾಬರಿಯಾದದ್ದು, ಆ ಬಿಳಿಯ, ಅದೇ ಸಾಕ್ಷಾತ್ ಬಿಳಿಯ ನನ್ನನ್ನು ಗುರುತು ಸಹ ಹಿಡಿಯಲಿಲ್ಲ. ನಾನು ಕರೆದಾಗ ಬಾಲ ಮುದುರಿಕೊಂಡು ಪೊದೆಯೊಳಗೆ ನುಗ್ಗಿಬಿಟ್ಟಿತು. ವಯಸ್ಸಾದ ಈ ನಾಯಿಗೆ alzeihmer's ಬಂದಿರಬಹುದೆಂದುಕೊಂಡಿದ್ದೆ. ಆದರೆ ಕೆಲವು ದಿನಗಳ ನಂತರ ಗೊತ್ತಾಯಿತು, ನಾಯಿಯ ಜೊತೆಗೇ ಇದ್ದು, ಅದಕ್ಕೆ ಊಟ ತಿಂಡಿಗಳನ್ನು ಕೊಡುತ್ತಿದ್ದರೆ ಅದು ಖಂಡಿತ ನಮ್ಮ ಹಿಂದೆಯೇ ಬಾಲ ಅಲ್ಲಾಡಿಸಿಕೊಂಡು ಗೆಳೆಯನಂತೆ ಇರುತ್ತೆ. ಒಂದಿಷ್ಟು ಕಾಲ ದೂರವಿದ್ದರೆ ಯಾರು ಅದಕ್ಕೆ ಊಟ ಕೊಡುತ್ತಾರೋ ಅವರನ್ನು "ನೀನೇ ಇಂದ್ರ, ನೀನೇ ಚಂದ್ರ" ಎನ್ನುತ್ತ ಅವರ ಹಿಂದೆ ಬಾಲ ಅಲ್ಲಾಡಿಸಿಕೊಂಡಿರುತ್ತೆ ಎಂದು.

ನಾಯಿಯ ವಿಷಯಕ್ಕೆ ಮತ್ತೆ ಯಾವಾಗಲಾದರೂ ಬರೋಣ. ಆಗಲೇ ಕನಕದಾಸರ ಪದವೊಂದನ್ನು ನೆನೆದೆವಷ್ಟೆ? ಎಲ್ಲರೂ ಮಾಡುವುದು ಮೊದಲಿಗೆ ಹೊಟ್ಟೆಯ ಸಲುವಾಗಿಯಾದರೂ ಅನೇಕರು ಅದನ್ನು ಮರೆತುಬಿಟ್ಟಿರುತ್ತಾರೆ. ಅವರು ಕೆಲಸದಲ್ಲಿ ಎಷ್ಟು ಮಗ್ನರಾಗಿರುತ್ತಾರೆಂದರೆ, ಮಧ್ಯಾಹ್ನದ ಊಟದ ಸಮಯ ಬಂದಿರುತ್ತಾದರೂ ಕೆಲಸ ಮುಗಿಸದೇ ಊಟ ಮಾಡುವುದೇ ಇಲ್ಲ. ಮೇಲುನೋಟಕ್ಕೆ ಒಳ್ಳೆಯದೇ ಎನ್ನಿಸುತ್ತೆ. ಅವರ ಪಾಲಿಗೆ "ಕರ್ತವ್ಯವೇ ದೇವರು" ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಊಟವನ್ನು ಬಿಟ್ಟು ಕೆಲಸ ಮಾಡುವುದರಿಂದ ತಮ್ಮದೇ ದೇಹದ ಮೇಲಾಗುವ ದುಷ್ಪರಿಣಾಮವನ್ನು ನಿರ್ಲಕ್ಷಿಸುವುದರಿಂದ ನಾಳಿನ ದಿನ ತಮ್ಮದೇ ಕರ್ತವ್ಯಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಒದಗೀತು ಎಂಬ ಕಲ್ಪನೆಯೇ ಇರುವುದಿಲ್ಲ. ದೇಹವನ್ನು ಪ್ರಕೃತಿಯ ವಿರುದ್ಧವಾಗಿ ದಂಡಿಸಿ ದುಡಿಯುವುದಾದರೂ ಏತಕ್ಕೆ? ಹೊಟ್ಟೆಯ ಸಲುವಾಗಿ ಮಾಡಿದ್ದಾಯಿತು, ಇನ್ನು ಮುಂದಿನದು ಬೇಕಲ್ಲ - ಬಟ್ಟೆಗಾಗಿ! ’ಗೇಣು’ ಬಟ್ಟೆಗಾಗಿ ಎಂಬುದು ಉತ್ಪ್ರೇಕ್ಷದ ಪರಮಾವಧಿಯೆನ್ನಿಸುತ್ತೆ. ಎಲ್ಲರೂ ಗಾಂಧೀಜಿಯಂತಾಗಲು ಸಾಧ್ಯವೇ? ಗಾಂಧೀಜಿಯ ಲಕ್ಷಾಂತರ ಅನುಯಾಯಿಗಳಿಗೇ ಆಗಲಿಲ್ಲ ಅದು. ಗೇಣು ಬಟ್ಟೆಯೆಂದರೆ ಹೊಟ್ಟೆ ತುಂಬಿದ ನಂತರ ನಮಗೆ ಬೇಕಾದ ಪ್ರತಿಯೊಂದು ವಸ್ತುವೂ ಎಂದು ಅರ್ಥವಾಗುತ್ತೆ. ಪಾಪ, ಕನಕದಾಸರ ಪಾಲಿಗೆ ’ಗೇಣು’ ಬಟ್ಟೆಯು ಸತ್ಯವಾಗಿತ್ತೇನೊ. ಆದರೆ ನಮ್ಮ ಪಾಲಿಗಂತೂ ಅದು ಉತ್ಪ್ರೇಕ್ಷೆಯೇ ಸರಿ. ಮಾನ ಮುಚ್ಚುವ ಬಟ್ಟೆಯಿಂದ ಹಿಡಿದು ಥಳುಕಿನ ವಸ್ತ್ರಗಳು, ಆಭರಣಗಳು, ಸೈಟು, ಕಾರು, ಬಂಗಲೆ, ಆಸ್ತಿ - ಪಾಸ್ತಿ ಎಲ್ಲವನ್ನೂ ಈ ’ಗೇಣು’ ಬಟ್ಟೆಯ ಗುಂಪಿಗೆ ಸೇರಿಸಿಕೊಳ್ಳಬೇಕಿದೆ. ಸುಭಾಷಿತಗಳಲ್ಲಿ ಬರುವ ’ಚಿನ್ನ’ವನ್ನು ’ಹಣ’ ಎಂದು ಅರ್ಥೈಸುವುದಿಲ್ಲವೇ, ಹಾಗೆ. ದುರಂತದ ಹಾದಿಯೆಂದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು!

ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ - ಸಾಲ ಮಾಡಿಯಾದರೂ ತಿತಿ ಮಾಡುವವರನ್ನು, ಹಬ್ಬ ಮಾಡುವವರನ್ನು. ಇದರ ಟೀಕೆಯಂತೂ ಕ್ಲೀಷೆಯಾಗಿಬಿಟ್ಟಿದೆ. ಆದರೂ ಈ ಕೆಲಸಗಳು ಇನ್ನೂ ನಡೆಯುತ್ತಲೇ ಇವೆ. ಹಬ್ಬವೆಂದರೆ ಸಂತೋಷ ಪಡಲು ಸಿಗುವ ಒಂದು ಕಾರಣವಷ್ಟೆ? ಕಷ್ಟಕ್ಕೆ ಸಿಲುಕಿಯಾದರೂ ಹಬ್ಬ ಮಾಡಬೇಕೆಂಬ ಕುರುಡು ನಂಬಿಕೆಯಾದರೂ ಏತಕ್ಕೆ? ಇನ್ನು ತಿತಿಗಳನ್ನು ಯಾವ ಕಾರಣಕ್ಕಾಗಿ ಮಾಡುತ್ತಾರೋ ಗೊತ್ತಿಲ್ಲ - ನನ್ನ ಪ್ರಕಾರ ಸತ್ತವರನ್ನು ನೆನೆಸಿಕೊಳ್ಳುವುದಕ್ಕೆ ಮೀಸಲಾದ ಒಂದು ದಿನವಷ್ಟೆ. ಹುಟ್ಟುಹಬ್ಬವೋ ತಿತಿಯೋ ಒಟ್ಟಿನಲ್ಲಿ ರುಚಿರುಚಿಯಾದ ಊಟವಂತೂ ಸಿಗುತ್ತೆ. ಬಟ್ಟೆಯಿಂದ ಮತ್ತೆ ಹೊಟ್ಟೆಗೆ ಹೋಗುವುದು ಬೇಡ.

’ಬಟ್ಟೆ’ ಎಂಬ ಪದಕ್ಕೆ ಕನ್ನಡದಲ್ಲಿ ’ದಾರಿ’ ಎಂಬ ಅರ್ಥವೂ ಉಂಟು. (ಭಕುತಿ ರಸಕೆ ಒಮ್ಮೆ ಬಟ್ಟೆದೋರುವ ಮಂತ್ರ - ರಾಮ ಮಂತ್ರವ ಜಪಿಸೋ). ಗೇಣು ಬಟ್ಟೆಯನ್ನು ಇದಕ್ಕೆ ಹೊಂದಿಸಬಹುದೋ ಎಂದು ಯೋಚಿಸಬಹುದು. ಏಕೆಂದರೆ ಮೈಮೇಲೆ ಹಾಕಿಕೊಳ್ಳುವ ಬಟ್ಟೆ (ವಸ್ತ್ರ) ಗಿಂತ ಬದುಕುವ ಒಂದಿಷ್ಟು ದಾರಿಗಾಗಿಯೇ ಎಲ್ಲರೂ ’ಮಾಡುವುದು’ ಎಂದುಕೊಂಡರೆ ಹೆಚ್ಚು ಸರಿ ಎನ್ನಿಸುತ್ತೆ. ಹೇಗೂ ಇರಲಿ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ನಮಗೆ ಮುಖ್ಯವೆನ್ನಿಸುವುದು ಮೇಲೆ ಹೇಳಿರುವ ’ಮಲ್ಲಿಗೆ ಹೂವಿನ ಬಟ್ಟೆಯೇ’. ಹೊಟ್ಟೆ ಪಾಡಿಗೆ ನಾನಾ ಕೆಲಸ ಕಾರ್ಯಗಳನ್ನು ಮಾಡುವ ಹಾಗೆ ಹಣದ ಸಲುವಾಗಿ ಏನೇನೆಲ್ಲ ಮಾಡುತ್ತೇವೆಂಬುದನ್ನು ಬಲ್ಲೆವು. ಎಲ್ಲರೂ ಬರೀ ಹೊಟ್ಟೆಪಾಡಿಗಾಗಿಯೇ ದುಡಿಯುತ್ತಾರೆಂದರೆ ಅದು ಶುದ್ಧ ಸುಳ್ಳಾಗುತ್ತೆ. ’ಉದರನಿಮಿತ್ತಮ್ ಬಹುಕೃತವೇಶಃ’ ಎಂಬುದು ಕೇವಲ ಉದರ ನಿಮಿತ್ತವಲ್ಲ. ಹಣಕ್ಕಾಗಿಯೇ ದುಡಿಯುತ್ತೇವೆಂಬುದನ್ನು ಒಪ್ಪಿಕೊಳ್ಳಲೇ ಬೇಕು.

ಎಷ್ಟೇ ತಿನ್ನಲಿ, ಎಷ್ಟೇ ಸಂಪಾದಿಸಲಿ, ಮನುಷ್ಯ ಒಬ್ಬನೇ ಅಂತೂ ಇರುವುದಕ್ಕೆ ಆಗುವುದಿಲ್ಲ. ಸಂಸಾರ ಬೇಕಲ್ಲ! ಸಂನ್ಯಾಸಿಯಾದರೋ ಬದುಕುವುದಕ್ಕಾಗಿ ತಿನ್ನುತ್ತಾನೆ. ಅವನಿಗೆ ಕಾರು, ಬಂಗಲೆ, ಬಗೆಬಗೆಯ ಉಡುಗೆತೊಡುಗೆಗಳು ವ್ಯರ್ಥ. ಸಂಸಾರಕ್ಕೆ ಬರೀ ಕಾರು ಬಂಗಲೆ ಬಟ್ಟೆ ಸಾಲದು.

ಒಂದು ಹೆಣ್ಣಿಗೊಂದು ಗಂಡು - ಹೇಗೊ ಸೇರಿ ಹೊಂದಿಕೊಂಡು

ಹೊಟ್ಟೆಪಾಡು ಪ್ರಕೃತಿ - ಅಲ್ಲಿಂದ ಒಂದು ಹೆಜ್ಜೆ ಬೇರೆ ಕಡೆ ಹೋಗುತ್ತೇವೆ - ಅದು ಬಟ್ಟೆಪಾಡು, ಪ್ರಕೃತಿಯಲ್ಲ. ಸಂಸ್ಕೃತಿಯೆನ್ನೋಣ. ಕೆಲವರ ಪಾಲಿಗೆ ಅದು ಸುಸಂಸ್ಕೃತವಾಗಿರುತ್ತೆ, ಮತ್ತೆ ಕೆಲವರಿಗೆ ಅಸಂಸ್ಕೃತವಾಗಿರುತ್ತೆ. ಮತ್ತೆ ಬಟ್ಟೆಯಿಂದ ಪ್ರಕೃತಿಗೆ ಹಿಂದಿರುಗುತ್ತೇವೆ. ಮನುಷ್ಯರಾಗಿರುವುದರಿಂದ ಮೇಲಿನ ಸಂಸ್ಕೃತಿಯ ಪದ್ಯವೂ ಸಹ ಪ್ರಕೃತಿಯೇ ಆಗಿದೆ. ಪ್ರಾಣಿಗಳಾದರೋ ಗಂಡು-ಹೆಣ್ಣು ಸೇರುವುದು ಸಂತಾನೋತ್ಪತ್ತಿಗಾಗಿಯೇ ವಿನಾ ಅಲ್ಲಿ ಪ್ರೇಮವಾಗಲೀ, ಮೋಹವಾಗಲೀ ಇರುವುದಿಲ್ಲ. ಮನುಷ್ಯರಲ್ಲಿ ಈ ಎರಡು ಬಗೆಯ ಭಾವನೆಗಳೂ ಇರುತ್ತವೆ. ಸಂತಾನಾಭಿವೃದ್ಧಿಯ ಬಯಕೆಯೂ ಇರುತ್ತೆ, ಪ್ರೇಮ ಮೋಹಗಳೂ ಇರುತ್ತೆ. ಅತ್ಯಂತ ಬಡವನಾಗಿದ್ದರೂ ಸರಿ, ಒಂದು ಹೊತ್ತು ಗಂಜಿಗೆ ಪರದಾಡುತ್ತಿದ್ದರೂ ಸಹ ವಯಸ್ಸಿಗೆ ಬಂದ ಮೇಲೆ ಮದುವೆಯ ಹಂಬಲ ಅವನನ್ನು ಕಾಡದೆ ಇರುವುದಿಲ್ಲ. ಬೇಕಾದರೆ ಮದುವೆಯಾಗಿ ಹೆಂಡತಿಯನ್ನೂ ಕಷ್ಟಕ್ಕೆ ಸಿಲುಕಿಸಿ, ಮಕ್ಕಳನ್ನೂ ಉಪವಾಸ ಕೆಡವಿಯಾನು.

ಇವೆಲ್ಲದರ ತುಡಿತದೊಂದಿಗೆ ನಾವು ಈ ಪ್ರಪಂಚದಲ್ಲಿ ಬದುಕಬೇಕು. ಈ ಎಲ್ಲವೂ ಇದ್ದರೆ ಸಂತೋಷದಿಂದ ಇರಬೇಕಲ್ಲವೆ? ಹಸಿವಾದಾಗ ಊಟ, ಬೇಕು ಎಂದದ್ದನ್ನು ಕೊಂಡುಕೊಳ್ಳಲು ಹಣ, ಭಾವನೆಗಳನ್ನು ಹಂಚಿಕೊಳ್ಳುವ ಪ್ರೀತಿಯ ಸಂಗಾತಿ - ಇವೆಲ್ಲ ಇದ್ದರೂ ಕೊರತೆಯೊಂದು ಕಾಡುತ್ತೆ! ನಮ್ಮನ್ನು ನಾವು ಈ ಎಲ್ಲದರೊಡನೆ ಗುರುತಿಸಿಕೊಳ್ಳದೇ, ನಮಗೇ ಭಿನ್ನವಾದ ಗುರುತು ಸಿಗಬೇಕೆಂದು ಚಡಪಡಿಸುವುದು. Identity! "ನನಗೆ ಒಂದು ಐಡೆಂಟಿಟಿ ಇಲ್ಲವೆ? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದುಕೊಂಡಿರಬೇಕೆ?" ಎಂಬುದು ಎಷ್ಟು ಸಹಸ್ರ ಕೋಟಿ ಜನರ ಪ್ರಶ್ನೆ? ಚಿಕ್ಕ ಮಗುವಿಗೂ ತಾನು ಮಾಡಿದ ಕೆಲಸವನ್ನು "ತಾನೇ ಮಾಡಿದ್ದು" ಎಂದು ಹೇಳಿಕೊಂಡು ಪ್ರದರ್ಶಿಸುವ ಹಂಬಲವಿರುತ್ತೆ. ಮಗುವೊಂದು ಚಿತ್ರ ಬರೆದಿದೆಯೆಂದಿಟ್ಟುಕೊಳ್ಳೋಣ. ಮುಗಿದ ತತ್‍ಕ್ಷಣ ತಂದು ನಮಗೆ (ಹಿರಿಯರಿಗೆ) ತೋರಿಸುತ್ತೆ. ಒಂದು ವೇಳೆ ಹಿರಿಯರಾದ ನಾವು ಅದನ್ನು ಗುರುತಿಸದೆ ಇದ್ದೋ, ಅಥವಾ ಸುಮ್ಮನೆ "ಓಕೆ" ಎಂದು ಉಪೇಕ್ಷಿಸಿದ್ದೋ ಆದರೆ ಆ ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿಯೇ ತೀರುತ್ತೆ ಎಂಬುದು ಮನಸ್‍ಶಾಸ್ತ್ರದ ಅಂಬೋಣ. ಆದರೆ ಆ ಮಗು ದೊಡ್ಡದಾದ ಮೇಲೆ ಜಗತ್ತು ತನ್ನ ಕೃತಿಯನ್ನು ಗುರುತಿಸದೇ ಇರುವ ಕಾಲವೂ ಸಂಭವಿಸಬಹುದು. ಮಗುವಾಗಿದ್ದಾಗ ಎಲ್ಲರೂ ಪ್ರೋತ್ಸಾಹ ಕೊಡುತ್ತಿದ್ದು, ದೊಡ್ಡವನಾದ ಮೇಲೆ ಯಾರೂ ಕೂಡ ’ಭೇಷ್’ ಎನ್ನುತ್ತಲೂ ಇಲ್ಲವಲ್ಲ ಎಂದೆನಿಸುವುದು. ’ಮಗುವು ನೀಂ ಪೆತ್ತರ್ಗೆ - ಲೋಕಕ್ಕೆ ಸ್ಪರ್ಧಿ!’

ಸ್ಪರ್ಧಾತ್ಮಕ ಜಗತ್ತಿನಲ್ಲಿ, ಹೌದು, ದುರಂತದಲ್ಲಿ ದುರಂತವೆಂದರೆ - "ನಾನು ಇಂತಿಂಥ ಕೆಲಸಗಳನ್ನು ಮಾಡಿದ್ದೇನೆ, ಮಾಡುತ್ತಿದ್ದೇನೆ" ಎಂದು ಹೇಳಿಕೊಂಡರೇನೇ ಗುರುತಿಸುವುದು. ಮತ್ತೆ ಆ ಗುರುತು ಅಗತ್ಯವಾಗಿಬಿಟ್ಟಿದೆ! ಏನಿದ್ದರೇನಂತೆ, ಯಾರೂ ನಮಗೆ ಮನ್ನಣೆ ಕೊಡದಿದ್ದರೆ ಎಂಬಂತಾಗಿಬಿಟ್ಟಿದೆ. By hook or crook ಮನ್ನಣೆಯನ್ನು ಸಂಪಾದಿಸುವುದು ಇಂದಿನ ಬದುಕಾಗಿದೆ. ’ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸು’ವಂತೆ ನಾವು ಬದುಕಲು ಆಗುತ್ತಿಲ್ಲ. Attention Seeking ಅನ್ನುವುದು ಮನೋರೋಗವೆಂದು ವೈದ್ಯರು ಹೇಳುತ್ತಾರೆ. ಏನಾದರೂ ಮಾಡಿ ನನ್ನನ್ನು ಗಮನಿಸಲಿ ಎಂದು ಹಾತೊರೆಯುವವರು ನಮ್ಮ ಸುತ್ತಮುತ್ತಲೂ ಇದ್ದೇ ಇದ್ದಾರೆ. ಈ ಹಾತೊರೆತವು ನಮ್ಮನ್ನು ಬಿಟ್ಟು ತೊಲಗುವ ತನಕ ನಾವು ಸಂತೋಷವಾಗಿರಲಾರೆವು. ಈ ಹಾತೊರೆತವು ನಮ್ಮನ್ನೇ ಸರ್ವನಾಶ ಮಾಡೀತು ಎಂದರೂ ಅದು ಅತಿಶಯೋಕ್ತಿಯಾಗಲಾರದು.

ನಾನು ಸಂತೋಷದಿಂದಿದ್ದರೆ ಅದೇ ಕಂಪನವನ್ನು ಹರಡುತ್ತೇನೆ. ಶುಭವಾದ ಮಾತುಗಳನ್ನಾಡುತ್ತೇನೆ. ಅದು ಇನ್ನೊಬ್ಬರ ಮೇಲೆ ಸತ್ಪರಿಣಾಮ ಬೀರುತ್ತೆ. ಆ ಇನ್ನೊಬ್ಬ ಈ ಪರಿಣಾಮದಿಂದ ಶುಭವಾದದ್ದನ್ನು ಮಾತನಾಡುತ್ತಾನೆ. ಇಂಥ ಕಂಪನಗಳು ಭೂವ್ಯೋಮದುದ್ದಕ್ಕೂ ಹರಡುತ್ತೆ. ಅದೇ ನಾನು ಇಂದು ಒಬ್ಬನಿಗೆ ಬೈದೆನೆಂದರೆ ನಾನು ನಕಾರಾತ್ಮಕ (negative) ಕಂಪನಗಳನ್ನು ಹೊರಹೊಮ್ಮಿಸುತ್ತೇನೆ. ಅದರ ಕಾರಣದಿಂದ ಆ ಇನ್ನೊಬ್ಬನೂ ಸಹ ತನ್ನ ಕಂಪನಗಳನ್ನೂ ಸೇರಿಸಿ ಇನ್ನಷ್ಟು ದುಷ್ಪರಿಣಾಮ ಬೀರುವಂತಹ ಕಂಪನಗಳನ್ನು ಹರಡುತ್ತಾನೆ. ಹೀಗೆ ಈ ನಕಾರಾತ್ಮಕ ಕಂಪನಗಳು ಭೂವ್ಯೋಮದುದ್ದಕ್ಕೂ ಹರಡುತ್ತೆ. ಈಗ ಹರಡಿರುವುದು ಇಂಥ ಕಂಪನವೇ. ಈ ಕಂಪನದ ಮಧ್ಯದಲ್ಲೇ ನಾವು ವಾಸಿಸುತ್ತಿದ್ದೇವೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಹೋದಾಗ, (ಅಥವಾ ಅಷ್ಟೇ ಶಾಂತವಾದ ಪ್ರದೇಶದಲ್ಲಿ ಕುಳಿತು ಪ್ರಾರ್ಥನೆ ಮಾಡಿದಾಗ) ನಮ್ಮ ಮನಸ್ಸು ನಿರ್ಮಲವೆನ್ನಿಸುವುದು. ಆದರೆ ಅಲ್ಲಿಂದ ಗಾಡಿ ಓಡಿಸಿಕೊಂಡು ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬಂದರೆ ನಕಾರಾತ್ಮಕ ಕಂಪನಗಳ ಅನುಭವವಾಗಿಯೇ ತೀರುತ್ತೆ.

ಇವಿಷ್ಟೂ ಯೋಚನೆಗಳು ನನಗೆ ಒಂದು ಕಗ್ಗವನ್ನು ಓದಿದಾಗ ಮೂಡಿತು. ಅವಷ್ಟನ್ನೂ ಬರೆದಿಟ್ಟೆ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹಮೀಯೆಲ್ಲಕುಂ ತೀಕ್ಷ್ಣ ತಮ
ತಿನ್ನುವುದು ಆತ್ಮವನೆ - ಮಂಕುತಿಮ್ಮ

-ಅ
15.10.2009
1.30PM

17 comments:

 1. tale ella kettu chitraanna aaghoytu ...

  ReplyDelete
 2. :) bahala dinagaLa nanthara, ondu uttama braha. saavakashavaagi, samaadhanadalli bareda haagide. nice.

  ReplyDelete
 3. ಬರಹವನ್ನು ನಿದಾನವಾಗಿ ಓದಿದೆ. ಚೆನ್ನಾಗಿ ಬರೆದಿದ್ದೀರಿ...ಖುಷಿಯಾಯ್ತು..

  ReplyDelete
 4. ee comments nodi innoo tale kedtide ... nangyaake idara opposite anstide antha??

  ReplyDelete
 5. ಹ್ಮ್.. ಸ್ವಲ್ಪ ಬೇರೆ ಶೈಲಿಯಲ್ಲಿ, ಯೋಚಿಸಿ, ಪ್ರಬುದ್ಧರಾಗಿ, ಸ್ವಲ್ಪ ಬುದ್ಧರೂ ಆಗಿ ಬರ್ದಿದೀರ.

  ವಿಜಯಾ ಮೇಡಂ, ನಂಗೂ ಇಷ್ಟ ಆಯ್ತು. ;)

  ReplyDelete
 6. ಈ ವಾರದಲ್ಲಿ ನನ್ನನ್ನು ಆತ್ಮಾವಲೋಕನ ಮಾಡಿಸಿದ್ದು ಎರಡು ವಿಷಯಗಳು. ಒಂದು "ಮನಸಾರೆ" ಚಿತ್ರ, ಮತ್ತೊಂದು ಈ ನಿಮ್ಮ ಲೇಖನ. ಲೇಖನದಲ್ಲಿ ಕೆಲವೊಂದು ಅಂಶಗಳು ನನಗಾಗಿಯೇ ಹೇಳಿರುವಂತಿತ್ತು. ಗುರುಗಳ ಸ್ಥಾನಕ್ಕೆ ತಕ್ಕಂತ ಲೇಖನ.

  << ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಹೋದಾಗ >>
  ಅದ್ಯಾಕೋ ನೀವು ದೇವರು-ದೇವಸ್ಥಾನಗಳ ಬಗ್ಗೆ ಮಾತಾಡಿದ್ರೆ, ಕೆಲವರು ಹುಬ್ಬೇರಿಸ್ಕೋಂಡು ನೋಡ್ತಾರೆ. ಯಾಕೆ ಅಂತ ನಿಮಗೇನಾದ್ರು ಗೊತ್ತಾ? ;-)

  ReplyDelete
 7. [ರಾಜೀವ] ಯಾರು ಹಾಗೆ ನೋಡಿದರು ಹೇಳಿ, ವಿಚಾರಿಸಿಕೊಳ್ತೀನಿ!!

  ’ಮನಸಾರೆ’ ಚಿತ್ರ ಚೆನ್ನಾಗಿದೆ ಅನ್ನಿಸಿತು ನನಗೂ. ಈ ಲೇಖನದ ಬಗ್ಗೆ ಅಷ್ಟಾಗಿ ಅರಿವಿಲ್ಲ. :-)

  [ಸುಶ್ರುತ] ಬುದ್ಧ - ಗಾಂಧಿ ಎಲ್ಲರೂ ಬೇಕು ನಮಗೆ ನೋಡಿ. ಒಳ್ಳೇ ವಿಜಯಾ ಮೇಡಮ್‍ಗೆ ಟಾರ್ಗೆಟ್ ಮಾಡಿರೋ ಹಾಗಿದೆ?

  [ಅನಂತ] ಧನ್ಯವಾದಗಳು. :-)

  [ವಿ.ರಾ.ಹೆ.] ಯೆಸ್ಸ್‍ಸ್!!!! :-)

  [ಶಿವು] ಧನ್ಯವಾದಗಳು ಶಿವು ಅವರೇ..

  [ಶ್ರೀನಿಧಿ] ಆದ್ರೂ ಇಪ್ಪತ್ ರೂಪಾಯಿ ನೋಟಿನಷ್ಟು ಮಜ ಕೊಡ್ಲಿಲ್ಲ. ಅದನ್ನು ಸಂಪೂರ್ಣಗೊಳಿಸಿ ನಿನ್ನ ಆಸೆ ಪೂರೈಸುತ್ತೇನೆ.

  [ವಿಜಯಾ] ಹೆ ಹ್ಹೆ.. ಏನು ಮಾಯವೋ ಪ್ರಭುವೇ.... :-) :-)

  ReplyDelete
 8. ಸುಂದರವಾದ ಲಲಿತ ಪ್ರಬಂಧ. ಈ ಪ್ರಬಂಧಕ್ಕೆ ಪ್ರೇರಣೆ ಕೊಟ್ಟ ಮಂಕುತಿಮ್ಮನಿಗೆ ಧನ್ಯವಾದಗಳು.

  ReplyDelete
 9. [ಸುನಾಥ್] ಧನ್ಯವಾದಗಳು ಸರ್. ಮಂಕುತಿಮ್ಮನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಬದುಕಿನ ಯಾವುದೇ ಸ್ಥಿತಿಯನ್ನು ಬೇಕಾದರೂ ವಿವರಿಸಬಲ್ಲ ಚಾಣಕ್ಷನು ಅವನಲ್ಲವೆ?

  ReplyDelete
 10. super super ee baraha,neevu bariyodu nodi manushyana basic needs bagee heltidireno andukonde,aadare ending chennagide-eege ellaru attention seeking rogakke biddiddare annodu 100% satya,kannu kaanadeiroranna raste daatisabekadru nannana yaaradru gamanisali,hogalali anta baystare.

  ReplyDelete
 11. nija helbekandre naanu kuda attention seeking rogakke olagaagutiruteeni,ellara mannane padeyode jeevanada guri, ade sari anta annisutirrute, adu ashtaagi sariyalla ee lekhana odida mele swalpa tilitide, tumba thanks idanna baredadakke

  ReplyDelete
 12. [ರಶ್ಮಿ] ಧನ್ಯವಾದಗಳು ರಶ್ಮಿ. ಈ attention seeking-ಉ ಹೆಚ್ಚಾದರೆ ಕಷ್ಟ, ನೋಡೀಪ್ಪ!!

  ReplyDelete
 13. Sridhar MokshagundamFriday, October 23, 2009

  Annaji, ee kaggavanna naanu saaakashtu divasagala kaala nanna status msg nalli ittkondu odi odi khushi patte... atyuttamavaada ondu vishayada mele olle baraha bardideera, very thoughtful and thought provoking. Thanks a lot. Innomme nidhaanavaagi odteeni :-)

  ReplyDelete
 14. Arun Annaaji ee title chennagi suit aagutte ninge... :-) article chennagide...

  ReplyDelete
 15. [ಶ್ರೀಧರ] ಒಳ್ಳೇ ಅಣ್ಣಾಜಿ - ಅಲ್ವೋ, ನೀನು ಮದುವೆ ಆದ್ಮೇಲೆ ಒಂದು ಆರ್ಟಿಕಲ್ ಬರೀಬಾರ‍್ದಾ?

  [ಶ್ರೀಧರ್ ಮೋಕ್ಷಗುಂಡಮ್] "ಒಳ್ಳೇ ಅಣ್ಣಾಜಿ"!! ಒಂದೊಂದು ಕಗ್ಗವೂ ಸಹ ಹೀಗೇ thought provoking ಎಂದು ನನ್ನ ಮತ. ಏನಂತೀರಿ?
  ಧನ್ಯವಾದಗಳು.

  ReplyDelete