Tuesday, October 27, 2009

ನೆರೆ

ಎಲ್ಲೆಡೆಯೂ ನೆರೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ರಾಜಕಾರಣಿಗಳ ಭಾಷಣಗಳಲ್ಲಿ, ಮಂತ್ರಾಲಯದ ಅಭಿಮಾನಿ ಬ್ರಾಹ್ಮಣರ ಬಾಯಲ್ಲಿ(ಯೂ) ’ನೆರೆ’ಯ ಜೊತೆ ’ಹಾವಳಿ’ ಎಂಬ ಪದವೂ ಬೆರೆತು ಹೊರಡುತ್ತಲೇ ಇದೆ. ಈ ’ನೆರೆ’ ಪದದ ಸುತ್ತ ಒಂದು ಸುತ್ತು ಹಾಕಿಕೊಂಡು ಬರೋಣವೆನ್ನಿಸಿತು.

ನೆರೆಗೆ ಕಾರಣ ನೀರು ತಾನೆ? ನೀರು ಯಾವಯಾವುದಕ್ಕೋ ಕಾರಣವಾಗಿದೆ. ಮಳೆಯಾಗಿ ಅನ್ನ ಕೊಡುತ್ತೆ, ಕೆರೆಯಾಗಿ ತಂಪು ಕೊಡುತ್ತೆ, ಕಡಲಾಗಿ ರತ್ನ ಕೊಡುತ್ತೆ. ಭೂಗ್ರಹದ ಅಸ್ತಿತ್ವಕ್ಕೂ ನೀರೇ ಕಾರಣ. ನಾವು ಇಂದು ಇಲ್ಲಿರುವುದಕ್ಕೂ, ಇದ್ದು ಉಸಿರಾಡುತ್ತಿರುವುದಕ್ಕೂ ನೀರೇ ಕಾರಣವಷ್ಟೆ? ಅಷ್ಟೇ ಯಾಕೆ, ವಿಷ್ಣುವಿಗೆ ನಾರಾಯಣ ಎಂಬ ಹೆಸರು ಬಂದಿದ್ದೂ ನೀರಿನಿಂದಲೇ!

ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ |
ತಾ ಯದ್ ಅಸ್ಯಯನಂ ಪೂರ್ವಂ ತೇನ ನಾರಾಯಣಃ ಸ್ಮೃತಃ ||


ನೀರಿಗೆ ನಾರಾ ಎಂದೂ ಅನ್ನುತ್ತಾರಾದ್ದರಿಂದ ಅಲ್ಲಿ ’ಅಯನ’ ಮಾಡುವವನು ನಾರಾಯಣ! ಇರಲಿ.

ಹೀಗಿರುವ ನಾರಾ, ನೆರೆ ಆಗಿದ್ದು ಹೇಗೆ?

ಬೆಂಗಳೂರಿನಲ್ಲಿ ಎಂದೂ ನೆರೆಯಾಗಲೀ ಬರವಾಗಲೀ ಬಂದೇ ಇಲ್ಲ. ಬೆಂಗಳೂರಿಗರು ಅಂತಹ ಕಷ್ಟಗಳನ್ನು ಮಾಧ್ಯಮದಲ್ಲಿ ಬಿಟ್ಟರೆ ಬೇರೆಲ್ಲೂ ನೋಡೇ ಇಲ್ಲ. ಆದರೆ ಇತ್ತೀಚೆಗೆ ಬೆಂಗಳೂರಿನ ಮೋರಿಗಳೂ ಉಕ್ಕಿ ಹರಿಯುವುದು, ಮನೆಗಳೊಳಗೆ ನೀರು ನುಗ್ಗುವುದು, ಮರಗಳು ಬೀಳುವುದು, ಎಲ್ಲವೂ ಆಗುತ್ತಿದೆ. ಕೆರೆಗಳೆಲ್ಲವನ್ನೂ ಬತ್ತಿಸಿದ ಬೆಂಗಳೂರಿಗರು, ಕೆರೆಗಳ ಮೇಲೆ ವಾಸ ಮಾಡುತ್ತಿರಲು, ಮಳೆ ಬಂದಾಗ ಕೆರೆ ತುಂಬಿದಂತೆ ಮನೆ ತುಂಬುತ್ತೆ ಅಷ್ಟೆ. ಬೆಂಗಳೂರಿನ ನೆರೆಗೆ ಇದೇ ಕಾರಣವೆನ್ನಬಹುದು.

ಈ ನೆರೆ ಎಂಬ ಪದಕ್ಕೆ ಅಕ್ಕಪಕ್ಕದವರು ಎಂಬ ಅರ್ಥವೂ ಇದೆಯಲ್ಲವೆ? "ನೆರೆಮನೆಯವರು" - ಎಂದು ಬಳಸುವುದು ಇದೇ ಅರ್ಥದಲ್ಲಿ ತಾನೆ?
ಬೆಂಗಳೂರಿನಲ್ಲಿ ನೆರೆ ಹಾವಳಿ ಎಂದು ವಾರ್ತೆ ಪ್ರಸಾರವಾದರೆ ಅದರ ಅರ್ಥ ಏನೆಂದು ತಿಳಿದುಕೊಳ್ಳೋಣ? ನೆರೆಯ ಜೊತೆ ಜೋಡಿಯಾಗಿ ಇನ್ನೊಂದು ಪದ ಬಂದು ಕುಳಿತುಕೊಳ್ಳುತ್ತೆ - ಹೊರೆ! ಎಂಥ ವಿಪರ್ಯಾಸ. "ನೆರೆಹೊರೆಯವರು" - ಅಕ್ಕಪಕ್ಕದ ಮನೆಯವರ ಬಗ್ಗೆ ನಮಗಿರುವ ಗೌರವ ಎಂಥದ್ದು ಎಂಬುದು ಈ ಪದದಲ್ಲೇ ಗೊತ್ತಾಗುತ್ತೆ!

ಅಂತೂ ನಾರಾಯಣನಿಂದ ಪಕ್ಕದ ಮನೆಯವರೆಗೂ ಬಂದೆವು.

ಇದೇ ತರಹದ ಚಿಂತನೆಯನ್ನು ಒಬ್ಬ ರಾಜಕಾರಣಿಯು ತಮ್ಮ ಗುಂಪಿನವರನ್ನೆಲ್ಲ ಕಲೆ ಹಾಕಿಕೊಂಡು ವಿಷಯವನ್ನು ಮಂಡಿಸುವುದಕ್ಕಿಂತ ಮುಂಚೆ ಆರಂಭಿಕ ಭಾಷಣ ಮಾಡಿದರಂತೆ. "ಇಲ್ಲಿ ನೆರೆದಿರತಕ್ಕಂತ ಸಭಿಕರೇ.." ಎನ್ನುತ್ತಿದ್ದಂತೆ ಮೋಟುಗೋಡೆಯ ಅಭಿಮಾನಿಯೊಬ್ಬ "ಸ್ವಾಮಿ, ಈ ಸಭೆಯಲ್ಲಿ ಇರುವವರೆಲ್ಲರೂ ಗಂಡಸರೇ.." ಎಂದನಂತೆ!

ಒಳ್ಳೇ ನೆರೆ!

-ಅ
27.10.2009
8.30PM

4 comments:

 1. merry go round hodsidri-from narayana to nere to narayana !

  ReplyDelete
 2. neerinalli 'ayana' maaDodu andre? artha aglilla..

  vishNuvige neerininda yaava hesaruu barlillappa.
  neenu heLirodu manudharma shaastra da vaakya anta kaaNutte.. 'aapO naaraa iti prOktaa' andre neerige innond hesaru naaraa antalla. 'nara'nige sambandhisiddu 'naara'. neeru naranige sambandhisiddu.. in fact (vai)
  'aapaH narasUnavaH' neeru manushyana magananteyE sari.. anta heLokk hortru avru..

  by the way, 'vishNu (charAcharEshu bhUtEshu vEshanaat vishNu:)' ge 'nArAyaNa' anta hesaru hege bantu annodakke ondu chikka nidarshana:-

  "iishitavyatayaa naaraa dhaaryapOshyatayaa tathaa |
  niyAmyatvEna sRjyatvapravEsha-haraNai: tathaa ||
  ayatE nikhilAn nArAn vyApnOti kriyayA thathaa |
  nArAshcApyayanam tasya taistadbhAvanirUpaNaat |||"
  ***Ahirbudhnya samhiteyalli 'nArAyaNa mantra da sUkshmaartha niruupaNA prakaraNadalli hELirodu***

  in short, "narasya ayanaat nArAyaNaH" anta vyaakhyaana maaDOd kELiddini, Odiddini.. narasya (narana) ayanAt(dikkaaddarinda, in other words - avana kaDeya gatiyaaddarinda) nArAyaNaH (naarayaNa annaskotaane) anta. :-)

  ReplyDelete
 3. aapO naara iti prOktaa andre enu?

  ReplyDelete
 4. ನಾರಾಣಾಮ್ ಅಯನಮ್ ಯಃ ಸಃ ನಾರಾಯಣಃ - ತತ್ಪುರುಷ ಸಮಾಸ. ನಾರಾ ಅಂದ್ರೆ ಇಡೀ ಭೂಮಂಡಲ, ಯಾರ ಆಧಾರದ ಮೇಲೆ ಇದೆಯೋ ಅವನು ನಾರಾಯಣ.

  ನಾರಾಃ ಅಯನಮ್ ಯಸ್ಯ ಸಃ ನಾರಾಯಣಃ - ಬಹುರ್ವೀಹಿ ಸಮಾಸ. ಎಲ್ಲರಲ್ಲೂ ಯಾರು ವಾಸಿಸುತ್ತಾನೋ ಅವನು ನಾರಾಯಣ (ಅಂತರ್ಯಾಮಿ).

  ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ |
  ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣಃ ಸ್ಮೃತಃ ||

  ಇದು ಮನುಸ್ಮೃತಿಯಲ್ಲಿದೆ (೧.೧೦). ನೀರಿಗೆ ನಾರಾ ಎಂದು ಕರೆಯುತ್ತಾರೆ. ಜೀವಿಗಳೆಲ್ಲಾ ನೀರಿನಿಂದಲೇ ಹುಟ್ಟುತ್ತದೆ. ಈ ನೀರೇ ಪೂರ್ವಕಾಲದಲ್ಲಿ (ತಾ ಯದಸ್ಯಾಯನಂ ಪೂರ್ವಂ), ಭಗವಂತನ ಆಶ್ರಯಸ್ಥಾನವಾಗಿದ್ದರಿಮ್ದ ಭಗವಂತನಿಗೆ ನಾರಾಯಣ ಎಂದು ಕರೆಯುತ್ತಾರೆ.

  ReplyDelete