Friday, November 13, 2009

ಮಕ್ಕಳೊಂದಿಗೆ...

ಕಂಪ್ಯೂಟರ್ ಲ್ಯಾಬಿಗೆ ಬಂದು ಹತ್ತು ನಿಮಿಷವಾಗಿತ್ತು. ಒಂದನೇ ಕ್ಲಾಸಿನ ಭೃಗುಮತಿ (ಎಂಥ ಅದ್ಭುತವಾದ ಹೆಸರು) ಎಂಬ ಹುಡುಗಿಯ ಚಾಡಿ ಹೀಗಿತ್ತು: "Sir, from one hour, he is only playing, and not leaving me to play...." ಚಾಡಿ ಹೇಳಿಸಿಕೊಂಡವನು ಸುಮ್ಮನಿರುತ್ತಾನೆಯೇ? "No, saar... she is not letting me to play from one month." ಎಂದ. ಇದು ವಾಸಿ, ಎರಡನೆಯ ತರಗತಿಯ ಹುಡುಗನೊಬ್ಬ "sir, i did not "got" chance from the 1st standard!!!!" ಎಂದು ಆರೋಪಿಸಿದ್ದ. ಚಿಕ್ಕಮಕ್ಕಳು ಬಹಳ ಸಂತೋಷವಾಗಿರುವುದು ತಾವು "play" ಮಾಡುವಾಗ. ಅರ್ಥಾತ್ ಆಡುವಾಗ. ಕಂಪ್ಯೂಟರಿನಲ್ಲಿ ಕೆಲಸ ಮಾಡುವುದನ್ನು "play" ಎಂದು ಕರೆಯುತ್ತಾರೆಂದು ನನಗೆ ಖುಷಿಯಾಗುತ್ತೆ.

.....................

ನನ್ನ ಹುಟ್ಟುಹಬ್ಬವನ್ನು ಹೇಗೋ ಪತ್ತೆ ಮಾಡಿಕೊಂಡುಬಿಟ್ಟ ನಾಲ್ಕನೆಯ ಕ್ಲಾಸಿನ ಮಕ್ಕಳು ಕ್ಲಾಸಿಗೆ ಹೋದ ತತ್‍ಕ್ಷಣವೇ ವಿಷ್ ಮಾಡಿದ್ದರು. ಒಬ್ಬ ಹುಡುಗ ನನಗೊಂದು ಗ್ರೀಟಿಂಗ್ ಕೊಟ್ಟ. "Happy Birthday .............. Sir" ಎಂದಿತ್ತು. ಆ ........ ಜಾಗ ಖಾಲಿ ಇರಲಿಲ್ಲ. ಅಲ್ಲೊಂದು ಕಂಪ್ಯೂಟರ್ ಚಿತ್ರವಿತ್ತು. ನಾನು ಅದನ್ನು Happy Birthday, Computer Sir ಎಂದು ಓದಿಕೊಳ್ಳಬೇಕಂತೆ!!

......................

ನಮ್ಮನ್ನು ಎಷ್ಟು ಸೊಗಸಾಗಿ ಗಮನಿಸುತ್ತಿರುತ್ತಾರೆಂದರೆ, ನಮ್ಮ ಚಲನವಲನಗಳು, ನಾವು ಪದೇ ಪದೇ ಉಪಯೋಗಿಸುವ ಪದಗಳು, ಎಲ್ಲವೂ ಗೊತ್ತು. ಮತ್ತು ಅದನ್ನು ಪ್ರದರ್ಶಿಸಲು ಕಾತುರರಾಗಿರುತ್ತಾರೆ. "ಗುಮ್ಮಣ್ಣ" ಮೇಷ್ಟ್ರ ಥರ ಇದ್ದರೆ ಮಾತ್ರ ಹೆದರಿಕೊಂಡಿದ್ದರೂ ಹಿಂದೆ ಆಡಿಕೊಳ್ಳುತ್ತಾರೆ. ಯಾವಾಗ ನಮ್ಮನ್ನು ನಾವೇ ತಮಾಷೆ ಮಾಡಿಕೊಳ್ಳುತ್ತೀವೋ ಆಗ ಮಕ್ಕಳು ನಮಗೆ ತುಂಬ ಹತ್ತಿರವಾಗುತ್ತಾರೆ. ನನ್ನ ಸಹೋದ್ಯೋಗಿಯೊಬ್ಬರು ಒಂದು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ ಯಾವುದೋ ಸಂದೇಹವನ್ನು ಪರಿಹಾರ ಮಾಡಿಕೊಳ್ಳಲು ಅವರಿದ್ದಲ್ಲಿಗೆ ಹೋಗಿದ್ದೆ. ಅದೇ ಸಮಯಕ್ಕೆ ಪ್ರಾಂಶುಪಾಲರಿಗಿಂತಲೂ ಹಿರಿಯಾರದ (ಖಾಸಗಿ ಶಾಲೆಗಳಲ್ಲಿ ಇವೆಲ್ಲ ಸಾಧ್ಯ) ಅಲ್ಲಿಗೆ ಬಂದು ನನ್ನ ಸಹೋದ್ಯೋಗಿ ಮಾಡಿದ್ದ ಏನೋ ತಪ್ಪನ್ನು ಎತ್ತಾಡಿ ರೇಗತೊಡಗಿದರು - ಮಕ್ಕಳ ಮುಂದೆಯೇ. ಮಾತು ವಾದವಾಗಿ ತಿರುಗಿತು. ಸರಿ, ಇಬ್ಬರೂ ತೆಲುಗರಾದ್ದರಿಂದ ಮಾತು ಇಂಗ್ಲೀಷಿನಿಂದ ತೆಲುಗಿಗೆ ಇಬ್ಬರೂ ಭಾಷಾಂತರಗೊಂಡರು. ಮಕ್ಕಳು ಮಿಕಮಿಕ ಅಂತ ನೋಡುತ್ತಿದ್ದರು. ನನ್ನ ಸಂದೇಹವು ಇನ್ನೂ ಬಗೆಹರಿಯದಿದ್ದ ಕಾರಣ ನಾನು ಅವರ ತೆಲುಗಿನ ಜಗಳವನ್ನೇ ನೋಡುತ್ತ ಮಿಕಮಿಕ ಅಂತ ನಿಂತಿದ್ದೆ. ಆ "ಹಿರಿಯರು" ಸಿಟ್ಟು ಮಾಡಿಕೊಂಡು ಹೋಗಿದ್ದೇ ತಡ, ಅನೇಕ ಮಕ್ಕಳು, "Ma'am you speak Telugu??????!!!!!" ಎಂದು ಹರ್ಷೋದ್ಗಾರ ಮಾಡಿಬಿಟ್ಟರು!! ಇವರ ಬೇಸರವು ಕ್ಷಣ ಮಾತ್ರದಲ್ಲೇ ಕಡಿಮೆಯಾಯಿತಷ್ಟೆ?

......................

ನಮ್ಮ ಪಿ.ಟಿ. ಮಾಸ್ತರಿಗಂತೂ ದಿನಪ್ರತಿಕ್ಷಣವೂ ನಲಿವೇ. ಒಂದು ದಿನ ಎರಡನೇ ತರಗತಿಯ ಮಕ್ಕಳನ್ನೆಲ್ಲ ಮೈದಾನದಲ್ಲಿ ಕಲೆ ಹಾಕಿಕೊಂಡು ಕ್ರಿಕೆಟ್ ಆಡಿಸುತ್ತಿದ್ದರು. ನಾನೂ ಕೂಡ ಯಾವ ಕ್ಲಾಸೂ ಇಲ್ಲದೇ ಇದ್ದಿದ್ದರಿಂದ ಮೈದಾನಕ್ಕೆ ಹೋಗಿದ್ದೆ. ಶಾಲೆಯಲ್ಲಿ ಇದು ನನ್ನ ಹವ್ಯಾಸಗಳಲ್ಲೊಂದು. ಆಟ ಶುರು ಆಗೋಗಿತ್ತು. ಪಿ.ಟಿ.ಮಾಸ್ತರು "ಸಾರ್, ಈ ಮಕ್ಕಳನ್ನು ಸ್ಕೋರ್ ಎಷ್ಟು ಅಂತ ಕೇಳಿ?" ಎಂದರು. ಇದೇನು ದೊಡ್ಡ ವಿಷಯ, ಈ ಮಕ್ಕಳು ಎಷ್ಟು ಮಹಾ ಹೊಡೆದಿರುತ್ತಾರೆ? ಹದಿನೈದೋ ಇಪ್ಪತ್ತೋ ಇರಬಹುದು. "Hey, what is the score?" ಎಂದೆ. ಆ ಹುಡುಗ, "one minute saar" ಎಂದಿದ್ದೆ, ತನ್ನ ಕೈ ಬೆರಳುಗಳನ್ನು, ಕಾಲ್ಬೆರಳುಗಳನ್ನೆಲ್ಲ ಎಣಿಸತೊಡಗಿದನು. ಅವನ ಲೆಕ್ಕಾಚಾರ ಕೇಳುತ್ತಲೇ ನನಗೆ ದಿಗ್ಭ್ರಾಂತಿಯಾಯಿತು! "four hundred + thirty two + ninty eight.... saar, seven hundred and eighty six" ಅಂದ... !!!!!!!!!!!!!! ಪಿ.ಟಿ.ಮಾಸ್ತರು, "ಇನ್ನು ಹತ್ತು ನಿಮಿಷ ಬಿಟ್ಕೊಂಡ್ ಬನ್ನಿ, ಒಂದು ಸಾವಿರ ಆಗಿರುತ್ತೆ!" ಎಂದು ನಕ್ಕರು.

........................

ಶಾಲೆಯಲ್ಲಿ ಮಕ್ಕಳೊಂದಿಗೆ ಇದ್ದರೆ ಅದಕ್ಕಿಂತ ಸ್ವರ್ಗ ಬೇರೇನಿದೆ? ಹೊರಗೆ ಎಷ್ಟು ರಾಜಕೀಯ, ಎಷ್ಟು ಕಲ್ಮಶ, ಎಷ್ಟು ಹಿಂಸೆ, ಎಷ್ಟು ಕಷ್ಟ... ಮಕ್ಕಳಿಗೆ ಇವು ಯಾವುವೂ ಇಲ್ಲ!! ಮಕ್ಕಳೊಂದಿಗೆ ಇದ್ದರೆ ನಾವೂ ಮಕ್ಕಳಂತೆ ಖುಷಿ ಖುಷಿಯಾಗಿರುತ್ತೇವೆ. ನಾನು ಬದುಕಿರುವವರೆಗೂ ಸ್ಕೂಲ್ ಮೇಷ್ಟ್ರೇ ಆಗಿರಲಿ ಎಂಬುದು ನನ್ನ ಪ್ರಾರ್ಥನೆ!

ಶಾಲೆಯಿಂದ ಮನೆಗೆ ಹೋದ ಮೇಲೆ ಇನ್ನೊಂದು ಮಗುವನ್ನು ನೋಡಲು ನನ್ನ ಮನಸ್ಸು ಉತ್ಸುಕದಿಂದಿರುತ್ತೆ. ಹಿರಿಯ ಮಿತ್ರ ಸತ್ಯಪ್ರಾಕಾಶ್ ಮನೆಗೆ ಹೋಗುತ್ತೇನೆ. ಅಲ್ಲಿ ಹಾಸಿಗೆಯ ಮೇಲೆ ಮಲಗಿರುತ್ತೆ ಆ ಮಗು. ಹೋದ ಕೂಡಲೆ ನನ್ನ ಹೆಂಡತಿಯು ರಾಘವೇಂದ್ರ ಸ್ವಾಮಿ ಮಠದಲ್ಲಿ ಕೊಟ್ಟ ಮಂತ್ರಾಕ್ಷತೆಯನ್ನು ಆ ಮಗುವಿನ ಕೈಗೆ ಕೊಡುತ್ತಾಳೆ. "ಮಠಕ್ಕೆ ಹೋಗಿದ್ರಾ? ಚೆನ್ನಪಟ್ಟಣದ ಮಠಕ್ಕಾ.. ಸಂತೋಷ" ಎನ್ನುತ್ತೆ. ಮರುಘಳಿಗೆಯೇ "ರಾಜಲಕ್ಷ್ಮೀ, ಇವರು ಯಾರು?" ಎನ್ನುತ್ತೆ. "ಮೊನ್ನೆ ಬಂದಿದ್ರಲ್ಲಾ, ಅರುಣ ಮತ್ತು ರೇಖಾ..." ಎಂಬ ಉತ್ತರ ಬರುತ್ತೆ. "ಸಂತೋಷ! ಕಾಫಿ ಕೊಡು.." ಎನ್ನುತ್ತೆ ಮಗು. ಕಾಫಿ ಮಾಡಿಕೊಂಡು ಬರುವ ಹೊತ್ತಿಗೆ ಮುಂಚೆಯೇ "ಮೀನಾಕ್ಷಿ, ಎಷ್ಟ್ ಹೊತ್ತು?" ಎಂದು ಅವರನ್ನೇ ಕೇಳುತ್ತೆ. "ಎಲ್ಲೋ ಹೋಗ್ಬಿಡ್ತಾಳೆ! ಎಷ್ಟ್ ಹೊತ್ತು ನೋಡು.." ಎಂದು ನನಗೆ ಹೇಳಿ "ನೀನ್ ಏನ್ ಮಾಡ್ತಿದ್ದೀಯಾ?" ಎಂದು ಕೇಳುತ್ತೆ. ನಾನು "ನಿನ್ನೆ ಹೇಳಿದ್ನಲ್ಲಾ, ಟೀಚರ್ರು.." ಎಂದು ಜ್ಞಾಪಿಸುತ್ತೇನೆ. ಕಾಫಿ ಬರುತ್ತೆ. "ಎಷ್ಟ್ ಹೊತ್ತು ಕಾಫಿ ಕೊಡೋದು?" ಎನ್ನುತ್ತೆ ಮಗು. "ಫ್ರೆಂಡ್ ಎಲ್ಲಿ?" ಮತ್ತೆ ನನ್ನ ಹೆಂಡತಿಗೊಂದು ಪ್ರಶ್ನೆ. ಅವಳು ಕೈಯಾಡಿಸುತ್ತಾಳೆ. "ಫ್ರೆಂಡ್ ಇದ್ಯಂತಾ ಇವರ ಮನೇಲಿ?" ಎಂದು ಪಕ್ಕದಲ್ಲಿರುವವರನ್ನು ಕೇಳುತ್ತೆ ಮಗು. ನಾನು, "ನಾಲ್ಕು" ಎಂದು ಕೈ ತೋರಿಸುತ್ತೇನೆ. "ನಾಲ್ಕು ಫ್ರೆಂಡ್ ಇದ್ಯಾ ನಿಮ್ ಮನೇಲಿ?, ಅಬ್ಬಾಹ್!!" ಎನ್ನುತ್ತಲೇ, "ನಾನು ಈಗ ಮಲಗಿಕೊಳ್ಳಲಾ?" ಎನ್ನುತ್ತೆ. ಮಲಗಿ, ಐದೇ ನಿಮಿಷಕ್ಕೆ ಮತ್ತೆ ಎದ್ದು, "ಯಾವಾಗ್ ಬಂದೆ?" ಎನ್ನುತ್ತೆ ನನ್ನತ್ತ ನೋಡಿ. "ಆಗಲೇ!!" ಎಂದಾಗ, "ಓಹ್, ಯಾರು ಇವನು, ವಿಶಾಲಾಕ್ಷೀ?" ಎಂದು ಕೇಳುತ್ತೆ!

ಈ ಮಗು ಮಿತ್ರರಾದ ಸತ್ಯಪ್ರಕಾಶರ ತಾಯಿ.

ಮಕ್ಕಳ ದಿನಾಚರಣೆಯ ಶುಭಾಶಯಗಳು!

-ಅ
13.11.2009
10.40AM

7 comments:

 1. ಅರುಣ,
  ಮಕ್ಕಳು--ಭಾಗ ೧ ಓದುತ್ತ ತುಂಬ ಖುಶಿಯಾಗಿತ್ತು. ಮಕ್ಕಳು ಭಾಗ--೨ ಓದುತ್ತಿದ್ದಂತೆ ಹೃದಯ ತುಂಬಿ ಬಂದಿತು. ಈ ಎರಡೂ ಭಾಗಗಳನ್ನು ಒಟ್ಟಿಗೆ ಕೊಟ್ಟ ನಿಮಗೆ ವಂದನೆಗಳು.

  ReplyDelete
 2. :-) happy children's day to you too!!!

  ReplyDelete
 3. !!!!! :)
  ನಿಮಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು..

  ReplyDelete
 4. ಬರೀ ಚೆನ್ನಾಗಿದೆ ಅಂದ್ರೆ ಫರ್ಮಾಲಿಟಿ ಆಗತ್ತೆ ಕಣೋ, ತುಂಬ ಇಷ್ಟ ಆಯ್ತು. ....

  ReplyDelete
 5. ಹೇಗೆ ಪ್ರತಿಕ್ರಯಿಸಬೇಕೋ ಗೊತ್ತಾಗ್ತಿಲ್ಲ. ಒಂದೊಂದು ಸಲ ನಿಮ್ಮಂತವರನ್ನು ನೋಡಿದರೆ ಯಾಕೋ ಅಸೂಯೆ ಆಗತ್ತೆ. ನಿಮ್ಮಂತಹ ಜೀವನ ನನಗೂ ಯಾಕೆ ಸಿಗಲಿಲ್ಲ ಅಂತ. ಎಲ್ಲಾ ಬಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಬಂದುಬಿಡೋಣ ಅನ್ಸತ್ತೆ. ಆದ್ರೆ ಅದಕ್ಕೆ ನನಗೆ ಧೈರ್ಯವೂ ಇಲ್ಲ, ಅರ್ಹತೆಯೂ ಇಲ್ಲ. ಕಾಲಾಯ ತಸ್ಮೈ ನಮಃ. ನಾನೂ ಕಾಯ್ತಾ ಇದೀನಿ.

  ನನಗೆ ನೆಹರು ಕಂಡರೆ ಅಷ್ಟೇನೂ ಗೌರವ ಇಲ್ಲ. ಎಲ್ಲಾ ಹಬ್ಬಗಳಲ್ಲೂ ಮಕ್ಕಳಿಗೇ ಹೆಚ್ಚು ಆದ್ಯತೆ ನೀಡಬೇಕು ಅಂತ ನನ್ನ ಅಭಿಪ್ರಾಯ. ಇವತ್ತು ಮಾತ್ರಾ ಯಾಕೆ ಮಕ್ಕಳ ದಿನ? ಆದರೂ ಇರಲಿ, ಮಕ್ಕಳ ದಿನಾಚರಣೆಯ ಶುಭಾಶಯಗಳು.

  ReplyDelete
 6. [ರಾಜೀವ] ನನಗೂ ನೆಹರೂ ಅಂದ್ರೆ ಅಷ್ಟಕ್ಕಷ್ಟೆನೇ.. ಮಕ್ಕಳ ದಿನಾಚರಣೆಯನ್ನು ಮಾತ್ರ ಆಚರಿಸೋದು, ನೆಹ್ರೂ ಹುಟ್ಟುಹಬ್ಬದ ವಿಷಯ ಮರೆತೇ ಹೋಗಿತ್ತು ನೋಡಿ.

  [ಗಂಭೇ] :-)

  [ಶ್ರೀನಿಧಿ] ಇಷ್ಟ ಆಯ್ತಾ? ಇದೇ ಖುಷೀಲಿ ಒಂದು ಕಾಫಿ?

  [ಅನಂತ] :-)

  [ವಿಜಯಾ] ---"---

  [ಸುನಾಥ್] ವಂದನೆಗಳು!

  ReplyDelete