Wednesday, December 16, 2009

ಬಾಳಿಗೊಂದು ನಂಬಿಕೆ ;-)

ಬಸ್ ಸ್ಟಾಪಿನಲ್ಲಿದ್ದಾಗ ಲೇಟಾಗಿ ಬಸ್ ಬಂತು ಅಥವಾ ಬಾರದೆಯೇ ಇತ್ತು. ಆಟೋ ಕೂಡ ಸಿಗುವುದಿಲ್ಲ! ಹಾಳಾಗ್ ಹೋಗ್ಲಿ, ನಡೆದುಕೊಂಡು ಹೋಗೋಣ ಅಂದುಕೊಂಡರೆ ಚಪ್ಪಲಿಯೂ ಕಿತ್ತು ಹೋಗುತ್ತೆ. ಬರಿಗಾಲಲ್ಲಿಯೇ ನಡೆಯುತ್ತೇನೆಂದರೆ ಆ ಕಾಲಿಗೆ ಮುಳ್ಳು ಚುಚ್ಚಿಕೊಳ್ಳುತ್ತೆ!! ಇದಕ್ಕೆ ಕಿಸೆಯೊಳಗೆ ಇಪ್ಪತ್ತು ರೂಪಾಯಿ ನೋಟಿರುವುದಲ್ಲದೆ ಬೇರೆ ಏನು ಕಾರಣ ತಾನೆ ಇದೆ?

ಹೊಟೆಲಿನಲ್ಲಿ ಬೇಕಾದ ತಿಂಡಿ ಸಿಗುವುದಿಲ್ಲ, ಸಿಕ್ಕರೆ ತಿಂದದ್ದು ಜೀರ್ಣವಾಗುವುದಿಲ್ಲ. ಸಾಮಾನ್ಯವಲ್ಲ ಈ ನೋಟು! ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಹುಟ್ಟು ಹಾಕಿದ್ದೇ ಈ ನೋಟು ಎಂದು ದೈವವಾಣಿಯೇ ಇದೆ! ಬಡತನ, ಭ್ರಷ್ಟಾಚಾರ, ಸ್ವೇಚ್ಛಾಚಾರ, ಡಂಬಾಚಾರ, ಅನಾಚಾರ, ಬಾಲಾಚಾರ, ಸಮಾಚಾರ - ಇನ್ನೂ ಏನೇನು ಆಚಾರಗಳಿಗೆ ಬುನಾದಿಯಾಗಿದೆಯೋ ಯಾರಿಗೆ ಗೊತ್ತು! ಬ್ರಿಟಿಷರನ್ನು "ಭಾರತ ಬಿಟ್ಟು ತೊಲಗಿ"ಸಿದಾಗಲೇ ಈ ನೋಟನ್ನೂ ಉಚ್ಚಾಟಿಸಬೇಕಿತ್ತು - ಯಾಕೊ ಆಗಿನ ವಿತ್ತ ಸಚಿವರು ಮನಸ್ಸು ಮಾಡಲಿಲ್ಲ. ಅವರು ಮಾಡಿದ ತಪ್ಪಿಗೆ ನಾವು ಈಗಲೂ ಅನುಭವಿಸುತ್ತಿದ್ದೇವೆ - ಹಣೆಬರಹ!

ಸಮಸ್ಯೆಯನ್ನು ಹೇಳಿದರೆ ಸಾಲದು, ಪರಿಹಾರವೂ ಹೇಳಬೇಕಲ್ಲವೆ? ಬಹಳ ಸುಲಭ. ಯಾರು ಈ ನೋಟನ್ನು ಕೊಡುತ್ತಾರೋ ಅವರಿಗೇ ಹಿಂದಿರುಗಿಸಿ ಚಿಲ್ಲರೆ ಪಡೆದುಬಿಡುವುದು ಸುರಕ್ಷಿತ ಮಾರ್ಗ. ಇದನ್ನು ಮನುಸ್ಮೃತಿಯಲ್ಲೂ ಹೇಳಿದೆ. ಈಗಿನ ಕಾಲದಲ್ಲಿ ಶ್ರುತಿ-ಶಾಸ್ತ್ರ-ಸ್ಮೃತಿ-ಪುರಾಣಗಳನ್ನು ಯಾರು ತಾನೆ ಓದುತ್ತಾರೆ, ದುರಂತ!ಹೇಳೋದೆಲ್ಲ ಹೇಳಿಯಾಗಿದೆ, ಇನ್ನಾದರೂ ತಿದ್ದುಕೊಂಡು ಎಚ್ಚೆತ್ತುಕೊಳ್ಳುವುದು ಒಳ್ಳೇದು. ಆದರೆ ನರಕವನ್ನು ಬಯಸಿ ಬಯಸಿ ಹೊಗುತ್ತಾರಲ್ಲಾ ಜನ?

ಅಯ್ಯೋ, ಇವತ್ತು ಬ್ಯಾಂಕಿನಲ್ಲೊಬ್ಬರು ಕಂತೆ ಕಂತೆ ಹಣವನ್ನು ಡ್ರಾ ಮಾಡಿ, ಎಣಿಸಿಕೊಂಡು ಒಂದು ಸಾವಿರ ರೂಪಾಯಿಗೆ "ಇಪ್ಪತ್ತು ರೂಪಾಯಿ ನೋಟುಗಳನ್ನು ಕೊಡಿ" ಎಂದು ಪಡೆದರು! ಅಗೆದಿರುವ ಹೊಂಡದೊಳಕ್ಕೆ ಹೀಗೂ ಬೀಳುತ್ತಾರಾ ಅಂತ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ!! ಅಲ್ಲ, ಒಂದು ನೋಟಿಟ್ಟುಕೊಂಡೇ ಕೆಲಸ ಕೆಡುತ್ತೆ, ಇನ್ನು ಒಂದು ಸಾವಿರ ರೂಪಾಯಿಗೆ - ಅಂದರೆ ಐವತ್ತು ನೋಟುಗಳು. ತಲೆ ಗಟ್ಟಿಯಿದೆ ಅಂತ ಬಂಡೆಗೆ ಚಚ್ಚಿಕೊಳ್ಳುವಂತಹ ದುಸ್ಸಾಹಸ ಇದು!

ಮೊನ್ನೆ ಹೀಗೇ ಪುತ್ತೂರಿನ ಬಸ್ ಸ್ಟಾಂಡಿನಲ್ಲಿ ನಿಂತಿದ್ದೇವೆ - ಮಂಗಳೂರಿಗೆ ಹೋಗಲು ಒಂದು ರಾಜಹಂಸವೂ ಇಲ್ಲ, ಒಂದು ಕರ್ನಾಟಕ ಸಾರಿಗೆಯೂ ಇಲ್ಲ! ಬರ್ರೀ ಸೆಮಿ-ಡಿಲಕ್ಸೇ! ಅದಕ್ಕೆ ಬೇರೇನೂ ಕಾರಣವಿಲ್ಲ, ಎರಡು ದಿನವಾದ ಮೇಲೆ ಗೊತ್ತಾಯಿತು ಚೀಲದೊಳಕ್ಕೆ ಯಾವಾಗಲೋ ಒಂದು ಇಪ್ಪತ್ತು ರೂಪಾಯಿ ನೋಟು ನುಸುಳಿಕೊಂಡುಬಿಟ್ಟಿದೆ. ಈ ’ಸೆಮಿ ಡಿಲಕ್ಸ್’ ಹೆಸರನ್ನು ಕೇಳಿದರೇ ಸಾಕು, ಶ್ರೀಕಾಂತ ಸ್ನಾನ ಮಾಡುವನು. ನಾನು ತಲೆ ಮರೆಸಿಕೊಳ್ಳುವೆನು! ಜೀವನದಲ್ಲಿ ಒಮ್ಮೆ ಕೆ.ಎಸ್.ಆರ್.ಟಿ.ಸಿ.ಯ ಸೆಮಿ ಡಿಲಕ್ಸಿನಲ್ಲಿ ಪ್ರಯಾಣ ಮಾಡಿಬಿಟ್ಟರೆ ಸಾಕು - ಹತ್ತು ಇಪ್ಪತ್ತು ರೂಪಾಯಿ ನೋಟನ್ನು ಹೊಂದಿದ ಪಾಪ ಕರ್ಮವು ನಮ್ಮನ್ನು ಲೇಪಿಸಿಕೊಳ್ಳುತ್ತೆ. ಈ ಕರ್ಮವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ - ಪ್ರಯಾಣದ ಮೇಲೆ ಪ್ರಯಾಣ ಮಾಡುತ್ತಲೇ ಇರಬೇಕು - ಕರ್ನಾಟಕ ಸಾರಿಗೆಯಲ್ಲೋ, ರಾಜಹಂಸದಲ್ಲೋ. ಮತ್ತೊಮ್ಮೆ ಅಪ್ಪಿತಪ್ಪಿ ಸೆಮಿ-ಡಿಲಕ್ಸೇ ಸಿಕ್ಕೀತೆಂದರೆ ಕಥೆ ಮುಗಿಯಿತು! ಪುನರಪಿ ಜನನಂ ಪುನರಪಿ ಮರಣಂ...

ಈಗ ಮೆಜೆಸ್ಟಿಕ್ಕಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ತನ್ನ ಸ್ಥಾನವನ್ನು ಮೆಟ್ರೋಗೆ ಬಿಟ್ಟುಕೊಡುತ್ತಿರಲು ಮುಖ್ಯಕಾರಣಗಳು - (೧) ದೇಶದಲ್ಲಿ ಎಲ್ಲೆಡೆಯೂ ಇಪ್ಪತ್ತು ರೂಪಾಯಿ ನೋಟು ಚಲಾವಣೆಯಲ್ಲಿರುವುದು - ಮತ್ತು ಆ ನೋಟನ್ನು ಕೆ.ಎಸ್.ಆರ್.ಟಿ.ಸಿ.ಯವರೂ ಸಹ ಬಳಸುವುದು (೨) ಸೆಮಿ-ಡಿಲಕ್ಸ್ ಬಸ್ಸನ್ನು ಓಡಿಸುತ್ತಿರುವುದು. ಏನು ಮಾಡೋಕಾಗುತ್ತೆ ಈಗ - ಅನುಭವಿಸಲೇ ಬೇಕು. ಇವೆರಡೂ ಇಲ್ಲದಿದ್ದರೆ ಮೆಜೆಸ್ಟಿಕ್ಕಿನಲ್ಲೇ ಬಸ್ ನಿಲ್ದಾಣ ಉಳಿದುಕೊಳ್ಳುತ್ತಿತ್ತು!

ಇದನ್ನೆಲ್ಲ ಬರೆದು ಅಪ್‍ಲೋಡ್ ಮಾಡೋಕೆ ಸದ್ಯ ಇಂಟರ್ನೆಟ್ ಇದೆಯಲ್ಲಾ ಅಂತ ಸಂತೋಷ. ಸಮಾಧಾನವೆಂದರೆ ಬಿ.ಎಸ್.ಎನ್.ಎಲ್. ಇಲ್ಲವಲ್ಲ ಎನ್ನುವುದು!

-ಅ
16.12.2009
9.30PM

Thursday, December 10, 2009

ಗ್ರಹಣ

ಶಶಿಯ ಮೈಯ ತುಂಬ ಹಲವು ಕೊರತೆಭರಿತ ಕಪ್ಪಿನೊಲವು
ಒಂದು ದಿನದ ಚಿಕ್ಕ ಗೆಲುವು - ಅದುವೆ ರವಿಯ ಬೇಟೆಯು.
ಜಗಕೆ ಬೆಳಕನೀವ ರವಿಯ ಮೊಗಕೆ ಶಶಿಯ ಕೋಟೆಯು!

ಕತ್ತಲಿಗೆ ನೂರೆಂಟು ಕತೆ, ಬೆಳಕಿಗೊಂದು ತಮಸಿಗೊಂದು,
ಹುಟ್ಟಿಗೊಂದು ಸಾವಿಗೊಂದು - ಏನಿರುವುದಿದಕೆ ಕೊರತೆ?
ಸಾಸಿರವೇ ಮೀರಿದಷ್ಟು ಕತೆಗಳ ಹರಸ್ಥಿರತೆ!

ಕತೆಯ ಹೇಳುವವನ ಕಣ್ಣು ಸತ್ಯವನ್ನೆ ಕಂಡ ಹಣ್ಣು!
ಉಳಿದ ನಾಕವೆಲ್ಲ ಮಣ್ಣು - ತನ್ನ ದೃಷ್ಟಿ ಶಕ್ತಿಗೆ.
ಶಶಿಯ ಬೆಳಕೊ? ರವಿಯ ಬೆಳಕೊ? ಹೊಳೆವುದಿಲ್ಲ ಯುಕ್ತಿಗೆ.

ಸೂರ್ಯಚಂದಿರವೆರಡು ನಮ್ಮಲಿ
ಹೊನ್ನು ಮಣ್ಣುಗಳಂತೆ ಕೂಡಿರೆ
ಭಿನ್ನ ನೋಟಗಳನ್ನು ತೋರುತ
ಒಂದನೊಂದನು ಮೀರಿದೆ.
ಎದೆಯ ಪೃಥಿವಿಗೆ ಹಗಲು ಇರುಳನು
ತನ್ನ ಬಯಕೆಗಳಂತೆ ಕರುಣಿಸಿ
ಸೃಷ್ಟಿ ಸೊಬಗನು ಬೀರಿದೆ.

-ಅ
10.12.2009
11.10AM

Monday, December 7, 2009

ಪಾ

ಅಂತೂ ಏನೇನೋ ಪ್ರಯೋಗಗಳು ನಡೆಯುತ್ತಿದೆ ಚಿತ್ರರಂಗದಲ್ಲಿ. ಹೋದ ವರ್ಷ ಡಿಸ್ಲೆಕ್ಸಿಯಾ ಆಯಿತು, ಈಗ ಪ್ರೊಜೇರಿಯಾ. ಅಮಿತಾಭ್ ಬಚ್ಚನ್‍ಗಿಂತ ಒಳ್ಳೆಯ ನಟ ಇಂಥ ಪಾತ್ರಕ್ಕೆ ಎಲ್ಲಿ ಸಿಕ್ಕಾರು? ಏನೇ ಆಗಲೀ, ಎಲ್ಲದಕ್ಕೂ ಸೈ ಎನ್ನುವ ಅಮಿತಾಭ್ ಕಂಡರೆ ಅದಕ್ಕೇ ಎಲ್ಲರಿಗೂ ಅಷ್ಟು ಇಷ್ಟವಾಗುವುದು. ಐದು ನಿಮಿಷದ ಪಾತ್ರವಿರಲಿ, ಸುಮ್ಮನೆ ಹಿನ್ನೆಲೆ ಕಾಮೆಂಟರಿ ಇರಲಿ ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ಯಶಸ್ವಿಯಾಗಿ ನಡೆಸಿಕೊಡಬಲ್ಲ ತಾಕತ್ತು ಅಮಿತಾಭ್‍ಗೆ ಇರುವುದನ್ನು ನಾವೆಲ್ಲ ಅದೆಷ್ಟು ಸಲ ಪ್ರತ್ಯಕ್ಷ ಕಂಡಿಲ್ಲ?

ಪಾ-ನಲ್ಲಿ ಪ್ರೊಜೇರಿಯಾ ಜೊತೆ ಇನ್ನೂ ಎರಡು ಮೂರು ಪ್ರಕರಣಗಳು ಬೆರೆತುಕೊಂಡು ಸ್ವಲ್ಪ ಕಲಸು ಮೇಲೋಗರವಾದರೂ, ತಕ್ಕಮಟ್ಟಿಗೆ ಸುಲಭವಾಗಿ ನಿಭಾಯಿಸಿದ್ದಾರೆ ನಿರ್ದೇಶಕರು. ಮಾಧ್ಯಮದವರನ್ನು ಟೀಕೆ ಮಾಡುವ ರೀತಿಯ ದೃಶ್ಯವು ಬಿಸಿರಕ್ತದವರನ್ನು ನಿಜಕ್ಕೂ ಪುಲಕಿತಗೊಳ್ಳಿಸುತ್ತದೆ. ನನಗಂತೂ ಇಷ್ಟವಾಯಿತು. ಹಾಗೆಯೇ ಅಮಿತಾಭ್ ಬಚ್ಚನ್ ಚಿತ್ರದಲ್ಲಿ ಅರುಂಧತಿ ನಾಗ್‍ರನ್ನು ನೋಡಿ ವಿಶೇಷವಾದ ಸಂತೋಷವೂ ಆಯಿತು (ಹಿಂದೆ ಸ್ವದೇಸ್ ಚಿತ್ರದಲ್ಲಿ ಕಿಶೋರೀ ಬಲ್ಲಾಳ್‍ರನ್ನು ನೋಡಿದಾಗ ಆದ ಸಂತೋಷದಂತೆಯೇ) - ಎಷ್ಟು natural ಆಗಿ ನಟಿಸುತ್ತಾರಲ್ಲಾ ಎಂದು ಹುಬ್ಬೇರಿಸುವಂತೆಯೂ ಆಯಿತು ಎಂದು ಹೇಳಬೇಕಿಲ್ಲ.ಆರಂಭದ ಕೆಲವು ಕಾಲ ಡಾಕ್ಯುಮೆಂಟರಿಯಂತೆ ತೋರುವ ಪಾ ಶಾಲಾ ಮಕ್ಕಳ ಸಂಭಾಷಣೆಗಳಲ್ಲಿ ಕಮರ್ಷಿಯಲ್ ಚಲನ ಚಿತ್ರದ ಛಾಪನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾಗಿದೆ. ಮಕ್ಕಳಂತೂ ಅದ್ಭುತ!! ಮಕ್ಕಳೆಲ್ಲ ಥಿಯೇಟರಿಗೆ ಬರುತ್ತಾರೆಂದೇ ಕೆಲವು ಡೈಲಾಗುಗಳನ್ನೂ ಮಕ್ಕಳಿಗಾಗಿಯೇ ಮಾಡಿದ್ದಾರೆಂಬುದು ಗೋಚರಿಸುತ್ತೆ. ಎಂ.ಪಿ.ಯಾದವನು ಸ್ಪೈಡರ್ ಮ್ಯಾನ್ ಬಗ್ಗೆ ಮಾತನಾಡುವುದು ಸ್ವಲ್ಪ ಭಿನ್ನವಾಗಿದೆ. ರಾಜಕೀಯ ಆದರ್ಶಗಳು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಚಲನಚಿತ್ರದಲ್ಲಾದರೂ ಆದರ್ಶವಾದಿಗಳಿದ್ದಾರಲ್ಲ ಎಂಬ ಸಮಾಧಾನವು, ಮತ್ತು "ಮತ್ತೊಮ್ಮೆ ಗಂಗೆಯು ಹರಿದು ಬರುವುದು.." ಎಂಬ ನಂಬಿಕೆಯನ್ನೂ ಮೂಡಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ ಪಾ ಚಿತ್ರದಲ್ಲಿ.
ಜೊತೆಗೆ ಒಂದೇ ಹಾಡಿನಲ್ಲಿ ಫ್ಲಾಶ್‍ಬ್ಯಾಕ್‍ನ ಮುಕ್ಕಾಲು ಭಾಗಕ್ಕೂ ಹೆಚ್ಚು ಮುಗಿಸಿ ಗೋಳನ್ನು ಬದಿಗಿಟ್ಟು ವಾಸ್ತವವನ್ನು ಚೆನ್ನಾಗಿ ಪ್ರದರ್ಶಿಸಿದ್ದಾರೆ. ವಿದ್ಯಾ ಬಾಲನ್‍ರಂಥವರ ಚೆಲುವೆಯಿರುವಾಗ ಗೋಳಿಗೆ ಹೆಚ್ಚು ಸ್ಥಳವಿರುವುದಿಲ್ಲವಷ್ಟೆ? ಪಾಪ, ಗೋಳಾದರೂ ಚೆನ್ನಾಗಿ ನಡೆಸುತ್ತೆ ಅದು. ;-) ಪಾರೇಶ್ ರಾವಲ್‍ಗೆ ಮಾತ್ರ ಎಲ್ಲ ಚಿತ್ರಗಳಲ್ಲಿಯೂ ತಮಗೆ ಹೇಳಿ ಮಾಡಿಸಿದ ಪಾತ್ರ ಸಿಕ್ಕುವುದು ಅವರ ಭಾಗ್ಯವೋ ನೋಡುಗರ ಭಾಗ್ಯವೋ ಗೊತ್ತಿಲ್ಲ! ಇಳೆಯರಾಜರಂಥ ಜೀನಿಯಸ್‍ರ ಸಂಗೀತವೂ ಸಹ ಕ್ಲೀಷೆಯಾಗಬಲ್ಲುದು ಎಂಬುದು ಪಾ-‍ನಲ್ಲಿ ತಿಳಿದುಬರುತ್ತೆ. "ನಗುವ, ನಯನ..." ಈ ಸ್ವರಸಂಯೋಜನೆಯು ಇಳೆಯರಾಜರಿಗೆ ಅದೆಷ್ಟು ಇಷ್ಟವೆಂಬುದನ್ನು ಗಮನಿಸಬಹುದು.

ಇವೆಲ್ಲಾ ಏನೇ ಇರಲಿ, ಇಡೀ ಚಿತ್ರವನ್ನು ಆಳುವುದು ಅಮಿತಾಭ್‍ರ ವಿಭಿನ್ನ, ವಿಶೇಷ ವೇಷ ಭೂಷಣ - ಮತ್ತು ಅದನ್ನು ಅವರು ಬಳಸಿಕೊಂಡು ನಟಿಸಿರುವ ಸೊಗಸಾದ ರೀತಿ. ಕಾಯಿಲೆಯಿಂದ ನರಳುವ, ಕ್ಲೈಮ್ಯಾಕ್ಸಿನಲ್ಲಿ ಕೊನೆಯುಸಿರೆಳೆಯುವ ಅಮಿತಾಭ್‍ರನ್ನು ಪರದೆಯ ಮೇಲೆ ಎಷ್ಟೊಂದು ಸಲ ನೋಡಿದ್ದೇವೆ - ಆದರೆ ಹದಿಮೂರು ವರ್ಷದ ಅಮಿತಾಭ್‍ರನ್ನು ಇದೇ ಮೊದಲ ಬಾರಿಗೆ ನೋಡಿದ್ದು. ಚೆನ್ನಾಗಿತ್ತು ಅನುಭವ. ಕೊನೆಯಲ್ಲಿ ಸ್ವಲ್ಪ "ಎಳೆದಂತೆ" ಅನ್ನಿಸಿದರೂ ಸಹ, ಒಟ್ಟಾರೆ ಒಳ್ಳೆಯ ಚಿತ್ರವನ್ನು, ಸದಭಿರುಚಿಯ ಚಿತ್ರವನ್ನು ಕೊಟ್ಟಿದ್ದಾರೆ.

ನನ್ನ ಪಾಲಿಗೆ ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ, ಮತ್ತೊಂದು ಇದು, ಮಗದೊಂದು ಅದು - ಈ ಚಿತ್ರ ನೋಡಿ ತಲೆಕೆಟ್ಟಿದ್ದಕ್ಕೆ ಪಾ ಚಿತ್ರವು ಒಳ್ಳೆಯ ಔಷಧಿಯಂತಿತ್ತು.

-ಅ
07.12.2009
11AM