Wednesday, December 8, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆಪ್ರಶ್ನೆ ೧. ವಿಷಯ ಏನು?

ಉ. ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ

ಪ್ರಶ್ನೆ ೨. ಸ್ಪರ್ಧೆಯಲ್ಲಿ ಯಾರು ಪಾಲ್ಗೊಳ್ಳಬಹುದು?

ಉ. ಕಾಲೇಜು ವಿದಾರ್ಥಿಗಳು.

ಪ್ರಶ್ನೆ ೩. ಎಷ್ಟು ಬರೆಯಬೇಕು?

ಉ. ಎರಡು ಸಾವಿರ ಪದಗಳನ್ನು ಮೀರದಷ್ಟು.

ಪ್ರಶ್ನೆ ೪. ಎಲ್ಲಿ (ಜಾಗ), ಹೇಗೆ (ರೀತಿ) ಬರೆಯಬೇಕು?

ಉ. ಎಲ್ಲಾದರೂ ಬರೆಯಬಹುದು. ನೋಡಲಷ್ಟೇ ಅಂದವಾದ ಬರವಣಿಗೆಗೆ ವಿಶೇಷ ಅಂಕಗಳೇನೂ ಇರುವುದಿಲ್ಲ. ಪುಟದ ಎರಡೂ ಬದಿಯನ್ನು ಬಳಸಿಕೊಳ್ಳಬಹುದು. ಕಾಗದದ ಉಳಿತಾಯ ಮಾಡಬಹುದಾದರೆ ಟೈಪ್ ಮಾಡಿ, ಈಮೇಯ್ಲ್ ಮಾಡಬಹುದು.

ಪ್ರಶ್ನೆ ೫. ಎರಡು ಸಾವಿರ ಪದಗಳನ್ನು ಮೀರದ ಪ್ರಬಂಧವನ್ನು ಎಲ್ಲಿಗೆ ಕಳುಹಿಸಬೇಕು?

ಉ. ’ಪ್ರಣತಿ’ಯ ವಿಳಾಸಕ್ಕೆ. ಅಂದರೆ, ನಂ 448/A, 8ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ತರಾಸು ರಸ್ತೆ, ಹನುಮಂತನಗರ, ಬೆಂಗಳೂರು 560019

ಪ್ರಶ್ನೆ ೬. ಕಾಗದದ ಬಳಕೆ ಮಾಡದವರು ಎಲ್ಲಿಗೆ ಕಳುಹಿಸಬೇಕು?

ಉ. prabandha@pranati.in - ಈ ಈಮೇಯ್ಲ್ ವಿಳಾಸಕ್ಕೆ ಕಳುಹಿಸಬೇಕು.

ಪ್ರಶ್ನೆ ೭. ಪ್ರಬಂಧವನ್ನು ಮಾತ್ರ ಕಳುಹಿಸಿದರೆ ಸಾಕೇ?

ಉ. ಸಾಲದು. ಪ್ರಬಂಧದ ಜೊತೆಗೆ ಕಾಲೇಜಿನ ಗುರುತಿನ ಚೀಟಿಯ ಒಂದು ಪ್ರತಿಯನ್ನು ಲಗತ್ತಿಸಬೇಕು. ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಇರುವ ಒಂದು ಪತ್ರವನ್ನು ಲಗತ್ತಿಸಬಹುದು.

ಪ್ರಶ್ನೆ ೮. ಈ ಪ್ರಬಂಧವನ್ನು ಬರೆದು ಕಳುಹಿಸಲು ಎಷ್ಟು ಕಾಲಾವಕಾಶ ಇದೆ?

ಉ. ಡಿಸೆಂಬರ್ 30ರ ಮಧ್ಯರಾತ್ರಿಯವರೆಗೂ ಇದೆ.

ಪ್ರಶ್ನೆ ೯. ಇವಿಷ್ಟು ಮಾಹಿತಿ ಸಾಲದೇ, ಇನ್ನಷ್ಟು ಬೇಕಿದ್ದರೆ?

ಉ. ಕರೆ ಮಾಡಬಹುದು ಈ ಸಂಖ್ಯೆಗಳಿಗೆ - 9980022548 ಅಥವಾ 9611458698. ವೆಬ್‍ಸೈಟ್‍ ವಿಳಾಸ - www.pranati.in

ಪ್ರಶ್ನೆ ೧೦. ನಮ್ಮ ಸ್ನೇಹಿತರಿಗೆ ತಿಳಿಸಬಹುದೇ?

ಉ. ಅದು ನಿಮ್ಮ ಕರ್ತವ್ಯ. ;-)

-ಅ
08.12.2010
7.45 PM

Thursday, November 18, 2010

ಸತ್

ಅಪರಿಚಿತ ಹಿರಿಯರೊಬ್ಬರ ಕಾಲು
ಅಕಸ್ಮಾತ್ ತಾಕಿತು ಬಸ್ಸಲ್ಲಿ.
ಕಣ್ಗೊತ್ತಿಕೊಂಡೆವು ಇಬ್ಬರೂ, ಕಾಲ್ಮುಟ್ಟಿ.
ಪಾಪ ಪರಿಹಾರವಾಯಿತು.

ಬಲಗೈಯಲ್ಲಿ ಪೆನ್ಸಿಲ್ ಹಿಡಿದಿದ್ದ
ಒಂದನೇ ತರಗತಿಯ ಮಗುವೊಂದು
correction-ಗೆಂದು
ಪುಸ್ತಕವನ್ನು ಎಡಗೈಯಲ್ಲಿ ಕೊಡುವಾಗ,
ಬಲಗೈಯ ಬೆರಳೊಂದು ಸೋಕಿತ್ತು ಪುಸ್ತಕಕ್ಕೆ.
ಪುಸ್ತಕವು ಸುರಕ್ಷಿತವಾಯಿತು.

ಮೂರು ರಸ್ತೆ ಸೇರುವೆಡೆ ಬಿದ್ದಿದ್ದ
ಮೂರು ಮೆಣಸಿನಕಾಯಿ ಮತ್ತೊಂದು ನಿಂಬೆ ಹಣ್ಣನ್ನು
ಒದೆಯುವುದರಲ್ಲಿದ್ದೆ.
ಎಚ್ಚರದಿ ನೋಡಿ ದಾಟಿಬಿಟ್ಟೆ.
ಬಡಜೀವ ಬದುಕಿಕೊಂಡಿತು.

ಅತ್ತೆಮನೆಯ ಮೊದಲ ಹಬ್ಬದ ಊಟ ಮುಗಿದಿತ್ತು.
ತನ್ನೆಲೆಯ ತುದಿಯಲ್ಲಿ ಉಳಿದಿದ್ದ ಉಪ್ಪನ್ನು
ನೀರಲ್ಲಿ ಕರಗಿಸಿಬಿಟ್ಟಳು ನನ್ನತ್ತೆಯ ಮಗಳು.
ಋಣಮುಕ್ತಳಾದಳು.

-ಅ
18.11.2010
4.40PM

Monday, October 18, 2010

ಅಭ್ಯಾಸಬಲ

ಒಂದು ವರ್ಷದ ಅಭ್ಯಾಸ.

ತಂಪು ಮೈಯನ್ನು ಬೆಚ್ಚಗೆ ಸ್ಪರ್ಶಿಸುತ್ತ
ವರ್ತುಲ ರಸ್ತೆಯಲ್ಲಿ
ಸೂರ್ಯನ ಸ್ವಾಗತ.

ಹಸುರನ್ನೇ ಕಾಣದ,
ಕೆಂಪಿಗೆ ನಿಲ್ಲಿಸದ
ರಾಯರ ಮಠದ ಎದುರಿನ ಸಿಗ್ನಲ್ಲು.

"ಯು" ತಿರುವಿನಲ್ಲಿ ಲಾರಿಗಳ ಗುಂಪಿನ ಮಧ್ಯೆ
ಸೂರ್ಯನ ಜೊತೆಗೇ ಉದಿಸಿದ
ಹಣ ಎಣಿಸುವ ಶ್ವೇತಾಂಗಿಗಳು.

ಪಾಠದ ಮನೆಯಲ್ಲಿ
ಕೆನೆಭರಿತ,
ಮುಸಲ್ಮಾನ ಮಸಾಲೆ ಚಹಾ.

ಆ ಮನೆಯ ಬಾಗಿಲ ಮುಂದೆ
ಎಂದೂ ಏನನ್ನೂ ಸ್ವೀಕರಿಸದ,
ಮುದ್ದು ಸಹ ಗೊತ್ತಿಲ್ಲದ,
ಜನ್ಮ ಜನ್ಮಾಂತರದ ಪ್ರೀತಿಯನ್ನು
ಬಾಲದಲ್ಲಿ ತೋರಿಸುವ ಕಪ್ಪು ನಾಯಿ.

ಖಾಲಿ ರಸ್ತೆಯಲ್ಲಿ
ದಿಡೀರ್ ಪ್ರತ್ಯಕ್ಷವಾಗುವ ಸಣ್ಣ ಹಂಪು,
ಹಾರಿಸಿದಾಗ ಕೇಳಿಸುವ
ಬೈಕಿನ ಶಾಪ.

ಈ ದಿನವೆಲ್ಲಾ ಸಪ್ಪೆ -

ಇಂದೇಕೋ ಆ
ಸಿಡುಕು ಮೂತಿಯ,
ಸೊಟ್ಟ ಮೋರೆಯ,
ಉದ್ದ ದೇಹದ ವಾಯುವಿಹಾರಿಯು
ಚೆಕ್‍ಪೋಸ್ಟಿನ ಎದುರು ಕಾಣಲೇ ಇಲ್ಲ.

-ಅ
12.10.2010
1PM

Friday, October 8, 2010

ಕನಸಿನ ಬಾಗಿಲಲ್ಲಿ

ಕನಸಿನ ಬಾಗಿಲ ತಟ್ಟುತ
ನಿಂತಿರುವೆಯಿದೇಕೆ?
ಬೀಗಗಳಿಲ್ಲದ,
ಚಿಲಕಗಳಿಲ್ಲದ
ತೆರೆದಿರುವ ಕದವ
ಹೊರಗಡೆಯಿಂದಲೆ
ತಟ್ಟುತ ನಿಂತಿರುವೆಯಿದೇಕೆ?
ಬಲಗಾಲೊಳು ಒಳ
ಬರಬಾರದು ಏಕೆ?

-ಅ
08.10.2010
9PM

Friday, September 24, 2010

ನಿನ್ನ ಕಣ್ಣುಗಳು

ನಿನ್ನೀ ಕಣ್ಣುಗಳನು ಹೊರೆತು
ನನಗಿನ್ನೇನಿದೆ ಜಗದಲ್ಲಿ?

ನೀ ಕಣ್ದೆರೆದರೆ ಅದೆ ಹಗಲು,
ನೀ ಕಣ್ಮುಚ್ಚಿದರದೆ ಇರುಳು.
ನನ್ನೀ ಉಳಿವಳಿವೆರಡೂ ಎಂದೂ
ಈ ಎರಡು ಚಣದಲಡಗಿಹುದು.

ಸಂತಸದಾ ತೊರೆ, ನಗು ಮುಖವು,
ಕನಸಿನ ಲೋಕವೆ ಕಟ್ಟಿಹೆನು -
ನಿನ್ನೀ ಕಣ್ಣುಗಳಾ ಹಾದಿಯಲಿ
ನನ್ನೀ ಉಳಿವಳಿವಡಗಿಹುದು.

ನಾಳೆಯ ಕನ್ನಡಿ, ತಿಳಿ ಬಿಂಬ,
ಕಂಗಳ ಹೊಳಪಲಿ ಬೆಳಗುತಿದೆ.
ಕಾಡಿಗೆಯಿಂದಲೆ ನಿಯತಿಯ ಬರೆದಿರೆ
ಬಾಳಿನ ತಾರೆಯು ಮಿನುಗುತಿದೆ.

ಮಜ್ರೂಹ್ ಸುಲ್ತಾನ್ಪುರಿಯವರಿಗೆ ವಂದನೆಗಳು.

-ಅ
24.09.2010
10PM

Wednesday, September 15, 2010

ಬೀದಿ ನಾಯಿಗಳ ಜೊತೆ..

"ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ನನ್ನ ಗಾಡಿಯನ್ನು ಅಟ್ಟಿಸಿಕೊಂಡು ಬಂದ ರಾಕ್ಷಸ ನಾಯಿಗಳರೆಡನ್ನೂ ಘೋರವಾಗಿ ಶಪಿಸಿದೆ. "ಇವತ್ತೇ ನನ್ನ ಈಮೇಯ್ಲ್ ಐಡಿಯನ್ನು (ಜೊತೆಗೆ ಎಲ್ಲೆಲ್ಲಿ "ಪರಿಸರಪ್ರೇಮ"ದ ಬಗ್ಗೆ ನಾನು ಬರೆದುಕೊಂಡಿದ್ದೇನೋ ಅದೆಲ್ಲವನ್ನೂ) ಬದಲಾಯಿಸಿಕೊಂಡು ಬಿಡುತ್ತೇನೆ - ಈ ಪರಿಸರಪ್ರೇಮವೆಲ್ಲ ಬರೀ ಸುಳ್ಳು." ಎಂದು ಭೀಷ್ಮಪ್ರತಿಜ್ಞೆ ಮಾಡಿ ಎಷ್ಟೋ ಹೊತ್ತಾದ ಮೇಲೆ ಕಾಲು ನಡುಕ ನಿಂತಿತು. ಆ ಕಾಲು ಆ ರಾಕ್ಷಸರ ಬಾಯನ್ನು ಹೊಗಬೇಕಾಗಿತ್ತು ನಾನು ಎಚ್ಚರ ತಪ್ಪಿದ್ದಿದ್ದರೆ! ಸಾಮಾನ್ಯವಾಗಿ ರಸ್ತೆಯಲ್ಲಿ ನಾನು ಹಾಗೆಲ್ಲ ಯಾರನ್ನೂ ಯಾವುದನ್ನೂ ಶಪಿಸುವುದಿಲ್ಲ - ಅಲ್ಲಲ್ಲಿ ಉಗುಳುವವರನ್ನು ಹೊರೆತು. ಆದರೆ ಈ ಸೈನೋಫೋಬಿಯಾ (ನಾಯಿಗಳ ಭಯ) ಹೀಗೆ ಶಾಪ ಹಾಕಿಸಿಬಿಟ್ಟಿತು.

ಬನಶಂಕರಿ ಸೆಕೆಂಡ್ ಸ್ಟೇಜಿನ ನಮ್ಮ ಮನೆಯ ಸುತ್ತ ಮುತ್ತ ಬರಿ ಪೊದೆಗಳು, ಗುಡ್ಡಗಳಿದ್ದವು. ಪಕ್ಕದಲ್ಲಿಯೇ ಪಾರ್ಥೇನಿಯಮ್ ಆವರಿಸಿಕೊಂಡ ಒಂದು ಕಾಲುದಾರಿಯು ಇತ್ತು. ನೇರ ತ್ಯಾಗರಾಜನಗರದ ಸಂದಿಯೊಂದಕ್ಕೆ ಹತ್ತಿರದ ದಾರಿ ಅದಾಗಿದ್ದರೂ, ಆ ಹಾದಿಯಲ್ಲಿ ಪಾರ್ಥೇನಿಯಮ್ ಕಾಡಿನಲ್ಲೇ ಸ್ಲಮ್ ಒಂದು ಮನೆ ಮಾಡಿಕೊಂಡಿದ್ದರಿಂದ ನಾವು ಬಳಸುದಾರಿಯನ್ನೇ ಹಿಡಿಯುತ್ತಿದ್ದೆವು. ಇನ್ನೂ ಸ್ಕೂಲು ಹುಡುಗನಾಗಿದ್ದರಿಂದ ಟಯರ್ ಓಡಿಸುವ ಹವ್ಯಾಸದೊಂದಿಗೆ ನನಗೆ ಲೇಬಲ್ ಬಾಜಿ ಕಟ್ಟಿ ಬಚ್ಚಾ ಆಡುವ ಹವ್ಯಾಸವೂ ಇತ್ತು. ಈ ಎರಡೂ ಹವ್ಯಾಸವೂ ಅದೊಂದು ದಿನ ಕೊನೆಯಾಗಲು ಆ ಸ್ಲಮ್ಮೇ ಕಾರಣವಾಗಿತ್ತು. ಲೇಬಲ್ ಕೊಂಡುಕೊಂಡು ಟಯರ್ ಓಡಿಸಿಕೊಂಡು ಆ ಸ್ಲಮ್ ಮುಂದಿನ ಕಾಲುದಾರಿಯಲ್ಲಿ ಬರುತ್ತಿದ್ದಾಗ ಅಟ್ಟಿಸಿಕೊಂಡು ಬಂದ ನಾಯಿ ಕಚ್ಚಲಿಲ್ಲವಾದರೂ ಗಾಬರಿಯಿಂದ ಓಡಿ ನಾನು ಬಿದ್ದಾಗ ಸೊಂಟದ ಮೇಲೆ ಆದ ಗಾಯದ ಗುರುತು ಈಗಲೂ ಉಳಿದುಬಿಟ್ಟಿದೆ. ಅಂದಿನಿಂದ ಕೆಲ ಕಾಲ ಸೈನೋಫೋಬಿಯಾ ನನ್ನನ್ನಾವರಿಸಿತ್ತು.

ಈ ಸೈನೋಫೋಬಿಯಾ ಹೆಚ್ಚು ಕಾಲ ಇರಲಿಲ್ಲ. ಶ್ರೀನಗರದ ಮನೆಯ ಪಕ್ಕದ ರಸ್ತೆಯಲ್ಲಿದ್ದ ಖತರ್ನಾಕ್ ನಾಯಿ ಜೋಡಿಯ ಸೈಕಾಲಜಿಯನ್ನು ಅದು ಹೇಗೋ ಅರ್ಥ ಮಾಡಿಕೊಂಡಿದ್ದೆ. ಸೈಕಲ್ ಮೇಲೆ ಹೋದೆನೆಂದರೆ ಮುಗಿಯಿತು, ತಮ್ಮ ಆಸ್ತಿ ಕಿತ್ತುಕೊಂಡವರಂತೆ ಕಾಲಿಗೆ ಬಾಯಿ ಹಾಕಲು ಬಂದು ಬಿಡುತ್ತಿದ್ದವು. ಹಾಗಾಗಿ ಅದರ ಹತ್ತಿರ ಬಂದೆನೆಂದರೆ ಸೈಕಲ್‍ನಿಂದ ಇಳಿದು ನಡೆದುಕೊಂಡು ಹೋದಾಗ ಸುಮ್ಮನಿರುತ್ತಿತ್ತು. ಚಲಿಸುವ ಪೆಡಲ್‍ಗಳೆಂದರೆ ಇವಕ್ಕೆ ದ್ವೇಷ. ಇವುಗಳ ಮೇಲೆ ನನಗೇನೂ ದ್ವೇಷವಿರಲಿಲ್ಲವಾದರೂ ಭೀತಿಯಿತ್ತು.

ನಾಯಿಗೆ ನೀಯತ್ತು ಎಂದು ಅದ್ಯಾರು ಹೇಳಿದರೋ ಅವರಿಗೆ ಬೀದಿ ನಾಯಿಗಳ ಅನುಭವವಿಲ್ಲವೆನಿಸುತ್ತೆ. ಸಾಕಿರುವ ನಾಯಿಯಾದರೋ ಬೇರೆ ವಿಧಿಯಿಲ್ಲದೆ ಮನೆಯ ಯಜಮಾನ ಹಾಕಿದ್ದನ್ನು ತಿಂದುಕೊಂಡಿರುತ್ತೆ. ಇಷ್ಟಕ್ಕೂ ಅವೇನೂ ಮನೆಯನ್ನು ಕಾಯಬೇಕೆಂದು ಸಂಕಲ್ಪ ಮಾಡಿರುವುದೇನಿಲ್ಲ. ತನ್ನ ಟೆರಿಟರಿಯೊಳಗೆ ಹೊಸಬರು (ವಿಶೇಷವಾಗಿ ಇತರ ನಾಯಿಗಳು) ಬರಬಾರದೆಂದು ತನ್ನನ್ನು ತಾನು ಕಾದುಕೊಂಡಿರುತ್ತೆ. ಸುಮ್ಮನೆ ಕವಿಗಳು ಕೋಗಿಲೆಯನ್ನು, ನವಿಲನ್ನು ಹೊಗಳುವಂತೆ ನಾಯಿಯನ್ನೂ ಸಹ ಅದಕ್ಕೆ ಇಲ್ಲದ ಗುಣಗಳನ್ನೆಲ್ಲಾ ಆರೋಪಿಸಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿದ್ದಾಗ ಒಂದು ಕೃತಘ್ನ ನಾಯಿಯ ಮೇಲೆ ಕಿಡಿ ಕಾರಿದ್ದೆ. ಮನೆಯ ಮುಂದೆ ಬಾಲ ಅಲ್ಲಾಡಿಸಿಕೊಂಡು ಬಂದಾಗಲೆಲ್ಲವೂ ಹುಳಿಯನ್ನ, ಮೊಸರನ್ನ, ಬ್ರೆಡ್ಡು - ಏನೇನು ಇದೆಯೋ ಎಲ್ಲವನ್ನೂ ಕೊಡುತ್ತಿದ್ದೆ. ಎಲ್ಲವೂ ಹಾವಿಗೆ ಹಾಲೆರದಂತೆ. ನನ್ನ ಉದ್ದೇಶವೂ ಸ್ವಾರ್ಥವಾದ್ದರಿಂದಲೋ ಏನೋ ನಾನು ಅದರ ಮನೆಯ ಮುಂದೆ ಹೋದಾಗ ತಪ್ಪದೆ ನನ್ನನ್ನು ಕಳ್ಳನಂತೆ ಅಟ್ಟಿಸಿಕೊಂಡು ಬರುತ್ತಿತ್ತು. ನಮ್ಮ ಮನೆಯ ಮುಂದೆ ಅದು ಬಂದಾಗ ಮಾತ್ರ ನನ್ನ ಸೇವಕನಂತೆ ಬಾಲ ಅಲ್ಲಾಡಿಸಿಕೊಂಡಿರುತ್ತಿತ್ತು.

ಈಗಿರುವ ಹನುಮಂತನಗರದ ಮನೆಯ ಬಳಿ ಇರುವ ನಾಲ್ಕು ಬೀದಿ ನಾಯಿಗಳಿಗೆ ಕರುಣೆಯೆಂಬುದೇ ಇಲ್ಲ. ಪಾಪ, ಸ್ಕೂಲು ಹುಡುಗನೊಬ್ಬ ಸೈಕಲ್‍ನಿಂದ ಧೊಪ್ಪನೆ ಕೆಳಗೆ ಬಿದ್ದ. ಮಲಗಿದ್ದ ಒಂದು ನಾಯಿಗೆ ನಿದ್ರಾಭಂಗವಾಯಿತೇನೊ, ಅಥವಾ ಕೆಟ್ಟ ಕನಸಾಯಿತೇನೊ, "ಭೌ" ಎಂದಿತು. ಮಿಕ್ಕ ನಾಯಿಗಳೂ ಸಹ ನಿದ್ದೆಗಣ್ಣಲ್ಲಿದ್ದಿದ್ದರಿಂದ ಪೂರ್ವಾಪರ ವಿಚಾರಿಸದೆ ಒಂದಾದ ಮೇಲೊಂದು "ಭೌ" ಎನ್ನಲು ಶುರು ಮಾಡಿದವು. ಇಲ್ಲವಾದರೂ ತಾವು ಯಾಕೆ ಬೊಗಳುತ್ತಿದ್ದೇವೆಂಬ ಅರಿವು ಅವಕ್ಕೇನಿರುವುದಿಲ್ಲ. ಬೊಗಳಲು ಅತ್ಯಂತ ಮುಖ್ಯ ಕಾರಣವೆಂದರೆ ತನ್ನ ಪಕ್ಕದಲ್ಲಿರುವ ನಾಯಿಯು ಬೊಗಳುತ್ತಿರುವುದು. ಹೀಗೆ ಭೌಗುಟ್ಟು ಆ ಬಿದ್ದ ಹುಡುಗನ ಮೇಲೆ ದಾಳಿ ಮಾಡಲು ಸಜ್ಜಾದವು. ಅವನು ಮೊದಲೇ ಮೈ ಕೈ ತರಚಿಕೊಂಡು ಕಣ್ಣು ತುಂಬಿಸಿಕೊಂಡಿದ್ದ. ಇನ್ನು ನಾಯಿಗಳೂ ತನ್ನ ಬಳಿ ಬಂದಾಗ ಏನೂ ತೋಚಲಿಲ್ಲ. ರಸ್ತೆಯಲ್ಲಿ ಬರುತ್ತಿದ್ದ ಒಂದಿಬ್ಬರು ನಾಯಿಗಳನ್ನು ಗದರಿಸಿ ಓಡಿಸಿದರು. ಬಡಪಾಯಿ ಹುಡುಗ ಬದುಕಿಕೊಂಡ.

ಬೀದಿ ನಾಯಿಗಳು ಚಿಕ್ಕ ಮಕ್ಕಳನ್ನು ಕೊಂದ ಸುದ್ದಿಗಳು ಈ ಎರಡು ಮೂರು ವರ್ಷಗಳಿಂದ ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡುತ್ತಲೇ ಇದ್ದೇವಷ್ಟೆ? ಕೊಲ್ಲುವಷ್ಟು ಕ್ರೂರವಾಗಬೇಕಾದರೆ ಆ ನಾಯಿಗಳ ಸ್ಥಿತಿ ಹೇಗಿರಬೇಕೆಂದು ಯೋಚಿಸಬೇಕಾಗುತ್ತೆ. ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದ "ವ್ಯಾನು"ಗಳು ಮೊದಲು ಅವುಗಳನ್ನು ಸಜೀವ ದಹನ ಮಾಡಿಬಿಡುತ್ತಿದ್ದರು. ಈಗ ಹಾಗೆ ಮಾಡದೆ ಅವುಗಳನ್ನು "ಸ್ಟರಿಲೈಜ಼್" ಮಾಡಿಬಿಡುತ್ತಾರೆ. ಹಾಗೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಕಿವಿಗೊಂದು "ಪಂಚ್" ಕೂಡ ಇರುತ್ತದೆ. ಹೀಗೆ ಇಷ್ಟವಿಲ್ಲದೇ ಸನ್ಯಾಸವನ್ನು ಹೇರಿಸಿಕೊಂಡ ನಾಯಿಗಳು ಮದಕ್ಕೆ ಬಂದಾಗ ಅವುಗಳಿಂದ ಏನೇನು ಅನಾಹುತಗಳಾಗುವುದೋ ಬಲ್ಲವರು ಯಾರು?

ಇದೇ ರೀತಿಯ ಅನಾಹುತಕ್ಕೆ ಶಾಲೆಗೆ ಹೊರಟಿದ್ದ ನಾನೂ ಸಿಲುಕಿಕೊಂಡೆನೇನೋ ಎಂದೆನಿಸಿತ್ತು ಮೊನ್ನೆ ಶಾಪ ಹಾಕಿದ ದಿನ. ಅಷ್ಟು ಎತ್ತರದ ನಾಯಿಗಳು. ರಾಕ್ಷಸಾಕಾರ! ರಾವಣ ಕುಂಭಕರ್ಣರಿಬ್ಬರೂ ಒಟ್ಟಿಗೇ ಅಟ್ಟಿಸಿಕೊಂಡು ಬಂದಂತಾಗಿ ಕಾಲು ನಡುಗಲು ಶುರುವಾಗಿ ಬೈಕಿನ ಬ್ರೇಕು ಎಲ್ಲಿದೆಯೋ ಅದೂ ಸಹ ತಿಳಿಯದಾಯಿತು. ಸಾಮಾನ್ಯವಾಗಿ ನಾಯಿ ಅಟ್ಟಿಸಿಕೊಂಡು ಬಂದರೆ ನಾನು ಗಾಡಿ ನಿಲ್ಲಿಸಿಬಿಡುತ್ತೇನೆ. ಕಚ್ಚಿದರೆ ಕಚ್ಚಿಕೊಳ್ಳಿ ಎಂದು. ಗಾಡಿ ನಿಲ್ಲಿಸದೇ ಇದ್ದು, ಒಂದು ವೇಳೆ ಅವುಗಳ ಗರಗಸದ ಬಾಯಿಗೆ ನನ್ನ ಕಾಲು ಸಿಕ್ಕು, ಪ್ಯಾಂಟು ಹರಿದು, ರಸ್ತೆಯಲ್ಲಿ ಬೀಳುವುದಕ್ಕಿಂತ ಗಾಡಿ ನಿಲ್ಲಿಸಿ, "ಬನ್ನಿ, ಕಚ್ಚಿ ಇಲ್ಲಿ" ಎಂದು ಆಹ್ವಾನಿಸುವುದೇ ಉತ್ತಮ ಎಂದು ನನ್ನ ಬಲವಾದ ನಂಬಿಕೆ. ಆದರೆ ಈ ಬಾರಿ ಮಾತ್ರ ನನ್ನ ನಂಬಿಕೆಯು ನನಗೆ ನೆನಪಾಗುವುದರೊಳಗೇ ನಡುಕ ಶುರುವಾಗಿಬಿಟ್ಟಿತು. ಗಾಡಿಯ ವೇಗವು ಹೆಚ್ಚಾಯಿತು. ಹೇಗೋ ಬದುಕಿಕೊಂಡೆಯೆನ್ನುವಷ್ಟರಲ್ಲಿ "ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ಶಪಿಸಿ, ಶಾಲೆಗೆ ಹೋಗಿ ಒಂದು ಬಾಟಲಿ ತಣ್ಣೀರು ಕುಡಿದು ಸುಧಾರಿಸಿಕೊಂಡೆ.

ಸಂಜೆ ಶಾಲೆ ಮುಗಿಸಿಕೊಂಡು ಆ ದಾರಿಯಲ್ಲಿ ಹೋಗುವುದೋ ಅಥವಾ ಬಳಸಾದರೂ ಪರವಾಗಿಲ್ಲ ಬೇರೆ ದಾರಿಯಲ್ಲಿ ಹೋಗಲೋ ಎಂದು ಯೋಚಿಸುತ್ತ, ಅಂತೂ ಧೈರ್ಯ ಮಾಡಿ, ಅದೇ ದಾರಿಯ ಕಡೆಗೆ ಬೈಕನ್ನು ತಿರುಗಿಸಿಬಿಟ್ಟೆ. ಸ್ವಲ್ಪ ದೂರದಲ್ಲೇ ರಸ್ತೆಯ ಎಡಬದಿಯಲ್ಲಿ ಒಂದು ಕರುಳುಗಳನ್ನು ಆಚೆ ಚೆಲ್ಲಿಕೊಂಡು ನಾಲಗೆಯನ್ನು ಹೊರಚಾಚಿಕೊಂಡು ಸತ್ತು ಬಿದ್ದಿತ್ತು. ಇನ್ನೊಂದು ರಸ್ತೆಯ ಬಲಬದಿಯಲ್ಲಿ ಅಪ್ಪಚ್ಚಿ ತಲೆಯಿಂದಾಚೆಗೆ ಕಣ್ಣು ಗುಡ್ಡೆಗಳೆರಡನ್ನೂ ಹೊರಕ್ಕೆ ಉಗುಳಿದಂತೆ ಸತ್ತು ಬಿದ್ದಿತ್ತು. ಎರಡು ಹೆಣಗಳ ಮುಖಗಳಲ್ಲೂ "ಗುರ್ರ್.." ಎಂಬ ಭಾವವು ಎದ್ದು ತೋರುತ್ತಿತ್ತು. ಶಾಪವು ಒಳ್ಳೆಯದಲ್ಲವೆಂದು ನನ್ನಂಥವನಿಗೆ ಯಾವಾಗ ಮನವರಿಕೆಯಾಗುವುದೋ ಏನೋ ಎಂದು ಬೇಸರವಾಯಿತು.

-ಅ
15.09.2010
8.15PM

Wednesday, August 25, 2010

ಮಲ್ಲೇಶ್ವರಮ್‍ನಲ್ಲಿ ಒಂದು ಘಟನೆ

"ಕೈ ಹಿಡಿದು ನಡೆಸೆನ್ನನು"
ಎಂದೊಬ್ಬಳಜ್ಜಿಯು
ಕೇಳಿದಳು ನನ್ನನ್ನು
ನಡೆಸಿದೆನು ಕೈ ಹಿಡಿದು ನಾನು.

ಮಲ್ಲೇಶನೂರಲ್ಲಿ,
ವಾಹನಗಳೆದುರಲ್ಲಿ,
ಕಾಲಿಡಲು ಸ್ಥಳವಿರದ ರಸ್ತೆಯಲ್ಲಿ,
ಬದಿಬದಿಯ ದಾಟುತಲೆ
ಮುಂದೊಮ್ಮೆ ಹಿಂದೊಮ್ಮೆ
ಕಂಗಾಲು ಅವ್ಯವಸ್ಥೆಯಲ್ಲಿ.
ಹಿರಿಯಜ್ಜಿ ಮುದಿಯವಸ್ಥೆಯಲ್ಲಿ.

"ಕೈ ಹಿಡಿದು ನಡೆಸೆನ್ನ"ನೆಂದಳಾ ಅಜ್ಜಿಯು
ಕೈ ಹಿಡಿದು ನಡೆಸಿದೆನು ನಾನು.

ನನ್ನ ಕೈ ಹಿಡಿಯುತ್ತ
ನಡಗುತ್ತ, ಗೊಣಗುತ್ತ
ಹೆಜ್ಜೆ ಹಾಕಿದಳವಳು ಒಂದೊಂದರಂತೆ.
ಗೂಡು ಸೇರಿದ ಹಕ್ಕಿ
ಹಾಡಿ ನಲಿಯುವ ತೆರದಿ
"ನೀನು ಸುಖದಲಿ ಬಾಳು,
ಓ ಪುಟ್ಟ ಕಂದ"
ಎಂದವಳ ದನಿಯಲ್ಲಿ ಇತ್ತು ಆನಂದ.

"ಕೈ ಹಿಡಿದು ನಡೆಸಿದೆನು"
ಎಂದು ನಾ ಹಿಗ್ಗುತಿರೆ
ನುಡಿಯುತ್ತಲಿಹರಾರು ಇದಕೆ ಮಿಡಿದು?
ಹಣ್ಣಜ್ಜಿ ಹಿರಿಯಜ್ಜಿ
ಹರಸಿರಲು ನನ್ನನ್ನು
ನಡೆಸುತ್ತಲಿಹರಾರು ಯಾರ ಕೈ ಹಿಡಿದು?

-ಅ
25.08.2010
12PM

Tuesday, August 17, 2010

ಅಂತರೀಕ್ಷಣೆ

ಕಣ್ಣಲಿ ಏನೋ ಧೂಳಿದೆ, ದಿಟ್ಟಿಯ
ಬಾಗಿಲು ಮುಚ್ಚುತಿದೆ.
ಎದುರಲೆ ಕಾಲನ ಘೀಳಿದೆ, ಕೇಳದೆ
ಅಹಮ್ಮು ಹೆಚ್ಚುತಿದೆ,
ಬದುಕೇ ಬೆಚ್ಚುತಿದೆ!

ಧೂಳಿನ ಶಪಥವು ಮುರಿಯಲು ಬಾಷ್ಪದ
ಮುತ್ತುಗಳುದುರುತಿವೆ.
ಮುತ್ತಿನ ದರ್ಪಣದಕ್ಷಯ ಹೊಳಪಲಿ
ಬಿಂಬವು ಚದರುತಿದೆ,
ಎದೆಯೋ ಬೆದರುತಿದೆ!

ಬಿಂಬದಿ ವರ್ಣದ ಕಿರಣಗಳೆಲ್ಲವು
ಒಂದನೆ ಹೇಳುತಿದೆ.
ತುಂಬಿದ ಮಡಕೆಯ ತೆರದಲಿ ಶಾಂತವು
ಜಂಭವ ಸೀಳುತಿದೆ,
ನಂಬುಗೆಯೇಳುತಿದೆ.

ಅಲೆಯುತ ಹೊಲೆಯಲಿ, ಕರೆಯುತ ಸೆರೆಯಲಿ
ಎಲ್ಲಿದ್ದೆನೊ ನಾನು?
ಧೂಳಿನ ಪರದೆಯ ಸರಿಸಲು ಹೃದಯದಿ
ಹುಟ್ಟಿರುವೆಯೊ ನೀನು,
ನೇಹವೆ ಸಿರಿಜೇನು!

-ಅ
17.08.2010
11 AM

Friday, August 13, 2010

ದೆಸೆ

ನನ್ನ ಸೂರ‍್ಯನಿಗೆ ಗೊತ್ತಿಲ್ಲ
ಗಿರಿಕಂದರಗಳು, ಕಡಲ ತೀರಗಳು.

ಪ್ರತಿನಿತ್ಯವೂ ಹಕ್ಕಿ ಗುಂಪನ್ನು
ತನ್ನೆಡೆಗೆ ಸೆಳೆಯುತ್ತ ಮುಳುಗುವನು,ನಿಜ.
ನನ್ನ ಪಯಣವೂ ಹಕ್ಕಿಗಳೊಡನೆಯೇ, ಹಕ್ಕಿಗಳಂತೆಯೇ!
ಹಕ್ಕಿಗಳೋ, ಪಶ್ಚಿಮದಿ ಕೆಂಪಿನೊಳಗೆ ಲೀನ.
ನಾನು ಮಾತ್ರ,
ಬೈಕಿನಲ್ಲಿ ಸೂರ‍್ಯನ ಸೇರುವ ಹಂಬಲ!

ಮುಳುಗುವ ಸೂರ‍್ಯನ ದಿಕ್ಕಿನದೆಷ್ಟು ಸೆಳೆತ!!
ನೈಸ್ ರೋಡಿನ ತುಟ್ಟ ತುದಿಯಲ್ಲಿ ಮುಳುಗಿಯೇ ಬಿಟ್ಟ ಸೂರ‍್ಯ.
ತಿರುವು ಬಂತು.
ಅಯ್ಯೋ, ಸೂರ‍್ಯನ ದಿಕ್ಕು ಇನ್ನಿಲ್ಲ!

ಎಲ್ಲಿ ಹೋಗುವನು?
ಇಂದು ಪಶ್ವಿಮದ ಸೆಳೆತ.
ನಾಳೆ ಅವನು ಹುಟ್ಟುವ ದಿಕ್ಕೇ ಆಸರೆ.
ಕುವೆಂಪು ನಗರದ ಫ್ಲೈ ಓವರಿನ ಮೇಲೆ ಹಾರುವಾಗ
ಶುಭೋದಯ ಹೇಳುವನು.
ಬೆಳಕ ನೀಡುವನು!

ಸ್ವಾತಂತ್ರ್ಯ ದಿನದ ಶುಭಾಶಯಗಳು.

-ಅ
13.08.2010
3.45PM

Monday, July 19, 2010

ವಿದಾಯ

ಅವನ ವೈಶಿಷ್ಟ್ಯವೇ ಅದು.

ಅಷ್ಟೇನೂ ಹತ್ತಿರದ ಗೆಳೆಯನೇನಲ್ಲವಾದರೂ ರಾತ್ರಿ ಹನ್ನೆರಡು ಗಂಟೆಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸುತ್ತಾನೆ. ಇದೇನಪ್ಪ, ಇವನು ಫೋನ್ ಮಾಡಿದ್ದಾನೆ ಎಂದು ಆಶ್ಚರ‍್ಯ ಪಡಲು ಅವಕಾಶವೂ ಕೊಡದೆ ತಾನೊಬ್ಬ ಅತಿ ಹತ್ತಿರದ ಸಂಬಂಧಿ ಎನ್ನುವಂತೆ ಮಾತನಾಡುತ್ತಾನೆ. ಮುಂದಿನ ವರ್ಷ ಫೋನೂ ಇಲ್ಲ, ಈಮೇಯ್ಲೂ ಇಲ್ಲ. ಎಲ್ಲೋ ನಾಪತ್ತೆ! ಮತ್ತೆ ಫ್ರೆಂಡ್‍ಶಿಪ್ ಡೇ-ಗೆ ಇದ್ದಕ್ಕಿದ್ದಂತೆ ಕರೆ ಮಾಡಿ "ನೀನು ಆವತ್ತು ಟ್ರೀಟ್ ಕೇಳಿದ್ದೆಯಲ್ಲ, ಬಾ ಕೊಡಿಸುತ್ತೇನೆ.." ಎನ್ನುತ್ತಾನೆ.

ಇಂಥದ್ದೊಂದು ದಿನ "ಸರಿ, ಆದರೆ ನಂಗೆ ಮಹಾಲಕ್ಷ್ಮಿ ಟಿಫನ್ ರೂಮಿನಲ್ಲೇ ಬೇಕು ಟ್ರೀಟು" ಎಂದಿದ್ದೆ. ಅವನೂ ಅದಕ್ಕೊಪ್ಪಿಕೊಂಡು ಅಲ್ಲಿಗೆ ಬರಲು ಹೇಳಿದ. ಅಲ್ಲಿಗೆ ಹೋದರೆ ಟ್ರೀಟಿಗೆ ಬೇರೆ ಯಾರೂ ಇಲ್ಲ. "ಅಲ್ಲಯ್ಯಾ, ಏನು ನಂಗೊಬ್ಬನಿಗೇ ಕೊಡಿಸುತ್ತೀಯಾ ಟ್ರೀಟು?" ಎಂದೆ. "ಇನ್ನೇನು ಊರೋರ್ನೆಲ್ಲಾ ಕರೀಲಾ?" ಎಂದ. ಅಲ್ಲಿ ಹೋಟೇಲಿನಲ್ಲಿ ಅವನು ಏನೂ ತೆಗೆದುಕೊಳ್ಳಲಿಲ್ಲ. "ನೀನು ದಡ್ಡ, ಮಹಾಲಕ್ಷ್ಮಿಗೆ ಬಂದು ದೋಸೆ ತಿನ್ನಲಿಲ್ಲ ಅಂದ್ರೆ... ಛೆ!" ಎಂದೆ. ನಾನೊಬ್ಬನೇ ಖಾಲಿ ದೋಸೆಯನ್ನು ಆರ್ಡರ್ ಮಾಡಿ ತರಿಸಿಕೊಂಡೆ. ಸುಮ್ಮನೆ ನಕ್ಕು ನನ್ನ ತಟ್ಟೆಯಿಂದ ಚಟ್ನಿಯನ್ನು ಒಂದು ಚಮಚದಲ್ಲಿ ತೆಗೆದುಕೊಂಡು ರುಚಿ ನೋಡಿದ. ಮಾಣಿಯನ್ನು ಕರೆದು ಒಂದು ಕಪ್ ಚಟ್ನಿ ತರಲು ಹೇಳಿ ಅದನ್ನು ಚಪ್ಪರಿಸಿದ! ನಂತರ ಡಿವಿಜಿ ರಸ್ತೆಯೆಲ್ಲಾ ಸುತ್ತಾಡಿ ಮನೆಗೆ ಹೋದ ಮೇಲೆ ತಿಂಗಳಾನುಗಟ್ಟಲೆ ಪತ್ತೆಯೇ ಇಲ್ಲ!

ಹೀಗೆ ಒಂದು ದಿನ ನನ್ನ ಬ್ಲಾಗಿನ ಯಾವುದೋ ಆರ್ಟಿಕಲ್ ಓದಿ "ಪದಗಳ ಆಯ್ಕೆಯೇ ಚೆನ್ನಾಗಿಲ್ಲ. ಅರ್ಥವೇ ಆಗೋ ಹಾಗಿಲ್ಲ." ಎಂದು ಬೈದಿದ್ದ. ಅದೇ ಲೇಖನಕ್ಕೆ ಉಳಿದವರು ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದ್ಯಾಕಪ್ಪ ಹೀಗೆ ಎಂದರೆ, "ಹೌದು, ನಾನು ಯಾವಾಗಲೂ ಕ್ರಿಟಿಕಲ್!" ಎಂದ. ಅದೇನಾಯಿತೋ ಏನೋ, ಸಂಜೆ ಫೋನ್ ಮಾಡಿ, "ಬೇಜಾರ್ ಮಾಡ್ಕೋಬೇಡ, ತಪ್ಪಾಯ್ತು" ಎಂದ. ಮತ್ತೆ ಕೆಲ ಕಾಲ ಮಾಯ!

ಇದ್ದಕ್ಕಿದ್ದಂತೆ ಒಂದು ಸಂಜೆ ಹನುಮಂತನಗರದ ಮಾರುತಿ ಸರ್ಕಲ್ ಮುಂದೆ ಪ್ರತ್ಯಕ್ಷ. ಮೂರು ಜನ ಗೆಳೆಯರೊಡನೆ. "ಬಾ, ಶಿವಾಸ್ ಅಲ್ಲಿ ಪಾನಿಪೂರಿ ತಿನ್ನೋಣ" ಎನ್ನುತ್ತಾನೆ. ನಂತರ ಅವನೇ "ಓಹ್, ನೀನು ಇದೆಲ್ಲಾ ತಿನ್ನಲ್ಲ ಅಲ್ವಾ? ಪಾಪ!" ಅಂತಾನೆ. ನಾನು ನಕ್ಕು, "ಎಲ್ಲೆಲ್ಲಿ ಪ್ರಯಾಣ?" ಎಂದಾಗ "ಈಗಷ್ಟೇ ಮಂಗಳ (ಹೋಟೆಲ್ - ಖಾಲಿ ದೋಸೆ) ಆಯ್ತು. ನೆಕ್ಸ್ಟು ಬೋಂಡ ತಿಂದ್ಕೊಂಡು ಪಕ್ಕದ ಅಂಗಡೀಲಿ ಎಳನೀರು, ಆಮೇಲೆ ಶಿವಾಸು (ಪಾನಿಪೂರಿ), ಅಲ್ಲಿಂದ ಗಣೇಶ (ಫ್ರೂಟ್ ಜ್ಯೂಸು). ಇವತ್ತು ಜಾಸ್ತಿ ಇಲ್ಲ. ಮನೆಗೆ ಹೋಗಿ ಊಟ ಬೇರೆ ಮಾಡಬೇಕು." ಎಂದು ಹೇಳಿ, "ನಿನಗೆ ಈ ಪುಣ್ಯ ಇಲ್ಲ ಬಿಡು. ಜೀವನದಲ್ಲಿ ಇದೆಲ್ಲಾ ಬೇಕು ಕಣೋ, ನಾಳೆ ಏನಾಗುತ್ತೋ ಯಾರಿಗ್ ಗೊತ್ತು!" ಎಂಬ ವೈರಾಗ್ಯದ (?) ಮಾತನ್ನೂ ಹೇಳುತ್ತಾನೆ. ನಾನು ಅವರುಗಳೊಡನೆ ಹೋಗುವುದಿಲ್ಲ.

ಹೀಗೇ ಒಮ್ಮೆ ಗುಂಪಿನಲ್ಲಿ ಸಿಕ್ಕಾಗ, ಅವರ ಸ್ನೇಹಿತರಿಗೆ ಮುಂದುವರೆಸಲು ಹೇಳಿ, ನಮ್ಮ ಮನೆಗೆ ಬಂದಿದ್ದ. ಅಮ್ಮನ ಪರಿಚಯ ಮಾಡಿಕೊಟ್ಟೆ. ಸಂಗೀತ ಜ್ಞಾನವಿದೆ ಎಂದ ತಕ್ಷಣ ಅಮ್ಮನಿಗೆ ಹತ್ತಿರವಾಗಿಬಿಟ್ಟ! ಅವನು ಹೊರಟ ಗಳಿಗೆಯಿಂದಲೂ ಆಗಾಗ್ಗೆ, "ಆವತ್ತು ಜುಬ್ಬಾ ಹಾಕ್ಕೊಂಡು ಬಂದಿದ್ನಲ್ಲ, ಅವನು ತುಂಬಾ ಒಳ್ಳೇ ಹುಡುಗ" ಎನ್ನುತ್ತಾರೆ. "ಹೊರಗೆ ಹೋಗಬೇಕು, ನನ್ನ ಸ್ನೇಹಿತರು ಯಾರಾದರೂ ಸಿಗುತ್ತಾರೆ" ಎಂದು ಹೇಳಿದರೆ ಅಮ್ಮ "ಅದೇ ಆವತ್ತು ಮನೇಗೆ ಜುಬ್ಬಾ ಹಾಕ್ಕೊಂಡು ಬಂದಿದ್ನಲ್ಲಾ, ಸಂಗೀತದ ಬಗ್ಗೆ ಮಾತನಾಡಿದ ಹುಡುಗಾನಾ?" ಎನ್ನುತ್ತಾರೆ.

ಈ ವರ್ಷದ ಅವನ ಹುಟ್ಟುಹಬ್ಬಕ್ಕೆ ವಿಷ್ ಮಾಡಲು ಫೋನು ಮಾಡಿದರೆ ಎತ್ತಲೇ ಇಲ್ಲ. ಎಸ್ಸೆಮ್ಮೆಸ್ಸು ಕಳಿಸಿದರೆ ಅದಕ್ಕೂ ಉತ್ತರವಿಲ್ಲ. ನಂತರ ಒಂದು ವಾರದ ನಂತರ "ಮೊಮ್ಮಗಳು" ಶ್ರೀಗೆ ಫೋನು ಮಾಡಿದಾಗ ಪಕ್ಕದಲ್ಲೇ ಇದ್ದ ಅವನು, "ಎಸ್ಸೆಮ್ಮೆಸ್ಸಿಗೆಲ್ಲಾ ರಿಪ್ಲೈ ಮಾಡುವುದಿಲ್ಲವಂತೆ ಅನ್ನು" ಎಂದಿದ್ದ! "ಹಾಗಾದರೆ ಕಾಗದ ಬರೀಬೇಕಾ?" ಎಂದು ಹಾಸ್ಯ ಮಾಡಿದ್ದೆ.

ಇನ್ನು ಮುಂದೆ ಇವು ಯಾವುವೂ ಆಗುವಂತಿಲ್ಲ. ಗೆಳೆಯ ಕರುಣ್‍ಗೆ ವಿದಾಯ ಹೇಳುವ ಸಮಯ ಬಂದಿದೆ. ಹೃದಯವನ್ನು ಗೆದ್ದಿದ್ದ. ಅದರೊಂದಿಗೆ ಇಷ್ಟೇ ಇಷ್ಟು ನೆನಪುಗಳನ್ನು - ಮರೆಯಲಾರದಂಥದ್ದನ್ನು ಉಳಿಸಿ ಹೋಗಿದ್ದಾನೆ. ಜೊತೆಗೆ ನೊಂದ ಹೃದಯದ ಕಣ್ಣೀರನ್ನು ಒರೆಸುವ ಜವಾಬ್ದಾರಿಯನ್ನೂ ಕೊಟ್ಟಿ ಹೋಗಿದ್ದಾನೆ. ಆದರೆ ಆ ಶಕ್ತಿಯನ್ನು ಮಾತ್ರ ಕೊಟ್ಟಿಲ್ಲ.

-ಅ
19.7.2010
3.30PM

Thursday, July 1, 2010

ಅಕಾಲಮರಣಕ್ಕೆ ಪಯಣ

ಎಂಥ ಹೂವಿದೆಂಥ ಹೂವು,
ಸೊಬಗಿದೇನಿದು?
ಅರಳಿ ನಗುವ ಮೊದಲೆ ಋತುಗೆ
ಬಲಿಯಿದೇಕಿದು?

ಅಳುತ ಬುವಿಗೆ ಬಂದರೇನು,
ನಗುತ ಹೋಗುವೆ.
ನಗುತ ನಗುತ ಕಾಲನೆದುರು
ನಿಂತು ಬೀಗುವೆ.

ಬದುಕನೊಲವಿನಿಂದ ಬಯಸಿ
ಹೊತ್ತು ಕಳೆದೆನು.
ಸಾವಿಗಿಂದು ಬದುಕಿನಷ್ಟೆ
ಪ್ರೀತಿ ಕೊಡುವೆನು.

-ಅ
22.06.2010
11PM

Tuesday, June 22, 2010

ಆದದ್ದು ಒಂದು, ಅಂದುಕೊಂಡಿದ್ದೊಂದು!

ಕಂಪ್ಯೂಟರ್ ಶಿಕ್ಷಣವು ಈಗಿನ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆರಂಭವಾಗುತ್ತೆ. ಇದರ ಬಗ್ಗೆ ಅನೇಕ "ಹಿರಿಯರು" ಅಸಮಾಧಾನ ವ್ಯಕ್ತ ಪಡಿಸುವುದುಂಟು. ನನಗೂ ಸಹ ಆರಂಭದಲ್ಲಿ ಬೇಸರವಾಗಿತ್ತು. "ಇದೇನು, ಈ ಚಿಕ್ಕ ಮಕ್ಕಳಿಗೆ ಕಂಪ್ಯೂಟರ್ ಎಲ್ಲ ಯಾಕೆ?" ಅನ್ನೋ ಪ್ರಶ್ನೆಗಿಂತ, "ಅವಕ್ಕೆ ಏನು ಅರ್ಥ ಆಗುತ್ತೆ, ಮೌಸ್ ಅಲುಗಾಡಿಸುವುದನ್ನೇ ಒಂದು ವರ್ಷವಿಡೀ ಹೇಳಿಕೊಡಬೇಕಾಗುತ್ತೆ. ಕಂಪ್ಯೂಟರ‍್-ಗೂ ಅಷ್ಟು ರಕ್ಷಣೆಯಿರುವುದಿಲ್ಲ" ಎಂಬ ಯೋಚನೆಯೇ ಹೆಚ್ಚು ಇತ್ತು - ನಿನ್ನೆವರೆಗೂ!

ರೂಪಾ ಮೇಡಂ (ಒಂದನೇ ತರಗತಿಯ ಕಂಪ್ಯೂಟರ್ ಅಧ್ಯಾಪಕಿ) ತಮ್ಮ ವಿದ್ಯಾರ್ಥಿಗಳನ್ನು ಈ ವರ್ಷದಲ್ಲಿ ಮೊದಲ ಬಾರಿಗೆ ಲ್ಯಾಬಿಗೆ ಕರೆತಂದರು. ಲ್ಯಾಬಿನ ಒಳಗೆ ಬಂದು ಕಂಪ್ಯೂಟರ್ ಮುಂದೆ ಅವರುಗಳು ಕುಳಿತುಕೊಳ್ಳುವ ಮುನ್ನ, ಸಾಲು ಮಾಡಿಸಿ ಮೊದಲು ಇದು ಮಾನೀಟರ್ರು, ಇದು ಕೀಬೋರ್ಡು.. ಇತ್ಯಾದಿಗಳನ್ನು ವಿವರಿಸುವುದಲ್ಲದೆ, ಹೇಗೆ ಕುಳಿತುಕೊಳ್ಳಬೇಕು, ಹೇಗೆ ವರ್ತಿಸಬೇಕು ಎಲ್ಲವನ್ನೂ ಮುದ್ದು ಮುದ್ದಾಗಿ ವಿವರಿಸುವುದು ಈ ತರಗತಿಯ ಅಧ್ಯಾಪಕರುಗಳ ಕೆಲಸ. ಇನ್ನೂ ಐದು ವರ್ಷದ ಮಕ್ಕಳಲ್ಲವೇ?

ಎಲ್ಲರನ್ನೂ ಒಬ್ಬೊಬ್ಬರಾಗಿಯೇ ತಮ್ಮ ತಮ್ಮ ಕಂಪ್ಯೂಟರ್ ಮುಂದೆ ಕೂರಿಸಿ, ರೂಪಾ ಮೇಡಂ, ಸರ್ವರ್ ಅಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನ ಬಳಿ ಬಂದು, "ಸರ್, 1st standard ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ಇದು ಮೊದಲನೇ ಕ್ಲಾಸು. ಸ್ಪೆಲ್ಲಿಂಗುಗಳು ಹೇಳಿಕೊಟ್ಟಿದ್ದಾಗಿದೆ ಕ್ಲಾಸಿನಲ್ಲಿ. ಈಗ ಮೌಸ್ ಮೂವ್ ಮಾಡೋದು ಹೇಳಿಕೊಡಬೇಕು. ಅವರಿಗೆ Fruit Folic (ಮೌಸ್ ಬಳಸುವುದನ್ನು ಕಲಿಯಲು ಮಕ್ಕಳಿಗೆ ಉಪಯೋಗವಾಗುವ ಸುಂದರ ತಂತ್ರಾಂಶ) ಹಾಕಿ ಕೊಟ್ಟು ಬಿಡಲೇ? At least, mouse pointer ಚಲಿಸುವುದನ್ನಾದರೂ ಗಮನಿಸುತ್ತಾರೆ. ಅದಕ್ಕೇ ನಲವತ್ತು ನಿಮಿಷ ಬೇಕಾಗಬಹುದು" ಎಂದು ಹೇಳಿದರು. ನಾನು ಸಂಪೂರ್ಣ ಸಹಮತ ತೋರಿಸಿ ತಲೆಯು ಇನ್ನೆಲ್ಲಿ ಬಿದ್ದು ಹೋಗುತ್ತೋ ಅನ್ನುವ ಹಾಗೆ ತಲೆಯಾಡಿಸಿ "ಓ ಯೆಸ್" ಎಂದೆ.

"ಓ ಯೆಸ್" ಎಂದು ಹೇಳಿ ಎರಡು ಸೆಕೆಂಡು ಕೂಡ ಆಗಿಲ್ಲ, ಹಿಂದೆ ತಿರುಗಿ ನೋಡಿದೆವು - ಒಬ್ಬ ಹುಡುಗ ತನ್ನ ಕಂಪ್ಯೂಟರ್-ನಲ್ಲಿ "ಗೂಗಲ್"ಗೆ ಹೋಗಿ, ಅಲ್ಲಿ "games download" ಎಂದು search ಕೊಟ್ಟು, ಹುಡುಕಾಡುತ್ತಿದ್ದ! ನಮ್ಮ ಪ್ಲಾನುಗಳೆಲ್ಲವನ್ನೂ ಹೀಗೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಈಗಿನ ಮಕ್ಕಳು ಎಂದು ಎಣಿಸಿರಲಿಲ್ಲ!

ಬೆಲ್ಲು ಹೊಡೆಯಿತು. "ಓಡದೇ, ನಿಧಾನಕ್ಕೆ ಲೈನ್ ಮಾಡಿ" ಎಂದು ರೂಪಾ ಮೇಡಂ ಹೇಳಿದರು. ಎಲ್ಲರೂ "ಹೋ..." ಎಂದು ಕೂಗುತ್ತ ಕೂಗುತ್ತ ಲೈನ್ ಮಾಡಲು ಜಿಗಿದು ಹೋದರು. ಮೇಡಂ ಬಹಳ ಜೋರಾಗಿ "DONT MAKE NOISE...." ಎಂದು ಕೂಗಿದಾಗ ಎಲ್ಲರೂ ನಿಃಶಬ್ದವಾದರು.

ಮಕ್ಕಳು ಕಂಪ್ಯೂಟರುಗಳನ್ನು ಆರಿಸದೇ ಹಾಗೇ ಹೋಗಿದ್ದರು. ಲ್ಯಾಬ್ ಅಸಿಸ್ಟೆಂಟ್ ಸುಬ್ರಹ್ಮಣ್ಯ ಅವರು "ಸರ್, ಮಕ್ಕಳಿಗೆ ಕಂಪ್ಯೂಟರ್ ಆಫ್ ಮಾಡೋದಕ್ಕೆ ಹೇಳಿ ಸರ್, ಹೋಗೋದಕ್ಕೆ ಮುಂಚೆ." ಎಂದರು. ನಾನೆಂದೆ "ಅದು ಅವರ ಸಿಲಬಸ್ ಅಲ್ಲಿ ಇಲ್ಲ, ಎರಡನೇ ತರಗತಿಯಲ್ಲಿ ಹೇಳಿಕೊಡುತ್ತೇವೆ, ಹೇಗೆ ಸ್ಟಾರ್ಟ್ ಮಾಡೋದು, ಹೇಗೆ ಶಟ್ ಡೌನ್ ಮಾಡೋದು ಅಂತ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ ಈಗ" ಎಂದೆ. ಸುಬ್ರಹ್ಮಣ್ಯ ಅವರು ಗೂಗಲ್ ಪುಟವನ್ನು ತೆರೆದಿಟ್ಟಿದ್ದ ಹುಡುಗನ ಕಂಪ್ಯೂಟರ್ ಕಡೆಗೆ ತಿರುಗಿ ಜೋರಾಗಿ ನಕ್ಕರು!

-ಅ
22.06.2010
8.25PM

Friday, June 4, 2010

ಬರೆಯಿಸು, ಬರೆಯಿಸು

ಬರೆಯಿಸು, ಬರೆಯಿಸು - ನೀ ನನ್ನ ಕೈ ಹಿಡಿದು.

ಬರೆಸಿಹೆಯೆಂದರೆ
ನೀ ಕೈ ಹಿಡಿಯುತ,

ಪ್ರತಿ ನೆನಪಿನ ಚಣ
ಹೃದಯದಿ ನಲಿವುದು;

ಭೂತ-ಭವಿಷ್ಯವು
ಈಗಲೆ ನಡೆವುದು;

ಕಲ್ಪನೆ ಹೆಸರಲಿ
ಕವನ ಜನಿಸುವುದು;

ಬರೆಸಿಹೆಯೆಂದರೆ
ನೀ ಕೈ ಹಿಡಿಯುತ,

ಕ್ಷರ ಬದುಕಲಿ ಅ-
ಕ್ಷರವೇ ಹರಿವುದು!

-06.04.2010
6PM

Monday, May 24, 2010

ನಿನ್ನೊಲವ ಜಗದಿಂದ ನಾ ದೂರವಾದೆ

ನಿನ್ನೊಲವ ಜಗದಿಂದ ನಾ ದೂರವಾದೆ.
ದೂರ ದೂರದ ಹಾದಿ ನಾ ತಿಳಿಯದಾದೆ,
ಗುರಿಯರಸಿ ಹೋಗುವೆಡೆ ನಾನೆ ಮರೆಯಾದೆ,
ಹಿಂದಿರುಗದಾದೆ.

ಕಂಬನಿಯು ಹರಿಯುತಿರೆ ಅದನೆ ಕುಡಿವಂತೆ,
ಎದೆಯುಕ್ಕಿ ಹೊಮ್ಮುತಿರೆ ಮೊಗದಿ ಹಿಡಿವಂತೆ,
ನಿನಗಂದು ನಾನಿತ್ತ ಮಾತು ಉಳಿವಂತೆ,
ಬದುಕುಳಿದು ನಿಂತೆ.

ಮಂದಿರದಿ ನಾನೊಂದು ನಂದಿರುವ ಹಣತೆ,
ಸಂತಸದಿ ನೀನಿರಲು ಇಹುದೆನ್ನ ಹರಕೆ.
ಬಾಳಲ್ಲಿ ನನದೆಂದು ಇಲ್ಲಿರುವುದೊಂದೇ,
ನಿನ್ನ ನೆನಪೊಂದೇ!

-ಅ
24.05.2010
2.30PM

Friday, May 21, 2010

ಮಿಸಿಲಿ ಮತ್ತು..

ನಮ್ಮ ಹಳೆಯ ಚಿತ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡ ಒಂದೆರಡು ಸಂಗತಿಗಳು ಬಹಳ ವಿಸ್ಮಯವಾಗಿದೆ. ನಾನು ಇಲ್ಲಿ ಚಿತ್ರರಂಗವನ್ನು ದೂರುತ್ತಿಲ್ಲ. ಆದರೆ "ವಿಸ್ಮಯ" ಸಂಗತಿಗಳು ಎಷ್ಟು ಹಾಸ್ಯಮಯವಾಗಿರುತ್ತೆ ಅಂತ ಹೇಳಹೊರಟಿದ್ದೇನೆ. ಆಗಿದ್ ಆಗೋಗಿದೆ. ಈಗ ಅದನ್ನು ನೋಡಿ ನಗುವುದೊಂದೇ ನಮಗೆ ಲಾಭ!

"ಜನನಿ ಜನ್ಮಭೂಮಿ" ಎಂಬ ಒಂದು ಚಿತ್ರವು (ತೊಂಭತ್ತರ ದಶಕದಲ್ಲಿ ಬಂದ ಚಿತ್ರ) ನಮ್ಮ ಮೈಂಡ್ ಡ್ರೈ ತಂಡದ ಸಿ.ಎಸ್.ಪಿ. ವಿಡಿಯೋ ಅನ್ನು ನೆನಪಿಗೆ ತಂದುಕೊಟ್ಟಿತು. ಅದರಲ್ಲಿ ನಾಯಕ ಒಬ್ಬ ಅಣುವಿಜ್ಞಾನಿ. Nuclear Fission, Nuclear Fusion ಬಗ್ಗೆ ಏನೇನೋ ಸಂಶೋಧನೆ ಮಾಡುತ್ತಾನೆ. DOS mode ಅಲ್ಲಿ ಒಂದಿಷ್ಟು ಗ್ರಾಫಿಕ್ಸ್ ಕೂಡ ತೋರಿಸುತ್ತಾನೆ. ಆಮೇಲೆ, ತನ್ನ ಇಡೀ ಸಂಶೋಧನೆಯನ್ನು ಒಂದು ಫ್ಲಾಪಿಯಲ್ಲಿಟ್ಟುಕೊಂಡುರುತ್ತಾನೆ. ಕಳ್ಳರು ಬಂದು ಆ ಫ್ಲಾಪಿಯನ್ನು ಕದ್ದೊಯ್ಯುತ್ತಾರೆ. ಆಮೇಲೆ, ನಾಯಕನಿಂದ ಪರಿವರ್ತನೆಗೊಂಡ ಮಾಜಿ ರೌಡಿಯೊಬ್ಬನು, ಭೂಗತದಲ್ಲಿ ನಾಯಕನಿಗೆ ಒಂದು ಕಂಪ್ಯೂಟರ್ ಲ್ಯಾಬನ್ನು ಮಾಡಿಕೊಟ್ಟು, ಇಡೀ ಸಂಶೋಧನೆಯನ್ನು ಪುನಃ ಭೂಗತವಾಗಿಯೇ ಮಾಡುತ್ತಾನೆ ನಮ್ಮ ನಾಯಕ. ಇವೆಲ್ಲದರ ಜೊತೆಗೆ ಚಿತ್ರದಲ್ಲಿ ಮದರ್ ಸೆಂಟಿಮೆಂಟೂ ಇದೆ!

"ತುಳಸೀದಳ" ಎಂಬ ಪ್ರಖ್ಯಾತ ಚಿತ್ರದಲ್ಲಿ ಕಾಶ್ಮೋರ ಪೀಡಿತೆಯನ್ನು ಮುಟ್ಟಿದರೆ ಶಾಕ್ ಹೊಡೆಯುತ್ತೆ. ಮನಃಶಾಸ್ತ್ರಜ್ಞ ಬಂದು ಒಂದು ಸಲ ಶಾಕ್ ಹೊಡೆಸಿಕೊಂಡು, ಪರಿಶೀಲನೆ ಮಾಡಿದ ನಂತರ ಅವನಿಗೆ ಎಲ್ಲೋ ಬರೆದಿದ್ದ ಒಂದು ’ಶಾಸನ’ ಕಣ್ಣಿಗೆ ಕಾಣಿಸುತ್ತೆ. ಅಲ್ಲಿ R.A.M. ಎಂದು ಬರೆದಿರುತ್ತೆ. ಕೂಡಲೆ ಒಬ್ಬ ಎಲೆಕ್ಟ್ರಿಷಿಯನ್ನಿಗೆ ಫೋನು ಮಾಡಿ, ಏನು ಹಾಗಂದರೆ ಎಂದು ಕೇಳುತ್ತಾನೆ. ಅದಕ್ಕವನು, ಹಾಗಂದರೆ Random Access Memory ಅಂತ, ಕರೆಂಟನ್ನು ಶೇಖರಿಸಿ ಇಡೋಕೆ ಉಪಯೋಗಿಸುತ್ತಾರೆ ಎಂದು ವಿವರಣೆ ಕೊಟ್ಟ ನಂತರ ಮನಃಶಾಸ್ತ್ರಜ್ಞನಿಗೆ ಖಾತ್ರಿಯಾಗುತ್ತೆ, ಈ ಹುಡುಗಿಗೆ ಯಾರೋ RAMನ install ಮಾಡ್ಬಿಟ್ಟಿದ್ದಾರೆ ಅಂತ!

"ಅಪೂರ್ವ ಸಂಗಮ"ದಲ್ಲಿ ನಾಯಕರು, ಖಳನಾಯಕರು ಬಳಸುವುದು ಮೈಕ್ರೋಫೋನ್ ಅಲ್ಲ, ಮೈಕ್ರಾಫೋನ್. ಅದೇ ರೀತಿ ಮೊನ್ನೆ ನೋಡಿದ ಇನ್ನೊಂದು ಚಿತ್ರ - ಹೆಸರು ನೆನಪಿಲ್ಲ - ಇದರಲ್ಲಿ ಡಾಕ್ಟರು ಬಳಸುವುದು ಸ್ಟೆತಾಸ್ಕೋಪು!

ಎಲ್ಲಕ್ಕಿಂತಲೂ ಹೆಚ್ಚು ನಗುವಂತೆ ಮಾಡಿರುವುದು ಬಾಂಡ್ ಚಿತ್ರ - ಗೋವಾದಲ್ಲಿ ಸಿ.ಐ.ಡಿ. 999. ವಿಜ್ಞಾನಿಯು ಕಂಡು ಹಿಡಿದ, ಎತ್ತಿ ಹಾಕಿದರೆ ಸುತ್ತ ಮುತ್ತ ಮುನ್ನೂರು ಮೈಲಿಗಳನ್ನು ನಾಶ ಮಾಡಬಲ್ಲ "ಮಿಸಿಲಿ"ಯನ್ನು ಕಳ್ಳರು ಹೇಗೆ ಲಪಟಾಯಿಸಲು ಪ್ರಯತ್ನಿಸುತ್ತಾರೆ ಎನ್ನುವುದು ಬಹಳ ರೋಚಕವಾಗಿದೆ. ಉಸಿಲಿ ಗೊತ್ತು, ಇದೇನು ಮಿಸಿಲಿ? ಎಂದು ಯೋಚಿಸಿ ಯೋಚಿಸಿ ಸುಸ್ತಾಯಿತು. ವಿಜ್ಞಾನಿಯು ಕಂಡು ಹಿಡಿದಿರುವುದು ಮಿಸೈಲ್ ಎಂದು ಅರ್ಥವಾಗುವುದಕ್ಕೆ ಬಹಳ ಶ್ರಮ ಪಡಬೇಕಾಯಿತು. ಆ ಇಡೀ ಚಿತ್ರ ಇಲ್ಲಿದೆ.

-ಅ
21.05.2010
11AM

Friday, May 14, 2010

ನಾನೂ.. ನನ್ನ ಕನಸು - ಅನಿಸಿಕೆ’ಪೃಥ್ವಿ’ಗೆ ಹೋಗಬೇಕು ಅಂತ ಹೊರಟಿದ್ದು, ಪಿ.ವಿ.ಆರ್‍ ಗೆ ಹೋದಮೇಲೆ ಪ್ರಕಾಶ್ ರೈ ಚಿತ್ರ ನೋಡಿದಮೇಲೆ "ನಾನೂ.. ನನ್ನ ಕನಸು"ಗೇ ಹೋಗೋಣವೆಂದು ತೀರ್ಮಾನಿಸಿದ್ದು ತಪ್ಪು ನಿರ್ಧಾರವಾಗಲಿಲ್ಲವೆಂಬ ಖುಷಿಯು ಚಿತ್ರಮಂದಿರದಿಂದ ಹೊರಬಂದಾಗ ನಮಗಾಗಿತ್ತು. ಅದೆಷ್ಟು ಸಲ ನಿರೂಪಿಸಿದ್ದಾರೆ ಪ್ರಕಾಶ್ ರೈ - ತಾವು ಅತ್ಯದ್ಭುತ ಕಲಾವಿದರು ಎಂದು! ಈ ಸಲವೂ ಏನೂ ಕೊರತೆಯಿಲ್ಲದಂತಿದೆ ಅವರ ಪ್ರಯತ್ನ!

ಬರೀ ಪ್ರಕಾಶ್ ರೈ ಒಬ್ಬರನ್ನೇ ಹೊಗಳಿದರೆ ಅನ್ಯಾಯವಾಗುತ್ತೆ. ಸಾಮಾನ್ಯವಾಗಿ ಚಿತ್ರಗಳಲ್ಲಿ "ಅಯ್ಯೋ ಈ ಮನುಷ್ಯಂಗೆ ನಟನೇನೇ ಬರಲ್ಲ" ಎಂದು ಬೈಯ್ಯೋಕೆ ಯಾರಾದರೂ ಒಬ್ಬರು ಸಿಗುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ಒಬ್ಬರೂ ಅಂಥವರು ಇಲ್ಲ ಈ ಚಿತ್ರದಲ್ಲಿ.

ತಂದೆ-ಮಗಳ ಸಂಬಂಧ, ಒಡನಾಟ, ಪ್ರೀತಿ, ಸ್ನೇಹ ಎಲ್ಲವನ್ನೂ ಬಿಂಬಿಸುವ ಚಿತ್ರದ ಕೇಂದ್ರಬಿಂದುವೇ ’ಕನಸು’ - ಮಗಳು. ಹುಟ್ಟಿದಾಗಿನಿಂದ ಮದುವೆಯಾಗಿ ಗಂಡನ ಮನೆಗೆ ಹೋಗುವವರೆಗೂ ವಿಪರೀತವಾಗಿ ಹಚ್ಚಿಕೊಂಡ ತಂದೆಯ ಮನಃಸ್ಥಿತಿಯನ್ನೂ, ಅದರಿಂದಾಗುವ ಪರಿಣಾಮವನ್ನೂ ಸ್ವಲ್ಪವೂ ಬೋರು ಹೊಡೆಸದೇ ಚಿತ್ರಿಸಿರುವುದು ಪ್ರಶಂಸನೀಯ. ಇಡೀ ಚಿತ್ರವು ತಂದೆಯ ನೆನಪು. ತಂದೆಯು ತನ್ನ ಕನಸಿನ ನೆನಪನ್ನು ಗೆಳೆಯನೊಂದಿಗೆ ಹಂಚಿಕೊಳ್ಳುತ್ತಾನೆ. ಕೊನೆಗೆ ಗೆಳೆಯನಿಗೂ ಇದರಿಂದ ತನ್ನ ಭವಿಷ್ಯತ್ತಿನ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡುತ್ತೆ.

ಮಗಳು ಚಿಕ್ಕ ವಯಸ್ಸಿನಿಂದಲೂ ತಾನು ಏನು ಮಾಡುತ್ತಿದ್ದೇನೆಂದು ಸ್ಪಷ್ಟವಾಗಿದ್ದುದು, ಮತ್ತೆ ಅದರಲ್ಲಿ ತಂದೆ ತಾಯಿಯರ ಪಾತ್ರವು ಎಷ್ಟಿರಬೇಕೆಂದು ಅರ್ಥ ಮಾಡಿಕೊಳ್ಳಬೇಕೆಂಬುದು ಚಿತ್ರದ ಸಂದೇಶವೆನ್ನಬಹುದು. ತಿಳಿಹಾಸ್ಯದ ಸಂಭಾಷಣೆಗೆ ಪೂರ್ಣ ಅಂಕಗಳನ್ನು ಕೊಡಬೇಕು. ಸಿಹಿಕಹಿ ಚಂದ್ರು ತಮ್ಮ ಚಿಕ್ಕ ಪಾತ್ರವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ. ಬಹಳ ವರ್ಷದ ನಂತರ ಮತ್ತೆ ಪರದೆಯ ಮೇಲೆ ಸಿತಾರಾರನ್ನು ನೋಡಿದಾಗ ಏನು ಗೋಳು ಕಾದಿದೆಯೋ ಎಂಬ ಆತಂಕವಾಯಿತು. ಆದರೆ ಎಲ್ಲೂ ಗೋಳೇ ಇಲ್ಲದಿರುವುದು ಆತಂಕವನ್ನು ನಿವಾರಿಸಿತು. ಬದಲಿಗೆ ಸಿತಾರ ಅವರಿಗೆ ತುಂಬಾ ಜೋವಿಯಲ್ ಪಾತ್ರವಿರುವುದರಿಂದ ಸಂತೋಷವೂ ಆಯಿತು. ಮಕ್ಕಳೊಂದಿಗೇ ಹಗಲಿರುಳೂ ಇರುವ ನನಗಂತೂ ಕೆಲವು ಡೈಲಾಗುಗಳು ಬಹಳ ಹಿಡಿಸಿದುವು. "ಮಕ್ಕಳಿಗೆ ಮಾತ್ರ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಕಣೋ.. ನಾವು ದೊಡ್ಡೋರ್ ಆಗ್ಬಿಟಿದೀವಿ.." :-)

ಸಂಭಾಷಣೆಗೆ ಪೂರ್ಣ ಅಂಕಗಳೆಂದೆನಷ್ಟೆ. ಅದೇ ರೀತಿ ಫೋಟೋಗ್ರಫಿ ಕೂಡ ಬಹಳ ಚೆನ್ನಾಗಿದೆ. ಥಿಯೇಟರಿನ ಹೊರಗಡೆ ಸುಡುಬಿಸಿಲಿದ್ದರೂ ಚಿತ್ರದಲ್ಲಿ ಮಾತ್ರ ಕೊಡಗಿನ ಕೊರೆಯುವ ಚಳಿಯನ್ನು, ಮಂಜನ್ನೂ, ನಟರುಗಳ ಬೆಚ್ಚನೆಯ ಬಟ್ಟೆಗಳನ್ನು ನೋಡುವುದರಿಂದ extra ಹಿತವಾಗುತ್ತೆ.

ಹಂಸಲೇಖಾರಿಗಿರುವ ಕನ್ನಡ ಸಾಹಿತ್ಯಪ್ರೇಮವು ಹಾಡುಗಳಲ್ಲಿ ವ್ಯಕ್ತವಾಗಿದೆ. ಆದರೆ ಯಾಕೋ ಕಣ್, ಕಾಲ್ - ಈ ಪದಗಳನ್ನೆಲ್ಲಾ ಹಾಡುಗಳಲ್ಲಿ ಕೇಳಿ ಹಳೆಗನ್ನಡ ಸಾಹಿತ್ಯದ ನೆನಪನ್ನೂ ತರುತ್ತೆ. ಹಂಸಲೇಖಾ ಅಂದ ಮೇಲೆ ಸಾಹಿತ್ಯದ ಜೊತೆಗೆ ಸಂಗೀತವೂ ಅವರದೇ ಎಂಬುದು by default. ಗಿಟಾರಿನ ಮೇಲೆ ಅವರಿಗಿರುವ hold ವರ್ಷಾನುಗಟ್ಟಲೆಯಿಂದಲೂ ಗೊತ್ತಾಗಿದೆ. ಸಂಗೀತದ ವಿಭಿನ್ನತೆಯು ಕಣ್-ಕಾಲ್ ಹಾಡಿನಲ್ಲಿ ಗೋಚರಿಸುತ್ತೆ. ಚಿತ್ರದ ಆರಂಭದಲ್ಲಿ ಆರಂಭವಾಗುವ ಈ ಹಾಡು, ಚಿತ್ರದ ಕೊನೆಯಲ್ಲಿ ಮುಕ್ತಾಯವಾಗುತ್ತೆ. ಇಡೀ ಚಿತ್ರದ ಪಯಣವನ್ನು ಈ ಹಾಡೇ ಮಾಡಿಸುತ್ತೆ. ಇದು ಹಂಸಲೇಖಾ ವೈಶಿಷ್ಟ್ಯ. ಜೊತೆಗೆ ಇನ್ನೂ ಮೂರು ಹಾಡುಗಳಿವೆ. ಉತ್ತಮ ನಟರಾದ ಅಚ್ಯುತ ಕುಮಾರರ ಮೇಲೆ ಚಿತ್ರಿಸಿದ ಹಾಡು ಸುದೀರ್ಘವಾಗಿರುವುದರಿಂದ ಒಂದು ವಿರಾಮ ತೆಗೆದುಕೊಳ್ಳಬಹುದು. ಸೋನೂ ನಿಗಮ್ ಕೈಯಲ್ಲಿ ಹಾಡಿಸಿರುವುದು ವೈಯಕ್ತಿಕವಾಗಿ ನನಗೆ ಹಿಡಿಸಲಿಲ್ಲ.

ಸರ್ದಾರ್ಜೀಗಳ ಬಗ್ಗೆ ದೊಡ್ಡ ಪಾಠವನ್ನೇ ಹೇಳಿಬಿಟ್ಟಿದೆ ಈ ಚಿತ್ರವು! ನಟ ರಾಜೇಶ್ ಮತ್ತು ಕನಸು ಪಾತ್ರದ ಅಮೂಲ್ಯ ಈ ಸರ್ದಾರ್-ಗಳ ಬಗ್ಗೆ ಒಲವು ಮೂಡಿಸುವಂಥ ಪಾತ್ರ ವಹಿಸಿಕೊಂಡಿದ್ದಾರೆ.

ನನಗಂತೂ ಬಹಳ ಖುಷಿ ಕೊಟ್ಟಿತು ಈ ಸಿನಿಮಾ. ಸಹಾಯಕ ನಿರ್ದೇಶಕನಾಗಿ ಮಿತ್ರ ಸುನೀಲ್ ಇದ್ದಾರೆಂಬುದು ಚಿತ್ರ ಮುಗಿದ ಮೇಲೆ ಗೊತ್ತಾಗಿ ಇನ್ನೂ ಖುಷಿಯಾಯಿತು. ಪ್ರಕಾಶ್ ರೈ at his best!

-ಅ
14.05.2010
9.20PM

Monday, May 10, 2010

ಪರ್ವತಾರೋಹಣದ ಹಗ್ಗ

ಪರ್ವತಾರೋಹಣದ ಹಗ್ಗಕ್ಕೆ ಅದೆಷ್ಟು ಶಕ್ತಿ!
ಸಾವಿರ ಸಾವಿರ ಅಡಿ ಎತ್ತರಕ್ಕೆ
ಕಣ್ಮುಚ್ಚಿಯೂ,
ಒಮ್ಮೊಮ್ಮೆ ಕೈ ಹಿಡಿಯದೆಯೂ,
ಕೆಲವೊಮ್ಮೆ ಎಲ್ಲ ಹಿಡಿತಗಳ ಕಳಚಿಯೂ,
ಬೀಳದೇ,
ತಡವರಿಸದೇ,
ಮೇಲೆ ಮೇಲೆ ಏರಬಲ್ಲೆನು!

ಶಿಖರದಂಚಲ್ಲಿ ನಿಂತು ಹಗ್ಗಕ್ಕೆ ಸಗ್ಗದ ಮನ್ನಣೆಯ ಸಲ್ಲಿಸಲು,
ಹಗ್ಗವೆಂದಿತು:
"ಹೆಸರಿಗಷ್ಟೆ ನಾನು,
ಉಸುರಾದುದು ನೀನೆ.
ಬೆಸೆದೆಯಲ್ಲ ಗಂಟು,
ಅದುವೆ ನಿಜದ ನಂಟು!
ಉಳಿದಿದೆಯೋ ಪಯಣ,
ಕೆಳಗಿಳಿಯೋ, ಅರುಣ!
ಬೇರೆ ಗಂಟು ಬೇರೆ ಬೆಸುಗೆ ಏರಲಿಳಿಯಲು.
ಹಗ್ಗವೊಂದೆಯೆಂದು ಬಗೆದು ತಪ್ಪು ತಿಳಿಯಲು!
ಶಕ್ತಿಯೇನೊ ಹಗ್ಗಕಿಹುದು ಬೆಟ್ಟವೇರಲು.
ಮೂಲ: ಗಂಟು, ಬೆಸುಗೆ, ನಂಟು: ಹಗ್ಗ - ಮನುಜಕೆ;
ಹಗ್ಗ - ಬೆಟ್ಟಕೆ;
ಮನುಜ - ಬೆಟ್ಟಕೆ!"

ಪರ್ವತಾರೋಹಣದ ಹಗ್ಗಕ್ಕೆ ಅದೆಂಥ ಶಕ್ತಿ?
ಮರೆತಿತ್ತು ಶಕ್ತಿಮೂಲವನ್ನೆ ನನ್ನ ಪುಟ್ಟ ಯುಕ್ತಿ!

-ಅ
09.05.2010
1PM

Wednesday, May 5, 2010

ಓ ... ಓ.... ಓ.... ರಂಗಶಾಯೀsss

ಸಂಗೀತಗಾರರ ಪಾಲಿಗೆ ಕಬ್ಬಿಣದ ಕಡಲೆ ಕೃತಿ! ಅದೆಷ್ಟು ಸಲೀಸಾಗಿ ಅಗಿದು ನುಂಗಿ ನೀರು ಕುಡಿದುಬಿಟ್ಟಿದ್ದಾರೆ ಸಂತಾನಮ್, ಎಮ್.ಎಸ್, ಮತ್ತು ಶೆಮ್ಮಂಗುಡಿ! ಮೂರನ್ನೂ ಒಟ್ಟಿಗೇ ಪ್ಲೇ ಲಿಸ್ಟ್ ಅಲ್ಲಿ ಹಾಕಿ, ಸತತವಾಗಿ ಕೇಳಿದಾಗ ಆದ ಪರಮಾನಂದವು ಅಷ್ಟಿಷ್ಟಲ್ಲ. ಸುಬ್ಬುಲಕ್ಷ್ಮಿಯವರು ಶ್ರೀರಂಗಕ್ಕೆ ಕರೆದೊಯ್ಯುತ್ತಾರೆ, ಶೆಮ್ಮಂಗುಡಿಯು ಪ್ರಾರ್ಥನೆ ಮಾಡಿಸುತ್ತಾರೆ, ಸಂತಾನಮ್ ಸಾಕ್ಷಾತ್ ರಂಗನಾಥನ ದರ್ಶನವನ್ನೇ ಮಾಡಿಸುತ್ತಾರೆ!! ಸಂತಾನಮ್ ಅಂತೂ ವಿಳಂಬಕಾಲದ ಕೃತಿಯೆಂದರೇನು ಎನ್ನುವುದನ್ನು ಈ ಹಾಡಿನ ಮೂಲಕ define ಮಾಡಿಬಿಡುತ್ತಾರೆ. ಮತ್ತೆ ಕಾಂಬೋಜಿ ರಾಗವು ತನ್ನ ಉನ್ನತ ಶಿಖರವನ್ನು ಮುಟ್ಟುವುದು ಬಹುಶಃ ಈ ಹಾಡಿನಲ್ಲೇ ಅನ್ನಿಸುತ್ತೆ!

ಶ್ರೀರಂಗದಲ್ಲಿ ಮಲಗಿರುವವನನ್ನು ರಾರಾದಾ ಎಂದು ಕೇಳುವ ತ್ಯಾಗರಾಜರ ಬಯಕೆ ಅದೆಷ್ಟು ಹಿರಿಯದು ಎಂದು ಕೇಳಿದರೆ ಅಚ್ಚರಿಯಾಗುತ್ತೆ. "ಸಾರಂಗಧರುಡು ಜೂಚಿ ಕೈಲಾಸಾಧಿಪುಡುಗಾಲೇದಾ.." (ಪರಮೇಶ್ವರನು ನಿನ್ನನ್ನು ಕಂಡು ಕೈಲಾಸಕ್ಕೆ ಒಡೆಯನಾಗಲಿಲ್ಲವೇ?)! ತ್ಯಾಗರಾಜರನ್ನು ಅಧ್ಯಯನ ಮಾಡುವಾಗ ಸಾಹಿತ್ಯ ಮತ್ತು ಸಂಗೀತ ಎರಡು ಬಗೆಯ ಆನಂದವು ದೊರಕುತ್ತೆ! ಜೂಚಿ... ಕೈಲಾಸ.. ಎನ್ನುವಾಗ ನಾವಿರುವ ಸ್ಥಳದಿಂದ ಕೈಲಾಸಕ್ಕೆ ಏರುವ ಅನುಭವ ಆಗದೇ ಇರುವುದಿಲ್ಲ. ಆದರೆ ಅವರು ಹೇಳುತ್ತಿರುವುದು ಪರಮೇಶ್ವರನ ಬಗ್ಗೆ. ಪರಮೇಶ್ವರನ ಜೊತೆ ನಾವೂ ಕೈಲಾಸ ದರ್ಶನ ಮಾಡಬೇಕೆನ್ನುವ ಹಂಬಲವಿರುವವರು ಈ ಕೃತಿಯನ್ನು ಕೇಳಲೇ ಬೇಕು.

ಶ್ರೀರಂಗವನ್ನು ಭೂಲೋಕದ ವೈಕುಂಠವೆಂದೇನೋ ಕರೆದುಬಿಟ್ಟಿದ್ದಾರೆ. ಇದು ಕೇವಲ ಕಾವ್ಯದ ಸೊಬಗಿಗಾಗಿ ಬಳಸಿಕೊಂಡಿರುವ ರೂಪಕಾಲಂಕಾರವೆಂದು ಭಾವಿಸಿದರೆ ಸ್ವಾರಸ್ಯವನ್ನು ಸವಿಯದೇ ಬಿಟ್ಟ ಹಾಗಿರುತ್ತೆ. ಈ ಹಾಡಿನ ಕಚೇರಿಯಲ್ಲಿ, ಇಡೀ ಹಾಡಿನ ಕೇಂದ್ರಬಿಂದು ಈ ಸಾಲು! "ಭೂಲೋಕ.. ವೈಕುಂಠಮಿದಿಯನಿ..." ಮೂರೂ ವಿದ್ವಾಂಸರೂ ಇಲ್ಲಿ ಮಾಡುವ ನೆರವಲ್ಲು ಶ್ರೀರಂಗದವರೆಗೂ ಪ್ರಯಾಣ ಮಾಡುವ ಆಯಾಸವನ್ನೂ, ಶ್ರೀರಂಗನ ಕೇವಲ ಮೂರ್ತಿಯನ್ನು ನೋಡುವುದನ್ನೂ ತಪ್ಪಿಸಿ ಕಣ್ಣ ಮುಂದೆಯೇ ಜೀವಂತ ರಂಗನನ್ನು ತಂದು ನಿಲ್ಲಿಸಿ, ನಮ್ಮ ದೇಹವೇ ಭೂಲೋಕವು - ಅದೇ ವೈಕುಂಠವಾಗಿದೆಯೇನೋ ಎಂಬ ದಿವ್ಯ ಭಾವನೆಯು ನಮ್ಮನ್ನು ಆವರಿಸಿಬಿಡುತ್ತೆ ಎನ್ನುವುದು ನನ್ನ ಪಾಲಿಗಂತೂ ಅತಿಶಯೋಕ್ತಿಯಲ್ಲ!

ಮುಂದೆ ತ್ಯಾಗರಾಜರೇ ಹೇಳಿರುವ ಹಾಗೆ "ಭೂಲೋಕದ ವೈಕುಂಠವೆಂಬಂತೆ ಇರುವ ಈ ಶ್ರೀರಂಗದಲ್ಲಿ ನಿನ್ನೊಳಗೆ ನೀನೇ ಅತಿಶಯವಾಗಿ ಆನಂದದಿಂದಿರುವ ಲಕ್ಷ್ಮೀರಮಣನೇ, ಇಲ್ಲಿ ನೀನು ಮೈಮರೆತಿದ್ದರೆ ನಮ್ಮ ಮನಸ್ಸಿನೊಳಗಿರುವ ಚಿಂತೆಗಳು ಮರೆಯಾಗುವುದು ಯಾವಾಗ? ಇಲ್ಲಿ ಅಸೂಯೆಯುಳ್ಳ ಜನರ ಮಧ್ಯೆ ಬಹಳ ಬಳಲಿ ನಿನ್ನ ದಿವ್ಯರೂಪವನ್ನು ನೋಡಲು ಬಂದಿದ್ದೇನೆ. ಬಂದು ಕಾಪಾಡಬಾರದೇ?" ಎಂದು ಶ್ರೀರಂಗನಾಥನ ಕರ್ತವ್ಯಗಳನ್ನೇ ಪ್ರಶ್ನಿಸುವಂತಿದೆ. ರಂಗನಾಥನ ಕರ್ತವ್ಯಗಳೇನೇ ಇರಲಿ, ಅದನ್ನು ಅವನು ಮಾಡಲೀ ಬಿಡಲಿ, ತ್ಯಾಗರಾಜರ ಈ ಸಾಲುಗಳನ್ನು ಶೆಮ್ಮಂಗುಡಿಯಾಗಲೀ, ಸುಬ್ಬುಲಕ್ಷ್ಮಿಯಾಗಲೀ, ಸಂತಾನಮ್ ಆಗಲೀ ಹಾಡಿದರೆ ನಾವಿರುವ ಲೋಕವೇ ವೈಕುಂಠವಾಗಿ, ನಾವೇ ಮೈ ಮರೆತು, ಮನಸ್ಸಿನೊಳಗಿರುವ ಚಿಂತೆಗಳೆಲ್ಲವೂ ಮರೆಯಾಗುವುದಂತೂ ನಿಜ. ಬಹುಶಃ ಶ್ರೀ ರಂಗನಾಥನು ತ್ಯಾಗರಾಜರ ಮೂಲಕ ಈ ಕೃತಿಯನ್ನು ರಚಿಸಿ, ಮನಸ್ಸಿನ ದುಗುಡಗಳನ್ನು ಕಳೆಯುವಂತೆ ಮಾಡಿ, ಪೊರೆಯುವ ಹಾದಿಯನ್ನು ಅನುಸರಿಸಿದ್ದಾನೇನೋ!

ಓ... ಓ..... ಓ..... ರಂಗಶಾಯೀSSSSSS

-ಅ
05.05.2010
12AM

Tuesday, May 4, 2010

ಕೂಡಲಿ

ಹೊತ್ತು ತಂದಿಹಳು ಎಲ್ಲ ಪಾಪಗಳ
ಅತ್ತ ಕಡೆಯೆಲ್ಲಿಂದಲೊ..
ಕಪ್ಪು ಮೈಬಣ್ಣ, ಮುಪ್ಪು ಕಣ್ಣೋಟ
ಇತ್ತ ಬರುತಿರುವಳಿವಳು,
ಹಾ! ಸುಭದ್ರೆಯೊ, ಭದ್ರೆಯಿವಳು.

ಮತ್ತೆ ನೋಡಲ್ಲಿ ನುಗ್ಗಿ ಬರುತಿಹಳು
ಬೆಟ್ಟದಡಿಯೆಲ್ಲಿಂದಲೊ..
ದಟ್ಟ ಕಾಡನ್ನು, ಪುಟ್ಟ ಧರೆಯನ್ನು
ಹಾದು ಸುರಸುಧೆಯ ಹೊತ್ತು:
ದಿವ್ಯಗಂಗೆಯೊ, ತುಂಗೆಯಿವಳು.

ಪುಣ್ಯ ಪಾಪವನು, ಕಾಲ ಸೃಷ್ಟಿಯನು
ನುಂಗಿ ನಡೆಯುವಂದದಲಿ..
ಮುಂದೆ ತಮಸನ್ನು, ಮತ್ತೆ ದಾಹವನು
ಕೊಂದು ಸುಖವೀಯುತಿರಲಿ.
ತುಂಗೆ ಭದ್ರೆಯರು ಒಂದುಗೂಡುತಲಿ
ಮುಂದೆ ಮುಂದೆ ಸಾಗಲಿ.
ಪುಣ್ಯದೊಳು ಪಾಪವು ಬೆರೆವ ಸ್ಥಲವಿದೊ,
ಭವ್ಯವಿದು, ಆಹ್! ಸಿರಿ ಕೂಡಲಿ!

-ಅ
22.04.2010
12.30AM

Monday, April 26, 2010

ಆಸ್ತಿಕನ ಉತ್ತರ

ನಾಸ್ತಿಕರು ಆಸ್ತಿಕರನ್ನು ಕೆಲವು ಪ್ರಶ್ನೆಗಳನ್ನು ಕೇಳಿ ಗೆಲ್ಲಲಾಗುವುದಿಲ್ಲವೆಂದು ಖಾತ್ರಿಯಾಯಿತು. ನಾಸ್ತಿಕನು ಈ ಮೂರಕ್ಕೂ ಮರುತ್ತರ ನೀಡಲು ಸಾಧ್ಯವಾಗುವುದು ಇಂಗ್ಲಿಷಿನಲ್ಲಿ "ಓಕೆ" ಎಂದು. ಕನ್ನಡ ಪ್ರೇಮಿಯಾಗಿದ್ದರೆ "ಸರಿ" ಎನ್ನಬಹುದು.

ನಾಸ್ತಿಕನ ಪ್ರಶ್ನೆ ೧. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ನಿಮ್ಮ ದೇವರಿಗೆ ಕರುಣೆಯೇ ಇಲ್ಲವೇ?

ಆಸ್ತಿಕನ ಉತ್ತರ: ಅವೆಲ್ಲ ಪೂರ್ವಜನ್ಮದ ಕರ್ಮಗಳು. ಅನುಭವಿಸಲೇ ಬೇಕು.

ನಾಸ್ತಿಕನ ಪ್ರಶ್ನೆ ೨. ಎಲ್ಲವೂ ಪೂರ್ವನಿಶ್ಚಿತ ಅಂದ ಮೇಲೆ ನೀವೂ ವ್ಯಥೆ ಪಡುತ್ತೀರ ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ, ಕೆಲವಕ್ಕೆ. ಯಾಕೆ?

ಆಸ್ತಿಕನ ಉತ್ತರ: ಅದೂ ಸಹ ಪೂರ್ವನಿಶ್ಚಿತವೇ.

ನಾಸ್ತಿಕನ ಪ್ರಶ್ನೆ ೩. ಅಲ್ಲಾ, ನೀನಾದರೋ ದೈವಭಕ್ತೆ. ಪೂಜೆಯಾದರೂ ಮಾಡು, ತಪಸ್ಸಾದರೂ ಮಾಡು. ನಾನ್ಯಾಕೆ ಪೂಜೆ ಮಾಡಬೇಕು? (ಹೆಂಡತಿಯನ್ನು ಕೇಳಿದ ಗಂಡ).

ಆಸ್ತಿಕಳ ಉತ್ತರ: ಸುಮ್ನೆ ಮಾಡಿ.

-ಅ
26.04.2010
3.25PM

Saturday, April 10, 2010

ಆಪ್ತರಕ್ಷಕ

ಸಾಹಸ ಸಿಂಹ ವಿಷ್ಣುವರ್ಧನರ ಕೊನೆಯ ಚಿತ್ರ. ಆದಕಾರಣ ಆಪ್ತರಕ್ಷಕ ಬಹಳ ಚೆನ್ನಾಗಿದೆ. ಎಲ್ಲರೂ ನೋಡಬಹುದು.

-ಅ
10.04.2010
12.40PM

Sunday, April 4, 2010

ನರಸಿಂಹ ಯುದ್ಧಂ 2.0 - ಆಮಂತ್ರಣ

ಕಳೆದ ಬಾರಿ ನಾನು "ಸಿಂಹ"ನಾಗಿದ್ದೆ. ಸ್ಟೇಜಿನ ಮೇಲೆ ಡೈಲಾಗೊಂದನ್ನು ಮರೆತಿದ್ದೆ ಕೂಡ. ಮೊದಲೇ ನನಗೆ ಈ ಸ್ಟೇಜ್ ಫಿಯರ್ ಕಾಯಿಲೆ, ಇನ್ನು ನಾಟಕವೆಂದರೆ ಕಾಯಿಲೆ ಬಹಳ ಸೀರಿಯಸ್ಸೇ. ಆದರೂ ಮೊಟ್ಟಮೊದಲ ನಾಟಕವಾದ್ದರಿಂದ ಬೇಸರವಾಗುವಂಥದ್ದೇನೂ ಮಾಡಲಿಲ್ಲ ನಾನು ಎಂಬ ನಂಬಿಕೆಯಿದೆ. ಆದರೆ ಆ ನಂಬಿಕೆಯನ್ನು ಈ ಸಲ ಹರ್ಷ್ ಜ್ಯೋಷಿಯವರು ದೃಢ ಪಡಿಸಲು ಸಜ್ಜಾಗಿದ್ದಾರೆ - ಸಿಂಹನ ಪಾತ್ರಕ್ಕೆ ವಿಶೇಷ ಕಳೆಯನ್ನು ಕೊಡಲು! ನನ್ನ ಅನಾರೋಗ್ಯದಿಂದ ಇಷ್ಟು ಒಳ್ಳೆಯ ಕೆಲಸವಾದೀತೆಂದು ನಾನು ಎಣಿಸಿರಲಿಲ್ಲ. ಸ್ಟೇಜಿನ ಮೇಲೆ ನಮ್ಮ ಮೈಂಡ್ ಡ್ರೈ ಗುಂಪಿನ ಎಲ್ಲರನ್ನೂ ನೋಡಲು ಉತ್ಸುಕದಿಂದಿದ್ದೇನೆ. ನನ್ನೊಡನೆ ನೀವು ಗೆಳೆಯರೆಲ್ಲರೂ ಬನ್ನಿರೆಂದು ಆಮಂತ್ರಿಸುತ್ತಿದ್ದೇನೆ. ಬನ್ನಿ.

ಕಳೆದ ಬಾರಿ ನಾವು ನಾವೇ ನಿರ್ದೇಶನ ಮಾಡಿಕೊಂಡಿದ್ದೆವು. ಪ್ರಥಮ ಪ್ರಯತ್ನವೆಂದು ಎಲ್ಲರಿಗೂ ಸಹಾನುಭೂತಿಯೂ ಇತ್ತು, ಪ್ರೋತ್ಸಾಹಿಸುವ ಸನ್ಮನಸ್ಸೂ ಇತ್ತು. ಎರಡೆನೆಯ ಪ್ರಯತ್ನವು ಅಷ್ಟು ಸಲೀಸಲ್ಲ ಎಂಬುದು ಸತ್ಯವಾದ್ದರಿಂದ ಕೆಲಸ ಮಾಡುವುದು ಅನಿವಾರ‍್ಯ. ಇದನ್ನು ಅರಿತು ಬರಹವನ್ನೂ, ಸಂಭಾಷಣೆಯನ್ನೂ ಅರ್ಜುನ ಮತ್ತು ಹರೀಶ ಪರಿಷ್ಕರಿಸಿರುವುದು ಶ್ಲಾಘನೀಯ ಬೆಳವಣಿಗೆ. ಜೊತೆಗೆ ಸುನೀಲ್ ಎಂಬ ಪ್ರೊಫೆಷನಲ್ಲು, ಆಸಕ್ತಿದಾಯಕರೂ, ಶಂಕರ್ ನಾಗ್ ಅಭಿಮಾನಿಯೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ಸಂತೋಷದ ವಿಷಯ. ಈ ಸಲದ ಪ್ರಯತ್ನವು ಕಳೆದ ಸಲಕ್ಕಿಂತ ಹೇಗೆ ಭಿನ್ನವಾಗಿರುವುದೆಂದು ಅರ್ಜುನನು ಬರೆದುಕೊಂಡಿದ್ದಾನೆ.

ಮತ್ತೊಮ್ಮೆ ಆಮಂತ್ರಿಸುತ್ತಿದ್ದೇನೆ - ಟಿಕೆಟ್ ಕೊಂಡುಕೊಂಡು ನೋಡುವವರಿಗೆ! ;-) ನಾಟಕಕ್ಕೆ ಬನ್ನಿ.

ನಮ್ಮ ಮನೆಯಿಂದ ಮೂರು ರಸ್ತೆ ಮೇಲೆ ಹೋದರೆ ಸಾಕು, ಅಲ್ಲೇ ಇರುವ ರಾಮಾಂಜನೇಯ ಗುಡ್ಡದ ಹಿಂದೆಯೇ ಇರುವ ಕೆ.ಎಚ್. ಕಲಾಸೌಧದಲ್ಲಿ ಭೇಟಿಯಾಗೋಣ. ಮುಂದಿನ ಶುಕ್ರವಾರ ಮತ್ತು ಭಾನುವಾರ. ಸಮಯ ವಿಚಿತ್ರವಾಗಿದೆ - ಆಮಂತ್ರಣ ಪತ್ರಿಕೆಯನ್ನು ನೋಡಿರಿ! ಅಂದ ಹಾಗೆ, ಈ ಕಲಾಸೌಧವೂ, ರಾಮಾಂಜನೇಯ ಗುಡ್ಡವೂ, ನಮ್ಮ ಮನೆಯೂ ಇರುವುದು ಹನುಮಂತನಗರದಲ್ಲಿ!ಮಗದೊಮ್ಮೆ ಆಮಂತ್ರಿಸುತ್ತಿದ್ದೇನೆ - ಬನ್ನಿ!

-ಅ
04.04.2010
9PM

Thursday, April 1, 2010

ಮೈತ್ರೀಮ್ ಭಜತ

ಜಗದ ಜನರ ಹೃದಯ ಗೆಲುವ ಸ್ನೇಹ ಮಂತ್ರ ನಿನ್ನದು
ನಿನ್ನೊಳನ್ಯರನ್ನು ಕಂಡರಾಗ ಸೊಗವೆ ತನ್ನದು!

ಗೆಲುವು ನಿನ್ನ ಏಳ್ಗೆ ಹೊರೆತು ಪರರ ಸೋಲು ಸಲ್ಲದು
ಎರಗಿ ಕಾದು ಹೋರಿ ಗೆಲುವ ಗೆಲುವು ಸೋಲೆ ಎಂದಿಗು!

ಬುವಿಯು ಕಲ್ಪವೃಕ್ಷದಂತೆಯೀವಳಲ್ಲ ಬಾಳಿಗೆ
ದಯದಿ ನಡೆಸುವಾತನಿರಲು ಭೀತಿಯೇನು ನಾಳೆಗೆ?

ಅಂತೆ ನಾವು ದಯವ ಧರಿಸಿ ನೀಡುತಿರಲು ಲೋಕಕೆ
ಒಳಿತೆ ಎಲ್ಲ ಕಡೆಯು - ಭೇದವುಂಟೆ ಲೋಕ-ನಾಕಕೆ?

ಕೆಳೆಯ ಮಂತ್ರ ಜಪಿಸಿ ನಿನ್ನೊಳನ್ಯರನ್ನು ಕಂಡರೆ
ಇಳೆಯ ಇರುಳು ಜೊನ್ನದಿಂದ ಕಳೆವುದೆಲ್ಲ ತೊಂದರೆ!

-ಅ
06.02.2010
1.20PM

Sunday, March 21, 2010

ಪರೀಕ್ಷೆಯಲ್ಲಿ ಮೇಲ್ವಿಚಾರಕನಾಗಿ…

ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಪರೀಕ್ಷೆಯಲ್ಲಿ ಮೇಲ್ವಿಚಾರಕನಾಗುವುದು ಅಂಥದ್ದೇನೂ ಸಂತೋಷದಾಯಕವಲ್ಲದೇ ಇದ್ದರೂ ನನ್ನಂತಹ ಮೇಷ್ಟ್ರಿದ್ದರೂ ಮಕ್ಕಳು ನಿಃಶಬ್ದವಾಗಿ ಕುಳಿತುಕೊಳ್ಳುವುದು ಪರೀಕ್ಷೆಯಲ್ಲಿ ಮಾತ್ರವೆಂಬ ಸಮಾಧಾನ ನನಗೆ. ಎರಡು ಗಂಟೆಗಳ ಕಾಲ (ಪರೀಕ್ಷೆಗಳಿಗೆ ನಮಗಿದ್ದಂತೆ ಈಗ ಮೂರು ಗಂಟೆ ಕಾಲಾವಧಿಯಿಲ್ಲ) "Don't make noise..., stop shouting....." ಹೀಗೆಲ್ಲ ವಿರೋಧಾಭಾಸವಾಗಿ ಕಿರುಚುವುದು ತಪ್ಪುತ್ತೆ!

ಪ್ರಶ್ನೆಪತ್ರಿಕೆಯನ್ನು ಮೊದಲು ಓದಿ ಆಮೇಲೆ ಉತ್ತರಿಸಬೇಕೆಂಬ ಪದ್ಧತಿಗೆ ನನ್ನ ವೈಯಕ್ತಿಕ ವೈರುಧ್ಯವಿದ್ದರೂ ನಿಯಮಾನುಸಾರವಾಗಿ ಅದನ್ನು ಪಾಲಿಸಲೇ ಬೇಕು. ಮೊದಲ ಕಾಲುಗಂಟೆ ಪ್ರಶ್ನೆ ಪತ್ರಿಕೆಯನ್ನು ಮಕ್ಕಳು ಆಮೂಲಾಗ್ರವಾಗಿ ಓದಬೇಕಂತೆ. ಆಮೇಲೆ, "ಶುರು ಮಾಡಿ" ಎಂದು ಮೇಲ್ವಿಚಾರಕ (ನಾನು) ಹೇಳಬೇಕಂತೆ. ಆಮೇಲೆ ಮಕ್ಕಳು ಬರೆಯಲು ಶುರು ಮಾಡುತ್ತಾರಂತೆ. ಆ ಕಾಲುಗಂಟೆಯಲ್ಲಿ ಎರಡು ಪ್ರಶ್ನೆಗೆ ಉತ್ತರ ಬರೆಯಬಹುದಲ್ಲ ಎಂಬುದು ನನ್ನ ಪ್ರಶ್ನೆ. ಒಂದು ವೇಳೆ ಪ್ರಶ್ನೆಪತ್ರಿಕೆಯನ್ನು ಓದುವಾಗ ಉತ್ತರ ಗೊತ್ತಿಲ್ಲದೇ ಇರುವ ಪ್ರಶ್ನೆಗಳೇ ಹೆಚ್ಚಿದ್ದರೆ, ಬರುವ ಉತ್ತರವನ್ನೂ ಮರೆತುಬಿಡುವ ಸಾಧ್ಯತೆಯಿರುತ್ತೆ ಎಂದು ನನ್ನ ನಂಬಿಕೆ. ಆದರೆ ನಮ್ಮ ಮಕ್ಕಳಿಗೆ ಹಾಗೇನಿಲ್ಲ. ಒಂದು ಸಲ ನಾನು ಉತ್ತರಪತ್ರಿಕೆಯನ್ನು ಮೊದಲು ವಿತರಣೆ ಮಾಡಲು ಹೊರಟಿದ್ದೆ - ತಿಳಿಯದೆ. ಆಗ ಮಕ್ಕಳೇ, "ಸರ್, ಮೊದಲು ಪ್ರಶ್ನೆಪತ್ರಿಕೆ ಕೊಡಿ, ನಾವು ಓದಬೇಕು. ಆಮೇಲೆ, ಕಾಲುಗಂಟೆ ಆದಮೇಲೆ ಉತ್ತರಪತ್ರಿಕೆಯನ್ನು ಕೊಡಿ" ಎಂದು ನನ್ನನ್ನು ಎಚ್ಚರಿಸಿದರು.

ಪರೀಕ್ಷೆಗೆ ಬರುವ ಮುನ್ನ ದೇವಸ್ಥಾನಕ್ಕೆ ಹೋಗಿ ಬರುವ ವಿಷಯವು ಕ್ಲೀಷೆಯಾದರೂ, ನಾಸ್ತಿಕವಾದಿ ವಿದ್ಯಾರ್ಥಿಗಳೂ ಸಹ ಉತ್ತರಪತ್ರಿಕೆಯ ಆರಂಭದಲ್ಲಿ "ಓಮ್" ಎಂದೋ, "ಓಮ್ ಸಾಯಿರಾಮ್" ಎಂದೋ, "ಜೈ ಶ್ರೀ ರಾಮ್" ಎಂದೋ ತಮ್ಮ ಇಷ್ಟದೇವತೆಯನ್ನು ಯೋಗಿಗಳು ಭ್ರೂಮಧ್ಯೆ ಕಲ್ಪಿಸಿಕೊಳ್ಳುವಂತೆ ಉತ್ತರಪತ್ರಿಕೆಯ ಮೇಲ್ತುದಿಯ ಮಧ್ಯದಲ್ಲಿ ನಮೂದಿಸಿಬಿಟ್ಟಿರುತ್ತಾರೆ. "ನೀನು ನನ್ನ ಜೊತೆ ಆವತ್ತು ವಾದ ಮಾಡಿದ್ದೆಯಲ್ಲ, ದೇವರು ಇಲ್ಲವೇ ಇಲ್ಲವೆಂದು, ಮತ್ತೆ ನೀನೇ ಇವತ್ತು ಸಾಯಿಬಾಬಾ ಎಂಬ ದೇವರಲ್ಲದ ಯಃಕಶ್ಚಿತ್ ಮನುಷ್ಯನ ಹೆಸರನ್ನು ನಿನ್ನ ಉತ್ತರಪತ್ರಿಕೆಯಲ್ಲಿ ಬರೆದಿದ್ದೀಯಲ್ಲ?" ಎಂದು ಒಬ್ಬ ವಿದ್ಯಾರ್ಥಿಯನ್ನು ಟೀಕಿಸಿದ್ದಕ್ಕೆ ಅವನು ನನಗೆ ಕೊಟ್ಟ ಉತ್ತರ, "Why take risk, sir?" ಅಂತೂ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಯಾವುದೇ ರೀತಿಯ ರಿಸ್ಕನ್ನು ತೆಗೆದುಕೊಳ್ಳುವುದಿಲ್ಲ ಎಂಬ ಅರ್ಥವಾಯಿತು. ಮತ್ತೊಂದು ಉದಾಹರಣೆಗೆ, ಕರೆಗಂಟೆಗೆ ಐದೇ ನಿಮಿಷವಿದ್ದರೂ ಓಣಿಯಲ್ಲಿ ನಿಂತುಕೊಂಡೇ ಇನ್ನೂ ಓದುತ್ತಿರುತ್ತಾರೆ - ಮನೆಯಲ್ಲಿ ಓದಿದ್ದು ಸಾಲುವುದಿಲ್ಲವೆಂದು! ಯಾರಿಗೆ ಗೊತ್ತು, ಕೊನೆಯ ಗಳಿಗೆಯಲ್ಲಿ ಓದಿದ್ದು ಪರೀಕ್ಷೆಯಲ್ಲಿ ಬಂದುಬಿಟ್ಟರೆ? ನನ್ನ ಜೀವಮಾನದಲ್ಲೇ, ಪರೀಕ್ಷೆಯ ದಿನ ಯಾವುದೇ ಪುಸ್ತಕವನ್ನು ತೆಗೆದುಕೊಂಡು ಹೋಗಿಲ್ಲ. ಪರೀಕ್ಷೆಯು ಮುಗಿದ ಮೇಲೆ ಉತ್ತರಗಳನ್ನು ಚರ್ಚೆ ಮಾಡಿಲ್ಲ. ತಪ್ಪು ಬರೆದಿದ್ದರೆ ಸುಮ್ಮನೆ ಕೊರಗು ಯಾಕೆ, ಮಾರನೆಯ ದಿನದ ಪರೀಕ್ಷೆಗೆ ತೊಡಕಾಗುತ್ತೆ ಎನ್ನುವುದು ನನ್ನ ನಂಬಿಕೆ.

ಗಂಡು ಮಕ್ಕಳು - ಹೆಣ್ಣು ಮಕ್ಕಳು ಎಂಬ ತಾರತಮ್ಯ ಮಾಡಬಾರದೆಂಬ ಧರ್ಮಸೂಕ್ಷ್ಮವನ್ನು ತಿಳಿದಿದ್ದರೂ ಪರೀಕ್ಷೆಯ ವಿಷಯದಲ್ಲಿ ನಾನು ಕೆಲವು ತಾರತಮ್ಯಗಳನ್ನು ಹೇಳಲೇ ಬೇಕಾಗಿದೆ. ಆದರೆ ಇದರಿಂದ ಎಲ್ಲ ಗಂಡು ಮಕ್ಕಳೂ ಹೀಗೇನೇ, ಎಲ್ಲ ಹೆಣ್ಣು ಮಕ್ಕಳೂ ಹೀಗೇನೇ ಎಂಬ ನಿರ್ಣಯಕ್ಕೆ ಬರಲಾಗುವುದಿಲ್ಲ.

೧. ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಿಧಾನಕ್ಕೆ ಗುಂಡಗೆ ಬರೆಯುತ್ತಾರೆ. ಉತ್ತರ ಸರಿಯಿದೆಯೋ ಇಲ್ಲವೋ ಅವರಿಗೆ ಮುಖ್ಯವಾಗಿರುವುದಿಲ್ಲ, ಬರವಣಿಗೆ ಗುಂಡಗಿರಬೇಕು. ಫಲಿತಾಂಶದ ವಿಷಯವನ್ನು ತೆಗೆದುಕೊಂಡರೆ ಪ್ರತಿವರ್ಷವೂ ಹೆಣ್ಣು ಮಕ್ಕಳದೇ ಮೇಲುಗೈ ಎಂಬ ವಾರ್ತೆಯನ್ನು ಓದುತ್ತಲೇ ಇರುವುದರಿಂದ ಉತ್ತರವನ್ನು ಸರಿಯಾಗಿಯೂ ಚೆಂದದ ಬರವಣಿಗೆಯಿಂದಲೂ ಬರೆಯುತ್ತಾರೆಂಬುದು ಸಾಬೀತು ಮಾಡಬಹುದಷ್ಟೆ? ಹಾಗಂತ ಹುಡುಗರು ಚೆನ್ನಾಗಿ ಓದುವುದಿಲ್ಲವೆಂದಲ್ಲ, ಅಥವಾ ಚೆನ್ನಾಗಿ ಬರೆಯುವುದಿಲ್ಲವೆಂದಲ್ಲ. ಸಾಮಾನ್ಯವಾಗಿ ಹುಡುಗರಿಗೆ ಅದೆಂಥದ್ದೋ ಅವಸರ. "ಸರ್ ಮುಗೀತು..." ಎಂದು ಪರೀಕ್ಷೆಯ ಅವಧಿಗೆ ಅರ್ಧ ಮುಕ್ಕಾಲು ಗಂಟೆ ಮುಂಚೆ ಯಾರಾದರೂ ಉತ್ತರ ಪತ್ರಿಕೆಯನ್ನು ಕೊಡಲು ಸಿದ್ದರಿದ್ದಾರೆಂದರೆ, ಆ ವಿದ್ಯಾರ್ಥಿಯು ಶೇ 99, ಹುಡುಗನೇ! ವಿಚಿತ್ರವೆಂದರೆ, ಮೇಲೆ ಹೇಳಿದಂತೆ, ಪರೀಕ್ಷೆಯ ಕೊಠಡಿಯೊಳಗೆ ಹೋಗುವ ಮುನ್ನ, ಕರೆಗಂಟೆ ಬಾರಿಸಿದ ಮೇಲೂ, "ಸರ್ ಎರಡು ನಿಮಿಷ, ಸರ್ ಒಂದು ನಿಮಿಷ" ಎಂದು ಓದುವವರೂ ಹುಡುಗರೇ ಹೆಚ್ಚು!

೨. ಪ್ರತಿಯೊಂದು ಉತ್ತರ ಬರೆದ ಮೇಲೂ ಸ್ಕೇಲ್ ಇಟ್ಟುಕೊಂಡು ಗೆರೆಯೆಳೆಯುವ ಅಭ್ಯಾಸವು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚು! ನನ್ನ ಪಾಲಿಗಂತೂ ಇದು ಮುಖ್ಯವೇ ಅಲ್ಲ. ಹಾಗಾಗಿ ಗೆರೆ ಎಳೆಯಲು ಈ ಹೆಣ್ಣು ಮಕ್ಕಳು ಸಮಯ ವ್ಯರ್ಥ ಮಾಡುತ್ತಾರೆಂದೇ ನನ್ನ ಬಲವಾದ ಅನಿಸಿಕೆ. ಯಾಕೆಂದರೆ ನಾನೂ ಸಹ ಗಂಡು ಹುಡುಗ ವಿದ್ಯಾರ್ಥಿಯಾಗಿದ್ದೆನಲ್ಲ!

೩. ಸ್ಪರ್ಧಾತ್ಮಕ ಮನೋಭಾವನೆ ಹೆಣ್ಣು ಮಕ್ಕಳಲ್ಲೇ ಹೆಚ್ಚು ಎಂಬುದು ವಿವಾದಾತೀತವಾಗಿ ಒಪ್ಪಿಕೊಳ್ಳಬೇಕು. "ಅವಳಿಗೆ ತೊಂಭತ್ತೆಂಟು ಅಂಕ ಬಂದಿದೆ, ನನಗೆ ಬರೀ ತೊಂಭತ್ತೇಳುವರೆ" ಎಂದು ಹಠ ಹಿಡಿದು ಮುಂದಿನ ಪರೀಕ್ಷೆಯಲ್ಲಿ ತೊಂಭತ್ತೆಂಟುವರೆ ತೆಗೆದುಕೊಳ್ಳುವ ಛಲ ಹೆಣ್ಣು ಮಕ್ಕಳಿಗಲ್ಲದೇ ಹುಡುಗರಿಗಿರಲು ಸಾಧ್ಯವೇ? "ಮಗ, ಮ್ಯಾಥೆಮಾಟಿಕ್ಸ್ ಅಲ್ಲಿ ತೂಕು ಕಣೋ" ಎಂದು ಒಬ್ಬ ಹುಡುಗ ಹೇಳಿದರೆ ಅವನ ಗೆಳೆಯ "ನಾನು ಸೈನ್ಸಲ್ಲಿ ತೂಕು, ಕೈ ಕೊಡು!" ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಪಾರ್ಟಿ ಮಾಡುವ ಹುಡುಗರೇ ಹೆಚ್ಚು! ಬಹುಶಃ ಕಂಚಿ ಶ್ರೀಗಳ "ಮೈತ್ರೀಂ ಭಜತ - ಯುದ್ಧಂ ತ್ಯಜತ... ಸ್ಪರ್ಧಾಂ ತ್ಯಜತ.." ಕೃತಿಯನ್ನು ಗಂಡು ಮಕ್ಕಳು ಹೀಗೆ ಅರ್ಥ ಮಾಡಿಕೊಂಡಿದ್ದಾರೇನೋ!

೪. ಹೆಚ್ಚುವರಿ ಉತ್ತರಪತ್ರಿಕೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲೂ ಈ ತಾರತಮ್ಯವಿದೆಯಷ್ಟೆ. ಮೊದಲ ರ‍್ಯಾಂಕ್ ಪಡೆಯುವ ಹುಡುಗನೂ ಸಹ ತನ್ನ ಉತ್ತರಪತ್ರಿಕೆಗಳನ್ನು ಡೆಸ್ಕಿನ ಮೇಲೆ ಸರಿಯಾಗಿ ಇಟ್ಟುಕೊಳ್ಳಲು ಬರುವುದಿಲ್ಲ! ಆಗಾಗ್ಗೆ ಗಾಳಿಪಟಗಳು ಹಾರಿ ಬರುವುದು ಹುಡುಗರ ಡೆಸ್ಕುಗಳಿಂದಲೇ. ಹೆಣ್ಣು ಮಕ್ಕಳ ಉತ್ತರಪತ್ರಿಕೆಗಳು ಒಂದರ ಕೆಳಗೊಂದು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುತ್ತವೆ.

೫. ಕಾಪಿ ಹೊಡೆಯುವ ವಿದ್ಯೆಯನ್ನು ಮಾತ್ರ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಕರಗತ ಮಾಡಿಕೊಂಡಿದ್ದಾರೆ. ಅದರಲ್ಲೂ ಗಂಡಸರು ಮೇಲ್ವಿಚಾರಕರಾಗಿ ಬಂದರಂತೂ ಕಾಪಿ ಹೊಡೆಯುವ ಹೆಣ್ಣು ಮಕ್ಕಳಿಗೆ ಹಬ್ಬ! ಗಂಡು ಮಕ್ಕಳಿಗೆ ಕಾಪಿ ಹೊಡೆಯುವ ಕಲೆ ಅಷ್ಟು ಚೆನ್ನಾಗಿ ಗೊತ್ತಿಲ್ಲವೆಂದೇ ಹೇಳಬೇಕು. ಬಹುಪಾಲು ಹುಡುಗರು ಕಾಪಿ ಹೊಡೆಯಲು ಹೋಗಿ ಸಿಕ್ಕಿಬೀಳುವುದಕ್ಕೆ ನಾನಾ ಕಾರಣಗಳಿವೆ. ಒಂದಕ್ಷರ ನೋಡಿ (ಕಾಪಿ ಹೊಡೆದು) ಮುಂದಿನ ಪ್ಯಾರಾ ಬರೆಯುವ ತಾಕತ್ತಿರುವುದಿಲ್ಲ, ಉತ್ತರವನ್ನು ತೋರಿಸುವ ವಿದ್ಯಾರ್ಥಿಯು ಕ್ಯಾಪಿಟಲ್ ಲೆಟರ‍್ ಗಳಲ್ಲಿ ಬರೆದಿರಬೇಕು, ಆಗಲೇ ಸರಿಯಾಗಿ ಕಾಪಿ ಹೊಡೆಯಲು ಆಗುವುದು; ಅಕ್ಕಪಕ್ಕದವರ ಉತ್ತರ ಪತ್ರಿಕೆಯನ್ನು ನೋಡದೇ ಪಠ್ಯಪುಸ್ತಕವನ್ನೇ ಪರೀಕ್ಷಾಕೊಠಡಿಗೆ ತಂದು ಕಾಪಿ ಹೊಡೆಯಲು ಪ್ರಯತ್ನಿಸುವ ಬುದ್ಧಿವಂತಿಕೆ ತೋರಿಸುವುದು; ಅಥವಾ ಚೀಟಿಗಳನ್ನು ಜೇಬಿನಲ್ಲೇ ಬಚ್ಚಿಟ್ಟುಕೊಳ್ಳುವುದು - ಹೀಗೆ ಅನೇಕಾನೇಕ ಕಾರಣಗಳಿಂದ ಸಿಕ್ಕಿಬೀಳುತ್ತಾರೆ. ಹೆಣ್ಣು ಮಕ್ಕಳು ಸಿಕ್ಕಿಬೀಳುವುದು ಬಹಳ ವಿರಳ!

[ಮೇಲೆ ಹೇಳಿರುವ ಐದು ಅಂಶಗಳಿಗೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಮತ್ತೆ ಇದನ್ನು generalize ಮಾಡಲೂ ಸಹ ಸಾಧ್ಯವಿಲ್ಲ. ಎಲ್ಲವೂ ಗ್ರಹಚಾರದ ಪ್ರತಿಫಲ!]

"ಓಮ್", "ಸಾಯಿರಾಮ್" ಮುಂತಾದ ಮೂಢನಂಬಿಕೆಗಳೊಂದಿಗೆ ಇನ್ನೊಂದಷ್ಟನ್ನು ಮಕ್ಕಳಲ್ಲಿ ನಾನು ಗಮನಿಸಿದ್ದೇನೆ. ಮೇಲ್ವಿಚಾರಕನ ಸಹಿಯು ವಿದ್ಯಾರ್ಥಿಯ ಉತ್ತರಗಳ ಮೇಲೆ ಬಹಳ ಪರಿಣಾಮ ಬೀರುತ್ತೆ. ಕೈ ನಡುಕದಿಂದಲೋ, ಅವಸರದಿಂದಲೋ, ಇನ್ಯಾವುದೋ ಕಾರಣದಿಂದಲೋ ಸರಿಯಾಗಿ ಸಹಿ ಮಾಡಲಿಲ್ಲವೆಂದರೆ ದುರುಗುಟ್ಟು ನೋಡುತ್ತಾರೆ! ಅವರ ನೋಟವು ಸ್ಪಷ್ಟವಾಗಿ ಹೇಳುತ್ತೆ "ಹೀಗಾ ಸೈನ್ ಮಾಡೋದು, ಮುಳುಗಿಸಿಬಿಟ್ಟೆಯಲ್ಲೋ ನನ್ನ!" ಎಂದು. ನನಗೋ, ಸಹಿ ಮಾಡುವುದೆಂದರೆ ಬಹಳ ಪ್ರಯಾಸದ ಕೆಲಸ. ಬರೀ ಹೆಸರಿನ ಮೊದಲ ಅಕ್ಷರವನ್ನು ಸಹಿ ಮಾಡಲು ಕಲಿತಿಲ್ಲ. ಎಲ್ಲೇ ಸಹಿ ಮಾಡಿದರೂ "ಚಿಕ್ಕ ಹೆಸರು ತಾನೆ?" ಎಂದು ಪೂರ್ತಿ ಹೆಸರನ್ನೇ ಸಹಿ ಹಾಕುತ್ತೇನೆ. ಜೊತೆಗೆ, ನನಗೆ ಸರಿಯಾಗಿ ಸಹಿ ಹಾಕಲು ಬರುವುದಿಲ್ಲವೆಂದೇ ಒಪ್ಪಿಕೊಳ್ಳಬೇಕು. ಇಪ್ಪತ್ತು ಪೇಪರ್ ಇದ್ದರೆ ಇಪ್ಪತ್ತು ರೀತಿಯ ಸಹಿ ಮಾಡಿರುತ್ತೇನೆ! ಇನ್ನು ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳು ನನ್ನನ್ನು ಕ್ಷಮಿಸಿಯಾರೇ? ಕ್ರೌಂಚ ಪಕ್ಷಿಯನ್ನು ನೋಡುವಂತೆ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಾರೆ! ಒಬ್ಬ ಹುಡುಗಿಯಂತೂ ಕೇಳೇ ಬಿಟ್ಟಿದ್ದಳು ಒಮ್ಮೆ, "ಸರ್ ಇದೇನು?" ಎಂದು. ನಾನು, ನನ್ನ ಸಹಿಯ ಕೆಳಗೆ ಬರೆದ ದಿನಾಂಕವನ್ನು ಆ ಹುಡುಗಿಯು ಯಾವುದೋ ಹಲ್ಮಿಡಿ ಶಾಸನವನ್ನು ಓದುವಂತೆ ಓದಿದಳು!

ಇಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರೆ ನಾಳಿನ ಪರೀಕ್ಷೆಗೂ ಅದೇ ಪೆನ್ನು ಬಳಸುವ ಅಭ್ಯಾಸವು ನನಗೂ ಇತ್ತು. ಉತ್ತರ ಹೊಳೆಯದಿದ್ದರೆ ನನ್ನ ಅಧ್ಯಯನದ ಕೊರತೆಯು ಕಾರಣವಲ್ಲ, ನಾನು ಬಳಸುವ ಪೆನ್ನು ಕಾರಣ! ಕೆಲವು ಸಲ ಎರಡೆರಡು ಪೆನ್ನುಗಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವಂತೆ ಸಹಾಯ ಮಾಡುತ್ತಿದ್ದವು. ಆಗ ಗೆಳೆಯನಿಗೆ ಆ ಇನ್ನೊಂದು ಪೆನ್ನು ಕೊಟ್ಟು, "ಇದರಲ್ಲಿ ಬರಿ, ಒಳ್ಳೇ ಮಾರ್ಕ್ಸ್ ಬರುತ್ತೆ" ಎಂದು ಹೇಳಿದ್ದೂ ಉಂಟು! ಮತ್ತೆ ಕಾಲದಿಂದ ಕಾಲಕ್ಕೆ ಈ ನಂಬಿಕೆಯು ಈಗಿನ ಮಕ್ಕಳಲ್ಲೂ ಇದೆ!

ಕೆಲವು ಸಲ ಎರಡು ಮೂರು ತರಗತಿಗಳನ್ನು ಒಂದೇ ದೊಡ್ಡ ಕೊಠಡಿಯೊಳಗೆ ಕೂರಿಸಿ ಪರೀಕ್ಷೆ ಬರೆಸುತ್ತಾರೆ. ಆ ಸಮಯದಲ್ಲಿ ಒಂದು ಕೊಠಡಿಗೆ ಇಬ್ಬರು ಮೇಲ್ವಿಚಾರಕರುಗಳಿರುತ್ತಾರೆ. ಉತ್ತರಪತ್ರಿಕೆಗಳಿಗೆ ಸಹಿ ಹಾಕಬೇಕಾಗಿರುವುದು ತಮ್ಮ lucky teacher! ಇನ್ನೊಬ್ಬರು ಹಾಕಿಬಿಟ್ಟರೆ ಮುಗಿಯಿತು, ಅಂಕಗಳು ಬರುವುದೇ ಇಲ್ಲ! ನಾನು ಸುಬ್ಬಣ್ಣನಿಗೆ ಲಕ್ಕಿಯಾದರೆ, ಮುದ್ದಣ್ಣನಿಗೆ ಅನ್‍ಲಕ್ಕಿಯಾಗಬಹುದು. ಅವೆಲ್ಲ ತೀರ ವೈಯಕ್ತಿಕ ವಿಷಯ. ಆದರೆ, ಇದರಲ್ಲೂ ಶಿಫಾರಸು ನಡೆಯುತ್ತೆ. "ಅವರ ಕೈಲಿ ಸೈನ್ ಹಾಕಿಸಿಕೋ.." ಎಂದು ಕಣ್ಸನ್ನೆ ಮಾಡುವ ಹುಡುಗನಿಗೆ ಲಕ್ಕಿ ಟೀಚರ್ ಇಂದಲೇ ಬೈಗುಳಗಳು ದೊರಕುತ್ತವೆ. "ಏನೋ ಅದು ಸನ್ನೆ ಮಾಡ್ತಿದ್ದೀಯ, ಪೇಪರ್ ಕಿತ್ಕೊಂಡ್ ಕಳಿಸಿಬಿಡ್ತೀನಿ ನೋಡು..." ಎಂದು. ಆಗ ಲಕ್ಕಿ ಟೀಚರಿನ ಹುದ್ದೆಯು ಬದಲಾವಣೆಯಾಗುವ ಸಾಧ್ಯತೆಯೇ ಹೆಚ್ಚು!

ಮಕ್ಕಳು ಎರಡು ಗಂಟೆಗಳ ಕಾಲ ಸತತವಾಗಿ ಒಂದೇ ಕಡೆ ಕುಳಿತು ಪರೀಕ್ಷೆ ಬರೆಯುತ್ತಿದ್ದರೆ ಮೇಲ್ವಿಚಾರಕನು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡಾಡುತ್ತಲಿರುವಾಗಲೇ ಕಾಫಿಯ ಸರಬರಾಜು ಸಹ ಆಗುತ್ತೆ. ಅಯ್ಯೋ, ಪಾಪ ಆಯಾಸ ಆಗಿರುವುದು ಮಕ್ಕಳಿಗೆ, ಕಾಫಿ ಹೀರುವುದು ನಾವು! ಎಂದು ಒಮ್ಮೊಮ್ಮೆ ಅನ್ನಿಸಿದರೂ, ಪರೀಕ್ಷೆ ಬರೆಯುವುದು ಅವರ ಕರ‍್ತವ್ಯ, ಕಾಫಿ ಕುಡಿಯುವುದು ನನ್ನ ಕರ‍್ತವ್ಯ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.ಕಾಫಿ ಕುಡಿಯುತ್ತ ಕುಡಿಯುತ್ತ ನೂರೆಂಟು ಯೋಚನೆಗಳು ಸುಳಿಯುತ್ತವೆ. ಸಿ.ಬಿ.ಎಸ್.ಈ. ಇಲಾಖೆಯು ಈ ವರ್ಷದಿಂದ ಪರೀಕ್ಷೆಯನ್ನು ರದ್ದುಗೊಳಿಸಿದೆ. ಆ ಟೀಚರುಗಳಿಗೆ ಮೇಲ್ವಿಚಾರಣೆ ಮಾಡುವ ಸೌಭಾಗ್ಯವಿಲ್ಲವೆಂದು ನಾನು ವಿಷಾದ ವ್ಯಕ್ತ ಪಡಿಸುತ್ತೇನೆ. ಐ.ಸಿ.ಎಸ್.ಈ. ಇಲಾಖೆಯು ಪುಣ್ಯಕ್ಕೆ ಆ ನಿರ್ಧಾರವನ್ನು ಕೈಗೊಂಡಿಲ್ಲವಲ್ಲ ಎಂದು ಖುಷಿ ಪಡುತ್ತೇನೆ.

ಪರೀಕ್ಷೆಗಳು ಮಕ್ಕಳಿಗೆ ಬೇಕು. ಜೊತೆಗೆ ಅಸೆಸ್‍ಮೆಂಟೂ ಬೇಕು. ಸ್ಪರ್ಧೆಯು ಬೇಕು. ರ‍್ಯಾಂಕುಗಳೂ ಬೇಕು. ಪಾಸು - ಫೇಲು ಈ ವ್ಯವಸ್ಥೆಯು ಇರಬೇಕು. ಬರೀ ಗ್ರೇಡುಗಳಿಂದ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಹೇಳಿಕೊಡಲು ಸಾಧ್ಯವಾಗುವುದಿಲ್ಲ. ಆದರೆ ಬೇರೆ ಬೇರೆ ಮಾನಸಿಕ ತೊಂದರೆಗಳಾಗಬಹುದೆಂಬುದು ಶಿಕ್ಷಣ ಇಲಾಖೆಯವರ ಅಂಬೋಣ. ಅದರ ಬಗ್ಗೆ ಇಲ್ಲಿ ಚರ್ಚೆ ಅಪ್ರಸ್ತುತ! ಇನ್ನೊಮ್ಮೆ ಚರ್ಚೆ ಮಾಡುತ್ತೇನೆ.

-ಅ
14.03.2010
2AM

Tuesday, March 16, 2010

ಹೊಸವರ್ಷದ ಹೊಸ್ತಿಲಲಿ....

ಬಹುದಿನದ ಬಯಕೆಯಾ
ತೀರಿಸುವ ಸಲುವೇ
ಬೇಸಗೆಯ ಬಾನಿಂದು
ಕಪ್ಪುಗಟ್ಟಿದೆ ನೋಡು.
ನೀರು ಸುರಿವುದು, ಆಡು!
ಕುಣಿಕುಣಿದು ನೀ ಹಾಡು!

ಶಮೆಯನ್ನು ರಮೆಯನ್ನು
ಕರುಣಿಸುವ ಸಲುವೇ
ಬೇಸಗೆಯ ಇರುಳಿಂದು
ತಂಪುಗೊಂಡಿದೆ, ಗೆಳೆಯ!
ತಾಪವಡಗಿಸಲಿಳೆಯ,
ಇಳೆಗೆ ಸುರಿಸಲು ಮಳೆಯ.

ಬೇಡಿಕೊಳೊ ನನ್ನೊಡನೆ
ನೀನೂ ಕೈ ಮುಗಿದು -
ಹೊಸವರ್ಷದ ಹೊಸ್ತಿಲಲಿ
ಧರೆ ಹತ್ತಿ ಧಗೆಯಾಗಿ
ಉರಿದು ಹೋಗುವ ಮುನ್ನ,
ಸುಧೆಯು ಹರಿದರೆ ಚೆನ್ನ!

-ಅ
15.03.2010
7PM

Wednesday, February 24, 2010

ಅತಿಥಿ

ಜ್ಯೋತ್ಸ್ನಾಲಂಕೃತ ಬಾಂದಳಪರದೆಯೊಳೇನು, ಅಹ! ಈ ಹೊಸ ಛಾಯೆ?
ಬೆಳಕಿನ ಪುಳಕವನಳೆಯಲು ನೆಳಲಿನ ಸೆಳೆತದ ಹೊಳೆಯೇ ಈ ಮಾಯೆ!

ನಿತ್ಯಾಮಂತ್ರಿತ ಸತ್ಯಾಸಜ್ಜಿತ ಕೃತ್ಯಾಧೀನದಿ, ಓ ಅತಿಥಿ,
ನಡೆಸುವನೊಡೆಯನ ಹಿಡಿತದೊಳಡಗಿಹ ಒಡಲಿನ ಬಂಡಿಗೆ ನೀನೆ ರಥಿ!

ಸರಸವಿರಸದೊಳಗೆಷ್ಟೋ ರೂಪದಿ ಪ್ರತ್ಯಕ್ಷವೊ ನಿನ್ನಯ ಲೀಲೆ.
ಬಂದಿಹೆಯೈ ನೀನಿಲ್ಲಿಗೆ, ಬಾ! ಸೆಳೆದೊಯ್ಯುವಗೇತಕೆ ಕರೆಯೋಲೆ?

-ಅ
24.02.2010
3PM

Monday, February 22, 2010

ನೀ ಕೋಳಿ, ನೀ ಕೋಳಿ!

ಅಂಗಡಿಯವನಿಗೆ ಗಾಬರಿಯಾಗಿತ್ತು! ಇದೇನು ಇವರಿಬ್ಬರೂ ಹೀಗೆ ಜಗಳವಾಡುತ್ತಿದ್ದಾರಲ್ಲ! ಸಾಮಾನ್ಯವಾಗಿ ಪ್ರಾಣಿಗಳ ಹೆಸರನ್ನು ಹೇಳಿ ಬೈಯ್ಯುವುದಾದರೆ ಕೋತಿ, ಕತ್ತೆ, ಹಂದಿ, ನಾಯಿಗಳನ್ನು ಬಳಸುತ್ತೇವೆ. ಪಕ್ಷಿಪ್ರೇಮಿಗಳು ಗೂಬೆಯನ್ನು ಕರೆತರುತ್ತಾರಷ್ಟೇ ವಿನಾ ಬೇರೆ ಪಕ್ಷಿಗಳನ್ನು ಬೈಗುಳಗಳಿಗೆ ಬಳಸುವುದಿಲ್ಲ. ಆದರೆ ಅಂದು ನನ್ನ ಕಜ಼ಿನ್‍ಗಳು ಜಗಳವಾಡುತ್ತಿದ್ದುದು "ನೀ ಕೋಳಿ, ನೀ ಕೋಳಿ.." ಅಂತ! ಅಂಗಡಿಯಲ್ಲಿ ತಮಗೆ ಬೇಕಾದ ಒಂದು ಪದಾರ್ಥವು ಇದೆಯೋ ಇಲ್ಲವೋ ವಿಚಾರಿಸಬೇಕಿತ್ತು. ಮಧು (ಕಜ಼ಿನ್ ೧) ಸೌಮ್ಯಾಳನ್ನು (ಕಜ಼ಿನ್ ೨) ಕೇಳಿದ, "ನೀ ಕೋಳಿ.." ಅಂತ. ಅದಕ್ಕವಳು, "ಉಹ್ಞುಂ, ನೀ ಕೋಳಿ.." ಎಂದಳು. ಇದು ಹೀಗೇ ಬೆಳೆಯತೊಡಗಿತು, ಇಬ್ಬರ ಧ್ವನಿಯೂ ಏರತೊಡಗಿತು. ಅಂಗಡಿಯಾತನಿಗೆ ಕೇಳಿಸಿತು! "ನೀ ಕೋಳಿ, ನೀ ಕೋಳಿ...". ಅವನು ಟೆನ್ನಿಸ್ ಆಟವನ್ನು ವೀಕ್ಷಿಸುವವರಂತೆ ಒಮ್ಮೆ ಮಧುವಿನ ಮುಖವನ್ನೂ, ಇನ್ನೊಮ್ಮೆ ಸೌಮ್ಯಾಳ ಮುಖವನ್ನೂ ನೋಡುತ್ತ ಗಾಬರಿಗೊಂಡಿದ್ದ. ಆಮೇಲೆ, ಇವರೂ ಸಹ ಅವನ ಮುಖವನ್ನು ನೋಡಿದ ಮೇಲೆ ಎಚ್ಚೆತ್ತುಕೊಂಡರಲ್ಲದೆ, ಅವನ ಅಂಗಡಿಯಲ್ಲಿ ಏನೂ ಖರೀದಿಸಲೇ ಇಲ್ಲ. ಆ ಅಂಗಡಿಯವನಲ್ಲಿ ಮೂಡಿದ ಪ್ರಶ್ನೆಯು ಹಾಗೆಯೇ ಉಳಿದು ಹೋಯಿತು! ಪಾಪ!

ಮಧು ಮತ್ತು ಸೌಮ್ಯಾ ಇಬ್ಬರೂ ಮಾತನಾಡುತ್ತಿದ್ದುದು ಸಂಕೇತಿ ಭಾಷೆಯಲ್ಲಿ. ಉದ್ವೇಗದಲ್ಲಿ ಅವರಿಗೇ ಗೊತ್ತಿರದ ಹಾಗೆ ಧ್ವನಿಯೆತ್ತರಿಸಿಬಿಟ್ಟಿದೆ. ವಾಸ್ತವದಲ್ಲಿ ಅದು ಕೋಳಿಯಲ್ಲ. ಕsಳಿ ಎಂಬ ಪದದ ಅರ್ಥ ಕೇಳು ಎಂದು. ಅದು ಆಡುಭಾಷೆಯಲ್ಲಿ ಕೋಳಿಯಾಗಿಬಿಟ್ಟಿದೆ!

-ಅ
22.02.2010
1PM

Tuesday, February 16, 2010

ರೈಲು ಪ್ರಯಾಣಕ್ಕೆ - ಕ್ಲಿಯರ್ ಟ್ರಿಪ್ಪು!

ಬಹುಶಃ ಇದಕ್ಕಿಂತ ಚೆನ್ನಾಗಿ ರೈಲ್ವೇ ಮುಂಗಡ ಕಾಯಿದಿರುಸುವಿಕೆಯ ರೀತಿಯನ್ನು ಆನ್‍ಲೈನ್ ಕೊಡಲು ಸಾಧ್ಯವಿಲ್ಲವೆನಿಸುತ್ತೆ. ಸೊಗಸಾದ User Interface ಕೊಟ್ಟಿರುವ ಈ ವೆಬ್‍ಸೈಟಿಗೆ ಧನ್ಯವಾದಗಳು. ನನಗಂತೂ ಇದರಿಂದ ಬಹಳವಾಗಿ ಉಪಯೋಗವಾಗಿದೆ. ರೈಲು ಪಯಣಿಗರೆಲ್ಲರಿಗೂ ಇದರ ಸದುಪಯೋಗವಾಗಲಿ. ಶಮ್!

http://www.cleartrip.com/trains/calendar

-ಅ
16.02.2010
9.50AM

Thursday, February 11, 2010

ಚಿಕ್ಕ ಜಗತ್ತು

ಅದೆಷ್ಟು ಚಿಕ್ಕದೀ ಜಗವು!?!
ಇಲ್ಲೇ ಇರುವುದಲ್ಲ
ಬಾಳ ಬಯಕೆಗಳೆಲ್ಲ!
ದೂರ ಪಯಣದ ಹಾದಿ
ಚಿಕ್ಕ ಜಗದೊಳಗೇಕೆ?

ಅದೆಷ್ಟು ಚಿಕ್ಕದೀ ಜಗವು!?!
ಎದುರೆ ನಡೆಯುತಲಿಹರು
ದಾರಿ ತೋರಿದ ಜನರು
ಹಿಂದೆ ಸಾಗುತಲಿರಲು
ಹಾದಿಯರಸುವ ಸಖರು.

ಅದೆಷ್ಟು ಚಿಕ್ಕದೀ ಜಗವು!?!
ಬದಿಯಲೆ ಇರುವರಲ್ಲ
ಕನಲ ಕಟ್ಟಿಸಿದವರು!
ಹೊನಲ ಹರಿಯಿಸಿದವರು!
ಅದೆಷ್ಟು ಚಿಕ್ಕದೀ ಜಗವು!?!
ಆದರೂ,
ಅದೆಷ್ಟು ವಿಶಾಲವೀ ಜಗವು!!?!!

-ಅ
11.02.2010
2.20PM

Thursday, February 4, 2010

ಸ್ವರ್ಗದ ಬಾಗಿಲು

ಚೆಂದದ ಬೆಳದಿಂಗಳಿನಿರುಳಲಿ
ಲಕ್ಷ್ಮೀ ನರಸಿಂಹನ ಗುಡಿಯಲಿ
ಶಿವರಂಜನಿಯಾಲಾಪದ ಇಂಪಿನ
ಹಾದಿಯೊಳೇ ಶತಪಥವನು ಹಾಕಿದೆ.

ತಿಂಗಳ ಹಾಲ್ಗಡಲಂಗಳದಲಿ ತಾ-
ನೋಲಗದವನೊಬ್ಬನೆ ಸಾಧನೆಗೆ
ಮುಖ ಮಾಡಿ ಕುಳಿತಿರಲವನ ಶ್ರುತಿ-
ರಾಗ ಸ್ವರ ಪಕ್ವತೆಯಲಿರಲೆದುರು
ತೆರೆದಿತ್ತು - ಸಿರಿ ’ಸ್ವರ್ಗದ ಬಾಗಿಲು’!

-ಅ
31.12.2010
8PM

Friday, January 22, 2010

ಹಾಸ್ಯದಾಸೆ

ಕಡಲ ತೀರದಲ್ಲಿ ಅಚಲ-
ವಾಗಿ ನಿಂತ ಬಂಡೆಗೆ
ಗುಟ್ಟನರಿವ ತವಕವೇನು?
ಪರುಶದಲೆಯೆ ದುರ್ವಿಧಿ,
ಸೊಬಗ ತೋರೆ ನೀಲಧಿ!

ಬಾನ ಬಯಕೆ ಹೊತ್ತ ಹಕ್ಕಿ
ಹಾರುತಿರಲು ಮೇಲಕೆ
ಬಾನು ರೆಕ್ಕೆಗೆಟುಕಬಲ್ಲ
ಮರವಲ್ಲದ ತೋರಿಕೆ,
ಗಗನಕೆಲ್ಲಿ ಹೋಲಿಕೆ?

ಹೃದಯ ರಾಜ್ಯದರಸ ತಾನು
ಕ್ಷಿತಿಜ ಹಿಡಿಯೆ ಹೊರಟರೆ
ಬುವಿಯೊ? ಬಾನೊ? ಗುರಿಯೆ ಇಲ್ಲ.
ಬರಿಯೆ ಹಾಸ್ಯದಾಸೆಯು,
ಅರಿಯದಿರಲು ದಾಸ್ಯವು!

-ಅ
21.01.2010
9PM

Wednesday, January 20, 2010

ಮೂರ್ತಿ ಚಿಕ್ಕದಾದರೂ...

ಮಿತ್ರ ನಾಗೇಶ್ ಆಯೋಜಿಸಿದ್ದ ‘ಜ಼ರಾ ಹಟ್ಕೇ‘ ಕಾರ‍್ಯಕ್ರಮಕ್ಕೆ ಹೋಗಲಾಗಲಿಲ್ಲವೆಂಬ ಬೇಸರವು ಅವರದೇ ಇನ್ನೊಂದು ಈಮೇಯ್ಲಿನಿಂದ ನನಗೆ ಇಮ್ಮಡಿಯಾಯಿತು. ‘ಅಯ್ಯೋ, ವಿ.ಕೆ.ಮೂರ‍್ತಿಯವರ ಭೇಟಿ ಮಾಡುವ ಅವಕಾಶವನ್ನು ತಪ್ಪಿಸಿಕೊಂಡೆನಲ್ಲ!! ರವಿಯವರ ದರ್ಶನ ಭಾಗ್ಯವು ಕೈ ಜಾರಿತಲ್ಲ!!‘

ನಾಗೇಶರ ಆಹ್ವಾನವು ಎಷ್ಟು ಸರಳವಾಗಿತ್ತು, ಎಷ್ಟು ಸೆಳೆಯುವಂಥದ್ದಾಗಿತ್ತು - ಅದನ್ನು ಏನೂ ಬದಲಿಸದೆ ಹಾಗೆಯೇ ಪೇಸ್ಟ್ ಮಾಡುತ್ತೇನೆ.

Dear friends,

Any idea what is common between Guns of Nevarone, Kagaz Ke phool,
IIFA Life time achievement award, Time Magazine one page write up
as recently as August 2009, Shankarpuram and Zara Hatke?

Well, the answer is Shri. V.K. Murthy, arguably the best ever cinematographer
of Indian Cinema and the legendary guest of Zara Hatke, who would present the
award to another legend.

Just got his consent, after one week of search and pursuation.

Silhoutte of Gurudutt in Kagaz ke Phool ' yeh duniya agar mil bhi jaaye to
kya hai' perhaps is the most remembered shot in Hindi cinema and one shot
the next generation cinematographers benchmarked themselves to.

regards
Nagesh

ಕೇವಲ ಮನರಂಜನೆಗಾಗಿ, ಸಂತೋಷಕ್ಕಾಗಿ ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಿದ್ದ ನನಗೆ ನಾಗೇಶರ ಪರಿಚಯವಾದ ಮೇಲೆ ಅದೇ ಗೀತೆಗಳನ್ನು ಕೇಳುವ ರೀತಿಯೇ ಬದಲಾಗಿಬಿಟ್ಟಿತು! ಚಿತ್ರರಂಗದ ಅಂತರಂಗವನ್ನು ಚರ್ಚಿಸುವ, ವಿಮರ್ಶಿಸುವ, ವಿಶ್ಲೇಷಿಸುವ ಮತ್ತು ಅದರೊಂದಿಗೇ ಜೀವಿಸುವ ಗುಂಪಿನ ಒಡನಾಟವನ್ನು ನನಗೆ ದೊರಕಿಸಿಕೊಟ್ಟ ನಾಗೇಶರಿಗೆ ಎಷ್ಟು ಕೃತಜ್ಜತೆಗಳನ್ನು ಹೇಳಿದರೂ ಸಾಲದು.ವಿ.ಕೆ. ಮೂರ‍್ತಿಯೆಂಬ ಮೈಸೂರಿಗರಿಗೆ ಈ ಸಲದ ದಾದಾ ಫಾಲ್ಕೆ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ! ಅವರ ಕೈಯಿಂದ ರವಿಯವರ ಸನ್ಮಾನ ಮಾಡಿಸಿದ ನಾಗೇಶ್ ಮತ್ತವರ ತಂಡದವರ ಕೃತಿಯು ಶ್ಲಾಘನೀಯ ಮತ್ತು ಪ್ರಶಂಸಾರ್ಹ. ಚಲನ ಚಿತ್ರವೆಂದರೆ ಕೇವಲ ನಿರ್ದೇಶಕ, ನಿರ್ಮಾಪಕರಲ್ಲ. ಕೇವಲ ಪರದೆಯ ಮೇಲೆ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವ ಹೀರೋ ಹೀರೋಯಿನ್‍ಗಳಲ್ಲ! ತಾಂತ್ರಿಕ ವರ್ಗದವರ ಕೆಲಸವು ಇವರೆಲ್ಲರ ಕೆಲಸಕ್ಕೆ ಸರಿಸಮಾನವಾಗಿರುತ್ತೆ, ಮತ್ತು ಅದನ್ನು ಗುರುತಿಸುವುದು ಚಿತ್ರಪ್ರೇಮಿಗಳ, ಚಿತ್ರವಿಮರ್ಶಕರ ಕರ್ತವ್ಯ ಎಂಬುದನ್ನು ಸಾಬೀತು ಮಾಡುವಂತಿದೆ ಮೂರ‍್ತಿಯವರಿಗೆ ಪ್ರದಾನವಾದ ಈ ಸಲದ ಫಾಲ್ಕೆ ಪ್ರಶಸ್ತಿಯು. ನಾಗೇಶ್ ಭಾಷೆಯಲ್ಲಿಯೇ ಹೇಳಬೇಕೆಂದರೆ ಮೂರ‍್ತಿಯವರದು ’ಮೂರ‍್ತಿ ಚಿಕ್ಕದಾದರೂ ಕೀರ‍್ತಿ ದೊಡ್ಡದು!!’ಗುರುದತ್ ಎಂಬ ಯಶಸ್ಸಿನ ಹೆಸರು ಎಲ್ಲೆಲ್ಲಿ ಕೇಳಿಬರುತ್ತೋ ಅಲ್ಲೆಲ್ಲ ಮೂರ‍್ತಿಯ ಹೆಸರೂ ಸಹ ರಾರಾಜಿಸುರುವುದು. ಗುರುದತ್, ಎಸ್.ಡಿ.ಬರ‍್ಮನ್, ರಫಿ, ಮೂರ‍್ತಿ - ಎಲ್ಲರ ಸಂಗಮವಿದ್ದರೆ ಅವರು ಸೃಷ್ಟಿಸಬಲ್ಲ ಸ್ವರ್ಗವು ಹೇಗಿರುತ್ತೆ ಎಂಬುದರ ಉದಾಹರಣೆಯು ಈ ವೀಡಿಯೋದಲ್ಲಿದೆ!-ಅ
20.01.2010
12.20PM

Monday, January 18, 2010

ಅಶ್ವಥ್

ಯಾವ ಹಳೇ ಚಿತ್ರವನ್ನು ನೋಡಿದಾಗಲೂ ನಾನೂ ವಿಜಯಳೂ ಅಶ್ವಥ್ ಬಗ್ಗೆ ಒಂದು ಕಮೆಂಟ್ ಮಾಡೇ ಮಾಡುತ್ತೇವೆ. "ಇವರಷ್ಟು ನ್ಯಾಚುರಲ್ ಆಗಿ ನಟಿಸೋರು ಕನ್ನಡದಲ್ಲಿ ಇನ್ಯಾರೂ ಇಲ್ಲ!" ಎಂದು. ಅದೂ ಅಲ್ಲದೆ, ಅಶ್ವಥ್ ಅವರು ನಮ್ಮ ಹತ್ತಿರದ ಸಂಬಂಧಿಯೊಬ್ಬರನ್ನು ಹೋಲುತ್ತಾರಾದ್ದರಿಂದ ಅವರ ಡೈಲಾಗುಗಳು ತೀರ ನಮ್ಮ ಮನೆಯೊಳಗೇ ನಡೆಯುವ ಸಂಭಾಷಣೆಯಂತೆಯೇ ಇರುತ್ತೆ.

ಶಬ್ದವೇಧಿ ಚಿತ್ರದಲ್ಲಿ ಅಶ್ವಥ್‍ರನ್ನು ನೋಡಿ ಬಹಳ ಬೇಸರವಾಗಿತ್ತು - ತುಂಬ ಸೋತು ಹೋಗಿದ್ದರೆಂದೆನಿಸಿತು. ’ಹೊಸಬೆಳಕಿನ’ ಕಾಫಿ ಚೆಲ್ಲಿಕೊಳ್ಳುವ ಭಾವನ, ’ಸತ್ಯ ಹರಿಶ್ಚಂದ್ರ’ನ ಗುರುವಾದ ಶಾಂತಮೂರ‍್ತಿ ವಸಿಷ್ಠನ, ಆಸ್ಪತ್ರೆಯಲ್ಲಿ ಕಣ್ಣಿರು ಕನ್ನಡಕದ ಮೇಲೆ ಬಿದ್ದು ಕಣ್ಣೇ ಕಾಣದಂತಿದ್ದ ’ಕರ್ಣ’ನ ತಂದೆಯ, ’ನಾಗರ ಹಾವಿನ’ ಚಾಮಯ್ಯ ಮೇಷ್ಟರ, ’ಚಂದನದ ಗೊಂಬೆ’ಯ ಮೇಷ್ಟರ - ಶಬ್ದವೇಧಿಯೊಂದನ್ನುಳಿದು ಮಿಕ್ಕ ಎಲ್ಲ ಚಿತ್ರಗಳ ಎಲ್ಲ ಪಾತ್ರಗಳ ಸ್ವಾಭಾವಿಕತೆಯು ಶಬ್ದವೇಧಿಯಲ್ಲಿ ಕಾಣಲಿಲ್ಲವೆಂಬ ಬೇಸರವಿತ್ತು - ಚಿತ್ರ ನೋಡಿದ ಕೆಲ ಕ್ಷಣಗಳು. ಆದರೂ ಅದೇನು ಅಂಥ ನೊಂದುಕೊಳ್ಳುವಂಥದ್ದಲ್ಲ.ಹಳೆಯ ಮೈಸೂರು-ಕನ್ನಡವನ್ನು ಮಾತನಾಡುವ ಕೆಲವೇ ಕೆಲವು ನಟರಲ್ಲಿ ಇವರೂ ಒಬ್ಬರಾಗಿದ್ದರೆಂಬುದು ಗಮನಾರ್ಹ. ಮಿಸ್ಸಿಂಗ್ ಅಶ್ವಥ್!

-ಅ
18.01.2010
12.12PM

Friday, January 15, 2010

Wednesday, January 13, 2010

ಪಯಣದ ಹಾದಿಯಲ್ಲಿ..

ಗುಲ್ಬರ್ಗದ ಚಿಂಚೋಳಿಯಲ್ಲಿ ಪ್ರೇಕ್ಷಣೀಯ ಸ್ಥಳವೇನಿದೆ, ಏನಿಲ್ಲವೆಂದು ಯೋಚಿಸುವ ಸ್ಥಿತಿಯಲ್ಲಿ ನಮ್ಮ ತಂಡದವರಿರಲಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಗೆ ಹೋಗಿಬಿಡಬೇಕೆಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. "ಅಲ್ಲಿ ಪ್ರತಿದಿನವೂ ಭೂಕಂಪನವಾಗುತ್ತಲೇ ಇದೆಯಂತೆ, ಅಲ್ಲಿನ ಜನರು ಮನೆಯೊಳಗೆ ಸಹ ಮಲಗಲು ಹೆದರುತ್ತಿದ್ದಾರಂತೆ. ನೆಲದ ಮೇಲೆ ಕಿವಿಯಿಟ್ಟರೆ ಕೆಳಗೆ ಪಾತ್ರೆಗಳು ಬಿದ್ದಂತೆಲ್ಲಾ ಶಬ್ದವಾಗುತ್ತಿದೆಯಂತೆ..." ಇಷ್ಟೆಲ್ಲ ಕೇಳಿದ ಮೇಲೂ ಅಲ್ಲಿಗೆ ಹೋಗದೇ ಇರಲು ಸಾಧ್ಯವೇ? ಹಿರಿಯ ಮಿತ್ರ ಗೋವಿಂದ್ ರಾಜರು "ನಡೀರಿ ಹೊರಟುಬಿಡೋಣ" ಎಂದಿದ್ದೇ ತಡ, ಬಾಲರಾಜ್, ಅನ್ನಪೂರ್ಣ ಮತ್ತು ನಾನು ನಮ್ಮ ನಮ್ಮ ಬ್ಯಾಗುಗಳನ್ನು ಸಿದ್ಧಪಡಿಸಿಕೊಂಡೇ ಬಿಟ್ಟೆವು!

ಮಾರ್ಚಿನ ಗುಲ್ಬರ್ಗದೊಳಕ್ಕೆ ಕಾಲಿಡುವುದು ಬೆಂಗಳೂರಿಗರ ಪಾಲಿಗಂತೂ ಕೆಂಡದ ಮೇಲೆ ನಡೆಯುವಂತೆಯೇ! ಅನ್ನಪೂರ್ಣರು ಬಸ್ ಸ್ಟ್ಯಾಂಡಿನಲ್ಲಿಯೇ ಹೇಳುತ್ತಿದ್ದರು - "ಮುಂದಿನ ತಿಂಗಳ ಹೊತ್ತಿಗೆ ಅಲ್ಲಿ meteorology department ನವರು ತಮ್ಮದೊಂದು ಕೇಂದ್ರವನ್ನು ಅಲ್ಲಿ ತೆರೆಯಲಿದ್ದಾರೆ. ಆಮೇಲೆ ಅಲ್ಲಿ ಯಾರನ್ನೂ ಬಿಡುವುದಿಲ್ಲ. Security ತುಂಬ ಟೈಟಾಗಿರುತ್ತೆ. ಅಷ್ಟರೊಳಗೆ ಹೋಗಿ ಬಂದುಬಿಡಬೇಕು" ಎಂದು. ಧಿಡೀರ್ ತೀರ್ಮಾನವಾದ್ದರಿಂದ ರೈಲಿಗಾಗಿ ಕಾಯಲು ಆಗಲಿಲ್ಲ ನಮಗೆ. ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಬಸ್ಸಿನಲ್ಲಿ ಸಂಚಾರ ಮಾಡುವುದೇ ಒಂದು ಸಾಹಸ ಯಾತ್ರೆಯೆಂದು ನಮಗೆ ಯಾರಿಗೂ ಗೊತ್ತಿರಲಿಲ್ಲ. ಬೆಳಿಗ್ಗೆ ಒಂಭತ್ತು ಗಂಟೆಗೆ ತಲುಪಬೇಕಾದ ಬಸ್ಸು ಮಧ್ಯಾಹ್ನ ಒಂದುವರೆಗೆ ತಲುಪಿದರೆ ಆ ಬಿಸಿಲಿನಲ್ಲಿ ಶೆಖೆಯೊಳಗೆ ಕುಳಿತುಕೊಳ್ಳುವುದೂ ಸಹ ಒಂದು ಸಾಹಸವೇ.

[ಇದು ಏನೂ ಇಲ್ಲ, ನನ್ನ ಗೆಳೆಯನೊಬ್ಬ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರಲೆಂದು ಹೊರಟವನು ಲೇಟಾಗಿದ್ದಕ್ಕೆ ಒಂದು sms ಕಳಿಸಿದ್ದ - "ಕಳೆದ ಹದಿನೈದು ಗಂಟೆಗಳ ಕಾಲದಿಂದ ನಾನು ಬಸ್ಸಿನಲ್ಲಿ ಕುಳಿತಿದ್ದರ ಫಲವಾಗಿ ಈಗ ಸಕಲೇಶಪುರ ತಲುಪಿದೆ!" ಎಂದು. ಆ ಪರಿಸ್ಥಿತಿಯಲ್ಲಿಯೂ ಅವನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ನಾನು, "ಹದಿನೈದು ಗಂಟೆಗಳ ಕಾಲ ಬಸ್ಸಿನಲ್ಲಿ ಕುಳಿತುಕೊಳ್ಳುವುದರ ಬದಲು ಶಿರಾಡಿ ಘಟ್ಟದಲ್ಲಿ ಇಳಿದುಬಿಟ್ಟು ನಡೆದುಕೊಂಡು ಬಂದಿದ್ದರೆ ಚೆನ್ನಾಗಿರುತ್ತಿತ್ತು, ಮತ್ತು ಇನ್ನೂ ಬೇಗ ಸಕಲೇಶಪುರವನ್ನು ತಲುಪಬಹುದಿತ್ತು" ಎಂದು ತಮಾಷೆ ಮಾಡಿದ್ದೆ.]

ತುಮಕೂರಿನಲ್ಲಿ ಇನ್ನೊಂದು ಬಸ್ಸು ಕೆಟ್ಟು ನಿಂತಿದ್ದೂ, ಅಲ್ಲಿನ ಪ್ರಯಾಣಿಕರನ್ನೆಲ್ಲ ನಮ್ಮ ಬಸ್ಸಿನೊಳಕ್ಕೆ ಅನಿವಾರ‍್ಯವಾಗಿ ಹತ್ತಿಸಿಕೊಳ್ಳಬೇಕಾಗಿದ್ದುದೂ ನಮ್ಮ ಕಂಡಕ್ಟರಿಗೆ ತೀವ್ರ ಅಸಮಾಧಾನವನ್ನುಂಟು ಮಾಡಿತ್ತು. ಅದೇನಾಯಿತೋ ಏನೋ, ಇದ್ದಕ್ಕಿದ್ದ ಹಾಗೆ ಇಬ್ಬರು ಕಂಡಕ್ಟರುಗಳೂ ಎತ್ತೆತ್ತೆತ್ತರ ಧ್ವನಿಯಲ್ಲಿ ಜಗಳ ಆಡಲು ಆರಂಭಿಸಿದರು - ಗುಲ್ಬರ್ಗದ ಕನ್ನಡದಲ್ಲಿ! ಹತ್ತೇ ಜನರನ್ನು ಹತ್ತಿಸಿಕೊಳ್ಳುವುದು ಎಂದು ಇವನು, ಇಲ್ಲ - ಹದಿನೈದು ಜನರನ್ನು ಹತ್ತಿಸಿಕೊ ಎಂದು ಅವನು - ಇವಿಷ್ಟನ್ನೇ ಹಿಡಿದುಕೊಂಡು ಒಂದು ಗಂಟೆ ಕಾಲ ಜಗಳವಾಡಿದ್ದಾರೆ! ಒಂದು ಗಂಟೆಯ ನಂತರ ನಮ್ಮ ಕಂಡಕ್ಟರನಿಗೆ ಆಯಾಸವಾಯಿತೋ ಮನಸ್ಸು ಕರಗಿತೋ ಗೊತ್ತಿಲ್ಲ, ಹದಿನೈದು ಜನರನ್ನೂ ಹತ್ತಿಸಿಕೊಂಡ. ಇವರ ಜಗಳವನ್ನು ನೋಡಿ - "ಓಹೋ ಗುಲ್ಬರ್ಗದಲ್ಲಿ ಭಾರೀ ಬಿಸಿಲಿರಬೇಕು" ಎಂದು ನಮಗೆಲ್ಲರಿಗೂ ಅನ್ನಿಸದೇ ಇರಲಿಲ್ಲ.

ಇದು ಕಂಡಕ್ಟರನ ಕಥೆಯಾದರೆ ಡ್ರೈವರನದು ಬೇರೆಯದೇ ಕಥೆ. ಅವನ ಮೂಡು ಚೆನ್ನಾಗಿರಲಿಲ್ಲವೋ, ಅಥವಾ ನಮ್ಮ ಬಸ್ಸಿಗೆ ಯಾವುದೋ ವಿಶೇಷ ವೇಗ ನಿಯಂತ್ರಣ ಅಳವಡಿಸಿಬಿಟ್ಟಿದ್ದರೋ ಕೆ.ಎಸ್.ಆರ್.ಟಿ.ಸಿ.ಯವರು ಎನ್ನುವಂತೆ ಚಲಿಸುತ್ತಿದ್ದ. ಸಿಕ್ಕ ಸಿಕ್ಕ ಆಟೋಗಳು, ಗೂಡ್ಸ್ ಲಾರಿಗಳು, ಡಕೋಟ ಬಸ್ಸುಗಳೆಲ್ಲ ನಮ್ಮ ಬಸ್ಸನ್ನು ಓಟದ ಪಂದ್ಯದಲ್ಲಿ ಸೋಲಿಸುವಂತೆ ಓವರ್‍ಟೇಕ್ ಮಾಡಿಕೊಂಡು ನಮ್ಮನ್ನು ಹೀಯಾಳಿಸಿ ಹೋಗುತ್ತಿತ್ತು. ಅದೂ ಅಲ್ಲದೆ ನಮ್ಮ ಡ್ರೈವರು ಯಾವ ಯಾವುದೋ ಹಳ್ಳಿಗಳ ಒಳಗೆಲ್ಲ ಹೋಗಿ, ನಿಲುಗಡೆಯನ್ನು ಕೊಟ್ಟುಕೊಂಡು ಗುಲ್ಬರ್ಗ ತಲುಪುವುದರೊಳಗೆ "ಸ್ವಲ್ಪ" ತಡವಾಯಿತಷ್ಟೆ! "ಬಸ್ಸಿನ ಪ್ರಯಾಣಿಕರೆಲ್ಲರ patience ಗೆ ನಾವು ಮಣಿದರೂ ನಾವು ಮಾತ್ರ patients ಆಗೋದು ಬಾಕಿ" ಎಂದು ನಾನು ಇಳಿದೊಡನೆ ಹೇಳಿದೆ.

ಕಾಮತ್‍ನಲ್ಲಿ ಭರ್ಜರಿ ಭೋಜನದ ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಈ ಬಾರಿಯ ಪ್ರಯಾಣ ರಾಜಹಂಸದಲ್ಲಲ್ಲ. ಗ್ರಾಮೀಣ ಸಾರಿಗೆಯಲ್ಲಿ. ಜೊತೆಗೆ ರಸ್ತೆಯಿಲ್ಲದ ರಸ್ತೆ - ರಸ್ತೆಯಲ್ಲದ ರಸ್ತೆ! ಕೊನೆಯ ಸೀಟಿನಲ್ಲಿ ಕುಳಿತುಕೊಂಡಿದ್ದರೆ ಅದರ ಮಜವೇ ಬೇರೆ - ಆ ಅನುಭವದಿಂದ ವಂಚಿತಗೊಳ್ಳಲಾಗುತ್ತಾ? ನಾವೂ ಕೊನೆಯ ಸೀಟಿನಲ್ಲೇ ಕುಳಿತಿದ್ದೆವು. ಕೇವಲ ಎಪ್ಪತ್ತೈದು ಕಿಲೋಮೀಟರ್ ಇರುವ ಚಿಂಚೋಳಿಗೆ ಬಸ್ಸು ತಲುಪಲು ಮೂರು ಗಂಟೆಗಳ ಕಾಲ ಬೇಕು ಎಂದು ಜನ ಹೇಳಿದ್ದನ್ನು ಕೇಳಿದಾಗಲೇ ರಸ್ತೆ ಹೇಗಿರಬಹುದೆಂಬ ಕಲ್ಪನೆ ನಮ್ಮ ಕಣ್ಣ ಮುಂದೆ ಬಂದಿತು. ಈಗಾಗಲೇ ನಾವು ಬೆಂಗಳೂರಿನಿಂದ ಹದಿನಾರು ಗಂಟೆಗಳ ಕಾಲ ಬಸ್ಸಿನಲ್ಲಿ ಕುಳಿತಿದ್ದೆವು - ಈಗ ಇನ್ನೂ ಮೂರುಗಂಟೆಗಳ ಕಾಲ!

ಈ ಬಸ್ಸಿನ ಕಂಡಕ್ಟರು ಮತ್ತು ಸಹಪ್ರಯಾಣಿಕರ ಸಲಹೆಯ ಮೇರೆಗೆ ನಮ್ಮ ಪ್ಲ್ಯಾನುಗಳು ಸ್ವಲ್ಪ ಬದಲಾದವು. ಚಿಂಚೋಳಿಗೆ ಹೋಗಿ, ಅಲ್ಲಿಂದ ಗುರುಂಪಳ್ಳಿ ಎಂಬಲ್ಲಿಗೆ ಹೋಗಬೇಕೆಂದಿದ್ದ ನಮ್ಮನ್ನು ಚಿಮ್ಮನಚೋಡ ಎಂಬ ಊರಿನಲ್ಲಿ ಇಳಿದುಕೊಳ್ಳಲು ಹೇಳಿದರು. ಅಷ್ಟೇನೂ ರಶ್ಷಿರದ ಬಸ್ಸಿನ ಜನರೆಲ್ಲರೂ ನಮ್ಮನ್ನು ಸಹಸ್ರಾರು ಪ್ರಶ್ನೆಗಳಲ್ಲಿ ಮುಳುಗಿಸಿಬಿಟ್ಟರು. "ಭೂಕಂಪ ನೋಡೋದಕ್ಕೆ ಬಂದಿದ್ದೀರಾ?" ಎಂಬ ಪ್ರಶ್ನೆಯಿಂದ ಹಿಡಿದು "ನೀವು ಸಿನಿಮಾದೋರಾ?" ಎನ್ನುವ ತನಕ ಎಲ್ಲ ತರಹೇವಾರಿ ಪ್ರಶ್ನೆಗಳನ್ನೂ ಎದುರಿಸಿದೆವು. ನಮ್ಮ ನಿಲ್ದಾಣ ಬಂತೆಂದು ಹೇಳಿ ಇಳಿದುಕೊಂಡೆವು. ಇಳಿದ ಮೇಲೆ ಅಲ್ಲಿದ್ದ ಒಂದೇ ಒಂದು ಪೆಟ್ಟಿಗೆ ಅಂಗಡಿಯವನಲ್ಲಿ ಕೇಳಿದರೆ ಆಗ ಗೊತ್ತಾಯಿತು ಅದು ಚಿಮ್ಮನಚೋಡ ಊರಲ್ಲ - ಹದಿನಾಲ್ಕು ಕಿಲೋಮೀಟರ್ ಮುಂಚೆಗಿನ ಚಿಮ್ಮನಚೋಡ ಕ್ರಾಸ್ ಎಂಬ ಜಾಗ ಅಂತ. ಸುತ್ತ ಮುತ್ತ ಎತ್ತ ಕಣ್ಣು ಹಾಯಿಸಿದರೂ ಒಂದು ಮನೆಯೂ ಇಲ್ಲದಂತೆ ರಾಜಾಸ್ಥಾನದ ಮರುಭೂಮಿಯಂತೆ ಭಾಸವಾಯಿತು. ಮೂಲೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ, ಅದರ ಹಿಂಭಾಗ ಒಂದು ಮನೆ, ಅಂಗಡಿಯ ಎದುರು ಒಂದು ಮರ, ಚೀಲದೊಳಗಿದ್ದ ಬಾಟಲಿನ ನೀರು ಕುದಿಯುವಷ್ಟು ರಣ ಬಿಸಿಲು - ಇಷ್ಟೇ ನಮ್ಮೆದುರಿದ್ದಿದ್ದು. ಇನ್ನೂ ಹದಿನಾಲ್ಕು ಕಿಲೋಮೀಟರು ಈ ಬಿಸಿಲಿನಲ್ಲಂತೂ ನಡೆಯಲು ಸಾಧ್ಯವಿಲ್ಲ, ಐದು ಗಂಟೆಗೆ ಒಂದು ಬಸ್ಸು ಬರುತ್ತೆ ಅದನ್ನು ಹತ್ತಿಕೊಂಡು ಹೋಗೋದೆಂದು ತೀರ್ಮಾನಿಸಿದೆವು.

ಚಿಮ್ಮನಚೋಡದ ದಾರಿಯು ಬಹಳ ಮನೋಹರವಾಗಿತ್ತು. ಕಿಟಕಿಯಾಚೆ ಕಣ್ಣು ಹಾಯಿಸಿದಾಗ ಗುಡ್ಡದ ಹಿಂದೆ ಅಸ್ತಂಗತನಾಗಲು ಸಿದ್ಧನಾಗಿದ್ದ ಸೂರ‍್ಯನ ಕೆಂಪು, ಆ ಕೆಂಪಿಗೆ ಚಿನ್ನದಂತೆ ಹೊಳೆಯುತ್ತಿದ್ದ ಮರದ ಒಣಗಿದ ಎಲೆಗಳು, ಸಾಲು ಸಾಲಾಗಿ ಆ ಹಳ್ಳಿಯ ಹೆಂಗಸರು ಹೊಲದಲ್ಲಿ ಕೆಲಸ ಮಾಡಿ ಹಿಂದಿರುಗುತ್ತಿದ್ದುದು, ಬಿಸಿಲಿಗೆ ಲೆಕ್ಕಿಸದೆ ದೂರದಲ್ಲಿ ಹಾರುತ್ತಿದ್ದ ಕರಿ-ಬಿಳಿ-ಹಸಿರು ಪಕ್ಷಿಗಳು, ಇನ್ನೂ ಕೆಲಸ ಮುಗಿಸದೇ ಇದ್ದ ರೈತರು, ಸ್ವಚ್ಛಂದ ಪರಿಸರ.. ಎಲ್ಲವೂ ಬಸ್ಸಿನೊಳಗಿದ್ದ ನಮ್ಮ ಮನಸೆಳೆದವು. ಬಸ್ಸು ಮಾತ್ರ ಭೂಕಂಪನವಾಗುತ್ತಿದೆಯೇನೋ ಎಂಬಂತೆ ಅಲುಗಾಡುತ್ತಲೇ ಇತ್ತು. ಅಂತೂ ಇಂತೂ ಗುಲ್ಬರ್ಗದಿಂದ ನೂರು ಕಿಲೋಮೀಟರ್ ಒಳಗೆ ಬಂದು ಚಿಮ್ಮನಚೋಡವನ್ನು ತಲುಪಿದೆವು. ಇಲ್ಲಿಗೇ ಮುಗಿಯಲಿಲ್ಲ ಪ್ರಯಾಣ - ಹೆಸರಗುಂದಗಿ ಎನ್ನುವ ಹಳ್ಳಿಯು ನಮ್ಮ ಪ್ರಯಾಣದ ಅಂತಿಮ ಗುರಿಯಾಗಿತ್ತು. ಸೂರ‍್ಯ ಮುಳುಗಿ ಕತ್ತಲೂ ಸಹ ಆಗಿಹೋಗಿತ್ತು. ಇಪ್ಪತ್ತೆರಡು ಗಂಟೆಗಳ ಕಾಲ ಸತತವಾಗಿ ಬಸ್ಸಿನ ಪ್ರಯಾಣವನ್ನೇ ಮುಗಿಸಿದ್ದೇವೆ, ಇನ್ನು ಮುಕ್ಕಾಲುಗಂಟೆ ಜೀಪಿನಲ್ಲಿ ಪ್ರಯಾಣ ಮಾಡಬೇಕಷ್ಟೆ? ಆಗಿ ಹೋಗಲಿ!

ಜೀಪಿನಲ್ಲಿ ನಾನು ಚಾಲಕನ ಪಕ್ಕ ಕುಳಿತೆ. ಇನ್ನೊಂದಷ್ಟು ಜನರನ್ನು ಹತ್ತಿಸಿಕೊಳ್ಳುವ ಸಲುವಾಗಿ ಚಾಲಕನು ನನಗೆ ವಿಚಿತ್ರವಾದ ಆದೇಶವೊಂದನ್ನು ಕೊಟ್ಟ. "ಸ್ವಲ್ಪ ನಿಮ್ ಕಾಲುಗಳನ್ನು ಈ ಕಡೆ ಇಟ್ಕೊಳಿ - ಒಂದು ಕಾಲನ್ನು ಈ ಕಡೆ, ಮತ್ತೊಂದು ಕಾಲನ್ನು ಆ ಕಡೆ.." ಎಂದ. ನನಗೆ "ಈ ಕಡೆ.... ಆ ಕಡೆ...." ಅರ್ಥವಾಗಲಿಲ್ಲ. ಅವನು ಹೇಳಿದ್ದು ಜೀಪಿನ ಗೇರ್ ಲಿವರ್ರು ನನ್ನ ಕಾಲುಗಳ ಮಧ್ಯೆ ಬರುವಂತೆ ಈ ಕಡೆಯೊಂದು ಕಾಲು, ಆ ಕಡೆಯಿನ್ನೊಂದು ಕಾಲನ್ನು ಹಾಕಿಕೊಂಡು ಕುಳಿತುಕೊಳ್ಳಲು! ಮುಕ್ಕಾಲು ಗಂಟೆಗಳ ಕಾಲ ಪ್ರಯಾಣ ಬಹಳ ಸಾಹಸಮಯವಾಗಿತ್ತು - ನನ್ನ ಪಾಲಿಗೆ! ಡ್ರೈವರು ಗೇರನ್ನು ಹಾಕುವಾಗ ಅಪ್ಪಿತಪ್ಪಿ ಹೆಚ್ಚುಕಮ್ಮಿಯಾದರೆ ಎಂಬ ಭೀತಿಯಿಂದಲೇ ಕುಳಿತಿದ್ದೆ - ಕತ್ತಲೆ ಬೇರೆ! ಮತ್ತೆ ಯಥಾಪ್ರಕಾರ ಜೀಪಿನಲ್ಲೂ ಅದದೇ ಪ್ರಶ್ನೆಗಳು, ಉತ್ತರದ ಕ್ಯಾಸೆಟ್ಟುಗಳನ್ನು ಪ್ಲೇ ಮಾಡುತ್ತಿದ್ದರು ನಮ್ಮ ತಂಡದ ಸದಸ್ಯರು. ನಾನು ಯಾವ ಪ್ರಶ್ನೆಗೂ ಉತ್ತರಿಸದೆ ಡ್ರೈವರನು ಸರಿಯಾಗಿ ಗೇರನ್ನು - ಗೇರು ಲಿವರ್ರನ್ನೇ ಹಿಡಿದು ಹಾಕುತ್ತಿದ್ದಾನೋ ಇಲ್ಲವೋ ಎಂದು ಭೀತಿಯಿಂದ ನೋಡುತ್ತಿದ್ದೆ. ಹೆಸರುಗುಂದಗಿಯನ್ನು ತಲುಪಿದ ನಂತರ ಡ್ರೈವರನು ಉತ್ತರಕರ್ನಾಟಕದ ಭಾಷೆಯಲ್ಲಿ "ಬೆಳಿಗ್ಗೆ ಆರುಗಂಟೆಗೆ ಬಸ್ಸು ಇಲ್ಲಿ ಬರುತ್ತೆ, ಗುಲ್ಬರ್ಗಕ್ಕೆ ಹೋಗುತ್ತೆ" ಎಂದಷ್ಟೇ ಹೇಳಿದ್ದನ್ನು ಬೆಂಗಳೂರಿಗರಾದ ನಾವು ಅರ್ಥ ಮಾಡಿಕೊಳ್ಳಲು ಸಾಕು ಸಾಕಾಗಿ ಹೋಯಿತು.

ಇಪ್ಪತ್ತು ಮೂರು ಗಂಟೆಗಳ ಸತತ ಪ್ರಯಾಣ ಮಾಡಿದ ನಮಗೆಲ್ಲರಿಗೂ ಐಸಿನ ಮೇಲೆ ಕುಳಿತುಕೊಳ್ಳಬೇಕೆಂಬ ಅನಿಸಿಕೆಯುಂಟಾಗಿತ್ತು!

ಕತ್ತಲು ಕವಿದಿತ್ತು. ಹೆಸರುಗುಂದಗಿಯ ಜನ ನಮ್ಮನ್ನು ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಂಡರು. ವಿದ್ಯುದ್ದೀಪಗಳಿದ್ದವು, ಆದರೆ ಪ್ರಕಾಶಮಾನವಾಗಿರಲಿಲ್ಲ. ಬೀದಿ ದೀಪಗಳೆಲ್ಲವೂ 0 Watt ಬಲ್ಬಿನಂತೆ ಇದ್ದವು. ಆಕಾಶದಲ್ಲಿದ್ದ ಚಂದ್ರನೇ ಈ ದೀಪಗಳಿಗಿಂತ ಹೆಚ್ಚು ಬೆಳಕನ್ನು ಚೆಲ್ಲುತ್ತಿದ್ದ. ಆ ಹಳ್ಳಿಯ ಹಿರಿಯರೊಬ್ಬರು " ಬನ್ನಿ ಕೂತ್ಕೊಳಿ" ಎಂದು ಒಂದು ಪೆಟ್ಟಿಗೆ ಅಂಗಡಿಯ ಬದಿಯಲ್ಲಿದ್ದ ಅರಳಿ ಕಟ್ಟೆಯತ್ತ ಕರೆದರು. ಬಿಸಿಲಿನಲ್ಲಿ ದಣಿದು ಬಂದ ನಮಗೆ ಅರಳಿಯ ಗಾಳಿಯು ಬಹಳ ಹಿತಕರವಾಗಿತ್ತು. ಸುಮಾರು ನಲವತ್ತು-ಐವತ್ತು ಜನ ನಮ್ಮನ್ನು ಸುತ್ತುವರಿದಿದ್ದರು. ಎಲ್ಲರಿಗೂ ನಾವು ಅಲ್ಲಿ ಬಂದಿದ್ದ ಉದ್ದೇಶದ ಬಗ್ಗೆ ಬಹಳ ಕುತೂಹಲ ಇತ್ತೆಂಬುದು ಅವರುಗಳ ಮಾತುಗಳಲ್ಲಿ ವ್ಯಕ್ತವಾಗಿತ್ತು. ಯಾರ ಮುಖವೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ - ಬೆಳಕಿನ ಅಭಾವದಿಂದ. "ನೀವು ಇಲ್ಲಿ STUDY ಮಾಡ್ಲಿಕ್ಕೆ ಬಂದಿಲ್ವಾ ಹಾಗಾದರೆ?" ಎಂದು ಒಬ್ಬರು ಯಾಕೊ ನಿರಾಶರಾಗಿ ಕೇಳಿದರು. "ಇಲ್ಲ, ಗುಲ್ಬರ್ಗದಲ್ಲಿ ಏನೊ ಕೆಲಸ ಇತ್ತು, ಅಲ್ಲಿ ಭೂಕಂಪನದ ಬಗ್ಗೆ ಯಾರೊ ಹೇಳಿದರು, ಅದನ್ನು ನೋಡಲಿಕ್ಕೆಂದು ಬಂದೆವು" ಎಂದರು. ನಾವು ಭೂಕಂಪನವನ್ನು ಅನುಭವಿಸುವುದಕ್ಕೆ ಬಂದಿದ್ದೇವೆಂದರೆ ಆ ಮುಗ್ಧ ಜನರು ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡು "ನಾವು ಇಲ್ಲಿ ಕಷ್ಟ ಪಡುತ್ತಿದ್ದರೆ ಇವರು ತಮಾಷೆ ನೋಡಲು ಬಂದಿದ್ದಾರೆ" ಎಂದು ತಿಳಿದುಕೊಳ್ಳಬಹುದೆಂಬ ಮುಂಜಾಗರೂಕತೆ ಅನ್ನಪೂರ್ಣರಿಗಿತ್ತು.

ನಮ್ಮನ್ನು ಮಾತನಾಡಿಸಿದ ಹಿರಿಯರ ಹೆಸರು ಪರ್ವತಯ್ಯ ಎಂದಂತೆ - ಆತ ಪರಿಚಯಿಸಿಕೊಂಡರು. ನಮಗೆಲ್ಲರಿಗೂ ಟೀ ಕುಡಿಯಲು ತರಿಸಿಕೊಟ್ಟರು. ಅನಿರೀಕ್ಷಿತವಾಗಿ ಒದಗಿ ಬಂದ ಅತಿಥಿಸತ್ಕಾರವು ನಮಗೆಲ್ಲರಿಗೂ ತುಂಬ ಸಂಕೋಚ ತರಿಸಿತ್ತು. ಗೋವಿಂದ್ ರಾಜ್ ಆ ಹಳ್ಳಿಯವರಲ್ಲಿ ವಿಶೇಷ ಆಸಕ್ತಿ ತೋರಿಸಿ ಮಾತನಾಡಿಸುತ್ತ ಭೂಕಂಪನದ ಅನುಭವದ ಬಗ್ಗೆ ವಿಚಾರಿಸುತ್ತಿದ್ದರು. ಕತ್ತಲಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಕಾಣಿಸದಿದ್ದರೂ ಭೀತಿ, ಚಿಂತೆ, ಅಸಹಾಯಕತೆ, ನೋವು ಎಲ್ಲವೂ ಅವರ ಮಾತುಗಳಲ್ಲಿ ವ್ಯಕ್ತವಾಗಿದ್ದವು. ಒಬ್ಬ ಹೇಳಿದ "ಇವತ್ತು ಬೆಳಿಗ್ಗೆ ಆಯಿತು.." . ಇನ್ನೊಬ್ಬ, "ಬೆಳಿಗ್ಗೇನೂ ಆಯ್ತು, ಮಧ್ಯಾಹ್ನ ಹನ್ನೆರಡೂವರೆಗೂ ಆಯ್ತು.." ಎಂದ. ಪರ್ವತಯ್ಯನವರು "ದಿನಾ ಆಗುತ್ತೆ, ಡೈನಮಿಟ್ ಸಿಡಿಸಿದಷ್ಟು ಜೋರಾಗೆಲ್ಲ ಸದ್ದಾಗುತ್ತೆ. ಈಚೆಗೆ ಒಂದು ವಾರದಿಂದ ಸ್ವಲ್ಪ ಕಡಿಮೆಯಾಗಿದೆ. ಈಗ ಧೈರ್ಯ ಮಾಡಿ ಮನೆಯೊಳಗೆ ಮಲಗುತ್ತಿದ್ದೇವೆ. ಮುಂಚೆಲ್ಲಾ ಇಲ್ಲೇ, ಈ ಅರಳಿಕಟ್ಟೆಯ ಎದುರೇ ಎಲ್ಲರೂ ಮಲಗುತ್ತಿದ್ದೆವು. ಅಷ್ಟು ಭಯ!" ಎಂದು ಗದ್ಗದಿತ ಕಂಠದಲ್ಲಿ ಹೇಳಿದರು.

ಇನ್ನೊಬ್ಬರು "ನಿಮ್ಹಂಗೇ ಬಟ್ಟೆ ಹಾಕ್ಕೊಂಡು ಇನ್ಯಾರೋ ಬಂದಿದ್ರು ಹೋದ್ ತಿಂಗ್ಳು. ಏನೋ ಸ್ಟಡಿ ಮಾಡಕ್ಕೆ. ಡ್ಯಾಮ್ ಇದ್ಯಲ್ಲಾ ಇಲ್ಲೇ ಪಕ್ಕದಲ್ಲಿ, ಅದ್ರಿಂದಾನೇ ಅಂತೆ ಇಲ್ಲ್ ಭೂಕಂಪ ಆಗ್ತಿರೋದು.." ಎಂದರು. ಅಣೆಕಟ್ಟಿಗೂ ಭೂಕಂಪನಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನನಗಂತೂ ಗೊತ್ತಿರಲಿಲ್ಲ, ಇದ್ದರೂ ಇರಬಹುದು, ಬೆಂಗಳೂರಿಗೆ ತೆರಳಿದ ಮೇಲೆ ಅದರ ಬಗ್ಗೆ ಅಧ್ಯಯನ ಮಾಡೋಣವೆಂದೆನಿಸಿತು.

ಪರ್ವತಯ್ಯ ಕೇಳಿದರು, ಸಾಮಾನ್ಯವಾಗಿ ಹಳ್ಳಿಗರು ನಮ್ಮನ್ನು ಕೇಳುವಂತೆ - " ನೀವು ಯಾಕೆ ಇಲ್ಲಿಗೆ ಬಂದ್ರಿ? ಬೆಂಗಳೂರಿನವರು, ಸುಖವಾಗಿದ್ದೀರ ಅಲ್ವಾ ನೀವು? ಇಲ್ಲಿ ನೋಡಿ, ದಿನಕ್ಕೆ ಆರುಗಂಟೆ ಮಾತ್ರ ಕರೆಂಟು ಇರೋದು, ಹನಿ ನೀರಿಗೂ ಒದ್ದಾಡುತ್ತೀವಿ, ಜೊತೆಗೆ ಭೂಕಂಪ ಬೇರೆ ಯಾವಾಗ್ ಆಗುತ್ತೋ ಗೊತ್ತಿಲ್ಲ. ಬೆಂಗಳೂರು ಬಿಟ್ಟು ಯಾಕೆ ಆಚೆ ಬಂದ್ರಿ?" ಎಂದರು. ಬೆಂಗಳೂರಿನವರೆಂದರೆ ಸುಖಿಗಳು, ಬೆಂಗಳೂರಿನಲ್ಲಿರುವವರಿಗೆ ಯಾವುದೇ ಕೊರತೆಯೂ ಇಲ್ಲ ಎಂದು ಈಗಲೂ ಸಹ ಬೇರೆ ಊರಿನ ಜನರು ನಂಬಿರುವುದನ್ನು ನಾನು ಆಗಿಂದಾಗ್ಗೆ ನೋಡುತ್ತಲೇ ಇದ್ದೇನೆ. ಯಾವುದೇ ಹಳ್ಳಿಗೆ ಹೋದರೂ, "ನೀವ್ ಬಿಡಿ ಬೆಂಗ್ಳೂರ್‍ನೋರು, ಆರಾಮು.." ಎನ್ನುತ್ತಾರೆ. ಇದೇನು ಅವರ ಸತ್ಯದ ನಂಬಿಕೆಯೋ ಅಥವಾ ಅಪಹಾಸ್ಯವೋ ಗೊತ್ತಿಲ್ಲ! ಒಟ್ಟಿನಲ್ಲಿ ನನ್ನ ಕಿವಿಗಂತೂ ಈ "ಬೆಂಗಳೂರಿನ ಸುಖ"ದ ಮಾತು ದೊಡ್ಡ sarcasm ರೀತಿ ಕೇಳಿಸುತ್ತೆ. ಬೆಂಗಳೂರಿನ ಸುಖ ಏನೆಂಬುದು ಬೆಂಗಳೂರಿಗರಿಗಷ್ಟೇ ಗೊತ್ತು!

ಪರ್ವತಯ್ಯನವರ ಪ್ರಶ್ನೆಗೆ ಅನ್ನಪೂರ್ಣ ಉತ್ತರಿಸಿದರು. ಬೆಂಗಳೂರಿನ ಗುಟ್ಟುಗಳನ್ನೇನೂ ಬಿಟ್ಟುಕೊಡದಿದ್ದರೂ ಕರೆಂಟೊಂದನ್ನು ಬಿಟ್ಟರೆ ಬೆಂಗಳೂರಿಗೂ ಹೆಸರುಗುಂದಗಿಗೂ ಅಷ್ಟೇನೂ ವ್ಯತ್ಯಾಸವಿಲ್ಲ ಎನ್ನುವಂತೆ ಹೇಳಿ ಅವರನ್ನು ಸಮಾಧಾನ ಮಾಡಿದರು. ನಮ್ಮಂತೆಯೇ ಇವರೂ ಸಹ ಎಂಬ ನಂಬಿಕೆಯುಂಟಾದ ಪರ್ವತಯ್ಯನವರು "ಏನು ಕೆಲ್ಸ ಮಾಡ್ತೀರ ನೀವೆಲ್ಲ?" ಎಂದರು. ಗೋವಿಂದ್ ರಾಜ್ ಇದಕ್ಕೆ ಥಟ್ಟನೆ ಉತ್ತರಿಸುತ್ತ "ನಾನು ವ್ಯಾಪಾರ ಮಾಡ್ತೀನಿ, ಇವರು (ನನ್ನನ್ನು ತೋರಿಸಿ) ಕಂಪ್ಯೂಟರ್ ರಿಪೇರಿ ಮತ್ತು ವ್ಯಾಪಾರ ಮಾಡ್ತಾರೆ, ಇವರು ( ಬಾಲ್‍ರಾಜ್‍ರನ್ನು ತೋರಿಸಿ) ಸಾಹಸ ಕ್ರೀಡಾಪಟು, ಮತ್ತೆ ಇವರು (ಅನ್ನಪೂರ್ಣರನ್ನು ತೋರಿಸಿ) ಟಿ.ವಿಯಲ್ಲಿ ಕೆಲಸ ಮಾಡುತ್ತಾರೆ" ಎಂದರು. ಟಿ.ವಿ.ಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ ತತ್‍ಕ್ಷಣ ಆ ಜನಕ್ಕೆ ಮಿಕ್ಕವರು ಯಾರೂ ಅಷ್ಟು ಇಂಟರೆಸ್ಟಿಂಗ್ ವ್ಯಕ್ತಿಗಳಾಗಿ ಕಾಣಿಸಲಿಲ್ಲ. ಅನ್ನಪೂರ್ಣರತ್ತ ಅವರು ಕಂಗಳನ್ನು ಅರಳಿಸಿದ್ದು ಕತ್ತಲಿನಲ್ಲೂ ಕಾಣುವಂತಿತ್ತು. ಅವರ ಕುತೂಹಲವನ್ನು ಇನ್ನಷ್ಟು ಕೆರಳಿಸಲು, "ಇಲ್ಲಿ ಈಟೀವಿ ಬರುತ್ತಾ?" ಎಂದರು. ಎಲ್ಲರೂ ಟೀಚರಿಗೆ ಶಾಲಾಮಕ್ಕಳು ಉತ್ತರಿಸುವಂತೆ ಒಂದೇ ಉಸಿರಿನಲ್ಲಿ "ಹ್ಞೂಂ" ಎಂದರು.

"ಅದರಲ್ಲಿ ಗುಪ್ತಗಾಮಿನಿ ಅಂತ ಒಂದು ಧಾರಾವಾಹಿ ಬರುತ್ತಲ್ಲ, ಅದರಲ್ಲಿ ಕೆಲ್ಸ ಮಾಡ್ತೀನಿ."

ಕಾತುರತೆಯು ಇನ್ನೂ ತೀವ್ರವಾಗಿ, "ಯಾವ ಪಾರ್ಟ್ ಮಾಡ್ತೀರ ಅದರಲ್ಲಿ?" ಎಂದಿತು ಜನ.

"ಯಾವ ಪಾತ್ರವನ್ನೂ ಮಾಡಲ್ಲ, ನಾನು ಅಡ್ಮಿಸ್ಟ್ರೇಷನ್ ಡಿಪಾರ್ಟ್ಮೆಂಟಿನಲ್ಲಿ ಇರೋದು" ಎಂದು ಹೇಳಿದರೂ ಸಹ ಅವರುಗಳಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂದು ಮನವರಿಕೆ ಮಾಡಿಕೊಡುವುದರೊಳಗೆ ಸಾಕು ಸಾಕಾಯಿತು!

ಚಾರಣಗಳಲ್ಲಿ ನಮಗೆ ಅನುಭವವಿರುವಂತೆ ಹೋದ ಜಾಗಗಳಲ್ಲಿ ಊಟ ಸಿಗುತ್ತೋ ಬಿಡುತ್ತೋ ನಾವಂತೂ ನಮಗೆ ಬೇಕಾದ ಆಹಾರವನ್ನು ಚೀಲದೊಳಕ್ಕೆ ತುರುಕಿಕೊಂಡೇ ಹೋಗಿದ್ದೆವು. ಚಿಮ್ಮನಹಳ್ಳಿ ಕ್ರಾಸಿನಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿನ "ಸ್ಪೆಷಲ್ ಬ್ರೆಡ್"ಅನ್ನು ಕೊಂಡುಕೊಂಡಿದ್ದೆವು. ಹೆಸರುಗುಂದಗಿಯಲ್ಲಿ ಒಂದಿಷ್ಟು ಬಯಲು ಜಾಗ ಸಿಕ್ಕರೆ ಸಾಕು ಟೆಂಟನ್ನು ಹಾಕುವುದೆಂದು ತೀರ್ಮಾನಿಸಿದ್ದೆವು. ಯಾರನ್ನು ಮಾತನಾಡಿಸುವ ಉದ್ದೇಶವೂ ನಮಗೆ ಇರಲಿಲ್ಲ. ಆದರೆ, ಜನರೊಡನೆ ಮಾತನಾಡದಿದ್ದರೆ ವಿಷಯಗಳು ಸಿಗುವುದಾದರೂ ಹೇಗೆ? ಪರ್ವತಯ್ಯನವರು ನಮ್ಮ ಊಟೋಪಚಾರದ ಬಗ್ಗೆ ವಿಚಾರಿಸುತ್ತ "ಏನಿರಲಿ ರಾತ್ರಿ ಊಟಕ್ಕೆ? ಅನ್ನ - ಸಾರು - ಮಜ್ಜಿಗೆ?" ಎಂದು ಕೇಳಿದರು. ಎಂದೂ ಎಲ್ಲೂ ಮಾತನಾಡದ ಬಾಲ್‍ರಾಜ್ ಇದ್ದಕ್ಕಿದ್ದ ಹಾಗೆ ಮಾತಿನ ಮುತ್ತುದುರಿಸಿಬಿಟ್ಟಿದ್ದು ಎಲ್ಲರಿಗೂ ಅಚ್ಚರಿಯಾಯಿತು! "ನೀವು ತೊಂದರೆ ತೆಗೆದುಕೊಳ್ಳಬೇಡಿ, ನಮ್ಮ ಊಟ ನಾವು ತಂದಿದ್ದೇವೆ, ನಿಮ್ಮ ಜೊತೆ ಮಾತನಾಡಿ ಸಂತೋಷ ಆಯಿತು ತುಂಬ" ಎಂದುಬಿಟ್ಟರು. ನಮಗೆಲ್ಲರಿಗೂ ಇದ್ದಕ್ಕಿದ್ದ ಹಾಗೆ ಭಯವಾಗಿಬಿಟ್ಟಿತು - ಬಾಲ್‍ರಾಜ್‍ರ ಈ ಮಾತನ್ನು ಕೇಳಿ. ಅವರು ಏನು ತಪ್ಪು ತಿಳಿದುಕೊಂಡು ನಮ್ಮನ್ನು "ದುರಹಂಕಾರಿ ಮುಂಡೇವು!" ಎಂದು ಶಪಿಸುತ್ತಾರೋ ಎಂದು ಯೋಚನೆಯಾಯಿತು. ಆದರೆ ಪರ್ವತಯ್ಯನವರು "ಅಷ್ಟು ದೂರದಿಂದ ಇಲ್ಲೀವರೆಗೂ ಬಂದಿದ್ದೀರ, ನಿಮ್ಮನ್ನು ಹಾಗೇ ಕಳ್ಸಕ್ಕೆ ಆಗಲ್ಲ" ಎಂದು ಬಲವಂತ ಮಾಡಿದ್ದಕ್ಕೆ ಗೋವಿಂದ್ ರಾಜ್ "ಸ್ವಲ್ಪ ಮಜ್ಜಿಗೆಯನ್ನ ಕೊಡಿ ಸಾಕು" ಎಂದರು. ಗುಲ್ಬರ್ಗದವರು ತಿನ್ನುವ ಖಾರವನ್ನು ಪರೀಕ್ಷಿಸುವ ತಾಕತ್ತು ನಮಗೆ ಯಾರಿಗೂ ಇರಲಿಲ್ಲ ಎಂಬ ಸತ್ಯವನ್ನು ಗೋವಿಂದ್ ರಾಜ್ ಬಹಳ ಚೆನ್ನಾಗಿ ಅರಿತಿದ್ದ ಹಾಗಿತ್ತು!

"ಅತಿಥಿ ದೇವೋ ಭವ" ಎನ್ನುವ ದೇಶದಲ್ಲಿರುವುದರಿಂದ ನಾವುಗಳು ಅಲ್ಲಿ ದೇವರುಗಳಾಗಿದ್ದೆವೆನಿಸುತ್ತೆ - "ಹಗಲಲ್ಲಿ ಬಂದಿದ್ದಿದ್ದರೆ ಡ್ಯಾಮು, ಹೊಲ ಎಲ್ಲ ತೋರಿಸುತ್ತಿದ್ವಿ, ಈಗ ಕತ್ತಲಾಗಿ ಹೋಗಿದೆ, ಬೆಳಿಗ್ಗೆ ಹೋಗ್ಬೋದು!" ಎಂದರು. ಭೂಕಂಪನವಾಗುವ ಊರಿನಲ್ಲಿ ಪ್ರವಾಸ ಮಾಡಲು ಹೋಗಿದ್ದೇವೆಯೇ? ನಾವು ಬೆಳಿಗ್ಗೆಯೇ ಎದ್ದು ಹೊರಡಬೇಕಾಗಿದ್ದರಿಂದ ಮುಂದಿನ ಸಲ ಹೊಲ, ಡ್ಯಾಮು ನೋಡಲೆಂದೇ ಬರುತ್ತೇವೆಂದು ಸಮಾಧಾನ ಹೇಳಿದೆವು. ರಾತ್ರಿ ತಂಗಲು ಶಾಲೆಯೊಂದರಲ್ಲಿ ವ್ಯವಸ್ಥೆ ಮಾಡಿಕೊಡುತ್ತೇವೆಂದಿದ್ದಕ್ಕೆ ಬಾಲ್‍ರಾಜ್ ಅವರು ಒಪ್ಪಲೇ ಇಲ್ಲ. ಅವರು ಅಷ್ಟು ದೂರದಿಂದ ಹೊತ್ತುಕೊಂಡು ಬಂದ ಚೀಲದಲ್ಲಿ ಟೆಂಟಿತ್ತಲ್ಲ! ದೀಪವೇ ಇಲ್ಲದ ಶಾಲೆಯ ಕೊಠಡಿಯೊಳಗೆ ನಮಗಾಗಿ ಹೊಸ ಬಲ್ಬನ್ನು ತರಿಸಿದ ಪರ್ವತಯ್ಯನವರು "ನಮ್ಮೂರಿಗೆ ಬಂದೋರನ್ನ ಟೆಂಟಲ್ಲಿ ಮಲಗಿಸೋದೇ?" ಎಂದು ಬೈಯ್ಯುವ ಧ್ವನಿಯಲ್ಲಿ ಹೇಳಿದರು.

ಹೆಸರುಗುಂದಗಿಯಂತಹ ಹಳ್ಳಿಯಲ್ಲಿ ಬಿಷಪ್ ಕಾಟನ್ನಿನಂತಹ ಶಾಲೆಯಂತೂ ಇಲ್ಲ. ಶಾಲೆಯೆಂದರೆ ಅದು ಒಂದು ಕೊಠಡಿ ಮಾತ್ರ. ಐವತ್ತು ಮಕ್ಕಳು ಮಾತ್ರ ಪಾಠಕ್ಕೆ ಬರುತ್ತಿದ್ದರಂತೆ. ಈ ಕೊಠಡಿ ಮುಂದೆ ಸಣ್ಣದೊಂದು ಮೈದಾನ. ಮೈದಾನಕ್ಕೂ ಶಾಲೆಯೆಂಬ ಕೊಠಡಿಗೂ ಮಧ್ಯೆ ಒಂದು ಕಟ್ಟೆ. ಜಗಲಿಯಂತಿರುವ ಕಟ್ಟೆ. ಹೇಳಿ-ಕೇಳಿ ಗುಲ್ಬರ್ಗವಾದ್ದರಿಂದ ಶೆಖೆಯನ್ನು ತಾಳಲಾರದೆ ಆ ಜಗುಲಿಯ ಮೇಲೆಯೇ ಮಲಗಿಕೊಳ್ಳೋಣವೆಂದು ತೀರ್ಮಾನಿಸಿದೆವು. ಬಾಲ್‍ರಾಜರಿಗೂ ತಾವು ಹೊತ್ತುಕೊಂಡು ಬಂದಿದ್ದ ಟೆಂಟನ್ನು ಎಲ್ಲಾದರೂ ಪ್ರತಿಷ್ಠಾಪಿಸಲೇ ಬೇಕಾಗಿತ್ತು. ಸರಿ, ಜಗುಲಿಯ ಮೇಲೆಯೇ ಟೆಂಟನ್ನು ಹಾಕಿಕೊಂಡು ಭೂಕಂಪನವಾಗುತ್ತೆ, ಪಾತ್ರೆ ಬಿದ್ದ ಸದ್ದು ಕೇಳಿಸುತ್ತೆ, ಜಗುಲಿಯೇ ಅಲುಗಾಡುತ್ತೆ ಎಂದು ಕಾದುಕೊಂಡು ಟೆಂಟಿನ ಹೊರಗಡೆ ಚಾಪೆಯನ್ನು ಹಾಸಿ ಇರುಳಿನ ಹರಟೆಗೆಂದು ಕುಳಿತೆವು. ಊಟ ಬರುವವರೆಗೂ ಕಾಯ ಬೇಕಷ್ಟೆ? ಪರ್ವತಯ್ಯನವರೂ ಆ ಊರಿನ ಒಂದಿಪ್ಪತ್ತು ಜನರೂ ನಮ್ಮ ಜೊತೆ ಬಂದು ಕುಳಿತರು.

ಗೋವಿಂದ್ ರಾಜ್ ಅವರಿಗೆ ಹಳ್ಳಿಯ ಸಂಸ್ಕೃತಿಗಳೆಂದರೆ ಬಹಳ ಇಷ್ಟ. ಜಾನಪದ ಸಂಗೀತ, ಹಳ್ಳಿ ಮನೆಗಳು ಇವೆಲ್ಲವೂ ಇವರಿಗೆ ಬಹಳ ಪ್ರಿಯವಾದುದು. "ನಿಮ್ಮಲ್ಲಿ ಯಾರಾದರೂ ಒಂದು ಹಾಡು ಹೇಳಿ, ಕೇಳೋಣ" ಎಂದಿದ್ದೇ ತಡ ಆ ಗುಂಪಿನಲ್ಲೊಬ್ಬರು ಶಿಶುನಾಳರ ಹಾಡನ್ನು ಜಾನಪದ ಶೈಲಿಯಲ್ಲಿ ಬಹಳ ಸೊಗಸಾಗಿ ಹಾಡಿ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ನನಗೂ ಒಂದು ಚಪ್ಪಾಳೆಯನ್ನು ದೊರಕಿಸಿ ಕೊಡುವ ಸಲುವಾಗಿ ನನ್ನ ಕೈಯಲ್ಲೂ ಒಂದು ಹಾಡು ಹೇಳಿಸಿ, ಚಪ್ಪಾಳೆ ಹೊಡೆಯಬೇಕಾಗಿರುವುದು ಅನಿವಾರ‍್ಯವಾದ್ದರಿಂದ ಹೊಡೆದರು.

ಮೈದಾನದಲ್ಲಿ ದೀಪವು ಪ್ರಕಾಶಮಾನವಾಗಿ ಇಲ್ಲದೇ ಇದ್ದುದರಿಂದ ಶಾಲೆಯ ಒಳಗಿನ ಬಲ್ಬಿನ ದೀಪದ ಕೆಳಗೇ ಒಂದು ಫೋಟೋ ಸೆಷನ್ ನಡೆಸಿದೆವು. ನಂತರ ನಮ್ಮ ಕಾಣಿಕೆಯೆಂಬಂತೆ ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲಿ ಎಂದು ಹಣವನ್ನು ಕೊಡೋಣವೆಂದು ನಾವು ತೀರ್ಮಾನಿಸಿಕೊಂಡೆವು. ಆದರೆ ಅವರುಗಳು ಹಣವನ್ನು ಸ್ವೀಕರಿಸಲು ಒಪ್ಪಲೇ ಇಲ್ಲ. ಬಹಳ ಬಲವಂತ ಮಾಡಬೇಕಾಯಿತು - ಕೊನೆಗೆ, "ರಸೀತಿ ಕೊಡುತ್ತೇವೆ" ಎಂದು ಹೇಳಿ ಎಲ್ಲಿಂದಲೋ ರಸೀತಿ ಪುಸ್ತಕವನ್ನು ಹುಡುಕಿ ತಂದು "ಅನ್ನಪೂರ್ಣ ಮತ್ತು ಸ್ನೇಹಿತರು" ಎಂದು ಬರೆದುಕೊಟ್ಟರು!

ಊಟ ಸಿದ್ಧವಾಗಿತ್ತು. ಕಟ್ಟೆಯ ಮೇಲೆ ಕುಳಿತೇ ಊಟ ಮಾಡಿದೆವು. ನಾವು ಹೇಳಿದ್ದಂತೆಯೇ ಬರೀ ಮಜ್ಜಿಗೆಯನ್ನವನ್ನೇ ಬಡಿಸಿದರು. ಬೆಂಗಳೂರಿನಲ್ಲಿ ಒಬ್ಬೊಬ್ಬರೂ ಒಂದೊಂದು ಮೂಲೆಯಲ್ಲಿ ಇರುವವರು. ಒಬ್ಬೊಬ್ಬರೂ ಒಂದೊಂದು ಕೆಲಸದಲ್ಲಿರುವವರು. ಎಲ್ಲರೂ ಒಟ್ಟಾಗಿ ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಪ್ರಯಾಣಿಸಿ, ಅಲ್ಲಿಂದ ನೂರು ಕಿಲೋಮೀಟರು ದೂರದ ಕುಗ್ರಾಮವೊಂದರಲ್ಲಿ ಬ್ರೆಡ್‍ನ ತಂದಿದ್ದರೂ ಆ ಜನರು ಬಡಿಸಿದ ಅನ್ನವನ್ನು ತಿನ್ನಬೇಕಾಗಿದ್ದ ಋಣ ನಮ್ಮದಾಗಿತ್ತು! ಕಗ್ಗವೊಂದು ನೆನಪಿಗೆ ಥಟ್ಟನೆ ಬಂದಿತು!

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ |
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ ||
ಇಂದು ಬರಿಯುಪವಾಸ, ನಾಳೆ ಪಾರಣೆ - ಯಿಂತು |
ಸಂದಿರುವುದನ್ನ ಋಣ - ಮಂಕುತಿಮ್ಮ ||

ಊಟವಾದ ಮೇಲೆ, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧರಾದರು. ಪರ್ವತಯ್ಯನವರು, "ಸರಿ, ಬೆಳಿಗ್ಗೆ ಸಿಗ್ತೀವೋ ಇಲ್ವೋ ಗೊತ್ತಿಲ್ಲ, ಟೀ ಕುಡಿದು ಹೋಗಿ ಬೆಳಿಗ್ಗೆ" ಎಂದರು. ಅವರ ಆತಿಥ್ಯಕ್ಕೆ ಮಣಿದು ತಲೆದೂಗಿದೆವು. ಎಲ್ಲರೂ ಹೊರಟರು. ನಾವು ನಮ್ಮ ಕಟ್ಟೆವಾಸಕ್ಕೆ ಮರಳಿದೆವು. "ಬೆಳಿಗ್ಗೆ ಸಿಗ್ತೀವೋ ಇಲ್ವೋ ಗೊತ್ತಿಲ್ಲ" ಎಂದರೆ ಏನು ಅರ್ಥ ಇರಬಹುದು ಎಂದು ಯೋಚಿಸತೊಡಗಿದೆ. ಬಗೆ ಬಗೆಯ ಅರ್ಥಗಳನ್ನು ಕಲ್ಪಿಸಿಕೊಂಡು ಮಲಗಿಕೊಂಡೆ.

ಸ್ವಲ್ಪ ಹೊತ್ತಿನಲ್ಲೇ ವಿಚಿತ್ರ ಸದ್ದಾಯಿತು. ಭೂಕಂಪವೆಂದೇ ಬಗೆಯಬಹುದಿತ್ತು! ಅಥವಾ ಗುಲ್ಬರ್ಗದಲ್ಲಿಯೂ ಹುಲಿ ಬಂದಿರಬಹುದೇನೋ ಎನ್ನಿಸಬಹುದಿತ್ತು! ಗೋವಿಂದ್ ರಾಜ್ ಮಲಗಿದ್ದಾರೆ, ಅನ್ನಪೂರ್ಣ ಮತ್ತು ನಾನು ಎದ್ದಿದ್ದೇವೆ. ಸದ್ದು ಏನಿರಬಹುದೆಂದು ಬಾಲ್‍ರಾಜ್‍ರನ್ನು ಕೇಳೋಣವೆಂದು ಅವರ ಕಡೆ ತಿರುಗಿದರೆ ಸದ್ದು ಬರುತ್ತಿದ್ದುದೇ ಅವರ ಉಸುರಿನಿಂದ! ಅಯ್ಯೋ, ಭೂಕಂಪನದ ಸದ್ದನ್ನು ಕೇಳಲು ಬಂದಿರುವ ಗೊರಕೆಯ ಸದ್ದಿನಿಂದ ನಮಗೆ ವಂಚನೆಯಾಗಿಬಿಡುವ ಹಾಗಿದೆಯಲ್ಲ ಎಂದು ಬೇಸರವಾಯಿತು! ಮತ್ತೆ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಸದ್ದು ಶುರುವಾಯಿತು. ವಾಚಕರು ಈ ಬಾರಿ ಗೋವಿಂದ್ ರಾಜ್‍ರ ಗೊರಕೆಯೆಂದುಕೊಳ್ಳಬಾರದು. ಈ ಸಲದ ಸದ್ದು ಮಾಡಿದ್ದು ಗುಲ್ಬರ್ಗದ ವಿಶೇಷ ಸೊಳ್ಳೆಗಳು. ಬೆಳದಿಂಗಳ ರಾತ್ರಿಯಲ್ಲಿಯೂ ಚಳಿಯಾಗುತ್ತಿದ್ದರೂ ಭೂಕಂಪನದ ಅನುಭವದ ಕಾತುರತೆಯಲ್ಲಿದ್ದ ನಮ್ಮ ಮೇಲೆ ದಾಳಿ ಮಾಡಿದವು. ಆ ಸೊಳ್ಳೆಗಳಿಗೆ ಬೆಂಗಳೂರಿನವರು ಶತದಡ್ಡರು ಎಂದೆನಿಸಿತೇನೊ - ಟೆಂಟನ್ನು ಹಾಕಿಕೊಂಡು ಹೊರಗೆ ಮಲಗಿದ್ದಾರೆ ಎಂದು! ಒಟ್ಟಿನಲ್ಲಿ ಹಬ್ಬದೂಟವನ್ನು ಸವಿಯಲು ಬಂದಿದ್ದವು. ನಾವು ಸೊಳ್ಳೆಗಳಿಗೆ ಅಂಜಿ ಟೆಂಟನ್ನು ಸೇರಿಕೊಂಡೆವು.

ಆ ದಿನ ಭೂಮಿ ಕಂಪಿಸಲೇ ಇಲ್ಲ. ಬೆಳಿಗ್ಗೆ ಐದಕ್ಕೇ ಎದ್ದು ಈಗಲಾದರೂ ಆಗುತ್ತಾ ಎಂದುಕೊಂಡೆವು. "ಅದೇನು ಹೇಳಿ ಕೇಳಿ ಬರುವಂತಹ ಬಂಧುವೇ?" ಎಂದರು ಅನ್ನಪೂರ್ಣ. ಆರು ಗಂಟೆಯ ಬಸ್ಸನ್ನು ಹಿಡಿದು ಗುಲ್ಬರ್ಗಕ್ಕೆ ಮರಳಿ, ಅಲ್ಲಿಂದ ಬೆಂಗಳೂರಿಗೆ ವಾಪಸಾದೆವು. ಅಂದು ಭೂಮಿಯೇನೋ ಕಂಪಿಸಲಿಲ್ಲ. ಆದರೆ ಅಲ್ಲಿನ ಜನರ ಹೃದಯಗಳು ಕ್ಷಣಪ್ರತಿಕ್ಷಣವೂ ಭೀತಿಯಿಂದ ಕಂಪಿಸುತ್ತಿದೆ. ಆ ಜನರ ಜೊತೆ ಕಳೆದ ಕೆಲವೇ ಕೆಲವು ಗಂಟೆಗಳಾದರೂ ಅವರಿಗೆ "ನಮ್ಮ ಭೀತಿಯನ್ನು, ನೋವನ್ನು ಹಂಚಿಕೊಳ್ಳುವವರು ಇದ್ದಾರಲ್ಲಾ!" ಎಂಬ ಭಾವನೆಯು ಮೂಡಿತ್ತೆನಿಸುತ್ತೆ. ಆ ಜನಕ್ಕೆ ಶುಭವಾಗಲಿ!

ಸಂಕ್ರಾಂತಿಯ ಶುಭಾಶಯಗಳು!

- ಅ
19.03.2005
2AM