Wednesday, January 13, 2010

ಪಯಣದ ಹಾದಿಯಲ್ಲಿ..

ಗುಲ್ಬರ್ಗದ ಚಿಂಚೋಳಿಯಲ್ಲಿ ಪ್ರೇಕ್ಷಣೀಯ ಸ್ಥಳವೇನಿದೆ, ಏನಿಲ್ಲವೆಂದು ಯೋಚಿಸುವ ಸ್ಥಿತಿಯಲ್ಲಿ ನಮ್ಮ ತಂಡದವರಿರಲಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಗೆ ಹೋಗಿಬಿಡಬೇಕೆಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. "ಅಲ್ಲಿ ಪ್ರತಿದಿನವೂ ಭೂಕಂಪನವಾಗುತ್ತಲೇ ಇದೆಯಂತೆ, ಅಲ್ಲಿನ ಜನರು ಮನೆಯೊಳಗೆ ಸಹ ಮಲಗಲು ಹೆದರುತ್ತಿದ್ದಾರಂತೆ. ನೆಲದ ಮೇಲೆ ಕಿವಿಯಿಟ್ಟರೆ ಕೆಳಗೆ ಪಾತ್ರೆಗಳು ಬಿದ್ದಂತೆಲ್ಲಾ ಶಬ್ದವಾಗುತ್ತಿದೆಯಂತೆ..." ಇಷ್ಟೆಲ್ಲ ಕೇಳಿದ ಮೇಲೂ ಅಲ್ಲಿಗೆ ಹೋಗದೇ ಇರಲು ಸಾಧ್ಯವೇ? ಹಿರಿಯ ಮಿತ್ರ ಗೋವಿಂದ್ ರಾಜರು "ನಡೀರಿ ಹೊರಟುಬಿಡೋಣ" ಎಂದಿದ್ದೇ ತಡ, ಬಾಲರಾಜ್, ಅನ್ನಪೂರ್ಣ ಮತ್ತು ನಾನು ನಮ್ಮ ನಮ್ಮ ಬ್ಯಾಗುಗಳನ್ನು ಸಿದ್ಧಪಡಿಸಿಕೊಂಡೇ ಬಿಟ್ಟೆವು!

ಮಾರ್ಚಿನ ಗುಲ್ಬರ್ಗದೊಳಕ್ಕೆ ಕಾಲಿಡುವುದು ಬೆಂಗಳೂರಿಗರ ಪಾಲಿಗಂತೂ ಕೆಂಡದ ಮೇಲೆ ನಡೆಯುವಂತೆಯೇ! ಅನ್ನಪೂರ್ಣರು ಬಸ್ ಸ್ಟ್ಯಾಂಡಿನಲ್ಲಿಯೇ ಹೇಳುತ್ತಿದ್ದರು - "ಮುಂದಿನ ತಿಂಗಳ ಹೊತ್ತಿಗೆ ಅಲ್ಲಿ meteorology department ನವರು ತಮ್ಮದೊಂದು ಕೇಂದ್ರವನ್ನು ಅಲ್ಲಿ ತೆರೆಯಲಿದ್ದಾರೆ. ಆಮೇಲೆ ಅಲ್ಲಿ ಯಾರನ್ನೂ ಬಿಡುವುದಿಲ್ಲ. Security ತುಂಬ ಟೈಟಾಗಿರುತ್ತೆ. ಅಷ್ಟರೊಳಗೆ ಹೋಗಿ ಬಂದುಬಿಡಬೇಕು" ಎಂದು. ಧಿಡೀರ್ ತೀರ್ಮಾನವಾದ್ದರಿಂದ ರೈಲಿಗಾಗಿ ಕಾಯಲು ಆಗಲಿಲ್ಲ ನಮಗೆ. ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಬಸ್ಸಿನಲ್ಲಿ ಸಂಚಾರ ಮಾಡುವುದೇ ಒಂದು ಸಾಹಸ ಯಾತ್ರೆಯೆಂದು ನಮಗೆ ಯಾರಿಗೂ ಗೊತ್ತಿರಲಿಲ್ಲ. ಬೆಳಿಗ್ಗೆ ಒಂಭತ್ತು ಗಂಟೆಗೆ ತಲುಪಬೇಕಾದ ಬಸ್ಸು ಮಧ್ಯಾಹ್ನ ಒಂದುವರೆಗೆ ತಲುಪಿದರೆ ಆ ಬಿಸಿಲಿನಲ್ಲಿ ಶೆಖೆಯೊಳಗೆ ಕುಳಿತುಕೊಳ್ಳುವುದೂ ಸಹ ಒಂದು ಸಾಹಸವೇ.

[ಇದು ಏನೂ ಇಲ್ಲ, ನನ್ನ ಗೆಳೆಯನೊಬ್ಬ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರಲೆಂದು ಹೊರಟವನು ಲೇಟಾಗಿದ್ದಕ್ಕೆ ಒಂದು sms ಕಳಿಸಿದ್ದ - "ಕಳೆದ ಹದಿನೈದು ಗಂಟೆಗಳ ಕಾಲದಿಂದ ನಾನು ಬಸ್ಸಿನಲ್ಲಿ ಕುಳಿತಿದ್ದರ ಫಲವಾಗಿ ಈಗ ಸಕಲೇಶಪುರ ತಲುಪಿದೆ!" ಎಂದು. ಆ ಪರಿಸ್ಥಿತಿಯಲ್ಲಿಯೂ ಅವನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ನಾನು, "ಹದಿನೈದು ಗಂಟೆಗಳ ಕಾಲ ಬಸ್ಸಿನಲ್ಲಿ ಕುಳಿತುಕೊಳ್ಳುವುದರ ಬದಲು ಶಿರಾಡಿ ಘಟ್ಟದಲ್ಲಿ ಇಳಿದುಬಿಟ್ಟು ನಡೆದುಕೊಂಡು ಬಂದಿದ್ದರೆ ಚೆನ್ನಾಗಿರುತ್ತಿತ್ತು, ಮತ್ತು ಇನ್ನೂ ಬೇಗ ಸಕಲೇಶಪುರವನ್ನು ತಲುಪಬಹುದಿತ್ತು" ಎಂದು ತಮಾಷೆ ಮಾಡಿದ್ದೆ.]

ತುಮಕೂರಿನಲ್ಲಿ ಇನ್ನೊಂದು ಬಸ್ಸು ಕೆಟ್ಟು ನಿಂತಿದ್ದೂ, ಅಲ್ಲಿನ ಪ್ರಯಾಣಿಕರನ್ನೆಲ್ಲ ನಮ್ಮ ಬಸ್ಸಿನೊಳಕ್ಕೆ ಅನಿವಾರ‍್ಯವಾಗಿ ಹತ್ತಿಸಿಕೊಳ್ಳಬೇಕಾಗಿದ್ದುದೂ ನಮ್ಮ ಕಂಡಕ್ಟರಿಗೆ ತೀವ್ರ ಅಸಮಾಧಾನವನ್ನುಂಟು ಮಾಡಿತ್ತು. ಅದೇನಾಯಿತೋ ಏನೋ, ಇದ್ದಕ್ಕಿದ್ದ ಹಾಗೆ ಇಬ್ಬರು ಕಂಡಕ್ಟರುಗಳೂ ಎತ್ತೆತ್ತೆತ್ತರ ಧ್ವನಿಯಲ್ಲಿ ಜಗಳ ಆಡಲು ಆರಂಭಿಸಿದರು - ಗುಲ್ಬರ್ಗದ ಕನ್ನಡದಲ್ಲಿ! ಹತ್ತೇ ಜನರನ್ನು ಹತ್ತಿಸಿಕೊಳ್ಳುವುದು ಎಂದು ಇವನು, ಇಲ್ಲ - ಹದಿನೈದು ಜನರನ್ನು ಹತ್ತಿಸಿಕೊ ಎಂದು ಅವನು - ಇವಿಷ್ಟನ್ನೇ ಹಿಡಿದುಕೊಂಡು ಒಂದು ಗಂಟೆ ಕಾಲ ಜಗಳವಾಡಿದ್ದಾರೆ! ಒಂದು ಗಂಟೆಯ ನಂತರ ನಮ್ಮ ಕಂಡಕ್ಟರನಿಗೆ ಆಯಾಸವಾಯಿತೋ ಮನಸ್ಸು ಕರಗಿತೋ ಗೊತ್ತಿಲ್ಲ, ಹದಿನೈದು ಜನರನ್ನೂ ಹತ್ತಿಸಿಕೊಂಡ. ಇವರ ಜಗಳವನ್ನು ನೋಡಿ - "ಓಹೋ ಗುಲ್ಬರ್ಗದಲ್ಲಿ ಭಾರೀ ಬಿಸಿಲಿರಬೇಕು" ಎಂದು ನಮಗೆಲ್ಲರಿಗೂ ಅನ್ನಿಸದೇ ಇರಲಿಲ್ಲ.

ಇದು ಕಂಡಕ್ಟರನ ಕಥೆಯಾದರೆ ಡ್ರೈವರನದು ಬೇರೆಯದೇ ಕಥೆ. ಅವನ ಮೂಡು ಚೆನ್ನಾಗಿರಲಿಲ್ಲವೋ, ಅಥವಾ ನಮ್ಮ ಬಸ್ಸಿಗೆ ಯಾವುದೋ ವಿಶೇಷ ವೇಗ ನಿಯಂತ್ರಣ ಅಳವಡಿಸಿಬಿಟ್ಟಿದ್ದರೋ ಕೆ.ಎಸ್.ಆರ್.ಟಿ.ಸಿ.ಯವರು ಎನ್ನುವಂತೆ ಚಲಿಸುತ್ತಿದ್ದ. ಸಿಕ್ಕ ಸಿಕ್ಕ ಆಟೋಗಳು, ಗೂಡ್ಸ್ ಲಾರಿಗಳು, ಡಕೋಟ ಬಸ್ಸುಗಳೆಲ್ಲ ನಮ್ಮ ಬಸ್ಸನ್ನು ಓಟದ ಪಂದ್ಯದಲ್ಲಿ ಸೋಲಿಸುವಂತೆ ಓವರ್‍ಟೇಕ್ ಮಾಡಿಕೊಂಡು ನಮ್ಮನ್ನು ಹೀಯಾಳಿಸಿ ಹೋಗುತ್ತಿತ್ತು. ಅದೂ ಅಲ್ಲದೆ ನಮ್ಮ ಡ್ರೈವರು ಯಾವ ಯಾವುದೋ ಹಳ್ಳಿಗಳ ಒಳಗೆಲ್ಲ ಹೋಗಿ, ನಿಲುಗಡೆಯನ್ನು ಕೊಟ್ಟುಕೊಂಡು ಗುಲ್ಬರ್ಗ ತಲುಪುವುದರೊಳಗೆ "ಸ್ವಲ್ಪ" ತಡವಾಯಿತಷ್ಟೆ! "ಬಸ್ಸಿನ ಪ್ರಯಾಣಿಕರೆಲ್ಲರ patience ಗೆ ನಾವು ಮಣಿದರೂ ನಾವು ಮಾತ್ರ patients ಆಗೋದು ಬಾಕಿ" ಎಂದು ನಾನು ಇಳಿದೊಡನೆ ಹೇಳಿದೆ.

ಕಾಮತ್‍ನಲ್ಲಿ ಭರ್ಜರಿ ಭೋಜನದ ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಈ ಬಾರಿಯ ಪ್ರಯಾಣ ರಾಜಹಂಸದಲ್ಲಲ್ಲ. ಗ್ರಾಮೀಣ ಸಾರಿಗೆಯಲ್ಲಿ. ಜೊತೆಗೆ ರಸ್ತೆಯಿಲ್ಲದ ರಸ್ತೆ - ರಸ್ತೆಯಲ್ಲದ ರಸ್ತೆ! ಕೊನೆಯ ಸೀಟಿನಲ್ಲಿ ಕುಳಿತುಕೊಂಡಿದ್ದರೆ ಅದರ ಮಜವೇ ಬೇರೆ - ಆ ಅನುಭವದಿಂದ ವಂಚಿತಗೊಳ್ಳಲಾಗುತ್ತಾ? ನಾವೂ ಕೊನೆಯ ಸೀಟಿನಲ್ಲೇ ಕುಳಿತಿದ್ದೆವು. ಕೇವಲ ಎಪ್ಪತ್ತೈದು ಕಿಲೋಮೀಟರ್ ಇರುವ ಚಿಂಚೋಳಿಗೆ ಬಸ್ಸು ತಲುಪಲು ಮೂರು ಗಂಟೆಗಳ ಕಾಲ ಬೇಕು ಎಂದು ಜನ ಹೇಳಿದ್ದನ್ನು ಕೇಳಿದಾಗಲೇ ರಸ್ತೆ ಹೇಗಿರಬಹುದೆಂಬ ಕಲ್ಪನೆ ನಮ್ಮ ಕಣ್ಣ ಮುಂದೆ ಬಂದಿತು. ಈಗಾಗಲೇ ನಾವು ಬೆಂಗಳೂರಿನಿಂದ ಹದಿನಾರು ಗಂಟೆಗಳ ಕಾಲ ಬಸ್ಸಿನಲ್ಲಿ ಕುಳಿತಿದ್ದೆವು - ಈಗ ಇನ್ನೂ ಮೂರುಗಂಟೆಗಳ ಕಾಲ!

ಈ ಬಸ್ಸಿನ ಕಂಡಕ್ಟರು ಮತ್ತು ಸಹಪ್ರಯಾಣಿಕರ ಸಲಹೆಯ ಮೇರೆಗೆ ನಮ್ಮ ಪ್ಲ್ಯಾನುಗಳು ಸ್ವಲ್ಪ ಬದಲಾದವು. ಚಿಂಚೋಳಿಗೆ ಹೋಗಿ, ಅಲ್ಲಿಂದ ಗುರುಂಪಳ್ಳಿ ಎಂಬಲ್ಲಿಗೆ ಹೋಗಬೇಕೆಂದಿದ್ದ ನಮ್ಮನ್ನು ಚಿಮ್ಮನಚೋಡ ಎಂಬ ಊರಿನಲ್ಲಿ ಇಳಿದುಕೊಳ್ಳಲು ಹೇಳಿದರು. ಅಷ್ಟೇನೂ ರಶ್ಷಿರದ ಬಸ್ಸಿನ ಜನರೆಲ್ಲರೂ ನಮ್ಮನ್ನು ಸಹಸ್ರಾರು ಪ್ರಶ್ನೆಗಳಲ್ಲಿ ಮುಳುಗಿಸಿಬಿಟ್ಟರು. "ಭೂಕಂಪ ನೋಡೋದಕ್ಕೆ ಬಂದಿದ್ದೀರಾ?" ಎಂಬ ಪ್ರಶ್ನೆಯಿಂದ ಹಿಡಿದು "ನೀವು ಸಿನಿಮಾದೋರಾ?" ಎನ್ನುವ ತನಕ ಎಲ್ಲ ತರಹೇವಾರಿ ಪ್ರಶ್ನೆಗಳನ್ನೂ ಎದುರಿಸಿದೆವು. ನಮ್ಮ ನಿಲ್ದಾಣ ಬಂತೆಂದು ಹೇಳಿ ಇಳಿದುಕೊಂಡೆವು. ಇಳಿದ ಮೇಲೆ ಅಲ್ಲಿದ್ದ ಒಂದೇ ಒಂದು ಪೆಟ್ಟಿಗೆ ಅಂಗಡಿಯವನಲ್ಲಿ ಕೇಳಿದರೆ ಆಗ ಗೊತ್ತಾಯಿತು ಅದು ಚಿಮ್ಮನಚೋಡ ಊರಲ್ಲ - ಹದಿನಾಲ್ಕು ಕಿಲೋಮೀಟರ್ ಮುಂಚೆಗಿನ ಚಿಮ್ಮನಚೋಡ ಕ್ರಾಸ್ ಎಂಬ ಜಾಗ ಅಂತ. ಸುತ್ತ ಮುತ್ತ ಎತ್ತ ಕಣ್ಣು ಹಾಯಿಸಿದರೂ ಒಂದು ಮನೆಯೂ ಇಲ್ಲದಂತೆ ರಾಜಾಸ್ಥಾನದ ಮರುಭೂಮಿಯಂತೆ ಭಾಸವಾಯಿತು. ಮೂಲೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ, ಅದರ ಹಿಂಭಾಗ ಒಂದು ಮನೆ, ಅಂಗಡಿಯ ಎದುರು ಒಂದು ಮರ, ಚೀಲದೊಳಗಿದ್ದ ಬಾಟಲಿನ ನೀರು ಕುದಿಯುವಷ್ಟು ರಣ ಬಿಸಿಲು - ಇಷ್ಟೇ ನಮ್ಮೆದುರಿದ್ದಿದ್ದು. ಇನ್ನೂ ಹದಿನಾಲ್ಕು ಕಿಲೋಮೀಟರು ಈ ಬಿಸಿಲಿನಲ್ಲಂತೂ ನಡೆಯಲು ಸಾಧ್ಯವಿಲ್ಲ, ಐದು ಗಂಟೆಗೆ ಒಂದು ಬಸ್ಸು ಬರುತ್ತೆ ಅದನ್ನು ಹತ್ತಿಕೊಂಡು ಹೋಗೋದೆಂದು ತೀರ್ಮಾನಿಸಿದೆವು.

ಚಿಮ್ಮನಚೋಡದ ದಾರಿಯು ಬಹಳ ಮನೋಹರವಾಗಿತ್ತು. ಕಿಟಕಿಯಾಚೆ ಕಣ್ಣು ಹಾಯಿಸಿದಾಗ ಗುಡ್ಡದ ಹಿಂದೆ ಅಸ್ತಂಗತನಾಗಲು ಸಿದ್ಧನಾಗಿದ್ದ ಸೂರ‍್ಯನ ಕೆಂಪು, ಆ ಕೆಂಪಿಗೆ ಚಿನ್ನದಂತೆ ಹೊಳೆಯುತ್ತಿದ್ದ ಮರದ ಒಣಗಿದ ಎಲೆಗಳು, ಸಾಲು ಸಾಲಾಗಿ ಆ ಹಳ್ಳಿಯ ಹೆಂಗಸರು ಹೊಲದಲ್ಲಿ ಕೆಲಸ ಮಾಡಿ ಹಿಂದಿರುಗುತ್ತಿದ್ದುದು, ಬಿಸಿಲಿಗೆ ಲೆಕ್ಕಿಸದೆ ದೂರದಲ್ಲಿ ಹಾರುತ್ತಿದ್ದ ಕರಿ-ಬಿಳಿ-ಹಸಿರು ಪಕ್ಷಿಗಳು, ಇನ್ನೂ ಕೆಲಸ ಮುಗಿಸದೇ ಇದ್ದ ರೈತರು, ಸ್ವಚ್ಛಂದ ಪರಿಸರ.. ಎಲ್ಲವೂ ಬಸ್ಸಿನೊಳಗಿದ್ದ ನಮ್ಮ ಮನಸೆಳೆದವು. ಬಸ್ಸು ಮಾತ್ರ ಭೂಕಂಪನವಾಗುತ್ತಿದೆಯೇನೋ ಎಂಬಂತೆ ಅಲುಗಾಡುತ್ತಲೇ ಇತ್ತು. ಅಂತೂ ಇಂತೂ ಗುಲ್ಬರ್ಗದಿಂದ ನೂರು ಕಿಲೋಮೀಟರ್ ಒಳಗೆ ಬಂದು ಚಿಮ್ಮನಚೋಡವನ್ನು ತಲುಪಿದೆವು. ಇಲ್ಲಿಗೇ ಮುಗಿಯಲಿಲ್ಲ ಪ್ರಯಾಣ - ಹೆಸರಗುಂದಗಿ ಎನ್ನುವ ಹಳ್ಳಿಯು ನಮ್ಮ ಪ್ರಯಾಣದ ಅಂತಿಮ ಗುರಿಯಾಗಿತ್ತು. ಸೂರ‍್ಯ ಮುಳುಗಿ ಕತ್ತಲೂ ಸಹ ಆಗಿಹೋಗಿತ್ತು. ಇಪ್ಪತ್ತೆರಡು ಗಂಟೆಗಳ ಕಾಲ ಸತತವಾಗಿ ಬಸ್ಸಿನ ಪ್ರಯಾಣವನ್ನೇ ಮುಗಿಸಿದ್ದೇವೆ, ಇನ್ನು ಮುಕ್ಕಾಲುಗಂಟೆ ಜೀಪಿನಲ್ಲಿ ಪ್ರಯಾಣ ಮಾಡಬೇಕಷ್ಟೆ? ಆಗಿ ಹೋಗಲಿ!

ಜೀಪಿನಲ್ಲಿ ನಾನು ಚಾಲಕನ ಪಕ್ಕ ಕುಳಿತೆ. ಇನ್ನೊಂದಷ್ಟು ಜನರನ್ನು ಹತ್ತಿಸಿಕೊಳ್ಳುವ ಸಲುವಾಗಿ ಚಾಲಕನು ನನಗೆ ವಿಚಿತ್ರವಾದ ಆದೇಶವೊಂದನ್ನು ಕೊಟ್ಟ. "ಸ್ವಲ್ಪ ನಿಮ್ ಕಾಲುಗಳನ್ನು ಈ ಕಡೆ ಇಟ್ಕೊಳಿ - ಒಂದು ಕಾಲನ್ನು ಈ ಕಡೆ, ಮತ್ತೊಂದು ಕಾಲನ್ನು ಆ ಕಡೆ.." ಎಂದ. ನನಗೆ "ಈ ಕಡೆ.... ಆ ಕಡೆ...." ಅರ್ಥವಾಗಲಿಲ್ಲ. ಅವನು ಹೇಳಿದ್ದು ಜೀಪಿನ ಗೇರ್ ಲಿವರ್ರು ನನ್ನ ಕಾಲುಗಳ ಮಧ್ಯೆ ಬರುವಂತೆ ಈ ಕಡೆಯೊಂದು ಕಾಲು, ಆ ಕಡೆಯಿನ್ನೊಂದು ಕಾಲನ್ನು ಹಾಕಿಕೊಂಡು ಕುಳಿತುಕೊಳ್ಳಲು! ಮುಕ್ಕಾಲು ಗಂಟೆಗಳ ಕಾಲ ಪ್ರಯಾಣ ಬಹಳ ಸಾಹಸಮಯವಾಗಿತ್ತು - ನನ್ನ ಪಾಲಿಗೆ! ಡ್ರೈವರು ಗೇರನ್ನು ಹಾಕುವಾಗ ಅಪ್ಪಿತಪ್ಪಿ ಹೆಚ್ಚುಕಮ್ಮಿಯಾದರೆ ಎಂಬ ಭೀತಿಯಿಂದಲೇ ಕುಳಿತಿದ್ದೆ - ಕತ್ತಲೆ ಬೇರೆ! ಮತ್ತೆ ಯಥಾಪ್ರಕಾರ ಜೀಪಿನಲ್ಲೂ ಅದದೇ ಪ್ರಶ್ನೆಗಳು, ಉತ್ತರದ ಕ್ಯಾಸೆಟ್ಟುಗಳನ್ನು ಪ್ಲೇ ಮಾಡುತ್ತಿದ್ದರು ನಮ್ಮ ತಂಡದ ಸದಸ್ಯರು. ನಾನು ಯಾವ ಪ್ರಶ್ನೆಗೂ ಉತ್ತರಿಸದೆ ಡ್ರೈವರನು ಸರಿಯಾಗಿ ಗೇರನ್ನು - ಗೇರು ಲಿವರ್ರನ್ನೇ ಹಿಡಿದು ಹಾಕುತ್ತಿದ್ದಾನೋ ಇಲ್ಲವೋ ಎಂದು ಭೀತಿಯಿಂದ ನೋಡುತ್ತಿದ್ದೆ. ಹೆಸರುಗುಂದಗಿಯನ್ನು ತಲುಪಿದ ನಂತರ ಡ್ರೈವರನು ಉತ್ತರಕರ್ನಾಟಕದ ಭಾಷೆಯಲ್ಲಿ "ಬೆಳಿಗ್ಗೆ ಆರುಗಂಟೆಗೆ ಬಸ್ಸು ಇಲ್ಲಿ ಬರುತ್ತೆ, ಗುಲ್ಬರ್ಗಕ್ಕೆ ಹೋಗುತ್ತೆ" ಎಂದಷ್ಟೇ ಹೇಳಿದ್ದನ್ನು ಬೆಂಗಳೂರಿಗರಾದ ನಾವು ಅರ್ಥ ಮಾಡಿಕೊಳ್ಳಲು ಸಾಕು ಸಾಕಾಗಿ ಹೋಯಿತು.

ಇಪ್ಪತ್ತು ಮೂರು ಗಂಟೆಗಳ ಸತತ ಪ್ರಯಾಣ ಮಾಡಿದ ನಮಗೆಲ್ಲರಿಗೂ ಐಸಿನ ಮೇಲೆ ಕುಳಿತುಕೊಳ್ಳಬೇಕೆಂಬ ಅನಿಸಿಕೆಯುಂಟಾಗಿತ್ತು!

ಕತ್ತಲು ಕವಿದಿತ್ತು. ಹೆಸರುಗುಂದಗಿಯ ಜನ ನಮ್ಮನ್ನು ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಂಡರು. ವಿದ್ಯುದ್ದೀಪಗಳಿದ್ದವು, ಆದರೆ ಪ್ರಕಾಶಮಾನವಾಗಿರಲಿಲ್ಲ. ಬೀದಿ ದೀಪಗಳೆಲ್ಲವೂ 0 Watt ಬಲ್ಬಿನಂತೆ ಇದ್ದವು. ಆಕಾಶದಲ್ಲಿದ್ದ ಚಂದ್ರನೇ ಈ ದೀಪಗಳಿಗಿಂತ ಹೆಚ್ಚು ಬೆಳಕನ್ನು ಚೆಲ್ಲುತ್ತಿದ್ದ. ಆ ಹಳ್ಳಿಯ ಹಿರಿಯರೊಬ್ಬರು " ಬನ್ನಿ ಕೂತ್ಕೊಳಿ" ಎಂದು ಒಂದು ಪೆಟ್ಟಿಗೆ ಅಂಗಡಿಯ ಬದಿಯಲ್ಲಿದ್ದ ಅರಳಿ ಕಟ್ಟೆಯತ್ತ ಕರೆದರು. ಬಿಸಿಲಿನಲ್ಲಿ ದಣಿದು ಬಂದ ನಮಗೆ ಅರಳಿಯ ಗಾಳಿಯು ಬಹಳ ಹಿತಕರವಾಗಿತ್ತು. ಸುಮಾರು ನಲವತ್ತು-ಐವತ್ತು ಜನ ನಮ್ಮನ್ನು ಸುತ್ತುವರಿದಿದ್ದರು. ಎಲ್ಲರಿಗೂ ನಾವು ಅಲ್ಲಿ ಬಂದಿದ್ದ ಉದ್ದೇಶದ ಬಗ್ಗೆ ಬಹಳ ಕುತೂಹಲ ಇತ್ತೆಂಬುದು ಅವರುಗಳ ಮಾತುಗಳಲ್ಲಿ ವ್ಯಕ್ತವಾಗಿತ್ತು. ಯಾರ ಮುಖವೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ - ಬೆಳಕಿನ ಅಭಾವದಿಂದ. "ನೀವು ಇಲ್ಲಿ STUDY ಮಾಡ್ಲಿಕ್ಕೆ ಬಂದಿಲ್ವಾ ಹಾಗಾದರೆ?" ಎಂದು ಒಬ್ಬರು ಯಾಕೊ ನಿರಾಶರಾಗಿ ಕೇಳಿದರು. "ಇಲ್ಲ, ಗುಲ್ಬರ್ಗದಲ್ಲಿ ಏನೊ ಕೆಲಸ ಇತ್ತು, ಅಲ್ಲಿ ಭೂಕಂಪನದ ಬಗ್ಗೆ ಯಾರೊ ಹೇಳಿದರು, ಅದನ್ನು ನೋಡಲಿಕ್ಕೆಂದು ಬಂದೆವು" ಎಂದರು. ನಾವು ಭೂಕಂಪನವನ್ನು ಅನುಭವಿಸುವುದಕ್ಕೆ ಬಂದಿದ್ದೇವೆಂದರೆ ಆ ಮುಗ್ಧ ಜನರು ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡು "ನಾವು ಇಲ್ಲಿ ಕಷ್ಟ ಪಡುತ್ತಿದ್ದರೆ ಇವರು ತಮಾಷೆ ನೋಡಲು ಬಂದಿದ್ದಾರೆ" ಎಂದು ತಿಳಿದುಕೊಳ್ಳಬಹುದೆಂಬ ಮುಂಜಾಗರೂಕತೆ ಅನ್ನಪೂರ್ಣರಿಗಿತ್ತು.

ನಮ್ಮನ್ನು ಮಾತನಾಡಿಸಿದ ಹಿರಿಯರ ಹೆಸರು ಪರ್ವತಯ್ಯ ಎಂದಂತೆ - ಆತ ಪರಿಚಯಿಸಿಕೊಂಡರು. ನಮಗೆಲ್ಲರಿಗೂ ಟೀ ಕುಡಿಯಲು ತರಿಸಿಕೊಟ್ಟರು. ಅನಿರೀಕ್ಷಿತವಾಗಿ ಒದಗಿ ಬಂದ ಅತಿಥಿಸತ್ಕಾರವು ನಮಗೆಲ್ಲರಿಗೂ ತುಂಬ ಸಂಕೋಚ ತರಿಸಿತ್ತು. ಗೋವಿಂದ್ ರಾಜ್ ಆ ಹಳ್ಳಿಯವರಲ್ಲಿ ವಿಶೇಷ ಆಸಕ್ತಿ ತೋರಿಸಿ ಮಾತನಾಡಿಸುತ್ತ ಭೂಕಂಪನದ ಅನುಭವದ ಬಗ್ಗೆ ವಿಚಾರಿಸುತ್ತಿದ್ದರು. ಕತ್ತಲಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಕಾಣಿಸದಿದ್ದರೂ ಭೀತಿ, ಚಿಂತೆ, ಅಸಹಾಯಕತೆ, ನೋವು ಎಲ್ಲವೂ ಅವರ ಮಾತುಗಳಲ್ಲಿ ವ್ಯಕ್ತವಾಗಿದ್ದವು. ಒಬ್ಬ ಹೇಳಿದ "ಇವತ್ತು ಬೆಳಿಗ್ಗೆ ಆಯಿತು.." . ಇನ್ನೊಬ್ಬ, "ಬೆಳಿಗ್ಗೇನೂ ಆಯ್ತು, ಮಧ್ಯಾಹ್ನ ಹನ್ನೆರಡೂವರೆಗೂ ಆಯ್ತು.." ಎಂದ. ಪರ್ವತಯ್ಯನವರು "ದಿನಾ ಆಗುತ್ತೆ, ಡೈನಮಿಟ್ ಸಿಡಿಸಿದಷ್ಟು ಜೋರಾಗೆಲ್ಲ ಸದ್ದಾಗುತ್ತೆ. ಈಚೆಗೆ ಒಂದು ವಾರದಿಂದ ಸ್ವಲ್ಪ ಕಡಿಮೆಯಾಗಿದೆ. ಈಗ ಧೈರ್ಯ ಮಾಡಿ ಮನೆಯೊಳಗೆ ಮಲಗುತ್ತಿದ್ದೇವೆ. ಮುಂಚೆಲ್ಲಾ ಇಲ್ಲೇ, ಈ ಅರಳಿಕಟ್ಟೆಯ ಎದುರೇ ಎಲ್ಲರೂ ಮಲಗುತ್ತಿದ್ದೆವು. ಅಷ್ಟು ಭಯ!" ಎಂದು ಗದ್ಗದಿತ ಕಂಠದಲ್ಲಿ ಹೇಳಿದರು.

ಇನ್ನೊಬ್ಬರು "ನಿಮ್ಹಂಗೇ ಬಟ್ಟೆ ಹಾಕ್ಕೊಂಡು ಇನ್ಯಾರೋ ಬಂದಿದ್ರು ಹೋದ್ ತಿಂಗ್ಳು. ಏನೋ ಸ್ಟಡಿ ಮಾಡಕ್ಕೆ. ಡ್ಯಾಮ್ ಇದ್ಯಲ್ಲಾ ಇಲ್ಲೇ ಪಕ್ಕದಲ್ಲಿ, ಅದ್ರಿಂದಾನೇ ಅಂತೆ ಇಲ್ಲ್ ಭೂಕಂಪ ಆಗ್ತಿರೋದು.." ಎಂದರು. ಅಣೆಕಟ್ಟಿಗೂ ಭೂಕಂಪನಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನನಗಂತೂ ಗೊತ್ತಿರಲಿಲ್ಲ, ಇದ್ದರೂ ಇರಬಹುದು, ಬೆಂಗಳೂರಿಗೆ ತೆರಳಿದ ಮೇಲೆ ಅದರ ಬಗ್ಗೆ ಅಧ್ಯಯನ ಮಾಡೋಣವೆಂದೆನಿಸಿತು.

ಪರ್ವತಯ್ಯ ಕೇಳಿದರು, ಸಾಮಾನ್ಯವಾಗಿ ಹಳ್ಳಿಗರು ನಮ್ಮನ್ನು ಕೇಳುವಂತೆ - " ನೀವು ಯಾಕೆ ಇಲ್ಲಿಗೆ ಬಂದ್ರಿ? ಬೆಂಗಳೂರಿನವರು, ಸುಖವಾಗಿದ್ದೀರ ಅಲ್ವಾ ನೀವು? ಇಲ್ಲಿ ನೋಡಿ, ದಿನಕ್ಕೆ ಆರುಗಂಟೆ ಮಾತ್ರ ಕರೆಂಟು ಇರೋದು, ಹನಿ ನೀರಿಗೂ ಒದ್ದಾಡುತ್ತೀವಿ, ಜೊತೆಗೆ ಭೂಕಂಪ ಬೇರೆ ಯಾವಾಗ್ ಆಗುತ್ತೋ ಗೊತ್ತಿಲ್ಲ. ಬೆಂಗಳೂರು ಬಿಟ್ಟು ಯಾಕೆ ಆಚೆ ಬಂದ್ರಿ?" ಎಂದರು. ಬೆಂಗಳೂರಿನವರೆಂದರೆ ಸುಖಿಗಳು, ಬೆಂಗಳೂರಿನಲ್ಲಿರುವವರಿಗೆ ಯಾವುದೇ ಕೊರತೆಯೂ ಇಲ್ಲ ಎಂದು ಈಗಲೂ ಸಹ ಬೇರೆ ಊರಿನ ಜನರು ನಂಬಿರುವುದನ್ನು ನಾನು ಆಗಿಂದಾಗ್ಗೆ ನೋಡುತ್ತಲೇ ಇದ್ದೇನೆ. ಯಾವುದೇ ಹಳ್ಳಿಗೆ ಹೋದರೂ, "ನೀವ್ ಬಿಡಿ ಬೆಂಗ್ಳೂರ್‍ನೋರು, ಆರಾಮು.." ಎನ್ನುತ್ತಾರೆ. ಇದೇನು ಅವರ ಸತ್ಯದ ನಂಬಿಕೆಯೋ ಅಥವಾ ಅಪಹಾಸ್ಯವೋ ಗೊತ್ತಿಲ್ಲ! ಒಟ್ಟಿನಲ್ಲಿ ನನ್ನ ಕಿವಿಗಂತೂ ಈ "ಬೆಂಗಳೂರಿನ ಸುಖ"ದ ಮಾತು ದೊಡ್ಡ sarcasm ರೀತಿ ಕೇಳಿಸುತ್ತೆ. ಬೆಂಗಳೂರಿನ ಸುಖ ಏನೆಂಬುದು ಬೆಂಗಳೂರಿಗರಿಗಷ್ಟೇ ಗೊತ್ತು!

ಪರ್ವತಯ್ಯನವರ ಪ್ರಶ್ನೆಗೆ ಅನ್ನಪೂರ್ಣ ಉತ್ತರಿಸಿದರು. ಬೆಂಗಳೂರಿನ ಗುಟ್ಟುಗಳನ್ನೇನೂ ಬಿಟ್ಟುಕೊಡದಿದ್ದರೂ ಕರೆಂಟೊಂದನ್ನು ಬಿಟ್ಟರೆ ಬೆಂಗಳೂರಿಗೂ ಹೆಸರುಗುಂದಗಿಗೂ ಅಷ್ಟೇನೂ ವ್ಯತ್ಯಾಸವಿಲ್ಲ ಎನ್ನುವಂತೆ ಹೇಳಿ ಅವರನ್ನು ಸಮಾಧಾನ ಮಾಡಿದರು. ನಮ್ಮಂತೆಯೇ ಇವರೂ ಸಹ ಎಂಬ ನಂಬಿಕೆಯುಂಟಾದ ಪರ್ವತಯ್ಯನವರು "ಏನು ಕೆಲ್ಸ ಮಾಡ್ತೀರ ನೀವೆಲ್ಲ?" ಎಂದರು. ಗೋವಿಂದ್ ರಾಜ್ ಇದಕ್ಕೆ ಥಟ್ಟನೆ ಉತ್ತರಿಸುತ್ತ "ನಾನು ವ್ಯಾಪಾರ ಮಾಡ್ತೀನಿ, ಇವರು (ನನ್ನನ್ನು ತೋರಿಸಿ) ಕಂಪ್ಯೂಟರ್ ರಿಪೇರಿ ಮತ್ತು ವ್ಯಾಪಾರ ಮಾಡ್ತಾರೆ, ಇವರು ( ಬಾಲ್‍ರಾಜ್‍ರನ್ನು ತೋರಿಸಿ) ಸಾಹಸ ಕ್ರೀಡಾಪಟು, ಮತ್ತೆ ಇವರು (ಅನ್ನಪೂರ್ಣರನ್ನು ತೋರಿಸಿ) ಟಿ.ವಿಯಲ್ಲಿ ಕೆಲಸ ಮಾಡುತ್ತಾರೆ" ಎಂದರು. ಟಿ.ವಿ.ಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ ತತ್‍ಕ್ಷಣ ಆ ಜನಕ್ಕೆ ಮಿಕ್ಕವರು ಯಾರೂ ಅಷ್ಟು ಇಂಟರೆಸ್ಟಿಂಗ್ ವ್ಯಕ್ತಿಗಳಾಗಿ ಕಾಣಿಸಲಿಲ್ಲ. ಅನ್ನಪೂರ್ಣರತ್ತ ಅವರು ಕಂಗಳನ್ನು ಅರಳಿಸಿದ್ದು ಕತ್ತಲಿನಲ್ಲೂ ಕಾಣುವಂತಿತ್ತು. ಅವರ ಕುತೂಹಲವನ್ನು ಇನ್ನಷ್ಟು ಕೆರಳಿಸಲು, "ಇಲ್ಲಿ ಈಟೀವಿ ಬರುತ್ತಾ?" ಎಂದರು. ಎಲ್ಲರೂ ಟೀಚರಿಗೆ ಶಾಲಾಮಕ್ಕಳು ಉತ್ತರಿಸುವಂತೆ ಒಂದೇ ಉಸಿರಿನಲ್ಲಿ "ಹ್ಞೂಂ" ಎಂದರು.

"ಅದರಲ್ಲಿ ಗುಪ್ತಗಾಮಿನಿ ಅಂತ ಒಂದು ಧಾರಾವಾಹಿ ಬರುತ್ತಲ್ಲ, ಅದರಲ್ಲಿ ಕೆಲ್ಸ ಮಾಡ್ತೀನಿ."

ಕಾತುರತೆಯು ಇನ್ನೂ ತೀವ್ರವಾಗಿ, "ಯಾವ ಪಾರ್ಟ್ ಮಾಡ್ತೀರ ಅದರಲ್ಲಿ?" ಎಂದಿತು ಜನ.

"ಯಾವ ಪಾತ್ರವನ್ನೂ ಮಾಡಲ್ಲ, ನಾನು ಅಡ್ಮಿಸ್ಟ್ರೇಷನ್ ಡಿಪಾರ್ಟ್ಮೆಂಟಿನಲ್ಲಿ ಇರೋದು" ಎಂದು ಹೇಳಿದರೂ ಸಹ ಅವರುಗಳಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂದು ಮನವರಿಕೆ ಮಾಡಿಕೊಡುವುದರೊಳಗೆ ಸಾಕು ಸಾಕಾಯಿತು!

ಚಾರಣಗಳಲ್ಲಿ ನಮಗೆ ಅನುಭವವಿರುವಂತೆ ಹೋದ ಜಾಗಗಳಲ್ಲಿ ಊಟ ಸಿಗುತ್ತೋ ಬಿಡುತ್ತೋ ನಾವಂತೂ ನಮಗೆ ಬೇಕಾದ ಆಹಾರವನ್ನು ಚೀಲದೊಳಕ್ಕೆ ತುರುಕಿಕೊಂಡೇ ಹೋಗಿದ್ದೆವು. ಚಿಮ್ಮನಹಳ್ಳಿ ಕ್ರಾಸಿನಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿನ "ಸ್ಪೆಷಲ್ ಬ್ರೆಡ್"ಅನ್ನು ಕೊಂಡುಕೊಂಡಿದ್ದೆವು. ಹೆಸರುಗುಂದಗಿಯಲ್ಲಿ ಒಂದಿಷ್ಟು ಬಯಲು ಜಾಗ ಸಿಕ್ಕರೆ ಸಾಕು ಟೆಂಟನ್ನು ಹಾಕುವುದೆಂದು ತೀರ್ಮಾನಿಸಿದ್ದೆವು. ಯಾರನ್ನು ಮಾತನಾಡಿಸುವ ಉದ್ದೇಶವೂ ನಮಗೆ ಇರಲಿಲ್ಲ. ಆದರೆ, ಜನರೊಡನೆ ಮಾತನಾಡದಿದ್ದರೆ ವಿಷಯಗಳು ಸಿಗುವುದಾದರೂ ಹೇಗೆ? ಪರ್ವತಯ್ಯನವರು ನಮ್ಮ ಊಟೋಪಚಾರದ ಬಗ್ಗೆ ವಿಚಾರಿಸುತ್ತ "ಏನಿರಲಿ ರಾತ್ರಿ ಊಟಕ್ಕೆ? ಅನ್ನ - ಸಾರು - ಮಜ್ಜಿಗೆ?" ಎಂದು ಕೇಳಿದರು. ಎಂದೂ ಎಲ್ಲೂ ಮಾತನಾಡದ ಬಾಲ್‍ರಾಜ್ ಇದ್ದಕ್ಕಿದ್ದ ಹಾಗೆ ಮಾತಿನ ಮುತ್ತುದುರಿಸಿಬಿಟ್ಟಿದ್ದು ಎಲ್ಲರಿಗೂ ಅಚ್ಚರಿಯಾಯಿತು! "ನೀವು ತೊಂದರೆ ತೆಗೆದುಕೊಳ್ಳಬೇಡಿ, ನಮ್ಮ ಊಟ ನಾವು ತಂದಿದ್ದೇವೆ, ನಿಮ್ಮ ಜೊತೆ ಮಾತನಾಡಿ ಸಂತೋಷ ಆಯಿತು ತುಂಬ" ಎಂದುಬಿಟ್ಟರು. ನಮಗೆಲ್ಲರಿಗೂ ಇದ್ದಕ್ಕಿದ್ದ ಹಾಗೆ ಭಯವಾಗಿಬಿಟ್ಟಿತು - ಬಾಲ್‍ರಾಜ್‍ರ ಈ ಮಾತನ್ನು ಕೇಳಿ. ಅವರು ಏನು ತಪ್ಪು ತಿಳಿದುಕೊಂಡು ನಮ್ಮನ್ನು "ದುರಹಂಕಾರಿ ಮುಂಡೇವು!" ಎಂದು ಶಪಿಸುತ್ತಾರೋ ಎಂದು ಯೋಚನೆಯಾಯಿತು. ಆದರೆ ಪರ್ವತಯ್ಯನವರು "ಅಷ್ಟು ದೂರದಿಂದ ಇಲ್ಲೀವರೆಗೂ ಬಂದಿದ್ದೀರ, ನಿಮ್ಮನ್ನು ಹಾಗೇ ಕಳ್ಸಕ್ಕೆ ಆಗಲ್ಲ" ಎಂದು ಬಲವಂತ ಮಾಡಿದ್ದಕ್ಕೆ ಗೋವಿಂದ್ ರಾಜ್ "ಸ್ವಲ್ಪ ಮಜ್ಜಿಗೆಯನ್ನ ಕೊಡಿ ಸಾಕು" ಎಂದರು. ಗುಲ್ಬರ್ಗದವರು ತಿನ್ನುವ ಖಾರವನ್ನು ಪರೀಕ್ಷಿಸುವ ತಾಕತ್ತು ನಮಗೆ ಯಾರಿಗೂ ಇರಲಿಲ್ಲ ಎಂಬ ಸತ್ಯವನ್ನು ಗೋವಿಂದ್ ರಾಜ್ ಬಹಳ ಚೆನ್ನಾಗಿ ಅರಿತಿದ್ದ ಹಾಗಿತ್ತು!

"ಅತಿಥಿ ದೇವೋ ಭವ" ಎನ್ನುವ ದೇಶದಲ್ಲಿರುವುದರಿಂದ ನಾವುಗಳು ಅಲ್ಲಿ ದೇವರುಗಳಾಗಿದ್ದೆವೆನಿಸುತ್ತೆ - "ಹಗಲಲ್ಲಿ ಬಂದಿದ್ದಿದ್ದರೆ ಡ್ಯಾಮು, ಹೊಲ ಎಲ್ಲ ತೋರಿಸುತ್ತಿದ್ವಿ, ಈಗ ಕತ್ತಲಾಗಿ ಹೋಗಿದೆ, ಬೆಳಿಗ್ಗೆ ಹೋಗ್ಬೋದು!" ಎಂದರು. ಭೂಕಂಪನವಾಗುವ ಊರಿನಲ್ಲಿ ಪ್ರವಾಸ ಮಾಡಲು ಹೋಗಿದ್ದೇವೆಯೇ? ನಾವು ಬೆಳಿಗ್ಗೆಯೇ ಎದ್ದು ಹೊರಡಬೇಕಾಗಿದ್ದರಿಂದ ಮುಂದಿನ ಸಲ ಹೊಲ, ಡ್ಯಾಮು ನೋಡಲೆಂದೇ ಬರುತ್ತೇವೆಂದು ಸಮಾಧಾನ ಹೇಳಿದೆವು. ರಾತ್ರಿ ತಂಗಲು ಶಾಲೆಯೊಂದರಲ್ಲಿ ವ್ಯವಸ್ಥೆ ಮಾಡಿಕೊಡುತ್ತೇವೆಂದಿದ್ದಕ್ಕೆ ಬಾಲ್‍ರಾಜ್ ಅವರು ಒಪ್ಪಲೇ ಇಲ್ಲ. ಅವರು ಅಷ್ಟು ದೂರದಿಂದ ಹೊತ್ತುಕೊಂಡು ಬಂದ ಚೀಲದಲ್ಲಿ ಟೆಂಟಿತ್ತಲ್ಲ! ದೀಪವೇ ಇಲ್ಲದ ಶಾಲೆಯ ಕೊಠಡಿಯೊಳಗೆ ನಮಗಾಗಿ ಹೊಸ ಬಲ್ಬನ್ನು ತರಿಸಿದ ಪರ್ವತಯ್ಯನವರು "ನಮ್ಮೂರಿಗೆ ಬಂದೋರನ್ನ ಟೆಂಟಲ್ಲಿ ಮಲಗಿಸೋದೇ?" ಎಂದು ಬೈಯ್ಯುವ ಧ್ವನಿಯಲ್ಲಿ ಹೇಳಿದರು.

ಹೆಸರುಗುಂದಗಿಯಂತಹ ಹಳ್ಳಿಯಲ್ಲಿ ಬಿಷಪ್ ಕಾಟನ್ನಿನಂತಹ ಶಾಲೆಯಂತೂ ಇಲ್ಲ. ಶಾಲೆಯೆಂದರೆ ಅದು ಒಂದು ಕೊಠಡಿ ಮಾತ್ರ. ಐವತ್ತು ಮಕ್ಕಳು ಮಾತ್ರ ಪಾಠಕ್ಕೆ ಬರುತ್ತಿದ್ದರಂತೆ. ಈ ಕೊಠಡಿ ಮುಂದೆ ಸಣ್ಣದೊಂದು ಮೈದಾನ. ಮೈದಾನಕ್ಕೂ ಶಾಲೆಯೆಂಬ ಕೊಠಡಿಗೂ ಮಧ್ಯೆ ಒಂದು ಕಟ್ಟೆ. ಜಗಲಿಯಂತಿರುವ ಕಟ್ಟೆ. ಹೇಳಿ-ಕೇಳಿ ಗುಲ್ಬರ್ಗವಾದ್ದರಿಂದ ಶೆಖೆಯನ್ನು ತಾಳಲಾರದೆ ಆ ಜಗುಲಿಯ ಮೇಲೆಯೇ ಮಲಗಿಕೊಳ್ಳೋಣವೆಂದು ತೀರ್ಮಾನಿಸಿದೆವು. ಬಾಲ್‍ರಾಜರಿಗೂ ತಾವು ಹೊತ್ತುಕೊಂಡು ಬಂದಿದ್ದ ಟೆಂಟನ್ನು ಎಲ್ಲಾದರೂ ಪ್ರತಿಷ್ಠಾಪಿಸಲೇ ಬೇಕಾಗಿತ್ತು. ಸರಿ, ಜಗುಲಿಯ ಮೇಲೆಯೇ ಟೆಂಟನ್ನು ಹಾಕಿಕೊಂಡು ಭೂಕಂಪನವಾಗುತ್ತೆ, ಪಾತ್ರೆ ಬಿದ್ದ ಸದ್ದು ಕೇಳಿಸುತ್ತೆ, ಜಗುಲಿಯೇ ಅಲುಗಾಡುತ್ತೆ ಎಂದು ಕಾದುಕೊಂಡು ಟೆಂಟಿನ ಹೊರಗಡೆ ಚಾಪೆಯನ್ನು ಹಾಸಿ ಇರುಳಿನ ಹರಟೆಗೆಂದು ಕುಳಿತೆವು. ಊಟ ಬರುವವರೆಗೂ ಕಾಯ ಬೇಕಷ್ಟೆ? ಪರ್ವತಯ್ಯನವರೂ ಆ ಊರಿನ ಒಂದಿಪ್ಪತ್ತು ಜನರೂ ನಮ್ಮ ಜೊತೆ ಬಂದು ಕುಳಿತರು.

ಗೋವಿಂದ್ ರಾಜ್ ಅವರಿಗೆ ಹಳ್ಳಿಯ ಸಂಸ್ಕೃತಿಗಳೆಂದರೆ ಬಹಳ ಇಷ್ಟ. ಜಾನಪದ ಸಂಗೀತ, ಹಳ್ಳಿ ಮನೆಗಳು ಇವೆಲ್ಲವೂ ಇವರಿಗೆ ಬಹಳ ಪ್ರಿಯವಾದುದು. "ನಿಮ್ಮಲ್ಲಿ ಯಾರಾದರೂ ಒಂದು ಹಾಡು ಹೇಳಿ, ಕೇಳೋಣ" ಎಂದಿದ್ದೇ ತಡ ಆ ಗುಂಪಿನಲ್ಲೊಬ್ಬರು ಶಿಶುನಾಳರ ಹಾಡನ್ನು ಜಾನಪದ ಶೈಲಿಯಲ್ಲಿ ಬಹಳ ಸೊಗಸಾಗಿ ಹಾಡಿ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ನನಗೂ ಒಂದು ಚಪ್ಪಾಳೆಯನ್ನು ದೊರಕಿಸಿ ಕೊಡುವ ಸಲುವಾಗಿ ನನ್ನ ಕೈಯಲ್ಲೂ ಒಂದು ಹಾಡು ಹೇಳಿಸಿ, ಚಪ್ಪಾಳೆ ಹೊಡೆಯಬೇಕಾಗಿರುವುದು ಅನಿವಾರ‍್ಯವಾದ್ದರಿಂದ ಹೊಡೆದರು.

ಮೈದಾನದಲ್ಲಿ ದೀಪವು ಪ್ರಕಾಶಮಾನವಾಗಿ ಇಲ್ಲದೇ ಇದ್ದುದರಿಂದ ಶಾಲೆಯ ಒಳಗಿನ ಬಲ್ಬಿನ ದೀಪದ ಕೆಳಗೇ ಒಂದು ಫೋಟೋ ಸೆಷನ್ ನಡೆಸಿದೆವು. ನಂತರ ನಮ್ಮ ಕಾಣಿಕೆಯೆಂಬಂತೆ ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲಿ ಎಂದು ಹಣವನ್ನು ಕೊಡೋಣವೆಂದು ನಾವು ತೀರ್ಮಾನಿಸಿಕೊಂಡೆವು. ಆದರೆ ಅವರುಗಳು ಹಣವನ್ನು ಸ್ವೀಕರಿಸಲು ಒಪ್ಪಲೇ ಇಲ್ಲ. ಬಹಳ ಬಲವಂತ ಮಾಡಬೇಕಾಯಿತು - ಕೊನೆಗೆ, "ರಸೀತಿ ಕೊಡುತ್ತೇವೆ" ಎಂದು ಹೇಳಿ ಎಲ್ಲಿಂದಲೋ ರಸೀತಿ ಪುಸ್ತಕವನ್ನು ಹುಡುಕಿ ತಂದು "ಅನ್ನಪೂರ್ಣ ಮತ್ತು ಸ್ನೇಹಿತರು" ಎಂದು ಬರೆದುಕೊಟ್ಟರು!

ಊಟ ಸಿದ್ಧವಾಗಿತ್ತು. ಕಟ್ಟೆಯ ಮೇಲೆ ಕುಳಿತೇ ಊಟ ಮಾಡಿದೆವು. ನಾವು ಹೇಳಿದ್ದಂತೆಯೇ ಬರೀ ಮಜ್ಜಿಗೆಯನ್ನವನ್ನೇ ಬಡಿಸಿದರು. ಬೆಂಗಳೂರಿನಲ್ಲಿ ಒಬ್ಬೊಬ್ಬರೂ ಒಂದೊಂದು ಮೂಲೆಯಲ್ಲಿ ಇರುವವರು. ಒಬ್ಬೊಬ್ಬರೂ ಒಂದೊಂದು ಕೆಲಸದಲ್ಲಿರುವವರು. ಎಲ್ಲರೂ ಒಟ್ಟಾಗಿ ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಪ್ರಯಾಣಿಸಿ, ಅಲ್ಲಿಂದ ನೂರು ಕಿಲೋಮೀಟರು ದೂರದ ಕುಗ್ರಾಮವೊಂದರಲ್ಲಿ ಬ್ರೆಡ್‍ನ ತಂದಿದ್ದರೂ ಆ ಜನರು ಬಡಿಸಿದ ಅನ್ನವನ್ನು ತಿನ್ನಬೇಕಾಗಿದ್ದ ಋಣ ನಮ್ಮದಾಗಿತ್ತು! ಕಗ್ಗವೊಂದು ನೆನಪಿಗೆ ಥಟ್ಟನೆ ಬಂದಿತು!

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ |
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ ||
ಇಂದು ಬರಿಯುಪವಾಸ, ನಾಳೆ ಪಾರಣೆ - ಯಿಂತು |
ಸಂದಿರುವುದನ್ನ ಋಣ - ಮಂಕುತಿಮ್ಮ ||

ಊಟವಾದ ಮೇಲೆ, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧರಾದರು. ಪರ್ವತಯ್ಯನವರು, "ಸರಿ, ಬೆಳಿಗ್ಗೆ ಸಿಗ್ತೀವೋ ಇಲ್ವೋ ಗೊತ್ತಿಲ್ಲ, ಟೀ ಕುಡಿದು ಹೋಗಿ ಬೆಳಿಗ್ಗೆ" ಎಂದರು. ಅವರ ಆತಿಥ್ಯಕ್ಕೆ ಮಣಿದು ತಲೆದೂಗಿದೆವು. ಎಲ್ಲರೂ ಹೊರಟರು. ನಾವು ನಮ್ಮ ಕಟ್ಟೆವಾಸಕ್ಕೆ ಮರಳಿದೆವು. "ಬೆಳಿಗ್ಗೆ ಸಿಗ್ತೀವೋ ಇಲ್ವೋ ಗೊತ್ತಿಲ್ಲ" ಎಂದರೆ ಏನು ಅರ್ಥ ಇರಬಹುದು ಎಂದು ಯೋಚಿಸತೊಡಗಿದೆ. ಬಗೆ ಬಗೆಯ ಅರ್ಥಗಳನ್ನು ಕಲ್ಪಿಸಿಕೊಂಡು ಮಲಗಿಕೊಂಡೆ.

ಸ್ವಲ್ಪ ಹೊತ್ತಿನಲ್ಲೇ ವಿಚಿತ್ರ ಸದ್ದಾಯಿತು. ಭೂಕಂಪವೆಂದೇ ಬಗೆಯಬಹುದಿತ್ತು! ಅಥವಾ ಗುಲ್ಬರ್ಗದಲ್ಲಿಯೂ ಹುಲಿ ಬಂದಿರಬಹುದೇನೋ ಎನ್ನಿಸಬಹುದಿತ್ತು! ಗೋವಿಂದ್ ರಾಜ್ ಮಲಗಿದ್ದಾರೆ, ಅನ್ನಪೂರ್ಣ ಮತ್ತು ನಾನು ಎದ್ದಿದ್ದೇವೆ. ಸದ್ದು ಏನಿರಬಹುದೆಂದು ಬಾಲ್‍ರಾಜ್‍ರನ್ನು ಕೇಳೋಣವೆಂದು ಅವರ ಕಡೆ ತಿರುಗಿದರೆ ಸದ್ದು ಬರುತ್ತಿದ್ದುದೇ ಅವರ ಉಸುರಿನಿಂದ! ಅಯ್ಯೋ, ಭೂಕಂಪನದ ಸದ್ದನ್ನು ಕೇಳಲು ಬಂದಿರುವ ಗೊರಕೆಯ ಸದ್ದಿನಿಂದ ನಮಗೆ ವಂಚನೆಯಾಗಿಬಿಡುವ ಹಾಗಿದೆಯಲ್ಲ ಎಂದು ಬೇಸರವಾಯಿತು! ಮತ್ತೆ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಸದ್ದು ಶುರುವಾಯಿತು. ವಾಚಕರು ಈ ಬಾರಿ ಗೋವಿಂದ್ ರಾಜ್‍ರ ಗೊರಕೆಯೆಂದುಕೊಳ್ಳಬಾರದು. ಈ ಸಲದ ಸದ್ದು ಮಾಡಿದ್ದು ಗುಲ್ಬರ್ಗದ ವಿಶೇಷ ಸೊಳ್ಳೆಗಳು. ಬೆಳದಿಂಗಳ ರಾತ್ರಿಯಲ್ಲಿಯೂ ಚಳಿಯಾಗುತ್ತಿದ್ದರೂ ಭೂಕಂಪನದ ಅನುಭವದ ಕಾತುರತೆಯಲ್ಲಿದ್ದ ನಮ್ಮ ಮೇಲೆ ದಾಳಿ ಮಾಡಿದವು. ಆ ಸೊಳ್ಳೆಗಳಿಗೆ ಬೆಂಗಳೂರಿನವರು ಶತದಡ್ಡರು ಎಂದೆನಿಸಿತೇನೊ - ಟೆಂಟನ್ನು ಹಾಕಿಕೊಂಡು ಹೊರಗೆ ಮಲಗಿದ್ದಾರೆ ಎಂದು! ಒಟ್ಟಿನಲ್ಲಿ ಹಬ್ಬದೂಟವನ್ನು ಸವಿಯಲು ಬಂದಿದ್ದವು. ನಾವು ಸೊಳ್ಳೆಗಳಿಗೆ ಅಂಜಿ ಟೆಂಟನ್ನು ಸೇರಿಕೊಂಡೆವು.

ಆ ದಿನ ಭೂಮಿ ಕಂಪಿಸಲೇ ಇಲ್ಲ. ಬೆಳಿಗ್ಗೆ ಐದಕ್ಕೇ ಎದ್ದು ಈಗಲಾದರೂ ಆಗುತ್ತಾ ಎಂದುಕೊಂಡೆವು. "ಅದೇನು ಹೇಳಿ ಕೇಳಿ ಬರುವಂತಹ ಬಂಧುವೇ?" ಎಂದರು ಅನ್ನಪೂರ್ಣ. ಆರು ಗಂಟೆಯ ಬಸ್ಸನ್ನು ಹಿಡಿದು ಗುಲ್ಬರ್ಗಕ್ಕೆ ಮರಳಿ, ಅಲ್ಲಿಂದ ಬೆಂಗಳೂರಿಗೆ ವಾಪಸಾದೆವು. ಅಂದು ಭೂಮಿಯೇನೋ ಕಂಪಿಸಲಿಲ್ಲ. ಆದರೆ ಅಲ್ಲಿನ ಜನರ ಹೃದಯಗಳು ಕ್ಷಣಪ್ರತಿಕ್ಷಣವೂ ಭೀತಿಯಿಂದ ಕಂಪಿಸುತ್ತಿದೆ. ಆ ಜನರ ಜೊತೆ ಕಳೆದ ಕೆಲವೇ ಕೆಲವು ಗಂಟೆಗಳಾದರೂ ಅವರಿಗೆ "ನಮ್ಮ ಭೀತಿಯನ್ನು, ನೋವನ್ನು ಹಂಚಿಕೊಳ್ಳುವವರು ಇದ್ದಾರಲ್ಲಾ!" ಎಂಬ ಭಾವನೆಯು ಮೂಡಿತ್ತೆನಿಸುತ್ತೆ. ಆ ಜನಕ್ಕೆ ಶುಭವಾಗಲಿ!

ಸಂಕ್ರಾಂತಿಯ ಶುಭಾಶಯಗಳು!

- ಅ
19.03.2005
2AM

3 comments:

 1. ತುಂಬಾ ಚೆನ್ನಾಗಿ ಬರೆದಿದ್ದೀರಿ.. :)

  ReplyDelete
 2. ಅವರ ’ಸುಖ’ಕ್ಕೆ ಹೋಲಿಸಿದರೆ ನಿಮ್ ಬೆಂಗಳೂರಿನವರದ್ದು ಬೇಜಾನ್ ಸುಖ ಅಲ್ವಾ ಸಾರ್ ?!

  ReplyDelete
 3. [ವಿಕಾಸ್] ಯಾಕೊ "ನಿಮ್" ಬೆಂಗಳೂರು ಅಂತ ಹೇಳ್ತಾ ಇದ್ದೀರ - ಬೆಂಗ್ಳೂರು ನಿಮ್ದೂ ಕೂಡ ಅಲ್ಲವೇ? ಇರಲಿ, ಇಲ್ಲಿ ಪ್ರಶ್ನೆ ಬೆಂಗ್ಳೂರಿನದಲ್ಲ - ಸುಖದ್ದು. ಬೆಂಗಳೂರು "ನಮ್ಮದು" ಎಂದು ಅನ್ನಿಸಿಕೊಂಡವರ ಪ್ರಕಾರ ತಮ್ಮ "ಸುಖ" ಬೇರೆ ಎಲ್ಲ ಕಡೆಗಿಂತಲೂ ಕಮ್ಮಿಯೆಂದೇ ಹೇಳಬೇಕು. ಸೊನ್ನೆಯೆಂದರೂ ಸರಿ! ಬೆಂಗಳೂರಿಗರು ಸುಖಿಗಳು ಎಂಬ ಭ್ರಮೆಯಲ್ಲಿ ಕರ್ನಾಟಕದವರೇ ಏನು, ಬೇರೆ ರಾಜ್ಯದವರೂ ಮುಳುಗಿದ್ದಾರೆ. :-)

  [ಅನಂತ] ಅನಂತಾನಂತ ಧನ್ಯವಾದಗಳು. :-)

  ReplyDelete