Sunday, March 21, 2010

ಪರೀಕ್ಷೆಯಲ್ಲಿ ಮೇಲ್ವಿಚಾರಕನಾಗಿ…

ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಪರೀಕ್ಷೆಯಲ್ಲಿ ಮೇಲ್ವಿಚಾರಕನಾಗುವುದು ಅಂಥದ್ದೇನೂ ಸಂತೋಷದಾಯಕವಲ್ಲದೇ ಇದ್ದರೂ ನನ್ನಂತಹ ಮೇಷ್ಟ್ರಿದ್ದರೂ ಮಕ್ಕಳು ನಿಃಶಬ್ದವಾಗಿ ಕುಳಿತುಕೊಳ್ಳುವುದು ಪರೀಕ್ಷೆಯಲ್ಲಿ ಮಾತ್ರವೆಂಬ ಸಮಾಧಾನ ನನಗೆ. ಎರಡು ಗಂಟೆಗಳ ಕಾಲ (ಪರೀಕ್ಷೆಗಳಿಗೆ ನಮಗಿದ್ದಂತೆ ಈಗ ಮೂರು ಗಂಟೆ ಕಾಲಾವಧಿಯಿಲ್ಲ) "Don't make noise..., stop shouting....." ಹೀಗೆಲ್ಲ ವಿರೋಧಾಭಾಸವಾಗಿ ಕಿರುಚುವುದು ತಪ್ಪುತ್ತೆ!

ಪ್ರಶ್ನೆಪತ್ರಿಕೆಯನ್ನು ಮೊದಲು ಓದಿ ಆಮೇಲೆ ಉತ್ತರಿಸಬೇಕೆಂಬ ಪದ್ಧತಿಗೆ ನನ್ನ ವೈಯಕ್ತಿಕ ವೈರುಧ್ಯವಿದ್ದರೂ ನಿಯಮಾನುಸಾರವಾಗಿ ಅದನ್ನು ಪಾಲಿಸಲೇ ಬೇಕು. ಮೊದಲ ಕಾಲುಗಂಟೆ ಪ್ರಶ್ನೆ ಪತ್ರಿಕೆಯನ್ನು ಮಕ್ಕಳು ಆಮೂಲಾಗ್ರವಾಗಿ ಓದಬೇಕಂತೆ. ಆಮೇಲೆ, "ಶುರು ಮಾಡಿ" ಎಂದು ಮೇಲ್ವಿಚಾರಕ (ನಾನು) ಹೇಳಬೇಕಂತೆ. ಆಮೇಲೆ ಮಕ್ಕಳು ಬರೆಯಲು ಶುರು ಮಾಡುತ್ತಾರಂತೆ. ಆ ಕಾಲುಗಂಟೆಯಲ್ಲಿ ಎರಡು ಪ್ರಶ್ನೆಗೆ ಉತ್ತರ ಬರೆಯಬಹುದಲ್ಲ ಎಂಬುದು ನನ್ನ ಪ್ರಶ್ನೆ. ಒಂದು ವೇಳೆ ಪ್ರಶ್ನೆಪತ್ರಿಕೆಯನ್ನು ಓದುವಾಗ ಉತ್ತರ ಗೊತ್ತಿಲ್ಲದೇ ಇರುವ ಪ್ರಶ್ನೆಗಳೇ ಹೆಚ್ಚಿದ್ದರೆ, ಬರುವ ಉತ್ತರವನ್ನೂ ಮರೆತುಬಿಡುವ ಸಾಧ್ಯತೆಯಿರುತ್ತೆ ಎಂದು ನನ್ನ ನಂಬಿಕೆ. ಆದರೆ ನಮ್ಮ ಮಕ್ಕಳಿಗೆ ಹಾಗೇನಿಲ್ಲ. ಒಂದು ಸಲ ನಾನು ಉತ್ತರಪತ್ರಿಕೆಯನ್ನು ಮೊದಲು ವಿತರಣೆ ಮಾಡಲು ಹೊರಟಿದ್ದೆ - ತಿಳಿಯದೆ. ಆಗ ಮಕ್ಕಳೇ, "ಸರ್, ಮೊದಲು ಪ್ರಶ್ನೆಪತ್ರಿಕೆ ಕೊಡಿ, ನಾವು ಓದಬೇಕು. ಆಮೇಲೆ, ಕಾಲುಗಂಟೆ ಆದಮೇಲೆ ಉತ್ತರಪತ್ರಿಕೆಯನ್ನು ಕೊಡಿ" ಎಂದು ನನ್ನನ್ನು ಎಚ್ಚರಿಸಿದರು.

ಪರೀಕ್ಷೆಗೆ ಬರುವ ಮುನ್ನ ದೇವಸ್ಥಾನಕ್ಕೆ ಹೋಗಿ ಬರುವ ವಿಷಯವು ಕ್ಲೀಷೆಯಾದರೂ, ನಾಸ್ತಿಕವಾದಿ ವಿದ್ಯಾರ್ಥಿಗಳೂ ಸಹ ಉತ್ತರಪತ್ರಿಕೆಯ ಆರಂಭದಲ್ಲಿ "ಓಮ್" ಎಂದೋ, "ಓಮ್ ಸಾಯಿರಾಮ್" ಎಂದೋ, "ಜೈ ಶ್ರೀ ರಾಮ್" ಎಂದೋ ತಮ್ಮ ಇಷ್ಟದೇವತೆಯನ್ನು ಯೋಗಿಗಳು ಭ್ರೂಮಧ್ಯೆ ಕಲ್ಪಿಸಿಕೊಳ್ಳುವಂತೆ ಉತ್ತರಪತ್ರಿಕೆಯ ಮೇಲ್ತುದಿಯ ಮಧ್ಯದಲ್ಲಿ ನಮೂದಿಸಿಬಿಟ್ಟಿರುತ್ತಾರೆ. "ನೀನು ನನ್ನ ಜೊತೆ ಆವತ್ತು ವಾದ ಮಾಡಿದ್ದೆಯಲ್ಲ, ದೇವರು ಇಲ್ಲವೇ ಇಲ್ಲವೆಂದು, ಮತ್ತೆ ನೀನೇ ಇವತ್ತು ಸಾಯಿಬಾಬಾ ಎಂಬ ದೇವರಲ್ಲದ ಯಃಕಶ್ಚಿತ್ ಮನುಷ್ಯನ ಹೆಸರನ್ನು ನಿನ್ನ ಉತ್ತರಪತ್ರಿಕೆಯಲ್ಲಿ ಬರೆದಿದ್ದೀಯಲ್ಲ?" ಎಂದು ಒಬ್ಬ ವಿದ್ಯಾರ್ಥಿಯನ್ನು ಟೀಕಿಸಿದ್ದಕ್ಕೆ ಅವನು ನನಗೆ ಕೊಟ್ಟ ಉತ್ತರ, "Why take risk, sir?" ಅಂತೂ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಯಾವುದೇ ರೀತಿಯ ರಿಸ್ಕನ್ನು ತೆಗೆದುಕೊಳ್ಳುವುದಿಲ್ಲ ಎಂಬ ಅರ್ಥವಾಯಿತು. ಮತ್ತೊಂದು ಉದಾಹರಣೆಗೆ, ಕರೆಗಂಟೆಗೆ ಐದೇ ನಿಮಿಷವಿದ್ದರೂ ಓಣಿಯಲ್ಲಿ ನಿಂತುಕೊಂಡೇ ಇನ್ನೂ ಓದುತ್ತಿರುತ್ತಾರೆ - ಮನೆಯಲ್ಲಿ ಓದಿದ್ದು ಸಾಲುವುದಿಲ್ಲವೆಂದು! ಯಾರಿಗೆ ಗೊತ್ತು, ಕೊನೆಯ ಗಳಿಗೆಯಲ್ಲಿ ಓದಿದ್ದು ಪರೀಕ್ಷೆಯಲ್ಲಿ ಬಂದುಬಿಟ್ಟರೆ? ನನ್ನ ಜೀವಮಾನದಲ್ಲೇ, ಪರೀಕ್ಷೆಯ ದಿನ ಯಾವುದೇ ಪುಸ್ತಕವನ್ನು ತೆಗೆದುಕೊಂಡು ಹೋಗಿಲ್ಲ. ಪರೀಕ್ಷೆಯು ಮುಗಿದ ಮೇಲೆ ಉತ್ತರಗಳನ್ನು ಚರ್ಚೆ ಮಾಡಿಲ್ಲ. ತಪ್ಪು ಬರೆದಿದ್ದರೆ ಸುಮ್ಮನೆ ಕೊರಗು ಯಾಕೆ, ಮಾರನೆಯ ದಿನದ ಪರೀಕ್ಷೆಗೆ ತೊಡಕಾಗುತ್ತೆ ಎನ್ನುವುದು ನನ್ನ ನಂಬಿಕೆ.

ಗಂಡು ಮಕ್ಕಳು - ಹೆಣ್ಣು ಮಕ್ಕಳು ಎಂಬ ತಾರತಮ್ಯ ಮಾಡಬಾರದೆಂಬ ಧರ್ಮಸೂಕ್ಷ್ಮವನ್ನು ತಿಳಿದಿದ್ದರೂ ಪರೀಕ್ಷೆಯ ವಿಷಯದಲ್ಲಿ ನಾನು ಕೆಲವು ತಾರತಮ್ಯಗಳನ್ನು ಹೇಳಲೇ ಬೇಕಾಗಿದೆ. ಆದರೆ ಇದರಿಂದ ಎಲ್ಲ ಗಂಡು ಮಕ್ಕಳೂ ಹೀಗೇನೇ, ಎಲ್ಲ ಹೆಣ್ಣು ಮಕ್ಕಳೂ ಹೀಗೇನೇ ಎಂಬ ನಿರ್ಣಯಕ್ಕೆ ಬರಲಾಗುವುದಿಲ್ಲ.

೧. ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಿಧಾನಕ್ಕೆ ಗುಂಡಗೆ ಬರೆಯುತ್ತಾರೆ. ಉತ್ತರ ಸರಿಯಿದೆಯೋ ಇಲ್ಲವೋ ಅವರಿಗೆ ಮುಖ್ಯವಾಗಿರುವುದಿಲ್ಲ, ಬರವಣಿಗೆ ಗುಂಡಗಿರಬೇಕು. ಫಲಿತಾಂಶದ ವಿಷಯವನ್ನು ತೆಗೆದುಕೊಂಡರೆ ಪ್ರತಿವರ್ಷವೂ ಹೆಣ್ಣು ಮಕ್ಕಳದೇ ಮೇಲುಗೈ ಎಂಬ ವಾರ್ತೆಯನ್ನು ಓದುತ್ತಲೇ ಇರುವುದರಿಂದ ಉತ್ತರವನ್ನು ಸರಿಯಾಗಿಯೂ ಚೆಂದದ ಬರವಣಿಗೆಯಿಂದಲೂ ಬರೆಯುತ್ತಾರೆಂಬುದು ಸಾಬೀತು ಮಾಡಬಹುದಷ್ಟೆ? ಹಾಗಂತ ಹುಡುಗರು ಚೆನ್ನಾಗಿ ಓದುವುದಿಲ್ಲವೆಂದಲ್ಲ, ಅಥವಾ ಚೆನ್ನಾಗಿ ಬರೆಯುವುದಿಲ್ಲವೆಂದಲ್ಲ. ಸಾಮಾನ್ಯವಾಗಿ ಹುಡುಗರಿಗೆ ಅದೆಂಥದ್ದೋ ಅವಸರ. "ಸರ್ ಮುಗೀತು..." ಎಂದು ಪರೀಕ್ಷೆಯ ಅವಧಿಗೆ ಅರ್ಧ ಮುಕ್ಕಾಲು ಗಂಟೆ ಮುಂಚೆ ಯಾರಾದರೂ ಉತ್ತರ ಪತ್ರಿಕೆಯನ್ನು ಕೊಡಲು ಸಿದ್ದರಿದ್ದಾರೆಂದರೆ, ಆ ವಿದ್ಯಾರ್ಥಿಯು ಶೇ 99, ಹುಡುಗನೇ! ವಿಚಿತ್ರವೆಂದರೆ, ಮೇಲೆ ಹೇಳಿದಂತೆ, ಪರೀಕ್ಷೆಯ ಕೊಠಡಿಯೊಳಗೆ ಹೋಗುವ ಮುನ್ನ, ಕರೆಗಂಟೆ ಬಾರಿಸಿದ ಮೇಲೂ, "ಸರ್ ಎರಡು ನಿಮಿಷ, ಸರ್ ಒಂದು ನಿಮಿಷ" ಎಂದು ಓದುವವರೂ ಹುಡುಗರೇ ಹೆಚ್ಚು!

೨. ಪ್ರತಿಯೊಂದು ಉತ್ತರ ಬರೆದ ಮೇಲೂ ಸ್ಕೇಲ್ ಇಟ್ಟುಕೊಂಡು ಗೆರೆಯೆಳೆಯುವ ಅಭ್ಯಾಸವು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚು! ನನ್ನ ಪಾಲಿಗಂತೂ ಇದು ಮುಖ್ಯವೇ ಅಲ್ಲ. ಹಾಗಾಗಿ ಗೆರೆ ಎಳೆಯಲು ಈ ಹೆಣ್ಣು ಮಕ್ಕಳು ಸಮಯ ವ್ಯರ್ಥ ಮಾಡುತ್ತಾರೆಂದೇ ನನ್ನ ಬಲವಾದ ಅನಿಸಿಕೆ. ಯಾಕೆಂದರೆ ನಾನೂ ಸಹ ಗಂಡು ಹುಡುಗ ವಿದ್ಯಾರ್ಥಿಯಾಗಿದ್ದೆನಲ್ಲ!

೩. ಸ್ಪರ್ಧಾತ್ಮಕ ಮನೋಭಾವನೆ ಹೆಣ್ಣು ಮಕ್ಕಳಲ್ಲೇ ಹೆಚ್ಚು ಎಂಬುದು ವಿವಾದಾತೀತವಾಗಿ ಒಪ್ಪಿಕೊಳ್ಳಬೇಕು. "ಅವಳಿಗೆ ತೊಂಭತ್ತೆಂಟು ಅಂಕ ಬಂದಿದೆ, ನನಗೆ ಬರೀ ತೊಂಭತ್ತೇಳುವರೆ" ಎಂದು ಹಠ ಹಿಡಿದು ಮುಂದಿನ ಪರೀಕ್ಷೆಯಲ್ಲಿ ತೊಂಭತ್ತೆಂಟುವರೆ ತೆಗೆದುಕೊಳ್ಳುವ ಛಲ ಹೆಣ್ಣು ಮಕ್ಕಳಿಗಲ್ಲದೇ ಹುಡುಗರಿಗಿರಲು ಸಾಧ್ಯವೇ? "ಮಗ, ಮ್ಯಾಥೆಮಾಟಿಕ್ಸ್ ಅಲ್ಲಿ ತೂಕು ಕಣೋ" ಎಂದು ಒಬ್ಬ ಹುಡುಗ ಹೇಳಿದರೆ ಅವನ ಗೆಳೆಯ "ನಾನು ಸೈನ್ಸಲ್ಲಿ ತೂಕು, ಕೈ ಕೊಡು!" ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಪಾರ್ಟಿ ಮಾಡುವ ಹುಡುಗರೇ ಹೆಚ್ಚು! ಬಹುಶಃ ಕಂಚಿ ಶ್ರೀಗಳ "ಮೈತ್ರೀಂ ಭಜತ - ಯುದ್ಧಂ ತ್ಯಜತ... ಸ್ಪರ್ಧಾಂ ತ್ಯಜತ.." ಕೃತಿಯನ್ನು ಗಂಡು ಮಕ್ಕಳು ಹೀಗೆ ಅರ್ಥ ಮಾಡಿಕೊಂಡಿದ್ದಾರೇನೋ!

೪. ಹೆಚ್ಚುವರಿ ಉತ್ತರಪತ್ರಿಕೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲೂ ಈ ತಾರತಮ್ಯವಿದೆಯಷ್ಟೆ. ಮೊದಲ ರ‍್ಯಾಂಕ್ ಪಡೆಯುವ ಹುಡುಗನೂ ಸಹ ತನ್ನ ಉತ್ತರಪತ್ರಿಕೆಗಳನ್ನು ಡೆಸ್ಕಿನ ಮೇಲೆ ಸರಿಯಾಗಿ ಇಟ್ಟುಕೊಳ್ಳಲು ಬರುವುದಿಲ್ಲ! ಆಗಾಗ್ಗೆ ಗಾಳಿಪಟಗಳು ಹಾರಿ ಬರುವುದು ಹುಡುಗರ ಡೆಸ್ಕುಗಳಿಂದಲೇ. ಹೆಣ್ಣು ಮಕ್ಕಳ ಉತ್ತರಪತ್ರಿಕೆಗಳು ಒಂದರ ಕೆಳಗೊಂದು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುತ್ತವೆ.

೫. ಕಾಪಿ ಹೊಡೆಯುವ ವಿದ್ಯೆಯನ್ನು ಮಾತ್ರ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಕರಗತ ಮಾಡಿಕೊಂಡಿದ್ದಾರೆ. ಅದರಲ್ಲೂ ಗಂಡಸರು ಮೇಲ್ವಿಚಾರಕರಾಗಿ ಬಂದರಂತೂ ಕಾಪಿ ಹೊಡೆಯುವ ಹೆಣ್ಣು ಮಕ್ಕಳಿಗೆ ಹಬ್ಬ! ಗಂಡು ಮಕ್ಕಳಿಗೆ ಕಾಪಿ ಹೊಡೆಯುವ ಕಲೆ ಅಷ್ಟು ಚೆನ್ನಾಗಿ ಗೊತ್ತಿಲ್ಲವೆಂದೇ ಹೇಳಬೇಕು. ಬಹುಪಾಲು ಹುಡುಗರು ಕಾಪಿ ಹೊಡೆಯಲು ಹೋಗಿ ಸಿಕ್ಕಿಬೀಳುವುದಕ್ಕೆ ನಾನಾ ಕಾರಣಗಳಿವೆ. ಒಂದಕ್ಷರ ನೋಡಿ (ಕಾಪಿ ಹೊಡೆದು) ಮುಂದಿನ ಪ್ಯಾರಾ ಬರೆಯುವ ತಾಕತ್ತಿರುವುದಿಲ್ಲ, ಉತ್ತರವನ್ನು ತೋರಿಸುವ ವಿದ್ಯಾರ್ಥಿಯು ಕ್ಯಾಪಿಟಲ್ ಲೆಟರ‍್ ಗಳಲ್ಲಿ ಬರೆದಿರಬೇಕು, ಆಗಲೇ ಸರಿಯಾಗಿ ಕಾಪಿ ಹೊಡೆಯಲು ಆಗುವುದು; ಅಕ್ಕಪಕ್ಕದವರ ಉತ್ತರ ಪತ್ರಿಕೆಯನ್ನು ನೋಡದೇ ಪಠ್ಯಪುಸ್ತಕವನ್ನೇ ಪರೀಕ್ಷಾಕೊಠಡಿಗೆ ತಂದು ಕಾಪಿ ಹೊಡೆಯಲು ಪ್ರಯತ್ನಿಸುವ ಬುದ್ಧಿವಂತಿಕೆ ತೋರಿಸುವುದು; ಅಥವಾ ಚೀಟಿಗಳನ್ನು ಜೇಬಿನಲ್ಲೇ ಬಚ್ಚಿಟ್ಟುಕೊಳ್ಳುವುದು - ಹೀಗೆ ಅನೇಕಾನೇಕ ಕಾರಣಗಳಿಂದ ಸಿಕ್ಕಿಬೀಳುತ್ತಾರೆ. ಹೆಣ್ಣು ಮಕ್ಕಳು ಸಿಕ್ಕಿಬೀಳುವುದು ಬಹಳ ವಿರಳ!

[ಮೇಲೆ ಹೇಳಿರುವ ಐದು ಅಂಶಗಳಿಗೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಮತ್ತೆ ಇದನ್ನು generalize ಮಾಡಲೂ ಸಹ ಸಾಧ್ಯವಿಲ್ಲ. ಎಲ್ಲವೂ ಗ್ರಹಚಾರದ ಪ್ರತಿಫಲ!]

"ಓಮ್", "ಸಾಯಿರಾಮ್" ಮುಂತಾದ ಮೂಢನಂಬಿಕೆಗಳೊಂದಿಗೆ ಇನ್ನೊಂದಷ್ಟನ್ನು ಮಕ್ಕಳಲ್ಲಿ ನಾನು ಗಮನಿಸಿದ್ದೇನೆ. ಮೇಲ್ವಿಚಾರಕನ ಸಹಿಯು ವಿದ್ಯಾರ್ಥಿಯ ಉತ್ತರಗಳ ಮೇಲೆ ಬಹಳ ಪರಿಣಾಮ ಬೀರುತ್ತೆ. ಕೈ ನಡುಕದಿಂದಲೋ, ಅವಸರದಿಂದಲೋ, ಇನ್ಯಾವುದೋ ಕಾರಣದಿಂದಲೋ ಸರಿಯಾಗಿ ಸಹಿ ಮಾಡಲಿಲ್ಲವೆಂದರೆ ದುರುಗುಟ್ಟು ನೋಡುತ್ತಾರೆ! ಅವರ ನೋಟವು ಸ್ಪಷ್ಟವಾಗಿ ಹೇಳುತ್ತೆ "ಹೀಗಾ ಸೈನ್ ಮಾಡೋದು, ಮುಳುಗಿಸಿಬಿಟ್ಟೆಯಲ್ಲೋ ನನ್ನ!" ಎಂದು. ನನಗೋ, ಸಹಿ ಮಾಡುವುದೆಂದರೆ ಬಹಳ ಪ್ರಯಾಸದ ಕೆಲಸ. ಬರೀ ಹೆಸರಿನ ಮೊದಲ ಅಕ್ಷರವನ್ನು ಸಹಿ ಮಾಡಲು ಕಲಿತಿಲ್ಲ. ಎಲ್ಲೇ ಸಹಿ ಮಾಡಿದರೂ "ಚಿಕ್ಕ ಹೆಸರು ತಾನೆ?" ಎಂದು ಪೂರ್ತಿ ಹೆಸರನ್ನೇ ಸಹಿ ಹಾಕುತ್ತೇನೆ. ಜೊತೆಗೆ, ನನಗೆ ಸರಿಯಾಗಿ ಸಹಿ ಹಾಕಲು ಬರುವುದಿಲ್ಲವೆಂದೇ ಒಪ್ಪಿಕೊಳ್ಳಬೇಕು. ಇಪ್ಪತ್ತು ಪೇಪರ್ ಇದ್ದರೆ ಇಪ್ಪತ್ತು ರೀತಿಯ ಸಹಿ ಮಾಡಿರುತ್ತೇನೆ! ಇನ್ನು ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳು ನನ್ನನ್ನು ಕ್ಷಮಿಸಿಯಾರೇ? ಕ್ರೌಂಚ ಪಕ್ಷಿಯನ್ನು ನೋಡುವಂತೆ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಾರೆ! ಒಬ್ಬ ಹುಡುಗಿಯಂತೂ ಕೇಳೇ ಬಿಟ್ಟಿದ್ದಳು ಒಮ್ಮೆ, "ಸರ್ ಇದೇನು?" ಎಂದು. ನಾನು, ನನ್ನ ಸಹಿಯ ಕೆಳಗೆ ಬರೆದ ದಿನಾಂಕವನ್ನು ಆ ಹುಡುಗಿಯು ಯಾವುದೋ ಹಲ್ಮಿಡಿ ಶಾಸನವನ್ನು ಓದುವಂತೆ ಓದಿದಳು!

ಇಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರೆ ನಾಳಿನ ಪರೀಕ್ಷೆಗೂ ಅದೇ ಪೆನ್ನು ಬಳಸುವ ಅಭ್ಯಾಸವು ನನಗೂ ಇತ್ತು. ಉತ್ತರ ಹೊಳೆಯದಿದ್ದರೆ ನನ್ನ ಅಧ್ಯಯನದ ಕೊರತೆಯು ಕಾರಣವಲ್ಲ, ನಾನು ಬಳಸುವ ಪೆನ್ನು ಕಾರಣ! ಕೆಲವು ಸಲ ಎರಡೆರಡು ಪೆನ್ನುಗಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವಂತೆ ಸಹಾಯ ಮಾಡುತ್ತಿದ್ದವು. ಆಗ ಗೆಳೆಯನಿಗೆ ಆ ಇನ್ನೊಂದು ಪೆನ್ನು ಕೊಟ್ಟು, "ಇದರಲ್ಲಿ ಬರಿ, ಒಳ್ಳೇ ಮಾರ್ಕ್ಸ್ ಬರುತ್ತೆ" ಎಂದು ಹೇಳಿದ್ದೂ ಉಂಟು! ಮತ್ತೆ ಕಾಲದಿಂದ ಕಾಲಕ್ಕೆ ಈ ನಂಬಿಕೆಯು ಈಗಿನ ಮಕ್ಕಳಲ್ಲೂ ಇದೆ!

ಕೆಲವು ಸಲ ಎರಡು ಮೂರು ತರಗತಿಗಳನ್ನು ಒಂದೇ ದೊಡ್ಡ ಕೊಠಡಿಯೊಳಗೆ ಕೂರಿಸಿ ಪರೀಕ್ಷೆ ಬರೆಸುತ್ತಾರೆ. ಆ ಸಮಯದಲ್ಲಿ ಒಂದು ಕೊಠಡಿಗೆ ಇಬ್ಬರು ಮೇಲ್ವಿಚಾರಕರುಗಳಿರುತ್ತಾರೆ. ಉತ್ತರಪತ್ರಿಕೆಗಳಿಗೆ ಸಹಿ ಹಾಕಬೇಕಾಗಿರುವುದು ತಮ್ಮ lucky teacher! ಇನ್ನೊಬ್ಬರು ಹಾಕಿಬಿಟ್ಟರೆ ಮುಗಿಯಿತು, ಅಂಕಗಳು ಬರುವುದೇ ಇಲ್ಲ! ನಾನು ಸುಬ್ಬಣ್ಣನಿಗೆ ಲಕ್ಕಿಯಾದರೆ, ಮುದ್ದಣ್ಣನಿಗೆ ಅನ್‍ಲಕ್ಕಿಯಾಗಬಹುದು. ಅವೆಲ್ಲ ತೀರ ವೈಯಕ್ತಿಕ ವಿಷಯ. ಆದರೆ, ಇದರಲ್ಲೂ ಶಿಫಾರಸು ನಡೆಯುತ್ತೆ. "ಅವರ ಕೈಲಿ ಸೈನ್ ಹಾಕಿಸಿಕೋ.." ಎಂದು ಕಣ್ಸನ್ನೆ ಮಾಡುವ ಹುಡುಗನಿಗೆ ಲಕ್ಕಿ ಟೀಚರ್ ಇಂದಲೇ ಬೈಗುಳಗಳು ದೊರಕುತ್ತವೆ. "ಏನೋ ಅದು ಸನ್ನೆ ಮಾಡ್ತಿದ್ದೀಯ, ಪೇಪರ್ ಕಿತ್ಕೊಂಡ್ ಕಳಿಸಿಬಿಡ್ತೀನಿ ನೋಡು..." ಎಂದು. ಆಗ ಲಕ್ಕಿ ಟೀಚರಿನ ಹುದ್ದೆಯು ಬದಲಾವಣೆಯಾಗುವ ಸಾಧ್ಯತೆಯೇ ಹೆಚ್ಚು!

ಮಕ್ಕಳು ಎರಡು ಗಂಟೆಗಳ ಕಾಲ ಸತತವಾಗಿ ಒಂದೇ ಕಡೆ ಕುಳಿತು ಪರೀಕ್ಷೆ ಬರೆಯುತ್ತಿದ್ದರೆ ಮೇಲ್ವಿಚಾರಕನು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡಾಡುತ್ತಲಿರುವಾಗಲೇ ಕಾಫಿಯ ಸರಬರಾಜು ಸಹ ಆಗುತ್ತೆ. ಅಯ್ಯೋ, ಪಾಪ ಆಯಾಸ ಆಗಿರುವುದು ಮಕ್ಕಳಿಗೆ, ಕಾಫಿ ಹೀರುವುದು ನಾವು! ಎಂದು ಒಮ್ಮೊಮ್ಮೆ ಅನ್ನಿಸಿದರೂ, ಪರೀಕ್ಷೆ ಬರೆಯುವುದು ಅವರ ಕರ‍್ತವ್ಯ, ಕಾಫಿ ಕುಡಿಯುವುದು ನನ್ನ ಕರ‍್ತವ್ಯ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.ಕಾಫಿ ಕುಡಿಯುತ್ತ ಕುಡಿಯುತ್ತ ನೂರೆಂಟು ಯೋಚನೆಗಳು ಸುಳಿಯುತ್ತವೆ. ಸಿ.ಬಿ.ಎಸ್.ಈ. ಇಲಾಖೆಯು ಈ ವರ್ಷದಿಂದ ಪರೀಕ್ಷೆಯನ್ನು ರದ್ದುಗೊಳಿಸಿದೆ. ಆ ಟೀಚರುಗಳಿಗೆ ಮೇಲ್ವಿಚಾರಣೆ ಮಾಡುವ ಸೌಭಾಗ್ಯವಿಲ್ಲವೆಂದು ನಾನು ವಿಷಾದ ವ್ಯಕ್ತ ಪಡಿಸುತ್ತೇನೆ. ಐ.ಸಿ.ಎಸ್.ಈ. ಇಲಾಖೆಯು ಪುಣ್ಯಕ್ಕೆ ಆ ನಿರ್ಧಾರವನ್ನು ಕೈಗೊಂಡಿಲ್ಲವಲ್ಲ ಎಂದು ಖುಷಿ ಪಡುತ್ತೇನೆ.

ಪರೀಕ್ಷೆಗಳು ಮಕ್ಕಳಿಗೆ ಬೇಕು. ಜೊತೆಗೆ ಅಸೆಸ್‍ಮೆಂಟೂ ಬೇಕು. ಸ್ಪರ್ಧೆಯು ಬೇಕು. ರ‍್ಯಾಂಕುಗಳೂ ಬೇಕು. ಪಾಸು - ಫೇಲು ಈ ವ್ಯವಸ್ಥೆಯು ಇರಬೇಕು. ಬರೀ ಗ್ರೇಡುಗಳಿಂದ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಹೇಳಿಕೊಡಲು ಸಾಧ್ಯವಾಗುವುದಿಲ್ಲ. ಆದರೆ ಬೇರೆ ಬೇರೆ ಮಾನಸಿಕ ತೊಂದರೆಗಳಾಗಬಹುದೆಂಬುದು ಶಿಕ್ಷಣ ಇಲಾಖೆಯವರ ಅಂಬೋಣ. ಅದರ ಬಗ್ಗೆ ಇಲ್ಲಿ ಚರ್ಚೆ ಅಪ್ರಸ್ತುತ! ಇನ್ನೊಮ್ಮೆ ಚರ್ಚೆ ಮಾಡುತ್ತೇನೆ.

-ಅ
14.03.2010
2AM

Tuesday, March 16, 2010

ಹೊಸವರ್ಷದ ಹೊಸ್ತಿಲಲಿ....

ಬಹುದಿನದ ಬಯಕೆಯಾ
ತೀರಿಸುವ ಸಲುವೇ
ಬೇಸಗೆಯ ಬಾನಿಂದು
ಕಪ್ಪುಗಟ್ಟಿದೆ ನೋಡು.
ನೀರು ಸುರಿವುದು, ಆಡು!
ಕುಣಿಕುಣಿದು ನೀ ಹಾಡು!

ಶಮೆಯನ್ನು ರಮೆಯನ್ನು
ಕರುಣಿಸುವ ಸಲುವೇ
ಬೇಸಗೆಯ ಇರುಳಿಂದು
ತಂಪುಗೊಂಡಿದೆ, ಗೆಳೆಯ!
ತಾಪವಡಗಿಸಲಿಳೆಯ,
ಇಳೆಗೆ ಸುರಿಸಲು ಮಳೆಯ.

ಬೇಡಿಕೊಳೊ ನನ್ನೊಡನೆ
ನೀನೂ ಕೈ ಮುಗಿದು -
ಹೊಸವರ್ಷದ ಹೊಸ್ತಿಲಲಿ
ಧರೆ ಹತ್ತಿ ಧಗೆಯಾಗಿ
ಉರಿದು ಹೋಗುವ ಮುನ್ನ,
ಸುಧೆಯು ಹರಿದರೆ ಚೆನ್ನ!

-ಅ
15.03.2010
7PM