Monday, May 24, 2010

ನಿನ್ನೊಲವ ಜಗದಿಂದ ನಾ ದೂರವಾದೆ

ನಿನ್ನೊಲವ ಜಗದಿಂದ ನಾ ದೂರವಾದೆ.
ದೂರ ದೂರದ ಹಾದಿ ನಾ ತಿಳಿಯದಾದೆ,
ಗುರಿಯರಸಿ ಹೋಗುವೆಡೆ ನಾನೆ ಮರೆಯಾದೆ,
ಹಿಂದಿರುಗದಾದೆ.

ಕಂಬನಿಯು ಹರಿಯುತಿರೆ ಅದನೆ ಕುಡಿವಂತೆ,
ಎದೆಯುಕ್ಕಿ ಹೊಮ್ಮುತಿರೆ ಮೊಗದಿ ಹಿಡಿವಂತೆ,
ನಿನಗಂದು ನಾನಿತ್ತ ಮಾತು ಉಳಿವಂತೆ,
ಬದುಕುಳಿದು ನಿಂತೆ.

ಮಂದಿರದಿ ನಾನೊಂದು ನಂದಿರುವ ಹಣತೆ,
ಸಂತಸದಿ ನೀನಿರಲು ಇಹುದೆನ್ನ ಹರಕೆ.
ಬಾಳಲ್ಲಿ ನನದೆಂದು ಇಲ್ಲಿರುವುದೊಂದೇ,
ನಿನ್ನ ನೆನಪೊಂದೇ!

-ಅ
24.05.2010
2.30PM

Friday, May 21, 2010

ಮಿಸಿಲಿ ಮತ್ತು..

ನಮ್ಮ ಹಳೆಯ ಚಿತ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡ ಒಂದೆರಡು ಸಂಗತಿಗಳು ಬಹಳ ವಿಸ್ಮಯವಾಗಿದೆ. ನಾನು ಇಲ್ಲಿ ಚಿತ್ರರಂಗವನ್ನು ದೂರುತ್ತಿಲ್ಲ. ಆದರೆ "ವಿಸ್ಮಯ" ಸಂಗತಿಗಳು ಎಷ್ಟು ಹಾಸ್ಯಮಯವಾಗಿರುತ್ತೆ ಅಂತ ಹೇಳಹೊರಟಿದ್ದೇನೆ. ಆಗಿದ್ ಆಗೋಗಿದೆ. ಈಗ ಅದನ್ನು ನೋಡಿ ನಗುವುದೊಂದೇ ನಮಗೆ ಲಾಭ!

"ಜನನಿ ಜನ್ಮಭೂಮಿ" ಎಂಬ ಒಂದು ಚಿತ್ರವು (ತೊಂಭತ್ತರ ದಶಕದಲ್ಲಿ ಬಂದ ಚಿತ್ರ) ನಮ್ಮ ಮೈಂಡ್ ಡ್ರೈ ತಂಡದ ಸಿ.ಎಸ್.ಪಿ. ವಿಡಿಯೋ ಅನ್ನು ನೆನಪಿಗೆ ತಂದುಕೊಟ್ಟಿತು. ಅದರಲ್ಲಿ ನಾಯಕ ಒಬ್ಬ ಅಣುವಿಜ್ಞಾನಿ. Nuclear Fission, Nuclear Fusion ಬಗ್ಗೆ ಏನೇನೋ ಸಂಶೋಧನೆ ಮಾಡುತ್ತಾನೆ. DOS mode ಅಲ್ಲಿ ಒಂದಿಷ್ಟು ಗ್ರಾಫಿಕ್ಸ್ ಕೂಡ ತೋರಿಸುತ್ತಾನೆ. ಆಮೇಲೆ, ತನ್ನ ಇಡೀ ಸಂಶೋಧನೆಯನ್ನು ಒಂದು ಫ್ಲಾಪಿಯಲ್ಲಿಟ್ಟುಕೊಂಡುರುತ್ತಾನೆ. ಕಳ್ಳರು ಬಂದು ಆ ಫ್ಲಾಪಿಯನ್ನು ಕದ್ದೊಯ್ಯುತ್ತಾರೆ. ಆಮೇಲೆ, ನಾಯಕನಿಂದ ಪರಿವರ್ತನೆಗೊಂಡ ಮಾಜಿ ರೌಡಿಯೊಬ್ಬನು, ಭೂಗತದಲ್ಲಿ ನಾಯಕನಿಗೆ ಒಂದು ಕಂಪ್ಯೂಟರ್ ಲ್ಯಾಬನ್ನು ಮಾಡಿಕೊಟ್ಟು, ಇಡೀ ಸಂಶೋಧನೆಯನ್ನು ಪುನಃ ಭೂಗತವಾಗಿಯೇ ಮಾಡುತ್ತಾನೆ ನಮ್ಮ ನಾಯಕ. ಇವೆಲ್ಲದರ ಜೊತೆಗೆ ಚಿತ್ರದಲ್ಲಿ ಮದರ್ ಸೆಂಟಿಮೆಂಟೂ ಇದೆ!

"ತುಳಸೀದಳ" ಎಂಬ ಪ್ರಖ್ಯಾತ ಚಿತ್ರದಲ್ಲಿ ಕಾಶ್ಮೋರ ಪೀಡಿತೆಯನ್ನು ಮುಟ್ಟಿದರೆ ಶಾಕ್ ಹೊಡೆಯುತ್ತೆ. ಮನಃಶಾಸ್ತ್ರಜ್ಞ ಬಂದು ಒಂದು ಸಲ ಶಾಕ್ ಹೊಡೆಸಿಕೊಂಡು, ಪರಿಶೀಲನೆ ಮಾಡಿದ ನಂತರ ಅವನಿಗೆ ಎಲ್ಲೋ ಬರೆದಿದ್ದ ಒಂದು ’ಶಾಸನ’ ಕಣ್ಣಿಗೆ ಕಾಣಿಸುತ್ತೆ. ಅಲ್ಲಿ R.A.M. ಎಂದು ಬರೆದಿರುತ್ತೆ. ಕೂಡಲೆ ಒಬ್ಬ ಎಲೆಕ್ಟ್ರಿಷಿಯನ್ನಿಗೆ ಫೋನು ಮಾಡಿ, ಏನು ಹಾಗಂದರೆ ಎಂದು ಕೇಳುತ್ತಾನೆ. ಅದಕ್ಕವನು, ಹಾಗಂದರೆ Random Access Memory ಅಂತ, ಕರೆಂಟನ್ನು ಶೇಖರಿಸಿ ಇಡೋಕೆ ಉಪಯೋಗಿಸುತ್ತಾರೆ ಎಂದು ವಿವರಣೆ ಕೊಟ್ಟ ನಂತರ ಮನಃಶಾಸ್ತ್ರಜ್ಞನಿಗೆ ಖಾತ್ರಿಯಾಗುತ್ತೆ, ಈ ಹುಡುಗಿಗೆ ಯಾರೋ RAMನ install ಮಾಡ್ಬಿಟ್ಟಿದ್ದಾರೆ ಅಂತ!

"ಅಪೂರ್ವ ಸಂಗಮ"ದಲ್ಲಿ ನಾಯಕರು, ಖಳನಾಯಕರು ಬಳಸುವುದು ಮೈಕ್ರೋಫೋನ್ ಅಲ್ಲ, ಮೈಕ್ರಾಫೋನ್. ಅದೇ ರೀತಿ ಮೊನ್ನೆ ನೋಡಿದ ಇನ್ನೊಂದು ಚಿತ್ರ - ಹೆಸರು ನೆನಪಿಲ್ಲ - ಇದರಲ್ಲಿ ಡಾಕ್ಟರು ಬಳಸುವುದು ಸ್ಟೆತಾಸ್ಕೋಪು!

ಎಲ್ಲಕ್ಕಿಂತಲೂ ಹೆಚ್ಚು ನಗುವಂತೆ ಮಾಡಿರುವುದು ಬಾಂಡ್ ಚಿತ್ರ - ಗೋವಾದಲ್ಲಿ ಸಿ.ಐ.ಡಿ. 999. ವಿಜ್ಞಾನಿಯು ಕಂಡು ಹಿಡಿದ, ಎತ್ತಿ ಹಾಕಿದರೆ ಸುತ್ತ ಮುತ್ತ ಮುನ್ನೂರು ಮೈಲಿಗಳನ್ನು ನಾಶ ಮಾಡಬಲ್ಲ "ಮಿಸಿಲಿ"ಯನ್ನು ಕಳ್ಳರು ಹೇಗೆ ಲಪಟಾಯಿಸಲು ಪ್ರಯತ್ನಿಸುತ್ತಾರೆ ಎನ್ನುವುದು ಬಹಳ ರೋಚಕವಾಗಿದೆ. ಉಸಿಲಿ ಗೊತ್ತು, ಇದೇನು ಮಿಸಿಲಿ? ಎಂದು ಯೋಚಿಸಿ ಯೋಚಿಸಿ ಸುಸ್ತಾಯಿತು. ವಿಜ್ಞಾನಿಯು ಕಂಡು ಹಿಡಿದಿರುವುದು ಮಿಸೈಲ್ ಎಂದು ಅರ್ಥವಾಗುವುದಕ್ಕೆ ಬಹಳ ಶ್ರಮ ಪಡಬೇಕಾಯಿತು. ಆ ಇಡೀ ಚಿತ್ರ ಇಲ್ಲಿದೆ.

-ಅ
21.05.2010
11AM

Friday, May 14, 2010

ನಾನೂ.. ನನ್ನ ಕನಸು - ಅನಿಸಿಕೆ’ಪೃಥ್ವಿ’ಗೆ ಹೋಗಬೇಕು ಅಂತ ಹೊರಟಿದ್ದು, ಪಿ.ವಿ.ಆರ್‍ ಗೆ ಹೋದಮೇಲೆ ಪ್ರಕಾಶ್ ರೈ ಚಿತ್ರ ನೋಡಿದಮೇಲೆ "ನಾನೂ.. ನನ್ನ ಕನಸು"ಗೇ ಹೋಗೋಣವೆಂದು ತೀರ್ಮಾನಿಸಿದ್ದು ತಪ್ಪು ನಿರ್ಧಾರವಾಗಲಿಲ್ಲವೆಂಬ ಖುಷಿಯು ಚಿತ್ರಮಂದಿರದಿಂದ ಹೊರಬಂದಾಗ ನಮಗಾಗಿತ್ತು. ಅದೆಷ್ಟು ಸಲ ನಿರೂಪಿಸಿದ್ದಾರೆ ಪ್ರಕಾಶ್ ರೈ - ತಾವು ಅತ್ಯದ್ಭುತ ಕಲಾವಿದರು ಎಂದು! ಈ ಸಲವೂ ಏನೂ ಕೊರತೆಯಿಲ್ಲದಂತಿದೆ ಅವರ ಪ್ರಯತ್ನ!

ಬರೀ ಪ್ರಕಾಶ್ ರೈ ಒಬ್ಬರನ್ನೇ ಹೊಗಳಿದರೆ ಅನ್ಯಾಯವಾಗುತ್ತೆ. ಸಾಮಾನ್ಯವಾಗಿ ಚಿತ್ರಗಳಲ್ಲಿ "ಅಯ್ಯೋ ಈ ಮನುಷ್ಯಂಗೆ ನಟನೇನೇ ಬರಲ್ಲ" ಎಂದು ಬೈಯ್ಯೋಕೆ ಯಾರಾದರೂ ಒಬ್ಬರು ಸಿಗುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ಒಬ್ಬರೂ ಅಂಥವರು ಇಲ್ಲ ಈ ಚಿತ್ರದಲ್ಲಿ.

ತಂದೆ-ಮಗಳ ಸಂಬಂಧ, ಒಡನಾಟ, ಪ್ರೀತಿ, ಸ್ನೇಹ ಎಲ್ಲವನ್ನೂ ಬಿಂಬಿಸುವ ಚಿತ್ರದ ಕೇಂದ್ರಬಿಂದುವೇ ’ಕನಸು’ - ಮಗಳು. ಹುಟ್ಟಿದಾಗಿನಿಂದ ಮದುವೆಯಾಗಿ ಗಂಡನ ಮನೆಗೆ ಹೋಗುವವರೆಗೂ ವಿಪರೀತವಾಗಿ ಹಚ್ಚಿಕೊಂಡ ತಂದೆಯ ಮನಃಸ್ಥಿತಿಯನ್ನೂ, ಅದರಿಂದಾಗುವ ಪರಿಣಾಮವನ್ನೂ ಸ್ವಲ್ಪವೂ ಬೋರು ಹೊಡೆಸದೇ ಚಿತ್ರಿಸಿರುವುದು ಪ್ರಶಂಸನೀಯ. ಇಡೀ ಚಿತ್ರವು ತಂದೆಯ ನೆನಪು. ತಂದೆಯು ತನ್ನ ಕನಸಿನ ನೆನಪನ್ನು ಗೆಳೆಯನೊಂದಿಗೆ ಹಂಚಿಕೊಳ್ಳುತ್ತಾನೆ. ಕೊನೆಗೆ ಗೆಳೆಯನಿಗೂ ಇದರಿಂದ ತನ್ನ ಭವಿಷ್ಯತ್ತಿನ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡುತ್ತೆ.

ಮಗಳು ಚಿಕ್ಕ ವಯಸ್ಸಿನಿಂದಲೂ ತಾನು ಏನು ಮಾಡುತ್ತಿದ್ದೇನೆಂದು ಸ್ಪಷ್ಟವಾಗಿದ್ದುದು, ಮತ್ತೆ ಅದರಲ್ಲಿ ತಂದೆ ತಾಯಿಯರ ಪಾತ್ರವು ಎಷ್ಟಿರಬೇಕೆಂದು ಅರ್ಥ ಮಾಡಿಕೊಳ್ಳಬೇಕೆಂಬುದು ಚಿತ್ರದ ಸಂದೇಶವೆನ್ನಬಹುದು. ತಿಳಿಹಾಸ್ಯದ ಸಂಭಾಷಣೆಗೆ ಪೂರ್ಣ ಅಂಕಗಳನ್ನು ಕೊಡಬೇಕು. ಸಿಹಿಕಹಿ ಚಂದ್ರು ತಮ್ಮ ಚಿಕ್ಕ ಪಾತ್ರವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ. ಬಹಳ ವರ್ಷದ ನಂತರ ಮತ್ತೆ ಪರದೆಯ ಮೇಲೆ ಸಿತಾರಾರನ್ನು ನೋಡಿದಾಗ ಏನು ಗೋಳು ಕಾದಿದೆಯೋ ಎಂಬ ಆತಂಕವಾಯಿತು. ಆದರೆ ಎಲ್ಲೂ ಗೋಳೇ ಇಲ್ಲದಿರುವುದು ಆತಂಕವನ್ನು ನಿವಾರಿಸಿತು. ಬದಲಿಗೆ ಸಿತಾರ ಅವರಿಗೆ ತುಂಬಾ ಜೋವಿಯಲ್ ಪಾತ್ರವಿರುವುದರಿಂದ ಸಂತೋಷವೂ ಆಯಿತು. ಮಕ್ಕಳೊಂದಿಗೇ ಹಗಲಿರುಳೂ ಇರುವ ನನಗಂತೂ ಕೆಲವು ಡೈಲಾಗುಗಳು ಬಹಳ ಹಿಡಿಸಿದುವು. "ಮಕ್ಕಳಿಗೆ ಮಾತ್ರ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಕಣೋ.. ನಾವು ದೊಡ್ಡೋರ್ ಆಗ್ಬಿಟಿದೀವಿ.." :-)

ಸಂಭಾಷಣೆಗೆ ಪೂರ್ಣ ಅಂಕಗಳೆಂದೆನಷ್ಟೆ. ಅದೇ ರೀತಿ ಫೋಟೋಗ್ರಫಿ ಕೂಡ ಬಹಳ ಚೆನ್ನಾಗಿದೆ. ಥಿಯೇಟರಿನ ಹೊರಗಡೆ ಸುಡುಬಿಸಿಲಿದ್ದರೂ ಚಿತ್ರದಲ್ಲಿ ಮಾತ್ರ ಕೊಡಗಿನ ಕೊರೆಯುವ ಚಳಿಯನ್ನು, ಮಂಜನ್ನೂ, ನಟರುಗಳ ಬೆಚ್ಚನೆಯ ಬಟ್ಟೆಗಳನ್ನು ನೋಡುವುದರಿಂದ extra ಹಿತವಾಗುತ್ತೆ.

ಹಂಸಲೇಖಾರಿಗಿರುವ ಕನ್ನಡ ಸಾಹಿತ್ಯಪ್ರೇಮವು ಹಾಡುಗಳಲ್ಲಿ ವ್ಯಕ್ತವಾಗಿದೆ. ಆದರೆ ಯಾಕೋ ಕಣ್, ಕಾಲ್ - ಈ ಪದಗಳನ್ನೆಲ್ಲಾ ಹಾಡುಗಳಲ್ಲಿ ಕೇಳಿ ಹಳೆಗನ್ನಡ ಸಾಹಿತ್ಯದ ನೆನಪನ್ನೂ ತರುತ್ತೆ. ಹಂಸಲೇಖಾ ಅಂದ ಮೇಲೆ ಸಾಹಿತ್ಯದ ಜೊತೆಗೆ ಸಂಗೀತವೂ ಅವರದೇ ಎಂಬುದು by default. ಗಿಟಾರಿನ ಮೇಲೆ ಅವರಿಗಿರುವ hold ವರ್ಷಾನುಗಟ್ಟಲೆಯಿಂದಲೂ ಗೊತ್ತಾಗಿದೆ. ಸಂಗೀತದ ವಿಭಿನ್ನತೆಯು ಕಣ್-ಕಾಲ್ ಹಾಡಿನಲ್ಲಿ ಗೋಚರಿಸುತ್ತೆ. ಚಿತ್ರದ ಆರಂಭದಲ್ಲಿ ಆರಂಭವಾಗುವ ಈ ಹಾಡು, ಚಿತ್ರದ ಕೊನೆಯಲ್ಲಿ ಮುಕ್ತಾಯವಾಗುತ್ತೆ. ಇಡೀ ಚಿತ್ರದ ಪಯಣವನ್ನು ಈ ಹಾಡೇ ಮಾಡಿಸುತ್ತೆ. ಇದು ಹಂಸಲೇಖಾ ವೈಶಿಷ್ಟ್ಯ. ಜೊತೆಗೆ ಇನ್ನೂ ಮೂರು ಹಾಡುಗಳಿವೆ. ಉತ್ತಮ ನಟರಾದ ಅಚ್ಯುತ ಕುಮಾರರ ಮೇಲೆ ಚಿತ್ರಿಸಿದ ಹಾಡು ಸುದೀರ್ಘವಾಗಿರುವುದರಿಂದ ಒಂದು ವಿರಾಮ ತೆಗೆದುಕೊಳ್ಳಬಹುದು. ಸೋನೂ ನಿಗಮ್ ಕೈಯಲ್ಲಿ ಹಾಡಿಸಿರುವುದು ವೈಯಕ್ತಿಕವಾಗಿ ನನಗೆ ಹಿಡಿಸಲಿಲ್ಲ.

ಸರ್ದಾರ್ಜೀಗಳ ಬಗ್ಗೆ ದೊಡ್ಡ ಪಾಠವನ್ನೇ ಹೇಳಿಬಿಟ್ಟಿದೆ ಈ ಚಿತ್ರವು! ನಟ ರಾಜೇಶ್ ಮತ್ತು ಕನಸು ಪಾತ್ರದ ಅಮೂಲ್ಯ ಈ ಸರ್ದಾರ್-ಗಳ ಬಗ್ಗೆ ಒಲವು ಮೂಡಿಸುವಂಥ ಪಾತ್ರ ವಹಿಸಿಕೊಂಡಿದ್ದಾರೆ.

ನನಗಂತೂ ಬಹಳ ಖುಷಿ ಕೊಟ್ಟಿತು ಈ ಸಿನಿಮಾ. ಸಹಾಯಕ ನಿರ್ದೇಶಕನಾಗಿ ಮಿತ್ರ ಸುನೀಲ್ ಇದ್ದಾರೆಂಬುದು ಚಿತ್ರ ಮುಗಿದ ಮೇಲೆ ಗೊತ್ತಾಗಿ ಇನ್ನೂ ಖುಷಿಯಾಯಿತು. ಪ್ರಕಾಶ್ ರೈ at his best!

-ಅ
14.05.2010
9.20PM

Monday, May 10, 2010

ಪರ್ವತಾರೋಹಣದ ಹಗ್ಗ

ಪರ್ವತಾರೋಹಣದ ಹಗ್ಗಕ್ಕೆ ಅದೆಷ್ಟು ಶಕ್ತಿ!
ಸಾವಿರ ಸಾವಿರ ಅಡಿ ಎತ್ತರಕ್ಕೆ
ಕಣ್ಮುಚ್ಚಿಯೂ,
ಒಮ್ಮೊಮ್ಮೆ ಕೈ ಹಿಡಿಯದೆಯೂ,
ಕೆಲವೊಮ್ಮೆ ಎಲ್ಲ ಹಿಡಿತಗಳ ಕಳಚಿಯೂ,
ಬೀಳದೇ,
ತಡವರಿಸದೇ,
ಮೇಲೆ ಮೇಲೆ ಏರಬಲ್ಲೆನು!

ಶಿಖರದಂಚಲ್ಲಿ ನಿಂತು ಹಗ್ಗಕ್ಕೆ ಸಗ್ಗದ ಮನ್ನಣೆಯ ಸಲ್ಲಿಸಲು,
ಹಗ್ಗವೆಂದಿತು:
"ಹೆಸರಿಗಷ್ಟೆ ನಾನು,
ಉಸುರಾದುದು ನೀನೆ.
ಬೆಸೆದೆಯಲ್ಲ ಗಂಟು,
ಅದುವೆ ನಿಜದ ನಂಟು!
ಉಳಿದಿದೆಯೋ ಪಯಣ,
ಕೆಳಗಿಳಿಯೋ, ಅರುಣ!
ಬೇರೆ ಗಂಟು ಬೇರೆ ಬೆಸುಗೆ ಏರಲಿಳಿಯಲು.
ಹಗ್ಗವೊಂದೆಯೆಂದು ಬಗೆದು ತಪ್ಪು ತಿಳಿಯಲು!
ಶಕ್ತಿಯೇನೊ ಹಗ್ಗಕಿಹುದು ಬೆಟ್ಟವೇರಲು.
ಮೂಲ: ಗಂಟು, ಬೆಸುಗೆ, ನಂಟು: ಹಗ್ಗ - ಮನುಜಕೆ;
ಹಗ್ಗ - ಬೆಟ್ಟಕೆ;
ಮನುಜ - ಬೆಟ್ಟಕೆ!"

ಪರ್ವತಾರೋಹಣದ ಹಗ್ಗಕ್ಕೆ ಅದೆಂಥ ಶಕ್ತಿ?
ಮರೆತಿತ್ತು ಶಕ್ತಿಮೂಲವನ್ನೆ ನನ್ನ ಪುಟ್ಟ ಯುಕ್ತಿ!

-ಅ
09.05.2010
1PM

Wednesday, May 5, 2010

ಓ ... ಓ.... ಓ.... ರಂಗಶಾಯೀsss

ಸಂಗೀತಗಾರರ ಪಾಲಿಗೆ ಕಬ್ಬಿಣದ ಕಡಲೆ ಕೃತಿ! ಅದೆಷ್ಟು ಸಲೀಸಾಗಿ ಅಗಿದು ನುಂಗಿ ನೀರು ಕುಡಿದುಬಿಟ್ಟಿದ್ದಾರೆ ಸಂತಾನಮ್, ಎಮ್.ಎಸ್, ಮತ್ತು ಶೆಮ್ಮಂಗುಡಿ! ಮೂರನ್ನೂ ಒಟ್ಟಿಗೇ ಪ್ಲೇ ಲಿಸ್ಟ್ ಅಲ್ಲಿ ಹಾಕಿ, ಸತತವಾಗಿ ಕೇಳಿದಾಗ ಆದ ಪರಮಾನಂದವು ಅಷ್ಟಿಷ್ಟಲ್ಲ. ಸುಬ್ಬುಲಕ್ಷ್ಮಿಯವರು ಶ್ರೀರಂಗಕ್ಕೆ ಕರೆದೊಯ್ಯುತ್ತಾರೆ, ಶೆಮ್ಮಂಗುಡಿಯು ಪ್ರಾರ್ಥನೆ ಮಾಡಿಸುತ್ತಾರೆ, ಸಂತಾನಮ್ ಸಾಕ್ಷಾತ್ ರಂಗನಾಥನ ದರ್ಶನವನ್ನೇ ಮಾಡಿಸುತ್ತಾರೆ!! ಸಂತಾನಮ್ ಅಂತೂ ವಿಳಂಬಕಾಲದ ಕೃತಿಯೆಂದರೇನು ಎನ್ನುವುದನ್ನು ಈ ಹಾಡಿನ ಮೂಲಕ define ಮಾಡಿಬಿಡುತ್ತಾರೆ. ಮತ್ತೆ ಕಾಂಬೋಜಿ ರಾಗವು ತನ್ನ ಉನ್ನತ ಶಿಖರವನ್ನು ಮುಟ್ಟುವುದು ಬಹುಶಃ ಈ ಹಾಡಿನಲ್ಲೇ ಅನ್ನಿಸುತ್ತೆ!

ಶ್ರೀರಂಗದಲ್ಲಿ ಮಲಗಿರುವವನನ್ನು ರಾರಾದಾ ಎಂದು ಕೇಳುವ ತ್ಯಾಗರಾಜರ ಬಯಕೆ ಅದೆಷ್ಟು ಹಿರಿಯದು ಎಂದು ಕೇಳಿದರೆ ಅಚ್ಚರಿಯಾಗುತ್ತೆ. "ಸಾರಂಗಧರುಡು ಜೂಚಿ ಕೈಲಾಸಾಧಿಪುಡುಗಾಲೇದಾ.." (ಪರಮೇಶ್ವರನು ನಿನ್ನನ್ನು ಕಂಡು ಕೈಲಾಸಕ್ಕೆ ಒಡೆಯನಾಗಲಿಲ್ಲವೇ?)! ತ್ಯಾಗರಾಜರನ್ನು ಅಧ್ಯಯನ ಮಾಡುವಾಗ ಸಾಹಿತ್ಯ ಮತ್ತು ಸಂಗೀತ ಎರಡು ಬಗೆಯ ಆನಂದವು ದೊರಕುತ್ತೆ! ಜೂಚಿ... ಕೈಲಾಸ.. ಎನ್ನುವಾಗ ನಾವಿರುವ ಸ್ಥಳದಿಂದ ಕೈಲಾಸಕ್ಕೆ ಏರುವ ಅನುಭವ ಆಗದೇ ಇರುವುದಿಲ್ಲ. ಆದರೆ ಅವರು ಹೇಳುತ್ತಿರುವುದು ಪರಮೇಶ್ವರನ ಬಗ್ಗೆ. ಪರಮೇಶ್ವರನ ಜೊತೆ ನಾವೂ ಕೈಲಾಸ ದರ್ಶನ ಮಾಡಬೇಕೆನ್ನುವ ಹಂಬಲವಿರುವವರು ಈ ಕೃತಿಯನ್ನು ಕೇಳಲೇ ಬೇಕು.

ಶ್ರೀರಂಗವನ್ನು ಭೂಲೋಕದ ವೈಕುಂಠವೆಂದೇನೋ ಕರೆದುಬಿಟ್ಟಿದ್ದಾರೆ. ಇದು ಕೇವಲ ಕಾವ್ಯದ ಸೊಬಗಿಗಾಗಿ ಬಳಸಿಕೊಂಡಿರುವ ರೂಪಕಾಲಂಕಾರವೆಂದು ಭಾವಿಸಿದರೆ ಸ್ವಾರಸ್ಯವನ್ನು ಸವಿಯದೇ ಬಿಟ್ಟ ಹಾಗಿರುತ್ತೆ. ಈ ಹಾಡಿನ ಕಚೇರಿಯಲ್ಲಿ, ಇಡೀ ಹಾಡಿನ ಕೇಂದ್ರಬಿಂದು ಈ ಸಾಲು! "ಭೂಲೋಕ.. ವೈಕುಂಠಮಿದಿಯನಿ..." ಮೂರೂ ವಿದ್ವಾಂಸರೂ ಇಲ್ಲಿ ಮಾಡುವ ನೆರವಲ್ಲು ಶ್ರೀರಂಗದವರೆಗೂ ಪ್ರಯಾಣ ಮಾಡುವ ಆಯಾಸವನ್ನೂ, ಶ್ರೀರಂಗನ ಕೇವಲ ಮೂರ್ತಿಯನ್ನು ನೋಡುವುದನ್ನೂ ತಪ್ಪಿಸಿ ಕಣ್ಣ ಮುಂದೆಯೇ ಜೀವಂತ ರಂಗನನ್ನು ತಂದು ನಿಲ್ಲಿಸಿ, ನಮ್ಮ ದೇಹವೇ ಭೂಲೋಕವು - ಅದೇ ವೈಕುಂಠವಾಗಿದೆಯೇನೋ ಎಂಬ ದಿವ್ಯ ಭಾವನೆಯು ನಮ್ಮನ್ನು ಆವರಿಸಿಬಿಡುತ್ತೆ ಎನ್ನುವುದು ನನ್ನ ಪಾಲಿಗಂತೂ ಅತಿಶಯೋಕ್ತಿಯಲ್ಲ!

ಮುಂದೆ ತ್ಯಾಗರಾಜರೇ ಹೇಳಿರುವ ಹಾಗೆ "ಭೂಲೋಕದ ವೈಕುಂಠವೆಂಬಂತೆ ಇರುವ ಈ ಶ್ರೀರಂಗದಲ್ಲಿ ನಿನ್ನೊಳಗೆ ನೀನೇ ಅತಿಶಯವಾಗಿ ಆನಂದದಿಂದಿರುವ ಲಕ್ಷ್ಮೀರಮಣನೇ, ಇಲ್ಲಿ ನೀನು ಮೈಮರೆತಿದ್ದರೆ ನಮ್ಮ ಮನಸ್ಸಿನೊಳಗಿರುವ ಚಿಂತೆಗಳು ಮರೆಯಾಗುವುದು ಯಾವಾಗ? ಇಲ್ಲಿ ಅಸೂಯೆಯುಳ್ಳ ಜನರ ಮಧ್ಯೆ ಬಹಳ ಬಳಲಿ ನಿನ್ನ ದಿವ್ಯರೂಪವನ್ನು ನೋಡಲು ಬಂದಿದ್ದೇನೆ. ಬಂದು ಕಾಪಾಡಬಾರದೇ?" ಎಂದು ಶ್ರೀರಂಗನಾಥನ ಕರ್ತವ್ಯಗಳನ್ನೇ ಪ್ರಶ್ನಿಸುವಂತಿದೆ. ರಂಗನಾಥನ ಕರ್ತವ್ಯಗಳೇನೇ ಇರಲಿ, ಅದನ್ನು ಅವನು ಮಾಡಲೀ ಬಿಡಲಿ, ತ್ಯಾಗರಾಜರ ಈ ಸಾಲುಗಳನ್ನು ಶೆಮ್ಮಂಗುಡಿಯಾಗಲೀ, ಸುಬ್ಬುಲಕ್ಷ್ಮಿಯಾಗಲೀ, ಸಂತಾನಮ್ ಆಗಲೀ ಹಾಡಿದರೆ ನಾವಿರುವ ಲೋಕವೇ ವೈಕುಂಠವಾಗಿ, ನಾವೇ ಮೈ ಮರೆತು, ಮನಸ್ಸಿನೊಳಗಿರುವ ಚಿಂತೆಗಳೆಲ್ಲವೂ ಮರೆಯಾಗುವುದಂತೂ ನಿಜ. ಬಹುಶಃ ಶ್ರೀ ರಂಗನಾಥನು ತ್ಯಾಗರಾಜರ ಮೂಲಕ ಈ ಕೃತಿಯನ್ನು ರಚಿಸಿ, ಮನಸ್ಸಿನ ದುಗುಡಗಳನ್ನು ಕಳೆಯುವಂತೆ ಮಾಡಿ, ಪೊರೆಯುವ ಹಾದಿಯನ್ನು ಅನುಸರಿಸಿದ್ದಾನೇನೋ!

ಓ... ಓ..... ಓ..... ರಂಗಶಾಯೀSSSSSS

-ಅ
05.05.2010
12AM

Tuesday, May 4, 2010

ಕೂಡಲಿ

ಹೊತ್ತು ತಂದಿಹಳು ಎಲ್ಲ ಪಾಪಗಳ
ಅತ್ತ ಕಡೆಯೆಲ್ಲಿಂದಲೊ..
ಕಪ್ಪು ಮೈಬಣ್ಣ, ಮುಪ್ಪು ಕಣ್ಣೋಟ
ಇತ್ತ ಬರುತಿರುವಳಿವಳು,
ಹಾ! ಸುಭದ್ರೆಯೊ, ಭದ್ರೆಯಿವಳು.

ಮತ್ತೆ ನೋಡಲ್ಲಿ ನುಗ್ಗಿ ಬರುತಿಹಳು
ಬೆಟ್ಟದಡಿಯೆಲ್ಲಿಂದಲೊ..
ದಟ್ಟ ಕಾಡನ್ನು, ಪುಟ್ಟ ಧರೆಯನ್ನು
ಹಾದು ಸುರಸುಧೆಯ ಹೊತ್ತು:
ದಿವ್ಯಗಂಗೆಯೊ, ತುಂಗೆಯಿವಳು.

ಪುಣ್ಯ ಪಾಪವನು, ಕಾಲ ಸೃಷ್ಟಿಯನು
ನುಂಗಿ ನಡೆಯುವಂದದಲಿ..
ಮುಂದೆ ತಮಸನ್ನು, ಮತ್ತೆ ದಾಹವನು
ಕೊಂದು ಸುಖವೀಯುತಿರಲಿ.
ತುಂಗೆ ಭದ್ರೆಯರು ಒಂದುಗೂಡುತಲಿ
ಮುಂದೆ ಮುಂದೆ ಸಾಗಲಿ.
ಪುಣ್ಯದೊಳು ಪಾಪವು ಬೆರೆವ ಸ್ಥಲವಿದೊ,
ಭವ್ಯವಿದು, ಆಹ್! ಸಿರಿ ಕೂಡಲಿ!

-ಅ
22.04.2010
12.30AM