Friday, May 14, 2010

ನಾನೂ.. ನನ್ನ ಕನಸು - ಅನಿಸಿಕೆ’ಪೃಥ್ವಿ’ಗೆ ಹೋಗಬೇಕು ಅಂತ ಹೊರಟಿದ್ದು, ಪಿ.ವಿ.ಆರ್‍ ಗೆ ಹೋದಮೇಲೆ ಪ್ರಕಾಶ್ ರೈ ಚಿತ್ರ ನೋಡಿದಮೇಲೆ "ನಾನೂ.. ನನ್ನ ಕನಸು"ಗೇ ಹೋಗೋಣವೆಂದು ತೀರ್ಮಾನಿಸಿದ್ದು ತಪ್ಪು ನಿರ್ಧಾರವಾಗಲಿಲ್ಲವೆಂಬ ಖುಷಿಯು ಚಿತ್ರಮಂದಿರದಿಂದ ಹೊರಬಂದಾಗ ನಮಗಾಗಿತ್ತು. ಅದೆಷ್ಟು ಸಲ ನಿರೂಪಿಸಿದ್ದಾರೆ ಪ್ರಕಾಶ್ ರೈ - ತಾವು ಅತ್ಯದ್ಭುತ ಕಲಾವಿದರು ಎಂದು! ಈ ಸಲವೂ ಏನೂ ಕೊರತೆಯಿಲ್ಲದಂತಿದೆ ಅವರ ಪ್ರಯತ್ನ!

ಬರೀ ಪ್ರಕಾಶ್ ರೈ ಒಬ್ಬರನ್ನೇ ಹೊಗಳಿದರೆ ಅನ್ಯಾಯವಾಗುತ್ತೆ. ಸಾಮಾನ್ಯವಾಗಿ ಚಿತ್ರಗಳಲ್ಲಿ "ಅಯ್ಯೋ ಈ ಮನುಷ್ಯಂಗೆ ನಟನೇನೇ ಬರಲ್ಲ" ಎಂದು ಬೈಯ್ಯೋಕೆ ಯಾರಾದರೂ ಒಬ್ಬರು ಸಿಗುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ಒಬ್ಬರೂ ಅಂಥವರು ಇಲ್ಲ ಈ ಚಿತ್ರದಲ್ಲಿ.

ತಂದೆ-ಮಗಳ ಸಂಬಂಧ, ಒಡನಾಟ, ಪ್ರೀತಿ, ಸ್ನೇಹ ಎಲ್ಲವನ್ನೂ ಬಿಂಬಿಸುವ ಚಿತ್ರದ ಕೇಂದ್ರಬಿಂದುವೇ ’ಕನಸು’ - ಮಗಳು. ಹುಟ್ಟಿದಾಗಿನಿಂದ ಮದುವೆಯಾಗಿ ಗಂಡನ ಮನೆಗೆ ಹೋಗುವವರೆಗೂ ವಿಪರೀತವಾಗಿ ಹಚ್ಚಿಕೊಂಡ ತಂದೆಯ ಮನಃಸ್ಥಿತಿಯನ್ನೂ, ಅದರಿಂದಾಗುವ ಪರಿಣಾಮವನ್ನೂ ಸ್ವಲ್ಪವೂ ಬೋರು ಹೊಡೆಸದೇ ಚಿತ್ರಿಸಿರುವುದು ಪ್ರಶಂಸನೀಯ. ಇಡೀ ಚಿತ್ರವು ತಂದೆಯ ನೆನಪು. ತಂದೆಯು ತನ್ನ ಕನಸಿನ ನೆನಪನ್ನು ಗೆಳೆಯನೊಂದಿಗೆ ಹಂಚಿಕೊಳ್ಳುತ್ತಾನೆ. ಕೊನೆಗೆ ಗೆಳೆಯನಿಗೂ ಇದರಿಂದ ತನ್ನ ಭವಿಷ್ಯತ್ತಿನ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡುತ್ತೆ.

ಮಗಳು ಚಿಕ್ಕ ವಯಸ್ಸಿನಿಂದಲೂ ತಾನು ಏನು ಮಾಡುತ್ತಿದ್ದೇನೆಂದು ಸ್ಪಷ್ಟವಾಗಿದ್ದುದು, ಮತ್ತೆ ಅದರಲ್ಲಿ ತಂದೆ ತಾಯಿಯರ ಪಾತ್ರವು ಎಷ್ಟಿರಬೇಕೆಂದು ಅರ್ಥ ಮಾಡಿಕೊಳ್ಳಬೇಕೆಂಬುದು ಚಿತ್ರದ ಸಂದೇಶವೆನ್ನಬಹುದು. ತಿಳಿಹಾಸ್ಯದ ಸಂಭಾಷಣೆಗೆ ಪೂರ್ಣ ಅಂಕಗಳನ್ನು ಕೊಡಬೇಕು. ಸಿಹಿಕಹಿ ಚಂದ್ರು ತಮ್ಮ ಚಿಕ್ಕ ಪಾತ್ರವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ. ಬಹಳ ವರ್ಷದ ನಂತರ ಮತ್ತೆ ಪರದೆಯ ಮೇಲೆ ಸಿತಾರಾರನ್ನು ನೋಡಿದಾಗ ಏನು ಗೋಳು ಕಾದಿದೆಯೋ ಎಂಬ ಆತಂಕವಾಯಿತು. ಆದರೆ ಎಲ್ಲೂ ಗೋಳೇ ಇಲ್ಲದಿರುವುದು ಆತಂಕವನ್ನು ನಿವಾರಿಸಿತು. ಬದಲಿಗೆ ಸಿತಾರ ಅವರಿಗೆ ತುಂಬಾ ಜೋವಿಯಲ್ ಪಾತ್ರವಿರುವುದರಿಂದ ಸಂತೋಷವೂ ಆಯಿತು. ಮಕ್ಕಳೊಂದಿಗೇ ಹಗಲಿರುಳೂ ಇರುವ ನನಗಂತೂ ಕೆಲವು ಡೈಲಾಗುಗಳು ಬಹಳ ಹಿಡಿಸಿದುವು. "ಮಕ್ಕಳಿಗೆ ಮಾತ್ರ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಕಣೋ.. ನಾವು ದೊಡ್ಡೋರ್ ಆಗ್ಬಿಟಿದೀವಿ.." :-)

ಸಂಭಾಷಣೆಗೆ ಪೂರ್ಣ ಅಂಕಗಳೆಂದೆನಷ್ಟೆ. ಅದೇ ರೀತಿ ಫೋಟೋಗ್ರಫಿ ಕೂಡ ಬಹಳ ಚೆನ್ನಾಗಿದೆ. ಥಿಯೇಟರಿನ ಹೊರಗಡೆ ಸುಡುಬಿಸಿಲಿದ್ದರೂ ಚಿತ್ರದಲ್ಲಿ ಮಾತ್ರ ಕೊಡಗಿನ ಕೊರೆಯುವ ಚಳಿಯನ್ನು, ಮಂಜನ್ನೂ, ನಟರುಗಳ ಬೆಚ್ಚನೆಯ ಬಟ್ಟೆಗಳನ್ನು ನೋಡುವುದರಿಂದ extra ಹಿತವಾಗುತ್ತೆ.

ಹಂಸಲೇಖಾರಿಗಿರುವ ಕನ್ನಡ ಸಾಹಿತ್ಯಪ್ರೇಮವು ಹಾಡುಗಳಲ್ಲಿ ವ್ಯಕ್ತವಾಗಿದೆ. ಆದರೆ ಯಾಕೋ ಕಣ್, ಕಾಲ್ - ಈ ಪದಗಳನ್ನೆಲ್ಲಾ ಹಾಡುಗಳಲ್ಲಿ ಕೇಳಿ ಹಳೆಗನ್ನಡ ಸಾಹಿತ್ಯದ ನೆನಪನ್ನೂ ತರುತ್ತೆ. ಹಂಸಲೇಖಾ ಅಂದ ಮೇಲೆ ಸಾಹಿತ್ಯದ ಜೊತೆಗೆ ಸಂಗೀತವೂ ಅವರದೇ ಎಂಬುದು by default. ಗಿಟಾರಿನ ಮೇಲೆ ಅವರಿಗಿರುವ hold ವರ್ಷಾನುಗಟ್ಟಲೆಯಿಂದಲೂ ಗೊತ್ತಾಗಿದೆ. ಸಂಗೀತದ ವಿಭಿನ್ನತೆಯು ಕಣ್-ಕಾಲ್ ಹಾಡಿನಲ್ಲಿ ಗೋಚರಿಸುತ್ತೆ. ಚಿತ್ರದ ಆರಂಭದಲ್ಲಿ ಆರಂಭವಾಗುವ ಈ ಹಾಡು, ಚಿತ್ರದ ಕೊನೆಯಲ್ಲಿ ಮುಕ್ತಾಯವಾಗುತ್ತೆ. ಇಡೀ ಚಿತ್ರದ ಪಯಣವನ್ನು ಈ ಹಾಡೇ ಮಾಡಿಸುತ್ತೆ. ಇದು ಹಂಸಲೇಖಾ ವೈಶಿಷ್ಟ್ಯ. ಜೊತೆಗೆ ಇನ್ನೂ ಮೂರು ಹಾಡುಗಳಿವೆ. ಉತ್ತಮ ನಟರಾದ ಅಚ್ಯುತ ಕುಮಾರರ ಮೇಲೆ ಚಿತ್ರಿಸಿದ ಹಾಡು ಸುದೀರ್ಘವಾಗಿರುವುದರಿಂದ ಒಂದು ವಿರಾಮ ತೆಗೆದುಕೊಳ್ಳಬಹುದು. ಸೋನೂ ನಿಗಮ್ ಕೈಯಲ್ಲಿ ಹಾಡಿಸಿರುವುದು ವೈಯಕ್ತಿಕವಾಗಿ ನನಗೆ ಹಿಡಿಸಲಿಲ್ಲ.

ಸರ್ದಾರ್ಜೀಗಳ ಬಗ್ಗೆ ದೊಡ್ಡ ಪಾಠವನ್ನೇ ಹೇಳಿಬಿಟ್ಟಿದೆ ಈ ಚಿತ್ರವು! ನಟ ರಾಜೇಶ್ ಮತ್ತು ಕನಸು ಪಾತ್ರದ ಅಮೂಲ್ಯ ಈ ಸರ್ದಾರ್-ಗಳ ಬಗ್ಗೆ ಒಲವು ಮೂಡಿಸುವಂಥ ಪಾತ್ರ ವಹಿಸಿಕೊಂಡಿದ್ದಾರೆ.

ನನಗಂತೂ ಬಹಳ ಖುಷಿ ಕೊಟ್ಟಿತು ಈ ಸಿನಿಮಾ. ಸಹಾಯಕ ನಿರ್ದೇಶಕನಾಗಿ ಮಿತ್ರ ಸುನೀಲ್ ಇದ್ದಾರೆಂಬುದು ಚಿತ್ರ ಮುಗಿದ ಮೇಲೆ ಗೊತ್ತಾಗಿ ಇನ್ನೂ ಖುಷಿಯಾಯಿತು. ಪ್ರಕಾಶ್ ರೈ at his best!

-ಅ
14.05.2010
9.20PM

6 comments:

 1. chennagide anda mele nodade irrokke hege sadya.. nanu nodbeku.. :)
  Raaghu

  ReplyDelete
 2. Heh, Sitara bagegina "ಬಹಳ ವರ್ಷದ ನಂತರ ಮತ್ತೆ ಪರದೆಯ ಮೇಲೆ ಸಿತಾರಾರನ್ನು ನೋಡಿದಾಗ ಏನು ಗೋಳು ಕಾದಿದೆಯೋ ಎಂಬ ಆತಂಕವಾಯಿತು" comment adbhutavagide.

  Parvagilla, first week-alle haage hodaglu ticket sikta? Namge aa luck yavattu irlilla.

  ReplyDelete
 3. ಅರುಣ್ ಸರ್,
  ನಾನೂ ಈ ಚಿತ್ರ ನೋಡಿಕೊಂಡು ಬಂದೆ. ನನಗು ತುಂಬಾ ತುಂಬಾ ಇಷ್ಟ ಆಯಿತು..
  ಎಷ್ಟೋ ಸನ್ನಿವೇಶಗಳಲ್ಲಿ ನನ್ನ ಅಪ್ಪನ ನೆನಪಾಗುತಿತ್ತು... :)
  ಅಪ್ಪಂದಿರ ಮನಸಿನ ತೊಳಲಾಟಗಳನ್ನು ಚನ್ನಾಗಿ ಬಿಂಬಿಸಿದ್ದಾರೆ...
  ಹಾಗೇ ಸರ್ದಾರ್ಜಿ ಗಳ ಬಗ್ಗೆ ಕಟ್ಟ ಮಾತಾಡುವವರಿಗೆ ಈ ಚಿತ್ರ , ಒಂದು ನೀತಿ ಹೇಳಲಿದೆ..
  ಎಲ್ಲರ ಅಭಿನಯ, ಹಾಗು ಸುತ್ತಲಿನ ಪರಿಸರ ಮನಸಿಗೆ ಮುದ ನೀಡುತ್ತದೆ.
  ಮತ್ತೆ ಮತ್ತೆ ನೋಡಬೇಕು ಅನಿಸುವ ಚಿತ್ರ ಅದು. ಮೂರು ಘಂಟೆಗಳ ಕಾಲ ನಾನೂ ಕಳೆದು ಹೋಗಿದ್ದೆ. :-)

  ReplyDelete