Tuesday, June 22, 2010

ಆದದ್ದು ಒಂದು, ಅಂದುಕೊಂಡಿದ್ದೊಂದು!

ಕಂಪ್ಯೂಟರ್ ಶಿಕ್ಷಣವು ಈಗಿನ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆರಂಭವಾಗುತ್ತೆ. ಇದರ ಬಗ್ಗೆ ಅನೇಕ "ಹಿರಿಯರು" ಅಸಮಾಧಾನ ವ್ಯಕ್ತ ಪಡಿಸುವುದುಂಟು. ನನಗೂ ಸಹ ಆರಂಭದಲ್ಲಿ ಬೇಸರವಾಗಿತ್ತು. "ಇದೇನು, ಈ ಚಿಕ್ಕ ಮಕ್ಕಳಿಗೆ ಕಂಪ್ಯೂಟರ್ ಎಲ್ಲ ಯಾಕೆ?" ಅನ್ನೋ ಪ್ರಶ್ನೆಗಿಂತ, "ಅವಕ್ಕೆ ಏನು ಅರ್ಥ ಆಗುತ್ತೆ, ಮೌಸ್ ಅಲುಗಾಡಿಸುವುದನ್ನೇ ಒಂದು ವರ್ಷವಿಡೀ ಹೇಳಿಕೊಡಬೇಕಾಗುತ್ತೆ. ಕಂಪ್ಯೂಟರ‍್-ಗೂ ಅಷ್ಟು ರಕ್ಷಣೆಯಿರುವುದಿಲ್ಲ" ಎಂಬ ಯೋಚನೆಯೇ ಹೆಚ್ಚು ಇತ್ತು - ನಿನ್ನೆವರೆಗೂ!

ರೂಪಾ ಮೇಡಂ (ಒಂದನೇ ತರಗತಿಯ ಕಂಪ್ಯೂಟರ್ ಅಧ್ಯಾಪಕಿ) ತಮ್ಮ ವಿದ್ಯಾರ್ಥಿಗಳನ್ನು ಈ ವರ್ಷದಲ್ಲಿ ಮೊದಲ ಬಾರಿಗೆ ಲ್ಯಾಬಿಗೆ ಕರೆತಂದರು. ಲ್ಯಾಬಿನ ಒಳಗೆ ಬಂದು ಕಂಪ್ಯೂಟರ್ ಮುಂದೆ ಅವರುಗಳು ಕುಳಿತುಕೊಳ್ಳುವ ಮುನ್ನ, ಸಾಲು ಮಾಡಿಸಿ ಮೊದಲು ಇದು ಮಾನೀಟರ್ರು, ಇದು ಕೀಬೋರ್ಡು.. ಇತ್ಯಾದಿಗಳನ್ನು ವಿವರಿಸುವುದಲ್ಲದೆ, ಹೇಗೆ ಕುಳಿತುಕೊಳ್ಳಬೇಕು, ಹೇಗೆ ವರ್ತಿಸಬೇಕು ಎಲ್ಲವನ್ನೂ ಮುದ್ದು ಮುದ್ದಾಗಿ ವಿವರಿಸುವುದು ಈ ತರಗತಿಯ ಅಧ್ಯಾಪಕರುಗಳ ಕೆಲಸ. ಇನ್ನೂ ಐದು ವರ್ಷದ ಮಕ್ಕಳಲ್ಲವೇ?

ಎಲ್ಲರನ್ನೂ ಒಬ್ಬೊಬ್ಬರಾಗಿಯೇ ತಮ್ಮ ತಮ್ಮ ಕಂಪ್ಯೂಟರ್ ಮುಂದೆ ಕೂರಿಸಿ, ರೂಪಾ ಮೇಡಂ, ಸರ್ವರ್ ಅಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನ ಬಳಿ ಬಂದು, "ಸರ್, 1st standard ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ಇದು ಮೊದಲನೇ ಕ್ಲಾಸು. ಸ್ಪೆಲ್ಲಿಂಗುಗಳು ಹೇಳಿಕೊಟ್ಟಿದ್ದಾಗಿದೆ ಕ್ಲಾಸಿನಲ್ಲಿ. ಈಗ ಮೌಸ್ ಮೂವ್ ಮಾಡೋದು ಹೇಳಿಕೊಡಬೇಕು. ಅವರಿಗೆ Fruit Folic (ಮೌಸ್ ಬಳಸುವುದನ್ನು ಕಲಿಯಲು ಮಕ್ಕಳಿಗೆ ಉಪಯೋಗವಾಗುವ ಸುಂದರ ತಂತ್ರಾಂಶ) ಹಾಕಿ ಕೊಟ್ಟು ಬಿಡಲೇ? At least, mouse pointer ಚಲಿಸುವುದನ್ನಾದರೂ ಗಮನಿಸುತ್ತಾರೆ. ಅದಕ್ಕೇ ನಲವತ್ತು ನಿಮಿಷ ಬೇಕಾಗಬಹುದು" ಎಂದು ಹೇಳಿದರು. ನಾನು ಸಂಪೂರ್ಣ ಸಹಮತ ತೋರಿಸಿ ತಲೆಯು ಇನ್ನೆಲ್ಲಿ ಬಿದ್ದು ಹೋಗುತ್ತೋ ಅನ್ನುವ ಹಾಗೆ ತಲೆಯಾಡಿಸಿ "ಓ ಯೆಸ್" ಎಂದೆ.

"ಓ ಯೆಸ್" ಎಂದು ಹೇಳಿ ಎರಡು ಸೆಕೆಂಡು ಕೂಡ ಆಗಿಲ್ಲ, ಹಿಂದೆ ತಿರುಗಿ ನೋಡಿದೆವು - ಒಬ್ಬ ಹುಡುಗ ತನ್ನ ಕಂಪ್ಯೂಟರ್-ನಲ್ಲಿ "ಗೂಗಲ್"ಗೆ ಹೋಗಿ, ಅಲ್ಲಿ "games download" ಎಂದು search ಕೊಟ್ಟು, ಹುಡುಕಾಡುತ್ತಿದ್ದ! ನಮ್ಮ ಪ್ಲಾನುಗಳೆಲ್ಲವನ್ನೂ ಹೀಗೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಈಗಿನ ಮಕ್ಕಳು ಎಂದು ಎಣಿಸಿರಲಿಲ್ಲ!

ಬೆಲ್ಲು ಹೊಡೆಯಿತು. "ಓಡದೇ, ನಿಧಾನಕ್ಕೆ ಲೈನ್ ಮಾಡಿ" ಎಂದು ರೂಪಾ ಮೇಡಂ ಹೇಳಿದರು. ಎಲ್ಲರೂ "ಹೋ..." ಎಂದು ಕೂಗುತ್ತ ಕೂಗುತ್ತ ಲೈನ್ ಮಾಡಲು ಜಿಗಿದು ಹೋದರು. ಮೇಡಂ ಬಹಳ ಜೋರಾಗಿ "DONT MAKE NOISE...." ಎಂದು ಕೂಗಿದಾಗ ಎಲ್ಲರೂ ನಿಃಶಬ್ದವಾದರು.

ಮಕ್ಕಳು ಕಂಪ್ಯೂಟರುಗಳನ್ನು ಆರಿಸದೇ ಹಾಗೇ ಹೋಗಿದ್ದರು. ಲ್ಯಾಬ್ ಅಸಿಸ್ಟೆಂಟ್ ಸುಬ್ರಹ್ಮಣ್ಯ ಅವರು "ಸರ್, ಮಕ್ಕಳಿಗೆ ಕಂಪ್ಯೂಟರ್ ಆಫ್ ಮಾಡೋದಕ್ಕೆ ಹೇಳಿ ಸರ್, ಹೋಗೋದಕ್ಕೆ ಮುಂಚೆ." ಎಂದರು. ನಾನೆಂದೆ "ಅದು ಅವರ ಸಿಲಬಸ್ ಅಲ್ಲಿ ಇಲ್ಲ, ಎರಡನೇ ತರಗತಿಯಲ್ಲಿ ಹೇಳಿಕೊಡುತ್ತೇವೆ, ಹೇಗೆ ಸ್ಟಾರ್ಟ್ ಮಾಡೋದು, ಹೇಗೆ ಶಟ್ ಡೌನ್ ಮಾಡೋದು ಅಂತ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ ಈಗ" ಎಂದೆ. ಸುಬ್ರಹ್ಮಣ್ಯ ಅವರು ಗೂಗಲ್ ಪುಟವನ್ನು ತೆರೆದಿಟ್ಟಿದ್ದ ಹುಡುಗನ ಕಂಪ್ಯೂಟರ್ ಕಡೆಗೆ ತಿರುಗಿ ಜೋರಾಗಿ ನಕ್ಕರು!

-ಅ
22.06.2010
8.25PM

8 comments:

 1. hehe.. nice.. :)
  Nanu computer mouse allaaDsiddu SSLC mugida mele kanappa.. :(

  ReplyDelete
 2. makkalu doddoriginta bega grasp maadtaare / kaleetaare!

  ReplyDelete
 3. [ವಿಕಾಸ್] ಮಸ್ಮಿ.

  [ವಿಜಯಾ] ಇಲ್ಲ. ಸುಳ್ಳು.

  [ಸುಶ್ರುತ] ತುಂಬಾ ಲೇಟ್ ಆಗಿ ಅಲ್ಲಾಡ್ಸಿದ್ದೀರ. ಮೌಸ್‍ನ.

  ReplyDelete
 4. ಅರುಣ್ ಸರ್........
  ಈಗಿನ ಮಕ್ಕಳು ಹುಟ್ಟುವ ಮುಂಚೆಯೇ ಬುದ್ಧಿವನ್ತರಾಗಿರುತ್ತಾರೆಯೇ? ಇದೆಲ್ಲಾ ಹೇಗೆ ತಿಳಿದವು? ಅಬ್ಬಬ್ಬ!
  ನಿಮಗೆ ತಿರುಗೇಟು ಕೊಟ್ಟಿತಲ್ಲ ಮಗು!
  ಹ್ಹ ಹ್ಹ ಹ್ಹಾ.....!ಚೆನ್ನಾಗಿದೆ.

  ReplyDelete
 5. ಹ್ಹ ಹ್ಹ ಹ್ಹ..ಈಗಿನ ಮಕ್ಕಳು ಹುಟ್ಟೋ ಮೊದಲೇ ಎಲ್ಲಾ ಕಲಿತುಕೊಂಡು ಬರ್ತಾವೆ.
  ನಿಮ್ಮವ,
  ರಾಘು.

  ReplyDelete
 6. thumba chennagide nimma anubava. LOL
  idu nanna modala beti. Chennagi barithira. Bartha iruthene.

  ReplyDelete
 7. [ಮನದಾಳದಿಂದ..] ಸಿಕ್ ಸಿಕ್ಕಾಪಟ್ಟೆ ಬುದ್ಧಿವಂತ್ರು ಸಾರ್...

  [ರಘು] ಪ್ರಹ್ಲಾದನ ಥರ!

  [ಚಂದ್ರು] ಧನ್ಯವಾದಗಳು ಸಾರ್.. :-)

  ReplyDelete