Monday, July 19, 2010

ವಿದಾಯ

ಅವನ ವೈಶಿಷ್ಟ್ಯವೇ ಅದು.

ಅಷ್ಟೇನೂ ಹತ್ತಿರದ ಗೆಳೆಯನೇನಲ್ಲವಾದರೂ ರಾತ್ರಿ ಹನ್ನೆರಡು ಗಂಟೆಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸುತ್ತಾನೆ. ಇದೇನಪ್ಪ, ಇವನು ಫೋನ್ ಮಾಡಿದ್ದಾನೆ ಎಂದು ಆಶ್ಚರ‍್ಯ ಪಡಲು ಅವಕಾಶವೂ ಕೊಡದೆ ತಾನೊಬ್ಬ ಅತಿ ಹತ್ತಿರದ ಸಂಬಂಧಿ ಎನ್ನುವಂತೆ ಮಾತನಾಡುತ್ತಾನೆ. ಮುಂದಿನ ವರ್ಷ ಫೋನೂ ಇಲ್ಲ, ಈಮೇಯ್ಲೂ ಇಲ್ಲ. ಎಲ್ಲೋ ನಾಪತ್ತೆ! ಮತ್ತೆ ಫ್ರೆಂಡ್‍ಶಿಪ್ ಡೇ-ಗೆ ಇದ್ದಕ್ಕಿದ್ದಂತೆ ಕರೆ ಮಾಡಿ "ನೀನು ಆವತ್ತು ಟ್ರೀಟ್ ಕೇಳಿದ್ದೆಯಲ್ಲ, ಬಾ ಕೊಡಿಸುತ್ತೇನೆ.." ಎನ್ನುತ್ತಾನೆ.

ಇಂಥದ್ದೊಂದು ದಿನ "ಸರಿ, ಆದರೆ ನಂಗೆ ಮಹಾಲಕ್ಷ್ಮಿ ಟಿಫನ್ ರೂಮಿನಲ್ಲೇ ಬೇಕು ಟ್ರೀಟು" ಎಂದಿದ್ದೆ. ಅವನೂ ಅದಕ್ಕೊಪ್ಪಿಕೊಂಡು ಅಲ್ಲಿಗೆ ಬರಲು ಹೇಳಿದ. ಅಲ್ಲಿಗೆ ಹೋದರೆ ಟ್ರೀಟಿಗೆ ಬೇರೆ ಯಾರೂ ಇಲ್ಲ. "ಅಲ್ಲಯ್ಯಾ, ಏನು ನಂಗೊಬ್ಬನಿಗೇ ಕೊಡಿಸುತ್ತೀಯಾ ಟ್ರೀಟು?" ಎಂದೆ. "ಇನ್ನೇನು ಊರೋರ್ನೆಲ್ಲಾ ಕರೀಲಾ?" ಎಂದ. ಅಲ್ಲಿ ಹೋಟೇಲಿನಲ್ಲಿ ಅವನು ಏನೂ ತೆಗೆದುಕೊಳ್ಳಲಿಲ್ಲ. "ನೀನು ದಡ್ಡ, ಮಹಾಲಕ್ಷ್ಮಿಗೆ ಬಂದು ದೋಸೆ ತಿನ್ನಲಿಲ್ಲ ಅಂದ್ರೆ... ಛೆ!" ಎಂದೆ. ನಾನೊಬ್ಬನೇ ಖಾಲಿ ದೋಸೆಯನ್ನು ಆರ್ಡರ್ ಮಾಡಿ ತರಿಸಿಕೊಂಡೆ. ಸುಮ್ಮನೆ ನಕ್ಕು ನನ್ನ ತಟ್ಟೆಯಿಂದ ಚಟ್ನಿಯನ್ನು ಒಂದು ಚಮಚದಲ್ಲಿ ತೆಗೆದುಕೊಂಡು ರುಚಿ ನೋಡಿದ. ಮಾಣಿಯನ್ನು ಕರೆದು ಒಂದು ಕಪ್ ಚಟ್ನಿ ತರಲು ಹೇಳಿ ಅದನ್ನು ಚಪ್ಪರಿಸಿದ! ನಂತರ ಡಿವಿಜಿ ರಸ್ತೆಯೆಲ್ಲಾ ಸುತ್ತಾಡಿ ಮನೆಗೆ ಹೋದ ಮೇಲೆ ತಿಂಗಳಾನುಗಟ್ಟಲೆ ಪತ್ತೆಯೇ ಇಲ್ಲ!

ಹೀಗೆ ಒಂದು ದಿನ ನನ್ನ ಬ್ಲಾಗಿನ ಯಾವುದೋ ಆರ್ಟಿಕಲ್ ಓದಿ "ಪದಗಳ ಆಯ್ಕೆಯೇ ಚೆನ್ನಾಗಿಲ್ಲ. ಅರ್ಥವೇ ಆಗೋ ಹಾಗಿಲ್ಲ." ಎಂದು ಬೈದಿದ್ದ. ಅದೇ ಲೇಖನಕ್ಕೆ ಉಳಿದವರು ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದ್ಯಾಕಪ್ಪ ಹೀಗೆ ಎಂದರೆ, "ಹೌದು, ನಾನು ಯಾವಾಗಲೂ ಕ್ರಿಟಿಕಲ್!" ಎಂದ. ಅದೇನಾಯಿತೋ ಏನೋ, ಸಂಜೆ ಫೋನ್ ಮಾಡಿ, "ಬೇಜಾರ್ ಮಾಡ್ಕೋಬೇಡ, ತಪ್ಪಾಯ್ತು" ಎಂದ. ಮತ್ತೆ ಕೆಲ ಕಾಲ ಮಾಯ!

ಇದ್ದಕ್ಕಿದ್ದಂತೆ ಒಂದು ಸಂಜೆ ಹನುಮಂತನಗರದ ಮಾರುತಿ ಸರ್ಕಲ್ ಮುಂದೆ ಪ್ರತ್ಯಕ್ಷ. ಮೂರು ಜನ ಗೆಳೆಯರೊಡನೆ. "ಬಾ, ಶಿವಾಸ್ ಅಲ್ಲಿ ಪಾನಿಪೂರಿ ತಿನ್ನೋಣ" ಎನ್ನುತ್ತಾನೆ. ನಂತರ ಅವನೇ "ಓಹ್, ನೀನು ಇದೆಲ್ಲಾ ತಿನ್ನಲ್ಲ ಅಲ್ವಾ? ಪಾಪ!" ಅಂತಾನೆ. ನಾನು ನಕ್ಕು, "ಎಲ್ಲೆಲ್ಲಿ ಪ್ರಯಾಣ?" ಎಂದಾಗ "ಈಗಷ್ಟೇ ಮಂಗಳ (ಹೋಟೆಲ್ - ಖಾಲಿ ದೋಸೆ) ಆಯ್ತು. ನೆಕ್ಸ್ಟು ಬೋಂಡ ತಿಂದ್ಕೊಂಡು ಪಕ್ಕದ ಅಂಗಡೀಲಿ ಎಳನೀರು, ಆಮೇಲೆ ಶಿವಾಸು (ಪಾನಿಪೂರಿ), ಅಲ್ಲಿಂದ ಗಣೇಶ (ಫ್ರೂಟ್ ಜ್ಯೂಸು). ಇವತ್ತು ಜಾಸ್ತಿ ಇಲ್ಲ. ಮನೆಗೆ ಹೋಗಿ ಊಟ ಬೇರೆ ಮಾಡಬೇಕು." ಎಂದು ಹೇಳಿ, "ನಿನಗೆ ಈ ಪುಣ್ಯ ಇಲ್ಲ ಬಿಡು. ಜೀವನದಲ್ಲಿ ಇದೆಲ್ಲಾ ಬೇಕು ಕಣೋ, ನಾಳೆ ಏನಾಗುತ್ತೋ ಯಾರಿಗ್ ಗೊತ್ತು!" ಎಂಬ ವೈರಾಗ್ಯದ (?) ಮಾತನ್ನೂ ಹೇಳುತ್ತಾನೆ. ನಾನು ಅವರುಗಳೊಡನೆ ಹೋಗುವುದಿಲ್ಲ.

ಹೀಗೇ ಒಮ್ಮೆ ಗುಂಪಿನಲ್ಲಿ ಸಿಕ್ಕಾಗ, ಅವರ ಸ್ನೇಹಿತರಿಗೆ ಮುಂದುವರೆಸಲು ಹೇಳಿ, ನಮ್ಮ ಮನೆಗೆ ಬಂದಿದ್ದ. ಅಮ್ಮನ ಪರಿಚಯ ಮಾಡಿಕೊಟ್ಟೆ. ಸಂಗೀತ ಜ್ಞಾನವಿದೆ ಎಂದ ತಕ್ಷಣ ಅಮ್ಮನಿಗೆ ಹತ್ತಿರವಾಗಿಬಿಟ್ಟ! ಅವನು ಹೊರಟ ಗಳಿಗೆಯಿಂದಲೂ ಆಗಾಗ್ಗೆ, "ಆವತ್ತು ಜುಬ್ಬಾ ಹಾಕ್ಕೊಂಡು ಬಂದಿದ್ನಲ್ಲ, ಅವನು ತುಂಬಾ ಒಳ್ಳೇ ಹುಡುಗ" ಎನ್ನುತ್ತಾರೆ. "ಹೊರಗೆ ಹೋಗಬೇಕು, ನನ್ನ ಸ್ನೇಹಿತರು ಯಾರಾದರೂ ಸಿಗುತ್ತಾರೆ" ಎಂದು ಹೇಳಿದರೆ ಅಮ್ಮ "ಅದೇ ಆವತ್ತು ಮನೇಗೆ ಜುಬ್ಬಾ ಹಾಕ್ಕೊಂಡು ಬಂದಿದ್ನಲ್ಲಾ, ಸಂಗೀತದ ಬಗ್ಗೆ ಮಾತನಾಡಿದ ಹುಡುಗಾನಾ?" ಎನ್ನುತ್ತಾರೆ.

ಈ ವರ್ಷದ ಅವನ ಹುಟ್ಟುಹಬ್ಬಕ್ಕೆ ವಿಷ್ ಮಾಡಲು ಫೋನು ಮಾಡಿದರೆ ಎತ್ತಲೇ ಇಲ್ಲ. ಎಸ್ಸೆಮ್ಮೆಸ್ಸು ಕಳಿಸಿದರೆ ಅದಕ್ಕೂ ಉತ್ತರವಿಲ್ಲ. ನಂತರ ಒಂದು ವಾರದ ನಂತರ "ಮೊಮ್ಮಗಳು" ಶ್ರೀಗೆ ಫೋನು ಮಾಡಿದಾಗ ಪಕ್ಕದಲ್ಲೇ ಇದ್ದ ಅವನು, "ಎಸ್ಸೆಮ್ಮೆಸ್ಸಿಗೆಲ್ಲಾ ರಿಪ್ಲೈ ಮಾಡುವುದಿಲ್ಲವಂತೆ ಅನ್ನು" ಎಂದಿದ್ದ! "ಹಾಗಾದರೆ ಕಾಗದ ಬರೀಬೇಕಾ?" ಎಂದು ಹಾಸ್ಯ ಮಾಡಿದ್ದೆ.

ಇನ್ನು ಮುಂದೆ ಇವು ಯಾವುವೂ ಆಗುವಂತಿಲ್ಲ. ಗೆಳೆಯ ಕರುಣ್‍ಗೆ ವಿದಾಯ ಹೇಳುವ ಸಮಯ ಬಂದಿದೆ. ಹೃದಯವನ್ನು ಗೆದ್ದಿದ್ದ. ಅದರೊಂದಿಗೆ ಇಷ್ಟೇ ಇಷ್ಟು ನೆನಪುಗಳನ್ನು - ಮರೆಯಲಾರದಂಥದ್ದನ್ನು ಉಳಿಸಿ ಹೋಗಿದ್ದಾನೆ. ಜೊತೆಗೆ ನೊಂದ ಹೃದಯದ ಕಣ್ಣೀರನ್ನು ಒರೆಸುವ ಜವಾಬ್ದಾರಿಯನ್ನೂ ಕೊಟ್ಟಿ ಹೋಗಿದ್ದಾನೆ. ಆದರೆ ಆ ಶಕ್ತಿಯನ್ನು ಮಾತ್ರ ಕೊಟ್ಟಿಲ್ಲ.

-ಅ
19.7.2010
3.30PM

3 comments:

 1. ನಿಮ್ಮಷ್ಟು ಚನ್ನಾಗಿ ನಾನು ಅವನನ್ನು ತಿಳಿದಿರಲಿಲ್ಲ. ಆದರೆ ನಮ್ಮಿಬ್ಬರ ಜೀವನಗಳು ಅಕ್ಕಪಕ್ಕದ ರೈಲುಪಥಗಳಂತೆ ಸಾಗಿಬಂದಿದ್ದುವು. ಇಬ್ಬರೂ ಓದಿದ್ದು ಅದೇ ಪ್ರಾಥಮಿಕ ಶಾಲೆ, ಅದೇ ಪ್ರೌಢ ಶಾಲೆ. ಪ್ರಾಥಮಿಕ ಶಾಲೆಯಲ್ಲಿ ಯಾವುದೋ ಒಂದು ರಾಷ್ಟ್ರೀಯ ದಿನದ (ಸ್ವಾತಂತ್ರ್ಯ, ಗಣರಾಜ್ಯ, ಹುತಾತ್ಮ ಇತ್ಯಾದಿ) ಸಮಾರಂಭದಲ್ಲಿ ವೃಂದಗಾನದಲ್ಲಿ ಇಬ್ಬರೂ ಪಕ್ಕವಾದ್ಯ ವಾದಕರಾಗಿ ಪಾಲ್ಗೊಂಡದ್ದು ನೆನಪಿದೆ. ಹೈಸ್ಕೂಲಿನಲ್ಲಿ ಅವರ ತಂದೆ ನನಗೆ ಪಾಠ ಮಾಡಿದ್ದರು. 'Agglutination' ಪದ ಅವರೇ ನನಗೆ ಪರಿಚಯಿಸಿದ್ದು.

  ನಂತರ, ಇಬ್ಬರೂ ನಮ್ಮ ತಾಂತ್ರಿಕ ವ್ಯಾಸಂಗದ ಸಮಯದಲ್ಲಿ mad-ads ತಂಡಗಳನ್ನು ಸೇರಿದ್ದೆವು. ಅವನನ್ನು ೨೦೦೮-ರ ಆಗಸ್ಟ್-ನಲ್ಲಿ ಭೇಟಿ ಮಾಡಿದ್ದೆ, ಅವರ ಮನೆಯಲ್ಲಿ. ಆಗ ತಾನೇ ಎಲ್ಲರೂ (ಈತ, ಸುಬ್ಬ, ಗೌತಮ್ ಮತ್ತು ಇನ್ನೊಬ್ಬ. ಆ ಇನ್ನೊಬ್ಬನ ಹೆಸರು ಮರೆತಿದೆ) ಸೇರಿ ಮನೆ ಮಾಡಿಕೊಂಡಿದ್ದರು. ಅದ್ಭುತವಾದ ವೆಜ್ ಬಿರಿಯಾನಿ ತಯಾರಿಸಿದ್ದರು, ಇವರೆಲ್ಲರೂ ಸೇರಿ. ನಿರ್ದಾಕ್ಷಿಣ್ಯವಾಗಿ ಅದನ್ನು ನಾನು ಸೇವಿಸಿದ್ದು ನೆನಪಿದೆ. ನಂತರ, ತುಸು ಹೊತ್ತು ಹರಟುತ್ತ ಕುಳಿತಾಗ, ನನ್ನ ಮತ್ತು ಸುಬ್ಬನ PJ ರಾಗಮಾಲಿಕೆಯೊಂದಿಗೆ ಶ್ರುತಿ ಸೇರಿಸಿ ಈತನೂ ನಕ್ಕು ನಗಿಸಿದ್ದು ನೆನಪಿದೆ.

  ನೆನಪಿದೆ. ಈಗ ಕೇವಲ ನೆನಪಾಗಿಯೇ ಉಳಿದುಬಿಟ್ಟ ಕರುಣ್. ಅವನ ಆಪ್ತಮಿತ್ರರಲ್ಲಿ ನಾನೊಬ್ಬ ಎಂದು ಸುಳ್ಳು ಹೇಳುವುದಿಲ್ಲ. ಆದರೂ ಈ ಅನಿರೀಕ್ಷಿತ, ಅನ್ಯಾಯದ ಅಗಲುವಿಕೆ ಬಹಳ ನೋಯಿಸಿದೆ. ನೋವನ್ನು ಸರಿಯಾದ ಪದಗಳಲ್ಲಿ ಸೆರೆಹಿಡಿದು ವ್ಯಕ್ತಪಡಿಸಿದ್ದೀರ, ಅರುಣ್.

  ReplyDelete
 2. ತುಂಬಾ ಬೇರೆ ತರಹದ ಮನುಷ್ಯ ಅಲ್ವ..
  ಸ್ನೇಹ ತುಂಬಾ ಅಮೂಲ್ಯ..ವಿದಾಯ ಹೇಳೋದು ಒಳ್ಳೇದಲ್ಲ..ನನ್ನ ಅನಿಸಿಕೆ.
  ಏನೆ ಅಗಲಿ ನಿಮ್ಮ ನೆನಪು ಮಾಡಿಕೊಳ್ತಾನಲ್ಲ ಪುಣ್ಯಾತ್ಮ...ಅಲ್ವೇ...?
  ನಿಮ್ಮವ,
  ರಾಘು .

  ReplyDelete
 3. [ರಘು] ನೆನಪು ಮಾಡಿಕೊಳ್ಳುವ ಹಾಗಿಲ್ಲ, ಅದಕ್ಕೇ ವಿದಾಯ ಹೇಳಿರುವುದು ರಘು ಅವರೇ..

  [ಅರ್ಜುನ] ಓಹ್, ನನಗೆ ಗೊತ್ತಿರಲಿಲ್ಲ, ನಿಮ್ಮ ಒಡನಾಟಗಳ ಬಗ್ಗೆ. ಹೌದು, ನಿಜಕ್ಕೂ ಬೇಸರದ ಸಂಗತಿ.

  ReplyDelete