Friday, September 24, 2010

ನಿನ್ನ ಕಣ್ಣುಗಳು

ನಿನ್ನೀ ಕಣ್ಣುಗಳನು ಹೊರೆತು
ನನಗಿನ್ನೇನಿದೆ ಜಗದಲ್ಲಿ?

ನೀ ಕಣ್ದೆರೆದರೆ ಅದೆ ಹಗಲು,
ನೀ ಕಣ್ಮುಚ್ಚಿದರದೆ ಇರುಳು.
ನನ್ನೀ ಉಳಿವಳಿವೆರಡೂ ಎಂದೂ
ಈ ಎರಡು ಚಣದಲಡಗಿಹುದು.

ಸಂತಸದಾ ತೊರೆ, ನಗು ಮುಖವು,
ಕನಸಿನ ಲೋಕವೆ ಕಟ್ಟಿಹೆನು -
ನಿನ್ನೀ ಕಣ್ಣುಗಳಾ ಹಾದಿಯಲಿ
ನನ್ನೀ ಉಳಿವಳಿವಡಗಿಹುದು.

ನಾಳೆಯ ಕನ್ನಡಿ, ತಿಳಿ ಬಿಂಬ,
ಕಂಗಳ ಹೊಳಪಲಿ ಬೆಳಗುತಿದೆ.
ಕಾಡಿಗೆಯಿಂದಲೆ ನಿಯತಿಯ ಬರೆದಿರೆ
ಬಾಳಿನ ತಾರೆಯು ಮಿನುಗುತಿದೆ.

ಮಜ್ರೂಹ್ ಸುಲ್ತಾನ್ಪುರಿಯವರಿಗೆ ವಂದನೆಗಳು.

-ಅ
24.09.2010
10PM

Wednesday, September 15, 2010

ಬೀದಿ ನಾಯಿಗಳ ಜೊತೆ..

"ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ನನ್ನ ಗಾಡಿಯನ್ನು ಅಟ್ಟಿಸಿಕೊಂಡು ಬಂದ ರಾಕ್ಷಸ ನಾಯಿಗಳರೆಡನ್ನೂ ಘೋರವಾಗಿ ಶಪಿಸಿದೆ. "ಇವತ್ತೇ ನನ್ನ ಈಮೇಯ್ಲ್ ಐಡಿಯನ್ನು (ಜೊತೆಗೆ ಎಲ್ಲೆಲ್ಲಿ "ಪರಿಸರಪ್ರೇಮ"ದ ಬಗ್ಗೆ ನಾನು ಬರೆದುಕೊಂಡಿದ್ದೇನೋ ಅದೆಲ್ಲವನ್ನೂ) ಬದಲಾಯಿಸಿಕೊಂಡು ಬಿಡುತ್ತೇನೆ - ಈ ಪರಿಸರಪ್ರೇಮವೆಲ್ಲ ಬರೀ ಸುಳ್ಳು." ಎಂದು ಭೀಷ್ಮಪ್ರತಿಜ್ಞೆ ಮಾಡಿ ಎಷ್ಟೋ ಹೊತ್ತಾದ ಮೇಲೆ ಕಾಲು ನಡುಕ ನಿಂತಿತು. ಆ ಕಾಲು ಆ ರಾಕ್ಷಸರ ಬಾಯನ್ನು ಹೊಗಬೇಕಾಗಿತ್ತು ನಾನು ಎಚ್ಚರ ತಪ್ಪಿದ್ದಿದ್ದರೆ! ಸಾಮಾನ್ಯವಾಗಿ ರಸ್ತೆಯಲ್ಲಿ ನಾನು ಹಾಗೆಲ್ಲ ಯಾರನ್ನೂ ಯಾವುದನ್ನೂ ಶಪಿಸುವುದಿಲ್ಲ - ಅಲ್ಲಲ್ಲಿ ಉಗುಳುವವರನ್ನು ಹೊರೆತು. ಆದರೆ ಈ ಸೈನೋಫೋಬಿಯಾ (ನಾಯಿಗಳ ಭಯ) ಹೀಗೆ ಶಾಪ ಹಾಕಿಸಿಬಿಟ್ಟಿತು.

ಬನಶಂಕರಿ ಸೆಕೆಂಡ್ ಸ್ಟೇಜಿನ ನಮ್ಮ ಮನೆಯ ಸುತ್ತ ಮುತ್ತ ಬರಿ ಪೊದೆಗಳು, ಗುಡ್ಡಗಳಿದ್ದವು. ಪಕ್ಕದಲ್ಲಿಯೇ ಪಾರ್ಥೇನಿಯಮ್ ಆವರಿಸಿಕೊಂಡ ಒಂದು ಕಾಲುದಾರಿಯು ಇತ್ತು. ನೇರ ತ್ಯಾಗರಾಜನಗರದ ಸಂದಿಯೊಂದಕ್ಕೆ ಹತ್ತಿರದ ದಾರಿ ಅದಾಗಿದ್ದರೂ, ಆ ಹಾದಿಯಲ್ಲಿ ಪಾರ್ಥೇನಿಯಮ್ ಕಾಡಿನಲ್ಲೇ ಸ್ಲಮ್ ಒಂದು ಮನೆ ಮಾಡಿಕೊಂಡಿದ್ದರಿಂದ ನಾವು ಬಳಸುದಾರಿಯನ್ನೇ ಹಿಡಿಯುತ್ತಿದ್ದೆವು. ಇನ್ನೂ ಸ್ಕೂಲು ಹುಡುಗನಾಗಿದ್ದರಿಂದ ಟಯರ್ ಓಡಿಸುವ ಹವ್ಯಾಸದೊಂದಿಗೆ ನನಗೆ ಲೇಬಲ್ ಬಾಜಿ ಕಟ್ಟಿ ಬಚ್ಚಾ ಆಡುವ ಹವ್ಯಾಸವೂ ಇತ್ತು. ಈ ಎರಡೂ ಹವ್ಯಾಸವೂ ಅದೊಂದು ದಿನ ಕೊನೆಯಾಗಲು ಆ ಸ್ಲಮ್ಮೇ ಕಾರಣವಾಗಿತ್ತು. ಲೇಬಲ್ ಕೊಂಡುಕೊಂಡು ಟಯರ್ ಓಡಿಸಿಕೊಂಡು ಆ ಸ್ಲಮ್ ಮುಂದಿನ ಕಾಲುದಾರಿಯಲ್ಲಿ ಬರುತ್ತಿದ್ದಾಗ ಅಟ್ಟಿಸಿಕೊಂಡು ಬಂದ ನಾಯಿ ಕಚ್ಚಲಿಲ್ಲವಾದರೂ ಗಾಬರಿಯಿಂದ ಓಡಿ ನಾನು ಬಿದ್ದಾಗ ಸೊಂಟದ ಮೇಲೆ ಆದ ಗಾಯದ ಗುರುತು ಈಗಲೂ ಉಳಿದುಬಿಟ್ಟಿದೆ. ಅಂದಿನಿಂದ ಕೆಲ ಕಾಲ ಸೈನೋಫೋಬಿಯಾ ನನ್ನನ್ನಾವರಿಸಿತ್ತು.

ಈ ಸೈನೋಫೋಬಿಯಾ ಹೆಚ್ಚು ಕಾಲ ಇರಲಿಲ್ಲ. ಶ್ರೀನಗರದ ಮನೆಯ ಪಕ್ಕದ ರಸ್ತೆಯಲ್ಲಿದ್ದ ಖತರ್ನಾಕ್ ನಾಯಿ ಜೋಡಿಯ ಸೈಕಾಲಜಿಯನ್ನು ಅದು ಹೇಗೋ ಅರ್ಥ ಮಾಡಿಕೊಂಡಿದ್ದೆ. ಸೈಕಲ್ ಮೇಲೆ ಹೋದೆನೆಂದರೆ ಮುಗಿಯಿತು, ತಮ್ಮ ಆಸ್ತಿ ಕಿತ್ತುಕೊಂಡವರಂತೆ ಕಾಲಿಗೆ ಬಾಯಿ ಹಾಕಲು ಬಂದು ಬಿಡುತ್ತಿದ್ದವು. ಹಾಗಾಗಿ ಅದರ ಹತ್ತಿರ ಬಂದೆನೆಂದರೆ ಸೈಕಲ್‍ನಿಂದ ಇಳಿದು ನಡೆದುಕೊಂಡು ಹೋದಾಗ ಸುಮ್ಮನಿರುತ್ತಿತ್ತು. ಚಲಿಸುವ ಪೆಡಲ್‍ಗಳೆಂದರೆ ಇವಕ್ಕೆ ದ್ವೇಷ. ಇವುಗಳ ಮೇಲೆ ನನಗೇನೂ ದ್ವೇಷವಿರಲಿಲ್ಲವಾದರೂ ಭೀತಿಯಿತ್ತು.

ನಾಯಿಗೆ ನೀಯತ್ತು ಎಂದು ಅದ್ಯಾರು ಹೇಳಿದರೋ ಅವರಿಗೆ ಬೀದಿ ನಾಯಿಗಳ ಅನುಭವವಿಲ್ಲವೆನಿಸುತ್ತೆ. ಸಾಕಿರುವ ನಾಯಿಯಾದರೋ ಬೇರೆ ವಿಧಿಯಿಲ್ಲದೆ ಮನೆಯ ಯಜಮಾನ ಹಾಕಿದ್ದನ್ನು ತಿಂದುಕೊಂಡಿರುತ್ತೆ. ಇಷ್ಟಕ್ಕೂ ಅವೇನೂ ಮನೆಯನ್ನು ಕಾಯಬೇಕೆಂದು ಸಂಕಲ್ಪ ಮಾಡಿರುವುದೇನಿಲ್ಲ. ತನ್ನ ಟೆರಿಟರಿಯೊಳಗೆ ಹೊಸಬರು (ವಿಶೇಷವಾಗಿ ಇತರ ನಾಯಿಗಳು) ಬರಬಾರದೆಂದು ತನ್ನನ್ನು ತಾನು ಕಾದುಕೊಂಡಿರುತ್ತೆ. ಸುಮ್ಮನೆ ಕವಿಗಳು ಕೋಗಿಲೆಯನ್ನು, ನವಿಲನ್ನು ಹೊಗಳುವಂತೆ ನಾಯಿಯನ್ನೂ ಸಹ ಅದಕ್ಕೆ ಇಲ್ಲದ ಗುಣಗಳನ್ನೆಲ್ಲಾ ಆರೋಪಿಸಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿದ್ದಾಗ ಒಂದು ಕೃತಘ್ನ ನಾಯಿಯ ಮೇಲೆ ಕಿಡಿ ಕಾರಿದ್ದೆ. ಮನೆಯ ಮುಂದೆ ಬಾಲ ಅಲ್ಲಾಡಿಸಿಕೊಂಡು ಬಂದಾಗಲೆಲ್ಲವೂ ಹುಳಿಯನ್ನ, ಮೊಸರನ್ನ, ಬ್ರೆಡ್ಡು - ಏನೇನು ಇದೆಯೋ ಎಲ್ಲವನ್ನೂ ಕೊಡುತ್ತಿದ್ದೆ. ಎಲ್ಲವೂ ಹಾವಿಗೆ ಹಾಲೆರದಂತೆ. ನನ್ನ ಉದ್ದೇಶವೂ ಸ್ವಾರ್ಥವಾದ್ದರಿಂದಲೋ ಏನೋ ನಾನು ಅದರ ಮನೆಯ ಮುಂದೆ ಹೋದಾಗ ತಪ್ಪದೆ ನನ್ನನ್ನು ಕಳ್ಳನಂತೆ ಅಟ್ಟಿಸಿಕೊಂಡು ಬರುತ್ತಿತ್ತು. ನಮ್ಮ ಮನೆಯ ಮುಂದೆ ಅದು ಬಂದಾಗ ಮಾತ್ರ ನನ್ನ ಸೇವಕನಂತೆ ಬಾಲ ಅಲ್ಲಾಡಿಸಿಕೊಂಡಿರುತ್ತಿತ್ತು.

ಈಗಿರುವ ಹನುಮಂತನಗರದ ಮನೆಯ ಬಳಿ ಇರುವ ನಾಲ್ಕು ಬೀದಿ ನಾಯಿಗಳಿಗೆ ಕರುಣೆಯೆಂಬುದೇ ಇಲ್ಲ. ಪಾಪ, ಸ್ಕೂಲು ಹುಡುಗನೊಬ್ಬ ಸೈಕಲ್‍ನಿಂದ ಧೊಪ್ಪನೆ ಕೆಳಗೆ ಬಿದ್ದ. ಮಲಗಿದ್ದ ಒಂದು ನಾಯಿಗೆ ನಿದ್ರಾಭಂಗವಾಯಿತೇನೊ, ಅಥವಾ ಕೆಟ್ಟ ಕನಸಾಯಿತೇನೊ, "ಭೌ" ಎಂದಿತು. ಮಿಕ್ಕ ನಾಯಿಗಳೂ ಸಹ ನಿದ್ದೆಗಣ್ಣಲ್ಲಿದ್ದಿದ್ದರಿಂದ ಪೂರ್ವಾಪರ ವಿಚಾರಿಸದೆ ಒಂದಾದ ಮೇಲೊಂದು "ಭೌ" ಎನ್ನಲು ಶುರು ಮಾಡಿದವು. ಇಲ್ಲವಾದರೂ ತಾವು ಯಾಕೆ ಬೊಗಳುತ್ತಿದ್ದೇವೆಂಬ ಅರಿವು ಅವಕ್ಕೇನಿರುವುದಿಲ್ಲ. ಬೊಗಳಲು ಅತ್ಯಂತ ಮುಖ್ಯ ಕಾರಣವೆಂದರೆ ತನ್ನ ಪಕ್ಕದಲ್ಲಿರುವ ನಾಯಿಯು ಬೊಗಳುತ್ತಿರುವುದು. ಹೀಗೆ ಭೌಗುಟ್ಟು ಆ ಬಿದ್ದ ಹುಡುಗನ ಮೇಲೆ ದಾಳಿ ಮಾಡಲು ಸಜ್ಜಾದವು. ಅವನು ಮೊದಲೇ ಮೈ ಕೈ ತರಚಿಕೊಂಡು ಕಣ್ಣು ತುಂಬಿಸಿಕೊಂಡಿದ್ದ. ಇನ್ನು ನಾಯಿಗಳೂ ತನ್ನ ಬಳಿ ಬಂದಾಗ ಏನೂ ತೋಚಲಿಲ್ಲ. ರಸ್ತೆಯಲ್ಲಿ ಬರುತ್ತಿದ್ದ ಒಂದಿಬ್ಬರು ನಾಯಿಗಳನ್ನು ಗದರಿಸಿ ಓಡಿಸಿದರು. ಬಡಪಾಯಿ ಹುಡುಗ ಬದುಕಿಕೊಂಡ.

ಬೀದಿ ನಾಯಿಗಳು ಚಿಕ್ಕ ಮಕ್ಕಳನ್ನು ಕೊಂದ ಸುದ್ದಿಗಳು ಈ ಎರಡು ಮೂರು ವರ್ಷಗಳಿಂದ ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡುತ್ತಲೇ ಇದ್ದೇವಷ್ಟೆ? ಕೊಲ್ಲುವಷ್ಟು ಕ್ರೂರವಾಗಬೇಕಾದರೆ ಆ ನಾಯಿಗಳ ಸ್ಥಿತಿ ಹೇಗಿರಬೇಕೆಂದು ಯೋಚಿಸಬೇಕಾಗುತ್ತೆ. ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದ "ವ್ಯಾನು"ಗಳು ಮೊದಲು ಅವುಗಳನ್ನು ಸಜೀವ ದಹನ ಮಾಡಿಬಿಡುತ್ತಿದ್ದರು. ಈಗ ಹಾಗೆ ಮಾಡದೆ ಅವುಗಳನ್ನು "ಸ್ಟರಿಲೈಜ಼್" ಮಾಡಿಬಿಡುತ್ತಾರೆ. ಹಾಗೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಕಿವಿಗೊಂದು "ಪಂಚ್" ಕೂಡ ಇರುತ್ತದೆ. ಹೀಗೆ ಇಷ್ಟವಿಲ್ಲದೇ ಸನ್ಯಾಸವನ್ನು ಹೇರಿಸಿಕೊಂಡ ನಾಯಿಗಳು ಮದಕ್ಕೆ ಬಂದಾಗ ಅವುಗಳಿಂದ ಏನೇನು ಅನಾಹುತಗಳಾಗುವುದೋ ಬಲ್ಲವರು ಯಾರು?

ಇದೇ ರೀತಿಯ ಅನಾಹುತಕ್ಕೆ ಶಾಲೆಗೆ ಹೊರಟಿದ್ದ ನಾನೂ ಸಿಲುಕಿಕೊಂಡೆನೇನೋ ಎಂದೆನಿಸಿತ್ತು ಮೊನ್ನೆ ಶಾಪ ಹಾಕಿದ ದಿನ. ಅಷ್ಟು ಎತ್ತರದ ನಾಯಿಗಳು. ರಾಕ್ಷಸಾಕಾರ! ರಾವಣ ಕುಂಭಕರ್ಣರಿಬ್ಬರೂ ಒಟ್ಟಿಗೇ ಅಟ್ಟಿಸಿಕೊಂಡು ಬಂದಂತಾಗಿ ಕಾಲು ನಡುಗಲು ಶುರುವಾಗಿ ಬೈಕಿನ ಬ್ರೇಕು ಎಲ್ಲಿದೆಯೋ ಅದೂ ಸಹ ತಿಳಿಯದಾಯಿತು. ಸಾಮಾನ್ಯವಾಗಿ ನಾಯಿ ಅಟ್ಟಿಸಿಕೊಂಡು ಬಂದರೆ ನಾನು ಗಾಡಿ ನಿಲ್ಲಿಸಿಬಿಡುತ್ತೇನೆ. ಕಚ್ಚಿದರೆ ಕಚ್ಚಿಕೊಳ್ಳಿ ಎಂದು. ಗಾಡಿ ನಿಲ್ಲಿಸದೇ ಇದ್ದು, ಒಂದು ವೇಳೆ ಅವುಗಳ ಗರಗಸದ ಬಾಯಿಗೆ ನನ್ನ ಕಾಲು ಸಿಕ್ಕು, ಪ್ಯಾಂಟು ಹರಿದು, ರಸ್ತೆಯಲ್ಲಿ ಬೀಳುವುದಕ್ಕಿಂತ ಗಾಡಿ ನಿಲ್ಲಿಸಿ, "ಬನ್ನಿ, ಕಚ್ಚಿ ಇಲ್ಲಿ" ಎಂದು ಆಹ್ವಾನಿಸುವುದೇ ಉತ್ತಮ ಎಂದು ನನ್ನ ಬಲವಾದ ನಂಬಿಕೆ. ಆದರೆ ಈ ಬಾರಿ ಮಾತ್ರ ನನ್ನ ನಂಬಿಕೆಯು ನನಗೆ ನೆನಪಾಗುವುದರೊಳಗೇ ನಡುಕ ಶುರುವಾಗಿಬಿಟ್ಟಿತು. ಗಾಡಿಯ ವೇಗವು ಹೆಚ್ಚಾಯಿತು. ಹೇಗೋ ಬದುಕಿಕೊಂಡೆಯೆನ್ನುವಷ್ಟರಲ್ಲಿ "ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ಶಪಿಸಿ, ಶಾಲೆಗೆ ಹೋಗಿ ಒಂದು ಬಾಟಲಿ ತಣ್ಣೀರು ಕುಡಿದು ಸುಧಾರಿಸಿಕೊಂಡೆ.

ಸಂಜೆ ಶಾಲೆ ಮುಗಿಸಿಕೊಂಡು ಆ ದಾರಿಯಲ್ಲಿ ಹೋಗುವುದೋ ಅಥವಾ ಬಳಸಾದರೂ ಪರವಾಗಿಲ್ಲ ಬೇರೆ ದಾರಿಯಲ್ಲಿ ಹೋಗಲೋ ಎಂದು ಯೋಚಿಸುತ್ತ, ಅಂತೂ ಧೈರ್ಯ ಮಾಡಿ, ಅದೇ ದಾರಿಯ ಕಡೆಗೆ ಬೈಕನ್ನು ತಿರುಗಿಸಿಬಿಟ್ಟೆ. ಸ್ವಲ್ಪ ದೂರದಲ್ಲೇ ರಸ್ತೆಯ ಎಡಬದಿಯಲ್ಲಿ ಒಂದು ಕರುಳುಗಳನ್ನು ಆಚೆ ಚೆಲ್ಲಿಕೊಂಡು ನಾಲಗೆಯನ್ನು ಹೊರಚಾಚಿಕೊಂಡು ಸತ್ತು ಬಿದ್ದಿತ್ತು. ಇನ್ನೊಂದು ರಸ್ತೆಯ ಬಲಬದಿಯಲ್ಲಿ ಅಪ್ಪಚ್ಚಿ ತಲೆಯಿಂದಾಚೆಗೆ ಕಣ್ಣು ಗುಡ್ಡೆಗಳೆರಡನ್ನೂ ಹೊರಕ್ಕೆ ಉಗುಳಿದಂತೆ ಸತ್ತು ಬಿದ್ದಿತ್ತು. ಎರಡು ಹೆಣಗಳ ಮುಖಗಳಲ್ಲೂ "ಗುರ್ರ್.." ಎಂಬ ಭಾವವು ಎದ್ದು ತೋರುತ್ತಿತ್ತು. ಶಾಪವು ಒಳ್ಳೆಯದಲ್ಲವೆಂದು ನನ್ನಂಥವನಿಗೆ ಯಾವಾಗ ಮನವರಿಕೆಯಾಗುವುದೋ ಏನೋ ಎಂದು ಬೇಸರವಾಯಿತು.

-ಅ
15.09.2010
8.15PM