Wednesday, September 15, 2010

ಬೀದಿ ನಾಯಿಗಳ ಜೊತೆ..

"ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ನನ್ನ ಗಾಡಿಯನ್ನು ಅಟ್ಟಿಸಿಕೊಂಡು ಬಂದ ರಾಕ್ಷಸ ನಾಯಿಗಳರೆಡನ್ನೂ ಘೋರವಾಗಿ ಶಪಿಸಿದೆ. "ಇವತ್ತೇ ನನ್ನ ಈಮೇಯ್ಲ್ ಐಡಿಯನ್ನು (ಜೊತೆಗೆ ಎಲ್ಲೆಲ್ಲಿ "ಪರಿಸರಪ್ರೇಮ"ದ ಬಗ್ಗೆ ನಾನು ಬರೆದುಕೊಂಡಿದ್ದೇನೋ ಅದೆಲ್ಲವನ್ನೂ) ಬದಲಾಯಿಸಿಕೊಂಡು ಬಿಡುತ್ತೇನೆ - ಈ ಪರಿಸರಪ್ರೇಮವೆಲ್ಲ ಬರೀ ಸುಳ್ಳು." ಎಂದು ಭೀಷ್ಮಪ್ರತಿಜ್ಞೆ ಮಾಡಿ ಎಷ್ಟೋ ಹೊತ್ತಾದ ಮೇಲೆ ಕಾಲು ನಡುಕ ನಿಂತಿತು. ಆ ಕಾಲು ಆ ರಾಕ್ಷಸರ ಬಾಯನ್ನು ಹೊಗಬೇಕಾಗಿತ್ತು ನಾನು ಎಚ್ಚರ ತಪ್ಪಿದ್ದಿದ್ದರೆ! ಸಾಮಾನ್ಯವಾಗಿ ರಸ್ತೆಯಲ್ಲಿ ನಾನು ಹಾಗೆಲ್ಲ ಯಾರನ್ನೂ ಯಾವುದನ್ನೂ ಶಪಿಸುವುದಿಲ್ಲ - ಅಲ್ಲಲ್ಲಿ ಉಗುಳುವವರನ್ನು ಹೊರೆತು. ಆದರೆ ಈ ಸೈನೋಫೋಬಿಯಾ (ನಾಯಿಗಳ ಭಯ) ಹೀಗೆ ಶಾಪ ಹಾಕಿಸಿಬಿಟ್ಟಿತು.

ಬನಶಂಕರಿ ಸೆಕೆಂಡ್ ಸ್ಟೇಜಿನ ನಮ್ಮ ಮನೆಯ ಸುತ್ತ ಮುತ್ತ ಬರಿ ಪೊದೆಗಳು, ಗುಡ್ಡಗಳಿದ್ದವು. ಪಕ್ಕದಲ್ಲಿಯೇ ಪಾರ್ಥೇನಿಯಮ್ ಆವರಿಸಿಕೊಂಡ ಒಂದು ಕಾಲುದಾರಿಯು ಇತ್ತು. ನೇರ ತ್ಯಾಗರಾಜನಗರದ ಸಂದಿಯೊಂದಕ್ಕೆ ಹತ್ತಿರದ ದಾರಿ ಅದಾಗಿದ್ದರೂ, ಆ ಹಾದಿಯಲ್ಲಿ ಪಾರ್ಥೇನಿಯಮ್ ಕಾಡಿನಲ್ಲೇ ಸ್ಲಮ್ ಒಂದು ಮನೆ ಮಾಡಿಕೊಂಡಿದ್ದರಿಂದ ನಾವು ಬಳಸುದಾರಿಯನ್ನೇ ಹಿಡಿಯುತ್ತಿದ್ದೆವು. ಇನ್ನೂ ಸ್ಕೂಲು ಹುಡುಗನಾಗಿದ್ದರಿಂದ ಟಯರ್ ಓಡಿಸುವ ಹವ್ಯಾಸದೊಂದಿಗೆ ನನಗೆ ಲೇಬಲ್ ಬಾಜಿ ಕಟ್ಟಿ ಬಚ್ಚಾ ಆಡುವ ಹವ್ಯಾಸವೂ ಇತ್ತು. ಈ ಎರಡೂ ಹವ್ಯಾಸವೂ ಅದೊಂದು ದಿನ ಕೊನೆಯಾಗಲು ಆ ಸ್ಲಮ್ಮೇ ಕಾರಣವಾಗಿತ್ತು. ಲೇಬಲ್ ಕೊಂಡುಕೊಂಡು ಟಯರ್ ಓಡಿಸಿಕೊಂಡು ಆ ಸ್ಲಮ್ ಮುಂದಿನ ಕಾಲುದಾರಿಯಲ್ಲಿ ಬರುತ್ತಿದ್ದಾಗ ಅಟ್ಟಿಸಿಕೊಂಡು ಬಂದ ನಾಯಿ ಕಚ್ಚಲಿಲ್ಲವಾದರೂ ಗಾಬರಿಯಿಂದ ಓಡಿ ನಾನು ಬಿದ್ದಾಗ ಸೊಂಟದ ಮೇಲೆ ಆದ ಗಾಯದ ಗುರುತು ಈಗಲೂ ಉಳಿದುಬಿಟ್ಟಿದೆ. ಅಂದಿನಿಂದ ಕೆಲ ಕಾಲ ಸೈನೋಫೋಬಿಯಾ ನನ್ನನ್ನಾವರಿಸಿತ್ತು.

ಈ ಸೈನೋಫೋಬಿಯಾ ಹೆಚ್ಚು ಕಾಲ ಇರಲಿಲ್ಲ. ಶ್ರೀನಗರದ ಮನೆಯ ಪಕ್ಕದ ರಸ್ತೆಯಲ್ಲಿದ್ದ ಖತರ್ನಾಕ್ ನಾಯಿ ಜೋಡಿಯ ಸೈಕಾಲಜಿಯನ್ನು ಅದು ಹೇಗೋ ಅರ್ಥ ಮಾಡಿಕೊಂಡಿದ್ದೆ. ಸೈಕಲ್ ಮೇಲೆ ಹೋದೆನೆಂದರೆ ಮುಗಿಯಿತು, ತಮ್ಮ ಆಸ್ತಿ ಕಿತ್ತುಕೊಂಡವರಂತೆ ಕಾಲಿಗೆ ಬಾಯಿ ಹಾಕಲು ಬಂದು ಬಿಡುತ್ತಿದ್ದವು. ಹಾಗಾಗಿ ಅದರ ಹತ್ತಿರ ಬಂದೆನೆಂದರೆ ಸೈಕಲ್‍ನಿಂದ ಇಳಿದು ನಡೆದುಕೊಂಡು ಹೋದಾಗ ಸುಮ್ಮನಿರುತ್ತಿತ್ತು. ಚಲಿಸುವ ಪೆಡಲ್‍ಗಳೆಂದರೆ ಇವಕ್ಕೆ ದ್ವೇಷ. ಇವುಗಳ ಮೇಲೆ ನನಗೇನೂ ದ್ವೇಷವಿರಲಿಲ್ಲವಾದರೂ ಭೀತಿಯಿತ್ತು.

ನಾಯಿಗೆ ನೀಯತ್ತು ಎಂದು ಅದ್ಯಾರು ಹೇಳಿದರೋ ಅವರಿಗೆ ಬೀದಿ ನಾಯಿಗಳ ಅನುಭವವಿಲ್ಲವೆನಿಸುತ್ತೆ. ಸಾಕಿರುವ ನಾಯಿಯಾದರೋ ಬೇರೆ ವಿಧಿಯಿಲ್ಲದೆ ಮನೆಯ ಯಜಮಾನ ಹಾಕಿದ್ದನ್ನು ತಿಂದುಕೊಂಡಿರುತ್ತೆ. ಇಷ್ಟಕ್ಕೂ ಅವೇನೂ ಮನೆಯನ್ನು ಕಾಯಬೇಕೆಂದು ಸಂಕಲ್ಪ ಮಾಡಿರುವುದೇನಿಲ್ಲ. ತನ್ನ ಟೆರಿಟರಿಯೊಳಗೆ ಹೊಸಬರು (ವಿಶೇಷವಾಗಿ ಇತರ ನಾಯಿಗಳು) ಬರಬಾರದೆಂದು ತನ್ನನ್ನು ತಾನು ಕಾದುಕೊಂಡಿರುತ್ತೆ. ಸುಮ್ಮನೆ ಕವಿಗಳು ಕೋಗಿಲೆಯನ್ನು, ನವಿಲನ್ನು ಹೊಗಳುವಂತೆ ನಾಯಿಯನ್ನೂ ಸಹ ಅದಕ್ಕೆ ಇಲ್ಲದ ಗುಣಗಳನ್ನೆಲ್ಲಾ ಆರೋಪಿಸಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿದ್ದಾಗ ಒಂದು ಕೃತಘ್ನ ನಾಯಿಯ ಮೇಲೆ ಕಿಡಿ ಕಾರಿದ್ದೆ. ಮನೆಯ ಮುಂದೆ ಬಾಲ ಅಲ್ಲಾಡಿಸಿಕೊಂಡು ಬಂದಾಗಲೆಲ್ಲವೂ ಹುಳಿಯನ್ನ, ಮೊಸರನ್ನ, ಬ್ರೆಡ್ಡು - ಏನೇನು ಇದೆಯೋ ಎಲ್ಲವನ್ನೂ ಕೊಡುತ್ತಿದ್ದೆ. ಎಲ್ಲವೂ ಹಾವಿಗೆ ಹಾಲೆರದಂತೆ. ನನ್ನ ಉದ್ದೇಶವೂ ಸ್ವಾರ್ಥವಾದ್ದರಿಂದಲೋ ಏನೋ ನಾನು ಅದರ ಮನೆಯ ಮುಂದೆ ಹೋದಾಗ ತಪ್ಪದೆ ನನ್ನನ್ನು ಕಳ್ಳನಂತೆ ಅಟ್ಟಿಸಿಕೊಂಡು ಬರುತ್ತಿತ್ತು. ನಮ್ಮ ಮನೆಯ ಮುಂದೆ ಅದು ಬಂದಾಗ ಮಾತ್ರ ನನ್ನ ಸೇವಕನಂತೆ ಬಾಲ ಅಲ್ಲಾಡಿಸಿಕೊಂಡಿರುತ್ತಿತ್ತು.

ಈಗಿರುವ ಹನುಮಂತನಗರದ ಮನೆಯ ಬಳಿ ಇರುವ ನಾಲ್ಕು ಬೀದಿ ನಾಯಿಗಳಿಗೆ ಕರುಣೆಯೆಂಬುದೇ ಇಲ್ಲ. ಪಾಪ, ಸ್ಕೂಲು ಹುಡುಗನೊಬ್ಬ ಸೈಕಲ್‍ನಿಂದ ಧೊಪ್ಪನೆ ಕೆಳಗೆ ಬಿದ್ದ. ಮಲಗಿದ್ದ ಒಂದು ನಾಯಿಗೆ ನಿದ್ರಾಭಂಗವಾಯಿತೇನೊ, ಅಥವಾ ಕೆಟ್ಟ ಕನಸಾಯಿತೇನೊ, "ಭೌ" ಎಂದಿತು. ಮಿಕ್ಕ ನಾಯಿಗಳೂ ಸಹ ನಿದ್ದೆಗಣ್ಣಲ್ಲಿದ್ದಿದ್ದರಿಂದ ಪೂರ್ವಾಪರ ವಿಚಾರಿಸದೆ ಒಂದಾದ ಮೇಲೊಂದು "ಭೌ" ಎನ್ನಲು ಶುರು ಮಾಡಿದವು. ಇಲ್ಲವಾದರೂ ತಾವು ಯಾಕೆ ಬೊಗಳುತ್ತಿದ್ದೇವೆಂಬ ಅರಿವು ಅವಕ್ಕೇನಿರುವುದಿಲ್ಲ. ಬೊಗಳಲು ಅತ್ಯಂತ ಮುಖ್ಯ ಕಾರಣವೆಂದರೆ ತನ್ನ ಪಕ್ಕದಲ್ಲಿರುವ ನಾಯಿಯು ಬೊಗಳುತ್ತಿರುವುದು. ಹೀಗೆ ಭೌಗುಟ್ಟು ಆ ಬಿದ್ದ ಹುಡುಗನ ಮೇಲೆ ದಾಳಿ ಮಾಡಲು ಸಜ್ಜಾದವು. ಅವನು ಮೊದಲೇ ಮೈ ಕೈ ತರಚಿಕೊಂಡು ಕಣ್ಣು ತುಂಬಿಸಿಕೊಂಡಿದ್ದ. ಇನ್ನು ನಾಯಿಗಳೂ ತನ್ನ ಬಳಿ ಬಂದಾಗ ಏನೂ ತೋಚಲಿಲ್ಲ. ರಸ್ತೆಯಲ್ಲಿ ಬರುತ್ತಿದ್ದ ಒಂದಿಬ್ಬರು ನಾಯಿಗಳನ್ನು ಗದರಿಸಿ ಓಡಿಸಿದರು. ಬಡಪಾಯಿ ಹುಡುಗ ಬದುಕಿಕೊಂಡ.

ಬೀದಿ ನಾಯಿಗಳು ಚಿಕ್ಕ ಮಕ್ಕಳನ್ನು ಕೊಂದ ಸುದ್ದಿಗಳು ಈ ಎರಡು ಮೂರು ವರ್ಷಗಳಿಂದ ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡುತ್ತಲೇ ಇದ್ದೇವಷ್ಟೆ? ಕೊಲ್ಲುವಷ್ಟು ಕ್ರೂರವಾಗಬೇಕಾದರೆ ಆ ನಾಯಿಗಳ ಸ್ಥಿತಿ ಹೇಗಿರಬೇಕೆಂದು ಯೋಚಿಸಬೇಕಾಗುತ್ತೆ. ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದ "ವ್ಯಾನು"ಗಳು ಮೊದಲು ಅವುಗಳನ್ನು ಸಜೀವ ದಹನ ಮಾಡಿಬಿಡುತ್ತಿದ್ದರು. ಈಗ ಹಾಗೆ ಮಾಡದೆ ಅವುಗಳನ್ನು "ಸ್ಟರಿಲೈಜ಼್" ಮಾಡಿಬಿಡುತ್ತಾರೆ. ಹಾಗೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಕಿವಿಗೊಂದು "ಪಂಚ್" ಕೂಡ ಇರುತ್ತದೆ. ಹೀಗೆ ಇಷ್ಟವಿಲ್ಲದೇ ಸನ್ಯಾಸವನ್ನು ಹೇರಿಸಿಕೊಂಡ ನಾಯಿಗಳು ಮದಕ್ಕೆ ಬಂದಾಗ ಅವುಗಳಿಂದ ಏನೇನು ಅನಾಹುತಗಳಾಗುವುದೋ ಬಲ್ಲವರು ಯಾರು?

ಇದೇ ರೀತಿಯ ಅನಾಹುತಕ್ಕೆ ಶಾಲೆಗೆ ಹೊರಟಿದ್ದ ನಾನೂ ಸಿಲುಕಿಕೊಂಡೆನೇನೋ ಎಂದೆನಿಸಿತ್ತು ಮೊನ್ನೆ ಶಾಪ ಹಾಕಿದ ದಿನ. ಅಷ್ಟು ಎತ್ತರದ ನಾಯಿಗಳು. ರಾಕ್ಷಸಾಕಾರ! ರಾವಣ ಕುಂಭಕರ್ಣರಿಬ್ಬರೂ ಒಟ್ಟಿಗೇ ಅಟ್ಟಿಸಿಕೊಂಡು ಬಂದಂತಾಗಿ ಕಾಲು ನಡುಗಲು ಶುರುವಾಗಿ ಬೈಕಿನ ಬ್ರೇಕು ಎಲ್ಲಿದೆಯೋ ಅದೂ ಸಹ ತಿಳಿಯದಾಯಿತು. ಸಾಮಾನ್ಯವಾಗಿ ನಾಯಿ ಅಟ್ಟಿಸಿಕೊಂಡು ಬಂದರೆ ನಾನು ಗಾಡಿ ನಿಲ್ಲಿಸಿಬಿಡುತ್ತೇನೆ. ಕಚ್ಚಿದರೆ ಕಚ್ಚಿಕೊಳ್ಳಿ ಎಂದು. ಗಾಡಿ ನಿಲ್ಲಿಸದೇ ಇದ್ದು, ಒಂದು ವೇಳೆ ಅವುಗಳ ಗರಗಸದ ಬಾಯಿಗೆ ನನ್ನ ಕಾಲು ಸಿಕ್ಕು, ಪ್ಯಾಂಟು ಹರಿದು, ರಸ್ತೆಯಲ್ಲಿ ಬೀಳುವುದಕ್ಕಿಂತ ಗಾಡಿ ನಿಲ್ಲಿಸಿ, "ಬನ್ನಿ, ಕಚ್ಚಿ ಇಲ್ಲಿ" ಎಂದು ಆಹ್ವಾನಿಸುವುದೇ ಉತ್ತಮ ಎಂದು ನನ್ನ ಬಲವಾದ ನಂಬಿಕೆ. ಆದರೆ ಈ ಬಾರಿ ಮಾತ್ರ ನನ್ನ ನಂಬಿಕೆಯು ನನಗೆ ನೆನಪಾಗುವುದರೊಳಗೇ ನಡುಕ ಶುರುವಾಗಿಬಿಟ್ಟಿತು. ಗಾಡಿಯ ವೇಗವು ಹೆಚ್ಚಾಯಿತು. ಹೇಗೋ ಬದುಕಿಕೊಂಡೆಯೆನ್ನುವಷ್ಟರಲ್ಲಿ "ಥೂ! ಇದರ ಮನೆ ಹಾಳಾಗ! ಸಾಯಲಿ ಎರಡೂ!!" ಎಂದು ಶಪಿಸಿ, ಶಾಲೆಗೆ ಹೋಗಿ ಒಂದು ಬಾಟಲಿ ತಣ್ಣೀರು ಕುಡಿದು ಸುಧಾರಿಸಿಕೊಂಡೆ.

ಸಂಜೆ ಶಾಲೆ ಮುಗಿಸಿಕೊಂಡು ಆ ದಾರಿಯಲ್ಲಿ ಹೋಗುವುದೋ ಅಥವಾ ಬಳಸಾದರೂ ಪರವಾಗಿಲ್ಲ ಬೇರೆ ದಾರಿಯಲ್ಲಿ ಹೋಗಲೋ ಎಂದು ಯೋಚಿಸುತ್ತ, ಅಂತೂ ಧೈರ್ಯ ಮಾಡಿ, ಅದೇ ದಾರಿಯ ಕಡೆಗೆ ಬೈಕನ್ನು ತಿರುಗಿಸಿಬಿಟ್ಟೆ. ಸ್ವಲ್ಪ ದೂರದಲ್ಲೇ ರಸ್ತೆಯ ಎಡಬದಿಯಲ್ಲಿ ಒಂದು ಕರುಳುಗಳನ್ನು ಆಚೆ ಚೆಲ್ಲಿಕೊಂಡು ನಾಲಗೆಯನ್ನು ಹೊರಚಾಚಿಕೊಂಡು ಸತ್ತು ಬಿದ್ದಿತ್ತು. ಇನ್ನೊಂದು ರಸ್ತೆಯ ಬಲಬದಿಯಲ್ಲಿ ಅಪ್ಪಚ್ಚಿ ತಲೆಯಿಂದಾಚೆಗೆ ಕಣ್ಣು ಗುಡ್ಡೆಗಳೆರಡನ್ನೂ ಹೊರಕ್ಕೆ ಉಗುಳಿದಂತೆ ಸತ್ತು ಬಿದ್ದಿತ್ತು. ಎರಡು ಹೆಣಗಳ ಮುಖಗಳಲ್ಲೂ "ಗುರ್ರ್.." ಎಂಬ ಭಾವವು ಎದ್ದು ತೋರುತ್ತಿತ್ತು. ಶಾಪವು ಒಳ್ಳೆಯದಲ್ಲವೆಂದು ನನ್ನಂಥವನಿಗೆ ಯಾವಾಗ ಮನವರಿಕೆಯಾಗುವುದೋ ಏನೋ ಎಂದು ಬೇಸರವಾಯಿತು.

-ಅ
15.09.2010
8.15PM

13 comments:

 1. "ಆ ಕಾಲು ಆ ರಾಕ್ಷಸರ ಬಾಯನ್ನು ಹೊಗಬೇಕಾಗಿತ್ತು " - ಹೀಗಂದ್ರೇನು?

  ReplyDelete
 2. ”ತಥಾಸ್ತು’ ಎನ್ನುವ ದೇವತೆಗಳಿರುತ್ತಾರಂತೆ, ಅದಕ್ಕೆ ಎಲ್ಲರಿಗೂ ಒಳ್ಳೆಯದನ್ನೆ ಹಾರೈಸಬೇಕು ಎಂದು ನನ್ನ ಅಜ್ಜ ಹೇಳ್ತಾ ಇದ್ದರು, ನಾವು ಚಿಕ್ಕವವರಿರುವಾಗ
  ಮಾಲತಿ ಎಸ್.

  ReplyDelete
 3. nice article..ಪ್ರಾಣಿಗಳ ಸಹಜ ನಡುವಳಿಕೆಗಳಿಗೆ ಇಲ್ಲದ ಅರ್ಥ ಕಲ್ಪಿಸಿ ಅವುಗಳನ್ನು ಹೊಗಳಿ ಅಟ್ಟಕ್ಕೇರಿಸುವುದು ಇಲ್ಲ ತೆಗಳಿ ಸಾಯಿಸುವುದು ಮಾನವನ ಕೆಟ್ಟ ಚಾಳಿಗಳಲ್ಲೊಂದು.

  ReplyDelete
 4. ಅರುಣ್ ನಿಮ್ಮ ಪ್ರಬಂಧ ಸೊಗಸಾಗಿದೆ. ನಾನೂ ಇರುವುದು ಇದೇ ಹನುಮಂತನಗರದಲ್ಲಿಯೇ
  ಪಾಪ ನಡೆಯುತ್ತ ಸಾಗುವ ನಮ್ಮಂತಹವರಿಗೆಅವು ರಿಯಾಯಿತಿ ತೋರಿಸುತ್ತವೆ..ಬಿಎಮ್ ಟಿಸಿಯಲ್ಲಿ
  ಪ್ರಯಾಣಿಸುವರಿಗಂತೂ ಗರಿಷ್ಠ ರಿಯಾಯಿತಿ ಯಾಕೆಂದರೆ ಸಮಾನ ಸು(ದುಃ)ಖಿಗಳ ಕಂಡರೆ ಅವುಗಳಿಗೆ
  ಅನುಕಂಪ

  ReplyDelete
 5. ಕಾಲಾಯ ತಸ್ಮೈ ನಮಃ :-)

  ReplyDelete
 6. This comment has been removed by the author.

  ReplyDelete
 7. ಬೆಂಗಳೂರ್ ಸೌತ್ ಒಂದ್ ರೌಂಡ್ ಹಾಕ್ಸಿದ್ದೂ ಅಲ್ಲದೆ ಇದನ್ನ ಓದಿ ಒಬ್ನೆ ಇದ್ದಕ್ಕಿದ್ದಂಗೆ ಗೊಳ್ ಅಂದು ಅಕ್ ಪಕ್ದೋರು ನನ್ನೇ ದುರದುರ ನೋಡೋ ಹಾಗೆ ಮಾಡಿದೀರ!
  "ಒಂದು ಕೃತಘ್ನ ನಾಯಿಯ ಮೇಲೆ ಕಿಡಿ ಕಾರಿದ್ದೆ. ಮನೆಯ ಮುಂದೆ ಬಾಲ ಅಲ್ಲಾಡಿಸಿಕೊಂಡು ಬಂದಾಗಲೆಲ್ಲವೂ ಹುಳಿಯನ್ನ, ಮೊಸರನ್ನ, ಬ್ರೆಡ್ಡು - ಏನೇನು ಇದೆಯೋ ಎಲ್ಲವನ್ನೂ ಕೊಡುತ್ತಿದ್ದೆ." - ಸೂಪರ್

  ಅಂದ್ರು ಬೀದಿ ನಾಯಿ ಕಂಡ್ರೆ ನನಗೂ ಮಹಾ ದ್ವೇಷ.
  ಒಂದು ಮುಂಡೇವಕ್ಕೆ ಟೈಮ್ ಸೆನ್ಸ್ ಅನ್ನೋದೆ ಇಲ್ಲ...ಮಿಡ್‍ನೈಟು, ಅರ್ಲಿ ಮಾರ್ನಿಂಗ್ ಒಂಭತ್ ಘಂಟೆ ಸಂಜೆ ಏಳೂವರೆ ಹಂಗೆ ಹೊತ್ತಲ್ಲದ ಹೊತ್ನಲ್ಲಿ ಹೊಡ್ಕೊಳುತ್ವೆ...ಸಾಲದ್ದಕ್ಕೆ ಒಂದ್ ಏಳೆಂಟ್ ನಾಯಿಗಳ್ನ ಸ್ಡೇರಿಸ್ಕೊಂಡು ಮೀಟಿಂಗು ಆರಾಧನೆ ಆರ್ಕೆಸ್ಟ್ರಾಗಳ್ ಬೇರೆ.
  ಸಂತಾನಹರಣ ಒಂದೇ ಅಲ್ಲ ಲಿಂಗ ಬೇಧಮಾಡದೆ ಭ್ರೂಣ ಹತ್ಯೆ ಕೂಡಾ ಮಾಡ್ಬೇಕೇನೋ ಇನ್ಮೇಲೆ :) (ಸುಮ್ನಂದೆ ಆಮೇಲೆ ಪೀಟಾ ಜೊತೆಗೆ ಮನೇಕಾ ಗಾಂಧಿ ಅಟ್ಟಾಡಿಸ್ಕೊಂಡ್ ಬಂದಾರು!)

  ನಾಯಿ ಸೈಕಾಲಜಿ ಸರೀಗೆ ಅಳೆದು ತೂಗಿದೀರ ಬಿಡಿ. ಗುರ್ರ್ ಅಂತ ಬಂದಾಗ ಥಟ್ ಅಂತ ಗಾಡಿ ನಿಲ್ಲಿಸಿಬಿಟ್ರೆ ಅದೇನೋ ಈಗೊ ಹರ್ಟ್ ಆದವಂಗೆ ಅವಾಕ್ಕಾಗಿ ನಿಂತ್ಕೊತಾವೆ. "ಈವಣ್ಣಂಗೆ ಭಯಾನೆ ಆಗ್ಲಿಲ್ವಲ್ಲ ಛೇ ಎಲ್ಲ ವೇಸ್ಟಾಯ್ತು ಥೂ" ಅಂತ...

  ಸಕತ್ ಮಜ ಬಂತು ಸಾರ್...ಅಂದ್ರು ಪಾಪ ಈ ಥರ ತ್ಯಾಗರಾಜನಗರದ ಟ್ರ್ಯಾಜಿಡಿ ಮಾಡೋದರ ಬದಲು ಕುಮಾರ್ಸಾಮಿ ಲೆವಿಟ್ ಕಾಮಿಡಿ ಮಾಡ್ಬೇಕಿತ್ತು ಎಂಡಿಂಗ್ನ ನೀವು.. :)

  ReplyDelete
 8. ಸ್ವಾಮೀ, ದಯವಿಟ್ಟು ನನಗೆ ಮಾತ್ರ ನೀವು ವರ ಕೊಡದೇ ಇದ್ದರೂ ಪರವಾಗಿಲ್ಲ, ಶಾಪಮಾತ್ರಾ ಹಾಕಬೇಡಿ :)

  ಒಳ್ಳೆ ಖುಷಿ ಕೊಡುವ ಲೇಖನ, ಸರಸವಾದ ಶೈಲಿ. ನಿಮಗೆ ಲಲಿತಪ್ರಬಂಧದ ಹದ ಸೊಗಸಾಗಿ ಕೈಹತ್ತಿದೆ.

  ReplyDelete
 9. [ಮಂಜುನಾಥ] ಹೆ ಹ್ಹೆ, ಹಾಕಲ್ಲಪ್ಪಾ ಇನ್ಮೇಲೆ ಯಾರ್ಗೂ ಶಾಪಾನ! :-) ನಿಮ್ಮ ಅಭಿನಂದನೆಗೆ ಧನ್ಯವಾದಗಳು..

  [ಸುಶೀಲ್] ಈಗ ನೀವಿರುವಲ್ಲಿಯೂ ಬೀದಿ ನಾಯಿಗಳ ಹಾವಳಿ ಇದೆಯೇ?


  [ಹರೀಶ್] :-)

  [ಉಮೇಶ್ ದೇಸಾಯಿ] ಹ ಹ್ಹ ಹ್ಹಾ - ಬಸ್ಸನ್ನೇ ಅಟ್ಟಿಸಿಕೊಂಡು ಹೋಗುತ್ತಿದ್ದ ನಾಯಿಯೊಂದನ್ನೂ ನೋಡಿದ್ದೇನೆ ನಾನು - ನಂದಿನಿ ಲೇಔಟಿನಲ್ಲಿ! ಬಸವನಗುಡಿ ಏರಿಯಾದ ನಾಯಿಗಳು ಅಷ್ಟೊಂದು ಅಶ್ವಾನೀಯವಲ್ಲ ಬಿಡಿ.

  [ಸುಮ] ಹೌದು ನೋಡಿ, ಇಲ್ಲ ಸಲ್ಲದ ಗುಣಗಳನ್ನೆಲ್ಲಾ ಹೇರಿಬಿಡ್ತಾರೆ!

  [ಮಾಲತಿ] ತಥಾಸ್ತು! :-)

  [ಸುಶ್ರುತ] ಥ್ಯಾಂಕ್ಸ್ ಕಣಪ್ಪ.

  [ವಿಜಯಾ] ಏನು?

  ReplyDelete
 10. [ವಿಕಾಸ್]

  ಹುಡುಕು ಪದ: ಹೊಗು
  ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

  ಹೊಗು ಕ್ರಿಯಾಪದ
  (<ದೇ. ಪೊಗು) ೧ ಒಳಸೇರು, ಪ್ರವೇಶಿಸು ೨ ಮುಟ್ಟು, ಸ್ಪರ್ಶಿಸು ೩ ಮೇಲೆಬೀಳು, ಆಕ್ರಮಿಸು
  ಹರಿದಾಸ ಸಾಹಿತ್ಯ ಕೋಶ

  ಹೊಗು -
  ಪ್ರವೇಶಿಸು

  ಉದಾಹರಣೆ:

  ತಬ್ಬಲಿಯು ನೀನಾದೆ ಮಗನೆ
  ಹೆಬ್ಬುಲಿಯ ಬಾಯನ್ನು ಹೊಗುವೆನು...
  (ಗೋವಿನ ಹಾಡು)

  ReplyDelete
 11. neev tumba vayyyy x-(
  nang eshtond sali "tind saayi" "kuDd saayi" antella andideera..... :-( :-( :-(
  ur veri badh meshtreee...... :-(

  nagu eno bantu article odidmele...
  aadruuuu...
  maryaadeyaagi vaapas togoLi nange bydid ella, illandre aa naayigaL aatma bandu nimna kacchi kacchi haakutte..... idu nan shaapa!!!

  ReplyDelete