Monday, December 5, 2011

ಭಾವಚಿತ್ರ

ಕಪ್ಪು ರೇಷಿಮೆ ಹೊದಿಕೆಯಂದದಿ 
ಉರುಳು ಹರಡಿರೆ ಬೆನ್ನಿಗೆ 
ಎಳೆಯು ಕಚಗುಳಿಯಿಡುತ ಕೊಡುತಿದೆ 
ನಲಿಯೆ ಮುತ್ತನು ಕೆನ್ನೆಗೆ. 

ನಗುವ ತುಟಿಗಳು ಬಿಗಿದು ಹೋಗಿವೆ 
ಎದೆಯ ದನಿಯನು ಅಡಗಿಸಿ 
ದನಿಯ ಮರೆಸುತ ಕಳೆಯ ಬಯಸಿದೆ 
ಪ್ರಿಯನ ತುಟಿಗಳ ಚುಂಬಿಸಿ. 

ಹೊಳೆವ ಚಂದಿರನನ್ನು ಮೀರಿಪ 
ಕಣ್ಣು ಕನಸನು ತೋರಿದೆ. 
ಅಲ್ಲೆ ತಾರೆಯ ಕಾಂತಿ ಪಸರಿಪ 
ಹಣೆಯ ಚುಕ್ಕಿಯು ಬೀರಿದೆ. 

ಹಿಮದಿ ಮಿಂದಿಹ ಮರದ ರೆಂಬೆಯು 
ಹೊಳೆವ ತೋಳ್ಗಳ ರೂಪದಿ. 
ಮುಳುಗಿಸಲು ತನ್ನಿನಿಯನಾತ್ಮವ 
ಮಿಡಿವ ವಕ್ಷದ ಕೂಪದಿ. 

-ಅ
12.04.2011 
1AM

Wednesday, November 16, 2011

ಆಶ್ರಯ

ಬಾಗಿಲು ಮುಚ್ಚಿದ ಗುಡಿಯಂಗಳದಲಿ
ಮಲಗಿದೆ ಬೀದಿಯ ನಾಯಿ.
ಮನೆಮನೆ ತಿರುತಿರುಗುತ ಬಳಲಿದೆಯೋ
ಮುಚ್ಚಿದೆ ತನ್ನಯ ಬಾಯಿ.

ಮಲಗಿದೆ ಹನುಮನ ಗುಡಿಯಂಗಳದಲಿ
ನಡುಗುತಲೇ ಚಳಿಯಲ್ಲಿ.
ಹನುಮನ ಕಾವರೆ ಕಲ್ಲಭಿಷೇಕವ
ಎರೆಯುವರಯ್ಯೋ ಇಲ್ಲಿ.

ಹೊತ್ತಿಗೆ ಹೊಟ್ಟೆಗೆ ಕೊಟ್ಟಿಹ ದೇವನು
ಮರೆತನು ಪ್ರೀತಿಯ ಕೈಯಿ.
ಅನ್ನವ ನೀಡುವರೆಲ್ಲರು "ಹಚ ಹಚ"
ಮುರಿವರು ಅಯ್ಯೋ ಮೈಯಿ.

ಪ್ರೀತಿಯ ಕೈಯದು - ನಾಯಿಯ ಸೋಕದು
ಸೋಕಿರೆ ಪೂಜೆಯೆ ಹಾಳು.
ಪೂಜೆಯ ಪಡೆಯುವ ದೇವನು ಮೌನದಿ
ಉದ್ಧರಿಸುತನಿಹ ಬಾಳು.

ನೋವನು ತಾಳದೆ, ಶಪಿಸದೆ, ಕುಪಿಸದೆ,
ಹೊರಟಿತು ಬೀದಿಯ ನಾಯಿ.
"ಅನ್ನವ ಕೊಟ್ಟವರಿವರನು ಪೊರೆ ನೀನ್"
ಎಂದಿತು ಮುಚ್ಚುತ ಬಾಯಿ.

-ಅ
15.11.2011
8.30PM

Thursday, September 8, 2011

ಚಾರಣದ ಬದುಕು

ಮರಗಿಡವೆಲ್ಲವು ಕನವರಿಸುತ್ತ
ಹಾಡಿನವೊಲು ಇದು ಗಾಳಿಯ ಸದ್ದೆ?
ಮುಗಿಲಿನ ದಿಂಬಿಗೆ ತಲೆಯನಿಡುತ್ತ
ಪರ್ವತಕೇನೀ ಇರುಳಲಿ ನಿದ್ದೆ?

ಮುಗಿಲೆಲ್ಲವು ಕಪ್ಪಾಗುತ ಕೂಡಿ
ನುಂಗಿವೆ ಚುಕ್ಕಿಗಳ ಸ್ವಾತಂತ್ರ್ಯ.
ಮಿಂಚಿನ ಪೌರೋಹಿತ್ಯದ ತಂತ್ರ,
ಗುಡುಗಿನ ರೂಪದಿ ಹೊರಟಿತು ಮಂತ್ರ.

ನೀರವದರಣ್ಯ ಮೀರಿರೆ ಮೇರೆ
ಎಚ್ಚರಗೊಳಿಸಿತು ವರ್ಷದ ಸೊಲ್ಲು.
ಹನಿ ತಾನ್ ತೊರೆಯಾಗುತೆ ಇಳಿಜಾರೆ
ಸಲಿಲತರಂಗವ ಮೀಟಿತು ಕಲ್ಲು.

ಹೆಜ್ಜೆಯ ನೆಲಸ್ಪರ್ಶಕೆ ಕಾಯುತ್ತ
ಜಿಗಣೆಗಳೋ ಹೀರಿವೆ ಮೈರಕ್ತ.
ಪುಷ್ಪದ ಗಿರಿ ಕೋಮಲತೆಯ ಚಿತ್ತ
ಪಡೆಯುವುದೇ ಇಹ ಜೀವನ್ಮುಕ್ತ.

ಬೆಳೆಬೆಳೆಯುತ್ತಲಿದೆ ಮಳೆಯ ದರ್ಪ;
ಅಧಿಕಾರದೊಳೇ ಮೆರೆದಿದೆ ಇಲ್ಲಿ.
ಹೆಡೆಯೆತ್ತಿದೆ ಕಗ್ಗತ್ತಲ ಸರ್ಪ,
ಮಿಂಚಿನವೊಲು ಕಿರು ಬೆಳಕನು ಚೆಲ್ಲಿ.

ನಡೆನಡೆವುದೆ ಬದುಕಿನ ಸನ್ಮಾರ್ಗ,
ಸೃಷ್ಟಿಯೊಳೆಲ್ಲವು ಸುಂದರ ಸ್ವರ್ಗ.
ಹಗಲೇನಿರುಳೇನೀ ಚಾರಣದಿ?
ಸೌಂದರ್ಯವೆ ಎಲ್ಲವು ಈ ಬನದಿ.

-ಅ
23.11.2010
9 AM

Saturday, August 27, 2011

ಯೆಡಿಯೂರು ಕೆರೆ

ಸಜ್ಜಾಗುತ್ತಿದೆ ಗಣೇಶೋತ್ಸವಕ್ಕೆ.
ಎತ್ತೆತ್ತೆತ್ತರದ,
ವರ್ಣರಂಜಿತ,
ವಿವಿಧ ಭಂಗಿಯ
ಗಣಾಧಿಪನ ಸಂಚಯನಕ್ಕೆ - ಅಲ್ಲಲ್ಲ,
ವಿಸರ್ಜನೆಗೆ.

ಊರುದ್ದಕ್ಕೂ ಮೈ ಚೆಲ್ಲಿ,
ಬಿಸಿಲಲ್ಲಿ ತನ್ನ ಮೈ ಒಣಗಿಸಿಕೊಂಡಿದ್ದಾಗ
ಊರಿಗೆ ಊರೇ ತಂಪು.
ವಿಶಾಲ ಹೃದಯಿ, ತನ್ನೆದೆಯ ಮೇಲೆ ಬಂದು ನಿಂತ
ಸೌಧಗಳ ಪೊರೆಯುತ್ತಿದೆ - ದೇವರಂತೆ.

ಪೊರೆಯುವುದೇ ದೇವರ ಗುಣ.
ದೇಶದೇಶ ದಾಟಿ ಹಾರಿ ಬರುವ ಹೂಗಳೋ,
ಅಲ್ಲೆ ಭವಿಸಿ ಅದನೆ ನುಂಗುವ ಕಳೆಗಳೋ,
ಪೊರೆಯುವುದೇ ದೇವರ ಗುಣ.
ಅದಕ್ಕೇ ನಿತ್ಯ ಮುಂಜಾನೆ ಭಕ್ತಾದಿಗಳ
ಪ್ರದಕ್ಷಿಣೆ.

ಸಜ್ಜಾಗುತ್ತಿದೆ ಗಣೇಶ ವಿಷ ನೈವೇದ್ಯಕ್ಕೆ.
ಯಾವ ಅಮೃತವ ಕೊಡಲು?

-ಅ
27.08.2011
9PM

Wednesday, August 17, 2011

ಎಂದೋ ಸತ್ತ ದೇಹ

ಎಂದೊ ಸತ್ತ
ದೇಹ ಹೊತ್ತ
ನೆಲಕೆ ತೂಕ ಹೆಚ್ಚೆ
ತನ್ನ ತುತ್ತ
ವಿಷದ ಕುತ್ತ-
ನೆಂತು ತಾನೆ ಮೆಚ್ಚೆ?

ನಡೆವ ಹೆಣವೊ
ನುಡಿವ ಮೃಣವೊ
ಅಂತು ಉಳಿಯೆ ಇನ್ನು,
ಕಳೆದ ಚಣವೊ
ಮನದಿ ಭಣವೊ
ಮಣ್ಣ ಹೊಕ್ಕ ಹೊನ್ನು.

ಬರಡಿನಕ್ಷಿ
ಸ್ವಯಂಸಾಕ್ಷಿ
ದುಗುಡದನಲ ಮಳೆಗೆ;
ಧುಮುಕೆ ಪಕ್ಷಿ -
ಗಗನದಕ್ಷಿ
ರೆಕ್ಕೆ ಮುರಿಯುತಿಳೆಗೆ.

ಎಂದೊ ಸತ್ತ
ದೇಹಕೆತ್ತ
ಪಯಣವಹುದೊ ಬಿದಿಯು?
ಸತ್ತ ಚಿತ್ತ
ಬದುಕಿಸುತ್ತ
ಕಡಲಿನೆಡೆಗೆ ನದಿಯು!

- ಅ
01.04.2011
12AM

Tuesday, August 2, 2011

ಜೆನೆರಲ್ ನಾಲೆಡ್ಜ್ ತರಗತಿ ಮತ್ತು ದೂರದರ್ಶನ

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಮಾನ್ಯ ಜ್ಞಾನ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ತರಗತಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಚರ್ಚೆಯಲ್ಲಿ ಹೇಳುವ ವಿಷಯಗಳು, ಕೊಡುವ ಉತ್ತರಗಳು, ಒದಗಿಸುವ ಮಾಹಿತಿಗಳು ಹುಬ್ಬೇರಿಸುವಂತಿರುತ್ತದೆ. ಇವತ್ತು ಅಂಥದ್ದೇ ಒಂದು ಲಾಘವವನ್ನು ತರಗತಿಯಲ್ಲಿ ನಾನೂ, ನನ್ನ ಪುಟ್ಟ ಮಕ್ಕಳೂ ಅನುಭವಿಸಿದೆವು. ಇದು ನಡೆದುದು ಐದನೇ ತರಗತಿಯಲ್ಲಿ. ಹಾಗಾಗಿ ಇದು ಸಂಪೂರ್ಣ ಬಾಲಿಷವೇ! :-)

ಪಾಠವಿದ್ದುದು ಶ್ರೀ ಎನ್.ಆರ್. ನಾರಾಯಣ ಮೂರ್ತಿಗಳ ಬಗ್ಗೆ. ಮಕ್ಕಳೆಲ್ಲರೂ ತಮಗೆ ಆಗತಾನೆ ಸರಬರಾಜಾದ ’ಹಿಂದೂ’ ದಿನಪತ್ರಿಕೆಯನ್ನು ಮೇಜಿನ ಮೇಲೆಯೇ ಇಟ್ಟುಕೊಂಡಿದ್ದರಾದ್ದರಿಂದ ನಾನು ಪೀಠಿಕೆಗಾಗಿ "ಈ ಪೇಪರ್ ನೋಡಿ, ಇದರಲ್ಲಿ ಸಾಮಾನ್ಯವಾಗಿ ವಾಣಿಜ್ಯದ ಭಾಗದಲ್ಲಿ ಇವರ ಫೋಟೋ ಇದ್ದೇ ಇರುತ್ತೆ. ನ್ಯೂಸಿನಲ್ಲಿ ಇದ್ದೇ ಇರುತ್ತಾರೆ" ಎಂದು ಹೇಳಿದೆ. "ಟೀವಿಯಲ್ಲಿಯೂ ಸಹ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ, ನಿಮ್ಮ ಮನೆಯಲ್ಲಿ ಸಿ.ಎನ್.ಬಿ.ಸಿ ಛಾನೆಲ್ಲೋ, ಬಿ.ಬಿ.ಸಿ. ಛಾನೆಲ್ಲೋ ಹಾಕಿಕೊಂಡು ನೋಡಿ, ಇವರನ್ನು ನೋಡಬಹುದು" ಎಂದು ಪುಸ್ತಕದಲ್ಲಿ ಕೊಟ್ಟಿದ್ದ ಒಂದೇ ಒಂದು ಚಿತ್ರವನ್ನು ತೋರಿಸಿದೆ.

"ಸರ್, ನಮ್ಮ ಮನೇಲಿ ನೋಡಲ್ಲ ಅದೆಲ್ಲ" ಎಂದು ಒಬ್ಬ ಹುಡುಗ ಹೇಳಿದ. ಇನ್ನೊಬ್ಬ "ನಾವು ಕಾರ್ಟೂನು ಬಿಟ್ಟು ಬೇರೆ ಏನೂ ನೋಡಲ್ಲ ಸರ್" ಎಂದು ಪ್ರಾಮಾಣಿಕವಾಗಿ ಹೇಳಿದ. ತರಗತಿಯಲ್ಲಿ ಜಗಳವೇ ಶುರು ಆಗಿಹೋಯಿತು. ಶ್ರೀ ನಾರಾಯಣ ಮೂರ್ತಿಯವರ ಬಗೆಗಿನ ಪಾಠವು ಯಾವ ಛಾನೆಲ್ಲು ನೋಡುತ್ತೇವೆ ಎನ್ನುವುದರತ್ತ ತಿರುಗಿಬಿಟ್ಟಿತ್ತು! ಮೂವತ್ತೈದು ಮಕ್ಕಳನ್ನೂ ಸುಧಾರಿಸಲು ಸಾಕಾಗಿ ಹೋಯಿತು ನನಗೆ. "ನೀನೇ ಕಾರ್ಟೂನು ನೋಡೋದು, ಅದಕ್ಕೇ ಇನ್ನೂ ಚಿಕ್ಕ ಮಗು ಥರ" ಎಂದು ’ನೇರ, ದಿಟ್ಟ, ನಿರಂತರ’ ಎಂಬ ಧಾಟಿಯಲ್ಲಿ ಒಬ್ಬ ಹುಡುಗಿಯು ಅವನನ್ನುದ್ದೇಶಿಸಿ ಹೇಳಿದ್ದೇ ಈ ಗಲಾಟೆಗೆ ಕಾರಣ. ಆದರೂ, ಪರಿಸ್ಥಿತಿಯನ್ನು ಸುಧಾರಿಸಿದ್ದು ನನ್ನ ಸಾಹಸವೇ ಸರಿ.

ಸುಧಾರಿಸುತ್ತಲೇ ಹಿಂದಿನ ಬೆಂಚಿನ ಒಬ್ಬ ಹುಡುಗ ಎದ್ದು ನಿಂತು "ಸರ್, ನಮ್ಮ ಮನೆಯಲ್ಲಿ ಬರೀ ಕನ್ನಡ ಛಾನೆಲ್ ನೋಡುತ್ತೇವೆ" ಎಂದ. ನಾನು ಹೇಗಾದರೂ ಮಾಡಿ, ಛಾನೆಲ್ಲುಗಳಿಂದ ಶ್ರೀ ನಾರಾಯಣ ಮೂರ್ತಿಯ ಪಾಠಕ್ಕೆ ಹಿಂದಿರುಗಬೇಕೆಂದು, "ಕನ್ನಡ ಛಾನೆಲ್ಲುಗಳಲ್ಲಿ ಮುರ್ತಿಯವರು ಕಾಣುವುದಿಲ್ಲ, ಯೆಡಿಯೂರಪ್ಪ ಮಾತ್ರ ಕಾಣಿಸುತ್ತಾರೆ" ಎಂದು ಹೇಳಿದ್ದಕ್ಕೆ ತರಗತಿಯಲ್ಲಿದ್ದ ಗಲಾಟೆಯು ನಗುವಿಗೆ ಬದಲಾಯಿತು. ಆ ಹಿಂದಿನ ಬೆಂಚಿನ ಹುಡುಗ ಹೇಳಿದ ಇನ್ನೊಂದು ಮಾತಿಗೆ ನನಗೇ ನಗು ತಡೆಯಲು ಸಾಧ್ಯವಾಗಲಿಲ್ಲ. "ಸರ್, ದೂರದರ್ಶನ ಹಾಕಿಕೊಳ್ಳುತ್ತಾರೆ ನಮ್ಮ ಮನೆಯಲ್ಲಿ, ಬರೀ ಕೋಟೆ ಬರುತ್ತೆ ಅದರಲ್ಲಿ."

ಅಲ್ಲಿಗೆ ಇಂದಿನ ಜೆನೆರಲ್ ನಾಲೆಡ್ಜ್ ತರಗತಿ ನಗುವಿನೊಂದಿಗೆ ಮುಗಿಯಿತು.

-ಅ
02.08.2011
10.40PM

Wednesday, July 27, 2011

ಬೆಂಗಳೂರು ಮತ್ತು ಸ್ವರ್ಗ

ಸ್ವರ್ಗವಲ್ಲಿ, ನಾನು ಇಲ್ಲಿ
ಈ ಬೆಂಗಳೂರಿನಲ್ಲಿ.

ಗುಡ್ಡದಡಿಯ ಶಾಲೆಯನ್ನು
ಶಾಲೆಯೆದುರ ತೋಟವನ್ನು
ಸುತ್ತಲೆಲ್ಲ ಮರಗಳನ್ನು
ಇಲ್ಲಿ ಹೇಗೆ ಕಾಣಲಿ?
ಬದಿಯೊಳದ್ರಿ ಮೇರುತಿಯನು
ಅದ್ರಿ ಮೈಯ್ಯ ಬಣ್ಣವನ್ನು
ಮತ್ತೆ ಮಣ್ಣ ಗಂಧವನ್ನು
ಎಲ್ಲಿ ತಾನೆ ನೋಡಲಿ?

ಚೆಲುವ ಸುಖದ ಶಿಖರವನ್ನು
ಉದ್ಧರಿಸುವ ಶಾಂತಿಯನ್ನು
ಅಲ್ಲೆ ಇರುವ ಸ್ವರ್ಗವನ್ನು
ಇಲ್ಲಿ ಹೇಗೆ ಕರೆಯಲಿ?
ಬಸರಿಕಟ್ಟೆ ಬೀದಿಯನ್ನು
ರುಚಿಸುರುಚಿಯ ಕಾಫಿಯನ್ನು
ಅವಳ ಜೊತೆಗೆ ಸವಿವುದನ್ನು
ಇಲ್ಲಿ ಹೇಗೆ ಪಡೆಯಲಿ?

ಸ್ವರ್ಗವಲ್ಲಿ, ನಾನು ಇಲ್ಲಿ
ಈ ಬೆಂಗಳೂರಿನಲ್ಲಿ.

-ಅ
24.07.2011
8.15PM

Sunday, July 24, 2011

ಕಾಗೆಯಿಂದ

ಮಿತ್ರ ಶ್ರೀ ರಾಘವನ್ ಅವರು ಮೊನ್ನೆ ತಮ್ಮ ಉಪನ್ಯಾಸದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಗುಂಡೂರಾಯರ ಜೀವನದ ಘಟನೆಯೊಂದನ್ನು ಉದಾಹರಿಸಿದರು. ಅದೇ ರೀತಿಯ ಅನುಭವವು ನನಗೆ, ನನ್ನಂತೆ ಅನೇಕರಿಗೆ ಆಗುತ್ತಲೇ ಇರುತ್ತೆ. ಕಣ್ಣುಪಟ್ಟಿ ಕಟ್ಟಿಕೊಂಡು ಆಚರಣೆ ಮಾಡುವವರಿಗೆ ಈ ಅನುಭವವಾಗುವುದಿಲ್ಲ. ಚಿಂತನೆ ಮಾಡುವವರಿಗೆ ಖಂಡಿತ ಸೊಗಸಾದ ಅನುಭವಗಳಾಗುತ್ತವೆ.

ಶ್ರೀ ಗುಂಡೂರಾಯರ ಕಥೆಗೆ ಬರೋಣ. ಅವರ ಸ್ನೇಹಿತನ ತಂದೆಯು ತೀರಿಕೊಂಡಿದ್ದರಂತೆ. ಶವಸಂಸ್ಕಾರಕ್ಕೆ ಸ್ನೇಹಿತನೊಡನೆ ಇವರು ಹೋಗಬೇಕೋ ಬೇಡವೋ ಎಂಬ ಧರ್ಮಸಂಕಟ ಇವರಿಗೆ. ಯಾಕೆಂದರೆ ತಂದೆಯು ಬದುಕಿರುವಾಗ ಸ್ಮಶಾನಕ್ಕೆ ಹೋಗಲು ಸಾಧ್ಯವೇ? ಹೋದರೆ ತಂದೆಯು ಸತ್ತು ಹೋಗುವುದಿಲ್ಲವೇ? ಈ ರೀತಿಯ ನಂಬಿಕೆಯ ಹೊಂದಿದ ಮತದವರು ಶ್ರೀ ಗುಂಡೂರಾಯರು. ಸ್ನೇಹಿತನ ಪಕ್ಷ ವಹಿಸಿದ ಗುಂಡೂರಾಯರು ಶವಸಂಸ್ಕಾರಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ದಿಗಿಲಾಗಿದ್ದರಂತೆ. ಸುತ್ತಲೂ ಜನ ನೆರೆದಿದ್ದು, ಅವರೆಲ್ಲರೂ ಶೋಕತಪ್ತರಾಗಿದ್ದೂ, ತಂದೆಯ ಶವವನ್ನು ಬಿಳಿ ಹೊದಿಕೆಯೊಂದಿಗೆ ಹೊದಿಸಿ ಮನೆಯ ಮುಂದೆ ಮಲಗಿಸಿರುವ ಕಲ್ಪನೆಯನ್ನು ಹೊತ್ತು ಮನೆಗೆ ನಿಧಾನಕ್ಕೆ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಬಂದರಂತೆ. ಯಾರೂ ಜನರಿಲ್ಲದೆ ಇದ್ದುದರಿಂದ ನಿಧಾನವಾಗಿ ಕಿಟಕಿಯಿಂದ ಮನೆಯೊಳಗೆ ನೋಡಿದರಂತೆ. ಅವರ ತಂದೆ ಈಜ಼ಿ ಛೇರಿನ ಮೇಲೆ ಕುಳಿತು ಪೇಪರ್ ಓದುತ್ತಿದ್ದರಂತೆ. "ಬದುಕೇ ಇದ್ದಾನಲ್ಲ ನಮ್ಮಪ್ಪ!" ಎಂದು ನಿರಾಶೆ ಪಟ್ಟರಂತೆ!!

ಗ್ರಹಣ ಬಂದಾಗಲೆಲ್ಲವೂ ದೇವಸ್ಥಾನಗಳ ಮುಂದೆ ಕಾಣಿಸುವ ಬ್ಯಾನರುಗಳಿಗೆ ಮೋಸ ಹೋಗುವವರು ಅದೆಷ್ಟು ಜನರಿದ್ದಾರೋ. ವಾಸ್ತವವಾಗಿ ನಾನು ಇವತ್ತು ಬದುಕುಳಿದಿರುವುದೇ ಗ್ರಹಣ ಶಾಂತಿ ಮಾಡಿಸಿರುವುದರಿಂದಲೇ ಎಂದು ಅದೆಷ್ಟು ಜನ ನಂಬಿಲ್ಲ? ಹಿಂದೆ ಶ್ರೀ ಎಚ್ ನರಸಿಂಹಯ್ಯನವರು, ಭೌತಶಾಸ್ತ್ರಜ್ಞರು, ಗ್ರಹಣದ ದಿನದಂದು ಊಟ ಹಾಕಿಸುವ ಚಳವಳಿ ಮಾಡಿ ಗ್ರಹಣಾಭಿಮಾನಿಗಳ ಕಣ್ಣುರಿಗೆ ಪಾತ್ರರಾಗಿದ್ದರು. ಆದರೆ ಅಂದು ಅಲ್ಲಿ ಊಟ ಮಾಡಿದವರೆಲ್ಲರೂ ಸಂತುಷ್ಟರಾಗಿದ್ದರು, ಯಾವ ರೀತಿಯ ಅನಾರೋಗ್ಯದಿಂದಲೂ ನರಳಲಿಲ್ಲ. ನನ್ನ ನಕ್ಷತ್ರಕ್ಕೋ, ರಾಶಿಗೋ ಗ್ರಹಣ ಹಿಡಿದಾಗಲೂ ಅಷ್ಟೆ, ಅದರ ಪಾಡಿಗೆ ಅದು ಬಿಟ್ಟು ಹೋಗಿದೆ, ಏನೂ ತೊಂದರೆ ಮಾಡದೆ.

ಕಳೆದ ವರ್ಷ ಒಂದು ಕಾಗೆ ನನ್ನ ತಲೆ ಮೇಲೆ ರೆಕ್ಕೆಗಳನ್ನು ಬಡಿದುಕೊಂಡು ಹೋಗಿಬಿಟ್ಟಿತು. ಗಾಡಿಯಲ್ಲಿ ನಾನು ಅದು ಹಾರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದರಿಂದಲೋ ಏನೋ, ಅದಕ್ಕೆ ಗೊಂದಲವಾಗಿ ನನ್ನ ಮುಖಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ, ಮೇಲೆ ಹಾರಲು ಹೋಗಿ, ಆಕಸ್ಮಿಕವಾಗಿ ತಲೆಗೆ ತನ್ನ ರೆಕ್ಕೆಗಳನ್ನು ಬಡಿಯಿತು. ಜೊತೆಗೆ ಕಾಗೆಗಳಿಗೆ ಈ ನಡುವೆ ಎತ್ತರದಲ್ಲಿ ಹಾರಲು ಬೆಂಗಳೂರಿನಲ್ಲಿ ಜಾಗವೆಲ್ಲಿದೆ? ಆದರೂ ಆ ರೆಕ್ಕೆಗಳಿಂದ ಬಿದ್ದ ಪೆಟ್ಟು ಜೋರಾಗಿಯೇ ಇತ್ತು. ನನ್ನ ಹಿತೈಷಿಗಳೊಬ್ಬರ ಮನೆಗೆ ಹೋಗಿದ್ದೆ ಅಲ್ಲಿಂದ. ಉತ್ಸಾಹದಿಂದ ಹೇಳಿಕೊಂಡೆ ಕಾಗೆಯ ವಿಷಯವನ್ನು. ಎಷ್ಟು ಸಾಧ್ಯವೋ ಅಷ್ಟು ಹೆದರಿಸಲು ಯತ್ನಿಸಿಬಿಟ್ಟರು ನನನ್ನು ಅವರು. ಯಾವಯಾವುದೋ ಹೋಮ ಮಾಡಿಸಲು, ಮತ್ತು ಹಾಗೆ ಮಾಡಿಸುವವರು ಯಾರೆನ್ನುವ ವಿವರಗಳನ್ನೂ ಕೊಟ್ಟುಬಿಟ್ಟರು. ನಾನು ಸತ್ತೇ ಹೋಗುತ್ತೇನೆ ಎಂದೂ ಹೇಳಿದರು. "ಎಲ್ಲರೂ ಸಾಯುತ್ತಾರೆ, ಆದರೆ ಇದಕ್ಕೆ ಎಷ್ಟು ದಿನ ವ್ಯಾಲಿಡಿಟಿ?" ನನ್ನ ಪ್ರಶ್ನೆ. "ತಿಂಗಳೊಳಗೆ!" ಎಂದು ಗಡುವು ಕೊಟ್ಟುಬಿಟ್ಟರು. "ಒಂದು ವೇಳೆ ಸಾಯದಿದ್ದರೆ?" ಎಂದು ಪ್ರಶ್ನಿಸಿದರೆ, "ಇಂಥಾ ವಿಷಯದಲ್ಲಿ ರಿಸ್ಕು ತೆಗೆದುಕೊಳ್ಳುವುದು ಯಾಕೆ? ಮೊದಲು ಹೋಮ ಮಾಡಿಸು, ಪೂಜೆ ಮಾಡಿಸು. ಬೇರೆ ಯಾರಾದರೂ ಸತ್ತರೆ ಮನೆಯಲ್ಲಿ?" ಎಂದರು. "ಆಚರಣೆಗಳನ್ನು ಪರೀಕ್ಷೆ ಮಾಡಬಾರದು" ಎಂದು ಬುದ್ಧಿವಾದ ಹೇಳಿದರು. ಆ ಬುದ್ಧಿವಾದದ ಮಾತನ್ನು ಕೇಳದೆ ಇದ್ದುದರಿಂದ ಇನ್ನೂ ಬದುಕಿದ್ದೇನೆ. ನಾನೇನಾದರೂ ಕೇಳಿಬಿಟ್ಟಿದ್ದರೆ, ಆ ಹೋಮಗಳ, ಪೂಜೆಗಳ ಖರ್ಚುಗಳು ನನ್ನನ್ನು ಮುಗಿಸಿಬಿಡುತ್ತಿದ್ದವು! ಮುಂದೊಂದು ದಿನ ಸತ್ತ ಮೇಲೆ, ಅದು ಕಾಗೆಯ ಕಾರಣದಿಂದಲೇ ಎಂದು ಯಾರೂ ಭಾವಿಸಬಾರದು.

ಉಪನ್ಯಾಸದ ನಂತರ ಒಂದು ವರ್ಷದ ಹಿಂದಿನ ಈ ಘಟನೆಯು ನೆನಪಾಯಿತು!

-ಅ
24.07.2011
10.40 PM

Tuesday, July 19, 2011

ಕೋಗಿಲೆಯ ಬಿನ್ನಹ

ಹಗಲಲಿ ಉರಿಯುವ ಬಿಸಿಲಿನ ಬೇಗೆಗೆ ಇರುಳಲಿ ತಂಪನ್ನೀವ ಮಳೆ
ಉರಿ-ತಂಪುಗಳಲಿ ಬೆರೆಯುವ ಪೃಥ್ವಿಯ ಒಡಲಲಿ ಬಗೆಬಗೆಯಾದ ಕಳೆ!

ರಾತ್ರಿಯೊಳಾಗಸ ಕಡುಕತ್ತಲೆಯಲಿ ಸೂರ್ಯನ ನಂಬುಗೆಯೊಳೆ ಹೊತ್ತು.
ಸೂರ್ಯನೆ ರಾರಾಜಿಸುತಿಹ ದಿನದಲಿ ಚಂದ್ರನ ವಿರಹದೊಳೇ ಮಿತ್ತು.

ಇರುಳಲಿ ಚಂದ್ರನ ಹಗಲಲಿ ಸೂರ್ಯನ ನುಂಗಲು ಮೋಡಗಳಾ ಹೊಂಚು.
ಋತು ಚಕ್ರದಿ ಪ್ರಕೃತಿ ತಾ ಮೆರೆದಿರೆ ನಡೆಯದು ಅವುಗಳ ಒಳಸಂಚು.

ಕಾಣದ ಕೋಗಿಲೆ ದನಿಯೊಳಿದೇನಿದು ಬಿನ್ನಹ ಕಾಣದ ದೇವನಲಿ?
ಮಳೆಯಿದು ನಿಲ್ಲದು, ಹಸುರನು ಕೊಲ್ಲದು - ಎಲ್ಲರ ಮೊರೆಯಿರೆ ಕಾವನಲಿ.

-ಅ
14.07.2011
5PM

Thursday, June 30, 2011

ಪುಸ್ತಕ - ದಿಗ್ದರ್ಶಕರು

ಅಂತೂ ಕನ್ನಡ ಪುಸ್ತಕ ಪ್ರಾಧಿಕಾರದ, ದೇಸಿಯ ನಾಗೇಶರ, ಶ್ರೀನಿಧಿ ಸುಶ್ರುತರ, ಅಪಾರ - ರಾಘವೇಂದ್ರ ಹೆಗಡೆಯವರ, ವಿಜಯಾ ರೇಖಾರ ದೆಸೆಯಿಂದ "ದಿಗ್ದರ್ಶಕರು ಮತ್ತು ಇತರ ಪ್ರಬಂಧಗಳು" ಎಂಬ ಪುಸ್ತಕವು ಬಿಡುಗಡೆ ಹೊಂದಿತು - ಮೊನ್ನೆ ಶ್ರೀ ಸಿದ್ಧಲಿಂಗಯ್ಯ, ಶ್ರೀ ಅಜೇಯ ಕುಮಾರ ಸಿಂಗ್, ಶ್ರೀ ವೆಂಕಟೇಶಮೂರ್ತಿ - ಇವರುಗಳ ಹಸ್ತದಿಂದ. ಎಚ್ಚೆಸ್ವಿ ಮತ್ತು ಅಜೇಯಕುಮಾರ ಸಿಂಗ್‍ರ ಮಾತುಗಳು ಮುಂದಿನ ದಿಗ್ದರ್ಶನದಂತಿತ್ತು.

ಇನ್ನೂ ಹೆಚ್ಚು ಹೆಜ್ಜೆಗಳನ್ನಿಡಲು ಸಾಧ್ಯವಾಗಲೆಂದು ನಾನು ಪ್ರಾರ್ಥಿಸುತ್ತೇನೆ.


ದಿಗ್ದರ್ಶಕರಿಗೆ ನಮನ

ವಿಶಾಲ ವಿಸ್ಮಯ ವಿಶ್ವದೊಳಕ್ಷರ
ಅಸಂಖ್ಯ ಮಿನುಗುವ ತಾರೆಗಳು.
ತಾರೆಗಳೋ ಇವು ಯಾನದಿ ಹಾದಿಯ
ತೋರುವ ಹೆಜ್ಜೆಯ ಗುರುತುಗಳು.

ನೋಡುತ, ಬೆರಗಾಗುತ, ಶರಣಾಗುತ
ನನ್ನೀ ಹೆಜ್ಜೆಯನಿಡುತಿರುವೆ.
ದಿಗ್ದರ್ಶಕರೆಲ್ಲರು ಇಹರೆನುತಲೆ
ಮೊದಲೀ ಹೆಜ್ಜೆಯನಿಡುತಿರುವೆ.

-ಅ
30.01.2011
2.55PM

Monday, June 20, 2011

ಹಿಮಾಚಲದ ಹುಡುಗಿ

ಬಿಸಿಲಿಗೆ ಮೈ ಚೆಲ್ಲಿದ್ದಳು
ಹಿಮಾಚಲದ ಹುಡುಗಿ
ಚೆಲುವಿನೊಡತಿ, ಬೆಡಗಿ.

ಹಿಮದೊಳು ಮೈ ತೊಯ್ದಿದ್ದಳು
ಚಳಿಯೊಪ್ಪಿಗೆಗಾಗಿ
ರವಿಯಪ್ಪುಗೆಗಾಗಿ.

ಸಿಗ್ಗನು ಬದಿಗೊತ್ತಿದ್ದಳು
ತಲೆಗೂದಲ ಕೆದರಿ
ಬೆನ್ನ ತುಂಬ ಹರಡಿ.

ತೆಕ್ಕೆಗೆ ಸೆಳೆಯುತ್ತಿದ್ದಳು
ಚೋದ್ಯ ಶ್ವೇತ ಕನ್ಯೆ.
ಮೈದೋರುತ - ಧನ್ಯೆ!

ವರ್ಣದಿ ಬಿಂಬಿಸುತಿದ್ದಳು
ಸೌಂದರ್ಯದ ಬೆಳಕ
ಸ್ಪರ್ಶದಿ ಮೈ ಪುಳಕ.

ಹಿಮಾಚಲದ ಹುಡುಗಿ,
ಚೆಲುವಿನೊಡತಿ ಬೆಡಗಿ -
ನಿಂತಿಹಳಾಗಸದೆತ್ತರ
ಕರೆದಿಹಳೆನ್ನನು ಹತ್ತಿರ
ನೋಡುತಿಹೆನು ನಡುಗಿ!

-ಅ
15.01.2011
12AM

Monday, May 16, 2011

ಮೂರರ ಅನಿಸಿಕೆ

ವಿಧಿವಶಾತ್ ಒಂದು ವಾರದಲ್ಲಿ ಮೂರು ಚಿತ್ರಗಳನ್ನು ನೋಡಬೇಕಾಗಿ ಬಂದಿತು. ಆದರೆ ರಿವರ್ಸ್ ಆರ್ಡರಿನಲ್ಲಿ ನೋಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಕೊನೇ ಪಕ್ಷ ಅವುಗಳ ಅನಿಸಿಕೆಯನ್ನು ಬರೆಯುವಾಗಲಾದರೂ ರಿವರ್ಸ್ ಆರ್ಡರನ್ನು ಪಾಲಿಸುತ್ತೇನೆ.


ಸರ್ವೇಸಾಧಾರಣವಾದ, ತೊಂಭತ್ತರ ದಶಕದ ಹಿಂದಿ ಚಿತ್ರಗಳನ್ನು ನೆನಪಿಸುವಂತಹ "ಕೂಲ್" ಚಿತ್ರವು ಅಷ್ಟೇನೂ ಕೂಲಾಗಿ ಇಲ್ಲ. ಬೇಡದೇ ಇರುವ ಕಡೆ, ಬೇಡದ ಹಾಡುಗಳು, ಬಾಲಿಷವಾದ ಡೈಲಾಗುಗಳು, ಮೊದಲರ್ಧಕ್ಕೂ ಎರಡನೆಯರ್ಧಕ್ಕೂ ಸಂಬಂಧ ಹುಡುಕುವುದೇ ಕಷ್ಟವೆಂಬಂತಹ ಸ್ಕ್ರೀನ್ ಪ್ಲೇ ಇವೆಲ್ಲದರ ನಡುವೆ ಬೆಟ್ಟಗುಡ್ಡಗಳನ್ನು ಒಂದಷ್ಟು ಹೊತ್ತು ನೋಡಲು ಸಂತೋಷವಾಯಿತು. ಜೊತೆಗೇ ಸ್ವಚ್ಛವಾದ ಜಾಗದಲ್ಲಿ ಶೂಟಿಂಗ್ ಮಾಡಿ ಏನೇನು ಗಲೀಜು ಮಾಡಿರುತ್ತಾರೋ ಸಿನಿಮಾದೋರು (ಮಾಡಿರದೇ ಇರಲಿ ಎಂದು ಆಶಿಸುತ್ತೇನೆ) ಎಂದು ಆತಂಕವೂ ಆಯಿತು. ಇನ್ನೇನು ಸಸ್ಪೆನ್ಸ್ ಎನ್ನುವಂತೆ ಚಿತ್ರದ "ಮಧ್ಯಂತರ" ಬರುತ್ತೆ. ಆದರೆ, ಥಿಯೇಟರಿನವರೆಲ್ಲರೂ ಹೃತಿಕ್ ರೋಷನನ ಚಿತ್ರವೊಂದರ ಹೆಸರನ್ನು ಕೂಗುತ್ತಾರೆ! (ನಾನು ಸಸ್ಪೆನ್ಸ್-ಅನ್ನು ರಿವೀಲ್ ಮಾಡುವುದಿಲ್ಲ). ಅಲ್ಲಿಗೆ ಸಸ್ಪೆನ್ಸ್ ಮುಗಿಯೆಂದುಕೊಂಡರೆ ನಾವು ಮೂರ್ಖರು. ಯಾಕೆಂದರೆ ಈ ಚಿತ್ರವು ಹೃತಿಕ್ ರೋಷನನ ಆ ಚಿತ್ರವನ್ನು ನೆನಪಿಸುವುದೇ ವಿನಾ, ಅದಕ್ಕಿಂತ ಬಹಳ ಭಿನ್ನ. ಹೃತಿಕ್ ರೋಷನನಿಗಿಂತ ಹತ್ತು ವರ್ಷ ಹಿಂದೆ ಹೋದರೆ ಸಸ್ಪೆನ್ಸ್-ಅನ್ನು ಊಹಿಸಿಕೊಳ್ಳಬಹುದು. ಊಹಿಸಿಕೊಳ್ಳಲು ಆಗದೇ ಇದ್ದರೆ, ಚಿತ್ರವನ್ನು ನೋಡಬಹುದು. ನಾನು ನೋಡಿದ ಮೇಲೆಯೇ ಊಹಿಸಿಕೊಳ್ಳಲು ಹೊರಟಿದ್ದು!

ಇನ್ನೊಂದು ಸಕಾರಾತ್ಮಕ ಅಂಶವೆಂದರೆ ಶರಣ್ ಅವರ ಪ್ರತಿಭೆಯುಳ್ಳ ನಟನೆ. ಚಿತ್ರದಲ್ಲಿ ನಗಿಸುವವರು ಶರಣ್ ಒಬ್ಬರೇ. ಇದು ಗಣೇಶ್ ಅವರ ಮೊದಲ ಚಿತ್ರ - ನಿರ್ದೇಶಕರಾಗಿ, ಅವರ ಮುಂದಿನ ಚಿತ್ರಕ್ಕೆ ಆಲ್ ದಿ ಬೆಸ್ಟ್. ಒಂದು ಹಾಡನ್ನು ಕೂಡ ಮಜವಾಗಿಯೇ ಹಾಡಿದ್ದಾರೆ ನಿರ್ದೇಶಕರು.


ವೈಚಿತ್ರ್ಯದ ಪರಮಾವಧಿಯೆಂಬಂತಹ "ಹುಡುಗರು" ಚಿತ್ರ ಬೋರ್ ಏನೂ ಆಗುವಂತಿಲ್ಲ. ರೀಮೇಕ್ ಅಂತೆ, ನಾನು ತೆಲುಗಿನಲ್ಲಿ (ಅಥವಾ ಬೇರೆ ಭಾಷೆಯಲ್ಲಿ) ನೋಡಿಲ್ಲವಾದ್ದರಿಂದ ನನಗೆ ಒರಿಜಿನಲ್ ಬಗ್ಗೆಯಾಗಲೀ, ಎಷ್ಟರ ಮಟ್ಟಿಗೆ ಅದನ್ನು ಕಾಪಿ ಹೊಡೆದಿದ್ದಾರೆಂಬುದರ ಬಗ್ಗೆ ಗೊತ್ತಿಲ್ಲ. ಲೂಸ್ ಮಾದ - ಇಷ್ಟ ಆದ! ಪುನೀತ್ ಅವರ ಎಲ್ಲ ಚಿತ್ರದಂತೆಯೇ ಇಲ್ಲೂ ಸಹ ಇನ್ನೇನು ಸಕ್ಕತ್ ಗೋಳು ಆರಂಭವೋ ಎಂಬ ಯೋಚನೆ ಬರುವ ಹೊತ್ತಿಗೆ ತಿಳಿಹಾಸ್ಯವು ಗೋಳಿನ ಜಾಗವನ್ನು ತುಂಬಿ "ಅಬ್ಬಾ ಸಧ್ಯ" ಎಂದು ಉಸಿರು ಬಿಡುವಂತಾಗುತ್ತೆ. ಆದರೂ ಸುಮ್ಮಸುಮ್ಮನೆ ಸಾಯುವ ದೃಶ್ಯಗಳನ್ನು ನೋಡಲು ನನಗೇನೋ ಇಷ್ಟವಿಲ್ಲ. ಹಾಡುಗಳು ಹೆಚ್ಚಾಗಿ ಇಂಪ್ರೆಸ್ ಮಾಡುವಂತೇನಿಲ್ಲ. ಆದರೆ ಕೆಟ್ಟದಾಗೇನೂ ಇಲ್ಲ. ರಾಧಿಕಾ ಪಂಡಿತ್ ಅವರು "ಹಳ್ಳಿ ಹೈದ"ದಲ್ಲೇ ಚೆನ್ನಾಗಿ "ನಟಿಸುತ್ತಿದ್ದರು" ಎಂದೆನಿಸುತ್ತೆ - ಸಿನಿಮಾದಲ್ಲಿ ಸ್ವಲ್ಪ ಕಷ್ಟ ಪಡುತ್ತಾರೆ. ಕಥೆ ಮಾತ್ರ ಬಹಳ ವಿಚಿತ್ರ ಎಂದು ನನಗೆ ಅನ್ನಿಸಿತು. ನೈಜ ಘಟನೆಯ ಆಧಾರಿತ ಚಿತ್ರ ಎಂದು ಬೇರೆ ಆರಂಭದಲ್ಲಿ ತೋರಿಸುತ್ತಾರಾದ್ದರಿಂದ ಇಡೀ ಕಥೆಯು ವೈಚಿತ್ರ್ಯದ ಪರಮಾವಧಿಯೇ ಎಂದೆನಿಸಿಬಿಟ್ಟಿತು.


ಇವೆರಡನ್ನೂ ನೋಡಿದ ನಂತರ ಮೂರನೆಯ "ರಿಯೋ" ನೋಡಿದ್ದಿದ್ದರೆ ಸ್ವಲ್ಪ ನಿರಾಳವಾಗುತ್ತಿತ್ತೇನೋ. ಆದರೆ ನಾನು ರಿವರ್ಸ್ ಆರ್ಡರಿನಲ್ಲಿ ನೋಡಿದ್ದರಿಂದ ಹಾಗಾಗಿಲ್ಲ. ಥ್ರೀ-ಡಿ ತಂತ್ರಜ್ಞಾನ ವಾಸ್ತವವಾಗಿ ಈ ಚಿತ್ರಕ್ಕೆ ಬೇಕಾಗಿರಲಿಲ್ಲವೆಂದೆನಿಸುತ್ತೆ. ನನಗೆ ಯಾಕೆ ಹೀಗೆನ್ನಿಸುತ್ತಿದೆಯೆಂದರೆ ಮೊದಲೇ ಕನ್ನಡಕಧಾರಿ. ಇನ್ನು ಅದರ ಮೇಲೆ ಥ್ರೀಡಿ ಕನ್ನಡಕ ಬೇರೆ ಹಾಕಿಕೊಳ್ಳಬೇಕಲ್ಲ! ವೈಯಕ್ತಿಕ ಸಮಸ್ಯೆ ಹಾಗಿರಲಿ, ಆದರೆ ಈ ಚಿತ್ರದಲ್ಲಿ ಥ್ರೀಡಿ ತಂತ್ರಜ್ಞಾನವನ್ನು ಹೆಚ್ಚಾಗಿ ಉಪಯೋಗಿಸಿಕೊಂಡೇ ಇಲ್ಲ. ಆದರೆ ಕಥೆ ಹೇಳುವುದರ ಮೂಲಕ ಪಕ್ಷಿಗಳ ಬಗ್ಗೆ ತಿಳಿಸಿಕೊಡುವುದು, ಮತ್ತು ಕಥೆ ನಡೆಯುವ ರೀತಿ, ಡೈಲಾಗುಗಳು ಇಷ್ಟವಾಗುತ್ತೆ. ಎನಿಮೇಷನ್ ಕೂಡ ಬಹಳ ಸೊಗಸಾಗಿ ಮಾಡಿದ್ದಾರೆ. ಹಳೆಯ ಕಾರ್ಟೂನ್ ಚಿತ್ರಗಳ ಹಾಡುಗಳಂತೆ ನೆನಪಿನಲ್ಲಿ ಉಳಿಯುವಂಥದ್ದು ಇದರಲ್ಲೇನೂ ಇಲ್ಲವೆನ್ನಿಸುತ್ತೆ.

ನೋಡದೇ ನೋಡದೇ ಸಿನಿಮಾ ನೋಡಿದರೆ ಹೀಗೇನೇ ಎಂದು ಯಾರೋ ಬೈಯ್ಯುತ್ತಿರುವುದು ಕೇಳಿಸುತ್ತಿದೆ.

-ಅ
16.05.2011
12.45PM

Sunday, May 8, 2011

ಅಲೆ - ನೆಲೆ

ಅಲೆಯು ನೀನು
’ತೀರದ’ ನನ್ನ ಮೈ ಸೋಕಿದ - ಅಲೆಯು ನೀನು
ಮೈ ಸೋಕಿ ಹಿಂದಕೇಕೆ ಸರಿದೆ
ಬಂದ ಕಡೆಗೆ?

ನೆಲೆಯು ನಾನು
ತೀರದಿ ನಿನ್ನ ಬೆರೆಯಲು ಕಾದಿರುವ - ನೆಲೆಯು ನಾನು
ಅಂದು ಬಂದವಳು ಇಂದೇಕೆ
ನೋಡದಿರುವೆ ನನ್ನೆಡೆಗೆ?

-ಅ
29.04.2011
1.30AM

Saturday, May 7, 2011

ಹಿತನುಡಿ

ಜಯನಗರದ ಕಾಂಪ್ಲೆಕ್ಸಿನ ಮೂಲೆ ಮೂಲೆಯಲ್ಲೂ "ಥಾಡಿ ಫಾಯ್ವ್ ಥಾಡಿ ಫಾಯ್ವ್... ಏಏಸ್ಸ್"

ಬಸ್ ಸ್ಟಾಂಡಿನಲ್ಲಿ "ಆಸನ್ ಬೇಲೂರ್ ಚಿಕ್ಮಳೂರ್...."

ಕೊಟ್ಟಿಗೆಹಾರ ತಲುಪಿದ ಬಸ್ಸಿನಲ್ಲಿ ಮಧ್ಯರಾತ್ರಿ "ಹತ್ ನಿಂಷ ಟೈಮ್ ಇದೆ ನೋಡಿ...."

ಬ್ರಾಹ್ಮಣರ ಕಾಫಿ ಬಾರಿನಲ್ಲಿ "ಒಂದ್ ಡಬಲ್ಲೂ.."

ಗಣೇಶದಲ್ಲಿ "ಮೂರ್ ಮ್ಯಾಂಗೋ ಬರ್ಲಿ.."

ಶಾಲೆಯ ಚೆಕ್-ಇನ್ ಯಂತ್ರದಿಂದ "ಥ್ಯಾಂಕ್ ಯೂ" (ಪ್ರಾಮಾಣಿಕವಾಗಿ ಧನ್ಯವಾದವನ್ನು ಹೇಳುವ ಏಕೈಕ ಧ್ವನಿ)

ಶೀಗವಾಳಿನ ರಾಮಮಂದಿರದಲ್ಲಿ "ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ"

ಗಾಂಧೀಬಜ಼ಾರಿನಲ್ಲಿ ಭೇಟಿ ಮಾಡುವ ನೆಪದಲ್ಲಿ - ಫೋನಿನಲ್ಲಿ "ಕಾಪಿ?"

ಒಂದನೆಯ ತರಗತಿಯಲ್ಲಿ "ಯುವರ್ ಶರ್ಟ್ ಇಸ್ ಸೋ ನೈಸ್ ಸರ್.."

ಪ್ರತಿನಿತ್ಯ ಹೊರಡುವ ಮುನ್ನ ಹೆಂಡತಿಯ ಪ್ರಶ್ನೆ "ಎಷ್ಟ್ ಹೊತ್ತಿಗೆ ಬರ್ತೀಯಾ?"

-ಅ
07.05.2011
2.40AM

Wednesday, April 27, 2011

ಮೂರಾಯಿತು ಮಿಂ* ಗೆ

ಅದು ಮೈಂಡ್ರೈ. ತಪ್ಪಾಗಿ ಓದುವುದು ಅಪರಾಧ. ಓದೋರು ಓದಲಿ, ಹಣೆಬರಹ.

ಅಂತೂ ಕಾಲಚಕ್ರ ಉರುಳಿದೆ. ಅದಕ್ಕೆ ಉರುಳೋದು ಬಿಟ್ರೆ ಬೇರೆ ಏನು ತಾನೆ ಗೊತ್ತು! ಉರುಳಿ ಉರುಳಿ, ಮೈಂಡ್ರೈಗೆ ಮೂರು ವರ್ಷ ಆಗಿದೆ.

ಕಳೆದ ಸಲ ಅಭಿನಂದನೆ ಸಲ್ಲಿಸಿದಾಗ ನಾನು ಅದರ ಭಾಗಿಯಾಗಿದ್ದರೆ ಚೆನ್ನಾಗಿರುತ್ತಿತ್ತೆಂದು ಬರೆದಿದ್ದೆನಷ್ಟೆ. ಇವತ್ತು ಭಾಗಿಯಾಗಿಯೇ ಬರೆಯುತ್ತಿದ್ದೇನೆ. ಏನು ಅಂಥದ್ದೇನು, ಬರೆಯೋದಿಲ್ಲ - ಮೂರರ ಹುಟ್ಟುಹಬ್ಬದ ಶುಭಾಶಯವನ್ನು ಬರೆಯುತ್ತೇನೆ ಅಷ್ಟೆ.

ಮೂರರಿಂದ ಮೂವತ್ತಾಗಲಿ ಮೂವತ್ತಿಂದ.... ನೋಡೋಣ.

ಅಂತೂ ಈ ಹಾಸ್ಯ-ಕೋಗಿಲೆಗಳು (ಈ ರೂಪಕದ ಬಗ್ಗೆ ಯಾರೂ ಟೀಕಿಸುವಂತಿಲ್ಲ) ಅವರಿವರನ್ನು ಆಡಿಕೊಂಡು, ಅವರಿವರ ಕೈಯಲ್ಲಿ ಬಯ್ಯಿಸಿಕೊಂಡು, ಮತ್ತೊಂದಿಷ್ಟು ಜನರ ಕೈಯಲ್ಲಿ ಹೊಗಳಿಸಿಕೊಂಡು ಮೂರರವರೆಗೂ ತಲುಪಿವೆ.

ಅನಂತಮೂರ್ತಿಯವರಿಂದ ಶುರುವಾಗಿ ಆಮೀರ್ ಖಾನ್ ವರೆಗೂ ಬಂದು ನಿಂತಿದೆ.

ಒಂದೆರಡು ಮೂರು ನಾಲ್ಕೈದಾರೇಳರಲ್ಲಿ ನಾನೂ ಕಾಣಿಸಿಕೊಳ್ಳುತ್ತೇನೆ. ಕೇಳಿಸಿಕೊಳ್ಳುತ್ತೇನೆ ಕೂಡ.

ಅಭಿನಂದನೆಗಳು ಎಲ್ಲರಿಗೂ!

-ಅ
27.04.2011
11PM

Tuesday, April 26, 2011

ನನ್ನ ತಾರೆ

ನಾ ನೋಡಿದೆ,
ನನದೆಂದೇ ಭ್ರಮಿಸಿದೆ
ಗಗನದಿ ಮಿನುಗುವ ತಾರೆಯನು -
ಬಳಿ ಸೆಳೆಯಲು,
ನಾ ಬಯಸಿದೆ, ತಿಳಿಯದೆ
ಮಿನುಗುವ ತಾರೆಯ ಮೇರೆಯನು.

ತಾರೆಯು ಮಿನುಗಿತು,
ಹಾಸದಿ ಗುನುಗಿತು
ನಮ್ಮಿಬ್ಬರ ಆ ಗೀತೆಯನು - ಅಂತರಗೀತೆಯನು.
ತಾರೆಯ ಮೇರೆಯ
ತಿಳಿಯದ ನನ್ನಯ
ಜೀವವು ಬಯಸಿತು ಭ್ರಮೆಯಲ್ಲಿ - ಕನಸಿನ ರಮೆಯಲ್ಲಿ!

-ಅ
24.04.2011
4PM

Saturday, April 23, 2011

ಇನ್ನೆಲ್ಲಿ ಏಳಿಗೆ?

ಹದ್ದಿಗೂ
ಒಂದಿಷ್ಟು ಕಾಗೆಗಳಿಗೂ
ಇಂದೇಕೋ ಜಗಳ.

ಕಸಿದಿರಬೇಕು ಕಾಗೆಯ ಊಟವನ್ನು ಹದ್ದು.
ಗೂಡಿನಿಂದ ಹಾರಿಸಿಕೊಂಡು ಬಂದಿರಲೂ ಸಾಕು, ಕದ್ದು.

ಆದರೂ,
ಒಂಟಿ ಹದ್ದಿನ ಮೇಲೆ
ಅಷ್ಟೊಂದು ಕಾಗೆಗಳ ದಾಳಿ?
ಗಗನದಿ ಲೀನವಾಗುವ ಹದ್ದು ಸಿಲುಕಿತು ಹೇಗೆ ಈ ದಾಳಿಗೆ?

ಕಿರುಚಿ, ಅರಚಿ
ತಿರುಚಿ, ಪರಚಿ
ಗದ್ದಲ ಮಾಡುವ ಕಾಗೆಗಳಿಗೆ
ಗಂಭೀರದೊಂಟಿ ಕಳ್ಳ ಹದ್ದು
ಎಲ್ಲಿಂದಲೋ ಗಂಟು ಬಿದ್ದು
ಕಾದಾಡುತ್ತಿವೆ ಕೂಳಿಗೆ.
ಇನ್ನೆಲ್ಲಿ ಕಾಗೆ ಹದ್ದುಗಳ ಏಳಿಗೆ?

-ಅ
21.04.2011
11PM

Wednesday, April 20, 2011

ಕರ್ನಲ್ ಸ್ವಾಮಿ

ಅಳುಕಿನಿಂದಲೇ ಪ್ರಾಂಶುಪಾಲರ ಕೊಠಡಿಯೊಳಗೆ ಹೋದೆ. ಏನೋ ವಿಷಯ ಇದೆ ಬನ್ನಿ ಎಂದು ಹೇಳಿಕಳಿಸಿದ್ದರು - ಇನ್ನೂ ಶಾಲೆಯ ಜೀವನ ಹೊಸತು, ಪಾಠ ಮಾಡಲು ಏನಾದರೂ ತರಬೇತಿಯನ್ನು ಕೊಡುತ್ತಾರೋ ಏನೋ ಎಂದು ಯೋಚಿಸುತ್ತಿದ್ದೆ. ಜೊತೆಗೆ, ನನಗೇ ಗೊತ್ತಿಲ್ಲದ ಹಾಗೆ ಯಾವುದೋ ವಿದ್ಯಾರ್ಥಿಗೆ ಶಿಕ್ಷೆ ಗಿಕ್ಷೆ ಕೊಟ್ಟುಬಿಟ್ಟೆನೋ, ಅದು ಪ್ರಾಂಶುಪಾಲರವರೆಗೂ ದೂರು ಹೋಯಿತೋ? ಅಥವಾ ಲೆಸನ್ ಪ್ಲ್ಯಾನ್ ಸರಿಯಾಗಿ ಬರೆದಿಲ್ಲವೋ? ಏನೇನೋ ಯೋಚಿಸಿಕೊಂಡೇ ಕೊಠಡಿಯೊಳಗೆ ಹೋದೆ. ಪ್ರಾಂಶುಪಾಲರು ನನಗೆ ಕುಳಿತುಕೊಳ್ಳಲು ಹೇಳಿದ ಕುರ್ಚಿಯ ಪಕ್ಕದಲ್ಲಿ ಒಬ್ಬ ಹಸನ್ಮುಖಿ, ಬಹಳ ಬಹಳ ವರ್ಷಗಳಿಂದ ಆಪ್ತರಾಗಿ ಇರುವರೋ ಎಂಬ ವ್ಯಕ್ತಿಯೊಬ್ಬರು ನನ್ನ ಕಡೆ ನೋಡಿ "ಹೆಲೋ, ಕಮ್.." ಎಂದು ಕುರ್ಚಿಯನ್ನು ಕೈಯಿಂದ ತಟ್ಟಿದರು.

ಹತ್ತನೆಯ ತರಗತಿಯವರಿಗೆ ಪ್ರಾಜೆಕ್ಟುಗಳನ್ನು ಹೇಗೆ ಮಾಡಿಸಬೇಕು ಎಂಬುದಾಗಿ ನನಗೆ ಸಲಹೆ ಕೊಡಲು ಅವರು ಬಂದಿದ್ದರು. ನಾನು ಹೊಸಬನಾದ್ದರಿಂದ, ಜೊತೆಗೆ ಬೇರಾವ ತರಬೇತಿಯೂ ಇಲ್ಲದ್ದರಿಂದ ಒಂದಷ್ಟು ಮಾರ್ಗದರ್ಶನ ನನಗೆ ಅತ್ಯಗತ್ಯವಾಗಿತ್ತು. ಅವರೋ ಅನುಭವಿಗಳು. ಹಿರಿಯರು. ಎಷ್ಟು ಹಿರಿಯರು, ಎಷ್ಟು ಅನುಭವಿಗಳು ಎಂದು ಯೋಚಿಸುತ್ತಿರುವಾಗಲೇ ನನ್ನ ಮನಸ್ಸನ್ನು ಓದಿದವರಂತೆ - "ನೀವು ಹುಟ್ಟುವ ಮುಂಚೆಯೇ ನಾನು ಕಂಪ್ಯೂಟರ್ ಅಲ್ಲಿ ಕೆಲಸ ಮಾಡಿದೀನಿ. ಬಹುಶಃ ಈ ದೇಶದಲ್ಲಿ ಮೊಟ್ಟ ಮೊದಲು ಕಂಪ್ಯೂಟರ್ ಬಳಸಿದ ಗುಂಪಿನಲ್ಲಿ ನಾನೂ ಇದ್ದೆ. ಆಗಿನ್ನೂ ಸಾರ್ವಜನಿಕರ ಕೈಗಾಗಲೀ, ಕಂಪೆನಿಗಳಿಗಾಗಲೀ ಕಂಪ್ಯೂಟರು ಬಂದಿರಲಿಲ್ಲ. ಬರೀ ಮಿಲಿಟರಿಯವರಿಗೆ ಮಾತ್ರ ದೊರಕುತ್ತಿತ್ತು. I am Col. Swamy" ಎಂದು ಹೆಗಲ ಮೇಲೆ ಕೈ ಹಾಕಿದರು. ನಾನು ಹುಬ್ಬೇರಿಸಲು "ಅವೆಲ್ಲಾ ಹಳೇ ಕಥೆ. ನೀವು ಈಚಿನವರು, ನಿಮಗೆ ನಮ್ಮ ಹತ್ತರಷ್ಟು ಗೊತ್ತಿರುತ್ತೆ, ಆದ್ರೂ ಏನೋ ಬೇಕು ಅಂದ್ರಂತೆ, ಏನು ಬೇಕು ಹೇಳಿ?" ಎಂದರು.

ನಕ್ಕಾಗ ಮುಖದಲ್ಲಿ ಬೀಳುತ್ತಿದ್ದ ಗುಳಿಗಳು ಅವರ ವಿದ್ಯೆಯ ಮತ್ತು ವಿನಯದ ಪ್ರತೀಕವೋ ಎಂಬಂತಿದ್ದವು. ಪಠ್ಯಪುಸ್ತಕ ಮತ್ತು ಸಿಲಬಸ್ ಕಾಪಿ ಎರಡನ್ನೂ ತೆರೆದೆ. ಅವರು ತಕ್ಷಣವೇ "ಅಯ್ಯೋ ಇದನ್ನೆಲ್ಲಾ ನಂಬಿಕೊಂಡರೆ ಪಾಠ ಮಾಡೋಕೆ, ಪ್ರಾಜೆಕ್ಟ್ ಮಾಡಿಸೋಕೆ ಆಗುತ್ತಾ ಮಕ್ಕಳ ಕೈಯಲ್ಲಿ? ಏನೇನೋ ಹೇಳಿರ್ತಾರೆ ಬೇಡದೇ ಇರೋದೆಲ್ಲ ಇದರಲ್ಲಿ! ವಿಷಯದ ಶೀರ್ಷಿಕೆಯನ್ನು ಮಾತ್ರ ನೋಡಿ ಅದರಲ್ಲಿ, ಮಿಕ್ಕಿದ್ದೆಲ್ಲ ನೀವೇ ಸ್ವಂತ ಯೋಚನೆ ಮಾಡಿ - ನಿಮ್ಮ ಪ್ರಾಬ್ಲಮ್ ಸಾಲ್ವ್ ಆಗುತ್ತೆ ಎಂದರು." ನಾನು ಇನ್ನೇನನ್ನೂ ಕೇಳಲು ಹೋಗಲಿಲ್ಲ. ಬದಲಿಗೆ ಯೋಚಿಸತೊಡಗಿದೆ. ಯೋಚಿಸುತ್ತಲೇ ಇದ್ದೇನೆ. ಶಿಕ್ಷಕನಾದವನು ಯಾವಾಗಲೂ ಯೋಚನೆಯನ್ನು ಮಾಡುತ್ತಿರಲೇ ಬೇಕಷ್ಟೆ? ಅದಕ್ಕೆ ಕೊನೆಯೆಲ್ಲಿ?

ಯೋಚಿಸುತ್ತಲೇ ಅವರನ್ನು ಎರಡನೆಯ ಮಹಡಿಯಲ್ಲಿರುವ ನಮ್ಮ ಕಂಪ್ಯೂಟರ್ ಲ್ಯಾಬಿಗೆ ಹೋಗೋಣವೇ ಎಂದು ಕೇಳುವ ಮುನ್ನವೇ ನನಗಿಂತ ವೇಗವಾಗಿ ಮೆಟ್ಟಿಲನ್ನು ಹತ್ತುತ್ತ ಹತ್ತುತ್ತ, "ಈಗ ವಯಸ್ಸಾಗಿದೆ, ಜಾಸ್ತಿ ನಡೆಯೋಕೆ ಆಗಲ್ಲ" ಎಂದು ತಮಾಷೆ ಮಾಡಿದರು. ವಯಸ್ಸಾಗಿರುವುದು ನನಗೋ ಅವರಿಗೋ ಎಂದು ಅವರನ್ನು ಒಂದು ಸಲ ನೋಡಿ, ನನ್ನನ್ನೂ ನೋಡಿಕೊಂಡೆ. ಅವರಿಗೆ ಏನಲ್ಲ ಅಂದರೂ ಅರವತ್ತೈದರಿಂದ ಎಪ್ಪತ್ತು ವಯಸ್ಸಾಗಿರಬಹುದು ಎನ್ನಿಸಿತು. ಲ್ಯಾಬು ತಲುಪುವ ಹೊತ್ತಿಗೆ ನನಗೆ ಎಂಭತ್ತೋ ತೊಂಭತ್ತೋ ವಯಸ್ಸಾಗಿರಬಹುದೆನ್ನಿಸಿತು. ಲ್ಯಾಬನ್ನೆಲ್ಲ ನೋಡಿ "ಚೆನ್ನಾಗಿದೆ ಲ್ಯಾಬು, ಎಲ್ಲಿ ಮನೆ ನಿಮ್ಮದು?" ಎಂದರು. ನಾನು ಬಸವನಗುಡಿಯ ಹತ್ತಿರ ಎಂದ ತಕ್ಷಣ "ಓಹ್, ಹಳೇ ಬೆಂಗಳೂರಿನವರು ನೀವು.." ಎಂದು ನಕ್ಕರು. ಇಷ್ಟು ಒಳ್ಳೇ ಲ್ಯಾಬ್ ಇಟ್ಟುಕೊಂಡಿದ್ದೀರ, ಪಠ್ಯಪುಸ್ತಕದ ಬಗ್ಗೆ ತಲೆ ಯಾಕೆ ಕೆಡಿಸಿಕೊಳ್ಳುತ್ತೀರ, ನೀವೇ ವರ್ಕ್ ಮಾಡಿ, ಎಲ್ಲಾ ಆರಾಮಾಗುತ್ತೆ. ನೋಡಿ, ಸಿಲಬಸ್ ನೋಡಿ, ಅದೆಂಥದೋ ಬ್ಲೂಜೆ (Java IDE) ಉಪಯೋಗಿಸಬಹುದು ಅಂತ ಸಲಹೆ ಕೊಡ್ತಾನೆ, ಯಾರಿಗೆ ಬೇಕು ಅದೆಲ್ಲ. ನಾಳೆ ಮಕ್ಕಳು ಶಾಲೆಯಿಂದ ಹೊರಗೆ ಹೋದಾಗ ಇವೆಲ್ಲಾ ಕೆಲಸಕ್ಕೆ ಬರುತ್ವಾ?" ಎಂದು ನನ್ನ ಯೋಚನಾ ಪ್ರಣತಿಯನ್ನು ಹೊತ್ತಿಸಿದರು.

ಹೀಗೆ ಬಹಳ ಹಿರಿಯ ಕಂಪ್ಯೂಟರ್ ಮೇಷ್ಟ್ರೊಬ್ಬರ ಸ್ನೇಹ ಬೆಳೆಯಿತು. ಪಠ್ಯದ ವಿಷಯದಲ್ಲಿ ಸಹಾಯ ಬೇಕೆಂದು ಅವರನ್ನು ಮತ್ತೆಂದೂ ಕೇಳಲಿಲ್ಲ. ತಮ್ಮಲ್ಲಿ ಸಾಕಷ್ಟು ಪುಸ್ತಕಗಳಿವೆಯೆಂದೂ, ಯಾವಾಗ ಬೇಕಾದರೂ ಅವನ್ನು "ಬಾರೋ" ಮಾಡಿಕೊಳ್ಳಬಹುದೆಂದೂ ಹೇಳಿದ್ದರು. ನನಗೆ ಬೇಕಾದ ಪುಸ್ತಕಗಳನ್ನು ಶಾಲೆಯವರೇ ಒದಗಿಸಿಕೊಟ್ಟಿದ್ದಾರಾದ್ದರಿಂದ ನನಗೆ ಅದರ ಪ್ರಮೇಯ ಬರಲಿಲ್ಲ. ಆದರೆ ಅವರ ಮನೆಗೆ ಹೋಗುವ ಪ್ರಮೇಯ ಒದಗಿ ಬಂದಿತು ಹೋದವರ್ಷ ಅಕ್ಟೋಬರಿನಲ್ಲಿ. ಶಾಲೆಯಲ್ಲಿ ಆಯೋಜಿಸಿದ್ದ ವೆಬ್ ಡಿಸೈನಿಂಗ್ ಸ್ಪರ್ಧೆಗೆ ಗೆಳೆಯ ಶ್ರೀಕಾಂತನು ತೀರ್ಪುಗಾರನಾಗಲು ಸಂತೋಷದಿಂದ ಒಪ್ಪಿಕೊಂಡ. ಇನ್ನೊಬ್ಬ ತೀರ್ಪುಗಾರರು ಬೇಕಿತ್ತು. ಪ್ರಾಂಶುಪಾಲರು ನನ್ನ ಮನಸ್ಸಿನಲ್ಲಿದ್ದಿದ್ದನ್ನೇ ನುಡಿದರು. "ಕರ್ನಲ್ ಸ್ವಾಮಿಯವರನ್ನು ಕೇಳಿ." ಎಂದು ಹೇಳಿದಾಗ "ನಾನೂ ಅದನ್ನೇ ಅಂದುಕೊಳ್ಳುತ್ತಿದ್ದೆ" ಎಂದು ಹೇಳಿದರೆ "ಸಾಕು ನಾಟಕ" ಎಂದಾರು ಎಂದು ಹೇಳಲಿಲ್ಲ.

ಅಪಾರ್ಟ್ಮೆಂಟಿನ ಅವರ ಮನೆಯ ಬಾಗಿಲಿನ ಕಾಲಿಂಗ್ ಬೆಲ್ಲು ಶಬ್ದವಾದೊಡನೆಯೇ ಬಾಗಿಲು ತೆರೆದು "ಓಹ್, ಬಾಪ್ಪಾ, ಏನ್ ಸಮಾಚಾರ?" ಎಂದು ನಾನು ಅವರ ಮನೆಗೆ ಬರುತ್ತಿರುವುದನ್ನು ನಿರೀಕ್ಷಿಸಿದಂತೆಯೇ ಹೇಳಿದರು. ನಾನು ಸ್ಪರ್ಧೆಯ ವಿಷಯ, ಮತ್ತು ತೀರ್ಪುಗಾರರಾಗಿ ಅವರು ಬರಬೇಕೆಂಬ ಬಿನ್ನಹವನ್ನು ಅವರ ಮುಂದಿಟ್ಟೆ. "ಬರೋಣಂತೆ, ಅದಕ್ಕೇನಂತೆ!" ಎಂದರು. ಬೆವೆತು ಹೋಗಿದ್ದ ನನ್ನನ್ನು ನೋಡಿ "ಸುಸ್ತಾಗಿದ್ದೀಯ ಅನ್ಸುತ್ತೆ, ಇರು ನೀರು ಕೊಡ್ತೀನಿ. ಜ್ಯೂಸ್ ಕುಡೀತೀಯಾ?" ಎಂದರು. ಮನೆಯಲ್ಲಿ ಅವರು ಒಬ್ಬರೇ ಇರುವುದನ್ನು ಗಮನಿಸಿದ ನಾನು "ನೀರು ಕೊಡಿ, ಸರ್, ಸಾಕು" ಎಂದೆ. "ನನ್ನ ಹೆಂಡತಿಗೆ ಹುಷಾರಿಲ್ಲ ತುಂಬ. ಆಯ್ತಲ್ಲ ವಯಸ್ಸು" ಎಂದು ಜೋರಾಗಿ ನಕ್ಕರು. ನೀರು ತರಲೆಂದು ಅವರು ಹೋದಾಗ ಗೋಡೆಯ ಮೇಲೆ ನೇತು ಹಾಕಿದ್ದ ಫೋಟೋಗಳನ್ನೆಲ್ಲಾ ನೋಡಿದೆ. ಮಿಲಿಟರಿ ಫೋಟೋಗಳು, ಪ್ರವಾಸದ ಫೋಟೋಗಳು, ಪ್ರಶಸ್ತಿಗಳು - ನೋಡುತ್ತಿರುವಾಗಲೇ ಗಾಯತ್ರಿ ಮಂತ್ರದ infinite loop ಧ್ವನಿಯು ಕೇಳಿಸತೊಡಗಿತು. "ಅವೆಲ್ಲಾ ಒಂದು ಕಾಲ, ಈಗ ಮನೆಯಲ್ಲಿ ದೇವರ ಪೂಜೆ ಮಾಡಿಕೊಂಡು ಇದ್ದೀನಿ" ಎಂದರು. "ನನ್ನ ಹತ್ರ ಕಂಪ್ಯೂಟರ್ ಪುಸ್ತಕಗಳು ಇದ್ವಲ್ಲಾ ಎಷ್ಟೊಂದು (ನಾನು ನೋಡೇ ಇರಲಿಲ್ಲ), ಅದನ್ನೆಲ್ಲಾ ಕೊಟ್ಬಿಟ್ಟೆ. ನೀನು ಹೋದವಾರ ಬಂದಿದ್ದಿದ್ರೆ ನಿಂಗೂ ಒಂದಷ್ಟು ಕೊಡ್ತಿದ್ದೆ. ಈಗ ಕಂಪ್ಲೀಟ್ಲಿ ಫ್ರೀ ನಾನು. ಏನನ್ನೂ ಹಚ್ಕೊಂಡಿಲ್ಲ." ಎಂದರು. ಅವರು ಹಿರಿಯರಾದ ಕಾರಣ ನಾನು ಸುಮ್ಮನೆ ತಲೆಯಾಡಿಸುತ್ತ "ಹ್ಮ್" ಎನ್ನುತ್ತಿದ್ದೆ.

ಸ್ಪರ್ಧೆಯ ದಿನ ಕಾರು ಕಳಿಸುತ್ತೇವೆ ಶಾಲೆಯಿಂದ ಎಂದು ಹೇಳಿದ್ದರೂ, ಆವತ್ತು ಬೆಳಿಗ್ಗೆ ಫೋನು ಮಾಡಿದರೆ ಅವರ ಹೆಂಡತಿ (ಅನ್ನಿಸುತ್ತೆ) "ಅವರು ಕಾರಲ್ಲಿ ಹೊರಟಾಯಿತು" ಎಂದರು. ಫೋನು ಇಡುವ ಹೊತ್ತಿಗೆ ಬಂದೇ ಬಿಟ್ಟಿದ್ದರು. "ನಿಮ್ಮ ಮನೆಗೇ ಫೋನು ಮಾಡಿದ್ದೆ, ಕಾರು ಕಳಿಸುತ್ತೆಂದು ಹೇಳಿತ್ತಲ್ಲ, ಸರ್" ಎಂದೆ. "ಅಯ್ಯೋ ಬಿಡಪ್ಪ, ಅದಕ್ಕೇನು, ಕಾರು ಓಡಿಸೋ ಶಕ್ತಿ ಇನ್ನೂ ಇದ್ಯಲ್ಲ, ಓಡ್ಸ್ಕೊಂಡ್ ಬಂದ್ಬಿಟ್ಟೆ" ಎಂದು ಜೋರಾಗಿ ನಕ್ಕರು. ಸ್ಪರ್ಧೆಗೆ ಕಂಪ್ಯೂಟರ್ ಲ್ಯಾಬ್ ವರೆಗೂ ಅವರ ಜೊತೆ ಹೋಗಿ, ಆಗಲೇ ಬಂದಿದ್ದ ಶ್ರೀಕಾಂತನನ್ನು ಅವರಿಗೆ ಪರಿಚಯಿಸಿ ಅವರ ಕೆಲಸ ಮುಂದುವರೆಸಲು ನಾನು ತೊಂದರೆ ಕೊಡದೆ ಜಾಗ ಖಾಲಿ ಮಾಡಿದೆ. ಈ ಬಾರಿ ಮೆಟ್ಟಿಲು ಹತ್ತಿಕೊಂಡು ಬರುವಾಗ ಸ್ವಲ್ಪ ಸುಸ್ತಾದಂತೆ ಕಂಡರು. ಕಳೆದ ಬಾರಿಯಂತೆ ಇದ್ದ ಹುಮ್ಮಸ್ಸು ಮಾತಿನಲ್ಲಿತ್ತೇ ವಿನಾ ಏದುಸಿರು ಬಿಡುತ್ತಿದ್ದರು. ಮೆಟ್ಟಿಲು ಹತ್ತಿಕೊಂಡು ಬಂದೊಡನೆ ಸುಧಾರಿಸಿಕೊಳ್ಳಲು ಐದು ನಿಮಿಷ ಕುಳಿತುಕೊಂಡರು. ಇಬ್ಬರೂ "ವೈವಾ" ಅನ್ನು ಚೆನ್ನಾಗಿಯೇ ಮಾಡಿದರು. ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದರು.


ಸ್ಪರ್ಧೆ ಮುಗಿದ ಮೇಲೆ ವೇದಿಕೆಯ ಮೇಲೆ ಬಂದು ಮಾತನಾಡಿ ಎಂದು ನಾನು ಹೇಳಿದೆ. ಶ್ರೀಕಾಂತನ ಕಡೆ ಕೈ ತೋರಿಸಿ "ಹೋಗಿ" ಎಂದರು. ನನ್ನ ಹತ್ತಿರ "ಅವರು ಮಾತನಾಡಲಿ, ನಾನು ಹೋಗೋದು ಇದ್ದೇ ಇದೆ" ಎಂದರು. ಜೋರಾಗಿ ನಕ್ಕರು - ಒಬ್ಬರೇ.

ಇಂದು ಸುದ್ದಿ ಬಂದಿತು, ಅವರು ಹೋದರು ಎಂದು.

ಸ್ಫೂರ್ತಿದಾಯಕ ವ್ಯಕ್ತಿ ಆತ. ಮುಪ್ಪಿನ "ಕೊಳೆ"ಯನ್ನು ಹೊತ್ತಿರಲಿಲ್ಲ. ಹುರುಪಿನ ಕಳೆಯು ಅವರ ಮುಖದ ಮೇಲೆ ಯಾವಾಗಲೂ ಇರುತ್ತಿತ್ತು. ಅವರಿಗೆ ನನ್ನ ನಮಸ್ಕಾರ.-ಅ
20.04.2011
9.30PM

Monday, April 18, 2011

ಎರಡು ಬ್ಲಾಗುಗಳು

ಹತ್ತನೆಯ ತರಗತಿಯ ಮಕ್ಕಳಿಗೆ ಸಿಲಬಸ್‍ನ ಮೀರಿದ ವಿಷಯಗಳನ್ನು ಹೇಳಲು, ಅವರೊಡನೆ ಅದನ್ನು ಕುರಿತು ಚರ್ಚಿಸಲು ಈ ವರ್ಷ ಆ ಮಕ್ಕಳಿಗಾಗಿಯೇ ಒಂದು ಬ್ಲಾಗನ್ನು ಮಾಡಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆ. ಮಕ್ಕಳು ಹೊಸ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರಾದ್ದರಿಂದ, ಫೇಸ್‍ಬುಕ್ ಬಿಟ್ಟು ಬೇರೆ ಇನ್ನೂ ಏನೇನೋ ಇದೆ ಇಂಟರ್ನೆಟ್ಟಿನಲ್ಲಿ ಎಂದು ನಿಧಾನವಾಗಿ ಕಲಿಯುತ್ತಿದ್ದಾರೆಂಬುದು ಒಳ್ಳೆಯ ವಿಷಯ. ಇಂಟರ್ನೆಟ್ಟು ಅವರಿಗೆ ಸರಿ ದಾರಿ ತೋರಿಸಲಿ.

ಈಗಿನ ಒಂಭತ್ತನೆಯ ತರಗತಿಯ ಮಕ್ಕಳು ನಾನಂದುಕೊಂಡಿರುವುದಕ್ಕಿಂತ ಮುಂದಿದ್ದಾರೆ. ಕೆಲವರು ಬಹುಶಃ ಮುಂದಿನ ವರ್ಷ - ತಾವು ಹತ್ತನೆಯ ತರಗತಿಗೆ ಬರುವ ಹೊತ್ತಿಗೆ ನನ್ನನ್ನು ಮೀರಿಸಿದ ಶಿಷ್ಯರಾಗುತ್ತಾರೆಂಬ ಹೆಮ್ಮೆಯ ಅನುಮಾನ ನನಗಿದೆ. ಆದ್ದರಿಂದ ನಾನು ನನ್ನ ಅಧ್ಯಯನವನ್ನು ಇನ್ನೂ ಹೆಚ್ಚು ಮಾಡಿಕೊಳ್ಳಬೇಕಿದೆ. ಪಾಠದ ವಿಷಯ ಮಾತ್ರವಲ್ಲದೆ ಕ್ರಿಯಾಶೀಲತೆಯಲ್ಲೇನೂ ಕಡಿಮೆಯಿಲ್ಲವೆಂದು ನನಗೆ ಅರಿವಾಗಿದ್ದು ತರಗತಿಯ ಇಬ್ಬರ ಬ್ಲಾಗುಗಳನ್ನು ನೋಡಿದಾಗ.

ಇವರ ಅಧ್ಯಯನಗಳು, ಮತ್ತು ಕ್ರಿಯಾಶೀಲತೆಗಳು ಎಂದೂ ಕುಂದದಿರಲಿ ಎಂದು ಆಶೀರ್ವದಿಸುತ್ತೇನೆ.

ಅಂದ ಹಾಗೆ ಅವರಿಬ್ಬರ ಬ್ಲಾಗುಗಳ ಲಿಂಕುಗಳು -

೧. http://underdogvivek.blogspot.com/

೨. http://inspirationalsunrise.blogspot.com/

- ಅ
18.04.2011
8PM

Tuesday, April 12, 2011

ಕಮಾಚ್

ಕಂಠದಿ ಮೂಡಿದ ದನಿಯಲ್ಲವೊ ಇದು
ಹೃದಯದೊಳುಕ್ಕಿದ ಪ್ರೇಮಸಾಗರವು
ಕಮಾಚಿನಂದದಿ ಹರಿಯಿತು, ಬೆರೆಯಿತು.

ಜಗದಾನಂದದ ಮೂಲವಿದೆನ್ನುವ
ಪರಿಯಲಿ ಎಲ್ಲವನಾವರಿಸುತ್ತಲೆ
ಸಿಂಚನಗೊಳಿಸಿತು ಸೊದೆಯನು, ಮುದವನು.

ಮಂದ್ರವೊ, ತಾರವೊ, ಸ್ವರಸಾಕಾರವೊ?
ತಪಸಿನ ಫಲದೊಳು ಸಾಕ್ಷಾತ್ಕಾರವೊ? -
ದಿಟ್ಟಿಯು ಮುಟ್ಟಿರೆ ಸಿರಿಯನು, ಗುರಿಯನು.

ಸೀತಾಪತಿಯೇ ನಿಂತಿಹನೆದುರಲಿ
ಅಭಿಮಾನದಿ ತಾನ್ ಕಂಬನಿ ಮಿಡಿಯುತ
ಕಮಾಚಿನಮೃತ ಸವಿಯುತ, ನಲಿಯುತ.

- ಅ
12.04.2011
11AM

Wednesday, April 6, 2011

ದಿಗ್ದರ್ಶಕರು

ಯಾವ ಪ್ರವಾಸೀ ತಾಣಕ್ಕೆ ಹೋದರೂ ಈ ದಿಗ್ದರ್ಶಿಗಳು, ಅಥವಾ ಗೈಡುಗಳು ತಮ್ಮ ಪ್ರಾಮುಖ್ಯತೆಯನ್ನು ಮೆರೆಸದೇ ಬಿಡುವುದಿಲ್ಲ. ಪ್ರವಾಸಿಗರಿಗೆ ಸಹಸ್ರಾರು ಕಥೆಗಳನ್ನು ಹೇಳುತ್ತಾ ಎಂದೋ ಏನೋ ಎಲ್ಲೋ ನಡೆದುದನ್ನೆಲ್ಲಾ, ನಡೆಯದುದನ್ನೂ ಸೇರಿಸಿ ನಮ್ಮ ಮುಂದೆ ಚಿತ್ರಿಸಲು ಸಮರ್ಥರಾಗಿರುತ್ತಾರಾದ್ದರಿಂದ ಪ್ರವಾಸೀ ತಾಣಗಳಲ್ಲಿ ಇವರ ಸ್ಥಾನವನ್ನು ರೂಪಿಸಿಕೊಂಡಿರುತ್ತಾರೆ.

ನಾನೂ ಒಂದು ರೀತಿಯ ದಿಗ್ದರ್ಶಕನೇ ಆಗಿದ್ದೆ. ಕೆಲವು ವರ್ಷಗಳಿಂದ ಚಾರಣಗಳ ನೇತೃತ್ವ ವಹಿಸಿಕೊಳ್ಳುತ್ತಿದ್ದ ಸಲುವಾಗಿ ನನ್ನನ್ನು ನಾನೇ ದಿಗ್ದರ್ಶಿ ಎಂದುಕೊಂಡಿದ್ದೇನೆ. ಗೈಡುಗಳ ಸೈಕಾಲಜಿ ತಕ್ಕಮಟ್ಟಿಗೆ ಅರ್ಥವಾಗಿರುವುದರಿಂದ ಸಾಮಾನ್ಯವಾಗಿ ಪ್ರವಾಸೀ ತಾಣಗಳಿಗೆ ನಾನು ಹೋದಾಗ ಅವರ ಮೊರೆ ಹೋಗುವುದು ಬಹಳ ಕಡಿಮೆ. ನಮಗೆ ಗೊತ್ತಿಲ್ಲದ ಪ್ರದೇಶವಾದರೆ ಅವರುಗಳು ಏನು ಢೋಂಗಿ ಬಿಟ್ಟರೂ ಏನೂ ಬೇಸರವಾಗದೆ ಹುಬ್ಬೇರಿಸಿಕೊಂಡು ಶಾಲೆಯಲ್ಲಿ ಟೀಚರ ಮಾತನ್ನು ಕೇಳುವ ಮಕ್ಕಳಂತೆ ಕೇಳುತ್ತೇವೆ, ಆದರೆ ಗೊತ್ತಿರುವ ವಿಷಯಗಳಲ್ಲೇ ಬುರುಡೆ ಬಿಟ್ಟರೆ ಅವರ ಸಹವಾಸ ಬೇಡವೆನಿಸುತ್ತೆ.

ಕಾವೇರಿ ನದಿ ತೀರದಲ್ಲಿರುವ ಪಕ್ಷಿಧಾಮವೊಂದರಲ್ಲಿ ದೋಣಿ ವಿಹಾರಕ್ಕೆ ಕರೆದುಕೊಂಡು ಹೋದ ಗೈಡು ಶ್ರೀಲಂಕದಿಂದ ಬರುವ ಡಾರ್ಟರ್ ಪಕ್ಷಿಯನ್ನು ತೋರಿಸಿ ಅಂಟಾರ್ಕ್‌ಟಿಕಾ ಇಂದ ಬರುತ್ತೆ ಎಂದು ಹೇಳಿದರೆ “ಓಹ್, ಹೌದಾ!” ಎಂದು ಮೂಗಿನ ಮೇಲೆ ಬೆರಳಿಡುವ ವ್ಯಕ್ತಿ ನಾನಲ್ಲ. ಕೇರಳದ ಗುಹೆಯೊಳಗೆ ರಾಜ ಮಹಾರಾಜರ ಚಿತ್ರವನ್ನು ತೋರಿಸಿ “ಇದನ್ನು ಸಹಸ್ರ ಶತಮಾನಗಳ ಕೆಳಗೆ ಗವಿಜನ ಬರೆದದ್ದು, ಇದು ರಾಣಿ ಚಿಕ್ಕ ದೇಹ, ಇದು ರಾಜ – ಕೈಯಲ್ಲಿ ಕತ್ತಿಯಿದೆ” ಎಂದರೆ ಅದು ಪ್ರವಾಸಿಗರನ್ನು ಆಕರ್ಷಿಸಲು ಹುಟ್ಟುಹಾಕಿದ ಕಥೆಯಷ್ಟೆ ಎಂದು ಹೇಳಬೇಕು.

ಇಂಥಾ ಟೋಪಿ ಹಾಕುವ ದಿಗ್ದರ್ಶಕರು ನಮ್ಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸರ್ವೇ ಸಾಮಾನ್ಯ. ಸಫಾರಿ ವಾಹನದಲ್ಲಿ “ಪ್ರಾಣಿಗಳನ್ನು ನೋಡಬೇಕೆಂದರೆ ಅದೃಷ್ಟವಿರಬೇಕು, ಕಾಣಿಸದಿದ್ದರೆ ಅರಣ್ಯ ಸಿಬ್ಬಂದಿಗಳು ಜವಾಬ್ದಾರರಲ್ಲ” ಎಂದು ಓದಿದಾಗಲೇ ನಮಗೆ ಖಾತ್ರಿಯಾಗಿತ್ತು, ಇಲ್ಲಿ ಜಿಂಕೆ, ಆನೆಯನ್ನು ಬಿಟ್ಟರೆ ಇನ್ನೇನೂ ನೋಡಲು ಸಾಧ್ಯವೇ ಇಲ್ಲ ಎಂದು. ಆದರೂ ಆ ಅರಣ್ಯ ಸಿಬ್ಬಂದಿಗಳ ದುರದೃಷ್ಟವೇನಾದರೂ ಕೆಲಸ ಮಾಡಿ ನಮ್ಮ ಕಣ್ಣಿಗೆ ಹುಲಿಯೋ ಸಿಂಗಳೀಕವೋ ಕಾಣಿಸೀತೆಂಬ ಆಶಾಕಿರಣವನ್ನು ಹೊತ್ತೇ ವಾಹನವನ್ನೇರಿದ್ದೆವು. ಗುಂಪು ಗುಂಪಾಗಿ ಅಲ್ಲಲ್ಲಿ ಇಪ್ಪತ್ತು ಮುವ್ವತ್ತು ಜಿಂಕೆಗಳನ್ನು ಕಂಡಾಗ ಅವು ಹೇರಳವಾಗಿದೆ ಎಂದು ಅನ್ನಿಸುತ್ತಿತ್ತು. ಹಿರಿಯ ಮಿತ್ರ ಗೋವಿಂದ್ ರಾಜ್ ತಕ್ಷಣ ಹೇಳಿದರು, “ಇವೆಲ್ಲಾ ಏನಿಲ್ಲ, ನಾನು ನೋಡಿದ್ದೀನಿ, ನೂರಾರು ಇರುತ್ತಿತ್ತು ಇಪ್ಪತ್ತು ವರ್ಷಗಳ ಕೆಳಗಷ್ಟೇ.. ಹೊಡ್ಕೊಂಡ್ ತಿಂದ್ಬಿಟಿರ್ತಾರೆ ಬೋಳಿಮಕ್ಳು” ಎಂದು ಅರಣ್ಯ ಸಿಬ್ಬಂದಿಯವರನ್ನೂ ಸೇರಿಸಿ ಪ್ರಾಣಿಗಳನ್ನು ಕೊಲ್ಲುವವರನ್ನು ಶಪಿಸಿದರು. ನೂರು ಜಿಂಕೆಗಳನ್ನು ಒಟ್ಟಿಗೇ ನೆನೆಸಿಕೊಂಡರೇನೇ ರೋಮಾಂಚನ! ಆ ಕಾಲ ಈಗಿಲ್ಲವೆಂಬುದು ವಿಪರ್ಯಾಸ. ಎರಡು ಆನೆ ಕಂಡಿತು, ವಿಧಿಯಿಲ್ಲ, ದೊಡ್ಡ ಪ್ರಾಣಿ ಎಲ್ಲಿ ತಾನೇ ಅಡಗಿಕೊಂಡೀತು ಎಂದರು ಒಬ್ಬರು. ವಾಹನದಲ್ಲಿರುವವರಿಗೆಲ್ಲಾ ಹುಲಿಯನ್ನು ನೋಡುವ ತವಕ. ಆದರೆ ಅಲ್ಲಿ ಕಂಡಿದ್ದು ಹುಲಿಯ ಹೆಜ್ಜೆ ಗುರುತು ಮಾತ್ರ! ಅದೂ ವಾಹನ ಚಾಲಕನ ಕಣ್ಣಿಗೇ ಕಂಡಿದ್ದು. "ನೋಡಿ, ಹುಲಿಯ ಸಂಸಾರವೇ ಇಲ್ಲಿ ಹೋಗಿದೆ” ಎಂದು ನೆಲದ ಮೇಲಿದ್ದ ಹೆಜ್ಜೆ ಗುರುತುಗಳನ್ನು ತೋರಿಸಿದ. ಒಂದು ದೊಡ್ಡದಾಗಿತ್ತು, ಇನ್ನೊಂದು ಸ್ವಲ್ಪ ಚಿಕ್ಕದಾಗಿತ್ತು, ಮತ್ತೊಂದು ಪುಟ್ಟದಾಗಿತ್ತು. ಕ್ರಮವಾಗಿ ಅವು ಅಪ್ಪ, ಅಮ್ಮ ಮತ್ತು ಮರಿ ಅಂತೆ! ವಾಹನ ಹೋಗುವ ರಸ್ತೆಯಲ್ಲಿ ಅವು ನಡೆದುಕೊಂಡು ಹೋಗಿವೆಯಂತೆ! “ಶ್‌ಶ್‌ಶ್.. ಈಗ ತಾನೇ ಹೋದ ಹಾಗಿದೆ, ಇಲ್ಲೇ ಎಲ್ಲೋ ಇರುತ್ತೆ, ಮೌನವಾಗಿರಿ” ಎಂದು ಜೋರಾಗಿ ಕೂಗಿ ಹೇಳಿದ. ಅರ್ಧ ತಾಸು ಅದೇ ಪ್ರದೇಶದಲ್ಲಿ ಸುತ್ತಿ ಸುತ್ತಿ, ನಮ್ಮ ತಲೆಯೂ ಸುತ್ತಲು ಆರಂಭಿಸಿದಾಗ ತಿಳಿದು ವಾಪಸ್ಸು ಹೊರಟ. ತಲಾ ನೂರು ರುಪಾಯಿ ಕ್ಷೌರ!

ಮುನ್ನಾರ್‌ನ ಗೈಡು ಬಹಳ ಚುರುಕು. ಅರಣ್ಯ ದರ್ಶನಕ್ಕೆಂದು ಕರೆದುಕೊಂಡು ಹೋದಾಗ ದಾರಿಯಲ್ಲಿ ಆನೆ ಲದ್ದಿಯನ್ನು ಕಂಡ ಬಳಿಕವೇ ನಮ್ಮ ಗುಂಪಿಗೆ “ಶ್‌ಶ್” ಎಂದು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಂಟು ದಿಕ್ಕುಗಳನ್ನೂ ಗೂಬೆಯ ಹಾಗೆ ತಲೆಯನ್ನು ತಿರುಗಿಸಿ ನೋಡುತ್ತಾ ನಡೆದ. ನಮಗೂ ಹಾಗೇ ಮಾಡಲು ಆದೇಶಿಸಿದ. ಆ ಲದ್ದಿಯು ವಿಪರೀತ “ಫ್ರೆಶ್” ಆಗಿತ್ತು ಎಂಬುದು ಅವನ ಹೇಳಿಕೆ. ಅದು ದಿಟವೂ ಆಗಿತ್ತು. ಕೇರಳದ ಕಾಡಾನೆಗಳ ಬಗ್ಗೆ ಎಲ್ಲಾ ಕಥೆಗಳನ್ನೂ ಗುಟ್ಟಾಗಿಯೇ ವಿವರಿಸಿದ. ಅವನಿಗೆ ಎಳ್ಳಷ್ಟೂ ಆತಂಕವಿರದಿದ್ದರೂ ಭಯಗೊಂಡಂತೆ ನಟಿಸುತ್ತಿದ್ದ ಎಂದೆನಿಸಿತ್ತು. ನಮಗೆ ಕೊಂಚ ಭಯವೂ ಆಗಿತ್ತು. ಒಂಟಿ ಸಲಗ ಇಲ್ಲಿ ಎದುರು ಬಂದುಬಿಟ್ಟರೆ ಏನಪ್ಪಾ ಗತಿ ಎಂದು ಆತಂಕ. ಸುಮಾರು ಅರ್ಧ ಗಂಟೆ ಹೆಜ್ಜೆ ಇಟ್ಟರೆ ಎಲ್ಲಿ ಸದ್ದಾಗುತ್ತೋ ಎಂಬಂತೆ ಕಾಲನ್ನು ಎತ್ತಿ ಎತ್ತಿ ನೆಲಕ್ಕಿಡುತ್ತಿದ್ದೆವು. ನಮ್ಮ ಕಾಲುಗಳು ನಮಗೇ ಭಾರವೆನಿಸಿಬಿಟ್ಟಿತ್ತು. ಇದೆಲ್ಲಿ ಬಂದು ಸಿಕ್‌ಹಾಕಿಕೊಂಡು ಬಿಟ್ಟಿದ್ದೇವಪ್ಪಾ ಎಂದುಕೊಳ್ಳುವಷ್ಟರಲ್ಲೇ ಸಲಗವು ಎದುರು ಬಂದೇ ಬಿಟ್ಟಿತ್ತು - ಒಂಟಿ ಸಲಗ! ಪಕ್ಕದಲ್ಲಿ ಒಬ್ಬ ಮಾವುತ ಕೂಡ ಇದ್ದ!

ಪ್ರವಾಸಿಗರಿಗೆ ಗೈಡುಗಳ ಅವಷ್ಯವಿರುತ್ತಷ್ಟೆ, ಪಯಣಿಗರಿಗೆ ಇರುವುದಿಲ್ಲ. ಪಯಣಿಗರು ತಮಗೆ ತಾವೇ ದಿಗ್ದರ್ಶಿಗಳು. ಆದರೂ ಐತಿಹಾಸಿಕ ಸ್ಥಳಗಳಿಗೆ ಹೋಗುವವರು ಅವುಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ, ಸಂಶೋಧಕರ ವರದಿಗಳನ್ನೂ ಲೇಖನಗಳನ್ನೂ ಓದಿಕೊಂಡು ಜಾಗಗಳಿಗೆ ಭೇಟಿ ನೀಡುವುದು ಅಪರೂಪ. ಹಂಪೆಗೆ ಹೋಗುವ ಮುನ್ನ ಭೈರಪ್ಪನವರ ಆವರಣವೋ ರಾಬರ್ಟ್ ಸೀವೆಲ್ಲರ e ಠಿhಚಿಡಿgಚಿಚಿಖಿಚಿಟಿ eಒಠಿಚಿiಡಿ ಅನ್ನೋ ಓದಿಕೊಂಡು ಹೋದರೆ ಹಂಪೆಯನ್ನು ನೋಡುವ ರೀತಿಯೇ ಬೇರೆ. ನಿಜವಾದ ಪಯಣಿಗ ಇಂಥಾ ಹೋಮ್‌ವರ್ಕ್ ಮಾಡಿಕೊಂಡು ಪಯಣಿಸುತ್ತಾನೆ. ಪ್ರವಾಸಿಗನು ಗೈಡುಗಳ ಮೊರೆ ಹೋಗುತ್ತಾನೆ. ಕಲ್ಲಿನ ರಥವನ್ನು ತೋರಿಸಿ ಇದನ್ನು ತೇರನ್ನೆಳೆಯಲು ಬಳಸುತ್ತಿದ್ದರು ಎಂದು ಹೇಳಿದರೆ ಕಣ್ಣುಗಳನ್ನರಳಿಸಿ ನೋಡುತ್ತಿರುತ್ತಾರೆ! ನರಸಿಂಹನನ್ನು ನೋಡಿ ಅದು ಉಗ್ರನರಸಿಂಹನೋ ಲಕ್ಷ್ಮಿ ನರಸಿಂಹನೋ ಎಂಬ ಅನುಮಾನದೊಂದಿಗೆ ಮನೆಗೆ ಹೋಗುತ್ತಾರೆ!!

ಬೇಲೂರಿನಲ್ಲಿ ನಾವು ಒಬ್ಬ ಗೈಡಿನ ಮೊರೆ ಹೋಗಿದ್ದು ತಲೆ ತಲೆ ಚಚ್ಚಿಕೊಳ್ಳುವಂತಾಗಿತ್ತು. ಶ್ರೀಕಾಂತ, ನಾನು ಮತ್ತು ಗೆಳೆಯ ಸುಶೃತ್ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ನಿರ್ಧರಿಸಿ ಧಿಡೀರ್ ಎಂದು ಬೇಲೂರಿಗೆ ಹೊರಟೆವು. ಅಂಥ ತಪ್ಪು ಮಾಡಬಾರದೆಂದು ಅರ್ಥವಾಗಿದ್ದು ಅಲ್ಲಿನ ದಿಗ್ದರ್ಶಿಯ ದೆಸೆಯಿಂದ. ನನಗೆ ಆ ಗೈಡಿನ ತಿಳಿವಳಿಕೆಯ ಬಗ್ಗೆ ಎಳ್ಳಷ್ಟೂ ಶಂಕೆಯಿಲ್ಲ. ಚೆನ್ನಾಗಿ ಓದಿಕೊಂಡಿದ್ದ. ಆದರೆ ಆತನ ವಿವರಣೆ ಬಹಳ ಹಾಸ್ಯಮಯವಾಗಿತ್ತು. "ಕೃಷ್ಣ ಅವರು ಗೋವರ್ಧನಗಿರಿಯನ್ನು ಹೊತ್ತುಕೊಂಡಿದ್ದಾರೆ ನೋಡಿ” ಎಂದು ಒಂದು ಅದ್ಭುತ ಶಿಲ್ಪವನ್ನು ತೋರಿಸಿದ. ಸ್ವಲ್ಪ ಮುಂದೆ ಹೋದಾಗ “ಇವರು ಶಾಂತಲೆ, ನಮ್ಮ ಪ್ರವಾಸೋದ್ಯಮ ಇಲಾಖೆಯವರು ಇದೇ ಚಿತ್ರವನ್ನು ತಮ್ಮ ಲೋಗೋ ಮಾಡಿಕೊಂಡಿದ್ದಾರೆ” ಎಂದು ತೋರಿಸಿದಾಗ ಕೆ.ವಿ.ಅಯ್ಯರ್ ಅವರ ‘ಶಾಂತಲಾ’ ಪುಸ್ತಕ ನೆನಪಾಯಿತು. ಶಾಂತಲೆಯ ಬಗ್ಗೆ ಹೆಚ್ಚು ವಿವರಿಸಲಿಲ್ಲ. "ಶಾಂತಲೆಯವರು ಇಲ್ಲಿ ಕುಣಿಯುತ್ತಿದ್ದರು” ಎಂದು ‘ಮರ್ಯಾದೆ ಪೂರ್ವಕ’ ಹೇಳಿಕೆಯನ್ನು ಮಾತ್ರ ಕೊಟ್ಟ. ಇನ್ನೊಂದು ಕಡೆ, “ಹಿರಣ್ಯ ಕಶ್ಯಪುರವರನ್ನು ನರಸಿಂಹನವರು ಹೊಸಲಿನ ಮೇಲೆ ಬಗೆಯುತ್ತಿದ್ದಾರೆ” ಎಂದ. “ಎಲಾ, ನರಸಿಂಹ ಹಿರಣ್ಯ ಕಶ್ಯಪುಗಳನ್ನು ಅವರು-ಇವರು ಎನ್ನುವವರನ್ನು ಈಗಲೇ ನೋಡುತ್ತಿರುವುದು” ಎಂದು ಅಚ್ಚರಿ ಪಟ್ಟೆವು. ಮತ್ತೊಂದು ಕಡೆ “ಇಲ್ಲಿ ನೋಡಿ, ಗೋಪಿಕೆಯರು ನರ್ತನವಾಡುತ್ತಿದ್ದಾರೆ, ಕೃಷ್ಣ ಅವರು ಕೊಳಲನ್ನು ಊದುತ್ತಿದ್ದಾರೆ, ಕೋತಿಯವರು ಹೆಣ್ಣಿನ ಸೀರೆಯನ್ನು ಎಳೆದು ಚೇಷ್ಟೆ ಮಾಡುತ್ತಿದ್ದಾರೆ” ಎಂದಾಗ ಈ ಗೈಡಿನ ವಿನಯವಂತಿಕೆಗೆ ಮಾರು ಹೋದೆವು.

ಚಿತ್ರದುರ್ಗಕ್ಕೆ ಹೋಗುವುದರ ಬದಲು ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರ ನೋಡಿದರೆ ಸಾಕು ಎನ್ನುವಂತೆ ರೋಸುಗೊಳಿಸಿಬಿಟ್ಟಿದ್ದ ಅಲ್ಲಿನ ಗೈಡೊಬ್ಬ. ಓಬವ್ವನ ಕಿಂಡಿಯಾಗಲೀ, ಅಕ್ಕ-ತಂಗಿ ಕೊಳವಾಗಲೀ, ಇನ್ನೊಂದಾಗಲೀ ಮತ್ತೊಂದಾಗಲೀ ಈ ಗೈಡಿಗೆ ಮುಖ್ಯವೇ ಆಗಿರಲಿಲ್ಲ. ಕೆಲವೇ ವರ್ಷಗಳ ಕೆಳಗೆ ದುರಸ್ತಿ ಮಾಡಿ ಪುನರ್ನಿರ್ಮಾಣ ಮಾಡಿದ ಮೆಟ್ಟಿಲುಗಳ ಮೇಲೆ ಬಿದ್ದ ಏಟುಗಳನ್ನು ತೋರಿಸಿ “ಆ ಕಾಲದ ಕುದುರೆಗಳು ಬಹಳ ಶಕ್ತಿಶಾಲಿಗಳಾಗಿದ್ದವು, ಹೆಜ್ಜೆಯಿಟ್ಟರೆ ಕಲ್ಲಿನ ಮೇಲೂ ಹೆಜ್ಜೆ ಗುರುತುಗಳು ಮೂಡುತ್ತಿದ್ದವು” ಎಂದುಬಿಟ್ಟ. ಬರೀ ಮೆಟ್ಟಿಲುಗಳನ್ನೇ ತೋರಿಸಿ ಆ ಕುದುರೆಗಳ ಬಲವರ್ಣನೆ ಮಾಡುತ್ತಿದ್ದ. ಅವನ ಹತ್ತಿರ ಏನು ವಾದ ಎಂದು ಸುಮ್ಮನಾಗಿದ್ದೆವು. ಮತ್ತೆ ಈ ಗೈಡಿನ ವಿಷ್ಣುವರ್ಧನ ಪ್ರೀತಿ ನಮ್ಮ ತಲೆ ಚಿಟ್ಟು ಹಿಡಿಸಿಬಿಟ್ಟಿತ್ತು! ದುರ್ಗದ ಪ್ರವೇಶ ದ್ವಾರದಲ್ಲೇ ಇರುವ ಹಾವಿನ ಕೆತ್ತನೆಯನ್ನು ತೋರಿಸಿ, “ಇದೇ ಹಾವನ್ನು ನಾಗರ ಹಾವು ಚಿತ್ರದಲ್ಲಿ ‘ಹಾವಿನ ದ್ವೇಷ’ ಹಾಡಿನಲ್ಲಿ ವಿಷ್ಣು ಅಣ್ಣ ಹಾಡುವಾಗ ತೋರಿಸಿರೋದು” ಎಂದದ್ದು ಮಾತ್ರವಲ್ಲದೆ, ಗಳಿಗೆ ಗಳಿಗೆಗೊಮ್ಮೆ, “ಈ ಮೆಟ್ಟಿಲಿನ ಮೇಲೇನೇ ಮಕ್ಕಳನ್ನು ಕೂರಿಸಿಕೊಂಡು ವಿಷ್ಣುವರ್ಧನ್ ‘ಕನ್ನಡ ನಾಡಿನ ವೀರ ರಮಣಿಯ’ ಹಾಡು ಹಾಡಿದ್ದು” ಎಂದೋ, ಇದೇ ಗೋಡೆಯ ಹಿಂದೆ ವಿಷ್ಣುವರ್ಧನ ಬಚ್ಚಿಟ್ಟುಕೊಂಡಿದ್ದು ಎಂದೋ ಹೇಳುತ್ತಲೇ ಇದ್ದ. ಓಬವ್ವನ ಕಿಂಡಿಯ ಬಳಿ ಕರೆದುಕೊಂಡು ಹೋಗಿ, ‘ಇಲ್ಲೇ ಜಯಂತಿ ಒನಕೆ ಹಿಡಿದುಕೊಂಡು ಎಲ್ಲರನ್ನೂ ಕೊಂದಿದ್ದು’ ಎಂದ. ನಾವು “ತುಂಬಾ ಥ್ಯಾಂಕ್ಸ್ ಸರ್” ಎಂದು ಆದಷ್ಟು ಬೇಗ ಹೇಳಿ, ಮತ್ತೊಮ್ಮೆ ನಾವೇ ದುರ್ಗವನ್ನು ನೋಡಿಕೊಂಡು ಮನೆಗೆ ಹಿಂದಿರುಗಿದೆವು.

ಉತ್ತರ ಭಾರತದ ಗೈಡುಗಳು ಟೋಪಿ ಹಾಕುವುದರಲ್ಲಿ ನಿಸ್ಸೀಮರು. ಇವರುಗಳು ಡ್ರೈವರುಗಳ ಜೊತೆ ಕೈಗೂಡಿಸಿರುತ್ತಾರೆ. ತಿರುಗಾಡಲು ಯಾವುದಾದರೂ ಕಾರನ್ನೋ ಜೀಪನ್ನೋ ಬಾಡಿಗೆಗೆ ತೆಗೆದುಕೊಂಡೆವೆಂದರೆ ಮುಗಿಯಿತು. ಅದು ನೋಡಿ, ಇದು ನೋಡಿ, ಗೈಡುಗಳು ಸಿಗ್ತಾರೆ ಎಂದು ತಮ್ಮ ತಮ್ಮ ಮಿತ್ರರ ಬಳಿ ಕರೆದುಕೊಂಡು ಹೋಗುತ್ತಾರೆ. ಗೈಡುಗಳ ಫೀಸುಗಳಲ್ಲಿ ಇವರದೂ ಪಾಲಿರುತ್ತಲ್ಲಾ!

ಫತೇಪುರ್ ಸಿಖ್ರಿಗೆ ಹೋದರೆ ಒಬ್ಬ ಕಾಲೇಜು ಓದುವ ಹುಡುಗ ಬಂದು ಚಿತ್ರದುರ್ಗದ ‘ನಾಗರ ಹಾವು’ ಕಥೆಯಂತೆಯೇ ಮುಘಲ್-ಎ-ಆಜ಼ಾಮ್ ಕಥೆ ಒದರಿದ್ದನ್ನು ಕೇಳಲು ಮುನ್ನೂರು ರೂಪಾಯಿ ದಂಡ ತೆರಬೇಕಾಯಿತು. ಆ ಸಿನಿಮಾ ನೋಡಿದ್ದರೆ ನೂರು ರುಪಾಯಿಯೊಳಗೆ ಕೆಲಸ ಮುಗಿಯುತ್ತಿತ್ತು!

ತಾಜ ಮಹಲಿನ ಮುಂದೆ ನಿಂತಿದ್ದೇವೆ. ಭವ್ಯ ಕಟ್ಟಡ. ಬರಿಯ ಕಟ್ಟಡವಲ್ಲ, ಪ್ರೇಮಸೌಧ. ಇಡೀ ತಾಜಮಹಲಿನ ಬಗ್ಗೆ ನಮ್ಮ ಗೈಡು ಹೇಳಿದ್ದು what a beautiful structure, see this” ಎಂದಷ್ಟೆ. ಎಲ್ಲೆಲ್ಲಿ ಹೋದರೂ ಅವನು this is beautiful ಎನ್ನುತ್ತಿದ್ದ. ತಾಜಮಹಲಿನ ಸೌಂದರ್ಯವನ್ನು ಗೈಡಿನಿಂದ ಹೇಳಿಸಿಕೊಂಡು ತಿಳಿಯಬೇಕೇ? ನಮಗೆ ತಾಜಮಹಲಿನಲ್ಲಿ ಗೈಡು ಬೇಕಾಗಿದ್ದು ಅದರ ಇತಿಹಾಸವನ್ನು ತಿಳಿಸಲು. ಅವರುಗಳು ತಿಳಿಸುವುದಿಲ್ಲ. ವಿದೇಶಿ ಪ್ರವಾಸಿಗರಿಗೆ ಶಾಹ್ ಜಹಾನಿನ ಬಗ್ಗೆ ಬೇರೆಯದೇ ಇತಿಹಾಸವನ್ನೇ ಸೃಷ್ಟಿಸಿ ಟೋಪಿ ಹಾಕಿ ಕಳಿಸುವ ಹುನ್ನಾರ ಕೆಲವರದು. ಆದರೆ ಅನೇಕ ವಿದೇಶಿ ಪ್ರವಾಸಿಗರು ನಮ್ಮಂತೆ ಮೂಢರಲ್ಲ. ಅವರು ಸಾಕಷ್ಟು ಹೋಮ್‌ವರ್ಕ್ ಮಾಡಿರುತ್ತಾರೆ. ಇಂಥಾ ತಿಳಿಗೇಡಿ ಗೈಡುಗಳ ಮಾತುಗಳನ್ನು ಕೇಳಿ ಇದೇ ರೀತಿ ಅವರನ್ನು ಬೈದು ತಮ್ಮ ಪುಸ್ತಕದಲ್ಲಿ ಪ್ರಕಟಿಸುತ್ತಾರೆ. ತಾಜಮಹಲನ್ನು ದಿನಗಟ್ಟಲೆ ವೀಕ್ಷಿಸುತ್ತಾರೆ, ನಮ್ಮ ಹಾಗೆ ಅರ್ಧಗಂಟೆಯಲ್ಲ!

ಮಥುರಾ ನಗರಕ್ಕೆ ಹೋದರೆ ಯಾಕಾದರೂ ಬಂದೆವೋ ಎನ್ನುವಂತೆ ಮಾಡಿಬಿಡುತ್ತಾರೆ ಗೈಡುಗಳು. ಬೃಂದಾವನಕ್ಕೆ ಕರೆದೊಯ್ದ ಗೈಡು ‘ರಾತ್ರಿಯ ವೇಳೆ ಈ ತುಳಸೀ ಗಿಡಗಳೆಲ್ಲಾ ಗೋಪಿಕೆಯಾರಾಗಿ ಬಿಡುತ್ತಾರೆ, ಕೃಷ್ಣ ಬರುತ್ತಾನೆ, ಕೊಳಲನ್ನೂದುತ್ತಾನೆ, ನಮ್ಮ ಕಣ್ಣಿಗೆ ಕಾಣುವುದಿಲ್ಲವಷ್ಟೆ’ ಎಂದು ಬುರುಡೆ ಡುತ್ತಾನೆ. ದೇವಸ್ಥಾನಗಳಲ್ಲಿ ದರೋಡೆಕೋರರು ಪುರೋಹಿತರ ವೇಷ ಧರಿಸಿ ಕುಳಿತಿರುತ್ತಾರೆ, ಕುತ್ತಿಗೆ ಪm ಹಿಡಿದು ಹಣ ಕೀಳುತ್ತಾರೆ. ದೇವಸ್ಥಾನದ ಪ್ರತಿ ಕಲ್ಲಿನ ಮೇಲೂ ಏನಲ್ಲಾ ಅಂದರೂ ಇಪ್ಪತ್ತು ಹೆಸರುಗಳನ್ನು ಕೆತ್ತಿರಬಹುದು, ಹಣ ಕೊಟ್ಟವರ ಹೆಸರುಗಳಂತೆ ಅವು. ನಮ್ಮಲ್ಲಿ ಕಲ್ಲಿನ ಮೇಲೆ ಶಿಲ್ಪಕಲೆಯಿದ್ದಂತೆ, ಎಲ್ಲಾ ಕಲ್ಲುಗಳ ಮೇಲೂ ಹೆಸರುಗಳೇ. ಇಂಥಾ ದರೋಡೆಗೆ ಗುರಿ ಮಾಡುವ ಕೆಲಸ ಅಲ್ಲಿನ ದಿಗ್ದರ್ಶಿಗಳದ್ದು. ದರೋಡೆಯಲ್ಲಿ ಅವನ ಪಾಲನ್ನು ಗಿಟ್ಟಿಸಿಕೊಳ್ಳಬೇಕಲ್ಲ!!

ದಕ್ಷಿಣಭಾರತದ ಗೈಡುಗಳು ಸ್ವಲ್ಪ ಅಗ್ಗ. ಒಂದು ಗಂಟೆಗೆ ಐನೂರು ರೂಪಾಯಿಯಿಲ್ಲದೆ ಉತ್ತರಭಾರತದ ಗೈಡುಗಳು ಹತ್ತಿರವೂ ಸುಳಿಯುವುದಿಲ್ಲ. ದುರಂತವೆಂದರೆ ಗೈಡುಗಳು ಜೊತೆಯಿಲ್ಲದಿದ್ದರೆ ಅನೇಕ ಸ್ಥಳಗಳಲ್ಲಿ ನಮಗೆ ಮೂಲಭೂತ ಮಾಹಿತಿ ಕೊಡುವವರೂ ಇರುವುದಿಲ್ಲ. ಅವನು ಕಿಂಚಿತ್ ವಿಷಯವನ್ನೂ ಅರಿತುಕೊಂಡಿರುವುದಿಲ್ಲವೆಂಬುದು ಸ್ಪಷ್ಟವಾಗಿ ಗೊತ್ತಾದರೂ ವಿಧಿಯಿಲ್ಲದೆ ಅವನೇ ನಮ್ಮ ಗೈಡಾಗಿರುತ್ತಾನೆ. ಅವನ ಹೊಟ್ಟೆಪಾಡು, ನಮ್ಮ ಪ್ರಾರಬ್ಧ.

ಆಗಲೇ ಹೇಳಿದ ಹಾಗೆ ನಾನೂ ಒಬ್ಬ ಗೈಡಿನ ಕೆಲಸ ಮಾಡುತ್ತಿದ್ದವನೇ. ಆದರೆ ನನ್ನ ಪುಣ್ಯವೋ, ಅದೃಷ್ಟವೋ ಏನೋ ಎಲ್ಲೂ ಇಲ್ಲದ್ದನ್ನು ವೈಭವೀಕರಿಸಿ ಹೇಳುವುದೋ, ಹಣ ಕೀಳಲು ಗೊತ್ತಿಲ್ಲದ ಸ್ಥಳಗಳ ಬಗ್ಗೆ ಕಟ್ಟುಕಥೆಗಳನ್ನು ಹೇಳುವುದೋ ಮಾಡಿಲ್ಲದೇ ಇರುವುದರಿಂದ ಒಳ್ಳೆಯ ಹೆಸರನ್ನು ಸಂಪಾದಿಸದಿದ್ದರೂ ಕೆಟ್ಟ ಹೆಸರನ್ನು ಗಳಿಸಿಲ್ಲವೆಂಬ ತೃಪ್ತಿಯಿದೆ. ಸಾಹಸದ ಕ್ರೀಡೆಗಳಲ್ಲಿ ಗೈಡಿನ ಅವಷ್ಯಕತೆ ಇದ್ದೇ ಇರುತ್ತೆ. ಅದರಲ್ಲೂ ಚಾರಣ ಮಾಡುವಾಗಲಂತೂ ಕಾಡಿನ ಬಗ್ಗೆ ಅರಿತವರೊಬ್ಬರು ತಂಡದಲ್ಲಿದ್ದರೆ ಅವರೇ ಗೈಡು. ಕೆಲವು ಗುಂಪುಗಳು ಏನೂ ಗೊತ್ತಿಲ್ಲದೇ ಇರುವುದರಿಂದ ನನ್ನಂಥವರ ಬಳಿ ಬರುತ್ತಾರಾದ್ದರಿಂದ ಅಂಥವರಿಗೆ ನಾನು ಗೈಡಾಗಿರುತ್ತಿದ್ದೆ.

ಹೀಗೆ ಚಾರಣದ ಗೈಡು ನಾನಾಗಿದ್ದಾಗ, ನನಗೂ ಹಲವು ಸ್ಥಳಗಳಲ್ಲಿ ಗೈಡುಗಳಿರುತ್ತಿದ್ದರು. ಸೋಲಿಗೆರೆಯ ಸೋಲಿಗ ಗಿರಿಮಾದ, ಬಾಣತಿಮಾರಿಯ ನಾಗ, ತಡಿಯಾಂಡಮೋಳಿನ ಚಂಗಪ್ಪ - ಹೀಗೆ. ಇವರುಗಳು ಅಲ್ಲಿನ ಸ್ಥಳೀಯರಾದ್ದರಿಂದ ಜಾಗಗಳ ಬಗ್ಗೆ ಆಮೂಲಾಗ್ರವಾಗಿ ಬಲ್ಲವರಾಗಿದ್ದು ಎಲ್ಲೂ ಇಲ್ಲ ಸಲ್ಲದ ಕಥೆಗಳನ್ನು ಹೇಳಿ ಹಾದಿ ತಪ್ಪಿಸುವುದಿಲ್ಲ. ತಮ್ಮ ವಿದ್ಯೆಗಳನ್ನೂ, ಅನುಭವಗಳನ್ನೂ, ತತ್ತ್ವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಲು ಕಾತುರರಾಗಿರುತ್ತಾರೆ.

ಸೋಲಿಗರ ಗಿರಿಮಾದನು ಒಮ್ಮೆ ಮುತ್ತತ್ತಿಯ ಕಾಡಿನಲ್ಲಿ ಚಾರಣದ ಹಾದಿಯನ್ನು ತೋರಿಸುತ್ತಿದ್ದಾಗ ಅವನನ್ನು ಕೇಳಿದ್ದೆ, “ಆನೇನೋ ಕರಡೀನೋ ಎದುರು ಬಂದ್ಬಿಟ್ರೆ ಏನ್ ಮಾಡ್ತೀಯಾ?” ಅಂತ, ಅದಕ್ಕವನು ಎಂಥಾ ಉತ್ತರ ಕೊಟ್ಟನೆಂದರೆ ನಾನು ಮರುಪ್ರಶ್ನೆಯೇ ಮಾಡದೆ ಅವನ ಬೆನ್ನು ತಟ್ಟಿದ್ದೆ. “ನೋಡಿ ಸಾ, ಕಲ್ಡಿ ಬಂದ್ರೆ, ಆನೇ ಬಂದ್ರೆ ಅವು ಏನ್ ಮಾಡ್ತದೆ ಅಂತ ನಮ್ಗೆ ಗೊತ್ತಿರುತ್ತೆ, ಓಡ್ ಹೋಗ್ಬಿಟ್ಟೋ ಬಚ್ಚಿಟ್ಕೊಂಡೋ ತಪ್ಸ್ಕೊತೀವಿ, ಆದ್ರೆ ಮನ್ಸ ಬಂದ್ರೆ ಅವ್ನು ಏನ್ ಮಾಡ್ತಾನೆ ಅಂತ ಗೊತ್ತಾಗಲ್ಲ” ಎಂದಿದ್ದ!

ಅನೇಕ ದಿಗ್ದರ್ಶಿಗಳು ನಿಜವಾಗಿಯೂ ದಿಕ್ಕು ತೋರಿಸುವವರೇ. ಅಂಥವರು ನಮಗೆ ಬೇಕಾಗಿದೆ. ದಿಕ್ಕು ತಪ್ಪಿಸುವವರಲ್ಲ!

-ಅ

Wednesday, March 30, 2011

ಕನಸು ಕಾಣುವ ಹೃದಯ

ಹುಲ್ಲ ರಾಶಿ, ಹೂವ ಮೆತ್ತೆ
ಒಂದೆಯಲ್ಲವೇನು ಮತ್ತೆ
ಕನಸು ಕಾಣೊ ಹೃದಯಕೆ?
ಬಿಸಿಲ ಝಳವು, ಪ್ರಿಯನ ಮುತ್ತು
ಏನು ಭೇದ ಯಾವ ಹೊತ್ತು
ಮನದ ಸೂರ್ಯನುದಯಕೆ?

ಬೀಸುಗಾಳಿ, ಭಾವಗೀತ
ಎರಡು ಕೂಡ ಬಗೆಯತೀತ
ಮೈ ಚೆಲ್ಲಿರೆ ಸ್ಪರ್ಶಕೆ.
ನೆಲದ ಕಂಪು, ಹೂವ ಘಮವು
ಎಲ್ಲವೀಗ ಒಂದೆ ಸಮವು
ನಿನ್ನಪ್ಪುಗೆ ವರ್ಷಕೆ.

ಮೈಯ್ಯ ವಸ್ತ್ರ, ಮುಗಿಲ ಚಿತ್ರ
ರೀತಿಯೊಂದೆ - ನೆಪಕೆ ಮಾತ್ರ
ಕರಗುವುದಿವು ಚಣದಲಿ.
ಬುವಿಯ ನೆಲವೊ, ದಿವದ ನೆಲೆಯೊ
ರೂಪವೊಂದೆಯಾದ ಕಲೆಯೊ
ನಿನ್ನೊಳೆನ್ನ ಋಣದಲಿ.

-ಅ
22.03.2011
1PM

Monday, March 28, 2011

ಅಜ್ಜಿಯ ಯೋಚನೆ

ನೂರು ದಾಟಿದ ಅಜ್ಜಿಗೆ ಊರ ಬಸ್ಸಿನ ಯೋಚನೆ.
ಹತ್ತು ಹೊಡೆದರೂ ಬಾರದ "ಬಸ್ಸೇನಾಯಿತೊ ಕಾಣೆ."
ಎಂಬ ಚಿಂತೆಯು ಅಜ್ಜಿಗೆ.

"ಊಟ ಮಾಡಲಿ ಹೇಗೆ, ಬಸ್ಸು ಬಾರದೆ ಇದ್ದರೆ?"
ಎಂದು ಕೇಳದೇ ಇದ್ದರೂ ಮುಖದಲ್ಲಿ ಎಲ್ಲವೂ ವ್ಯಕ್ತ.
ಮರುಘಳಿಗೆಯೇ ಊಟದಲ್ಲಿ ಸಕ್ತ.

ಹಗಲೆಲ್ಲ ಹೂಕಟ್ಟಿ - ಕಟ್ಟಿ, ಕಟ್ಟಿ, ಕಟ್ಟಿ
ಏಕಾಂಗಿ ಅಳಗುಳಿಮನೆಯಲ್ಲಿ ಗೆದ್ದು
ದಣಿದ ನೂರು ದಾಟಿದ ಅಜ್ಜಿಯ
ದಿನದಿರುಳ ಮಿತ್ರ ಬರಲಿಲ್ಲೆಂಬ ವಿರಾಗ ಚಿಂತೆ?
ಕೇಳುವಳು "ನಾಳೆಯಲ್ಲವೆ ಕೇರಳಾಪುರದಲ್ಲಿ ಸಂತೆ?"

ನೂರು ದಾಟಿದ ಅಜ್ಜಿಗೆ ಹೆಚ್ಚೇನಿರುವುದು ಯೋಚನೆ?
ಮಲಗುವ ಹೊತ್ತು ಪುಟ್ಟ ಪ್ರಾರ್ಥನೆ -
ಸುಬ್ರಹ್ಮಣ್ಯನ ದಯದಿಂದ ಒಳ್ಳೆಯ ಸಾವಿನ ಯಾಚನೆ.

ಮರುದಿನ ಎದ್ದು
ಹೂ ಕಟ್ಟಿ - ಕಟ್ಟಿ, ಕಟ್ಟಿ, ಕಟ್ಟಿ
ಅಳಗುಳಿಮನೆಯಲ್ಲಿ ಗೆದ್ದು
ಬಸ್ಸಿಗೆ ಕಾದು
ಗೊಜ್ಜನ್ನು ಮೆಲ್ಲುವ
"ಕರ್ಮ"ಯೋಗಿಗೆ ಇನ್ಯಾವ ಯೋಚನೆ?

-ಅ
28.03.2011
11.45AM

Monday, March 21, 2011

ರಾತ್ ಕಲೀ ಏಕ್ ಖ್ವಾಬ್ ಮೇ...

ಆಗ ಬರುತ್ತಿದ್ದ ಕ್ಲೋಸಪ್ ಅಂತಾಕ್ಷರೀ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಿದ್ದೆ. "ರ" ಅಕ್ಷರ ಬಂದಿತೆಂದರೆ ಸ್ಪರ್ಧಿಗಳು ಹೇಳುತ್ತಿದ್ದ ಮೊದಲ ಹಾಡೇ ರಾತ್ ಕಲೀ ಏಕ್ ಖ್ವಾಬ್ ಮೇ ಆಯೀ.... ಆ ಹಾಡನ್ನು ಆಗ ಸ್ಪರ್ಧಿಗಳ ಕಂಠದಲ್ಲಿ ಕೇಳಿದ್ದೆನೇ ವಿನಾ ಕಿಶೋರ್ ಕಂಠದಲ್ಲಿ ಕೇಳಲು ಎರಡು ವರ್ಷ ಬೇಕಾಯಿತು. ಅಬ್ಬಾಹ್, ಅಷ್ಟು ರೊಮ್ಯಾಂಟಿಕ್ ಹಾಡು ಇನ್ನೊಂದಿರಲು ಸಾಧ್ಯವೇ ಎನ್ನಿಸುವಷ್ಟು ಸೊಗಸಾಗಿ ಹಾಡಿರುವ ಕಿಶೋರ್ ಕುಮಾರರ ಶಕ್ತಿ ಎಂಥದ್ದಪ್ಪ ಎಂದರೆ, ಧ್ವನಿ ಮಾತ್ರದಿಂದಲೇ ಸುಂದರ ಹೂದೋಟವನ್ನೂ, ಅಪ್ರತಿಮ ಚೆಲುವೆಯನ್ನೂ, ಅವಳನ್ನು ಕುರಿತು ಹಾಡುತ್ತಿದ್ದ ಸುಂದರನನ್ನು, ಎಲ್ಲವನ್ನೂ ಸೃಷ್ಟಿಸಬಲ್ಲರು. ಮತ್ತೆ ಇನ್ನೆರಡು ವರ್ಷವಾದಮೇಲೆ ಆ ಹಾಡಿನ ವಿಡಿಯೋ ನೋಡಿದೆ. ಯಾಕಾದರೂ ನೋಡಿದೆನೋ ಎನ್ನಿಸಿಬಿಟ್ಟಿತು. ಯಾರೋ ಅರ್ಚನ ಅಂತೆ, ರಾತ್ ಕಲೀ ಎಂದರೆ ಹೀಗಾ ಇರೋದು ಎನ್ನಿಸಿತು. ಇನ್ಯಾರೋ ನವೀನ್ ನಿಶ್ಚಲ್ ಅಂತೆ - ಚಪ್ಪಲಿ ಹಾಕಿಕೊಂಡು ಕೈಯಲ್ಲೊಂದು ನೋಟ್ ಪುಸ್ತಕ ಹಿಡಿದುಕೊಂಡು ಹುಡುಗಿಯನ್ನು ಕುರಿತು ಹಾಡುತ್ತಿರುವ ಈ ಹಾಡಿನ ದೃಶ್ಯ ಸ್ವಲ್ಪವೂ ಇಂಪ್ರೆಸ್ ಮಾಡಲಿಲ್ಲ.

ಅರ್ಚನಾ ಕಥೆ ಏನಾಯಿತೋ ಗೊತ್ತಿಲ್ಲ, ಆದರೆ ನವೀನ್ ನಿಶ್ಚಲ್ ಕಥೆಯಂತೂ ಆತನ ಜೀವನ ಪರ್ಯಂತ ಹೀಗೇ ಆಯಿತೇನೋ.


ರಾಜೇಶ್ ಖನ್ನಾರಂತ ಬೃಹತ್ ಪರ್ವತ ಇದ್ದ ಕಾಲ ಅದು. ಅಮಿತಾಭ್ ಬಚ್ಚನ್ ಎಂಬ ಬಿರುಗಾಳಿಗೆ ಈ ಪರ್ವತವೇ ಅಲ್ಲಾಡಿ ಬಿದ್ದು ಹೋಯಿತಷ್ಟೆ. ಇನ್ನು ನವೀನ್ ನಿಶ್ಚಲ್ ಈ ಬಿರುಗಾಳಿಗೆ ಸಿಕ್ಕ ಹುಲ್ಲು ಎಂದೇ ಹೇಳಬೇಕು. ಆದರೂ ಎಲ್ಲೋ ಅಲ್ಲೊಂದು ಇಲ್ಲೊಂದು ರಾತ್ ಕಲೀನೋ, ತುಮ್ ಜೋ ಮಿಲ್ ಗಯೇ ಹೋ...ನೋ, ನೀಡಿದರು ನವೀನ್ ನಿಶ್ಚಲ್. ಅದು ಕಿಶೋರ್, ರಫಿಗಳಿಂದ ಹಿಟ್ ಆಯಿತೆಂದರೂ ಆಶ್ಚರ್ಯವಿಲ್ಲ. ಹಾಗಂತ ಇವರೇನೂ ಪ್ರತಿಭೆಯೇ ಇಲ್ಲದ ವ್ಯಕ್ತಿ ಆಗಿರಲಿಲ್ಲ. ಅವರ ಪ್ರತಿಭೆಯೇನೆಂಬುದು ಬಾಲಿವುಡ್ ಕಾಲಿಂಗ್ ಚಿತ್ರವನ್ನು ನೋಡಿದವರಿಗೆಲ್ಲರಿಗೂ ಗೊತ್ತು. ಪ್ರತಿಭೆ ಮಾತ್ರವಲ್ಲ, ಅವರ ದುರದೃಷ್ಟದ ಕಾರಣವನ್ನೂ ಊಹಿಸಬಲ್ಲರು. ದೂರದರ್ಶನದಲ್ಲಿ ಬರುತ್ತಿದ್ದ ದೇಖ್ ಭಾಯ್ ದೇಖ್ ಧಾರಾವಾಹಿಯನ್ನು ಹೇಗೆ ತಾನೆ ಮರೆಯಲು ಸಾಧ್ಯ! ಅದನ್ನು ನೋಡಿದವರು ನವೀನ್ ನಿಶ್ಚಲರಿಗೆ ಪ್ರತಿಭೆಯಿರಲಿಲ್ಲವೆಂದು ಹೇಗೆ ತಾನೆ ಹೇಳಿಯಾರು!

ಮೊನ್ನೆ ನವೀನ್ ನಿಶ್ಚಲ್ ಅವರು ಹೃದಯಾಘಾತದಿಂದ ಮರಣ ಹೊಂದಿದರಂತೆ. ಅವರ ಬಗ್ಗೆ ನೆನಪು ಮಾಡಿಕೊಳ್ಳಬೇಕೆನ್ನಿಸಿತು.

ಅವರ ನೆನಪಿನಲ್ಲಿ ಈ ವೀಡಿಯೋ..-ಅ
21.03.2011
3PM

Thursday, March 17, 2011

ಶ್ರೀ

ಮುಗಿಲಂಚಿನಲ್ಲಿ
ಕಿರುಬಯಕೆಯೆಂಬ
ಗೆರೆಯೆಳೆದ ಚಿತ್ರ-
ವಾಗಸದ ತುಂಬ
ಅಲ್ಲೆಲ್ಲ ನಿನ್ನ ಬಿಂಬ.

ಎವೆಯೊಳಗೆ ವಿಶ್ವ-
ವಡಗಿಹ ರಹಸ್ಯ
ಅದೆ ಬೆಳಗುತಿರುವ
ರವಿ ಶಶಿಯ ದೃಶ್ಯ?
ಅಲ್ಲಲ್ಲ, ಚೆಲುವಿನಾಸ್ಯ!

ಕರಿಮುಗಿಲಿನಿಂದ
ಬುವಿಗಿಳಿದ ವರ್ಷ
ಒಳರತ್ನವನ್ನು
ಹೊರ ತೆಗೆದ ಹರ್ಷ
ಇರುತಿರಲಿ ಸತತ ಸ್ಪರ್ಶ.

ಕಗ್ಗತ್ತಲಲ್ಲಿ
ಮೂಡಿರಲು ಸವಿತೆ
ನೀಗಿಸಲು ಬಾಳ
ಬೆಳಕಿನಾ ಕೊರತೆ
ಹೊತ್ತಿಸುತ ಕನಸ ಹಣತೆ

ಮರೆಯಾದ ಮಾಯೆ
ಬೆರೆಯುವಳೆ ನಾಳೆ?
ಸಿರಿಯೊಂದು ಛಾಯೆ
ಅರಿಯುವುದೆ ಬಾಳೆ?
ಬಾಳೇನು? ಬಿಳಿಯ ಹಾಳೆ!

-ಅ
08.03.2011
7PM

Tuesday, March 8, 2011

ಪಕ್ಷಿಗಳ ಕೂಗು

ಎದುರು ಮನೆಯಲ್ಲಿ
ಪಕ್ಷಿಗಳು ಕೂಗುತ್ತಿದ್ದವು
ಪಂಜರದೊಳಗೆ ಕೂತು
ಇಂದು ಮುಂಜಾನೆ.

ಬೆಳಗಾಯಿತೆಂಬ ಹರ್ಷವೇ?
ಬೇಸಿಗೆಯ ತಂಗಾಳಿಯ ಆನಂದವೇ?
ಪಕ್ಕದ ಪಂಜರದಲ್ಲಿರುವ ಸಂಗಾತಿಯ ಆಸೆಯೇ?
ಹೊಂಚುಹಾಕುತ್ತಿರುವ ಬೆಕ್ಕಿನ ಭೀತಿಯೇ?
ಏಕೆ ಕೂಗುತ್ತಿವೆ ಈ ಪಕ್ಷಿಗಳು -
ಪಂಜರದೊಳಗೆ?

ನನ್ನ ಹಾಗೆಯೇ ಯೋಚಿಸುತ್ತಿದ್ದ
ಆ ಪಂಜರದೊಡೆಯ - ಚಡ್ಡಿಯ ಹುಡುಗ.
ತನ್ನ ಮನೆಯೊಳಗಿನಿಂದ ಕರೆ ಬಂದಿತು:
"ಪರೀಕ್ಷೆಗೆ ಓದಿಕೊಳ್ಳುವುದು ಬಿಟ್ಟು
ಏನೋ ನಿನ್ನ ತಲೆಹರಟೆ?"
ನನ್ನ ಮನೆಯೊಳಗಿನಿಂದಲೂ ಒಂದು ಕರೆ ಕೇಳಿಸಿತು :
"...................."

ಪಕ್ಷಿಗಳು ಕೂಗುತ್ತಿವೆ
ಬೇರೆ ಬೇರೆ ಪಂಜರಗಳೊಳಗಿನಿಂದ.
ಕೇಳುವವರಿಗೆ ಬರಿ ಶಬ್ದ
ಹಾರಿ ಹೋದರೆ ಎಲ್ಲ ಸ್ತಬ್ಧ.

- ಅ
08.03.2011
12 PM

Friday, February 25, 2011

ಟಿಂಕಲ್, ನಾನು ಮತ್ತು ಅಂಕಲ್ ಪೈ

ನಾನು ಚಿಕ್ಕಂದಿನಿಂದ ಕನ್ನಡ ಪುಸ್ತಕಗಳನ್ನೇನೂ ಓದಿಕೊಂಡು ಬಂದವನಲ್ಲ. ಕಾಲೇಜಿಗೆ ಬಂದ ಮೇಲೆ ಮೇಷ್ಟ್ರ ಒತ್ತಾಯದಿಂದ ಕನ್ನಡ ಪುಸ್ತಕಗಳನ್ನು ಓದಲು ಆರಂಭಿಸಿದ್ದು. ಬಾಲ್ಯದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ್ದು ಸಾಹಿತ್ಯವಲ್ಲ. ಕಾಮಿಕ್‍ಗಳು. ಇಂದ್ರಜಾಲ ಮತ್ತು ಟಿಂಕಲ್. ಇಂದ್ರಜಾಲದ ಲೀ ಫಾಕ್ ಕಾಡಿನ ಬಗ್ಗೆ ಆಸಕ್ತಿಯನ್ನು ಕೆರಳಿಸಿದರೆ, ಟಿಂಕಲ್ ತನ್ನಲ್ಲಿದ್ದ ಚಿತ್ರಗಳ ನಡುವೆಯೂ ಕಲ್ಪನೆಯ ಲೋಕವನ್ನು ನಿರ್ಮಿಸಿತು.ಕಾಲಿಯಾ ದಿ ಕ್ರೋ ಎಂಬ ಸರಣಿಯು ಮೊಸಲೆಯಂತಹ ಪ್ರಾಣಿಯನ್ನು "ಕ್ರೂರ" ಮೃಗ ಎಂದು ಕರೆಯಲು ಸಾಧ್ಯವೇ ಇಲ್ಲ ಎಂಬ ಭಾವನೆಯನ್ನುಂಟು ಮಾಡಿತು. ಟೋಪಿ ಧರಿಸಿದಾಗಲೆಲ್ಲ ಶಿಕಾರಿ ಶಂಭುವನ್ನು ನೆನೆಸಿಕೊಳ್ಳುವಂತೆ ಮಾಡಿತು. ಕುತಂತ್ರ ರಾಜಕಾರಣಿಗಳನ್ನು ನೋಡಿದಾಗಲೆಲ್ಲವೂ ತಂತ್ರಿಯ ನೆನಪಾಗದೇ ಇರಲು ಸಾಧ್ಯವಿಲ್ಲ. ಪೆದ್ದ ಕೆಲಸ ಮಾಡಿದಾಗ "ಅಯ್ಯೋ ಸುಪಂಡಿಯಾಗಿ ಬಿಟ್ಟೆ" ಎಂದು ಅದೆಷ್ಟು ಸಲ ಅಂದುಕೊಂಡಿದ್ದೇನೋ. ದಡ್ಡನನ್ನು ನೋಡಿ ಸುಪಂಡಿಯನ್ನು ನೆನೆಸಿಕೊಂಡಂತೆ ಬುದ್ಧಿವಂತನನ್ನು ನೋಡಿದಾಗಲೆಲ್ಲವೂ ಹೋಡ್ಜಾ ನೆನಪಾಗುವುದು ಸತ್ಯ. ಮನೆಯಲ್ಲಿ ಪರ್ಣಿಕಾ "ನಂಗೆ ಅದು ಗೊತ್ತು, ಇದು ಗೊತ್ತು" ಎಂದಾಗ "chamataka knows everything!" ಎಂದು ಹೇಳುತ್ತಲೇ ಇರುತ್ತೇವೆ. (ಡೂಬ್ ಡೂಬಿನ ಡೈಲಾಗು). ವಿಜಯಾ ಅಂತೂ ತನ್ನ ಮುದ್ದಿನ ನಾಯಿಗೆ ಕೀಚು ಎಂದೇ ಹೆಸರಿಟ್ಟಿದ್ದಳು. ಕೀಚು ನನಗೂ ಮುದ್ದಿನವನೇ ಆಗಿದ್ದ, ಬಡ್ಡಿ ಮಗ. ಈ ಎಲ್ಲ ಸರಣಿಗಳಿಗೂ illustrationsನ ಹೆಗ್ಗಳಿಕೆ ಅಂಕಲ್ ಪೈ ಅವರದು. ಜೊತೆಗೆ ಮಕ್ಕಳು ಪತ್ರ ಬರೆದು ಅಂಕಲ್ ಪೈ ಅವರನ್ನು ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುತ್ತಲೂ ಇದ್ದರು.

ಈ ಎಲ್ಲ ಫ್ಯಾಂಟಸಿಗಳ ಮಧ್ಯೆ, ಅಲ್ಲಲ್ಲಿ ಬರುತ್ತಿದ್ದ ವೈಜ್ಞಾನಿಕ ವಿಷಯಗಳು, ಚಿತ್ರಗಳು, ವಿವರಣೆಗಳು ಶಾಲೆಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದುಕೊಟ್ಟಿವೆ. ಇಂದಿಗೂ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಟಿಂಕಲ್‍ಗಳು ರಾರಾಜಿಸುತ್ತಿವೆ. ಇದಲ್ಲದೆ "ಅಮರ ಚಿತ್ರ ಕಥಾ"ದ ಇನ್ನೂ ಅನೇಕ ಕಾಮಿಕ್ಕುಗಳು ಈಗಲೂ ಮನಸೆಳೆಯುತ್ತಿವೆ. ಬುದ್ಧನ ಕಥೆ, ಮಹಾಭಾರತ (ಇದೊಂದು ದೊಡ್ಡ ಸರಣಿ), ಕರಡಿಯ ಕಥೆಗಳು, ಪುರಾಣದ ಕಥೆಗಳು - ಎಷ್ಟು ಎಂದು ಹೇಳುವುದು! ಓದಲು ಬಾರದೇ ಇದ್ದ ವಯಸ್ಸಿನಿಂದಲೂ ಅಮರ ಚಿತ್ರ ಕಥೆಯನ್ನು "ಓದುತ್ತಿದ್ದೇನೆ" - ಚಿತ್ರಗಳನ್ನು ನೋಡುತ್ತ!ಇಷ್ಟರ ಮಟ್ಟಿಗೆ ನನ್ನ (ನಮ್ಮ - ನನ್ನ ಮತ್ತು ವಿಜಯಳ) ಬದುಕಿನಲ್ಲಿ ಟಿಂಕಲ್‍ಗೆ ಸ್ಥಾನ ದೊರಕಿದೆ. ಇದರ ಕರ್ತೃ ಅಂಕಲ್ ಪೈ ಈ ಎಲ್ಲ ಪಾತ್ರಗಳಲ್ಲೂ ಮಿಂಚಿದರು. ಇವರು ಕರ್ನಾಟಕದವರು ಎಂದು ಇವತ್ತೇ ಗೊತ್ತಾಗಿದ್ದು ನನಗೆ. ಇಲ್ಲಿಯವರೆಗೂ ಇವರು ಯಾವ ಊರಿನವರು ಎಂದು ಯೋಚಿಸಲೂ ಸಹ ಹೋಗಿರಲಿಲ್ಲ. ಅವರು ಹೋಗಿಬಿಟ್ಟರು ಎಂಬ ಸುದ್ದಿ ಬಂದಾಗ ಇಂಟರ್ನೆಟ್ಟಿನಲ್ಲಿ ಹುಡುಕಿದಾಗ ತಿಳಿಯಿತು. ಮುಂಬರುವ ಟಿಂಕಲ್ಲುಗಳಲ್ಲಿ ಅವರ ಪ್ರಭಾವವನ್ನಾದರೂ ಕಾಣಬಹುದೆಂಬ ಆಶಯವನ್ನು ಹೊಂದಿರುವ ಅಭಿಮಾನಿಗಳಲ್ಲಿ ನಾನೂ ಒಬ್ಬ.

ಲಾಂಗ್ ಲಿವ್ ಅಂಕಲ್ ಪೈ.

-ಅ
25.02.2011
3PM

Friday, February 18, 2011

ಸ್ಪರ್ಧಾಂ ತ್ಯಜತ

ಕಳೆದ ಒಂದು ತಿಂಗಳಲ್ಲಿ ಮೂರು ಸಲ ಬೇರೆ ಬೇರೆ ಸ್ಪರ್ಧೆಗಳಲ್ಲಿ ತೀರ್ಪುಗಾರನಾಗುವ ಸಂದರ್ಭ ಒದಗಿ ಬಂತು. ಯಾಕಾದರೂ ಬಂತೋ ಎಂದು ಪ್ರತಿಯೊಂದು ಸ್ಪರ್ಧೆ ಮುಗಿದಾಗಲೂ ಅನ್ನಿಸಿತು.

ಮೊದಲಿಗೆ ಇಂಟರ್ ಸ್ಕೂಲ್ "ಫೋಟೋ ಶೂಟ್" ಸ್ಪರ್ಧೆ - ಮಕ್ಕಳು ತೆಗೆದ ವರ್ಣ ಚಿತ್ರಗಳು, ಅವುಗಳನ್ನು ಎಡಿಟ್ ಮಾಡಿ, ಕೊಲಾಜ್ ಮಾಡಿ ಕೊಟ್ಟ ಪ್ರೆಸೆಂಟೇಷನ್ನು ನಿಜಕ್ಕೂ ಅದ್ಭುತ! ಕೆಲವರಂತೂ ಬಹಳ ಪ್ರೊಫೆಷನಲ್ ಆಗೇ ಪ್ರದರ್ಶಿಸಿದ್ದರು. ಇವರೇನು ಹೈಸ್ಕೂಲು ವಿದ್ಯಾರ್ಥಿಗಳೋ ಅಥವಾ ಸಿನಿಮಾ ಎಡಿಟರ‍್-ಗಳೋ ಎಂಬ ಅಚ್ಚರಿ ನನ್ನೊಡನೆ ತೀರ್ಪುಗಾರರಾದ ಉಳಿದವರಿಗೂ ಬರದೇ ಇರಲಿಲ್ಲ. ಅಂತೂ ಮೂರು ಬಹುಮಾನಗಳನ್ನೇನೋ ಕೊಟ್ಟೆವು.

ಕಳೆದ ವಾರವಷ್ಟೆ ’ಯೋಗ’ ಸ್ಪರ್ಧೆಗೆ ತೀರ್ಪುಗಾರನಾಗಿ ಹುಚ್ಚನಾಗುವುದೊಂದು ಬಾಕಿ. ಗುಂಪಲ್ಲಿ ಯೋಗಾಸನದ ಪ್ರದರ್ಶನ ಮಾಡುವ ಒಂದನೆಯ ಮತ್ತು ಎರಡನೆಯ ತರಗತಿಯ ಮಕ್ಕಳನ್ನು ಜಡ್ಜ್ ಮಾಡುವುದಾದರೂ ಹೇಗೆ? ಚಕ್ರಾಸನವನ್ನು ಚಕ್ರಕ್ಕಿಂತ ಗುಂಡಗೆ ಹಾಕಲು ಸಮರ್ಥರು - ಎಲ್ಲರೂ! ವೃಕ್ಷಾಸನಕ್ಕೆ ವೃಕ್ಷವೇ ನಾಚಬೇಕು! ರಬ್ಬರಿಗಿಂತ ಮೃದುವಾದ ಮೂಳೆಗಳುಳ್ಳ ಈ ಚಿಕ್ಕ ಮಕ್ಕಳಿಗೆ ಯೋಗ ಸ್ಪರ್ಧೆಯಿಟ್ಟಿರುವುದೇ ತಪ್ಪೆಂದು ತೀರ್ಪು ಕೊಡಬೇಕೆಂದಿದ್ದೆ. ಆದರೆ ನನ್ನೊಡನೆ ಇನ್ನೊಬ್ಬರು ತೀರ್ಪುಗಾರರಿದ್ದುದರಿಂದ ಯಾವ ಯಾವ ಆಸನಗಳನ್ನು ಹೇಗೆ ಹೇಗೆ ಮಾಡಬೇಕು, ಹೇಗೆ ಹೇಗೆ ಮಾಡಬಾರದು ಎಂದು ಮಕ್ಕಳನ್ನು ಕುರಿತು ಹತ್ತು ನಿಮಿಷ ಭಾಷಣವನ್ನು ಮಾಡಿ ನಂತರ ಮೂರು ಬಹುಮಾನಗಳನ್ನು ಕೊಡುವುದೆಂದು ಹೇಳಿದರು. ನಾನು ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಮಕ್ಕಳಿಗೆ ಅವರ ಭಾಷಣ ಎಷ್ಟು ಅರ್ಥವಾಯಿತೋ ಪತಂಜಲಿಯೇ ಬಲ್ಲ.

ನಿನ್ನೆ ಹಾಡುಗಾರಿಕೆ ಸ್ಪರ್ಧೆಗೆ ತೀರ್ಪುಗಾರನಾಗಿ "ಸ್ಪರ್ಧಾಂ ತ್ಯಜತ" ಎಂಬ ನಿರ್ಣಯಕ್ಕೆ ನಾನು ಬಂದುಬಿಟ್ಟೆ. ಮಕ್ಕಳೇನೂ ಸೊಗಸಾಗಿ, ಅದ್ಭುತವಾಗಿ ಹಾಡಲಿಲ್ಲವಾದರೂ ನಾನು ತೀರ್ಪುಗಾರನಾಗಲು ಯೋಗ್ಯನಲ್ಲ ಎಂಬ ಸತ್ಯ ಮೂರಕ್ಕೆ ಮುಕ್ತಾಯ ಎಂಬಂತೆ ನನಗೆ ಮನವರಿಕೆಯಾಯಿತು. Better late than never.

.....................................................................................

ಇನ್ನೊಂದು ವಾರದಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಆರಂಭವಾಗಲಿದೆ. ಬೇರೆ ಬೇರೆ ತರಗತಿಗಳ ಪರೀಕ್ಷೆಗಳೂ ಸಹ ಮಾರ್ಚಿನಲ್ಲೇ ಇರುತ್ತವೆ. ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಯ ರೀತಿಯು ಬಹಳ ಬದಲಾಗಿರುವುದು ಮತ್ತು ಇಳಿಮುಖವಾಗಿರುವುದು ದುರಂತ.

ಅನೇಕ ಪರೀಕ್ಷೆ ಇಲಾಖೆಗಳು rank ಪದ್ಧತಿಯನ್ನು ತೆಗೆದು ಹಾಕಿ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಅಪಕಾರ ಮಾಡಿದ್ದಾರೆಂದು ನನ್ನ ನಿಲುವು. ಸಿ.ಬಿ.ಎಸ್.ಈ. ಪದ್ಧತಿಯಲ್ಲಿ ಪರೀಕ್ಷೆಯನ್ನೇ ತೆಗೆದು ಹಾಕಿ ಮಕ್ಕಳನ್ನು ಅಧೋಗತಿಗೆ ನೂಕುತ್ತಿದ್ದಾರೆಂದು ಅನ್ನಿಸುತ್ತಿದೆ. ಪುಣ್ಯಕ್ಕೆ ಐ.ಸಿ.ಎಸ್.ಈ. ಯಲ್ಲಿ ಪರೀಕ್ಷೆಗಳು ಜೀವಂತವಾಗಿವೆ.

ಕಂಪ್ಯೂಟರ್ ಪರೀಕ್ಷೆಯಲ್ಲಿ ಕೇವಲ ನಲವತ್ತು ತೆಗೆದುಕೊಂಡು ಪಾಸಾದ ಹುಡುಗಿಯೊಬ್ಬಳು ನನ್ನ ಬಳಿ ಬಂದು "ನನಗೆ computing aptitude ಇರೋದು ಇಷ್ಟೇ ಸರ್, ಏನು ಮಾಡೋದು?" ಎಂದು ಹೇಳುತ್ತಾಳೆ! "ಅದನ್ನು ನಿರ್ಧರಿಸುವುದು ನೀನಲ್ಲಮ್ಮ, ನಾನು!" ಎಂದು ಗದರದೆ ಬೇರೆ ವಿಧಿಯಿರಲಿಲ್ಲ. ನಾವು (ಪೋಷಕರು, ಶಿಕ್ಷಕರು) ಮಕ್ಕಳನ್ನು ಎಷ್ಟರ ಮಟ್ಟಿಗೆ comfort ಮಾಡುತ್ತಿದ್ದೇವೆಂದರೆ ಬದುಕಿನಲ್ಲಿ ಅವರಿಗೆ ಯಾವ ಸಮಸ್ಯೆಯೂ ಬರುವುದೇ ಇಲ್ಲವೆಂಬ ಭಾವನೆಯನ್ನುಂಟು ಮಾಡುತ್ತಿದ್ದೇವೆ. ಹೊರ ಜಗತ್ತಿನ ಸ್ಪರ್ಧೆಗೆ ಹೇಗೆ ಮುಖ ಮಾಡುವುದೆಂದು ಮರೆಸಿಬಿಡುತ್ತಿದ್ದೇವೆ. ಕ್ರೀಡಾಶಿಕ್ಷಣದಲ್ಲಿ ಬಳಸುತ್ತಿರುವ ರೀತಿಯನ್ನು academicsನಲ್ಲಿ ಬಳಸುತ್ತಿಲ್ಲ. ಪರೀಕ್ಷೆಗಳಲ್ಲಿ ಸುಲಭವಾಗಿ ಪಾಸಾಗಬಹುದು ಎಂಬ ಭಾವನೆ ಮಕ್ಕಳಲ್ಲಿ ನೆಲೆಯೂರಿಬಿಟ್ಟಿದೆ. ಪಠ್ಯೇತರ ಸ್ಪರ್ಧೆಗಳಲ್ಲೂ ಅಷ್ಟೆ, ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವನೆಯೇ ಇರುವುದಿಲ್ಲ. ಸೋತವರಿಗೆ ಬೇರೆಯವರು ಸಾಮಾನ್ಯವಾಗಿ ಸಮಾಧಾನ ಮಾಡಲು "ಭಾಗವಹಿಸುವುದು ಮುಖ್ಯ, ಬಹುಮಾನವಲ್ಲ" ಎಂದು ಹೇಳುವ ಪರಿಪಾಠವುಂಟಷ್ಟೆ. ಆದರೆ ಈಗ ಮಕ್ಕಳೇ ಈ ಮಾತನ್ನು ಸಲೀಸಾಗಿ ಹೇಳುತ್ತಾರೆ. "Participation is important, sir, not the prize!" ಎಂದು. ಆದರೆ ಈ ಪಾರ್ಟಿಸಿಪೇಷನ್ನು ಪ್ರೈಜ಼ಿಗಿಂತ ಯಾವಾಗ ಮುಖ್ಯವಾಗುತ್ತೆಂದರೆ, ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ. ಇದನ್ನು ಮನವರಿಕೆ ಮಾಡಿಕೊಡುತ್ತಿಲ್ಲ ನಾವು ಮಕ್ಕಳಿಗೆ!

ನಮ್ಮ ಮಕ್ಕಳನ್ನು ನಾವು ಸ್ಪರ್ಧೆಗೆ ಸಿದ್ಧ ಪಡಿಸಬೇಕು. ಅವರು ಗೆಲ್ಲಲು ಅವರನ್ನು ತಯ್ಯಾರು ಮಾಡಬೇಕು. ನೀನು ಭಾಗವಹಿಸಿದರೆ ಸಾಕು ಎಂಬ ಪೂರ್ವಾಗ್ರಹಪೀಡನೆಯನ್ನು ತುಂಬಬಾರದು. ಹೀಗೆ ಮಾಡುವುದರಿಂದ ಕುರಿಮಂದೆಯ ಗುಂಪನ್ನು ಸೃಷ್ಟಿಸಿದಂತಾಗುತ್ತಷ್ಟೆ. ವಾಸ್ತವವಾಗಿ ಈಗಾಗಲೇ ಇಂಥ ದೊಡ್ಡ ಮಂದೆಯು ಸೃಷ್ಟಿಯಾಗಿಬಿಟ್ಟಿದೆ, ಆ ಗುಂಪಿಗೆ ಇನ್ನಷ್ಟು ಕುರಿಗಳನ್ನು ಸೇರಿಸುತ್ತೇವಷ್ಟೆ. ಇಂಗ್ಲೀಷಿನಲ್ಲಿ Rat-race ಎಂಬ ಪದದ ಬಳಕೆಯುಂಟು. ಗೊತ್ತು ಗುರಿಯಿಲ್ಲದೆ ಸುಮ್ಮನೆ ಓಡುವ ಪೀಳಿಗೆಯನ್ನು ಸೃಷ್ಟಿ ಮಾಡುವುದರಿಂದ ಪ್ರಯೋಜನವೇನೂ ಕಾಣುತ್ತಿಲ್ಲ. ವೀರ್ಯಾಣು ಸ್ಥಿತಿಯಲ್ಲಿರುವಾಗಲೇ ಆರಂಭವಾಗುವ ಸ್ಪರ್ಧೆಯು ಸಾಯುವವರೆಗೂ ಇರುತ್ತೆಂಬುದನ್ನು ಜೀವಿತಾವಧಿಯಲ್ಲಿ ಮರೆತುಬಿಡುತ್ತೇವೆ. Struggle for the existence - Survival of the fittest ಎಂಬುದು ಪ್ರತಿಯೊಂದು ಜೀವಿಯ ಮಂತ್ರ. ಸ್ಪರ್ಧೆಯು ಪ್ರಾಕೃತಿಕ. ಸ್ಪರ್ಧೆಯು ಪ್ರಕೃತಿ ನಿಯಮ. ಸ್ಪರ್ಧೆಯು ಅಗತ್ಯ.

ಆದರೆ ಸ್ಪರ್ಧೆಗಳಲ್ಲಿ ತೀರ್ಪುಗಾರನಾಗುವ ಕೆಲಸ ಮಾತ್ರ ನನ್ನ ಶತ್ರುವಿಗೂ ಬೇಡಪ್ಪ!

-ಅ
19.02.2011
11.45AM

Thursday, February 10, 2011

ಸತ್ಯಮಿತಿ - ಅರ್ಜುನ

ಇಂಗ್ಲೀಷಿನಲ್ಲಿ ಬರೀತೀಯ, ನನ್ನಂಥೋರಿಗೆ ಜಾಸ್ತಿ ಅರ್ಥ ಆಗಲ್ಲ ಕಣಯ್ಯಾ ಅಂತ ಆಗಾಗ್ಗೆ ಅರ್ಜುನನಿಗೆ ಹೇಳುತ್ತಿದ್ದೆ. ಅಂತೂ ಈಗ ಮನಸ್ಸು ಮಾಡಿ, ’ಪ್ರಾರಬ್ಧ’ವನ್ನು ಕೈಗೊಂಡಿದ್ದಾನೆ.

ಇಂಗ್ಲೀಷಿನಿಂದ ಕನ್ನಡಕ್ಕೆ ಬರುತ್ತಿದ್ದಂತೆಯೇ ಸಂಧಿ-ಸಮಾಸಗಳನ್ನೆಲ್ಲಾ ಪ್ರಯೋಗ ಬೇರೆ ಮಾಡುತ್ತಿದ್ದಾನೆ - ವ್ಯಾಕರಣ ಮೇಷ್ಟ್ರ ಥರ! ಸತ್ಯಮ್+ಇತಿ ಎಂದೋ, ಸತ್ಯದ ಮಿತಿ ಎಂದೋ ಅದು ಹೇಗೆ ಬಿಡಿಸಿಕೊಂಡರೂ ಅರ್ಥ ಬರುತ್ತೆ ಎಂದು ಅವನೇ ಹೇಳಿಕೊಂಡಿರುವ ಹಾಗೆ, ಆ ಅರ್ಥಕ್ಕೆ ಪೂರಕವಾದ ಅಲಂಕಾರವನ್ನು ತನ್ನ ಪ್ರಾರಬ್ಧದ ಮೂಲಕ ಆರಂಭಿಸಿದ್ದಾನೆ.

"ನಿನ್ನ ಪ್ರಾರಬ್ಧ ಚೆನ್ನಾಗಿದೆ ಕಣಯ್ಯಾ!" ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ವಿಜ್ಞಾನದ ಯೋಚನೆಗಳಿಗಿಂತ ನಿರೂಪಣೆಯ ಯೋಚನೆಯೇ ಹೆಚ್ಚಾಗಿ ಇದೆ. ಅದರಲ್ಲೂ ಹಾಸ್ಯಪ್ರಜ್ಞೆಯು ಮನ ಸೆಳೆಯುತ್ತಿದೆ. "ತೇಗದ" ಮೇಜು ಎಂಬ ಪದಕ್ಕೆ ಕಂಸದಲ್ಲಿ ಕೊಟ್ಟಿರುವ ಉದಾಹರಣೆಯೇ ಸಾಕು ಇನ್ನೂ ಓದಬೇಕು ಎಂಬ ಭಾವನೆ ಮೂಡಲು. ಹಾಸ್ಯವು ಸತ್ಯಮಿತಿಯ ವಿಷಯವನ್ನು ಕದ್ದೊಯ್ಯದೇ ಇರುವಂತೆ ಎಚ್ಚರ ವಹಿಸಿ ಬರೆಯುವ ಚಾಣಾಕ್ಷತನವು ನಿನ್ನನ್ನು ಎಂದೂ ಬಿಟ್ಟು ಹೋಗದೇ ಇರಲಿ.

ಆಲ್ ದಿ ಬೆಸ್ಟ್ ಕಣಯ್ಯಾ.. ಬರೆಯುತ್ತಲೇ ಇರು. ಸತ್ಯಮಿತಿ!

-ಅ
10.02.2011
10.45AM

Tuesday, February 8, 2011

ಶಿಕ್ಷಕಾರಕ್ಷಕ

"ಪರೀಕ್ಷೆ ಸಮಯ ಹತ್ತಿರಾಗುತ್ತಿದೆ. ಇನ್ನೇನು ಇಪ್ಪತ್ತು ದಿನಗಳಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಆರಂಭವೇ ಆಗುತ್ತೆ." ದಾರಿಯಲ್ಲಿ ಬರುವಾಗ ಇದನ್ನು ಯೋಚಿಸುತ್ತಲೇ ಸಿಗ್ನಲ್‍ನಲ್ಲಿ ನಿಂತೆ. ಬಿಳಿ ಶರ್ಟು, ಕಾಖಿ ಪ್ಯಾಂಟು ತೊಟ್ಟ ಸಂಚಾರಿ ಪೋಲೀಸ್ ಒಬ್ಬರು ನನ್ನ ಮುಂದೆ ನಿಂತಿದ್ದ ಬೈಕಿನವನ ಮೇಲೆ ಸಿಡಿಮಿಡಿಗೊಂಡಿದ್ದ. ಅವನು ಕೆಂಪು ಬಂದ ತಕ್ಷಣ ನಿಲ್ಲಿಸಲಿಲ್ಲವಂತೆ. ಮುಂದಕ್ಕೆ ಹೊರಟು ಹೋದನಂತೆ. ಆಮೇಲೆ ಈ ಪೋಲೀಸಿನವನನ್ನು ನೋಡಿ ಬ್ರೇಕ್ ಹಾಕಿ, ತನಗಾಗಿಯಲ್ಲದಿದ್ದರೂ ಪೋಲೀಸಿನವನಿಗಾಗಿ ನಿಲ್ಲಿಸಿ, ಹಿಂದೆ ಬಂದನಂತೆ. ಅದಕ್ಕೆ ಸಿಟ್ಟಾಗಿದ್ದ ಪೋಲೀಸು. ಈ ಬೈಕಿನವನು ತಾಳ್ಮೆಯಿಂದಲೇ "ನಿಮ್ಮನ್ನು ನೋಡಿದ್ದಕ್ಕೆ ನಿಲ್ಲಿಸಿದೆ, ಇಲ್ಲಾಂದಿದ್ರೆ ಹೊರಟುಬಿಡ್ತಿದ್ದೆ. ಸುಮ್ನೆ ರೇಗಾಡ್ಬೇಡಿ. ಕೇಸ್ ಹಾಕೋ ಹಾಗಿದ್ರೆ ಹಾಕಿ, ಏನ್ ಮಾಡ್ಬೇಕು ಅಂತ ನಂಗೆ ಗೊತ್ತು" ಎಂದು ಹೇಳಿದ.

ಮಕ್ಕಳ ಮೇಲೆ ರೇಗಿದರೆ, ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸಿದರೆ, "ಯಾಕಯ್ಯಾ ಕ್ಲಾಸಲ್ಲಿ ಗಲಾಟೆ ಮಾಡ್ತೀಯ?" ಎಂದರೆ, ಶಿಕ್ಷಕನ ಪಾಡೂ ಅದೇ. ವ್ಯತ್ಯಾಸವೆಂದರೆ ಶಿಕ್ಷಕರು ಸಮವಸ್ತ್ರ ಧರಿಸಿರುವುದಿಲ್ಲ.

ಶಾಲೆಯ ಆರಂಭದ ವೇಳೆ ಹಾಗೂ ಮುಗಿವ ವೇಳೆ ಟೀಚರುಗಳೆಲ್ಲರೂ ಅಕ್ಷರಶಃ ಟ್ರಾಫಿಕ್ ಪೋಲೀಸರೇ. ಮಕ್ಕಳು ಸಾಲಾಗಿ ಹೋಗಬೇಕು, ಹೋಗದೇ ಇರುವವರಿಗೆ ಶಿಕ್ಷೆ ವಿಧಿಸಬೇಕೆಂದೆನಿಸುತ್ತೆ, ಆದರೆ ಹಾಗೆ ಮಾಡಲಾಗುವುದಿಲ್ಲ. ಲೈನಿನಲ್ಲಿ ಹೋಗುವಾಗ ಗಲಾಟೆ ಮಾಡುವುದಾಗಲೀ, ಒಬ್ಬರೊನ್ನಬ್ಬರು ತಳ್ಳುವುದಾಗಲೀ, ಒದೆಯುವುದಾಗಲೀ, ಜಗಳವಾಡುವುದಾಗಲೀ ಅಪರಾಧ. ಎಲ್ಲರೂ ಒಟ್ಟಿಗೇ ಹೋದಾಗ ಒಂದು ಜಾಗದಲ್ಲೇ ಮಕ್ಕಳ ದಟ್ಟಣೆ ಹೆಚ್ಚಾಗುವುದರಿಂದ ನಿಧಾನವಾಗಿ ಕಳಿಸಬೇಕು - ತರಗತಿಗಳಿಗೆ ಹೋಗುವಾಗ ಮತ್ತು ಮನೆಗೆ ಹೋಗುವಾಗ. ಇದನ್ನೆಲ್ಲ ನಿಯಂತ್ರಿಸುವ ಟ್ರಾಫಿಕ್ ಕಮ್ ಕ್ರೈಮ್ ಆರಕ್ಷಕನೇ ಶಿಕ್ಷಕ.

ತರಗತಿಗಳಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕಿಂತ ಅವರನ್ನು "ಡಿಸಿಪ್ಲಿನ್"ನಿಂದ ಕೂರಿಸುವುದೇ ದೊಡ್ಡ ಕೆಲಸ, ಪ್ರಯಾಸದ ಕೆಲಸ. ನನ್ನಂಥವನು ಸಿಕ್ಕರೆ - ಅದರಲ್ಲೂ ಪ್ರಾಥಮಿಕ ಶಾಲೆಯ ಮಕ್ಕಳ ತರಗತಿಯಲ್ಲಿ ಸಿಕ್ಕರೆ - ಮಕ್ಕಳಿಗೆ ಗಲಾಟೆ ಹಬ್ಬ. ಕೊನೆಯ ಬೆಂಚಿನವನು ಬೋರ್ಡಿನ ಬಂದು "ಸರ್ ಇದೇನು, ಅದೇನು.." ಎನ್ನಲು ಅದೇ ಸಮಯಕ್ಕೆ ಇನ್ನೊಬ್ಬ "ಸಾಆಆಆರ್.. ಇವಳು ಹೊಡೆದಳು" ಎನ್ನುತಾನೆ. ನಾನು "ಕಂಪ್ಲೇಂಟ್ ಮಾಡಬಾರದು" ಎಂದರೆ ಒಬ್ಬಳು ನಿಂತು "ಸಾರ್, ಸುಮುಖ ಯಾವಾಗಲೂ ಕಂಪ್ಲೇಂಟ್ ಮಾಡ್ತಾ ಇರ್ತಾನೆ.." ಎನ್ನುತ್ತಾಳೆ. ಈ ಕಾರಣದಿಂದಲೇ ನಾನು ಪ್ರಾಥಮಿಕ ಶಾಲೆಗಿಂತ ಪ್ರೌಢಶಾಲೆಯನ್ನೇ ಹೆಚ್ಚು ಇಷ್ಟ ಪಡುತ್ತೇನೆ. ಯಾವ ಟೀಚರ್ರು ಎಷ್ಟು ಚೆನ್ನಾಗಿ ಪಾಠ ಮಾಡುತ್ತಾರೆಂಬ ಮಾತು ಯಾರ ಬಾಯಲ್ಲೂ ಬರುವುದಿಲ್ಲ. ಆದರೆ ಯಾವ ಟೀಚರಿನ ಕ್ಲಾಸು ನಿಃಶಬ್ದವಾಗಿಯೂ, ತರಲೆರಹಿತವಾಗಿಯೂ ಇರುತ್ತೋ ಆ ಟೀಚರಿಗೆ ಎಲ್ಲೆಡೆ ಶಹಭಾಸ್‍ಗಿರಿ. ನನ್ನ ಕ್ಲಾಸುಗಳು ಯಾವಾಗಲೂ ಗಲಾಟೆ ಮಾಡುತ್ತಿದ್ದರೂ ಹಿರಿಯರೋ ಪ್ರಾಂಶುಪಾಲರೋ ಬಂದಾಗ ನನ್ನ ಮಾರ್ಯಾದೆಯನ್ನು ಕಾಪಾಡಿದ್ದಾರೆ ನನ್ನ ವಿದ್ಯಾರ್ಥಿಗಳು - so far. ನಾನು ಮೇಲ್ನೋಟಕ್ಕಾದರೂ ಆರಕ್ಷಕನಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿಯೂ ಸಹ ಒಂದೆರಡು ಬಾರಿ ಒದಗಿ ಬಂದಿದೆಯಷ್ಟೇ ವಿನಾ, ಬೇರೆ ಸಮಯದಲ್ಲಿ ನಾನು "ಪರಧರ್ಮೋ ಭಯಾವಹಃ" ಎಂದೇ ಇದ್ದೇನೆ.

ಪರೀಕ್ಷೆ ಹತ್ತಿರ ಬರುತ್ತಿದೆನೆಂದು ಆಗಲೇ ಹೇಳಿದೆನಷ್ಟೆ. ಪರೀಕ್ಷೆಯ ಕೊಠಡಿಯಲ್ಲಂತೂ ಪೋಲೀಸ್ ಕೆಲಸಕ್ಕೆ ಬಹಳ ಬೇಡಿಕೆ. ಅನೇಕ ಸಲ ಅನುಮಾನದ ಮೇರೆಗೇ ಎಷ್ಟೋ ವಿದ್ಯಾರ್ಥಿಗಳು ಆರೋಪಿಗಳಾಗುತ್ತಾರೆ. ಎಷ್ಟೋ ಅಪರಾಧಿಗಳು ಪೆನ್ ಪೌಚಿನಲ್ಲಿ, ಜಡೆಗಳಲ್ಲಿ, ಕಾಲ್ಚೀಲಗಳಲ್ಲಿ, ಒಳ ಉಡುಪುಗಳಲ್ಲಿ ಚೀಟಿಗಳನ್ನಿಟ್ಟುಕೊಂಡು, ಕಾಪಿ ಹೊಡೆದು ಪಾರಾಗಿರುತ್ತಾರೆ. ಇನ್ಯಾರೋ ಪೆನ್ನು ಕೆಳಗೆ ಬಿತ್ತು ಎಂದು ತೆಗೆದುಕೊಳ್ಳಲು ಹೋಗುವವನು ಸಿಕ್ಕಿಬಿದ್ದಿರುತ್ತಾನೆ. ಅಥವಾ ಎರೇಸರ್ ಕೇಳಲು ಹೋದವನು ಆರಕ್ಷಕನಿಂದ ಬೈಗುಳವನ್ನು ತಿನ್ನುತ್ತಾನೆ. ಶಿಕ್ಷಕನಿಗೆ ಎಷ್ಟು ಅಧಿಕಾರ ಚಲಾಯಿಸಬಹುದೋ ಅಷ್ಟು ತಪ್ಪದೇ ಚಲಾಯಿಸಲು ಪರೀಕ್ಷೆಯ ಕೊಠಡಿಯೇ ಸೂಕ್ತ ಜಾಗ. ತರಗತಿಗಳಲ್ಲಿ ಸಾಧ್ಯವಾಗುವುದಿಲ್ಲವಾದ್ದು ಇಲ್ಲಿ ಸಾಧ್ಯವಾಗುತ್ತೆ.

ಇವೆಲ್ಲವನ್ನೂ ಪರಿಗಣಿಸಿ, ಅಧಿಕಾರ ಚಲಾಯಿಸುವುದರಲ್ಲಿ ಮಾತ್ರವಲ್ಲದೆ, ಏನಾದರೂ ನಿರ್ಣಯ ತೆಗೆದುಕೊಳ್ಳಬೇಕಾದರೂ ಮೇಲಧಿಕಾರಿಗಳ ಪರವಾನಗಿ, ಒತ್ತಡ, ಪ್ರಶ್ನೋತ್ತರ ಇತ್ಯಾದಿಗಳ ಸುಳಿಯಲ್ಲಿಯೇ ಸಿಲುಕಿರುವುದರಿಂದ ಆರಕ್ಷಕನಿಗೂ ಶಿಕ್ಷಕನಿಗೂ ಬಹಳ ಸಾಮ್ಯವೆಂದು ಧೈರ್ಯವಾಗಿ ಹೇಳಬಹುದು.

ಇಷ್ಟು ಯೋಚನೆಗಳು ತಲೆಯೊಳಗೆ ಬಂದು ಹೋಗುವ ವೇಳೆಗೆ ಹಸಿರು ಸಿಗ್ನಲ್ ಬಂದುಬಿಟ್ಟಿತು. ಆರಕ್ಷಕನು ಶಿಕ್ಷಕನಾದ ನನ್ನ ಮೇಲೆ ರೇಗಲು ಆರಂಭಿಸಿದ. ನಾನು ನಗುತ್ತಲೇ, "ನಾನೂ ನಿಮ್ಮ ಹಾಗೇನೇ.." ಎಂದು ಗಾಡಿ ಸ್ಟಾರ್ಟ್ ಮಾಡಿದೆ.

-ಅ
08.02.2011
4PM

Monday, January 17, 2011

ಹೊಸ ವರ್ಷದ ಮೊದಲ ಸಂಜೆ

ಕತ್ತಲೆಗವಿಯಿತು ಹೊಸ ವರ್ಷದಲಿ
ಹಳೆಯ ನಿಯಮದಂತೆ.
ಕಪ್ಪಡರುತ್ತಿದೆ ಹೊಸ ಬಾನಿನಲಿ
ಮುಗಿದ ಯಾಮದಂತೆ.

ಹೊಸ ಗಾಳಿಯೊ ಹಳೆ ಸದ್ದನೆ ತರುತಿದೆ
ದೂರ ಬೆಟ್ಟದಿಂದ.
ಹಳೆ ದನಿ "ಹೊಸತೇನಿಲ್ಲವೊ" ಎನುತಿದೆ
ಘೋರ ಸಿಟ್ಟಿನಿಂದ.

ಕಪ್ಪೆಂದಿಗೆ ತಾನ್ ಕಳಚುವುದು?
ಹೊಸ ಬೆಳಕೆಂದಿಗೆ ಮೂಡುವುದು?
ಹಳೆ ಬೇರಿನ ಹಿರಿ ವೃಕ್ಷದ ಮೈಯ್ಯಲಿ
ಹೊಸ ಹಸಿರೆಂದಿಗೆ ಚಿಗುರುವುದು?
ಪ್ರೀತಿಯು ಭೀತಿಯ ನುಂಗಿದ ಒಡನೆಯೆ
ಹೊಸ ಹಕ್ಕಿಯು ತಾ ಹಾಡುವುದು!

-ಅ
01.01.2011
6.45PM