Friday, February 25, 2011

ಟಿಂಕಲ್, ನಾನು ಮತ್ತು ಅಂಕಲ್ ಪೈ

ನಾನು ಚಿಕ್ಕಂದಿನಿಂದ ಕನ್ನಡ ಪುಸ್ತಕಗಳನ್ನೇನೂ ಓದಿಕೊಂಡು ಬಂದವನಲ್ಲ. ಕಾಲೇಜಿಗೆ ಬಂದ ಮೇಲೆ ಮೇಷ್ಟ್ರ ಒತ್ತಾಯದಿಂದ ಕನ್ನಡ ಪುಸ್ತಕಗಳನ್ನು ಓದಲು ಆರಂಭಿಸಿದ್ದು. ಬಾಲ್ಯದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ್ದು ಸಾಹಿತ್ಯವಲ್ಲ. ಕಾಮಿಕ್‍ಗಳು. ಇಂದ್ರಜಾಲ ಮತ್ತು ಟಿಂಕಲ್. ಇಂದ್ರಜಾಲದ ಲೀ ಫಾಕ್ ಕಾಡಿನ ಬಗ್ಗೆ ಆಸಕ್ತಿಯನ್ನು ಕೆರಳಿಸಿದರೆ, ಟಿಂಕಲ್ ತನ್ನಲ್ಲಿದ್ದ ಚಿತ್ರಗಳ ನಡುವೆಯೂ ಕಲ್ಪನೆಯ ಲೋಕವನ್ನು ನಿರ್ಮಿಸಿತು.ಕಾಲಿಯಾ ದಿ ಕ್ರೋ ಎಂಬ ಸರಣಿಯು ಮೊಸಲೆಯಂತಹ ಪ್ರಾಣಿಯನ್ನು "ಕ್ರೂರ" ಮೃಗ ಎಂದು ಕರೆಯಲು ಸಾಧ್ಯವೇ ಇಲ್ಲ ಎಂಬ ಭಾವನೆಯನ್ನುಂಟು ಮಾಡಿತು. ಟೋಪಿ ಧರಿಸಿದಾಗಲೆಲ್ಲ ಶಿಕಾರಿ ಶಂಭುವನ್ನು ನೆನೆಸಿಕೊಳ್ಳುವಂತೆ ಮಾಡಿತು. ಕುತಂತ್ರ ರಾಜಕಾರಣಿಗಳನ್ನು ನೋಡಿದಾಗಲೆಲ್ಲವೂ ತಂತ್ರಿಯ ನೆನಪಾಗದೇ ಇರಲು ಸಾಧ್ಯವಿಲ್ಲ. ಪೆದ್ದ ಕೆಲಸ ಮಾಡಿದಾಗ "ಅಯ್ಯೋ ಸುಪಂಡಿಯಾಗಿ ಬಿಟ್ಟೆ" ಎಂದು ಅದೆಷ್ಟು ಸಲ ಅಂದುಕೊಂಡಿದ್ದೇನೋ. ದಡ್ಡನನ್ನು ನೋಡಿ ಸುಪಂಡಿಯನ್ನು ನೆನೆಸಿಕೊಂಡಂತೆ ಬುದ್ಧಿವಂತನನ್ನು ನೋಡಿದಾಗಲೆಲ್ಲವೂ ಹೋಡ್ಜಾ ನೆನಪಾಗುವುದು ಸತ್ಯ. ಮನೆಯಲ್ಲಿ ಪರ್ಣಿಕಾ "ನಂಗೆ ಅದು ಗೊತ್ತು, ಇದು ಗೊತ್ತು" ಎಂದಾಗ "chamataka knows everything!" ಎಂದು ಹೇಳುತ್ತಲೇ ಇರುತ್ತೇವೆ. (ಡೂಬ್ ಡೂಬಿನ ಡೈಲಾಗು). ವಿಜಯಾ ಅಂತೂ ತನ್ನ ಮುದ್ದಿನ ನಾಯಿಗೆ ಕೀಚು ಎಂದೇ ಹೆಸರಿಟ್ಟಿದ್ದಳು. ಕೀಚು ನನಗೂ ಮುದ್ದಿನವನೇ ಆಗಿದ್ದ, ಬಡ್ಡಿ ಮಗ. ಈ ಎಲ್ಲ ಸರಣಿಗಳಿಗೂ illustrationsನ ಹೆಗ್ಗಳಿಕೆ ಅಂಕಲ್ ಪೈ ಅವರದು. ಜೊತೆಗೆ ಮಕ್ಕಳು ಪತ್ರ ಬರೆದು ಅಂಕಲ್ ಪೈ ಅವರನ್ನು ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುತ್ತಲೂ ಇದ್ದರು.

ಈ ಎಲ್ಲ ಫ್ಯಾಂಟಸಿಗಳ ಮಧ್ಯೆ, ಅಲ್ಲಲ್ಲಿ ಬರುತ್ತಿದ್ದ ವೈಜ್ಞಾನಿಕ ವಿಷಯಗಳು, ಚಿತ್ರಗಳು, ವಿವರಣೆಗಳು ಶಾಲೆಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದುಕೊಟ್ಟಿವೆ. ಇಂದಿಗೂ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಟಿಂಕಲ್‍ಗಳು ರಾರಾಜಿಸುತ್ತಿವೆ. ಇದಲ್ಲದೆ "ಅಮರ ಚಿತ್ರ ಕಥಾ"ದ ಇನ್ನೂ ಅನೇಕ ಕಾಮಿಕ್ಕುಗಳು ಈಗಲೂ ಮನಸೆಳೆಯುತ್ತಿವೆ. ಬುದ್ಧನ ಕಥೆ, ಮಹಾಭಾರತ (ಇದೊಂದು ದೊಡ್ಡ ಸರಣಿ), ಕರಡಿಯ ಕಥೆಗಳು, ಪುರಾಣದ ಕಥೆಗಳು - ಎಷ್ಟು ಎಂದು ಹೇಳುವುದು! ಓದಲು ಬಾರದೇ ಇದ್ದ ವಯಸ್ಸಿನಿಂದಲೂ ಅಮರ ಚಿತ್ರ ಕಥೆಯನ್ನು "ಓದುತ್ತಿದ್ದೇನೆ" - ಚಿತ್ರಗಳನ್ನು ನೋಡುತ್ತ!ಇಷ್ಟರ ಮಟ್ಟಿಗೆ ನನ್ನ (ನಮ್ಮ - ನನ್ನ ಮತ್ತು ವಿಜಯಳ) ಬದುಕಿನಲ್ಲಿ ಟಿಂಕಲ್‍ಗೆ ಸ್ಥಾನ ದೊರಕಿದೆ. ಇದರ ಕರ್ತೃ ಅಂಕಲ್ ಪೈ ಈ ಎಲ್ಲ ಪಾತ್ರಗಳಲ್ಲೂ ಮಿಂಚಿದರು. ಇವರು ಕರ್ನಾಟಕದವರು ಎಂದು ಇವತ್ತೇ ಗೊತ್ತಾಗಿದ್ದು ನನಗೆ. ಇಲ್ಲಿಯವರೆಗೂ ಇವರು ಯಾವ ಊರಿನವರು ಎಂದು ಯೋಚಿಸಲೂ ಸಹ ಹೋಗಿರಲಿಲ್ಲ. ಅವರು ಹೋಗಿಬಿಟ್ಟರು ಎಂಬ ಸುದ್ದಿ ಬಂದಾಗ ಇಂಟರ್ನೆಟ್ಟಿನಲ್ಲಿ ಹುಡುಕಿದಾಗ ತಿಳಿಯಿತು. ಮುಂಬರುವ ಟಿಂಕಲ್ಲುಗಳಲ್ಲಿ ಅವರ ಪ್ರಭಾವವನ್ನಾದರೂ ಕಾಣಬಹುದೆಂಬ ಆಶಯವನ್ನು ಹೊಂದಿರುವ ಅಭಿಮಾನಿಗಳಲ್ಲಿ ನಾನೂ ಒಬ್ಬ.

ಲಾಂಗ್ ಲಿವ್ ಅಂಕಲ್ ಪೈ.

-ಅ
25.02.2011
3PM

Friday, February 18, 2011

ಸ್ಪರ್ಧಾಂ ತ್ಯಜತ

ಕಳೆದ ಒಂದು ತಿಂಗಳಲ್ಲಿ ಮೂರು ಸಲ ಬೇರೆ ಬೇರೆ ಸ್ಪರ್ಧೆಗಳಲ್ಲಿ ತೀರ್ಪುಗಾರನಾಗುವ ಸಂದರ್ಭ ಒದಗಿ ಬಂತು. ಯಾಕಾದರೂ ಬಂತೋ ಎಂದು ಪ್ರತಿಯೊಂದು ಸ್ಪರ್ಧೆ ಮುಗಿದಾಗಲೂ ಅನ್ನಿಸಿತು.

ಮೊದಲಿಗೆ ಇಂಟರ್ ಸ್ಕೂಲ್ "ಫೋಟೋ ಶೂಟ್" ಸ್ಪರ್ಧೆ - ಮಕ್ಕಳು ತೆಗೆದ ವರ್ಣ ಚಿತ್ರಗಳು, ಅವುಗಳನ್ನು ಎಡಿಟ್ ಮಾಡಿ, ಕೊಲಾಜ್ ಮಾಡಿ ಕೊಟ್ಟ ಪ್ರೆಸೆಂಟೇಷನ್ನು ನಿಜಕ್ಕೂ ಅದ್ಭುತ! ಕೆಲವರಂತೂ ಬಹಳ ಪ್ರೊಫೆಷನಲ್ ಆಗೇ ಪ್ರದರ್ಶಿಸಿದ್ದರು. ಇವರೇನು ಹೈಸ್ಕೂಲು ವಿದ್ಯಾರ್ಥಿಗಳೋ ಅಥವಾ ಸಿನಿಮಾ ಎಡಿಟರ‍್-ಗಳೋ ಎಂಬ ಅಚ್ಚರಿ ನನ್ನೊಡನೆ ತೀರ್ಪುಗಾರರಾದ ಉಳಿದವರಿಗೂ ಬರದೇ ಇರಲಿಲ್ಲ. ಅಂತೂ ಮೂರು ಬಹುಮಾನಗಳನ್ನೇನೋ ಕೊಟ್ಟೆವು.

ಕಳೆದ ವಾರವಷ್ಟೆ ’ಯೋಗ’ ಸ್ಪರ್ಧೆಗೆ ತೀರ್ಪುಗಾರನಾಗಿ ಹುಚ್ಚನಾಗುವುದೊಂದು ಬಾಕಿ. ಗುಂಪಲ್ಲಿ ಯೋಗಾಸನದ ಪ್ರದರ್ಶನ ಮಾಡುವ ಒಂದನೆಯ ಮತ್ತು ಎರಡನೆಯ ತರಗತಿಯ ಮಕ್ಕಳನ್ನು ಜಡ್ಜ್ ಮಾಡುವುದಾದರೂ ಹೇಗೆ? ಚಕ್ರಾಸನವನ್ನು ಚಕ್ರಕ್ಕಿಂತ ಗುಂಡಗೆ ಹಾಕಲು ಸಮರ್ಥರು - ಎಲ್ಲರೂ! ವೃಕ್ಷಾಸನಕ್ಕೆ ವೃಕ್ಷವೇ ನಾಚಬೇಕು! ರಬ್ಬರಿಗಿಂತ ಮೃದುವಾದ ಮೂಳೆಗಳುಳ್ಳ ಈ ಚಿಕ್ಕ ಮಕ್ಕಳಿಗೆ ಯೋಗ ಸ್ಪರ್ಧೆಯಿಟ್ಟಿರುವುದೇ ತಪ್ಪೆಂದು ತೀರ್ಪು ಕೊಡಬೇಕೆಂದಿದ್ದೆ. ಆದರೆ ನನ್ನೊಡನೆ ಇನ್ನೊಬ್ಬರು ತೀರ್ಪುಗಾರರಿದ್ದುದರಿಂದ ಯಾವ ಯಾವ ಆಸನಗಳನ್ನು ಹೇಗೆ ಹೇಗೆ ಮಾಡಬೇಕು, ಹೇಗೆ ಹೇಗೆ ಮಾಡಬಾರದು ಎಂದು ಮಕ್ಕಳನ್ನು ಕುರಿತು ಹತ್ತು ನಿಮಿಷ ಭಾಷಣವನ್ನು ಮಾಡಿ ನಂತರ ಮೂರು ಬಹುಮಾನಗಳನ್ನು ಕೊಡುವುದೆಂದು ಹೇಳಿದರು. ನಾನು ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಮಕ್ಕಳಿಗೆ ಅವರ ಭಾಷಣ ಎಷ್ಟು ಅರ್ಥವಾಯಿತೋ ಪತಂಜಲಿಯೇ ಬಲ್ಲ.

ನಿನ್ನೆ ಹಾಡುಗಾರಿಕೆ ಸ್ಪರ್ಧೆಗೆ ತೀರ್ಪುಗಾರನಾಗಿ "ಸ್ಪರ್ಧಾಂ ತ್ಯಜತ" ಎಂಬ ನಿರ್ಣಯಕ್ಕೆ ನಾನು ಬಂದುಬಿಟ್ಟೆ. ಮಕ್ಕಳೇನೂ ಸೊಗಸಾಗಿ, ಅದ್ಭುತವಾಗಿ ಹಾಡಲಿಲ್ಲವಾದರೂ ನಾನು ತೀರ್ಪುಗಾರನಾಗಲು ಯೋಗ್ಯನಲ್ಲ ಎಂಬ ಸತ್ಯ ಮೂರಕ್ಕೆ ಮುಕ್ತಾಯ ಎಂಬಂತೆ ನನಗೆ ಮನವರಿಕೆಯಾಯಿತು. Better late than never.

.....................................................................................

ಇನ್ನೊಂದು ವಾರದಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಆರಂಭವಾಗಲಿದೆ. ಬೇರೆ ಬೇರೆ ತರಗತಿಗಳ ಪರೀಕ್ಷೆಗಳೂ ಸಹ ಮಾರ್ಚಿನಲ್ಲೇ ಇರುತ್ತವೆ. ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಯ ರೀತಿಯು ಬಹಳ ಬದಲಾಗಿರುವುದು ಮತ್ತು ಇಳಿಮುಖವಾಗಿರುವುದು ದುರಂತ.

ಅನೇಕ ಪರೀಕ್ಷೆ ಇಲಾಖೆಗಳು rank ಪದ್ಧತಿಯನ್ನು ತೆಗೆದು ಹಾಕಿ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಅಪಕಾರ ಮಾಡಿದ್ದಾರೆಂದು ನನ್ನ ನಿಲುವು. ಸಿ.ಬಿ.ಎಸ್.ಈ. ಪದ್ಧತಿಯಲ್ಲಿ ಪರೀಕ್ಷೆಯನ್ನೇ ತೆಗೆದು ಹಾಕಿ ಮಕ್ಕಳನ್ನು ಅಧೋಗತಿಗೆ ನೂಕುತ್ತಿದ್ದಾರೆಂದು ಅನ್ನಿಸುತ್ತಿದೆ. ಪುಣ್ಯಕ್ಕೆ ಐ.ಸಿ.ಎಸ್.ಈ. ಯಲ್ಲಿ ಪರೀಕ್ಷೆಗಳು ಜೀವಂತವಾಗಿವೆ.

ಕಂಪ್ಯೂಟರ್ ಪರೀಕ್ಷೆಯಲ್ಲಿ ಕೇವಲ ನಲವತ್ತು ತೆಗೆದುಕೊಂಡು ಪಾಸಾದ ಹುಡುಗಿಯೊಬ್ಬಳು ನನ್ನ ಬಳಿ ಬಂದು "ನನಗೆ computing aptitude ಇರೋದು ಇಷ್ಟೇ ಸರ್, ಏನು ಮಾಡೋದು?" ಎಂದು ಹೇಳುತ್ತಾಳೆ! "ಅದನ್ನು ನಿರ್ಧರಿಸುವುದು ನೀನಲ್ಲಮ್ಮ, ನಾನು!" ಎಂದು ಗದರದೆ ಬೇರೆ ವಿಧಿಯಿರಲಿಲ್ಲ. ನಾವು (ಪೋಷಕರು, ಶಿಕ್ಷಕರು) ಮಕ್ಕಳನ್ನು ಎಷ್ಟರ ಮಟ್ಟಿಗೆ comfort ಮಾಡುತ್ತಿದ್ದೇವೆಂದರೆ ಬದುಕಿನಲ್ಲಿ ಅವರಿಗೆ ಯಾವ ಸಮಸ್ಯೆಯೂ ಬರುವುದೇ ಇಲ್ಲವೆಂಬ ಭಾವನೆಯನ್ನುಂಟು ಮಾಡುತ್ತಿದ್ದೇವೆ. ಹೊರ ಜಗತ್ತಿನ ಸ್ಪರ್ಧೆಗೆ ಹೇಗೆ ಮುಖ ಮಾಡುವುದೆಂದು ಮರೆಸಿಬಿಡುತ್ತಿದ್ದೇವೆ. ಕ್ರೀಡಾಶಿಕ್ಷಣದಲ್ಲಿ ಬಳಸುತ್ತಿರುವ ರೀತಿಯನ್ನು academicsನಲ್ಲಿ ಬಳಸುತ್ತಿಲ್ಲ. ಪರೀಕ್ಷೆಗಳಲ್ಲಿ ಸುಲಭವಾಗಿ ಪಾಸಾಗಬಹುದು ಎಂಬ ಭಾವನೆ ಮಕ್ಕಳಲ್ಲಿ ನೆಲೆಯೂರಿಬಿಟ್ಟಿದೆ. ಪಠ್ಯೇತರ ಸ್ಪರ್ಧೆಗಳಲ್ಲೂ ಅಷ್ಟೆ, ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವನೆಯೇ ಇರುವುದಿಲ್ಲ. ಸೋತವರಿಗೆ ಬೇರೆಯವರು ಸಾಮಾನ್ಯವಾಗಿ ಸಮಾಧಾನ ಮಾಡಲು "ಭಾಗವಹಿಸುವುದು ಮುಖ್ಯ, ಬಹುಮಾನವಲ್ಲ" ಎಂದು ಹೇಳುವ ಪರಿಪಾಠವುಂಟಷ್ಟೆ. ಆದರೆ ಈಗ ಮಕ್ಕಳೇ ಈ ಮಾತನ್ನು ಸಲೀಸಾಗಿ ಹೇಳುತ್ತಾರೆ. "Participation is important, sir, not the prize!" ಎಂದು. ಆದರೆ ಈ ಪಾರ್ಟಿಸಿಪೇಷನ್ನು ಪ್ರೈಜ಼ಿಗಿಂತ ಯಾವಾಗ ಮುಖ್ಯವಾಗುತ್ತೆಂದರೆ, ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ. ಇದನ್ನು ಮನವರಿಕೆ ಮಾಡಿಕೊಡುತ್ತಿಲ್ಲ ನಾವು ಮಕ್ಕಳಿಗೆ!

ನಮ್ಮ ಮಕ್ಕಳನ್ನು ನಾವು ಸ್ಪರ್ಧೆಗೆ ಸಿದ್ಧ ಪಡಿಸಬೇಕು. ಅವರು ಗೆಲ್ಲಲು ಅವರನ್ನು ತಯ್ಯಾರು ಮಾಡಬೇಕು. ನೀನು ಭಾಗವಹಿಸಿದರೆ ಸಾಕು ಎಂಬ ಪೂರ್ವಾಗ್ರಹಪೀಡನೆಯನ್ನು ತುಂಬಬಾರದು. ಹೀಗೆ ಮಾಡುವುದರಿಂದ ಕುರಿಮಂದೆಯ ಗುಂಪನ್ನು ಸೃಷ್ಟಿಸಿದಂತಾಗುತ್ತಷ್ಟೆ. ವಾಸ್ತವವಾಗಿ ಈಗಾಗಲೇ ಇಂಥ ದೊಡ್ಡ ಮಂದೆಯು ಸೃಷ್ಟಿಯಾಗಿಬಿಟ್ಟಿದೆ, ಆ ಗುಂಪಿಗೆ ಇನ್ನಷ್ಟು ಕುರಿಗಳನ್ನು ಸೇರಿಸುತ್ತೇವಷ್ಟೆ. ಇಂಗ್ಲೀಷಿನಲ್ಲಿ Rat-race ಎಂಬ ಪದದ ಬಳಕೆಯುಂಟು. ಗೊತ್ತು ಗುರಿಯಿಲ್ಲದೆ ಸುಮ್ಮನೆ ಓಡುವ ಪೀಳಿಗೆಯನ್ನು ಸೃಷ್ಟಿ ಮಾಡುವುದರಿಂದ ಪ್ರಯೋಜನವೇನೂ ಕಾಣುತ್ತಿಲ್ಲ. ವೀರ್ಯಾಣು ಸ್ಥಿತಿಯಲ್ಲಿರುವಾಗಲೇ ಆರಂಭವಾಗುವ ಸ್ಪರ್ಧೆಯು ಸಾಯುವವರೆಗೂ ಇರುತ್ತೆಂಬುದನ್ನು ಜೀವಿತಾವಧಿಯಲ್ಲಿ ಮರೆತುಬಿಡುತ್ತೇವೆ. Struggle for the existence - Survival of the fittest ಎಂಬುದು ಪ್ರತಿಯೊಂದು ಜೀವಿಯ ಮಂತ್ರ. ಸ್ಪರ್ಧೆಯು ಪ್ರಾಕೃತಿಕ. ಸ್ಪರ್ಧೆಯು ಪ್ರಕೃತಿ ನಿಯಮ. ಸ್ಪರ್ಧೆಯು ಅಗತ್ಯ.

ಆದರೆ ಸ್ಪರ್ಧೆಗಳಲ್ಲಿ ತೀರ್ಪುಗಾರನಾಗುವ ಕೆಲಸ ಮಾತ್ರ ನನ್ನ ಶತ್ರುವಿಗೂ ಬೇಡಪ್ಪ!

-ಅ
19.02.2011
11.45AM

Thursday, February 10, 2011

ಸತ್ಯಮಿತಿ - ಅರ್ಜುನ

ಇಂಗ್ಲೀಷಿನಲ್ಲಿ ಬರೀತೀಯ, ನನ್ನಂಥೋರಿಗೆ ಜಾಸ್ತಿ ಅರ್ಥ ಆಗಲ್ಲ ಕಣಯ್ಯಾ ಅಂತ ಆಗಾಗ್ಗೆ ಅರ್ಜುನನಿಗೆ ಹೇಳುತ್ತಿದ್ದೆ. ಅಂತೂ ಈಗ ಮನಸ್ಸು ಮಾಡಿ, ’ಪ್ರಾರಬ್ಧ’ವನ್ನು ಕೈಗೊಂಡಿದ್ದಾನೆ.

ಇಂಗ್ಲೀಷಿನಿಂದ ಕನ್ನಡಕ್ಕೆ ಬರುತ್ತಿದ್ದಂತೆಯೇ ಸಂಧಿ-ಸಮಾಸಗಳನ್ನೆಲ್ಲಾ ಪ್ರಯೋಗ ಬೇರೆ ಮಾಡುತ್ತಿದ್ದಾನೆ - ವ್ಯಾಕರಣ ಮೇಷ್ಟ್ರ ಥರ! ಸತ್ಯಮ್+ಇತಿ ಎಂದೋ, ಸತ್ಯದ ಮಿತಿ ಎಂದೋ ಅದು ಹೇಗೆ ಬಿಡಿಸಿಕೊಂಡರೂ ಅರ್ಥ ಬರುತ್ತೆ ಎಂದು ಅವನೇ ಹೇಳಿಕೊಂಡಿರುವ ಹಾಗೆ, ಆ ಅರ್ಥಕ್ಕೆ ಪೂರಕವಾದ ಅಲಂಕಾರವನ್ನು ತನ್ನ ಪ್ರಾರಬ್ಧದ ಮೂಲಕ ಆರಂಭಿಸಿದ್ದಾನೆ.

"ನಿನ್ನ ಪ್ರಾರಬ್ಧ ಚೆನ್ನಾಗಿದೆ ಕಣಯ್ಯಾ!" ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ವಿಜ್ಞಾನದ ಯೋಚನೆಗಳಿಗಿಂತ ನಿರೂಪಣೆಯ ಯೋಚನೆಯೇ ಹೆಚ್ಚಾಗಿ ಇದೆ. ಅದರಲ್ಲೂ ಹಾಸ್ಯಪ್ರಜ್ಞೆಯು ಮನ ಸೆಳೆಯುತ್ತಿದೆ. "ತೇಗದ" ಮೇಜು ಎಂಬ ಪದಕ್ಕೆ ಕಂಸದಲ್ಲಿ ಕೊಟ್ಟಿರುವ ಉದಾಹರಣೆಯೇ ಸಾಕು ಇನ್ನೂ ಓದಬೇಕು ಎಂಬ ಭಾವನೆ ಮೂಡಲು. ಹಾಸ್ಯವು ಸತ್ಯಮಿತಿಯ ವಿಷಯವನ್ನು ಕದ್ದೊಯ್ಯದೇ ಇರುವಂತೆ ಎಚ್ಚರ ವಹಿಸಿ ಬರೆಯುವ ಚಾಣಾಕ್ಷತನವು ನಿನ್ನನ್ನು ಎಂದೂ ಬಿಟ್ಟು ಹೋಗದೇ ಇರಲಿ.

ಆಲ್ ದಿ ಬೆಸ್ಟ್ ಕಣಯ್ಯಾ.. ಬರೆಯುತ್ತಲೇ ಇರು. ಸತ್ಯಮಿತಿ!

-ಅ
10.02.2011
10.45AM

Tuesday, February 8, 2011

ಶಿಕ್ಷಕಾರಕ್ಷಕ

"ಪರೀಕ್ಷೆ ಸಮಯ ಹತ್ತಿರಾಗುತ್ತಿದೆ. ಇನ್ನೇನು ಇಪ್ಪತ್ತು ದಿನಗಳಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಆರಂಭವೇ ಆಗುತ್ತೆ." ದಾರಿಯಲ್ಲಿ ಬರುವಾಗ ಇದನ್ನು ಯೋಚಿಸುತ್ತಲೇ ಸಿಗ್ನಲ್‍ನಲ್ಲಿ ನಿಂತೆ. ಬಿಳಿ ಶರ್ಟು, ಕಾಖಿ ಪ್ಯಾಂಟು ತೊಟ್ಟ ಸಂಚಾರಿ ಪೋಲೀಸ್ ಒಬ್ಬರು ನನ್ನ ಮುಂದೆ ನಿಂತಿದ್ದ ಬೈಕಿನವನ ಮೇಲೆ ಸಿಡಿಮಿಡಿಗೊಂಡಿದ್ದ. ಅವನು ಕೆಂಪು ಬಂದ ತಕ್ಷಣ ನಿಲ್ಲಿಸಲಿಲ್ಲವಂತೆ. ಮುಂದಕ್ಕೆ ಹೊರಟು ಹೋದನಂತೆ. ಆಮೇಲೆ ಈ ಪೋಲೀಸಿನವನನ್ನು ನೋಡಿ ಬ್ರೇಕ್ ಹಾಕಿ, ತನಗಾಗಿಯಲ್ಲದಿದ್ದರೂ ಪೋಲೀಸಿನವನಿಗಾಗಿ ನಿಲ್ಲಿಸಿ, ಹಿಂದೆ ಬಂದನಂತೆ. ಅದಕ್ಕೆ ಸಿಟ್ಟಾಗಿದ್ದ ಪೋಲೀಸು. ಈ ಬೈಕಿನವನು ತಾಳ್ಮೆಯಿಂದಲೇ "ನಿಮ್ಮನ್ನು ನೋಡಿದ್ದಕ್ಕೆ ನಿಲ್ಲಿಸಿದೆ, ಇಲ್ಲಾಂದಿದ್ರೆ ಹೊರಟುಬಿಡ್ತಿದ್ದೆ. ಸುಮ್ನೆ ರೇಗಾಡ್ಬೇಡಿ. ಕೇಸ್ ಹಾಕೋ ಹಾಗಿದ್ರೆ ಹಾಕಿ, ಏನ್ ಮಾಡ್ಬೇಕು ಅಂತ ನಂಗೆ ಗೊತ್ತು" ಎಂದು ಹೇಳಿದ.

ಮಕ್ಕಳ ಮೇಲೆ ರೇಗಿದರೆ, ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸಿದರೆ, "ಯಾಕಯ್ಯಾ ಕ್ಲಾಸಲ್ಲಿ ಗಲಾಟೆ ಮಾಡ್ತೀಯ?" ಎಂದರೆ, ಶಿಕ್ಷಕನ ಪಾಡೂ ಅದೇ. ವ್ಯತ್ಯಾಸವೆಂದರೆ ಶಿಕ್ಷಕರು ಸಮವಸ್ತ್ರ ಧರಿಸಿರುವುದಿಲ್ಲ.

ಶಾಲೆಯ ಆರಂಭದ ವೇಳೆ ಹಾಗೂ ಮುಗಿವ ವೇಳೆ ಟೀಚರುಗಳೆಲ್ಲರೂ ಅಕ್ಷರಶಃ ಟ್ರಾಫಿಕ್ ಪೋಲೀಸರೇ. ಮಕ್ಕಳು ಸಾಲಾಗಿ ಹೋಗಬೇಕು, ಹೋಗದೇ ಇರುವವರಿಗೆ ಶಿಕ್ಷೆ ವಿಧಿಸಬೇಕೆಂದೆನಿಸುತ್ತೆ, ಆದರೆ ಹಾಗೆ ಮಾಡಲಾಗುವುದಿಲ್ಲ. ಲೈನಿನಲ್ಲಿ ಹೋಗುವಾಗ ಗಲಾಟೆ ಮಾಡುವುದಾಗಲೀ, ಒಬ್ಬರೊನ್ನಬ್ಬರು ತಳ್ಳುವುದಾಗಲೀ, ಒದೆಯುವುದಾಗಲೀ, ಜಗಳವಾಡುವುದಾಗಲೀ ಅಪರಾಧ. ಎಲ್ಲರೂ ಒಟ್ಟಿಗೇ ಹೋದಾಗ ಒಂದು ಜಾಗದಲ್ಲೇ ಮಕ್ಕಳ ದಟ್ಟಣೆ ಹೆಚ್ಚಾಗುವುದರಿಂದ ನಿಧಾನವಾಗಿ ಕಳಿಸಬೇಕು - ತರಗತಿಗಳಿಗೆ ಹೋಗುವಾಗ ಮತ್ತು ಮನೆಗೆ ಹೋಗುವಾಗ. ಇದನ್ನೆಲ್ಲ ನಿಯಂತ್ರಿಸುವ ಟ್ರಾಫಿಕ್ ಕಮ್ ಕ್ರೈಮ್ ಆರಕ್ಷಕನೇ ಶಿಕ್ಷಕ.

ತರಗತಿಗಳಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕಿಂತ ಅವರನ್ನು "ಡಿಸಿಪ್ಲಿನ್"ನಿಂದ ಕೂರಿಸುವುದೇ ದೊಡ್ಡ ಕೆಲಸ, ಪ್ರಯಾಸದ ಕೆಲಸ. ನನ್ನಂಥವನು ಸಿಕ್ಕರೆ - ಅದರಲ್ಲೂ ಪ್ರಾಥಮಿಕ ಶಾಲೆಯ ಮಕ್ಕಳ ತರಗತಿಯಲ್ಲಿ ಸಿಕ್ಕರೆ - ಮಕ್ಕಳಿಗೆ ಗಲಾಟೆ ಹಬ್ಬ. ಕೊನೆಯ ಬೆಂಚಿನವನು ಬೋರ್ಡಿನ ಬಂದು "ಸರ್ ಇದೇನು, ಅದೇನು.." ಎನ್ನಲು ಅದೇ ಸಮಯಕ್ಕೆ ಇನ್ನೊಬ್ಬ "ಸಾಆಆಆರ್.. ಇವಳು ಹೊಡೆದಳು" ಎನ್ನುತಾನೆ. ನಾನು "ಕಂಪ್ಲೇಂಟ್ ಮಾಡಬಾರದು" ಎಂದರೆ ಒಬ್ಬಳು ನಿಂತು "ಸಾರ್, ಸುಮುಖ ಯಾವಾಗಲೂ ಕಂಪ್ಲೇಂಟ್ ಮಾಡ್ತಾ ಇರ್ತಾನೆ.." ಎನ್ನುತ್ತಾಳೆ. ಈ ಕಾರಣದಿಂದಲೇ ನಾನು ಪ್ರಾಥಮಿಕ ಶಾಲೆಗಿಂತ ಪ್ರೌಢಶಾಲೆಯನ್ನೇ ಹೆಚ್ಚು ಇಷ್ಟ ಪಡುತ್ತೇನೆ. ಯಾವ ಟೀಚರ್ರು ಎಷ್ಟು ಚೆನ್ನಾಗಿ ಪಾಠ ಮಾಡುತ್ತಾರೆಂಬ ಮಾತು ಯಾರ ಬಾಯಲ್ಲೂ ಬರುವುದಿಲ್ಲ. ಆದರೆ ಯಾವ ಟೀಚರಿನ ಕ್ಲಾಸು ನಿಃಶಬ್ದವಾಗಿಯೂ, ತರಲೆರಹಿತವಾಗಿಯೂ ಇರುತ್ತೋ ಆ ಟೀಚರಿಗೆ ಎಲ್ಲೆಡೆ ಶಹಭಾಸ್‍ಗಿರಿ. ನನ್ನ ಕ್ಲಾಸುಗಳು ಯಾವಾಗಲೂ ಗಲಾಟೆ ಮಾಡುತ್ತಿದ್ದರೂ ಹಿರಿಯರೋ ಪ್ರಾಂಶುಪಾಲರೋ ಬಂದಾಗ ನನ್ನ ಮಾರ್ಯಾದೆಯನ್ನು ಕಾಪಾಡಿದ್ದಾರೆ ನನ್ನ ವಿದ್ಯಾರ್ಥಿಗಳು - so far. ನಾನು ಮೇಲ್ನೋಟಕ್ಕಾದರೂ ಆರಕ್ಷಕನಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿಯೂ ಸಹ ಒಂದೆರಡು ಬಾರಿ ಒದಗಿ ಬಂದಿದೆಯಷ್ಟೇ ವಿನಾ, ಬೇರೆ ಸಮಯದಲ್ಲಿ ನಾನು "ಪರಧರ್ಮೋ ಭಯಾವಹಃ" ಎಂದೇ ಇದ್ದೇನೆ.

ಪರೀಕ್ಷೆ ಹತ್ತಿರ ಬರುತ್ತಿದೆನೆಂದು ಆಗಲೇ ಹೇಳಿದೆನಷ್ಟೆ. ಪರೀಕ್ಷೆಯ ಕೊಠಡಿಯಲ್ಲಂತೂ ಪೋಲೀಸ್ ಕೆಲಸಕ್ಕೆ ಬಹಳ ಬೇಡಿಕೆ. ಅನೇಕ ಸಲ ಅನುಮಾನದ ಮೇರೆಗೇ ಎಷ್ಟೋ ವಿದ್ಯಾರ್ಥಿಗಳು ಆರೋಪಿಗಳಾಗುತ್ತಾರೆ. ಎಷ್ಟೋ ಅಪರಾಧಿಗಳು ಪೆನ್ ಪೌಚಿನಲ್ಲಿ, ಜಡೆಗಳಲ್ಲಿ, ಕಾಲ್ಚೀಲಗಳಲ್ಲಿ, ಒಳ ಉಡುಪುಗಳಲ್ಲಿ ಚೀಟಿಗಳನ್ನಿಟ್ಟುಕೊಂಡು, ಕಾಪಿ ಹೊಡೆದು ಪಾರಾಗಿರುತ್ತಾರೆ. ಇನ್ಯಾರೋ ಪೆನ್ನು ಕೆಳಗೆ ಬಿತ್ತು ಎಂದು ತೆಗೆದುಕೊಳ್ಳಲು ಹೋಗುವವನು ಸಿಕ್ಕಿಬಿದ್ದಿರುತ್ತಾನೆ. ಅಥವಾ ಎರೇಸರ್ ಕೇಳಲು ಹೋದವನು ಆರಕ್ಷಕನಿಂದ ಬೈಗುಳವನ್ನು ತಿನ್ನುತ್ತಾನೆ. ಶಿಕ್ಷಕನಿಗೆ ಎಷ್ಟು ಅಧಿಕಾರ ಚಲಾಯಿಸಬಹುದೋ ಅಷ್ಟು ತಪ್ಪದೇ ಚಲಾಯಿಸಲು ಪರೀಕ್ಷೆಯ ಕೊಠಡಿಯೇ ಸೂಕ್ತ ಜಾಗ. ತರಗತಿಗಳಲ್ಲಿ ಸಾಧ್ಯವಾಗುವುದಿಲ್ಲವಾದ್ದು ಇಲ್ಲಿ ಸಾಧ್ಯವಾಗುತ್ತೆ.

ಇವೆಲ್ಲವನ್ನೂ ಪರಿಗಣಿಸಿ, ಅಧಿಕಾರ ಚಲಾಯಿಸುವುದರಲ್ಲಿ ಮಾತ್ರವಲ್ಲದೆ, ಏನಾದರೂ ನಿರ್ಣಯ ತೆಗೆದುಕೊಳ್ಳಬೇಕಾದರೂ ಮೇಲಧಿಕಾರಿಗಳ ಪರವಾನಗಿ, ಒತ್ತಡ, ಪ್ರಶ್ನೋತ್ತರ ಇತ್ಯಾದಿಗಳ ಸುಳಿಯಲ್ಲಿಯೇ ಸಿಲುಕಿರುವುದರಿಂದ ಆರಕ್ಷಕನಿಗೂ ಶಿಕ್ಷಕನಿಗೂ ಬಹಳ ಸಾಮ್ಯವೆಂದು ಧೈರ್ಯವಾಗಿ ಹೇಳಬಹುದು.

ಇಷ್ಟು ಯೋಚನೆಗಳು ತಲೆಯೊಳಗೆ ಬಂದು ಹೋಗುವ ವೇಳೆಗೆ ಹಸಿರು ಸಿಗ್ನಲ್ ಬಂದುಬಿಟ್ಟಿತು. ಆರಕ್ಷಕನು ಶಿಕ್ಷಕನಾದ ನನ್ನ ಮೇಲೆ ರೇಗಲು ಆರಂಭಿಸಿದ. ನಾನು ನಗುತ್ತಲೇ, "ನಾನೂ ನಿಮ್ಮ ಹಾಗೇನೇ.." ಎಂದು ಗಾಡಿ ಸ್ಟಾರ್ಟ್ ಮಾಡಿದೆ.

-ಅ
08.02.2011
4PM