Tuesday, February 8, 2011

ಶಿಕ್ಷಕಾರಕ್ಷಕ

"ಪರೀಕ್ಷೆ ಸಮಯ ಹತ್ತಿರಾಗುತ್ತಿದೆ. ಇನ್ನೇನು ಇಪ್ಪತ್ತು ದಿನಗಳಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಆರಂಭವೇ ಆಗುತ್ತೆ." ದಾರಿಯಲ್ಲಿ ಬರುವಾಗ ಇದನ್ನು ಯೋಚಿಸುತ್ತಲೇ ಸಿಗ್ನಲ್‍ನಲ್ಲಿ ನಿಂತೆ. ಬಿಳಿ ಶರ್ಟು, ಕಾಖಿ ಪ್ಯಾಂಟು ತೊಟ್ಟ ಸಂಚಾರಿ ಪೋಲೀಸ್ ಒಬ್ಬರು ನನ್ನ ಮುಂದೆ ನಿಂತಿದ್ದ ಬೈಕಿನವನ ಮೇಲೆ ಸಿಡಿಮಿಡಿಗೊಂಡಿದ್ದ. ಅವನು ಕೆಂಪು ಬಂದ ತಕ್ಷಣ ನಿಲ್ಲಿಸಲಿಲ್ಲವಂತೆ. ಮುಂದಕ್ಕೆ ಹೊರಟು ಹೋದನಂತೆ. ಆಮೇಲೆ ಈ ಪೋಲೀಸಿನವನನ್ನು ನೋಡಿ ಬ್ರೇಕ್ ಹಾಕಿ, ತನಗಾಗಿಯಲ್ಲದಿದ್ದರೂ ಪೋಲೀಸಿನವನಿಗಾಗಿ ನಿಲ್ಲಿಸಿ, ಹಿಂದೆ ಬಂದನಂತೆ. ಅದಕ್ಕೆ ಸಿಟ್ಟಾಗಿದ್ದ ಪೋಲೀಸು. ಈ ಬೈಕಿನವನು ತಾಳ್ಮೆಯಿಂದಲೇ "ನಿಮ್ಮನ್ನು ನೋಡಿದ್ದಕ್ಕೆ ನಿಲ್ಲಿಸಿದೆ, ಇಲ್ಲಾಂದಿದ್ರೆ ಹೊರಟುಬಿಡ್ತಿದ್ದೆ. ಸುಮ್ನೆ ರೇಗಾಡ್ಬೇಡಿ. ಕೇಸ್ ಹಾಕೋ ಹಾಗಿದ್ರೆ ಹಾಕಿ, ಏನ್ ಮಾಡ್ಬೇಕು ಅಂತ ನಂಗೆ ಗೊತ್ತು" ಎಂದು ಹೇಳಿದ.

ಮಕ್ಕಳ ಮೇಲೆ ರೇಗಿದರೆ, ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸಿದರೆ, "ಯಾಕಯ್ಯಾ ಕ್ಲಾಸಲ್ಲಿ ಗಲಾಟೆ ಮಾಡ್ತೀಯ?" ಎಂದರೆ, ಶಿಕ್ಷಕನ ಪಾಡೂ ಅದೇ. ವ್ಯತ್ಯಾಸವೆಂದರೆ ಶಿಕ್ಷಕರು ಸಮವಸ್ತ್ರ ಧರಿಸಿರುವುದಿಲ್ಲ.

ಶಾಲೆಯ ಆರಂಭದ ವೇಳೆ ಹಾಗೂ ಮುಗಿವ ವೇಳೆ ಟೀಚರುಗಳೆಲ್ಲರೂ ಅಕ್ಷರಶಃ ಟ್ರಾಫಿಕ್ ಪೋಲೀಸರೇ. ಮಕ್ಕಳು ಸಾಲಾಗಿ ಹೋಗಬೇಕು, ಹೋಗದೇ ಇರುವವರಿಗೆ ಶಿಕ್ಷೆ ವಿಧಿಸಬೇಕೆಂದೆನಿಸುತ್ತೆ, ಆದರೆ ಹಾಗೆ ಮಾಡಲಾಗುವುದಿಲ್ಲ. ಲೈನಿನಲ್ಲಿ ಹೋಗುವಾಗ ಗಲಾಟೆ ಮಾಡುವುದಾಗಲೀ, ಒಬ್ಬರೊನ್ನಬ್ಬರು ತಳ್ಳುವುದಾಗಲೀ, ಒದೆಯುವುದಾಗಲೀ, ಜಗಳವಾಡುವುದಾಗಲೀ ಅಪರಾಧ. ಎಲ್ಲರೂ ಒಟ್ಟಿಗೇ ಹೋದಾಗ ಒಂದು ಜಾಗದಲ್ಲೇ ಮಕ್ಕಳ ದಟ್ಟಣೆ ಹೆಚ್ಚಾಗುವುದರಿಂದ ನಿಧಾನವಾಗಿ ಕಳಿಸಬೇಕು - ತರಗತಿಗಳಿಗೆ ಹೋಗುವಾಗ ಮತ್ತು ಮನೆಗೆ ಹೋಗುವಾಗ. ಇದನ್ನೆಲ್ಲ ನಿಯಂತ್ರಿಸುವ ಟ್ರಾಫಿಕ್ ಕಮ್ ಕ್ರೈಮ್ ಆರಕ್ಷಕನೇ ಶಿಕ್ಷಕ.

ತರಗತಿಗಳಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕಿಂತ ಅವರನ್ನು "ಡಿಸಿಪ್ಲಿನ್"ನಿಂದ ಕೂರಿಸುವುದೇ ದೊಡ್ಡ ಕೆಲಸ, ಪ್ರಯಾಸದ ಕೆಲಸ. ನನ್ನಂಥವನು ಸಿಕ್ಕರೆ - ಅದರಲ್ಲೂ ಪ್ರಾಥಮಿಕ ಶಾಲೆಯ ಮಕ್ಕಳ ತರಗತಿಯಲ್ಲಿ ಸಿಕ್ಕರೆ - ಮಕ್ಕಳಿಗೆ ಗಲಾಟೆ ಹಬ್ಬ. ಕೊನೆಯ ಬೆಂಚಿನವನು ಬೋರ್ಡಿನ ಬಂದು "ಸರ್ ಇದೇನು, ಅದೇನು.." ಎನ್ನಲು ಅದೇ ಸಮಯಕ್ಕೆ ಇನ್ನೊಬ್ಬ "ಸಾಆಆಆರ್.. ಇವಳು ಹೊಡೆದಳು" ಎನ್ನುತಾನೆ. ನಾನು "ಕಂಪ್ಲೇಂಟ್ ಮಾಡಬಾರದು" ಎಂದರೆ ಒಬ್ಬಳು ನಿಂತು "ಸಾರ್, ಸುಮುಖ ಯಾವಾಗಲೂ ಕಂಪ್ಲೇಂಟ್ ಮಾಡ್ತಾ ಇರ್ತಾನೆ.." ಎನ್ನುತ್ತಾಳೆ. ಈ ಕಾರಣದಿಂದಲೇ ನಾನು ಪ್ರಾಥಮಿಕ ಶಾಲೆಗಿಂತ ಪ್ರೌಢಶಾಲೆಯನ್ನೇ ಹೆಚ್ಚು ಇಷ್ಟ ಪಡುತ್ತೇನೆ. ಯಾವ ಟೀಚರ್ರು ಎಷ್ಟು ಚೆನ್ನಾಗಿ ಪಾಠ ಮಾಡುತ್ತಾರೆಂಬ ಮಾತು ಯಾರ ಬಾಯಲ್ಲೂ ಬರುವುದಿಲ್ಲ. ಆದರೆ ಯಾವ ಟೀಚರಿನ ಕ್ಲಾಸು ನಿಃಶಬ್ದವಾಗಿಯೂ, ತರಲೆರಹಿತವಾಗಿಯೂ ಇರುತ್ತೋ ಆ ಟೀಚರಿಗೆ ಎಲ್ಲೆಡೆ ಶಹಭಾಸ್‍ಗಿರಿ. ನನ್ನ ಕ್ಲಾಸುಗಳು ಯಾವಾಗಲೂ ಗಲಾಟೆ ಮಾಡುತ್ತಿದ್ದರೂ ಹಿರಿಯರೋ ಪ್ರಾಂಶುಪಾಲರೋ ಬಂದಾಗ ನನ್ನ ಮಾರ್ಯಾದೆಯನ್ನು ಕಾಪಾಡಿದ್ದಾರೆ ನನ್ನ ವಿದ್ಯಾರ್ಥಿಗಳು - so far. ನಾನು ಮೇಲ್ನೋಟಕ್ಕಾದರೂ ಆರಕ್ಷಕನಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿಯೂ ಸಹ ಒಂದೆರಡು ಬಾರಿ ಒದಗಿ ಬಂದಿದೆಯಷ್ಟೇ ವಿನಾ, ಬೇರೆ ಸಮಯದಲ್ಲಿ ನಾನು "ಪರಧರ್ಮೋ ಭಯಾವಹಃ" ಎಂದೇ ಇದ್ದೇನೆ.

ಪರೀಕ್ಷೆ ಹತ್ತಿರ ಬರುತ್ತಿದೆನೆಂದು ಆಗಲೇ ಹೇಳಿದೆನಷ್ಟೆ. ಪರೀಕ್ಷೆಯ ಕೊಠಡಿಯಲ್ಲಂತೂ ಪೋಲೀಸ್ ಕೆಲಸಕ್ಕೆ ಬಹಳ ಬೇಡಿಕೆ. ಅನೇಕ ಸಲ ಅನುಮಾನದ ಮೇರೆಗೇ ಎಷ್ಟೋ ವಿದ್ಯಾರ್ಥಿಗಳು ಆರೋಪಿಗಳಾಗುತ್ತಾರೆ. ಎಷ್ಟೋ ಅಪರಾಧಿಗಳು ಪೆನ್ ಪೌಚಿನಲ್ಲಿ, ಜಡೆಗಳಲ್ಲಿ, ಕಾಲ್ಚೀಲಗಳಲ್ಲಿ, ಒಳ ಉಡುಪುಗಳಲ್ಲಿ ಚೀಟಿಗಳನ್ನಿಟ್ಟುಕೊಂಡು, ಕಾಪಿ ಹೊಡೆದು ಪಾರಾಗಿರುತ್ತಾರೆ. ಇನ್ಯಾರೋ ಪೆನ್ನು ಕೆಳಗೆ ಬಿತ್ತು ಎಂದು ತೆಗೆದುಕೊಳ್ಳಲು ಹೋಗುವವನು ಸಿಕ್ಕಿಬಿದ್ದಿರುತ್ತಾನೆ. ಅಥವಾ ಎರೇಸರ್ ಕೇಳಲು ಹೋದವನು ಆರಕ್ಷಕನಿಂದ ಬೈಗುಳವನ್ನು ತಿನ್ನುತ್ತಾನೆ. ಶಿಕ್ಷಕನಿಗೆ ಎಷ್ಟು ಅಧಿಕಾರ ಚಲಾಯಿಸಬಹುದೋ ಅಷ್ಟು ತಪ್ಪದೇ ಚಲಾಯಿಸಲು ಪರೀಕ್ಷೆಯ ಕೊಠಡಿಯೇ ಸೂಕ್ತ ಜಾಗ. ತರಗತಿಗಳಲ್ಲಿ ಸಾಧ್ಯವಾಗುವುದಿಲ್ಲವಾದ್ದು ಇಲ್ಲಿ ಸಾಧ್ಯವಾಗುತ್ತೆ.

ಇವೆಲ್ಲವನ್ನೂ ಪರಿಗಣಿಸಿ, ಅಧಿಕಾರ ಚಲಾಯಿಸುವುದರಲ್ಲಿ ಮಾತ್ರವಲ್ಲದೆ, ಏನಾದರೂ ನಿರ್ಣಯ ತೆಗೆದುಕೊಳ್ಳಬೇಕಾದರೂ ಮೇಲಧಿಕಾರಿಗಳ ಪರವಾನಗಿ, ಒತ್ತಡ, ಪ್ರಶ್ನೋತ್ತರ ಇತ್ಯಾದಿಗಳ ಸುಳಿಯಲ್ಲಿಯೇ ಸಿಲುಕಿರುವುದರಿಂದ ಆರಕ್ಷಕನಿಗೂ ಶಿಕ್ಷಕನಿಗೂ ಬಹಳ ಸಾಮ್ಯವೆಂದು ಧೈರ್ಯವಾಗಿ ಹೇಳಬಹುದು.

ಇಷ್ಟು ಯೋಚನೆಗಳು ತಲೆಯೊಳಗೆ ಬಂದು ಹೋಗುವ ವೇಳೆಗೆ ಹಸಿರು ಸಿಗ್ನಲ್ ಬಂದುಬಿಟ್ಟಿತು. ಆರಕ್ಷಕನು ಶಿಕ್ಷಕನಾದ ನನ್ನ ಮೇಲೆ ರೇಗಲು ಆರಂಭಿಸಿದ. ನಾನು ನಗುತ್ತಲೇ, "ನಾನೂ ನಿಮ್ಮ ಹಾಗೇನೇ.." ಎಂದು ಗಾಡಿ ಸ್ಟಾರ್ಟ್ ಮಾಡಿದೆ.

-ಅ
08.02.2011
4PM

No comments:

Post a Comment