Wednesday, March 30, 2011

ಕನಸು ಕಾಣುವ ಹೃದಯ

ಹುಲ್ಲ ರಾಶಿ, ಹೂವ ಮೆತ್ತೆ
ಒಂದೆಯಲ್ಲವೇನು ಮತ್ತೆ
ಕನಸು ಕಾಣೊ ಹೃದಯಕೆ?
ಬಿಸಿಲ ಝಳವು, ಪ್ರಿಯನ ಮುತ್ತು
ಏನು ಭೇದ ಯಾವ ಹೊತ್ತು
ಮನದ ಸೂರ್ಯನುದಯಕೆ?

ಬೀಸುಗಾಳಿ, ಭಾವಗೀತ
ಎರಡು ಕೂಡ ಬಗೆಯತೀತ
ಮೈ ಚೆಲ್ಲಿರೆ ಸ್ಪರ್ಶಕೆ.
ನೆಲದ ಕಂಪು, ಹೂವ ಘಮವು
ಎಲ್ಲವೀಗ ಒಂದೆ ಸಮವು
ನಿನ್ನಪ್ಪುಗೆ ವರ್ಷಕೆ.

ಮೈಯ್ಯ ವಸ್ತ್ರ, ಮುಗಿಲ ಚಿತ್ರ
ರೀತಿಯೊಂದೆ - ನೆಪಕೆ ಮಾತ್ರ
ಕರಗುವುದಿವು ಚಣದಲಿ.
ಬುವಿಯ ನೆಲವೊ, ದಿವದ ನೆಲೆಯೊ
ರೂಪವೊಂದೆಯಾದ ಕಲೆಯೊ
ನಿನ್ನೊಳೆನ್ನ ಋಣದಲಿ.

-ಅ
22.03.2011
1PM

Monday, March 28, 2011

ಅಜ್ಜಿಯ ಯೋಚನೆ

ನೂರು ದಾಟಿದ ಅಜ್ಜಿಗೆ ಊರ ಬಸ್ಸಿನ ಯೋಚನೆ.
ಹತ್ತು ಹೊಡೆದರೂ ಬಾರದ "ಬಸ್ಸೇನಾಯಿತೊ ಕಾಣೆ."
ಎಂಬ ಚಿಂತೆಯು ಅಜ್ಜಿಗೆ.

"ಊಟ ಮಾಡಲಿ ಹೇಗೆ, ಬಸ್ಸು ಬಾರದೆ ಇದ್ದರೆ?"
ಎಂದು ಕೇಳದೇ ಇದ್ದರೂ ಮುಖದಲ್ಲಿ ಎಲ್ಲವೂ ವ್ಯಕ್ತ.
ಮರುಘಳಿಗೆಯೇ ಊಟದಲ್ಲಿ ಸಕ್ತ.

ಹಗಲೆಲ್ಲ ಹೂಕಟ್ಟಿ - ಕಟ್ಟಿ, ಕಟ್ಟಿ, ಕಟ್ಟಿ
ಏಕಾಂಗಿ ಅಳಗುಳಿಮನೆಯಲ್ಲಿ ಗೆದ್ದು
ದಣಿದ ನೂರು ದಾಟಿದ ಅಜ್ಜಿಯ
ದಿನದಿರುಳ ಮಿತ್ರ ಬರಲಿಲ್ಲೆಂಬ ವಿರಾಗ ಚಿಂತೆ?
ಕೇಳುವಳು "ನಾಳೆಯಲ್ಲವೆ ಕೇರಳಾಪುರದಲ್ಲಿ ಸಂತೆ?"

ನೂರು ದಾಟಿದ ಅಜ್ಜಿಗೆ ಹೆಚ್ಚೇನಿರುವುದು ಯೋಚನೆ?
ಮಲಗುವ ಹೊತ್ತು ಪುಟ್ಟ ಪ್ರಾರ್ಥನೆ -
ಸುಬ್ರಹ್ಮಣ್ಯನ ದಯದಿಂದ ಒಳ್ಳೆಯ ಸಾವಿನ ಯಾಚನೆ.

ಮರುದಿನ ಎದ್ದು
ಹೂ ಕಟ್ಟಿ - ಕಟ್ಟಿ, ಕಟ್ಟಿ, ಕಟ್ಟಿ
ಅಳಗುಳಿಮನೆಯಲ್ಲಿ ಗೆದ್ದು
ಬಸ್ಸಿಗೆ ಕಾದು
ಗೊಜ್ಜನ್ನು ಮೆಲ್ಲುವ
"ಕರ್ಮ"ಯೋಗಿಗೆ ಇನ್ಯಾವ ಯೋಚನೆ?

-ಅ
28.03.2011
11.45AM

Monday, March 21, 2011

ರಾತ್ ಕಲೀ ಏಕ್ ಖ್ವಾಬ್ ಮೇ...

ಆಗ ಬರುತ್ತಿದ್ದ ಕ್ಲೋಸಪ್ ಅಂತಾಕ್ಷರೀ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಿದ್ದೆ. "ರ" ಅಕ್ಷರ ಬಂದಿತೆಂದರೆ ಸ್ಪರ್ಧಿಗಳು ಹೇಳುತ್ತಿದ್ದ ಮೊದಲ ಹಾಡೇ ರಾತ್ ಕಲೀ ಏಕ್ ಖ್ವಾಬ್ ಮೇ ಆಯೀ.... ಆ ಹಾಡನ್ನು ಆಗ ಸ್ಪರ್ಧಿಗಳ ಕಂಠದಲ್ಲಿ ಕೇಳಿದ್ದೆನೇ ವಿನಾ ಕಿಶೋರ್ ಕಂಠದಲ್ಲಿ ಕೇಳಲು ಎರಡು ವರ್ಷ ಬೇಕಾಯಿತು. ಅಬ್ಬಾಹ್, ಅಷ್ಟು ರೊಮ್ಯಾಂಟಿಕ್ ಹಾಡು ಇನ್ನೊಂದಿರಲು ಸಾಧ್ಯವೇ ಎನ್ನಿಸುವಷ್ಟು ಸೊಗಸಾಗಿ ಹಾಡಿರುವ ಕಿಶೋರ್ ಕುಮಾರರ ಶಕ್ತಿ ಎಂಥದ್ದಪ್ಪ ಎಂದರೆ, ಧ್ವನಿ ಮಾತ್ರದಿಂದಲೇ ಸುಂದರ ಹೂದೋಟವನ್ನೂ, ಅಪ್ರತಿಮ ಚೆಲುವೆಯನ್ನೂ, ಅವಳನ್ನು ಕುರಿತು ಹಾಡುತ್ತಿದ್ದ ಸುಂದರನನ್ನು, ಎಲ್ಲವನ್ನೂ ಸೃಷ್ಟಿಸಬಲ್ಲರು. ಮತ್ತೆ ಇನ್ನೆರಡು ವರ್ಷವಾದಮೇಲೆ ಆ ಹಾಡಿನ ವಿಡಿಯೋ ನೋಡಿದೆ. ಯಾಕಾದರೂ ನೋಡಿದೆನೋ ಎನ್ನಿಸಿಬಿಟ್ಟಿತು. ಯಾರೋ ಅರ್ಚನ ಅಂತೆ, ರಾತ್ ಕಲೀ ಎಂದರೆ ಹೀಗಾ ಇರೋದು ಎನ್ನಿಸಿತು. ಇನ್ಯಾರೋ ನವೀನ್ ನಿಶ್ಚಲ್ ಅಂತೆ - ಚಪ್ಪಲಿ ಹಾಕಿಕೊಂಡು ಕೈಯಲ್ಲೊಂದು ನೋಟ್ ಪುಸ್ತಕ ಹಿಡಿದುಕೊಂಡು ಹುಡುಗಿಯನ್ನು ಕುರಿತು ಹಾಡುತ್ತಿರುವ ಈ ಹಾಡಿನ ದೃಶ್ಯ ಸ್ವಲ್ಪವೂ ಇಂಪ್ರೆಸ್ ಮಾಡಲಿಲ್ಲ.

ಅರ್ಚನಾ ಕಥೆ ಏನಾಯಿತೋ ಗೊತ್ತಿಲ್ಲ, ಆದರೆ ನವೀನ್ ನಿಶ್ಚಲ್ ಕಥೆಯಂತೂ ಆತನ ಜೀವನ ಪರ್ಯಂತ ಹೀಗೇ ಆಯಿತೇನೋ.


ರಾಜೇಶ್ ಖನ್ನಾರಂತ ಬೃಹತ್ ಪರ್ವತ ಇದ್ದ ಕಾಲ ಅದು. ಅಮಿತಾಭ್ ಬಚ್ಚನ್ ಎಂಬ ಬಿರುಗಾಳಿಗೆ ಈ ಪರ್ವತವೇ ಅಲ್ಲಾಡಿ ಬಿದ್ದು ಹೋಯಿತಷ್ಟೆ. ಇನ್ನು ನವೀನ್ ನಿಶ್ಚಲ್ ಈ ಬಿರುಗಾಳಿಗೆ ಸಿಕ್ಕ ಹುಲ್ಲು ಎಂದೇ ಹೇಳಬೇಕು. ಆದರೂ ಎಲ್ಲೋ ಅಲ್ಲೊಂದು ಇಲ್ಲೊಂದು ರಾತ್ ಕಲೀನೋ, ತುಮ್ ಜೋ ಮಿಲ್ ಗಯೇ ಹೋ...ನೋ, ನೀಡಿದರು ನವೀನ್ ನಿಶ್ಚಲ್. ಅದು ಕಿಶೋರ್, ರಫಿಗಳಿಂದ ಹಿಟ್ ಆಯಿತೆಂದರೂ ಆಶ್ಚರ್ಯವಿಲ್ಲ. ಹಾಗಂತ ಇವರೇನೂ ಪ್ರತಿಭೆಯೇ ಇಲ್ಲದ ವ್ಯಕ್ತಿ ಆಗಿರಲಿಲ್ಲ. ಅವರ ಪ್ರತಿಭೆಯೇನೆಂಬುದು ಬಾಲಿವುಡ್ ಕಾಲಿಂಗ್ ಚಿತ್ರವನ್ನು ನೋಡಿದವರಿಗೆಲ್ಲರಿಗೂ ಗೊತ್ತು. ಪ್ರತಿಭೆ ಮಾತ್ರವಲ್ಲ, ಅವರ ದುರದೃಷ್ಟದ ಕಾರಣವನ್ನೂ ಊಹಿಸಬಲ್ಲರು. ದೂರದರ್ಶನದಲ್ಲಿ ಬರುತ್ತಿದ್ದ ದೇಖ್ ಭಾಯ್ ದೇಖ್ ಧಾರಾವಾಹಿಯನ್ನು ಹೇಗೆ ತಾನೆ ಮರೆಯಲು ಸಾಧ್ಯ! ಅದನ್ನು ನೋಡಿದವರು ನವೀನ್ ನಿಶ್ಚಲರಿಗೆ ಪ್ರತಿಭೆಯಿರಲಿಲ್ಲವೆಂದು ಹೇಗೆ ತಾನೆ ಹೇಳಿಯಾರು!

ಮೊನ್ನೆ ನವೀನ್ ನಿಶ್ಚಲ್ ಅವರು ಹೃದಯಾಘಾತದಿಂದ ಮರಣ ಹೊಂದಿದರಂತೆ. ಅವರ ಬಗ್ಗೆ ನೆನಪು ಮಾಡಿಕೊಳ್ಳಬೇಕೆನ್ನಿಸಿತು.

ಅವರ ನೆನಪಿನಲ್ಲಿ ಈ ವೀಡಿಯೋ..-ಅ
21.03.2011
3PM

Thursday, March 17, 2011

ಶ್ರೀ

ಮುಗಿಲಂಚಿನಲ್ಲಿ
ಕಿರುಬಯಕೆಯೆಂಬ
ಗೆರೆಯೆಳೆದ ಚಿತ್ರ-
ವಾಗಸದ ತುಂಬ
ಅಲ್ಲೆಲ್ಲ ನಿನ್ನ ಬಿಂಬ.

ಎವೆಯೊಳಗೆ ವಿಶ್ವ-
ವಡಗಿಹ ರಹಸ್ಯ
ಅದೆ ಬೆಳಗುತಿರುವ
ರವಿ ಶಶಿಯ ದೃಶ್ಯ?
ಅಲ್ಲಲ್ಲ, ಚೆಲುವಿನಾಸ್ಯ!

ಕರಿಮುಗಿಲಿನಿಂದ
ಬುವಿಗಿಳಿದ ವರ್ಷ
ಒಳರತ್ನವನ್ನು
ಹೊರ ತೆಗೆದ ಹರ್ಷ
ಇರುತಿರಲಿ ಸತತ ಸ್ಪರ್ಶ.

ಕಗ್ಗತ್ತಲಲ್ಲಿ
ಮೂಡಿರಲು ಸವಿತೆ
ನೀಗಿಸಲು ಬಾಳ
ಬೆಳಕಿನಾ ಕೊರತೆ
ಹೊತ್ತಿಸುತ ಕನಸ ಹಣತೆ

ಮರೆಯಾದ ಮಾಯೆ
ಬೆರೆಯುವಳೆ ನಾಳೆ?
ಸಿರಿಯೊಂದು ಛಾಯೆ
ಅರಿಯುವುದೆ ಬಾಳೆ?
ಬಾಳೇನು? ಬಿಳಿಯ ಹಾಳೆ!

-ಅ
08.03.2011
7PM

Tuesday, March 8, 2011

ಪಕ್ಷಿಗಳ ಕೂಗು

ಎದುರು ಮನೆಯಲ್ಲಿ
ಪಕ್ಷಿಗಳು ಕೂಗುತ್ತಿದ್ದವು
ಪಂಜರದೊಳಗೆ ಕೂತು
ಇಂದು ಮುಂಜಾನೆ.

ಬೆಳಗಾಯಿತೆಂಬ ಹರ್ಷವೇ?
ಬೇಸಿಗೆಯ ತಂಗಾಳಿಯ ಆನಂದವೇ?
ಪಕ್ಕದ ಪಂಜರದಲ್ಲಿರುವ ಸಂಗಾತಿಯ ಆಸೆಯೇ?
ಹೊಂಚುಹಾಕುತ್ತಿರುವ ಬೆಕ್ಕಿನ ಭೀತಿಯೇ?
ಏಕೆ ಕೂಗುತ್ತಿವೆ ಈ ಪಕ್ಷಿಗಳು -
ಪಂಜರದೊಳಗೆ?

ನನ್ನ ಹಾಗೆಯೇ ಯೋಚಿಸುತ್ತಿದ್ದ
ಆ ಪಂಜರದೊಡೆಯ - ಚಡ್ಡಿಯ ಹುಡುಗ.
ತನ್ನ ಮನೆಯೊಳಗಿನಿಂದ ಕರೆ ಬಂದಿತು:
"ಪರೀಕ್ಷೆಗೆ ಓದಿಕೊಳ್ಳುವುದು ಬಿಟ್ಟು
ಏನೋ ನಿನ್ನ ತಲೆಹರಟೆ?"
ನನ್ನ ಮನೆಯೊಳಗಿನಿಂದಲೂ ಒಂದು ಕರೆ ಕೇಳಿಸಿತು :
"...................."

ಪಕ್ಷಿಗಳು ಕೂಗುತ್ತಿವೆ
ಬೇರೆ ಬೇರೆ ಪಂಜರಗಳೊಳಗಿನಿಂದ.
ಕೇಳುವವರಿಗೆ ಬರಿ ಶಬ್ದ
ಹಾರಿ ಹೋದರೆ ಎಲ್ಲ ಸ್ತಬ್ಧ.

- ಅ
08.03.2011
12 PM