Wednesday, March 30, 2011

ಕನಸು ಕಾಣುವ ಹೃದಯ

ಹುಲ್ಲ ರಾಶಿ, ಹೂವ ಮೆತ್ತೆ
ಒಂದೆಯಲ್ಲವೇನು ಮತ್ತೆ
ಕನಸು ಕಾಣೊ ಹೃದಯಕೆ?
ಬಿಸಿಲ ಝಳವು, ಪ್ರಿಯನ ಮುತ್ತು
ಏನು ಭೇದ ಯಾವ ಹೊತ್ತು
ಮನದ ಸೂರ್ಯನುದಯಕೆ?

ಬೀಸುಗಾಳಿ, ಭಾವಗೀತ
ಎರಡು ಕೂಡ ಬಗೆಯತೀತ
ಮೈ ಚೆಲ್ಲಿರೆ ಸ್ಪರ್ಶಕೆ.
ನೆಲದ ಕಂಪು, ಹೂವ ಘಮವು
ಎಲ್ಲವೀಗ ಒಂದೆ ಸಮವು
ನಿನ್ನಪ್ಪುಗೆ ವರ್ಷಕೆ.

ಮೈಯ್ಯ ವಸ್ತ್ರ, ಮುಗಿಲ ಚಿತ್ರ
ರೀತಿಯೊಂದೆ - ನೆಪಕೆ ಮಾತ್ರ
ಕರಗುವುದಿವು ಚಣದಲಿ.
ಬುವಿಯ ನೆಲವೊ, ದಿವದ ನೆಲೆಯೊ
ರೂಪವೊಂದೆಯಾದ ಕಲೆಯೊ
ನಿನ್ನೊಳೆನ್ನ ಋಣದಲಿ.

-ಅ
22.03.2011
1PM

1 comment:

  1. ವಾಹ್, ಸೊಗಸಾಗಿದೆ. ಸರಳವಾದ ಭಾವಗಳು, ಸರಳವಾದ ತರ್ಕ, ಸರಳ ಲಯ. ಒಳ್ಳೆ ತಂಗಾಳಿ ಬೀಸಿದಂತೆ, ಮುದ ನೀಡುತ್ತದೆ.

    ReplyDelete