Wednesday, April 6, 2011

ದಿಗ್ದರ್ಶಕರು

ಯಾವ ಪ್ರವಾಸೀ ತಾಣಕ್ಕೆ ಹೋದರೂ ಈ ದಿಗ್ದರ್ಶಿಗಳು, ಅಥವಾ ಗೈಡುಗಳು ತಮ್ಮ ಪ್ರಾಮುಖ್ಯತೆಯನ್ನು ಮೆರೆಸದೇ ಬಿಡುವುದಿಲ್ಲ. ಪ್ರವಾಸಿಗರಿಗೆ ಸಹಸ್ರಾರು ಕಥೆಗಳನ್ನು ಹೇಳುತ್ತಾ ಎಂದೋ ಏನೋ ಎಲ್ಲೋ ನಡೆದುದನ್ನೆಲ್ಲಾ, ನಡೆಯದುದನ್ನೂ ಸೇರಿಸಿ ನಮ್ಮ ಮುಂದೆ ಚಿತ್ರಿಸಲು ಸಮರ್ಥರಾಗಿರುತ್ತಾರಾದ್ದರಿಂದ ಪ್ರವಾಸೀ ತಾಣಗಳಲ್ಲಿ ಇವರ ಸ್ಥಾನವನ್ನು ರೂಪಿಸಿಕೊಂಡಿರುತ್ತಾರೆ.

ನಾನೂ ಒಂದು ರೀತಿಯ ದಿಗ್ದರ್ಶಕನೇ ಆಗಿದ್ದೆ. ಕೆಲವು ವರ್ಷಗಳಿಂದ ಚಾರಣಗಳ ನೇತೃತ್ವ ವಹಿಸಿಕೊಳ್ಳುತ್ತಿದ್ದ ಸಲುವಾಗಿ ನನ್ನನ್ನು ನಾನೇ ದಿಗ್ದರ್ಶಿ ಎಂದುಕೊಂಡಿದ್ದೇನೆ. ಗೈಡುಗಳ ಸೈಕಾಲಜಿ ತಕ್ಕಮಟ್ಟಿಗೆ ಅರ್ಥವಾಗಿರುವುದರಿಂದ ಸಾಮಾನ್ಯವಾಗಿ ಪ್ರವಾಸೀ ತಾಣಗಳಿಗೆ ನಾನು ಹೋದಾಗ ಅವರ ಮೊರೆ ಹೋಗುವುದು ಬಹಳ ಕಡಿಮೆ. ನಮಗೆ ಗೊತ್ತಿಲ್ಲದ ಪ್ರದೇಶವಾದರೆ ಅವರುಗಳು ಏನು ಢೋಂಗಿ ಬಿಟ್ಟರೂ ಏನೂ ಬೇಸರವಾಗದೆ ಹುಬ್ಬೇರಿಸಿಕೊಂಡು ಶಾಲೆಯಲ್ಲಿ ಟೀಚರ ಮಾತನ್ನು ಕೇಳುವ ಮಕ್ಕಳಂತೆ ಕೇಳುತ್ತೇವೆ, ಆದರೆ ಗೊತ್ತಿರುವ ವಿಷಯಗಳಲ್ಲೇ ಬುರುಡೆ ಬಿಟ್ಟರೆ ಅವರ ಸಹವಾಸ ಬೇಡವೆನಿಸುತ್ತೆ.

ಕಾವೇರಿ ನದಿ ತೀರದಲ್ಲಿರುವ ಪಕ್ಷಿಧಾಮವೊಂದರಲ್ಲಿ ದೋಣಿ ವಿಹಾರಕ್ಕೆ ಕರೆದುಕೊಂಡು ಹೋದ ಗೈಡು ಶ್ರೀಲಂಕದಿಂದ ಬರುವ ಡಾರ್ಟರ್ ಪಕ್ಷಿಯನ್ನು ತೋರಿಸಿ ಅಂಟಾರ್ಕ್‌ಟಿಕಾ ಇಂದ ಬರುತ್ತೆ ಎಂದು ಹೇಳಿದರೆ “ಓಹ್, ಹೌದಾ!” ಎಂದು ಮೂಗಿನ ಮೇಲೆ ಬೆರಳಿಡುವ ವ್ಯಕ್ತಿ ನಾನಲ್ಲ. ಕೇರಳದ ಗುಹೆಯೊಳಗೆ ರಾಜ ಮಹಾರಾಜರ ಚಿತ್ರವನ್ನು ತೋರಿಸಿ “ಇದನ್ನು ಸಹಸ್ರ ಶತಮಾನಗಳ ಕೆಳಗೆ ಗವಿಜನ ಬರೆದದ್ದು, ಇದು ರಾಣಿ ಚಿಕ್ಕ ದೇಹ, ಇದು ರಾಜ – ಕೈಯಲ್ಲಿ ಕತ್ತಿಯಿದೆ” ಎಂದರೆ ಅದು ಪ್ರವಾಸಿಗರನ್ನು ಆಕರ್ಷಿಸಲು ಹುಟ್ಟುಹಾಕಿದ ಕಥೆಯಷ್ಟೆ ಎಂದು ಹೇಳಬೇಕು.

ಇಂಥಾ ಟೋಪಿ ಹಾಕುವ ದಿಗ್ದರ್ಶಕರು ನಮ್ಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸರ್ವೇ ಸಾಮಾನ್ಯ. ಸಫಾರಿ ವಾಹನದಲ್ಲಿ “ಪ್ರಾಣಿಗಳನ್ನು ನೋಡಬೇಕೆಂದರೆ ಅದೃಷ್ಟವಿರಬೇಕು, ಕಾಣಿಸದಿದ್ದರೆ ಅರಣ್ಯ ಸಿಬ್ಬಂದಿಗಳು ಜವಾಬ್ದಾರರಲ್ಲ” ಎಂದು ಓದಿದಾಗಲೇ ನಮಗೆ ಖಾತ್ರಿಯಾಗಿತ್ತು, ಇಲ್ಲಿ ಜಿಂಕೆ, ಆನೆಯನ್ನು ಬಿಟ್ಟರೆ ಇನ್ನೇನೂ ನೋಡಲು ಸಾಧ್ಯವೇ ಇಲ್ಲ ಎಂದು. ಆದರೂ ಆ ಅರಣ್ಯ ಸಿಬ್ಬಂದಿಗಳ ದುರದೃಷ್ಟವೇನಾದರೂ ಕೆಲಸ ಮಾಡಿ ನಮ್ಮ ಕಣ್ಣಿಗೆ ಹುಲಿಯೋ ಸಿಂಗಳೀಕವೋ ಕಾಣಿಸೀತೆಂಬ ಆಶಾಕಿರಣವನ್ನು ಹೊತ್ತೇ ವಾಹನವನ್ನೇರಿದ್ದೆವು. ಗುಂಪು ಗುಂಪಾಗಿ ಅಲ್ಲಲ್ಲಿ ಇಪ್ಪತ್ತು ಮುವ್ವತ್ತು ಜಿಂಕೆಗಳನ್ನು ಕಂಡಾಗ ಅವು ಹೇರಳವಾಗಿದೆ ಎಂದು ಅನ್ನಿಸುತ್ತಿತ್ತು. ಹಿರಿಯ ಮಿತ್ರ ಗೋವಿಂದ್ ರಾಜ್ ತಕ್ಷಣ ಹೇಳಿದರು, “ಇವೆಲ್ಲಾ ಏನಿಲ್ಲ, ನಾನು ನೋಡಿದ್ದೀನಿ, ನೂರಾರು ಇರುತ್ತಿತ್ತು ಇಪ್ಪತ್ತು ವರ್ಷಗಳ ಕೆಳಗಷ್ಟೇ.. ಹೊಡ್ಕೊಂಡ್ ತಿಂದ್ಬಿಟಿರ್ತಾರೆ ಬೋಳಿಮಕ್ಳು” ಎಂದು ಅರಣ್ಯ ಸಿಬ್ಬಂದಿಯವರನ್ನೂ ಸೇರಿಸಿ ಪ್ರಾಣಿಗಳನ್ನು ಕೊಲ್ಲುವವರನ್ನು ಶಪಿಸಿದರು. ನೂರು ಜಿಂಕೆಗಳನ್ನು ಒಟ್ಟಿಗೇ ನೆನೆಸಿಕೊಂಡರೇನೇ ರೋಮಾಂಚನ! ಆ ಕಾಲ ಈಗಿಲ್ಲವೆಂಬುದು ವಿಪರ್ಯಾಸ. ಎರಡು ಆನೆ ಕಂಡಿತು, ವಿಧಿಯಿಲ್ಲ, ದೊಡ್ಡ ಪ್ರಾಣಿ ಎಲ್ಲಿ ತಾನೇ ಅಡಗಿಕೊಂಡೀತು ಎಂದರು ಒಬ್ಬರು. ವಾಹನದಲ್ಲಿರುವವರಿಗೆಲ್ಲಾ ಹುಲಿಯನ್ನು ನೋಡುವ ತವಕ. ಆದರೆ ಅಲ್ಲಿ ಕಂಡಿದ್ದು ಹುಲಿಯ ಹೆಜ್ಜೆ ಗುರುತು ಮಾತ್ರ! ಅದೂ ವಾಹನ ಚಾಲಕನ ಕಣ್ಣಿಗೇ ಕಂಡಿದ್ದು. "ನೋಡಿ, ಹುಲಿಯ ಸಂಸಾರವೇ ಇಲ್ಲಿ ಹೋಗಿದೆ” ಎಂದು ನೆಲದ ಮೇಲಿದ್ದ ಹೆಜ್ಜೆ ಗುರುತುಗಳನ್ನು ತೋರಿಸಿದ. ಒಂದು ದೊಡ್ಡದಾಗಿತ್ತು, ಇನ್ನೊಂದು ಸ್ವಲ್ಪ ಚಿಕ್ಕದಾಗಿತ್ತು, ಮತ್ತೊಂದು ಪುಟ್ಟದಾಗಿತ್ತು. ಕ್ರಮವಾಗಿ ಅವು ಅಪ್ಪ, ಅಮ್ಮ ಮತ್ತು ಮರಿ ಅಂತೆ! ವಾಹನ ಹೋಗುವ ರಸ್ತೆಯಲ್ಲಿ ಅವು ನಡೆದುಕೊಂಡು ಹೋಗಿವೆಯಂತೆ! “ಶ್‌ಶ್‌ಶ್.. ಈಗ ತಾನೇ ಹೋದ ಹಾಗಿದೆ, ಇಲ್ಲೇ ಎಲ್ಲೋ ಇರುತ್ತೆ, ಮೌನವಾಗಿರಿ” ಎಂದು ಜೋರಾಗಿ ಕೂಗಿ ಹೇಳಿದ. ಅರ್ಧ ತಾಸು ಅದೇ ಪ್ರದೇಶದಲ್ಲಿ ಸುತ್ತಿ ಸುತ್ತಿ, ನಮ್ಮ ತಲೆಯೂ ಸುತ್ತಲು ಆರಂಭಿಸಿದಾಗ ತಿಳಿದು ವಾಪಸ್ಸು ಹೊರಟ. ತಲಾ ನೂರು ರುಪಾಯಿ ಕ್ಷೌರ!

ಮುನ್ನಾರ್‌ನ ಗೈಡು ಬಹಳ ಚುರುಕು. ಅರಣ್ಯ ದರ್ಶನಕ್ಕೆಂದು ಕರೆದುಕೊಂಡು ಹೋದಾಗ ದಾರಿಯಲ್ಲಿ ಆನೆ ಲದ್ದಿಯನ್ನು ಕಂಡ ಬಳಿಕವೇ ನಮ್ಮ ಗುಂಪಿಗೆ “ಶ್‌ಶ್” ಎಂದು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಂಟು ದಿಕ್ಕುಗಳನ್ನೂ ಗೂಬೆಯ ಹಾಗೆ ತಲೆಯನ್ನು ತಿರುಗಿಸಿ ನೋಡುತ್ತಾ ನಡೆದ. ನಮಗೂ ಹಾಗೇ ಮಾಡಲು ಆದೇಶಿಸಿದ. ಆ ಲದ್ದಿಯು ವಿಪರೀತ “ಫ್ರೆಶ್” ಆಗಿತ್ತು ಎಂಬುದು ಅವನ ಹೇಳಿಕೆ. ಅದು ದಿಟವೂ ಆಗಿತ್ತು. ಕೇರಳದ ಕಾಡಾನೆಗಳ ಬಗ್ಗೆ ಎಲ್ಲಾ ಕಥೆಗಳನ್ನೂ ಗುಟ್ಟಾಗಿಯೇ ವಿವರಿಸಿದ. ಅವನಿಗೆ ಎಳ್ಳಷ್ಟೂ ಆತಂಕವಿರದಿದ್ದರೂ ಭಯಗೊಂಡಂತೆ ನಟಿಸುತ್ತಿದ್ದ ಎಂದೆನಿಸಿತ್ತು. ನಮಗೆ ಕೊಂಚ ಭಯವೂ ಆಗಿತ್ತು. ಒಂಟಿ ಸಲಗ ಇಲ್ಲಿ ಎದುರು ಬಂದುಬಿಟ್ಟರೆ ಏನಪ್ಪಾ ಗತಿ ಎಂದು ಆತಂಕ. ಸುಮಾರು ಅರ್ಧ ಗಂಟೆ ಹೆಜ್ಜೆ ಇಟ್ಟರೆ ಎಲ್ಲಿ ಸದ್ದಾಗುತ್ತೋ ಎಂಬಂತೆ ಕಾಲನ್ನು ಎತ್ತಿ ಎತ್ತಿ ನೆಲಕ್ಕಿಡುತ್ತಿದ್ದೆವು. ನಮ್ಮ ಕಾಲುಗಳು ನಮಗೇ ಭಾರವೆನಿಸಿಬಿಟ್ಟಿತ್ತು. ಇದೆಲ್ಲಿ ಬಂದು ಸಿಕ್‌ಹಾಕಿಕೊಂಡು ಬಿಟ್ಟಿದ್ದೇವಪ್ಪಾ ಎಂದುಕೊಳ್ಳುವಷ್ಟರಲ್ಲೇ ಸಲಗವು ಎದುರು ಬಂದೇ ಬಿಟ್ಟಿತ್ತು - ಒಂಟಿ ಸಲಗ! ಪಕ್ಕದಲ್ಲಿ ಒಬ್ಬ ಮಾವುತ ಕೂಡ ಇದ್ದ!

ಪ್ರವಾಸಿಗರಿಗೆ ಗೈಡುಗಳ ಅವಷ್ಯವಿರುತ್ತಷ್ಟೆ, ಪಯಣಿಗರಿಗೆ ಇರುವುದಿಲ್ಲ. ಪಯಣಿಗರು ತಮಗೆ ತಾವೇ ದಿಗ್ದರ್ಶಿಗಳು. ಆದರೂ ಐತಿಹಾಸಿಕ ಸ್ಥಳಗಳಿಗೆ ಹೋಗುವವರು ಅವುಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ, ಸಂಶೋಧಕರ ವರದಿಗಳನ್ನೂ ಲೇಖನಗಳನ್ನೂ ಓದಿಕೊಂಡು ಜಾಗಗಳಿಗೆ ಭೇಟಿ ನೀಡುವುದು ಅಪರೂಪ. ಹಂಪೆಗೆ ಹೋಗುವ ಮುನ್ನ ಭೈರಪ್ಪನವರ ಆವರಣವೋ ರಾಬರ್ಟ್ ಸೀವೆಲ್ಲರ e ಠಿhಚಿಡಿgಚಿಚಿಖಿಚಿಟಿ eಒಠಿಚಿiಡಿ ಅನ್ನೋ ಓದಿಕೊಂಡು ಹೋದರೆ ಹಂಪೆಯನ್ನು ನೋಡುವ ರೀತಿಯೇ ಬೇರೆ. ನಿಜವಾದ ಪಯಣಿಗ ಇಂಥಾ ಹೋಮ್‌ವರ್ಕ್ ಮಾಡಿಕೊಂಡು ಪಯಣಿಸುತ್ತಾನೆ. ಪ್ರವಾಸಿಗನು ಗೈಡುಗಳ ಮೊರೆ ಹೋಗುತ್ತಾನೆ. ಕಲ್ಲಿನ ರಥವನ್ನು ತೋರಿಸಿ ಇದನ್ನು ತೇರನ್ನೆಳೆಯಲು ಬಳಸುತ್ತಿದ್ದರು ಎಂದು ಹೇಳಿದರೆ ಕಣ್ಣುಗಳನ್ನರಳಿಸಿ ನೋಡುತ್ತಿರುತ್ತಾರೆ! ನರಸಿಂಹನನ್ನು ನೋಡಿ ಅದು ಉಗ್ರನರಸಿಂಹನೋ ಲಕ್ಷ್ಮಿ ನರಸಿಂಹನೋ ಎಂಬ ಅನುಮಾನದೊಂದಿಗೆ ಮನೆಗೆ ಹೋಗುತ್ತಾರೆ!!

ಬೇಲೂರಿನಲ್ಲಿ ನಾವು ಒಬ್ಬ ಗೈಡಿನ ಮೊರೆ ಹೋಗಿದ್ದು ತಲೆ ತಲೆ ಚಚ್ಚಿಕೊಳ್ಳುವಂತಾಗಿತ್ತು. ಶ್ರೀಕಾಂತ, ನಾನು ಮತ್ತು ಗೆಳೆಯ ಸುಶೃತ್ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ನಿರ್ಧರಿಸಿ ಧಿಡೀರ್ ಎಂದು ಬೇಲೂರಿಗೆ ಹೊರಟೆವು. ಅಂಥ ತಪ್ಪು ಮಾಡಬಾರದೆಂದು ಅರ್ಥವಾಗಿದ್ದು ಅಲ್ಲಿನ ದಿಗ್ದರ್ಶಿಯ ದೆಸೆಯಿಂದ. ನನಗೆ ಆ ಗೈಡಿನ ತಿಳಿವಳಿಕೆಯ ಬಗ್ಗೆ ಎಳ್ಳಷ್ಟೂ ಶಂಕೆಯಿಲ್ಲ. ಚೆನ್ನಾಗಿ ಓದಿಕೊಂಡಿದ್ದ. ಆದರೆ ಆತನ ವಿವರಣೆ ಬಹಳ ಹಾಸ್ಯಮಯವಾಗಿತ್ತು. "ಕೃಷ್ಣ ಅವರು ಗೋವರ್ಧನಗಿರಿಯನ್ನು ಹೊತ್ತುಕೊಂಡಿದ್ದಾರೆ ನೋಡಿ” ಎಂದು ಒಂದು ಅದ್ಭುತ ಶಿಲ್ಪವನ್ನು ತೋರಿಸಿದ. ಸ್ವಲ್ಪ ಮುಂದೆ ಹೋದಾಗ “ಇವರು ಶಾಂತಲೆ, ನಮ್ಮ ಪ್ರವಾಸೋದ್ಯಮ ಇಲಾಖೆಯವರು ಇದೇ ಚಿತ್ರವನ್ನು ತಮ್ಮ ಲೋಗೋ ಮಾಡಿಕೊಂಡಿದ್ದಾರೆ” ಎಂದು ತೋರಿಸಿದಾಗ ಕೆ.ವಿ.ಅಯ್ಯರ್ ಅವರ ‘ಶಾಂತಲಾ’ ಪುಸ್ತಕ ನೆನಪಾಯಿತು. ಶಾಂತಲೆಯ ಬಗ್ಗೆ ಹೆಚ್ಚು ವಿವರಿಸಲಿಲ್ಲ. "ಶಾಂತಲೆಯವರು ಇಲ್ಲಿ ಕುಣಿಯುತ್ತಿದ್ದರು” ಎಂದು ‘ಮರ್ಯಾದೆ ಪೂರ್ವಕ’ ಹೇಳಿಕೆಯನ್ನು ಮಾತ್ರ ಕೊಟ್ಟ. ಇನ್ನೊಂದು ಕಡೆ, “ಹಿರಣ್ಯ ಕಶ್ಯಪುರವರನ್ನು ನರಸಿಂಹನವರು ಹೊಸಲಿನ ಮೇಲೆ ಬಗೆಯುತ್ತಿದ್ದಾರೆ” ಎಂದ. “ಎಲಾ, ನರಸಿಂಹ ಹಿರಣ್ಯ ಕಶ್ಯಪುಗಳನ್ನು ಅವರು-ಇವರು ಎನ್ನುವವರನ್ನು ಈಗಲೇ ನೋಡುತ್ತಿರುವುದು” ಎಂದು ಅಚ್ಚರಿ ಪಟ್ಟೆವು. ಮತ್ತೊಂದು ಕಡೆ “ಇಲ್ಲಿ ನೋಡಿ, ಗೋಪಿಕೆಯರು ನರ್ತನವಾಡುತ್ತಿದ್ದಾರೆ, ಕೃಷ್ಣ ಅವರು ಕೊಳಲನ್ನು ಊದುತ್ತಿದ್ದಾರೆ, ಕೋತಿಯವರು ಹೆಣ್ಣಿನ ಸೀರೆಯನ್ನು ಎಳೆದು ಚೇಷ್ಟೆ ಮಾಡುತ್ತಿದ್ದಾರೆ” ಎಂದಾಗ ಈ ಗೈಡಿನ ವಿನಯವಂತಿಕೆಗೆ ಮಾರು ಹೋದೆವು.

ಚಿತ್ರದುರ್ಗಕ್ಕೆ ಹೋಗುವುದರ ಬದಲು ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರ ನೋಡಿದರೆ ಸಾಕು ಎನ್ನುವಂತೆ ರೋಸುಗೊಳಿಸಿಬಿಟ್ಟಿದ್ದ ಅಲ್ಲಿನ ಗೈಡೊಬ್ಬ. ಓಬವ್ವನ ಕಿಂಡಿಯಾಗಲೀ, ಅಕ್ಕ-ತಂಗಿ ಕೊಳವಾಗಲೀ, ಇನ್ನೊಂದಾಗಲೀ ಮತ್ತೊಂದಾಗಲೀ ಈ ಗೈಡಿಗೆ ಮುಖ್ಯವೇ ಆಗಿರಲಿಲ್ಲ. ಕೆಲವೇ ವರ್ಷಗಳ ಕೆಳಗೆ ದುರಸ್ತಿ ಮಾಡಿ ಪುನರ್ನಿರ್ಮಾಣ ಮಾಡಿದ ಮೆಟ್ಟಿಲುಗಳ ಮೇಲೆ ಬಿದ್ದ ಏಟುಗಳನ್ನು ತೋರಿಸಿ “ಆ ಕಾಲದ ಕುದುರೆಗಳು ಬಹಳ ಶಕ್ತಿಶಾಲಿಗಳಾಗಿದ್ದವು, ಹೆಜ್ಜೆಯಿಟ್ಟರೆ ಕಲ್ಲಿನ ಮೇಲೂ ಹೆಜ್ಜೆ ಗುರುತುಗಳು ಮೂಡುತ್ತಿದ್ದವು” ಎಂದುಬಿಟ್ಟ. ಬರೀ ಮೆಟ್ಟಿಲುಗಳನ್ನೇ ತೋರಿಸಿ ಆ ಕುದುರೆಗಳ ಬಲವರ್ಣನೆ ಮಾಡುತ್ತಿದ್ದ. ಅವನ ಹತ್ತಿರ ಏನು ವಾದ ಎಂದು ಸುಮ್ಮನಾಗಿದ್ದೆವು. ಮತ್ತೆ ಈ ಗೈಡಿನ ವಿಷ್ಣುವರ್ಧನ ಪ್ರೀತಿ ನಮ್ಮ ತಲೆ ಚಿಟ್ಟು ಹಿಡಿಸಿಬಿಟ್ಟಿತ್ತು! ದುರ್ಗದ ಪ್ರವೇಶ ದ್ವಾರದಲ್ಲೇ ಇರುವ ಹಾವಿನ ಕೆತ್ತನೆಯನ್ನು ತೋರಿಸಿ, “ಇದೇ ಹಾವನ್ನು ನಾಗರ ಹಾವು ಚಿತ್ರದಲ್ಲಿ ‘ಹಾವಿನ ದ್ವೇಷ’ ಹಾಡಿನಲ್ಲಿ ವಿಷ್ಣು ಅಣ್ಣ ಹಾಡುವಾಗ ತೋರಿಸಿರೋದು” ಎಂದದ್ದು ಮಾತ್ರವಲ್ಲದೆ, ಗಳಿಗೆ ಗಳಿಗೆಗೊಮ್ಮೆ, “ಈ ಮೆಟ್ಟಿಲಿನ ಮೇಲೇನೇ ಮಕ್ಕಳನ್ನು ಕೂರಿಸಿಕೊಂಡು ವಿಷ್ಣುವರ್ಧನ್ ‘ಕನ್ನಡ ನಾಡಿನ ವೀರ ರಮಣಿಯ’ ಹಾಡು ಹಾಡಿದ್ದು” ಎಂದೋ, ಇದೇ ಗೋಡೆಯ ಹಿಂದೆ ವಿಷ್ಣುವರ್ಧನ ಬಚ್ಚಿಟ್ಟುಕೊಂಡಿದ್ದು ಎಂದೋ ಹೇಳುತ್ತಲೇ ಇದ್ದ. ಓಬವ್ವನ ಕಿಂಡಿಯ ಬಳಿ ಕರೆದುಕೊಂಡು ಹೋಗಿ, ‘ಇಲ್ಲೇ ಜಯಂತಿ ಒನಕೆ ಹಿಡಿದುಕೊಂಡು ಎಲ್ಲರನ್ನೂ ಕೊಂದಿದ್ದು’ ಎಂದ. ನಾವು “ತುಂಬಾ ಥ್ಯಾಂಕ್ಸ್ ಸರ್” ಎಂದು ಆದಷ್ಟು ಬೇಗ ಹೇಳಿ, ಮತ್ತೊಮ್ಮೆ ನಾವೇ ದುರ್ಗವನ್ನು ನೋಡಿಕೊಂಡು ಮನೆಗೆ ಹಿಂದಿರುಗಿದೆವು.

ಉತ್ತರ ಭಾರತದ ಗೈಡುಗಳು ಟೋಪಿ ಹಾಕುವುದರಲ್ಲಿ ನಿಸ್ಸೀಮರು. ಇವರುಗಳು ಡ್ರೈವರುಗಳ ಜೊತೆ ಕೈಗೂಡಿಸಿರುತ್ತಾರೆ. ತಿರುಗಾಡಲು ಯಾವುದಾದರೂ ಕಾರನ್ನೋ ಜೀಪನ್ನೋ ಬಾಡಿಗೆಗೆ ತೆಗೆದುಕೊಂಡೆವೆಂದರೆ ಮುಗಿಯಿತು. ಅದು ನೋಡಿ, ಇದು ನೋಡಿ, ಗೈಡುಗಳು ಸಿಗ್ತಾರೆ ಎಂದು ತಮ್ಮ ತಮ್ಮ ಮಿತ್ರರ ಬಳಿ ಕರೆದುಕೊಂಡು ಹೋಗುತ್ತಾರೆ. ಗೈಡುಗಳ ಫೀಸುಗಳಲ್ಲಿ ಇವರದೂ ಪಾಲಿರುತ್ತಲ್ಲಾ!

ಫತೇಪುರ್ ಸಿಖ್ರಿಗೆ ಹೋದರೆ ಒಬ್ಬ ಕಾಲೇಜು ಓದುವ ಹುಡುಗ ಬಂದು ಚಿತ್ರದುರ್ಗದ ‘ನಾಗರ ಹಾವು’ ಕಥೆಯಂತೆಯೇ ಮುಘಲ್-ಎ-ಆಜ಼ಾಮ್ ಕಥೆ ಒದರಿದ್ದನ್ನು ಕೇಳಲು ಮುನ್ನೂರು ರೂಪಾಯಿ ದಂಡ ತೆರಬೇಕಾಯಿತು. ಆ ಸಿನಿಮಾ ನೋಡಿದ್ದರೆ ನೂರು ರುಪಾಯಿಯೊಳಗೆ ಕೆಲಸ ಮುಗಿಯುತ್ತಿತ್ತು!

ತಾಜ ಮಹಲಿನ ಮುಂದೆ ನಿಂತಿದ್ದೇವೆ. ಭವ್ಯ ಕಟ್ಟಡ. ಬರಿಯ ಕಟ್ಟಡವಲ್ಲ, ಪ್ರೇಮಸೌಧ. ಇಡೀ ತಾಜಮಹಲಿನ ಬಗ್ಗೆ ನಮ್ಮ ಗೈಡು ಹೇಳಿದ್ದು what a beautiful structure, see this” ಎಂದಷ್ಟೆ. ಎಲ್ಲೆಲ್ಲಿ ಹೋದರೂ ಅವನು this is beautiful ಎನ್ನುತ್ತಿದ್ದ. ತಾಜಮಹಲಿನ ಸೌಂದರ್ಯವನ್ನು ಗೈಡಿನಿಂದ ಹೇಳಿಸಿಕೊಂಡು ತಿಳಿಯಬೇಕೇ? ನಮಗೆ ತಾಜಮಹಲಿನಲ್ಲಿ ಗೈಡು ಬೇಕಾಗಿದ್ದು ಅದರ ಇತಿಹಾಸವನ್ನು ತಿಳಿಸಲು. ಅವರುಗಳು ತಿಳಿಸುವುದಿಲ್ಲ. ವಿದೇಶಿ ಪ್ರವಾಸಿಗರಿಗೆ ಶಾಹ್ ಜಹಾನಿನ ಬಗ್ಗೆ ಬೇರೆಯದೇ ಇತಿಹಾಸವನ್ನೇ ಸೃಷ್ಟಿಸಿ ಟೋಪಿ ಹಾಕಿ ಕಳಿಸುವ ಹುನ್ನಾರ ಕೆಲವರದು. ಆದರೆ ಅನೇಕ ವಿದೇಶಿ ಪ್ರವಾಸಿಗರು ನಮ್ಮಂತೆ ಮೂಢರಲ್ಲ. ಅವರು ಸಾಕಷ್ಟು ಹೋಮ್‌ವರ್ಕ್ ಮಾಡಿರುತ್ತಾರೆ. ಇಂಥಾ ತಿಳಿಗೇಡಿ ಗೈಡುಗಳ ಮಾತುಗಳನ್ನು ಕೇಳಿ ಇದೇ ರೀತಿ ಅವರನ್ನು ಬೈದು ತಮ್ಮ ಪುಸ್ತಕದಲ್ಲಿ ಪ್ರಕಟಿಸುತ್ತಾರೆ. ತಾಜಮಹಲನ್ನು ದಿನಗಟ್ಟಲೆ ವೀಕ್ಷಿಸುತ್ತಾರೆ, ನಮ್ಮ ಹಾಗೆ ಅರ್ಧಗಂಟೆಯಲ್ಲ!

ಮಥುರಾ ನಗರಕ್ಕೆ ಹೋದರೆ ಯಾಕಾದರೂ ಬಂದೆವೋ ಎನ್ನುವಂತೆ ಮಾಡಿಬಿಡುತ್ತಾರೆ ಗೈಡುಗಳು. ಬೃಂದಾವನಕ್ಕೆ ಕರೆದೊಯ್ದ ಗೈಡು ‘ರಾತ್ರಿಯ ವೇಳೆ ಈ ತುಳಸೀ ಗಿಡಗಳೆಲ್ಲಾ ಗೋಪಿಕೆಯಾರಾಗಿ ಬಿಡುತ್ತಾರೆ, ಕೃಷ್ಣ ಬರುತ್ತಾನೆ, ಕೊಳಲನ್ನೂದುತ್ತಾನೆ, ನಮ್ಮ ಕಣ್ಣಿಗೆ ಕಾಣುವುದಿಲ್ಲವಷ್ಟೆ’ ಎಂದು ಬುರುಡೆ ಡುತ್ತಾನೆ. ದೇವಸ್ಥಾನಗಳಲ್ಲಿ ದರೋಡೆಕೋರರು ಪುರೋಹಿತರ ವೇಷ ಧರಿಸಿ ಕುಳಿತಿರುತ್ತಾರೆ, ಕುತ್ತಿಗೆ ಪm ಹಿಡಿದು ಹಣ ಕೀಳುತ್ತಾರೆ. ದೇವಸ್ಥಾನದ ಪ್ರತಿ ಕಲ್ಲಿನ ಮೇಲೂ ಏನಲ್ಲಾ ಅಂದರೂ ಇಪ್ಪತ್ತು ಹೆಸರುಗಳನ್ನು ಕೆತ್ತಿರಬಹುದು, ಹಣ ಕೊಟ್ಟವರ ಹೆಸರುಗಳಂತೆ ಅವು. ನಮ್ಮಲ್ಲಿ ಕಲ್ಲಿನ ಮೇಲೆ ಶಿಲ್ಪಕಲೆಯಿದ್ದಂತೆ, ಎಲ್ಲಾ ಕಲ್ಲುಗಳ ಮೇಲೂ ಹೆಸರುಗಳೇ. ಇಂಥಾ ದರೋಡೆಗೆ ಗುರಿ ಮಾಡುವ ಕೆಲಸ ಅಲ್ಲಿನ ದಿಗ್ದರ್ಶಿಗಳದ್ದು. ದರೋಡೆಯಲ್ಲಿ ಅವನ ಪಾಲನ್ನು ಗಿಟ್ಟಿಸಿಕೊಳ್ಳಬೇಕಲ್ಲ!!

ದಕ್ಷಿಣಭಾರತದ ಗೈಡುಗಳು ಸ್ವಲ್ಪ ಅಗ್ಗ. ಒಂದು ಗಂಟೆಗೆ ಐನೂರು ರೂಪಾಯಿಯಿಲ್ಲದೆ ಉತ್ತರಭಾರತದ ಗೈಡುಗಳು ಹತ್ತಿರವೂ ಸುಳಿಯುವುದಿಲ್ಲ. ದುರಂತವೆಂದರೆ ಗೈಡುಗಳು ಜೊತೆಯಿಲ್ಲದಿದ್ದರೆ ಅನೇಕ ಸ್ಥಳಗಳಲ್ಲಿ ನಮಗೆ ಮೂಲಭೂತ ಮಾಹಿತಿ ಕೊಡುವವರೂ ಇರುವುದಿಲ್ಲ. ಅವನು ಕಿಂಚಿತ್ ವಿಷಯವನ್ನೂ ಅರಿತುಕೊಂಡಿರುವುದಿಲ್ಲವೆಂಬುದು ಸ್ಪಷ್ಟವಾಗಿ ಗೊತ್ತಾದರೂ ವಿಧಿಯಿಲ್ಲದೆ ಅವನೇ ನಮ್ಮ ಗೈಡಾಗಿರುತ್ತಾನೆ. ಅವನ ಹೊಟ್ಟೆಪಾಡು, ನಮ್ಮ ಪ್ರಾರಬ್ಧ.

ಆಗಲೇ ಹೇಳಿದ ಹಾಗೆ ನಾನೂ ಒಬ್ಬ ಗೈಡಿನ ಕೆಲಸ ಮಾಡುತ್ತಿದ್ದವನೇ. ಆದರೆ ನನ್ನ ಪುಣ್ಯವೋ, ಅದೃಷ್ಟವೋ ಏನೋ ಎಲ್ಲೂ ಇಲ್ಲದ್ದನ್ನು ವೈಭವೀಕರಿಸಿ ಹೇಳುವುದೋ, ಹಣ ಕೀಳಲು ಗೊತ್ತಿಲ್ಲದ ಸ್ಥಳಗಳ ಬಗ್ಗೆ ಕಟ್ಟುಕಥೆಗಳನ್ನು ಹೇಳುವುದೋ ಮಾಡಿಲ್ಲದೇ ಇರುವುದರಿಂದ ಒಳ್ಳೆಯ ಹೆಸರನ್ನು ಸಂಪಾದಿಸದಿದ್ದರೂ ಕೆಟ್ಟ ಹೆಸರನ್ನು ಗಳಿಸಿಲ್ಲವೆಂಬ ತೃಪ್ತಿಯಿದೆ. ಸಾಹಸದ ಕ್ರೀಡೆಗಳಲ್ಲಿ ಗೈಡಿನ ಅವಷ್ಯಕತೆ ಇದ್ದೇ ಇರುತ್ತೆ. ಅದರಲ್ಲೂ ಚಾರಣ ಮಾಡುವಾಗಲಂತೂ ಕಾಡಿನ ಬಗ್ಗೆ ಅರಿತವರೊಬ್ಬರು ತಂಡದಲ್ಲಿದ್ದರೆ ಅವರೇ ಗೈಡು. ಕೆಲವು ಗುಂಪುಗಳು ಏನೂ ಗೊತ್ತಿಲ್ಲದೇ ಇರುವುದರಿಂದ ನನ್ನಂಥವರ ಬಳಿ ಬರುತ್ತಾರಾದ್ದರಿಂದ ಅಂಥವರಿಗೆ ನಾನು ಗೈಡಾಗಿರುತ್ತಿದ್ದೆ.

ಹೀಗೆ ಚಾರಣದ ಗೈಡು ನಾನಾಗಿದ್ದಾಗ, ನನಗೂ ಹಲವು ಸ್ಥಳಗಳಲ್ಲಿ ಗೈಡುಗಳಿರುತ್ತಿದ್ದರು. ಸೋಲಿಗೆರೆಯ ಸೋಲಿಗ ಗಿರಿಮಾದ, ಬಾಣತಿಮಾರಿಯ ನಾಗ, ತಡಿಯಾಂಡಮೋಳಿನ ಚಂಗಪ್ಪ - ಹೀಗೆ. ಇವರುಗಳು ಅಲ್ಲಿನ ಸ್ಥಳೀಯರಾದ್ದರಿಂದ ಜಾಗಗಳ ಬಗ್ಗೆ ಆಮೂಲಾಗ್ರವಾಗಿ ಬಲ್ಲವರಾಗಿದ್ದು ಎಲ್ಲೂ ಇಲ್ಲ ಸಲ್ಲದ ಕಥೆಗಳನ್ನು ಹೇಳಿ ಹಾದಿ ತಪ್ಪಿಸುವುದಿಲ್ಲ. ತಮ್ಮ ವಿದ್ಯೆಗಳನ್ನೂ, ಅನುಭವಗಳನ್ನೂ, ತತ್ತ್ವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಲು ಕಾತುರರಾಗಿರುತ್ತಾರೆ.

ಸೋಲಿಗರ ಗಿರಿಮಾದನು ಒಮ್ಮೆ ಮುತ್ತತ್ತಿಯ ಕಾಡಿನಲ್ಲಿ ಚಾರಣದ ಹಾದಿಯನ್ನು ತೋರಿಸುತ್ತಿದ್ದಾಗ ಅವನನ್ನು ಕೇಳಿದ್ದೆ, “ಆನೇನೋ ಕರಡೀನೋ ಎದುರು ಬಂದ್ಬಿಟ್ರೆ ಏನ್ ಮಾಡ್ತೀಯಾ?” ಅಂತ, ಅದಕ್ಕವನು ಎಂಥಾ ಉತ್ತರ ಕೊಟ್ಟನೆಂದರೆ ನಾನು ಮರುಪ್ರಶ್ನೆಯೇ ಮಾಡದೆ ಅವನ ಬೆನ್ನು ತಟ್ಟಿದ್ದೆ. “ನೋಡಿ ಸಾ, ಕಲ್ಡಿ ಬಂದ್ರೆ, ಆನೇ ಬಂದ್ರೆ ಅವು ಏನ್ ಮಾಡ್ತದೆ ಅಂತ ನಮ್ಗೆ ಗೊತ್ತಿರುತ್ತೆ, ಓಡ್ ಹೋಗ್ಬಿಟ್ಟೋ ಬಚ್ಚಿಟ್ಕೊಂಡೋ ತಪ್ಸ್ಕೊತೀವಿ, ಆದ್ರೆ ಮನ್ಸ ಬಂದ್ರೆ ಅವ್ನು ಏನ್ ಮಾಡ್ತಾನೆ ಅಂತ ಗೊತ್ತಾಗಲ್ಲ” ಎಂದಿದ್ದ!

ಅನೇಕ ದಿಗ್ದರ್ಶಿಗಳು ನಿಜವಾಗಿಯೂ ದಿಕ್ಕು ತೋರಿಸುವವರೇ. ಅಂಥವರು ನಮಗೆ ಬೇಕಾಗಿದೆ. ದಿಕ್ಕು ತಪ್ಪಿಸುವವರಲ್ಲ!

-ಅ

3 comments:

 1. ಉಪಯುಕ್ತ ದಿಗ್ದರ್ಶನ..!
  ನಾವೊಮ್ಮೆ ತಾ೦ಜಾವೂರಿಗೆ ಹೋದಾಗ ಅಲ್ಲಿಯ ಒಬ್ಬ ಗೈಡ್ ಬ್ರುಹದೇಶ್ವರ ದೇವಾಲಯದ ಗೋಡೆಯ ಮೇಲೆ ಬರೆದಿದ್ದನ್ನುಎಲ್ಲಿ ತೋರಿಸಿ ಕೇಳಿದರೂ ” ನೋಡಿ ಇಲ್ಲಿ ರಾಜರಾಜ ಚೋಳ ಅ೦ತ ಬರೆದಿದೆ” ಎ೦ದು ಹೇಳುತ್ತಿದ್ದ..
  ಆಮೇಲೆ ನಾವೇ ಆತನಿಗೆ ”ನೋಡಿ ಇಲ್ಲಿ ರಾಜ ರಾಜ ಚೋಳ ಅ೦ತ ಬರೆದಿದೆ ”ಎನ್ನಲಾರ೦ಬಿಸಿದೆವು...!

  ReplyDelete
 2. ಬಹಳ ಉತ್ತಮ ಲೇಖನ. ಚಾರಣದಲ್ಲಿ ಮಾತ್ರ ಸರಿಯಾದ ಗೈಡುಗಳು ಸಿಕ್ಕಿರುತ್ತಾರೆ. ಆದರೆ ಪ್ರವಾಸದ ಸಮಯದಲ್ಲಿ ಇವರಿಂದ ದೂರ ಉಳಿಯುವುದೇ ಉತ್ತಮ. ಗಿರಿಮಾದನ ಉತ್ತರ ಈಗಿನ ಪರಿಸ್ಥಿತಿ.
  ರಾಜೇಶ್ ನಾಯ್ಕ.

  ReplyDelete
 3. ಸೊಗಸಾದ ಲೇಖನ. ಗೈಡುಗಳ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಪ್ರವಾಸದ ಮುನ್ನ ಸಾಕಷ್ಟು ಅಧ್ಯಯನ ಬಹು ಮುಖ್ಯ. ಭಾಷೆ/ಲಿಪಿ ಬರದೇ ಸ್ಥಳೀಯ ಇತಿಹಾಸವೂ ತಿಳಿಯದೇ ಸುಮ್ಮನೇ ಕೈಕೈ ಹಿಸುಕಿಕೊಂಡು ಬಂದ ಪ್ರಸಂಗಗಳೆಷ್ಟೋ.

  ಆದರೆ ಪ್ರವಾಸಕ್ಕೆಂದೇ ಅಧ್ಯಯನ ಕೈಗೊಳ್ಳುವುದೂ ತುಸು ಕಿರಿಕಿರಿ ನನ್ನಂಥವರಿಗೆ, ಏಕೆಂದರೆ ಪ್ರವಾಸದ casual ಸ್ವಭಾವ ಹೋಗಿಬಿಡುತ್ತದಲ್ಲ! ಅದಕ್ಕೇ ಸುಮ್ಮನೇ ಬೇಕನಿಸಿದ್ದನ್ನು ತಿಳಿದುಕೊಳ್ಳುತ್ತಿರುವುದು, ಮತ್ತೆ ನಮ್ಮ ತಿಳಿವಿಗೆ ರುಚಿಯೆನಿಸಿದ ಕಡೆ ಪ್ರವಾಸ ಹೋಗುವುದು ಇದು ನನ್ನ ರೀತಿಯಾಗಿದೆ.

  ತಿರುವನಂತಪುರಂನಲ್ಲೊಬ್ಬ ಗೈಡ್, ಅಲ್ಲಿಯ ಅರಮನೆಯನ್ನು ಸುತ್ತಾಡಿಸುತ್ತಾ ಅಲ್ಲಿಯ ಕೆಲವು ಅಂಗಣಗಳನ್ನು ಪರಿಚಯಿಸಿದ್ದು ಹೀಗೆ:

  Swati Tirunal poets meeting room
  Swati Tirunal music singing room
  Swati Tirunal dancing room
  ಮತ್ತೆ ಇದಕ್ಕೆ ಕಿರೀಟವಿಟ್ಟಂತೆ,
  Swati Tirunal poem inspiration room (ಅದೊಂದು ಚಿಕ್ಕ ಕೋಣೆ, ಅದರ ಕಿಟಕಿಯಿಂದ ಅನಂತಪದ್ಮನಾಭನ ಗೋಪುರ ಗೋಚರಿಸುತ್ತದೆ. ಆ ಕಿಟಕಿಯ ಪಕ್ಕದಲ್ಲೇ ಬರೆಯುವ ಮೇಜು. ಸ್ವಾತಿತಿರುನಾಳ್ ಆ ಗೋಪುರವನ್ನು ನೋಡಿ ಸ್ಪೂರ್ತಿಗೊಳ್ಳುತ್ತಿದ್ದರಂತೆ). ಅಲ್ಲಿದ್ದ ಅನೇಕ ವಿದೇಶೀ ಪ್ರವಾಸಿಗರ ಮುಖಭಾವವನ್ನಳೆಯುವ ಧೈರ್ಯ ಮಾಡಲಿಲ್ಲ ನಾನು.

  ReplyDelete