Tuesday, April 12, 2011

ಕಮಾಚ್

ಕಂಠದಿ ಮೂಡಿದ ದನಿಯಲ್ಲವೊ ಇದು
ಹೃದಯದೊಳುಕ್ಕಿದ ಪ್ರೇಮಸಾಗರವು
ಕಮಾಚಿನಂದದಿ ಹರಿಯಿತು, ಬೆರೆಯಿತು.

ಜಗದಾನಂದದ ಮೂಲವಿದೆನ್ನುವ
ಪರಿಯಲಿ ಎಲ್ಲವನಾವರಿಸುತ್ತಲೆ
ಸಿಂಚನಗೊಳಿಸಿತು ಸೊದೆಯನು, ಮುದವನು.

ಮಂದ್ರವೊ, ತಾರವೊ, ಸ್ವರಸಾಕಾರವೊ?
ತಪಸಿನ ಫಲದೊಳು ಸಾಕ್ಷಾತ್ಕಾರವೊ? -
ದಿಟ್ಟಿಯು ಮುಟ್ಟಿರೆ ಸಿರಿಯನು, ಗುರಿಯನು.

ಸೀತಾಪತಿಯೇ ನಿಂತಿಹನೆದುರಲಿ
ಅಭಿಮಾನದಿ ತಾನ್ ಕಂಬನಿ ಮಿಡಿಯುತ
ಕಮಾಚಿನಮೃತ ಸವಿಯುತ, ನಲಿಯುತ.

- ಅ
12.04.2011
11AM

3 comments:

  1. Very nice. ನೀವು ರಾಗವನ್ನು ಆನಂದಿಸಿದ ಪರಿ ಸೊಗಸಾಗಿ ವ್ಯಕ್ತವಾಗಿದೆ.

    ReplyDelete