Wednesday, April 20, 2011

ಕರ್ನಲ್ ಸ್ವಾಮಿ

ಅಳುಕಿನಿಂದಲೇ ಪ್ರಾಂಶುಪಾಲರ ಕೊಠಡಿಯೊಳಗೆ ಹೋದೆ. ಏನೋ ವಿಷಯ ಇದೆ ಬನ್ನಿ ಎಂದು ಹೇಳಿಕಳಿಸಿದ್ದರು - ಇನ್ನೂ ಶಾಲೆಯ ಜೀವನ ಹೊಸತು, ಪಾಠ ಮಾಡಲು ಏನಾದರೂ ತರಬೇತಿಯನ್ನು ಕೊಡುತ್ತಾರೋ ಏನೋ ಎಂದು ಯೋಚಿಸುತ್ತಿದ್ದೆ. ಜೊತೆಗೆ, ನನಗೇ ಗೊತ್ತಿಲ್ಲದ ಹಾಗೆ ಯಾವುದೋ ವಿದ್ಯಾರ್ಥಿಗೆ ಶಿಕ್ಷೆ ಗಿಕ್ಷೆ ಕೊಟ್ಟುಬಿಟ್ಟೆನೋ, ಅದು ಪ್ರಾಂಶುಪಾಲರವರೆಗೂ ದೂರು ಹೋಯಿತೋ? ಅಥವಾ ಲೆಸನ್ ಪ್ಲ್ಯಾನ್ ಸರಿಯಾಗಿ ಬರೆದಿಲ್ಲವೋ? ಏನೇನೋ ಯೋಚಿಸಿಕೊಂಡೇ ಕೊಠಡಿಯೊಳಗೆ ಹೋದೆ. ಪ್ರಾಂಶುಪಾಲರು ನನಗೆ ಕುಳಿತುಕೊಳ್ಳಲು ಹೇಳಿದ ಕುರ್ಚಿಯ ಪಕ್ಕದಲ್ಲಿ ಒಬ್ಬ ಹಸನ್ಮುಖಿ, ಬಹಳ ಬಹಳ ವರ್ಷಗಳಿಂದ ಆಪ್ತರಾಗಿ ಇರುವರೋ ಎಂಬ ವ್ಯಕ್ತಿಯೊಬ್ಬರು ನನ್ನ ಕಡೆ ನೋಡಿ "ಹೆಲೋ, ಕಮ್.." ಎಂದು ಕುರ್ಚಿಯನ್ನು ಕೈಯಿಂದ ತಟ್ಟಿದರು.

ಹತ್ತನೆಯ ತರಗತಿಯವರಿಗೆ ಪ್ರಾಜೆಕ್ಟುಗಳನ್ನು ಹೇಗೆ ಮಾಡಿಸಬೇಕು ಎಂಬುದಾಗಿ ನನಗೆ ಸಲಹೆ ಕೊಡಲು ಅವರು ಬಂದಿದ್ದರು. ನಾನು ಹೊಸಬನಾದ್ದರಿಂದ, ಜೊತೆಗೆ ಬೇರಾವ ತರಬೇತಿಯೂ ಇಲ್ಲದ್ದರಿಂದ ಒಂದಷ್ಟು ಮಾರ್ಗದರ್ಶನ ನನಗೆ ಅತ್ಯಗತ್ಯವಾಗಿತ್ತು. ಅವರೋ ಅನುಭವಿಗಳು. ಹಿರಿಯರು. ಎಷ್ಟು ಹಿರಿಯರು, ಎಷ್ಟು ಅನುಭವಿಗಳು ಎಂದು ಯೋಚಿಸುತ್ತಿರುವಾಗಲೇ ನನ್ನ ಮನಸ್ಸನ್ನು ಓದಿದವರಂತೆ - "ನೀವು ಹುಟ್ಟುವ ಮುಂಚೆಯೇ ನಾನು ಕಂಪ್ಯೂಟರ್ ಅಲ್ಲಿ ಕೆಲಸ ಮಾಡಿದೀನಿ. ಬಹುಶಃ ಈ ದೇಶದಲ್ಲಿ ಮೊಟ್ಟ ಮೊದಲು ಕಂಪ್ಯೂಟರ್ ಬಳಸಿದ ಗುಂಪಿನಲ್ಲಿ ನಾನೂ ಇದ್ದೆ. ಆಗಿನ್ನೂ ಸಾರ್ವಜನಿಕರ ಕೈಗಾಗಲೀ, ಕಂಪೆನಿಗಳಿಗಾಗಲೀ ಕಂಪ್ಯೂಟರು ಬಂದಿರಲಿಲ್ಲ. ಬರೀ ಮಿಲಿಟರಿಯವರಿಗೆ ಮಾತ್ರ ದೊರಕುತ್ತಿತ್ತು. I am Col. Swamy" ಎಂದು ಹೆಗಲ ಮೇಲೆ ಕೈ ಹಾಕಿದರು. ನಾನು ಹುಬ್ಬೇರಿಸಲು "ಅವೆಲ್ಲಾ ಹಳೇ ಕಥೆ. ನೀವು ಈಚಿನವರು, ನಿಮಗೆ ನಮ್ಮ ಹತ್ತರಷ್ಟು ಗೊತ್ತಿರುತ್ತೆ, ಆದ್ರೂ ಏನೋ ಬೇಕು ಅಂದ್ರಂತೆ, ಏನು ಬೇಕು ಹೇಳಿ?" ಎಂದರು.

ನಕ್ಕಾಗ ಮುಖದಲ್ಲಿ ಬೀಳುತ್ತಿದ್ದ ಗುಳಿಗಳು ಅವರ ವಿದ್ಯೆಯ ಮತ್ತು ವಿನಯದ ಪ್ರತೀಕವೋ ಎಂಬಂತಿದ್ದವು. ಪಠ್ಯಪುಸ್ತಕ ಮತ್ತು ಸಿಲಬಸ್ ಕಾಪಿ ಎರಡನ್ನೂ ತೆರೆದೆ. ಅವರು ತಕ್ಷಣವೇ "ಅಯ್ಯೋ ಇದನ್ನೆಲ್ಲಾ ನಂಬಿಕೊಂಡರೆ ಪಾಠ ಮಾಡೋಕೆ, ಪ್ರಾಜೆಕ್ಟ್ ಮಾಡಿಸೋಕೆ ಆಗುತ್ತಾ ಮಕ್ಕಳ ಕೈಯಲ್ಲಿ? ಏನೇನೋ ಹೇಳಿರ್ತಾರೆ ಬೇಡದೇ ಇರೋದೆಲ್ಲ ಇದರಲ್ಲಿ! ವಿಷಯದ ಶೀರ್ಷಿಕೆಯನ್ನು ಮಾತ್ರ ನೋಡಿ ಅದರಲ್ಲಿ, ಮಿಕ್ಕಿದ್ದೆಲ್ಲ ನೀವೇ ಸ್ವಂತ ಯೋಚನೆ ಮಾಡಿ - ನಿಮ್ಮ ಪ್ರಾಬ್ಲಮ್ ಸಾಲ್ವ್ ಆಗುತ್ತೆ ಎಂದರು." ನಾನು ಇನ್ನೇನನ್ನೂ ಕೇಳಲು ಹೋಗಲಿಲ್ಲ. ಬದಲಿಗೆ ಯೋಚಿಸತೊಡಗಿದೆ. ಯೋಚಿಸುತ್ತಲೇ ಇದ್ದೇನೆ. ಶಿಕ್ಷಕನಾದವನು ಯಾವಾಗಲೂ ಯೋಚನೆಯನ್ನು ಮಾಡುತ್ತಿರಲೇ ಬೇಕಷ್ಟೆ? ಅದಕ್ಕೆ ಕೊನೆಯೆಲ್ಲಿ?

ಯೋಚಿಸುತ್ತಲೇ ಅವರನ್ನು ಎರಡನೆಯ ಮಹಡಿಯಲ್ಲಿರುವ ನಮ್ಮ ಕಂಪ್ಯೂಟರ್ ಲ್ಯಾಬಿಗೆ ಹೋಗೋಣವೇ ಎಂದು ಕೇಳುವ ಮುನ್ನವೇ ನನಗಿಂತ ವೇಗವಾಗಿ ಮೆಟ್ಟಿಲನ್ನು ಹತ್ತುತ್ತ ಹತ್ತುತ್ತ, "ಈಗ ವಯಸ್ಸಾಗಿದೆ, ಜಾಸ್ತಿ ನಡೆಯೋಕೆ ಆಗಲ್ಲ" ಎಂದು ತಮಾಷೆ ಮಾಡಿದರು. ವಯಸ್ಸಾಗಿರುವುದು ನನಗೋ ಅವರಿಗೋ ಎಂದು ಅವರನ್ನು ಒಂದು ಸಲ ನೋಡಿ, ನನ್ನನ್ನೂ ನೋಡಿಕೊಂಡೆ. ಅವರಿಗೆ ಏನಲ್ಲ ಅಂದರೂ ಅರವತ್ತೈದರಿಂದ ಎಪ್ಪತ್ತು ವಯಸ್ಸಾಗಿರಬಹುದು ಎನ್ನಿಸಿತು. ಲ್ಯಾಬು ತಲುಪುವ ಹೊತ್ತಿಗೆ ನನಗೆ ಎಂಭತ್ತೋ ತೊಂಭತ್ತೋ ವಯಸ್ಸಾಗಿರಬಹುದೆನ್ನಿಸಿತು. ಲ್ಯಾಬನ್ನೆಲ್ಲ ನೋಡಿ "ಚೆನ್ನಾಗಿದೆ ಲ್ಯಾಬು, ಎಲ್ಲಿ ಮನೆ ನಿಮ್ಮದು?" ಎಂದರು. ನಾನು ಬಸವನಗುಡಿಯ ಹತ್ತಿರ ಎಂದ ತಕ್ಷಣ "ಓಹ್, ಹಳೇ ಬೆಂಗಳೂರಿನವರು ನೀವು.." ಎಂದು ನಕ್ಕರು. ಇಷ್ಟು ಒಳ್ಳೇ ಲ್ಯಾಬ್ ಇಟ್ಟುಕೊಂಡಿದ್ದೀರ, ಪಠ್ಯಪುಸ್ತಕದ ಬಗ್ಗೆ ತಲೆ ಯಾಕೆ ಕೆಡಿಸಿಕೊಳ್ಳುತ್ತೀರ, ನೀವೇ ವರ್ಕ್ ಮಾಡಿ, ಎಲ್ಲಾ ಆರಾಮಾಗುತ್ತೆ. ನೋಡಿ, ಸಿಲಬಸ್ ನೋಡಿ, ಅದೆಂಥದೋ ಬ್ಲೂಜೆ (Java IDE) ಉಪಯೋಗಿಸಬಹುದು ಅಂತ ಸಲಹೆ ಕೊಡ್ತಾನೆ, ಯಾರಿಗೆ ಬೇಕು ಅದೆಲ್ಲ. ನಾಳೆ ಮಕ್ಕಳು ಶಾಲೆಯಿಂದ ಹೊರಗೆ ಹೋದಾಗ ಇವೆಲ್ಲಾ ಕೆಲಸಕ್ಕೆ ಬರುತ್ವಾ?" ಎಂದು ನನ್ನ ಯೋಚನಾ ಪ್ರಣತಿಯನ್ನು ಹೊತ್ತಿಸಿದರು.

ಹೀಗೆ ಬಹಳ ಹಿರಿಯ ಕಂಪ್ಯೂಟರ್ ಮೇಷ್ಟ್ರೊಬ್ಬರ ಸ್ನೇಹ ಬೆಳೆಯಿತು. ಪಠ್ಯದ ವಿಷಯದಲ್ಲಿ ಸಹಾಯ ಬೇಕೆಂದು ಅವರನ್ನು ಮತ್ತೆಂದೂ ಕೇಳಲಿಲ್ಲ. ತಮ್ಮಲ್ಲಿ ಸಾಕಷ್ಟು ಪುಸ್ತಕಗಳಿವೆಯೆಂದೂ, ಯಾವಾಗ ಬೇಕಾದರೂ ಅವನ್ನು "ಬಾರೋ" ಮಾಡಿಕೊಳ್ಳಬಹುದೆಂದೂ ಹೇಳಿದ್ದರು. ನನಗೆ ಬೇಕಾದ ಪುಸ್ತಕಗಳನ್ನು ಶಾಲೆಯವರೇ ಒದಗಿಸಿಕೊಟ್ಟಿದ್ದಾರಾದ್ದರಿಂದ ನನಗೆ ಅದರ ಪ್ರಮೇಯ ಬರಲಿಲ್ಲ. ಆದರೆ ಅವರ ಮನೆಗೆ ಹೋಗುವ ಪ್ರಮೇಯ ಒದಗಿ ಬಂದಿತು ಹೋದವರ್ಷ ಅಕ್ಟೋಬರಿನಲ್ಲಿ. ಶಾಲೆಯಲ್ಲಿ ಆಯೋಜಿಸಿದ್ದ ವೆಬ್ ಡಿಸೈನಿಂಗ್ ಸ್ಪರ್ಧೆಗೆ ಗೆಳೆಯ ಶ್ರೀಕಾಂತನು ತೀರ್ಪುಗಾರನಾಗಲು ಸಂತೋಷದಿಂದ ಒಪ್ಪಿಕೊಂಡ. ಇನ್ನೊಬ್ಬ ತೀರ್ಪುಗಾರರು ಬೇಕಿತ್ತು. ಪ್ರಾಂಶುಪಾಲರು ನನ್ನ ಮನಸ್ಸಿನಲ್ಲಿದ್ದಿದ್ದನ್ನೇ ನುಡಿದರು. "ಕರ್ನಲ್ ಸ್ವಾಮಿಯವರನ್ನು ಕೇಳಿ." ಎಂದು ಹೇಳಿದಾಗ "ನಾನೂ ಅದನ್ನೇ ಅಂದುಕೊಳ್ಳುತ್ತಿದ್ದೆ" ಎಂದು ಹೇಳಿದರೆ "ಸಾಕು ನಾಟಕ" ಎಂದಾರು ಎಂದು ಹೇಳಲಿಲ್ಲ.

ಅಪಾರ್ಟ್ಮೆಂಟಿನ ಅವರ ಮನೆಯ ಬಾಗಿಲಿನ ಕಾಲಿಂಗ್ ಬೆಲ್ಲು ಶಬ್ದವಾದೊಡನೆಯೇ ಬಾಗಿಲು ತೆರೆದು "ಓಹ್, ಬಾಪ್ಪಾ, ಏನ್ ಸಮಾಚಾರ?" ಎಂದು ನಾನು ಅವರ ಮನೆಗೆ ಬರುತ್ತಿರುವುದನ್ನು ನಿರೀಕ್ಷಿಸಿದಂತೆಯೇ ಹೇಳಿದರು. ನಾನು ಸ್ಪರ್ಧೆಯ ವಿಷಯ, ಮತ್ತು ತೀರ್ಪುಗಾರರಾಗಿ ಅವರು ಬರಬೇಕೆಂಬ ಬಿನ್ನಹವನ್ನು ಅವರ ಮುಂದಿಟ್ಟೆ. "ಬರೋಣಂತೆ, ಅದಕ್ಕೇನಂತೆ!" ಎಂದರು. ಬೆವೆತು ಹೋಗಿದ್ದ ನನ್ನನ್ನು ನೋಡಿ "ಸುಸ್ತಾಗಿದ್ದೀಯ ಅನ್ಸುತ್ತೆ, ಇರು ನೀರು ಕೊಡ್ತೀನಿ. ಜ್ಯೂಸ್ ಕುಡೀತೀಯಾ?" ಎಂದರು. ಮನೆಯಲ್ಲಿ ಅವರು ಒಬ್ಬರೇ ಇರುವುದನ್ನು ಗಮನಿಸಿದ ನಾನು "ನೀರು ಕೊಡಿ, ಸರ್, ಸಾಕು" ಎಂದೆ. "ನನ್ನ ಹೆಂಡತಿಗೆ ಹುಷಾರಿಲ್ಲ ತುಂಬ. ಆಯ್ತಲ್ಲ ವಯಸ್ಸು" ಎಂದು ಜೋರಾಗಿ ನಕ್ಕರು. ನೀರು ತರಲೆಂದು ಅವರು ಹೋದಾಗ ಗೋಡೆಯ ಮೇಲೆ ನೇತು ಹಾಕಿದ್ದ ಫೋಟೋಗಳನ್ನೆಲ್ಲಾ ನೋಡಿದೆ. ಮಿಲಿಟರಿ ಫೋಟೋಗಳು, ಪ್ರವಾಸದ ಫೋಟೋಗಳು, ಪ್ರಶಸ್ತಿಗಳು - ನೋಡುತ್ತಿರುವಾಗಲೇ ಗಾಯತ್ರಿ ಮಂತ್ರದ infinite loop ಧ್ವನಿಯು ಕೇಳಿಸತೊಡಗಿತು. "ಅವೆಲ್ಲಾ ಒಂದು ಕಾಲ, ಈಗ ಮನೆಯಲ್ಲಿ ದೇವರ ಪೂಜೆ ಮಾಡಿಕೊಂಡು ಇದ್ದೀನಿ" ಎಂದರು. "ನನ್ನ ಹತ್ರ ಕಂಪ್ಯೂಟರ್ ಪುಸ್ತಕಗಳು ಇದ್ವಲ್ಲಾ ಎಷ್ಟೊಂದು (ನಾನು ನೋಡೇ ಇರಲಿಲ್ಲ), ಅದನ್ನೆಲ್ಲಾ ಕೊಟ್ಬಿಟ್ಟೆ. ನೀನು ಹೋದವಾರ ಬಂದಿದ್ದಿದ್ರೆ ನಿಂಗೂ ಒಂದಷ್ಟು ಕೊಡ್ತಿದ್ದೆ. ಈಗ ಕಂಪ್ಲೀಟ್ಲಿ ಫ್ರೀ ನಾನು. ಏನನ್ನೂ ಹಚ್ಕೊಂಡಿಲ್ಲ." ಎಂದರು. ಅವರು ಹಿರಿಯರಾದ ಕಾರಣ ನಾನು ಸುಮ್ಮನೆ ತಲೆಯಾಡಿಸುತ್ತ "ಹ್ಮ್" ಎನ್ನುತ್ತಿದ್ದೆ.

ಸ್ಪರ್ಧೆಯ ದಿನ ಕಾರು ಕಳಿಸುತ್ತೇವೆ ಶಾಲೆಯಿಂದ ಎಂದು ಹೇಳಿದ್ದರೂ, ಆವತ್ತು ಬೆಳಿಗ್ಗೆ ಫೋನು ಮಾಡಿದರೆ ಅವರ ಹೆಂಡತಿ (ಅನ್ನಿಸುತ್ತೆ) "ಅವರು ಕಾರಲ್ಲಿ ಹೊರಟಾಯಿತು" ಎಂದರು. ಫೋನು ಇಡುವ ಹೊತ್ತಿಗೆ ಬಂದೇ ಬಿಟ್ಟಿದ್ದರು. "ನಿಮ್ಮ ಮನೆಗೇ ಫೋನು ಮಾಡಿದ್ದೆ, ಕಾರು ಕಳಿಸುತ್ತೆಂದು ಹೇಳಿತ್ತಲ್ಲ, ಸರ್" ಎಂದೆ. "ಅಯ್ಯೋ ಬಿಡಪ್ಪ, ಅದಕ್ಕೇನು, ಕಾರು ಓಡಿಸೋ ಶಕ್ತಿ ಇನ್ನೂ ಇದ್ಯಲ್ಲ, ಓಡ್ಸ್ಕೊಂಡ್ ಬಂದ್ಬಿಟ್ಟೆ" ಎಂದು ಜೋರಾಗಿ ನಕ್ಕರು. ಸ್ಪರ್ಧೆಗೆ ಕಂಪ್ಯೂಟರ್ ಲ್ಯಾಬ್ ವರೆಗೂ ಅವರ ಜೊತೆ ಹೋಗಿ, ಆಗಲೇ ಬಂದಿದ್ದ ಶ್ರೀಕಾಂತನನ್ನು ಅವರಿಗೆ ಪರಿಚಯಿಸಿ ಅವರ ಕೆಲಸ ಮುಂದುವರೆಸಲು ನಾನು ತೊಂದರೆ ಕೊಡದೆ ಜಾಗ ಖಾಲಿ ಮಾಡಿದೆ. ಈ ಬಾರಿ ಮೆಟ್ಟಿಲು ಹತ್ತಿಕೊಂಡು ಬರುವಾಗ ಸ್ವಲ್ಪ ಸುಸ್ತಾದಂತೆ ಕಂಡರು. ಕಳೆದ ಬಾರಿಯಂತೆ ಇದ್ದ ಹುಮ್ಮಸ್ಸು ಮಾತಿನಲ್ಲಿತ್ತೇ ವಿನಾ ಏದುಸಿರು ಬಿಡುತ್ತಿದ್ದರು. ಮೆಟ್ಟಿಲು ಹತ್ತಿಕೊಂಡು ಬಂದೊಡನೆ ಸುಧಾರಿಸಿಕೊಳ್ಳಲು ಐದು ನಿಮಿಷ ಕುಳಿತುಕೊಂಡರು. ಇಬ್ಬರೂ "ವೈವಾ" ಅನ್ನು ಚೆನ್ನಾಗಿಯೇ ಮಾಡಿದರು. ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದರು.


ಸ್ಪರ್ಧೆ ಮುಗಿದ ಮೇಲೆ ವೇದಿಕೆಯ ಮೇಲೆ ಬಂದು ಮಾತನಾಡಿ ಎಂದು ನಾನು ಹೇಳಿದೆ. ಶ್ರೀಕಾಂತನ ಕಡೆ ಕೈ ತೋರಿಸಿ "ಹೋಗಿ" ಎಂದರು. ನನ್ನ ಹತ್ತಿರ "ಅವರು ಮಾತನಾಡಲಿ, ನಾನು ಹೋಗೋದು ಇದ್ದೇ ಇದೆ" ಎಂದರು. ಜೋರಾಗಿ ನಕ್ಕರು - ಒಬ್ಬರೇ.

ಇಂದು ಸುದ್ದಿ ಬಂದಿತು, ಅವರು ಹೋದರು ಎಂದು.

ಸ್ಫೂರ್ತಿದಾಯಕ ವ್ಯಕ್ತಿ ಆತ. ಮುಪ್ಪಿನ "ಕೊಳೆ"ಯನ್ನು ಹೊತ್ತಿರಲಿಲ್ಲ. ಹುರುಪಿನ ಕಳೆಯು ಅವರ ಮುಖದ ಮೇಲೆ ಯಾವಾಗಲೂ ಇರುತ್ತಿತ್ತು. ಅವರಿಗೆ ನನ್ನ ನಮಸ್ಕಾರ.-ಅ
20.04.2011
9.30PM

1 comment:

  1. naanu aparoopavaagi kanDidda swaamiyaranna innaShtu hattiradinda kanDa anubhavavaayitu haage avaru hoda vichaara bahaLa besara.......

    ReplyDelete