Wednesday, July 27, 2011

ಬೆಂಗಳೂರು ಮತ್ತು ಸ್ವರ್ಗ

ಸ್ವರ್ಗವಲ್ಲಿ, ನಾನು ಇಲ್ಲಿ
ಈ ಬೆಂಗಳೂರಿನಲ್ಲಿ.

ಗುಡ್ಡದಡಿಯ ಶಾಲೆಯನ್ನು
ಶಾಲೆಯೆದುರ ತೋಟವನ್ನು
ಸುತ್ತಲೆಲ್ಲ ಮರಗಳನ್ನು
ಇಲ್ಲಿ ಹೇಗೆ ಕಾಣಲಿ?
ಬದಿಯೊಳದ್ರಿ ಮೇರುತಿಯನು
ಅದ್ರಿ ಮೈಯ್ಯ ಬಣ್ಣವನ್ನು
ಮತ್ತೆ ಮಣ್ಣ ಗಂಧವನ್ನು
ಎಲ್ಲಿ ತಾನೆ ನೋಡಲಿ?

ಚೆಲುವ ಸುಖದ ಶಿಖರವನ್ನು
ಉದ್ಧರಿಸುವ ಶಾಂತಿಯನ್ನು
ಅಲ್ಲೆ ಇರುವ ಸ್ವರ್ಗವನ್ನು
ಇಲ್ಲಿ ಹೇಗೆ ಕರೆಯಲಿ?
ಬಸರಿಕಟ್ಟೆ ಬೀದಿಯನ್ನು
ರುಚಿಸುರುಚಿಯ ಕಾಫಿಯನ್ನು
ಅವಳ ಜೊತೆಗೆ ಸವಿವುದನ್ನು
ಇಲ್ಲಿ ಹೇಗೆ ಪಡೆಯಲಿ?

ಸ್ವರ್ಗವಲ್ಲಿ, ನಾನು ಇಲ್ಲಿ
ಈ ಬೆಂಗಳೂರಿನಲ್ಲಿ.

-ಅ
24.07.2011
8.15PM

Sunday, July 24, 2011

ಕಾಗೆಯಿಂದ

ಮಿತ್ರ ಶ್ರೀ ರಾಘವನ್ ಅವರು ಮೊನ್ನೆ ತಮ್ಮ ಉಪನ್ಯಾಸದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಗುಂಡೂರಾಯರ ಜೀವನದ ಘಟನೆಯೊಂದನ್ನು ಉದಾಹರಿಸಿದರು. ಅದೇ ರೀತಿಯ ಅನುಭವವು ನನಗೆ, ನನ್ನಂತೆ ಅನೇಕರಿಗೆ ಆಗುತ್ತಲೇ ಇರುತ್ತೆ. ಕಣ್ಣುಪಟ್ಟಿ ಕಟ್ಟಿಕೊಂಡು ಆಚರಣೆ ಮಾಡುವವರಿಗೆ ಈ ಅನುಭವವಾಗುವುದಿಲ್ಲ. ಚಿಂತನೆ ಮಾಡುವವರಿಗೆ ಖಂಡಿತ ಸೊಗಸಾದ ಅನುಭವಗಳಾಗುತ್ತವೆ.

ಶ್ರೀ ಗುಂಡೂರಾಯರ ಕಥೆಗೆ ಬರೋಣ. ಅವರ ಸ್ನೇಹಿತನ ತಂದೆಯು ತೀರಿಕೊಂಡಿದ್ದರಂತೆ. ಶವಸಂಸ್ಕಾರಕ್ಕೆ ಸ್ನೇಹಿತನೊಡನೆ ಇವರು ಹೋಗಬೇಕೋ ಬೇಡವೋ ಎಂಬ ಧರ್ಮಸಂಕಟ ಇವರಿಗೆ. ಯಾಕೆಂದರೆ ತಂದೆಯು ಬದುಕಿರುವಾಗ ಸ್ಮಶಾನಕ್ಕೆ ಹೋಗಲು ಸಾಧ್ಯವೇ? ಹೋದರೆ ತಂದೆಯು ಸತ್ತು ಹೋಗುವುದಿಲ್ಲವೇ? ಈ ರೀತಿಯ ನಂಬಿಕೆಯ ಹೊಂದಿದ ಮತದವರು ಶ್ರೀ ಗುಂಡೂರಾಯರು. ಸ್ನೇಹಿತನ ಪಕ್ಷ ವಹಿಸಿದ ಗುಂಡೂರಾಯರು ಶವಸಂಸ್ಕಾರಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ದಿಗಿಲಾಗಿದ್ದರಂತೆ. ಸುತ್ತಲೂ ಜನ ನೆರೆದಿದ್ದು, ಅವರೆಲ್ಲರೂ ಶೋಕತಪ್ತರಾಗಿದ್ದೂ, ತಂದೆಯ ಶವವನ್ನು ಬಿಳಿ ಹೊದಿಕೆಯೊಂದಿಗೆ ಹೊದಿಸಿ ಮನೆಯ ಮುಂದೆ ಮಲಗಿಸಿರುವ ಕಲ್ಪನೆಯನ್ನು ಹೊತ್ತು ಮನೆಗೆ ನಿಧಾನಕ್ಕೆ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಬಂದರಂತೆ. ಯಾರೂ ಜನರಿಲ್ಲದೆ ಇದ್ದುದರಿಂದ ನಿಧಾನವಾಗಿ ಕಿಟಕಿಯಿಂದ ಮನೆಯೊಳಗೆ ನೋಡಿದರಂತೆ. ಅವರ ತಂದೆ ಈಜ಼ಿ ಛೇರಿನ ಮೇಲೆ ಕುಳಿತು ಪೇಪರ್ ಓದುತ್ತಿದ್ದರಂತೆ. "ಬದುಕೇ ಇದ್ದಾನಲ್ಲ ನಮ್ಮಪ್ಪ!" ಎಂದು ನಿರಾಶೆ ಪಟ್ಟರಂತೆ!!

ಗ್ರಹಣ ಬಂದಾಗಲೆಲ್ಲವೂ ದೇವಸ್ಥಾನಗಳ ಮುಂದೆ ಕಾಣಿಸುವ ಬ್ಯಾನರುಗಳಿಗೆ ಮೋಸ ಹೋಗುವವರು ಅದೆಷ್ಟು ಜನರಿದ್ದಾರೋ. ವಾಸ್ತವವಾಗಿ ನಾನು ಇವತ್ತು ಬದುಕುಳಿದಿರುವುದೇ ಗ್ರಹಣ ಶಾಂತಿ ಮಾಡಿಸಿರುವುದರಿಂದಲೇ ಎಂದು ಅದೆಷ್ಟು ಜನ ನಂಬಿಲ್ಲ? ಹಿಂದೆ ಶ್ರೀ ಎಚ್ ನರಸಿಂಹಯ್ಯನವರು, ಭೌತಶಾಸ್ತ್ರಜ್ಞರು, ಗ್ರಹಣದ ದಿನದಂದು ಊಟ ಹಾಕಿಸುವ ಚಳವಳಿ ಮಾಡಿ ಗ್ರಹಣಾಭಿಮಾನಿಗಳ ಕಣ್ಣುರಿಗೆ ಪಾತ್ರರಾಗಿದ್ದರು. ಆದರೆ ಅಂದು ಅಲ್ಲಿ ಊಟ ಮಾಡಿದವರೆಲ್ಲರೂ ಸಂತುಷ್ಟರಾಗಿದ್ದರು, ಯಾವ ರೀತಿಯ ಅನಾರೋಗ್ಯದಿಂದಲೂ ನರಳಲಿಲ್ಲ. ನನ್ನ ನಕ್ಷತ್ರಕ್ಕೋ, ರಾಶಿಗೋ ಗ್ರಹಣ ಹಿಡಿದಾಗಲೂ ಅಷ್ಟೆ, ಅದರ ಪಾಡಿಗೆ ಅದು ಬಿಟ್ಟು ಹೋಗಿದೆ, ಏನೂ ತೊಂದರೆ ಮಾಡದೆ.

ಕಳೆದ ವರ್ಷ ಒಂದು ಕಾಗೆ ನನ್ನ ತಲೆ ಮೇಲೆ ರೆಕ್ಕೆಗಳನ್ನು ಬಡಿದುಕೊಂಡು ಹೋಗಿಬಿಟ್ಟಿತು. ಗಾಡಿಯಲ್ಲಿ ನಾನು ಅದು ಹಾರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದರಿಂದಲೋ ಏನೋ, ಅದಕ್ಕೆ ಗೊಂದಲವಾಗಿ ನನ್ನ ಮುಖಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ, ಮೇಲೆ ಹಾರಲು ಹೋಗಿ, ಆಕಸ್ಮಿಕವಾಗಿ ತಲೆಗೆ ತನ್ನ ರೆಕ್ಕೆಗಳನ್ನು ಬಡಿಯಿತು. ಜೊತೆಗೆ ಕಾಗೆಗಳಿಗೆ ಈ ನಡುವೆ ಎತ್ತರದಲ್ಲಿ ಹಾರಲು ಬೆಂಗಳೂರಿನಲ್ಲಿ ಜಾಗವೆಲ್ಲಿದೆ? ಆದರೂ ಆ ರೆಕ್ಕೆಗಳಿಂದ ಬಿದ್ದ ಪೆಟ್ಟು ಜೋರಾಗಿಯೇ ಇತ್ತು. ನನ್ನ ಹಿತೈಷಿಗಳೊಬ್ಬರ ಮನೆಗೆ ಹೋಗಿದ್ದೆ ಅಲ್ಲಿಂದ. ಉತ್ಸಾಹದಿಂದ ಹೇಳಿಕೊಂಡೆ ಕಾಗೆಯ ವಿಷಯವನ್ನು. ಎಷ್ಟು ಸಾಧ್ಯವೋ ಅಷ್ಟು ಹೆದರಿಸಲು ಯತ್ನಿಸಿಬಿಟ್ಟರು ನನನ್ನು ಅವರು. ಯಾವಯಾವುದೋ ಹೋಮ ಮಾಡಿಸಲು, ಮತ್ತು ಹಾಗೆ ಮಾಡಿಸುವವರು ಯಾರೆನ್ನುವ ವಿವರಗಳನ್ನೂ ಕೊಟ್ಟುಬಿಟ್ಟರು. ನಾನು ಸತ್ತೇ ಹೋಗುತ್ತೇನೆ ಎಂದೂ ಹೇಳಿದರು. "ಎಲ್ಲರೂ ಸಾಯುತ್ತಾರೆ, ಆದರೆ ಇದಕ್ಕೆ ಎಷ್ಟು ದಿನ ವ್ಯಾಲಿಡಿಟಿ?" ನನ್ನ ಪ್ರಶ್ನೆ. "ತಿಂಗಳೊಳಗೆ!" ಎಂದು ಗಡುವು ಕೊಟ್ಟುಬಿಟ್ಟರು. "ಒಂದು ವೇಳೆ ಸಾಯದಿದ್ದರೆ?" ಎಂದು ಪ್ರಶ್ನಿಸಿದರೆ, "ಇಂಥಾ ವಿಷಯದಲ್ಲಿ ರಿಸ್ಕು ತೆಗೆದುಕೊಳ್ಳುವುದು ಯಾಕೆ? ಮೊದಲು ಹೋಮ ಮಾಡಿಸು, ಪೂಜೆ ಮಾಡಿಸು. ಬೇರೆ ಯಾರಾದರೂ ಸತ್ತರೆ ಮನೆಯಲ್ಲಿ?" ಎಂದರು. "ಆಚರಣೆಗಳನ್ನು ಪರೀಕ್ಷೆ ಮಾಡಬಾರದು" ಎಂದು ಬುದ್ಧಿವಾದ ಹೇಳಿದರು. ಆ ಬುದ್ಧಿವಾದದ ಮಾತನ್ನು ಕೇಳದೆ ಇದ್ದುದರಿಂದ ಇನ್ನೂ ಬದುಕಿದ್ದೇನೆ. ನಾನೇನಾದರೂ ಕೇಳಿಬಿಟ್ಟಿದ್ದರೆ, ಆ ಹೋಮಗಳ, ಪೂಜೆಗಳ ಖರ್ಚುಗಳು ನನ್ನನ್ನು ಮುಗಿಸಿಬಿಡುತ್ತಿದ್ದವು! ಮುಂದೊಂದು ದಿನ ಸತ್ತ ಮೇಲೆ, ಅದು ಕಾಗೆಯ ಕಾರಣದಿಂದಲೇ ಎಂದು ಯಾರೂ ಭಾವಿಸಬಾರದು.

ಉಪನ್ಯಾಸದ ನಂತರ ಒಂದು ವರ್ಷದ ಹಿಂದಿನ ಈ ಘಟನೆಯು ನೆನಪಾಯಿತು!

-ಅ
24.07.2011
10.40 PM

Tuesday, July 19, 2011

ಕೋಗಿಲೆಯ ಬಿನ್ನಹ

ಹಗಲಲಿ ಉರಿಯುವ ಬಿಸಿಲಿನ ಬೇಗೆಗೆ ಇರುಳಲಿ ತಂಪನ್ನೀವ ಮಳೆ
ಉರಿ-ತಂಪುಗಳಲಿ ಬೆರೆಯುವ ಪೃಥ್ವಿಯ ಒಡಲಲಿ ಬಗೆಬಗೆಯಾದ ಕಳೆ!

ರಾತ್ರಿಯೊಳಾಗಸ ಕಡುಕತ್ತಲೆಯಲಿ ಸೂರ್ಯನ ನಂಬುಗೆಯೊಳೆ ಹೊತ್ತು.
ಸೂರ್ಯನೆ ರಾರಾಜಿಸುತಿಹ ದಿನದಲಿ ಚಂದ್ರನ ವಿರಹದೊಳೇ ಮಿತ್ತು.

ಇರುಳಲಿ ಚಂದ್ರನ ಹಗಲಲಿ ಸೂರ್ಯನ ನುಂಗಲು ಮೋಡಗಳಾ ಹೊಂಚು.
ಋತು ಚಕ್ರದಿ ಪ್ರಕೃತಿ ತಾ ಮೆರೆದಿರೆ ನಡೆಯದು ಅವುಗಳ ಒಳಸಂಚು.

ಕಾಣದ ಕೋಗಿಲೆ ದನಿಯೊಳಿದೇನಿದು ಬಿನ್ನಹ ಕಾಣದ ದೇವನಲಿ?
ಮಳೆಯಿದು ನಿಲ್ಲದು, ಹಸುರನು ಕೊಲ್ಲದು - ಎಲ್ಲರ ಮೊರೆಯಿರೆ ಕಾವನಲಿ.

-ಅ
14.07.2011
5PM