Saturday, August 27, 2011

ಯೆಡಿಯೂರು ಕೆರೆ

ಸಜ್ಜಾಗುತ್ತಿದೆ ಗಣೇಶೋತ್ಸವಕ್ಕೆ.
ಎತ್ತೆತ್ತೆತ್ತರದ,
ವರ್ಣರಂಜಿತ,
ವಿವಿಧ ಭಂಗಿಯ
ಗಣಾಧಿಪನ ಸಂಚಯನಕ್ಕೆ - ಅಲ್ಲಲ್ಲ,
ವಿಸರ್ಜನೆಗೆ.

ಊರುದ್ದಕ್ಕೂ ಮೈ ಚೆಲ್ಲಿ,
ಬಿಸಿಲಲ್ಲಿ ತನ್ನ ಮೈ ಒಣಗಿಸಿಕೊಂಡಿದ್ದಾಗ
ಊರಿಗೆ ಊರೇ ತಂಪು.
ವಿಶಾಲ ಹೃದಯಿ, ತನ್ನೆದೆಯ ಮೇಲೆ ಬಂದು ನಿಂತ
ಸೌಧಗಳ ಪೊರೆಯುತ್ತಿದೆ - ದೇವರಂತೆ.

ಪೊರೆಯುವುದೇ ದೇವರ ಗುಣ.
ದೇಶದೇಶ ದಾಟಿ ಹಾರಿ ಬರುವ ಹೂಗಳೋ,
ಅಲ್ಲೆ ಭವಿಸಿ ಅದನೆ ನುಂಗುವ ಕಳೆಗಳೋ,
ಪೊರೆಯುವುದೇ ದೇವರ ಗುಣ.
ಅದಕ್ಕೇ ನಿತ್ಯ ಮುಂಜಾನೆ ಭಕ್ತಾದಿಗಳ
ಪ್ರದಕ್ಷಿಣೆ.

ಸಜ್ಜಾಗುತ್ತಿದೆ ಗಣೇಶ ವಿಷ ನೈವೇದ್ಯಕ್ಕೆ.
ಯಾವ ಅಮೃತವ ಕೊಡಲು?

-ಅ
27.08.2011
9PM

Wednesday, August 17, 2011

ಎಂದೋ ಸತ್ತ ದೇಹ

ಎಂದೊ ಸತ್ತ
ದೇಹ ಹೊತ್ತ
ನೆಲಕೆ ತೂಕ ಹೆಚ್ಚೆ
ತನ್ನ ತುತ್ತ
ವಿಷದ ಕುತ್ತ-
ನೆಂತು ತಾನೆ ಮೆಚ್ಚೆ?

ನಡೆವ ಹೆಣವೊ
ನುಡಿವ ಮೃಣವೊ
ಅಂತು ಉಳಿಯೆ ಇನ್ನು,
ಕಳೆದ ಚಣವೊ
ಮನದಿ ಭಣವೊ
ಮಣ್ಣ ಹೊಕ್ಕ ಹೊನ್ನು.

ಬರಡಿನಕ್ಷಿ
ಸ್ವಯಂಸಾಕ್ಷಿ
ದುಗುಡದನಲ ಮಳೆಗೆ;
ಧುಮುಕೆ ಪಕ್ಷಿ -
ಗಗನದಕ್ಷಿ
ರೆಕ್ಕೆ ಮುರಿಯುತಿಳೆಗೆ.

ಎಂದೊ ಸತ್ತ
ದೇಹಕೆತ್ತ
ಪಯಣವಹುದೊ ಬಿದಿಯು?
ಸತ್ತ ಚಿತ್ತ
ಬದುಕಿಸುತ್ತ
ಕಡಲಿನೆಡೆಗೆ ನದಿಯು!

- ಅ
01.04.2011
12AM

Tuesday, August 2, 2011

ಜೆನೆರಲ್ ನಾಲೆಡ್ಜ್ ತರಗತಿ ಮತ್ತು ದೂರದರ್ಶನ

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಮಾನ್ಯ ಜ್ಞಾನ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ತರಗತಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಚರ್ಚೆಯಲ್ಲಿ ಹೇಳುವ ವಿಷಯಗಳು, ಕೊಡುವ ಉತ್ತರಗಳು, ಒದಗಿಸುವ ಮಾಹಿತಿಗಳು ಹುಬ್ಬೇರಿಸುವಂತಿರುತ್ತದೆ. ಇವತ್ತು ಅಂಥದ್ದೇ ಒಂದು ಲಾಘವವನ್ನು ತರಗತಿಯಲ್ಲಿ ನಾನೂ, ನನ್ನ ಪುಟ್ಟ ಮಕ್ಕಳೂ ಅನುಭವಿಸಿದೆವು. ಇದು ನಡೆದುದು ಐದನೇ ತರಗತಿಯಲ್ಲಿ. ಹಾಗಾಗಿ ಇದು ಸಂಪೂರ್ಣ ಬಾಲಿಷವೇ! :-)

ಪಾಠವಿದ್ದುದು ಶ್ರೀ ಎನ್.ಆರ್. ನಾರಾಯಣ ಮೂರ್ತಿಗಳ ಬಗ್ಗೆ. ಮಕ್ಕಳೆಲ್ಲರೂ ತಮಗೆ ಆಗತಾನೆ ಸರಬರಾಜಾದ ’ಹಿಂದೂ’ ದಿನಪತ್ರಿಕೆಯನ್ನು ಮೇಜಿನ ಮೇಲೆಯೇ ಇಟ್ಟುಕೊಂಡಿದ್ದರಾದ್ದರಿಂದ ನಾನು ಪೀಠಿಕೆಗಾಗಿ "ಈ ಪೇಪರ್ ನೋಡಿ, ಇದರಲ್ಲಿ ಸಾಮಾನ್ಯವಾಗಿ ವಾಣಿಜ್ಯದ ಭಾಗದಲ್ಲಿ ಇವರ ಫೋಟೋ ಇದ್ದೇ ಇರುತ್ತೆ. ನ್ಯೂಸಿನಲ್ಲಿ ಇದ್ದೇ ಇರುತ್ತಾರೆ" ಎಂದು ಹೇಳಿದೆ. "ಟೀವಿಯಲ್ಲಿಯೂ ಸಹ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ, ನಿಮ್ಮ ಮನೆಯಲ್ಲಿ ಸಿ.ಎನ್.ಬಿ.ಸಿ ಛಾನೆಲ್ಲೋ, ಬಿ.ಬಿ.ಸಿ. ಛಾನೆಲ್ಲೋ ಹಾಕಿಕೊಂಡು ನೋಡಿ, ಇವರನ್ನು ನೋಡಬಹುದು" ಎಂದು ಪುಸ್ತಕದಲ್ಲಿ ಕೊಟ್ಟಿದ್ದ ಒಂದೇ ಒಂದು ಚಿತ್ರವನ್ನು ತೋರಿಸಿದೆ.

"ಸರ್, ನಮ್ಮ ಮನೇಲಿ ನೋಡಲ್ಲ ಅದೆಲ್ಲ" ಎಂದು ಒಬ್ಬ ಹುಡುಗ ಹೇಳಿದ. ಇನ್ನೊಬ್ಬ "ನಾವು ಕಾರ್ಟೂನು ಬಿಟ್ಟು ಬೇರೆ ಏನೂ ನೋಡಲ್ಲ ಸರ್" ಎಂದು ಪ್ರಾಮಾಣಿಕವಾಗಿ ಹೇಳಿದ. ತರಗತಿಯಲ್ಲಿ ಜಗಳವೇ ಶುರು ಆಗಿಹೋಯಿತು. ಶ್ರೀ ನಾರಾಯಣ ಮೂರ್ತಿಯವರ ಬಗೆಗಿನ ಪಾಠವು ಯಾವ ಛಾನೆಲ್ಲು ನೋಡುತ್ತೇವೆ ಎನ್ನುವುದರತ್ತ ತಿರುಗಿಬಿಟ್ಟಿತ್ತು! ಮೂವತ್ತೈದು ಮಕ್ಕಳನ್ನೂ ಸುಧಾರಿಸಲು ಸಾಕಾಗಿ ಹೋಯಿತು ನನಗೆ. "ನೀನೇ ಕಾರ್ಟೂನು ನೋಡೋದು, ಅದಕ್ಕೇ ಇನ್ನೂ ಚಿಕ್ಕ ಮಗು ಥರ" ಎಂದು ’ನೇರ, ದಿಟ್ಟ, ನಿರಂತರ’ ಎಂಬ ಧಾಟಿಯಲ್ಲಿ ಒಬ್ಬ ಹುಡುಗಿಯು ಅವನನ್ನುದ್ದೇಶಿಸಿ ಹೇಳಿದ್ದೇ ಈ ಗಲಾಟೆಗೆ ಕಾರಣ. ಆದರೂ, ಪರಿಸ್ಥಿತಿಯನ್ನು ಸುಧಾರಿಸಿದ್ದು ನನ್ನ ಸಾಹಸವೇ ಸರಿ.

ಸುಧಾರಿಸುತ್ತಲೇ ಹಿಂದಿನ ಬೆಂಚಿನ ಒಬ್ಬ ಹುಡುಗ ಎದ್ದು ನಿಂತು "ಸರ್, ನಮ್ಮ ಮನೆಯಲ್ಲಿ ಬರೀ ಕನ್ನಡ ಛಾನೆಲ್ ನೋಡುತ್ತೇವೆ" ಎಂದ. ನಾನು ಹೇಗಾದರೂ ಮಾಡಿ, ಛಾನೆಲ್ಲುಗಳಿಂದ ಶ್ರೀ ನಾರಾಯಣ ಮೂರ್ತಿಯ ಪಾಠಕ್ಕೆ ಹಿಂದಿರುಗಬೇಕೆಂದು, "ಕನ್ನಡ ಛಾನೆಲ್ಲುಗಳಲ್ಲಿ ಮುರ್ತಿಯವರು ಕಾಣುವುದಿಲ್ಲ, ಯೆಡಿಯೂರಪ್ಪ ಮಾತ್ರ ಕಾಣಿಸುತ್ತಾರೆ" ಎಂದು ಹೇಳಿದ್ದಕ್ಕೆ ತರಗತಿಯಲ್ಲಿದ್ದ ಗಲಾಟೆಯು ನಗುವಿಗೆ ಬದಲಾಯಿತು. ಆ ಹಿಂದಿನ ಬೆಂಚಿನ ಹುಡುಗ ಹೇಳಿದ ಇನ್ನೊಂದು ಮಾತಿಗೆ ನನಗೇ ನಗು ತಡೆಯಲು ಸಾಧ್ಯವಾಗಲಿಲ್ಲ. "ಸರ್, ದೂರದರ್ಶನ ಹಾಕಿಕೊಳ್ಳುತ್ತಾರೆ ನಮ್ಮ ಮನೆಯಲ್ಲಿ, ಬರೀ ಕೋಟೆ ಬರುತ್ತೆ ಅದರಲ್ಲಿ."

ಅಲ್ಲಿಗೆ ಇಂದಿನ ಜೆನೆರಲ್ ನಾಲೆಡ್ಜ್ ತರಗತಿ ನಗುವಿನೊಂದಿಗೆ ಮುಗಿಯಿತು.

-ಅ
02.08.2011
10.40PM