Monday, April 23, 2012

ಗಾಳಿಪಟದ ಸುಖಿ

ಶಾಶ್ವತದೇರಿಳಿತಗಳನು ಒಂದೇ 
ತಾನದಿ ಹೊಮ್ಮಿಸುತಿಹ ಕಡಲಿನ ದಡ - 
ದಲ್ಲೇನೇನಿದು ಜನಸಾಗರವು! 
ಯಾವುದೊ ಜಗದಿಂದೀ ಜನಹೃದಯವ 
ತಣಿಸುತಲಿದೆ ಅಲೆಚಾಮರವು. 

ಗಾಳಿಯ ಸವಿಯುವ ಗುಂಪಿನ ಮಧ್ಯದಿ 
ಅಲೆಗಳ ನಡುವೆಯೆ ಮೈಮರೆವಂದದಿ 
ಮುದ್ದಿನ ಹುಡುಗನು ನಲಿದಿಹನು. 
ಸಂತಸವೆಂದರೆ ಏನೆಂಬುದ ನಾ 
ಹುಡುಗನ ಕಣ್ಣಲಿ ಕಂಡಿಹೆನು. 

ಹುಡುಗನು ಹಿಡಿದಿಹ ದಾರದ ಎಳೆಯಲಿ 
ಹಾರಲು ರೆಕ್ಕೆಯ ಜತೆಯನು ಕೂಡಿಸಿ 
ಗಾಳಿಯ ಪಟದಲಿ ಬೆರೆತಿಹನು. 
ಮೇಲಿನ, ಮೇಲಿನ ಆಗಸವನ್ನೇ 
ಮುಟ್ಟುತ ಭೂಮಿಯನಿಣುಕಲು ಸೊನ್ನೆ;
ಪಟವಾಗುತ ತಾ ಹಾರಿಹನು. 
ಈತನಿಗಿಂತಲು ಈ ಜಗದೊಳಗಡೆ 
ಶಾಶ್ವತ ಸುಖಿ ಇನ್ನಾರಿಹನು? 

-ಅ
09.04.2012
2.30AM 

Wednesday, April 18, 2012

ಕಿರಿಕಿರಿ ಟಾಪ್ ೧೦

ನಾನು ಅಷ್ಟು ಸುಲಭವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕಿರಿಗೊಳ್ಳುವುದಿಲ್ಲ ಎಂಬ ಹೆಮ್ಮೆಯಲ್ಲೇನೋ ಇದ್ದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸಿಕೊಂಡು ಹೋಗುವಾಗ, ಹಿಂದೆ ಚಲಿಸುವ ವಾಹನದವರು ಬಿಡದೆ ಮಾಡುವ ಹಾರನ್ ಸದ್ದನ್ನು ಕೇಳುವಾಗ, ಟ್ರಾಫಿಕ್ ಜ್ಯಾಮಿನಲ್ಲಿ ಗಂಟೆ ಗಟ್ಟಲೆ ನಿಂತಾಗ, ಹಾಗೆ ನಿಂತಿರುವಾಗ ಅದಕ್ಕೆ ಕಾರಣವು ಯಾವುದೋ ಸಂಘಟನೆಯ ಮುಷ್ಕರವೋ, ಅಥವಾ ಯಾವುದೋ ವಿ.ಐ.ಪಿ.ಯ ಆಗಮನವೋ ಎಂದು ತಿಳಿದಾಗ– ಇಲ್ಲ, ಇವು ಯಾವುವೂ ನನ್ನನ್ನು ಕಿರಿಕಿರಿಗೊಳಿಸಿರಲಿಲ್ಲ.  ಮೊನ್ನೆ ನನ್ನ ಬಸ್ಸಿನ ಪ್ರಯಾಣವು ನನ್ನನ್ನು ಅಂತರೀಕ್ಷಣೆಗೆ ಒಳಪಡಿಸಿಬಿಟ್ಟಿತು!

ಪಬ್ಲಿಕ್ಕಿನಲ್ಲಿ ನನಗೆ ಕಿರಿಕಿರಿಯಾಗುವ ಟಾಪ್ – ಹತ್ತು ವಿಷಯಗಳನ್ನು ಬರೆದಿಡುತ್ತಿದ್ದೇನೆ, ಇವುಗಳಿಗೆ ವಾಚಕರ ಸಮ್ಮತವೂ ಇರಬಹುದು, ವಿಷಯಗಳ ಕ್ರಮವೂ ಬೇರೆಯಾಗಿರಬಹುದು. ಈ ಸಮಸ್ಯೆಗಳಿಗೆ ನನಗೆ ತೋಚಿದ ಪರಿಹಾರವನ್ನೂ ಸೂಚಿಸಿದ್ದೇನೆ, ಬೇಕಿದ್ದಲ್ಲಿ ಅನುಸರಿಸಬಹುದು. ಯಾರ ಯಾರ ಕರ್ಮ ಹೇಗೆ ಹೇಗೆ ಇರುತ್ತೋ!

ರಾತ್ರಿಯ ಸದ್ದು - ೧೦
ಹನ್ನೊಂದುವರೆ-ಹನ್ನೆರಡು ಗಂಟೆ ಸರಿ ರಾತ್ರಿಯಲ್ಲಿ ತಮ್ಮ ಮನೆಯೊಳಗೆ ಕಾರು ನಿಲ್ಲಿಸಿಕೊಳ್ಳುವ ಎದುರು ಮನೆಯವರು ಇಡೀ ರಸ್ತೆಯಲ್ಲಿರುವವರನ್ನೇ ಎಬ್ಬಿಸುವುದು ಅದ್ಯಾವ ನ್ಯಾಯವೋ ನನಗಂತೂ ಗೊತ್ತಿಲ್ಲ. ಕಿಕ್.ಕಿಕ್.ಕಿಕ್.. ಎಂದು ಬರುವ ಸದ್ದಿಗೆ ಪ್ರತಿದಿನವೂ ನಾವು ಬೆಚ್ಚಿ ಬೀಳುವುದನ್ನು ರೂಢಿಸಿಕೊಳ್ಳಬೇಕಾಗುತ್ತೆ. ಒಂದು ವೇಳೆ ಆ ಮನೆಯವರು ಊರಲ್ಲಿಲ್ಲದೇ ಹೋದರೂ, ಸರಿಯಾಗಿ ಹನ್ನೆರಡಕ್ಕೆ ಎದ್ದು ನಾವೇ ಕಿಕ್. ಕಿಕ್.ಕಿಕ್.. ಸದ್ದು ಮಾಡಬೇಕಾದೀತು. ಅಥವಾ ಧೂಮ್ ಮಚಾಲೇನೋ, ಅನಿಸುತಿದೆ ಯಾಕೋ ಇಂದುನೋ, ಹಾಡನ್ನು ಗುನುಗುತ್ತಿರಬೇಕಾದೀತು.


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ಬೆಳಿಗ್ಗೆ ಆ ಮನುಷ್ಯ ಎದ್ದೇಳುವ ಮುಂಚೆಯೇ ಅವನ ಕಾರಿನ ಮೇಲೆ ಚಪ್ಪಡಿ ಕಲ್ಲನ್ನು ಎತ್ತಿ ಹಾಕಬೇಕು,
ಆ ಮನುಷ್ಯನಿಗೆ ಪ್ರತಿ ದಿನವೂ “ನಿಮ್ಮ ಕಾರಿನ ರಿವರ್ಸ್ ಹಾರನ್ನಿನ ಸದ್ದು ರಾಜ್ ಕುಮಾರ್ ಹಾಡಿಗಿಂತ ಇಂಪಾಗಿರುತ್ತೆ ಎಂದು ನೆನಪಿಸಿಕೊಡುತ್ತಿರಬೇಕು, ಒಂದು ದಿನ ಸರಿ ಹೋದೀತು.

ಮೇಲೆ ಹೇಳಿದ ಪರಿಹಾರವು ಪಥ್ಯವಾಗದಿದ್ದಲ್ಲಿ ನಮ್ಮ ಮನೆಯಲ್ಲೇ ಹಿತವಾದ ಸಂಗೀತವನ್ನು ಕಾರಿನ ರಿವರ್ಸ್ ಹಾರನ್ನಿನ ಸದ್ದನ್ನು ಮೀರುವಂತೆ ಹಾಕಿಕೊಳ್ಳಬೇಕು. ಹೆಡ್ ಫೋನುಗಳಿದ್ದರೆ ಇನ್ನೂ ಉತ್ತಮ.

ಸಿಂಚನವೂ.. - ೯
ರಸ್ತೆಗೂ ತಮ್ಮ ಮನೆಯ ಬಚ್ಚಲು ಮನೆಗೂ ವ್ಯತ್ಯಾಸವೇ ಗೊತ್ತಿಲ್ಲದೇ ಇರುವವರು ನಮ್ಮ ದೇಶದಲ್ಲಿ ಅದೆಷ್ಟು ಮಂದಿಯಿರುವರೋ ಏನೋ. 80kmph ವೇಗದಲ್ಲಿ ಚಲಿಸುತ್ತಿರುವ ಬೈಕಿನ ಮೇಲೆ ಕೂತು ಹೆಲ್ಮೆಟ್ಟಿನ ಸಂದಿಯಿಂದ ಬೈಕಿನ ವೇಗವನ್ನೂ ಮೀರಿ ಉಗಿಯಬಲ್ಲ ಸವಾರ; ಹತ್ತಾರು ಕಿಟಕಿಗಳುಳ್ಳ ಬಸ್ಸಿನ ಹೊರಗೆ ತಲೆ ಹಾಕಿ ವಾಷ್ ಬೇಸಿನ್ ಒಳಗೇ ಉಗಿಯುವ ನಟನೆ ಮಾಡುವ ಪ್ರಯಾಣಿಕ, ಕೆಲವು ವೇಳೆ ಚಾಲಕನೂ ಕೂಡ; ಕಾರಿನ ಕಿಟಕಿಯನ್ನು ಮೌನವಾಗಿ ಇಳಿಸಿ ರಸ್ತೆಯ ಮೀಡಿಯನ್ನಿಗೆ ಗುರಿಯನ್ನಿಟ್ಟು ಕ್ಯಾಕರಿಸಿ ಉಗಿಯುವ ಕಾರ್ ಡ್ರೈವರ್ರು; ಆಸನವು ಎಲ್ಲಿದೆಯೆಂದೂ ಗುರುತಿಸಲಾಗದೇ ಇರುವುದರಿಂದ ಉಗಿದರೂ ಪತ್ತೆ ಮಾಡಲು ಸಾಧ್ಯವೂ ಆಗದ ಆಟೋ ಚಾಲಕ; ಫುಟ್ ಪಾತಿನ ಮೇಲೆ ನಡೆದುಕೊಂಡು ಹೋಗುವಾಗ ಇದು ಕಾಲುದಾರಿಯೋ ಕಫದ ದಾರಿಯೋ ಎಂದು ಸಂದೇಹವುಂಟು ಮಾಡಲು ಕಾರಣಕರ್ತರಾದ ಪಾದಚಾರಿಗಳು – ಇವರೆಲ್ಲರೂ ಈ ಸಿಂಚನಕ್ಕೆ ಕೊಡುಗೆದಾರರು.
 

ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ಕಂಡಲ್ಲಿ ಉಗಿದವರ ಮುಖಕ್ಕೆ ಕ್ಯಾಕರಿಸಿ ಉಗಿದು ಪರಾರಿಯಾಗುವುದು.
ಕಂಡಲ್ಲಿ ಉಗಿವವರನ್ನು ಮಟ್ಟ ಹಾಕಲು “ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ” ಕಾಯಿದೆಯನ್ನು ತರಿಸಲು ಉಪವಾಸ ಸತ್ಯಾಗ್ರಹ ಮಾಡುವುದು.

ನಾವು ಎರಡನ್ನೂ ಪಾಲಿಸದೇ ಇರುವವರಾದರೆ, ನಮಗೂ ಉಗುಳಿಗೂ ಸಂಬಂಧವೇ ಇಲ್ಲವೆಂದು ರಸ್ತೆಯಲ್ಲಿ “ಹರ್ಡ್ಲ್ ರೇಸ್” ಮಾಡುತ್ತಿರಬಹುದು.

ಪಾಲಿಸಿದವನ ಗತಿ! - ೮
ಸೂರ್ಯನ ಬೆಳಕಿಗಿಂತ ಪ್ರಖರವಾಗಿ ಸಿಗ್ನಲ್ಲಿನ ಕೆಂಪು ದೀಪ ಗೋಚರವಾಗುತ್ತಿರುತ್ತೆ. ಪಕ್ಕದಲ್ಲಿ ಕೌಂಟ್ ಡೌನ್ ಕೂಡ ಇನ್ನೂ ಇಪ್ಪತ್ತೈದಿರುತ್ತೆ. ಹಾರ್ನ್ ಶುರು ಹಿಂದಿನಿಂದ. ಯಾರದು ಹಾರ್ನ್ ಮಾಡುತ್ತಿರುವುದೆಂದು ನೋಡಿದರೆ, “ಹೋಗಯ್ಯಾ ಮುಂದೆ! ಇಷ್ಟ್ ಹೊತ್ನಲ್ಲಿ ಯಾವ್ ನನ್ ಮಗ ಇರ್ತಾನೆ ಸರ್ಕಲ್ಲಲ್ಲಿ?” ಎಂದು ಪೋಲೀಸರನ್ನೂ ಸೇರಿಸಿ ನಮ್ಮನ್ನೂ ಬೈಯ್ಯುತ್ತಾರೆ. ಒನ್ ವೇನಲ್ಲಿ ಬೆಳಗಿನ ಜಾವ ದೀಪ ಹಾಕಿಕೊಂಡು ಬರುತ್ತಿರುವ ಲಾರಿಯವನು “ಕಣ್ಣು ಕಾಣಲ್ವಾ ಲೈಟ್ ಹಾಕ್ಕೊಂಡ್ ಬರ್ತಿರೋದು, ಸೈಡಿಗೆ ಹೋಗೋಲೇ!” ಎಂದು ಬೈಯ್ಯುವುದೂ ಉಂಟು.


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ನಮ್ಮ ವಾಹನದಿಂದ ಕೆಳಗಿಳಿದು ಹಾರ್ನ್ ಮಾಡುತ್ತಿರುವ ವಾಹನದ ಗಾಜು ರವಿಚಂದ್ರನ್ ಶೈಲಿಯಲ್ಲಿ ಪೀಸ್ ಪೀಸ್ ಮಾಡುವುದು.
“ಕೇಳಿದ್ದು ಸುಳ್ಳಾಗಬಹುದು.. ನೋಡಿದ್ದು ಸುಳ್ಳಾಗಬಹುದು”.. ಹಾರ್ನ್ ಕೇಳ್ಸಿದ್ದು ಸುಳ್ಳಾಗಬಹುದು.. ಲೈಟ್ ಹಾಕ್ಕೊಂಡ್ ಬರ್ತಿರೋ ಗಾಡಿಯನ್ನು ನೋಡಿದ್ದೂ......


ಕಸವೋ ರಸವೋ? - ೭
ದೇವಸ್ಥಾನಕ್ಕೆಂದು ಹೊರನಾಡಿಗೋ ಶೃಂಗೇರಿಗೋ ಮಂತ್ರಾಲಯಕ್ಕೋ ನಮ್ಮವರ ಬಲವಂತಕ್ಕೆ ಹೋಗಿದ್ದೂ, ಅವರೇನೋ ದೇವರ ಸನ್ನಿಧಿಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುತ್ತಿರುವಾಗ ನಮ್ಮಂಥವರ ಕಣ್ಣುಗಳು ಆ ದೇವಸ್ಥಾನದ ಸುತ್ತ ಮುತ್ತ ಯಥೇಚ್ಛವಾಗಿ “ಭಕ್ತರು” ಬಿಸಾಡಿರುವ ಪ್ಲಾಸ್ಟಿಕ್ ಕಸದ ಕಡೆ ಹೋಗುವುದಾದರೂ ಏಕೆ? ನಮ್ಮ ಜನ್ಮವೇ ಸಾಕೆನ್ನಿಸುವುದು ದೇವರ ದರ್ಶನ ಮುಗಿಸಿಕೊಂಡು ಬಂದ ನಮ್ಮವರೂ ಸಹ ಪ್ರಸಾದ ತಿಂದು ಕಸವನ್ನು ಅಲ್ಲಿಯೇ ಬಿಸಾಡಿದಾಗ! “ನೀನೊಬ್ಬ ಕಸ ಬಿಸಾಡದಿದ್ದರೆ ಈ ಜಾಗ ಶುಚಿಯಾಗುತ್ತೆ ಅಂತ ತಿಳ್ಕೊಂಡಿದ್ದೀಯಾ?” ಎಂದು ಪ್ರಶ್ನೆ ಕೇಳಿದಾಗ ದೇವರನ್ನೇ ಶಪಿಸುವಷ್ಟು ಕಿರಿಕಿರಿಯಾಗುತ್ತೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಆತ್ಮಹತ್ಯೆ
ನಾಸ್ತಿಕತೆ

ಕಸದಿಂದಾಗುವ ಹಾನಿಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಬೇಕಾದಷ್ಟು ನಡೆಯುತ್ತಲೇ ಇರುತ್ತೆ. ಕೊನೇ ಪಕ್ಷ “ನಾನೊಬ್ಬನಾದರೂ” ಅದರ ಅರಿವನ್ನು ಮೂಡಿಸಿಕೊಂಡಿದ್ದೇನೆ ಎಂದು ಅರಿವು ಮೂಡಿಸಿಕೊಳ್ಳಲು ಸಿದ್ಧವಿಲ್ಲದವರನ್ನು ನೋಡಿ ಮರುಕ ಪಡುವುದು ಸದ್ಯದ ದುರ್ದೈವ.

ಜನ್ಮಬಂಧುಗಳು - ೬
ನಮ್ಮ ಮನೆಗೆ ಇವರು ಬಂದಿರುತ್ತಾರೆ. “ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡ” ಎಂದು ಅಪ್ಪಣೆ ಮಾಡುತ್ತಾರೆ. “ಒಂದು ಚಾನೆಲ್‍ನ ನೆಟ್ಟಗೆ ನೋಡೋದನ್ನ ಕಲಿತುಕೊ, ಪದೇ ಪದೆ ಯಾಕೆ ಬದಲಾಯಿಸೋದು?” ಎಂದು ಟಿವಿ ಸುದ್ದಿಗೆ ಬರುತ್ತಾರೆ. “ಇದೇನು ಮನೆಯಲ್ಲೆಲ್ಲಾ ಇಷ್ಟೊಂದು ಕಸ” ಎಂದು ಆಸ್ತಿಯ ಪಾಲುದಾರರಂತೆ ಮೂಗು ತೂರಿಸುತ್ತಾರೆ. ಮನೆಯಲ್ಲಿ  ಎಸ್ಸೆಸ್ಸೆಲ್ಸಿಯೋ ಪಿಯುಸಿಯೋ ಓದುವ ಮಕ್ಕಳಿದ್ದರೆ ಮುಗಿಯಿತು ಅವರ ಕಥೆ – ಬಂಧುಗಳಿಗಿಂತ ದೊಡ್ಡ ಶತ್ರು ಬೇರೆ ಇನ್ಯಾರೂ ಇರಲು ಸಾಧ್ಯವೇ ಇಲ್ಲ. ಇನ್ನು ಓದೆಲ್ಲ ಮುಗಿಸಿದರೆ ನಮಗೇ ಇಲ್ಲದ, ನಮ್ಮ ಹೆತ್ತವರಿಗೂ ಇಲ್ಲದ ಮದುವೆಯ ಆಸಕ್ತಿ, ಇವರಿಗೆ ಎಲ್ಲೆಲ್ಲಿಂದಲೋ ಬಂದುಬಿಡುತ್ತೆ. ವಿಶ್ವದ ಮೂಲೆ ಮೂಲೆಯಿಂದೆಲ್ಲಾ ಸಂಬಂಧಗಳನ್ನು ಹುಡುಕಿಕೊಂಡು ಬರುತ್ತಾರೆ. ಮನೆಯ ಕಾಲಿಂಗ್ ಬೆಲ್ಲು ಯಾಕಾದರೂ ರಿಂಗ್ ಆಗುತ್ತೋ ಎನ್ನುವಂತೆ ಮಾಡಿಬಿಡುತ್ತಾರೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಬಾಗಿಲು ತೆಗೆದಾಗ ಕಿರಿಕಿರಿಯ ಬಂಧುಗಳಾದರೆ ಅವರ ತಲೆಗೆ ತಾಕುವಂತೆ ಜೋರಾಗಿ ಬಾಗಿಲನ್ನು ರಾಚಬೇಕು.
ಬಾಗಿಲ ಮುಂದೆ “ಬಂಧುಗಳಿಗೆ ಪ್ರವೇಶವಿಲ್ಲ” ಎಂಬ ಫಲಕವನ್ನು ನೇತು ಹಾಕಿಕೊಳ್ಳಬೇಕು.

ಬಂಧುಗಳ ಮಾತುಗಳಿಗೆ ಕಿವುಡಾಗಿ, ಅವರ ನೋಟಗಳಿಗೆ ಕುರುಡರಾಗಿ, ಪ್ರಶ್ನೆಗಳಿಗೆ ಮೂಗರಾಗಿರುವುದನ್ನು ಅಭ್ಯಾಸ ಮಾಡುವುದು ಮೇಲಿನ ಮಾರ್ಗಗಳಿಗಿಂತ ಸುಲಭವೆಂದೆನಿಸುತ್ತೆ.

ಚಾರಣದಲ್ಲಿ - ೫
ಚಾರಣದಲ್ಲಿ ಅತ್ಯಗತ್ಯ ಅಂಶವೆಂದರೆ ನಿಶಬ್ದವನ್ನು ಕಾಪಾಡಿಕೊಳ್ಳುವುದು. ಕೆಲವರಿಗೆ ಬೆಟ್ಟವನ್ನು ನೋಡಿದರೆ ಅದೇನು ತೊಣಚಿ ಹೊಕ್ಕುತ್ತೋ ಒಳಗೆ ಗೊತ್ತಿಲ್ಲ, ಯೋಡೆಲ್ ಮಾಡಲು ಶುರು ಮಾಡಿಬಿಡುತ್ತಾರೆ. ಇನ್ನು ಕೆಲವರು “ಹೇಯ್ ಅಲ್ಲಿ ನೋಡಿ ಕರಡಿ...” ಎಂದು ಇಡೀ ಕಾಡಿಗೇ ಕೇಳಿಸುವ ಹಾಗೆ, ಕಂಡ ಪ್ರಾಣಿಯತ್ತ ಕೈ ಮಾಡಿ ಕಿರುಚುತ್ತಾರೆ. ಕಳೆದ ವರ್ಷ ಹಿಮಾಲಯದ ಒಂದು ಚಾರಣದಲ್ಲಿ ಕರ್ನಾಟಕದಿಂದ ಬಂದ ಒಂದು ದೊಡ್ಡ ಗುಂಪು ಇಡೀ ಚಾರಣವನ್ನು ತಮ್ಮ ಘೋಷಣೆಗಳಿಂದ, ಅರಚುವಿಕೆಯಿಂದ ನಾಶ ಮಾಡಿದ್ದರು. ಕರ್ನಾಟಕದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಕಳೆದಿದ್ದರು. ನಾವು ಕೆಲವರು ತಲೆತಗ್ಗಿಸುವಂತಾಗಿತ್ತು. ಮತ್ತೆ ಕೆಲವರು ಇನ್ನೂ ಅಸಹ್ಯ – ಚಾರಣದಲ್ಲಿ ಸಂಗೀತ ವಾದ್ಯಗಳೊಂದಿಗೆ ಆರ್ಕೇಸ್ಟ್ರಾ ಮಾಡುವುದು, ಪಟಾಕಿ ಸಿಡಿಸುವುದು, ತಮಟೆ ಬಾರಿಸುವುದು, ಮೊಬೈಲ್ ಫೋನ್‍ನಲ್ಲಿ ಹಾಡು ಹಾಕುವುದು, ಜೋರು ಜೋರಾಗಿ ಫೋನಿನಲ್ಲಿ ಮಾತನಾಡುವುದು – ಇಂಥವರೆಲ್ಲರೂ ಟ್ರೆಕ್ಕಿಂಗ್ ಮಾಡುತ್ತಾರೆ!  ಅರಣ್ಯನಾಶಕ್ಕೆ ಇಂಥವರಿಂದ ಅರ್ಧ ಕಾಂಟ್ರಿಬ್ಯೂಷನ್..


ಹಿಂಸಾಮಾರ್ಗ
ಅಹಿಂಸಾಮಾರ್ಗ


ಪರಿಹಾರ

ಬೆಟ್ಟದ ಮೇಲಿಂದ ತಳ್ಳಿಬಿಡಬಹುದು, ರಾಕ್ ಕ್ಲೈಂಬ್ ಮಾಡುವಾಗ ಹಾರ್ನೆಸ್ ಅನ್ನು ಬಿಚ್ಚಿ ಬಿಡಬಹುದು, ಟೆಂಟಿನಲ್ಲಿ ಮಲಗಿದ್ದಾಗ ಪೆಗ್ಗುಗಳನ್ನು ಹಾರಿಸಿಬಿಡಬಹುದು..
ಚಾರಣವನ್ನು ಲೀಡ್ ಮಾಡುವವರು ದಾರಿ ತಪ್ಪಿಸಿ, ಗಲಾಟೆ ಮಾಡುವವರನ್ನು ಕಾಡಿನ ಮಧ್ಯದಲ್ಲೆಲ್ಲೋ ಬಿಟ್ಟು, ತಾವುಗಳು ವೇಗವಾಗಿ ಚಲಿಸಿ ಸರಿಯಾದ ದಾರಿಯನ್ನು ಹಿಡಿದು ಕಾಡಿನಿಂದ ಹೊರಬರುವುದು.

ಅರಣ್ಯ ಇಲಾಖೆಯವರು ಚಾರಣಿಗರನ್ನು ಸರಿಯಾಗಿ ಪರಿಶೀಲಿಸಿ ಒಳಗೆ ಬಿಟ್ಟರೆ ಇಂತಹ ಆಭಾಸಗಳಾಗದೇ ಇದ್ದೀತು.

ಕಾಫಿಗೆ ಕಾಸು - ೪
ನಮ್ಮ ಪತ್ರವು ನಮ್ಮ ಕೈ ಸೇರಬೇಕಾಗಿರುತ್ತೆ, ನಮ್ಮ ಹಣವು ನಮಗೆ ಬರಬೇಕಾಗಿರುತ್ತೆ, ನಮ್ಮ ಡ್ರೈವಿಂಗ್ ಲೈಸೆನ್ಸು ನಮಗೆ ತಲುಪಬೇಕಾಗಿರುತ್ತೆ – ಇದಕ್ಕೆ ನಾವು ಯಾರು ಯಾರಿಗೋ ಕಾಫಿಗೆ ಕಾಸು ಕೊಡುವ ಪ್ರಮೇಯ ಒದಗಿ ಬರುತ್ತೆ. ಹೋಕೊಳ್ಳಿ, ಬನ್ರೀ ಕಾಫಿ ಕೊಡಿಸುತ್ತೇನೆ ಎಂದರೂ ಕೇಳರು. ಐನೂರು ರೂಪಾಯಿ ಬೇಕೆಂದು ಬಾಯಿಬಿಟ್ಟಾದರೂ ಕೇಳುತ್ತಾರೆ. ಕಾಫಿಗೆ ಐನೂರು ರೂಪಾಯಿಯನ್ನು ಕಾಫಿ ಡೇನಲ್ಲೂ ತೆಗೆದುಕೊಳ್ಳುವುದಿಲ್ಲ! ಥ್ಯಾಂಕ್ಸ್ ಟು, ಇತ್ತೀಚಿನ ಹೋರಾಟಗಳು, ಸ್ವಲ್ಪ ಹೆದರುತ್ತಾರೆ ನಮ್ಮ ದುಡ್ಡಲ್ಲಿ ಕಾಫಿ ಕುಡಿಯುವುದಕ್ಕೆ – ಆದರೂ ಇನ್ನೂ ಹೆಚ್ಚು ಭಯ ಹುಟ್ಟಬೇಕು. ಕೆಲವು ಕಡೆ ಫೀಸ್, ಇನ್ನು ಕೆಲವು ಕಡೆ ಛಾರ್ಜ್, ಮತ್ತೆ ಹಲವು ಕಡೆ “ವಿಚಾರಿಸಿಕೊಳ್ಳುವುದು”, ಇನ್ನೊಂದಿಷ್ಟು ಕಡೆ ಕಮಿಷನ್ – ಹೀಗೆ ಹತ್ತು ಹಲವು ಹೆಸರುಗಳಿಂದ ಲಂಚವೆಂಬ ಮಾರಿಯು ಕುಖ್ಯಾತಿಗೊಂಡಿದೆ – ಅಸಹಾಯಕರ ಮನದಲ್ಲಿ ಕಿರಿಕಿರಿಯನ್ನುಂಟು ಮಾಡಲು ದುರದೃಷ್ಟವಶಾತ್ ಶಕ್ತವಾಗಿದೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಕಮಲ್ ಹಾಸನ್ ಅವರ “ಇಂಡಿಯನ್” ಚಿತ್ರದ ಸ್ಟಂಟನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳುವುದು.
ಕಮಲ್ ಹಾಸನ್ ಅವರ “ಇಂಡಿಯನ್” ಚಿತ್ರವನ್ನು ನೋಡುವವರೆಗೂ ತಾಳ್ಮೆಯಿಂದಿದ್ದೂ ನಂತರ ಹಿಂಸಾಮಾರ್ಗಕ್ಕೆ ಹಿಂದಿರುಗುವುದು.

ಈ ಲಂಚದ ವಿರುದ್ಧ ಹೇಗೆ ಹೋರಾಡಬೇಕೆಂಬುದಕ್ಕೆ ನಾನಾ ನಾಯಕರು ನಾನಾ ದಾರಿಗಳನ್ನು ತೋರಿಸಿಕೊಟ್ಟಿದ್ದಾರೆ, ಯಶಸ್ಸಿನ ಹಾದಿಯನ್ನೂ ಹಿಡಿದಿದ್ದಾರೆ. ನಾನು ಮೇಲೆ ಹೇಳಿರುವುದನ್ನು ವಾಚಕರು ಗಂಭೀರವಾಗಿ ಪರಿಗಣಿಸುವಷ್ಟು ದಡ್ಡರಲ್ಲ ಎಂಬ ನಂಬಿಕೆ ನನಗಿದೆ.

ಜೈ ಕನ್ನಡ - ೩
ಸಾರ್ವಜನಿಕ ಸ್ಥಳದಲ್ಲಿ ಒಬ್ಬರೇ ಕೂತು ಪತ್ರಿಕೆಯನ್ನು ಓದುವಾಗಲೋ, ಹೊಟೆಲಿನಲ್ಲಿ ಕಾಫಿ ಕುಡಿಯುವಾಗಲೋ, ಅಥವಾ ಬಸ್ಸಲ್ಲಿ ಪ್ರಯಾಣಿಸುವಾಗಲೋ – ಇನ್ಯಾವುದೋ ಗುಂಪು “this Bangalore is shit man, very irritating” ಎನ್ನುವುದನ್ನು ಕೇಳಿದಾಗ ಆಗುವಷ್ಟು irritation ಬೆಂಗಳೂರಿನಲ್ಲಿ ಕಾಣಿಸುವ shit ಅನ್ನು ನೋಡಿದಾಗಲೂ ಆಗುವುದಿಲ್ಲ. ಆ ಗುಂಪಿನಲ್ಲಿರುವವರು ಬೆಂಗಳೂರಿಗರೇ ಆಗಿದ್ದರೆ ಏನೂ ಬೇಸರವಿಲ್ಲ, ಹೊರಗಡೆಯಿಂದ ಬಂದು, ಇಲ್ಲಿ ನೆಲೆ ಕಂಡುಕೊಂಡು, ಆಸ್ತಿ ಮಾಡಿಕೊಂಡು, ಕೆಲಸ ಕಾರ್ಯ ನಿರ್ವಹಿಸುತ್ತ, ಈ ಊರನ್ನು ಬೈಯುವ ಯಾವ ಅಧಿಕಾರ ಇವರಿಗಿದೆ ಎಂಬ ಸಿಟ್ಟು ಬಂದರೂ, ಆ ಗುಂಪಿನ ಸಂಖ್ಯೆಯು ಒಂಟಿ ಮನುಷ್ಯನನ್ನು ಜಗಳವಾಡದಂತೆ ಮಾಡಿಬಿಡುತ್ತೆ. ಅದೇ ರೀತಿ ಬಸ್ಸಿನಲ್ಲಿ ಕನ್ನಡೇತರರು “the only thing I don’t like here is they put Kannada movies” ಎಂಬಂತಹ ಮಾತುಗಳನ್ನಾಡುತ್ತಿದ್ದರೆ ಕೇಳಿಸಿಕೊಂಡು ಹಲ್ಲುಕಡಿಯುತ್ತಾ.....


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಕನ್ನಡದ “ಸಂಸ್ಕೃತ” ಪದಗಳ ಪರಿಚಯವನ್ನು ಅವರುಗಳಿಗೆ ಮಾಡಿಕೊಡುವುದು
ಹಳೆಯ ಕನ್ನಡದ ಚಿತ್ರವನ್ನೇ ಜೋರಾಗಿ ವಾಲ್ಯೂಮ್ ಕೊಟ್ಟು ಹಾಕುವಂತೆ ಚಾಲಕನನ್ನು ಪ್ರಾರ್ಥಿಸಿಕೊಳ್ಳುವುದು.

ಕನ್ನಡಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಸುಮ್ಮನೆ ಬೇಕಾದರೂ ಕುಳುತುಕೊಳ್ಳಬಹುದು. ಇದು ಸ್ವಹಿಂಸಾಮಾರ್ಗ ಎಂದರೆ ತಪ್ಪಾಗಲಾರದು.

ವರ್ತುಲ.. ವರ್ತುಲ.. - ೨
ಎಂ. ಗೋಪಾಲಕೃಷ್ಣ ಅಡಿಗರ ಒಂದು ಕವನ – ಸಿಗರೇಟಿನ ಹೊಗೆ ವರ್ತುಲ.. ವರ್ತುಲ.. – ಹೀಗೆ ಆರಂಭವಾಗುತ್ತೆ. ಇದೂ ಕೂಡ ಕವನದ ಸಬ್ಜೆಕ್ಟೇ? ಎಂದು ಆಶ್ಚರ್ಯವೂ ಆಗುತ್ತೆ. ಆದರೆ ಈ ವರ್ತುಲಗಳು ಸಾರ್ವಜನಿಕ ಪ್ರದೇಶಗಳಲ್ಲಿ ಕಂಡು ಬಂದಾಗ ಅಸಹ್ಯವಾಗುತ್ತೆ. ಬೇಸಿಗೆಯ ಮೂವತ್ತೆಂಟು ಡಿಗ್ರೀ ತಾಪಮಾನದಲ್ಲೂ ಇವರ ತುಟಿಗಳ ಮಧ್ಯೆ ಬಿಸಿ ಹೊಗೆಯನ್ನು ಉಗುಳುವಂತಹ ತುಂಡು ಸಿಕ್ಕಿಕೊಂಡಿದ್ದೆಯಲ್ಲಾ ಎಂದು ನಮ್ಮ ಶೆಖೆ ಇನ್ನೂ ಹೆಚ್ಚಾಗುತ್ತೆ. ತಮ್ಮ ತೆವಲಿನ ರೋಗವನ್ನು ಪಕ್ಕದವರಿಗೂ ಹರಡುವ ದುಷ್ಟ ಹವ್ಯಾಸದ ಬಗ್ಗೆ ಏನು ಹೇಳೋದು?


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಸಿಗರೇಟಿನ ಕೆಂಡದಲ್ಲಿ ಬರೆ ಹಾಕುವುದು.
ಧೂಮಪಾನ ಮಾಡುವವರ ಹತ್ತಿರ ಹೋಗಿ ವಾಸನೆ ಬರುವಂತೆ (ಶಬ್ದವೂ ಬಂದರೆ ಇನ್ನೂ ಉತ್ತಮ), ಅಪಾನವಾಯುವನ್ನು ಬಿಡುವುದು. (ಅಹಿಂಸಾಮಾರ್ಗವು ಯಾವಾಗಲೂ ಕಷ್ಟದ ಮಾರ್ಗ ಎಂದು ಗಾಂಧೀಜಿ ಹೇಳಿರುವುದು ಸತ್ಯ)

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಅದರ ಬಗ್ಗೆ ಪೋಲೀಸರಿಗೆ ದೂರು ಕೊಡಬಹುದು. ಪೋಲೀಸ್ ಸ್ಟೇಷನ್ನಿನಲ್ಲಿ ಇನ್ಸ್ಪೆಕ್ಟರ್ ಕೂಡ ಧೂಮಪಾನ ಮಾಡುತ್ತ ಕುಳಿತಿದ್ದರೆ ಮನೆಗೆ ವಾಪಸ್ ಬಂದು “ಕಾಲ ಕೆಟ್ಟು ಹೋಗಿದೆ” ಎನ್ನಬೇಕು.

ಹಾಡು ಹಳೆಯದಾದರೇನು.. – ೧
ಬಸ್ಸುಗಳು, ರೈಲುಗಳು – ಸಾರ್ವಜನಿಕ ಆಸ್ತಿಯಷ್ಟೆ? ತಮ್ಮ ಕಿಸೆಯಿಂದ ಮೊಬೈಲನ್ನು ತೆಗೆದು ಯಾವುದೋ ಹಾಡನ್ನು ಇಡೀ ಬಸ್ಸಿನ ಪ್ರಯಾಣಿಕರಿಗೆ ಉಪಕಾರ ಮಾಡುವವರಂತೆ ಪ್ಲೇ ಮಾಡುವ ಜನರನ್ನು ನೋಡುತ್ತಲೇ ಇರುತ್ತೇವೆ. ತಮಗೆ ಯಾವುದಾದರೂ ಹಾಡು ಇಷ್ಟವಾದರೆ ಅದು ಸಮಸ್ತಲೋಕದವರಿಗೆಲ್ಲವೂ ಇಷ್ಟವಾಗುವುದೆಂಬ ಭ್ರಮೆಯಾದರೂ ಎಲ್ಲಿಂದ ಬರುತ್ತೆ? ಆ ಭ್ರಮೆಯು ಕೆಲವರಿಗೆ ಇರುವುದಿಲ್ಲವೆಂದಿಟ್ಟುಕೊಳ್ಳೋಣ, ಆದರೂ ಅವರು ಜೋರಾಗಿಯೇ ಹಾಡುಗಳನ್ನು ಪ್ಲೇ ಮಾಡುತ್ತಾರೆ – ಕೇಳಿದರೆ “ಈ ಬಸ್ಸೇನು ನಿಮ್ಮ ತಾತನದೇ?” ಎನ್ನುತ್ತಾರೆ! ನಮ್ಮ ತಾತನದಲ್ಲವಾದ ಮಾತ್ರಕ್ಕೆ ನಾನು ನನಗಿಷ್ಟವಿಲ್ಲದ “ಕೊಲವೇರಿ ಡೀ..” ಹಾಡನ್ನು ಬೆಂಗಳೂರಿನಿಂದ ಮೈಸೂರಿನವರೆಗೂ ಕೇಳುತ್ತಿರಬೇಕೇ? “ಬಸ್ಸು ಯಾರ ತಾತನದೂ ಅಲ್ಲ, ಎಲ್ಲರದೂ ಕಣ್ರೀ” ಎಂದು ಡ್ರೈವರ್ರೋ ಕಂಡಕ್ಟರ್ರೋ ಸಹಾಯಕ್ಕೆ ಬರದೇ ಇದ್ದರೆ ಮೈಸೂರು ತಲುಪಿ, ಅಲ್ಲಿಂದ ಇನ್ನೂ ನೂರು ಕಿಲೋಮೀಟರು ಚಲಿಸುವಾಗಲೂ ಸಹ ನಮ್ಮ ಮೆದುಳು ಅದೇ ಕೊಲವೇರೀ ಡೀ ನೇ ಗುನುಗುತ್ತಿರುತ್ತೆ!ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ

ಹಾಡು ಚಲಾಯಿಸುತ್ತಿರುವವನ ಸೀಟಿನ ಕೆಳಗಿನಿಂದ ಚೂಪಾದ ವಸ್ತುವನ್ನು – ಕಾಂಪಾಸೋ, ಡಿವೈಡರ್ರೋ, ಏನಾದರೂ – ಬಿಟ್ಟು ಶೂಲಕ್ಕೇರಿಸುವುದು.
ನಮ್ಮ ಮೊಬೈಲ್‍ನಲ್ಲಿ ನಮಗಿಷ್ಟವಾದ ಹಾಡನ್ನು ಪೂರ್ತಿ ವಾಲ್ಯೂಮ್ ಕೊಟ್ಟು ಪ್ಲೇ ಮಾಡಿ ಅವನ ಪಕ್ಕ ಹೋಗಿ ಕುಳಿತುಕೊಳ್ಳುವುದು.

ಎಲ್ಲರೂ ಸುಖವಾಗಿರಲಿ. ಎಲ್ಲರೂ ಸತ್ಪ್ರಜೆಗಳಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ.

-ಅ
09.04.2012
2AM


Monday, April 16, 2012

ಮೊದಲ ನಗು

ಅಳುತ್ತಲಿದ್ದೆ,
ಬರೀ ಅಳುತ್ತಲೇ ಇದ್ದೆ - 
ಹುಟ್ಟಿದಾಗಿನಿಂದ! 

ಗಾಳಿ ಬೀಸಿದರೆ, 
ಶೆಖೆಯು ಹೆಚ್ಚಿದರೆ, 
ಹೊಟ್ಟೆ ಚುರ್ರೆಂದರೆ,
ನಿದ್ದೆ ಕೈ ಬೀಸಿ ಕರೆದರೆ,   
ಅಳುವೇ ತಾನೆ ಅಸ್ತ್ರ? 

ಸ್ನಾನದ ನೀರು ಮೈಮೇಲೆ ಬಿದ್ದರೆ, 
ಬಿಗಿ ವಸ್ತ್ರವ ಧರಿಸಲು ಹೊರಟರೆ, 
ಕೈಚೀಲ, ಕಾಲ್ಚೀಲ, ಟೋಪಿಗಳು ಸೋಕಿದರೆ,
ಕೆಳಗೆ ಕಟ್ಟಿದ್ದ ಬಟ್ಟೆಯು ತಣ್ಣಗಾದರೆ, 
ಅತ್ತು ಹೆದರಿಸುತ್ತಿದ್ದೆ! 

ಓಲೆಗೆಂದು ಕಿವಿ ಚುಚ್ಚಿದಾಗ, 
ಡಾಕ್ಟರು ಸೂಜಿ ಚುಚ್ಚಿದಾಗ, 
ನಿನ್ನ ಮೃದು ಮೈಗೆ ನನ್ನ
ಹೋತನ-ಗಡ್ಡ ಚುಚ್ಚಿದಾಗ 
ಅದೆಷ್ಟು ಅತ್ತಿದ್ದೆ ನೀನು! 

ಇಂದು ಹಿಗ್ಗಿನ ಹಬ್ಬ ನನಗೆ! 
ನನ್ನ ಕಂಡು ನಿನ್ನ ಮೊದಲ
ನಗುವಿನ ಸಿಹಿಯೂಟ ಬಡಿಸಿದ್ದಕ್ಕೆ. 
ನಿಮ್ಮಮ್ಮ ಪುಣ್ಯವಂತೆ, 
ಈ ಮೃಷ್ಟಾನ್ನವು ನಿತ್ಯ ಅವಳ ಪಾಲು! 

-ಅ
01.04.2012
3.30PM

Monday, April 9, 2012

ಭಾಷಣ - ಮಕ್ಕಳಿಗೆ

ಹತ್ತನೆಯ ತರಗತಿಯನ್ನು ಮುಗಿಸಿ, ಕಾಲೇಜಿಗೆ ಹೋಗುತ್ತಿರುವ ಮಕ್ಕಳನ್ನುದ್ದೇಶಿಸಿ ಭಾಷಣ ಮಾಡುವ ಪ್ರಸಂಗ ಒದಗಿ ಬಂತು. ಜೀವನದ ಪ್ರಶ್ನೆಗಳಿಗೆ ಉತ್ತರಗಳ ಸಹಾಯ ಮಾಡಿದ ಪೂಜ್ಯ ಮಂಕುತಿಮ್ಮನ ಕಗ್ಗವು ಭಾಷಣಕ್ಕೂ ನೆರವಾಗಿ ಬಂತು. ನನ್ನ ಅತ್ಯಂತ ಪ್ರಿಯವಾದ ಕಗ್ಗವೊಂದನ್ನೇ ವಿವರಿಸುವ, ವ್ಯಾಖ್ಯಾನಿಸುವ ಸಾಹಸವನ್ನು ನಮ್ಮ ಇಂಗ್ಲೀಷ್ ಮಾಧ್ಯಮದ ಮಕ್ಕಳ ಮುಂದೆ ನಾನು ಮಾಡಿದೆ. ಎಷ್ಟರ ಮಟ್ಟಿಗೆ ಈ ಸಾಹಸವು ಸಾರ್ಥಕವಾಗುವುದೋ ಗೊತ್ತಿಲ್ಲ. ಆ ಭಾಷಣಕ್ಕೆ ಮಾಡಿಕೊಂಡ ಸಿದ್ಧತೆಯ ಪ್ರಬಂಧವು ಇಂತಿದೆ.


ಇರುವ ಕೆಲಸವ ಮಾಡು

ವೃತ್ತಿಯೋ, ಪ್ರವೃತ್ತಿಯೋ, ಉಪವೃತ್ತಿಯೋ, ಅಥವಾ ಖಾಸಗಿ ಬದುಕೋ - ಸಹಜವಾಗಿ ನಮ್ಮ ಪಾಲಿಗಿರುವ ಕರ್ತವ್ಯಗಳು ಒಂದೆಡೆಯಾದರೆ ನಾವೇ ಆರಿಸಿಕೊಂಡಿರುವ ಕೆಲಸಗಳು ಇನ್ನೊಂದೆಡೆಯಿರುತ್ತೆ. ವಿದ್ಯಾರ್ಥಿ ದೆಸೆಯಲ್ಲಂತೂ ಅನಿವಾರ್ಯತೆಯ ನೆರಳಿನಲ್ಲೇ ಕರ್ತವ್ಯವು ಮನೆ ಮಾಡಿಕೊಂಡಿರುತ್ತೆ. ಈ ನಮ್ಮ  ಕೆಲಸಗಳನ್ನು - ನಮಗಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದಾದರೂ ಹೇಗೆ? ಆ ಕರ್ತವ್ಯಗಳನ್ನು ತೊಡಕುಗಳಿಲ್ಲದೇ ನಿಭಾಯಿಸುವುದಾದರೂ ಹೇಗೆ? ಮೊದಲಿಗೆ ನಾವು ಮಾಡುತ್ತಿರುವ ಕೆಲಸದ ಮೇಲೆ ನಮಗೆ ಪ್ರೀತಿಯಿರಬೇಕು, ಗೌರವವಿರಬೇಕು. ಸರ್ಕಾರಿ ಕಚೇರಿಗಳ ಮುಂದೇನೋ ಬೋರ್ಡು ಕಾಣಿಸುತ್ತೆ - "ಸರ್ಕಾರಿ ಕೆಲಸ - ದೇವರ ಕೆಲಸ" ಎಂದು, ಆದರೆ ಪ್ರತಿ ಕೆಲಸವೂ ದೇವರ ಕೆಲಸವೆಂಬ ಭಾವನೆ ಬಾರದ ಹೊರತು ಆ ಕೆಲಸವು ಹಿರಿತನದಿಂದ ಕೂಡಿರಲಾರದು. ಕಾಯಕವೇ ಕೈಲಾಸವೆಂದು ಬಸವಣ್ಣನವರು ಹೇಳಿರುವುದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದಷ್ಟೆ?

ಯಾವ ಕೆಲಸವೂ ಕಿರಿಯ ಕೆಲಸವಲ್ಲ - ಅದರಿಂದ ಯಾರಿಗೂ ತೊಂದರೆಯಾಗದೇ ಇದ್ದರೆ. ನಮ್ಮ ಜನರ ಮನಸ್ಸಿನಲ್ಲಿ ಈ ಮೇಲು-ಕೀಳು ಕೆಲಸಗಳೆಂಬ ಭಾವನೆಯು ಬದಲಾಗಲು ಇನ್ನೂ ಸಮಯ ತೆಗೆದುಕೊಳ್ಳಬಹುದು, ಆದರೆ ಒಳ್ಳೆಯ ವಿಷಯವೆಂದರೆ, ಬದಲಾವಣೆಯ ಹಾದಿಯಲ್ಲಿ ಹೆಜ್ಜೆಯನ್ನಿಡುತ್ತಿದ್ದೇವೆ.

ಈ "ಇರುವ ಕೆಲಸ"ವೇ ಸ್ವಧರ್ಮ. ಶಾಲೆಯಲ್ಲಿ ಮೇಷ್ಟ್ರಾದ ನಾನು ವೈದ್ಯರು ಹಣವನ್ನು ಹೆಚ್ಚು ಸಂಪಾದಿಸುತ್ತಿದ್ದಾರೆಂದು ನಾನೂ ಆ ಹಾದಿಯನ್ನು ಹಿಡಿಯಲಾಗುವುದೇ? ಹಾಗೆ ಹಿಡಿದರೆ ನನ್ನ ವೃತ್ತಿಗೂ ಕೆಡುಕು ಮಾಡಿದಂತೆ, ಆ ವೃತ್ತಿಗೂ ಕೆಡಕು ಮಾಡಿದಂತೆ. ವಿದ್ಯಾರ್ಥಿಯೊಬ್ಬನು ಓದುವುದು/ಅಧ್ಯಯನ ಮಾಡುವುದು ಅವನ "ಇರುವ ಕೆಲಸ", ಸ್ವಧರ್ಮ. ಬೇರೆ ಬೇರೆ ಚಾಂಚಲ್ಯಗಳು ಪರಧರ್ಮ! ಸ್ವಧರ್ಮೇ ನಿಧನಮ್ ಶ್ರೇಯಃ, ಪರಧರ್ಮೋ ಭಯಾವಹಃ.
ಇದನ್ನೇ ಅಲ್ಲವೇ ಶ್ರುತಿಯಲ್ಲಿ ನಮಗಿರುವ ಕೆಲಸವನ್ನು ಮಾಡಲು ನೂರು ವರ್ಷಗಳು ಬದುಕಲು ಇಚ್ಛೆ ಪಡಬೇಕೆಂದು ಹೇಳುವುದು? ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ -ಶತಮ್ ಸಮಾಃ.

ದೇವರ ಕೆಲಸ ಮಾಡಿದ ಮೇಲೆ ಪ್ರಸಾದ ಸಿಗದೇ ಇರುತ್ತದೆಯೇ? ಯೋಗ್ಯತೆಗೆ ತಕ್ಕ ಹಾಗೆ, ಕೆಲಸದಲ್ಲಿ ಎಷ್ಟು ಮನವಿಟ್ಟು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಹಾಗೆ, ಕಷ್ಟಕ್ಕೆ ತಕ್ಕ ಹಾಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಅದೇನು ಸಿಗುತ್ತೋ ಅದು ಪ್ರಸಾದ. "ಅಯ್ಯೋ, ಇಷ್ಟೇನಾ?" ಎಂದು ಅತೃಪ್ತಿಯಿಂದ ಗೊಣಗಾಡಿದರೆ ಸಿಕ್ಕಿರುವ ಫಲವೂ ದಕ್ಕದೆ ಹೋದೀತು. ಊಟ ಮಾಡುವಾಗ ಅನೇಕರು "ಅದು ಸರಿ ಇಲ್ಲ, ಇದು ಸಾಲದು" ಎಂದು ಕೊರತೆಗಳನ್ನು ಹುಡುಕಾಡುತ್ತ, ಗೊಣಗಾಡುವುದನ್ನು ನೋಡುತ್ತಿರುತ್ತೇವೆ. ಅಂಥವರಿಗೆ ಊಟವು ಮೈಗೆ ದಕ್ಕುವುದಾದರೂ ಹೇಗೆ?

ಇಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಏನು ದೊರಕುತ್ತೋ ಅದನ್ನು ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನಬೇಕು ಎಂದಷ್ಟೇ ಈ ಸಾಲಿನ ಅರ್ಥವೆಂದು ನಾವು ಭಾವಿಸಬಾರದು. ಪ್ರಸಾದವನ್ನು ನಾವು ಹೇಗೆ ತಿನ್ನುತ್ತೇವೆ? ಅಷ್ಟನ್ನೂ ಒಬ್ಬರೇ ತಿಂದು ಮುಗಿಸುವುದಿಲ್ಲ. ನಾಳೆಗೆ ಕೂಡಿಡುವುದಿಲ್ಲ. ನಮಗೆ ಎಂದು ಒಂದಷ್ಟು ತೆಗೆದುಕೊಂಡು ಮಿಕ್ಕಿದ್ದನ್ನು ಹಂಚುತ್ತೇವೆ. ನಮಗೆ ದೊರೆತಿರುವುದೆಲ್ಲವೂ ಪ್ರಸಾದ ಎಂಬ ಭಾವನೆ ನಮ್ಮ ಮನಸ್ಸಿಗೆ ಬಂದರೆ ನಮಗೆ ದಕ್ಕುವುದಷ್ಟನ್ನು ಮಾತ್ರ ನಾವು ಬಳಸಿಕೊಂಡು ಮಿಕ್ಕಿದ್ದರ ವ್ಯಾಮೋಹವನ್ನು ತೊರೆಯುತ್ತೇವೆ. ಅಜೀರ್ಣವಾಗುವಷ್ಟು ಹಣ ಕೂಡಿಟ್ಟುಕೊಳ್ಳುವುದಕ್ಕಿಂತ ಅದರ ಸದ್ವಿನಿಯೋಗ ನಡೆದರೆ - ಲೋಕದ ಭರವನ್ನು ಧರಿಸುವ ಕಾರ್ಯ ನಡೆದರೆ ಪ್ರಸಾದ ದೊರಕಿದ್ದಕ್ಕೂ ಸಾರ್ಥಕವಾದೀತು.

ಪ್ರತಿಯೊಬ್ಬರೂ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುತ್ತಾರೆ. ಒಳ್ಳೆಯ ಕೊಡುಗೆಯನ್ನು ನೀಡುವುದು ನಮ್ಮ ಕರ್ತವ್ಯವಾಗಬೇಕು, ಕೆಟ್ಟ ಕೊಡುಗೆಯನ್ನಲ್ಲ. ಗಾಂಧೀಜಿಯು ಆದರ್ಶವಾಗಬೇಕೇ ಹೊರತು ಗೋಡ್ಸೆಯಲ್ಲ. ರಾಮನು ಆದರ್ಶನಾಗಬೇಕೇ ವಿನಾ ರಾವಣನಲ್ಲ. "Tiny drops make a mighty ocean" ಎಂಬ ಮಾತಿನ ಹಾಗೆ, ಲೋಕವೆಂಬ ಸಾಗರವನ್ನು ಭರಿಸುವ ಕಾರ್ಯದಲ್ಲಿ ನಾವು ಹನಿಗಳಂತೆ ಭಾಗಿಯಾಗಬೇಕು. ನಮ್ಮ ಕೃತಿಯು ಲೋಕಕ್ಕೆ ಒಳಿತಾಗುವಂತಿರಬೇಕು. ಒಳಿತಾಗದಿದ್ದರೂ ಕೆಡುಕಾಗಬಾರದು. ಒಳಿತನ್ನು ಯಾಕೆ ಮಾಡಬೇಕು? ಶಾಂತಿ ಮಂತ್ರಗಳಲ್ಲಿ "ಸರ್ವೇ ಭವಂತು ಸುಖಿನಃ..." ಎಂದೋ, "ಸರ್ವೇಷಾಂ ಸ್ವಸ್ತಿರ್ಭವತು..." ಎಂದೋ ಪ್ರಾರ್ಥಿಸುವುದು ಏತಕ್ಕೆ? ಎಲ್ಲರೂ ಆನಂದವಾಗಿರಲೆಂದು ಹಾರೈಸುವ ಕಂಪನಗಳನ್ನು ಲೋಕದುದ್ದಕ್ಕೂ ಹರಡಿಸುವುದಕ್ಕಲ್ಲವೇ? ಎಲ್ಲರೂ ಸುಖವನ್ನು ಮೀರಿದ, ಸಂತೋಷವನ್ನು ಮೀರಿದ, ಹಿತವನ್ನು ಮೀರಿದ ಆನಂದವನ್ನು ಹೊಂದಲಿ ಎಂದಲ್ಲವೇ? ಈ ಆನಂದಕ್ಕಾಗಿಯೇ ಅಲ್ಲವೇ ಲೋಕದ ಭರವನ್ನು ನಾವು ಧರಿಸಬೇಕಾದದ್ದು? ಅದು ಕೇವಲ ನಮ್ಮೊಬ್ಬರ ಆನಂದವಲ್ಲ. ಈ ಆನಂದವು ಪ್ರಸಾದವಿದ್ದಂತೆ. ಈ ಆನಂದವನ್ನು ಹೊಂದಿದವರು ಪ್ರಸಾದವನ್ನು ಹಂಚಿದಂತೆ ಉಳಿದವರಿಗೂ ಹಂಚಬೇಕಷ್ಟೆ? ಆನಂದವೇ ಪರಮಾರ್ಥವಷ್ಟೆ? (ಪರಮಾರ್ಥ = ಪರಮ + ಅರ್ಥ - ಅರ್ಥ ಎಂದರೆ ಬೇಕಾಗಿರುವುದು, ಆಶಯ, seek ಎಂದು ಅರ್ಥ ಮಾಡಿಕೊಳ್ಳಬಹುದು)

ಶ್ರೀ ವಿನೋಬಾ ಭಾವೆಯವರು ತಮ್ಮ ಆತ್ಮಕಥನವಾದ Moved by Love ಪುಸ್ತಕದಲ್ಲಿ ಮಹಾತ್ಮಾ ಗಾಂಧಿಯವರು ಆರಂಭಿಸಿದ "ದರಿದ್ರ ನಾರಾಯಣ" ಎಂಬ ಪರಿಕಲ್ಪನೆಯ ವಿವರಣೆ ನೀಡುತ್ತ, ತಮ್ಮ ದಿನಚರಿಯಲ್ಲಿ ಗ್ರಾಮ ಸ್ವಚ್ಛ ಕಾರ್ಯಕ್ರಮವೂ ಇದ್ದು, ಆ ಕಾಲದಲ್ಲಿ ಶೂದ್ರರಿಂದ ಮಾಡಿಸುತ್ತಿದ್ದ ಕೆಲಸವನ್ನು ಗಾಂಧೀಜಿ, ವಿನೋಬಾ ಮುಂತಾದವರು ಹೇಗೆ ಪೂಜ್ಯ ಭಾವನೆಯಿಂದ ಮಾಡುತ್ತಿದ್ದರೆಂಬುದನ್ನು ಹೇಳುತ್ತಾರೆ. ಆ ಹಳ್ಳಿಯ ಜನರ ಪಾಯಿಖಾನೆಯನ್ನು ತಾವು ಸ್ವಚ್ಛ ಮಾಡುವ ಕೆಲಸವೂ ಸಹ ದೇವರ ಕೆಲಸವೆಂದು, ಮತ್ತು ಆ ಕೆಲಸವನ್ನು ಆನಂದದಿಂದ ಮಾಡುತ್ತಿದ್ದೆವೆಂದು ವಿನೋಬಾ ಅವರು ಹೇಳುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಆನಂದವೇ ಅವರ ಆಶಯವಾಗಿತ್ತು. ಆನಂದವೇ ಪರಮ ಅರ್ಥವಾಗಿತ್ತು.

ನಮ್ಮ "ಇರುವ ಕೆಲಸವನ್ನು" ನಾವು ಮನವಿಟ್ಟು, ಕಿರಿದೆನದೆ ಮಾಡಿದಾಗ, ದೊರೆತ ಪ್ರಸಾದವನ್ನು ಎಲ್ಲರೊಡನೆ ಹಂಚಿಕೊಂಡು ತಿಂದಾಗ, ಲೋಕದ ಭರವನ್ನು ಧರಿಸುವ ಮನೋಧರ್ಮವನ್ನು ಹೊಂದಿದಾಗ, ಆನಂದದ ಅರ್ಥವನ್ನು ಬಿಡದೆ ಹೊಂದಿಸಿಕೊಂಡಿದ್ದಾಗ - ಎಲ್ಲೂ ಅಂಟಿಕೊಂಡು ಬದುಕುವ ಪ್ರಮೇಯ ಬರುವುದಿಲ್ಲ. ಪ್ರೀತಿಯಿರುತ್ತೆ, ಮೋಹವಿರುವುದಿಲ್ಲ. ಕರ್ತವ್ಯ ಪ್ರಜ್ಞೆಯಿರುತ್ತೆ, ಆದರೆ ವೈರಾಗ್ಯವಿರುತ್ತೆ. ವೈರಾಗ್ಯವೆಂದರೆ "ಅಯ್ಯೋ, ನನಗೆ ಯಾವುದೂ ಬೇಡ" ಎಂದು ಕರ್ತವ್ಯ ವಿಮುಖರಾಗಿ ಹೋಗುವುದಲ್ಲ. ಯಾವುದಕ್ಕೂ ಅಂಟಿಕೊಳ್ಳದೇ ಪ್ರೀತಿಯಿಂದ ಇರುವ ಕೆಲಸವನ್ನು ಮಾಡುವುದು.

ಗೆಳೆಯ ಶ್ರೀರಾಘವನ್ ಅವರು ತಮ್ಮ ಒಂದು ಉಪನ್ಯಾಸದಲ್ಲಿ ಅಂಟಿಕೊಳ್ಳುವ ಸ್ವಭಾವದ ಬಗ್ಗೆ ಮಾತನಾಡುತ್ತ, ಅಕ್ಬರ್-ಬೀರಬಲ್ಲನ ಕಥೆಯನ್ನು ಹೇಳಿದರು. ಆ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಪ್ರಸ್ತುತವೆಂದು ನನಗನ್ನಿಸುತ್ತೆ. ಅನಾರ್ಕಲಿಯ ಮರಣದ ನಂತರ ಸಲೀಮನು ಕುಡುಕನಾಗುತ್ತಾನೆ. ಕುಡಿತದ ವ್ಯಸನದಿಂದ ತನ್ನ "ಇರುವ ಕೆಲಸ"ವನ್ನು ಮರೆಯುತ್ತಾನೆ. ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಅಕ್ಬರನಿಗೆ ಮಗನ ಚಿಂತೆ. ಬೀರಬಲ್ಲನನ್ನು ಕೇಳಿಕೊಳ್ಳುತ್ತಾನೆ, ಸಲೀಮನಿಗೆ ಬುದ್ಧಿ ಹೇಳಲು. ಯುವರಾಜನ ಕೆಲಸವನ್ನು ಹೇಗೆ ತಿಳಿಹೇಳುವುದೆಂದು ಬೀರಬಲ್ಲನು ಯೋಚಿಸಿ, ಸಲೀಮನು ಇಲ್ಲದ ವೇಳೆಯಲ್ಲಿ ಅವನ ಕೋಣೆಯನ್ನು ಹೊಕ್ಕು ಅಲ್ಲಿದ್ದ ಒಂದು ಕಂಬವನ್ನು ತಬ್ಬಿಕೊಂಡು ನಿಂತುಕೊಳ್ಳುತ್ತಾನೆ. ಹೆಂಡದ ಮತ್ತಿನಲ್ಲಿದ್ದ ಸಲೀಮನು ಕೋಣೆಗೆ ಹಿಂತಿರುಗಿದಾಗ ಕಂಬವನ್ನು ತಬ್ಬಿಕೊಂಡು ನಿಂತಿದ್ದ ಬೀರಬಲ್ಲನನ್ನು "ಏನು ಮಾಡುತ್ತಿದ್ದೀಯ, ಹೋಗು ನಿನ್ನ ಮನೆಗೆ" ಎಂದು ಗದರುತ್ತಾನೆ. ಅದಕ್ಕೆ ಬೀರಬಲ್ಲನು, "ನಾನೇನು ಮಾಡಲಿ, ಈ ಕಂಬ ನನ್ನನ್ನು ಬಿಡುತ್ತಿಲ್ಲ!" ಎನ್ನುತ್ತಾನೆ. ಬುದ್ಧಿಶಾಲಿಯಾಗಿದ್ದ ಸಲೀಮನಿಗೆ ಇಷ್ಟು ಪಾಠ ಸಾಕಾಯಿತು, ತನ್ನ "ಇರುವ ಕೆಲಸ"ದ ಅರಿವಾಗಲು, ತಾನು ಅಂಟಿಕೊಂಡಿದ್ದ ವಿಷಯದ ಬಗ್ಗೆ ತನಗೆ ತಿಳಿವಾಗಲು.

ಅಂಟಿಕೊಂಡಿದ್ದಾಗ ಬಿಟ್ಟು ಹೋಗುವುದು ಕಷ್ಟವಾಗುತ್ತೆ, ಹಿಂಸೆಯಾಗುತ್ತೆ, ನೋವಾಗುತ್ತೆ, ಅಳು ಬರುತ್ತೆ. ವಿರಾಗವನ್ನು ರೂಢಿಸಿಕೊಂಡವನಿಗೆ ಕರ್ತವ್ಯವು ಮುಖ್ಯವಾಗಿರುತ್ತೆ, ಅಂಟಿಕೊಂಡಿರುವ ವಸ್ತುವಲ್ಲ; ಲೋಕದ ಭರವನ್ನು ಧರಿಸುವ ಪ್ರೀತಿಯು ಮುಖ್ಯವಾಗಿರುತ್ತೆ, ಲೌಕಿಕ ಮೋಹವಲ್ಲ; ಪರಮಾರ್ಥದ ಗುರಿಯು ಮುಖ್ಯವಾಗಿರುತ್ತೆ, ಅನರ್ಥ ಸುಳಿಗಳಲ್ಲ. ಅಂಥವನು ಏನನ್ನು ಬೇಕಾದರೂ ಬಿಟ್ಟು ಹೋಗಬಲ್ಲ. ಆಲ್ಪರ್ಟ್ ಐನ್ಸ್ಟೈನರು “If you want to live a happy life, tie it to a goal, not to people or objects!” ಎನ್ನುತ್ತಾರೆ. ಅದನ್ನೇ ಇನ್ನೊಂದು ರೀತಿಯಲ್ಲಿ, ಬಹಳ ಹಿಂದೆ ಶಂಕರಾಚಾರ್ಯರು "ಕಸ್ಯ ಸುಖಮ್ ನ ಕರೋತಿ ವಿರಾಗಃ" ಎಂದು ಹೇಳಿದ್ದಾರೆ! ಇದನ್ನು ರೂಢಿಸಿಕೊಂಡವನು ಏನನ್ನಾದರೂ ಬಿಟ್ಟು ಹೋಗಬೇಕಾದರೆ - ಶಾಲೆಯಲ್ಲಿ ಉತ್ತೀರ್ಣರಾಗಿ ಮುಂದಿನ ಓದಿಗೆ ಬೇರೆ ಶಾಲೆಗೆ ಹೋಗುವಾಗಲೋ; ಮದುವೆಯಾದ ಹೆಣ್ಣು ಮಗಳು ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗಲೋ; ಕೆಲಸದ ಭರಾಟೆಯಲ್ಲಿ ಗೆಳೆಯರ ಸಂಗಡವನ್ನು ತೊರೆಯುವಂತಾಗುವಾಗಲೋ; ವೃತ್ತಿ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ನಿವೃತ್ತವಾದಾಗಲೋ; ಕಡೆಗೆ ಆಯುಷ್ಯ ಮುಗಿದು ಈ ಜಗತ್ತಿನಿಂದ ಹೊರಟುಬಿಡುವ ಕರೆಯು ಬಂದಾಗಲೂ ಸಹ "ನಾನು ಹೋಗಲಾರೆ" ಎಂದು ಅಳುವುದಿಲ್ಲ. ಹೀಗಲ್ಲವೇ ನಾವು ಬದುಕಬೇಕಾದದ್ದು?

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ || 
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆಬರಲಳದೆ ಮಂಕುತಿಮ್ಮ ||

 -ಅ
09.04.2012
10AM

Friday, April 6, 2012

ಆ ದನಿಯು..

ಮರದೊಳಗಡೆ ತಾನವಿತಾ ಹಕ್ಕಿಯು 
ಯಾವುದೊ ರಾಗದಿ ತಾನೇ ಬೆರತು 
ತೇಲಿ ಬರುತಲಿತ್ತು.. 
ಆ ದನಿಯು 
ತೇಲಿ ಬರುತಲಿತ್ತು.. 

"ಬೇಗನೆ ಬಾ ನೀ ಬೇಗನೆ ಬಾರೋ,
ಬೇಗನೆ ಬರುತಲೆ ಮುಖವನೆ ತೋರೋ"
ಕೃಷ್ಣನ ಕರೆಯುತಲಿತ್ತು.
ಆ ದನಿಯು 
ಕೃಷ್ಣನ ಕರೆಯುತಲಿತ್ತು.. 

ಕೃಷ್ಣನು ಬಂದನೊ ಏನೋ ಅರಿಯೆ 
ಹಕ್ಕಿಯು ಮರದೊಳು ಮರೆಯು.
ತೃಷ್ಣವೆ ಆರದು ದನಿಗಿದು ಸರಿಯೆ? 
ಎಂದಿಗೂ ನಿಲ್ಲದು ಕರೆಯು. 
ಆ ದನಿಯು 
ನಿಲ್ಲದೆ ಹರಿಯುವ ತೊರೆಯು. 

ನೆನೆಯಿತು ರಾಮನ ಮರುಕ್ಷಣದಲ್ಲಿ 
ಮರೆಯಲೆ ಆ ಜಾಗದಲಿ. 
ಸೀತೆಯೆ ತಾನಾಗುತ್ತಲೆ ವರಿಸಿತು 
ರಾಮನ, ವೈಭೋಗದಲಿ. 
ಆ ದನಿಯು 
ವರಿಸಿತು ವೈಭೋಗದಲಿ!

-ಅ
06.04.2012
12PM