Wednesday, April 18, 2012

ಕಿರಿಕಿರಿ ಟಾಪ್ ೧೦

ನಾನು ಅಷ್ಟು ಸುಲಭವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕಿರಿಗೊಳ್ಳುವುದಿಲ್ಲ ಎಂಬ ಹೆಮ್ಮೆಯಲ್ಲೇನೋ ಇದ್ದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸಿಕೊಂಡು ಹೋಗುವಾಗ, ಹಿಂದೆ ಚಲಿಸುವ ವಾಹನದವರು ಬಿಡದೆ ಮಾಡುವ ಹಾರನ್ ಸದ್ದನ್ನು ಕೇಳುವಾಗ, ಟ್ರಾಫಿಕ್ ಜ್ಯಾಮಿನಲ್ಲಿ ಗಂಟೆ ಗಟ್ಟಲೆ ನಿಂತಾಗ, ಹಾಗೆ ನಿಂತಿರುವಾಗ ಅದಕ್ಕೆ ಕಾರಣವು ಯಾವುದೋ ಸಂಘಟನೆಯ ಮುಷ್ಕರವೋ, ಅಥವಾ ಯಾವುದೋ ವಿ.ಐ.ಪಿ.ಯ ಆಗಮನವೋ ಎಂದು ತಿಳಿದಾಗ– ಇಲ್ಲ, ಇವು ಯಾವುವೂ ನನ್ನನ್ನು ಕಿರಿಕಿರಿಗೊಳಿಸಿರಲಿಲ್ಲ.  ಮೊನ್ನೆ ನನ್ನ ಬಸ್ಸಿನ ಪ್ರಯಾಣವು ನನ್ನನ್ನು ಅಂತರೀಕ್ಷಣೆಗೆ ಒಳಪಡಿಸಿಬಿಟ್ಟಿತು!

ಪಬ್ಲಿಕ್ಕಿನಲ್ಲಿ ನನಗೆ ಕಿರಿಕಿರಿಯಾಗುವ ಟಾಪ್ – ಹತ್ತು ವಿಷಯಗಳನ್ನು ಬರೆದಿಡುತ್ತಿದ್ದೇನೆ, ಇವುಗಳಿಗೆ ವಾಚಕರ ಸಮ್ಮತವೂ ಇರಬಹುದು, ವಿಷಯಗಳ ಕ್ರಮವೂ ಬೇರೆಯಾಗಿರಬಹುದು. ಈ ಸಮಸ್ಯೆಗಳಿಗೆ ನನಗೆ ತೋಚಿದ ಪರಿಹಾರವನ್ನೂ ಸೂಚಿಸಿದ್ದೇನೆ, ಬೇಕಿದ್ದಲ್ಲಿ ಅನುಸರಿಸಬಹುದು. ಯಾರ ಯಾರ ಕರ್ಮ ಹೇಗೆ ಹೇಗೆ ಇರುತ್ತೋ!

ರಾತ್ರಿಯ ಸದ್ದು - ೧೦
ಹನ್ನೊಂದುವರೆ-ಹನ್ನೆರಡು ಗಂಟೆ ಸರಿ ರಾತ್ರಿಯಲ್ಲಿ ತಮ್ಮ ಮನೆಯೊಳಗೆ ಕಾರು ನಿಲ್ಲಿಸಿಕೊಳ್ಳುವ ಎದುರು ಮನೆಯವರು ಇಡೀ ರಸ್ತೆಯಲ್ಲಿರುವವರನ್ನೇ ಎಬ್ಬಿಸುವುದು ಅದ್ಯಾವ ನ್ಯಾಯವೋ ನನಗಂತೂ ಗೊತ್ತಿಲ್ಲ. ಕಿಕ್.ಕಿಕ್.ಕಿಕ್.. ಎಂದು ಬರುವ ಸದ್ದಿಗೆ ಪ್ರತಿದಿನವೂ ನಾವು ಬೆಚ್ಚಿ ಬೀಳುವುದನ್ನು ರೂಢಿಸಿಕೊಳ್ಳಬೇಕಾಗುತ್ತೆ. ಒಂದು ವೇಳೆ ಆ ಮನೆಯವರು ಊರಲ್ಲಿಲ್ಲದೇ ಹೋದರೂ, ಸರಿಯಾಗಿ ಹನ್ನೆರಡಕ್ಕೆ ಎದ್ದು ನಾವೇ ಕಿಕ್. ಕಿಕ್.ಕಿಕ್.. ಸದ್ದು ಮಾಡಬೇಕಾದೀತು. ಅಥವಾ ಧೂಮ್ ಮಚಾಲೇನೋ, ಅನಿಸುತಿದೆ ಯಾಕೋ ಇಂದುನೋ, ಹಾಡನ್ನು ಗುನುಗುತ್ತಿರಬೇಕಾದೀತು.


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ಬೆಳಿಗ್ಗೆ ಆ ಮನುಷ್ಯ ಎದ್ದೇಳುವ ಮುಂಚೆಯೇ ಅವನ ಕಾರಿನ ಮೇಲೆ ಚಪ್ಪಡಿ ಕಲ್ಲನ್ನು ಎತ್ತಿ ಹಾಕಬೇಕು,
ಆ ಮನುಷ್ಯನಿಗೆ ಪ್ರತಿ ದಿನವೂ “ನಿಮ್ಮ ಕಾರಿನ ರಿವರ್ಸ್ ಹಾರನ್ನಿನ ಸದ್ದು ರಾಜ್ ಕುಮಾರ್ ಹಾಡಿಗಿಂತ ಇಂಪಾಗಿರುತ್ತೆ ಎಂದು ನೆನಪಿಸಿಕೊಡುತ್ತಿರಬೇಕು, ಒಂದು ದಿನ ಸರಿ ಹೋದೀತು.

ಮೇಲೆ ಹೇಳಿದ ಪರಿಹಾರವು ಪಥ್ಯವಾಗದಿದ್ದಲ್ಲಿ ನಮ್ಮ ಮನೆಯಲ್ಲೇ ಹಿತವಾದ ಸಂಗೀತವನ್ನು ಕಾರಿನ ರಿವರ್ಸ್ ಹಾರನ್ನಿನ ಸದ್ದನ್ನು ಮೀರುವಂತೆ ಹಾಕಿಕೊಳ್ಳಬೇಕು. ಹೆಡ್ ಫೋನುಗಳಿದ್ದರೆ ಇನ್ನೂ ಉತ್ತಮ.

ಸಿಂಚನವೂ.. - ೯
ರಸ್ತೆಗೂ ತಮ್ಮ ಮನೆಯ ಬಚ್ಚಲು ಮನೆಗೂ ವ್ಯತ್ಯಾಸವೇ ಗೊತ್ತಿಲ್ಲದೇ ಇರುವವರು ನಮ್ಮ ದೇಶದಲ್ಲಿ ಅದೆಷ್ಟು ಮಂದಿಯಿರುವರೋ ಏನೋ. 80kmph ವೇಗದಲ್ಲಿ ಚಲಿಸುತ್ತಿರುವ ಬೈಕಿನ ಮೇಲೆ ಕೂತು ಹೆಲ್ಮೆಟ್ಟಿನ ಸಂದಿಯಿಂದ ಬೈಕಿನ ವೇಗವನ್ನೂ ಮೀರಿ ಉಗಿಯಬಲ್ಲ ಸವಾರ; ಹತ್ತಾರು ಕಿಟಕಿಗಳುಳ್ಳ ಬಸ್ಸಿನ ಹೊರಗೆ ತಲೆ ಹಾಕಿ ವಾಷ್ ಬೇಸಿನ್ ಒಳಗೇ ಉಗಿಯುವ ನಟನೆ ಮಾಡುವ ಪ್ರಯಾಣಿಕ, ಕೆಲವು ವೇಳೆ ಚಾಲಕನೂ ಕೂಡ; ಕಾರಿನ ಕಿಟಕಿಯನ್ನು ಮೌನವಾಗಿ ಇಳಿಸಿ ರಸ್ತೆಯ ಮೀಡಿಯನ್ನಿಗೆ ಗುರಿಯನ್ನಿಟ್ಟು ಕ್ಯಾಕರಿಸಿ ಉಗಿಯುವ ಕಾರ್ ಡ್ರೈವರ್ರು; ಆಸನವು ಎಲ್ಲಿದೆಯೆಂದೂ ಗುರುತಿಸಲಾಗದೇ ಇರುವುದರಿಂದ ಉಗಿದರೂ ಪತ್ತೆ ಮಾಡಲು ಸಾಧ್ಯವೂ ಆಗದ ಆಟೋ ಚಾಲಕ; ಫುಟ್ ಪಾತಿನ ಮೇಲೆ ನಡೆದುಕೊಂಡು ಹೋಗುವಾಗ ಇದು ಕಾಲುದಾರಿಯೋ ಕಫದ ದಾರಿಯೋ ಎಂದು ಸಂದೇಹವುಂಟು ಮಾಡಲು ಕಾರಣಕರ್ತರಾದ ಪಾದಚಾರಿಗಳು – ಇವರೆಲ್ಲರೂ ಈ ಸಿಂಚನಕ್ಕೆ ಕೊಡುಗೆದಾರರು.
 

ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ಕಂಡಲ್ಲಿ ಉಗಿದವರ ಮುಖಕ್ಕೆ ಕ್ಯಾಕರಿಸಿ ಉಗಿದು ಪರಾರಿಯಾಗುವುದು.
ಕಂಡಲ್ಲಿ ಉಗಿವವರನ್ನು ಮಟ್ಟ ಹಾಕಲು “ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ” ಕಾಯಿದೆಯನ್ನು ತರಿಸಲು ಉಪವಾಸ ಸತ್ಯಾಗ್ರಹ ಮಾಡುವುದು.

ನಾವು ಎರಡನ್ನೂ ಪಾಲಿಸದೇ ಇರುವವರಾದರೆ, ನಮಗೂ ಉಗುಳಿಗೂ ಸಂಬಂಧವೇ ಇಲ್ಲವೆಂದು ರಸ್ತೆಯಲ್ಲಿ “ಹರ್ಡ್ಲ್ ರೇಸ್” ಮಾಡುತ್ತಿರಬಹುದು.

ಪಾಲಿಸಿದವನ ಗತಿ! - ೮
ಸೂರ್ಯನ ಬೆಳಕಿಗಿಂತ ಪ್ರಖರವಾಗಿ ಸಿಗ್ನಲ್ಲಿನ ಕೆಂಪು ದೀಪ ಗೋಚರವಾಗುತ್ತಿರುತ್ತೆ. ಪಕ್ಕದಲ್ಲಿ ಕೌಂಟ್ ಡೌನ್ ಕೂಡ ಇನ್ನೂ ಇಪ್ಪತ್ತೈದಿರುತ್ತೆ. ಹಾರ್ನ್ ಶುರು ಹಿಂದಿನಿಂದ. ಯಾರದು ಹಾರ್ನ್ ಮಾಡುತ್ತಿರುವುದೆಂದು ನೋಡಿದರೆ, “ಹೋಗಯ್ಯಾ ಮುಂದೆ! ಇಷ್ಟ್ ಹೊತ್ನಲ್ಲಿ ಯಾವ್ ನನ್ ಮಗ ಇರ್ತಾನೆ ಸರ್ಕಲ್ಲಲ್ಲಿ?” ಎಂದು ಪೋಲೀಸರನ್ನೂ ಸೇರಿಸಿ ನಮ್ಮನ್ನೂ ಬೈಯ್ಯುತ್ತಾರೆ. ಒನ್ ವೇನಲ್ಲಿ ಬೆಳಗಿನ ಜಾವ ದೀಪ ಹಾಕಿಕೊಂಡು ಬರುತ್ತಿರುವ ಲಾರಿಯವನು “ಕಣ್ಣು ಕಾಣಲ್ವಾ ಲೈಟ್ ಹಾಕ್ಕೊಂಡ್ ಬರ್ತಿರೋದು, ಸೈಡಿಗೆ ಹೋಗೋಲೇ!” ಎಂದು ಬೈಯ್ಯುವುದೂ ಉಂಟು.


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ
ನಮ್ಮ ವಾಹನದಿಂದ ಕೆಳಗಿಳಿದು ಹಾರ್ನ್ ಮಾಡುತ್ತಿರುವ ವಾಹನದ ಗಾಜು ರವಿಚಂದ್ರನ್ ಶೈಲಿಯಲ್ಲಿ ಪೀಸ್ ಪೀಸ್ ಮಾಡುವುದು.
“ಕೇಳಿದ್ದು ಸುಳ್ಳಾಗಬಹುದು.. ನೋಡಿದ್ದು ಸುಳ್ಳಾಗಬಹುದು”.. ಹಾರ್ನ್ ಕೇಳ್ಸಿದ್ದು ಸುಳ್ಳಾಗಬಹುದು.. ಲೈಟ್ ಹಾಕ್ಕೊಂಡ್ ಬರ್ತಿರೋ ಗಾಡಿಯನ್ನು ನೋಡಿದ್ದೂ......


ಕಸವೋ ರಸವೋ? - ೭
ದೇವಸ್ಥಾನಕ್ಕೆಂದು ಹೊರನಾಡಿಗೋ ಶೃಂಗೇರಿಗೋ ಮಂತ್ರಾಲಯಕ್ಕೋ ನಮ್ಮವರ ಬಲವಂತಕ್ಕೆ ಹೋಗಿದ್ದೂ, ಅವರೇನೋ ದೇವರ ಸನ್ನಿಧಿಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುತ್ತಿರುವಾಗ ನಮ್ಮಂಥವರ ಕಣ್ಣುಗಳು ಆ ದೇವಸ್ಥಾನದ ಸುತ್ತ ಮುತ್ತ ಯಥೇಚ್ಛವಾಗಿ “ಭಕ್ತರು” ಬಿಸಾಡಿರುವ ಪ್ಲಾಸ್ಟಿಕ್ ಕಸದ ಕಡೆ ಹೋಗುವುದಾದರೂ ಏಕೆ? ನಮ್ಮ ಜನ್ಮವೇ ಸಾಕೆನ್ನಿಸುವುದು ದೇವರ ದರ್ಶನ ಮುಗಿಸಿಕೊಂಡು ಬಂದ ನಮ್ಮವರೂ ಸಹ ಪ್ರಸಾದ ತಿಂದು ಕಸವನ್ನು ಅಲ್ಲಿಯೇ ಬಿಸಾಡಿದಾಗ! “ನೀನೊಬ್ಬ ಕಸ ಬಿಸಾಡದಿದ್ದರೆ ಈ ಜಾಗ ಶುಚಿಯಾಗುತ್ತೆ ಅಂತ ತಿಳ್ಕೊಂಡಿದ್ದೀಯಾ?” ಎಂದು ಪ್ರಶ್ನೆ ಕೇಳಿದಾಗ ದೇವರನ್ನೇ ಶಪಿಸುವಷ್ಟು ಕಿರಿಕಿರಿಯಾಗುತ್ತೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಆತ್ಮಹತ್ಯೆ
ನಾಸ್ತಿಕತೆ

ಕಸದಿಂದಾಗುವ ಹಾನಿಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಬೇಕಾದಷ್ಟು ನಡೆಯುತ್ತಲೇ ಇರುತ್ತೆ. ಕೊನೇ ಪಕ್ಷ “ನಾನೊಬ್ಬನಾದರೂ” ಅದರ ಅರಿವನ್ನು ಮೂಡಿಸಿಕೊಂಡಿದ್ದೇನೆ ಎಂದು ಅರಿವು ಮೂಡಿಸಿಕೊಳ್ಳಲು ಸಿದ್ಧವಿಲ್ಲದವರನ್ನು ನೋಡಿ ಮರುಕ ಪಡುವುದು ಸದ್ಯದ ದುರ್ದೈವ.

ಜನ್ಮಬಂಧುಗಳು - ೬
ನಮ್ಮ ಮನೆಗೆ ಇವರು ಬಂದಿರುತ್ತಾರೆ. “ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡ” ಎಂದು ಅಪ್ಪಣೆ ಮಾಡುತ್ತಾರೆ. “ಒಂದು ಚಾನೆಲ್‍ನ ನೆಟ್ಟಗೆ ನೋಡೋದನ್ನ ಕಲಿತುಕೊ, ಪದೇ ಪದೆ ಯಾಕೆ ಬದಲಾಯಿಸೋದು?” ಎಂದು ಟಿವಿ ಸುದ್ದಿಗೆ ಬರುತ್ತಾರೆ. “ಇದೇನು ಮನೆಯಲ್ಲೆಲ್ಲಾ ಇಷ್ಟೊಂದು ಕಸ” ಎಂದು ಆಸ್ತಿಯ ಪಾಲುದಾರರಂತೆ ಮೂಗು ತೂರಿಸುತ್ತಾರೆ. ಮನೆಯಲ್ಲಿ  ಎಸ್ಸೆಸ್ಸೆಲ್ಸಿಯೋ ಪಿಯುಸಿಯೋ ಓದುವ ಮಕ್ಕಳಿದ್ದರೆ ಮುಗಿಯಿತು ಅವರ ಕಥೆ – ಬಂಧುಗಳಿಗಿಂತ ದೊಡ್ಡ ಶತ್ರು ಬೇರೆ ಇನ್ಯಾರೂ ಇರಲು ಸಾಧ್ಯವೇ ಇಲ್ಲ. ಇನ್ನು ಓದೆಲ್ಲ ಮುಗಿಸಿದರೆ ನಮಗೇ ಇಲ್ಲದ, ನಮ್ಮ ಹೆತ್ತವರಿಗೂ ಇಲ್ಲದ ಮದುವೆಯ ಆಸಕ್ತಿ, ಇವರಿಗೆ ಎಲ್ಲೆಲ್ಲಿಂದಲೋ ಬಂದುಬಿಡುತ್ತೆ. ವಿಶ್ವದ ಮೂಲೆ ಮೂಲೆಯಿಂದೆಲ್ಲಾ ಸಂಬಂಧಗಳನ್ನು ಹುಡುಕಿಕೊಂಡು ಬರುತ್ತಾರೆ. ಮನೆಯ ಕಾಲಿಂಗ್ ಬೆಲ್ಲು ಯಾಕಾದರೂ ರಿಂಗ್ ಆಗುತ್ತೋ ಎನ್ನುವಂತೆ ಮಾಡಿಬಿಡುತ್ತಾರೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಬಾಗಿಲು ತೆಗೆದಾಗ ಕಿರಿಕಿರಿಯ ಬಂಧುಗಳಾದರೆ ಅವರ ತಲೆಗೆ ತಾಕುವಂತೆ ಜೋರಾಗಿ ಬಾಗಿಲನ್ನು ರಾಚಬೇಕು.
ಬಾಗಿಲ ಮುಂದೆ “ಬಂಧುಗಳಿಗೆ ಪ್ರವೇಶವಿಲ್ಲ” ಎಂಬ ಫಲಕವನ್ನು ನೇತು ಹಾಕಿಕೊಳ್ಳಬೇಕು.

ಬಂಧುಗಳ ಮಾತುಗಳಿಗೆ ಕಿವುಡಾಗಿ, ಅವರ ನೋಟಗಳಿಗೆ ಕುರುಡರಾಗಿ, ಪ್ರಶ್ನೆಗಳಿಗೆ ಮೂಗರಾಗಿರುವುದನ್ನು ಅಭ್ಯಾಸ ಮಾಡುವುದು ಮೇಲಿನ ಮಾರ್ಗಗಳಿಗಿಂತ ಸುಲಭವೆಂದೆನಿಸುತ್ತೆ.

ಚಾರಣದಲ್ಲಿ - ೫
ಚಾರಣದಲ್ಲಿ ಅತ್ಯಗತ್ಯ ಅಂಶವೆಂದರೆ ನಿಶಬ್ದವನ್ನು ಕಾಪಾಡಿಕೊಳ್ಳುವುದು. ಕೆಲವರಿಗೆ ಬೆಟ್ಟವನ್ನು ನೋಡಿದರೆ ಅದೇನು ತೊಣಚಿ ಹೊಕ್ಕುತ್ತೋ ಒಳಗೆ ಗೊತ್ತಿಲ್ಲ, ಯೋಡೆಲ್ ಮಾಡಲು ಶುರು ಮಾಡಿಬಿಡುತ್ತಾರೆ. ಇನ್ನು ಕೆಲವರು “ಹೇಯ್ ಅಲ್ಲಿ ನೋಡಿ ಕರಡಿ...” ಎಂದು ಇಡೀ ಕಾಡಿಗೇ ಕೇಳಿಸುವ ಹಾಗೆ, ಕಂಡ ಪ್ರಾಣಿಯತ್ತ ಕೈ ಮಾಡಿ ಕಿರುಚುತ್ತಾರೆ. ಕಳೆದ ವರ್ಷ ಹಿಮಾಲಯದ ಒಂದು ಚಾರಣದಲ್ಲಿ ಕರ್ನಾಟಕದಿಂದ ಬಂದ ಒಂದು ದೊಡ್ಡ ಗುಂಪು ಇಡೀ ಚಾರಣವನ್ನು ತಮ್ಮ ಘೋಷಣೆಗಳಿಂದ, ಅರಚುವಿಕೆಯಿಂದ ನಾಶ ಮಾಡಿದ್ದರು. ಕರ್ನಾಟಕದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಕಳೆದಿದ್ದರು. ನಾವು ಕೆಲವರು ತಲೆತಗ್ಗಿಸುವಂತಾಗಿತ್ತು. ಮತ್ತೆ ಕೆಲವರು ಇನ್ನೂ ಅಸಹ್ಯ – ಚಾರಣದಲ್ಲಿ ಸಂಗೀತ ವಾದ್ಯಗಳೊಂದಿಗೆ ಆರ್ಕೇಸ್ಟ್ರಾ ಮಾಡುವುದು, ಪಟಾಕಿ ಸಿಡಿಸುವುದು, ತಮಟೆ ಬಾರಿಸುವುದು, ಮೊಬೈಲ್ ಫೋನ್‍ನಲ್ಲಿ ಹಾಡು ಹಾಕುವುದು, ಜೋರು ಜೋರಾಗಿ ಫೋನಿನಲ್ಲಿ ಮಾತನಾಡುವುದು – ಇಂಥವರೆಲ್ಲರೂ ಟ್ರೆಕ್ಕಿಂಗ್ ಮಾಡುತ್ತಾರೆ!  ಅರಣ್ಯನಾಶಕ್ಕೆ ಇಂಥವರಿಂದ ಅರ್ಧ ಕಾಂಟ್ರಿಬ್ಯೂಷನ್..


ಹಿಂಸಾಮಾರ್ಗ
ಅಹಿಂಸಾಮಾರ್ಗ


ಪರಿಹಾರ

ಬೆಟ್ಟದ ಮೇಲಿಂದ ತಳ್ಳಿಬಿಡಬಹುದು, ರಾಕ್ ಕ್ಲೈಂಬ್ ಮಾಡುವಾಗ ಹಾರ್ನೆಸ್ ಅನ್ನು ಬಿಚ್ಚಿ ಬಿಡಬಹುದು, ಟೆಂಟಿನಲ್ಲಿ ಮಲಗಿದ್ದಾಗ ಪೆಗ್ಗುಗಳನ್ನು ಹಾರಿಸಿಬಿಡಬಹುದು..
ಚಾರಣವನ್ನು ಲೀಡ್ ಮಾಡುವವರು ದಾರಿ ತಪ್ಪಿಸಿ, ಗಲಾಟೆ ಮಾಡುವವರನ್ನು ಕಾಡಿನ ಮಧ್ಯದಲ್ಲೆಲ್ಲೋ ಬಿಟ್ಟು, ತಾವುಗಳು ವೇಗವಾಗಿ ಚಲಿಸಿ ಸರಿಯಾದ ದಾರಿಯನ್ನು ಹಿಡಿದು ಕಾಡಿನಿಂದ ಹೊರಬರುವುದು.

ಅರಣ್ಯ ಇಲಾಖೆಯವರು ಚಾರಣಿಗರನ್ನು ಸರಿಯಾಗಿ ಪರಿಶೀಲಿಸಿ ಒಳಗೆ ಬಿಟ್ಟರೆ ಇಂತಹ ಆಭಾಸಗಳಾಗದೇ ಇದ್ದೀತು.

ಕಾಫಿಗೆ ಕಾಸು - ೪
ನಮ್ಮ ಪತ್ರವು ನಮ್ಮ ಕೈ ಸೇರಬೇಕಾಗಿರುತ್ತೆ, ನಮ್ಮ ಹಣವು ನಮಗೆ ಬರಬೇಕಾಗಿರುತ್ತೆ, ನಮ್ಮ ಡ್ರೈವಿಂಗ್ ಲೈಸೆನ್ಸು ನಮಗೆ ತಲುಪಬೇಕಾಗಿರುತ್ತೆ – ಇದಕ್ಕೆ ನಾವು ಯಾರು ಯಾರಿಗೋ ಕಾಫಿಗೆ ಕಾಸು ಕೊಡುವ ಪ್ರಮೇಯ ಒದಗಿ ಬರುತ್ತೆ. ಹೋಕೊಳ್ಳಿ, ಬನ್ರೀ ಕಾಫಿ ಕೊಡಿಸುತ್ತೇನೆ ಎಂದರೂ ಕೇಳರು. ಐನೂರು ರೂಪಾಯಿ ಬೇಕೆಂದು ಬಾಯಿಬಿಟ್ಟಾದರೂ ಕೇಳುತ್ತಾರೆ. ಕಾಫಿಗೆ ಐನೂರು ರೂಪಾಯಿಯನ್ನು ಕಾಫಿ ಡೇನಲ್ಲೂ ತೆಗೆದುಕೊಳ್ಳುವುದಿಲ್ಲ! ಥ್ಯಾಂಕ್ಸ್ ಟು, ಇತ್ತೀಚಿನ ಹೋರಾಟಗಳು, ಸ್ವಲ್ಪ ಹೆದರುತ್ತಾರೆ ನಮ್ಮ ದುಡ್ಡಲ್ಲಿ ಕಾಫಿ ಕುಡಿಯುವುದಕ್ಕೆ – ಆದರೂ ಇನ್ನೂ ಹೆಚ್ಚು ಭಯ ಹುಟ್ಟಬೇಕು. ಕೆಲವು ಕಡೆ ಫೀಸ್, ಇನ್ನು ಕೆಲವು ಕಡೆ ಛಾರ್ಜ್, ಮತ್ತೆ ಹಲವು ಕಡೆ “ವಿಚಾರಿಸಿಕೊಳ್ಳುವುದು”, ಇನ್ನೊಂದಿಷ್ಟು ಕಡೆ ಕಮಿಷನ್ – ಹೀಗೆ ಹತ್ತು ಹಲವು ಹೆಸರುಗಳಿಂದ ಲಂಚವೆಂಬ ಮಾರಿಯು ಕುಖ್ಯಾತಿಗೊಂಡಿದೆ – ಅಸಹಾಯಕರ ಮನದಲ್ಲಿ ಕಿರಿಕಿರಿಯನ್ನುಂಟು ಮಾಡಲು ದುರದೃಷ್ಟವಶಾತ್ ಶಕ್ತವಾಗಿದೆ.


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಕಮಲ್ ಹಾಸನ್ ಅವರ “ಇಂಡಿಯನ್” ಚಿತ್ರದ ಸ್ಟಂಟನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳುವುದು.
ಕಮಲ್ ಹಾಸನ್ ಅವರ “ಇಂಡಿಯನ್” ಚಿತ್ರವನ್ನು ನೋಡುವವರೆಗೂ ತಾಳ್ಮೆಯಿಂದಿದ್ದೂ ನಂತರ ಹಿಂಸಾಮಾರ್ಗಕ್ಕೆ ಹಿಂದಿರುಗುವುದು.

ಈ ಲಂಚದ ವಿರುದ್ಧ ಹೇಗೆ ಹೋರಾಡಬೇಕೆಂಬುದಕ್ಕೆ ನಾನಾ ನಾಯಕರು ನಾನಾ ದಾರಿಗಳನ್ನು ತೋರಿಸಿಕೊಟ್ಟಿದ್ದಾರೆ, ಯಶಸ್ಸಿನ ಹಾದಿಯನ್ನೂ ಹಿಡಿದಿದ್ದಾರೆ. ನಾನು ಮೇಲೆ ಹೇಳಿರುವುದನ್ನು ವಾಚಕರು ಗಂಭೀರವಾಗಿ ಪರಿಗಣಿಸುವಷ್ಟು ದಡ್ಡರಲ್ಲ ಎಂಬ ನಂಬಿಕೆ ನನಗಿದೆ.

ಜೈ ಕನ್ನಡ - ೩
ಸಾರ್ವಜನಿಕ ಸ್ಥಳದಲ್ಲಿ ಒಬ್ಬರೇ ಕೂತು ಪತ್ರಿಕೆಯನ್ನು ಓದುವಾಗಲೋ, ಹೊಟೆಲಿನಲ್ಲಿ ಕಾಫಿ ಕುಡಿಯುವಾಗಲೋ, ಅಥವಾ ಬಸ್ಸಲ್ಲಿ ಪ್ರಯಾಣಿಸುವಾಗಲೋ – ಇನ್ಯಾವುದೋ ಗುಂಪು “this Bangalore is shit man, very irritating” ಎನ್ನುವುದನ್ನು ಕೇಳಿದಾಗ ಆಗುವಷ್ಟು irritation ಬೆಂಗಳೂರಿನಲ್ಲಿ ಕಾಣಿಸುವ shit ಅನ್ನು ನೋಡಿದಾಗಲೂ ಆಗುವುದಿಲ್ಲ. ಆ ಗುಂಪಿನಲ್ಲಿರುವವರು ಬೆಂಗಳೂರಿಗರೇ ಆಗಿದ್ದರೆ ಏನೂ ಬೇಸರವಿಲ್ಲ, ಹೊರಗಡೆಯಿಂದ ಬಂದು, ಇಲ್ಲಿ ನೆಲೆ ಕಂಡುಕೊಂಡು, ಆಸ್ತಿ ಮಾಡಿಕೊಂಡು, ಕೆಲಸ ಕಾರ್ಯ ನಿರ್ವಹಿಸುತ್ತ, ಈ ಊರನ್ನು ಬೈಯುವ ಯಾವ ಅಧಿಕಾರ ಇವರಿಗಿದೆ ಎಂಬ ಸಿಟ್ಟು ಬಂದರೂ, ಆ ಗುಂಪಿನ ಸಂಖ್ಯೆಯು ಒಂಟಿ ಮನುಷ್ಯನನ್ನು ಜಗಳವಾಡದಂತೆ ಮಾಡಿಬಿಡುತ್ತೆ. ಅದೇ ರೀತಿ ಬಸ್ಸಿನಲ್ಲಿ ಕನ್ನಡೇತರರು “the only thing I don’t like here is they put Kannada movies” ಎಂಬಂತಹ ಮಾತುಗಳನ್ನಾಡುತ್ತಿದ್ದರೆ ಕೇಳಿಸಿಕೊಂಡು ಹಲ್ಲುಕಡಿಯುತ್ತಾ.....


ಹಿಂಸಾಮಾರ್ಗ
ಅಹಿಂಸಾಮಾರ್ಗ
ಪರಿಹಾರ

ಕನ್ನಡದ “ಸಂಸ್ಕೃತ” ಪದಗಳ ಪರಿಚಯವನ್ನು ಅವರುಗಳಿಗೆ ಮಾಡಿಕೊಡುವುದು
ಹಳೆಯ ಕನ್ನಡದ ಚಿತ್ರವನ್ನೇ ಜೋರಾಗಿ ವಾಲ್ಯೂಮ್ ಕೊಟ್ಟು ಹಾಕುವಂತೆ ಚಾಲಕನನ್ನು ಪ್ರಾರ್ಥಿಸಿಕೊಳ್ಳುವುದು.

ಕನ್ನಡಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಸುಮ್ಮನೆ ಬೇಕಾದರೂ ಕುಳುತುಕೊಳ್ಳಬಹುದು. ಇದು ಸ್ವಹಿಂಸಾಮಾರ್ಗ ಎಂದರೆ ತಪ್ಪಾಗಲಾರದು.

ವರ್ತುಲ.. ವರ್ತುಲ.. - ೨
ಎಂ. ಗೋಪಾಲಕೃಷ್ಣ ಅಡಿಗರ ಒಂದು ಕವನ – ಸಿಗರೇಟಿನ ಹೊಗೆ ವರ್ತುಲ.. ವರ್ತುಲ.. – ಹೀಗೆ ಆರಂಭವಾಗುತ್ತೆ. ಇದೂ ಕೂಡ ಕವನದ ಸಬ್ಜೆಕ್ಟೇ? ಎಂದು ಆಶ್ಚರ್ಯವೂ ಆಗುತ್ತೆ. ಆದರೆ ಈ ವರ್ತುಲಗಳು ಸಾರ್ವಜನಿಕ ಪ್ರದೇಶಗಳಲ್ಲಿ ಕಂಡು ಬಂದಾಗ ಅಸಹ್ಯವಾಗುತ್ತೆ. ಬೇಸಿಗೆಯ ಮೂವತ್ತೆಂಟು ಡಿಗ್ರೀ ತಾಪಮಾನದಲ್ಲೂ ಇವರ ತುಟಿಗಳ ಮಧ್ಯೆ ಬಿಸಿ ಹೊಗೆಯನ್ನು ಉಗುಳುವಂತಹ ತುಂಡು ಸಿಕ್ಕಿಕೊಂಡಿದ್ದೆಯಲ್ಲಾ ಎಂದು ನಮ್ಮ ಶೆಖೆ ಇನ್ನೂ ಹೆಚ್ಚಾಗುತ್ತೆ. ತಮ್ಮ ತೆವಲಿನ ರೋಗವನ್ನು ಪಕ್ಕದವರಿಗೂ ಹರಡುವ ದುಷ್ಟ ಹವ್ಯಾಸದ ಬಗ್ಗೆ ಏನು ಹೇಳೋದು?


ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಸಿಗರೇಟಿನ ಕೆಂಡದಲ್ಲಿ ಬರೆ ಹಾಕುವುದು.
ಧೂಮಪಾನ ಮಾಡುವವರ ಹತ್ತಿರ ಹೋಗಿ ವಾಸನೆ ಬರುವಂತೆ (ಶಬ್ದವೂ ಬಂದರೆ ಇನ್ನೂ ಉತ್ತಮ), ಅಪಾನವಾಯುವನ್ನು ಬಿಡುವುದು. (ಅಹಿಂಸಾಮಾರ್ಗವು ಯಾವಾಗಲೂ ಕಷ್ಟದ ಮಾರ್ಗ ಎಂದು ಗಾಂಧೀಜಿ ಹೇಳಿರುವುದು ಸತ್ಯ)

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಅದರ ಬಗ್ಗೆ ಪೋಲೀಸರಿಗೆ ದೂರು ಕೊಡಬಹುದು. ಪೋಲೀಸ್ ಸ್ಟೇಷನ್ನಿನಲ್ಲಿ ಇನ್ಸ್ಪೆಕ್ಟರ್ ಕೂಡ ಧೂಮಪಾನ ಮಾಡುತ್ತ ಕುಳಿತಿದ್ದರೆ ಮನೆಗೆ ವಾಪಸ್ ಬಂದು “ಕಾಲ ಕೆಟ್ಟು ಹೋಗಿದೆ” ಎನ್ನಬೇಕು.

ಹಾಡು ಹಳೆಯದಾದರೇನು.. – ೧
ಬಸ್ಸುಗಳು, ರೈಲುಗಳು – ಸಾರ್ವಜನಿಕ ಆಸ್ತಿಯಷ್ಟೆ? ತಮ್ಮ ಕಿಸೆಯಿಂದ ಮೊಬೈಲನ್ನು ತೆಗೆದು ಯಾವುದೋ ಹಾಡನ್ನು ಇಡೀ ಬಸ್ಸಿನ ಪ್ರಯಾಣಿಕರಿಗೆ ಉಪಕಾರ ಮಾಡುವವರಂತೆ ಪ್ಲೇ ಮಾಡುವ ಜನರನ್ನು ನೋಡುತ್ತಲೇ ಇರುತ್ತೇವೆ. ತಮಗೆ ಯಾವುದಾದರೂ ಹಾಡು ಇಷ್ಟವಾದರೆ ಅದು ಸಮಸ್ತಲೋಕದವರಿಗೆಲ್ಲವೂ ಇಷ್ಟವಾಗುವುದೆಂಬ ಭ್ರಮೆಯಾದರೂ ಎಲ್ಲಿಂದ ಬರುತ್ತೆ? ಆ ಭ್ರಮೆಯು ಕೆಲವರಿಗೆ ಇರುವುದಿಲ್ಲವೆಂದಿಟ್ಟುಕೊಳ್ಳೋಣ, ಆದರೂ ಅವರು ಜೋರಾಗಿಯೇ ಹಾಡುಗಳನ್ನು ಪ್ಲೇ ಮಾಡುತ್ತಾರೆ – ಕೇಳಿದರೆ “ಈ ಬಸ್ಸೇನು ನಿಮ್ಮ ತಾತನದೇ?” ಎನ್ನುತ್ತಾರೆ! ನಮ್ಮ ತಾತನದಲ್ಲವಾದ ಮಾತ್ರಕ್ಕೆ ನಾನು ನನಗಿಷ್ಟವಿಲ್ಲದ “ಕೊಲವೇರಿ ಡೀ..” ಹಾಡನ್ನು ಬೆಂಗಳೂರಿನಿಂದ ಮೈಸೂರಿನವರೆಗೂ ಕೇಳುತ್ತಿರಬೇಕೇ? “ಬಸ್ಸು ಯಾರ ತಾತನದೂ ಅಲ್ಲ, ಎಲ್ಲರದೂ ಕಣ್ರೀ” ಎಂದು ಡ್ರೈವರ್ರೋ ಕಂಡಕ್ಟರ್ರೋ ಸಹಾಯಕ್ಕೆ ಬರದೇ ಇದ್ದರೆ ಮೈಸೂರು ತಲುಪಿ, ಅಲ್ಲಿಂದ ಇನ್ನೂ ನೂರು ಕಿಲೋಮೀಟರು ಚಲಿಸುವಾಗಲೂ ಸಹ ನಮ್ಮ ಮೆದುಳು ಅದೇ ಕೊಲವೇರೀ ಡೀ ನೇ ಗುನುಗುತ್ತಿರುತ್ತೆ!ಹಿಂಸಾಮಾರ್ಗ
ಅಹಿಂಸಾಮಾರ್ಗ

ಪರಿಹಾರ

ಹಾಡು ಚಲಾಯಿಸುತ್ತಿರುವವನ ಸೀಟಿನ ಕೆಳಗಿನಿಂದ ಚೂಪಾದ ವಸ್ತುವನ್ನು – ಕಾಂಪಾಸೋ, ಡಿವೈಡರ್ರೋ, ಏನಾದರೂ – ಬಿಟ್ಟು ಶೂಲಕ್ಕೇರಿಸುವುದು.
ನಮ್ಮ ಮೊಬೈಲ್‍ನಲ್ಲಿ ನಮಗಿಷ್ಟವಾದ ಹಾಡನ್ನು ಪೂರ್ತಿ ವಾಲ್ಯೂಮ್ ಕೊಟ್ಟು ಪ್ಲೇ ಮಾಡಿ ಅವನ ಪಕ್ಕ ಹೋಗಿ ಕುಳಿತುಕೊಳ್ಳುವುದು.

ಎಲ್ಲರೂ ಸುಖವಾಗಿರಲಿ. ಎಲ್ಲರೂ ಸತ್ಪ್ರಜೆಗಳಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ.

-ಅ
09.04.2012
2AM


13 comments:

 1. Ellaroo oLLE makkaLaagi... (Dash) makkaLaagabEdi...

  (From South Canara Bank Hruswa SwaragaLu)

  OLLE aarTikallu...

  ReplyDelete
 2. ಹಾಡು ಚಲಾಯಿಸುತ್ತಿರುವವನ ಸೀಟಿನ ಕೆಳಗಿನಿಂದ ಚೂಪಾದ ವಸ್ತುವನ್ನು – ಕಾಂಪಾಸೋ, ಡಿವೈಡರ್ರೋ, ಏನಾದರೂ – ಬಿಟ್ಟು ಶೂಲಕ್ಕೇರಿಸುವುದು.

  "ಈ ಬರಹ ಜಿಜ್ಞಾಸೆಗಳ ಹಾಗರ ಹಂತಾನೆ ಏಳಬಹುದು...ಹೊಟ್ಟಾರೆಯಾಗಿ ನೋಡ್ತು ಹಂದ್ರೆ ಇಂಸಾ ಮಾರ್ಗಗಳು ಹಥವಾ ಅಇಂಸಾ ಮಾರ್ಗಗಳಲ್ಲಿ ಯಾವುದನ್ನು ಹನುಸರಿಸಿದರೆ ಹೊಳ್ಳೇದು ಹನ್ನತಕ್ಕಂಥ ಮಾಯಿತಿ ನಮಗೆ ಹಿಲ್ಲಿ ಸಿಕ್ತಾ ಹಿದೆ...ಸಾವ್ರಜನಿಕರ ಇತಾಸಕ್ತಿಗಳನ್ನ ಮನಸಿನಲ್ಲಿ ಹಿಟ್ಕೊಂಡು ಬಹುಶಃ ನಮಗೆ ಹಿಲ್ಲಿ ವಿವಿಧ ಮಾರ್ಗೋಪಾಯಗಳನ್ನ ತಿಳಿಸಿರುತ್ತಾರೆ. ಕ್ಯಾಮೆರಾಮನ್ ರವೀಶ್ ಕುಗ್ಗೋಡ್ ಜೊತೆ ಸುರೇಶ್, ಟೀವಿ ಮೈನ್"

  ReplyDelete
 3. ತುಂಬಾ ಸಣ್ಣ, ಸಣ್ಣ ಅಕ್ಷರ ಇದೆ. ಜೊತೆಗೆ ಬ್ರೌನ್ ಕಲರ್ ಮೇಲೆ ಕನ್ನಡ ಅಕ್ಷರ ಸರಿಯಾಗಿ ಕಾಣಿಸುತ್ತಿಲ್ಲ
  ಅಕ್ಷರ ದಪ್ಪ ಇದ್ದಿದ್ದರೆ ಓದಬಹುದಾಗಿತ್ತೋ ಏನೋ. ನಾನು ನನ್ನ ಕಣ್ಣನ್ನು ಕಿರುಕಿಸಿಕೊಂಡು ಓದಬೇಕಾಗಿದೆ. ನಾನು ಇದನ್ನ ಕಾಪಿ ಮಾಡಿಕೊಂಡು ನನ್ನ ವರ್ಡ್ ಗೆ ಪೇಸ್ಟ್ ಮಾಡಿಕೊಂಡು ಸೇವ್ ಮಾಡಿಕೊಂಡು ಓದಿಬಿಟ್ಟು ಆಮೇಲೆ ನನ್ನ ಕಾಮೆಂಟ್ಸ್ ಬರೆಯುತ್ತೇನೆ.

  ReplyDelete
 4. haha haha ha ha ... office nalli joragi nagodoo kashta ... pakkadalliroru avra top 10 nalli sersbidtaare amele !!!!

  ReplyDelete
 5. [ವಿಜಯಾ] ಹಿಟ್ ಲಿಸ್ಟು!

  [ಆದಿತ್ಯ ಭೀಮರಾಯರು] ಅಲ್ಲ, ನಿನ್ನ ಮಾತಿನ ಪಕ್ಕ ಇರುವ ಆಶ್ಚರ್ಯಸೂಚಕ ಚಿಹ್ನೆಯ ಮರ್ಮವೇನು?

  [ಗುರುರಾಜ ಕಟ್ಟಿ] ಡ್ಯೂಡ್.. ವಾಟ್ಸಪ್.. ಯೋ..

  [ಸತ್ಯ ಹನಸೋಗೆ] ಕಂಟ್ರೋಲ್ ಮತ್ತು + ಒತ್ತುತ್ತಿರಿ. ಅಕ್ಷರಗಳು, ವೆಬ್ ಪೇಜು, ಮತ್ತೆ ಇನ್ನೂ ಏನೇನು ಬೇಕೋ ಎಲ್ಲವೂ ದೊಡ್ಡದಾಗುತ್ತೆ..

  [ಸುಶೀಲ್ ಸಂದೀಪ್ ಮುರಳಿ] ಹೇನು, ಇಂಗ್ ಯೇಳ್ಬಿಟ್ರಿ!!

  [ಪುಂಬಾ] ಏನು ಮಾಡೋದು? ಎಲ್ಲಾ ಕೊಲವೇರಿ ಡೀ ಮಹಿಮೆ!

  ReplyDelete
 6. ಇದೆಲ್ಲಾ ನೀನು ಬರೀಬೇಕಾದರೆ ನಿನ್ನ ತಲೆ ಎಷ್ಟು ಕೆಟ್ಟು ಹೋಗಿರಬಹುದು ಅಂತ ಅನ್ನಿಸುತ್ತಿದೆ. ನೀನು ಬರೆದಿರುವ ಶೈಲಿ ತುಂಬಾನೇ ಚೆನ್ನಾಗಿದೆ. ಹೀಗೇ ಮುಂದುವರೆಸು. ಆದರೆ ನೀನು ಬರೆದಿರುವುದು ಓದಿ ಶಹಭಾಷ್ ಎಂದು ಹೇಳಿ, ತಮ್ಮ ಕೆಲಸವನ್ನು ಹಾಗೇ ಮುಂದುವರೆಸುತ್ತಾರೆ.
  ಇಲ್ಲಿ ನಾನು ಹೇಳುವುದೇನೆಂದರೆ ಲೋಕೋಭಿನ್ನ ರುಚಿಃ ಅಂತ ಹೇಳಬಹುದು. ಯಾರು ಯಾರಿಗೆ ಏನೇನು ಇಷ್ಟವೋ ಅದನ್ನೇ ಮಾಡುತ್ತಾರೆ. ನಾವುಗಳು ಇದರಲ್ಲಿ ಮೂಗು ತೂರಿಸಿದರೆ ನಮಗೇ ಕಷ್ಟ ಆಗುವುದು. ಯಾರಿಗೆ ಏನೇ ಹೇಳಿದರೂ ಏನು ನಡೆಯಬೇಕೋ ಅದೇ ನಡೆಯುವುದು.

  ReplyDelete
  Replies
  1. ಹೆ ಹ್ಹೆ, ಇದು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವಂತಹ ಆರ್ಟಿಕಲ್ಲೇನಲ್ಲ.. ಸುಮ್ಮನೆ ತಮಾಷೆಗೆ ಅಷ್ಟೆ.

   ಆದರೆ, ಗಂಭೀರವಾಗೇ ತೆಗೆದುಕೊಳ್ಳಬೇಕು ಎಂದರೆ, ಏನು ನಡೆಯುತ್ತೋ ಅದೇ ನಡೆಯುತ್ತೆ ಅಂತ ಹೋರಾಟಗಾರರು ಆ ಕಾಲದಲ್ಲಿ ಸುಮ್ಮನೆ ಕೂತಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯವೂ ಬರುತ್ತಿರಲಿಲ್ಲ. ನಾಗರೀಕರಾಗಿ ನಮ್ಮ ಕರ್ತವ್ಯಗಳಿರುತ್ತವೆ. ಅದನ್ನು ಪಾಲಿಸಬೇಕು. ಎಲ್ಲವನ್ನೂ ವಿಧಿಯ ತಲೆಯ ಮೇಲೆ ಹೊರಿಸುವುದು ಪಲಾಯನವಾದವಷ್ಟೆ? ತಮಗೆ ಇಷ್ಟ ಬಂದ ಹಾಗೆಲ್ಲಾ ಮಾಡುವುದಕ್ಕಾಗಿ ಅಲ್ಲ ಪ್ರಪಂಚ ಇರುವುದು.

   Delete
 7. ಈಗಿನ ಕಾಲದಲ್ಲಿ ಗಂಭೀರವಾಗಿ ತೆಗೆದುಕೊಳ್ಳೋ ಜನಾನೇ ಇಲ್ಲ. ಪ್ರಳಯ ಆದರೇನೆ ಎಲ್ಲಾ ಸರಿ ಹೋಗುತ್ತೆ ಅಂತ ಕಾಣಿಸುತ್ತೆ.

  ReplyDelete
 8. ಹೌದು, ಹೌದು. ಪಕ್ಕದ ಸೀಟಿನವನು ಮೊಬೈಲ್ ಅಲ್ಲಿ ಕೆಟ್ಟ ಹಾಡನ್ನು ಜೋರಾಗಿ ಹಾಕಿಕೊಳ್ಳೋನಿಗೆ, ಕಂಡ ಕಂಡಲ್ಲಿ ಉಗಿಯುವವನಿಗೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವನಿಗೆ ಪ್ರಳಯಕ್ಕಿಂತ ದೊಡ್ಡ ಶಿಕ್ಷೆ ಇಲ್ಲ ಬಿಡಿ.. :-P

  ReplyDelete
 9. "ಹಿಂಸಾ ಹಿ ಪರಮಾ ಗತಿಃ"!

  ReplyDelete
 10. ಹ್ಮ್,ಹ್ಮ್ಮ್, ಹ್ಮ್ಮ್. ನನ್ನ ಕಾಮೆಂಟ್ಸ್ ಇಷ್ಟ ಆಯಿತು ತಾನೆ?

  ReplyDelete