Saturday, October 27, 2012

ಆ ಜ್ಞಾನ!

ಕ್ಲೌಡ್ ಸ್ಟೋರೇಜ್ ಬಗ್ಗೆ ಪಾಠ ಮಾಡುತ್ತಿರುವಾಗ ಮಾತಿಗೆ ಮಾತು ಬಂದು ಮಕ್ಕಳಿಗೆ ನನ್ನಲ್ಲಿದ್ದ ಒಂದು ಹಳೆಯ ಪೆನ್‍ಡ್ರೈವ್‍ ಅನ್ನು ತೋರಿಸಬೇಕಾಯಿತು. ಹಲವು ಕಾರಣಗಳಿಂದ ಈಗಿನ ಬಹುತೇಕ ತಂತ್ರಜ್ಞಾನದ ಉಪಕರಣಗಳು ನನ್ನ (ಹಾಗೂ ನನ್ನಂಥವರ) ಕೈಗೆ ನಿಲುಕದೇ ಇರುವುದು ನಿಜ. ಆದರೆ ಅಂದಿನ ತಂತ್ರಜ್ಞಾನಗಳ ಬಳಕೆಯ ಅನುಭವದ ನೆನಪುಗಳೇ ವಿನೋದಮಯ!

ನಾನು ತೋರಿಸಿದ ಪೆನ್‍ಡ್ರೈವ್‍ನ ನೋಡಿ ಮಕ್ಕಳಿಗೆ ಏನೂ ಅನ್ನಿಸಲಿಲ್ಲ. “ಇದೇನು, ಈ ಮೇಷ್ಟ್ರು ಪೆನ್‍ಡ್ರೈವ್ ತೋರಿಸುತ್ತಿದ್ದಾನೆ, ನಮ್ಮೆಲ್ಲರ ಬಳಿ ಕನಿಷ್ಟ ಐದು ಪೆನ್‍ಡ್ರೈವ್‍ಗಳು, ಇನ್ನೂ ಚೆನ್ನಾಗಿ, ಚಿಕ್ಕಾದಾಗಿರುವಾಗ ಇದರ ಬಗ್ಗೆ ಯಾಕೆ ಆಸಕ್ತಿ ತೋರಿಸಬೇಕು” ಎಂದೆನಿಸಿರಬೇಕು ಅವರಿಗೆ. ನಾನು ಮಾತು ಮುಂದುವರಿಸಿದೆ. “ಈ ಪೆನ್‍ಡ್ರೈವಿನ ಬೆಲೆ ಆರು ಸಾವಿರ ರೂಪಾಯಿ. ಇಂದಿನ 4GB ಪೆನ್‍ಡ್ರೈವಿಗೆ ಸುಮಾರು ಮುನ್ನೂರು ರೂಪಾಯಿ ಆಗಬಹುದು. ಈಗ ಊಹಿಸಿ, ಈ ಪೆನ್‍ಡ್ರೈವಿನ ಕೆಪಾಸಿಟಿ ಎಷ್ಟು ಎಂದು” ಎಂದು ಕೇಳಿದಾಗ ಸ್ವಲ್ಪ ಆಸಕ್ತಿ ಕೆರಳಿತು. 16GB ಇಂದ 1TB ವರೆಗೂ ಉತ್ತರ ಬಂದಿತು ಮಕ್ಕಳಿಂದ. ಆಮೇಲೆ, “ಇದನ್ನು ನಾನು ಖರೀದಿಸಿದ್ದು 2003ರಲ್ಲಿ” ಎಂದು ಹೇಳಿದಾಗಲೂ ಅವರ ಉತ್ತರಗಳೇನೂ ಬದಲಾಗಲಿಲ್ಲ. ಕೊನೆಗೆ ನಾನೇ ಹೇಳಿದೆ, “ಇದು 512MB ಪೆನ್‍ಡ್ರೈವು ಕಣ್ರೋ!” ಎಂದು! ಕೆಲವರಿಗೆ ಆಶ್ಚರ್ಯ, ಮತ್ತೆ ಕೆಲವರಿಗೆ ತಡೆಯಾಲರದ ನಗು!

ವಿಶೇಷವೇನೆಂದರೆ, ಒಂಭತ್ತು ವರ್ಷಗಳಿಂದಲೂ ನಾನು ಬಳಸುತ್ತಿರುವ ಈ 512MB ಪೆನ್‍ಡ್ರೈವ್, ಈಗಲೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈಗ ಮುನ್ನೂರು ರೂಪಾಯಿಗೆ ತರುವ ಪೆನ್‍ಡ್ರೈವ್‍ಗಳು ಮೂರು ನಾಲ್ಕು ತಿಂಗಳು ಜೀವಂತವಾಗಿದ್ದರೆ ಪುಣ್ಯ. 32MB RAM, 4.6GB HDD ಉಪಯೋಗಿಸಿ ಅನುಭವವಿರುವವರು ಈ 512MB ಪೆನ್‍ಡ್ರೈವ್ ಉಪಯೋಗಿಸಲು ಬೇಸರ ಪಟ್ಟುಕೊಳ್ಳಲಾಗುವುದೇ?

ನನಗೆ ಇನ್ನೂ ನೆನಪಿದೆ. ವಿಂಡೋಸ್ 3.11 ಬಳಸುವುದಕ್ಕಿಂತ ವಿಂಡೋಸ್ 95 ಸುಲಭವೆಂದು ನಿರ್ಧರಿಸಿ, 32MB RAM, 4.6GB HDD ಇರುವ ಕಂಪ್ಯೂಟರನ್ನು ಅಕ್ಕನ ಮನೆಯಲ್ಲಿ ಖರೀದಿಸಿದ್ದು – ಬ್ರೌಸಿಂಗ್ ಸೆಂಟರುಗಳಲ್ಲಿ ಲೆಕ್ಕವಿಲ್ಲದಷ್ಟು ಫ್ಲಾಪಿ ಡಿಸ್ಕುಗಳನ್ನು (ಒಂದಕ್ಕೆ ಇಪ್ಪತ್ತು ರೂಪಾಯಿಯಂತೆ) ಖರೀದಿಸಿ, ನನ್ನ ನೆಚ್ಚಿನ ವಿಜ್ಞಾನಿಗಳ, ಸಿನಿಮಾ ತಾರೆಯರ, ಪ್ರಾಣಿ ಪಕ್ಷಿಗಳ ಚಿತ್ರಗಳನ್ನು “ಡೌನ್‍ಲೋಡ್” ಮಾಡಿಕೊಂಡು ಬಂದು ಈ ಕಂಪ್ಯೂಟರಿನಲ್ಲಿ ಕಾಪಿ ಮಾಡುತ್ತಿದ್ದುದು – ಪ್ಯಾರನಾಯ್ಡ್, ಡೇವ್, ಕ್ವೇಕ್ ಮುಂತಾದ ಡಾಸ್ ಗೇಮುಗಳನ್ನು ಗಂಟೆಗಟ್ಟಲೆ ಆಡುತ್ತಿದ್ದುದು – ಹತ್ತು ಫ್ಲಾಪಿಗಳನ್ನು ಖರ್ಚು ಮಾಡಿ ಹತ್ತು ಹಾಡುಗಳನ್ನು (MP3) ಕಂಪ್ಯೂಟರಿಗೆ ಕಾಪಿ ಮಾಡಿದ್ದು – ಆ ಹಾಡುಗಳು ಒಂದೇ ಸಮನೆ ಪ್ಲೇ ಆಗದೆ, ಮಧ್ಯೇ ಮಧ್ಯೇ ಕಟ್ ಆಗುತ್ತಿದ್ದುದು – ಇವೆಲ್ಲಾ ಮರೆಯಲು ಸಾಧ್ಯವೇ?

ವಿಂಡೋಸ್ 98 ಬಂದ ಕಾಲಕ್ಕೆ ನಾನು ಕಾಲೇಜಿನಲ್ಲಿದ್ದೆ. ಅದನ್ನು ಇನ್ಸ್ಟಾಲ್ ಮಾಡುವುದೇ ಒಂದು ಮೋಜಿನ ಕೆಲಸವಾಗಿತ್ತು. ಒಂದೊಂದು ಹೊಸ ಫ್ಲಾಪಿಯನ್ನು ಹಾಕಿದಾಗಲೂ ರೀಸ್ಟಾರ್ಟ್ ಮಾಡುತ್ತಿದ್ದ ಕಂಪ್ಯೂಟರನ್ನು ಅದೆಷ್ಟು ಶಪಿಸಿದ್ದೇನೋ ಏನೋ. ಆಗ ಸಾಮಾನ್ಯವಾಗಿ ಎಲ್ಲರೂ 128MB RAM ಇಟ್ಟುಕೊಂಡಿರುತ್ತಿದ್ದರು. ನನ್ನ ಕಂಪ್ಯೂಟರಿನಲ್ಲಿ 256MB ಇದ್ದುದೇ ದೊಡ್ಡ ಸಾಧನೆ. ನನ್ನ ಕಂಪ್ಯೂಟರು ಸೂಪರ್ ಫಾಸ್ಟ್ ಆಗಿತ್ತು! ಆದರೂ ಇದ್ದಕ್ಕಿದ್ದ ಹಾಗೆ ನೇಣು ಹಾಕಿಕೊಳ್ಳುತ್ತಿತ್ತು – ಕಾರಣ ಯಾರಿಗೆ ಗೊತ್ತು ಎಂಬುದು ನನಗೆ ಇನ್ನೂ ತಿಳಿದಿಲ್ಲ.

ಪದವಿ ಕಾಲೇಜಿನ ವೇಳೆಗೆ ವಿಂಡೋಸ್ 98 ಅನ್ನು ಸುಮಾರು ಇನ್ನೂರೈವತ್ತು ಬಾರಿ ಇನ್‍ಸ್ಟಾಲ್ ಮಾಡಿ ಅನುಭವವಿತ್ತು. ನನ್ನ ರೆಸ್ಯೂಮೆಗೆ ಒಳ್ಳೇ ಮಾಹಿತಿಯಾಗುತ್ತಿತ್ತೇನೋ. ಹಾಗೇ ವಿಂಡೋಸ್ 2000 ಎಲ್ಲೋ ಸಿಕ್ಕಿತು – ಅದರ ಅನುಭವವಾಯಿತು. ಗೆಳೆಯನ ಮನೆಯಲ್ಲಿ ವಿಂಡೋಸ್ NT ಬಳಸಿದ್ದ ನನಗಂತೂ ವಿಂಡೋಸ್ 2000 ಅದೆಷ್ಟು ಸೊಗಸೆನಿಸಿತು. ಕಾಲೇಜಿನ ಪ್ರಾಜೆಕ್ಟು ಮಾಡುವಾಗ ನನಗೆ ಸಹಾಯ ಮಾಡಿದ್ದು ಇದೇ ಆಪರೇಟಿಂಗ್ ಸಿಸ್ಟಮ್ಮು! 20GB HDD ಇರುವಾಗ ಏನು ತಾನೆ ಭಯ! “ಅಯ್ಯೋ ಅಯ್ಯೋ! 20GB ಹಾರ್ಡ್ ಡಿಸ್ಕಿನಲ್ಲಿ ಏನೆಲ್ಲಾ ತುಂಬಿಕೊಳ್ಳಬಹುದು!” ಎಂದು ಎಲ್ಲರೂ ಹೇಳುತ್ತಿದ್ದರು.

ಆಗ ಪ್ರಾಜೆಕ್ಟನ್ನೂ ಸಹ ಫ್ಲಾಪಿಯಲ್ಲಿಯೇ ಉಳಿಸಿಕೊಳ್ಳುತ್ತಿದ್ದುದು. CDಗಳು ಇದ್ದವಾದರೂ ನಮ್ಮ ಕೈಗೆಟುಕುವಂತಿರಲಿಲ್ಲ. ಮತ್ತು, CD Writing ವ್ಯಾಪಾರವನ್ನೂ ಸಹ ಎಲ್ಲೋ ಕೆಲವು ಕಡೆ ಮಾಡುತ್ತಿದ್ದರು. ವಿದ್ಯಾಪೀಠದ ಬಳಿ ಒಂದು ಅಂಗಡಿಯಲ್ಲಿ ಒಮ್ಮೆ ಒಂದು CD Burn ಮಾಡಿಸಿದ್ದೆ – ನೂರೈವತ್ತು ಹಾಡುಗಳು – ಅದಕ್ಕೆ ನೂರೈವತ್ತು ರೂಪಾಯಿಯನ್ನು ಕಿತ್ತಿದ್ದ ಆ ಅಂಗಡಿಯವನು. “ನೀವೇ ಸಿ.ಡಿ. ತಂದುಕೊಟ್ಟರೆ ನೂರು ರೂಪಾಯಿ ಅಷ್ಟೇ” ಎಂದು ಡಿಸ್ಕೌಂಟ್ ಆಫರ್ ಬೇರೆ ಕೊಟ್ಟಿದ್ದ ನನಗೆ. ನಾನೆಲ್ಲಿ ಸಿ.ಡಿ. ಹುಡುಕಿಕೊಂಡು ಹೋಗಲಿ ಎಂದು ಐವತ್ತು ರೂಪಾಯಿ ಹೆಚ್ಚಿಗೇನೇ ಕೊಟ್ಟಿದ್ದೆ!

ಇನ್ನು ಬ್ರೌಸಿಂಗ್ ಸೆಂಟರುಗಳ ಕಥೆ ಬಹಳ ಸೊಗಸಾಗಿದೆ. ದೊಡ್ಡ ದೊಡ್ಡ ಬ್ಯಾನರುಗಳನ್ನು ಹಾಕಿಕೊಳ್ಳುತ್ತಿದ್ದರು “High Speed Internet @ 64 Kbps” ಎಂದು! ಒಳಗೆ ಎಂಟು ಕಂಪ್ಯೂಟರುಗಳಿಗೂ ಹೆಚ್ಚಿರುತ್ತಿದ್ದವು. ಎಲ್ಲವೂ ನೆಟ್‍ವರ್ಕ್ ಆಗಿರುತ್ತಿದ್ದವಾದ್ದರಿಂದ “ಹೈ ಸ್ಪೀಡ್” ಇಂಟರ್ನೆಟ್ಟು ಕೂಡ ಹಂಚಿ ಹೋಗುತ್ತಿತ್ತು! ಶಾಲೆಯಲ್ಲಿ ಮಕ್ಕಳು “ಸರ್, ಇಂಟರ್ನೆಟ್ಟು ತುಂಬಾ ಸ್ಲೋ ಆಗಿದೆ” ಎಂದು ಬೇಸರ ಪಟ್ಟುಕೊಂಡು ಹೇಳುವಾಗ ನಾನು ಅವರಿಗೆ ಈ ಕಥೆ ಹೇಳಲು ಭಯವಾಗುತ್ತೆ. ಕ್ಲಿಕ್ ಮಾಡಿ ಹತ್ತು ಸೆಕೆಂಡ್ ಕಾಯಬೇಕಲ್ಲ – ಮನೆಯಲ್ಲಿ ಒಂದು ಸೆಕೆಂಡಿನೊಳಗೇ ವೆಬ್‍ಪೇಜು ತೆರೆದುಕೊಳ್ಳುತ್ತೆ!

ನಮಗೆ ಆಗಿನ್ನೂ Gmail ಬಂದಿರಲಿಲ್ಲ;  Facebookನ ಕಲ್ಪನೆಯೂ ಇರಲಿಲ್ಲ. ಬ್ರೌಸಿಂಗ್ ಸೆಂಟರಿನಲ್ಲಿ ಒಂದು ಘಂಟೆ ಕಾಲ ಇದ್ದರೆ ಅಲ್ಲಿ ನಾನು ನೋಡುತ್ತಿದ್ದುದು ಯಾಹೂ ವೆಬ್‍ಸೈಟು, ಮೇಯ್ಲು, ಮತ್ತು ಫೋಟೋಗಳು. TOI ಪತ್ರಿಕೆಯಲ್ಲಿ Yahoo! Search v/s Indiatimes Search ಎಂಬ ಲೇಖನವನ್ನೋದಿದ ನೆನಪಿದೆ ನನಗೆ. ಆದರೂ ಆಗಿನಿಂದಲೂ ಹುಡುಕಾಟಕ್ಕೆ ಗೂಗಲ್ಲೇ ಸರಿ! ಈ ಬ್ರೌಸಿಂಗ್ ಸೆಂಟರುಗಳಲ್ಲೇ ಫ್ಲಾಪಿಗಳನ್ನೂ ಮಾರಾಟ ಮಾಡುತ್ತಿದ್ದರಾದ್ದರಿಂದ ಫೋಟೋಗಳನ್ನು ಸೇವ್ ಮಾಡಿಕೊಂಡು ಮನೆಗೆ ಬಂದು ಮನೆಯ ಕಂಪ್ಯೂಟರಿನಲ್ಲಿ ಕಾಪಿ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿತ್ತು. ಆ ಫ್ಲಾಪಿಗಳನ್ನು “Write Protect” ಮಾಡುವುದೇ ಒಂದು ದೊಡ್ಡ ವಿಷಯವಾಗಿತ್ತು ಆಗ.

ಸ್ವಲ್ಪ ದಿನಗಳಾದ ಮೇಲೆ, ಥ್ಯಾಂಕ್ಸ್ ಟು ಶರತ್, ಯಾವಾಗ ಹಾರ್ಡ್ ಡಿಸ್ಕನ್ನು ತೆಗೆದು ಬೇರೆ ಕಂಪ್ಯೂಟರಿಗೆ ಜೋಡಿಸಲು ಕಲಿತೆನೋ, ಆಗಿನಿಂದ ನನ್ನ ಕಂಪ್ಯೂಟರಿನ ಡಬ್ಬವನ್ನು ಮುಚ್ಚುತ್ತಲೇ ಇರಲಿಲ್ಲ. ಆಗ ಬೇರೆ ಯಾವ ಪೋರ್ಟಬಲ್ ಸ್ಟೋರೇಜ್ ಉಪಕರಣಗಳನ್ನೂ ಬಳಸುತ್ತಿರಲಿಲ್ಲ. ಹಾರ್ಡ್ ಡಿಸ್ಕನ್ನೇ ತೆಗೆದುಕೊಂಡು ಓಡಾಡುತ್ತಿದ್ದರಿಂದ, ಅದಕ್ಕೆ ಫಿಕ್ಸೆಡ್ ಹಾರ್ಡ್ ಡಿಸ್ಕ್ ಎಂಬ ಹೆಸರಿದ್ದರೂ ನನ್ನ ಪಾಲಿಗೆ ಅದು ಪೋರ್ಟಬಲ್ ಹಾರ್ಡ್ ಡಿಸ್ಕೇ ಆಗಿತ್ತು. ಯಜಮಾನ – ಗುಲಾಮ ಎಂದೇ ಹಾಸ್ಯ ಮಾಡುತ್ತಿದ್ದೆ ಮಾಸ್ಟರ್ – ಸ್ಲೇವ್ ಹಾರ್ಡ್ ಡಿಸ್ಕುಗಳನ್ನಾಗಿಸಿ! ಶರತ್ ದೆಸೆಯಿಂದಲೇ ವಿಂಡೋಸ್ XPಯ ಪರಿಚಯವೂ ಆಯಿತು. ರೀಸ್ಟಾರ್ಟುಗಳು ಅಷ್ಟಾಗಿ ಇಲ್ಲ ಇದರಲ್ಲಿ ಎಂದು ಅವನು ಹೇಳಿದ್ದನ್ನು ಕೇಳಿ ನಾನು XP ಅಭಿಮಾನಿಯಾದರೂ ಅವನೇ ತೋರಿಸಿಕೊಟ್ಟ ಲಿನಕ್ಸ್ ಮೇಲೆ ವ್ಯಾಮೋಹ ಹುಟ್ಟಿತು. ಉಳಿದಿದ್ದೆಲ್ಲವೂ ಹಿಸ್ಟರಿ! (ಅಥವಾ ಇಷ್ಟು ಹೊತ್ತು ನಾನು ಹೇಳಿದ್ದು ಹಿಸ್ಟರಿ!)

ಇಂದು ನಮ್ಮ ಶಾಲೆಯ ಕಂಪ್ಯೂಟರ್ ಲ್ಯಾಬಿನಲ್ಲಿ ನಾನು ಉಪಯೋಗಿಸುತ್ತಿರುವ Promethean Whiteboard ಅನ್ನು ಆಗ ಊಹಿಸಲು ಸಹ ಆಗುತ್ತಿತ್ತೇ? ನ್ಯಾಷನಲ್ ಕಾಲೇಜಿನ ಲ್ಯಾಬಿನಲ್ಲಿದ್ದ ಕಂಪ್ಯೂಟರ್ ಮೌಸುಗಳ ಗುಂಡುಗಳು ವಾರಕ್ಕೊಮ್ಮೆ ಮಾಯವಾಗುತ್ತಿದ್ದವು! ಅವುಗಳನ್ನು ಕದಿಯುವ ಕ್ಲೆಪ್ಟೋಮೇನಿಯಾಕುಗಳೂ ಇದ್ದರು ಆ ಕಾಲದಲ್ಲಿ! ಬಹುಶಃ ಇನ್ನು ಹತ್ತು ವರ್ಷವಾದಮೇಲೆ, ಇಂದು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಪ್ರೊಮೀಥಿಯನ್ ವೈಟ್‍ಬೋರ್ಡಿನ ಬಗ್ಗೆ ನಾನೇ ಹಾಸ್ಯ ಮಾಡಬಹುದೇನೋ ಏನೋ!

ಇಂದಿಗೇನೋ ನಾವು ಬಳಸುತ್ತಿರುವುದು ಅತ್ಯಾಧುನಿಕ ತಂತ್ರಜ್ಞಾನ – ನಾಳೆಗೆ ಹಳಸು!

-ಅ

27.10.2012

3.30PM

(ಇದರ ಶೀರ್ಷಿಕೆಯ ಸ್ಫೂರ್ತಿ ಈಜ್ಞಾನ ಎಂಬುದನ್ನು ಬೇರೆ ಹೇಳಬೇಕಿಲ್ಲ)

Monday, October 22, 2012

ಬರೆಯಲು ಆಗುವುದೇ?

ಅನೇಕ ವಿಷಯಗಳಿದ್ದವು ಬರೆದುಕೊಳ್ಳಲು – ಹಂಚಿಕೊಳ್ಳಲು. ಒಂದೂ ಆಗಿಲ್ಲ. ಮೊನ್ನೆ ಪ್ರಜಾವಾಣಿಯಲ್ಲಿ ಕ್ಷಿತಿಜದೆಡೆಗೆ ಬ್ಲಾಗಿನ ರಿವ್ಯೂ ಕೂಡ ಬರೆದಿದ್ದಾರೆ. ಅದನ್ನು ಓದಿದ ಮೇಲಂತೂ ಭಯವು ಹೆಚ್ಚೇ ಆಗಿದೆ. ಏಕೆಂದು ಇಲ್ಲಿ ಹೇಳುವ ಸಾಹಸ ಮಾಡಲಾರೆ.

ಅನೇಕ ವಿಷಯಗಳಿದ್ದವು ಎಂದೆನೆಲ್ಲಾ ಆಗಲೇ, ಅದರ ಪಟ್ಟಿಯನ್ನು ಸಹ ಮಾಡಿಕೊಂಡಿದ್ದೇನೆ. ನಾನು ಏನೇನು ಬರೆದುಕೊಳ್ಳಲಿಲ್ಲ, ಏನೇನು ಬರೆಯಬೇಕಾಗಿತ್ತು ಎಂದು ನನಗನ್ನಿಸಿದ್ದಷ್ಟನ್ನೂ! ಆ ಪಟ್ಟಿಯನ್ನು ನೋಡಿ ನೋಡಿ ಮತ್ತೆ ಮತ್ತೆ ಗಾಬರಿಗೊಳ್ಳುವುದು ಉಚಿತವಲ್ಲವೆಂದು, ಇದೇ ನೆಪವೆಂದು ಇದನ್ನು ಪೋಸ್ಟಿಸುತ್ತಿದ್ದೇನೆ.

ಸೊಗಸಾದ ಪುಸ್ತಕಗಳನ್ನೋದಿದೆ – ಮೆಲೂಹಾ, ನಾಗಾಸ್, ಮಹಾಸಂಪರ್ಕ, ಹೋರಾಟದ ಹಾದಿ, ಈಟ್ಸ್ ಶೂಟ್ಸ್ ಎಂಡ್ ಲೀವ್ಸ್, ದಿ ಲಾಸ್ಟ್ ಲೆಕ್ಚರ್, ದಿ ಕೃಷ್ಣ ಕೀ, ವೇಯ್ಟಿಂಗ್ ಫಾರ್ ದಿ ಮಹಾತ್ಮಾ, ಯುಗಾಂತ, ಶ್ರೀ ಕೃಷ್ಣಾವತಾರದ ಕೊನೆಯ ದಿನಗಳು, ದೂರ ಸರಿದರು – ಯಾವುದರ ಬಗ್ಗೆಯೂ ಬರೆಯಲಿಲ್ಲ. ಓದುವಾಗ ಅನ್ನಿಸುತ್ತಿತ್ತು ಬರೆಯಬೇಕೆಂದು.

ಜ್ಯೋತ್ಸ್ನಾ ಹುಟ್ಟಿದ್ದು, ಜಯಂತಿ ಮೇಡಂ ನಿವೃತ್ತರಾಗಿದ್ದು, ರಾಜೇಶ್ ಖನ್ನಾ ನಿಧನರಾಗಿದ್ದು, ರಾಹುಲ್ ದ್ರಾವಿಡ್‍ ಕ್ರಿಕೆಟ್ ಆಡಲು ವಿದಾಯ ಹೇಳಿದ್ದಂದೇ ನಾನು ಕ್ರಿಕೆಟ್ ನೋಡಲು ವಿದಾಯ ಹೇಳಿದ್ದು, ಮೊದಲ ಬಾರಿಗೆ ನಾನೇ ಕಾರನ್ನೋಡಿಸಿಕೊಂಡು ದೂರ ಪ್ರಯಾಣ ಮಾಡಿದ್ದು, ಉನ್ನತ ಶಿಕ್ಷಣಕ್ಕೆ ಹೆಜ್ಜೆಯಿಟ್ಟಿದ್ದು, ವಿಂಡೋಸ್ 8 ಅನ್ನು ಬಳಸುತ್ತಿರುವುದು, ಕರೋಕೆಯೊಂದಿಗೆ ಹಾಡಿಕೊಳ್ಳುವ ಹೊಸ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಶಾಲೆಯ ಮಿತ್ರ - ಪೇಯಿಂಟರ್ ಪ್ರಕಾಶರ ಕವನಗಳನ್ನು ಸವಿಯುತ್ತಿರುವುದು, ಕುಂದನ್ನಿನ ಡಿಜ಼ೈನುಗಳನ್ನು ರೇಖಾ ಹೊಸ ಪ್ರವೃತ್ತಿಯಾಗಿಸಿಕೊಂಡಿದ್ದು, ಬಹಳ ದಿನಗಳಿಂದ ಚಾರಣ ಮಾಡದೇ ಇರುವುದು, ಎಲ್ಲಕ್ಕಿಂತಲೂ ಮಿಗಿಲಾಗಿ – ಬಸವನಗುಡಿಗೆ ಬೈ ಬೈ ಹೇಳಿ ಕೋಣನಕುಂಟೆಗೆ ಬಂದು ನೆಲೆಸಿದ್ದು – ಇವೆಲ್ಲಾ ಬರೆಯಬೇಕೆಂಬ ಪಟ್ಟಿಯಲ್ಲಿದೆ ಅಷ್ಟೇ.

ಜಯಂತಿ ಮೇಡಂ ಬಗ್ಗೆ ಶುರು ಮಾಡಿದವನು ಹಾಗೇ ಡ್ರಾಫ್ಟಿನಲ್ಲೇ ಉಳಿಸಿಕೊಂಡು ಕುಳಿತಿದ್ದೇನೆ. ಆಗೊಂದು ಈಗೊಂದು ಕವನವನ್ನು ಬರೆದಿದ್ದೇನೋ ನಿಜ. ಅದಕ್ಕೆ ಕಾರಣ – “ಕವನ ನೆನಪಿಗೆ ಸುಲಭ – ಮಂಕುತಿಮ್ಮ”. ಅಲ್ಲದೆ, ಕವನ ಬರೆಯಲೂ ಸುಲಭ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಬೇಕಾದರೂ ಬರೆಯಬಹುದು – ಮೊಬೈಲಿನಲ್ಲೇ. Of course, ಕೈ ಬರಹ ತಪ್ಪಿ ಹೋಗಿ ಯಾವ ಕಾಲವಾಯಿತೋ ಏನೋ. ನಾನು ಬರೆಯುವ ಕನ್ನಡ ಅಕ್ಷರಗಳು ತೆಲುಗಿನ ಅಕ್ಷರಗಳಂತಿರುತ್ತವೆಂದು ನನ್ನ ಮಿತ್ರ ಸುಬ್ರಮಣ್ಯ ಹಾಸ್ಯ ಮಾಡುತ್ತಿರುತ್ತಾರೆ.

ಇನ್ನು ಕ್ಷಿತಿಜದೆಡೆಗೆ-ಗೆ ಬಂದರೆ, ಈ ಇಡೀ ವರ್ಷದಲ್ಲಿ ಒಂದೇ ಒಂದು ಪೋಸ್ಟನ್ನು ಮಾಡಿರುವುದು! ಚಾರಣವು ಕಡಿಮೆಯಾದಂತೆ ಅಧ್ಯಯನವೂ ಕಡಿಮೆಯಾದಂತಿದೆ. ಅಧ್ಯಯನವು ಕಡಿಮೆಯಾದರೆ ಬರೆಯುವುದಾದರೂ ಏನನ್ನು? ಹೀಗೆ – ಏನೂ ಬರೆದಿಲ್ಲ ಎಂದು ಬರೆಯಬೇಕಷ್ಟೆ. ಆದರೂ, ಥ್ಯಾಂಕ್ಸ್ ಟು ಪ್ರಜಾವಾಣಿ, “ಓದಯ್ಯಾ ಇನ್ನೂ! ಹಾಗೇ ಇನ್ನೂ ಇಂಪ್ರೂವ್ ಮಾಡ್ಕೊ ಬರೆಯೋದನ್ನು” ಎಂದು ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿದ್ದಕ್ಕೆ.

ಇವತ್ತಿಗೆ ಮೂವತ್ತಾಯಿತು ನನಗೆ. ಇನ್ನೆಷ್ಟಿದೆಯೋ ಗೊತ್ತಿಲ್ಲ.

-ಅ

22.10.2012

6.15PM