Saturday, October 27, 2012

ಆ ಜ್ಞಾನ!

ಕ್ಲೌಡ್ ಸ್ಟೋರೇಜ್ ಬಗ್ಗೆ ಪಾಠ ಮಾಡುತ್ತಿರುವಾಗ ಮಾತಿಗೆ ಮಾತು ಬಂದು ಮಕ್ಕಳಿಗೆ ನನ್ನಲ್ಲಿದ್ದ ಒಂದು ಹಳೆಯ ಪೆನ್‍ಡ್ರೈವ್‍ ಅನ್ನು ತೋರಿಸಬೇಕಾಯಿತು. ಹಲವು ಕಾರಣಗಳಿಂದ ಈಗಿನ ಬಹುತೇಕ ತಂತ್ರಜ್ಞಾನದ ಉಪಕರಣಗಳು ನನ್ನ (ಹಾಗೂ ನನ್ನಂಥವರ) ಕೈಗೆ ನಿಲುಕದೇ ಇರುವುದು ನಿಜ. ಆದರೆ ಅಂದಿನ ತಂತ್ರಜ್ಞಾನಗಳ ಬಳಕೆಯ ಅನುಭವದ ನೆನಪುಗಳೇ ವಿನೋದಮಯ!

ನಾನು ತೋರಿಸಿದ ಪೆನ್‍ಡ್ರೈವ್‍ನ ನೋಡಿ ಮಕ್ಕಳಿಗೆ ಏನೂ ಅನ್ನಿಸಲಿಲ್ಲ. “ಇದೇನು, ಈ ಮೇಷ್ಟ್ರು ಪೆನ್‍ಡ್ರೈವ್ ತೋರಿಸುತ್ತಿದ್ದಾನೆ, ನಮ್ಮೆಲ್ಲರ ಬಳಿ ಕನಿಷ್ಟ ಐದು ಪೆನ್‍ಡ್ರೈವ್‍ಗಳು, ಇನ್ನೂ ಚೆನ್ನಾಗಿ, ಚಿಕ್ಕಾದಾಗಿರುವಾಗ ಇದರ ಬಗ್ಗೆ ಯಾಕೆ ಆಸಕ್ತಿ ತೋರಿಸಬೇಕು” ಎಂದೆನಿಸಿರಬೇಕು ಅವರಿಗೆ. ನಾನು ಮಾತು ಮುಂದುವರಿಸಿದೆ. “ಈ ಪೆನ್‍ಡ್ರೈವಿನ ಬೆಲೆ ಆರು ಸಾವಿರ ರೂಪಾಯಿ. ಇಂದಿನ 4GB ಪೆನ್‍ಡ್ರೈವಿಗೆ ಸುಮಾರು ಮುನ್ನೂರು ರೂಪಾಯಿ ಆಗಬಹುದು. ಈಗ ಊಹಿಸಿ, ಈ ಪೆನ್‍ಡ್ರೈವಿನ ಕೆಪಾಸಿಟಿ ಎಷ್ಟು ಎಂದು” ಎಂದು ಕೇಳಿದಾಗ ಸ್ವಲ್ಪ ಆಸಕ್ತಿ ಕೆರಳಿತು. 16GB ಇಂದ 1TB ವರೆಗೂ ಉತ್ತರ ಬಂದಿತು ಮಕ್ಕಳಿಂದ. ಆಮೇಲೆ, “ಇದನ್ನು ನಾನು ಖರೀದಿಸಿದ್ದು 2003ರಲ್ಲಿ” ಎಂದು ಹೇಳಿದಾಗಲೂ ಅವರ ಉತ್ತರಗಳೇನೂ ಬದಲಾಗಲಿಲ್ಲ. ಕೊನೆಗೆ ನಾನೇ ಹೇಳಿದೆ, “ಇದು 512MB ಪೆನ್‍ಡ್ರೈವು ಕಣ್ರೋ!” ಎಂದು! ಕೆಲವರಿಗೆ ಆಶ್ಚರ್ಯ, ಮತ್ತೆ ಕೆಲವರಿಗೆ ತಡೆಯಾಲರದ ನಗು!

ವಿಶೇಷವೇನೆಂದರೆ, ಒಂಭತ್ತು ವರ್ಷಗಳಿಂದಲೂ ನಾನು ಬಳಸುತ್ತಿರುವ ಈ 512MB ಪೆನ್‍ಡ್ರೈವ್, ಈಗಲೂ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈಗ ಮುನ್ನೂರು ರೂಪಾಯಿಗೆ ತರುವ ಪೆನ್‍ಡ್ರೈವ್‍ಗಳು ಮೂರು ನಾಲ್ಕು ತಿಂಗಳು ಜೀವಂತವಾಗಿದ್ದರೆ ಪುಣ್ಯ. 32MB RAM, 4.6GB HDD ಉಪಯೋಗಿಸಿ ಅನುಭವವಿರುವವರು ಈ 512MB ಪೆನ್‍ಡ್ರೈವ್ ಉಪಯೋಗಿಸಲು ಬೇಸರ ಪಟ್ಟುಕೊಳ್ಳಲಾಗುವುದೇ?

ನನಗೆ ಇನ್ನೂ ನೆನಪಿದೆ. ವಿಂಡೋಸ್ 3.11 ಬಳಸುವುದಕ್ಕಿಂತ ವಿಂಡೋಸ್ 95 ಸುಲಭವೆಂದು ನಿರ್ಧರಿಸಿ, 32MB RAM, 4.6GB HDD ಇರುವ ಕಂಪ್ಯೂಟರನ್ನು ಅಕ್ಕನ ಮನೆಯಲ್ಲಿ ಖರೀದಿಸಿದ್ದು – ಬ್ರೌಸಿಂಗ್ ಸೆಂಟರುಗಳಲ್ಲಿ ಲೆಕ್ಕವಿಲ್ಲದಷ್ಟು ಫ್ಲಾಪಿ ಡಿಸ್ಕುಗಳನ್ನು (ಒಂದಕ್ಕೆ ಇಪ್ಪತ್ತು ರೂಪಾಯಿಯಂತೆ) ಖರೀದಿಸಿ, ನನ್ನ ನೆಚ್ಚಿನ ವಿಜ್ಞಾನಿಗಳ, ಸಿನಿಮಾ ತಾರೆಯರ, ಪ್ರಾಣಿ ಪಕ್ಷಿಗಳ ಚಿತ್ರಗಳನ್ನು “ಡೌನ್‍ಲೋಡ್” ಮಾಡಿಕೊಂಡು ಬಂದು ಈ ಕಂಪ್ಯೂಟರಿನಲ್ಲಿ ಕಾಪಿ ಮಾಡುತ್ತಿದ್ದುದು – ಪ್ಯಾರನಾಯ್ಡ್, ಡೇವ್, ಕ್ವೇಕ್ ಮುಂತಾದ ಡಾಸ್ ಗೇಮುಗಳನ್ನು ಗಂಟೆಗಟ್ಟಲೆ ಆಡುತ್ತಿದ್ದುದು – ಹತ್ತು ಫ್ಲಾಪಿಗಳನ್ನು ಖರ್ಚು ಮಾಡಿ ಹತ್ತು ಹಾಡುಗಳನ್ನು (MP3) ಕಂಪ್ಯೂಟರಿಗೆ ಕಾಪಿ ಮಾಡಿದ್ದು – ಆ ಹಾಡುಗಳು ಒಂದೇ ಸಮನೆ ಪ್ಲೇ ಆಗದೆ, ಮಧ್ಯೇ ಮಧ್ಯೇ ಕಟ್ ಆಗುತ್ತಿದ್ದುದು – ಇವೆಲ್ಲಾ ಮರೆಯಲು ಸಾಧ್ಯವೇ?

ವಿಂಡೋಸ್ 98 ಬಂದ ಕಾಲಕ್ಕೆ ನಾನು ಕಾಲೇಜಿನಲ್ಲಿದ್ದೆ. ಅದನ್ನು ಇನ್ಸ್ಟಾಲ್ ಮಾಡುವುದೇ ಒಂದು ಮೋಜಿನ ಕೆಲಸವಾಗಿತ್ತು. ಒಂದೊಂದು ಹೊಸ ಫ್ಲಾಪಿಯನ್ನು ಹಾಕಿದಾಗಲೂ ರೀಸ್ಟಾರ್ಟ್ ಮಾಡುತ್ತಿದ್ದ ಕಂಪ್ಯೂಟರನ್ನು ಅದೆಷ್ಟು ಶಪಿಸಿದ್ದೇನೋ ಏನೋ. ಆಗ ಸಾಮಾನ್ಯವಾಗಿ ಎಲ್ಲರೂ 128MB RAM ಇಟ್ಟುಕೊಂಡಿರುತ್ತಿದ್ದರು. ನನ್ನ ಕಂಪ್ಯೂಟರಿನಲ್ಲಿ 256MB ಇದ್ದುದೇ ದೊಡ್ಡ ಸಾಧನೆ. ನನ್ನ ಕಂಪ್ಯೂಟರು ಸೂಪರ್ ಫಾಸ್ಟ್ ಆಗಿತ್ತು! ಆದರೂ ಇದ್ದಕ್ಕಿದ್ದ ಹಾಗೆ ನೇಣು ಹಾಕಿಕೊಳ್ಳುತ್ತಿತ್ತು – ಕಾರಣ ಯಾರಿಗೆ ಗೊತ್ತು ಎಂಬುದು ನನಗೆ ಇನ್ನೂ ತಿಳಿದಿಲ್ಲ.

ಪದವಿ ಕಾಲೇಜಿನ ವೇಳೆಗೆ ವಿಂಡೋಸ್ 98 ಅನ್ನು ಸುಮಾರು ಇನ್ನೂರೈವತ್ತು ಬಾರಿ ಇನ್‍ಸ್ಟಾಲ್ ಮಾಡಿ ಅನುಭವವಿತ್ತು. ನನ್ನ ರೆಸ್ಯೂಮೆಗೆ ಒಳ್ಳೇ ಮಾಹಿತಿಯಾಗುತ್ತಿತ್ತೇನೋ. ಹಾಗೇ ವಿಂಡೋಸ್ 2000 ಎಲ್ಲೋ ಸಿಕ್ಕಿತು – ಅದರ ಅನುಭವವಾಯಿತು. ಗೆಳೆಯನ ಮನೆಯಲ್ಲಿ ವಿಂಡೋಸ್ NT ಬಳಸಿದ್ದ ನನಗಂತೂ ವಿಂಡೋಸ್ 2000 ಅದೆಷ್ಟು ಸೊಗಸೆನಿಸಿತು. ಕಾಲೇಜಿನ ಪ್ರಾಜೆಕ್ಟು ಮಾಡುವಾಗ ನನಗೆ ಸಹಾಯ ಮಾಡಿದ್ದು ಇದೇ ಆಪರೇಟಿಂಗ್ ಸಿಸ್ಟಮ್ಮು! 20GB HDD ಇರುವಾಗ ಏನು ತಾನೆ ಭಯ! “ಅಯ್ಯೋ ಅಯ್ಯೋ! 20GB ಹಾರ್ಡ್ ಡಿಸ್ಕಿನಲ್ಲಿ ಏನೆಲ್ಲಾ ತುಂಬಿಕೊಳ್ಳಬಹುದು!” ಎಂದು ಎಲ್ಲರೂ ಹೇಳುತ್ತಿದ್ದರು.

ಆಗ ಪ್ರಾಜೆಕ್ಟನ್ನೂ ಸಹ ಫ್ಲಾಪಿಯಲ್ಲಿಯೇ ಉಳಿಸಿಕೊಳ್ಳುತ್ತಿದ್ದುದು. CDಗಳು ಇದ್ದವಾದರೂ ನಮ್ಮ ಕೈಗೆಟುಕುವಂತಿರಲಿಲ್ಲ. ಮತ್ತು, CD Writing ವ್ಯಾಪಾರವನ್ನೂ ಸಹ ಎಲ್ಲೋ ಕೆಲವು ಕಡೆ ಮಾಡುತ್ತಿದ್ದರು. ವಿದ್ಯಾಪೀಠದ ಬಳಿ ಒಂದು ಅಂಗಡಿಯಲ್ಲಿ ಒಮ್ಮೆ ಒಂದು CD Burn ಮಾಡಿಸಿದ್ದೆ – ನೂರೈವತ್ತು ಹಾಡುಗಳು – ಅದಕ್ಕೆ ನೂರೈವತ್ತು ರೂಪಾಯಿಯನ್ನು ಕಿತ್ತಿದ್ದ ಆ ಅಂಗಡಿಯವನು. “ನೀವೇ ಸಿ.ಡಿ. ತಂದುಕೊಟ್ಟರೆ ನೂರು ರೂಪಾಯಿ ಅಷ್ಟೇ” ಎಂದು ಡಿಸ್ಕೌಂಟ್ ಆಫರ್ ಬೇರೆ ಕೊಟ್ಟಿದ್ದ ನನಗೆ. ನಾನೆಲ್ಲಿ ಸಿ.ಡಿ. ಹುಡುಕಿಕೊಂಡು ಹೋಗಲಿ ಎಂದು ಐವತ್ತು ರೂಪಾಯಿ ಹೆಚ್ಚಿಗೇನೇ ಕೊಟ್ಟಿದ್ದೆ!

ಇನ್ನು ಬ್ರೌಸಿಂಗ್ ಸೆಂಟರುಗಳ ಕಥೆ ಬಹಳ ಸೊಗಸಾಗಿದೆ. ದೊಡ್ಡ ದೊಡ್ಡ ಬ್ಯಾನರುಗಳನ್ನು ಹಾಕಿಕೊಳ್ಳುತ್ತಿದ್ದರು “High Speed Internet @ 64 Kbps” ಎಂದು! ಒಳಗೆ ಎಂಟು ಕಂಪ್ಯೂಟರುಗಳಿಗೂ ಹೆಚ್ಚಿರುತ್ತಿದ್ದವು. ಎಲ್ಲವೂ ನೆಟ್‍ವರ್ಕ್ ಆಗಿರುತ್ತಿದ್ದವಾದ್ದರಿಂದ “ಹೈ ಸ್ಪೀಡ್” ಇಂಟರ್ನೆಟ್ಟು ಕೂಡ ಹಂಚಿ ಹೋಗುತ್ತಿತ್ತು! ಶಾಲೆಯಲ್ಲಿ ಮಕ್ಕಳು “ಸರ್, ಇಂಟರ್ನೆಟ್ಟು ತುಂಬಾ ಸ್ಲೋ ಆಗಿದೆ” ಎಂದು ಬೇಸರ ಪಟ್ಟುಕೊಂಡು ಹೇಳುವಾಗ ನಾನು ಅವರಿಗೆ ಈ ಕಥೆ ಹೇಳಲು ಭಯವಾಗುತ್ತೆ. ಕ್ಲಿಕ್ ಮಾಡಿ ಹತ್ತು ಸೆಕೆಂಡ್ ಕಾಯಬೇಕಲ್ಲ – ಮನೆಯಲ್ಲಿ ಒಂದು ಸೆಕೆಂಡಿನೊಳಗೇ ವೆಬ್‍ಪೇಜು ತೆರೆದುಕೊಳ್ಳುತ್ತೆ!

ನಮಗೆ ಆಗಿನ್ನೂ Gmail ಬಂದಿರಲಿಲ್ಲ;  Facebookನ ಕಲ್ಪನೆಯೂ ಇರಲಿಲ್ಲ. ಬ್ರೌಸಿಂಗ್ ಸೆಂಟರಿನಲ್ಲಿ ಒಂದು ಘಂಟೆ ಕಾಲ ಇದ್ದರೆ ಅಲ್ಲಿ ನಾನು ನೋಡುತ್ತಿದ್ದುದು ಯಾಹೂ ವೆಬ್‍ಸೈಟು, ಮೇಯ್ಲು, ಮತ್ತು ಫೋಟೋಗಳು. TOI ಪತ್ರಿಕೆಯಲ್ಲಿ Yahoo! Search v/s Indiatimes Search ಎಂಬ ಲೇಖನವನ್ನೋದಿದ ನೆನಪಿದೆ ನನಗೆ. ಆದರೂ ಆಗಿನಿಂದಲೂ ಹುಡುಕಾಟಕ್ಕೆ ಗೂಗಲ್ಲೇ ಸರಿ! ಈ ಬ್ರೌಸಿಂಗ್ ಸೆಂಟರುಗಳಲ್ಲೇ ಫ್ಲಾಪಿಗಳನ್ನೂ ಮಾರಾಟ ಮಾಡುತ್ತಿದ್ದರಾದ್ದರಿಂದ ಫೋಟೋಗಳನ್ನು ಸೇವ್ ಮಾಡಿಕೊಂಡು ಮನೆಗೆ ಬಂದು ಮನೆಯ ಕಂಪ್ಯೂಟರಿನಲ್ಲಿ ಕಾಪಿ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿತ್ತು. ಆ ಫ್ಲಾಪಿಗಳನ್ನು “Write Protect” ಮಾಡುವುದೇ ಒಂದು ದೊಡ್ಡ ವಿಷಯವಾಗಿತ್ತು ಆಗ.

ಸ್ವಲ್ಪ ದಿನಗಳಾದ ಮೇಲೆ, ಥ್ಯಾಂಕ್ಸ್ ಟು ಶರತ್, ಯಾವಾಗ ಹಾರ್ಡ್ ಡಿಸ್ಕನ್ನು ತೆಗೆದು ಬೇರೆ ಕಂಪ್ಯೂಟರಿಗೆ ಜೋಡಿಸಲು ಕಲಿತೆನೋ, ಆಗಿನಿಂದ ನನ್ನ ಕಂಪ್ಯೂಟರಿನ ಡಬ್ಬವನ್ನು ಮುಚ್ಚುತ್ತಲೇ ಇರಲಿಲ್ಲ. ಆಗ ಬೇರೆ ಯಾವ ಪೋರ್ಟಬಲ್ ಸ್ಟೋರೇಜ್ ಉಪಕರಣಗಳನ್ನೂ ಬಳಸುತ್ತಿರಲಿಲ್ಲ. ಹಾರ್ಡ್ ಡಿಸ್ಕನ್ನೇ ತೆಗೆದುಕೊಂಡು ಓಡಾಡುತ್ತಿದ್ದರಿಂದ, ಅದಕ್ಕೆ ಫಿಕ್ಸೆಡ್ ಹಾರ್ಡ್ ಡಿಸ್ಕ್ ಎಂಬ ಹೆಸರಿದ್ದರೂ ನನ್ನ ಪಾಲಿಗೆ ಅದು ಪೋರ್ಟಬಲ್ ಹಾರ್ಡ್ ಡಿಸ್ಕೇ ಆಗಿತ್ತು. ಯಜಮಾನ – ಗುಲಾಮ ಎಂದೇ ಹಾಸ್ಯ ಮಾಡುತ್ತಿದ್ದೆ ಮಾಸ್ಟರ್ – ಸ್ಲೇವ್ ಹಾರ್ಡ್ ಡಿಸ್ಕುಗಳನ್ನಾಗಿಸಿ! ಶರತ್ ದೆಸೆಯಿಂದಲೇ ವಿಂಡೋಸ್ XPಯ ಪರಿಚಯವೂ ಆಯಿತು. ರೀಸ್ಟಾರ್ಟುಗಳು ಅಷ್ಟಾಗಿ ಇಲ್ಲ ಇದರಲ್ಲಿ ಎಂದು ಅವನು ಹೇಳಿದ್ದನ್ನು ಕೇಳಿ ನಾನು XP ಅಭಿಮಾನಿಯಾದರೂ ಅವನೇ ತೋರಿಸಿಕೊಟ್ಟ ಲಿನಕ್ಸ್ ಮೇಲೆ ವ್ಯಾಮೋಹ ಹುಟ್ಟಿತು. ಉಳಿದಿದ್ದೆಲ್ಲವೂ ಹಿಸ್ಟರಿ! (ಅಥವಾ ಇಷ್ಟು ಹೊತ್ತು ನಾನು ಹೇಳಿದ್ದು ಹಿಸ್ಟರಿ!)

ಇಂದು ನಮ್ಮ ಶಾಲೆಯ ಕಂಪ್ಯೂಟರ್ ಲ್ಯಾಬಿನಲ್ಲಿ ನಾನು ಉಪಯೋಗಿಸುತ್ತಿರುವ Promethean Whiteboard ಅನ್ನು ಆಗ ಊಹಿಸಲು ಸಹ ಆಗುತ್ತಿತ್ತೇ? ನ್ಯಾಷನಲ್ ಕಾಲೇಜಿನ ಲ್ಯಾಬಿನಲ್ಲಿದ್ದ ಕಂಪ್ಯೂಟರ್ ಮೌಸುಗಳ ಗುಂಡುಗಳು ವಾರಕ್ಕೊಮ್ಮೆ ಮಾಯವಾಗುತ್ತಿದ್ದವು! ಅವುಗಳನ್ನು ಕದಿಯುವ ಕ್ಲೆಪ್ಟೋಮೇನಿಯಾಕುಗಳೂ ಇದ್ದರು ಆ ಕಾಲದಲ್ಲಿ! ಬಹುಶಃ ಇನ್ನು ಹತ್ತು ವರ್ಷವಾದಮೇಲೆ, ಇಂದು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಪ್ರೊಮೀಥಿಯನ್ ವೈಟ್‍ಬೋರ್ಡಿನ ಬಗ್ಗೆ ನಾನೇ ಹಾಸ್ಯ ಮಾಡಬಹುದೇನೋ ಏನೋ!

ಇಂದಿಗೇನೋ ನಾವು ಬಳಸುತ್ತಿರುವುದು ಅತ್ಯಾಧುನಿಕ ತಂತ್ರಜ್ಞಾನ – ನಾಳೆಗೆ ಹಳಸು!

-ಅ

27.10.2012

3.30PM

(ಇದರ ಶೀರ್ಷಿಕೆಯ ಸ್ಫೂರ್ತಿ ಈಜ್ಞಾನ ಎಂಬುದನ್ನು ಬೇರೆ ಹೇಳಬೇಕಿಲ್ಲ)

3 comments:

  1. ನೆನ್ನಿನ ವಿಜ್ಞಾನ ಇಂದಿನ ಸಾಮಾನ್ಯಜ್ಞಾನ, ನಾಳೆಗೆ ಇತಿಹಾಸ... ಇದರ ಲೆಕ್ಕ ಯಾರಿಗಿದೆ! ಸೊಗಸಾಗಿ ಬರೆದಿದ್ದೀರಿ. ಕಂಪ್ಯೂಟರಿನಲ್ಲಿ ಯಾವುದೇ ಕ್ರಮಬದ್ಧ ಶಿಕ್ಷಣವಿಲ್ಲದ ನಾನು ಇವತ್ತು ಸಾಫ಼್ಟ್ ವೇರ್ ಕನ್ಸಲ್ಟೆಂಟು. ಇಪ್ಪತ್ತು ವರ್ಷದ ಹಿಂದೆ ನಾನು CA course ಮುಗಿಸಿದಾಗ ಕಂಪ್ಯೂಟರು ಬರೀ ಕೇಳಿದ್ದ ವಿಷಯವಾಗಿತ್ತೇ ಹೊರತು ಮುಟ್ಟುವುದಿರಲಿ, ನೋಡಿಯೂ ಇರಲಿಲ್ಲ. ಎಲ್ಲಿಂದೆಲ್ಲಿಗೆ ಅಂತ ಆಶ್ಚರ್ಯವಾಗುತ್ತದೆ.

    ReplyDelete
  2. ಮೇಸ್ಟ್ರೇ , ನಂದೂ ಆಲ್ಮೋಸ್ಟ್ ಇದೇ ಅನುಭವಗಳು. ೨೦ ರುಪಾಯಿಗೆ ಫ್ಲಾಪಿ ತಗೊಂಡು ಅದರ ಮೇಲೆ ಹೆಸರು ಬರ್ಕಂಡು ಓಡಾಡ್ತಿದ್ವಿ. ಆವಾಗ ತಗೊಂಡು ಗುಡ್ಡೆ ಹಾಕಿದ್ದ ಫ್ಲಾಪಿಗಳು ಮನೆಲ್ಲಿ ಇನ್ನೂ ಇವೆ. ಎಸೆಯಕ್ಕೆ ಮನಸಿಲ್ಲ :-| ಹಾರ್ಡ್ ಡಿಸ್ಕೇ ಕಳಚಲು ಬಂದ ಮೇಲೆ ಅದು ಅದೆಷ್ಟು ಕಡೆ ಸ್ಲೇವ್ ಆಗಿದೆಯೋ, ಅದ್ಯಾರ್ಯಾರಿಗೆ ಮಾಸ್ಟರ್ ಆಗಿದೆಯೋ ಲೆಕ್ಕ ಇಲ್ಲ. :) ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಆಗುವುದಕ್ಕಿಂತ ಮೊದಲಿಂದ ವಿಂಡೋಸ್ ಬಳಸ್ತಿದ್ದೀನಿ. ಗಂಟೆಗೆ ಅರವತ್ತು ರೂಪಾಯಿ ಕೊಟ್ಟು ಬ್ರೌಸ್ ಮಾಡಿದ್ದೀನಿ.! ಸೀಡಿ ರೈಟಿಂಗಿಗೆ ಬ್ರೌಸಿಂಗ್ ಸೆಂಟರ್ ಗಳಲ್ಲಿ ನಮ್ ಕಡೆ ವಿತ್ ಸಿಡಿ ನೂರು ರುಪಾಯಿ, ವಿದೌಟ್ ಸೀಡಿ ಎಪ್ಪತ್ತೈದು ರೂಪಾಯಿ ಇತ್ತು. ಕೊನೆಗೆ ಒಬ್ಬ ಬೆಂಗಳೂರಿನವನು ಬುದ್ದಿವಂತ ತನ್ನ ಕಂಪ್ಯೂಟರಿಗೇ ಸೀಡಿ ರೈಟರ್ ಹಾಕಿಸಿಕೊಂಡು ಬಂದು ಐವತ್ತೇ ರೂಪಾಯಿಗೆ ಸೀಡಿ ರೈಟ್ ಮಾಡ್ಕೊಟ್ಟು ಬಿಸಿನೆಸ್ ಮಾಡ್ಕತ್ತಿದ್ದ :). ಡಿವಿಡಿ ಅನ್ನುವುದು ಎಲ್ಲೋ ದೂರದ ವಸ್ತು ಆಗ.



    ಈ ಹತ್ತು ವರ್ಷಗಳಲ್ಲಿ ಕಂಪ್ಯೂಟರ್ (ಮತ್ತು ಇನ್ನಿತರ ಎಲ್ಲಾ) ಟೆಕ್ನಾಲಜಿಯಲ್ಲಿ ಬಹಳ ಬದಲಾವಣೆಗಳಾಗಿವೆ. ನೋಡನೋಡುತ್ತಲೇ ಏನೇನೋ ಆಗಿದೆ.. ಆಗುತ್ತಲೇ ಇದೆ..

    ReplyDelete
  3. he he ... browsing center board-galu maathra innu tamasheyaage ive ... high speed internet, email, facebook antha irutte!!!

    ReplyDelete