Sunday, December 8, 2013

ನಾ ಬರುವ ದಾರಿಯಲಿ

 

ನಾ ಬರುವ ದಾರಿಯಲಿ ನಿತ್ಯವೀ ಪರಿಮಳವು

ನಿನ್ನ ನೆನಪನೆ ತರುವುದೆನ್ನ ಮನಕೆ;

ನೀನಿರದ ದಾರಿಯನು ನಡೆದಿಹೆನು ಎಷ್ಟೆಷ್ಟೊ

ಇಲ್ಲಿ ಮಾತ್ರವೆ ನಿನ್ನ ಜೊತೆಯ ಬಯಕೆ.

 

ಅಂದೆಂದೊ ಅಲ್ಲೆಲ್ಲೊ ನಾವಿಬ್ಬರೇ ಆಗ

ಈ ಹೂವಿನಾ ಘಮವೆ ಅಂದು ಇತ್ತು.

ಕಾಣದೆಯೆ ಗಂಧವನು ಚೆಲ್ಲುತ್ತಲೀ ಹೂವು

ನೀನದರ ಜೊತೆಜೊತೆಯಲಿ ಈ ಹೊತ್ತು!

 

ನೀನಿಲ್ಲವೆನ್ನುವುದೆ ನಿಜವಲ್ಲವೆಂಬುದನು

ಈ ದಾರಿ ಪ್ರತಿದಿನವು ಸಾರುತಿಹುದು.

ಹಾದಿಯನು ಸಾಗುತ್ತ, ಪರಿಮಳವ ಮೀರುತ್ತ,

ನಾನಿಲ್ಲವೆನ್ನುವುದ ತೋರುತಿಹುದು!

 

ಈ ದಾರಿಯನು ಬಿಟ್ಟು, ಬೇರೆ ದಾರಿಯನರಸಿ

ಮರೆತೆನೆಂಬುವ ಸುಖದಿ ನಾ ನಡೆಯಲಾರೆ;

ಸೌಗಂಧವಿಲ್ಲದಿಹ ಆ ದಾರಿಯಲ್ಲೆಲ್ಲೊ

ನನ್ನೊಡನೆ ನಿನ್ನನೂ ಪಡೆಯಲಾರೆ!

 

- ಅ

08. 12. 2013

2.40 AM

Monday, December 2, 2013

ಆ (ಅ)ಮರ

ಅದೆಷ್ಟೋ ವರ್ಷಗಳಿಂದಲೂ ಹಕ್ಕಿಗಳ ಹಾಡುಗಳ ಕೇಳುತ್ತ

ಆ ಮರದಡಿಯಲ್ಲಿ ಎಷ್ಟು ಕಾಲ ಕಳೆದಿದ್ದೆನೋ, ನೆನಪಿಲ್ಲ.

ಬೀಸಿ ಬರುವ ಗಾಳಿಗೆ

ಶುದ್ಧ ಹಸಿರು ಎಲೆಗಳಿಂದ ಹೊಮ್ಮುತ್ತಿತ್ತು:

ಒಮ್ಮೊಮ್ಮೆ ಸಂಸ್ಕೃತ ಶ್ಲೋಕಗಳು; 

ಕೆಲವೊಮ್ಮೆ ಜ್ಯೋತಿಷ್ಯದ ಹೆಸರಿನಲ್ಲಿ ಶುಭ ಹಾರೈಕೆಗಳು; 

ಮತ್ತೊಮ್ಮೆ ಶಾಸ್ತ್ರ; ಮಗದೊಮ್ಮೆ ಸಂಗೀತ!

 

ಕೊಡುವುದೇ ಮರದ ಧರ್ಮ -

ಕೇಳಲಿ, ಕೇಳದಿರಲಿ.

ತನ್ನ ಫಲಗಳೆಲ್ಲವೂ ಪಡೆದುಕೊಂಡವನ ಪುಣ್ಯ.

ಹಣ್ಣನ್ನು ತಿಂದಿರುವೆನು – ಹೊಟ್ಟೆ ತುಂಬ! 

ನೆರಳಲಿ ನಿರ್ಭೀತನಾಗಿ ಸುಖನಿದ್ರೆಯನ್ನು ಅನುಭವಿಸಿರುವೆನು.

ಎಚ್ಚರವಾದಾಗ,

ರೆಂಬೆಗಳನ್ನು ಕೈಯಲ್ಲಿ ಹಿಡಿದು ಉಯ್ಯಾಲೆಯಾಡಿರುವೆನು.

 

ಕೊಡುವುದೇ ಮರದ ಧರ್ಮ:

ಸಂತಸವನ್ನು, ಸುಖವನ್ನು, ನಲಿವನ್ನು, ಬದುಕನ್ನು!

ತನ್ನಡಿಯಲ್ಲಿ ಬದುಕಿದ ಸಣ್ಣ ಸಣ್ಣ ಗಿಡಗಳಿಗೆಲ್ಲವೂ

ಆಸರೆಯ ಹಂಗು.

ತಾನು ಬಾರದು ಯಾರೆಡೆಗೂ –

ಪರ್ವತದಷ್ಟೇ ಅಚರ.

 

ಕೊಡುವುದೇ ಮರದ ಧರ್ಮ:

ನಾನೇ ಹೋದೆ ಮರದ ಸನಿಹಕ್ಕೆ

ಪ್ರೇಮದಾಶೀರ್ವಚನ ಪಡೆಯಲು,

ತಾನಿರಲಿಲ್ಲ, ಎಂದಿನಂತಿರುತ್ತಿದ್ದ ಜಾಗದಲ್ಲಿ. 

ಚಿತೆಗೆ ಸಿದ್ಧವಾದ ಕಟ್ಟಿಗೆಯ ರೂಪದಿ

ಕೊಟ್ಟಿತು ತನ್ನ ದರ್ಶನವನ್ನು!

ಕೊಡುವುದೇ ಮರದ ಧರ್ಮ!

 

- ಅ

02. 12. 2013

2 PM

Thursday, September 5, 2013

ಶಿಕ್ಷಕನ ರೆಸ್ಯೂಮೆ

 

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಒಂದು ವಿಚಿತ್ರ ಯೋಚನೆ. ಒಂದು ವೇಳೆ ನಾನೇನಾದರೂ ನನ್ನ ಕೆಲಸವನ್ನು ಕಳೆದುಕೊಂಡರೆ ಬೇರೆ ಎಲ್ಲೆಲ್ಲಿ, ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಬಲ್ಲೆ? ಏನೇನು ಮಾಡಬಲ್ಲೆನೋ ಗೊತ್ತಿಲ್ಲ, ಆದರೆ ಎಲ್ಲ ಕ್ಷೇತ್ರದವರೂ ನನ್ನನ್ನು ಕರೆದು ಕೆಲಸ ಕೊಡುವ ಅರ್ಹತೆಯನ್ನಂತೂ ಹೊಂದಿರುತ್ತೇನೆ! ಯಾಕೆಂದರೆ ನಾನು ಶಿಕ್ಷಕನಲ್ಲವೇ? ಅದರಲ್ಲೂ ಖಾಸಗಿ ಶಾಲೆಯಲ್ಲಿರುವವನಲ್ಲವೇ?

ಇಲ್ಲಿದೆ - ಶಿಕ್ಷಕನ ರೆಸ್ಯೂಮೆಯಲ್ಲಿರಬೇಕಾದ ಎಕ್ಸ್ಪೀರಿಯನ್ಸ್ ಸಮ್ಮರಿ.

[ ಒಂದು ಡಿಸ್ಕ್ಲೇಯ್ಮರ್ರು: ಇಲ್ಲಿ ನಾನು ಎಲ್ಲೆಲ್ಲಿ ಶಿಕ್ಷಕ, ಮೇಷ್ಟ್ರು ಮುಂತಾದ ಪದಗಳನ್ನು ಬಳಸಿದ್ದೇನೋ ಅಲ್ಲೆಲ್ಲವೂ ಶಿಕ್ಷಕಿ, ಅಥವಾ ಟೀಚರ್ ಎಂಬ ಪದವನ್ನೂ ಬಳಸಿಕೊಳ್ಳಬಹುದು. ಲಿಂಗಭೇದವಿಲ್ಲ.]

ತರಗತಿಯಲ್ಲಿ ಕಳ್ಳರನ್ನು, ಸುಳ್ಳರನ್ನು ಮೇಷ್ಟರಿಗಿಂತ ಸುಲಭವಾಗಿ ಯಾರು ತಾನೆ ಕಂಡು ಹಿಡಿಯಲು ಸಾಧ್ಯ! ನಮಗೆ ಯಾವ ಮಂಪರು ಪರೀಕ್ಷೆಯ ಹಂಗೂ ಬೇಕಿಲ್ಲ ಪತ್ತೆ ಮಾಡಲು, ಸಿಕ್ಕಿ ಬಿದ್ದ ಕಳ್ಳನನ್ನು ದೈಹಿಕವಾಗಿ ದಂಡಿಸದೆಯೇ ಪರಿವರ್ತನೆಯ ಪ್ರಾಮಾಣಿಕ ಪ್ರಯತ್ನ ಮಾಡಲು.  ಹಾಗಾಗಿ ಪೋಲೀಸ್ ಇಲಾಖೆಯು ಮೇಷ್ಟರಿಗಾಗಿ ಒಂದು ಸೀಟು ಕಾಯ್ದಿರಿಸಬೇಕು. ಅಲ್ಲದೆ ಪರೀಕ್ಷೆಗಳಲ್ಲಿ ಮೇಲ್ವಿಚಾರಣೆ ಮಾಡುವುದೆಂದರೆ ಪೋಲೀಸ್ ಕೆಲಸವಲ್ಲದೆ ಮತ್ತಿನ್ನೇನು.  ಬರೀ ಕ್ರೈಮ್ ಪೋಲೀಸಿನವರು ಮಾತ್ರವಲ್ಲ, ಟ್ರಾಫಿಕ್ ಇಲಾಖೆಯವರೂ ಸಹ ಮೀಸಲಾತಿಯಿಡಬೇಕು. ಏಕೆಂದರೆ, ನಿತ್ಯವೂ ಶಾಲೆಯಲ್ಲಿ ಮೇಷ್ಟರುಗಳು ಟ್ರಾಫಿಕ್ ನಿರ್ವಹಣೆ ಮಾಡುತ್ತಲೇ ಇರುತ್ತಾರೆ. ವಿದ್ಯಾರ್ಥಿಗಳು ಸಾಲಾಗಿ ನಡೆದುಕೊಂಡು ಪ್ರಾರ್ಥನೆಯ ಮಂದಿರದಿಂದ ತರಗತಿಗಳಿಗೆ ಹೋಗುವ ಹೊಣೆ, ಅಥವಾ ತರಗತಿಗಳಿಂದ ಮೈದಾನಕ್ಕೆ ಹೋಗುವಾಗ ಶಿಸ್ತಿನಿಂದ ಒಬ್ಬರ ಹಿಂದೊಬ್ಬರು ಸಾಲನ್ನು ಮುರಿಯದೇ ಹೋಗುವ ಹೊಣೆಯು ಮೇಷ್ಟರದಲ್ಲದೆ ಇನ್ಯಾರದ್ದು! ಯಾರಾದರೂ ಸಾಲಿನ ನಿಯಮವನ್ನು ಮುರಿದರೆ ತಕ್ಷಣವೇ ಅವರನ್ನು ಬದಿಗೆ ಸರಿಸಿ, ಐಡಿ ಕಾರ್ಡನ್ನು ಪರಿಶೀಲಿಸಿ, ನೂರೆಂಟು ಪ್ರಶ್ನೆ ಕೇಳಿ, ನಂತರ ಸಾಲಿನ ಕೊನೆಯಲ್ಲಿ ನಡೆದು ಹೋಗುವ ಶಿಕ್ಷೆ ವಿಧಿಸುವ ಮೇಷ್ಟ್ರು ಟ್ರಾಫಿಕ್ ಪೋಲೀಸ್ ಆಗಲು ಅರ್ಹರಷ್ಟೆ?

ಮೈದಾನಕ್ಕೆ ಸಾಲಾಗಿ ಹೋಗುವ ಮಕ್ಕಳನ್ನು ಕಳುಹಿಸುವ ಟ್ರಾಫಿಕ್ ಪೋಲೀಸ್ ಮೇಷ್ಟರುಗಳು ಕೆಲ ಕ್ಷಣಗಳ ನಂತರವೇ ವೈದ್ಯರಾಗಿ ಬದಲಾಗುವುದೂ ಉಂಟು. ನಡೆದು ಹೋಗುವ ಮಕ್ಕಳು ಇದ್ದಕ್ಕಿದ್ದ ಹಾಗೆ ಒಬ್ಬರನ್ನೊಬ್ಬರು ತಳ್ಳಿಕೊಂಡು ಬೀಳುವುದು ಸಹಜ. ಬಿದ್ದು ಮೈ ಕೈ ಗಾಯ ಮಾಡಿಕೊಂಡು ರಂಪ ರಾದ್ಧಾಂತ ಮಾಡುವುದಂತೂ ಶಾಲೆಯಲ್ಲಿ ಸಾಮಾನ್ಯ ದೃಶ್ಯ. ಈ ಮಕ್ಕಳಿಗೆ ಚಿಕಿತ್ಸೆ ಕೊಡುವ ಮೇಷ್ಟ್ರು ಬಿಳಿ ಕೋಟು ಧರಿಸಿರುವುದಿಲ್ಲ ಅಷ್ಟೆ. ಕೇವಲ general physician ಅಷ್ಟೇ ಅಲ್ಲ, ಮಕ್ಕಳ ಮನಸ್ಸಿನ ಆಳವನ್ನು ಹೊಕ್ಕು, ಅವರ ವಯಕ್ತಿಕ ಬದುಕಿನ ಸಂಕಷ್ಟಗಳನ್ನು ಗುಣಪಡಿಸಲು ಪ್ರಯತ್ನ ಪಡಲು ಬೇಕಾದ ಎಲ್ಲ ರೀತಿಯ counseling ಮಾಡುವ ಮನಃಶಾಸ್ತ್ರಜ್ಞನೂ ಆಗಿರುತ್ತಾನೆ (ಆಗಿರಬೇಕು). ತಾನು ಯಾವ ಬಟ್ಟೆ ಧರಿಸಿದರೆ ಮಕ್ಕಳಿಗೆ ಇಷ್ಟವಾಗುತ್ತೆ, ಹೇಗೆ ಮಾತನಾಡಿದರೆ ಮಕ್ಕಳು ಸಂತೋಷ ಪಡುತ್ತಾರೆ ಎಂಬ ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡಿರುವವನು ಮನಃಶಾಸ್ತ್ರಜ್ಞನಲ್ಲದೆ ಇನ್ನೇನು! ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ counseling ಮಾಡುವ ಮೇಷ್ಟ್ರು ಯಾವ ಸಿಗ್ಮಂಡ್ ಫ್ರಾಯ್ಡಿಗೂ ಕಡಿಮೆಯಿಲ್ಲ.

ಖಾಸಗಿ ಶಾಲೆಯೆಂದು ಆಗಲೇ ಹೇಳಿದೆನಷ್ಟೆ? ಆಗಿಂದಾಗ್ಗೆ, ವಿಜ್ಞಾನ, ಸಮಾಜ ಶಾಸ್ತ್ರ, ಗಣಿತ, ಕಂಪ್ಯೂಟರು, ಕಲೆ, ಇತ್ಯಾದಿ ಪ್ರದರ್ಶನಗಳು ನಡೆಯುತ್ತಲೇ ಇರುತ್ತೆ. ಪ್ರದರ್ಶನಗಳಿಗೆ ತಕ್ಕ ಹಾಗೆ ಬೇಕಾದ ಮಾಡೆಲ್‍ಗಳನ್ನು ತಯಾರಿಸುವುದೂ ಮೇಷ್ಟ್ರುಗಳೇ. ಆರ್ಕಿಟೆಕ್ಟು, ಕಂಟ್ರಾಕ್ಟರ್ರು, ಕೆಲಸಗಾರ – ಮೂರೂ ಕೆಲಸವನ್ನು ಒಬ್ಬನೇ ನಿರ್ವಹಿಸುತ್ತಾನೆ. ಜೊತೆಗೆ ಬೇಕಾದ ಕಲಾವಿನ್ಯಾಸವನ್ನೂ ಮಾಡುತ್ತಾನೆ.  ಪ್ರದರ್ಶನಕ್ಕೆ ಅಗತ್ಯವಿರುವ ಯೋಜನೆ, ನಿರ್ವಹಣೆ, ಎಲ್ಲವನ್ನೂ ಮಾಡಬಲ್ಲನು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಂತೂ ನಿರೂಪಣೆ, ಪ್ರಾರ್ಥನೆಯ ಹಾಡು, ನಾಟಕ, ನೃತ್ಯ, ಯೋಗ, ಇವೆಲ್ಲವೂ ನಿರ್ವಹಿಸುವುದರಿಂದ ಕಲಾವಿದನ ಎಲ್ಲ ಲಕ್ಷಣಗಳೂ ಮೇಷ್ಟರಲ್ಲಿ ಇರದೇ ಇರಲು ಸಾಧ್ಯವೇ ಇಲ್ಲ. ಕಲಾವಿದ ಮಾತ್ರವಲ್ಲ, ಇಂಥ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳ ಸೆಟ್ಟಿಂಗು, ಲೈಟು ಸೆಟ್ಟಿಂಗು, ಫೋಟೋ ತೆಗೆಯುವುದು, ವೇದಿಕೆಯ ವಿನ್ಯಾಸ ಮುಂತಾದವುಗಳಲ್ಲಿಯೂ ಮೇಷ್ಟರದು ಎತ್ತಿದ ಕೈ. ಸಿನಿಮಾದವರು ಕೆಲಸ ಕೊಡುವುದೊಂದು ಬಾಕಿ.

ಶಾಲೆಯ ಬಸ್ಸಿನಲ್ಲಿ ಆಗಾಗ್ಗೆ ಪ್ರಯಾಣ ಮಾಡಬೇಕಾಗುತ್ತಿರುತ್ತೆ. ಡ್ರೈವಿಂಗ್ ಕೆಲಸವೊಂದು ಇರುವುದಿಲ್ಲ. ಆದರೆ ಕಂಡಕ್ಟರ್ ಕೆಲಸ ಗ್ಯಾರೆಂಟಿ. ಯಾರು ಯಾರು ಎಲ್ಲೆಲ್ಲಿ ಹತ್ತುತ್ತಾರೆ, ಎಲ್ಲೆಲ್ಲಿ ಇಳಿದುಕೊಳ್ಳುತ್ತಾರೆಂಬ ಅರಿವು ಮೇಷ್ಟರುಗಳಿಗಿರಬೇಕಲ್ಲವೇ? ಕ್ರೀಡೆಗಳಲ್ಲಂತೂ – ಇಂಥದ್ದು ಇಲ್ಲವೆಂದಿಲ್ಲ. ಲಗೋರಿಯಿಂದ ಹಿಡಿದು ಫುಟ್‍ಬಾಲ್‍ವರೆಗೆ, ತಾವೇ ರಚಿಸುವ ಆಟಗಳಿಂದ ಹಿಡಿದು ಕಂಪ್ಯೂಟರ್ ಗೇಮ್‍ಗಳವರೆಗೆ ಎಲ್ಲವೂ ಗೊತ್ತು. ಅದಲ್ಲದೆ ಮಾರ್ಚ್‍ಪಾಸ್ಟು, ಡ್ರಿಲ್ಲು, ಬ್ಯಾಂಡು ಇವೆಲ್ಲವೂ ಮಿಲಿಟರಿಯ ತರಬೇತಿಗಳು. ಆಯಾ ಇಲಾಖೆಯವರು ಈ ಪ್ಯಾರಾದ ಕಡೆ ಗಮನಹರಿಸತಕ್ಕದ್ದು.

ಪ್ರವಾಸವನ್ನು ಆಯೋಜಿಸುವುದು ಸುಲಭದ ಕೆಲಸವೇನಲ್ಲ. ಎಲ್ಲಿಗೆ ಯಾವ ಕಾಲದಲ್ಲಿ ಹೋಗಬೇಕು, ಯಾವ ಕಾಲದಲ್ಲಿ ಹೋಗಬಾರದು ಎಂಬ ಭೌಗೋಳಿಕ ಅರಿವಿರಬೇಕು. ಊಟ ತಿಂಡಿಗಳನ್ನು ಹೇಗೆ ಪೂರೈಸಬೇಕೆಂಬ ಅಡುಗೆ ಕಂಟ್ರಾಕ್ಟರನ ತಿಳಿವಳಿಕೆಯಿರಬೇಕು. ಎಲ್ಲೆಲ್ಲಿ ಹೋಗುತ್ತೇವೋ ಆ ಜಾಗಗಳ, ಅಲ್ಲಿ ಭೇಟಿಯಾಗುವ ಜನರ ಹಿಸ್ಟರಿ, ಜಿಯಾಲಜಿ, ಸೈಕಾಲಜಿ, ಬಯಾಲಜಿ, ಅಡುಗೋಲಜ್ಜಿ ಕತೆಗಳೆಲ್ಲವೂ ಗೊತ್ತಿರಬೇಕು. ಗೊತ್ತಿರದಿದ್ದರೆ ಹೊಸ ಕತೆ ಕಟ್ಟುವ ಸಾಮರ್ಥ್ಯವಿರಬೇಕು. ರಾತ್ರಿ ಎಲ್ಲಿ ಉಳಿದುಕೊಂಡರೆ ಕ್ಷೇಮವೆಂಬುದು ಗೊತ್ತಿರಬೇಕು, ಅದಕ್ಕಾಗಿ ವ್ಯವಸ್ಥೆ ಮಾಡಬೇಕು. ಇವೆಲ್ಲವನ್ನೂ ಶಿಕ್ಷಕನು ಸಲೀಸಾಗಿ ಮಾಡಿಯಾನು.

ಹಣಕಾಸು ವಿಚಾರದಲ್ಲೂ ಏನು ಕಡಿಮೆಯಿಲ್ಲ. ಸಂಪಾದನೆಯಲ್ಲಿ ಕಡಿಮೆಯಿರಬಹುದು, ಆದರೆ ಲಕ್ಷಗಟ್ಟಲೆ ಹಣದ ಎಣಿಕೆ, ಲೆಕ್ಕಾಚಾರ ಮುಂತಾದ ಗುಮಾಸ್ತೆ ಕೆಲಸವು ಶಾಲೆಯ ಆರಂಭದ ವೇಳೆ ನಡೆಯುವ ಅಡ್ಮಿಷನ್ ಪ್ರಕ್ರಿಯೆಯಲ್ಲಿ ಮೇಷ್ಟರುಗಳಲ್ಲದೆ ಇನ್ಯಾರು ಮಾಡುತ್ತಾರೆ? ಎಷ್ಟು ಹಣಕ್ಕೆ ರಸೀತಿ ಕೊಡಬೇಕು, ಎಷ್ಟಕ್ಕೆ ಕೊಡಬಾರದು; ರಾಮನ ಲೆಕ್ಕ ಯಾವುದು, ಕೃಷ್ಣನದು ಯಾವುದು; ಸಮವಸ್ತ್ರ, ಶೂ, ಪುಸ್ತಕ ಮುಂತಾದವುಗಳನ್ನು ಮಾರುವುದು ಹೇಗೆ; ಹಾಗೆ ಮಾರಿದರಲ್ಲಿ ಒಂದು ಪೈಸೆಯೂ ತನ್ನದಲ್ಲವೆಂಬಂತೆ ಲೆಕ್ಕವೊಪ್ಪಿಸಿ ತೆಪ್ಪಗಿರುವುದು ಹೇಗೆ – ಎಂಬುದು ಗೊತ್ತಿರುತ್ತೆ.

ತಮ್ಮ ತಮ್ಮ ತರಗತಿಗಳನ್ನು ಚೊಕ್ಕವಾಗಿಟ್ಟುಕೊಳ್ಳುವ ಸಲುವಾಗಿ ಆಯಾಗಳಿಂದ ಕೆಲವು ಸಲ ಕೆಲಸ ಮಾಡಿಸಿಕೊಂಡರೆ, ಮತ್ತೆ ಕೆಲವು ಸಲ ತಾವೇ ಮಾಡಿಕೊಳ್ಳಬೇಕಾಗುತ್ತೆ. ಸಣ್ಣ ಪುಟ್ಟ ಎಲೆಕ್ಟ್ರಿಕಲ್ ರಿಪೇರಿ, ಮರಗೆಲಸದ ರಿಪೇರಿ, ಒಂದೇ ಬದಿಯಲ್ಲಿ ಬೀಗವಿರುವುದರಿಂದ ಆಗಾಗ್ಗೆ ಮಕ್ಕಳು ಬಾಗಿಲು ಹಾಕಿಕೊಂಡು ಒಳಗೆ ಸಿಕ್ಕಿಕೊಂಡಾಗ ಬೀಗ ಮುರಿಯುವ ಅಥವಾ ಬೀಗ ರಿಪೇರಿ ಮಾಡುವ, ಬೆಂಕಿ ಸಂಭವಿಸಿದರೆ ಅಗ್ನಿಶಾಮಕವನ್ನು ಬಳಸಿ ಬೆಂಕಿಯನ್ನು ನಂದಿಸುವ – ಇಂಥ ಎಲ್ಲ ಕೆಲಸವೂ ತಾನಾಗಿಯೇ ಬರುತ್ತೆ ಶಿಕ್ಷಕನಾದವನಿಗೆ.

ಶಾಲೆಯ ಪತ್ರಿಕೆಯನ್ನು ಹೇಗೆ ಮರೆಯುವುದು? ಪತ್ರಿಕೆಯೆಂದರೆ ಅದರಲ್ಲಿ ಲೇಖನಗಳನ್ನು ಬರೆಯಬೇಕು, ಬರೆಸಬೇಕು, ಮಕ್ಕಳು ಬರೆದು ತಂದುಕೊಟ್ಟಿದ್ದನ್ನು ಸಂಪಾದಿಸಬೇಕು, ಪತ್ರಿಕೆಗೊಂದು ಮುಖಪುಟ ವಿನ್ಯಾಸ ಮಾಡಬೇಕು, ಒಳಗೆ ಪುಟಗಳ ವಿನ್ಯಾಸವನ್ನೂ ಮಾಡಬೇಕು. ಪತ್ರಿಕೋದ್ಯಮದಲ್ಲಿ ಈ ಪ್ರತಿಯೊಂದಕ್ಕೂ ಬೇರೆ ಬೇರೆಯವರಿರುತ್ತಾರೆಂದು ನಾನು ಕೇಳಿ ಬಲ್ಲೆ. ಇಲ್ಲಿ ಮೇಷ್ಟ್ರೇ ಎಲ್ಲ!

ರಾವಣನ ದಶಶಿರವದೇಂ? ನರನು ಶತಶಿರನು!
ಸಾವಿರಾಸ್ಯಗಳನೊಂದರೊಳಣಗಿಸಿಹನು!
ಹಾವಾಗಿ, ಹುಲಿಯಾಗಿ, ಕಪ್ಪೆ-ಹುಲ್ಲೆಯುಮಾಗಿ
ಭೂವ್ಯೋಮಕತಿಶಯನು! - ಮಂಕುತಿಮ್ಮ.

ಇದನ್ನು ಡಿ.ವಿ.ಜಿ.ಯವರು ಶಿಕ್ಷಕರಿಗೆಂದೇ ಬರೆದರೇನೋ ಎನ್ನಿಸುತ್ತೆ. ನರ ಎಂಬ ಪದವನ್ನು ಬಳಸಿಬಿಟ್ಟಿದ್ದಾರೆ. ಛಂದಸ್ಸಿಗೆ ಹೊಂದಿಕೊಳ್ಳುವಂತಿದ್ದರೆ ಶಿಕ್ಷಕ ಎಂದೇ ಬರೆಯುತ್ತಿದ್ದರೇನೋ.

ನನ್ನ ರೆಸ್ಯೂಮೆಗೆ ನನ್ನೀ ಶತಶಿರದ ಅರ್ಹತೆಯನ್ನು ಸೇರಿಸಿಕೊಳ್ಳಬೇಕೆಂಬ ಬಯಕೆಯು ಹೆಚ್ಚು ಕಾಲ ಉಳಿಯುವಂಥದ್ದಲ್ಲ.  ಮೇಲೆ ಹೇಳಿದ ಯಾವುದಾದರೂ ಇಲಾಖೆಯವರು ನನಗೆ ಕರೆದು ಕೆಲಸ ಕೊಟ್ಟರೂ, ಅಲ್ಲಿ ನನಗೆ ತರಗತಿಯಲ್ಲಿ ಪಾಠ ಮಾಡುವ ಭಾಗ್ಯವಿರುವುದೇ? ಮಕ್ಕಳೊಡನೆ ಆಟವಾಡುವ ಅವಕಾಶವಿರುವುದೇ? ಊಟದ ವಿರಾಮದ ವೇಳೆ ಬಿಗಿಯಾಗಿರುವ ಡಬ್ಬಿಯ ಮುಚ್ಚಳವನ್ನು ತೆಗೆದುಕೊಡುವ, ಹಾಗೆ ತೆಗೆದುಕೊಟ್ಟು “ನಮ್ಮ ಮೇಷ್ಟ್ರು ಜಗತ್ತಿನ ಅತ್ಯಂತ ಶಕ್ತಿಶಾಲಿ” ಎಂಬ ಬಿರುದನ್ನು ಪಡೆದುಕೊಳ್ಳಲಾಗುವುದೇ? ದಿನಕ್ಕೆ ಮೂರು ನಾಲ್ಕು ಜನರ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವೇ? ಅಥವಾ ನನ್ನ ಹುಟ್ಟುಹಬ್ಬಕ್ಕೆ ಸಹಸ್ರಾರು ಪ್ರಾಮಾಣಿಕ, ಮನಃಪೂರ್ವಕ, ತಾವೇ ತಮ್ಮ ಕೈಯ್ಯಾರೆ ಕಾಗದಗಳಿಂದ ಮಾಡಿದ ಗ್ರೀಟಿಂಗ್ ಕಾರ್ಡುಗಳನ್ನು ಸಂಪಾದಿಸಲು ಆದೀತೆ? ಯಾರು ಏನೇ ಹೇಳಲಿ, ನಾನು (ಶಿಕ್ಷಕ) ಹೇಳುವುದೇ ಪರಮ ಸತ್ಯ ಎಂದು ಸಂಪೂರ್ಣ ನಂಬಿಕೆಯನ್ನು ಪಡೆದುಕೊಳ್ಳಲು ಬೇರೆಲ್ಲಿ ಸಾಧ್ಯ?

ಈ ಶತಶಿರದ ಅರ್ಹತೆಯೂ ಅನುಭವವೂ ಹೀಗೆ ಇನ್ನೂ ಬೆಳೆಯುತ್ತಿರಲಿ – ಬೇರೆ ಕಡೆ ಹೋಗಲೆಂದಲ್ಲ. ಇನ್ನೂ ಉತ್ತಮ ಮೇಷ್ಟರಾಗಲು ಎಂದು ನನಗೆ ನನ್ನದೇ ಹಾರೈಕೆ. ಸ್ವಧರ್ಮದಲ್ಲಿ ನಿಧನವೂ ಶ್ರೇಯಸ್ಸಂತೆ..

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

- ಅ

05.09.2013

5.40 AM

Friday, July 26, 2013

ನಾನೊಬ್ಬ ಕಂಪ್ಯೂಟರ್ ಶಿಕ್ಷಕನಾಗಿ..


(ಈ ಲೇಖನವನ್ನು ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ನನ್ನ ಕೃತಜ್ಞತೆಗಳು.)

ಖಾಸಗಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರ ಬೇಕು ಬೇಡಗಳು, ಗೆಲುವು ಸೋಲುಗಳು, ಸುಖ ದುಃಖಗಳು ಕಂಪ್ಯೂಟರ್ ಶಿಕ್ಷಕರಿಗೆ ಮಾತ್ರವೇ ಅರ್ಥವಾಗುವುದು. ಉಳಿದವರಿಗೆ "ನಿಮ್ಮದೇನು ಮಹಾ, ಕಂಪ್ಯೂಟರ್ ಹೇಳಿಕೊಡುವುದು ತಾನೆ!" ಎನ್ನುವ ಭಾವನೆ. ಅನೇಕರ ದೃಷ್ಟಿಯಲ್ಲಿ ಇದೊಂದು ಸಬ್ಜೆಕ್ಟೇ ಅಲ್ಲ. ಮಕ್ಕಳಿಗೆ ಯಾವಾಗಲೂ ಓದುವುದನ್ನೇ ಹೇಳುತ್ತಿದ್ದರೆ ಬೋರಾಗುತ್ತೆ, ಅದಕ್ಕೋಸ್ಕರ ಅವರಿಗೆ ಪಿ.ಟಿ., ಯೋಗ, ಸಂಗೀತ, ಕಂಪ್ಯೂಟರ್ ಶಿಕ್ಷಣ, ಎಲ್ಲವೂ ಇರುವುದೆಂದು ಪ್ರಾಮಾಣಿಕವಾಗಿ ನಂಬಿರುತ್ತಾರೆ. ಪ್ರಾಂಶುಪಾಲರ ದೃಷ್ಟಿಯಲ್ಲಿ ಇದೊಂದು "ಲೈಟ್" ಸಬ್ಜೆಕ್ಟು. ಅಂದರೆ, ಮಕ್ಕಳು ಓದದೆಯೂ, ಅಭ್ಯಾಸ ಮಾಡದೆಯೂ ಪಾಸಾಗಬಹುದಾದ್ದು. ವೇಳಾಪಟ್ಟಿಯಲ್ಲಿ ಅಷ್ಟೇನೂ ಪ್ರಾಮುಖ್ಯತೆಯನ್ನು ಕೊಡಬೇಕಾದ್ದೂ ಇಲ್ಲ. ಈ ಸಬ್ಜೆಕ್ಟಲ್ಲಿ ಯಾರಾದರೂ ಉನ್ನತ ಅಂಕಗಳನ್ನು ಪಡೆದುಕೊಂಡರೆ "ಕಂಪ್ಯೂಟರ್ ಅಲ್ಲಿ ತೊಗೊಂಡರೆ ಪ್ರಯೋಜನ ಇಲ್ಲ, ಮ್ಯಾಥೆಮಾಟಿಕ್ಸು, ಸೈನ್ಸುಗಳಲ್ಲಿ ತೊಗೋಬೇಕು" ಎನ್ನುತ್ತಾರೆ ಅವರ ಪೋಷಕರು. ಆಡಳಿತಾಧಿಕಾರಿಗಳು ಕಂಪ್ಯೂಟರ್ ನ ಅರಿವಿದ್ದವರಾಗಿದ್ದರೆ ಸರಿ, ಇಲ್ಲವೆಂದರೆ ಒಂದು ಪ್ರಯೋಗಾಲಯಕ್ಕೂ ಹೆಣಗಾಡಬೇಕಾಗುತ್ತೆ ಕಂಪ್ಯೂಟರ್ ಶಿಕ್ಷಕ.

ಕಂಪ್ಯೂಟರ್ ಜ್ಞಾನವು ಕಡ್ಡಾಯ ಎಂದು ಎಲ್ಲಾ ಕಡೆ ಹೇಳಿದ್ದರೂ ಸಹ ಇದು ಹೊಸಬರಿಗೆ ಮಾತ್ರವೇ ಸೀಮಿತವಾಗುತ್ತಿದೆಯೇನೋ, ಅನೇಕ ಹಳಬರಿಗೆ, ಈಗಾಗಲೇ ಬಹಳ ವರ್ಷ ಅನುಭವವುಳ್ಳ ಶಿಕ್ಷಕರಿಗೂ ಕಂಪ್ಯೂಟರಿಗೂ ಯಾವುದೇ ಸಂಬಂಧವೂ ಇಲ್ಲವೇನೋ ಎಂಬಂತಿದೆ. "ನಮಗ್ಯಾಕೆ ಈ ಕಂಪ್ಯೂಟ್ರು ಗಿಂಪ್ಯೂಟ್ರು ಎಲ್ಲ!" ಎನ್ನುವವರೂ ಇದ್ದಾರೆ. ಅವರಂತೆ ನಾನು, ಕಂಪ್ಯೂಟರ್ ಮೇಷ್ಟ್ರಾದ ನಾನು "ನನಗ್ಯಾಕೆ ಸಾಹಿತ್ಯ!" ಎಂದು ಹೇಳುತ್ತಿಲ್ಲವಲ್ಲವೆಂಬುದು ನನಗೆ ನನ್ನ ಬಗ್ಗೆಯೇ ಹೆಮ್ಮ ಪಡಬಹುದಾದ ವಿಷಯ. ಹೀಗೆಯೇ "ನಮಗ್ಯಾಕೆ" ಎನ್ನುವ ಶಿಕ್ಷಕಿಯೊಬ್ಬರು ನನ್ನಲ್ಲಿಗೆ ಒಂದು ದೂರನ್ನು ತಂದಿದ್ದರು. "ಸರ್, ಈ ನಿಮ್ಮ ವಿದ್ಯಾರ್ಥಿ ಬರೀ ಕಂಪ್ಯೂಟರ್ ಮುಂದೆ ಕೂತಿರುತ್ತಾನಂತೆ ಮನೇಲಿ. ನೀವು ಹೇಳಬೇಕು ಅವನಿಗೆ." ಆ ಹುಡುಗನ ಅಂಕಪಟ್ಟಿಯನ್ನು ತರಿಸಿಕೊಂಡು ನೋಡಿದೆ. ಕಂಪ್ಯೂಟರ್ ವಿಷಯದಲ್ಲಿ ನೂರಕ್ಕೆ ತೊಂಭತ್ತೈದು. ಉಳಿದ ವಿಷಯಗಳಲ್ಲಿ ಪರವಾಗಿಲ್ಲ, ಆದರೆ ಕಂಪ್ಯೂಟರಿನಲ್ಲೇ ಎಲ್ಲಕ್ಕಿಂತಲೂ ಅಧಿಕ. (ಕನ್ನಡದಲ್ಲಿ ಎಷ್ಟು ಎಂದು ನೀವು ಕೇಳಬಾರದು - ಈಗಿನ ಕಾಲದ ಖಾಸಗಿ ಶಾಲೆಯ ಮಕ್ಕಳ ಕನ್ನಡದ ಅಂಕಗಳು ಗಂಡಸರ ಸಂಬಳ, ಹೆಂಗಸರ ವಯಸ್ಸಿದ್ದಂತೆ.) ನನಗೆ ಈಗ ಪೀಕಲಾಟಕ್ಕೆ ಬಂತು. ನಾನು ಹೇಗೆ ಹೇಳುವುದು, ಬೇರೆ ಸಬ್ಜೆಕ್ಟುಗಳನ್ನು ಓದಿಕೋ, ಕಂಪ್ಯೂಟರ್ ವಿಷಯವನ್ನು ಕಡಿಮೆ ಅಭ್ಯಾಸ ಮಾಡು ಎಂದು? ಹಾಗೆ ಅವನು ತನಗಿಷ್ಟವಿರುವುದನ್ನು ಬಿಟ್ಟರೆ ಬೇರೆ ವಿಷಯಗಳೊಂದಿಗೆ ಕಂಪ್ಯೂಟರಿನಲ್ಲೂ ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವುದಿಲ್ಲವೇ? ಈ ಸಮಸ್ಯೆಯನ್ನು ಬಗೆಹರಿಸಲು ನನಗೆ ಸಾಕುಸಾಕಾಗಿ ಹೋಯಿತು. ಕೊನೆಗೆ ಆ ಹುಡುಗನನ್ನು ಕರೆಸಿ ಕಂಪ್ಯೂಟರ್ ಮುಖಾಂತರವೇ ಬೇರೆ ಸಬ್ಜೆಕ್ಟುಗಳನ್ನೂ ನಾನೇ ಪಾಠ ಮಾಡಬೇಕಾಯಿತು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಮತ್ತು ಸಿ.ಬಿ.ಎಸ್.ಈ. ಎರಡರಲ್ಲೂ ಕಂಪ್ಯೂಟರ್ ಶಿಕ್ಷಣ ಮೇಲೆ ಹೇಳಿರುವಂತೆ "ಲೈಟ್" ಸಬ್ಜೆಕ್ಟೇ. ಆದರೆ ಐ.ಸಿ.ಎಸ್.ಈ, ಮತ್ತು ಐ.ಜಿ.ಸಿ.ಎಸ್.ಈ. ಇಲಾಖೆಯಡಿ ಓದುವ ಮಕ್ಕಳಿಗೆ ಇದು ಉಳಿದೆಲ್ಲ ವಿಷಯಗಳಂತೆಯೇ. ಐ.ಸಿ.ಎಸ್.ಈ.ನಲ್ಲಿ, ಹಾಗೆ ನೋಡಿದರೆ, ಒಂಭತ್ತನೆಯ ತರಗತಿಯಲ್ಲಿ ಮಕ್ಕಳು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದಾದ, ತೆಗೆದುಕೊಂಡರೆ ಪರೀಕ್ಷೆಗೆ ಒಟ್ಟು ಇನ್ನೂರು ಅಂಕಗಳಿಗೆ ಸಿದ್ಧವಾಗಬೇಕಾಗುವ, ಮುಖ್ಯವಾದ ವಿಷಯವೇ. ನಾನು ಪ್ರೋಗ್ರಾಮಿಂಗ್ ಪಾಠವನ್ನು ಮಾಡುತ್ತೇನೆ. ಆದರೆ ಕಂಪ್ಯೂಟರ್ ಶಿಕ್ಷಕನೆಂದೇ ಗುರುತಿಸುತ್ತಾರೆ. ಇದರಿಂದಾಗುವ ಸಮಸ್ಯೆಯ ಬಗ್ಗೆ ಯಾರಿಗೆ ತಾನೆ ಅರಿವಿದೆ? ಒಬ್ಬ ಪೋಷಕರು ಬಂದು "ನೀವು ಶಾಲೆಯಲ್ಲಿ ಮಕ್ಕಳಿಗೆ ಫ್ಲಾಶ್, ಫೋಟೋಶಾಪ್, ಮಾಯಾ (ಮುಂತಾದ ಮಲ್ಟೀಮೀಡಿಯಾ ತಂತ್ರಾಂಶಗಳು) ಯಾಕೆ ಹೇಳಿಕೊಡುವುದಿಲ್ಲ? ನಿಮಗೆ ಅವೆಲ್ಲ ಗೊತ್ತಿಲ್ಲದೆ ಹೇಗೆ ಟೀಚರ್ ಆದಿರಿ?" ಎಂದು ನೇರವಾಗಿ ಕೇಳಿದರು. ಅವರ ಜೊತೆಗೇ ಬಂದ ಇನ್ನೊಬ್ಬರು "ಅಷ್ಟೇ ಅಲ್ಲ, ಟ್ಯಾಲಿ, ಪೇಜ್ ಮೇಕರ್, ಕೋರಲ್ ಡ್ರಾ ಕೂಡ ಹೇಳಿಕೊಡಬೇಕು" ಎಂದು ಆಗ್ರಹಿಸಿದ್ದರು. ಪ್ರೌಢಶಾಲೆಯ ಗಣಿತದ ಮೇಷ್ಟ್ರು ಅಂಕಗಣಿತ, ಬೀಜಗಣಿತ, ರೇಖಾಗಣಿತ ಎಲ್ಲವನ್ನೂ ಪಾಠ ಮಾಡುವ ಹಾಗೆಯೇ ಇದೂ ಸಹ ಎಂದುಕೊಂಡಿದ್ದರೇನೋ ಆ ಪೋಷಕರು. "ಬೋರ್ಡು ನಮಗೆ ಏನು ಹೇಳಿದೆಯೋ ಅದನ್ನು ಮಾತ್ರ ಪಾಠ ಮಾಡಬೇಕಾಗುತ್ತೆ" ಎಂದು ಹೇಳಿ ತಪ್ಪಿಸಿಕೊಳ್ಳಬೇಕಾಯಿತು. ಇವರು ಹೇಳಿದ್ದನ್ನೆಲ್ಲಾ ಕಲಿತುಕೊಂಡು ಅದನ್ನು ಪಾಠ ಮಾಡುವಂತಾಗಲು ನನಗೆ ಕೊನೇ ಪಕ್ಷ ಹತ್ತು ವರ್ಷವಾದರೂ ಬೇಕಾಗಬಹುದೆಂದು ಯೋಚಿಸಿ ನಗು ಬಂತು. ನಗುವು ಇನ್ನೂ ಇರುವಾಗಲೇ ಪ್ರಾಂಶುಪಾಲರ ಕೊಠಡಿಯಿಂದ ಕರೆ ಬಂದಿತು. "ಪ್ರಿಂಟರ್ ಕೆಲಸ ಮಾಡುತ್ತಿಲ್ಲ" ಎಂದು. ನಾನು "ನನಗೆ ಅದರ ಬಗ್ಗೆ ಗೊತ್ತಿಲ್ಲ" ಎಂದು ಹೇಳಿಕಳಿಸಿದೆ. ಕೂಡಲೇ ನನ್ನನ್ನು ಬರಹೇಳಿದರು. "ನೀವು ಕಂಪ್ಯೂಟರ್ ಟೀಚರ್ ಆಗಿರುವುದಾದರೂ ಯಾಕೆ, ಪ್ರಿಂಟರ್ ರಿಪೇರಿ ಮಾಡಲು ಬರುವುದಿಲ್ಲವೇ?" ಎಂದು ಕೇಳಿಬಿಟ್ಟರು!

ಕೆಲವು ಪೋಷಕರು ಶಿಕ್ಷಕರನ್ನು ಭೇಟಿ ಮಾಡಲು ಬರುವಾಗ ಕಂಪ್ಯೂಟರ್ ಶಿಕ್ಷಕರನ್ನು ಭೇಟಿ ಮಾಡುವುದೇ ಇಲ್ಲ. "ಅಯ್ಯೋ, ಅದನ್ನು ಓದಿದರೆಷ್ಟು ಬಿಟ್ಟರೆಷ್ಟು" ಎಂಬ ಭಾವನೆಯಿರಬಹುದು. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನದಲ್ಲಿ ಅಂಕಗಳನ್ನು ತೆಗೆದುಕೊಂಡರೆ ಸಾಕು ಎಂದು ಹೇಳುವವರನ್ನೂ ನಾನು ಕಂಡಿದ್ದೇನೆ. ಆದರೆ ಇನ್ನು ಕೆಲವು ಪೋಷಕರು ಇದರ ತದ್ವಿರುದ್ಧ. "ಮನೆಯಲ್ಲಿ ಅದೂ ಇದೂ ಮಾಡುತ್ತಲೇ ಇರುತ್ತಾನೆ ಕಂಪ್ಯೂಟರಲ್ಲಿ. ಮೂರು ಹೊತ್ತೂ ಕಂಪ್ಯೂಟರ್ ಮುಂದೆಯೇ ಇರುತ್ತಾನೆ. ಮಾರ್ಕ್ಕ್ಸ್ ಮಾತ್ರ ಕಮ್ಮಿ. ಯಾಕೆ?" ಎಂದು ನನ್ನನ್ನೇ ಪ್ರಶ್ನಿಸುತ್ತಾರೆ. ಮನೆಯಲ್ಲಿ ಮೂರು ಹೊತ್ತೂ ಕಂಪ್ಯೂಟರ್ ಮುಂದೆಯೇ ಕುಳಿತ ತಮ್ಮ ಮಗನು ಪಾಠದ ಅಭ್ಯಾಸ ಮಾಡುತ್ತಿದ್ದಾನೋ ಫೇಸ್‍ಬುಕ್‍ನಲ್ಲಿ ನಿರತನಾಗಿದ್ದಾನೋ ಇವರಿಗೆ ಹೇಗೆ ತಿಳಿಯಬೇಕು, ಪಾಪ.

ಇನ್ನು ಕೆಲವು ಪೋಷಕರಿಗೆ ಕಂಪ್ಯೂಟರ್ ಶಿಕ್ಷಣವೇ ಸರ್ವಸ್ವವಾಗಿರುತ್ತೆ. ಅವರು ಕೊಡುವ ಕಾರಣವು ಒಂದೇ: "ಎಲ್ಲಾ ಕಡೇನೂ ಕಂಪ್ಯೂಟರು ಬೇಕೇ ಬೇಕು ಈಗ." ಅದಕ್ಕೆಂದೇ ಮನೆಯಲ್ಲಿ ಮೂರು ಮೂರು ಕಂಪ್ಯೂಟರು ತಂದಿಟ್ಟುಕೊಂಡಿರುತ್ತಾರೆ ಕೂಡ. ಎಲ್ಲಾ ಕಡೆಯೂ ಕಂಪ್ಯೂಟರು ಬೇಕು ಎಂಬುದನ್ನು ಮನೆಯಲ್ಲಿ ಎಲ್ಲೆಡೆಯೂ ಇರಬೇಕು ಎಂದು ತಪ್ಪು ಅರ್ಥ ಮಾಡಿಕೊಂಡಿರುತ್ತಾರೇನೋ. ಒಂದನೇ ತರಗತಿಯಲ್ಲಿ ಓದುತ್ತಿರುವ ಮಗುವೂ ಸಹ ಕಂಪ್ಯೂಟರ್ ತಜ್ಞನಾಗಿಬಿಡಬೇಕೆಂಬುವ ಹಂಬಲವಿರುವ ಪೋಷಕರೂ ಇದ್ದಾರೆ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಈ ಮಕ್ಕಳು ಆಟವಾಡುವುದು ಕಂಪ್ಯೂಟರಲ್ಲಿ, ಮೈದಾನದಲ್ಲಲ್ಲ.

ಇನ್ನು ಕಂಪ್ಯೂಟರ್ ಪ್ರಯೋಗಾಲಯದ ಬಳಕೆಯು ರಸಾಯನಶಾಸ್ತ್ರ, ಭೌತಶಾಸ್ತ್ರದ ಪ್ರಯೋಗಾಲಯಗಳಂತಿರುವುದಿಲ್ಲವಷ್ಟೆ? ಕಂಪ್ಯೂಟರ್ ಲ್ಯಾಬೆಂದರೆ ಶಾಲೆಯಲ್ಲಿ ಯಾರು ಯಾರು ಕಂಪ್ಯೂಟರ್ ಆಸಕ್ತರಿರುತ್ತಾರೋ ಅವರೆಲ್ಲರ ತಂಗುದಾಣ. ಅವರು ವಿದ್ಯಾರ್ಥಿಗಳಾಗಬಹುದು, ಶಿಕ್ಷಕರಾಗಬಹುದು, ಅಥವಾ ಬೇರೆ ಸಿಬ್ಬಂದಿ ವರ್ಗದವರೂ ಆಗಬಹುದು.  ಇರುವ 1 Mbps (ಸೆಕೆಂಡಿಗೆ ಒಂದು ಮೆಗಾ ಬಿಟ್) ಇಂಟರ್ನೆಟ್ಟಿನ ಕನೆಕ್ಷನ್ನು ಇಪ್ಪತ್ತು ಕಂಪ್ಯೂಟರುಗಳಿಗೆ ಹರಿದು ಹಂಚಿ ಹೋಗಿರುತ್ತಾದ್ದರಿಂದ ಸಹಜವಾಗಿಯೇ ನಿಧಾನವಾಗಿರುತ್ತೆ. ಆದರೆ ಅವರುಗಳ ದೃಷ್ಟಿಯಲ್ಲಿ ಕಂಪ್ಯೂಟರ್ ಲ್ಯಾಬಿನ ಇಂಟರ್ನೆಟ್ಟು ಶುದ್ಧ ಅಪ್ರಯೋಜಕವಾದದ್ದು. ಶಾಲೆಯಲ್ಲಿ ಅವರುಗಳಿಗೆ ಬ್ಯಾಂಡ್‍ವಿಡ್ತ್ ಪಾಠ ಮಾಡುವುದೊಂದು ಬಾಕಿ. ನಾನು ಕಾಲೇಜಿನಲ್ಲಿದ್ದಾಗ ಕಂಪ್ಯೂಟರ್ ಲ್ಯಾಬಿನ ಮೌಸುಗಳಲ್ಲಿರುತ್ತಿದ್ದ ಗುಂಡುಗಳು ಆಗಾಗ್ಗೆ ಮಾಯವಾಗುತ್ತಿದ್ದವು. ಈಗಿನ ಮೌಸುಗಳಲ್ಲಿ ಗುಂಡುಗಳಿರದ ಕಾರಣ ಬದುಕಿಕೊಂಡವು. ಆದರೆ ಖಾಸಗಿ ಶಾಲೆಯಲ್ಲಿರುವ ಬಹುಪಾಲು ಮಕ್ಕಳಿಗೆ ಕಂಪ್ಯೂಟರ್ ಲ್ಯಾಬಿನಲ್ಲಿರುವ ಯಾವುದೇ ಉಪಕರಣವು ಆಕರ್ಷಕವಾಗಿ ಕಾಣುವುದಿಲ್ಲ. ತಮ್ಮ ಮನೆಗಳಲ್ಲೇ ಅಪ್‍ಡೇಟ್ ಆಗಿರುವ ತಂತ್ರಾಂಶಗಳು, ಉಪಕರಣಗಳು ಇರುವಾಗ ಕಂಪ್ಯೂಟರ್ ಲ್ಯಾಬಿನಲ್ಲಿರುವ ವಸ್ತುಗಳ ಬಗ್ಗೆ ಎಲ್ಲಿಂದ ತಾನೆ ಆಕರ್ಷಣೆ ಹುಟ್ಟಬೇಕು? ಹಾಗಾಗಿ ಉಪಕರಣಗಳು ಕಳ್ಳತನವಾಗಲೀ, ಹಾಳಾಗುವುದಾಗಲೀ ಆಗುವುದೇ ಇಲ್ಲ. ಅನೇಕ ಬಾರಿ ಹೈಸ್ಕೂಲು ಮಕ್ಕಳು, "ಸರ್, ವೀಡಿಯೋ ಎಡಿಟಿಂಗಿಗೆ ಈ ತಂತ್ರಾಂಶ ಬೇಕು, ಎನಿಮೇಷನ್ನಿಗೆ ಇಂಥದ್ದು ಬೇಕು, ಇವೆಲ್ಲ ನಮ್ಮ ಲ್ಯಾಬಲ್ಲಿ ಹಾಕೋಕೆ ಆಗಲ್ಲ, ಕಾನ್ಫಿಗರೇಷನ್ನು ಸಾಲದು" ಎಂದು ನನ್ನ ಬಳಿ ಬಂದು ಹೇಳಿದ್ದಾರೆ. "ಏನು ಮಾಡೋದಪ್ಪಾ, ಇದು ಬಡಪಾಯಿ ಲ್ಯಾಬು" ಎಂದು ಹೇಳಿ ಅವರನ್ನು ಸಮಾಧಾನ ಪಡಿಸಿದ್ದೇನೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಒಬ್ಬ ಕಂಪ್ಯೂಟರ್ ಶಿಕ್ಷಕನು ತನ್ನ ವಯಕ್ತಿಕ ವಲಯದಲ್ಲಿ ಯಾರೊಡನೆಯಾದರೂ ತಾನು ಕಂಪ್ಯೂಟರ್ ಟೀಚರ್ ಎಂದು ಹೇಳಿಕೊಳ್ಳುವುದು ಬಹಳ ಕಷ್ಟದ ಕೆಲಸ. ಒಂದು ಮದುವೆ ಸಮಾರಂಭದಲ್ಲಿ ನನ್ನ ಸಂಬಂಧಿಕರೊಬ್ಬರು ಕೇಳಿದರು: "ಏನು ಮಾಡ್ತಿದ್ದೀಯಪ್ಪಾ ಈಗ?" ಎಂದು. ನಾನು "ಸ್ಕೂಲ್ ಮೇಷ್ಟ್ರಾಗಿದ್ದೇನೆ." ಎಂದೆ. ಅದಕ್ಕೆ ಅವರು "ಅಯ್ಯೋ, ಹೋಗ್ಲಿ ಬಿಡು!" ಎಂದುಬಿಡಬೇಕೆ? ನಾನು ಏನು ಹೇಳಬೇಕೆಂದು ಗೊತ್ತಾಗದೇ ಸುಮ್ಮನಿದ್ದೆ. ಅವರು "ಸರಿ, ಏನ್ ಸಬ್ಜೆಕ್ಟು?" ಎಂದು ಕೇಳಿದರು. ನಾನು "ಕಂಪ್ಯೂಟರ್" ಎಂದೆ. ಅವರ ದೃಷ್ಟಿಯಲ್ಲಿ ನಾನು ಪರಮಾಪರಾಧಿಯಂತೆ ಕಂಡೆ. "ಅಲ್ವೋ, ಅದೇನೇನೋ ಕೋರ್ಸುಗಳನ್ನು ಮಾಡಿಕೊಂಡೆ, ಒಳ್ಳೇ ಕೆಲಸಕ್ಕೆ ಹೋಗೋದು ಬಿಟ್ಟು ಮೇಷ್ಟ್ರಾಗಿದ್ ಯಾಕೆ?" ದುರಂತವೆಂದರೆ ಹೀಗೆ ನನ್ನನ್ನು ಪ್ರಶ್ನಿಸಿದ ಆ ನನ್ನ ಸಂಬಂಧಿಕರು ಒಬ್ಬ ನಿವೃತ್ತ ಶಿಕ್ಷಕಿ.

-ಅ
08. 07. 2013
10.45PM


Sunday, April 28, 2013

ಈ ವರ್ಷದ ಮೊದಲ ಚಾರಣಕ್ಕೆ...

ಹೆಚ್ಚು ಕಮ್ಮಿ ಒಂದುವರೆ ವರ್ಷವಾಯಿತೇನೋ, ಟ್ರೆಕ್ಕು ಮಾಡಿ. ಅಂದು, ಆ ಚಾರಣದಲ್ಲಾದ ವಿಚಿತ್ರ ಬೆಳಕಿನ ಅನುಭವವನ್ನು ಒಂದುವರೆ ವರ್ಷದಿಂದಲೂ ಬರೆಯುತ್ತಲೇ ಇದ್ದೇನೆ, ಇನ್ನೂ ಮುಗಿಸಿಲ್ಲ! ಬಹುಶಃ ಇನ್ನೇನು ಮುಗಿಸುತ್ತೇನೆನ್ನಿಸುತ್ತೆ. 

ಯಾಕೆ ಅಷ್ಟು confident ಆಗಿ ಹೇಳುತ್ತಿದ್ದೇನೆಂದರೆ, ಮುಂದಿನ ವಾರಕ್ಕೆ ಒಂದು ಚಾರಣವು schedule ಆಗಿದೆ. ಈ ಸಲ ಮಿತ್ರ ಸಚ್ಚಿದಾನಂದ ಲೀಡ್ ಮಾಡಲಿದ್ದಾರೆ. ಹಾಗಾಗಿ, ಅಲ್ಲಿಗೆ ಹೋಗುವ ಮುನ್ನ ಬೆಳಕಿನ ಬಗೆಗಿನ ವಿಷಯ ಸಿದ್ಧವಿರುತ್ತೆ. 

ಈ ಮಧ್ಯೆ, ಮೇಷ್ಟ್ರಾಗಿರುವ ಜೊತೆಗೆ, ಸದ್ಯ ವಿದ್ಯಾರ್ಥಿಯೂ ಆಗಿರುವುದರಿಂದ, ಓದುವುದನ್ನು ಬೇರೆ ಶುರು ಮಾಡಿಕೊಂಡುಬಿಟ್ಟಿದ್ದೇನೆ. ಆದರೆ ವಿಧೇಯ ವಿದ್ಯಾರ್ಥಿಯಂತೆ ಓದಲು ಇನ್ನೂ ಆರಂಭಿಸಿಲ್ಲ. ಈ ಚಾರಣವು ಅದಕ್ಕೂ ಸಹ ನಾಂದಿ ಹಾಡುವುದೆಂಬ ಭರವಸೆಯು ನನಗಿದೆ. 

ಮುಂದಿನದು ಚಾರಣವು ಮುಗಿದ ಮೇಲೆ.. 

-ಅ
28.04.2013
5.45AM

Thursday, March 7, 2013

ಬೆಂಗಳೂರಿನಲ್ಲಿ ಬೆಕ್ಕು ಸಾಕುವುದೆಂದರೆ..

ತೀರ್ಥಹಳ್ಳಿಯ ಶ್ರೇಯಸ್ ಮನೆಯಲ್ಲಿ ಅಂದು ಊಟ. ನನ್ನ ಎಲೆಯ ಮೇಲಿದ್ದ ಹಪ್ಪಳವು ಪುಡಿಯಾದಾಗ ಬಂದ "ಫಟ್‍ಟ್‍ಕ್" ಸದ್ದಿಗೆ ಆಕರ್ಷಿತವಾಗಿ ಅಡುಗೆ ಮನೆಯಿಂದ ಊಟದ ಮನೆಗೆ ಓಡಿ ಬಂತು ಅವರ ಮನೆಯ ಬೆಕ್ಕು. ಅದರ ಗಮನವೆಲ್ಲಾ ನಮ್ಮೆಲ್ಲರ ಎಲೆಯ ಮೇಲಿನ ಹಪ್ಪಳದ ಮೇಲೆಯೇ. ಹುಲಿ ಸಿಂಹಗಳು ಬೇಟೆಯಾಡುವಾಗ ಗುರಿಯಿಡುವ ದೃಶ್ಯಗಳನ್ನು ಟಿವಿಯಲ್ಲಿ ನೋಡಿರುತ್ತೇವಲ್ಲ, ಅದೇ ರೀತಿ ಈ ಬೆಕ್ಕು ಹಪ್ಪಳವನ್ನೇ ದಿಟ್ಟಿಸಿ ನೋಡುತ್ತಿತ್ತು. ಯಾವ ಕ್ಷಣದಲ್ಲಿ ಯಾರ ಎಲೆಯ ಮೇಲೆ ಹಾರುವುದೋ ಎಂಬಂತಿತ್ತು ಅದರ ನೋಟ. ಹಪ್ಪಳದ ಸಪ್ಪಳವು ಕಿವಿಗಪ್ಪಳಿಸಿದರೆ ಕುಪ್ಪಳಿಸಿಕೊಂಡಾದರೂ ನಮ್ಮೆಲೆಯ ಮೇಲೆ ಹಾರೀತೆಂಬ ಭೀತಿಯಿಂದಲೇ ಊಟವನ್ನು ಮುಂದುವರೆಸಲು ಹಿಂಜರಿದೆವು. ಅಷ್ಟರಲ್ಲಿ ಶ್ರೇಯಸ್‍ನ ತಾಯಿ ಆ ಬೆಕ್ಕನ್ನು ಒಳಗೆ ಕರೆದು ಏನೋ ಹೇಳಿದರು, ಅದು ಒಳಗೆ ಹೋಗಿ ಒಲೆಯ ಬಳಿ ಬೆಚ್ಚಗೆ ಮಲಗಿಕೊಂಡು ಬಿಟ್ಟಿತು. ಊಟವಾದ ಮೇಲೆ ಆ ಬೆಕ್ಕನ್ನು ಎತ್ತಿಕೊಳ್ಳಲು ನೋಡಿದೆ, ನನ್ನ ಕೈಗೆ ಸಿಗಲೇ ಇಲ್ಲ. ನನ್ನ ಬೆಕ್ಕಿನ ಪ್ರೀತಿಯನ್ನು ನೋಡಿದ ಶ್ರೇಯಸ್ ಹೇಳಿದ "ಇಲ್ಲೆಲ್ಲಾ ಬೆಕ್ಕು ತುಂಬಾ ಕಾಮನ್ನು. ಎಲ್ಲರ ಮನೆಯಲ್ಲೂ ಇರುತ್ತೆ. ಯಾರೂ ಓಡಿಸುವುದಿಲ್ಲ. ನಾಯಿಗಳೂ ಬೆಕ್ಕುಗಳೂ ಒಟ್ಟೊಟ್ಟಿಗೇ ಇರುತ್ತವೆ. ಒಂದು ಸಲ ನಮ್ಮ ಮನೆಯಲ್ಲಿ ಎಂಟು ಬೆಕ್ಕುಗಳಿದ್ದವು. ಎಂಟಕ್ಕೂ ನಮ್ಮ ಮನೆಯಲ್ಲೇ ಊಟ" ಎಂದು. "ಎಂಟು ಬೆಕ್ಕುಗಳನ್ನು ಸಾಕುವುದು ಕಷ್ಟವಾಗಲಿಲ್ಲವೇ?" ಎಂದು ನಾನು ಅವರ ಅಮ್ಮನನ್ನು ಕೇಳಿದೆ. ಅವರು "ಬೆಕ್ಕನ್ನು ನಾವು ಸಾಕಬೇಕೇ? ಅವೇ ಸಾಕಿಕೊಳ್ಳುತ್ತವೆ. ತೋಟದಲ್ಲಿ, ಗುಡಾಣದಲ್ಲಿ ಇಲಿ, ಹೆಗ್ಗಣಗಳನ್ನು ಹಿಡಿದು ತಿನ್ನುತ್ತವೆ. ಬಂದಾಗ ಒಂದರ್ಧ ಲೋಟ ಹಾಲು ಹಾಕುತ್ತೇವೆ, ಕುಡಿದು ಹೋಗುತ್ತವೆ." ಎಂದರು.

ನನ್ನ ಗೆಳತಿಯೊಬ್ಬಳ ಮನೆಯಲ್ಲಿ ಅವರು ಬೆಕ್ಕು ಸಾಕಿದ್ದ ರೀತಿಗೂ ತೀರ್ಥಹಳ್ಳಿಯ ಶ್ರೇಯಸ್ ಮನೆಯಲ್ಲಿ ನಾನು ಕೇಳಿದ ವಿಷಯಕ್ಕೂ ಅಜಗಜಾಂತರ. ಹದಿನೈದು ಸಾವಿರ ರೂಪಾಯಿ ಕೊಟ್ಟು ತಾವಿದ್ದ ಅಪಾರ್ಟ್ಮೆಂಟಿಗೆ ಒಂದು ಬೆಕ್ಕನ್ನು ತಂದಿದ್ದಳು. ಬೆಂಗಳೂರಿನಲ್ಲಿ ಬೆಕ್ಕನ್ನೂ ಸಹ ಮಾರುತ್ತಾರೆ - ಅದೂ ಸಾವಿರಾರು ರೂಪಾಯಿಗಳಿಗೆ ಎಂದು ನನಗೆ ಗೊತ್ತಾಗಿದ್ದೇ ಆಗ. ಆ ಬೆಕ್ಕು ಪರ್ಷಿಯಾದಂತೆ. ಹಾಗಂತ ಅದನ್ನೇನೂ ಪಾರ್ಸೀ ಭಾಷೆಯಲ್ಲಿ ಮಾತನಾಡಿಸುತ್ತಿರಲಿಲ್ಲ. ಆ ಬೆಕ್ಕಿನ ಮುಂದಾವುದು ಹಿಂದಾವುದು ಎಂದು ಗೊತ್ತಾಗುವುದೂ ಕಷ್ಟವಿತ್ತು. ಅದಕ್ಕೆ ನಾವು ತಿನ್ನುವ, ಅಥವಾ ನಾವು ತಿಂದು ಮಿಕ್ಕಿದ ತಂಗಳನ್ನವನ್ನು ಕೊಡುವಂತಿಲ್ಲ. ಮೊಟ್ಟೆ, ಮಾಂಸ, ಹಾಲು, ಬೆಣ್ಣೆ - ಜೊತೆಗೆ ಕ್ಯಾಟ್ ಫುಡ್ (ಮೊಟ್ಟೆ ಮಾಂಸ ಹಾಲುಗಳು ಕ್ಯಾಟ್ ಫುಡ್ ಅಲ್ಲವೇನೋ ಎಂಬಂತೆ) - ತಿಂಗಳಿಗೆ ಏನಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ರೂಪಾಯಿ ಬೆಕ್ಕಿಗೆ. ದುಡ್ಡು ಕೊಟ್ಟು ತಂದ ಈ ಬೆಕ್ಕು ಮನೆಯಲ್ಲಿ ಒಂದು ಜಿರಲೆಯನ್ನು ಸಹ ಸಾಯಿಸುತ್ತಿರಲಿಲ್ಲ. ಆದರೆ ಸತ್ತ ಕೋಳಿಯ ಮಾಂಸವನ್ನು ಮಾತ್ರ ಚೆನ್ನಾಗಿ ತಿನ್ನುತ್ತಿತ್ತು. ಬೆಕ್ಕನ್ನು ಎತ್ತಿಕೊಳ್ಳಲಾಗುತ್ತಿರಲಿಲ್ಲ. ತೂಕವು ಸುಮಾರು ಎಂಟರಿಂದ ಹತ್ತು ಕೆ.ಜಿ. ಇತ್ತೇನೋ. ಮೈ ತುಂಬ ಕೂದಲು - ಸವರಲು ಹಿತವಾಗಿತ್ತು. ಅದಕ್ಕೂ ಯಾರಾದರೂ ಮೈ ಸವರುತ್ತಿದ್ದರೆ ಹಿತವಾಗಿರುತ್ತಿತ್ತು. ಪಕ್ಕದಲ್ಲಿ ಗಂಟೆಗಟ್ಟಲೆ ನಿದ್ದೆ ಮಾಡುತ್ತಿತ್ತು - ಊಟದ ಸಮಯದವರೆಗೂ. ಆ ಬೆಕ್ಕನ್ನು ಹೊರಗೆ ಬಿಡುವಂತಿರಲಿಲ್ಲ. ನಾಯಿಗಳು ಕೊಂದುಬಿಟ್ಟರೆ? ಮನೆಯಲ್ಲಿ ಯಾರಾದರೂ ಇರಲೇ ಬೇಕು, ಒಂದನ್ನೇ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಆ ಬೆಕ್ಕೂ ಸಹ ಅವರ ಮನೆಯನ್ನು ಹೊರತು ಹೊರಗಿನ ಪ್ರಪಂಚವನ್ನು ಕಂಡೇ ಇರಲಿಲ್ಲ. ಹೊರಗೆ ಬೆಕ್ಕುಗಳಿವೆ, ನಾಯಿಗಳಿವೆ, ಇಲಿಗಳಿವೆ, ಪಾರಿವಾಳಗಳಿವೆ, ಸೂರ್ಯ-ಚಂದ್ರ-ಆಕಾಶ ಇವೆಲ್ಲವೂ ಇವೆಯೆಂಬುದೇ ಅದಕ್ಕೆ ಗೊತ್ತಿರಲಿಲ್ಲ. ಸಾಕುನಾಯಿಯಂತೆ ಮನೆಯೊಳಗೆ ಬಂಧಿತವಾಗಿತ್ತು. ಮನೆಗೆ ಯಾರಾದರೂ ಬಂದರೆ ರೂಮಿನೊಳಗೆ ಮಂಚದಡಿ ನುಸುಳಿಕೊಂಡುಬಿಡುತ್ತಿತ್ತು. ಹೀಗಿರುವಾಗ "Curiosity killed the cat" ಎಂಬ ಆಂಗ್ಲ ಮಾತಿನಂತೆ ತೆರೆದ ಬಾಲ್ಕನಿಯ ಬಾಗಿಲಿನತ್ತ ಹೋಯಿತು. ಅಲ್ಲಿಗೆ ಬಂದಿದ್ದ ಪಾರಿವಾಳಗಳೆಡೆಗೆ ಆಕರ್ಷಿತವಾಯಿತು. ಪಾರಿವಾಳಗಳು ಮೇಲೆ ಹಾರಿದವು. ಅವುಗಳನ್ನು ಹಿಡಿಯಲು ಹೋದ ಈ ಪಾರ್ಸೀ ಬೆಕ್ಕು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣಬಿಟ್ಟಿತು.

ಶೀಗವಾಳಿನ (ಮೈಸೂರಿನಿಂದ ಸುಮಾರು ಎಂಭತ್ತು ಕಿಲೋಮೀಟರ್ ದೂರದಲ್ಲಿರುವ ಹಳ್ಳಿ - ನನ್ನ ಹೆಂಡತಿಯ ತವರೂರು) ಮನೆಗೆ ಬರುತ್ತಿದ್ದ ಬೆಕ್ಕಿಗೆ ಈ ರೀತಿ ಯಾವ ಭಯವೂ ಇರಲಿಲ್ಲವಾದರೂ ತೀರ್ಥಹಳ್ಳಿಯ ಬೆಕ್ಕಿನಷ್ಟು ಸ್ವಾತಂತ್ರ್ಯವಿರಲಿಲ್ಲ. ಅದಕ್ಕೆ ಕಾರಣಗಳು ಹಲವು. ಶೀಗವಾಳಿನ ಬೆಕ್ಕು ಸಾವಿರಾರು ರೂಪಾಯಿ ಬೆಲೆಬಾಳುವ ಪಾರ್ಸೀ ಬೆಕ್ಕಲ್ಲದಿದ್ದರೂ ಅದಕ್ಕಿಂತಲೂ ಸೋಮಾರಿಯಾಗಿತ್ತು. ಇಲಿಗಳು ತನ್ನ ಎದುರಿಗೇ ಓಡಾಡಿದರೂ ಆಶ್ಚರ್ಯದಿಂದ ಅವುಗಳನ್ನು ನೋಡುತ್ತಿತ್ತೇ ವಿನಾ ಒಮ್ಮೆಯೂ ಅದರ ಮೇಲೆ ಹಾರಿ ಕೊಲ್ಲುವುದಿರಲಿ, ಅವುಗಳನ್ನು ಓಡಿಸುತ್ತಲೂ ಇರಲಿಲ್ಲ. ಅಲ್ಲದೆ, ಮನೆಯಲ್ಲಿದ್ದ ಹಾಲನ್ನು, ತುಪ್ಪವನ್ನು ಯಥೇಚ್ಛವಾಗಿ ಸ್ವಾಹಾ ಮಾಡುತ್ತಿತ್ತು. ವಾಂತಿ ಭೇದಿಯು ಇದರ ಹವ್ಯಾಸವಾಗಿತ್ತು. ಇಲಿಯನ್ನು ಹಿಡಿಯದ ಈ ಬೆಕ್ಕು ಒಮ್ಮೆ ಪೊದೆಯೊಳಗಿಂದ ಓತಿಕೇತವನ್ನು ಹಿಡಿದುಕೊಂಡು ಮನೆಯೊಳಗೆ ಬಂದುಬಿಟ್ಟಿತು. ಊರಿನ ಜನ "ಏನೇನೆಲ್ಲಾ ತರುತ್ತೆ ನೋಡು, ಇದನ್ನು ಸೇರಿಸಿಕೊಳ್ಳುತ್ತೀಯಲ್ಲ" ಎಂದರು. ಅಲ್ಲದೆ ಮನೆಗೆ ಬಂದ ಕೆಲವು "ಮಡಿವಂತ" ಬಂಧುಗಳೂ ಸಹ "ಥೂ ಆ ಅಸಹ್ಯವನ್ನು ಮನೆಯೊಳಗೆ ಬಿಟ್ಟುಕೊಳ್ಳಬಾರದು" ಎಂದು ಹೇಳತೊಡಗಿದರು. ನನ್ನ ಮಾವನವರಿಗೆ ಇದರ ಬಗ್ಗೆ ಸಿಟ್ಟು ಬರಲು ಇನ್ನು ಹೆಚ್ಚಿಗೆ ಕಾರಣಗಳು ಬೇಕಾಗಿರಲಿಲ್ಲ. ಆ ಬೆಕ್ಕು ಮನೆಯೊಳಗೆ ಬಾರದ ಹಾಗೆ ಆಜ್ಞೆಯನ್ನು ಹೊರಡಿಸಿದರು. ಆ ಬೆಕ್ಕು ಇನ್ನೂ ಜೀವಂತವಾಗಿದೆ - ಅಷ್ಟೇ ಸೋಮಾರಿತನದಿಂದಲೇ. ಒಮ್ಮೊಮ್ಮೆ ಮನೆಯ ಮುಂದೆ ಜಗುಲಿಯ ಮೇಲೆ ಕುಳಿತುಕೊಂಡಿರುತ್ತೆ. ಒಳಗೆ ಬರಲು ಆಗಾಗ್ಗೆ ಪ್ರಯತ್ನ ಮಾಡುತ್ತಿರುತ್ತೆ - ಒಮ್ಮೊಮ್ಮೆ ರೂಮಿನ ಕಿಟಕಿಯಿಂದ, ಹಿತ್ತಲ ಬಾಗಿಲಿನಿಂದ, ಅಟ್ಟದ ಸಂದಿಯಿಂದ, ಅಡುಗೆ ಮನೆಯ ಕಿಂಡಿಯಿಂದ ಒಳಗೆ ನುಸುಳಿಬಿಡುತ್ತೆ - ಭಂಡತನದಿಂದ! ವಿಧಿಯಿಲ್ಲದೆ ಮನೆಯವರೆಲ್ಲರೂ ಶಪಿಸಿ ಅಟ್ಟುತ್ತಿರುತ್ತಾರೆ.

ಇವೆಲ್ಲ ನೆನಪಾದದ್ದು ಮೊನ್ನೆ ಮಧ್ಯರಾತ್ರಿಯಲ್ಲಿ ಕಿಟಕಿಯಿಂದ ರೂಮಿನೊಳಗೆ ನುಸುಳಿದ ಪುಟ್ಟ ಬೆಕ್ಕಿನ ಮರಿಯನ್ನು ಕಂಡಾಗ. ಅದು ಹಸಿವಿನಿಂದ, ಭಯದಿಂದ, ರಕ್ಷಣೆ ಸಿಗಬಹುದೆಂಬ ಹಂಬಲದಿಂದ, ಕುತೂಹಲದಿಂದ ಮನೆಯೆಲ್ಲಾ ಓಡಾಡತೊಡಗಿತು. ನನ್ನ ಕಾಲುಗಳನ್ನು ತನ್ನ ಮೈಯಿಂದ ಸವರುತ್ತ, "ಏನಾದರೂ ಕೊಡು" ಎಂದು ಕೇಳುತ್ತಿತ್ತು. ಆರು ತಿಂಗಳಷ್ಟೇ ವಯಸ್ಸಾದ ನನ್ನ ಮಗಳು ಜ್ಯೋತ್ಸ್ನಾ ಬೆಕ್ಕಿನ ಕುತೂಹಲದಿಂದಲೇ ಅದು ಹೋದಲ್ಲೆಲ್ಲಾ ಕಣ್ಣು ಹಾಯಿಸಿ ನೋಡುತ್ತ ಚಕಿತಳಾಗಿದ್ದಳು. ಮನೆಯಲ್ಲಿ ಮಗು ಇರುವುದರಿಂದ ಬೆಕ್ಕಿಗೆ ಹಾಲು ಕೊಡುವುದಾಗಲೀ, ಅದನ್ನು ಸಾಕಿಕೊಳ್ಳುವ ಯೋಚನೆಯಾಗಲೀ ಮಾಡುವುದು ತರವಲ್ಲ ಎಂದು ಮನೆಯವರೆಲ್ಲರೂ ತೀರ್ಮಾನ ಮಾಡಿದ್ದರಿಂದ ಆ ಬೆಕ್ಕಿನ ಮರಿಯನ್ನು ಎತ್ತುಕೊಂಡು ಮತ್ತೆ ಹಿಂದಿರುಗಿ, ನಮ್ಮ ಮನೆಯ ಕಿಟಕಿಯ ಹಾದಿಯನ್ನು ಹಿಡಿಯಲಾರದಂತಹ ಸ್ಥಳಕ್ಕೆ ಬಿಟ್ಟುಬರಬೇಕಾಯಿತು. ಅಲ್ಲದೆ ಆ ಬೆಕ್ಕಿನ ಮೈ ತುಂಬ ಹೇನುಗಳು. ಚಿಕ್ಕಂದಿನಲ್ಲಿ ತಾತ ಹೇಳುತ್ತಿದ್ದ "ಪೂನೆ - ಕೂರೆ" (ಸಂಕೇತಿ ಭಾಷೆಯಲ್ಲಿ ಪೂನೆಯೆಂದರೆ ಬೆಕ್ಕು ಎಂದರ್ಥ) ಕಥೆಯೂ ಒಂದರ್ಧ ನಿಮಿಷದಲ್ಲೇ ನೆನಪಿಗೆ ಬಂದು ಹೋಯಿತು. ಕೈಯಿಂದ ಕೆಳಕ್ಕಿಳಿಸಿದ ಬಳಿಕವೇ ನನ್ನನ್ನು ನೋಡಿ ಅಸಹಾಯಕತೆಯ "ಮಿಯಾಂವ್" ಎಂದಾಗ ಹೆಚ್ಚು ಹೊತ್ತು ಅಲ್ಲಿ ನಾನು ನಿಲ್ಲಲಿಲ್ಲ.

ಬಹುಶಃ ಇನ್ನೊಂದು ವರ್ಷವಾದ ಮೇಲಾಗಿದ್ದಿದ್ದರೆ ಮಗಳೇ ಒತ್ತಾಯ ಮಾಡುತ್ತಿದ್ದಳೇನೋ, "ಸಾಕಿಕೊಳ್ಳೋಣ, ಬೆಕ್ಕನ್ನು" ಎಂದು. ನಾನೂ ನಮ್ಮಮ್ಮನನ್ನು ಹಾಗೆಯೇ ಕೇಳಿದ್ದೆ, ಚಿಕ್ಕವನಾಗಿದ್ದಾಗ - ನಮ್ಮ ಮನೆಗೆ ಬಂದ ಬೆಕ್ಕಿನ ಮರಿಗೆ ಹಾಲನ್ನು ಕೊಟ್ಟ ನಂತರ. ಬೆಂಗಳೂರಿಗರು ನಾಯಿಯನ್ನು ಸಾಕುತ್ತಾರೆ - ತಮ್ಮ ಮನೆಯನ್ನು ಕಳ್ಳಕಾಕರಿಂದ, ಅಂಚೆಯವರಿಂದ, ಸೇಲ್ಸ್ಮೆನ್‍ಗಳಿಂದ, ಇತರೆ ಬೇಡದ ಜನರಿಂದ ರಕ್ಷಣೆಯನ್ನು ಪಡೆಯಲು. ಆದರೆ ಬೆಕ್ಕನ್ನು ಸಾಕಿಕೊಳ್ಳುವವರು ಕಡಿಮೆಯೇ. ಅದಕ್ಕೆ ಕಾಲ ಕಾಲಕ್ಕೆ ಹಾಲು, ಮೊಸರು ಎಲ್ಲ ಕೊಡಬೇಕು - ಇಲ್ಲವಾದರೆ ಕಾಲಡಿಯಲ್ಲೇ ಸುತ್ತಿ ಸುತ್ತಿ ಗಲಾಟೆ ಮಾಡುತ್ತ ರಾದ್ಧಾಂತ ಮಾಡುತ್ತೆ. ಅದಲ್ಲದೆ, ಸದ್ದಿಲ್ಲದೆ ಮನೆಯೆಲ್ಲಾ ತಿರುಗಾಡಲು ಸಾಮರ್ಥ್ಯ ಇರುವುದರಿಂದ ಯಾವ ಕ್ಷಣದಲ್ಲಿ ಅಡುಗೆ ಮನೆಯ ಪಾತ್ರೆಯೊಳಗಿರುವ ಹಾಲು ಮೊಸರುಗಳು ಮಾಯವಾಗುವುದೋ ಗೊತ್ತಿಲ್ಲ. ಪಾತ್ರೆಯ ಮುಚ್ಚಳವು ಕೆಳಗೆ ಬಿದ್ದಾಗಲೇ ತಿಳಿಯುವುದು. ಜೊತೆಗೆ, ಬೆಕ್ಕಿನ ಕೂದಲು ಆಹಾರದ ಜೊತೆ ಬೆರೆತುಕೊಳ್ಳಬಹುದು, ಬಟ್ಟೆಗೆಲ್ಲಾ ಮೆತ್ತುಕೊಳ್ಳಬಹುದು. ಇವೆಲ್ಲ ಸಾಲದೆಂಬಂತೆ ಮೂಲೆಯಲ್ಲಿ ಕಟ್ಟಿ ಹಾಕುವಂತಿಲ್ಲ - ಅದು ಬಂದಾಗೆಲ್ಲ ಮುದ್ದು ಮಾಡಬೇಕು. ಮನೆಯಲ್ಲಿರುವ ಮಂಚವು, ಹಾಸಿಗೆಗಳು, ಸೋಫಾಗಳು, ತೊಟ್ಟಿಲು - ಎಲ್ಲವೂ ತನಗೆಂದೇ ಹಾಕಿರುವುವೆಂದು ಭಾವಿಸಿ ಅವುಗಳ ಮೇಲೆ ಗುಂಡುಸುತ್ತಿಕೊಂಡು ಗೊರಕೆ ಹೊಡೆಯುತ್ತಿರುತ್ತೆ. ಎಬ್ಬಿಸಲು ಹೋದರೆ ಸರಕ್ಕನೆ ಪರಚಿ ಪರಾರಿಯಾಗಲೂ ಬಹುದು! ಇಷ್ಟೆಲ್ಲಾ "ಕೃತಘ್ನತೆ"ಯ ಗುಣವನ್ನು ಹೊಂದಿರುವ ಬೆಕ್ಕನ್ನು ಸಾಕುವ ಆಸಕ್ತಿಯಾದರೂ ಹೇಗೆ ಬರಬೇಕು! "ಹಾವಿಗೆ ಹಾಲೆರೆದಂತೆ" ಎಂಬ ಮಾತಿನ ಬದಲು, "ಬೆಕ್ಕಿಗೆ ಹಾಲೆರೆದಂತೆ" ಎಂದು ಹೇಳಬಹುದು - ಹಾವು ಹಾಲು ಕುಡಿಯುವುದೂ ಇಲ್ಲ, ಬೆಕ್ಕು ಕುಡಿದೇ ಕುಡಿಯುತ್ತೆ - ದುಬಾರಿ ಹಾಲನ್ನು!

"ಬೆಕ್ಕನ್ನು ಸಾಕಿಕೊಳ್ಳೋಣ" ಎಂದು ನಾನು ಹೇಳಿದಾಗ ಬಹುಶಃ ಅಮ್ಮನಿಗೆ ಇವೆಲ್ಲಾ ಹೊಳೆಯಿತೆನ್ನಿಸುತ್ತೆ. ಅಮ್ಮ "ನಿನ್ನನ್ನು ಸಾಕ್ತಾ ಇಲ್ವಾ, ಸಾಕು ಅದು, ಬೆಕ್ಕೇನೂ ಬೇಡ" ಎಂದು ಮೊದಲು ಹೇಳಿದರಾದರೂ, ಆಮೇಲೆ ಬೆಕ್ಕಿನ ಚಲನವಲನಗಳನ್ನು ನೋಡಿ, ಅವರೂ ಆಕರ್ಷಿತರಾದರು. ಆರಂಭದಲ್ಲಿ ಕನಿಕರ, ಬಳಿಕ ಪ್ರೀತಿ. ಆ ಬೆಕ್ಕು ನಮ್ಮ ಮನೆಯ ಸದಸ್ಯಳಾಗಲು ಹೆಚ್ಚು ಕಾಲವಾಗಲಿಲ್ಲ. ಆದರೆ ಮನೆಗೆ ಬಂದು ಹೋಗುವವರ ಆಕ್ಷೇಪಣೆಗಳೇನೂ ಕಡಿಮೆಯಿರಲಿಲ್ಲ. ಬೆಕ್ಕು ಮಾಂಸಾಹಾರಿಯಾದ್ದರಿಂದ ಬ್ರಾಹ್ಮಣರು ಸಾಕಿಕೊಳ್ಳಬಾರದು ಎಂದು ಸಂಬಂಧಿಕರೊಬ್ಬರು ಹೇಳಿದರು. ಇನ್ನೊಬ್ಬರು ಬೆಕ್ಕಿನ ಕೂದಲು ಹೊಟ್ಟೆಗೆ ಹೋದರೆ ವಾಸಿಯಾಗದ ಜ್ವರ ಬರುತ್ತೆ ಎಂದು ವಿಜ್ಞಾನ ಹೇಳಿದರು. ಮತ್ತೊಬ್ಬರು "ನಾಯಿಯನ್ನು ಸಾಕಿಕೊಳ್ಳಿ - ಅದು ಮನೆಯ ಮಕ್ಕಳು ಚೆನ್ನಾಗಿರಲಿ ಎನ್ನುತ್ತಿರುತ್ತೆ, ಯಾಕೆಂದರೆ, ಮಿಕ್ಕ ಊಟವೆಲ್ಲ ತನಗೇ ಸಿಗುತ್ತಲ್ಲ ಅದಕ್ಕೆ. ಬೆಕ್ಕು ಮನೆಯ ಮಕ್ಕಳು ಸಾಯಲಿ ಎನ್ನುತ್ತಿರುತ್ತೆ, ಯಾಕೆಂದರೆ, ಮಕ್ಕಳ ಊಟವೂ ತನಗೇ ಸಿಗಲಿ ಎಂಬ ದುರಾಸೆ ಬೆಕ್ಕಿಗೆ." ಎಂದರು. ಪಕ್ಕದ ಮನೆಯವರು ಹೇಳಿದ ಮಾತನ್ನು ಮಾತ್ರ ಪರಿಗಣಿಸಬಹುದಾಗಿತ್ತು - "ಈ ಬೆಂಗಳೂರಿನ ಬಿಜ಼ಿ ಜೀವನದಲ್ಲಿ ನೀವು ಬೆಳಿಗ್ಗೆ ಹೋದರೆ ಸಂಜೆಯೇ ಮನೆಗೆ ಬರುವುದು, ನೀವಿಲ್ಲದಿರುವಾಗ ಬೆಕ್ಕು ಮನೆಯೊಳಗೆ ನುಗ್ಗಿ ಕದ್ದು ಹಾಲು ಕುಡಿಯದೇ ಇರುತ್ತದೆಯೇ? ಮನೆಯೊಳಗೆ ಎಲ್ಲೆಲ್ಲಿ ಏನೇನು ಇಟ್ಟಿರುತ್ತೀರಿ ಎಂದು ಬೆಕ್ಕಿಗೆ ಗೊತ್ತಾಗೋಕೆ ಎರಡು ದಿನ ಸಾಕು. ನಿಮ್ಮ ಮನೆಯಲ್ಲಿ ಫ್ರಿಡ್ಜು ಬೇರೆ ಇಲ್ಲ!" ಅವರು ಎಚ್ಚರಿಕೆಯನ್ನು ಕೊಟ್ಟರೂ ನನಗೆ ಮಾತ್ರ ಸಂದೇಹ ಬಗೆ ಹರಿಯಲಿಲ್ಲ. ಬೆಕ್ಕು ಹಾಲನ್ನು "ಕದ್ದು" ಕುಡಿಯುತ್ತೆ ಎಂದು ಇವರಿಗೆ ಹೇಗೆ ಗೊತ್ತು? ಹಸಿವಾದಾಗ ಊಟ ಸಿಕ್ಕರೆ ತಿನ್ನುವುದು ಎಲ್ಲ ಪ್ರಾಣಿಯ ಧರ್ಮವಷ್ಟೆ?

ಇಷ್ಟಕ್ಕೂ ಬೆಕ್ಕನ್ನು ನಾಯಿಯ ರೀತಿ ಇಪ್ಪತ್ನಾಲ್ಕು ಗಂಟೆಯೂ ಮನೆಯೊಳಗಿಟ್ಟುಕೊಂಡು ಸಾಕಿಕೊಳ್ಳಬೇಕಾಗಿಲ್ಲ. ಅದು ಹಸಿವಾದಾಗ ಬರುತ್ತೆ, ಹೊಟ್ಟೆ ತುಂಬಿದ ಮೇಲೆ ಮುದ್ದಿಸಿಕೊಂಡು, ಒಂದಿಷ್ಟು ನಿದ್ದೆ ಮಾಡಿ ಮತ್ತೆ ಬೇರೆಲ್ಲೋ ಹೋಗುತ್ತೆ - ಇನ್ನೊಬ್ಬರ ಮನೆಯಲ್ಲಿ ಇದನ್ನೇ ಮಾಡಲು. "ಒಂದು ಮನೆಯಲ್ಲೆಲ್ಲಿರುತ್ತೆ ಬೆಕ್ಕು, ಅದು ಏಳು ಮನೆ ಚೀಲಿ" ಎಂದು ಮನೆಗೆ ಬಂದಾಗ ನಮ್ಮತ್ತೆ ಹೇಳಿದರು. ಆ ಕ್ಷಣ ನನಗೆ ಅದರ ಅರ್ಥವಾಗಲಿಲ್ಲ. ಅವರ ಪ್ರಕಾರ ಒಬ್ಬರ ಮನೆಯಲ್ಲಿ ನೀಯತ್ತಿನಿಂದ ಬೆಕ್ಕು ತಾನು ಸಾಯುವವರೆಗೂ ಇರುವುದಿಲ್ಲ, ಬದಲಿಗೆ ತನ್ನ ಜೀವಿತಾವಧಿಯಲ್ಲಿ ಏಳು ಮನೆಗಳಲ್ಲಿರುತ್ತೆ ಎಂದು. ಆದರೆ ನಮ್ಮ "ಬತ್ತಿ"ಯ ವಿಷಯದಲ್ಲಿ ಇದು ಸುಳ್ಳಾಗಿತ್ತು. ಬಹುಶಃ ಎಲ್ಲ ಬೆಕ್ಕುಗಳ ವಿಷಯದಲ್ಲೂ ಇದು ಸುಳ್ಳೇ. ಏಳು ಮನೆ ಚೀಲಿಯ ಅರ್ಥವು ನನಗೆ ನಿಧಾನಕ್ಕೆ ಗೋಚರಿಸಿತು. ಅದನ್ನು ಆಮೇಲೆ ವಿವರಿಸುತ್ತೇನೆ. ಈಗ ನಮ್ಮ ಬೆಕ್ಕಿಗೆ "ಬತ್ತಿ" ಎಂಬ ಹೆಸರು ಯಾಕೆ ಬಂದಿತೆಂದು ಹೇಳಬೇಕಿದೆ. ಮೇಲೆ ಹೇಳಿದ ಯಾವುದೇ ಅವಗುಣಗಳೂ ನಮ್ಮ ಬೆಕ್ಕಿಗೆ ಇರದೇ ಇದ್ದ ಕಾರಣ ಅದು ಬೆಕ್ಕಿನ ಜಾತಿಗೇ ಅವಮಾನ ಎಂದು ಪರಿಗಣಿಸಬಾರದು. ಕದ್ದು ಹಾಲು ಕುಡಿಯುತ್ತಿರಲಿಲ್ಲ. ಮನೆಯೊಳಗೆ ಮಲಮೂತ್ರವಿಸರ್ಜನೆ ಮಾಡುತ್ತಿರಲಿಲ್ಲ. ಎಷ್ಟೇ ಕೀಟಲೆ ಮಾಡಿದರೂ ಕಚ್ಚುತ್ತಿರಲಿಲ್ಲ, ಪರಚುತ್ತಿರಲಿಲ್ಲ. ನಾನು ಅದರ ಬಾಲವನ್ನು ಹಿಡಿದು ಜಗ್ಗಾಡಿದರೆ ಅದು ಸಂತೋಷದಿಂದ ನನ್ನನ್ನು ಆಟವಾಡಿಸುವಂತೆ ಬಾಲವನ್ನು ಇನ್ನೂ ಅಲ್ಲಾಡಿಸುತ್ತಿತ್ತು. ಅದಕ್ಕಿದ್ದ ಒಂದು ವ್ಯಸನವೆಂದರೆ ದೇವರ ಮೆನೆಯೊಳಗೆ ಹೋಗಿ ದೀಪದ ಸೊಡರಿನಿಂದ ಬತ್ತಿಯನ್ನು ಕಚ್ಚಿಕೊಂಡು ಬಂದು ತಿಂದುಬಿಡುವುದು. ಪ್ರತಿ ದಿನವೂ ಸೊಡರಿನಿಂದ ಬತ್ತಿಯು ಮಾಯವಾಗುತ್ತಿದ್ದುದನ್ನು ಗಮನಿಸಿದ ಅಮ್ಮ ಒಂದು ದಿನ ರೆಡ್ ಹ್ಯಾಂಡಾಗಿ ಹಿಡಿದರು. ಅಂದಿನಿಂದ ಅದಕ್ಕೆ ಬತ್ತಿ ಎಂಬ ಹೆಸರು ಉಳಿದುಕೊಂಡಿತು. ಆ ಹೆಸರನ್ನು ಅದು ಇಷ್ಟ ಪಟ್ಟಿತೆನ್ನಿಸುತ್ತೆ - ಬತ್ತಿ ಎಂದು ಕರೆದಾಗಲೆಲ್ಲವೂ ತನ್ನೆರಡೂ ಕಣ್ಣನ್ನು ಮುಚ್ಚಿ "ಮಿಯಾಂವ್" ಎಂದು ನನ್ನ ಕಾಲಿಗೆ ತನ್ನ ಬೆನ್ನನ್ನು ಸವರುತ್ತಿತ್ತು.

ಬತ್ತಿಗೆ ದೇವರ ಮನೆಯ ಬತ್ತಿಯನ್ನು ಬಿಟ್ಟರೆ ನೂಡಲ್ಸ್ ಎಂದರೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ಮಾಂಸಾಹಾರವು ಅದಕ್ಕೆ ಸಿಗಲು ಅವಕಾಶವೇ ಇರಲಿಲ್ಲ. ಇಲಿಯನ್ನು ಹಿಡಿಯಬೇಕಾದರೆ ಮೋರಿಯೊಳಗೆ ನುಗ್ಗಿ ಸಾಹಸ ಮಾಡಬೇಕು. ಬೇರೆ ಹುಳು ಹುಪ್ಪಟೆಗಳು ಅಷ್ಟಾಗಿ ರುಚಿಕರವಲ್ಲ - ಬೆಕ್ಕಿಗೂ. ಗುಬ್ಬಚ್ಚಿಯಂತಹ ಸಣ್ಣ ಸಣ್ಣ ಹಕ್ಕಿಗಳ ಪರಿಚಯ ಬೆಂಗಳೂರಿಗರಿಗೂ ಬೆಂಗಳೂರಿನಲ್ಲಿರುವ ಬೆಕ್ಕುಗಳಿಗೂ ಇರಲು ಸಾಧ್ಯವೇ ಇಲ್ಲ. ಅಳಿಲು, ಓತಿಕೇತ, ಮುಂತಾದವುಗಳನ್ನು ತಿನ್ನಬಹುದೆಂದೂ ತಿಳಿದಿರುವುದಿಲ್ಲ ಇಲ್ಲಿನ ಬೆಕ್ಕುಗಳಿಗೆ. ನಮ್ಮ ಮನೆಯಲ್ಲಿ ನೂಡಲ್ಸ್ ಬಹಳ ಸಾಮಾನ್ಯ ತಿಂಡಿಯಾಗಿತ್ತು. ನಾನು ಅಡುಗೆ ಮನೆಯಲ್ಲಿ ಟೀ ಮಾಡುವುದು, ಮತ್ತು ನೂಡಲ್ಸ್ ಮಾಡುವುದು - ಎರಡನ್ನು ಮಾತ್ರವೇ ಕರಗತ ಮಾಡಿಕೊಂಡಿರುವುದು. ಹೇಗೋ, ಮನೆಯಲ್ಲಿ ಯಾರೂ ಇಲ್ಲದಿರುವಾಗ ಬದುಕಲು ಒಂದು ದಾರಿ ಬೇಡವೇ? ಬತ್ತಿಗೆ ನೂಡಲ್ಸ್ ಎಷ್ಟು ಇಷ್ಟವಾಗಿತ್ತೆಂದರೆ, ನಮ್ಮ ಮನೆಯ ಒಲೆಯ ಮೇಲೆ ನೂಡಲ್ಸ್ ಬೇಯಲು ಶುರುವಾಯಿತೆಂದರೆ ಮುಗಿಯಿತು, ಅದೆಲ್ಲಿಂದ ವಾಸನೆ ತಿಳಿಯುತ್ತಿತ್ತೋ ಅದಕ್ಕೆ ಗೊತ್ತಿಲ್ಲ, ಥಟ್ಟನೆ ಬಂದು ಕಾಲಿನ ಸುತ್ತಲೂ ಮೈತಾಗಿಸಿಕೊಂಡು ಕೂಗುತ್ತಾ ಓಡಾಡತೊಡಗುತ್ತಿತ್ತು. ಅದಕ್ಕೆಂದೇ ಮೀಸಲಿಟ್ಟ ಒಂದು ಬಟ್ಟಲಿನಲ್ಲಿ ನಾವು ಏನೇನು ತಿನ್ನುತ್ತಿದ್ದೆವೋ ಅದನ್ನೆಲ್ಲಾ "ಬಡಿಸುತ್ತಿದ್ದೆವು." ಬತ್ತಿಗೆ ಹಾಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಹಾಲನ್ನ ಕೊಟ್ಟರಂತೂ ಅಸಹ್ಯದ ಮುಖ ಮಾಡಿಕೊಳ್ಳುತ್ತಿತ್ತು. ಮೊಸರನ್ನವನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಿತ್ತು - ನನ್ನ ಹಾಗೆಯೇ. ಬೆಳಿಗ್ಗೆ ಹೊತ್ತು ಬಂದರೆ ಎರಡು ಮೂರು ಚಮಚ ಕಾಫಿಯನ್ನೂ ಹೀರುತ್ತಿತ್ತು.

ಒಂದು ದಿನ ಬತ್ತಿಯ ಹೊಟ್ಟೆಯು ದಪ್ಪವಾಗಿದ್ದನ್ನು ಗಮನಿಸಿದೆ. ಅದರ ನಡವಳಿಕೆಯಲ್ಲಿಯೂ ಸ್ವಲ್ಪ ಬದಲಾವಣೆಯಾಗಿತ್ತು - ಅಷ್ಟಾಗಿ ಆಟವಾಡುವ "ಮೂಡ್"ನಲ್ಲಿ ಇರುತ್ತಿರಲಿಲ್ಲ. ಬಯಾಲಜಿ ಮೇಷ್ಟ್ರು ಆಗತಾನೆ ಹಾರ್ಮೋನುಗಳ ಬಗ್ಗೆ ಪಾಠ ಮಾಡಿದ್ದರು ಶಾಲೆಯಲ್ಲಿ. ನಾನು "ಬತ್ತಿಗೂ ಹಾರ್ಮೋನುಗಳ ವ್ಯತ್ಯಾಸದಿಂದ ಹೀಗೆ ಖಿನ್ನತೆಯುಂಟಾಗುತ್ತಿದೆಯೇನೋ" ಎಂದುಕೊಂಡೆ. ಈಗಲೂ ಅದು ನಿಜವೆಂದೇ ನಂಬಿದ್ದೇನೆ. ಹೆಚ್ಚು ಹೊತ್ತು ನಮ್ಮ ಮನೆಯಲ್ಲಿಯೇ ಇರತೊಡಗಿತು. ನನ್ನನ್ನು ಕಂಡರೆ ತುಂಬಾ ಹಚ್ಚಿಕೊಂಡಿತ್ತು. ನಾನು ಮಲಗುವ ಮಂಚದ ಮೇಲೆಯೇ ಅದೂ ಮಲಗಬೇಕು. ನಾನು ಕೆಳಗೆ ಮಲಗಿಕೊಂಡರೆ ಅದೂ ನನ್ನ ಪಕ್ಕವೇ ಬಂದು ಮಲಗಬೇಕು. ನನ್ನ ತೋಳುಗಳೇ ಅದಕ್ಕೆ ದಿಂಬು. ನಾನು ಅದರ ಸಾನ್ನಿಧ್ಯವನ್ನು ಬಹಳ ಆನಂದಿಸುತ್ತಿದ್ದೆ. ಅದರ ಹೊಟ್ಟೆಯೊಳಗೆ ಮರಿಗಳು ಅಲುಗಾಡುತ್ತಿದ್ದುದು ಗೊತ್ತಾಗುತ್ತಿತ್ತು. ನಿದ್ದೆ ಮಾಡುತ್ತಿದ್ದ ಹಾಗೆ ನಟಿಸುತ್ತಿದ್ದ ಬತ್ತಿಗೆ ನೋವಾಗುತ್ತಿತ್ತೇನೋ, ಕಣ್ತೆರೆದು ನನ್ನನ್ನು ನೋಡಿ ಒಮ್ಮೆ ಮಿಯಾಂವ್ ಎನ್ನುತ್ತಿತ್ತು. ನನಗಾಗುತ್ತಿದ್ದ ರೋಮಾಂಚನವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ನಾನು ಶಾಲೆಗೆ ಹೊರಡುವವರೆಗೂ ನನ್ನ ಜೊತೆಯೇ ಇರುತ್ತಿತ್ತು. ನಾನು ಹೊರಟ ಮೇಲೆ ಎಲ್ಲಿ ಹೋಗುತ್ತಿತ್ತೋ ಗೊತ್ತಿಲ್ಲ, ಆದರೆ ವಾಪಸ್ ಬಂದು ನಾನು ಸೈಕಲ್ ಸ್ಟ್ಯಾಂಡ್ ಹಾಕುವ ಹೊತ್ತಿಗೆ ನನ್ನ ಕಾಲಡಿ ಇರುತ್ತಿತ್ತು. "ಅದು ಮರಿ ಹಾಕುವ ಕಾಲ ಕಣೋ, ಮನೆಯೊಳಗೆ ಸೇರಿಸಿದರೆ ನಮಗೇ ಕಷ್ಟ ಇನ್ನು" ಎಂದು ಅಮ್ಮ ಹೇಳಿದರು. ಅದನ್ನು ಅಟ್ಟುವ ಮನಸ್ಸು ನನಗಾಗಲೀ ಅಮ್ಮನಿಗಾಗಲೀ ಇರಲಿಲ್ಲ, ಆದರೆ ಮೊದಲೇ ನಾವಿರುವುದು ಬಾಡಿಗೆ ಮನೆಯಲ್ಲಿ. ಓನರ್ ಏನನ್ನುತ್ತಾರೆ? ಇರುವ ಚಿಕ್ಕ ಮನೆಯಲ್ಲಿ ನಮ್ಮ ಮನೆಯ ಸಾಮಾನು ಸರಂಜಾಮುಗಳೇ ಎಲ್ಲೆಡೆ ಬಿದ್ದು ಹರಡಿವೆ. ಜೊತೆಗೆ ಅಮ್ಮ ಬೆಳಿಗ್ಗೆ ಹೊರಟರೆ ಬರುವುದೇ ಸಂಜೆ. ನಾನೂ ಅಷ್ಟೆ. ಕೊನೆಗೆ ಧೈರ್ಯ ಮಾಡಿ, ಏನಾದರಾಗಲೀ ಬತ್ತಿಯು ನಮ್ಮ ಮನೆಯಲ್ಲಿಯೇ ಹೆರುತ್ತೆ ಎಂದು ನಿರ್ಧರಿಸಿ, ಟಿ.ವಿ.ಯ ಕಾರ್ಟನ್ ಬಾಕ್ಸನ್ನು ಅಟ್ಟದಲ್ಲಿರಿಸಿದೆ. ಇನ್ನೇನು ಒಂದು ವಾರದೊಳಗೆ ಬತ್ತಿಗೆ ಹೆರಿಗೆಯಾಗುತ್ತೆಂದು ಅನ್ನಿಸುತ್ತಿತ್ತು. ಬತ್ತಿಯ ಬಟ್ಟಲನ್ನು ಆ ಬಾಕ್ಸಿನ ಮುಂದೆಯೇ ಇಟ್ಟೆ. ಹಾಲು ಕುಡಿಯಲು, ಊಟ ಮಾಡಲು ಬತ್ತಿಯು ಪ್ರತಿಸಲವೂ ಅಟ್ಟ ಹತ್ತಬೇಕಾಗಿತ್ತು. ಕಾರ್ಟನ್ ಬಾಕ್ಸು ಅದರ ಮನೆಯಾಯಿತು. ಆ ಬಾಕ್ಸಿನೊಳಗೆ ಹಳೆಯ ದಿನಪತ್ರಿಕೆಗಳನ್ನು ಜೋಡಿಸಿದೆ. ನಾನೇನೂ ಪಶುವೈದ್ಯನಾಗಿರಲಿಲ್ಲ - ಒಂಭತ್ತನೆಯ ತರಗತಿಯ ವಿದ್ಯಾರ್ಥಿ ಆಗ. ಏನೇನು ತೋಚಿತೋ ಅದನ್ನೆಲ್ಲಾ ಮಾಡುತ್ತ ಹೋದೆ. ನನ್ನ ಅದೃಷ್ಟ, ಮತ್ತು ಬತ್ತಿಯ ಅದೃಷ್ಟ - ಅವೆಲ್ಲವೂ ಸರಿಯಾದುದೇ ಆಗಿತ್ತು. ನನ್ನ ಬತ್ತಿಯ ಬಾಂಧವ್ಯ ಇನ್ನೂ ಚೆನ್ನಾಗಿ ಬೆಳೆಯಿತು. ಬತ್ತಿಯು ತನ್ನ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ರೂಮಿನ ಕಿಟಕಿಯು ಸದಾ ತೆರೆದಿರುತ್ತಿತ್ತು. ಮಲಮೂತ್ರವಿಸರ್ಜನೆಗೆ ಹೋಗಬೇಕಾದಾಗ ಕಿಟಕಿಯಿಂದ ಹೊರಕ್ಕೆ ಹೋಗಿ ಐದು ನಿಮಿಷಗಳೊಳಗೆ ಬಂದುಬಿಡುತ್ತಿತ್ತು. ಹೆರಿಗೆಯ ದಿನವು ಬಂದೇ ಬಿಟ್ಟಿತು. ಅದು ನೋವಿನಿಂದ ಹೆಚ್ಚೇನೂ ಕಿರುಚಲಿಲ್ಲ. ಮರಿ ಹಾಕುವುದನ್ನು ನಾನು ನೋಡಲೇ ಬೇಕೆಂದು ತೀರ್ಮಾನಿಸಿ, ಅಟ್ಟ ಹತ್ತಿ ಕುಳಿತೆ. ತನ್ನ ಮನೆಯೊಳಗಿದ್ದ ಕಾಗದವನ್ನೆಲ್ಲಾ ತುಂಡು ತುಂಡು ಮಾಡತೊಡಗಿತು - ಪ್ರಸವಬೇನೆಯಿಂದೆನಿಸುತ್ತೆ. ನಂತರ ಒಂದು ಮರಿಯ ತಲೆಯು ಹೊರಬರಲು ಶುರುವಾಯಿತು. ಬತ್ತಿಯು ನಿಧಾನಕ್ಕೆ ನೆಕ್ಕುತ್ತ ಮರಿಯು ಹೊರಬರಲು ಅನುವು ಮಾಡಿಕೊಟ್ಟಿತು. ಮಾಂಸದ ಮುದ್ದೆಯಂತೆ ಆ ಮರಿಯು ಹೊರ ಬಂದಿತು. ಬತ್ತಿಯು ನೆಕ್ಕುತ್ತಲೇ ಅದನ್ನು ಶುಚಿಗೊಳಿಸಿತು. ನಂತರ ಇನ್ನೊಂದು, ಬಳಿಕ ಮತ್ತೊಂದು - ಮೂರು ಮರಿಗಳು! ನಾನು "ಬತ್ತಿ" ಎಂದು ಕೂಗಿದೆ. ಈ ಬಾರಿ ಅದು "ಮಿಯಾಂವ್" ಎನ್ನಲಿಲ್ಲ. ಕಣ್ಣರಳಿಸಿ "ಹ್ಯಾಕ್" ಎಂದಿತು. ನಾನು, "ಯಾಕೇ?" ಎಂದೆ ಬೇಸರದ ದನಿಯಲ್ಲಿ. ತಕ್ಷಣವೇ ಕ್ಷಮೆ ಕೋರುವ ರೀತಿ "ಮಿಯಾಂವ್" ಎಂದಿದ್ದೇ ನಾನು ಹರ್ಷಗೊಂಡು ತಾನು ನೆಕ್ಕುತ್ತಿದ್ದ ಒಂದು ಮರಿಯನ್ನು ಕೈಗೆತ್ತಿಕೊಳ್ಳಲು ಹೋದೆ. ನನ್ನನ್ನೇ ನೋಡಿತು. ಆ ಪುಟ್ಟ ಮಾಂಸದ ಮುದ್ದೆಯು ನನ್ನ ಅಂಗೈಯಲ್ಲಿ ಬಂದಾಗ ಬತ್ತಿಯಿಂದೇನಾದರೂ ಅಪಾಯವಾದೀತೆಂದು ನನಗೆ ಅನ್ನಿಸಲಿಲ್ಲ, ಬದಲಿಗೆ ಅಷ್ಟು ಸೂಕ್ಷ್ಮವಾದ ಪ್ರಾಣಿಯು ನನ್ನ ಕೈಜಾರಿ ಕೆಳಗೆ ಬಿದ್ದರೆ ಎಂಬ ಭಯವಾಯಿತು. ಕೈಗೆತ್ತಿಕೊಂಡ ಮರಿಯನ್ನು ಕೆಳಗಿಳಿಸಿದೆ. ಬತ್ತಿಯು ಮರಿಯನ್ನು ಮತ್ತೆ ಮೂಸಿ ನೋಡಿ, ಕ್ಷೇಮವಾಗಿದೆಯೆಂದು ಖಚಿತಪಡಿಸಿಕೊಂಡು ನನ್ನ ಕೈಯನ್ನು ತನ್ನ ಹಣೆಯಿಂದ ಸವರಿತು. ಯಾವ ಮರಿಯೂ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಇಲಿ ಮರಿಗಳಂತೆಯೇ ಇದ್ದವು. ಅಮ್ಮನನ್ನು ಕೂಗಿ ಕರೆದೆ. ಬತ್ತಿಯ ಕಣ್ಣಿಗೆ ಅಮ್ಮ ಬಿದ್ದೊಡನೆ "ಗೊರ್ರ್" ಎನ್ನಲು ಶುರು ಮಾಡಿತು.

ಬಹಳ ಬೇಗ ಮರಿಗಳು ಬೆಳೆಯತೊಡಗಿದವು. ನಾವಿದ್ದ ಬಾಡಿಗೆ ಮೆನೆಯಲ್ಲಿ ಬತ್ತಿಯಿದ್ದ ಕಾರ್ಟನ್ ಬಾಕ್ಸನ್ನು ತನ್ನ ಸ್ವಂತ ಮನೆಯೆಂದು ವಾಸ ಮಾಡುತ್ತಿತ್ತು - ತನ್ನ ಮರಿಗಳೊಂದಿಗೆ. ಮರಿಗಳು ಹೆಜ್ಜೆಯಿಡಲು ಆರಂಭಿಸಿದಾಕ್ಷಣವೇ ಯಾರೋ ಪಾಠ ಹೇಳಿಕೊಟ್ಟಿದ್ದಾರೆಂಬಂತೆ ಬತ್ತಿಯು ಮರಿಗಳನ್ನು ಕಚ್ಚಿಕೊಂಡು ಜಾಗವನ್ನು ಬದಲಾಯಿಸ ತೊಡಗಿತು. ಈ ಬಾರಿ ರೂಮಿನೊಳಗಿದ್ದ ಗೋಡೆ ಬೀರು ಒಳಗೆ, ಕೆಳಗಿನ ಭಾಗದಲ್ಲಿ ಜಾಗ ಮಾಡಿಕೊಟ್ಟೆ. ಮೇಲಿನ ಭಾಗಗಳಲ್ಲಿ ನನ್ನ ಬಟ್ಟೆಗಳು, ಪುಸ್ತಕಗಳು. ಕೆಳಗೆ ಬತ್ತಿ ಮತ್ತು ಮರಿಗಳು. ಒಂದು ಬಟ್ಟೆಯಾಗಲೀ, ಪುಸ್ತಕವಾಗಲೀ ಗಲೀಜಾಗಲಿಲ್ಲ. ಆದರೆ ಆಗಾಗ್ಗೆ ಬೀರುವಿನ ಬಾಗಿಲನ್ನು ತೆಗೆದು-ಹಾಕಿ ಮಾಡುತ್ತಿದ್ದರಿಂದ ಬತ್ತಿಯು ಮತ್ತೆ ತನ್ನ ಮರಿಗಳನ್ನು ಬೇರೆ ಕಡೆ ವರ್ಗಾಯಿಸ ತೊಡಗಿತು. ಹಾಲ್‍ನಲ್ಲಿದ್ದ ಒಂದು ಮೇಜಿನ ಕೆಳಗೆ ಒಂದಷ್ಟು ಸಾಮಾನು ಜೋಡಿಸಿದ್ದೆವು. ಅದರ ಸಂದಿಯಲ್ಲಿ ತನ್ನ ಹೊಸ ಮನೆಯನ್ನು ಮಾಡಿಕೊಂಡಿತು. ಅಷ್ಟು ಹೊತ್ತಿಗೆ ಮರಿಗಳು ಕಣ್ಣು ಬಿಟ್ಟಿದ್ದವು, ಓಡಾಡತೊಡಗಿದ್ದವು. ಸಧ್ಯ, ಅಟ್ಟದ ಮೇಲಿಲ್ಲವಲ್ಲ ಎಂದುಕೊಂಡೆ. ಒಂದು ಮರಿಯು ಕುಂಞ್ ಕುಂಞ್ ಎಂದು ಹೊರಗೆ ಬಂದಿತು. ಬತ್ತಿಗೆ ಗಾಬರಿಯಾಗಿ ಕಚ್ಚಿಕೊಂಡು ಹೋಗಿ ಒಳಕ್ಕೆ ಸೇರಿಸಿತು. ಅಷ್ಟರಲ್ಲಿ ಇನ್ನೊಂದು ಕುಂಞ್ ಕುಂಞ್ ಎಂದು ಹೊರಬರತೊಡಗಿತು. ಹಾಗೆಯೇ ಮೂರೂ ಮರಿಗಳೂ ಮಾಡತೊಡಗಿದವು. ಸುಸ್ತಾದ ಬತ್ತಿಯು ಏನಾದರಾಗಲೀ ಎಂದು ನೋಡುತ್ತ ಕುಳಿತುಬಿಟ್ಟಿತು. ನಾನು ಮೂರೂ ಮರಿಗಳನ್ನು ಕೈಗೆತ್ತಿಕೊಂಡು "ಇವು ದೊಡ್ಡದಾಗುತ್ತಿವೆ ಕಣೇ, ಬಿಟ್ಬಿಡು ಅವನ್ನು - ಅವುಗಳ ಪಾಡಿಗೆ. ಹಸಿವಾದರೆ ಅವೇ ಬರುತ್ವೆ. ನಮ್ಮ ಮನೇಲಿ ಏನೂ ತೊಂದರೆಯಿಲ್ಲ." ಎಂದೆ. ಅರ್ಥವಾಯಿತೇನೋ ಎಂಬಂತೆ ಕಣ್ಣು ಮಿಟುಕಿಸಿತು ಬತ್ತಿ.

ಬತ್ತಿಯೇನೋ ಶುಚಿಯಾಗಿತ್ತು. ಆದರೆ ಮರಿಗಳು ಎಲ್ಲೆಂದರಲ್ಲಿ ಮಲಮೂತ್ರವಿಸರ್ಜನೆ ಮಾಡುತ್ತಿದ್ದವು. ಬತ್ತಿಯು ನಮಗೆ ತೊಂದರೆಯಾಗದಿರಲೆಂದೋ ಏನೋ, ತಕ್ಷಣವೇ ಬಂದು ಅದನ್ನು ನೆಕ್ಕಿ ಶುಚಿ ಮಾಡಿಬಿಡುತ್ತಿತ್ತು. ಅದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಮರಿಗಳ ವಿಸರ್ಜನೆಗಳನ್ನು ತಿನ್ನುವುದು ಸಹಜವೆಂದೇ ಅನ್ನಿಸುತ್ತೆ. ಬತ್ತಿಯು ನಮ್ಮ ಅಸಮಾಧಾನವನ್ನು ಅರ್ಥ ಮಾಡಿಕೊಂಡಿತೆನ್ನಿಸುತ್ತೆ. ನಮ್ಮ ಮನೆಯ ಮುಂದೆ ಇದ್ದ ಒಂದು ಶೆಡ್ಡಿಗೆ ತನ್ನ ಮನೆಯನ್ನು ಬದಲಾಯಿಸಿಕೊಂಡುಬಿಟ್ಟಿತು. ಹಿಂದೆ ಅತ್ತೆ ಹೇಳಿದ್ದ "ಏಳು ಮನೆ ಚೀಲಿ" ಎಂಬ ಮಾತು ನನಗೆ ಈಗ ಅರ್ಥವಾಯಿತು. ಒಂದೇ ಕಡೆ ನೆಲೆಯೂರಿರುವುದಿಲ್ಲ, ತನ್ನ ಮರಿಗಳ ಸಂರಕ್ಷಣೆಗಾಗಿ ವಾಸವನ್ನು ಬದಲಾಯಿಸುತ್ತಿರುತ್ತೆ. ಆದರೆ ಈ ಬದಲಾವಣೆಯು ಯಾವಾಗಲೂ ಸುರಕ್ಷಿತವೇ ಎಂದು ಹೇಳಲಾಗುವುದಿಲ್ಲ. ಶೆಡ್ಡಿನೊಳಗೆ ಕಬ್ಬಿಣದ ಕಂಬಿಯು ತಗುಲಿ ಒಂದು ಮರಿಗೆ ತೀವ್ರ ಗಾಯವಾಗಿ ಎರಡು ದಿನದಲ್ಲಿ ಸತ್ತು ಹೋಯಿತು. ಇನ್ನೊಂದೇ ವಾರದಲ್ಲಿ ಇನ್ನೊಂದು ಮರಿಯೂ ಯಾವುದೋ ಕಾರಣದಿಂದ ಸತ್ತು ಹೋಯಿತು. ಸತ್ತ ಮರಿಯ ಹತ್ತಿರವೂ ಹೋಗಲಿಲ್ಲ ಬತ್ತಿ. ಹೆಣವನ್ನೊಮ್ಮೆ ಮೂಸಿ ನೋಡಿ ಅದರಿಂದ ದೂರ ಸರಿದುಬಿಟ್ಟಿತು. ಉಳಿದ ಇನ್ನೊಂದು ಮರಿಯು ದೊಡ್ಡದಾಗುತ್ತಲೇ ನಮ್ಮ ಮನೆಯಲ್ಲಿ ಗಲಾಟೆಯು ಹೆಚ್ಚಾಗುತ್ತ ಹೋಯಿತು. ಎರಡು ಬಟ್ಟಲುಗಳು. ಮರಿಗೆ ಎರಡು ಬಟ್ಟಲಿನ ಹಾಲೂ ಬೇಕು. ಬತ್ತಿಯು ಬಟ್ಟಲ ಬಳಿ ಬಂದರೆ ಮರಿಯು "ಹ್ಯಾಕ್" ಎಂದು ಓಡಿಸುತ್ತಿತ್ತು - ಹೆತ್ತ ತಾಯಿಯನ್ನೇ. ಬತ್ತಿಯು ಮರಿಗಾಗಿ ತನ್ನ ಊಟವನ್ನು ತ್ಯಾಗ ಮಾಡುತ್ತಿತ್ತು. ನಾನು ಬತ್ತಿಯನ್ನು ಬೇರೆ ಕಡೆ ಕರೆದೊಯ್ದು ಊಟ ಕೋಡುತ್ತಿದ್ದೆ. ಒಮ್ಮೆ ಮರಿಗಾಗಿ ಅದೆಲ್ಲಿಂದಲೋ, ಯಾರ ಮನೆಯಿಂದಲೋ ಒಂದು ದೊಡ್ಡ ಕೋಳಿಯನ್ನು ಕಚ್ಚಿಕೊಂಡು ಬಂದುಬಿಟ್ಟಿತ್ತು. ಹೆಚ್ಚು ಕಮ್ಮಿ ಒಂದು ವಾರ ಶೆಡ್ಡಿನೊಳಗಿಟ್ಟುಕೊಂಡು ತಿಂದವು ಎರಡೂ. ಆಗಾಗ್ಗೆ ಶೆಡ್ಡಿನೊಳಗಿನಿಂದ ಜಗಳದ ಸದ್ದು ಕೇಳಿಬರುತ್ತಿತ್ತು. ಊಟದ ವಿಷಯದಲ್ಲಿ ತಾಯಿ-ಮರಿ ಜಗಳವಾಡುತ್ತಿದ್ದವು. ಸ್ವಲ್ಪ ದಿನವಾದ ಮೇಲೆ ಬತ್ತಿಯೇ ಮರಿಯನ್ನು ತನ್ನ ಕಾಲಲ್ಲಿ ಫಟ್ ಎಂದು ಹೊಡೆದೋಡಿಸ ತೊಡಗಿತು. ಎರಡೇ ದಿನದಲ್ಲಿ ಆ ಮರಿಯು ಅದೆಲ್ಲಿ ಮಾಯವಾಗಿ ಹೋಯಿತೋ ಗೊತ್ತಿಲ್ಲ, ಮತ್ತೆ ಬತ್ತಿ ಒಂಟಿಯಾಯಿತು. ಅದಕ್ಕೆ ಸ್ವಲ್ಪವೂ ಬೇಸರವಾದಂತೆ ಕಾಣಲಿಲ್ಲ. ನೂಡಲ್ಸ್ ಅನ್ನು ಮೃಷ್ಟಾನ್ನ ಭೋಜನದಂತೆ ಸವಿಯುತ್ತಿತ್ತು. ಮಂಚದ ಮೇಲೆ ನಿದ್ರಿಸುತ್ತಿತ್ತು. ನನ್ನ ಜೊತೆ ಆಟವಾಡುತ್ತಿತ್ತು. ದೇವರ ಮನೆಯ ಬತ್ತಿಯನ್ನು ಆಗಾಗ್ಗೆ ಗುಳುಂ ಮಾಡುತ್ತಿತ್ತು. ಕ್ಯಾಸೆಟ್‍ಗಳ ಟೇಪನ್ನು ಎಳೆದೆಳೆದು ಮನೆಯೆಲ್ಲಾ ಹರಡುತ್ತಿತ್ತು. ಬತ್ತಿಗೆ ಯಾವ ಚಿಂತೆಯೂ ಇದ್ದಂತಿರಲಿಲ್ಲ.

ಬೆಕ್ಕುಗಳು ಹದಿನೈದರಿಂದ ಇಪ್ಪತ್ತು ವರ್ಷಗಳವರೆಗೆ ಬದುಕಿರುತ್ತವೆಂದು ಓದಿದ್ದೆ. ಆದರೆ ಬೆಂಗಳೂರಿನಲ್ಲಿ ಅಷ್ಟು ವರ್ಷಗಳ ಕಾಲ ಜೀವಿಸಲು ವಾಹನಗಳು, ಬೀದಿ ನಾಯಿಗಳು ಬಿಡಬೇಕಲ್ಲ. ಆಗ ವಾಹನಗಳ ದಟ್ಟಣೆ ಅಷ್ಟಿರಲಿಲ್ಲ. ಆಗಿನ ಬೀದಿ ನಾಯಿಗಳು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರಲಿಲ್ಲ - ಬೆಕ್ಕುಗಳನ್ನು ಕಚ್ಚಿ ಕೊಂದುಬಿಡುತ್ತಿದ್ದವು. ಬತ್ತಿಯು ಹೀಗೇ ಒಂದು ಬೀದಿ ನಾಯಿಯ ಕಡಿತಕ್ಕೆ ಬಲಿಯಾಯಿತೆಂದು ಅದು ಸತ್ತು ಒಂದು ವಾರವಾದ ಮೇಲೆ ತಿಳಿಯಿತು. ಯಾಕೋ ಬರಲೇ ಇಲ್ಲವಲ್ಲ ಮನೆಗೆ ಎಂದು ಹುಡುಕುತ್ತಿದ್ದಾಗ ಮೋರಿಯೊಳಗೆ ಬತ್ತಿಯ ಅರೆಕೊಳೆತ ದೇಹವು ಕಂಡಿತು. ಅದನ್ನು ತೆಗೆಸಿ ಸಂಸ್ಕಾರ ಮಾಡಿಸುವಷ್ಟು ಸಂಸ್ಕಾರವು ನಗರವಾಸಿಗಳಿಗಿಲ್ಲ. ನನಗೂ ಇರಲಿಲ್ಲ. ನನಗೆ ಅದರ ಬಗ್ಗೆ ಹೊಳೆಯಲೂ ಇಲ್ಲ. ದುಃಖದಿಂದ ಮನೆಗೆ ಬಂದು ರಾತ್ರಿಯೆಲ್ಲಾ ವ್ಯಥೆ ಪಟ್ಟಿದ್ದೆ. "ಗೋಣಿಚೀಲದಿಂದ ಅದನ್ನು ತೆಗೆದು ಎಲ್ಲಾದರೂ ದೂರ ತೆಗೆದುಕೊಂಡು ಹೋಗಿ ಮಣ್ಣು ಮಾಡಿ ಬರಬಹುದು" ಎಂದು ಅಮ್ಮ ಸಲಹೆ ಕೊಟ್ಟಾಗಲೇ ಹೊಳೆದಿದ್ದು - ಬೆಂಗಳೂರಿನಲ್ಲಿ ಸತ್ತ ಬೆಕ್ಕನ್ನು ಹೂಳಲೂ ಸಹ ಎಲ್ಲೆಂದರಲ್ಲಿ ಜಾಗವಿಲ್ಲ ಎಂಬುದು. ಬೆಳಿಗ್ಗೆ ಶಾಲೆಗೆ ತಡವಾದರೂ ಪರವಾಗಿಲ್ಲವೆಂದು ಗೋಣಿಚೀಲವನ್ನು ತೆಗೆದುಕೊಂಡು ಬತ್ತಿಯ ಹೆಣವಿದ್ದ ಮೋರಿಯ ಬಳಿ ಹೋಗಿದ್ದೆ. ಅಲ್ಲಿ ಬತ್ತಿಯಿರಲಿಲ್ಲ. ಕೊಳೆತ ವಾಸನೆ ಮಾತ್ರ ಇತ್ತು.

- ಅ

10.12.2012

2.30AM

Sunday, February 3, 2013

ಪೋಷಕರು ಸಾರ್ ಪೋಷಕರು

[ಉದಯವಾಣಿ ಪತ್ರಿಕೆಯವರು ಈ ಲೇಖನವನ್ನು ಪ್ರಕಟಿಸಿದ್ದಕ್ಕೆ ಅವರಿಗೆ ನಾನು ಕೃತಜ್ಞ.]

"ನಾವೆಲ್ಲ ಓದುತ್ತಿದ್ದಾಗ ಪ್ರಿನ್ಸಿಪಾಲರು ಅಪ್ಪ ಅಮ್ಮನನ್ನು ಕರೆದುಕೊಂಡು ಬನ್ನಿ ಅಂತ ಏನಾದರೂ ಹೇಳಿದ್ದರೆ, ನಾವು ಐಪಿಸಿ ಸೆಕ್ಷನ್ ಮುನ್ನೂರ ಎರಡರ ಅಪರಾಧ ಮಾಡಿದ್ದೇವೆಂದು ಅರ್ಥ ಆಗುತ್ತಿತ್ತು!" ನೆನಪು ಮಾಡಿಕೊಂಡರು ನನ್ನ ಸಹೋದ್ಯೋಗಿ ಮಿತ್ರರು - ನಮ್ಮ ಶಾಲೆಯ ಗ್ರಂಥಾಲಯದ ನಿಃಶಬ್ದ ಚರ್ಚೆಯಲ್ಲಿ. ಗ್ರಂಥಾಲಯದಲ್ಲಿ ಮೌನವಾಗಿರಬೇಕೆಂಬುದು ಸಾಮಾನ್ಯ ನಿಯಮವಾದರೂ, ನಾವುಗಳು ಅಲ್ಲಿ ಧ್ವನಿಯೇರಿಸದೆಯೇ ಏನಾದರೂ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರುತ್ತೇವೆ. ಅಂದು ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ದಿನವಾದ್ದರಿಂದ ಪೋಷಕರ ಬಗ್ಗೆ ಚರ್ಚೆಯು ತಾನೇತಾನಾಗಿ ಮೂಡಿಬಂದಿತು. ನನ್ನ ಮಿತ್ರ ತಮ್ಮ ಬಾಲ್ಯದ ಗತವೈಭವವನ್ನು ನೆನಪು ಮಾಡಿಕೊಂಡಿದ್ದು ಹೀಗೆ.

ನಾನು ಹೈಸ್ಕೂಲು ಸೇರ್ಪಡೆಯಾಗುವಾಗ ಶಾಲೆಗೆ ಅಮ್ಮ ಬಂದಿದ್ದರು - ಅಡ್ಮಿಷನ್ ಮಾಡಿಸಲು. ಆಮೇಲೆ ಅವರು ಬಂದಿದ್ದು ನನಗೆ ನೆನಪಿಲ್ಲ. ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿರುತ್ತಿದ್ದರು. ಅದು ಬಿಟ್ಟರೆ, ಬೇರೆ ಸಂದರ್ಭಗಳಲ್ಲಿ ಪೋಷಕರು ಶಾಲೆಗೆ ಬಂದರೆಂದರೆ ಮಿಕ್ಕ ವಿದ್ಯಾರ್ಥಿಗಳಿಗೆಲ್ಲ "ಓಹೋ, ಶಾಲೆಯಲ್ಲಿ ಏನೋ ಗಲಾಟೆ ಕಾದಿದೆ - ಯಾರೋ ಏನೋ ಮಾಡಿದ್ದಾರೆ" ಎಂದೇ ಅರ್ಥವಾಗುತ್ತಿತ್ತು. ಪ್ರಾಥಮಿಕ ಶಾಲೆಯಲ್ಲಿದ್ದಾಗ ವರ್ಷಕ್ಕೆ ಎರಡು ಸಲ ಬರುತ್ತಿದ್ದರು - ಒಂದು ಅಡ್ಮಿಷನ್ ಮಾಡಿಸಲು, ಎರಡು - ಫಲಿತಾಂಶ ಸ್ವೀಕರಿಸಲು. ನನ್ನ ಪುಣ್ಯ, ನಾನು ಐಪಿಸಿಯ ಯಾವುದೇ ಸೆಕ್ಷನ್ ಅಡಿ ಯಾವುದೇ ಅಪರಾಧ ಎಸಗದೇ ಇದ್ದುದರಿಂದ "ನಿಮ್ಮಮ್ಮನ್ನ ಕರಕೊಂಡು ಬಾ" ಎಂದು ನನ್ನ ಟೀಚರುಗಳು ನನಗೆ ಹೇಳಿರಲಿಲ್ಲ.

ಬಹುಶಃ ಈಗಲೂ ಹಳ್ಳಿಗಳಲ್ಲಿ, ಅಥವಾ ನಗರದ ಸರ್ಕಾರಿ ಶಾಲೆಗಳಲ್ಲಿ ಹೀಗೆಯೇ ಇರಬಹುದು. ಆದರೆ ಖಾಸಗಿ ಶಾಲೆಗಳಲ್ಲಿ ಈ ಕಲ್ಪನೆಯೂ ಮಾಡಿಕೊಳ್ಳಲಾಗುವುದಿಲ್ಲ. ಖಾಸಗಿ ಶಾಲೆಗಳಿರುವುದೇ ಪೋಷಕರಿಂದ, ಪೋಷಕರಿಗಾಗಿ. ಅಲ್ಲಿ ಪೋಷಕರೇ ರಾಜರು. And the king is always right! ಈಗಿನ ಶಿಕ್ಷಣ ವ್ಯಾಪಾರದಲ್ಲಿ ಆಡಳಿತದವರು ಮಾರಾಟಗಾರರು, ಪೋಷಕರೇ ಗ್ರಾಹಕರು. ಪೋಷಕರಿಗೆ ಶಾಲೆಯಲ್ಲಿ ನಡೆಯುವ ಸಂಗತಿಗಳು, ಮಕ್ಕಳ ಹಾಜರಾತಿ (ಶಾಲೆಯನ್ನು ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೇನಲ್ಲ), ಮಕ್ಕಳು ಯಾವ ದಿನ ಯಾವ ಪುಸ್ತಕವನ್ನು ಶಾಲೆಗೆ ತಂದಿರಲಿಲ್ಲ, ಇನ್ನು ಆರು ತಿಂಗಳ ನಂತರ ಎಲ್ಲಿಗೆ ಪ್ರವಾಸ ಹೋಗುತ್ತಾರೆ, ತರಗತಿಯ ಉಪಾಧ್ಯಾಯರನ್ನು ಎಷ್ಟು ಗಂಟೆಗೆ ಭೇಟಿ ಮಾಡಬೇಕು, ಇಂತಹ ಎಲ್ಲ ವಿಷಯಗಳನ್ನೂ ಎಸ್ಸೆಮ್ಮೆಸ್ಸು, ಈಮೇಲ್, ಮಕ್ಕಳ ಡೈರಿ, ಸುತ್ತೋಲೆಗಳು - ಅನೇಕ ರೀತಿಯಲ್ಲಿ ತಲುಪಿಸಲಾಗುತ್ತೆ. ಶಾಲೆಯ ವಾಹನಗಳನ್ನು ಉಪಯೋಗಿಸುವ ಮಕ್ಕಳ ಪೋಷಕರಿಗಂತೂ ವಾಹನವು ಎಷ್ಟು ಹೊತ್ತಿಗೆ ಶಾಲೆಯನ್ನು ಬಿಟ್ಟಿತು, ಎಷ್ಟು ಗಂಟೆಗೆ ತಮ್ಮ ಮನೆಯನ್ನು ತಲುಪುತ್ತೆ ಎಂಬ ಎಸ್ಸೆಮ್ಮೆಸ್ಸುಗಳೂ ಹೋಗುತ್ತೆ - ಜಿ.ಪಿ.ಎಸ್. ವ್ಯವಸ್ಥೆಯಿಂದ. ಅಷ್ಟರ ಮಟ್ಟಿಗೆ ಖಾಸಗಿ ಶಾಲೆಯ ಮಕ್ಕಳು ಸೇಫ್ ಎಂಡ್ ಸೆಕ್ಯೂರ್ಡ್.

ಶಾಲೆಗೆ ಸೇರಿಸುವ ಮುನ್ನ ಶಾಲೆಯಲ್ಲಿ ಏನೇನು ಸಾಮಾನು ಸರಂಜಾಮುಗಳಿವೆ, ತರಗತಿಗಳಲ್ಲಿ ಫ್ಯಾನುಗಳಿವೆಯೇ, ಪಾಠ ಮಾಡುವ ಟೀಚರುಗಳ ವಿದ್ಯಾರ್ಹತೆಯೇನು, ಮಕ್ಕಳು ಕುಳಿತುಕೊಳ್ಳುವ ಕುರ್ಚಿಗಳು, ಡೆಸ್ಕುಗಳು ಹೇಗಿವೆ, ಶಾಲೆಯ ಆಟದ ಮೈದಾನ ಚೆನ್ನಾಗಿದೆಯೇ, ಆಟವಾಡಲು ಬೇಕಾದ ಸಾಮಗ್ರಿಗಳಿವೆಯೇ - ಎಂದು ಪರಿಶೀಲಿಸಿದ ನಂತರವೇ ಪೋಷಕರು ತಮ್ಮ ಮಕ್ಕಳನ್ನು ಅಡ್ಮಿಷನ್ ಮಾಡಿಸುವುದು. ಈ ಪರಿಶೀಲನೆಯು ಎಷ್ಟರ ಮಟ್ಟಿಗಿರುತ್ತೆ ಖಾಸಗಿ ಶಾಲೆಯಲ್ಲಿ ಎಂದರೆ - ನನಗೆ ನೆನಪಿದೆ - ಒಬ್ಬ ಹುಡುಗನನ್ನು ಹತ್ತನೆಯ ತರಗತಿಗೆ ಸೇರಿಸಲು ಬಂದ ಆ ಹುಡುಗನ ಪೋಷಕರು, "ಮೊದಲು ಒಂದು ವಾರ ಅವನು ನೋಡಲಿ, ಇಲ್ಲಿನ ವಾತಾವರಣವು ಸರಿ ಹೋದರೆ ಮುಂದುವರೆಸುತ್ತೇವೆ" ಎಂದರು. ನಾನು ಈ ಹಿಂದೆ ಈ ರೀತಿ ಮಾಡಿದ್ದು ನನ್ನ ಗಾಡಿಯನ್ನು ಖರೀದಿಸುವಾಗ - ಟೆಸ್ಟ್ ಡ್ರೈವ್‍ಮಾಡಿದ್ದು. ಅದಕ್ಕೆ ಮುಂಚೆ ಯಾವುದೋ ಪ್ರವಾಸ ಮಾಡುವಾಗ ಹೊಟೆಲಿನಲ್ಲಿ ರೂಮು ಮಾಡಿಕೊಳ್ಳುವಾಗ "ರೂಮು ಹೇಗಿದೆ ಎಂದು ನೋಡಿ ಆಮೇಲೆ ಹೇಳುತ್ತೇವೆ ಬೇಕೋ ಬೇಡವೋ ಎಂದು" ಎಂದು ನಾನೇ ಹೇಳಿದ್ದೆ. ಮೊದಲು ಹೀಗಿರಲಿಲ್ಲ ಎಂದ ಮಾತ್ರಕ್ಕೆ ಈಗಿನ ಪೋಷಕರು ಮಾಡುತ್ತಿರುವುದು ತಪ್ಪೆನ್ನಲಾಗುವುದಿಲ್ಲ. ಆದರೆ ಆಗಿನ ಶಾಲೆಗಳಲ್ಲಿ ಹೀಗೆ ಪರಿಶೀಲಿಸುವ ಅವಶ್ಯಕತೆಯಿರಲಿಲ್ಲ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಹುದು.

ಶಾಲೆಯ ವಾಹನವನ್ನು ಅಥವಾ ಬೇರೆ ಖಾಸಗಿ ವಾಹನಗಳನ್ನು ಬಳಸದ ಮಕ್ಕಳು - ಅನೇಕರು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರೂ ಶಾಲೆಯು ಮುಗಿದ ಮೇಲೆ ಕಾಯಬೇಕು - ತಮ್ಮ ಪೋಷಕರು ಬಂದು ಕರೆದೊಯ್ಯುವವರೆಗೂ. ಒಬ್ಬೊಬ್ಬರನ್ನೇ ಯಾವ ಧೈರ್ಯದ ಮೇಲೆ ಕಳಿಸುವುದು? "ಈಗಿನ ಕಾಲ ಚೆನ್ನಾಗಿಲ್ಲ. ನೋಡ್ತಾನೇ ಇರ್ತೀವಲ್ಲ ನ್ಯೂಸುಗಳಲ್ಲಿ" ಎನ್ನುವುದು ಬಹುತೇಕ ಪೋಷಕರ ಹೇಳಿಕೆ. ಶಾಲೆಗೆ ಕರೆದುಕೊಂಡು ಬಂದು, ಶಾಲೆಯು ಮುಗಿದ ಮೇಲೆ ಮನೆಗೆ ಕರೆದುಕೊಂಡು ಹೋಗುವ ಮಟ್ಟಿಗೆ ಮಕ್ಕಳನ್ನು ಕಾಯುವ ಪೋಷಕರು ಫೇಸ್ಬುಕ್ಕಿನಲ್ಲಿ ಕಾಯಲು ಅಸಹಾಯಕರಾಗಿರುತ್ತಾರೆ. ನನ್ನ ವಿದ್ಯಾರ್ಥಿಗಳು ಸುಮಾರು ಇನ್ನೂರು ಜನ ಫೇಸ್ಬುಕ್ಕಿನಲ್ಲಿರಬಹುದು, ಆದರೆ ಅದರಲ್ಲಿ ಎರಡು ಮೂರು ಮಕ್ಕಳ ಪೋಷಕರು ಮಾತ್ರವೇ ತಮ್ಮ ಮಕ್ಕಳ ಫ್ರೆಂಡ್ ಲಿಸ್ಟಿನಲ್ಲಿರುವುದು. ಅನೇಕ ಪೋಷಕರಿಗೆ ತಮ್ಮ ಮಕ್ಕಳು ಸಾಮಾಜಿಕ ತಾಣಗಳಲ್ಲಿ ಏನು ಮಾಡುತ್ತಿದ್ದಾರೆಂಬ ಕಲ್ಪನೆಯೂ ಇಲ್ಲ. ತಮ್ಮ ಮಕ್ಕಳ "ವರ್ಚುಯಲ್" ಸ್ನೇಹಿತರು ಯಾರು, ಅವರೊಂದಿಗಿನ ಸಂಭಾಷಣೆಗಳೇನು, ಯಾವ ಯಾವ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಾರೆ, ಅದಕ್ಕೆ ಎಷ್ಟು ಜನ "ಎಫ್"ಗಳ, "ಬಿ"ಗಳ ಕಮೆಂಟು ಮಾಡುತ್ತಾರೆ, ಇವುಗಳ ಗೋಜಿಗೆ ಅನೇಕ ಪೋಷಕರು ಹೋಗುವುದಿಲ್ಲ. ಬರೀ ಕೆಡುಕು ಮಾತ್ರವಲ್ಲ. ಇಂಥ ಸಾಮಾಜಿಕ ತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿದ್ಯಾರ್ಥಿ ಸಮೂಹವೂ ಇದೆ. ಅನೇಕ ಶೈಕ್ಷಣಿಕ ಪೇಜ್ಗಳನ್ನು ಫಾಲೋ ಮಾಡುವ ಮಕ್ಕಳು, ಮತ್ತು ಅವರು ಮಾಡುವ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಆನಂದವಾಗುತ್ತೆ. "ನಮಗೆ ಕಂಪ್ಯೂಟ್ರು, ಗಿಂಪ್ಯೂಟ್ರು ಎಲ್ಲಾ ಗೊತ್ತಾಗೋದಿಲ್ಲ. ಅವನು ಕಂಪ್ಯೂಟರ್ ಮುಂದೆ ಕೂತು, ಪ್ರೋಗ್ರಾಮೋ ಅದೆಂಥಾದ್ದೋ ಮಾಡ್ತಾನಂತೆ. ನೀವೇ ಹೇಳಿದ್ರಂತೆ ಮಾಡೋಕೆ." ಎಂದು ಕಂಪ್ಯೂಟರ್ ವಿಜ್ಞಾನದ ಅಧ್ಯಾಪಕನಾದ ನನಗೇ ದೂರು ತಂದಿದ್ದರು ಒಬ್ಬ ಪೋಷಕರು. ಅನೇಕ ಹಿರಿಯ ಶಿಕ್ಷಕರು ಕೂಡ "ಮಕ್ಕಳು ಫೇಸ್ಬುಕ್ಕಿನ ಕಡೆ ಹೋಗದಂತೆ ನೋಡಿಕೊಳ್ಳಿ!" ಎಂದು ಹೆದರಿಸುವ ಕಾರಣದಿಂದಲೋ ಏನೋ, ಪೋಷಕರಿಗೆ ತಮ್ಮ ಬಾಲ್ಯದಲ್ಲಿ ಅವರ ತಂದೆ ತಾಯಿಗಳು ಹೆದರಿಸುತ್ತಿದ್ದ "ಹಿತ್ತಲ ಕಡೆ ಹೋಗಬೇಡ, ಅಲ್ಲಿ ಗೊಗ್ಗಯ್ಯ ಇದಾನೆ" ಎಂಬ ಮಾತು ನೆನಪಾಗಿ ಮಕ್ಕಳು ಗೊಗ್ಗಯ್ಯನ ಪಾಲಾಗುತ್ತಾರೇನೋ ಎಂಬ ಭೀತಿಯಿಂದ ಕಂಗಾಲಾಗುತ್ತಾರೆ. ಮಕ್ಕಳ ದೃಷ್ಟಿಯಲ್ಲಿ ಅನೇಕ ಶಿಕ್ಷಕರು ಮತ್ತು ಪೋಷಕರು ಈ ಕಾರಣಕ್ಕಾಗಿಯೇ ಔಟ್ ಡೇಟೆಡ್!

ಆಗಲೇ ಹೇಳಿದ ಹಾಗೆ, ಈಗಿನ ಖಾಸಗಿ ಶಾಲೆಯ ಶಿಕ್ಷಣ ಪದ್ಧತಿಯಲ್ಲಿ ಪೋಷಕರು ಶಾಲೆಗೆ ಆಗಿದ್ದಾಂಗೆ ಬಂದು ತಮ್ಮ ಮಕ್ಕಳ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯುಯುವುದಲ್ಲದೆ, ಕೆಲವು ವೇಳೆ ಉಪಾಧ್ಯಾಯರುಗಳಿಂದ ಮಾರ್ಗದರ್ಶನ ಪಡೆಯುವುದು - ಅನೇಕ ವೇಳೆ ಉಪಾಧ್ಯಾಯರುಗಳಿಗೆ ಮಾರ್ಗದರ್ಶನ ಮಾಡುವುದು - ಸಾಮಾನ್ಯವಾಗಿದೆ. ಇದನ್ನು ಶಾಲೆಯವರು ಪಿ.ಟಿ. ಮೀಟಿಂಗ್ - ಅಥವಾ ಪೇರೆಂಟ್ಸ್ - ಟೀಚರ್ಸ್ ಮೀಟಿಂಗ್ ಎಂದೇ ಕರೆಯುತ್ತಾರೆ. ಇದು ನಾವುಗಳು ಓದುತ್ತಿದ್ದ ಕಾಲದಲ್ಲಿರಲಿಲ್ಲವೆಂದಲ್ಲ, ಆದರೆ ಆಗ ನಮ್ಮ ಪೋಷಕರು ಹೆಚ್ಚಾಗಿ ಭಾಗವಹಿಸುತ್ತಲೇ ಇರಲಿಲ್ಲ. ಈ ಪಿ.ಟಿ. ಮೀಟಿಂಗ್‍ನ ಒಂದಷ್ಟು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುವುದು ಪ್ರಸ್ತುತವೆಂದೆನಿಸುತ್ತೆ.

ನಮ್ಮ ಕಾಲದ ಪೋಷಕರಂತೆ ಕೆಲವರು ಈಗಲೂ ಇರುತ್ತಾರೆ. ಒಬ್ಬರು ಹೀಗೇ ಬಹಳ ಸಿಟ್ಟಿನಿಂದ ನಾನು ಇದ್ದ ಕಂಪ್ಯೂಟರ್ ಲ್ಯಾಬಿಗೆ ಧಾವಿಸಿದರು. ನಾನು ಏನು ಮಾಡಿದೆನಪ್ಪಾ ಎಂದು ಗಾಬರಿಗೊಂಡೆ. ಅಥವಾ, ಅವರು ಸಿಟ್ಟಾದರೆಂದು ನಾನೂ ಸಿಟ್ಟಾಗಿ ಅವರಿಗೆ ದಬಾಯಿಸಿದರೆ ನಮ್ಮ ಬಾಸು ನನ್ನ ಮೇಲೆ ಸಿಟ್ಟಾಗುವುದು ಖಚಿತ. ಅವರು "ಸಾರ್, ಈ ನನ್ನ ಮಗ ಏನೂ ಪ್ರಯೋಜನ ಇಲ್ಲ. ಇವನು ಹಾಳಾಗೋಕೆ ಟೀಚರುಗಳೇ ಕಾರಣ." ಎಂದು ಹೇಳಿಕೆ ಕೊಟ್ಟರು. ನಾನು ಏನೂ ಮಾತನಾಡಲಿಲ್ಲ. ಅವರೇ ಮುಂದುವರೆಸುತ್ತ "ನೀವುಗಳು ಹೊಡೆಯುವುದಿರಲಿ, ಗಟ್ಟಿಯಾಗಿ ಮಾತನ್ನು ಕೂಡ ಆಡುವುದಿಲ್ಲ!" ಎಂದರು. ಆಗಷ್ಟೇ ದಿನಪತ್ರಿಕೆಯಲ್ಲಿ "ಹೈಸ್ಕೂಲು ಹುಡುಗನಿಗೆ ಹೊಡೆದ ಪಿ.ಟಿ. ಮಾಸ್ತರ ಮೇಲೆ ಥಳಿತ" ಎಂದು ಓದಿದ್ದೆ. ಇವರೇನು ಹೀಗೆ ಹೇಳುತ್ತಿದ್ದಾರಲ್ಲಾ ಎಂದು ಆಶ್ಚರ್ಯವಾಯಿತು. ನಂತರ ಸಮಾಧಾನ ತಂದುಕೊಂಡು ಅವರಿಗೆ ಹೇಳಿದೆ, "ನೋಡಿಪ್ಪಾ, ಹೊಡೆಯುವುದರಿಂದ ನಿಮ್ಮ ಮಗನ ಪ್ರತಿಭೆಯು ಹೆಚ್ಚಾಗುವುದೆಂದರೆ, ಪರೀಕ್ಷೆಯಲ್ಲಿ ಅಂಕಗಳು ಜಾಸ್ತಿ ಬರುವುವೆಂದರೆ ಪ್ರತಿದಿನವೂ ಬೆಳಿಗ್ಗೆ ಬೇಗ ಕಳಿಸಿ. ಅರ್ಧ ಗಂಟೆ ಹೊಡೆದು ಆಮೇಲೆ ಪಾಠ ಆರಂಭಿಸುತ್ತೇನೆ." ನನ್ನ ಮಾತು ಕೇಳಿ ಅವರ ಸಿಟ್ಟು ಕಡಿಮೆಯಾಗಿ ಮಗನ ಮುಖ ನೋಡಿ ಬೇಸರಗೊಂಡರು. "ನೋಡೋ, ನಮ್ಮ ಕಾಲದಲ್ಲಿ ಮೇಷ್ಟ್ರುಗಳು ದೊಣ್ಣೆ ತೊಗೊಂಡು ಬಾರಿಸುತ್ತಿದ್ದರು. ನಿಮಗೆ ಒಳ್ಳೇ ಮಾತಲ್ಲಿ ಹೇಳ್ತಾರಲ್ಲಾ, ಅದಕ್ಕೇ ಕೊಬ್ಬು ನಿಮಗೆ!" ಎಂದು ಇಡೀ ವಿದ್ಯಾರ್ಥಿ ಕುಲವನ್ನೇ ಜರಿದರು.

ಒಬ್ಬರಿಗಂತೂ ಬಗೆಹರಿಯಲಾರದ ಸಮಸ್ಯೆಯೊಂದು ಕಾಡುತ್ತಿತ್ತೆನಿಸುತ್ತೆ. ನನ್ನ ಬಂದು ಕೇಳಿದರು. "ಸರ್, ನಮ್ಮ ಮಗಳಿಗೆ ಹೇಗೆ ಹೇಳಿಕೊಡಬೇಕೋ ಗೊತ್ತಾಗುತ್ತಿಲ್ಲ. ನೀವು ಇಲ್ಲಿ ಏನು ಕಲಿಸುತ್ತೀರೋ ಅದರ ಸಾಫ್ಟ್ ಕಾಪಿ ಇದೆಯಾ? ಯಾಕೆಂದರೆ ಬೇರೆ ಎಲ್ಲ ಸಬ್ಜೆಕ್ಟುಗಳಲ್ಲೂ ಬರೀ ಥಿಯರಿ ಇರುತ್ತೆ, ಕಂಪ್ಯೂಟರಿನಲ್ಲಿ ಮಾತ್ರ ಪ್ರ್ಯಾಕ್ಟಿಕಲ್ಸ್ ಕೂಡ." ಎಂದರು. ನಾನು ಅವರ ಮಗಳ ತರಗತಿಯಲ್ಲಿ ಪಾಠ ಮಾಡದೇ ಇದ್ದ ಕಾರಣ, ಮತ್ತು ಆ ತರಗತಿಯಲ್ಲಿ ಪಾಠ ಮಾಡುವ ನನ್ನ ಸಹೋದ್ಯೋಗಿಯು ಅಲ್ಲಿರದ ಕಾರಣ ನಾನೇ ಅವರನ್ನು ಕೇಳಿದೆ - "ಎಷ್ಟನೇ ತರಗತಿ ನಿಮ್ಮ ಮಗಳು?" ಅವರು ಥಟ್ಟನೆ -"ಫರ್ಸ್ಟ್ ಸ್ಟ್ಯಾಂಡರ್ಡ್" ಎಂದಾಗ ಪೋಷಕರ ಆತಂಕದ ತೀವ್ರತೆಯು ಸ್ವಲ್ಪ ಮಟ್ಟಿಗೆ ನನ್ನ ತಲೆಗೆ ಹೋಯಿತು.

ಕೆಲವರಂತೂ ತರಗತಿಯಲ್ಲಿರುವವರ ಉತ್ತರ ಪತ್ರಿಕೆಗಳನ್ನೆಲ್ಲಾ ಪರಿಶೀಲಿಸಿ ಅವುಗಳನ್ನು ತಮ್ಮ ಮಕ್ಕಳ ಉತ್ತರ ಪತ್ರಿಕೆಯೊಂದಿಗೆ ಹೋಲಿಸಿ, ಎಲ್ಲಿ ಅರ್ಧ ಅಂಕವು ವ್ಯತ್ಯಾಸವಾಗಿರುತ್ತೆಂದು ಭೂತಗಾಜಿನಲ್ಲಿ ಹುಡುಕಿ ಟೀಚರನ್ನು ದಬಾಯಿಸಿ ಆ ಅಂಕವನ್ನು ಗಳಿಸಿಕೊಂಡು ಹೋಗುತ್ತಾರೆ. ಟೀಚರುಗಳು ಅಂಕಗಳ ವ್ಯತ್ಯಾಸ ಮಾಡುವುದು ಸರಿಯೆಂದು ನಾನು ಹೇಳುತ್ತಿಲ್ಲ. ಆದರೆ ಅನೇಕ ಸಲ ತೊಂಭತ್ತು ಅಂಕಗಳನ್ನು ಮೀರಿದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಮರುಪರಿಶೀಲನೆ ಮಾಡಿ ಸಣ್ಣ ಸಣ್ಣ ತಪ್ಪುಗಳಿಗೂ ಅಂಕಗಳನ್ನು ಹಿಡಿಯುವುದು, ಮತ್ತು ಮೂವತ್ತು, ನಲವತ್ತು ಅಂಕಗಳನ್ನು ಕಷ್ಟ ಪಟ್ಟು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಲ್ಲಿ ಈ ತಪ್ಪುಗಳನ್ನು ಕಡೆಗಣಿಸುವುದು ಮೌಲ್ಯಮಾಪನದ ಪದ್ಧತಿ. ಇದನ್ನು ಮನವರಿಕೆ ಮಾಡಿಕೊಡುವುದನ್ನು ಟೀಚರುಗಳು ಕಲಿಯದಿದ್ದರೆ ಪೋಷಕರ ಶೋಷಣೆಗೊಳಪಡಬೇಕಾದ್ದು ಖಚಿತ.

ಒಂದು ಸಲ ಒಬ್ಬರು ಬಹಳ ಬೇಸರದಿಂದ, ಅಸಮಾಧಾನದಿಂದ ನನ್ನೆಡೆಗೆ ಬಂದರು. ನಾನು ಕಂಪ್ಯೂಟರ್ ಅಧ್ಯಾಪಕನಲ್ಲದೆ, ನನಗೆ ತಕ್ಕ ಮಟ್ಟಿಗೆ ಹಾಡಲೂ ಬರುವುದರಿಂದ ಕೆಲವು ಸಮಾರಂಭಗಳಿಗೆ ಪ್ರಾರ್ಥನೆ ಗೀತೆಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿರುತ್ತೇನೆ. ಹಾಗಾಗಿಯೇ ಯಾರು ಚೆನ್ನಾಗಿ ಹಾಡುತ್ತಾರೋ ಆ ಮಕ್ಕಳನ್ನೇ ಆರಿಸಿಕೊಳ್ಳುವುದು ಸೂಕ್ತವೆಂದು ನನ್ನ ನಂಬಿಕೆ. ನನ್ನ ಬಳಿ ಬಂದ ಪೋಷಕರು "ನಿಮಗೆ ಹೇಗೆ ಹೇಳಬೇಕೋ ಗೊತ್ತಿಲ್ಲ, ನನ್ನ ಮಗಳೂ ಸಹ ಸಂಗೀತ ತರಗತಿಗಳಿಗೆ ಹೋಗುತ್ತಿದ್ದಾಳೆ, ಆದರೆ ನೀವು ಯಾವಾಗಲೂ ಆ ಕಖಗ ಹುಡುಗಿಯನ್ನೇ ತೆಗೆದುಕೊಳ್ಳುತ್ತೀರ." ಎಂದರು. ನಾನು "ಮುಂದಿನ ಸಲ ತೆಗೆದುಕೊಳ್ಳುತ್ತೇನೆ" ಎಂದೇನೋ ಹೇಳಿ ಕಳಿಸಿಬಿಟ್ಟೆ. ಆದರೆ ಆ ಹುಡುಗಿಯು ಹೋಗುತ್ತಿದ್ದುದು ಗಿಟಾರ್ ತರಗತಿಗಳಿಗೆ ಎಂದು ಮುಂದಿನ ಕಾರ್ಯಕ್ರಮದ ವೇಳೆ ತಿಳಿಯಿತು. ಈಗ ಆ ಪೋಷಕರಿಗೆ ಹೇಳಿಯಾಗಿದೆ, ಬೇರೆ ದಾರಿಯೇ ಇಲ್ಲ. ಈ ಹುಡುಗಿಯೇ ಗಿಟಾರ್ ನುಡಿಸಿಕೊಂಡೇ ಪ್ರಾರ್ಥನೆ ಗೀತೆ ಹೇಳಿದಳು. ಮುಗಿದ ಮೇಲೆ ಪ್ರಾಂಶುಪಾಲರು ನನ್ನ ಚರಮಗೀತೆಯನ್ನು ಹಾಡಿದರು.

ಹೀಗೆ ಅವಕಾಶದ ವಿಷಯದಲ್ಲಿ ಪೋಷಕರಿಗೂ ಶಿಕ್ಷಕರಿಗೂ ಝಟಾಪಟಿ ಆಗುತ್ತಿರುತ್ತೆ. ವಾರ್ಷಿಕೋತ್ಸವದಲ್ಲಿ ಎಲ್ಲ ಮಕ್ಕಳೂ ನಾಯಕ/ನಾಯಕಿಯ ಪಾತ್ರವನ್ನೇ ಮಾಡಬೇಕು. ಅವನಿಗೆ ಹತ್ತು ಡೈಲಾಗು, ನನ್ನ ಮಗನಿಗೆ ಮಾತ್ರ ಒಂದೇ ಡೈಲಾಗು ಎಂದು ಪ್ರಶ್ನಿಸುವುದರಿಂದ ಹಿಡಿದು, ನನ್ನ ಮಗನಿಗೆ ಕೋತಿ ಪಾತ್ರವನ್ನು ಕೊಟ್ಟಿದ್ದೀರ, ಮುಖವೇ ಕಾಣದ ಹಾಗೆ ಮಾಡಿದ್ದೀರ ಎಂದು ಜಗಳವಾಡುವವರೆಗೂ ಈ ಝಟಾಪಟಿ ನಡೆಯುತ್ತಿರುತ್ತೆ. ಇಲ್ಲಿ ಪೋಷಕರ ಮಾತಿನಲ್ಲೂ ಅರ್ಥವಿರುತ್ತೆ - ಯಾಕೆಂದರೆ ನಾಯಕನ ಪಾತ್ರ ಮಾಡಿದ ಹುಡುಗನ ಪೋಷಕರೂ ಹಣ ಪಾವತಿ ಮಾಡಿರುತ್ತಾರೆ - ಒಂದೇ ಡೈಲಾಗು ಹೇಳಿದ ಹುಡುಗನ ಪೋಷಕರೂ ಹಣ ತೆತ್ತಿರುತ್ತಾರೆ. ಹಣ ಪಾವತಿ ಮಾಡಿರುವವರಿಗೆಲ್ಲ ಒಂದೇ ಪಾತ್ರವನ್ನು ನೀಡಲು ಹೆಣಗಾಡುವ ಟೀಚರುಗಳು ಪುಟ್ಟಣ್ಣ ಕಣಗಾಲ್, ಗುರುದತ್ ಇಂತಹ ನಿರ್ದೇಶಕರನ್ನೂ ಮೀರಿಸಿದಂತೆಯೇ ಸರಿ.

ಕೆಲವರು ಮಕ್ಕಳಿಗೆ ಹೋಮ್‍ವರ್ಕ್ ಕೊಡಬಾರದೆನ್ನುತ್ತಾರೆ, ಮತ್ತೆ ಕೆಲವರು "ನೀವು ಹೋಮ್‍ವರ್ಕೇ ಕೊಡುವುದಿಲ್ಲ" ಎಂದು ದೂರುತ್ತಾರೆ. ಕೆಲವರು ಮಕ್ಕಳ ಚೀಲಗಳು ತುಂಬ ಭಾರ ಎನ್ನುವ ದೂರನ್ನು ಹೊತ್ತು ತಂದಿರುತ್ತಾರೆ, ಮತ್ತೆ ಕೆಲವರು "ಯಾವ ಪುಸ್ತಕಗಳನ್ನೂ ತರುವುದೇ ಇಲ್ಲ, ಏನು ಪಾಠ ನಡೆಯುತ್ತೋ ಇಲ್ಲವೋ?" ಎಂದು ಪ್ರಶ್ನಿಸುತ್ತಾರೆ. ಕೆಲವರು ತಮ್ಮ ಮಕ್ಕಳ ಫಲಿತಾಂಶಕ್ಕಿಂತ ಉಳಿದ ಮಕ್ಕಳ ಫಲಿತಾಂಶದ ಬಗ್ಗೆಯೇ ಆಸಕ್ತಿಯನ್ನು ಹೊಂದಿರುತ್ತಾರೆ, ಮತ್ತೆ ಕೆಲವರು ಇಡೀ ಶಾಲೆಯಲ್ಲಿ ತಮ್ಮ ಮಕ್ಕಳಷ್ಟೇ ಓದುತ್ತಿರುವುದೆಂದುಕೊಂಡಿರುತ್ತಾರೆ. ಕೆಲವರು ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಜರಿದರೆ, ಮತ್ತೆ ಕೆಲವರು ಶಾಲೆಯಲ್ಲಿ ಬರೀ ಅದೂ ಇದೂ ಚಟುವಟಿಕೆಗಳೇ, ಓದಲು ಸಮಯವೇ ಕೊಡುವುದಿಲ್ಲ ಎಂದು ಹಳಿಯುತ್ತಾರೆ. ಕೆಲವು ಶಿಕ್ಷಕರು ಕನ್ನಡದಲ್ಲೇ ಮಾತನಾಡಿಸುತ್ತಾರೆ ಮಕ್ಕಳನ್ನು ಎಂಬುದು ಕೆಲವರಿಗೆ ದೂರಾಗಿರುತ್ತೆ, ಮತ್ತೆ ಕೆಲವರಿಗೆ ಹೆಮ್ಮೆಯ ವಿಷಯವಾಗಿರುತ್ತೆ. ಒಬ್ಬ ಪೋಷಕರಂತೂ ಒಮ್ಮೆ "ಸರ್, ನನ್ನ ಮಗ ಎಂಟನೇ ತರಗತಿಯವರೆಗೂ ಚೆನ್ನಾಗಿಯೇ ಇದ್ದ, ಆದರೆ ಒಂಭತ್ತನೆಯ ತರಗತಿಗೆ ಬಂದ ಮೇಲೆ ಅದು ಯಾರ ಯಾರ ಸಹವಾಸವಾಯಿತೋ ಏನೋ ತುಂಬಾ ಕೆಟ್ಟು ಹೋಗಿದ್ದಾನೆ. ಬರೀ ಇಂಗ್ಲೀಷ್ ಹಾಡುಗಳನ್ನೇ ಕೇಳುತ್ತಾನೆ ಮನೆಯಲ್ಲಿ" ಎಂದರು. ಈ ದೂರಿಗೆ ತಳ-ಬುಡವಿಲ್ಲದೇ ಇದ್ದ ಕಾರಣ ನಾನು ಸುಮ್ಮನೆ ನಕ್ಕೆ. ಹೀಗೆ ಭಿನ್ನಾಭಿಪ್ರಾಯಗಳ ಪೋಷಕರ ಸಾಗರದಲ್ಲಿ ಶಿಕ್ಷಕರು ಈಜುತ್ತಿರುತ್ತಾರೆ. ಈಜಲು ಕಷ್ಟವಾದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸಲೀಸಾಗಿ ವರ್ಗಾಯಿಸುತ್ತಾರೆ - ಅಲ್ಲಿಗೆ ಮಕ್ಕಳ "ಪ್ರಾಣ" ಸ್ನೇಹಿತರು, ವೇದವಾಕ್ಯವನ್ನು ಬೋಧಿಸುವ "ಮ್ಯಾಮ್"ಗಳು, ತಾವು ಯಾವಾಗಲೂ ಕುಳಿತುಕೊಳ್ಳುವ ಜಾಗ, ಡಬ್ಬಿಯ ಮುಚ್ಚಳವನ್ನು ತೆಗೆದುಕೊಡುವ "ಆಯಮ್ಮ" - ಎಲ್ಲವೂ ಬದಲಾಗುತ್ತೆ.

ಶಿಕ್ಷಕರ ಪಾಲಿನ ತಪ್ಪುಗಳೂ ಅನೇಕವಿರುತ್ತೆ. ಶಿಕ್ಷಕರಿರುವುದೇ ಮಕ್ಕಳಿಗೆ ಶಿಕ್ಷೆ ಕೊಡಲು ಎಂಬ ಚಿತ್ರಣವು ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿರುವ ಅನೇಕ ಘಟನೆಗಳಿಂದ ಜನರ ಮನಸ್ಸಿನಲ್ಲಿರಬಹುದು. ಅದರ ಜೊತೆಗೆ ಅನೇಕ ಸಲ ತಾವು ಬೋಧಿಸುವ ವಿಷಯದಲ್ಲೇ ತಪ್ಪನ್ನೆಸಗುವ ಪ್ರಸಂಗಗಳೂ ಇರುತ್ತವೆ. "ಆಚಾರ್ಯ ದೇವೋ ಭವ" ಎಂಬ ಉಕ್ತಿಯಿದ್ದರೂ ಅವರೂ ಮನುಷ್ಯರಷ್ಟೆ? ಅವರೂ ತಪ್ಪನ್ನು ಮಾಡುವುದು ಸಹಜವಷ್ಟೆ? ಅದನ್ನು ತಿದ್ದುವ ಹೊಣೆಯನ್ನು ಶಾಲೆಯ ಆಡಳಿತವರ್ಗದವರೂ, ಮತ್ತು ಪೋಷಕರೂ (ನನ್ನ ಪ್ರಕಾರ ವಿದ್ಯಾರ್ಥಿಗಳೂ) ಪಡೆದುಕೊಂಡಿರುತ್ತಾರಾದರೂ, ಬಹುಪಾಲು ಪೋಷಕರು ಶಿಕ್ಷಕರು ತಪ್ಪೆಸಗಿದಾಗ ದಬಾಯಿಸಲೆಂದೇ ಬರುತ್ತಾರೆ. ಆ ಟೀಚರನ್ನು ಕೆಲಸದಿಂದ ತೆಗೆಸಿಬಿಡುವ ಮಟ್ಟಿಗೂ ಹೋಗುತ್ತಾರೆ. ಅಷ್ಟು ಶಕ್ತಿಯು ಪೋಷಕರಿಗಿರುತ್ತೆಂಬುದು ಸತ್ಯ. ಆಗಲೇ ಹೇಳಿದ ಹಾಗೆ ಖಾಸಗಿ ಶಾಲೆಗಳಿರುವುದೇ ಪೋಷಕರಿಂದ, ಪೋಷಕರಿಗಾಗಿ! ಆದರೆ ಕೆಲವರು "ನಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ. ನೀವು ಒಳ್ಳೆಯ ಟೀಚರ್ (ಆಗಿರಲಿ, ಬಿಡಲಿ), ಆದರೆ ಇಂತಹ ಕಡೆ ನೀವು ತಪ್ಪುತ್ತಿದ್ದೀರಿ, ಇಂತಹುದನ್ನು ನೀವು ಬದಲಿಸಿಕೊಂಡರೆ ಮಕ್ಕಳಿಗೆ ಒಳ್ಳೆಯದೆಂದು ನಮ್ಮ ಅನಿಸಿಕೆ" ಎಂಬ ಪ್ರತಿಕ್ರಿಯೆಯನ್ನು ಕೊಡುವುದರ ಮೂಲಕ ತಾವು ಮಕ್ಕಳಿಗಷ್ಟೇ ಪೋಷಕರಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಪೋಷಕರು ಎಂಬುದನ್ನು ನಿರೂಪಿಸುತ್ತಿರುತ್ತಾರೆ.

-ಅ

25.12.2012

2AM