Sunday, February 3, 2013

ಪೋಷಕರು ಸಾರ್ ಪೋಷಕರು

[ಉದಯವಾಣಿ ಪತ್ರಿಕೆಯವರು ಈ ಲೇಖನವನ್ನು ಪ್ರಕಟಿಸಿದ್ದಕ್ಕೆ ಅವರಿಗೆ ನಾನು ಕೃತಜ್ಞ.]

"ನಾವೆಲ್ಲ ಓದುತ್ತಿದ್ದಾಗ ಪ್ರಿನ್ಸಿಪಾಲರು ಅಪ್ಪ ಅಮ್ಮನನ್ನು ಕರೆದುಕೊಂಡು ಬನ್ನಿ ಅಂತ ಏನಾದರೂ ಹೇಳಿದ್ದರೆ, ನಾವು ಐಪಿಸಿ ಸೆಕ್ಷನ್ ಮುನ್ನೂರ ಎರಡರ ಅಪರಾಧ ಮಾಡಿದ್ದೇವೆಂದು ಅರ್ಥ ಆಗುತ್ತಿತ್ತು!" ನೆನಪು ಮಾಡಿಕೊಂಡರು ನನ್ನ ಸಹೋದ್ಯೋಗಿ ಮಿತ್ರರು - ನಮ್ಮ ಶಾಲೆಯ ಗ್ರಂಥಾಲಯದ ನಿಃಶಬ್ದ ಚರ್ಚೆಯಲ್ಲಿ. ಗ್ರಂಥಾಲಯದಲ್ಲಿ ಮೌನವಾಗಿರಬೇಕೆಂಬುದು ಸಾಮಾನ್ಯ ನಿಯಮವಾದರೂ, ನಾವುಗಳು ಅಲ್ಲಿ ಧ್ವನಿಯೇರಿಸದೆಯೇ ಏನಾದರೂ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರುತ್ತೇವೆ. ಅಂದು ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ದಿನವಾದ್ದರಿಂದ ಪೋಷಕರ ಬಗ್ಗೆ ಚರ್ಚೆಯು ತಾನೇತಾನಾಗಿ ಮೂಡಿಬಂದಿತು. ನನ್ನ ಮಿತ್ರ ತಮ್ಮ ಬಾಲ್ಯದ ಗತವೈಭವವನ್ನು ನೆನಪು ಮಾಡಿಕೊಂಡಿದ್ದು ಹೀಗೆ.

ನಾನು ಹೈಸ್ಕೂಲು ಸೇರ್ಪಡೆಯಾಗುವಾಗ ಶಾಲೆಗೆ ಅಮ್ಮ ಬಂದಿದ್ದರು - ಅಡ್ಮಿಷನ್ ಮಾಡಿಸಲು. ಆಮೇಲೆ ಅವರು ಬಂದಿದ್ದು ನನಗೆ ನೆನಪಿಲ್ಲ. ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿರುತ್ತಿದ್ದರು. ಅದು ಬಿಟ್ಟರೆ, ಬೇರೆ ಸಂದರ್ಭಗಳಲ್ಲಿ ಪೋಷಕರು ಶಾಲೆಗೆ ಬಂದರೆಂದರೆ ಮಿಕ್ಕ ವಿದ್ಯಾರ್ಥಿಗಳಿಗೆಲ್ಲ "ಓಹೋ, ಶಾಲೆಯಲ್ಲಿ ಏನೋ ಗಲಾಟೆ ಕಾದಿದೆ - ಯಾರೋ ಏನೋ ಮಾಡಿದ್ದಾರೆ" ಎಂದೇ ಅರ್ಥವಾಗುತ್ತಿತ್ತು. ಪ್ರಾಥಮಿಕ ಶಾಲೆಯಲ್ಲಿದ್ದಾಗ ವರ್ಷಕ್ಕೆ ಎರಡು ಸಲ ಬರುತ್ತಿದ್ದರು - ಒಂದು ಅಡ್ಮಿಷನ್ ಮಾಡಿಸಲು, ಎರಡು - ಫಲಿತಾಂಶ ಸ್ವೀಕರಿಸಲು. ನನ್ನ ಪುಣ್ಯ, ನಾನು ಐಪಿಸಿಯ ಯಾವುದೇ ಸೆಕ್ಷನ್ ಅಡಿ ಯಾವುದೇ ಅಪರಾಧ ಎಸಗದೇ ಇದ್ದುದರಿಂದ "ನಿಮ್ಮಮ್ಮನ್ನ ಕರಕೊಂಡು ಬಾ" ಎಂದು ನನ್ನ ಟೀಚರುಗಳು ನನಗೆ ಹೇಳಿರಲಿಲ್ಲ.

ಬಹುಶಃ ಈಗಲೂ ಹಳ್ಳಿಗಳಲ್ಲಿ, ಅಥವಾ ನಗರದ ಸರ್ಕಾರಿ ಶಾಲೆಗಳಲ್ಲಿ ಹೀಗೆಯೇ ಇರಬಹುದು. ಆದರೆ ಖಾಸಗಿ ಶಾಲೆಗಳಲ್ಲಿ ಈ ಕಲ್ಪನೆಯೂ ಮಾಡಿಕೊಳ್ಳಲಾಗುವುದಿಲ್ಲ. ಖಾಸಗಿ ಶಾಲೆಗಳಿರುವುದೇ ಪೋಷಕರಿಂದ, ಪೋಷಕರಿಗಾಗಿ. ಅಲ್ಲಿ ಪೋಷಕರೇ ರಾಜರು. And the king is always right! ಈಗಿನ ಶಿಕ್ಷಣ ವ್ಯಾಪಾರದಲ್ಲಿ ಆಡಳಿತದವರು ಮಾರಾಟಗಾರರು, ಪೋಷಕರೇ ಗ್ರಾಹಕರು. ಪೋಷಕರಿಗೆ ಶಾಲೆಯಲ್ಲಿ ನಡೆಯುವ ಸಂಗತಿಗಳು, ಮಕ್ಕಳ ಹಾಜರಾತಿ (ಶಾಲೆಯನ್ನು ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೇನಲ್ಲ), ಮಕ್ಕಳು ಯಾವ ದಿನ ಯಾವ ಪುಸ್ತಕವನ್ನು ಶಾಲೆಗೆ ತಂದಿರಲಿಲ್ಲ, ಇನ್ನು ಆರು ತಿಂಗಳ ನಂತರ ಎಲ್ಲಿಗೆ ಪ್ರವಾಸ ಹೋಗುತ್ತಾರೆ, ತರಗತಿಯ ಉಪಾಧ್ಯಾಯರನ್ನು ಎಷ್ಟು ಗಂಟೆಗೆ ಭೇಟಿ ಮಾಡಬೇಕು, ಇಂತಹ ಎಲ್ಲ ವಿಷಯಗಳನ್ನೂ ಎಸ್ಸೆಮ್ಮೆಸ್ಸು, ಈಮೇಲ್, ಮಕ್ಕಳ ಡೈರಿ, ಸುತ್ತೋಲೆಗಳು - ಅನೇಕ ರೀತಿಯಲ್ಲಿ ತಲುಪಿಸಲಾಗುತ್ತೆ. ಶಾಲೆಯ ವಾಹನಗಳನ್ನು ಉಪಯೋಗಿಸುವ ಮಕ್ಕಳ ಪೋಷಕರಿಗಂತೂ ವಾಹನವು ಎಷ್ಟು ಹೊತ್ತಿಗೆ ಶಾಲೆಯನ್ನು ಬಿಟ್ಟಿತು, ಎಷ್ಟು ಗಂಟೆಗೆ ತಮ್ಮ ಮನೆಯನ್ನು ತಲುಪುತ್ತೆ ಎಂಬ ಎಸ್ಸೆಮ್ಮೆಸ್ಸುಗಳೂ ಹೋಗುತ್ತೆ - ಜಿ.ಪಿ.ಎಸ್. ವ್ಯವಸ್ಥೆಯಿಂದ. ಅಷ್ಟರ ಮಟ್ಟಿಗೆ ಖಾಸಗಿ ಶಾಲೆಯ ಮಕ್ಕಳು ಸೇಫ್ ಎಂಡ್ ಸೆಕ್ಯೂರ್ಡ್.

ಶಾಲೆಗೆ ಸೇರಿಸುವ ಮುನ್ನ ಶಾಲೆಯಲ್ಲಿ ಏನೇನು ಸಾಮಾನು ಸರಂಜಾಮುಗಳಿವೆ, ತರಗತಿಗಳಲ್ಲಿ ಫ್ಯಾನುಗಳಿವೆಯೇ, ಪಾಠ ಮಾಡುವ ಟೀಚರುಗಳ ವಿದ್ಯಾರ್ಹತೆಯೇನು, ಮಕ್ಕಳು ಕುಳಿತುಕೊಳ್ಳುವ ಕುರ್ಚಿಗಳು, ಡೆಸ್ಕುಗಳು ಹೇಗಿವೆ, ಶಾಲೆಯ ಆಟದ ಮೈದಾನ ಚೆನ್ನಾಗಿದೆಯೇ, ಆಟವಾಡಲು ಬೇಕಾದ ಸಾಮಗ್ರಿಗಳಿವೆಯೇ - ಎಂದು ಪರಿಶೀಲಿಸಿದ ನಂತರವೇ ಪೋಷಕರು ತಮ್ಮ ಮಕ್ಕಳನ್ನು ಅಡ್ಮಿಷನ್ ಮಾಡಿಸುವುದು. ಈ ಪರಿಶೀಲನೆಯು ಎಷ್ಟರ ಮಟ್ಟಿಗಿರುತ್ತೆ ಖಾಸಗಿ ಶಾಲೆಯಲ್ಲಿ ಎಂದರೆ - ನನಗೆ ನೆನಪಿದೆ - ಒಬ್ಬ ಹುಡುಗನನ್ನು ಹತ್ತನೆಯ ತರಗತಿಗೆ ಸೇರಿಸಲು ಬಂದ ಆ ಹುಡುಗನ ಪೋಷಕರು, "ಮೊದಲು ಒಂದು ವಾರ ಅವನು ನೋಡಲಿ, ಇಲ್ಲಿನ ವಾತಾವರಣವು ಸರಿ ಹೋದರೆ ಮುಂದುವರೆಸುತ್ತೇವೆ" ಎಂದರು. ನಾನು ಈ ಹಿಂದೆ ಈ ರೀತಿ ಮಾಡಿದ್ದು ನನ್ನ ಗಾಡಿಯನ್ನು ಖರೀದಿಸುವಾಗ - ಟೆಸ್ಟ್ ಡ್ರೈವ್‍ಮಾಡಿದ್ದು. ಅದಕ್ಕೆ ಮುಂಚೆ ಯಾವುದೋ ಪ್ರವಾಸ ಮಾಡುವಾಗ ಹೊಟೆಲಿನಲ್ಲಿ ರೂಮು ಮಾಡಿಕೊಳ್ಳುವಾಗ "ರೂಮು ಹೇಗಿದೆ ಎಂದು ನೋಡಿ ಆಮೇಲೆ ಹೇಳುತ್ತೇವೆ ಬೇಕೋ ಬೇಡವೋ ಎಂದು" ಎಂದು ನಾನೇ ಹೇಳಿದ್ದೆ. ಮೊದಲು ಹೀಗಿರಲಿಲ್ಲ ಎಂದ ಮಾತ್ರಕ್ಕೆ ಈಗಿನ ಪೋಷಕರು ಮಾಡುತ್ತಿರುವುದು ತಪ್ಪೆನ್ನಲಾಗುವುದಿಲ್ಲ. ಆದರೆ ಆಗಿನ ಶಾಲೆಗಳಲ್ಲಿ ಹೀಗೆ ಪರಿಶೀಲಿಸುವ ಅವಶ್ಯಕತೆಯಿರಲಿಲ್ಲ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಹುದು.

ಶಾಲೆಯ ವಾಹನವನ್ನು ಅಥವಾ ಬೇರೆ ಖಾಸಗಿ ವಾಹನಗಳನ್ನು ಬಳಸದ ಮಕ್ಕಳು - ಅನೇಕರು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರೂ ಶಾಲೆಯು ಮುಗಿದ ಮೇಲೆ ಕಾಯಬೇಕು - ತಮ್ಮ ಪೋಷಕರು ಬಂದು ಕರೆದೊಯ್ಯುವವರೆಗೂ. ಒಬ್ಬೊಬ್ಬರನ್ನೇ ಯಾವ ಧೈರ್ಯದ ಮೇಲೆ ಕಳಿಸುವುದು? "ಈಗಿನ ಕಾಲ ಚೆನ್ನಾಗಿಲ್ಲ. ನೋಡ್ತಾನೇ ಇರ್ತೀವಲ್ಲ ನ್ಯೂಸುಗಳಲ್ಲಿ" ಎನ್ನುವುದು ಬಹುತೇಕ ಪೋಷಕರ ಹೇಳಿಕೆ. ಶಾಲೆಗೆ ಕರೆದುಕೊಂಡು ಬಂದು, ಶಾಲೆಯು ಮುಗಿದ ಮೇಲೆ ಮನೆಗೆ ಕರೆದುಕೊಂಡು ಹೋಗುವ ಮಟ್ಟಿಗೆ ಮಕ್ಕಳನ್ನು ಕಾಯುವ ಪೋಷಕರು ಫೇಸ್ಬುಕ್ಕಿನಲ್ಲಿ ಕಾಯಲು ಅಸಹಾಯಕರಾಗಿರುತ್ತಾರೆ. ನನ್ನ ವಿದ್ಯಾರ್ಥಿಗಳು ಸುಮಾರು ಇನ್ನೂರು ಜನ ಫೇಸ್ಬುಕ್ಕಿನಲ್ಲಿರಬಹುದು, ಆದರೆ ಅದರಲ್ಲಿ ಎರಡು ಮೂರು ಮಕ್ಕಳ ಪೋಷಕರು ಮಾತ್ರವೇ ತಮ್ಮ ಮಕ್ಕಳ ಫ್ರೆಂಡ್ ಲಿಸ್ಟಿನಲ್ಲಿರುವುದು. ಅನೇಕ ಪೋಷಕರಿಗೆ ತಮ್ಮ ಮಕ್ಕಳು ಸಾಮಾಜಿಕ ತಾಣಗಳಲ್ಲಿ ಏನು ಮಾಡುತ್ತಿದ್ದಾರೆಂಬ ಕಲ್ಪನೆಯೂ ಇಲ್ಲ. ತಮ್ಮ ಮಕ್ಕಳ "ವರ್ಚುಯಲ್" ಸ್ನೇಹಿತರು ಯಾರು, ಅವರೊಂದಿಗಿನ ಸಂಭಾಷಣೆಗಳೇನು, ಯಾವ ಯಾವ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಾರೆ, ಅದಕ್ಕೆ ಎಷ್ಟು ಜನ "ಎಫ್"ಗಳ, "ಬಿ"ಗಳ ಕಮೆಂಟು ಮಾಡುತ್ತಾರೆ, ಇವುಗಳ ಗೋಜಿಗೆ ಅನೇಕ ಪೋಷಕರು ಹೋಗುವುದಿಲ್ಲ. ಬರೀ ಕೆಡುಕು ಮಾತ್ರವಲ್ಲ. ಇಂಥ ಸಾಮಾಜಿಕ ತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿದ್ಯಾರ್ಥಿ ಸಮೂಹವೂ ಇದೆ. ಅನೇಕ ಶೈಕ್ಷಣಿಕ ಪೇಜ್ಗಳನ್ನು ಫಾಲೋ ಮಾಡುವ ಮಕ್ಕಳು, ಮತ್ತು ಅವರು ಮಾಡುವ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಆನಂದವಾಗುತ್ತೆ. "ನಮಗೆ ಕಂಪ್ಯೂಟ್ರು, ಗಿಂಪ್ಯೂಟ್ರು ಎಲ್ಲಾ ಗೊತ್ತಾಗೋದಿಲ್ಲ. ಅವನು ಕಂಪ್ಯೂಟರ್ ಮುಂದೆ ಕೂತು, ಪ್ರೋಗ್ರಾಮೋ ಅದೆಂಥಾದ್ದೋ ಮಾಡ್ತಾನಂತೆ. ನೀವೇ ಹೇಳಿದ್ರಂತೆ ಮಾಡೋಕೆ." ಎಂದು ಕಂಪ್ಯೂಟರ್ ವಿಜ್ಞಾನದ ಅಧ್ಯಾಪಕನಾದ ನನಗೇ ದೂರು ತಂದಿದ್ದರು ಒಬ್ಬ ಪೋಷಕರು. ಅನೇಕ ಹಿರಿಯ ಶಿಕ್ಷಕರು ಕೂಡ "ಮಕ್ಕಳು ಫೇಸ್ಬುಕ್ಕಿನ ಕಡೆ ಹೋಗದಂತೆ ನೋಡಿಕೊಳ್ಳಿ!" ಎಂದು ಹೆದರಿಸುವ ಕಾರಣದಿಂದಲೋ ಏನೋ, ಪೋಷಕರಿಗೆ ತಮ್ಮ ಬಾಲ್ಯದಲ್ಲಿ ಅವರ ತಂದೆ ತಾಯಿಗಳು ಹೆದರಿಸುತ್ತಿದ್ದ "ಹಿತ್ತಲ ಕಡೆ ಹೋಗಬೇಡ, ಅಲ್ಲಿ ಗೊಗ್ಗಯ್ಯ ಇದಾನೆ" ಎಂಬ ಮಾತು ನೆನಪಾಗಿ ಮಕ್ಕಳು ಗೊಗ್ಗಯ್ಯನ ಪಾಲಾಗುತ್ತಾರೇನೋ ಎಂಬ ಭೀತಿಯಿಂದ ಕಂಗಾಲಾಗುತ್ತಾರೆ. ಮಕ್ಕಳ ದೃಷ್ಟಿಯಲ್ಲಿ ಅನೇಕ ಶಿಕ್ಷಕರು ಮತ್ತು ಪೋಷಕರು ಈ ಕಾರಣಕ್ಕಾಗಿಯೇ ಔಟ್ ಡೇಟೆಡ್!

ಆಗಲೇ ಹೇಳಿದ ಹಾಗೆ, ಈಗಿನ ಖಾಸಗಿ ಶಾಲೆಯ ಶಿಕ್ಷಣ ಪದ್ಧತಿಯಲ್ಲಿ ಪೋಷಕರು ಶಾಲೆಗೆ ಆಗಿದ್ದಾಂಗೆ ಬಂದು ತಮ್ಮ ಮಕ್ಕಳ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯುಯುವುದಲ್ಲದೆ, ಕೆಲವು ವೇಳೆ ಉಪಾಧ್ಯಾಯರುಗಳಿಂದ ಮಾರ್ಗದರ್ಶನ ಪಡೆಯುವುದು - ಅನೇಕ ವೇಳೆ ಉಪಾಧ್ಯಾಯರುಗಳಿಗೆ ಮಾರ್ಗದರ್ಶನ ಮಾಡುವುದು - ಸಾಮಾನ್ಯವಾಗಿದೆ. ಇದನ್ನು ಶಾಲೆಯವರು ಪಿ.ಟಿ. ಮೀಟಿಂಗ್ - ಅಥವಾ ಪೇರೆಂಟ್ಸ್ - ಟೀಚರ್ಸ್ ಮೀಟಿಂಗ್ ಎಂದೇ ಕರೆಯುತ್ತಾರೆ. ಇದು ನಾವುಗಳು ಓದುತ್ತಿದ್ದ ಕಾಲದಲ್ಲಿರಲಿಲ್ಲವೆಂದಲ್ಲ, ಆದರೆ ಆಗ ನಮ್ಮ ಪೋಷಕರು ಹೆಚ್ಚಾಗಿ ಭಾಗವಹಿಸುತ್ತಲೇ ಇರಲಿಲ್ಲ. ಈ ಪಿ.ಟಿ. ಮೀಟಿಂಗ್‍ನ ಒಂದಷ್ಟು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುವುದು ಪ್ರಸ್ತುತವೆಂದೆನಿಸುತ್ತೆ.

ನಮ್ಮ ಕಾಲದ ಪೋಷಕರಂತೆ ಕೆಲವರು ಈಗಲೂ ಇರುತ್ತಾರೆ. ಒಬ್ಬರು ಹೀಗೇ ಬಹಳ ಸಿಟ್ಟಿನಿಂದ ನಾನು ಇದ್ದ ಕಂಪ್ಯೂಟರ್ ಲ್ಯಾಬಿಗೆ ಧಾವಿಸಿದರು. ನಾನು ಏನು ಮಾಡಿದೆನಪ್ಪಾ ಎಂದು ಗಾಬರಿಗೊಂಡೆ. ಅಥವಾ, ಅವರು ಸಿಟ್ಟಾದರೆಂದು ನಾನೂ ಸಿಟ್ಟಾಗಿ ಅವರಿಗೆ ದಬಾಯಿಸಿದರೆ ನಮ್ಮ ಬಾಸು ನನ್ನ ಮೇಲೆ ಸಿಟ್ಟಾಗುವುದು ಖಚಿತ. ಅವರು "ಸಾರ್, ಈ ನನ್ನ ಮಗ ಏನೂ ಪ್ರಯೋಜನ ಇಲ್ಲ. ಇವನು ಹಾಳಾಗೋಕೆ ಟೀಚರುಗಳೇ ಕಾರಣ." ಎಂದು ಹೇಳಿಕೆ ಕೊಟ್ಟರು. ನಾನು ಏನೂ ಮಾತನಾಡಲಿಲ್ಲ. ಅವರೇ ಮುಂದುವರೆಸುತ್ತ "ನೀವುಗಳು ಹೊಡೆಯುವುದಿರಲಿ, ಗಟ್ಟಿಯಾಗಿ ಮಾತನ್ನು ಕೂಡ ಆಡುವುದಿಲ್ಲ!" ಎಂದರು. ಆಗಷ್ಟೇ ದಿನಪತ್ರಿಕೆಯಲ್ಲಿ "ಹೈಸ್ಕೂಲು ಹುಡುಗನಿಗೆ ಹೊಡೆದ ಪಿ.ಟಿ. ಮಾಸ್ತರ ಮೇಲೆ ಥಳಿತ" ಎಂದು ಓದಿದ್ದೆ. ಇವರೇನು ಹೀಗೆ ಹೇಳುತ್ತಿದ್ದಾರಲ್ಲಾ ಎಂದು ಆಶ್ಚರ್ಯವಾಯಿತು. ನಂತರ ಸಮಾಧಾನ ತಂದುಕೊಂಡು ಅವರಿಗೆ ಹೇಳಿದೆ, "ನೋಡಿಪ್ಪಾ, ಹೊಡೆಯುವುದರಿಂದ ನಿಮ್ಮ ಮಗನ ಪ್ರತಿಭೆಯು ಹೆಚ್ಚಾಗುವುದೆಂದರೆ, ಪರೀಕ್ಷೆಯಲ್ಲಿ ಅಂಕಗಳು ಜಾಸ್ತಿ ಬರುವುವೆಂದರೆ ಪ್ರತಿದಿನವೂ ಬೆಳಿಗ್ಗೆ ಬೇಗ ಕಳಿಸಿ. ಅರ್ಧ ಗಂಟೆ ಹೊಡೆದು ಆಮೇಲೆ ಪಾಠ ಆರಂಭಿಸುತ್ತೇನೆ." ನನ್ನ ಮಾತು ಕೇಳಿ ಅವರ ಸಿಟ್ಟು ಕಡಿಮೆಯಾಗಿ ಮಗನ ಮುಖ ನೋಡಿ ಬೇಸರಗೊಂಡರು. "ನೋಡೋ, ನಮ್ಮ ಕಾಲದಲ್ಲಿ ಮೇಷ್ಟ್ರುಗಳು ದೊಣ್ಣೆ ತೊಗೊಂಡು ಬಾರಿಸುತ್ತಿದ್ದರು. ನಿಮಗೆ ಒಳ್ಳೇ ಮಾತಲ್ಲಿ ಹೇಳ್ತಾರಲ್ಲಾ, ಅದಕ್ಕೇ ಕೊಬ್ಬು ನಿಮಗೆ!" ಎಂದು ಇಡೀ ವಿದ್ಯಾರ್ಥಿ ಕುಲವನ್ನೇ ಜರಿದರು.

ಒಬ್ಬರಿಗಂತೂ ಬಗೆಹರಿಯಲಾರದ ಸಮಸ್ಯೆಯೊಂದು ಕಾಡುತ್ತಿತ್ತೆನಿಸುತ್ತೆ. ನನ್ನ ಬಂದು ಕೇಳಿದರು. "ಸರ್, ನಮ್ಮ ಮಗಳಿಗೆ ಹೇಗೆ ಹೇಳಿಕೊಡಬೇಕೋ ಗೊತ್ತಾಗುತ್ತಿಲ್ಲ. ನೀವು ಇಲ್ಲಿ ಏನು ಕಲಿಸುತ್ತೀರೋ ಅದರ ಸಾಫ್ಟ್ ಕಾಪಿ ಇದೆಯಾ? ಯಾಕೆಂದರೆ ಬೇರೆ ಎಲ್ಲ ಸಬ್ಜೆಕ್ಟುಗಳಲ್ಲೂ ಬರೀ ಥಿಯರಿ ಇರುತ್ತೆ, ಕಂಪ್ಯೂಟರಿನಲ್ಲಿ ಮಾತ್ರ ಪ್ರ್ಯಾಕ್ಟಿಕಲ್ಸ್ ಕೂಡ." ಎಂದರು. ನಾನು ಅವರ ಮಗಳ ತರಗತಿಯಲ್ಲಿ ಪಾಠ ಮಾಡದೇ ಇದ್ದ ಕಾರಣ, ಮತ್ತು ಆ ತರಗತಿಯಲ್ಲಿ ಪಾಠ ಮಾಡುವ ನನ್ನ ಸಹೋದ್ಯೋಗಿಯು ಅಲ್ಲಿರದ ಕಾರಣ ನಾನೇ ಅವರನ್ನು ಕೇಳಿದೆ - "ಎಷ್ಟನೇ ತರಗತಿ ನಿಮ್ಮ ಮಗಳು?" ಅವರು ಥಟ್ಟನೆ -"ಫರ್ಸ್ಟ್ ಸ್ಟ್ಯಾಂಡರ್ಡ್" ಎಂದಾಗ ಪೋಷಕರ ಆತಂಕದ ತೀವ್ರತೆಯು ಸ್ವಲ್ಪ ಮಟ್ಟಿಗೆ ನನ್ನ ತಲೆಗೆ ಹೋಯಿತು.

ಕೆಲವರಂತೂ ತರಗತಿಯಲ್ಲಿರುವವರ ಉತ್ತರ ಪತ್ರಿಕೆಗಳನ್ನೆಲ್ಲಾ ಪರಿಶೀಲಿಸಿ ಅವುಗಳನ್ನು ತಮ್ಮ ಮಕ್ಕಳ ಉತ್ತರ ಪತ್ರಿಕೆಯೊಂದಿಗೆ ಹೋಲಿಸಿ, ಎಲ್ಲಿ ಅರ್ಧ ಅಂಕವು ವ್ಯತ್ಯಾಸವಾಗಿರುತ್ತೆಂದು ಭೂತಗಾಜಿನಲ್ಲಿ ಹುಡುಕಿ ಟೀಚರನ್ನು ದಬಾಯಿಸಿ ಆ ಅಂಕವನ್ನು ಗಳಿಸಿಕೊಂಡು ಹೋಗುತ್ತಾರೆ. ಟೀಚರುಗಳು ಅಂಕಗಳ ವ್ಯತ್ಯಾಸ ಮಾಡುವುದು ಸರಿಯೆಂದು ನಾನು ಹೇಳುತ್ತಿಲ್ಲ. ಆದರೆ ಅನೇಕ ಸಲ ತೊಂಭತ್ತು ಅಂಕಗಳನ್ನು ಮೀರಿದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಮರುಪರಿಶೀಲನೆ ಮಾಡಿ ಸಣ್ಣ ಸಣ್ಣ ತಪ್ಪುಗಳಿಗೂ ಅಂಕಗಳನ್ನು ಹಿಡಿಯುವುದು, ಮತ್ತು ಮೂವತ್ತು, ನಲವತ್ತು ಅಂಕಗಳನ್ನು ಕಷ್ಟ ಪಟ್ಟು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಲ್ಲಿ ಈ ತಪ್ಪುಗಳನ್ನು ಕಡೆಗಣಿಸುವುದು ಮೌಲ್ಯಮಾಪನದ ಪದ್ಧತಿ. ಇದನ್ನು ಮನವರಿಕೆ ಮಾಡಿಕೊಡುವುದನ್ನು ಟೀಚರುಗಳು ಕಲಿಯದಿದ್ದರೆ ಪೋಷಕರ ಶೋಷಣೆಗೊಳಪಡಬೇಕಾದ್ದು ಖಚಿತ.

ಒಂದು ಸಲ ಒಬ್ಬರು ಬಹಳ ಬೇಸರದಿಂದ, ಅಸಮಾಧಾನದಿಂದ ನನ್ನೆಡೆಗೆ ಬಂದರು. ನಾನು ಕಂಪ್ಯೂಟರ್ ಅಧ್ಯಾಪಕನಲ್ಲದೆ, ನನಗೆ ತಕ್ಕ ಮಟ್ಟಿಗೆ ಹಾಡಲೂ ಬರುವುದರಿಂದ ಕೆಲವು ಸಮಾರಂಭಗಳಿಗೆ ಪ್ರಾರ್ಥನೆ ಗೀತೆಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿರುತ್ತೇನೆ. ಹಾಗಾಗಿಯೇ ಯಾರು ಚೆನ್ನಾಗಿ ಹಾಡುತ್ತಾರೋ ಆ ಮಕ್ಕಳನ್ನೇ ಆರಿಸಿಕೊಳ್ಳುವುದು ಸೂಕ್ತವೆಂದು ನನ್ನ ನಂಬಿಕೆ. ನನ್ನ ಬಳಿ ಬಂದ ಪೋಷಕರು "ನಿಮಗೆ ಹೇಗೆ ಹೇಳಬೇಕೋ ಗೊತ್ತಿಲ್ಲ, ನನ್ನ ಮಗಳೂ ಸಹ ಸಂಗೀತ ತರಗತಿಗಳಿಗೆ ಹೋಗುತ್ತಿದ್ದಾಳೆ, ಆದರೆ ನೀವು ಯಾವಾಗಲೂ ಆ ಕಖಗ ಹುಡುಗಿಯನ್ನೇ ತೆಗೆದುಕೊಳ್ಳುತ್ತೀರ." ಎಂದರು. ನಾನು "ಮುಂದಿನ ಸಲ ತೆಗೆದುಕೊಳ್ಳುತ್ತೇನೆ" ಎಂದೇನೋ ಹೇಳಿ ಕಳಿಸಿಬಿಟ್ಟೆ. ಆದರೆ ಆ ಹುಡುಗಿಯು ಹೋಗುತ್ತಿದ್ದುದು ಗಿಟಾರ್ ತರಗತಿಗಳಿಗೆ ಎಂದು ಮುಂದಿನ ಕಾರ್ಯಕ್ರಮದ ವೇಳೆ ತಿಳಿಯಿತು. ಈಗ ಆ ಪೋಷಕರಿಗೆ ಹೇಳಿಯಾಗಿದೆ, ಬೇರೆ ದಾರಿಯೇ ಇಲ್ಲ. ಈ ಹುಡುಗಿಯೇ ಗಿಟಾರ್ ನುಡಿಸಿಕೊಂಡೇ ಪ್ರಾರ್ಥನೆ ಗೀತೆ ಹೇಳಿದಳು. ಮುಗಿದ ಮೇಲೆ ಪ್ರಾಂಶುಪಾಲರು ನನ್ನ ಚರಮಗೀತೆಯನ್ನು ಹಾಡಿದರು.

ಹೀಗೆ ಅವಕಾಶದ ವಿಷಯದಲ್ಲಿ ಪೋಷಕರಿಗೂ ಶಿಕ್ಷಕರಿಗೂ ಝಟಾಪಟಿ ಆಗುತ್ತಿರುತ್ತೆ. ವಾರ್ಷಿಕೋತ್ಸವದಲ್ಲಿ ಎಲ್ಲ ಮಕ್ಕಳೂ ನಾಯಕ/ನಾಯಕಿಯ ಪಾತ್ರವನ್ನೇ ಮಾಡಬೇಕು. ಅವನಿಗೆ ಹತ್ತು ಡೈಲಾಗು, ನನ್ನ ಮಗನಿಗೆ ಮಾತ್ರ ಒಂದೇ ಡೈಲಾಗು ಎಂದು ಪ್ರಶ್ನಿಸುವುದರಿಂದ ಹಿಡಿದು, ನನ್ನ ಮಗನಿಗೆ ಕೋತಿ ಪಾತ್ರವನ್ನು ಕೊಟ್ಟಿದ್ದೀರ, ಮುಖವೇ ಕಾಣದ ಹಾಗೆ ಮಾಡಿದ್ದೀರ ಎಂದು ಜಗಳವಾಡುವವರೆಗೂ ಈ ಝಟಾಪಟಿ ನಡೆಯುತ್ತಿರುತ್ತೆ. ಇಲ್ಲಿ ಪೋಷಕರ ಮಾತಿನಲ್ಲೂ ಅರ್ಥವಿರುತ್ತೆ - ಯಾಕೆಂದರೆ ನಾಯಕನ ಪಾತ್ರ ಮಾಡಿದ ಹುಡುಗನ ಪೋಷಕರೂ ಹಣ ಪಾವತಿ ಮಾಡಿರುತ್ತಾರೆ - ಒಂದೇ ಡೈಲಾಗು ಹೇಳಿದ ಹುಡುಗನ ಪೋಷಕರೂ ಹಣ ತೆತ್ತಿರುತ್ತಾರೆ. ಹಣ ಪಾವತಿ ಮಾಡಿರುವವರಿಗೆಲ್ಲ ಒಂದೇ ಪಾತ್ರವನ್ನು ನೀಡಲು ಹೆಣಗಾಡುವ ಟೀಚರುಗಳು ಪುಟ್ಟಣ್ಣ ಕಣಗಾಲ್, ಗುರುದತ್ ಇಂತಹ ನಿರ್ದೇಶಕರನ್ನೂ ಮೀರಿಸಿದಂತೆಯೇ ಸರಿ.

ಕೆಲವರು ಮಕ್ಕಳಿಗೆ ಹೋಮ್‍ವರ್ಕ್ ಕೊಡಬಾರದೆನ್ನುತ್ತಾರೆ, ಮತ್ತೆ ಕೆಲವರು "ನೀವು ಹೋಮ್‍ವರ್ಕೇ ಕೊಡುವುದಿಲ್ಲ" ಎಂದು ದೂರುತ್ತಾರೆ. ಕೆಲವರು ಮಕ್ಕಳ ಚೀಲಗಳು ತುಂಬ ಭಾರ ಎನ್ನುವ ದೂರನ್ನು ಹೊತ್ತು ತಂದಿರುತ್ತಾರೆ, ಮತ್ತೆ ಕೆಲವರು "ಯಾವ ಪುಸ್ತಕಗಳನ್ನೂ ತರುವುದೇ ಇಲ್ಲ, ಏನು ಪಾಠ ನಡೆಯುತ್ತೋ ಇಲ್ಲವೋ?" ಎಂದು ಪ್ರಶ್ನಿಸುತ್ತಾರೆ. ಕೆಲವರು ತಮ್ಮ ಮಕ್ಕಳ ಫಲಿತಾಂಶಕ್ಕಿಂತ ಉಳಿದ ಮಕ್ಕಳ ಫಲಿತಾಂಶದ ಬಗ್ಗೆಯೇ ಆಸಕ್ತಿಯನ್ನು ಹೊಂದಿರುತ್ತಾರೆ, ಮತ್ತೆ ಕೆಲವರು ಇಡೀ ಶಾಲೆಯಲ್ಲಿ ತಮ್ಮ ಮಕ್ಕಳಷ್ಟೇ ಓದುತ್ತಿರುವುದೆಂದುಕೊಂಡಿರುತ್ತಾರೆ. ಕೆಲವರು ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಜರಿದರೆ, ಮತ್ತೆ ಕೆಲವರು ಶಾಲೆಯಲ್ಲಿ ಬರೀ ಅದೂ ಇದೂ ಚಟುವಟಿಕೆಗಳೇ, ಓದಲು ಸಮಯವೇ ಕೊಡುವುದಿಲ್ಲ ಎಂದು ಹಳಿಯುತ್ತಾರೆ. ಕೆಲವು ಶಿಕ್ಷಕರು ಕನ್ನಡದಲ್ಲೇ ಮಾತನಾಡಿಸುತ್ತಾರೆ ಮಕ್ಕಳನ್ನು ಎಂಬುದು ಕೆಲವರಿಗೆ ದೂರಾಗಿರುತ್ತೆ, ಮತ್ತೆ ಕೆಲವರಿಗೆ ಹೆಮ್ಮೆಯ ವಿಷಯವಾಗಿರುತ್ತೆ. ಒಬ್ಬ ಪೋಷಕರಂತೂ ಒಮ್ಮೆ "ಸರ್, ನನ್ನ ಮಗ ಎಂಟನೇ ತರಗತಿಯವರೆಗೂ ಚೆನ್ನಾಗಿಯೇ ಇದ್ದ, ಆದರೆ ಒಂಭತ್ತನೆಯ ತರಗತಿಗೆ ಬಂದ ಮೇಲೆ ಅದು ಯಾರ ಯಾರ ಸಹವಾಸವಾಯಿತೋ ಏನೋ ತುಂಬಾ ಕೆಟ್ಟು ಹೋಗಿದ್ದಾನೆ. ಬರೀ ಇಂಗ್ಲೀಷ್ ಹಾಡುಗಳನ್ನೇ ಕೇಳುತ್ತಾನೆ ಮನೆಯಲ್ಲಿ" ಎಂದರು. ಈ ದೂರಿಗೆ ತಳ-ಬುಡವಿಲ್ಲದೇ ಇದ್ದ ಕಾರಣ ನಾನು ಸುಮ್ಮನೆ ನಕ್ಕೆ. ಹೀಗೆ ಭಿನ್ನಾಭಿಪ್ರಾಯಗಳ ಪೋಷಕರ ಸಾಗರದಲ್ಲಿ ಶಿಕ್ಷಕರು ಈಜುತ್ತಿರುತ್ತಾರೆ. ಈಜಲು ಕಷ್ಟವಾದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸಲೀಸಾಗಿ ವರ್ಗಾಯಿಸುತ್ತಾರೆ - ಅಲ್ಲಿಗೆ ಮಕ್ಕಳ "ಪ್ರಾಣ" ಸ್ನೇಹಿತರು, ವೇದವಾಕ್ಯವನ್ನು ಬೋಧಿಸುವ "ಮ್ಯಾಮ್"ಗಳು, ತಾವು ಯಾವಾಗಲೂ ಕುಳಿತುಕೊಳ್ಳುವ ಜಾಗ, ಡಬ್ಬಿಯ ಮುಚ್ಚಳವನ್ನು ತೆಗೆದುಕೊಡುವ "ಆಯಮ್ಮ" - ಎಲ್ಲವೂ ಬದಲಾಗುತ್ತೆ.

ಶಿಕ್ಷಕರ ಪಾಲಿನ ತಪ್ಪುಗಳೂ ಅನೇಕವಿರುತ್ತೆ. ಶಿಕ್ಷಕರಿರುವುದೇ ಮಕ್ಕಳಿಗೆ ಶಿಕ್ಷೆ ಕೊಡಲು ಎಂಬ ಚಿತ್ರಣವು ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿರುವ ಅನೇಕ ಘಟನೆಗಳಿಂದ ಜನರ ಮನಸ್ಸಿನಲ್ಲಿರಬಹುದು. ಅದರ ಜೊತೆಗೆ ಅನೇಕ ಸಲ ತಾವು ಬೋಧಿಸುವ ವಿಷಯದಲ್ಲೇ ತಪ್ಪನ್ನೆಸಗುವ ಪ್ರಸಂಗಗಳೂ ಇರುತ್ತವೆ. "ಆಚಾರ್ಯ ದೇವೋ ಭವ" ಎಂಬ ಉಕ್ತಿಯಿದ್ದರೂ ಅವರೂ ಮನುಷ್ಯರಷ್ಟೆ? ಅವರೂ ತಪ್ಪನ್ನು ಮಾಡುವುದು ಸಹಜವಷ್ಟೆ? ಅದನ್ನು ತಿದ್ದುವ ಹೊಣೆಯನ್ನು ಶಾಲೆಯ ಆಡಳಿತವರ್ಗದವರೂ, ಮತ್ತು ಪೋಷಕರೂ (ನನ್ನ ಪ್ರಕಾರ ವಿದ್ಯಾರ್ಥಿಗಳೂ) ಪಡೆದುಕೊಂಡಿರುತ್ತಾರಾದರೂ, ಬಹುಪಾಲು ಪೋಷಕರು ಶಿಕ್ಷಕರು ತಪ್ಪೆಸಗಿದಾಗ ದಬಾಯಿಸಲೆಂದೇ ಬರುತ್ತಾರೆ. ಆ ಟೀಚರನ್ನು ಕೆಲಸದಿಂದ ತೆಗೆಸಿಬಿಡುವ ಮಟ್ಟಿಗೂ ಹೋಗುತ್ತಾರೆ. ಅಷ್ಟು ಶಕ್ತಿಯು ಪೋಷಕರಿಗಿರುತ್ತೆಂಬುದು ಸತ್ಯ. ಆಗಲೇ ಹೇಳಿದ ಹಾಗೆ ಖಾಸಗಿ ಶಾಲೆಗಳಿರುವುದೇ ಪೋಷಕರಿಂದ, ಪೋಷಕರಿಗಾಗಿ! ಆದರೆ ಕೆಲವರು "ನಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ. ನೀವು ಒಳ್ಳೆಯ ಟೀಚರ್ (ಆಗಿರಲಿ, ಬಿಡಲಿ), ಆದರೆ ಇಂತಹ ಕಡೆ ನೀವು ತಪ್ಪುತ್ತಿದ್ದೀರಿ, ಇಂತಹುದನ್ನು ನೀವು ಬದಲಿಸಿಕೊಂಡರೆ ಮಕ್ಕಳಿಗೆ ಒಳ್ಳೆಯದೆಂದು ನಮ್ಮ ಅನಿಸಿಕೆ" ಎಂಬ ಪ್ರತಿಕ್ರಿಯೆಯನ್ನು ಕೊಡುವುದರ ಮೂಲಕ ತಾವು ಮಕ್ಕಳಿಗಷ್ಟೇ ಪೋಷಕರಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಪೋಷಕರು ಎಂಬುದನ್ನು ನಿರೂಪಿಸುತ್ತಿರುತ್ತಾರೆ.

-ಅ

25.12.2012

2AM

No comments:

Post a Comment