Thursday, March 7, 2013

ಬೆಂಗಳೂರಿನಲ್ಲಿ ಬೆಕ್ಕು ಸಾಕುವುದೆಂದರೆ..

ತೀರ್ಥಹಳ್ಳಿಯ ಶ್ರೇಯಸ್ ಮನೆಯಲ್ಲಿ ಅಂದು ಊಟ. ನನ್ನ ಎಲೆಯ ಮೇಲಿದ್ದ ಹಪ್ಪಳವು ಪುಡಿಯಾದಾಗ ಬಂದ "ಫಟ್‍ಟ್‍ಕ್" ಸದ್ದಿಗೆ ಆಕರ್ಷಿತವಾಗಿ ಅಡುಗೆ ಮನೆಯಿಂದ ಊಟದ ಮನೆಗೆ ಓಡಿ ಬಂತು ಅವರ ಮನೆಯ ಬೆಕ್ಕು. ಅದರ ಗಮನವೆಲ್ಲಾ ನಮ್ಮೆಲ್ಲರ ಎಲೆಯ ಮೇಲಿನ ಹಪ್ಪಳದ ಮೇಲೆಯೇ. ಹುಲಿ ಸಿಂಹಗಳು ಬೇಟೆಯಾಡುವಾಗ ಗುರಿಯಿಡುವ ದೃಶ್ಯಗಳನ್ನು ಟಿವಿಯಲ್ಲಿ ನೋಡಿರುತ್ತೇವಲ್ಲ, ಅದೇ ರೀತಿ ಈ ಬೆಕ್ಕು ಹಪ್ಪಳವನ್ನೇ ದಿಟ್ಟಿಸಿ ನೋಡುತ್ತಿತ್ತು. ಯಾವ ಕ್ಷಣದಲ್ಲಿ ಯಾರ ಎಲೆಯ ಮೇಲೆ ಹಾರುವುದೋ ಎಂಬಂತಿತ್ತು ಅದರ ನೋಟ. ಹಪ್ಪಳದ ಸಪ್ಪಳವು ಕಿವಿಗಪ್ಪಳಿಸಿದರೆ ಕುಪ್ಪಳಿಸಿಕೊಂಡಾದರೂ ನಮ್ಮೆಲೆಯ ಮೇಲೆ ಹಾರೀತೆಂಬ ಭೀತಿಯಿಂದಲೇ ಊಟವನ್ನು ಮುಂದುವರೆಸಲು ಹಿಂಜರಿದೆವು. ಅಷ್ಟರಲ್ಲಿ ಶ್ರೇಯಸ್‍ನ ತಾಯಿ ಆ ಬೆಕ್ಕನ್ನು ಒಳಗೆ ಕರೆದು ಏನೋ ಹೇಳಿದರು, ಅದು ಒಳಗೆ ಹೋಗಿ ಒಲೆಯ ಬಳಿ ಬೆಚ್ಚಗೆ ಮಲಗಿಕೊಂಡು ಬಿಟ್ಟಿತು. ಊಟವಾದ ಮೇಲೆ ಆ ಬೆಕ್ಕನ್ನು ಎತ್ತಿಕೊಳ್ಳಲು ನೋಡಿದೆ, ನನ್ನ ಕೈಗೆ ಸಿಗಲೇ ಇಲ್ಲ. ನನ್ನ ಬೆಕ್ಕಿನ ಪ್ರೀತಿಯನ್ನು ನೋಡಿದ ಶ್ರೇಯಸ್ ಹೇಳಿದ "ಇಲ್ಲೆಲ್ಲಾ ಬೆಕ್ಕು ತುಂಬಾ ಕಾಮನ್ನು. ಎಲ್ಲರ ಮನೆಯಲ್ಲೂ ಇರುತ್ತೆ. ಯಾರೂ ಓಡಿಸುವುದಿಲ್ಲ. ನಾಯಿಗಳೂ ಬೆಕ್ಕುಗಳೂ ಒಟ್ಟೊಟ್ಟಿಗೇ ಇರುತ್ತವೆ. ಒಂದು ಸಲ ನಮ್ಮ ಮನೆಯಲ್ಲಿ ಎಂಟು ಬೆಕ್ಕುಗಳಿದ್ದವು. ಎಂಟಕ್ಕೂ ನಮ್ಮ ಮನೆಯಲ್ಲೇ ಊಟ" ಎಂದು. "ಎಂಟು ಬೆಕ್ಕುಗಳನ್ನು ಸಾಕುವುದು ಕಷ್ಟವಾಗಲಿಲ್ಲವೇ?" ಎಂದು ನಾನು ಅವರ ಅಮ್ಮನನ್ನು ಕೇಳಿದೆ. ಅವರು "ಬೆಕ್ಕನ್ನು ನಾವು ಸಾಕಬೇಕೇ? ಅವೇ ಸಾಕಿಕೊಳ್ಳುತ್ತವೆ. ತೋಟದಲ್ಲಿ, ಗುಡಾಣದಲ್ಲಿ ಇಲಿ, ಹೆಗ್ಗಣಗಳನ್ನು ಹಿಡಿದು ತಿನ್ನುತ್ತವೆ. ಬಂದಾಗ ಒಂದರ್ಧ ಲೋಟ ಹಾಲು ಹಾಕುತ್ತೇವೆ, ಕುಡಿದು ಹೋಗುತ್ತವೆ." ಎಂದರು.

ನನ್ನ ಗೆಳತಿಯೊಬ್ಬಳ ಮನೆಯಲ್ಲಿ ಅವರು ಬೆಕ್ಕು ಸಾಕಿದ್ದ ರೀತಿಗೂ ತೀರ್ಥಹಳ್ಳಿಯ ಶ್ರೇಯಸ್ ಮನೆಯಲ್ಲಿ ನಾನು ಕೇಳಿದ ವಿಷಯಕ್ಕೂ ಅಜಗಜಾಂತರ. ಹದಿನೈದು ಸಾವಿರ ರೂಪಾಯಿ ಕೊಟ್ಟು ತಾವಿದ್ದ ಅಪಾರ್ಟ್ಮೆಂಟಿಗೆ ಒಂದು ಬೆಕ್ಕನ್ನು ತಂದಿದ್ದಳು. ಬೆಂಗಳೂರಿನಲ್ಲಿ ಬೆಕ್ಕನ್ನೂ ಸಹ ಮಾರುತ್ತಾರೆ - ಅದೂ ಸಾವಿರಾರು ರೂಪಾಯಿಗಳಿಗೆ ಎಂದು ನನಗೆ ಗೊತ್ತಾಗಿದ್ದೇ ಆಗ. ಆ ಬೆಕ್ಕು ಪರ್ಷಿಯಾದಂತೆ. ಹಾಗಂತ ಅದನ್ನೇನೂ ಪಾರ್ಸೀ ಭಾಷೆಯಲ್ಲಿ ಮಾತನಾಡಿಸುತ್ತಿರಲಿಲ್ಲ. ಆ ಬೆಕ್ಕಿನ ಮುಂದಾವುದು ಹಿಂದಾವುದು ಎಂದು ಗೊತ್ತಾಗುವುದೂ ಕಷ್ಟವಿತ್ತು. ಅದಕ್ಕೆ ನಾವು ತಿನ್ನುವ, ಅಥವಾ ನಾವು ತಿಂದು ಮಿಕ್ಕಿದ ತಂಗಳನ್ನವನ್ನು ಕೊಡುವಂತಿಲ್ಲ. ಮೊಟ್ಟೆ, ಮಾಂಸ, ಹಾಲು, ಬೆಣ್ಣೆ - ಜೊತೆಗೆ ಕ್ಯಾಟ್ ಫುಡ್ (ಮೊಟ್ಟೆ ಮಾಂಸ ಹಾಲುಗಳು ಕ್ಯಾಟ್ ಫುಡ್ ಅಲ್ಲವೇನೋ ಎಂಬಂತೆ) - ತಿಂಗಳಿಗೆ ಏನಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ರೂಪಾಯಿ ಬೆಕ್ಕಿಗೆ. ದುಡ್ಡು ಕೊಟ್ಟು ತಂದ ಈ ಬೆಕ್ಕು ಮನೆಯಲ್ಲಿ ಒಂದು ಜಿರಲೆಯನ್ನು ಸಹ ಸಾಯಿಸುತ್ತಿರಲಿಲ್ಲ. ಆದರೆ ಸತ್ತ ಕೋಳಿಯ ಮಾಂಸವನ್ನು ಮಾತ್ರ ಚೆನ್ನಾಗಿ ತಿನ್ನುತ್ತಿತ್ತು. ಬೆಕ್ಕನ್ನು ಎತ್ತಿಕೊಳ್ಳಲಾಗುತ್ತಿರಲಿಲ್ಲ. ತೂಕವು ಸುಮಾರು ಎಂಟರಿಂದ ಹತ್ತು ಕೆ.ಜಿ. ಇತ್ತೇನೋ. ಮೈ ತುಂಬ ಕೂದಲು - ಸವರಲು ಹಿತವಾಗಿತ್ತು. ಅದಕ್ಕೂ ಯಾರಾದರೂ ಮೈ ಸವರುತ್ತಿದ್ದರೆ ಹಿತವಾಗಿರುತ್ತಿತ್ತು. ಪಕ್ಕದಲ್ಲಿ ಗಂಟೆಗಟ್ಟಲೆ ನಿದ್ದೆ ಮಾಡುತ್ತಿತ್ತು - ಊಟದ ಸಮಯದವರೆಗೂ. ಆ ಬೆಕ್ಕನ್ನು ಹೊರಗೆ ಬಿಡುವಂತಿರಲಿಲ್ಲ. ನಾಯಿಗಳು ಕೊಂದುಬಿಟ್ಟರೆ? ಮನೆಯಲ್ಲಿ ಯಾರಾದರೂ ಇರಲೇ ಬೇಕು, ಒಂದನ್ನೇ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಆ ಬೆಕ್ಕೂ ಸಹ ಅವರ ಮನೆಯನ್ನು ಹೊರತು ಹೊರಗಿನ ಪ್ರಪಂಚವನ್ನು ಕಂಡೇ ಇರಲಿಲ್ಲ. ಹೊರಗೆ ಬೆಕ್ಕುಗಳಿವೆ, ನಾಯಿಗಳಿವೆ, ಇಲಿಗಳಿವೆ, ಪಾರಿವಾಳಗಳಿವೆ, ಸೂರ್ಯ-ಚಂದ್ರ-ಆಕಾಶ ಇವೆಲ್ಲವೂ ಇವೆಯೆಂಬುದೇ ಅದಕ್ಕೆ ಗೊತ್ತಿರಲಿಲ್ಲ. ಸಾಕುನಾಯಿಯಂತೆ ಮನೆಯೊಳಗೆ ಬಂಧಿತವಾಗಿತ್ತು. ಮನೆಗೆ ಯಾರಾದರೂ ಬಂದರೆ ರೂಮಿನೊಳಗೆ ಮಂಚದಡಿ ನುಸುಳಿಕೊಂಡುಬಿಡುತ್ತಿತ್ತು. ಹೀಗಿರುವಾಗ "Curiosity killed the cat" ಎಂಬ ಆಂಗ್ಲ ಮಾತಿನಂತೆ ತೆರೆದ ಬಾಲ್ಕನಿಯ ಬಾಗಿಲಿನತ್ತ ಹೋಯಿತು. ಅಲ್ಲಿಗೆ ಬಂದಿದ್ದ ಪಾರಿವಾಳಗಳೆಡೆಗೆ ಆಕರ್ಷಿತವಾಯಿತು. ಪಾರಿವಾಳಗಳು ಮೇಲೆ ಹಾರಿದವು. ಅವುಗಳನ್ನು ಹಿಡಿಯಲು ಹೋದ ಈ ಪಾರ್ಸೀ ಬೆಕ್ಕು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣಬಿಟ್ಟಿತು.

ಶೀಗವಾಳಿನ (ಮೈಸೂರಿನಿಂದ ಸುಮಾರು ಎಂಭತ್ತು ಕಿಲೋಮೀಟರ್ ದೂರದಲ್ಲಿರುವ ಹಳ್ಳಿ - ನನ್ನ ಹೆಂಡತಿಯ ತವರೂರು) ಮನೆಗೆ ಬರುತ್ತಿದ್ದ ಬೆಕ್ಕಿಗೆ ಈ ರೀತಿ ಯಾವ ಭಯವೂ ಇರಲಿಲ್ಲವಾದರೂ ತೀರ್ಥಹಳ್ಳಿಯ ಬೆಕ್ಕಿನಷ್ಟು ಸ್ವಾತಂತ್ರ್ಯವಿರಲಿಲ್ಲ. ಅದಕ್ಕೆ ಕಾರಣಗಳು ಹಲವು. ಶೀಗವಾಳಿನ ಬೆಕ್ಕು ಸಾವಿರಾರು ರೂಪಾಯಿ ಬೆಲೆಬಾಳುವ ಪಾರ್ಸೀ ಬೆಕ್ಕಲ್ಲದಿದ್ದರೂ ಅದಕ್ಕಿಂತಲೂ ಸೋಮಾರಿಯಾಗಿತ್ತು. ಇಲಿಗಳು ತನ್ನ ಎದುರಿಗೇ ಓಡಾಡಿದರೂ ಆಶ್ಚರ್ಯದಿಂದ ಅವುಗಳನ್ನು ನೋಡುತ್ತಿತ್ತೇ ವಿನಾ ಒಮ್ಮೆಯೂ ಅದರ ಮೇಲೆ ಹಾರಿ ಕೊಲ್ಲುವುದಿರಲಿ, ಅವುಗಳನ್ನು ಓಡಿಸುತ್ತಲೂ ಇರಲಿಲ್ಲ. ಅಲ್ಲದೆ, ಮನೆಯಲ್ಲಿದ್ದ ಹಾಲನ್ನು, ತುಪ್ಪವನ್ನು ಯಥೇಚ್ಛವಾಗಿ ಸ್ವಾಹಾ ಮಾಡುತ್ತಿತ್ತು. ವಾಂತಿ ಭೇದಿಯು ಇದರ ಹವ್ಯಾಸವಾಗಿತ್ತು. ಇಲಿಯನ್ನು ಹಿಡಿಯದ ಈ ಬೆಕ್ಕು ಒಮ್ಮೆ ಪೊದೆಯೊಳಗಿಂದ ಓತಿಕೇತವನ್ನು ಹಿಡಿದುಕೊಂಡು ಮನೆಯೊಳಗೆ ಬಂದುಬಿಟ್ಟಿತು. ಊರಿನ ಜನ "ಏನೇನೆಲ್ಲಾ ತರುತ್ತೆ ನೋಡು, ಇದನ್ನು ಸೇರಿಸಿಕೊಳ್ಳುತ್ತೀಯಲ್ಲ" ಎಂದರು. ಅಲ್ಲದೆ ಮನೆಗೆ ಬಂದ ಕೆಲವು "ಮಡಿವಂತ" ಬಂಧುಗಳೂ ಸಹ "ಥೂ ಆ ಅಸಹ್ಯವನ್ನು ಮನೆಯೊಳಗೆ ಬಿಟ್ಟುಕೊಳ್ಳಬಾರದು" ಎಂದು ಹೇಳತೊಡಗಿದರು. ನನ್ನ ಮಾವನವರಿಗೆ ಇದರ ಬಗ್ಗೆ ಸಿಟ್ಟು ಬರಲು ಇನ್ನು ಹೆಚ್ಚಿಗೆ ಕಾರಣಗಳು ಬೇಕಾಗಿರಲಿಲ್ಲ. ಆ ಬೆಕ್ಕು ಮನೆಯೊಳಗೆ ಬಾರದ ಹಾಗೆ ಆಜ್ಞೆಯನ್ನು ಹೊರಡಿಸಿದರು. ಆ ಬೆಕ್ಕು ಇನ್ನೂ ಜೀವಂತವಾಗಿದೆ - ಅಷ್ಟೇ ಸೋಮಾರಿತನದಿಂದಲೇ. ಒಮ್ಮೊಮ್ಮೆ ಮನೆಯ ಮುಂದೆ ಜಗುಲಿಯ ಮೇಲೆ ಕುಳಿತುಕೊಂಡಿರುತ್ತೆ. ಒಳಗೆ ಬರಲು ಆಗಾಗ್ಗೆ ಪ್ರಯತ್ನ ಮಾಡುತ್ತಿರುತ್ತೆ - ಒಮ್ಮೊಮ್ಮೆ ರೂಮಿನ ಕಿಟಕಿಯಿಂದ, ಹಿತ್ತಲ ಬಾಗಿಲಿನಿಂದ, ಅಟ್ಟದ ಸಂದಿಯಿಂದ, ಅಡುಗೆ ಮನೆಯ ಕಿಂಡಿಯಿಂದ ಒಳಗೆ ನುಸುಳಿಬಿಡುತ್ತೆ - ಭಂಡತನದಿಂದ! ವಿಧಿಯಿಲ್ಲದೆ ಮನೆಯವರೆಲ್ಲರೂ ಶಪಿಸಿ ಅಟ್ಟುತ್ತಿರುತ್ತಾರೆ.

ಇವೆಲ್ಲ ನೆನಪಾದದ್ದು ಮೊನ್ನೆ ಮಧ್ಯರಾತ್ರಿಯಲ್ಲಿ ಕಿಟಕಿಯಿಂದ ರೂಮಿನೊಳಗೆ ನುಸುಳಿದ ಪುಟ್ಟ ಬೆಕ್ಕಿನ ಮರಿಯನ್ನು ಕಂಡಾಗ. ಅದು ಹಸಿವಿನಿಂದ, ಭಯದಿಂದ, ರಕ್ಷಣೆ ಸಿಗಬಹುದೆಂಬ ಹಂಬಲದಿಂದ, ಕುತೂಹಲದಿಂದ ಮನೆಯೆಲ್ಲಾ ಓಡಾಡತೊಡಗಿತು. ನನ್ನ ಕಾಲುಗಳನ್ನು ತನ್ನ ಮೈಯಿಂದ ಸವರುತ್ತ, "ಏನಾದರೂ ಕೊಡು" ಎಂದು ಕೇಳುತ್ತಿತ್ತು. ಆರು ತಿಂಗಳಷ್ಟೇ ವಯಸ್ಸಾದ ನನ್ನ ಮಗಳು ಜ್ಯೋತ್ಸ್ನಾ ಬೆಕ್ಕಿನ ಕುತೂಹಲದಿಂದಲೇ ಅದು ಹೋದಲ್ಲೆಲ್ಲಾ ಕಣ್ಣು ಹಾಯಿಸಿ ನೋಡುತ್ತ ಚಕಿತಳಾಗಿದ್ದಳು. ಮನೆಯಲ್ಲಿ ಮಗು ಇರುವುದರಿಂದ ಬೆಕ್ಕಿಗೆ ಹಾಲು ಕೊಡುವುದಾಗಲೀ, ಅದನ್ನು ಸಾಕಿಕೊಳ್ಳುವ ಯೋಚನೆಯಾಗಲೀ ಮಾಡುವುದು ತರವಲ್ಲ ಎಂದು ಮನೆಯವರೆಲ್ಲರೂ ತೀರ್ಮಾನ ಮಾಡಿದ್ದರಿಂದ ಆ ಬೆಕ್ಕಿನ ಮರಿಯನ್ನು ಎತ್ತುಕೊಂಡು ಮತ್ತೆ ಹಿಂದಿರುಗಿ, ನಮ್ಮ ಮನೆಯ ಕಿಟಕಿಯ ಹಾದಿಯನ್ನು ಹಿಡಿಯಲಾರದಂತಹ ಸ್ಥಳಕ್ಕೆ ಬಿಟ್ಟುಬರಬೇಕಾಯಿತು. ಅಲ್ಲದೆ ಆ ಬೆಕ್ಕಿನ ಮೈ ತುಂಬ ಹೇನುಗಳು. ಚಿಕ್ಕಂದಿನಲ್ಲಿ ತಾತ ಹೇಳುತ್ತಿದ್ದ "ಪೂನೆ - ಕೂರೆ" (ಸಂಕೇತಿ ಭಾಷೆಯಲ್ಲಿ ಪೂನೆಯೆಂದರೆ ಬೆಕ್ಕು ಎಂದರ್ಥ) ಕಥೆಯೂ ಒಂದರ್ಧ ನಿಮಿಷದಲ್ಲೇ ನೆನಪಿಗೆ ಬಂದು ಹೋಯಿತು. ಕೈಯಿಂದ ಕೆಳಕ್ಕಿಳಿಸಿದ ಬಳಿಕವೇ ನನ್ನನ್ನು ನೋಡಿ ಅಸಹಾಯಕತೆಯ "ಮಿಯಾಂವ್" ಎಂದಾಗ ಹೆಚ್ಚು ಹೊತ್ತು ಅಲ್ಲಿ ನಾನು ನಿಲ್ಲಲಿಲ್ಲ.

ಬಹುಶಃ ಇನ್ನೊಂದು ವರ್ಷವಾದ ಮೇಲಾಗಿದ್ದಿದ್ದರೆ ಮಗಳೇ ಒತ್ತಾಯ ಮಾಡುತ್ತಿದ್ದಳೇನೋ, "ಸಾಕಿಕೊಳ್ಳೋಣ, ಬೆಕ್ಕನ್ನು" ಎಂದು. ನಾನೂ ನಮ್ಮಮ್ಮನನ್ನು ಹಾಗೆಯೇ ಕೇಳಿದ್ದೆ, ಚಿಕ್ಕವನಾಗಿದ್ದಾಗ - ನಮ್ಮ ಮನೆಗೆ ಬಂದ ಬೆಕ್ಕಿನ ಮರಿಗೆ ಹಾಲನ್ನು ಕೊಟ್ಟ ನಂತರ. ಬೆಂಗಳೂರಿಗರು ನಾಯಿಯನ್ನು ಸಾಕುತ್ತಾರೆ - ತಮ್ಮ ಮನೆಯನ್ನು ಕಳ್ಳಕಾಕರಿಂದ, ಅಂಚೆಯವರಿಂದ, ಸೇಲ್ಸ್ಮೆನ್‍ಗಳಿಂದ, ಇತರೆ ಬೇಡದ ಜನರಿಂದ ರಕ್ಷಣೆಯನ್ನು ಪಡೆಯಲು. ಆದರೆ ಬೆಕ್ಕನ್ನು ಸಾಕಿಕೊಳ್ಳುವವರು ಕಡಿಮೆಯೇ. ಅದಕ್ಕೆ ಕಾಲ ಕಾಲಕ್ಕೆ ಹಾಲು, ಮೊಸರು ಎಲ್ಲ ಕೊಡಬೇಕು - ಇಲ್ಲವಾದರೆ ಕಾಲಡಿಯಲ್ಲೇ ಸುತ್ತಿ ಸುತ್ತಿ ಗಲಾಟೆ ಮಾಡುತ್ತ ರಾದ್ಧಾಂತ ಮಾಡುತ್ತೆ. ಅದಲ್ಲದೆ, ಸದ್ದಿಲ್ಲದೆ ಮನೆಯೆಲ್ಲಾ ತಿರುಗಾಡಲು ಸಾಮರ್ಥ್ಯ ಇರುವುದರಿಂದ ಯಾವ ಕ್ಷಣದಲ್ಲಿ ಅಡುಗೆ ಮನೆಯ ಪಾತ್ರೆಯೊಳಗಿರುವ ಹಾಲು ಮೊಸರುಗಳು ಮಾಯವಾಗುವುದೋ ಗೊತ್ತಿಲ್ಲ. ಪಾತ್ರೆಯ ಮುಚ್ಚಳವು ಕೆಳಗೆ ಬಿದ್ದಾಗಲೇ ತಿಳಿಯುವುದು. ಜೊತೆಗೆ, ಬೆಕ್ಕಿನ ಕೂದಲು ಆಹಾರದ ಜೊತೆ ಬೆರೆತುಕೊಳ್ಳಬಹುದು, ಬಟ್ಟೆಗೆಲ್ಲಾ ಮೆತ್ತುಕೊಳ್ಳಬಹುದು. ಇವೆಲ್ಲ ಸಾಲದೆಂಬಂತೆ ಮೂಲೆಯಲ್ಲಿ ಕಟ್ಟಿ ಹಾಕುವಂತಿಲ್ಲ - ಅದು ಬಂದಾಗೆಲ್ಲ ಮುದ್ದು ಮಾಡಬೇಕು. ಮನೆಯಲ್ಲಿರುವ ಮಂಚವು, ಹಾಸಿಗೆಗಳು, ಸೋಫಾಗಳು, ತೊಟ್ಟಿಲು - ಎಲ್ಲವೂ ತನಗೆಂದೇ ಹಾಕಿರುವುವೆಂದು ಭಾವಿಸಿ ಅವುಗಳ ಮೇಲೆ ಗುಂಡುಸುತ್ತಿಕೊಂಡು ಗೊರಕೆ ಹೊಡೆಯುತ್ತಿರುತ್ತೆ. ಎಬ್ಬಿಸಲು ಹೋದರೆ ಸರಕ್ಕನೆ ಪರಚಿ ಪರಾರಿಯಾಗಲೂ ಬಹುದು! ಇಷ್ಟೆಲ್ಲಾ "ಕೃತಘ್ನತೆ"ಯ ಗುಣವನ್ನು ಹೊಂದಿರುವ ಬೆಕ್ಕನ್ನು ಸಾಕುವ ಆಸಕ್ತಿಯಾದರೂ ಹೇಗೆ ಬರಬೇಕು! "ಹಾವಿಗೆ ಹಾಲೆರೆದಂತೆ" ಎಂಬ ಮಾತಿನ ಬದಲು, "ಬೆಕ್ಕಿಗೆ ಹಾಲೆರೆದಂತೆ" ಎಂದು ಹೇಳಬಹುದು - ಹಾವು ಹಾಲು ಕುಡಿಯುವುದೂ ಇಲ್ಲ, ಬೆಕ್ಕು ಕುಡಿದೇ ಕುಡಿಯುತ್ತೆ - ದುಬಾರಿ ಹಾಲನ್ನು!

"ಬೆಕ್ಕನ್ನು ಸಾಕಿಕೊಳ್ಳೋಣ" ಎಂದು ನಾನು ಹೇಳಿದಾಗ ಬಹುಶಃ ಅಮ್ಮನಿಗೆ ಇವೆಲ್ಲಾ ಹೊಳೆಯಿತೆನ್ನಿಸುತ್ತೆ. ಅಮ್ಮ "ನಿನ್ನನ್ನು ಸಾಕ್ತಾ ಇಲ್ವಾ, ಸಾಕು ಅದು, ಬೆಕ್ಕೇನೂ ಬೇಡ" ಎಂದು ಮೊದಲು ಹೇಳಿದರಾದರೂ, ಆಮೇಲೆ ಬೆಕ್ಕಿನ ಚಲನವಲನಗಳನ್ನು ನೋಡಿ, ಅವರೂ ಆಕರ್ಷಿತರಾದರು. ಆರಂಭದಲ್ಲಿ ಕನಿಕರ, ಬಳಿಕ ಪ್ರೀತಿ. ಆ ಬೆಕ್ಕು ನಮ್ಮ ಮನೆಯ ಸದಸ್ಯಳಾಗಲು ಹೆಚ್ಚು ಕಾಲವಾಗಲಿಲ್ಲ. ಆದರೆ ಮನೆಗೆ ಬಂದು ಹೋಗುವವರ ಆಕ್ಷೇಪಣೆಗಳೇನೂ ಕಡಿಮೆಯಿರಲಿಲ್ಲ. ಬೆಕ್ಕು ಮಾಂಸಾಹಾರಿಯಾದ್ದರಿಂದ ಬ್ರಾಹ್ಮಣರು ಸಾಕಿಕೊಳ್ಳಬಾರದು ಎಂದು ಸಂಬಂಧಿಕರೊಬ್ಬರು ಹೇಳಿದರು. ಇನ್ನೊಬ್ಬರು ಬೆಕ್ಕಿನ ಕೂದಲು ಹೊಟ್ಟೆಗೆ ಹೋದರೆ ವಾಸಿಯಾಗದ ಜ್ವರ ಬರುತ್ತೆ ಎಂದು ವಿಜ್ಞಾನ ಹೇಳಿದರು. ಮತ್ತೊಬ್ಬರು "ನಾಯಿಯನ್ನು ಸಾಕಿಕೊಳ್ಳಿ - ಅದು ಮನೆಯ ಮಕ್ಕಳು ಚೆನ್ನಾಗಿರಲಿ ಎನ್ನುತ್ತಿರುತ್ತೆ, ಯಾಕೆಂದರೆ, ಮಿಕ್ಕ ಊಟವೆಲ್ಲ ತನಗೇ ಸಿಗುತ್ತಲ್ಲ ಅದಕ್ಕೆ. ಬೆಕ್ಕು ಮನೆಯ ಮಕ್ಕಳು ಸಾಯಲಿ ಎನ್ನುತ್ತಿರುತ್ತೆ, ಯಾಕೆಂದರೆ, ಮಕ್ಕಳ ಊಟವೂ ತನಗೇ ಸಿಗಲಿ ಎಂಬ ದುರಾಸೆ ಬೆಕ್ಕಿಗೆ." ಎಂದರು. ಪಕ್ಕದ ಮನೆಯವರು ಹೇಳಿದ ಮಾತನ್ನು ಮಾತ್ರ ಪರಿಗಣಿಸಬಹುದಾಗಿತ್ತು - "ಈ ಬೆಂಗಳೂರಿನ ಬಿಜ಼ಿ ಜೀವನದಲ್ಲಿ ನೀವು ಬೆಳಿಗ್ಗೆ ಹೋದರೆ ಸಂಜೆಯೇ ಮನೆಗೆ ಬರುವುದು, ನೀವಿಲ್ಲದಿರುವಾಗ ಬೆಕ್ಕು ಮನೆಯೊಳಗೆ ನುಗ್ಗಿ ಕದ್ದು ಹಾಲು ಕುಡಿಯದೇ ಇರುತ್ತದೆಯೇ? ಮನೆಯೊಳಗೆ ಎಲ್ಲೆಲ್ಲಿ ಏನೇನು ಇಟ್ಟಿರುತ್ತೀರಿ ಎಂದು ಬೆಕ್ಕಿಗೆ ಗೊತ್ತಾಗೋಕೆ ಎರಡು ದಿನ ಸಾಕು. ನಿಮ್ಮ ಮನೆಯಲ್ಲಿ ಫ್ರಿಡ್ಜು ಬೇರೆ ಇಲ್ಲ!" ಅವರು ಎಚ್ಚರಿಕೆಯನ್ನು ಕೊಟ್ಟರೂ ನನಗೆ ಮಾತ್ರ ಸಂದೇಹ ಬಗೆ ಹರಿಯಲಿಲ್ಲ. ಬೆಕ್ಕು ಹಾಲನ್ನು "ಕದ್ದು" ಕುಡಿಯುತ್ತೆ ಎಂದು ಇವರಿಗೆ ಹೇಗೆ ಗೊತ್ತು? ಹಸಿವಾದಾಗ ಊಟ ಸಿಕ್ಕರೆ ತಿನ್ನುವುದು ಎಲ್ಲ ಪ್ರಾಣಿಯ ಧರ್ಮವಷ್ಟೆ?

ಇಷ್ಟಕ್ಕೂ ಬೆಕ್ಕನ್ನು ನಾಯಿಯ ರೀತಿ ಇಪ್ಪತ್ನಾಲ್ಕು ಗಂಟೆಯೂ ಮನೆಯೊಳಗಿಟ್ಟುಕೊಂಡು ಸಾಕಿಕೊಳ್ಳಬೇಕಾಗಿಲ್ಲ. ಅದು ಹಸಿವಾದಾಗ ಬರುತ್ತೆ, ಹೊಟ್ಟೆ ತುಂಬಿದ ಮೇಲೆ ಮುದ್ದಿಸಿಕೊಂಡು, ಒಂದಿಷ್ಟು ನಿದ್ದೆ ಮಾಡಿ ಮತ್ತೆ ಬೇರೆಲ್ಲೋ ಹೋಗುತ್ತೆ - ಇನ್ನೊಬ್ಬರ ಮನೆಯಲ್ಲಿ ಇದನ್ನೇ ಮಾಡಲು. "ಒಂದು ಮನೆಯಲ್ಲೆಲ್ಲಿರುತ್ತೆ ಬೆಕ್ಕು, ಅದು ಏಳು ಮನೆ ಚೀಲಿ" ಎಂದು ಮನೆಗೆ ಬಂದಾಗ ನಮ್ಮತ್ತೆ ಹೇಳಿದರು. ಆ ಕ್ಷಣ ನನಗೆ ಅದರ ಅರ್ಥವಾಗಲಿಲ್ಲ. ಅವರ ಪ್ರಕಾರ ಒಬ್ಬರ ಮನೆಯಲ್ಲಿ ನೀಯತ್ತಿನಿಂದ ಬೆಕ್ಕು ತಾನು ಸಾಯುವವರೆಗೂ ಇರುವುದಿಲ್ಲ, ಬದಲಿಗೆ ತನ್ನ ಜೀವಿತಾವಧಿಯಲ್ಲಿ ಏಳು ಮನೆಗಳಲ್ಲಿರುತ್ತೆ ಎಂದು. ಆದರೆ ನಮ್ಮ "ಬತ್ತಿ"ಯ ವಿಷಯದಲ್ಲಿ ಇದು ಸುಳ್ಳಾಗಿತ್ತು. ಬಹುಶಃ ಎಲ್ಲ ಬೆಕ್ಕುಗಳ ವಿಷಯದಲ್ಲೂ ಇದು ಸುಳ್ಳೇ. ಏಳು ಮನೆ ಚೀಲಿಯ ಅರ್ಥವು ನನಗೆ ನಿಧಾನಕ್ಕೆ ಗೋಚರಿಸಿತು. ಅದನ್ನು ಆಮೇಲೆ ವಿವರಿಸುತ್ತೇನೆ. ಈಗ ನಮ್ಮ ಬೆಕ್ಕಿಗೆ "ಬತ್ತಿ" ಎಂಬ ಹೆಸರು ಯಾಕೆ ಬಂದಿತೆಂದು ಹೇಳಬೇಕಿದೆ. ಮೇಲೆ ಹೇಳಿದ ಯಾವುದೇ ಅವಗುಣಗಳೂ ನಮ್ಮ ಬೆಕ್ಕಿಗೆ ಇರದೇ ಇದ್ದ ಕಾರಣ ಅದು ಬೆಕ್ಕಿನ ಜಾತಿಗೇ ಅವಮಾನ ಎಂದು ಪರಿಗಣಿಸಬಾರದು. ಕದ್ದು ಹಾಲು ಕುಡಿಯುತ್ತಿರಲಿಲ್ಲ. ಮನೆಯೊಳಗೆ ಮಲಮೂತ್ರವಿಸರ್ಜನೆ ಮಾಡುತ್ತಿರಲಿಲ್ಲ. ಎಷ್ಟೇ ಕೀಟಲೆ ಮಾಡಿದರೂ ಕಚ್ಚುತ್ತಿರಲಿಲ್ಲ, ಪರಚುತ್ತಿರಲಿಲ್ಲ. ನಾನು ಅದರ ಬಾಲವನ್ನು ಹಿಡಿದು ಜಗ್ಗಾಡಿದರೆ ಅದು ಸಂತೋಷದಿಂದ ನನ್ನನ್ನು ಆಟವಾಡಿಸುವಂತೆ ಬಾಲವನ್ನು ಇನ್ನೂ ಅಲ್ಲಾಡಿಸುತ್ತಿತ್ತು. ಅದಕ್ಕಿದ್ದ ಒಂದು ವ್ಯಸನವೆಂದರೆ ದೇವರ ಮೆನೆಯೊಳಗೆ ಹೋಗಿ ದೀಪದ ಸೊಡರಿನಿಂದ ಬತ್ತಿಯನ್ನು ಕಚ್ಚಿಕೊಂಡು ಬಂದು ತಿಂದುಬಿಡುವುದು. ಪ್ರತಿ ದಿನವೂ ಸೊಡರಿನಿಂದ ಬತ್ತಿಯು ಮಾಯವಾಗುತ್ತಿದ್ದುದನ್ನು ಗಮನಿಸಿದ ಅಮ್ಮ ಒಂದು ದಿನ ರೆಡ್ ಹ್ಯಾಂಡಾಗಿ ಹಿಡಿದರು. ಅಂದಿನಿಂದ ಅದಕ್ಕೆ ಬತ್ತಿ ಎಂಬ ಹೆಸರು ಉಳಿದುಕೊಂಡಿತು. ಆ ಹೆಸರನ್ನು ಅದು ಇಷ್ಟ ಪಟ್ಟಿತೆನ್ನಿಸುತ್ತೆ - ಬತ್ತಿ ಎಂದು ಕರೆದಾಗಲೆಲ್ಲವೂ ತನ್ನೆರಡೂ ಕಣ್ಣನ್ನು ಮುಚ್ಚಿ "ಮಿಯಾಂವ್" ಎಂದು ನನ್ನ ಕಾಲಿಗೆ ತನ್ನ ಬೆನ್ನನ್ನು ಸವರುತ್ತಿತ್ತು.

ಬತ್ತಿಗೆ ದೇವರ ಮನೆಯ ಬತ್ತಿಯನ್ನು ಬಿಟ್ಟರೆ ನೂಡಲ್ಸ್ ಎಂದರೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ಮಾಂಸಾಹಾರವು ಅದಕ್ಕೆ ಸಿಗಲು ಅವಕಾಶವೇ ಇರಲಿಲ್ಲ. ಇಲಿಯನ್ನು ಹಿಡಿಯಬೇಕಾದರೆ ಮೋರಿಯೊಳಗೆ ನುಗ್ಗಿ ಸಾಹಸ ಮಾಡಬೇಕು. ಬೇರೆ ಹುಳು ಹುಪ್ಪಟೆಗಳು ಅಷ್ಟಾಗಿ ರುಚಿಕರವಲ್ಲ - ಬೆಕ್ಕಿಗೂ. ಗುಬ್ಬಚ್ಚಿಯಂತಹ ಸಣ್ಣ ಸಣ್ಣ ಹಕ್ಕಿಗಳ ಪರಿಚಯ ಬೆಂಗಳೂರಿಗರಿಗೂ ಬೆಂಗಳೂರಿನಲ್ಲಿರುವ ಬೆಕ್ಕುಗಳಿಗೂ ಇರಲು ಸಾಧ್ಯವೇ ಇಲ್ಲ. ಅಳಿಲು, ಓತಿಕೇತ, ಮುಂತಾದವುಗಳನ್ನು ತಿನ್ನಬಹುದೆಂದೂ ತಿಳಿದಿರುವುದಿಲ್ಲ ಇಲ್ಲಿನ ಬೆಕ್ಕುಗಳಿಗೆ. ನಮ್ಮ ಮನೆಯಲ್ಲಿ ನೂಡಲ್ಸ್ ಬಹಳ ಸಾಮಾನ್ಯ ತಿಂಡಿಯಾಗಿತ್ತು. ನಾನು ಅಡುಗೆ ಮನೆಯಲ್ಲಿ ಟೀ ಮಾಡುವುದು, ಮತ್ತು ನೂಡಲ್ಸ್ ಮಾಡುವುದು - ಎರಡನ್ನು ಮಾತ್ರವೇ ಕರಗತ ಮಾಡಿಕೊಂಡಿರುವುದು. ಹೇಗೋ, ಮನೆಯಲ್ಲಿ ಯಾರೂ ಇಲ್ಲದಿರುವಾಗ ಬದುಕಲು ಒಂದು ದಾರಿ ಬೇಡವೇ? ಬತ್ತಿಗೆ ನೂಡಲ್ಸ್ ಎಷ್ಟು ಇಷ್ಟವಾಗಿತ್ತೆಂದರೆ, ನಮ್ಮ ಮನೆಯ ಒಲೆಯ ಮೇಲೆ ನೂಡಲ್ಸ್ ಬೇಯಲು ಶುರುವಾಯಿತೆಂದರೆ ಮುಗಿಯಿತು, ಅದೆಲ್ಲಿಂದ ವಾಸನೆ ತಿಳಿಯುತ್ತಿತ್ತೋ ಅದಕ್ಕೆ ಗೊತ್ತಿಲ್ಲ, ಥಟ್ಟನೆ ಬಂದು ಕಾಲಿನ ಸುತ್ತಲೂ ಮೈತಾಗಿಸಿಕೊಂಡು ಕೂಗುತ್ತಾ ಓಡಾಡತೊಡಗುತ್ತಿತ್ತು. ಅದಕ್ಕೆಂದೇ ಮೀಸಲಿಟ್ಟ ಒಂದು ಬಟ್ಟಲಿನಲ್ಲಿ ನಾವು ಏನೇನು ತಿನ್ನುತ್ತಿದ್ದೆವೋ ಅದನ್ನೆಲ್ಲಾ "ಬಡಿಸುತ್ತಿದ್ದೆವು." ಬತ್ತಿಗೆ ಹಾಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಹಾಲನ್ನ ಕೊಟ್ಟರಂತೂ ಅಸಹ್ಯದ ಮುಖ ಮಾಡಿಕೊಳ್ಳುತ್ತಿತ್ತು. ಮೊಸರನ್ನವನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಿತ್ತು - ನನ್ನ ಹಾಗೆಯೇ. ಬೆಳಿಗ್ಗೆ ಹೊತ್ತು ಬಂದರೆ ಎರಡು ಮೂರು ಚಮಚ ಕಾಫಿಯನ್ನೂ ಹೀರುತ್ತಿತ್ತು.

ಒಂದು ದಿನ ಬತ್ತಿಯ ಹೊಟ್ಟೆಯು ದಪ್ಪವಾಗಿದ್ದನ್ನು ಗಮನಿಸಿದೆ. ಅದರ ನಡವಳಿಕೆಯಲ್ಲಿಯೂ ಸ್ವಲ್ಪ ಬದಲಾವಣೆಯಾಗಿತ್ತು - ಅಷ್ಟಾಗಿ ಆಟವಾಡುವ "ಮೂಡ್"ನಲ್ಲಿ ಇರುತ್ತಿರಲಿಲ್ಲ. ಬಯಾಲಜಿ ಮೇಷ್ಟ್ರು ಆಗತಾನೆ ಹಾರ್ಮೋನುಗಳ ಬಗ್ಗೆ ಪಾಠ ಮಾಡಿದ್ದರು ಶಾಲೆಯಲ್ಲಿ. ನಾನು "ಬತ್ತಿಗೂ ಹಾರ್ಮೋನುಗಳ ವ್ಯತ್ಯಾಸದಿಂದ ಹೀಗೆ ಖಿನ್ನತೆಯುಂಟಾಗುತ್ತಿದೆಯೇನೋ" ಎಂದುಕೊಂಡೆ. ಈಗಲೂ ಅದು ನಿಜವೆಂದೇ ನಂಬಿದ್ದೇನೆ. ಹೆಚ್ಚು ಹೊತ್ತು ನಮ್ಮ ಮನೆಯಲ್ಲಿಯೇ ಇರತೊಡಗಿತು. ನನ್ನನ್ನು ಕಂಡರೆ ತುಂಬಾ ಹಚ್ಚಿಕೊಂಡಿತ್ತು. ನಾನು ಮಲಗುವ ಮಂಚದ ಮೇಲೆಯೇ ಅದೂ ಮಲಗಬೇಕು. ನಾನು ಕೆಳಗೆ ಮಲಗಿಕೊಂಡರೆ ಅದೂ ನನ್ನ ಪಕ್ಕವೇ ಬಂದು ಮಲಗಬೇಕು. ನನ್ನ ತೋಳುಗಳೇ ಅದಕ್ಕೆ ದಿಂಬು. ನಾನು ಅದರ ಸಾನ್ನಿಧ್ಯವನ್ನು ಬಹಳ ಆನಂದಿಸುತ್ತಿದ್ದೆ. ಅದರ ಹೊಟ್ಟೆಯೊಳಗೆ ಮರಿಗಳು ಅಲುಗಾಡುತ್ತಿದ್ದುದು ಗೊತ್ತಾಗುತ್ತಿತ್ತು. ನಿದ್ದೆ ಮಾಡುತ್ತಿದ್ದ ಹಾಗೆ ನಟಿಸುತ್ತಿದ್ದ ಬತ್ತಿಗೆ ನೋವಾಗುತ್ತಿತ್ತೇನೋ, ಕಣ್ತೆರೆದು ನನ್ನನ್ನು ನೋಡಿ ಒಮ್ಮೆ ಮಿಯಾಂವ್ ಎನ್ನುತ್ತಿತ್ತು. ನನಗಾಗುತ್ತಿದ್ದ ರೋಮಾಂಚನವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ನಾನು ಶಾಲೆಗೆ ಹೊರಡುವವರೆಗೂ ನನ್ನ ಜೊತೆಯೇ ಇರುತ್ತಿತ್ತು. ನಾನು ಹೊರಟ ಮೇಲೆ ಎಲ್ಲಿ ಹೋಗುತ್ತಿತ್ತೋ ಗೊತ್ತಿಲ್ಲ, ಆದರೆ ವಾಪಸ್ ಬಂದು ನಾನು ಸೈಕಲ್ ಸ್ಟ್ಯಾಂಡ್ ಹಾಕುವ ಹೊತ್ತಿಗೆ ನನ್ನ ಕಾಲಡಿ ಇರುತ್ತಿತ್ತು. "ಅದು ಮರಿ ಹಾಕುವ ಕಾಲ ಕಣೋ, ಮನೆಯೊಳಗೆ ಸೇರಿಸಿದರೆ ನಮಗೇ ಕಷ್ಟ ಇನ್ನು" ಎಂದು ಅಮ್ಮ ಹೇಳಿದರು. ಅದನ್ನು ಅಟ್ಟುವ ಮನಸ್ಸು ನನಗಾಗಲೀ ಅಮ್ಮನಿಗಾಗಲೀ ಇರಲಿಲ್ಲ, ಆದರೆ ಮೊದಲೇ ನಾವಿರುವುದು ಬಾಡಿಗೆ ಮನೆಯಲ್ಲಿ. ಓನರ್ ಏನನ್ನುತ್ತಾರೆ? ಇರುವ ಚಿಕ್ಕ ಮನೆಯಲ್ಲಿ ನಮ್ಮ ಮನೆಯ ಸಾಮಾನು ಸರಂಜಾಮುಗಳೇ ಎಲ್ಲೆಡೆ ಬಿದ್ದು ಹರಡಿವೆ. ಜೊತೆಗೆ ಅಮ್ಮ ಬೆಳಿಗ್ಗೆ ಹೊರಟರೆ ಬರುವುದೇ ಸಂಜೆ. ನಾನೂ ಅಷ್ಟೆ. ಕೊನೆಗೆ ಧೈರ್ಯ ಮಾಡಿ, ಏನಾದರಾಗಲೀ ಬತ್ತಿಯು ನಮ್ಮ ಮನೆಯಲ್ಲಿಯೇ ಹೆರುತ್ತೆ ಎಂದು ನಿರ್ಧರಿಸಿ, ಟಿ.ವಿ.ಯ ಕಾರ್ಟನ್ ಬಾಕ್ಸನ್ನು ಅಟ್ಟದಲ್ಲಿರಿಸಿದೆ. ಇನ್ನೇನು ಒಂದು ವಾರದೊಳಗೆ ಬತ್ತಿಗೆ ಹೆರಿಗೆಯಾಗುತ್ತೆಂದು ಅನ್ನಿಸುತ್ತಿತ್ತು. ಬತ್ತಿಯ ಬಟ್ಟಲನ್ನು ಆ ಬಾಕ್ಸಿನ ಮುಂದೆಯೇ ಇಟ್ಟೆ. ಹಾಲು ಕುಡಿಯಲು, ಊಟ ಮಾಡಲು ಬತ್ತಿಯು ಪ್ರತಿಸಲವೂ ಅಟ್ಟ ಹತ್ತಬೇಕಾಗಿತ್ತು. ಕಾರ್ಟನ್ ಬಾಕ್ಸು ಅದರ ಮನೆಯಾಯಿತು. ಆ ಬಾಕ್ಸಿನೊಳಗೆ ಹಳೆಯ ದಿನಪತ್ರಿಕೆಗಳನ್ನು ಜೋಡಿಸಿದೆ. ನಾನೇನೂ ಪಶುವೈದ್ಯನಾಗಿರಲಿಲ್ಲ - ಒಂಭತ್ತನೆಯ ತರಗತಿಯ ವಿದ್ಯಾರ್ಥಿ ಆಗ. ಏನೇನು ತೋಚಿತೋ ಅದನ್ನೆಲ್ಲಾ ಮಾಡುತ್ತ ಹೋದೆ. ನನ್ನ ಅದೃಷ್ಟ, ಮತ್ತು ಬತ್ತಿಯ ಅದೃಷ್ಟ - ಅವೆಲ್ಲವೂ ಸರಿಯಾದುದೇ ಆಗಿತ್ತು. ನನ್ನ ಬತ್ತಿಯ ಬಾಂಧವ್ಯ ಇನ್ನೂ ಚೆನ್ನಾಗಿ ಬೆಳೆಯಿತು. ಬತ್ತಿಯು ತನ್ನ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ರೂಮಿನ ಕಿಟಕಿಯು ಸದಾ ತೆರೆದಿರುತ್ತಿತ್ತು. ಮಲಮೂತ್ರವಿಸರ್ಜನೆಗೆ ಹೋಗಬೇಕಾದಾಗ ಕಿಟಕಿಯಿಂದ ಹೊರಕ್ಕೆ ಹೋಗಿ ಐದು ನಿಮಿಷಗಳೊಳಗೆ ಬಂದುಬಿಡುತ್ತಿತ್ತು. ಹೆರಿಗೆಯ ದಿನವು ಬಂದೇ ಬಿಟ್ಟಿತು. ಅದು ನೋವಿನಿಂದ ಹೆಚ್ಚೇನೂ ಕಿರುಚಲಿಲ್ಲ. ಮರಿ ಹಾಕುವುದನ್ನು ನಾನು ನೋಡಲೇ ಬೇಕೆಂದು ತೀರ್ಮಾನಿಸಿ, ಅಟ್ಟ ಹತ್ತಿ ಕುಳಿತೆ. ತನ್ನ ಮನೆಯೊಳಗಿದ್ದ ಕಾಗದವನ್ನೆಲ್ಲಾ ತುಂಡು ತುಂಡು ಮಾಡತೊಡಗಿತು - ಪ್ರಸವಬೇನೆಯಿಂದೆನಿಸುತ್ತೆ. ನಂತರ ಒಂದು ಮರಿಯ ತಲೆಯು ಹೊರಬರಲು ಶುರುವಾಯಿತು. ಬತ್ತಿಯು ನಿಧಾನಕ್ಕೆ ನೆಕ್ಕುತ್ತ ಮರಿಯು ಹೊರಬರಲು ಅನುವು ಮಾಡಿಕೊಟ್ಟಿತು. ಮಾಂಸದ ಮುದ್ದೆಯಂತೆ ಆ ಮರಿಯು ಹೊರ ಬಂದಿತು. ಬತ್ತಿಯು ನೆಕ್ಕುತ್ತಲೇ ಅದನ್ನು ಶುಚಿಗೊಳಿಸಿತು. ನಂತರ ಇನ್ನೊಂದು, ಬಳಿಕ ಮತ್ತೊಂದು - ಮೂರು ಮರಿಗಳು! ನಾನು "ಬತ್ತಿ" ಎಂದು ಕೂಗಿದೆ. ಈ ಬಾರಿ ಅದು "ಮಿಯಾಂವ್" ಎನ್ನಲಿಲ್ಲ. ಕಣ್ಣರಳಿಸಿ "ಹ್ಯಾಕ್" ಎಂದಿತು. ನಾನು, "ಯಾಕೇ?" ಎಂದೆ ಬೇಸರದ ದನಿಯಲ್ಲಿ. ತಕ್ಷಣವೇ ಕ್ಷಮೆ ಕೋರುವ ರೀತಿ "ಮಿಯಾಂವ್" ಎಂದಿದ್ದೇ ನಾನು ಹರ್ಷಗೊಂಡು ತಾನು ನೆಕ್ಕುತ್ತಿದ್ದ ಒಂದು ಮರಿಯನ್ನು ಕೈಗೆತ್ತಿಕೊಳ್ಳಲು ಹೋದೆ. ನನ್ನನ್ನೇ ನೋಡಿತು. ಆ ಪುಟ್ಟ ಮಾಂಸದ ಮುದ್ದೆಯು ನನ್ನ ಅಂಗೈಯಲ್ಲಿ ಬಂದಾಗ ಬತ್ತಿಯಿಂದೇನಾದರೂ ಅಪಾಯವಾದೀತೆಂದು ನನಗೆ ಅನ್ನಿಸಲಿಲ್ಲ, ಬದಲಿಗೆ ಅಷ್ಟು ಸೂಕ್ಷ್ಮವಾದ ಪ್ರಾಣಿಯು ನನ್ನ ಕೈಜಾರಿ ಕೆಳಗೆ ಬಿದ್ದರೆ ಎಂಬ ಭಯವಾಯಿತು. ಕೈಗೆತ್ತಿಕೊಂಡ ಮರಿಯನ್ನು ಕೆಳಗಿಳಿಸಿದೆ. ಬತ್ತಿಯು ಮರಿಯನ್ನು ಮತ್ತೆ ಮೂಸಿ ನೋಡಿ, ಕ್ಷೇಮವಾಗಿದೆಯೆಂದು ಖಚಿತಪಡಿಸಿಕೊಂಡು ನನ್ನ ಕೈಯನ್ನು ತನ್ನ ಹಣೆಯಿಂದ ಸವರಿತು. ಯಾವ ಮರಿಯೂ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಇಲಿ ಮರಿಗಳಂತೆಯೇ ಇದ್ದವು. ಅಮ್ಮನನ್ನು ಕೂಗಿ ಕರೆದೆ. ಬತ್ತಿಯ ಕಣ್ಣಿಗೆ ಅಮ್ಮ ಬಿದ್ದೊಡನೆ "ಗೊರ್ರ್" ಎನ್ನಲು ಶುರು ಮಾಡಿತು.

ಬಹಳ ಬೇಗ ಮರಿಗಳು ಬೆಳೆಯತೊಡಗಿದವು. ನಾವಿದ್ದ ಬಾಡಿಗೆ ಮೆನೆಯಲ್ಲಿ ಬತ್ತಿಯಿದ್ದ ಕಾರ್ಟನ್ ಬಾಕ್ಸನ್ನು ತನ್ನ ಸ್ವಂತ ಮನೆಯೆಂದು ವಾಸ ಮಾಡುತ್ತಿತ್ತು - ತನ್ನ ಮರಿಗಳೊಂದಿಗೆ. ಮರಿಗಳು ಹೆಜ್ಜೆಯಿಡಲು ಆರಂಭಿಸಿದಾಕ್ಷಣವೇ ಯಾರೋ ಪಾಠ ಹೇಳಿಕೊಟ್ಟಿದ್ದಾರೆಂಬಂತೆ ಬತ್ತಿಯು ಮರಿಗಳನ್ನು ಕಚ್ಚಿಕೊಂಡು ಜಾಗವನ್ನು ಬದಲಾಯಿಸ ತೊಡಗಿತು. ಈ ಬಾರಿ ರೂಮಿನೊಳಗಿದ್ದ ಗೋಡೆ ಬೀರು ಒಳಗೆ, ಕೆಳಗಿನ ಭಾಗದಲ್ಲಿ ಜಾಗ ಮಾಡಿಕೊಟ್ಟೆ. ಮೇಲಿನ ಭಾಗಗಳಲ್ಲಿ ನನ್ನ ಬಟ್ಟೆಗಳು, ಪುಸ್ತಕಗಳು. ಕೆಳಗೆ ಬತ್ತಿ ಮತ್ತು ಮರಿಗಳು. ಒಂದು ಬಟ್ಟೆಯಾಗಲೀ, ಪುಸ್ತಕವಾಗಲೀ ಗಲೀಜಾಗಲಿಲ್ಲ. ಆದರೆ ಆಗಾಗ್ಗೆ ಬೀರುವಿನ ಬಾಗಿಲನ್ನು ತೆಗೆದು-ಹಾಕಿ ಮಾಡುತ್ತಿದ್ದರಿಂದ ಬತ್ತಿಯು ಮತ್ತೆ ತನ್ನ ಮರಿಗಳನ್ನು ಬೇರೆ ಕಡೆ ವರ್ಗಾಯಿಸ ತೊಡಗಿತು. ಹಾಲ್‍ನಲ್ಲಿದ್ದ ಒಂದು ಮೇಜಿನ ಕೆಳಗೆ ಒಂದಷ್ಟು ಸಾಮಾನು ಜೋಡಿಸಿದ್ದೆವು. ಅದರ ಸಂದಿಯಲ್ಲಿ ತನ್ನ ಹೊಸ ಮನೆಯನ್ನು ಮಾಡಿಕೊಂಡಿತು. ಅಷ್ಟು ಹೊತ್ತಿಗೆ ಮರಿಗಳು ಕಣ್ಣು ಬಿಟ್ಟಿದ್ದವು, ಓಡಾಡತೊಡಗಿದ್ದವು. ಸಧ್ಯ, ಅಟ್ಟದ ಮೇಲಿಲ್ಲವಲ್ಲ ಎಂದುಕೊಂಡೆ. ಒಂದು ಮರಿಯು ಕುಂಞ್ ಕುಂಞ್ ಎಂದು ಹೊರಗೆ ಬಂದಿತು. ಬತ್ತಿಗೆ ಗಾಬರಿಯಾಗಿ ಕಚ್ಚಿಕೊಂಡು ಹೋಗಿ ಒಳಕ್ಕೆ ಸೇರಿಸಿತು. ಅಷ್ಟರಲ್ಲಿ ಇನ್ನೊಂದು ಕುಂಞ್ ಕುಂಞ್ ಎಂದು ಹೊರಬರತೊಡಗಿತು. ಹಾಗೆಯೇ ಮೂರೂ ಮರಿಗಳೂ ಮಾಡತೊಡಗಿದವು. ಸುಸ್ತಾದ ಬತ್ತಿಯು ಏನಾದರಾಗಲೀ ಎಂದು ನೋಡುತ್ತ ಕುಳಿತುಬಿಟ್ಟಿತು. ನಾನು ಮೂರೂ ಮರಿಗಳನ್ನು ಕೈಗೆತ್ತಿಕೊಂಡು "ಇವು ದೊಡ್ಡದಾಗುತ್ತಿವೆ ಕಣೇ, ಬಿಟ್ಬಿಡು ಅವನ್ನು - ಅವುಗಳ ಪಾಡಿಗೆ. ಹಸಿವಾದರೆ ಅವೇ ಬರುತ್ವೆ. ನಮ್ಮ ಮನೇಲಿ ಏನೂ ತೊಂದರೆಯಿಲ್ಲ." ಎಂದೆ. ಅರ್ಥವಾಯಿತೇನೋ ಎಂಬಂತೆ ಕಣ್ಣು ಮಿಟುಕಿಸಿತು ಬತ್ತಿ.

ಬತ್ತಿಯೇನೋ ಶುಚಿಯಾಗಿತ್ತು. ಆದರೆ ಮರಿಗಳು ಎಲ್ಲೆಂದರಲ್ಲಿ ಮಲಮೂತ್ರವಿಸರ್ಜನೆ ಮಾಡುತ್ತಿದ್ದವು. ಬತ್ತಿಯು ನಮಗೆ ತೊಂದರೆಯಾಗದಿರಲೆಂದೋ ಏನೋ, ತಕ್ಷಣವೇ ಬಂದು ಅದನ್ನು ನೆಕ್ಕಿ ಶುಚಿ ಮಾಡಿಬಿಡುತ್ತಿತ್ತು. ಅದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಮರಿಗಳ ವಿಸರ್ಜನೆಗಳನ್ನು ತಿನ್ನುವುದು ಸಹಜವೆಂದೇ ಅನ್ನಿಸುತ್ತೆ. ಬತ್ತಿಯು ನಮ್ಮ ಅಸಮಾಧಾನವನ್ನು ಅರ್ಥ ಮಾಡಿಕೊಂಡಿತೆನ್ನಿಸುತ್ತೆ. ನಮ್ಮ ಮನೆಯ ಮುಂದೆ ಇದ್ದ ಒಂದು ಶೆಡ್ಡಿಗೆ ತನ್ನ ಮನೆಯನ್ನು ಬದಲಾಯಿಸಿಕೊಂಡುಬಿಟ್ಟಿತು. ಹಿಂದೆ ಅತ್ತೆ ಹೇಳಿದ್ದ "ಏಳು ಮನೆ ಚೀಲಿ" ಎಂಬ ಮಾತು ನನಗೆ ಈಗ ಅರ್ಥವಾಯಿತು. ಒಂದೇ ಕಡೆ ನೆಲೆಯೂರಿರುವುದಿಲ್ಲ, ತನ್ನ ಮರಿಗಳ ಸಂರಕ್ಷಣೆಗಾಗಿ ವಾಸವನ್ನು ಬದಲಾಯಿಸುತ್ತಿರುತ್ತೆ. ಆದರೆ ಈ ಬದಲಾವಣೆಯು ಯಾವಾಗಲೂ ಸುರಕ್ಷಿತವೇ ಎಂದು ಹೇಳಲಾಗುವುದಿಲ್ಲ. ಶೆಡ್ಡಿನೊಳಗೆ ಕಬ್ಬಿಣದ ಕಂಬಿಯು ತಗುಲಿ ಒಂದು ಮರಿಗೆ ತೀವ್ರ ಗಾಯವಾಗಿ ಎರಡು ದಿನದಲ್ಲಿ ಸತ್ತು ಹೋಯಿತು. ಇನ್ನೊಂದೇ ವಾರದಲ್ಲಿ ಇನ್ನೊಂದು ಮರಿಯೂ ಯಾವುದೋ ಕಾರಣದಿಂದ ಸತ್ತು ಹೋಯಿತು. ಸತ್ತ ಮರಿಯ ಹತ್ತಿರವೂ ಹೋಗಲಿಲ್ಲ ಬತ್ತಿ. ಹೆಣವನ್ನೊಮ್ಮೆ ಮೂಸಿ ನೋಡಿ ಅದರಿಂದ ದೂರ ಸರಿದುಬಿಟ್ಟಿತು. ಉಳಿದ ಇನ್ನೊಂದು ಮರಿಯು ದೊಡ್ಡದಾಗುತ್ತಲೇ ನಮ್ಮ ಮನೆಯಲ್ಲಿ ಗಲಾಟೆಯು ಹೆಚ್ಚಾಗುತ್ತ ಹೋಯಿತು. ಎರಡು ಬಟ್ಟಲುಗಳು. ಮರಿಗೆ ಎರಡು ಬಟ್ಟಲಿನ ಹಾಲೂ ಬೇಕು. ಬತ್ತಿಯು ಬಟ್ಟಲ ಬಳಿ ಬಂದರೆ ಮರಿಯು "ಹ್ಯಾಕ್" ಎಂದು ಓಡಿಸುತ್ತಿತ್ತು - ಹೆತ್ತ ತಾಯಿಯನ್ನೇ. ಬತ್ತಿಯು ಮರಿಗಾಗಿ ತನ್ನ ಊಟವನ್ನು ತ್ಯಾಗ ಮಾಡುತ್ತಿತ್ತು. ನಾನು ಬತ್ತಿಯನ್ನು ಬೇರೆ ಕಡೆ ಕರೆದೊಯ್ದು ಊಟ ಕೋಡುತ್ತಿದ್ದೆ. ಒಮ್ಮೆ ಮರಿಗಾಗಿ ಅದೆಲ್ಲಿಂದಲೋ, ಯಾರ ಮನೆಯಿಂದಲೋ ಒಂದು ದೊಡ್ಡ ಕೋಳಿಯನ್ನು ಕಚ್ಚಿಕೊಂಡು ಬಂದುಬಿಟ್ಟಿತ್ತು. ಹೆಚ್ಚು ಕಮ್ಮಿ ಒಂದು ವಾರ ಶೆಡ್ಡಿನೊಳಗಿಟ್ಟುಕೊಂಡು ತಿಂದವು ಎರಡೂ. ಆಗಾಗ್ಗೆ ಶೆಡ್ಡಿನೊಳಗಿನಿಂದ ಜಗಳದ ಸದ್ದು ಕೇಳಿಬರುತ್ತಿತ್ತು. ಊಟದ ವಿಷಯದಲ್ಲಿ ತಾಯಿ-ಮರಿ ಜಗಳವಾಡುತ್ತಿದ್ದವು. ಸ್ವಲ್ಪ ದಿನವಾದ ಮೇಲೆ ಬತ್ತಿಯೇ ಮರಿಯನ್ನು ತನ್ನ ಕಾಲಲ್ಲಿ ಫಟ್ ಎಂದು ಹೊಡೆದೋಡಿಸ ತೊಡಗಿತು. ಎರಡೇ ದಿನದಲ್ಲಿ ಆ ಮರಿಯು ಅದೆಲ್ಲಿ ಮಾಯವಾಗಿ ಹೋಯಿತೋ ಗೊತ್ತಿಲ್ಲ, ಮತ್ತೆ ಬತ್ತಿ ಒಂಟಿಯಾಯಿತು. ಅದಕ್ಕೆ ಸ್ವಲ್ಪವೂ ಬೇಸರವಾದಂತೆ ಕಾಣಲಿಲ್ಲ. ನೂಡಲ್ಸ್ ಅನ್ನು ಮೃಷ್ಟಾನ್ನ ಭೋಜನದಂತೆ ಸವಿಯುತ್ತಿತ್ತು. ಮಂಚದ ಮೇಲೆ ನಿದ್ರಿಸುತ್ತಿತ್ತು. ನನ್ನ ಜೊತೆ ಆಟವಾಡುತ್ತಿತ್ತು. ದೇವರ ಮನೆಯ ಬತ್ತಿಯನ್ನು ಆಗಾಗ್ಗೆ ಗುಳುಂ ಮಾಡುತ್ತಿತ್ತು. ಕ್ಯಾಸೆಟ್‍ಗಳ ಟೇಪನ್ನು ಎಳೆದೆಳೆದು ಮನೆಯೆಲ್ಲಾ ಹರಡುತ್ತಿತ್ತು. ಬತ್ತಿಗೆ ಯಾವ ಚಿಂತೆಯೂ ಇದ್ದಂತಿರಲಿಲ್ಲ.

ಬೆಕ್ಕುಗಳು ಹದಿನೈದರಿಂದ ಇಪ್ಪತ್ತು ವರ್ಷಗಳವರೆಗೆ ಬದುಕಿರುತ್ತವೆಂದು ಓದಿದ್ದೆ. ಆದರೆ ಬೆಂಗಳೂರಿನಲ್ಲಿ ಅಷ್ಟು ವರ್ಷಗಳ ಕಾಲ ಜೀವಿಸಲು ವಾಹನಗಳು, ಬೀದಿ ನಾಯಿಗಳು ಬಿಡಬೇಕಲ್ಲ. ಆಗ ವಾಹನಗಳ ದಟ್ಟಣೆ ಅಷ್ಟಿರಲಿಲ್ಲ. ಆಗಿನ ಬೀದಿ ನಾಯಿಗಳು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರಲಿಲ್ಲ - ಬೆಕ್ಕುಗಳನ್ನು ಕಚ್ಚಿ ಕೊಂದುಬಿಡುತ್ತಿದ್ದವು. ಬತ್ತಿಯು ಹೀಗೇ ಒಂದು ಬೀದಿ ನಾಯಿಯ ಕಡಿತಕ್ಕೆ ಬಲಿಯಾಯಿತೆಂದು ಅದು ಸತ್ತು ಒಂದು ವಾರವಾದ ಮೇಲೆ ತಿಳಿಯಿತು. ಯಾಕೋ ಬರಲೇ ಇಲ್ಲವಲ್ಲ ಮನೆಗೆ ಎಂದು ಹುಡುಕುತ್ತಿದ್ದಾಗ ಮೋರಿಯೊಳಗೆ ಬತ್ತಿಯ ಅರೆಕೊಳೆತ ದೇಹವು ಕಂಡಿತು. ಅದನ್ನು ತೆಗೆಸಿ ಸಂಸ್ಕಾರ ಮಾಡಿಸುವಷ್ಟು ಸಂಸ್ಕಾರವು ನಗರವಾಸಿಗಳಿಗಿಲ್ಲ. ನನಗೂ ಇರಲಿಲ್ಲ. ನನಗೆ ಅದರ ಬಗ್ಗೆ ಹೊಳೆಯಲೂ ಇಲ್ಲ. ದುಃಖದಿಂದ ಮನೆಗೆ ಬಂದು ರಾತ್ರಿಯೆಲ್ಲಾ ವ್ಯಥೆ ಪಟ್ಟಿದ್ದೆ. "ಗೋಣಿಚೀಲದಿಂದ ಅದನ್ನು ತೆಗೆದು ಎಲ್ಲಾದರೂ ದೂರ ತೆಗೆದುಕೊಂಡು ಹೋಗಿ ಮಣ್ಣು ಮಾಡಿ ಬರಬಹುದು" ಎಂದು ಅಮ್ಮ ಸಲಹೆ ಕೊಟ್ಟಾಗಲೇ ಹೊಳೆದಿದ್ದು - ಬೆಂಗಳೂರಿನಲ್ಲಿ ಸತ್ತ ಬೆಕ್ಕನ್ನು ಹೂಳಲೂ ಸಹ ಎಲ್ಲೆಂದರಲ್ಲಿ ಜಾಗವಿಲ್ಲ ಎಂಬುದು. ಬೆಳಿಗ್ಗೆ ಶಾಲೆಗೆ ತಡವಾದರೂ ಪರವಾಗಿಲ್ಲವೆಂದು ಗೋಣಿಚೀಲವನ್ನು ತೆಗೆದುಕೊಂಡು ಬತ್ತಿಯ ಹೆಣವಿದ್ದ ಮೋರಿಯ ಬಳಿ ಹೋಗಿದ್ದೆ. ಅಲ್ಲಿ ಬತ್ತಿಯಿರಲಿಲ್ಲ. ಕೊಳೆತ ವಾಸನೆ ಮಾತ್ರ ಇತ್ತು.

- ಅ

10.12.2012

2.30AM

4 comments:

 1. Chennagide... Nimma bekkina baandhavyada kathe:-) bekkige haaleredante.. :-D

  ReplyDelete
 2. ಬೆಂಗಳೂರಲ್ಲಿ ನಮ್ ಸಂಬಂಧಿಕರ ಮನೆಲ್ಲಿ ಹಿಂದೆ ಮುಂದೆ ಗೊತ್ತಾಗದಂತಹ ಬೆಕ್ಕೊಂದನ್ನು ಸಾಕಿದಾರೆ. ಅದರ ಉಗುರು ತೆಗೆಸೋಕೆ ೬೦೦ ರೂಪಾಯಿಯಂತೆ :) ಇಲ್ಲಾಂದ್ರೆ ಸೋಫಾ ಹಾಳಾಗತ್ತೆ ಅಂತ ಹೆದರಿಕೆ.

  ಊರಲ್ಲಿ ನಮ್ ಮನೆ ಶೆಡ್ಡಲ್ಲಿ ವರ್ಷಕ್ಕೊಂದ್ಸಲವಾದ್ರೂ ಯಾವುದಾದ್ರೂ ಬೆಕ್ಕು ಮರಿ ಹಾಕ್ತಿತ್ತು. ಆ ಮರಿಗಳ ಜೊತೆ ಆಟ ಆಡ್ತಾ ಇದ್ದಿದ್ದು, ಆ ಮರಿಗಳು ಮನೆ ತುಂಬೆಲ್ಲಾ ವ್ಯಾಂ ವ್ಯಾಂ ಅಂತ ಓಡಾಡ್ತಾ ಇದ್ದಿದ್ದು ನೆನಪಾಯುತು.

  ಬೆಕ್ಕಿನ ಕೂದಲು ಉದುರುತ್ತೆ. ಅದು ನಮ್ ಹೊಟ್ಟೆಗೋದ್ರೆ ಏನೋ ಆಗತ್ತೆ ಅಂತೆಲ್ಲಾ ಹೇಳ್ತಾರಲ್ಲ. ನಿಜನಾ?

  ReplyDelete
 3. :) olle baththi. nange eneneno nenpaaghoytu odtaa iruvaaga, kateena (rex-du, namdalla) inda cudley vargoo.

  ReplyDelete
 4. [ವಿ.ರಾ.ಹೆ] ತುಂಬಾ ಬೇಗ ರಿಪ್ಲೈ ಮಾಡ್ತಾ ಇದ್ದೀನಿ, ಸಾರಿ.

  ಯಾವುದೇ ಕೂದಲಾಗಲೀ (ಬೆಕ್ಕಿನದಾಗಲೀ, ನಾಯಿಯದಾಗಲೀ, ಮನುಷ್ಯರದಾಗಲೀ) ಹೊಟ್ಟೆಗೆ ಹೋದರೆ ಒಳ್ಳೇದಲ್ಲ. In fact, ಕೂದಲು ಹೊಟ್ಟೆಯವರೆಗೂ ಹೋಗೋದೇ ಕಷ್ಟ. ಗಂಟಲಲ್ಲೇ ಸಿಕ್ಕು ಹಾಕಿಕೊಳ್ಳುವುದು ಸಾಮಾನ್ಯ.

  ReplyDelete