Friday, July 26, 2013

ನಾನೊಬ್ಬ ಕಂಪ್ಯೂಟರ್ ಶಿಕ್ಷಕನಾಗಿ..


(ಈ ಲೇಖನವನ್ನು ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ನನ್ನ ಕೃತಜ್ಞತೆಗಳು.)

ಖಾಸಗಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರ ಬೇಕು ಬೇಡಗಳು, ಗೆಲುವು ಸೋಲುಗಳು, ಸುಖ ದುಃಖಗಳು ಕಂಪ್ಯೂಟರ್ ಶಿಕ್ಷಕರಿಗೆ ಮಾತ್ರವೇ ಅರ್ಥವಾಗುವುದು. ಉಳಿದವರಿಗೆ "ನಿಮ್ಮದೇನು ಮಹಾ, ಕಂಪ್ಯೂಟರ್ ಹೇಳಿಕೊಡುವುದು ತಾನೆ!" ಎನ್ನುವ ಭಾವನೆ. ಅನೇಕರ ದೃಷ್ಟಿಯಲ್ಲಿ ಇದೊಂದು ಸಬ್ಜೆಕ್ಟೇ ಅಲ್ಲ. ಮಕ್ಕಳಿಗೆ ಯಾವಾಗಲೂ ಓದುವುದನ್ನೇ ಹೇಳುತ್ತಿದ್ದರೆ ಬೋರಾಗುತ್ತೆ, ಅದಕ್ಕೋಸ್ಕರ ಅವರಿಗೆ ಪಿ.ಟಿ., ಯೋಗ, ಸಂಗೀತ, ಕಂಪ್ಯೂಟರ್ ಶಿಕ್ಷಣ, ಎಲ್ಲವೂ ಇರುವುದೆಂದು ಪ್ರಾಮಾಣಿಕವಾಗಿ ನಂಬಿರುತ್ತಾರೆ. ಪ್ರಾಂಶುಪಾಲರ ದೃಷ್ಟಿಯಲ್ಲಿ ಇದೊಂದು "ಲೈಟ್" ಸಬ್ಜೆಕ್ಟು. ಅಂದರೆ, ಮಕ್ಕಳು ಓದದೆಯೂ, ಅಭ್ಯಾಸ ಮಾಡದೆಯೂ ಪಾಸಾಗಬಹುದಾದ್ದು. ವೇಳಾಪಟ್ಟಿಯಲ್ಲಿ ಅಷ್ಟೇನೂ ಪ್ರಾಮುಖ್ಯತೆಯನ್ನು ಕೊಡಬೇಕಾದ್ದೂ ಇಲ್ಲ. ಈ ಸಬ್ಜೆಕ್ಟಲ್ಲಿ ಯಾರಾದರೂ ಉನ್ನತ ಅಂಕಗಳನ್ನು ಪಡೆದುಕೊಂಡರೆ "ಕಂಪ್ಯೂಟರ್ ಅಲ್ಲಿ ತೊಗೊಂಡರೆ ಪ್ರಯೋಜನ ಇಲ್ಲ, ಮ್ಯಾಥೆಮಾಟಿಕ್ಸು, ಸೈನ್ಸುಗಳಲ್ಲಿ ತೊಗೋಬೇಕು" ಎನ್ನುತ್ತಾರೆ ಅವರ ಪೋಷಕರು. ಆಡಳಿತಾಧಿಕಾರಿಗಳು ಕಂಪ್ಯೂಟರ್ ನ ಅರಿವಿದ್ದವರಾಗಿದ್ದರೆ ಸರಿ, ಇಲ್ಲವೆಂದರೆ ಒಂದು ಪ್ರಯೋಗಾಲಯಕ್ಕೂ ಹೆಣಗಾಡಬೇಕಾಗುತ್ತೆ ಕಂಪ್ಯೂಟರ್ ಶಿಕ್ಷಕ.

ಕಂಪ್ಯೂಟರ್ ಜ್ಞಾನವು ಕಡ್ಡಾಯ ಎಂದು ಎಲ್ಲಾ ಕಡೆ ಹೇಳಿದ್ದರೂ ಸಹ ಇದು ಹೊಸಬರಿಗೆ ಮಾತ್ರವೇ ಸೀಮಿತವಾಗುತ್ತಿದೆಯೇನೋ, ಅನೇಕ ಹಳಬರಿಗೆ, ಈಗಾಗಲೇ ಬಹಳ ವರ್ಷ ಅನುಭವವುಳ್ಳ ಶಿಕ್ಷಕರಿಗೂ ಕಂಪ್ಯೂಟರಿಗೂ ಯಾವುದೇ ಸಂಬಂಧವೂ ಇಲ್ಲವೇನೋ ಎಂಬಂತಿದೆ. "ನಮಗ್ಯಾಕೆ ಈ ಕಂಪ್ಯೂಟ್ರು ಗಿಂಪ್ಯೂಟ್ರು ಎಲ್ಲ!" ಎನ್ನುವವರೂ ಇದ್ದಾರೆ. ಅವರಂತೆ ನಾನು, ಕಂಪ್ಯೂಟರ್ ಮೇಷ್ಟ್ರಾದ ನಾನು "ನನಗ್ಯಾಕೆ ಸಾಹಿತ್ಯ!" ಎಂದು ಹೇಳುತ್ತಿಲ್ಲವಲ್ಲವೆಂಬುದು ನನಗೆ ನನ್ನ ಬಗ್ಗೆಯೇ ಹೆಮ್ಮ ಪಡಬಹುದಾದ ವಿಷಯ. ಹೀಗೆಯೇ "ನಮಗ್ಯಾಕೆ" ಎನ್ನುವ ಶಿಕ್ಷಕಿಯೊಬ್ಬರು ನನ್ನಲ್ಲಿಗೆ ಒಂದು ದೂರನ್ನು ತಂದಿದ್ದರು. "ಸರ್, ಈ ನಿಮ್ಮ ವಿದ್ಯಾರ್ಥಿ ಬರೀ ಕಂಪ್ಯೂಟರ್ ಮುಂದೆ ಕೂತಿರುತ್ತಾನಂತೆ ಮನೇಲಿ. ನೀವು ಹೇಳಬೇಕು ಅವನಿಗೆ." ಆ ಹುಡುಗನ ಅಂಕಪಟ್ಟಿಯನ್ನು ತರಿಸಿಕೊಂಡು ನೋಡಿದೆ. ಕಂಪ್ಯೂಟರ್ ವಿಷಯದಲ್ಲಿ ನೂರಕ್ಕೆ ತೊಂಭತ್ತೈದು. ಉಳಿದ ವಿಷಯಗಳಲ್ಲಿ ಪರವಾಗಿಲ್ಲ, ಆದರೆ ಕಂಪ್ಯೂಟರಿನಲ್ಲೇ ಎಲ್ಲಕ್ಕಿಂತಲೂ ಅಧಿಕ. (ಕನ್ನಡದಲ್ಲಿ ಎಷ್ಟು ಎಂದು ನೀವು ಕೇಳಬಾರದು - ಈಗಿನ ಕಾಲದ ಖಾಸಗಿ ಶಾಲೆಯ ಮಕ್ಕಳ ಕನ್ನಡದ ಅಂಕಗಳು ಗಂಡಸರ ಸಂಬಳ, ಹೆಂಗಸರ ವಯಸ್ಸಿದ್ದಂತೆ.) ನನಗೆ ಈಗ ಪೀಕಲಾಟಕ್ಕೆ ಬಂತು. ನಾನು ಹೇಗೆ ಹೇಳುವುದು, ಬೇರೆ ಸಬ್ಜೆಕ್ಟುಗಳನ್ನು ಓದಿಕೋ, ಕಂಪ್ಯೂಟರ್ ವಿಷಯವನ್ನು ಕಡಿಮೆ ಅಭ್ಯಾಸ ಮಾಡು ಎಂದು? ಹಾಗೆ ಅವನು ತನಗಿಷ್ಟವಿರುವುದನ್ನು ಬಿಟ್ಟರೆ ಬೇರೆ ವಿಷಯಗಳೊಂದಿಗೆ ಕಂಪ್ಯೂಟರಿನಲ್ಲೂ ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವುದಿಲ್ಲವೇ? ಈ ಸಮಸ್ಯೆಯನ್ನು ಬಗೆಹರಿಸಲು ನನಗೆ ಸಾಕುಸಾಕಾಗಿ ಹೋಯಿತು. ಕೊನೆಗೆ ಆ ಹುಡುಗನನ್ನು ಕರೆಸಿ ಕಂಪ್ಯೂಟರ್ ಮುಖಾಂತರವೇ ಬೇರೆ ಸಬ್ಜೆಕ್ಟುಗಳನ್ನೂ ನಾನೇ ಪಾಠ ಮಾಡಬೇಕಾಯಿತು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಮತ್ತು ಸಿ.ಬಿ.ಎಸ್.ಈ. ಎರಡರಲ್ಲೂ ಕಂಪ್ಯೂಟರ್ ಶಿಕ್ಷಣ ಮೇಲೆ ಹೇಳಿರುವಂತೆ "ಲೈಟ್" ಸಬ್ಜೆಕ್ಟೇ. ಆದರೆ ಐ.ಸಿ.ಎಸ್.ಈ, ಮತ್ತು ಐ.ಜಿ.ಸಿ.ಎಸ್.ಈ. ಇಲಾಖೆಯಡಿ ಓದುವ ಮಕ್ಕಳಿಗೆ ಇದು ಉಳಿದೆಲ್ಲ ವಿಷಯಗಳಂತೆಯೇ. ಐ.ಸಿ.ಎಸ್.ಈ.ನಲ್ಲಿ, ಹಾಗೆ ನೋಡಿದರೆ, ಒಂಭತ್ತನೆಯ ತರಗತಿಯಲ್ಲಿ ಮಕ್ಕಳು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದಾದ, ತೆಗೆದುಕೊಂಡರೆ ಪರೀಕ್ಷೆಗೆ ಒಟ್ಟು ಇನ್ನೂರು ಅಂಕಗಳಿಗೆ ಸಿದ್ಧವಾಗಬೇಕಾಗುವ, ಮುಖ್ಯವಾದ ವಿಷಯವೇ. ನಾನು ಪ್ರೋಗ್ರಾಮಿಂಗ್ ಪಾಠವನ್ನು ಮಾಡುತ್ತೇನೆ. ಆದರೆ ಕಂಪ್ಯೂಟರ್ ಶಿಕ್ಷಕನೆಂದೇ ಗುರುತಿಸುತ್ತಾರೆ. ಇದರಿಂದಾಗುವ ಸಮಸ್ಯೆಯ ಬಗ್ಗೆ ಯಾರಿಗೆ ತಾನೆ ಅರಿವಿದೆ? ಒಬ್ಬ ಪೋಷಕರು ಬಂದು "ನೀವು ಶಾಲೆಯಲ್ಲಿ ಮಕ್ಕಳಿಗೆ ಫ್ಲಾಶ್, ಫೋಟೋಶಾಪ್, ಮಾಯಾ (ಮುಂತಾದ ಮಲ್ಟೀಮೀಡಿಯಾ ತಂತ್ರಾಂಶಗಳು) ಯಾಕೆ ಹೇಳಿಕೊಡುವುದಿಲ್ಲ? ನಿಮಗೆ ಅವೆಲ್ಲ ಗೊತ್ತಿಲ್ಲದೆ ಹೇಗೆ ಟೀಚರ್ ಆದಿರಿ?" ಎಂದು ನೇರವಾಗಿ ಕೇಳಿದರು. ಅವರ ಜೊತೆಗೇ ಬಂದ ಇನ್ನೊಬ್ಬರು "ಅಷ್ಟೇ ಅಲ್ಲ, ಟ್ಯಾಲಿ, ಪೇಜ್ ಮೇಕರ್, ಕೋರಲ್ ಡ್ರಾ ಕೂಡ ಹೇಳಿಕೊಡಬೇಕು" ಎಂದು ಆಗ್ರಹಿಸಿದ್ದರು. ಪ್ರೌಢಶಾಲೆಯ ಗಣಿತದ ಮೇಷ್ಟ್ರು ಅಂಕಗಣಿತ, ಬೀಜಗಣಿತ, ರೇಖಾಗಣಿತ ಎಲ್ಲವನ್ನೂ ಪಾಠ ಮಾಡುವ ಹಾಗೆಯೇ ಇದೂ ಸಹ ಎಂದುಕೊಂಡಿದ್ದರೇನೋ ಆ ಪೋಷಕರು. "ಬೋರ್ಡು ನಮಗೆ ಏನು ಹೇಳಿದೆಯೋ ಅದನ್ನು ಮಾತ್ರ ಪಾಠ ಮಾಡಬೇಕಾಗುತ್ತೆ" ಎಂದು ಹೇಳಿ ತಪ್ಪಿಸಿಕೊಳ್ಳಬೇಕಾಯಿತು. ಇವರು ಹೇಳಿದ್ದನ್ನೆಲ್ಲಾ ಕಲಿತುಕೊಂಡು ಅದನ್ನು ಪಾಠ ಮಾಡುವಂತಾಗಲು ನನಗೆ ಕೊನೇ ಪಕ್ಷ ಹತ್ತು ವರ್ಷವಾದರೂ ಬೇಕಾಗಬಹುದೆಂದು ಯೋಚಿಸಿ ನಗು ಬಂತು. ನಗುವು ಇನ್ನೂ ಇರುವಾಗಲೇ ಪ್ರಾಂಶುಪಾಲರ ಕೊಠಡಿಯಿಂದ ಕರೆ ಬಂದಿತು. "ಪ್ರಿಂಟರ್ ಕೆಲಸ ಮಾಡುತ್ತಿಲ್ಲ" ಎಂದು. ನಾನು "ನನಗೆ ಅದರ ಬಗ್ಗೆ ಗೊತ್ತಿಲ್ಲ" ಎಂದು ಹೇಳಿಕಳಿಸಿದೆ. ಕೂಡಲೇ ನನ್ನನ್ನು ಬರಹೇಳಿದರು. "ನೀವು ಕಂಪ್ಯೂಟರ್ ಟೀಚರ್ ಆಗಿರುವುದಾದರೂ ಯಾಕೆ, ಪ್ರಿಂಟರ್ ರಿಪೇರಿ ಮಾಡಲು ಬರುವುದಿಲ್ಲವೇ?" ಎಂದು ಕೇಳಿಬಿಟ್ಟರು!

ಕೆಲವು ಪೋಷಕರು ಶಿಕ್ಷಕರನ್ನು ಭೇಟಿ ಮಾಡಲು ಬರುವಾಗ ಕಂಪ್ಯೂಟರ್ ಶಿಕ್ಷಕರನ್ನು ಭೇಟಿ ಮಾಡುವುದೇ ಇಲ್ಲ. "ಅಯ್ಯೋ, ಅದನ್ನು ಓದಿದರೆಷ್ಟು ಬಿಟ್ಟರೆಷ್ಟು" ಎಂಬ ಭಾವನೆಯಿರಬಹುದು. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನದಲ್ಲಿ ಅಂಕಗಳನ್ನು ತೆಗೆದುಕೊಂಡರೆ ಸಾಕು ಎಂದು ಹೇಳುವವರನ್ನೂ ನಾನು ಕಂಡಿದ್ದೇನೆ. ಆದರೆ ಇನ್ನು ಕೆಲವು ಪೋಷಕರು ಇದರ ತದ್ವಿರುದ್ಧ. "ಮನೆಯಲ್ಲಿ ಅದೂ ಇದೂ ಮಾಡುತ್ತಲೇ ಇರುತ್ತಾನೆ ಕಂಪ್ಯೂಟರಲ್ಲಿ. ಮೂರು ಹೊತ್ತೂ ಕಂಪ್ಯೂಟರ್ ಮುಂದೆಯೇ ಇರುತ್ತಾನೆ. ಮಾರ್ಕ್ಕ್ಸ್ ಮಾತ್ರ ಕಮ್ಮಿ. ಯಾಕೆ?" ಎಂದು ನನ್ನನ್ನೇ ಪ್ರಶ್ನಿಸುತ್ತಾರೆ. ಮನೆಯಲ್ಲಿ ಮೂರು ಹೊತ್ತೂ ಕಂಪ್ಯೂಟರ್ ಮುಂದೆಯೇ ಕುಳಿತ ತಮ್ಮ ಮಗನು ಪಾಠದ ಅಭ್ಯಾಸ ಮಾಡುತ್ತಿದ್ದಾನೋ ಫೇಸ್‍ಬುಕ್‍ನಲ್ಲಿ ನಿರತನಾಗಿದ್ದಾನೋ ಇವರಿಗೆ ಹೇಗೆ ತಿಳಿಯಬೇಕು, ಪಾಪ.

ಇನ್ನು ಕೆಲವು ಪೋಷಕರಿಗೆ ಕಂಪ್ಯೂಟರ್ ಶಿಕ್ಷಣವೇ ಸರ್ವಸ್ವವಾಗಿರುತ್ತೆ. ಅವರು ಕೊಡುವ ಕಾರಣವು ಒಂದೇ: "ಎಲ್ಲಾ ಕಡೇನೂ ಕಂಪ್ಯೂಟರು ಬೇಕೇ ಬೇಕು ಈಗ." ಅದಕ್ಕೆಂದೇ ಮನೆಯಲ್ಲಿ ಮೂರು ಮೂರು ಕಂಪ್ಯೂಟರು ತಂದಿಟ್ಟುಕೊಂಡಿರುತ್ತಾರೆ ಕೂಡ. ಎಲ್ಲಾ ಕಡೆಯೂ ಕಂಪ್ಯೂಟರು ಬೇಕು ಎಂಬುದನ್ನು ಮನೆಯಲ್ಲಿ ಎಲ್ಲೆಡೆಯೂ ಇರಬೇಕು ಎಂದು ತಪ್ಪು ಅರ್ಥ ಮಾಡಿಕೊಂಡಿರುತ್ತಾರೇನೋ. ಒಂದನೇ ತರಗತಿಯಲ್ಲಿ ಓದುತ್ತಿರುವ ಮಗುವೂ ಸಹ ಕಂಪ್ಯೂಟರ್ ತಜ್ಞನಾಗಿಬಿಡಬೇಕೆಂಬುವ ಹಂಬಲವಿರುವ ಪೋಷಕರೂ ಇದ್ದಾರೆ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಈ ಮಕ್ಕಳು ಆಟವಾಡುವುದು ಕಂಪ್ಯೂಟರಲ್ಲಿ, ಮೈದಾನದಲ್ಲಲ್ಲ.

ಇನ್ನು ಕಂಪ್ಯೂಟರ್ ಪ್ರಯೋಗಾಲಯದ ಬಳಕೆಯು ರಸಾಯನಶಾಸ್ತ್ರ, ಭೌತಶಾಸ್ತ್ರದ ಪ್ರಯೋಗಾಲಯಗಳಂತಿರುವುದಿಲ್ಲವಷ್ಟೆ? ಕಂಪ್ಯೂಟರ್ ಲ್ಯಾಬೆಂದರೆ ಶಾಲೆಯಲ್ಲಿ ಯಾರು ಯಾರು ಕಂಪ್ಯೂಟರ್ ಆಸಕ್ತರಿರುತ್ತಾರೋ ಅವರೆಲ್ಲರ ತಂಗುದಾಣ. ಅವರು ವಿದ್ಯಾರ್ಥಿಗಳಾಗಬಹುದು, ಶಿಕ್ಷಕರಾಗಬಹುದು, ಅಥವಾ ಬೇರೆ ಸಿಬ್ಬಂದಿ ವರ್ಗದವರೂ ಆಗಬಹುದು.  ಇರುವ 1 Mbps (ಸೆಕೆಂಡಿಗೆ ಒಂದು ಮೆಗಾ ಬಿಟ್) ಇಂಟರ್ನೆಟ್ಟಿನ ಕನೆಕ್ಷನ್ನು ಇಪ್ಪತ್ತು ಕಂಪ್ಯೂಟರುಗಳಿಗೆ ಹರಿದು ಹಂಚಿ ಹೋಗಿರುತ್ತಾದ್ದರಿಂದ ಸಹಜವಾಗಿಯೇ ನಿಧಾನವಾಗಿರುತ್ತೆ. ಆದರೆ ಅವರುಗಳ ದೃಷ್ಟಿಯಲ್ಲಿ ಕಂಪ್ಯೂಟರ್ ಲ್ಯಾಬಿನ ಇಂಟರ್ನೆಟ್ಟು ಶುದ್ಧ ಅಪ್ರಯೋಜಕವಾದದ್ದು. ಶಾಲೆಯಲ್ಲಿ ಅವರುಗಳಿಗೆ ಬ್ಯಾಂಡ್‍ವಿಡ್ತ್ ಪಾಠ ಮಾಡುವುದೊಂದು ಬಾಕಿ. ನಾನು ಕಾಲೇಜಿನಲ್ಲಿದ್ದಾಗ ಕಂಪ್ಯೂಟರ್ ಲ್ಯಾಬಿನ ಮೌಸುಗಳಲ್ಲಿರುತ್ತಿದ್ದ ಗುಂಡುಗಳು ಆಗಾಗ್ಗೆ ಮಾಯವಾಗುತ್ತಿದ್ದವು. ಈಗಿನ ಮೌಸುಗಳಲ್ಲಿ ಗುಂಡುಗಳಿರದ ಕಾರಣ ಬದುಕಿಕೊಂಡವು. ಆದರೆ ಖಾಸಗಿ ಶಾಲೆಯಲ್ಲಿರುವ ಬಹುಪಾಲು ಮಕ್ಕಳಿಗೆ ಕಂಪ್ಯೂಟರ್ ಲ್ಯಾಬಿನಲ್ಲಿರುವ ಯಾವುದೇ ಉಪಕರಣವು ಆಕರ್ಷಕವಾಗಿ ಕಾಣುವುದಿಲ್ಲ. ತಮ್ಮ ಮನೆಗಳಲ್ಲೇ ಅಪ್‍ಡೇಟ್ ಆಗಿರುವ ತಂತ್ರಾಂಶಗಳು, ಉಪಕರಣಗಳು ಇರುವಾಗ ಕಂಪ್ಯೂಟರ್ ಲ್ಯಾಬಿನಲ್ಲಿರುವ ವಸ್ತುಗಳ ಬಗ್ಗೆ ಎಲ್ಲಿಂದ ತಾನೆ ಆಕರ್ಷಣೆ ಹುಟ್ಟಬೇಕು? ಹಾಗಾಗಿ ಉಪಕರಣಗಳು ಕಳ್ಳತನವಾಗಲೀ, ಹಾಳಾಗುವುದಾಗಲೀ ಆಗುವುದೇ ಇಲ್ಲ. ಅನೇಕ ಬಾರಿ ಹೈಸ್ಕೂಲು ಮಕ್ಕಳು, "ಸರ್, ವೀಡಿಯೋ ಎಡಿಟಿಂಗಿಗೆ ಈ ತಂತ್ರಾಂಶ ಬೇಕು, ಎನಿಮೇಷನ್ನಿಗೆ ಇಂಥದ್ದು ಬೇಕು, ಇವೆಲ್ಲ ನಮ್ಮ ಲ್ಯಾಬಲ್ಲಿ ಹಾಕೋಕೆ ಆಗಲ್ಲ, ಕಾನ್ಫಿಗರೇಷನ್ನು ಸಾಲದು" ಎಂದು ನನ್ನ ಬಳಿ ಬಂದು ಹೇಳಿದ್ದಾರೆ. "ಏನು ಮಾಡೋದಪ್ಪಾ, ಇದು ಬಡಪಾಯಿ ಲ್ಯಾಬು" ಎಂದು ಹೇಳಿ ಅವರನ್ನು ಸಮಾಧಾನ ಪಡಿಸಿದ್ದೇನೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಒಬ್ಬ ಕಂಪ್ಯೂಟರ್ ಶಿಕ್ಷಕನು ತನ್ನ ವಯಕ್ತಿಕ ವಲಯದಲ್ಲಿ ಯಾರೊಡನೆಯಾದರೂ ತಾನು ಕಂಪ್ಯೂಟರ್ ಟೀಚರ್ ಎಂದು ಹೇಳಿಕೊಳ್ಳುವುದು ಬಹಳ ಕಷ್ಟದ ಕೆಲಸ. ಒಂದು ಮದುವೆ ಸಮಾರಂಭದಲ್ಲಿ ನನ್ನ ಸಂಬಂಧಿಕರೊಬ್ಬರು ಕೇಳಿದರು: "ಏನು ಮಾಡ್ತಿದ್ದೀಯಪ್ಪಾ ಈಗ?" ಎಂದು. ನಾನು "ಸ್ಕೂಲ್ ಮೇಷ್ಟ್ರಾಗಿದ್ದೇನೆ." ಎಂದೆ. ಅದಕ್ಕೆ ಅವರು "ಅಯ್ಯೋ, ಹೋಗ್ಲಿ ಬಿಡು!" ಎಂದುಬಿಡಬೇಕೆ? ನಾನು ಏನು ಹೇಳಬೇಕೆಂದು ಗೊತ್ತಾಗದೇ ಸುಮ್ಮನಿದ್ದೆ. ಅವರು "ಸರಿ, ಏನ್ ಸಬ್ಜೆಕ್ಟು?" ಎಂದು ಕೇಳಿದರು. ನಾನು "ಕಂಪ್ಯೂಟರ್" ಎಂದೆ. ಅವರ ದೃಷ್ಟಿಯಲ್ಲಿ ನಾನು ಪರಮಾಪರಾಧಿಯಂತೆ ಕಂಡೆ. "ಅಲ್ವೋ, ಅದೇನೇನೋ ಕೋರ್ಸುಗಳನ್ನು ಮಾಡಿಕೊಂಡೆ, ಒಳ್ಳೇ ಕೆಲಸಕ್ಕೆ ಹೋಗೋದು ಬಿಟ್ಟು ಮೇಷ್ಟ್ರಾಗಿದ್ ಯಾಕೆ?" ದುರಂತವೆಂದರೆ ಹೀಗೆ ನನ್ನನ್ನು ಪ್ರಶ್ನಿಸಿದ ಆ ನನ್ನ ಸಂಬಂಧಿಕರು ಒಬ್ಬ ನಿವೃತ್ತ ಶಿಕ್ಷಕಿ.

-ಅ
08. 07. 2013
10.45PM