Thursday, November 20, 2014

ಹನಿಗಳ ವಿದಾಯ

ಸಮಯವೆಲ್ಲಿ ಮಳೆಯ ಹನಿಗೆ
ಜೊತೆಯೊಳಿರುವ ಹನಿಯ ದನಿಗೆ
ದನಿಯ ಕೂಡಿಸುತ್ತ "ಹೋಗಿ -
ಬರುವೆ"ನೆಂದು ಹೇಳಲು?
ಆತುರವೇ ಬೀಳಲು?

ಗಗನದಿಂದ ನೆಲಕೆ ಬಿದ್ದು
ನೀಡಲೆನಿತೊ ಇನಿದು ಸದ್ದು?
ಪತನವೆಂಬ ಗುರಿಯ ಹೊತ್ತ
ಹನಿಗೆ ಯಾರು ಆಸರೆ?
ಯಾರ ಒಲುಮೆಯಾ ಕರೆ?

ಹನಿಗಳೆಲ್ಲ ಒಂದನೊಂದು, 
ವಿರಹದಿಂದ ತಾವು ನೊಂದು,
"ಮತ್ತೆ ಸಿಗುವುದಿಲ್ಲ"ವೆಂದು
ಅಪ್ಪಿಕೊಳಲು - ಗುಡುಗಿತು;
ಬುವಿಯೆಲ್ಲವು ನಡುಗಿತು!

-ಅ
20.11.2014
12.40 AM

Monday, October 6, 2014

ಆಕಾಂಕ್ಷೆ

ಮನದ ತುಂಬ 
ಬಿಡಿಸಲಾರ - 
ದೆಂಬ ಬಲೆಯ ಗೋಜಲು. 
ಧುಮುಕಿರುವೆನೊ 
ಕಡಲಿನಡಿಗೆ 
ಬರದೆ ನೀರೊಳೀಜಲು. 

ಸರಿಯು ಏನು, 
ತಪ್ಪದೇನು 
ಅಂತರಂಗ ನುಡಿಯದೆ; 
ತೇಲಲಾರೆ, 
ಮುಳುಗಲಾರೆ 
ನಿನ್ನ ಮನವು ಮಿಡಿಯದೆ. 

ಇರುಳಿನಲ್ಲಿ 
ಬೆಳಕ ಹುಡುಕಿ 
ಬರಿದೆ ನಾನು ಶ್ರಮಿಸಿದೆ. 
ಮಿನುಗುಮಿಂಚು 
ಹೊಳೆದರದನೆ 
ಜ್ಯೋತಿಯೆಂದು ಭ್ರಮಿಸಿದೆ. 

ಮಧುರ ದನಿಯು 
ಕೂಡ ಕಿವಿಗೆ 
ಗದ್ದಲವದು ಏತಕೆ? 
ಗೊಂದಲದಲು 
ಶಾಂತ ಮುಖವು 
ಎಂಬುದೇಕೆ ತೋರಿಕೆ? 

ಬರದೆ ಹೋದೆ - 
ಯೇನು ಬಲೆಯ 
ಗೋಜಲನ್ನು ಬಿಡಿಸಲು? 
ಮಿಡಿಯೆ ನೀನು 
ನನ್ನ ಹೃದಯ - 
ವೀಣೆಯನ್ನು ನುಡಿಸಲು! 

-ಅ
06.10.2014
2.30 AM