Wednesday, November 18, 2015

ತೆರೆದಿಟ್ಟ ಪುಸ್ತಕ

ತೆರೆದಿಟ್ಟ ಪುಸ್ತಕವನೋದುವವರಾರು?
ಓದಿಯೂ ಅದರೊಳಗೆ
ಬರೆದಿಟ್ಟ ಸಾಲುಗಳನರಿಯುವವರಾರು?

ಅರಿತಿಹೆನು ನಾನೆಂಬ ಧೈರ್ಯವಿಹುದೇನು?
ಇದ್ದರೂ ಏನಂತೆ,
ಬೆರೆತಿರುವೆ ಪುಟದೊಳಗೆ ನೀ ಬಲ್ಲೆಯೇನು?

ವಿವರಿಸಲೆ ಬರಹವನು? ಬರಿ ಪದವಿದಲ್ಲ.
ಭಾವದಾ ಗೀತೆಯನು
ಕೇಳುವುದಕಿಲ್ಲಾರಿಗೂ ಸಮಯವಿಲ್ಲ!

ನೀ ಬರೆದ ಪುಸ್ತಕವೆ ನನ್ನದೀ ಬದುಕು.
ನೀನೇತಕಿದನರಿಯೆ?
ತೆರೆದಿಟ್ಟ ಪುಟಗಳಲಿ "ನಮ್ಮನ್ನು" ಹುಡುಕು.

- ಅ
17. 11. 2015
11.58 PM

Tuesday, October 20, 2015

ನೀನು - ನಾನು

ಕೊಲ್ಲು ನಿನ್ನ ನೀನು
ಕೊಲದೆ ಉಳಿಯಬಲ್ಲೆಯೇನು?
ನಿಲ್ಲು ನೆಲದಿ ನೀನು
ನಿಲದೆ ನಡೆಯಬಲ್ಲೆಯೇನು?
ಬದುಕ ಬಂಧನವದೆ ಬಾನು -
ದಾಟಬಲ್ಲೆಯೇನು ನೀನು?

ಮೂಕವಾಗು ಒಮ್ಮೆ
ಮಾತಿನಲ್ಲಿ ಏನು ಹಿರಿಮೆ?
ನರಕ ತೊರೆಯೊ ಒಮ್ಮೆ
ನರಕದಿಂದೆ ನಾಕದೊಲುಮೆ
ಮಾತೆ ನರಕ, ಮೌನ ನಾಕ-
ವರಿಯೊ ಇದರ ಮಹಿಮೆ.

ಏಕೆ ಎಂಬುದೇಕೆ?
ಉತ್ತರವದು ನಿನಗೆ ಬೇಕೆ?
ಬಯಕೆಯೇ ಶಲಾಕೆ
ನೀನೆ ಇರಿದುಕೊಳುವೆ, ಜೋಕೆ!
ತೊರೆದು ಪ್ರಶ್ನೆಯಾಸೆಯನ್ನು
ನಡೆಸು ಬಾಳ ನೌಕೆ.

ಕೊಲ್ಲು ನಿನ್ನ "ನಾನು".
ಕೊಲದೆ ಉಳಿಯಲಾರೆ ನೀನು.
ಗೆಲ್ಲು ಛಲದಿ ನೀನು
ಸೋಲೆಂಬುವ ಭಯವದೇನು?
ಗೆಲುವೆ "ನೀನು" ಸೋಲೆ "ನಾನು" -
ಆಗಲೊಂದೆ ನೀನು - ನಾನು!

- ಅ
20. 10. 2015
2.55 AM

Tuesday, September 8, 2015

ನನ್ನಾಸ್ಪತ್ರೆ ಕಥೆ

ಕೆಲ ವರ್ಷಗಳ ಹಿಂದೆ ಒಂದು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು. ಹರ್ನಿಯಾ ಶಸ್ತ್ರಚಿಕಿತ್ಸೆ. ಅದೇನು ಅಂಥಾ ಸೀರಿಯಸ್ ಕೇಸ್ ಅಲ್ಲದಿದ್ದರೂ ಅದೊಂದು ಮೇಜರ್ ಆಪರೇಷನ್ ಆಗಿದ್ದರಿಂದ, ಮತ್ತು ಅದು ನನ್ನ ಮೊದಲ ಅನುಭವವಾದ್ದರಿಂದ ಸಹಜ ಕುತೂಹಲ, ಉತ್ಸಾಹ, ಆತಂಕ, ವಿಸ್ಮಯ ಎಲ್ಲವೂ ನನ್ನಲ್ಲಿ ಮೂಡಿತ್ತು. ಇಡೀ ಅನುಭವವು ನನಗೆ ನಗುವನ್ನೂ, ನಲಿವನ್ನೂ ತಂದುಕೊಡುವುದರ ಜೊತೆಗೆ "ಈ ಆಸ್ಪತ್ರೆ ಸಹವಾಸ ನನ್ನ ಶತ್ರುವಿಗೂ ಬೇಡ" ಎಂಬ ಭಾವನೆಯನ್ನೂ ಉಂಟುಮಾಡಿತು.

ದೊಡ್ಡ ದೊಡ್ಡ ಬೆಟ್ಟಗಳ ಚಾರಣವನ್ನು ಸಲೀಸಾಗಿ ಮಾಡುತ್ತಿದ್ದ ನಾನು ಅದೊಂದು ದಿನ ತುಮಕೂರಿನ ಶಿವಗಂಗೆಯಂತಹ ಚಿಕ್ಕ ಗುಡ್ಡವನ್ನು ಹತ್ತಲು ಆಗದೇ, ನನ್ನ ಕಿಬ್ಬೊಟ್ಟೆ ನೋವಿನಿಂದ ಅರ್ಧದಾರಿಯಲ್ಲಿಯೇ ಬಿಳಿಬಾವುಟ ಹಾರಿಸುವಂತಾಗಿತ್ತು. ಆದರೂ ಕಷ್ಟ ಪಟ್ಟು ಗುಡ್ಡವನ್ನೇರಿ, ಕೆಳಗಿಳಿದು, ಮನೆಗೆ ಮರಳಿದ ಮಾರನೆಯ ದಿನವೇ ನೋವು ತಾಳಲಾರದೆ ಬೆಂಗಳೂರಿನಲ್ಲಿ ನಾನು ಅತ್ಯಂತ ವಿಶ್ವಾಸವಿಟ್ಟಿದ್ದ ವೈದ್ಯ, ಶ್ರೀ ಪ್ರಕಾಶಂ ಅವರ ಬಳಿ ಓಡಿದೆ. ವಯೋವೃದ್ಧ ಆಯುರ್ವೇದ ವೈದ್ಯರು ನಾಡಿ ಹಿಡಿದು ನೋಡಿ, "ನಿಮಗೆ ಹರ್ನಿಯಾ ಆಗಿದೆ, ಔಷಧಿ ಕೊಡ್ತೀನಿ ತೊಗೋಳಿ, ಸರಿ ಹೋಗುತ್ತೆ, ಇಂಗ್ಲೀಷ್ ಡಾಕ್ಟರ ಬಳಿ ಹೋಗ್ಬೇಡಿ, ಏನೇನೋ ಮಾಡ್ಬಿಡ್ತಾರೆ" ಎಂದು ಆಲೋಪಥಿಯನ್ನು ವಾಚಾಮಗೋಚರವಾಗಿ ಬೈದರು. ಒಂದು ವಾರದವರೆಗೂ ಈ ಔಷಧವನ್ನು ತೆಗೆದುಕೊಂಡೆ. ನನ್ನ ತಾಳ್ಮೆ ಕೆಟ್ಟಿತ್ತಾದ್ದರಿಂದ, ಈ ಔಷಧವನ್ನು ನಿಲ್ಲಿಸಿ, ಹಿರಿಯ ಸ್ನೇಹಿತರಾದ ಪುತ್ತೂರಿನ ಡಾಕ್ಟರು ಶ್ರೀ ರವೀಂದ್ರ ಐತಾಳರ ಬಳಿ ಹೋದೆ. ಅವರು ಹರ್ನಿಯಾ ಆಗಿದೆಯೋ ಇಲ್ಲವೋ ಎಂದು ಪರಿಶೀಲಿಸಿ, ನಂತರ "ಹೌದು, ಇದಕ್ಕೆ ಆಪರೇಷನ್ನೇ ಮಾಡಬೇಕು. ತುಂಬಾ ಹಳೇದು ಇದು, ಇಷ್ಟು ತಡ ಯಾಕೆ ಮಾಡಿದಿರಿ? ನಿಮ್ಮ ಬೀಜಕ್ಕೆ ತೊಂದರೆ ಆಗಿರುವುದೂ ನಿಮಗೆ ಗೊತ್ತಾಗಿಲ್ಲವೇ? ಅಷ್ಟು ಬೇಜವಾಬ್ದಾರಿಯೇ?" ಎಂದು ಬೈದರು. ಅಲ್ಲಿ ಬೇರೆ ಪೇಷಂಟುಗಳಿದ್ದುದರಿಂದ ನನಗೆ ಸ್ವಲ್ಪ ಮುಜುಗರವೆನ್ನಿಸಿತು. ಅವರಿಗೂ ಅದು ಗೊತ್ತಾಯಿತೆನಿಸುತ್ತೆ, ಮುಂದಿನ ವಾಕ್ಯದಲ್ಲಿ ಬೀಜ ಎನ್ನುವುದರ ಬದಲು ವೃಷಣ ಎಂದು ಬಳಸಿದರು. ಕೇಳಲು ಸ್ವಲ್ಪ ಸಮಾಧಾನಕರವಾಯಿತು. "ಹೌದು, ವೃಷಣದ ಭಾಗ ನೋವಾಗುತ್ತಿತ್ತು. ಹೇಗೋ ತಡೆದುಕೊಂಡಿದ್ದೆ" ಎಂದೆ.

"ಅದರಿಂದ ನೀವೇನೂ ಸಾಯುವುದಿಲ್ಲ, ಆದರೆ ಅನಾರೋಗ್ಯ. ನೋಡಿ, ಈಗ ಆಪರೇಷನ್ ಮಾಡಲೇ ಬೇಕು. ಅವರು ಕರುಳಿನ ಭಾಗವನ್ನು ಮೇಲೆಳೆದು ಅದು  ವೃಷಣಕ್ಕೆ ಜಾರದ ಹಾಗೆ ಮೆಷ್ ಹಾಕುತ್ತಾರೆ. ಮುಂಚೆಯೇ ಬಂದಿದ್ದರೆ, ಔಷಧಿಯಲ್ಲಿಯೇ ಗುಣ ಪಡಿಸಬಹುದಾಗಿತ್ತು" ಎಂದರು. ಬೆಂಗಳೂರಿನ ಆಯುರ್ವೇದ ವೈದ್ಯರ ವಿಷಯ ಹೇಳಿದೆ. "ಪರೀಕ್ಷೆ ಮಾಡದೆ ಅದು ಹೇಗೆ ಹೇಳುತ್ತಾರೆ? ಇದೇನು ಜ್ವರವೇ? ನಿಂತರೆ ಬೀಜವು ಭಾರವಾಗುತ್ತದೆ, ಕರುಳು ಕೆಳಗೆ ಜಾರಿಕೊಂಡು ಬಂದು ಬೀಜದ ಒಂದು ಭಾಗ ಗಟ್ಟಿ ಆಗುತ್ತದೆ, ಮಲಗಿದರೆ ಅದು ಮೇಲೆ ಹೋಗಿ ಸೊಂಟದ ಭಾಗ ಗಟ್ಟಿ ಆಗುತ್ತದೆ. ಈ ಪರೀಕ್ಷೆ ಮಾಡಿಯೇ ತೀರ್ಮಾನಕ್ಕೆ ಬರಬೇಕು" ಎಂದರು. ಅಲ್ಲಿದ್ದ ಪೇಷಂಟುಗಳು ಮುಸುಮುಸು ನಕ್ಕರು. ನನಗೆ ಮತ್ತೆ ಮುಜುಗರವಾಯಿತು. ಅವರು ಆ ಪೇಷಂಟುಗಳ ಕಡೆ ನೋಡಿದಾಕ್ಷಣವೇ ತಮ್ಮ ಅಪರಾಧವು ಅರಿವಾಯಿತೆಂಬಂತೆ ಸುಮ್ಮನಾದರು. "ಆಪರೇಷನ್ನು ಮಾಡಿಸಿಕೊಳ್ಳಿ ನಿಮ್ಮೂರಲ್ಲೇ, ಆಸ್ಪತ್ರೆಯಲ್ಲಿರುವವರೆಗೂ ಅವರು ಕೊಡುವ ಔಷಧಗಳನ್ನೆಲ್ಲ ತೆಗೆದುಕೊಳ್ಳಿ, ನಂತರ ನನಗೆ ಕರೆ ಮಾಡಿ, ಏನು ಮಾಡಬೇಕೆಂದು ಹೇಳುತ್ತೇನೆ" ಎಂದರು ಐತಾಳರು. ನಾನು ಸರಿಯೆಂದು ತಲೆಯಾಡಿಸಿ ಬೆಂಗಳೂರಿಗೆ ವಾಪಸಾದೆ.

ನನ್ನ ಕಿಬ್ಬೊಟ್ಟೆ ನೋವು ಹೆಚ್ಚುತ್ತಲೇ ಇತ್ತು. ಒಂದು ತಿಂಗಳು ಶಾಲೆಗೆ ರಜೆ ಹಾಕಿ ಇಲ್ಲಿ, ಬೆಂಗಳೂರಿನಲ್ಲಿ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತೋರಿಸಲು ಹೋದೆ. ಆ ಆಸ್ಪತ್ರೆಯ ಮುಖ್ಯ ವೈದ್ಯರು "ಏನಾಗ್ತಿದೆ ನಿಮಗೆ?" ಎಂದು ಕೇಳಿದರು. ನಾನು ಇವರಿಗೆ ಸುಲಭವಾಗಲೆಂದು "ಹರ್ನಿಯಾ ಆಗಿದೆ!" ಎಂದೆ. ಅದಕ್ಕೆ ಅವರು ನನ್ನ ಮೇಲೆ ಸಿಟ್ಟಾಗಿಬಿಟ್ಟರು. "ನಿಮಗೆ ಏನಾಗಿದೆ ಅಂತ ನಾನ್ ಹೇಳ್ತೀನಿ, ನೀವ್ ಹೇಳ್ಬಾರ್ದು. ಏನಾಗ್ತಿದೆ ಅಂತ ಮಾತ್ರ ಹೇಳಿ." ಎಂದು ಬೈದರು. ನಾನು ನನ್ನ ಪರಿಸ್ಥಿತಿಯನ್ನು ವಿವರಿಸಿದ ನಂತರ ಐತಾಳರು ಮಾಡಿದ ಪರೀಕ್ಷೆಯನ್ನೇ ಇವರೂ ಮಾಡಿದರು. "ನಿಮಗೆ ಹರ್ನಿಯಾ ಆಗಿದೆ." ಎಂದು ಘೋಷಿಸಿದರು. "ನಾನೇನು ಆಗಲೇ ತಮಿಳಿನಲ್ಲಿ ಹೇಳಿದೆನೇ?" ಎಂದುಕೊಂಡೆ ಮನಸ್ಸಿನಲ್ಲೇ. ಅಲ್ಲಿಯೇ ಶಸ್ತ್ರ ಚಿಕಿತ್ಸೆ ವೈದ್ಯರು  ಬಂದು ನನ್ನನ್ನು ಪರಿಶೀಲಿಸಿ ಹೋದರು. ಅದಾದ ಕೆಲವೇ ಹೊತ್ತಿನಲ್ಲಿ ನನ್ನನ್ನು ಅಡ್ಮಿಟ್ ಮಾಡಿಕೊಂಡರು.  ಆಸ್ಪತ್ರೆ ಬಟ್ಟೆಗಳು ನನ್ನನ್ನಾವರಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. "ನಾಳೆಯವರೆಗೂ ಆಪರೇಷನ್ನು ಮಾಡುವುದಿಲ್ಲ - ಒಂದು ದಿನ ಪೂರ್ತಿ ಅಬ್ಸರ್ವೇಷನ್ ಅಲ್ಲಿಟ್ಟಿರ್ತೀವಿ" ಎಂದರು ನನ್ನನ್ನು ಪರಿಶೀಲಿಸಿದ ವೈದ್ಯರು.  ನಾನೊಬ್ಬ ಯಂತ್ರವೆಂಬಂತೆ ಭಾಸವಾಯಿತಾದರೂ ಒಂದು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದೆಂದುಕೊಂಡೆ. ಆದರೆ ವಿಶ್ರಾಂತಿಯೆಲ್ಲಿಂದ ಬಂತು, ನಾನಿರುವುದು ಅವರ ಅಬ್ಸರ್ವೇಷನ್ನಿನಲ್ಲಷ್ಟೆ? ಅರ್ಧರ್ಧ ಗಂಟೆಗೊಬ್ಬೊಬ್ಬರು ಬಂದು "ಏನಾಗಿದೆ?" ಎಂದು ಕೇಳುತ್ತಿದ್ದರು. ಅವರ ಬಳಿ ನನ್ನ ಫೈಲಿದ್ದರೂ ನಾನು ಸತ್ಯವನ್ನೇ ಹೇಳುತ್ತಿದ್ದೇನೋ ಇಲ್ಲವೋ ಎಂದು ಪರೀಕ್ಷಿಸುವಂತಿತ್ತು ಅವರ ಪ್ರಶ್ನೆಗಳು. ಭಗವದ್ಗೀತೆಯ ಪುಸ್ತಕ ತಂದು ನನ್ನ ಮುಂದಿಟ್ಟು "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವುದೆಲ್ಲಾ ಸತ್ಯ" ಎಂದು ನನ್ನಿಂದ ಪ್ರಮಾಣವಚನ ತೆಗೆದುಕೊಳ್ಳಲಿಲ್ಲ ಅಷ್ಟೆ.

ನನ್ನನ್ನು "ಅಬ್ಸರ್ವ್" ಮಾಡಲು ಬಂದವರೆಲ್ಲರೂ ಬಿಳಿ ಕೋಟು ಧರಿಸಿದ್ದರಾದ್ದರಿಂದ ಎಲ್ಲರೂ ವೈದ್ಯರೇ ಎಂಬ ನಿರ್ಣಯಕ್ಕೆ ನಾನು ಬಂದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ, ಬಿಳಿ ಕೋಟು ಧರಿಸಿರುವವರೆಲ್ಲಾ ವೈದ್ಯರಲ್ಲ ಎಂಬ ಸತ್ಯವು ನನಗೆ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಿಳಿ ಕೋಟು ಧರಿಸಿ ನನ್ನನ್ನು ಸುಮ್ಮನೆ ಇಣುಕಿ ಹೋದರೂ ಸಹ ನನ್ನ ಬಿಲ್ಲಿನಲ್ಲಿ ಒಂದಷ್ಟು ಫೀಸು ಬೀಳುವುದು ಸ್ವಲ್ಪ ಘೋರವಾದ ಸತ್ಯವೆನ್ನಿಸಿತು. ಒಬ್ಬರು ಬಂದು "ನಾನು ಡಯಟೀಷಿಯನ್ನು. ನೀವು ಇಲ್ಲಿರುವವರೆಗೂ ತಿಳಿ ಸಾರನ್ನ, ಮೊಸರನ್ನ ಅಷ್ಟೇ ತಿನ್ನಬೇಕಾಗುತ್ತೆ. ಖಾರ ತಿನ್ನಬಾರದು, ಹಣ್ಣುಗಳನ್ನು, ಜ್ಯೂಸನ್ನು ಇಂತಿಂಥಾ ಸಮಯಕ್ಕೆ ಸರಿಯಾಗಿ ಕಳಿಸಿಕೊಡುತ್ತೇವೆ" ಎಂದು ವೇಳಾಪಟ್ಟಿಯನ್ನು ಹೇಳಿದರು. ನಾನು ಮನೆಯಲ್ಲಿ ತಿನ್ನುವುದನ್ನೇ ಇವರಿಂದ "ತಿನ್ನಿ" ಎಂದು ಹೇಳಿಸಿಕೊಳ್ಳಲು ಫೀಸು ಕೊಡಬೇಕಾಯಿತು. ಸ್ವಲ್ಪ ಸಮಯದ ನಂತರ ಇನ್ನೊಬ್ಬ ಬಿಳಿ ವಸ್ತ್ರಧಾರಿ ಬಂದರು. ನನಗೆ ಅಷ್ಟು ಹೊತ್ತಿಗೆ ಸ್ವಲ್ಪ ನಿದ್ದೆ ಹತ್ತಿತ್ತು. ಎಬ್ಬಿಸಿ, "ನಾನು ಅನೆಸ್ತೇಷಿಯಾ ಡಾಕ್ಟರು" ಎಂದು ಪರಿಚಯಿಸಿಕೊಂಡರು. ನಾನು ಈಗಲೇ ಅನೆಸ್ತೇಷಿಯಾ ಕೊಟ್ಟುಬಿಡುತ್ತಾರಾ ಎಂದು ಗಾಬರಿಯಾದೆ. ಅವರು ನನ್ನನ್ನು ಸುಮ್ಮನೆ ನೋಡಿಕೊಂಡು ಹೋಗಲು ಬಂದಿದ್ದರಂತೆ. ಅಲ್ಲದೆ ಒಂದಷ್ಟು ಫಾರಂಗಳನ್ನೂ ತಂದಿದ್ದರು, ನನ್ನಿಂದ ಸಹಿ ಹಾಕಿಸಿಕೊಳ್ಳಲು. "ನಿಮಗೆ ಯಾವ ರೀತಿಯ ಅನೆಸ್ತೇಷಿಯಾ ಬೇಕು? ಸ್ಪೈನಲ್ಲೋ, ಜೆನೆರಲ್ಲೋ?" ಎಂದು ಕೇಳಿದರು. ನಾನು ಚಕಿತನಾಗಿ "ನೀವು ಅನೆಸ್ತೇಷಿಯಾ ಡಾಕ್ಟರಲ್ಲವೇ?" ಎಂದು ಕೇಳಿದೆ. ಅವರು "ಹೌದು, ಯಾಕೆ ಡೌಟು?" ಎಂದರು. "ಮತ್ತೆ, ನನ್ನ ಕೇಳಿದರೆ ನನಗೇನು ಗೊತ್ತು, ಯಾವ ಆಪರೇಷನ್ನಿಗೆ ಜೆನೆರಲ್ಲು, ಯಾವುದಕ್ಕೆ ಸ್ಪೈನಲ್ಲು ಅಂತ? ಯಾವುದು ಸರಿಯೆನ್ನಿಸುತ್ತೋ ಅದನ್ನು ಕೊಡಿ, ನೀವು ಕೊಟ್ಟಿದ್ದನ್ನು ನಾನು ತೆಗೆದುಕೊಳ್ಳುತ್ತೇನೆ" ಎಂದೆ. ಅವರಿಗೆ ಬೇಸರವಾಯಿತೇನೋ ನಾನು ಹೇಳಿದ್ದು. "ಹಾಗಲ್ಲ ಸಾರ್, ನಾವು ಹಾಗೆ ನಿಮ್ಮ ಒಪ್ಪಿಗೆ ಇಲ್ಲದೆ ಕೊಡೋಕೆ ಆಗಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿಕೊಂಡರು. ನಾನು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಂಡೆ: "ನನಗೆ ಸ್ಪೈನಲ್ಲಾದರೇನು, ಜೆನೆರಲ್ ಆದರೇನು, ಯಾವುದೂ ಅನುಭವವಿಲ್ಲ. ಯಾವುದಾದರೂ ಮೊದಲ ಅನುಭವವೇ. ಜೆನೆರಲ್ಲೇ ಕೊಡಲಿ" ಎಂದುಕೊಂಡು "ಜೆನೆರಲ್ ಅನೆಸ್ತೇಷಿಯಾ ಕೊಡಿ" ಎಂದೆ. ಅವರು ನನ್ನಿಂದ ಸಹಿ ಪಡೆದುಕೊಂಡು ಹೊರಟುಹೋದರು.

ಸಂಜೆಯ ವೇಳೆಗೆ ಒಂದು ಪುಸ್ತಕವನ್ನೋದುತ್ತ ಮಲಗಿದ್ದೆ. ಒಬ್ಬ ಹಿರಿಯ ಸ್ತ್ರೀ ವೈದ್ಯರು ಬಂದರು. ಜೊತೆಗೆ ಇನ್ನೊಂದಷ್ಟು ಕಿರಿಯ ಹುಡುಗಿಯರು ಬಿಳಿ ಕೋಟು ಧರಿಸಿದ್ದವರೂ ಬಂದರು. ನೋಡಿದ ತಕ್ಷಣ ಗೊತ್ತಾಯಿತು - ಟೀಚರು ತಮ್ಮ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬಂದಿದ್ದಾರೆಂದು. ನಾನು ಅವರನ್ನು ಗಮನಿಸಿಲ್ಲವೇನೋ ಎಂಬಂತೆ ಪುಸ್ತಕವನ್ನೋದಲು ಮುಂದುವರಿಸಿದೆ. ಆ ಹಿರಿಯ ಮಹಿಳೆ "ನಿಮ್ಮ ಪ್ಯಾಂಟ್ ಸ್ವಲ್ಪ ಲೂಸ್ ಮಾಡಿ" ಎಂದರು. ನನಗೆ ಸಂಕೋಚವೆನಿಸಿತು. ಆದರೂ ವೈದ್ಯರಲ್ಲವೇ, ಅವರು ಹೇಳಿದ ಹಾಗೆ ಮಾಡಬೇಕು. ಮಾಡಿದೆ. ಆ ವಿದ್ಯಾರ್ಥಿನಿಯರಿಗೆ ಹರ್ನಿಯಾ ಪಾಠ ಮಾಡಲು ನನ್ನ ಗುಪ್ತಾಂಗಗಳು ಟೀಚಿಂಗ್ ಏಯ್ಡ್ ಆಗಿದ್ದವು. ಅವರು ಈ ಪಾಠದ ಡೆಮಾನ್ಸ್ಟ್ರೇಷನ್ನನ್ನು ಮುಗಿಸಿಕೊಂಡು ಕಿಲಕಿಲನೆ ನಗುತ್ತಾ ತೆರಳಿದಂತೆ ನಾನು ನನ್ನ ಪ್ಯಾಂಟನ್ನು ಮೇಲೇರಿಸಿಕೊಂಡೆ. ಮತ್ತೆ ಸ್ವಲ್ಪ ಹೊತ್ತಾದ ಮೇಲೆ, ಇನ್ನೊಂದು ಗುಂಪು ಬಂದಿತು. "ಸರ್, ಸ್ವಲ್ಪ ಪ್ಯಾಂಟ್ ಬಿಚ್ಚಿ.." ಮತ್ತೆ ಪಾಠ, ಮತ್ತೆ ಡೆಮಾನ್ಸ್ಟ್ರೇಷನ್ನು, ಮತ್ತೆ ಪ್ರದರ್ಶನ. ಇನ್ಯಾರಾದರೂ ಮತ್ತೆ ಬರುವುದರೊಳಗೆ ನಿದ್ದೆ ಮಾಡಿಬಿಡಬೇಕು ಎಂದು ಬರದಿದ್ದರೂ ಬಲವಂತವಾಗಿ ಮಲಗಿಬಿಟ್ಟೆ.

ಮಾರನೆಯ ದಿನ ಬೆಳಿಗ್ಗೆ ನನ್ನನ್ನು ಮೊದಲ ದಿನ ಪರಿಶೀಲಿಸಿದ ವೈದ್ಯರು ಬಂದು "ಎಕ್ಸ್ ರೇ, ಈ.ಸೀ.ಜಿ. ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ, ಆಮೇಲೆ ಆಪರೇಷನ್ನು" ಎಂದರು. ಎಕ್ಸ್ ರೇ ಆಯಿತು. ಈ.ಸೀ.ಜಿ. ಆಯಿತು. ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಚೆನ್ನಾಗಿ ನೀರು, ಎಳನೀರು, ಜ್ಯೂಸುಗಳನ್ನು ಕುಡಿದು ಬ್ಲ್ಯಾಡರನ್ನು ಭರ್ತಿ ಮಾಡಿಟ್ಟುಕೊಂಡೆ. ಲ್ಯಾಬಿಗೆ ಹೋಗಿ ವಿಚಾರಿಸಿದೆ. ಅವರು "ಡಾಕ್ಟರು ಬರಲು ಇನ್ನೂ ಒಂದು ಗಂಟೆಯಾಗುತ್ತೆ ಕೂತ್ಕೊಳ್ಳಿ" ಎಂದರು. ನಾನು "ಕೂತ್ಕೊಳೋ ಅಷ್ಟು ಶಕ್ತಿ ಇಲ್ಲ ನನಗೆ, ಚೆನ್ನಾಗಿ ಕುಡಿದುಬಿಟ್ಟಿದ್ದೇನೆ" ಎಂದೆ. ಅವರು "ನಾವೇನ್ ಮಾಡೋಣ ಅದಕ್ಕೆ, ಕೂತ್ಕೊಳಿ ಇಲ್ಲಾಂದ್ರೆ ವಾರ್ಡಿಗೆ ಹೋಗಿ" ಎಂದು ದಬಾಯಿಸಿದರು. ನನ್ನ ಕಷ್ಟ ನನಗೆ ಗೊತ್ತು. ರೇಡಿಯಾಲಜಿಸ್ಟು ಒಬ್ಬರು ಕಂಡರು, ಅವರನ್ನು ಕೇಳಿದೆ, "ನನಗೆ ತುಂಬಾ ಅವಸರ ಆಗ್ತಿದೆ, ಹೋಗ್ಬೋದಾ ಟಾಯ್ಲೆಟ್ಟಿಗೆ?" ಎಂದು. ಅದಕ್ಕವರು "ಪೂರ್ತಿ ಹೋಗಬೇಡಿ, ಒಂದು ಚೂರು ಹೋಗಿ ಬಂದ್ಬಿಡಿ" ಎಂದರು. "ಈ ವೈದ್ಯರಿಗೆ ಮನುಷ್ಯತ್ವವೇ ಇಲ್ಲ" ಎಂದು ಖಚಿತವಾಯಿತು. ಒಂದು ವೇಳೆ ನಾನು ನನ್ನ ಬ್ಲ್ಯಾಡರ‍್-ನ್ನು ಖಾಲಿ ಮಾಡಿಕೊಂಡಲ್ಲಿ ನನ್ನ ಆಪರೇಷನ್ನು ಒಂದು ದಿನ ವಿಳಂಬವಾಗುತ್ತಿತ್ತು. ಆದರಾಗಲಿ, ಈಗ ಸಾಯುವುದಕ್ಕಿಂತ ಒಂದು ದಿನ ತಡವಾಗಿ ಆಪರೇಷನ್ ಮಾಡಿಸಿಕೊಂಡು ಬದುಕುಳಿದರೆ ಸಾಕೆಂದು ಮನಸ್ಸು ಮಾಡುವಷ್ಟರಲ್ಲಿ ಪುಣ್ಯಾತ್ಮ ಡಾಕ್ಟರು ಬಂದರು. ನಾನು ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿಯೂ ಇರಲಿಲ್ಲ.

ಮಧ್ಯಾಹ್ನದ ವೇಳೆಗೆ ನನ್ನನ್ನು ಆಪರೇಷನ್ ಥಿಯೇಟರಿಗೆ ರವಾನಿಸಲಾಯಿತು. ಕೆಲವೇ ಕ್ಷಣಗಳ ಮುನ್ನ ಒಂದಷ್ಟು ಪತ್ರಗಳಿಗೆ ನನ್ನಿಂದ ಸಹಿ ಹಾಕಿಸಿಕೊಂಡಿದ್ದರು. "ನನಗೇನಾದರೂ ಹೆಚ್ಚು-ಕಮ್ಮಿಯಾದರೆ ನಾನೇ ಜವಾಬ್ದಾರಿ" ಎಂಬ ಮಾತಿಗೆ ನಾನು ಸಹಿ ಹಾಕಬೇಕಿತ್ತು. ಈ ರೀತಿ ಸಹಿಯನ್ನು ಅನೇಕ ಬಾರಿ ಮಾಡಿದ್ದೇನೆ. ಯಾವುದೇ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗಲೂ ಇದೇ ರೀತಿಯಲ್ಲವೇ ನಾನು ಸಹಿ ಹಾಕುತ್ತಿದ್ದುದು? ನಾನು ಆಯೋಜಿಸುತ್ತಿದ್ದ ಎಲ್ಲಾ ಸಾಹಸ ಕ್ರೀಡೆಗಳ ಸ್ಪರ್ಧಿಗಳಿಂದಲೂ ಇದೇ ರೀತಿಯಲ್ಲವೇ ನಾನು ಸಹಿ ಹಾಕಿಸಿಕೊಳ್ಳುತ್ತಿದ್ದುದು? ನನಗೆ ಇದೇನೂ ಹೊಸತಲ್ಲ. ಆಪರೇಷನ್ ಥಿಯೇಟರಿನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲವೇನೋ ಎಂಬಂತೆ ಅನಾಥನಾಗಿ ಸ್ಟ್ರೆಚರ್ ಮೇಲೆ ಮಲಗಿಕೊಂಡಿದ್ದೆ. ಯಾವುದೋ ಬೇರೆಯದೇ ಲೋಕಕ್ಕೆ ನನ್ನನ್ನು ಸೆಳೆದೊಯ್ದಿದ್ದರಿಂದ ಅದಕ್ಕೆ ಹೊಂದಿಕೊಳ್ಳಲಿ ಎಂದು ಬಹುಶಃ ನನ್ನನ್ನು ಬಿಟ್ಟು ಹೊರಟುಹೋದರೇನೋ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡೆ. ಸುಮಾರು ಅರ್ಧಗಂಟೆಯಾದ ಮೇಲೆ ಮತ್ತೆ ಆ ಅನೆಸ್ತೇಷಿಯಾ ವೈದ್ಯರು ಬಂದರು. "ಹ್ಯಾಗಿದ್ದೀರಿ?" ಎಂದವರೇ ನನ್ನ ಉತ್ತರಕ್ಕೂ ಕಾಯದೆ, "ಸೋ, ನಿಮಗೆ ಜೆನರಲ್ ಅನೆಸ್ತೇಷಿಯಾ ಓಕೇನಾ?" ಎಂದರು. ಇದರ ಉತ್ತರಕ್ಕೂ ಕಾಯದೆ ತಮ್ಮ ಪಾಡಿಗೆ ತಾವು ಹೊರಟುಹೋದರು. ಹಿಂದಿನ ದಿನದ ನನ್ನ ಉತ್ತರಕ್ಕೆ ಇವರು ಬೇಸರ ಪಟ್ಟುಕೊಂಡಿದ್ದಾರೇನೋ ಎಂದುಕೊಂಡೆ. "ಯಾವುದಾದರೆ ನನಗೇನಂತೆ!" ಎಂದು ಸುಮ್ಮನಾದೆ. ಶಸ್ತ್ರಚಿಕಿತ್ಸೆಯ ವೈದ್ಯರು ಬಂದರು. ನನ್ನನ್ನು ಚಿರಪರಿಚಿತ ವ್ಯಕ್ತಿಯಂತೆ ಮಾತನಾಡಿಸಿದ್ದು ನನಗೆ ಸಂತಸವನ್ನೇನೋ ತಂದಿತು - ಅದರ ಜೊತೆಗೆ ಗಾಬರಿಯೂ ಆಯಿತು - "ಇವರು ಏಕೆ ನನ್ನನ್ನು ಇವರ ಆಜನ್ಮ ಪೇಷಂಟಿನಂತೆ ತಿಳಿದಿದ್ದಾರೆ?" ಎಂದು. ನಾನು ಅವರನ್ನು ಕೇಳಿದೆ, "ಡಾಕ್ಟ್ರೇ, ಆಪರೇಷನ್ನು ಎಷ್ಟು ಹೊತ್ತು ಹಿಡಿಯುತ್ತೆ? ನಾನು ನೋಡಿಕೊಳ್ಳಬಹುದೇ?" ಎಂದು. ನನಗೆ ಇದರಲ್ಲಿ ಮೊದಲಿನಿಂದಲೂ ಆಸಕ್ತಿ. ನನ್ನ ಅಂಗಾಗಗಳೊಳಗಿನ ವಿನ್ಯಾಸವನ್ನು ನೋಡಿಕೊಳ್ಳಬೇಕೆಂಬ ಆಸೆ ನನಗೆ ಈಗಲೂ ಇದೆ. ಕಾಲೇಜಿನಲ್ಲಿ ಜಿರಲೆಗಳನ್ನು, ಕಪ್ಪೆಗಳನ್ನು ಕತ್ತರಿಸಿದ ನಂತರ ಹುಟ್ಟಿಕೊಂಡ ಕುತೂಹಲವಿದು. "ನೀವು ಮಲಗಿಕೊಂಡಿರುತ್ತೀರ, ಹಾಗಾಗಿ ಇದು ಸಾಧ್ಯವಿಲ್ಲ" ಎಂದು ಸರ್ಜನ್ನು ನನ್ನ ಆಶಾಭಂಗ ಮಾಡಿದರು.

ಆಪರೇಷನ್ ಟೇಬಲ್ ಮೇಲೆ ನನ್ನನ್ನು ಮಲಗಿಸಿ, ತಮ್ಮೆಲ್ಲ ಸಿದ್ಧತೆಯನ್ನು ಮಾಡಿಕೊಂಡು, ಇಂಜೆಕ್ಷನ್ನನ್ನು ಆಕಾಶಾಕ್ಕೆ ಗುರಿಯಿಡುವ ಬಂದೂಕದಂತೆ ಗುರಿಯಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ನಟಿಸುತ್ತ "ಒಂದು ಇಂಜೆಕ್ಷನ್ ಕೊಡ್ತೀನಿ, ನಿಮಗೆ ನಿದ್ದೆ..........." ಎಂದು ಸರ್ಜನ್ ಹೇಳುತ್ತಿದ್ದಂತೆಯೇ, ತಮ್ಮ ವಾಕ್ಯವನ್ನು ಮುಗಿಸುವಷ್ಟರಲ್ಲಿಯೇ ನನಗೆ ಮತ್ತು ಬಂದು ನಿದ್ದೆಗೆ ಜಾರಿಬಿಟ್ಟೆ. ನಂತರ ಅದೇನಾಯಿತೋ ಗೊತ್ತಿಲ್ಲ. ನನಗೆ ಯಾವುದೋ ಸಂಗೀತ ಕೇಳಿಸುತ್ತಿತ್ತು (ಅಥವಾ ಕೇಳಿಸಿದಂತೆ ಕನಸಾಗುತ್ತಿತ್ತು). ಯಾರು ಯಾರೋ ಮಾತನಾಡಿದಂತೆ, ಜಗಳವಾಡಿದಂತೆ ಅನ್ನಿಸುತ್ತಿತ್ತು. ಕಲಾಸಿಪಾಳ್ಯದ ಗಿಜಿಗಿಜಿಯಲ್ಲಿ ನಾನಿದ್ದೇನೆಂಬ ಭಾಸವಾಗುತ್ತಿತ್ತು. ಹೊಟ್ಟೆಯ ಕೆಳಭಾಗದಲ್ಲಿ ಸಹಿಸಲಾಧ್ಯವಾದ ನೋವಾದಂತಾಯಿತು. ನನಗೆ ಎಚ್ಚರವಾಗಿದೆಯೆಂದೆನಿಸಿತು. ಜ್ಯೂನಿಯರ್ ಡಾಕ್ಟರುಗಳು ಸರ್ಜನ್ನುಗಳಿಂದ ಬೈಯ್ಯಿಸಿಕೊಳ್ಳುತ್ತಿದ್ದುದು ನಿಜವೆಂದೆನಿಸಿತು. "ನೋವಾಗ್ತಾ ಇದೆ" ಎಂದೆ. ತಡೆಯಲು ಸಾಧ್ಯವಾಗುತ್ತಿತ್ತೇನೋ ಗೊತ್ತಿಲ್ಲ. "ಇರಿ, ಇನ್ನೊಂದ್ ಡೋಸ್ ಇಂಜೆಕ್ಷನ್ ಕೊ......." ಮತ್ತೆ ನಿದ್ದೆಗೆ ಜಾರಿದೆ. ಯಾವುದೋ ಬೆಟ್ಟದಿಂದ ಬಣ್ಣ ಬಣ್ಣದ ಗ್ಲೈಡರ್ ಕಟ್ಟಿಕೊಂಡು ಕೆಳಗೆ ಜಿಗಿದು ಹಾರುತ್ತಾ ಇದ್ದಂತಾಯಿತು. ಮತ್ತೆ ಎಚ್ಚರವಾದಾಗ ಆಪರೇಷನ್ ಟೇಬಲ್ ಇಂದ ಸ್ಟ್ರೆಚರಿಗೆ ನನ್ನ ವರ್ಗಾಯಿಸುತ್ತಿದ್ದರು. "ಆಗೋಯ್ತಾ? ನಾನು ಜಂಪ್ ಮಾಡ್ತಾ ಇದ್ದೆ.." ಎಂದೆ. ಸರ್ಜನ್ ನಕ್ಕರೋ ಏನೋ ಗೊತ್ತಾಗಲಿಲ್ಲ. "ಹೌದಾ, ಈಗ ಮಲಕ್ಕೊಳಿ" ಎಂದದ್ದಷ್ಟೇ ನೆನಪು. ಮಲಗಿಬಿಟ್ಟೆ.

ತಾತ್ಕಾಲಿಕ ಐ.ಸಿ.ಯು.ಗೆ ನನ್ನನ್ನು ವರ್ಗಾಯಿಸಿದ್ದರು. ಜ್ಞಾನ ಬರುವ ಹೊತ್ತಿಗೆ ಸುಮಾರು ಗಂಟೆಗಳ ಕಾಲ ಹಿಡಿಯಿತೆನ್ನಿಸುತ್ತೆ. ಎಚ್ಚರವಾದಾಗ ವಿಪರೀತ ಬಾಯಾರಿಕೆ. ಅಲ್ಲಿದ್ದ ವೈದ್ಯರನ್ನು ನೀರು ಬೇಕೆಂದು ಕೇಳಿದೆ. ನಾನು ಅವರ ಆಸ್ತಿಯನ್ನು ಕೇಳಿದೆನೇನೋ ಅನ್ನುವಷ್ಟು ಸಿಟ್ಟಾದರು. "ಕೊಡಲ್ಲ ಅಂದ್ರೆ ಕೊಡಲ್ಲ." ಎಂದು ಹೋಗಿಬಿಟ್ಟರು. ಇವರು ಇದ್ಯಾಕೆ ಹೀಗೆಂದರು ಎಂದು ಯೋಚಿಸುವಷ್ಟರಲ್ಲೇ ಮನವರಿಕೆಯಾಯಿತು, ನನ್ನ ಕಾಲುಗಳೇ ಇಲ್ಲ! ಕಾಣಿಸುತ್ತಿದೆ, ಆದರೆ ಅವು ನನ್ನ ಕಾಲುಗಳೇ ಅಲ್ಲವೇನೋ ಎನ್ನುವಂತಾಗಿಬಿಟ್ಟಿದೆ. ಮತ್ತೆ ವೈದ್ಯರು ಬಳಿ ಬಂದು "ನೀವು ರೆಸ್ಟ್ ತೊಗೊಳಿ. ಆಮೇಲೆ ನೀರು ಕೊಡ್ತೀವಿ. ಅನೆಸ್ತೇಷಿಯಾ ಕೊಟ್ಟಿರುವಾಗ ನೀರು ಕುಡಿಯಬಾರದು." ಎಂದರು. "ಅವು ನನ್ನ ಕಾಲುಗಳೇ?" ಎಂದು ಕೇಳಿದೆ. "ಹೌದು. ನಿಮ್ಮದೇ. ಮರಗಟ್ಟಿರುತ್ತೆ. ಸ್ವಲ್ಪ ಹೊತ್ತಾದ ಮೇಲೆ ಸರಿ ಹೋಗುತ್ತೆ. ಅಲ್ಲಿಯವರೆಗೂ ನೀವು ಇಲ್ಲೇ ಇರುತ್ತೀರಿ. ಆಮೇಲೆ ವಾರ್ಡಿಗೆ ಹಾಕುತ್ತೇವೆ." ಎಂದರು. ನನ್ನ ಕಾಲುಗಳು ಜೀವಂತವಾಗಿವೆಯೆಂದು ಸಂತಸವಾಯಿತು. "ತುಂಬಾ ಬಾಯಾರಿಕೆ." ಎಂದು ಕಷ್ಟ ತೋಡಿಕೊಂಡೆ. "ನೀರು ಕೊಡಲ್ಲ, ಈಗ." ಎಂದು ಹೇಳಿ ನನ್ನ ಪಕ್ಕದಲ್ಲಿ ಮಲಗಿದ್ದ ಪೇಷಂಟಿಗೆ "ಕಾಫಿ ಕುಡೀತೀರೋ ಟೀ ಕುಡೀತೀರೋ?" ಎಂದು ಕೇಳಿದರು. "ನಾ ಮಾಡಿದ ಕರ್ಮ ಬಲವಂತವಾದೊಡೆ ನೀನೇನು ಮಾಡಬಲ್ಲೆಯೋ ದೇವ?" ಎಂದು ಹಾಡಿಕೊಂಡು ಸುಮ್ಮನಾದೆ.

ವಾರ್ಡಿಗೆ ಹೋದ ಮೇಲೆ ಅದೆಷ್ಟು ನಿದ್ದೆ ಮಾಡಿದೆನೋ ಗೊತ್ತಿಲ್ಲ. ಆದರೆ ವೈದ್ಯರು ನಮ್ಮನ್ನು ನಿದ್ದೆ ಮಾಡಲು ಎಲ್ಲಿ ಬಿಡುತ್ತಾರೆ? ಒಬ್ಬರಲ್ಲ ಒಬ್ಬರು ಸುಮ್ಮನೆ ಬಂದು ನನ್ನನ್ನು ಎಬ್ಬಿಸಿ "ಹೇಗಿದ್ದೀರಿ?" ಎಂದು ಕೇಳಿ ಕೇಳಿ ಹೋಗುತ್ತಿದ್ದರು. ಸರ್ಜನ್ ಕೂಡ ಬಂದು ಮಾತನಾಡಿಸಿಕೊಂಡು ಹೋದರು. ಅವರು ಹೊರಹೋಗುತ್ತಿದ್ದಂತೆಯೇ ನಾನು ನಿದ್ರೆಗೆ ಜಾರಿದೆ. ಏನೋ ಜಗಳದ ಸದ್ದು ಕೇಳಿಸಿತು. ಎಚ್ಚರವಾಯಿತು. ಸರಿಯಾಗಿ ಆಲಿಸಿದೆ. ನಮ್ಮ ಅಮ್ಮನದೇ ಧ್ವನಿ! ಇದೇನು, ಅಮ್ಮ ಯಾರೊಡನೆ ಜಗಳವಾಡುತ್ತಿದ್ದಾರೆ ಎಂದು ಗಾಬರಿಯಾಯಿತು. ಅವರ ಜೊತೆ ಮಾತನಾಡುತ್ತಿದ್ದ ಧ್ವನಿ ಸರ್ಜನ್ನರದಾಗಿತ್ತು! ನನ್ನ ಗಾಬರಿ ಇಮ್ಮಡಿಸಿತು.
"ನಾನು ಅವನ ಅಮ್ಮ!"
"ನೀವು ಡಾಕ್ಟ್ರಾ?"
"ಅಲ್ಲ, ಸಂಗೀತ ಟೀಚರ್ರು."
"ಏನ್ ಆಗ್ಬೇಕಿದೆ ನಿಮಗೆ?"
"ನೀವು ನನ್ನಲ್ಲಿ ವಿಷಯ ಮುಚ್ಚಿಡುತ್ತಿದ್ದೀರ!"
"ಏನ್ ವಿಷ್ಯಾ?"
"ಯಾಕ್ ಹೇಳಲ್ಲ ನಮಗೆ?"
"ಏನ್ ಹೇಳ್ಬೇಕು?"
"ಎಷ್ಟ್ ಹೊಲಿಗೆ ಹಾಕಿದ್ದೀರ ಅವನಿಗೆ?"
..........
ಮೌನ ಆವರಿಸಿತು. ಸರ್ಜನ್ ಹೊರಟುಬಿಟ್ಟರೆನ್ನಿಸುತ್ತೆ. ಅಮ್ಮ ಒಳಗೆ ಬಂದರು. ನಾನು "ಅದೆಷ್ಟೋ ಹೊಲಿಗೆ ಹಾಕಿದ್ದಾರೆ ಬಿಡಮ್ಮಾ" ಎಂದು ಅವರನ್ನು ಸಮಾಧಾನ ಪಡಿಸುವಷ್ಟರಲ್ಲಿ ಮತ್ತೆ ನಿದ್ದೆ ಬಂದುಬಿಟ್ಟಿತು. ಎಚ್ಚರವಾದ ಮೇಲೆ ನನಗೆ ಹಾಕಿದ್ದ ಹೊಲಿಗೆಯನ್ನು ಅಮ್ಮನಿಗೆ ತೋರಿಸಿದೆ. ಅವರಿಗೆ ಸಮಾಧಾನವಾಯಿತೆನ್ನಿಸುತ್ತೆ. "ಓಹ್ ಹಾಕಿದಾರಲ್ಲಾ ಹೊಲಿಗೆಯನ್ನು ಸರೀಗೆ. ನೋವಾಗುತ್ತಿದೆಯಾ ತುಂಬಾ?" ಎಂದು ಕೇಳಿದರು. "ಪರವಾಗಿಲ್ಲ" ಎಂದೆ.

ಇನ್ನೆರಡು ದಿನ ನಾನು ಆಸ್ಪತ್ರೆಯಲ್ಲಿರಬೇಕಿತ್ತು. ನಂತರ ನನ್ನನ್ನು ಬಿಡುಗಡೆ ಮಾಡಬಹುದೆಂದು ಸರ್ಜನ್ ಆಣತಿಯಿತ್ತರು. ಆಗಾಗ್ಗೆ ಯಾವ ಯಾವುದೋ ಇಂಜೆಕ್ಷನ್‍ಗಳನ್ನು ತಂದು ಚುಚ್ಚುತ್ತಿದ್ದರು. ಒಂದೊಂದು ಇಂಜೆಕ್ಷನ್ ಚುಚ್ಚಿದಾಗಲೂ ಸಹ ತಲೆ ಸುತ್ತಿ ಬರುತ್ತಿತ್ತು. ಹೊಸದಾಗಿ ಸೇರಿಕೊಂಡ ನರ್ಸ್ ಒಬ್ಬಳು ನನ್ನ ರಕ್ತದೊತ್ತಡ ಪರೀಕ್ಷಿಸಲು ಬಂದು ಹೇಗೆ ನೋಡಬೇಕೆಂಬುದಕ್ಕೆ ಪರದಾಡುತ್ತಿದ್ದಳು. ಅವಳಿಗೆ ನಾನೇ ಹೇಳಿಕೊಟ್ಟೆ! ಆಪರೇಷನ್ ಥಿಯೇಟರಿನಲ್ಲಿ ಬೈಯಿಸಿಕೊಳ್ಳುತ್ತಿದ್ದ ವೈದ್ಯರು ಬಂದು "ಗ್ಯಾಸ್ ಪಾಸ್ ಮಾಡಿದ್ರಾ?" ಎಂದು ಕೇಳಿದರು. ನಾನು "ಇಲ್ಲ" ಎಂದು ತಲೆಯಾಡಿಸಿದೆ. ಬೇಸರ ಪಟ್ಟುಕೊಂಡು ಹೋದರು. ನಂತರ ಇನ್ನೊಬ್ಬ ನರ್ಸು ಬಂದು ನನಗೆ ಹಾಕಿದ್ದ ಕ್ಯಾಥೆಟರ್ ಆನ್ನು ಬಲವಂತವಾಗಿ ಎಳೆದುಬಿಟ್ಟಳು. ಮರ್ಮಾಂಗದ ನೋವು ಅನುಭವಿಸಿದವನಿಗೆ ಮಾತ್ರವೇ ಗೊತ್ತಾಗುವುದು. ಕ್ರಮೇಣ ನನಗೆ ಹಾಕಿದ್ದ ಡ್ರಿಪ್ಸ್ ಕೂಡ ನಿಲ್ಲಿಸಿದರು. ನಾನು ಮೂತ್ರವಿಸರ್ಜನೆಗೆಂದು ಹೋಗಿ ಬಂದ ಕೆಲವೇ ಹೊತ್ತಿಗೆ ಆ ಬೈಯಿಸಿಕೊಂಡ ವೈದ್ಯರು ಬಂದು "ಯೂರಿನ್ ಪಾಸ್ ಮಾಡಿದ್ರಾ?" ಎಂದು ಕೇಳಿದರು. ನಾನು "ಟಾಯ್ಲೆಟ್‍ಗೆ ಇನ್ನೇನು ಡ್ಯುಯೆಟ್ ಹಾಡೋಕ್ ಹೋಗಿದ್ನಾ?" ಎಂದು ಕೇಳಬೇಕು ಎನ್ನಿಸಿತು. ಆದರೆ "ಹ್ಞೂಂ" ಎಂದು ತಲೆಯಾಡಿಸಿದೆ. ಅವರಿಗೆ ಸ್ವಲ್ಪ ಸಮಾಧಾನ ಆಯಿತು. "ಎಷ್ಟು?" ಎಂದರು. "ಸುಮಾರಾಗೇ ಆಯಿತು! ತೃಪ್ತಿ ಆಗೋ ಅಷ್ಟು!" ಎಂದೆ. ಅವರಿಗೆ ನನ್ನ ಉತ್ತರ ಹಿಡಿಸಲಿಲ್ಲ. "ಎಷ್ಟು ಎಂದರೆ ನನಗೆ ಕರೆಕ್ಟಾಗಿ ಎಷ್ಟು ಮಿಲಿ ಲೀಟರ್ ಎಂದು ಹೇಳಿ." ಎಂದು ರೇಗಿದರು. "ನನಗೆ ಹೇಗೆ ಗೊತ್ತಾಗುತ್ತೆ. ಒಂದು ಲೀಟರ್ರೇ ಹೋಯಿತೇನೋ." ಎಂದೆ. ಅವರಿಗೆ ಸಿಟ್ಟು ಜಾಸ್ತಿಯಾಯಿತು. ಶೌಚಾಲಯದ ಒಳಗೆ ಅವರೇ ಹೋದರು. ಹೊರಗೆ ಒಂದು ಅಳೆತೆಯ ಜಾರನ್ನು ತಂದು "ಇದರಲ್ಲಿ ಹೋಗಲಿಲ್ವಾ?" ಎಂದು ಕೇಳಿದರು. ’ಓಹೋ ಮುಂದಿನ ಸಲದಿಂದ ಅದರಲ್ಲೇ ಹೋಗ್ತೀನಿ, ಸಾರಿ" ಎಂದೆ. "ನನಗೆ ಮಾಹಿತಿ ಕೊಟ್ಟಿದ್ದಿದ್ದರೆ ನಾನು ಆ ಪಾತ್ರೆಯೊಳಗೇ ಮೂತ್ರವಿಸರ್ಜನೆ ಮಾಡುತ್ತಿದ್ದೆ. ನನಗೆ ಹೇಗೆ ಗೊತ್ತಾಗಬೇಕು?" ಎಂದು ಬೈದುಕೊಂಡು ಹೋಗಿ ಮಲಗಿಕೊಂಡೆ.

ಡಯಟಿಷಿಯನ್ ಬಂದು ನನ್ನ ಆಹಾರವನ್ನು ಮತ್ತೆ ವಿವರಿಸಿದರು. ಅವರು ಹೋಗುವ ಮುನ್ನ "ಗ್ಯಾಸ್ ಪಾಸ್ ಮಾಡಿದ್ರಾ?" ಎಂದರು. ನಾನು "ಸ್ವಲ್ಪ" ಎಂದೆ. ಅವರಿಗೆ ಯಾಕೋ ಅಷ್ಟು ಸಂತೋಷವಾಗಲಿಲ್ಲ. ಕೆಲ ಸಮಯದ ನಂತರ ಆಗಲೇ ಬಂದ ವೈದ್ಯರು ಬಂದು ಪುನಃ "ಗ್ಯಾಸ್ ಪಾಸ್ ಮಾಡಿದ್ರಾ?" ಎಂದರು. ನಾನು "ಹ್ಞೂಂ" ಎಂದಿದ್ದೇ ತಡ, ತಮಗೆ ಲಾಟರಿ ಹೊಡೆದಷ್ಟೇ ಖುಷಿಯಿಂದ ಹಿಗ್ಗಿದರು. ನಾನು ಮಲವಿಸರ್ಜನೆ ಮಾಡಿದರೆ ಇವರಿಗೆ ಇನ್ನೆಷ್ಟು ಖುಷಿಯಾಗಬಹುದು ಎಂದುಕೊಂಡೆ. ಮಲವಿಸರ್ಜನೆಯಾದ ನಂತರ ಇವರಿಗೆ ಹೇಳಲು ನಾನು ಕಾತುರದಿಂದಿದ್ದೆ. ಹೇಳಿದ ಮೇಲೆ "ಗ್ರೇಟ್!" ಎಂದು ಸಂತಸ ಪಟ್ಟರು.

ಸ್ವಲ್ಪ ಹೊತ್ತಿನ ನಂತರ ಆಪರೇಷನ್ನಿಗೆ ಮುನ್ನ ನನ್ನ ವಿಶ್ವರೂಪದರ್ಶನವನ್ನು ಪಡೆದ ಬಿಳಿ ಕೋಟು ಹುಡುಗಿಯರೆಲ್ಲರೂ ಹಿರಿಯ ಸ್ತ್ರೀ ವೈದ್ಯರೊಂದಿಗೆ ಬಂದರು. ನನಗೆ ಅರ್ಥವಾಯಿತು. ಆಪರೇಷನ್ನಿನ ನೋವಿನ ಕಾರಣ ನನ್ನ ಪ್ಯಾಂಟನ್ನು ಸಡಿಲ ಪಡಿಸಲು ನನಗೆ ಕಷ್ಟವಾಯಿತಾದ್ದರಿಂದ ತಾವೇ ತಮ್ಮ ಕೆಲಸವನ್ನು ಮಾಡಿಕೊಂಡರು. ಗರ್ಭಗುಡಿಯೊಳಗಿನ ಲಿಂಗದ ದರ್ಶನ ಪಡೆದ ಭಕ್ತರಂತೆ ಶ್ರದ್ಧೆಯಿಂದ ನಿಂತಿದ್ದ ಆ ಹುಡುಗಿಯರನ್ನುದ್ದೇಶಿಸಿ ಪ್ರಧಾನ ಅರ್ಚಕರು ಮಂತ್ರ ಹೇಳುವವರ ಹಾಗೆ ಆ ಹಿರಿಯ ವೈದ್ಯೆ ಏನೇನೋ ಹೇಳುತ್ತಿದ್ದರು. ತಮ್ಮ ಕಾರ್ಯ ಮುಗಿಸಿ ಹೊರಟಾಗ ನನಗೆ ಸಮಾಧಾನವಾಯಿತು. ಈ ಸಮಾಧಾನ ಬಹಳ ಹೊತ್ತು ಇರುವಂತಿರಲಿಲ್ಲ. ಎರಡು ದಿನದಲ್ಲಿ ಸುಮಾರು ಎಂಟು ಸಲ ದರ್ಶನಕ್ಕೆಂದು ಬಂದರು ಆ ಭಕ್ತೆಯರು. ಎರಡನೆಯ ಸಲದ ನಂತರ ನಾನು ಪ್ಯಾಂಟನ್ನು ಹಾಕಿಕೊಳ್ಳುವುದೇ ಬೇಡವೆಂದು ತೀರ್ಮಾನಿಸಿಬಿಟ್ಟೆ. "ಅದ್ಯಾವಾಗ ಬೇಕಾದರೂ ಬನ್ನಿ, ಎಷ್ಟಾದರೂ ನೋಡಿಕೊಳ್ಳಿ" ಎಂದು ಹೊದಿಕೆಯನ್ನು ಹೊದ್ದುಕೊಂಡು ಮಲಗಿಬಿಟ್ಟೆ. ಅವರ ಪಾಡಿಗೆ ಅವರು ಬಂದು, ಹೊದಿಕೆ ಸರಿಸಿ, ದರ್ಶನಗೈದು ಭಕ್ತಿಯಿಂದ ನಮಸ್ಕರಿಸಿ ಹೋಗುತ್ತಿದ್ದಂತೆ ನನಗೆ ತೋರುತ್ತಿತ್ತು.

ಅಂತೂ ಎರಡು ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಕಾಲ ಕೂಡಿ ಬಂದಿತು. ನನ್ನ ಸರ್ಜನ್ನು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರಿಗೆ ಕೃತಜ್ಞತೆಯ ಹಸ್ತಲಾಘವವನ್ನು ಮಾಡಿದೆ. ಅಮ್ಮನೊಡನೆ ಅವರು ಯಾವುದೇ ಸಿಟ್ಟಿಲ್ಲದೆ "ಹೊಲಿಗೆ ಬಿಚ್ಚಿಸಿಕೊಳ್ಳಲು ಮತ್ತೆ ಕರೆದುಕೊಂಡು ಬರಬೇಕಾಗುತ್ತೆಮ್ಮಾ" ಎಂದು ಹಾಸ್ಯ ಮಾಡಿದರು. ಅಮ್ಮನೂ ನಕ್ಕರು. ಬಿಲ್ಲಿನ ಮೊತ್ತವನ್ನು ನೋಡಿ ಪುನಃ ಆಸ್ಪತ್ರೆ ಸೇರುವ ಪ್ರಮೇಯವೂ ಇತ್ತು. ದೇವರ ದಯೆ ಹಾಗಾಗಲಿಲ್ಲ. ಮನೆಗೆ ಬಂದೊಡನೆಯೇ ನನ್ನ ವೈದ್ಯ ಮಿತ್ರ ಪುತ್ತೂರಿನ ಶ್ರೀ ಐತಾಳರಿಗೆ ಕರೆ ಮಾಡಿ ವರದಿಯೊಪ್ಪಿಸಿದೆ. ಅವರು "ನಾನು ಹೇಳಿದಂತೆ ಮಾಡಿ, ಎಲ್ಲ ಸರಿ ಹೋಗುತ್ತೆ" ಎಂದು ಫೋನಿನಲ್ಲಿಯೇ ಅಭಯ ಹಸ್ತವನ್ನು ನೀಡಿದರು. "ತುಂಬಾ ಉಪಕಾರವಾಯಿತು ಸಾರ್, ನಾನು ಮತ್ತೆ ಬೆಟ್ಟ ಹತ್ತುವಂತಾದರೆ ಸಾಕು ನನಗೆ" ಎಂದು ನನ್ನ ಆಸೆಯನ್ನು ತೋಡಿಕೊಂಡೆ. "ಸಧ್ಯಕ್ಕೆ ಭಾರ ಎತ್ತಬೇಡಿ. ಬೆಟ್ಟ ಹತ್ತೋಕೆ ಒಂದೆರಡು ವರ್ಷ ಆಗಲಿ, ಆಮೇಲೆ ತೊಂದರೆಯಿಲ್ಲ" ಎಂದರು. ನನ್ನ ಬೈಕು ಬೇಸರ ಪಟ್ಟಿಕೊಂಡಿತು. ನನ್ನ ಟ್ರೆಕ್ಕಿಂಗ್ ಬ್ಯಾಗು ನನ್ನನ್ನೇ ದಿಟ್ಟಿಸಿ ನೋಡಿ "ಬೇಗ ಹುಷಾರಾಗು" ಎಂದು ಆಶೀರ್ವದಿಸಿತು. ಆಸ್ಪತ್ರೆಯಲ್ಲಿದ್ದಾಗ ಆರಂಭಿಸಿದ, ಡಿ.ವಿ.ಜಿ. ವಿರಚಿತ ಜೀವನ ಧರ್ಮಯೋಗ ಪುಸ್ತಕವು "ನನ್ನನ್ನು ಅರ್ಥೈಸಿಕೋ, ನಿನಗೆ ಬೇಸರವಿರುವುದಿಲ್ಲ" ಎಂದು ಕೂಗಿ ಕರೆಯಿತು. ಆ ಪುಸ್ತಕವನ್ನು ಹಿಡಿದು ವಿಶ್ರಾಂತಿ ದಿನಗಳನ್ನು ಕಳೆದೆ.

- ಅ
08. 09. 2015
12.30 AM

Monday, August 31, 2015

ಸ್ವಾತಂತ್ರ್ಯ

ಹಕ್ಕಿಯ ರೆಕ್ಕೆಯ ಕತ್ತರಿಸಿ
ಹಾರು, ಹಾರೆನಲಾದೀತೇ?
ಕೈಯಿಂದೆತ್ತುತ,
ಮೇಲಕ್ಕೆಸೆಯುವ
ನಾಟಕವಾಡಲು ಹಾರೀತೇ?

ಕಿಟಕಿ - ಬಾಗಿಲನು ಮುಚ್ಚಿಟ್ಟು
ಹೂವನು ಅರಳೆನಲಾದೀತೇ?
ಸೂರ್ಯರಶ್ಮಿಯೇ
ಸೋಕದ ಗಿಡದಲಿ
ಕುಸುಮ ವದನವದು ನಕ್ಕೀತೇ?

ಕಂಠವ ಹಗ್ಗದಿ ಬಿಗಿಯುತ್ತ
ಹಾಡು, ಹಾಡೆನಲಾದೀತೇ?
ಹೃದಯದ ಖನಿಯು
ಕೊರಳಿನ ದನಿಗೆ
ಬಾರದೆ ತಾ ಹಾಡಾದೀತೇ?

ಬಿಗಿಮುಷ್ಟಿಯು ನಿನಗಿಹುದೆಂದು
ಹಿಡಿದು ಹೊಸಕದಿರು ಸಸಿಯನ್ನು.
ಸ್ವಾತಂತ್ರ್ಯದ ಕಣ್-
ತೆರೆದರೆ ಕೇಳು,
ಕೊಡುವುದು ಅದೆ ನಿನಗೆಲ್ಲವನು.

- ಅ
31. 08. 2015
2 AM

Monday, July 20, 2015

ಮಕ್ಕಳೂ, ಶಾಲೆಯೂ, ಪೋಲಿ ಮಾತುಗಳೂ

"ಬೇಡ" ಅಂದಿದ್ದನ್ನು ಮಾಡುವುದರಲ್ಲಿ ಸ್ಕೂಲ್ ಮಕ್ಕಳಿಗೆ ಅದೇನು ಆನಂದ ಸಿಗುವುದೋ ಏನೋ. ಗಲಾಟೆ ಮಾಡ್ಬೇಡ್ರೋ ಅಂದ್ರೆ ಸೂರು ಹಾರಿ ಹೋಗುವ ಹಾಗೆ ಕಿರುಚುತ್ತಿರುತ್ತಾರೆ. ಕಾರಿಡಾರಿನಲ್ಲಿ ಓಡಬೇಡ್ರೋ ಎಂದರೆ ಓಡಿ ಬಂದು ಸ್ಕೇಟಿಂಗ್ ಮಾಡಿ ಬ್ರೇಕ್ ಹಾಕುತ್ತಾರೆ. ಸುಳ್ಳು ಹೇಳಬೇಡ್ರೋ ಎಂದರೆ ಸತ್ಯ ಎಂದರೇನು ಎಂಬುದನ್ನೇ ಮರೆತಿರುವಂತೆ ಆಡುತ್ತಾರೆ. ಮೈದಾನದಲ್ಲಿ ಕೆಲವೊಮ್ಮೆ ಕೆಳಗೆ ಕೂರಿಸಿದಾಗ ನೆಲವನ್ನು ಮುಟ್ಟಬೇಡ್ರೋ ಎಂದರೆ ಮಣ್ಣಲ್ಲಿ ಮನೆ ಕಟ್ಟಿರುತ್ತಾರೆ. ಕೆಟ್ಟ ಮಾತು ಆಡಬೇಡ್ರೋ ಎಂದು ಅದಕ್ಕೇ ನಾನು ಹೇಳಲು ಹೋಗುವುದಿಲ್ಲ. ಆದರೆ ಇದನ್ನು ಮಾತ್ರ ಹೇಳಲಿ, ಹೇಳದೇ ಇರಲಿ ಆಡಿಯೇ ತೀರುತ್ತಾರೆ!

ಟೀಚರುಗಳು ಯಾವಾಗಲೂ ಕಾವಲಿರುವುದರಿಂದ ಮಕ್ಕಳು ಕೆಟ್ಟ ಮಾತುಗಳನ್ನು ಬಹಳ ಕಷ್ಟ ಪಟ್ಟು ಆಡಬೇಕಾಗುತ್ತದೆ. ಹೈಸ್ಕೂಲು ಮಕ್ಕಳು ಈ ವಿಷಯದಲ್ಲಿ ಬಹಳ ಬುದ್ಧಿವಂತರು. ಅವರ ಮಾತುಗಳು ಟೀಚರುಗಳ ಕಿವಿ ಮುಟ್ಟುವುದೇ ಇಲ್ಲ. ಬೆಂಗಳೂರಿನ ಇಂಗ್ಲೀಷ್ ಶಾಲೆಯ ಮಕ್ಕಳ ಪೋಲಿ ಮಾತುಗಳನ್ನು ಅರ್ಥ ಮಾಡುಕೊಳ್ಳುವ ಟೀಚರುಗಳೂ ದುರ್ಲಭ. ಮಿಡ್ಲ್ ಸ್ಕೂಲಿನಲ್ಲೋ ಪ್ರಾಥಮಿಕ ಹಂತದಲ್ಲೋ ಕೆಟ್ಟ ಮಾತುಗಳನ್ನಾಡಿದರೆ ಬೇರೆ ಮಕ್ಕಳು ಚಾಡಿ ಹೇಳಿ ಸಿಕ್ಕಿ ಹಾಕಿಸಿಬಿಡುತ್ತಾರೆ. ಅವರವರು ಚೆನ್ನಾಗಿ ಇರುವವರೆಗೂ ಯಾವ ಚಾಡಿಯೂ ಇರುವುದಿಲ್ಲ.

ಈ ಮಕ್ಕಳು ಬೇರೆ ವಿದ್ಯಾರ್ಥಿಗಳನ್ನೋ ಅಥವಾ ಟೀಚರುಗಳನ್ನೋ ಬೈದುಕೊಳ್ಳಬೇಕಾದರೆ ಅವರಿಗೆ ಸೂಕ್ತವಾದ ಸ್ಥಳ ಶೌಚಾಲಯ. ನಾನು ಹುಡುಗರ ಶೌಚಾಲಯದ ಮಾತುಗಳ ಬಗ್ಗೆ ಮಾತ್ರ ಮಾತನಾಡಬಲ್ಲೆನು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೆ? ನಾವು ಮೇಷ್ಟ್ರುಗಳು ಧಿಡೀರನೆ ಶೌಚಾಲಯದ ಒಳಹೊಕ್ಕರೆ ಅವರುಗಳ ಮಾತು ಹಠಾತ್ತನೆ ನಿಂತು ಹೋಗುತ್ತೆ. "ಐ ವಾಜ಼್ ಟಾಕಿಂಗ್ ಟು ದಟ್ ಬಾ......." ಎಂದು ಅವರ ಮಾತು ನಿಂತರೆ ಏನು ಮಾತು ಹೊರಹೊಮ್ಮುತ್ತಿತ್ತೆಂದು ನಾವೇ ಊಹಿಸಿಕೊಂಡು "ಏಯ್" ಎನ್ನಬೇಕು. ಬಸ್ ಸ್ಟಾಂಡಿನಲ್ಲಿರುವ ಶೌಚಾಲಯಗಳಲ್ಲಿರುವಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಶಾಸನಗಳನ್ನು ಕೆತ್ತಿರುತ್ತಾರೆ. ಅಲ್ಲಿಯೂ ಬೈಗುಳಗಳು! ಇವರ ಬೈಗುಳಗಳ ಶಬ್ದಕೋಶ ಎಷ್ಟು ವಿಶಾಲವಾಗಿರುವುದೆಂದು ತಿಳಿಯಬೇಕಾದರೆ ಶೌಚಾಲಯವನ್ನು ಪರಿಶೀಲಿಸಬೇಕು. ಈಗಿನ ಖಾಸಗಿ ಶಾಲೆಗಳಲ್ಲಿ ಆಗಾಗ್ಗೆ ಪೇಯ್ಂಟ್ ಮಾಡಿಸುವುದಾದ್ದರಿಂದ ಈ ಶಾಸನಗಳು ಹೆಚ್ಚು ದಿನ ಉಳಿಯುವುದಿಲ್ಲ.

ಕೌನ್ಸಿಲ್‍ನ ಕಾರ್ಯಾರ್ಥಿಯಾಗಿ ವರ್ಷಕ್ಕೊಮ್ಮೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದಕ್ಕೆ ಹೋಗುವ ಪ್ರಮೇಯವಿದೆ ನನಗೆ. ಆ ಶಾಲೆಯೋ - ಬಾಲಕಿಯರ ಪ್ರೌಢಶಾಲೆ. ನಮಗೆ ವಹಿಸಿರುವ ಕೊಠಡಿಗಳೆಲ್ಲವೂ ಆ ಬಾಲಕಿಯರ ತರಗತಿಗಳೇ. ಮೇಜಿನ ಮೇಲೆ, ಆ ಬಾಲಕಿಯರ ಬೀರುಗಳ ಮೇಲೆ ಬರೆದಿರುವ ಪದಗಳನ್ನು ನೋಡಿದರೆ ಅವರ ಇಂಗ್ಲೀಷ್ ಶಬ್ದ ಭಂಡಾರವು ಅದೆಷ್ಟು ಬೃಹದ್ಗಾತ್ರವಿರಬಹುದೆಂದು ಅನ್ನಿಸದೇ ಇರುವುದಿಲ್ಲ. ಕಳೆದ ವರ್ಷ ನನಗೆ ನಿಗದಿ ಪಡಿಸಿದ್ದ ಮೇಜಿನ ಮೇಲೆ ಕಂಡ ಚಿತ್ರದ ವಿಷಯವನ್ನು ಅಲ್ಲಿದ್ದ ನನ್ನ ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುವಂತೆಯೂ ಇರಲಿಲ್ಲ. ಬರೆದ ಕಲಾವಿದೆಯ ಗೆಳತಿಯ (ಅಥವಾ ಶತ್ರುವಿನ) ಬಾಯ್‍ಫ್ರೆಂಡಿನ ಗೋಮಟೇಶ್ವರಾವತಾರವು ಅಲ್ಲಿ ಚಿತ್ರಿತವಾಗಿತ್ತು. ಅಲ್ಲದೆ ಆ ಹುಡುಗನು ಯಾವ ಯಾವ ಅಂಗವನ್ನು ಯಾವ ಯಾವ ಕಾರಣಕ್ಕಾಗಿ ಬಳಸುತ್ತಾನೆಂದೂ ಸವಿವರವಾಗಿತ್ತು. ಆ ಹುಡುಗಿ ಜೀವಶಾಸ್ತ್ರದ ವಿದ್ಯಾರ್ಥಿನಿಯಿರಬೇಕೆಂದೆನಿಸಿತಾದರೂ ನಾನು ಆಗ ಏನೂ ಮಾತನಾಡಲಿಲ್ಲ. ಒಂದು ವಾರಕ್ಕೂ ಹೆಚ್ಚು ಕಾಲ ಅಲ್ಲಿ ಕೆಲಸವಿದ್ದುದರಿಂದ ನನ್ನ ಪಾಡಿಗೆ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ಆದರೆ ಪ್ರತಿದಿನವೂ ಕಲೆಯ ದರ್ಶನವಾಗುತ್ತಿತ್ತು. ಅಲ್ಲದೆ, ಕೆಲಸ ಮುಗಿಸಿ ನಮ್ಮ ವಸ್ತುಗಳನ್ನು ಇರಿಸಲು ಕೊಟ್ಟಿದ್ದ ಬೀರುಗಳ ಬಾಗಿಲ ಮೇಲೆ ಡೈರೆಕ್ಟ್ ಸ್ಪೀಚ್ ಅಲ್ಲಿ ಪೋಲಿ ಮಾತುಗಳನ್ನು ಬೈಯ್ಯುವುದು ಹೇಗೆಂದು ಪಾಠ ಹೇಳುವಂತೆ ಬಣ್ಣ ಬಣ್ಣದ ಇಂಕಿನಿಂದ ಬರೆದಿದ್ದರು. ದಿನವೂ ಇವನ್ನು ನಿತ್ಯಪ್ರಾರ್ಥನೆಯೆಂಬಂತೆ ಓದುವಂತಾಗಿತ್ತು. ಒಟ್ಟಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಕಲಿಯದ ಪೋಲಿ ಮಾತುಗಳನ್ನು ನನ್ನ ವಿದ್ಯಾರ್ಥಿಗಳಿಂದ ಕಲಿಯುವಂತಾಯಿತು!

ಹೈಸ್ಕೂಲು ಮಕ್ಕಳಿಗೆ ಕೆಲವು ಪದಗಳ ಅರ್ಥಗಳು ಗೊತ್ತಿಲ್ಲದೇ ಮಾತನಾಡುತ್ತಾರೇನೊ ಅನ್ನಿಸುತ್ತೆ ಒಂದೊಂದು ಸಲ. ಎಷ್ಟರ ಮಟ್ಟಿಗೆ ಎಂದರೆ, ತೀರ ಟೀಚರುಗಳ ಹತ್ತಿರವೂ "Ma'am, Will we be screwed if we don't do this?" ಎಂದೂ ಒಬ್ಬ ಹುಡುಗ ಒಮ್ಮೆ ಕೇಳಿದ್ದ ನಿದರ್ಶನವೂ ಇದೆ. ಆ ಟೀಚರಿನ ಮುಖ ನೋಡಲು ಆಗಲಿಲ್ಲ ನನಗೆ. ಪ್ರಾಂಶುಪಾಲರೋ ಎಲ್ಲ ಟೀಚರುಗಳಿಗೂ ಮಕ್ಕಳ ಅಂತರ್ಜಾಲ ಬಳಕೆಯ ಮೇಲೆ, ಸಂಭಾಷಣೆಗಳ ಮೇಲೆ ಕಣ್ಣಿಟ್ಟಿರಿ ಎಂದು ಆದೇಶ ಕೊಟ್ಟಿರುತ್ತಾರೆ. ಈ ಮಕ್ಕಳ Chat Groupಗಳನ್ನು ನೋಡುವ ಧೈರ್ಯ ಯಾವ ಟೀಚರಿಗೆ ತಾನೆ ಬಂದೀತು? ನೋಡಿದರೂ ಎಷ್ಟು ಟೀಚರುಗಳಿಗೆ ಇವರ ಪೋಲಿ ಮಾತುಗಳು ಅರ್ಥವಾಗುವುದೋ ಗೊತ್ತಿಲ್ಲ.

ನಾನು ಓದಿದ ಶಾಲೆಗೆ "ಅಪ್ಪಟ ಪೋಲಿಗಳ ಸಂಘ" ಎಂಬ ಅಡ್ಡಹೆಸರೇ ಇತ್ತು. ನಮ್ಮ ಪೋಲಿ ಮಾತುಗಳೇನಿದ್ದರೂ ಮಾತೃಭಾಷೆಯಲ್ಲಿಯೇ. ನಮಗೆ ‍ರ‍್-ಕಾರಾಂತ ಪದಗಳೂ ‍ನ್‍ಕಾರಾಂತ ಪದಗಳೂ ಈ ಕಾಲದ ಮಕ್ಕಳ F ಪದಗಳಿಗಿಂತ ಹೆಚ್ಚಾಗಿ ಪರಿಚಿತವಿದ್ದವು. ಮತ್ತು ನಮ್ಮದು ಹುಡುಗರ ಶಾಲೆಯಾದ್ದರಿಂದ ನಮ್ಮ ಮೇಷ್ಟ್ರುಗಳೂ ಸಹ ನಮ್ಮ ತಲಹರಟೆ ಹೆಚ್ಚಾದರೆ "ಮಗನೇ, ಮುಕ್ಳಿ ಮೇಲ್ ಒದ್ರೆ ಸತ್ ಹೋಗ್ಬೇಕು, ಲೋಫರ್" ಎಂದೇ ಬೈಯ್ಯೋರು. (ಈಗಿನ ಕಾಲದ ಮೇಷ್ಟ್ರುಗಳಾದ ನಾವು "ಯಾಕಪ್ಪಾ ಮಾತಾಡ್ತಾ ಇದ್ದೀಯಾ ತರಗತಿಯಲ್ಲಿ?" ಎಂದೇನಾದರೂ ಮಕ್ಕಳನ್ನು ಕೇಳಿದರೆ  ಮಾರನೆಯ ದಿನ ಪೋಷಕರು ಗಲಾಟೆ ಮಾಡುತ್ತ ಬರುತ್ತಾರೆ, ಎರಡನೇ ದಿನ ಪೋಲೀಸರು ಕರೆದೊಯ್ಯುತ್ತಾರೆ, ಮೂರನೆಯ ದಿನ ಮಾಧ್ಯಮದಲ್ಲಿ ನಮ್ಮ ಚಿತ್ರಗಳು ಬರುತ್ತವೆ.)

ಸ್ವಲ್ಪ ವರ್ಷಗಳ ಕೆಳಗೆ ನಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸಣ್ಣದೊಂದು ಕಂಪ್ಯೂಟರ್ ಪ್ರಯೋಗಾಲಯವಿತ್ತು. ಇಡೀ ಶಾಲೆಗೆ ಆರು ಕಂಪ್ಯೂಟರುಗಳಿದ್ದವು. ಅದೇ ಲ್ಯಾಬಿನಲ್ಲಿಯೇ ಪ್ರಾಂಶುಪಾಲರೂ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ನಾನೂ ಅಲ್ಲಿಯೇ ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ನಾನು ಆರನೇ ತರಗತಿಯ ಕಕ್ಷೋಪಾಧ್ಯಯನೂ ಆಗಿದ್ದೆ. ನನ್ನ ತರಗತಿಯ ಇಬ್ಬರು ಮಕ್ಕಳು ಅಲ್ಲಿಗೆ ಬಹಳ ಆತಂಕದಿಂದ ಧಾವಿಸಿ ಬಂದರು. ನನ್ನ ಪಕ್ಕದಲ್ಲಿಯೇ ಪ್ರಿನ್ಸಿಪಾಲ್ ಮೇಡಂ ಇದ್ದಿದ್ದು ನನಗೆ ಸ್ವಲ್ಪ ಮುಜುಗರವೆನಿಸಿತು - ಈ ಮಕ್ಕಳು ಏನು ಗಲಾಟೆ ಮಾಡಲು ಬಂದರೋ ಇವರ ಮುಂದೆ, ನಾಳೆ ನಾನು ಏನು ಉತ್ತರ ಹೇಳಬೇಕೋ, ಎಂದು. ಆದರೆ ನನಗಾದ ಮುಜುಗರ ದ್ವಿಗುಣವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಂದ ಮಕ್ಕಳಲ್ಲಿ ಒಬ್ಬ ಹುಡುಗ "Sir, she said ತಿ* ಮುಚ್ಕೊಂಡ್ ಇರು." ನಾನು "ಶ್..." ಎಂದೆ. ಅದಕ್ಕೆ ಇನ್ನೂ ಹೆಚ್ಚು ಸಿಟ್ಟಾದ ಹುಡುಗ, "Promise sir, she said ತಿ* ಮುಚ್ಕೊಂಡ್ ಇರು". ನಾನು ನನ್ನ ಸೀಟಿನಿಂದ ಎದ್ದೇಳಲು ಪ್ರಯತ್ನಿಸುತ್ತಿದ್ದೆ. ಪಕ್ಕದಲ್ಲಿದ್ದ ಮೇಡಂ ಕೇಳಿಸಿಯೂ ಕೇಳಿಸದಂತೆ ತಮ್ಮ ಕೆಲಸ ತಾವು ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಅಲ್ಲಿ ಬಂದಿದ್ದ ಹುಡುಗಿ "No sir, he only said ತಿ* ಮುಚ್ಕೊಂಡ್ ಇರು. I never said ತಿ* ಮುಚ್ಕೊಂಡ್ ಇರು". ನನ್ನ ಮುಜುಗರದ ಮಿತಿಯು ಮೀರಿ ಹೋಗಿತ್ತು. ಅವರಿಬ್ಬರಿಗೂ ನಾನು ಅದೇ ಮಾತನ್ನು ಹೇಳಬೇಕೆನ್ನುವಷ್ಟು ತಾಳ್ಮೆಗೆಡುವಂತಾಯಿತು. ನಂತರ ಹೇಗೋ ಅವರನ್ನು ಹೊರಗೆ ಕರೆದುಕೊಂಡು ಹೋಗಿ "ನೋಡಿ, ಹಾಗೆಲ್ಲಾ ಬೈಗುಳಗಳನ್ನು ಪದೇ ಪದೇ ಹೇಳುತ್ತಿರಬಾರದು, ಯಾರೇ ಅನ್ನಲಿ." ಎಂದು ಬುದ್ಧಿವಾದ ಹೇಳಿದೆ. ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ, ಲ್ಯಾಬಿನ ಒಳಗೆ ಪ್ರಾಂಶುಪಾಲರು ಒಬ್ಬರೇ ನಗುತ್ತಿದ್ದರು.

ಒಮ್ಮೆ ಶಾಲೆಯ ಬಸ್ಸಿನಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಯಾವುದೋ ಕಾರಣಕ್ಕೆ ಜಗಳವಾಗಿತ್ತು. ನಾನು ಆ ಬಸ್ಸಿನಲ್ಲಿ ಅಟೆಂಡೆನ್ಸ್ ಹಾಕಲು ಹೋಗಿದ್ದೆ. ಅವರ ಜಗಳಕ್ಕೆ ನಾನು ನ್ಯಾಯಾಧೀಶನೆಂದು ತೀರ್ಮಾನಿಸಿದ ಆ ಮಕ್ಕಳು ನನ್ನೆಡೆಗೆ ಬಂದು ಮೇಲೆ ಹೇಳಿದ ಕಥೆಯ ಮಾದರಿಯಂತೆಯೇ ವರದಿ ಒಪ್ಪಿಸಿದರು. "Sir, he called me f**ker" ಎಂದು ಒಬ್ಬ, "No, he is only calling me f**ker" ಎಂದು ಇನ್ನೊಬ್ಬ - ಇಬ್ಬರೂ ಇನ್ನೂ ಚಡ್ಡಿಯನ್ನೂ ಸರಿಯಾಗಿ ಹಾಕಿಕೊಳ್ಳಲು ಬಾರದ ವಯಸ್ಸಿನ ಹುಡುಗರು - ನನಗೆ ಚಾಡಿ ಹೇಳಿದರು. ಈ ಮಾತುಗಳನ್ನು ಎಲ್ಲಿಂದ ಕಲಿಯುತ್ತಿದ್ದಾರೆಂದು ಆಶ್ಚರ್ಯವಾಯಿತು, ಗಾಬರಿಯೂ ಆಯಿತು. ಯಾರನ್ನು ದೂರುವುದು? ಪೋಷಕರನ್ನೋ, ಹಿರಿಯ ವಿದ್ಯಾರ್ಥಿಗಳನ್ನೋ, ಮಾಧ್ಯಮವನ್ನೋ, ಸಿನಿಮಾ ಟಿ.ವಿ. ಶೋಗಳನ್ನೋ, ನಮ್ಮನ್ನೋ? ಪ್ರಾಂಶುಪಾಲರೊಡನೆ ಚರ್ಚಿಸಿದಾಗ ಅವರು ಆ ಇಬ್ಬರೂ ಮಕ್ಕಳ ಪೋಷಕರನ್ನು ಬರಹೇಳಿದರು. ಒಬ್ಬ ಹುಡುಗನ ತಂದೆ "We will take care, ಇನ್ನೊಂದ್ ಸಲ ಹೀಗೆ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತೇವೆ, thanks for the information" ಎಂದು ಹೇಳಿ ಹೊರಟು ಹೋದರು. ಇನ್ನೊಬ್ಬ ಹುಡುಗನ ತಂದೆ ಬಹಳ ನೊಂದುಕೊಂಡುಬಿಟ್ಟಿದ್ದರು. ಪ್ರಾಂಶುಪಾಲರು ನನ್ನನ್ನು ಬರಹೇಳಿದರು. ಅವರನ್ನು ಸಮಾಧಾನಿಸಲು ಯತ್ನಿಸಿದೆವು. ತುಂಬ ನೊಂದುಕೊಂಡ ತಂದೆ ತಮ್ಮ ಮಗನನ್ನು ಕರೆಸಿಕೊಂಡರು. ಆ ಹುಡುಗ ಪ್ರಾಂಶುಪಾಲರ ಕೊಠಡಿಗೆ ಬರುತ್ತಿದ್ದಂತೆಯೇ, ಅಲ್ಲಿಯವರೆಗೂ ಅತಿ ಸೊಗಸಾದ ಇಂಗ್ಲೀಷಿನಲ್ಲಿ ಮಾತನಾಡುತ್ತಾ ನೊಂದುಕೊಳ್ಳುತ್ತಿದ್ದ ತಂದೆಗೆ ಸಿಟ್ಟು ಹೆಚ್ಚಾಗಿ ತಮ್ಮ ಮಾತೃಭಾಷೆ ಬಾಯಿಗೆ ಬಂದುಬಿಟ್ಟಿತು. "ಸೂಳಿಮಗ್ನ, ಶಾಲೀಗ್ ಕಳ್ಸೋದ್ ಓದಕ್ಕೋ ಕೆಟ್ ಕೆಟ್ ಮಾತ್ ಆಡೋಕೋ ನಿಮ್ಮೌನ್, ಮನೀಗ್ ಬಾ ಮಾಡ್ತೀನ್ ಮಂಗ್ಯಸೂಳಿಮಗ ಇದ್ದೀಯ ನೀನು" ಎಂದು ನಮ್ಮೆಲ್ಲರ ಮುಂದೆ ಬೈದರು.  ಪ್ರಾಂಶುಪಾಲರಿಗೆ ಏನೂ ಅರ್ಥವಾಗಲಿಲ್ಲ. ನಾನು ಅವರನ್ನು ಹೊರಡಲು ಸೂಚಿಸಿ, "ನಿಮ್ಮ ಮಗನ ಮಾತುಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ" ಎಂದು ಹೇಳಿ, ನಾನೂ ಆ ಜಾಗ ಖಾಲಿ ಮಾಡಿದೆ.

- ಅ
20.07.2015
11 PMThursday, April 23, 2015

ಅಪಶ್ರುತಿಯ ಭೀತಿ

(ಅಂದೆಂದೋ ನಡೆದ ಒಂದು ಪ್ರಸಂಗವನ್ನು ನೆನೆದು)

ಬಯಸಿತ್ತು
          - ನಲಿಯಲು ಮನವು.
ನಲಿದಿತ್ತು
          - ಕೋಗಿಲೆಗಳ ಗುಂಪು.
ಬಯಸಿತ್ತು
          - ತಾನೊಂಟಿಯ ಕಾಗೆ
ನಲಿಯಲು ತಾನೂ ಕೋಗಿಲೆ ಹಾಗೆ.
ಹೆದರಿತ್ತು
          - "ಬಾಯ್ ತೆರೆಯಲಿ ಹೇಗೆ?"

ಕಾಗೆಯ ದನಿ ಕೋಗಿಲೆಗೆಂತು ರುಚಿ?
ತನ್ನಯ ಸಮೂಹದಲೆ ತನಗಭಿರುಚಿ.
ಆಲಿಸೆ ಮನವದು ತೆರವಿರೆ ಸಾಕು
ಹಾಡಲು ಶ್ರುತಿಯನು ಹಿಡಿಯಲೆ ಬೇಕು.
ತನಗೋ ಆಸೆಯು ನಲಿಯಲು ಹಾಡಿ
- ಕೋಗಿಲೆ ಜೊತೆ ತನ್ನಯ ದನಿ ಕೂಡಿ.

"ಅಪಶ್ರುತಿ!, ಅಪಶ್ರುತಿ!"
"ಕೇಳಲು ಆಗದು!"
"ನಿಲ್ಲಿಸು ನಿನ್ನೀ ಅರಚುವಿಕೆಯನು!"
ನೆನೆಯಿತು ಕಾಗೆಯು ಕೋಗಿಲೆ ಮಾತನು,
ನಡುಗಿತು ಭಯದಲಿ ತೆರೆಯಲು ಬಾಯನು.

ಒಂದೊಂದರ ಮಿತಿಯೊಂದೊಂದರ ಶ್ರುತಿ
ಕೋಗಿಲೆಗಳ ದನಿಗಚ್ಚರಿ ಪ್ರಕೃತಿ
ನಡುವೆಯೆ ಅಪಶ್ರುತಿ-ಭಯದಲಿ ಕೂತು
ಆಲಿಸಿತಾಲಿಸಿತಾಡದೆ ಮಾತು!

ಬಯಸಿತ್ತು
          - ಹಾಡುವುದನು ತಾನು
ತಿಳಿದಿತ್ತು
          - ತನಗೆಟುಕದು ಬಾನು.
ಬಯಸಿತ್ತು
          - ದನಿ ಕೋಗಿಲೆ ಹಾಗೆ
ಮರೆತಿತ್ತು
          - ತಾನಲ್ಲವೆ ಕಾಗೆ?

- ಅ
22. 04. 2015
11.30 PM

Tuesday, April 14, 2015

ಸುರಿಯುತಿಹ ಮಳೆಯಂತೆ

ಮಳೆಯೇನೊ ಬರುತಲಿದೆ,
ಬೇಸಿಗೆಯ ಬಾನಿಂದ -
ನೀನೆಂದು ಬರುವೆಯೋ
ಕಾದಿರುವ ನನ್ನೆಡೆಗೆ
          ಇಳಿದು ಬರುವಂತೆ ಇಳೆಗೆ
          ದೇವಗಂಗೆಯ ತೆರದಿ.

ಹೊಳೆಯೇನೊ ಹರಿಯುತಿದೆ
ಕನಸುಗಳ ಹಾದಿಯಲಿ
ಹನಿಹನಿಗಳೆಲ್ಲವೂ
ನಿನ್ನದೆಯೆ ದನಿಯನ್ನು
          ಮಾಡಿ ನಲಿವಂತೆ ತಾನು
          ಗಂಧರ್ವಗಾನದಂತೆ.

ಧರೆಯೆಲ್ಲ ಧಗೆಯಿಂದ
ಕಾದಿತ್ತು ಬರಡಾಗಿ
ನಾನಿಂದು ನಿನ್ನೆದುರ
ಕಾಯುತ್ತಲಿರುವಂತೆ
          ಎಂದು ಬರುವುದು ನೀನು
          ಸುರಿಯುತಿಹ ಮಳೆಯಂತೆ!

- ಅ
14. 04. 2015
8.15PM


Monday, April 6, 2015

ನಿನ್ನೆಡೆಗೆ

ಉಷೆಯು ಮೂಡಿರೆ
ನಿಶೆಯು ಕಳೆದಿರೆ
ವರ್ಣ-ಪರ್ವವೆ ಬಾನಲಿ!
ಖಗಗಳುಲಿಯುತ
ಸೊಗದಿ ನಲಿಯುವ
ಜಗವೆ ಸ್ವರ್ಗವೊ ಕಾನಲಿ!

ರವಿಯ ಕಿರಣದ ಹೊಳೆಯಲಿ
ಮಿಂದು ಹೊಳೆಯುವ ಕಳೆಯನು
ಎಲೆಯ ಮರೆಯೊಳಗವಿತಿಹ
ಹೊನ್ನ ಹೂವಿನ ಸುಧೆಯನು
ಸವಿಯ ಬಯಸಿ
ದಿವಿಯನರಸಿ
ನೀನು ಹೊರಟಿಹೆಯೆಲ್ಲಿಗೆ?
ನಾನು ಬರುವೆನು ಅಲ್ಲಿಗೆ,
ನೀ ನಡೆಯುತಿರುವೆಡೆಗೆ!

ಬೆಳಕು -
ಹರಿದು ಚಿಗುರಲು ಪ್ರಾಣ
ಬದುಕು -
ಮಧುರ ಸ್ಮೃತಿಗಳ ಯಾನ.
ನಿತ್ಯನೂತನ ಕವನ
ಅಂತ್ಯವಿಲ್ಲದ ಗಗನ - ಜೀವನ!
ಬಾಳ ಬಯಸಿ
ಬೆಳಕನರಸಿ
ನೀನು ಹೊರಟಿಹೆಯೆಲ್ಲಿಗೆ?
ನಾನು ಬರುವೆನು ಅಲ್ಲಿಗೆ,
ನೀ ನಡೆಯುತಿರುವೆಡೆಗೆ!

- ಅ
04.04.2015
8.40PM

Sunday, March 29, 2015

ಬರುವೆಯಾ ನನ್ನ ಜೊತೆಗೆ?

ಯಾವುದೊ ಕಾನನದೊಳಗೆ
ಪ್ರಕೃತಿಯ ಅಮೃತದ ಮೇಳ.
ಹಾಡುವ ಹಕ್ಕಿಯ ದನಿಗೆ
ಶ್ರುತಿಯ ಸೇರಿಸಲು, ಗೆಳತಿ,
                                 ಬರುವೆಯಾ ನನ್ನ ಜೊತೆಗೆ?

ಯಾವುದೊ ಬೆಟ್ಟದ ಮೇಲೆ
ನಕ್ಷತ್ರಗಳಾ ಮಾಲೆ
ಧರಿಸಿ ಹೊದೆಯಲು ಒಬ್ಬರ-
ನೊಬ್ಬರು ಸುಖದಲಿ, ಗೆಳತಿ,
                                 ಬರುವೆಯಾ ನನ್ನ ಜೊತೆಗೆ?

ಯಾವುದೊ ಕಡಲಿನ ದಡದಿ
ನಡೆಯುತ ಕೈ ಕೈ ಬೆಸೆದು
ಚಿನ್ನದ ಬಾನಿನ ರವಿಗೆ
ವಿದಾಯ ಹೇಳಲು, ಗೆಳತಿ,
                                 ಬರುವೆಯಾ ನನ್ನ ಜೊತೆಗೆ?

ಯಾವುದೊ ದಾರಿಯ ಹಿಡಿದು
ಕ್ಷಿತಿಜದ ದೆಸೆಯಲಿ ನಡೆದು
ಇರುವೆಯ ಜೊತೆಯಲೆ ನೀನು?
ಅನಂತ ಪಯಣದಿ, ಗೆಳತಿ,
                                ಬರುವೆಯಾ ನನ್ನ ಜೊತೆಗೆ?

- ಅ
29.03.2015
4 AM

Wednesday, March 25, 2015

ಎಷ್ಟು ತಕ್ಕಡಿಗಳು?

ಬರುವರು, ಇರುವರು,
ಹೋಗುವರು -
ನೂರಾರು ಜನ
ದಿನದಿನವೂ, ಕ್ಷಣಕ್ಷಣವೂ
ಅನುಗಾಲವೂ;
ಒಳಿತನ್ನು ತರುತ್ತ -
ನಗಿಸಿ ನಗುವರು,
ಕೆಡುಕನ್ನು ಬಚ್ಚಿಟ್ಟು - ಅಳಿಸಿ
ನಗುವರು.
ನೀನತ್ತರೂ ತಾವಳದೆ,
ನೀ ನಕ್ಕರೂ ತಾವು ನಗದೆ,
ಭಾವವರ್ಷಕ್ಕೆ ಬಂಡೆಯಂತಿರುವರು.
ನಿಂದಿಸಿ, ಜರಿದು, ಬೈದು - ಬದುಕಿಸುವರು.
ಹಲ್ಲುಕಿರಿಯುತ್ತಲೇ ಕೊಲ್ಲುವರು.
ಅದೆಷ್ಟು ಜನ
ಬರುವರೋ, ಇರುವರೋ, ಹೋಗುವರೋ
ಅಷ್ಟಿರಲಿ ನಿನ್ನಲ್ಲಿ
ತಕ್ಕಡಿಗಳು!

- ಅ
25.03.2015
11.30 AM

Friday, January 23, 2015

ನನ್ನ ಪ್ರೇಮದ ಹೂ

ನನ್ನ ಪ್ರೇಮದ ಹೂವರಳುವುದೇನು?
ಬಾಳಿನ ತೋಟದಲಿ..
ನಿನ್ನ ಬಾಳಿನ ತೋಟದಲಿ..
ಅದು ಅರಳುತಲೇ, ಬೆರೆಯುವುದೇನು?
ಮರೆಸುವ ನೋಟದಲಿ..
ಮೈ ಮರೆಸುವ ನೋಟದಲಿ..

ಹೊಸ ಬಣ್ಣವನು, ಹೊಸ ಚೆಲುವನ್ನು..
ಹೊಸ ಕನಸಿನ ರೂಪದಲಿ..
ಹೊಸ ನಗೆಯನ್ನು, ಹೊಸ ಬಗೆಯನ್ನು..
ಹೊಸ ಚಂದ್ರನ ದೀಪದಲಿ..

ನನ್ನ ಪ್ರೇಮದ ಹೂ ಬೀರುವುದೇನು
ಹೊಸತು ಸುಗಂಧವನು?
ನೀ ಪ್ರೇಮದಲಿ ನೀಡುವೆಯೇನು
ಆ ಹೊಸ ಸ್ಪರ್ಶವನು?

ಕಲ್ಲಿನ ಮುಳ್ಳಿನ ದಾರಿಯನು
ಸವೆದಿರುವೆನು ಇಂದಿನವರೆಗೆ..
ಪ್ರೇಮದ ಹೂ ಉಳಿಯುವುದೇನು
ತೋಟದಿ ಅರಳುತ ಕೊನೆವರೆಗೆ?
ನಿನ್ನ ಪ್ರೇಮದ ತೋಟದಿ ಕೊನೆವರೆಗೆ..

- ಅ
2014