Monday, July 20, 2015

ಮಕ್ಕಳೂ, ಶಾಲೆಯೂ, ಪೋಲಿ ಮಾತುಗಳೂ

"ಬೇಡ" ಅಂದಿದ್ದನ್ನು ಮಾಡುವುದರಲ್ಲಿ ಸ್ಕೂಲ್ ಮಕ್ಕಳಿಗೆ ಅದೇನು ಆನಂದ ಸಿಗುವುದೋ ಏನೋ. ಗಲಾಟೆ ಮಾಡ್ಬೇಡ್ರೋ ಅಂದ್ರೆ ಸೂರು ಹಾರಿ ಹೋಗುವ ಹಾಗೆ ಕಿರುಚುತ್ತಿರುತ್ತಾರೆ. ಕಾರಿಡಾರಿನಲ್ಲಿ ಓಡಬೇಡ್ರೋ ಎಂದರೆ ಓಡಿ ಬಂದು ಸ್ಕೇಟಿಂಗ್ ಮಾಡಿ ಬ್ರೇಕ್ ಹಾಕುತ್ತಾರೆ. ಸುಳ್ಳು ಹೇಳಬೇಡ್ರೋ ಎಂದರೆ ಸತ್ಯ ಎಂದರೇನು ಎಂಬುದನ್ನೇ ಮರೆತಿರುವಂತೆ ಆಡುತ್ತಾರೆ. ಮೈದಾನದಲ್ಲಿ ಕೆಲವೊಮ್ಮೆ ಕೆಳಗೆ ಕೂರಿಸಿದಾಗ ನೆಲವನ್ನು ಮುಟ್ಟಬೇಡ್ರೋ ಎಂದರೆ ಮಣ್ಣಲ್ಲಿ ಮನೆ ಕಟ್ಟಿರುತ್ತಾರೆ. ಕೆಟ್ಟ ಮಾತು ಆಡಬೇಡ್ರೋ ಎಂದು ಅದಕ್ಕೇ ನಾನು ಹೇಳಲು ಹೋಗುವುದಿಲ್ಲ. ಆದರೆ ಇದನ್ನು ಮಾತ್ರ ಹೇಳಲಿ, ಹೇಳದೇ ಇರಲಿ ಆಡಿಯೇ ತೀರುತ್ತಾರೆ!

ಟೀಚರುಗಳು ಯಾವಾಗಲೂ ಕಾವಲಿರುವುದರಿಂದ ಮಕ್ಕಳು ಕೆಟ್ಟ ಮಾತುಗಳನ್ನು ಬಹಳ ಕಷ್ಟ ಪಟ್ಟು ಆಡಬೇಕಾಗುತ್ತದೆ. ಹೈಸ್ಕೂಲು ಮಕ್ಕಳು ಈ ವಿಷಯದಲ್ಲಿ ಬಹಳ ಬುದ್ಧಿವಂತರು. ಅವರ ಮಾತುಗಳು ಟೀಚರುಗಳ ಕಿವಿ ಮುಟ್ಟುವುದೇ ಇಲ್ಲ. ಬೆಂಗಳೂರಿನ ಇಂಗ್ಲೀಷ್ ಶಾಲೆಯ ಮಕ್ಕಳ ಪೋಲಿ ಮಾತುಗಳನ್ನು ಅರ್ಥ ಮಾಡುಕೊಳ್ಳುವ ಟೀಚರುಗಳೂ ದುರ್ಲಭ. ಮಿಡ್ಲ್ ಸ್ಕೂಲಿನಲ್ಲೋ ಪ್ರಾಥಮಿಕ ಹಂತದಲ್ಲೋ ಕೆಟ್ಟ ಮಾತುಗಳನ್ನಾಡಿದರೆ ಬೇರೆ ಮಕ್ಕಳು ಚಾಡಿ ಹೇಳಿ ಸಿಕ್ಕಿ ಹಾಕಿಸಿಬಿಡುತ್ತಾರೆ. ಅವರವರು ಚೆನ್ನಾಗಿ ಇರುವವರೆಗೂ ಯಾವ ಚಾಡಿಯೂ ಇರುವುದಿಲ್ಲ.

ಈ ಮಕ್ಕಳು ಬೇರೆ ವಿದ್ಯಾರ್ಥಿಗಳನ್ನೋ ಅಥವಾ ಟೀಚರುಗಳನ್ನೋ ಬೈದುಕೊಳ್ಳಬೇಕಾದರೆ ಅವರಿಗೆ ಸೂಕ್ತವಾದ ಸ್ಥಳ ಶೌಚಾಲಯ. ನಾನು ಹುಡುಗರ ಶೌಚಾಲಯದ ಮಾತುಗಳ ಬಗ್ಗೆ ಮಾತ್ರ ಮಾತನಾಡಬಲ್ಲೆನು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೆ? ನಾವು ಮೇಷ್ಟ್ರುಗಳು ಧಿಡೀರನೆ ಶೌಚಾಲಯದ ಒಳಹೊಕ್ಕರೆ ಅವರುಗಳ ಮಾತು ಹಠಾತ್ತನೆ ನಿಂತು ಹೋಗುತ್ತೆ. "ಐ ವಾಜ಼್ ಟಾಕಿಂಗ್ ಟು ದಟ್ ಬಾ......." ಎಂದು ಅವರ ಮಾತು ನಿಂತರೆ ಏನು ಮಾತು ಹೊರಹೊಮ್ಮುತ್ತಿತ್ತೆಂದು ನಾವೇ ಊಹಿಸಿಕೊಂಡು "ಏಯ್" ಎನ್ನಬೇಕು. ಬಸ್ ಸ್ಟಾಂಡಿನಲ್ಲಿರುವ ಶೌಚಾಲಯಗಳಲ್ಲಿರುವಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಶಾಸನಗಳನ್ನು ಕೆತ್ತಿರುತ್ತಾರೆ. ಅಲ್ಲಿಯೂ ಬೈಗುಳಗಳು! ಇವರ ಬೈಗುಳಗಳ ಶಬ್ದಕೋಶ ಎಷ್ಟು ವಿಶಾಲವಾಗಿರುವುದೆಂದು ತಿಳಿಯಬೇಕಾದರೆ ಶೌಚಾಲಯವನ್ನು ಪರಿಶೀಲಿಸಬೇಕು. ಈಗಿನ ಖಾಸಗಿ ಶಾಲೆಗಳಲ್ಲಿ ಆಗಾಗ್ಗೆ ಪೇಯ್ಂಟ್ ಮಾಡಿಸುವುದಾದ್ದರಿಂದ ಈ ಶಾಸನಗಳು ಹೆಚ್ಚು ದಿನ ಉಳಿಯುವುದಿಲ್ಲ.

ಕೌನ್ಸಿಲ್‍ನ ಕಾರ್ಯಾರ್ಥಿಯಾಗಿ ವರ್ಷಕ್ಕೊಮ್ಮೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದಕ್ಕೆ ಹೋಗುವ ಪ್ರಮೇಯವಿದೆ ನನಗೆ. ಆ ಶಾಲೆಯೋ - ಬಾಲಕಿಯರ ಪ್ರೌಢಶಾಲೆ. ನಮಗೆ ವಹಿಸಿರುವ ಕೊಠಡಿಗಳೆಲ್ಲವೂ ಆ ಬಾಲಕಿಯರ ತರಗತಿಗಳೇ. ಮೇಜಿನ ಮೇಲೆ, ಆ ಬಾಲಕಿಯರ ಬೀರುಗಳ ಮೇಲೆ ಬರೆದಿರುವ ಪದಗಳನ್ನು ನೋಡಿದರೆ ಅವರ ಇಂಗ್ಲೀಷ್ ಶಬ್ದ ಭಂಡಾರವು ಅದೆಷ್ಟು ಬೃಹದ್ಗಾತ್ರವಿರಬಹುದೆಂದು ಅನ್ನಿಸದೇ ಇರುವುದಿಲ್ಲ. ಕಳೆದ ವರ್ಷ ನನಗೆ ನಿಗದಿ ಪಡಿಸಿದ್ದ ಮೇಜಿನ ಮೇಲೆ ಕಂಡ ಚಿತ್ರದ ವಿಷಯವನ್ನು ಅಲ್ಲಿದ್ದ ನನ್ನ ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುವಂತೆಯೂ ಇರಲಿಲ್ಲ. ಬರೆದ ಕಲಾವಿದೆಯ ಗೆಳತಿಯ (ಅಥವಾ ಶತ್ರುವಿನ) ಬಾಯ್‍ಫ್ರೆಂಡಿನ ಗೋಮಟೇಶ್ವರಾವತಾರವು ಅಲ್ಲಿ ಚಿತ್ರಿತವಾಗಿತ್ತು. ಅಲ್ಲದೆ ಆ ಹುಡುಗನು ಯಾವ ಯಾವ ಅಂಗವನ್ನು ಯಾವ ಯಾವ ಕಾರಣಕ್ಕಾಗಿ ಬಳಸುತ್ತಾನೆಂದೂ ಸವಿವರವಾಗಿತ್ತು. ಆ ಹುಡುಗಿ ಜೀವಶಾಸ್ತ್ರದ ವಿದ್ಯಾರ್ಥಿನಿಯಿರಬೇಕೆಂದೆನಿಸಿತಾದರೂ ನಾನು ಆಗ ಏನೂ ಮಾತನಾಡಲಿಲ್ಲ. ಒಂದು ವಾರಕ್ಕೂ ಹೆಚ್ಚು ಕಾಲ ಅಲ್ಲಿ ಕೆಲಸವಿದ್ದುದರಿಂದ ನನ್ನ ಪಾಡಿಗೆ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ಆದರೆ ಪ್ರತಿದಿನವೂ ಕಲೆಯ ದರ್ಶನವಾಗುತ್ತಿತ್ತು. ಅಲ್ಲದೆ, ಕೆಲಸ ಮುಗಿಸಿ ನಮ್ಮ ವಸ್ತುಗಳನ್ನು ಇರಿಸಲು ಕೊಟ್ಟಿದ್ದ ಬೀರುಗಳ ಬಾಗಿಲ ಮೇಲೆ ಡೈರೆಕ್ಟ್ ಸ್ಪೀಚ್ ಅಲ್ಲಿ ಪೋಲಿ ಮಾತುಗಳನ್ನು ಬೈಯ್ಯುವುದು ಹೇಗೆಂದು ಪಾಠ ಹೇಳುವಂತೆ ಬಣ್ಣ ಬಣ್ಣದ ಇಂಕಿನಿಂದ ಬರೆದಿದ್ದರು. ದಿನವೂ ಇವನ್ನು ನಿತ್ಯಪ್ರಾರ್ಥನೆಯೆಂಬಂತೆ ಓದುವಂತಾಗಿತ್ತು. ಒಟ್ಟಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಕಲಿಯದ ಪೋಲಿ ಮಾತುಗಳನ್ನು ನನ್ನ ವಿದ್ಯಾರ್ಥಿಗಳಿಂದ ಕಲಿಯುವಂತಾಯಿತು!

ಹೈಸ್ಕೂಲು ಮಕ್ಕಳಿಗೆ ಕೆಲವು ಪದಗಳ ಅರ್ಥಗಳು ಗೊತ್ತಿಲ್ಲದೇ ಮಾತನಾಡುತ್ತಾರೇನೊ ಅನ್ನಿಸುತ್ತೆ ಒಂದೊಂದು ಸಲ. ಎಷ್ಟರ ಮಟ್ಟಿಗೆ ಎಂದರೆ, ತೀರ ಟೀಚರುಗಳ ಹತ್ತಿರವೂ "Ma'am, Will we be screwed if we don't do this?" ಎಂದೂ ಒಬ್ಬ ಹುಡುಗ ಒಮ್ಮೆ ಕೇಳಿದ್ದ ನಿದರ್ಶನವೂ ಇದೆ. ಆ ಟೀಚರಿನ ಮುಖ ನೋಡಲು ಆಗಲಿಲ್ಲ ನನಗೆ. ಪ್ರಾಂಶುಪಾಲರೋ ಎಲ್ಲ ಟೀಚರುಗಳಿಗೂ ಮಕ್ಕಳ ಅಂತರ್ಜಾಲ ಬಳಕೆಯ ಮೇಲೆ, ಸಂಭಾಷಣೆಗಳ ಮೇಲೆ ಕಣ್ಣಿಟ್ಟಿರಿ ಎಂದು ಆದೇಶ ಕೊಟ್ಟಿರುತ್ತಾರೆ. ಈ ಮಕ್ಕಳ Chat Groupಗಳನ್ನು ನೋಡುವ ಧೈರ್ಯ ಯಾವ ಟೀಚರಿಗೆ ತಾನೆ ಬಂದೀತು? ನೋಡಿದರೂ ಎಷ್ಟು ಟೀಚರುಗಳಿಗೆ ಇವರ ಪೋಲಿ ಮಾತುಗಳು ಅರ್ಥವಾಗುವುದೋ ಗೊತ್ತಿಲ್ಲ.

ನಾನು ಓದಿದ ಶಾಲೆಗೆ "ಅಪ್ಪಟ ಪೋಲಿಗಳ ಸಂಘ" ಎಂಬ ಅಡ್ಡಹೆಸರೇ ಇತ್ತು. ನಮ್ಮ ಪೋಲಿ ಮಾತುಗಳೇನಿದ್ದರೂ ಮಾತೃಭಾಷೆಯಲ್ಲಿಯೇ. ನಮಗೆ ‍ರ‍್-ಕಾರಾಂತ ಪದಗಳೂ ‍ನ್‍ಕಾರಾಂತ ಪದಗಳೂ ಈ ಕಾಲದ ಮಕ್ಕಳ F ಪದಗಳಿಗಿಂತ ಹೆಚ್ಚಾಗಿ ಪರಿಚಿತವಿದ್ದವು. ಮತ್ತು ನಮ್ಮದು ಹುಡುಗರ ಶಾಲೆಯಾದ್ದರಿಂದ ನಮ್ಮ ಮೇಷ್ಟ್ರುಗಳೂ ಸಹ ನಮ್ಮ ತಲಹರಟೆ ಹೆಚ್ಚಾದರೆ "ಮಗನೇ, ಮುಕ್ಳಿ ಮೇಲ್ ಒದ್ರೆ ಸತ್ ಹೋಗ್ಬೇಕು, ಲೋಫರ್" ಎಂದೇ ಬೈಯ್ಯೋರು. (ಈಗಿನ ಕಾಲದ ಮೇಷ್ಟ್ರುಗಳಾದ ನಾವು "ಯಾಕಪ್ಪಾ ಮಾತಾಡ್ತಾ ಇದ್ದೀಯಾ ತರಗತಿಯಲ್ಲಿ?" ಎಂದೇನಾದರೂ ಮಕ್ಕಳನ್ನು ಕೇಳಿದರೆ  ಮಾರನೆಯ ದಿನ ಪೋಷಕರು ಗಲಾಟೆ ಮಾಡುತ್ತ ಬರುತ್ತಾರೆ, ಎರಡನೇ ದಿನ ಪೋಲೀಸರು ಕರೆದೊಯ್ಯುತ್ತಾರೆ, ಮೂರನೆಯ ದಿನ ಮಾಧ್ಯಮದಲ್ಲಿ ನಮ್ಮ ಚಿತ್ರಗಳು ಬರುತ್ತವೆ.)

ಸ್ವಲ್ಪ ವರ್ಷಗಳ ಕೆಳಗೆ ನಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸಣ್ಣದೊಂದು ಕಂಪ್ಯೂಟರ್ ಪ್ರಯೋಗಾಲಯವಿತ್ತು. ಇಡೀ ಶಾಲೆಗೆ ಆರು ಕಂಪ್ಯೂಟರುಗಳಿದ್ದವು. ಅದೇ ಲ್ಯಾಬಿನಲ್ಲಿಯೇ ಪ್ರಾಂಶುಪಾಲರೂ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ನಾನೂ ಅಲ್ಲಿಯೇ ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ನಾನು ಆರನೇ ತರಗತಿಯ ಕಕ್ಷೋಪಾಧ್ಯಯನೂ ಆಗಿದ್ದೆ. ನನ್ನ ತರಗತಿಯ ಇಬ್ಬರು ಮಕ್ಕಳು ಅಲ್ಲಿಗೆ ಬಹಳ ಆತಂಕದಿಂದ ಧಾವಿಸಿ ಬಂದರು. ನನ್ನ ಪಕ್ಕದಲ್ಲಿಯೇ ಪ್ರಿನ್ಸಿಪಾಲ್ ಮೇಡಂ ಇದ್ದಿದ್ದು ನನಗೆ ಸ್ವಲ್ಪ ಮುಜುಗರವೆನಿಸಿತು - ಈ ಮಕ್ಕಳು ಏನು ಗಲಾಟೆ ಮಾಡಲು ಬಂದರೋ ಇವರ ಮುಂದೆ, ನಾಳೆ ನಾನು ಏನು ಉತ್ತರ ಹೇಳಬೇಕೋ, ಎಂದು. ಆದರೆ ನನಗಾದ ಮುಜುಗರ ದ್ವಿಗುಣವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಂದ ಮಕ್ಕಳಲ್ಲಿ ಒಬ್ಬ ಹುಡುಗ "Sir, she said ತಿ* ಮುಚ್ಕೊಂಡ್ ಇರು." ನಾನು "ಶ್..." ಎಂದೆ. ಅದಕ್ಕೆ ಇನ್ನೂ ಹೆಚ್ಚು ಸಿಟ್ಟಾದ ಹುಡುಗ, "Promise sir, she said ತಿ* ಮುಚ್ಕೊಂಡ್ ಇರು". ನಾನು ನನ್ನ ಸೀಟಿನಿಂದ ಎದ್ದೇಳಲು ಪ್ರಯತ್ನಿಸುತ್ತಿದ್ದೆ. ಪಕ್ಕದಲ್ಲಿದ್ದ ಮೇಡಂ ಕೇಳಿಸಿಯೂ ಕೇಳಿಸದಂತೆ ತಮ್ಮ ಕೆಲಸ ತಾವು ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಅಲ್ಲಿ ಬಂದಿದ್ದ ಹುಡುಗಿ "No sir, he only said ತಿ* ಮುಚ್ಕೊಂಡ್ ಇರು. I never said ತಿ* ಮುಚ್ಕೊಂಡ್ ಇರು". ನನ್ನ ಮುಜುಗರದ ಮಿತಿಯು ಮೀರಿ ಹೋಗಿತ್ತು. ಅವರಿಬ್ಬರಿಗೂ ನಾನು ಅದೇ ಮಾತನ್ನು ಹೇಳಬೇಕೆನ್ನುವಷ್ಟು ತಾಳ್ಮೆಗೆಡುವಂತಾಯಿತು. ನಂತರ ಹೇಗೋ ಅವರನ್ನು ಹೊರಗೆ ಕರೆದುಕೊಂಡು ಹೋಗಿ "ನೋಡಿ, ಹಾಗೆಲ್ಲಾ ಬೈಗುಳಗಳನ್ನು ಪದೇ ಪದೇ ಹೇಳುತ್ತಿರಬಾರದು, ಯಾರೇ ಅನ್ನಲಿ." ಎಂದು ಬುದ್ಧಿವಾದ ಹೇಳಿದೆ. ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ, ಲ್ಯಾಬಿನ ಒಳಗೆ ಪ್ರಾಂಶುಪಾಲರು ಒಬ್ಬರೇ ನಗುತ್ತಿದ್ದರು.

ಒಮ್ಮೆ ಶಾಲೆಯ ಬಸ್ಸಿನಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಯಾವುದೋ ಕಾರಣಕ್ಕೆ ಜಗಳವಾಗಿತ್ತು. ನಾನು ಆ ಬಸ್ಸಿನಲ್ಲಿ ಅಟೆಂಡೆನ್ಸ್ ಹಾಕಲು ಹೋಗಿದ್ದೆ. ಅವರ ಜಗಳಕ್ಕೆ ನಾನು ನ್ಯಾಯಾಧೀಶನೆಂದು ತೀರ್ಮಾನಿಸಿದ ಆ ಮಕ್ಕಳು ನನ್ನೆಡೆಗೆ ಬಂದು ಮೇಲೆ ಹೇಳಿದ ಕಥೆಯ ಮಾದರಿಯಂತೆಯೇ ವರದಿ ಒಪ್ಪಿಸಿದರು. "Sir, he called me f**ker" ಎಂದು ಒಬ್ಬ, "No, he is only calling me f**ker" ಎಂದು ಇನ್ನೊಬ್ಬ - ಇಬ್ಬರೂ ಇನ್ನೂ ಚಡ್ಡಿಯನ್ನೂ ಸರಿಯಾಗಿ ಹಾಕಿಕೊಳ್ಳಲು ಬಾರದ ವಯಸ್ಸಿನ ಹುಡುಗರು - ನನಗೆ ಚಾಡಿ ಹೇಳಿದರು. ಈ ಮಾತುಗಳನ್ನು ಎಲ್ಲಿಂದ ಕಲಿಯುತ್ತಿದ್ದಾರೆಂದು ಆಶ್ಚರ್ಯವಾಯಿತು, ಗಾಬರಿಯೂ ಆಯಿತು. ಯಾರನ್ನು ದೂರುವುದು? ಪೋಷಕರನ್ನೋ, ಹಿರಿಯ ವಿದ್ಯಾರ್ಥಿಗಳನ್ನೋ, ಮಾಧ್ಯಮವನ್ನೋ, ಸಿನಿಮಾ ಟಿ.ವಿ. ಶೋಗಳನ್ನೋ, ನಮ್ಮನ್ನೋ? ಪ್ರಾಂಶುಪಾಲರೊಡನೆ ಚರ್ಚಿಸಿದಾಗ ಅವರು ಆ ಇಬ್ಬರೂ ಮಕ್ಕಳ ಪೋಷಕರನ್ನು ಬರಹೇಳಿದರು. ಒಬ್ಬ ಹುಡುಗನ ತಂದೆ "We will take care, ಇನ್ನೊಂದ್ ಸಲ ಹೀಗೆ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತೇವೆ, thanks for the information" ಎಂದು ಹೇಳಿ ಹೊರಟು ಹೋದರು. ಇನ್ನೊಬ್ಬ ಹುಡುಗನ ತಂದೆ ಬಹಳ ನೊಂದುಕೊಂಡುಬಿಟ್ಟಿದ್ದರು. ಪ್ರಾಂಶುಪಾಲರು ನನ್ನನ್ನು ಬರಹೇಳಿದರು. ಅವರನ್ನು ಸಮಾಧಾನಿಸಲು ಯತ್ನಿಸಿದೆವು. ತುಂಬ ನೊಂದುಕೊಂಡ ತಂದೆ ತಮ್ಮ ಮಗನನ್ನು ಕರೆಸಿಕೊಂಡರು. ಆ ಹುಡುಗ ಪ್ರಾಂಶುಪಾಲರ ಕೊಠಡಿಗೆ ಬರುತ್ತಿದ್ದಂತೆಯೇ, ಅಲ್ಲಿಯವರೆಗೂ ಅತಿ ಸೊಗಸಾದ ಇಂಗ್ಲೀಷಿನಲ್ಲಿ ಮಾತನಾಡುತ್ತಾ ನೊಂದುಕೊಳ್ಳುತ್ತಿದ್ದ ತಂದೆಗೆ ಸಿಟ್ಟು ಹೆಚ್ಚಾಗಿ ತಮ್ಮ ಮಾತೃಭಾಷೆ ಬಾಯಿಗೆ ಬಂದುಬಿಟ್ಟಿತು. "ಸೂಳಿಮಗ್ನ, ಶಾಲೀಗ್ ಕಳ್ಸೋದ್ ಓದಕ್ಕೋ ಕೆಟ್ ಕೆಟ್ ಮಾತ್ ಆಡೋಕೋ ನಿಮ್ಮೌನ್, ಮನೀಗ್ ಬಾ ಮಾಡ್ತೀನ್ ಮಂಗ್ಯಸೂಳಿಮಗ ಇದ್ದೀಯ ನೀನು" ಎಂದು ನಮ್ಮೆಲ್ಲರ ಮುಂದೆ ಬೈದರು.  ಪ್ರಾಂಶುಪಾಲರಿಗೆ ಏನೂ ಅರ್ಥವಾಗಲಿಲ್ಲ. ನಾನು ಅವರನ್ನು ಹೊರಡಲು ಸೂಚಿಸಿ, "ನಿಮ್ಮ ಮಗನ ಮಾತುಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ" ಎಂದು ಹೇಳಿ, ನಾನೂ ಆ ಜಾಗ ಖಾಲಿ ಮಾಡಿದೆ.

- ಅ
20.07.2015
11 PM