Wednesday, March 30, 2016

ಟ್ವಿಟ್ಟರ್ ಲೋಕದ ಅನುಭವ


ಕೆಲವು ತಿಂಗಳುಗಳ ಕೆಳಗೆ ಗೆಳೆಯ ಸಂಜಯ್ ಮೆಸೇಜಿನಲ್ಲಿ "ಒಂದು ಕಿರುಚಿತ್ರ ಮಾಡುತ್ತಿದ್ದೇವೆ, ಆಸಕ್ತಿಯಿದ್ದರೆ ಹೇಳಿ." ಎಂದು ಹೇಳಿದ್ದ. ನಾನು "ಹಾಡೋ, ಸಂಭಾಷಣೆಯೋ, ಅಥವಾ ಏನಾದರೂ ಬರವಣಿಗೆಯ ಕೆಲಸವಿದ್ದರೆ ಹೇಳಪ್ಪಾ" ಎಂದಿದ್ದೆ. ನನಗೆ ಬೇರೆ ಏನು ತಾನೆ ಗೊತ್ತಿದೆ? ವೃತ್ತಿಯಲ್ಲಿ ನಾನೊಬ್ಬ ಸ್ಕೂಲ್ ಮೇಷ್ಟ್ರು. ಬರವಣಿಗೆಯು ಹವ್ಯಾಸ. ಹಾಡುತ್ತೇನೆಂಬ ಭ್ರಮೆಯೂ ಕೆಲವು ದಿನಗಳವರೆಗೆ ನನ್ನಲ್ಲಿತ್ತು - ನನ್ನ ಕೆಲವು ಆಪ್ತರಿಂದ ನಾನು ಹೇಳುವುದು ಹಾಡಲ್ಲ, ಅಪಶ್ರುತಿಯ ಅರಚಾಟವೆಂಬ ಮನವರಿಕೆಯಾದ ಮೇಲೆ ಬಾಯಿ ತೆರೆಯುವುದನ್ನು ನಿಲ್ಲಿಸಿ ಜಗತ್ತಿಗೆ ಉಪಕಾರಿಯಾದೆ. ಪಾಠ ಮಾಡುವುದು, ನನ್ನ ಸಂತಸಕ್ಕೆ ಕವನ, ಪ್ರಬಂಧ ಬರೆದುಕೊಳ್ಳುವುದು - ಇವಿಷ್ಟು ಬಿಟ್ಟರೆ, ನನ್ನಲ್ಲಿ ಬೇರಾವ ಪ್ರತಿಭೆಯನ್ನೂ ನಾನು ಕಾಣೆ. "ಸ್ಕ್ರಿಪ್ಟು, ಬರವಣಿಗೆ ಎಲ್ಲಾ ಆಗಿದೆ. ನೀವ್ ಬನ್ನಿ, ಸ್ಟುಡಿಯೋಗೆ, ಮಾತಾಡೋಣ." ಎಂದು ಸಂಜಯ್ ಸ್ನೇಹಪೂರಿತ ಆಣತಿಯನ್ನಿತ್ತ.

ಕಿರುಚಿತ್ರದ ಸಂಪೂರ್ಣ ಸಾರಥ್ಯವನ್ನು ಹೊತ್ತ ಹಿರಿಯ ಮಿತ್ರ ಶ್ರೀ ಪ್ರವೀಣ್ ನಾಯಕ್ ಅವರ ಸ್ಟುಡಿಯೋಗೆ ಎಲ್ಲರನ್ನೂ ಸುಮ್ಮನೆ ಭೇಟಿಯಾಗಿ ಬರೋಣವೆಂದು ಹೊರಟೆ. ಅಲ್ಲಿ ನಾಲ್ಕೈದು ಟ್ವಿಟರ್ ಮಿತ್ರರಿದ್ದರು. ಅವರೆಲ್ಲರ ಪರಿಚಯವೂ ಅಲ್ಲಿಯೇ ಆಯಿತು. "ಸರ್, ಈ ಡೈಲಾಗನ್ನು ಸುಮ್ಮನೆ ಹೇಳಿ..." ಎಂದು ಸಂಜಯ್ ನನಗೆ  ಸಂಭಾಷಣೆಯ ಹಸ್ತಪ್ರತಿಯೊಂದನ್ನು ಕೊಟ್ಟ. ನನಗಿಂತ ಮುಂಚೆಯೇ ಬಂದಿದ್ದ ಮಿತ್ರರೆಲ್ಲರೂ ಸ್ಟುಡಿಯೋ ಒಳಗೆ ಇದನ್ನೇ ಮಾಡಿದ್ದರು, ಮಾಡುತ್ತಿದ್ದರು. ನಾನೂ ಬಂದು ಅದು ಯಾವ ಡೈಲಾಗಿದೆಯೋ ಅದನ್ನು ಹೇಳಿದೆ. ಜೊತೆಗೆ "ಹೃದಯ ಸಮುದ್ರ ಕಲಕಿ.." ಹಾಡನ್ನೂ ನನ್ನಿಂದ ಹಾಡಿಸಿ, ಅದನ್ನೂ ರೆಕಾರ್ಡ್ ಮಾಡಿಕೊಂಡರು.  ವಿಡಿಯೋ ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿದ್ದರು ಶ್ರೀ ಪ್ರವೀಣ್ ಅವರು. ಈ ವೇಳೆ ನಾನು ಇದನ್ನೇ ಶೂಟಿಂಗ್ ಎಂದು ಬಗೆದಿದ್ದೆ. ನನಗೆ ಕಥೆ ಏನು, ಸಂಭಾಷಣೆಗಳೇನೇನು, ಯಾವ ಹಾಡು ಎಲ್ಲಿ ಬರುತ್ತೆ - ಏನೂ ಗೊತ್ತಿರಲಿಲ್ಲ. ಎಲ್ಲವೂ ಆ ಸ್ಟುಡಿಯೋ ಒಳಗೇ ಆಗುತ್ತೆ ಎಂದುಕೊಂಡಿದ್ದೆ. ಅದೆಲ್ಲವೂ ಮುಗಿದ ಮೇಲೆ ಸಂಜಯ್, "ಇದು ಸುಮ್ಮನೆ ಟೆಸ್ಟಿಂಗು ಅಷ್ಟೆ. ಮುಂದಿನ ವಾರವೋ ಅದರ ಮುಂದಿನ ವಾರವೋ ನಿಮ್ಮನ್ನು ಸರ್ ಬರಹೇಳುತ್ತಾರೆ" ಎಂದು ಒಳಗೆ ಗೆಳೆಯ ಮುರಳಿಯ ಚಿತ್ರೀಕರಣ ಮಾಡುತ್ತಿದ್ದ ಪ್ರವೀಣ್ ನಾಯಕ್ ಅವರನ್ನು ತೋರಿಸಿ ಹೇಳಿದ.

ಮುಕ್ಕಾಲುಪಾಲು ಸದ್ಯದಲ್ಲೇ "ಶೂಟಿಂಗ್"ಗೆ ಹೋಗಬೇಕು ಎಂದು ನಾನು ಮನೆಯಲ್ಲಿ ಹೇಳಿದಾಗ, "ಶೂಟಿಂಗ್ ಎಲ್ಲಾ ನೋಡ್ಕೊಂಡ್ ಕೂತಿರೋದರ ಬದಲು ಏನಾದ್ರೂ ಉಪಯೋಗ ಆಗೋ ಕೆಲ್ಸ ಮಾಡ್ಬಾರ್ದಾ?" ಎಂದು ಅಮ್ಮ ನನಗೆ  ಹೇಳಲಿಲ್ಲವಾದರೂ ಅವರ ಪ್ರಶ್ನಾರ್ಥಕ ನೋಟವು ಇದನ್ನು ಸೂಚಿಸಿತ್ತು. ಅಮ್ಮನಿಗೆ,  "ನಾನು ಕೂಡ ಒಂದು ಪಾರ್ಟ್ ಮಾಡ್ತಾ ಇದ್ದೀನಿ" ಎಂದಾಗ ಅವರಿಗೆ ನನ್ನ ಮೇಲೆ ಅಸಮಾಧಾನವಾಗಲಿಲ್ಲ, ಬದಲಿಗೆ - "ನಿನಗ್ಯಾರಪ್ಪ ಈ ಅವಕಾಶ ಎಲ್ಲಾ ಕೊಟ್ಟೋರು! ಅವರ ಧೈರ್ಯ ಮೆಚ್ಚಬೇಕಾದ್ದೇ!" ಎಂದರು. ನನಗೂ ಆರಂಭದಲ್ಲಿ ಹಾಗೆಯೇ ಅನ್ನಿಸಿತ್ತು. ಈಗಲೂ ಅನಿಸಿಕೆಯೇನೂ ಹೆಚ್ಚು ಬದಲಾಗಿಲ್ಲ.

ಶೂಟಿಂಗಿನ ದಿನ ಅನೇಕ ಟ್ವಿಟ್ಟರ್ ಗೆಳೆಯರನ್ನು ಭೇಟಿ ಮಾಡಿದೆ. ಚಿಕ್ಕವಯಸ್ಸಿನಿಂದಲೂ ದಾರಿಯಲ್ಲೆಲ್ಲಾದರೂ ಯಾವುದಾದರೂ ಶೂಟಿಂಗನ್ನು ನೋಡಿದಾಗ "ಯಾವತ್ತಾದರೂ ಒಂದು ದಿನ, ಒಂದು ಸಲವಾದರೂ ನಾನೂ ಹೀಗೆ ಮಾಡಬೇಕು" ಎಂಬ ಆಸೆಯಾಗುತ್ತಿತ್ತು. ನಾಟಕದ ಬಗ್ಗೆ ನನಗೆ ಹೀಗೇ ಆಸೆಯಿತ್ತು - ಒಂದು ಸಲ ಸ್ಟೇಜಿನ ಮೇಲೆ ಹೋಗಿ ಯಾವುದಾದರೂ ಪಾತ್ರ ಮಾಡಬೇಕು ಎಂದು - ಆ ಆಸೆಯು ಕೆಲವು ವರ್ಷಗಳ ಹಿಂದೆ ತೀರಿತ್ತು. ಶೂಟಿಂಗಿನಲ್ಲಿ ಪಾತ್ರ ವಹಿಸುವ  ಆಸೆಯು ಇಲ್ಲಿ ತೀರಿತ್ತು.

ಪ್ರವೀಣ್ ನಾಯಕ್ ಮತ್ತು ಅವರ ಪತ್ನಿಯನ್ನು ಹೊರತು ಪಡಿಸಿ ಇಲ್ಲಿದ್ದವರೆಲ್ಲರಿಗೂ ಇದು ಮೊದಲ ಅನುಭವವೇ. ಲೈಟುಗಳು, ಥರ್ಮಕೋಲುಗಳು, ಅದನ್ನು ಹಿಡಿದು ನಿಂತಿರುತ್ತಿದ್ದ ಸಹಾಯಕ ನಿರ್ದೇಶಕರುಗಳು (ಅವರೂ ನನ್ನ ಟ್ವಿಟರ್ ಮಿತ್ರರೇ ಆದರೂ), ಮೊದಲ ಬಾರಿಗೇ ಸೊಗಸಾಗಿ ಅಭಿನಯಿಸುತ್ತಿದ್ದ ನನ್ನ ಜೊತೆಗಾರರು - ಇವೆಲ್ಲವನ್ನೂ ನೋಡಿದ ನನ್ನಲ್ಲಿ ಭಯವು ಮನೆ ಮಾಡಿತ್ತು. ನನ್ನಷ್ಟಲ್ಲದಿದ್ದರೂ ನನ್ನ ಗೆಳೆಯರೂ ಸಹ ತಪ್ಪುಗಳನ್ನು ಮಾಡುತ್ತಿದ್ದರಷ್ಟೆ. ಆದರೆ, ನಮ್ಮೆಲ್ಲರ ತಪ್ಪುಗಳನ್ನು ಮನ್ನಿಸಿ ಎಂದೂ ಎಲ್ಲಿಯೂ ಯಾರಿಗೂ ಬೈಯದೆ, ನಗುತ್ತ, ನಮ್ಮನ್ನೂ ನಗಿಸುತ್ತ, ತಿದ್ದುವ ಸೌಜನ್ಯವುಳ್ಳ ನಿರ್ದೇಶಕ ಪ್ರವೀಣ್ ಅವರ ಈ ಸ್ವಭಾವವು ನನಗೆ ತುಂಬ ಹಿಡಿಸಿತು.

ಹಿಂದಿನ ದಿನ ಸಂಜಯ್ ನನ್ನ ಡೈಲಾಗುಗಳನ್ನು ಮೆಸೇಜಿನಲ್ಲಿ ಕಳಿಸಿದ್ದ. ಅದನ್ನು ನಾನು ಓದಿಕೊಂಡಿರಲೇ ಇಲ್ಲ. ಅಲ್ಲಿಗೆ ಹೋದ ಮೇಲೆ ಹಸ್ತಪ್ರತಿಯನ್ನು ಕೈಗಿತ್ತು ಅಭ್ಯಾಸ ಮಾಡಿಕೊಳ್ಳಲು ಹೇಳಿದ. ಪಾಠ ಮಾಡಿ ಅನುಭವವಿದ್ದ ನಾನು ಉಡಾಫೆಯಿಂದ "ಇದನ್ನೇನು ಓದೋದು" ಎಂದು ಸುಮ್ಮನಿದ್ದೆ. ಮುಂದೆ ಚಿತ್ರೀಕರಣದ ವೇಳೆ ನಾನು ತಡವರಿಸಿ ತತ್ತರಿಸಿದ್ದಕ್ಕೆ ಈ ಉಡಾಫೆಯೇ ಕಾರಣವೆಂದು ಮನವರಿಕೆಯಾಯಿತು. ನನಗೆ ಚಿತ್ರದ ಹೆಸರು "ಟ್ವಿಟ್ಟರ್ ಲೋಕ" ಎಂದು ತಿಳಿದಿದ್ದೇ ಆಗ ಆದರೂ, ಅದರ ಕಥೆಯೇನೆಂಬುದು ತಿಳಿಯಲಿಲ್ಲ. ನನ್ನ ಪಾತ್ರ - ಹಾಗೂ ನನ್ನೊಡನೆ ಅಭಿನಯಿಸಿದವರ ಪಾತ್ರಗಳ ಬಗ್ಗೆ ಮಾತ್ರವೇ ಗೊತ್ತಿತ್ತು. ಸಂಕಲನವು ಮುಗಿದು, ಸಂಪೂರ್ಣ ಚಿತ್ರವು ಬಿಡುಗಡೆಯಾದ ಮೇಲೆಯೇ ಕಥೆಯೇನೆಂದು ಗೊತ್ತಾಗಿದ್ದು - ಮತ್ತು ಅದು ಇಷ್ಟು ಸೊಗಸಾಗಿದೆಯೆಂದು ಮನದಟ್ಟಾಗಿದ್ದು.

ಹೊರಾಂಗಣ ಚಿತ್ರೀಕರಣದ ವೇಳೆ ಬೇರೆ ಬೇರೆ ಸದ್ದುಗಳೆಲ್ಲಾ ಇದ್ದುದರಿಂದ ಧ್ವನಿಯು ಸರಿಯಾಗಿ ರೆಕಾರ್ಡ್ ಆಗದೇ ಇದ್ದ ಕಾರಣ ಡಬ್ಬಿಂಗ್ ಮಾಡುವ ನಿರ್ಣಯವು ಚಿತ್ರತಂಡದವರದಾಗಿತ್ತು. ನನಗೆ - ಮತ್ತು ನನ್ನಂತಹ ಮೊದಲಿಗರಿಗೆ - ಇದು ಇನ್ನೊಂದು ಅದ್ಭುತ ಅನುಭವ. ಡಬ್ಬಿಂಗ್ ಸ್ಟುಡಿಯೋದ ಮುಂದೆ ಟ್ವಿಟ್ಟರ್ ಗೆಳೆಯರು  ಎಲ್ಲರೂ ಕುಳಿತು ಹರಟುತ್ತ ಇರುವಾಗ ಒಬ್ಬೊಬ್ಬರೇ ಒಳಗೆ ಹೋಗಿ, ತಮ್ಮ ಡಬ್ಬಿಂಗ್ ಮುಗಿಸಿ ಬರುತ್ತಿದ್ದರು. ನನ್ನ ಸರದಿ ಈಗ ಬರುತ್ತೆ, ಆಗ ಬರುತ್ತೆ ಎಂದು ಕಾಯುತ್ತಿದ್ದೆ. ಒಬ್ಬೊಬ್ಬರೂ ತಮ್ಮ ಡಬ್ಬಿಂಗ್ ಮುಗಿಸಿ ಬಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾಗಲೂ ನನಗೆ ಆತಂಕವು ಹೆಚ್ಚಾಗುತ್ತಿತ್ತು. ಇದು ಹೇಗೆ ಮಾಡುವುದೋ ಏನೋ, ನನಗೆ ಆಗುತ್ತೋ ಇಲ್ಲವೋ, ನಾನು ಅರ್ಹನೋ ಅಲ್ಲವೋ - ಸಾಕಷ್ಟು ಪ್ರಶ್ನೆಗಳು ನನ್ನನ್ನು ಕಾಡಿದವು. ಕಿರಣ್ ಅವರು ತಮ್ಮ ಡಬ್ಬಿಂಗ್ ಮುಗಿಸಿ ಬಂದಾಗ - "ಹೇಗಿತ್ತು ನಿಮ್ಮ ಅನುಭವ?" ಎಂದು ಯಾರೋ ಕೇಳಿದಾಗ ಪ್ರವೀಣ್ ನಾಯಕ್ ಅವರು "ಏನು ಫಸ್ಟ್ ನೈಟ್ ಮುಗಿಸಿ ಬಂದವರನ್ನು ಕೇಳೋ ಥರಾ ಕೇಳ್ತಾ ಇದ್ದೀರಲ್ಲ?" ಎಂದು ಕಿಚಾಯಿಸಿದರು. ತಕ್ಷಣ ನನಗೆ, "ನಾನು ಅರ್ಹ, ನನಗೆ ಆಗುತ್ತೆ, ಇದನ್ನು ಹೇಗೆ ಮಾಡುವುದೆಂದು ನಾನು ಬಲ್ಲೆ" ಎಂದು ನಿರ್ಧರಿಸಿದೆ. ಡಬ್ಬಿಂಗಿಗೆ ಆ ದಿನದಂದು ನಾನೇ ಕೊನೆಯವನಾದ್ದರಿಂದ  ನನಗಿಂತಲೂ ಮುಂಚೆಯೇ ಡಬ್ಬಿಂಗ್ ಮಾಡಿದ್ದವರಿಂದ ನನಗೆ ತುಂಬಾ ಸಹಾಯವಾಯಿತು. ಅವರುಗಳ ಡೈಲಾಗುಗಳನ್ನು ಕೇಳಿಕೊಂಡು ನಾನೂ ತಕ್ಕ ಮಟ್ಟಿಗೆ ಕಲಿತುಕೊಂಡೆ.

ಇದಾದ ನಂತರ ಚಿತ್ರದ ಬಗ್ಗೆ ಒಂದೆರಡು ತಿಂಗಳು ಮಾತೇ ಇರಲಿಲ್ಲ. ಈ ಸಮಯದಲ್ಲಿ ಪ್ರಮುಖ ತಂಡವು ಸಾಕಷ್ಟು ಕ್ರಿಯಾಶೀಲ ಕೆಲಸವನ್ನೇ ಮಾಡಿರಬೇಕು ಎಂಬುದು ಚಿತ್ರವು ಮೊನ್ನೆ ಭಾನುವಾರ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡಾಗ ಸಾಬೀತಾಯಿತು. ಪ್ರದರ್ಶನಕ್ಕೆ ಅಮ್ಮ, ಪರ್ಣಿಕಾ, ಅಕ್ಕ ಕೂಡ ಬಂದಿದ್ದರು. ನನ್ನನ್ನು ನಾನು ಪರದೆಯ ಮೇಲೆ ನೋಡಿಕೊಂಡಾಗ ಮುಜುಗರವೂ ಸಂಕೋಚವೂ ಆಯಿತು. ನನ್ನ ಧ್ವನಿಯನ್ನು ನಾನೇ ಕೇಳಿಕೊಂಡಾಗ ಮುಖ ಹಿಂಡುವ ಹಾಗಾಯಿತು. ಅಮ್ಮನಿಗೆ ಚಿತ್ರಕಥೆಯು ಅರ್ಥವಾಗಿರುವುದು ಸಂದೇಹ. ಅವರಿಗೆ ಸಾಮಾಜಿಕ ಜಾಲತಾಣಗಳ ಪರಿಚಯ ಇಲ್ಲವೇ ಇಲ್ಲ. ತನ್ನ ಮಗ ಪರದೆಯ ಮೇಲಿದ್ದಾನೆಂಬುದಷ್ಟೇ ಅವರಿಗೆ ಮುಖ್ಯವಾಗಿತ್ತು. ಅಕ್ಕ ಮತ್ತು ಪರ್ಣೀಕಾ ಇಬ್ಬರೂ ಇಷ್ಟ ಪಟ್ಟರು.

"ಟ್ವಿಟ್ಟರ್ ಲೋಕ"ದ ಯಾವ ಪಾತ್ರವೂ ನನಗೆ ನೇರವಾಗಿ ಹೊಂದುವುದಿಲ್ಲವಾದರೂ, ಎಲ್ಲ ಪಾತ್ರಗಳಲ್ಲೂ ಸ್ವಲ್ಪ ಸ್ವಲ್ಪವಾಗಿ ನಾನು ಇದ್ದೇನೆ ಎನ್ನಿಸದೇ ಇರಲಿಲ್ಲ. ಬಹುಶಃ ನನ್ನ ಹಾಗೆಯೇ ನನ್ನ ಜೊತೆಗೆ ಪಾತ್ರವಹಿಸಿದ್ದ ನನ್ನ ಗೆಳೆಯರಿಗೂ ಅನ್ನಿಸಿರಬಹುದೇನೋ, ಗೊತ್ತಿಲ್ಲ. ಆಗಲೇ ಹೇಳಿದ ಹಾಗೆ ಚಿತ್ರೀಕರಣದ ವೇಳೆಯಲ್ಲಾಗಲೀ, ಭೇಟಿಯಾದ ಸಮಯದಲ್ಲಾಗಲೀ - ನನಗೆ ಕಥೆಯ ಅರಿವಿರಲಿಲ್ಲ. ಪ್ರದರ್ಶನದಲ್ಲಿಯೇ ನಾನು ಮೊದಲ ಬಾರಿ ಚಿತ್ರವನ್ನು ನೋಡಿದ್ದು, ನನಗೆ ಕಥೆಯ ಅರಿವಾಗಿದ್ದು.

ನೈಜ ಬದುಕಿನ ಕಪ್ಪು-ಬಿಳುಪು, ನಿರೂಪಣೆಯ ಮತ್ತು ನೆನಪಿನ ಸೆಪಿಯಾ, ಮಿಥ್ಯೆಯ ಬಣ್ಣ ಬಣ್ಣದ ಬದುಕು - ಇವನ್ನು ಅತಿ ಸೊಗಸಾಗಿ ಅರ್ಧಗಂಟೆಯ ವೇಳೆಯಲ್ಲಿ ವೈಚಾರಿಕವಾಗಿ ಹೇಳುವ ಪ್ರಯತ್ನವನ್ನು ಬಹಳ ಪ್ರೀತಿಯಿಂದ ಶ್ರೀ ಪ್ರವೀಣ್ ನಾಯಕ್ ಮತ್ತು ಅವರ ತಂಡವು "ಟ್ವಿಟ್ಟರ್ ಲೋಕ"ದಲ್ಲಿ ಮಾಡಿದ್ದಾರೆ. ಈ ಪ್ರಾಮಾಣಿಕ ಪ್ರಯತ್ನದಲ್ಲಿ ನನ್ನದೂ ಒಂದು ಪಾತ್ರವಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.

- ಅ
30. 03. 2016
2.30 PM