Monday, September 5, 2016

ಶಿಕ್ಷಕರ ದಿನಾಚರಣೆ - 2016

( ಈ ವರ್ಷದ ಶಿಕ್ಷಕರ ದಿನಾಚರಣೆಯ ಸಮಯದಲ್ಲಿ ನನ್ನ ಒಬ್ಬ ವಿಶೇಷ ಗುರುವೊಬ್ಬರನ್ನು ನೆನೆಸಿಕೊಳ್ಳಲು ಇಚ್ಛಿಸುತ್ತೇನೆ. )

ಪ್ರೊ. ಜಿ. ವೆಂಕಟಸುಬ್ಬಯ್ಯನವರು ನಮ್ಮ ಶಾಲೆಯ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಅವರನ್ನು ತಮ್ಮ ನಿವಾಸದಿಂದ ನಮ್ಮ ಶಾಲೆಗೆ ಕರೆದುಕೊಂಡು ಬರುವ ಹೊಣೆಯು ನನ್ನದಾಗಿತ್ತು. ಶ್ರೀ ಜಿ.ವಿ.ಯವರ ಪರಿಚಯ ನನಗೆ "ಚಿತ್ರಚಾಪ" ಪುಸ್ತಕದ ದಿನದಿಂದಲೂ ಇದ್ದುದರಿಂದ ಅವರೊಡನೆ ಮಾತನಾಡಲು ನನಗೆ ಸಂಕೋಚವೆನ್ನಿಸಲಿಲ್ಲ. ಆದರೂ ಏನು ಕೇಳಬೇಕೆಂದು ತೋಚದೆ, "ಸರ್, ನಿಮಗೆ ನಮ್ಮ ಶಾಲೆಯ ಪ್ರಿನ್ಸಿಪಾಲರು ಜಯಂತಿ ಮೇಡಂ ಹೇಗೆ ಗೊತ್ತು?" ಎಂದೆ. ಅದಕ್ಕವರು "I know her from her infancy! ನಮ್ಮ ಮನೆಯಲ್ಲಿ ಆಡಿ ಬೆಳೆದವಳು ಅವಳು" ಎಂದರು. ಜಯಂತಿ ಮೇಡಂ ನನಗಿಂತ ಬಹಳ ಹಿರಿಯರು. ಮೇಲಾಗಿ ನನ್ನ ಪ್ರಾಂಶುಪಾಲರು. ಅವರ ಬಗ್ಗೆ ಜಿ.ವಿ.ಯವರು ಏಕವಚನದಲ್ಲಿ ಮಾತನಾಡಿದಾಗ ಸ್ವಲ್ಪ ಮುಜುಗರವೆನ್ನಿಸಿತು. ಬಳಿಕವೇ ಅರ್ಥವಾಯಿತು, ಜಿ.ವಿ.ಯವರು ಮೇಡಮ್ಮಿಗಿಂತಲೂ ಬಹಳ ಹಿರಿಯರು ಎಂದು. ಜಿ.ವಿ.ಯವರು ಇನ್ನೇನು ನೂರು ಮುಟ್ಟುವುದರಲ್ಲಿದ್ದರು.


ಜಯಂತಿ ಮೇಡಂ ಬಗ್ಗೆ ಜಿ.ವಿ. ಯವರ ಅನಿಸಿಕೆಗಳನ್ನೆಲ್ಲಾ ತಿಳಿದುಕೊಳ್ಳುವ ಮನಸ್ಸಾಯಿತಾದರೂ ಅದರ ಬಗ್ಗೆ ಏನೂ ಪ್ರಶ್ನೆ ಮಾಡಲಿಲ್ಲ. ಅವರೇ "ಯಾರ ಮನಸ್ಸನ್ನೂ ನೋಯಿಸಲ್ಲ, ಜಯಂತಿ. ತುಂಬಾ ಮೃದು ಸ್ವಭಾವ." ಎಂದರು. ನನಗೆ ಥಟ್ಟನೆ ಜಯಂತಿ ಮೇಡಮ್ಮು ತಮ್ಮ ಎತ್ತರದ ಸ್ವರವನ್ನು ಹೊಂದಿದ ಕಂಠದಲ್ಲಿ ಇಡೀ ಶಾಲೆಗೆ ಕೇಳಿಸುವ ಹಾಗೆ "What is happening here?" ಎಂದು ಕೂಗಿದಾಗ ಇಡೀ ಶಾಲೆಗೆ ಶಾಲೆಯೇ - ಟೀಚರುಗಳನ್ನೂ ಸೇರಿಸಿ - ನಿಃಶಬ್ದವಾಗುವುದು ನೆನಪಾಯಿತು. ನನ್ನ ಸಹೋದ್ಯೋಗಿಗಳೇ "ಮೇಡಂ ಬೈದ್ರು" ಎಂದು ಸಪ್ಪೆ ಮುಖ ಮಾಡಿಕೊಂಡಿರುವುದೂ, ವಿದ್ಯಾರ್ಥಿಗಳು "ಸರ್, ಜಯಂತಿ ಮೇಡಂ ಹೀಗೆ ನಡೆದುಕೊಂಡು ಹೋದರು, ಅದಕ್ಕೇ ಕ್ಲಾಸು ಸೈಲೆಂಟಾಗಿದೆ" ಎಂದು ಹೇಳಿದ್ದೂ ಎಲ್ಲವೂ ಮನಸ್ಸಿನ ಮುಂದೆ ಬಂದುಹೋಯಿತು.  ಜಯಂತಿ ಮೇಡಂ ಎಂದರೆ ತುಂಬಾ ಸ್ಟ್ರಿಕ್ಟು, ತುಂಬಾ ಸಿಟ್ಟು, ತುಂಬಾ ಕಟ್ಟುನಿಟ್ಟು - ಎಂಬ ನಂಬಿಕೆಯಲ್ಲಿಯೇ ನಾನೂ ನನ್ನ ಸಹೋದ್ಯೋಗಿಗಳಿದ್ದೆವು. ಈ ನಮ್ಮ ನಂಬಿಕೆಗಳು ಅವರ ನಿಜವಾದ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವ ಪ್ರಯಾಸಕ್ಕೆ ಅಡ್ಡವಾಗಿತ್ತು. ಜಯಂತಿ ಮೇಡಂ ಬಗ್ಗೆ ಶ್ರೀ ಜಿ.ವಿ.ಯವರ ಈ ಒಂದು ಮಾತು ನಾನು ಯೋಚನೆ ಮಾಡಬೇಕಾದ್ದು ಬೇರೆಯದೇ ರೀತಿಯಲ್ಲಿ ಎಂದು ತೋರಿಸಿಕೊಟ್ಟಿತು. ಅವರು ಕಟ್ಟುನಿಟ್ಟು, ನಿಜ - ಆದರೆ ಕೆಲಸದಲ್ಲಿ. ಅದು ಅವರ ಕರ್ತವ್ಯವೂ ಆಗಿತ್ತು. ಅವರೊಡನೆ ಕೆಲಸ ಮಾಡುತ್ತ ಮಾಡುತ್ತ ಅವರ ಮೃದುತ್ವದ ಅರಿವೂ ಆಯಿತು.


ಶಾಲೆಯಲ್ಲಿ ನಾನೂ ಉದ್ಯೋಗಿಯಾಗಿದ್ದೆ, ಜಯಂತಿ ಮೇಡಂ ಕೂಡ ಉದ್ಯೋಗಿಯೇ ಆಗಿದ್ದರು. ಆದರೂ ಅವರನ್ನು ನಾನು ನನ್ನ ಸಹೋದ್ಯೋಗಿಯೆಂದು ಹೇಳಲು ಮನಸ್ಸು ಒಪ್ಪುವುದಿಲ್ಲ. ಅವರು ನಿವೃತ್ತರಾಗುವವರೆಗೂ ನನಗೂ ಟೀಚರ್ ಆಗಿಯೇ ಇದ್ದರು. ಒಂದೆರಡು ಸಂಗತಿಗಳನ್ನು ಇಲ್ಲಿ ನೆನೆಸಿಕೊಳ್ಳುವುದು ಪ್ರಸ್ತುತ.


ನಾನು ಪ್ರಾಥಮಿಕ ಹಂತದ ಶಾಲೆಯ ಮಕ್ಕಳಿಗೆ ಪಾಠ ಮಾಡಲು ಹೊಸಬನಾಗಿದ್ದೆ. ಪಾಠ ಮಾಡುವುದು ಹಾಗಿರಲಿ ಆ ಮಕ್ಕಳನ್ನು ಒಂದು ಕಡೆ ಕೂಡಿಸಲೂ ನನ್ನಿಂದ ಅಸಾಧ್ಯವಾದ ಕೆಲಸವಾಗಿತ್ತು. ಒಂದು ದಿನ ಒಂದನೆಯ ತರಗತಿಯಲ್ಲಿ ಪಾಠ ಮಾಡುವಾಗ ಮಕ್ಕಳು ವಿಪರೀತ ಗಲಾಟೆ ಮಾಡತೊಡಗಿದರು. ಜಯಂತಿ ಮೇಡಮ್ಮು "ಏನಿದು ಕ್ಲಾಸನ್ನು ಇಷ್ಟು ಗಲಾಟೆ ಮಾಡಿಸುತ್ತಿದ್ದೀರಾ?" ಎಂದು ನನ್ನನ್ನು ಎಲ್ಲಿ ಬೈಯ್ಯುತ್ತಾರೋ ಎಂಬ ಭಯ ಬೇರೆ ನನ್ನಲಿತ್ತು. "ನೀವು ಸೈಲೆಂಟಾಗಿಲ್ಲದಿದ್ದರೆ ನಾನು ಹೊರಟು ಹೋಗುತ್ತೇನೆ!" ಎಂದು ಮಕ್ಕಳಿಗೆ ಹೆದರಿಸಿದೆ. ನನ್ನ ದುರದೃಷ್ಟಕ್ಕೆ ಮಕ್ಕಳು ಹೆದರದೆ "ಯೆಸ್ಸ್!!!!" ಎಂದು ಸಂಭ್ರಮಿಸಿದರು. ನಾನು ನಿಸ್ಸಹಾಯಕನಾಗಿ ದಡದಡವೆಂದು ತರಗತಿಯಿಂದ ಹೊರಗೆ ನಡೆದೆ. ದುರದೃಷ್ಟವು ಪರಮಾವಧಿಯನ್ನು ತಲುಪಿದೆ ಎಂದು ನಿರೂಪಿಸಲು ಎದುರುಗಡೆಯಿಂದ ಜಯಂತಿ ಮೇಡಮ್ಮು ನಡೆದು ಬರುತ್ತಿದ್ದರು. ನಾನು ರಾಜೀನಾಮೆ ಕೊಡುವ ಸಮಯ ಹತ್ತಿರ ಬಂದಿದೆ ಎಂದು ಒಂದು ಕ್ಷಣದಲ್ಲೇ ಲೆಕ್ಕಾಚಾರ ಮಾಡಿಕೊಂಡೆ. ಅವರು "ಏನಾಯಿತು?" ಎಂದು ಕೇಳಿ ನನ್ನ ಉತ್ತರಕ್ಕೂ ಕಾಯದೇ ಕ್ಲಾಸಿನ ಒಳಗೆ ನನ್ನೂ ಕರೆದುಕೊಂಡು ಹೋದರು. ಮಕ್ಕಳು ಸದ್ದು ಎಂದರೆ ಏನು ಎಂದು ಗೊತ್ತೇ ಇಲ್ಲವೇನೋ ಅನ್ನುವ ಹಾಗಿದ್ದರು. "ಸರ್ ಕೋಪ ಮಾಡಿಕೊಂಡು ಹೋಗ್ತಾ ಇದ್ದಾರೆ, ನೀವು ಗಲಾಟೆ ಮಾಡ್ತಿದ್ದೀರ. ಇದು ಸರೀನಾ?" ಎಂದು ಗದರುವ ದನಿಯಲ್ಲಿಯೇ ಪ್ರೀತಿಯಿಂದ ಕೇಳಿದರು. ಮಕ್ಕಳಿಗೆ ತಮ್ಮ ತಪ್ಪು ಅರಿವಾಯಿತೋ, ಅಥವಾ ಭೀತಿಯುಂಟಾಯಿತೋ ಕ್ಷಮೆ ಯಾಚಿಸಿದರು. ತರಗತಿಯನ್ನು ಮುಗಿಸಿದ ಮೇಲೆ ನನ್ನ ಕರೆದು "Teacher should not give up!" ಎಂದು ಒಂದೇ ಒಂದು ವಾಕ್ಯವನ್ನು ಹೇಳಿದರು. ಅಂದಿನಿಂದ ಇಂದಿನವರೆಗೂ ನಾನು ತರಗತಿಗಳಲ್ಲಿ ಮಕ್ಕಳನ್ನು ನನ್ನೆಡೆಗೆ ಸೆಳೆಯುವುದರಲ್ಲಿ ಸೋತಿಲ್ಲವೆಂದು ಗರ್ವದಿಂದ ಹೇಳಿಕೊಳ್ಳಬಲ್ಲೆ.


ನಾನು ಯಾವುದೋ ಸಮಸ್ಯೆಯಲ್ಲಿದ್ದಾಗ ನನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿರಲಿಲ್ಲ. ನನ್ನ ಲೆಸನ್ ಪ್ಲಾನುಗಳು, ನನ್ನ ಮೌಲ್ಯಮಾಪನಗಳು, ನನ್ನ ಇತರೆ ಕೆಲಸಗಳೂ ಸಹ ನನ್ನಿಂದ ಪೂರ್ಣಗೊಳ್ಳುತ್ತಿರಲಿಲ್ಲ. ಪರೀಕ್ಷೆಯು ಮುಗಿದು ಹೋಗಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನದ ನಂತರ ಪ್ರಾಂಶುಪಾಲರಿಗೆ ತಲುಪಿಸುವ ಕಡೆಯ ದಿನಾಂಕವು ಮುಗಿದಿದ್ದರೂ ನಾನು ಮಾತ್ರ ಒಂದೂ ಬಂಡಲ್ಲನ್ನೂ ಕೊಟ್ಟಿರಲಿಲ್ಲ. ಮಾರನೆಯ ದಿನ ಶನಿವಾರ, ರಜೆಯಿತ್ತು. ನನ್ನ ಮನಸ್ಸಿನಲ್ಲಿ ಶನಿವಾರ - ಭಾನುವಾರ ಕೂತು ಬಾಕಿ ಉಳಿಸಿಕೊಂಡಿರುವ ಆರೂ ಬಂಡಲ್ಲನ್ನೂ - ಅಂದರೆ ಸುಮಾರು ನೂರೈವತ್ತು ಪತ್ರಿಕೆಗಳನ್ನೂ - ಮೌಲ್ಯಮಾಪನ ಮಾಡಿ ಕೊಡಬಹುದು ಎಂದು ಯೋಚಿಸುತ್ತಿದ್ದೆ. ಆದರೆ ಮೇಡಮ್ಮು ನನ್ನ ಕರೆದು ಸ್ವಲ್ಪ ಕ್ರುದ್ಧರಾಗಿಯೇ ಆದೇಶಿಸಿದರು. "ಇವತ್ತು ಮನೆಗೆ ಹೋಗುವ ಮುಂಚೆ ಎಲ್ಲಾ ಉತ್ತರಪತ್ರಿಕೆಗಳನ್ನು ಕೊಟ್ಟು ಹೋಗಬೇಕು!" ಎಂದು. ನನಗೆ ದಿಕ್ಕೇ ತೋಚದಂತಾಯಿತು. ಬೆಳಿಗ್ಗೆ ಎಂಟುವರೆಗೇನೋ ಹೇಳಿದರು, ನಿಜ. ಆದರೆ ತರಗತಿಗಳಿದ್ದ ಕಾರಣ ನಾನು ಹತ್ತನೆಯ ತರಗತಿಯ ಪತ್ರಿಕೆಗಳನ್ನು ಮಾತ್ರವೇ ಮೌಲ್ಯಮಾಪನ ಮಾಡಲು ಆಗಿದ್ದು. ಏನು ಹೇಳುತ್ತಾರೋ ನೋಡೋಣ ಎಂದು "ಮೇಡಂ, ಎಲ್ಲವನ್ನೂ ಕರೆಕ್ಟ್ ಮಾಡಲು ನನ್ನಿಂದ ಆಗಿಲ್ಲ. ಸೋಮವಾರ ಕೊಡುತ್ತೇನೆ. ಇವತ್ತು ಒಂದು ಬಂಡಲ್ಲನ್ನು ಮಾತ್ರ ಮುಗಿಸಲು ಸಾಧ್ಯವಾಯಿತು" ಎಂದೆ. ಪ್ರಾಂಶುಪಾಲರ ಮುಖ ಕೆಂಪಾಗದೇ ಇರುತ್ತದೆಯೇ? ಕೋಪದಿಂದಲೇ, "ಯಾವ ಬಂಡಲ್ಲನ್ನು ಮುಗಿಸಿದಿರಿ?" ಎಂದರು. ನಾನು ಹತ್ತನೆಯ ತರಗತಿಯದು ಎಂದ ತಕ್ಷಣವೇ ಅವರ ಕೋಪವು ಎಲ್ಲಿ ಹೋಯಿತೋ ಗೊತ್ತಿಲ್ಲ, ಜೋರಾಗಿ ನಕ್ಕು "ಇರೋದೇ ಐದು ಜನ ಹತ್ತನೆಯ ತರಗತಿಯಲ್ಲಿ, ಅದನ್ನು ಒಂದು ಬಂಡಲ್ ಅನ್ನುತ್ತೀರಾ?" ಎಂದು ಸೋಮವಾರದವರೆಗೂ ಸಮಯವಿತ್ತರು. ನಾನು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಸಾವಿರ ವರ್ಷ ಆಯುಷ್ಯವನ್ನು ಸಂಪಾದಿಸಿ ಸೋಮವಾರ ಉಳಿದ ನೂರನಲವತ್ತೈದು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನೂ ಮುಗಿಸಿ ತಂದು ಅವರ ಮೇಜಿನ ಮೇಲಿಟ್ಟೆ. ಅವರು "ನೋಡಿ, ಈ procrastination ಅನ್ನೋದು ತುಂಬಾ ಕೆಟ್ಟದ್ದು, ಆದಾಗಲೆಲ್ಲ ಸ್ವಲ್ಪ ಸ್ವಲ್ಪವೇ ಕೆಲಸಗಳನ್ನು ಮಾಡಿಕೊಳ್ಳಿ, ಪೂರ್ಣಗೊಳಿಸಬೇಕೆಂದೇನಿಲ್ಲ. ಆದರೆ ಉಳಿದುಕೊಂಡುಬಿಡುವುದಿಲ್ಲ. ನನಗೂ ಹೀಗಾಗುತ್ತಿತ್ತು. ಸರಿ ಮಾಡಿಕೊಂಡೆ" ಎಂದು ಹೇಳಿದರು. ನನ ಜನ್ಮಕ್ಕೇ ಈ procrastination ಕಾಯಿಲೆಯು ಅಂಟಿಕೊಂಡಿರುವುದಾದರೂ ಈಗ ನಾನು ಎಷ್ಟೋ ವಾಸಿ ಎಂದು ಧೈರ್ಯವಾಗಿ ಹೇಳಿಕೊಳ್ಳಬಲ್ಲೆ.


ಹೀಗೆ ಅನೇಕ ವಿಷಯಗಳಲ್ಲಿ ಜಯಂತಿ ಮೇಡಮ್ಮು ನನ್ನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ನನಗೂ ಟೀಚರ್ ಆಗಿದ್ದಾರೆ. ಇಂಗ್ಲೀಷಿನಲ್ಲಿ ಬಹಳ ಕಷ್ಟ ಪಡುತ್ತಿದ್ದಾಗ ವಾಕ್ಯ ರಚನೆಗಳನ್ನು ಮಾಡುವುದು ಹೇಗೆ, ಪದಗಳ ಆಯ್ಕೆಗಳನ್ನು ಮಾಡುವುದು ಹೇಗೆ ಎಂದು, ಪ್ರಶ್ನೆ ಪತ್ರಿಕೆಗಳನ್ನು ರಚಿಸುವಾಗ ಭಿನ್ನತೆಯನ್ನು ಬಳಸುವುದು ಹೇಗೆಂದು, ಹತ್ತು ಹಲವಾರು ಸಂಗತಿಗಳನ್ನು ಕಲಿತುಕೊಂಡಿದ್ದೇನೆ. ನಾನು ಶಾಲೆಯಲ್ಲಿ ಉಳಿದ ಶಿಕ್ಷಕರ ಹಾಗೆ ಯಾವುದೇ ಶೈಕ್ಷಣಿಕ ತರಬೇತಿಯನ್ನು ಹೊಂದಿದವನಲ್ಲವಾದ್ದರಿಂದ ಬಹುತೇಕ ತರಬೇತಿಯನ್ನು - ಕೆಲವೊಮ್ಮೆ ಪರೋಕ್ಷವಾಗಿ ಮತ್ತೆ ಕೆಲವೊಮ್ಮೆ ನೇರವಾಗಿ - ನನಗೆ ನೀಡಿದ್ದು ಜಯಂತಿ ಮೇಡಮ್ಮೇ. ಇದೆಲ್ಲದಕ್ಕಿಂತ ಮುಖ್ಯವಾದ ಪಾಠವೆಂದರೆ ಮಕ್ಕಳಿಗೆ ವಿಷಯ ಶಿಕ್ಷಣ ನೀಡುವುದಕ್ಕಿಂತ ಮೌಲ್ಯಶಿಕ್ಷಣ ನೀಡುವುದು ಮುಖ್ಯವೆಂದು ಹೇಳಿಕೊಟ್ಟದ್ದು.


ಮೌಲ್ಯಶಿಕ್ಷಣವನ್ನು ನನಗೇ ನೇರವಾಗಿ ಕೊಟ್ಟರೆಂದರೂ ತಪ್ಪಾಗಲಾರದು. ಒಂದು ಪ್ರಸಂಗವನ್ನು ಮಾತ್ರ ನನ್ನ ವೃತ್ತಿ ಜೀವನಮಾನವಿಡೀ ನೆನಪಿಟ್ಟುಕೊಳ್ಳಬೇಕಾದದ್ದು. ಶಾಲೆಯ ವಾರ್ಷಿಕೋತ್ಸವದ ದಿನ. ಪ್ರಾಂಶುಪಾಲರ ಭಾಷಣದಲ್ಲಿ ಜಯಂತಿ ಮೇಡಮ್ಮು ವಾರ್ಷಿಕ ವರದಿಯನ್ನು ಮಂಡಿಸಬೇಕಿತ್ತು. ಅದಕ್ಕೆ ಅಗತ್ಯವಾದ ಪವರ್ ಪಾಯಿಂಟ್ ಪ್ರೆಸೆಂಟೇಷನ್ನನ್ನು ಪರದೆಯ ಮೇಲೆ ಪ್ರೊಜೆಕ್ಟ್ ಮಾಡಬೇಕಾದ ಹೊಣೆ ನನ್ನದಾಗಿತ್ತು. ಆದರೆ ಅಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಮೇಡಮ್ಮು ತಮ್ಮ ಕಾರನ್ನು ಹತ್ತಿ ಹೊರಟು ಹೋದರು. ಶಾಲೆಯಲ್ಲಿ ಗುಸುಗುಸುವುಂಟಾಗಿತ್ತು. ನಾನು ಸಾಮಾನ್ಯವಾಗಿ ಗುಸುಗುಸುಗಳಿಗೆ ಕಿವುಡನಾಗಿರುವುದರಿಂದ ನನಗೆ ಏನಾಯಿತೆಂಬ ಅರಿವಿರಲಿಲ್ಲ. ಆದರೆ ಇವರ ಭಾಷಣವು ಪಿ.ಪಿ.ಟಿ. ಜೊತೆಗೆ ರಿಹರ್ಸಲ್ ಆಗಿಲ್ಲವೆಂಬ ಕಳವಳ ಮಾತ್ರ ನನಗಿತ್ತು. ಜೆ.ಎಸ್.ಎಸ್. ಸಭಾಭವನದಲ್ಲಿ ಕಾರ್ಯಕ್ರಮವಿದ್ದುದು. ಮಕ್ಕಳು ರಿಹರ್ಸಲ್ಲುಗಳನ್ನು ಮಾಡಿಕೊಳ್ಳುತ್ತಿದ್ದರು. ವೇದಿಕೆ, ಶಬ್ದ, ಬೆಳಕು, ಇತರೆಗಳಿಗೆ ಸಾಮಾನ್ಯವಾಗಿ ಪ್ರಾಂಶುಪಾಲರು ಮೇಲ್ವಿಚಾರಾಗಿರುತ್ತಾರೆ. ಆದರೆ ಅಂದು ಅವರು ಸಭಾಂಗಣದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನನ್ನ ಸಹೋದ್ಯೋಗಿ ಮಿತ್ರ ಶ್ರೀ ಸುಬ್ರಮಣ್ಯ ಅವರಿಂದ ಗೊತ್ತಾಯಿತು ಜಯಂತಿ ಮೇಡಮ್ಮಿನ ತಾಯಿ ತೀರಿಕೊಂಡಿದ್ದರು ಎಂದು. ಪ್ರಾಂಶುಪಾಲರು ಇಲ್ಲದೆಯೇ ಕಾರ್ಯಕ್ರಮವನ್ನು ನಡೆಸಬೇಕು ಎಂದುಕೊಳ್ಳುತ್ತಿದ್ದಂತೆಯೇ ಬಂದುಬಿಟ್ಟರು. ಸಪ್ಪಗಿದ್ದರೂ ಸಹ ದುಃಖಿತರಂತೆ ವಿಚಲಿತರಾಗಿರಲಿಲ್ಲ. "ಅರುಣ್ ಒಂದು ಸಲ ರಿಹರ್ಸಲ್ ಮಾಡೋಣ್ವಾ?" ಎಂದು ಕರೆದರು. ಸಭಾಂಗಣದಲ್ಲಿಯೇ ಎರಡು ಸಲ ರಿಹರ್ಸಲ್ ಮಾಡಿಕೊಂಡು ಕಾರ್ಯಕ್ರಮದಲ್ಲಿ ತಮ್ಮಿಂದ ಬೇಕಾದ ತಮ್ಮ ಮುಂದಿನ ಎಲ್ಲ ಕೆಲಸವನ್ನೂ ಮಾಡಿದರು. ಭಾಷಣವನ್ನೂ ಸೊಗಸಾಗಿಯೇ ಮಾಡಿದರು. ನಾನು ಅವರ ವೈಯಕ್ತಿಕ ವಿಷಯವನ್ನು ಕೇಳಲಿಲ್ಲ, ಅವರು ನನಗೆ ಹೇಳಲಿಲ್ಲ.  ವೃತ್ತಿಯಲ್ಲಿ ಈ ಸ್ಥಿತಪ್ರಜ್ಞತೆಯು ಬಹಳ ವಿರಳವಷ್ಟೆ?


ಶ್ರೀ ಜಿ.ವಿ.ಯವರನ್ನು ನಾನು ಇನ್ನೊಂದು ಮಾತು ಕೇಳಿದೆ. "ಸರ್, ನಮ್ಮ ಜಯಂತಿ ಮೇಡಮ್ಮಿಗೂ ಕನ್ನಡ ಸಾಹಿತ್ಯದ ಪಾಠ ಮಾಡಿದ್ದೀರಾ ನೀವು?" ಅಂತ. ನನ್ನ ಮನಸ್ಸಿನಲ್ಲಿ ಆಗ "ಜಯಂತಿ ಮೇಡಮ್ಮು ಇಂಗ್ಲೀಷ್ ಟೀಚರ್ರು. ಕನ್ನಡ ಸಾಹಿತ್ಯದ ಬಗ್ಗೆ ಅರಿವು ಇದ್ದಿರಲಾರದು." ಎಂಬ ಆಧಾರರಹಿತ ಭಾವನೆಯು ಇತ್ತೆಂದೇ ಹೇಳಬೇಕು. "ಅವರ ಕೌಟುಂಬಿಕ ಹಿನ್ನೆಲೆಯೇ ಕನ್ನಡ ಸಾಹಿತ್ಯದ್ದಾಗಿದೆ. ಕನ್ನಡದ ಮೊಟ್ಟಮೊದಲ ಪತ್ತೆದಾರಿ ಕಾದಂಬರಿ ’ಮಾಡಿದ್ದುಣ್ಣೋ ಮಾರಾಯ’ ಬರೆದ ಎಂ.ಎಸ್.ಪುಟ್ಟಣ್ಣ ಅವರ ಮೊಮ್ಮಗಳು ನಿಮ್ಮ ಪ್ರಿನ್ಸಿಪಾಲು" ಎಂದು ಜಿ.ವಿ.ಯವರು ಹೇಳಿದಾಗ ನಾನು ಮೂಕನಾಗಿ ಹೋದೆ. ಜಯಂತಿ ಮೇಡಮ್ಮಿನ ಬಗೆಗಿನ ನನ್ನ ಗೌರವ ಇನ್ನೂ ಹೆಚ್ಚಾಯಿತು.


ಶಾಲೆಯು ಹತ್ತಿರವಾದಂತೆ ಹೆಚ್ಚಾದ ಗೌರವವು ಭಯವಾಗಿ ಪರಿವರ್ತನೆಯಾಯಿತು. ಪ್ರಾಂಶುಪಾಲರು, ಆಡಳಿತವರ್ಗದವರು ಎಲ್ಲರ ಜೊತೆಗೆ ತಿಂಡಿ ತಿನ್ನುವಾಗ ಜಿ.ವಿ.ಯವರು "ಯಾವುದೋ ತರಲೆ ಹುಡುಗನನ್ನು ಕಳಿಸಿದ್ದಿರಿ ಕರೆದುಕೊಂಡು ಬರೋಕೆ, ನಿಮ್ಮ ಬಗ್ಗೆ ಎಲ್ಲಾ ಪ್ರಶ್ನೆ ಕೇಳಿದ" ಎಂದು ಎಲ್ಲಿ ಕೇಳಿಬಿಡುತ್ತಾರೋ ಎಂಬ ಭೀತಿಯುಂಟಾಯಿತು. ಕಾರ್ಯಕ್ರಮ ಮುಗಿದ ಮೇಲೆ, ಜಿ.ವಿ.ಯವರು ಶಾಲೆಯಿಂದ ಹೊರಟ ಮೇಲೆ, ಜಯಂತಿ ಮೇಡಮ್ಮು ನನ್ನನ್ನು ಏನೂ ಕೇಳದಿದ್ದ ಕಾರಣ ಜಿ.ವಿ.ಯವರು ನನ್ನ ಬಗ್ಗೆ ಏನೂ ಹೇಳಿಲ್ಲವೆಂಬ ಖಾತ್ರಿಯಾಯಿತು. ಹೇಳಿದ್ದರೂ ಮೇಡಮ್ಮು ಬೇಸರಗೊಳ್ಳದೆ ನನ್ನಲ್ಲಿ ಕೇಳದೆಯೂ ಇದ್ದರೇನೋ ಎಂದು ಈಗ ಅನ್ನಿಸುತ್ತಿದೆ.


ಅವರು ವೃತ್ತಿಯಲ್ಲಿದ್ದಾಗ ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಅವರ ಮಾತುಗಳು ಕಡ್ಡಿ ಎರಡು ತುಂಡು ಮಾಡಿದಂತೆ ಕಠೋರವಾಗಿದ್ದರೂ, ಅವರನ್ನು ಬೆನ್ನ ಹಿಂದೆ ಜನರು ಶಪಿಸಿದ್ದರೂ, ಅವರು ನಿವೃತ್ತರಾಗಿದ್ದು ನಮ್ಮ ಸಹೋದ್ಯೋಗಿ ಮಿತ್ರರಿಗೆ ಇಷ್ಟವಾಗಿರಲೇ ಇಲ್ಲ. ಕೆಲವರು ಕಣ್ಣೀರು ಹಾಕಿಕೊಂಡರು. ಕೆಲವರು ಅವರಿದ್ದಲ್ಲಿಗೆ ಹೋಗಿ, ಇಲ್ಲೇ ಕೆಲಸವನ್ನು ಮುಂದುವರೆಸಿ ಎಂದು  ಕೇಳಿಕೊಳ್ಳೋಣ ಎಂದೂ ಕೆಲವರು ಮಾತನಾಡಿಕೊಂಡರು. ಮೇಲೆ ಹೇಳಿದ ಪ್ರಸಂಗದಲ್ಲಿ ನನಗೆ ಸ್ಥಿತಪ್ರಜ್ಞತೆಯ ಪಾಠ ಹೇಳಿಕೊಟ್ಟ ಜಯಂತಿ ಮೇಡಮ್ಮು ನಿವೃತ್ತರಾಗುತ್ತಿರುವುದಕ್ಕೆ ದುಃಖಿಸುವುದು ಸರಿಯಲ್ಲವೆಂದು ನನ್ನ ಮನಸ್ಸು ಹೇಳಿದ್ದರೂ ಸಹೋದ್ಯೋಗಿಗಳೆಲ್ಲರೂ ಹೋಗುತ್ತಿರುವಾಗ ನಾನೂ ಆ ಗುಂಪಿನಲ್ಲಿ ಸೇರಿಕೊಂಡೆ. ಆಗಲೂ ಅವರು, "ನನಗೆ ವಯಸ್ಸಾಯಿತು ರಿಟೈರ್ ಆದೆ. ನಿಮಗೆ ವಯಸ್ಸಾದ ಮೇಲೆ ನೀವೂ ರಿಟೈರ್ ಆಗುತ್ತೀರ. ಅದಕ್ಯಾಕೆ ಬೇಜಾರು ಮಾಡಿಕೊಳ್ಳುತ್ತೀರ? ನಿಮ್ಮ ನಿಮ್ಮ ಕೆಲಸವನ್ನು ಮುಂದುವರೆಸಿ." ಎಂದು ಹೇಳಿದರು.


ಮೊನ್ನೆ ಮೊನ್ನೆಯಷ್ಟೇ ಜಯಂತಿ ಮೇಡಮ್ಮಿನ ಹುಟ್ಟುಹಬ್ಬವಾಯಿತು. ಫೋನ್ ಮಾಡಿ ವಿಷ್ ಮಾಡಲಿಲ್ಲ. ಅವರ ಬಗ್ಗೆ ಈ ಲೇಖನವನ್ನು ಬರೆದು ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಡಬೇಕೆಂಬ ಆಸೆ ಐದು ವರ್ಷದ್ದು. ಅವರು ನಿವೃತ್ತರಾದ ವರ್ಷವೇ ಬರೆಯಬೇಕೆಂದಿದ್ದೆ. ನನ್ನ procrastination ಮನಃಸ್ಥಿತಿಯಿಂದ ಇಲ್ಲಿಯವರೆಗೂ ಮುಂದೂಡಿಕೊಂಡು ಬಂದೆ. ಹುಟ್ಟುಹಬ್ಬವನ್ನೂ ಸೇರಿಸಿ, ಈ ವರ್ಷದ ಶಿಕ್ಷಕರ ದಿನಾಚರಣೆಯ ಶುಭಾಶಯದೊಂದಿಗೆ ಈ ಲೇಖನವನ್ನು ಜಯಂತಿ ಮೇಡಮ್ಮಿಗೆ ಅರ್ಪಿಸುತ್ತೇನೆ.


Happy Birthday and Happy Teachers Day, Madam!


- ಅ

05. 11. 2016
1.15 AM

3 comments:

 1. ಅರುಣ್ ಸರ್ ಲೇಖನ ಬಹಳ ಸೊಗಸಾಗಿದೆ... ಜಯಂತಿ ಮೇಡಮ್ ಅವರಿಂದ ನಾವುಗಳು ಕಲಿತದ್ದು ಬಹಳ... ನಿಮ್ಮ ಈ ಲೇಖನ ಅವರೊಟ್ಟಿಗಿನ ಎಲ್ಲಾ ಒಡನಾಟವನ್ನೊಮ್ಮೆ ಮೆಲಕು ಹಾಕುವಂತೆ ಮಾಡಿತು... ಧನ್ಯವಾದಗಳು,

  Once again belated Happy birthday and Happy Teachers' Day Jayanti ma'am

  ReplyDelete
 2. ಅರುಣ್ ಸರ್ ಲೇಖನ ಬಹಳ ಸೊಗಸಾಗಿದೆ... ಜಯಂತಿ ಮೇಡಮ್ ಅವರಿಂದ ನಾವುಗಳು ಕಲಿತದ್ದು ಬಹಳ... ನಿಮ್ಮ ಈ ಲೇಖನ ಅವರೊಟ್ಟಿಗಿನ ಎಲ್ಲಾ ಒಡನಾಟವನ್ನೊಮ್ಮೆ ಮೆಲಕು ಹಾಕುವಂತೆ ಮಾಡಿತು... ಧನ್ಯವಾದಗಳು,

  Once again belated Happy birthday and Happy Teachers' Day Jayanti ma'am

  ReplyDelete
 3. ಅರುಣ್ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ, ನೀವು ಹೇಳಿದ ಎಷ್ಟೋ ಸಂದರ್ಭದಲ್ಲಿ ನಾವು ಇದ್ದೇವೆ , ಅವರಿಂದ ನಾವು ತುಂಬಾ ಪಾಠ ಕಲಿತದ್ದು ಇದೆ, ಆದರೆ ನಾವು ಅವರ ಜೊತೆಯಲ್ಲಿ ಇನ್ನಷ್ಟು ದಿನ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿರುತಿತು.ಮೇಡಂ ಈಗಲೂ ನಿಮ್ಮನ್ನ ಮಿಸ್ ಮಾಡಕೋಳ್ತೀನಿ.

  ReplyDelete